ಫ್ರಾಂಝ್ ಫಾನನ್ ಅವರ ‘ರೆಚ್ಚ್ಡ್ ಆಫ್ ದಿ ಅರ್ಥ್’ ಕೃತಿಯ ಎರಡನೆಯ ಅಧ್ಯಾಯ ಗ್ರಾಂಡ್ಯೂರ್ ಅಂಡ್ ವೀಕ್ನೆಸ್ ಆಫ್ ಸ್ಪಾಂಟಾನಿಟಿ (ಸಹಜ ನಿರಂತರತೆಯ ವೈಭವ ಮತ್ತು ದೌರ್ಬಲ್ಯ)
ಹಿಂಸೆಯ ಕುರಿತಾದ ಈ ಆಲೋಚನೆಗಳು, ರಾಷ್ಟ್ರೀಯವಾದಿ ಪಕ್ಷಗಳ ತಿರುಳು ಪಡೆಯಂತಿರುವ ಪದಾಧಿಕಾರಿವರ್ಗದ ಮತ್ತು ಜನಸಾಮಾನ್ಯ ವರ್ಗದ ನಡುವೆ ಆಗಾಗ ಕಾಣಬರುವ ವ್ಯತ್ಯಾಸವನ್ನು
ಮತ್ತು ಅವು ತುಳಿಯುವ ಭಿನ್ನ ಹಾದಿಗಳನ್ನೂ ನಮಗೆ ತಿಳಿಸುತ್ತವೆ. ಯಾವುದೇ ಸಂಸ್ಥೆ ಅಥವಾ ರಾಜಕೀಯ ಸಂಘಟನೆಯಲ್ಲಿ
ಪದಾಧಿಕಾರಿವರ್ಗ ಮತ್ತು ಜನವರ್ಗದ ನಡುವೆ ಲಾಗಾಯ್ತಿನಿಂದಲೂ ಒಂದು ಅಂತರ ಬೆಳೆದಿರುತ್ತದೆ. ಜನವರ್ಗವು
ತನ್ನ ಸ್ಥಿತಿಗತಿಯ ತಕ್ಷಣದ ಮತ್ತು ಬೇಷರತ್ತಾದ ಅಭಿವೃದ್ಧಿಯ ಬಗ್ಗೆ ಬೇಡಿಕೆ ಮಂಡಿಸಿದರೆ, ಪದಾಧಿಕಾರಿವರ್ಗವು
ಅವರ ಬೇಡಿಕೆಗಳಿಗೆ ಕಡಿವಾಣ ಹಾಕುತ್ತದೆ. ಇದು ಪದಾಧಿಕಾರಿವರ್ಗದ ಕುರಿತು ಜನವರ್ಗಕ್ಕಿರುವ ಶಮನಗೊಳ್ಳದ
ಅತೃಪ್ತಿಗೆ ಕಾರಣವಾಗಿದೆ. ಪದಾಧಿಕಾರಿವರ್ಗವು ತನ್ನ ಗೆಲುವಿನ ವಿಜಯೋತ್ಸವವನ್ನು ಆಚರಿಸಿದ ಕೂಡಲೇ,
ಈ ಜನವರ್ಗವು ವಂಚನೆಗೊಳಗಾದ ಭಾವವನ್ನು ಹೊಂದುತ್ತವೆ. ಪದೇಪದೇ ತಮ್ಮ ಹಕ್ಕುಗಳಿಗಾಗಿ ನಡೆಸುವ ಹೋರಾಟ
ಮತ್ತು ಕಾರ್ಮಿಕ ವಿವಾದಗಳು ಈ ಜನವರ್ಗವನ್ನು ರಾಜಕೀಯಗೊಳಿಸುತ್ತವೆ. ಒಂದು ಸ್ಥಳೀಯ ವಿವಾದವು ತನ್ನ
ಮತ್ತು ವ್ಯವಸ್ಥೆಯ ನಡುವಿನ ಪ್ರಮುಖ ಮುಖಾಮುಖಿ ಆಗಲಾರದು ಎಂದು ತಿಳಿದವನೇ ರಾಜಕೀಯ ಚತುರಮತಿಯಾದ ಸಂಸ್ಥೆಯ
ಒಬ್ಬ ಪದಾಧಿಕಾರಿಯಾಗಿರುತ್ತಾನೆ. ವಸಾಹತು ಪ್ರಭಾವಕ್ಕೊಳಗಾದ ಬುದ್ಧಿಜೀವಿಗಳು ತಮ್ಮ ಮಹಾನಗರಿಗಳಲ್ಲಿ,
ರಾಜಕೀಯ ಪಕ್ಷಗಳ ಕಾರ್ಯವಿಧಾನಗಳನ್ನು ಅಭ್ಯಸಿಸಿ ವಸಾಹತು ಆಡಳಿತದ ಮೇಲೆ ಒತ್ತಡ ಹೇರಲು ಜನವರ್ಗವನ್ನು
ಕಾರ್ಯೋನ್ಮುಖಗೊಳಿಸುವುದಕ್ಕಾಗಿ ಇಂತಹದೇ ಸಂಘಟನೆಗಳನ್ನು ರಚಿಸುತ್ತಾರೆ. ವಸಾಹತು ರಾಷ್ಟ್ರಗಳಲ್ಲಿ
ರಚನೆಯಾಗುವ ರಾಷ್ಟ್ರೀಯ ಪಕ್ಷಗಳಿಗೆ ಸಮಕಾಲೀನವಾಗಿಯೇ ಬುದ್ಧಿಜೀವಿ, ವ್ಯಾಪಾರಿ ಗಣ್ಯವರ್ಗವೊಂದು ಉಗಮವಾಗುತ್ತದೆ.
ಈ ಗಣ್ಯವರ್ಗವು ಸಂಘಟನೆಗೆ ಅತೀ ಮಹತ್ವವನ್ನು ನೀಡುತ್ತದೆ ಮತ್ತು ವಸಾಹತು ಸಮಾಜದ ವಿಚಾರಶೀಲ ಅಧ್ಯಯನ
ಮಾಡುವುದಕ್ಕಿಂತ ಸಂಘಟನೆ ಕುರಿತಾದ ಅಂಧಶ್ರದ್ಧೆಯೇ ಇಲ್ಲಿ ಮಿಗಿಲೆನಿಸುತ್ತದೆ. ಪಕ್ಷ ಎಂಬ ಕಲ್ಪನೆ
ಮಹಾನಗರದಿಂದ ಆಮದುಮಾಡಿಕೊಂಡ ಕಲ್ಪನೆಯಾಗಿದೆ. ಆಧುನಿಕ ಪ್ರತಿರೋಧದ ಈ ಹತ್ಯಾರವನ್ನು ಒಂದು ಅಸಮತೋಲಿತ
ವಾಸ್ತವದೊಂದಿಗೆ ಕಸಿ ಮಾಡಲಾಗುತ್ತದೆ. ಇಲ್ಲಿ ಗುಲಾಮಗಿರಿ, ಬಂಧನ, ವಸ್ತುವಿನಿಮಯ, ಗುಡಿ ಕೈಗಾರಿಕೆ
ಮತ್ತು ಷೇರು ವಿನಿಮಯ ಎಲ್ಲವೂ ಜೊತೆ ಇರುತ್ತವೆ.
ರಾಜಕೀಯ ಪಕ್ಷಗಳ ದೌರ್ಬಲ್ಯವು ಸಂಘಟನೆಯೊಂದನ್ನು ಯಾಂತ್ರಿಕವಾಗಿ ಅನುಕರಣೆ ಮಾಡುವುದರಲ್ಲಷ್ಟೇ
ಇಲ್ಲ. ಭಾರೀ ಕೈಗಾರೀಕರಣಗೊಂಡ ಬಂಡವಾಳಶಾಹಿ ಸಮಾಜವೊಂದರಲ್ಲಿನ ಕೆಳಸ್ತರ ಅಥವಾ ಶ್ರಮಿಕ ವರ್ಗದವರ ಹೋರಾಟವನ್ನು
ಎದುರಿಸುವಲ್ಲಿ ಅವು ಈ ಅನುಕರಣಮಾರ್ಗವನ್ನೇ ಬಳಸುತ್ತವೆ. ಸ್ಥಳೀಯ ಮಟ್ಟದಲ್ಲಿ ಸಂಘಟನೆಯ ರೀತಿಗೆ ಅನುಗುಣವಾಗಿ
ನಾವೀನ್ಯತೆಯನ್ನು ಮತ್ತು ಹೊಂದಾಣಿಕೆಯನ್ನು ಮಾಡಬೇಕಾಗುತ್ತದೆ. ಅಭಿವೃದ್ಧಿಶೀಲ ಪ್ರದೇಶಗಳಲ್ಲಿನ ರಾಜಕೀಯ
ಪಕ್ಷಗಳು ಮಾಡುವ ಅತಿದೊಡ್ಡ ತಪ್ಪು ಅವುಗಳ ಅಂತರ್ಗತ ಒಡಕು ಯಾವುದೆಂದರೆ, ಅವು ರಾಜಕೀಯ ಪ್ರಜ್ಞೆ ಹೆಚ್ಚಾಗಿ
ಉಳ್ಳ ಗುಂಪುಗಳಿಗಷ್ಟೆ ಆದ್ಯತೆ ನೀಡಿ ವ್ಯವಹರಿಸುತ್ತವೆ. ಒಟ್ಟು ಜನಸಂಖ್ಯೆಯ ಒಂದು ಪ್ರತಿಶತದಷ್ಟಿರುವ,
ಸಣ್ಣಗುಂಪುಗಳಾಗಿರುವ ನಗರ ಪ್ರದೇಶದ ಕೆಳವರ್ಗ, ಸಣ್ಣ ವ್ಯಾಪಾರಸ್ಥರು, ನಾಗರಿಕ ಸೇವಕರು ಇವರ ಆದ್ಯತೆಯ
ವರ್ಗಗಳಾಗಿವೆ.
ಈ ಕೆಳವರ್ಗ ಅಥವಾ ಶ್ರಮಿಕ ವರ್ಗವು ಪಕ್ಷದ ಸಿದ್ಧಾಂತ, ಪ್ರಚಾರ ಮತ್ತು ಪ್ರಕಟಣೆಗಳನ್ನು ತಿಳಿದುಕೊಂಡಿದ್ದರೂ
ಕೂಡ, ಅವು ರಾಷ್ಟ್ರೀಯ ವಿಮೋಚನೆಗಾಗಿ ಕೈಗೊಳ್ಳುವ ಉಗ್ರ ಹೋರಾಟದ ಘೋಷಣೆಗಳಿಗೆ ಸ್ಪಂದಿಸಲು ಸಿದ್ಧವಾಗಿಲ್ಲ.
ವಸಾಹತು ಪ್ರದೇಶಗಳಲ್ಲಿ ಶ್ರಮಿಕ ವರ್ಗ ಅಥವಾ ಕೆಳವರ್ಗವೇ ವಸಾಹತುಗೊಂಡ ಜನರ ಪೈಕಿ ಪ್ರಮುಖವಾದದ್ದು
ಎಂದು ತಿಳಿದ ವಸಾಹತು ಅಧಿಕಾರಶಾಹಿಯು, ಈ ವರ್ಗವನ್ನು ಹೆಚ್ಚು ಓಲೈಸುತ್ತದೆ ಎಂಬ ಅಂಶವು ಬಹಳ ಬಾರಿ
ಉಲ್ಲೇಖಗೊಂಡಿದೆ. ಅದರಲ್ಲೂ ಪ್ರಮುಖವಾಗಿ ಈಗ ತಾನೆ ಉಗಮವಾಗುತ್ತಿರುವ ನಗರ ಕೇಂದ್ರಿತ ಶ್ರಮಿಕವರ್ಗವನ್ನೆ
ಹೆಚ್ಚು ಓಲೈಸುತ್ತಾರೆ. ಬಂಡವಾಳಶಾಹಿ ರಾಷ್ಟ್ರಗಳಲ್ಲಿ ಕೆಳ ಅಥವಾ ಶ್ರಮಿಕ ವರ್ಗವು ಏನನ್ನು ಕಳಕೊಳ್ಳದೆ
ಪ್ರಾಯಶ: ಎಲ್ಲವನ್ನೂ ಪಡೆದುಕೊಳ್ಳುತ್ತದೆ. ವಸಾಹತು ರಾಷ್ಟ್ರಗಳಲ್ಲಿ ಶ್ರಮಿಕ (ಕೆಳ) ವರ್ಗವು ಎಲ್ಲವನ್ನೂ
ಕಳೆದುಕೊಳ್ಳುತ್ತದೆ. ಈ ವರ್ಗದೊಳಗೆ ಬರುವ, ಟ್ರ್ಯಾಮ್ ಮತ್ತು ಟ್ಯಾಕ್ಸಿ ಚಾಲಕರು, ಗಣಿಕಾರ್ಮಿಕರು,
ತರ್ಜುಮೆಕಾರರು, ನರ್ಸ್‍ಗಳು ಮುಂತಾದವರು ವಸಾಹತು ಯಂತ್ರ ನಡೆಸಲು ಅನಿವಾರ್ಯವಾದ ಗುಂಪುಗಳಾಗಿವೆ.
ಈ ವರ್ಗವೇ ರಾಷ್ಟ್ರೀಯ ಪಕ್ಷಗಳ ನಿಷ್ಠಾವಂತ ಗ್ರಾಹಕ(ಅನುಯಾಯಿ)ರಾಗಿರುತ್ತಾರೆ. ವಸಾಹತು ವ್ಯವಸ್ಥೆಯಲ್ಲಿ
ಅನುಕೂಲಕರವಾದ ಸ್ಥಾನವನ್ನು ಇವರು ಪಡೆದಿರುವುದರಿಂದ ವಸಾಹತುಗೊಂಡ ಜನಸಮುದಾಯದೊಳಗಣ ‘ಬೂಝ್ರ್ವ’ ವರ್ಗವನ್ನು ಇವರು ಪ್ರತಿನಿಧಿಸುತ್ತಾರೆ.
ಆದ್ದರಿಂದಲೇ, ರಾಷ್ಟ್ರೀಯ ಪಕ್ಷಗಳ ಗ್ರ್ರಾಹಕರೆಂದರೆ ನಗರ, ಪಟ್ಟಣಗಳಲ್ಲಿ ವಾಸಿಸುವ ತಂತ್ರಜ್ಞರು,
ದೈಹಿಕ ಶ್ರಮದ ಕೆಲಸಗಾರರು, ಬುದ್ಧಿಜೀವಿಗಳು, ವ್ಯಾಪಾರಸ್ಥರು ಇವರೇ ಆಗಿರುತ್ತಾರೆ. ಇವರ ಚಿಂತನಾಕ್ರಮವು,
ತಾಂತ್ರಿಕವಾಗಿ ಮುಂದುವರೆದ ಮತ್ತು ತಾವು ಬದುಕುತ್ತಿರುವ ಸಾಕಷ್ಟು ಅನುಕೂಲಕರ ವಾತಾವರಣದ ಅಂಶಗಳಿಂದ
ರೂಪಿತವಾಗಿದೆ. ಇಲ್ಲಿ ‘ಆಧುನಿಕವಾದವೇ’ ರಾಜ. ಈ ವರ್ಗವು ಪ್ರಗತಿವಿರೋಧಿ ಸಂಪ್ರದಾಯವನ್ನು ವಿರೋಧಿಸುತ್ತ,
ಅದಕ್ಕೆ ನಾವೀನ್ಯತೆಯನ್ನು ತರಬಯಸುತ್ತವೆ. ಈ ಮೂಲಕ ರಾಷ್ಟ್ರೀಯ ಪರಂಪರೆ ಎಂಬ ಗಟ್ಟಿ ಬುನಾದಿಯ ಜೊತೆಗೆ
ನೇರ ಸಂಘರ್ಷಕ್ಕೆ ತೊಡಗುತ್ತವೆ.
ಬಹುತೇಕ ರಾಷ್ಟ್ರೀಯ ಪಕ್ಷಗಳು ಗ್ರ್ರಾಮೀಣ ಜನವರ್ಗವನ್ನು ಅನುಮಾನದಿಂದಲೇ ನೋಡುತ್ತವೆ. ಈ ಜನವರ್ಗವು
ನಿಷ್ಕ್ರಿಯತೆ ಮತ್ತು ನಿಷ್ಫಲತೆಯ ಮಡುವಿನಲ್ಲಿ ಮುಳುಗಿರುವಂತೆ ಅವುಗಳಿಗೆ ತೋರುತ್ತದೆ. ಬಹುಬೇಗನೆ
ರಾಷ್ಟ್ರೀಯ ಪಕ್ಷಗಳ ಸದಸ್ಯರು ಕೂಡ ವಸಾಹತುಶಾಹಿಗಳಂತೆ ಈ ರೈತಾಪಿ ಜನವರ್ಗದ ಕುರಿತಾಗಿ ನಕಾರಾತ್ಮಕ
ಅಭಿಪ್ರಾಯವನ್ನೇ ತಳೆಯುತ್ತಾರೆ. ವಸಾಹತುಶಾಹಿಯು ತನ್ನ ಪ್ರಭುತ್ವವನ್ನು ಸ್ಥಾಪಿಸುವಾಗ ವ್ಯವಸ್ಥಿತವಾಗಿ
ಈ ರೈತಾಪಿವರ್ಗವನ್ನು ತಿರಸ್ಕಾರಯೋಗ್ಯ ವರ್ಗವೆಂಬಂತೆ ರೂಪಿಸುತ್ತದೆ. ರಾಜಕೀಯ ಪಕ್ಷಗಳು ಗ್ರ್ರಾಮೀಣ
ಜನವರ್ಗದ ಕುರಿತು ತಳೆದಿರುವ ಅಪನಂಬಿಕೆಯ ಕಾರಣವನ್ನು ತಿಳಿದುಕೊಳ್ಳುವ ನಮ್ಮ ಪ್ರಯತ್ನದಲ್ಲಿ ನಾವು
ಈ ಅಂಶವನ್ನು ಮರೆಯಬಾರದು. ಮಾರಾಬೌಟ್ಸ್ ರೀತಿಯ ಮಂತ್ರವಾದಿವೈದ್ಯರು, ಸಾಂಪ್ರದಾಯಿಕ ಮುಖಂಡರುಗಳಿಂದ
ಬಿಗುವಾಗಿ ರೂಪುಗೊಂಡ ಗ್ರ್ರಾಮೀಣ ಜನವರ್ಗವು ಈಗಲೂ ಒಂದು ಊಳಿಗಮಾನ್ಯ ಸ್ಥಿತಿಯಲ್ಲಿಯೇ ಉಳಿದಿದೆ.
ಇದರ ಮಧ್ಯಯುಗೀನ ಸ್ವರೂಪವನ್ನು ವಸಾಹತು ಆಡಳಿತಗಾರರು ಮತ್ತು ಸೈನ್ಯ ಘೋಷಿಸುತ್ತವೆ.
ರಾಷ್ಟ್ರೀಯ ಬೂಝ್ರ್ವಾ ಯುವವರ್ಗವು ಬಹುಮುಖ್ಯವಾಗಿ ವ್ಯಾಪಾರಿರಂಗದ, ಊಳಿಗಮಾನ್ಯ ದೊರೆಗಳ ಜೊತೆ
ವಿವಿಧ ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಇಳಿಯುತ್ತದೆ. ಮಾರಾಬೌಟ್ಸ್ ಮತ್ತು ಮಂತ್ರವಾದಿವೈದ್ಯರು ರೋಗಿಗಳು
ತಜ್ಞವೈದ್ಯನನ್ನು ಸಂಪರ್ಕಿಸುವುದನ್ನು ತಡೆಯುತ್ತಾರೆ. ಸ್ಥಳೀಯ ಡಿಜೇಮಾಗಳು ನೀಡುವ ತೀರ್ಪು, ತೀರ್ಮಾನಗಳು
ನ್ಯಾಯವಾದಿಗಳನ್ನು ಅಪ್ರಸ್ತುತಗೊಳಿಸುತ್ತವೆ. ಖೈದ್‍ಗಳೆಂಬ ಸ್ಥಳೀಯ ಬುಡಕಟ್ಟು ನಾಯಕರು ತಮ್ಮ ರಾಜಕೀಯ
ಮತ್ತು ಆಡಳಿತಾತ್ಮಕ ಪ್ರಭಾವವನ್ನು ಬಳಸಿ ಹೊಸ ವ್ಯಾಪಾರ ಉದ್ಯಮಗಳನ್ನು ಸ್ಥಾಪಿಸುತ್ತಾರೆ. ಸ್ಥಳೀಯ
ಮುಖಂಡರು ಧರ್ಮ ಮತ್ತು ಪರಂಪರೆಯ ಹೆಸರಿನಲ್ಲಿ ಹೊಸ ಉತ್ಪನ್ನ, ವ್ಯಾಪಾರಗಳನ್ನು ವಿರೋಧಿಸುತ್ತಾರೆ.
ವಸಾಹತುಗೊಂಡ ಈ ವ್ಯವಹಾರಸ್ಥ, ವ್ಯಾಪಾರಿಗಳ ಯುವಪಡೆ, ತಾನು ಬೆಳೆಯುವ ಉದ್ದೇಶಕ್ಕಾಗಿ ನಿಷೇಧದ
ಈ ಅಡೆತಡೆಗಳನ್ನು ನಿರ್ಮೂಲನಗೊಳಿಸಿಕೊಳ್ಳಬೇಕಾಗುತ್ತದೆ. ಊಳಿಗಮಾನ್ಯ ಪ್ರಭುಗಳು ತಮಗಾಗಿಯೇ ಇರುವ
ಸ್ಥಳೀಯ ಗ್ರಾಹಕವರ್ಗವೊಂದನ್ನು ಹೊಂದಿರುತ್ತಾರೆ. ಹೊಸ ಉತ್ಪನ್ನಗಳನ್ನು ಖರೀದಿಸಲು ಈ ವರ್ಗಕ್ಕೆ ಇವರು
ನಿಷೇಧ ಹೇರುತ್ತಾರೆ. ಈ ವರ್ಗವನ್ನೆ ತಮ್ಮ ಮಾರುಕಟ್ಟೆಯನ್ನಾಗಿಸಿಕೊಳ್ಳಲು ಎರಡೂ ಪಂಗಡಗಳು ಸ್ಪರ್ಧೆಗಿಳಿಯುತ್ತವೆ.
ಪಾಶ್ಚಾತ್ಯ ಪ್ರಭಾವಿತ ಯುವ ರಾಷ್ಟ್ರೀಯವಾದಿಗಳು ಮತ್ತು ಸಾಮಾನ್ಯ ಜನವರ್ಗಗಳ ನಡುವೆ ಊಳಿಗಮಾನ್ಯ
ಪ್ರತಿನಿಧಿಗಳು ಅಡ್ಡಿಯಾಗಿ ನಿಲ್ಲುತ್ತಾರೆ. ಪ್ರತಿಬಾರಿ ಗಣ್ಯವರ್ಗವು ಗ್ರಾಮೀಣ ಜನವರ್ಗದ ಜೊತೆಗೆ
ಸಂವಹನಕ್ಕೆ ಎಳಸಿದಾಗ, ಬುಡಕಟ್ಟು ಮುಖಂಡರು, ಧಾರ್ಮಿಕ ನಾಯಕರು ಮತ್ತು ಸಂಪ್ರದಾಯಸ್ಥ ಶಕ್ತಿಗಳು ಇವರ
ವಿರುದ್ಧ, ಎಚ್ಚರಿಕೆ, ಬೆದರಿಕೆ ಮತ್ತು ಬಹಿಷ್ಕಾರದಂತಹ ತಂತ್ರಗಳನ್ನು ಬಳಸುತ್ತಾರೆ. ಈ ಸಾಂಪ್ರದಾಯಿಕ
ಶಕ್ತಿಗಳು ಆಡಳಿತಾರೂಢರಿಂದ ಮನ್ನಣೆಗೆ ಪಾತ್ರವಾಗಿರುತ್ತದೆ. ಗಣ್ಯವರ್ಗವು ಗ್ರ್ರಾಮೀಣ ಜನವರ್ಗದೊಂದಿಗೆ
ಬೆರೆಯಲು ನಡೆಸುವ ಸತತ ಪ್ರಯತ್ನಗಳನ್ನು ಕಂಡು ಈ ವರ್ಗವು ಆತಂಕಕ್ಕೆ ಒಳಗಾಗುತ್ತದೆ. ನಗರ ಕೇಂದ್ರಿತ
ಗುಂಪುಗಳು ಹೊಂದಿರುವ ವಿಚಾರಗಳು ಊಳಿಗಮಾನ್ಯ ಪ್ರಭುತ್ವದಲ್ಲಿ ತಾನು ಹೊಂದಿರುವ ಅಸ್ತಿತ್ವಕ್ಕೆ ಅಪಾಯ
ತಂದೊಡ್ಡಬಲ್ಲವು ಎಂಬುದನ್ನು ಇವರು ಚೆನ್ನಾಗಿಯೇ ಮನಗಂಡಿರುತ್ತಾರೆ. ಈ ಕಾರಣಕ್ಕಾಗಿಯೇ ಆಕ್ರಮಣಕಾರರು
(ವಸಾಹತುಶಾಹಿಗಳು) ಈ ವರ್ಗಕ್ಕೆ ಶತ್ರುಗಳಾಗಿ ಕಾಣುವುದಿಲ್ಲ. ಅವರೊಟ್ಟಿಗಿನ ಒಡನಾಟ ಈ ವರ್ಗಕ್ಕೆ
ಹಿತಕಾರಿಯಾಗಿಯೇ ಇರುತ್ತದೆ. ಆದರೆ ನಗರ ಕೇಂದ್ರಿತ ಆಧುನಿಕವಾದಿಗಳೇ ಈ ವರ್ಗಕ್ಕೆ ಶತ್ರುಗಳಾಗಿ ಕಾಣುತ್ತಾರೆ.
ಸಾಂಪ್ರದಾಯಿಕ ಸಮಾಜವ್ಯವಸ್ಥೆಯನ್ನು ಪಲ್ಲಟಗೊಳಿಸಲು ಪಣ ತೊಟ್ಟಂತೆ ಕಾಣುವ ಈ ವರ್ಗವು ಸಾಂಪ್ರದಾಯಿಕ
ಶಕ್ತಿಗಳ ತುತ್ತನ್ನು ಕಿತ್ತುಕೊಳ್ಳುತ್ತವೆ.
ರೈತಾಪಿ ಜನವರ್ಗದ ಕುರಿತಾಗಿ ಪಾಶ್ಚಾತ್ಯ ಪ್ರಭಾವಿತ ಜನರ ಭಾವನೆಗಳು, ಕೈಗಾರಿಕೀಕರಣಗೊಂಡ ರಾಷ್ಟ್ರಗಳಲ್ಲಿನ
ಶ್ರಮಿಕ-ಕೆಳವರ್ಗದವರ ಭಾವನೆಗಳನ್ನು ನೆನಪಿಸುತ್ತವೆ. ಬೂಜ್ರ್ವಾ ಕ್ರ್ರಾಂತಿಯ ಇತಿಹಾಸ ಮತ್ತು ಶ್ರಮಿಕವರ್ಗದ
ಕ್ರ್ರಾಂತಿಯ ಇತಿಹಾಸ ನಮಗೆ ತೋರ್ಪಡಿಸುವುದೇನೆಂದರೆ; ರೈತಾಪಿ ಜನವರ್ಗವು ಈ ತೆರನ ಕ್ರ್ರಾಂತಿಗಳನ್ನು
ನಿಗ್ರ್ರಹಿಸುವ ಶಕ್ತಿಯಾಗಿ ಕೆಲಸ ಮಾಡುತ್ತದೆ ಎಂದು. ಕೈಗಾರಿಕೀಕರಣಗೊಂಡ ರಾಷ್ಟ್ರಗಳಲ್ಲಿ ರೈತಾಪಿ
ಜನವರ್ಗವು ಬಹುತೇಕವಾಗಿ, ರಾಜಕೀಯ ಪ್ರಜ್ಞೆ ಇಲ್ಲದ, ಅಸಂಘಟಿತವಾದ ಮತ್ತು ಅರಾಜಕವಾದ ಗುಂಪಷ್ಟೇ ಆಗಿರುತ್ತದೆ.
ಅವುಗಳ ಪ್ರಧಾನ ಲಕ್ಷ್ಷಣಗಳೆಂದರೆ, ವ್ಯಕ್ತಿವಾದ, ಅಶಿಸ್ತು, ಹಣದಾಹ, ಆಕ್ರೋಶ ಮತ್ತು ತೀವ್ರ ಹತಾಶೆ.
ಈ ಲಕ್ಷ್ಷಣಗಳು ಪ್ರತಿಗಾಮಿ ವರ್ತನೆಯ ಲಕ್ಷ್ಷಣಗಳೇ ಆಗಿವೆ.
ರಾಷ್ಟ್ರೀಯ ಪಕ್ಷಗಳು ತಮ್ಮ ತತ್ವ ಮತ್ತು ಕಾರ್ಯವಿಧಾನಗಳನ್ನು ಪಾಶ್ಚಾತ್ಯ ಪಕ್ಷಗಳ ಮಾದರಿಯಲ್ಲೆ
ರೂಪಿಸುತ್ತವೆ ಮತ್ತು ಈ ಕಾರಣಕ್ಕಾಗಿಯೇ ಬಹುತೇಕ ಸಂದರ್ಭಗಳಲ್ಲಿ ಅವು ಗ್ರ್ರಾಮೀಣ ಜನವರ್ಗಗಳತ್ತ ತಮ್ಮ
ಪ್ರಚಾರವನ್ನು ನಡೆಸುವುದಿಲ್ಲ ಎಂಬುದನ್ನು ನಾವು ನೋಡಿದ್ದೇವೆ. ವಸಾಹತು ಸಮಾಜದ ರೈತಾಪಿವರ್ಗವು ತಮ್ಮ
ಪಾರಂಪರಿಕ(ಸಾಂಪ್ರದಾಯಿಕ) ಸಂರಚನೆಯ ಸುರಕ್ಷಿತ ವಾತಾವರಣದಲ್ಲಿ ಬದುಕುತ್ತಿದ್ದರೆ ಕೈಗಾರಿಕೀಕರಣಗೊಂಡ
ಸಮಾಜದಲ್ಲಿ ಈ ತೆರನ ಪಾರಂಪರಿಕ (ಸಾಂಪ್ರದಾಯಿಕ) ಸಂರಚನೆಗಳೇ ಕೈಗಾರಿಕೀಕರಣದ ಪ್ರಭಾವದಿಂದ ಛಿದ್ರಗೊಂಡಿರುತ್ತವೆ.
ವಸಾಹತು ಸಮಾಜದ ವೈಚಾರಿಕ ವಿಶ್ಲೇಷಣೆ ಮಾಡಿದಾಗ ಈ ಅಂಶ ನಮಗೆ ತಿಳಿದುಬರುತ್ತದೆ. ವಸಾಹತು ಸಮಾಜದಲ್ಲಿ
ವ್ಯಕ್ತಿಗತ ನಡವಳಿಕೆಯನ್ನು ನಾವು ಕಾಣಬಹುದಾದದ್ದು ಶ್ರಮಿಕ ಬೂಜ್ರ್ವಾವರ್ಗದಲ್ಲಿ. ಹಳ್ಳಿಯನ್ನು ತ್ಯಜಿಸಿ,
ಅಲ್ಲಿಯ ಜನಜೀವನದ ಬಗೆಹರಿಸಲಾಗದ ಸಮಸ್ಯೆಗಳಿಂದ ಪಲಾಯನಗೈದ ಭೂರಹಿತ ರೈತಾಪಿಗಳು, ಈಗ ಶ್ರಮಿಕ ಸಮೂಹವಾಗಿ
ಪರಿವರ್ತಿತಗೊಂಡು ಪಟ್ಟಣಗಳತ್ತ ಗುಳೇ ಹೋಗುತ್ತವೆ. ಪಟ್ಟಣದ ಟೆಂಟ್‍ಮನೆಗಳಲ್ಲಿ (ಕೊಳೆಗೇರಿ) ಕಿಕ್ಕಿರಿದ
ಈ ಜನರು ವಸಾಹತು ಪ್ರಭುತ್ವದ ಸೃಷ್ಟಿಗಳಾದ ನಗರ ಮತ್ತು ಬಂದರು ಪಟ್ಟಣಗಳತ್ತ ನುಸುಳಲು ಪ್ರಯತ್ನಿಸುತ್ತಾರೆ.
ಇನ್ನು ರೈತಾಪಿವರ್ಗದ ಕೆಲವಷ್ಟು ಜನರು ಆತಂಕದ ಪರಿಸ್ಥಿತಿಯಲ್ಲಿ ಬದುಕು ಸಾಗಿಸುತ್ತಾರೆ. ಹಳ್ಳಿಗಾಡಿನಲ್ಲಿ
ಜೀವನೋಪಾಯವನ್ನು ಹುಡುಕಿಕೊಳ್ಳಲಾರದವರಿಗೆ ನಗರಗಳತ್ತ ವಲಸೆಹೋಗದೆ ಬೇರೆ ಮಾರ್ಗ ಇರುವುದಿಲ್ಲ. ಹೀಗೆ
ಹಳ್ಳಿಯಲ್ಲೆ ಉಳಿದ ಒಬ್ಬ ರೈತ ಪರಂಪರೆಯ ಬದ್ಧ ಸಮರ್ಥಕನಾಗುತ್ತಾನೆ. ವಸಾಹತು ಸಮಾಜದಲ್ಲಿ ಇವನು ಶಿಸ್ತಿನ
ಪ್ರತಿನಿಧಿಯಾಗಿ ತನ್ನ ಸಾಮಾಜಿಕ ಸಂರಚನೆಯಲ್ಲಿ ಸಮುದಾಯಪ್ರಜ್ಞೆ ಉಳ್ಳವನಾಗಿರುತ್ತಾನೆ. ಇಂತಹ ಚಲನಹೀನ,
ಕಠಿಣ ನಿಲುವುಗಳಿಗೆ ಜೋತುಬಿದ್ದ ಸಮಾಜದಲ್ಲಿ ಆಗಾಗಲೊಮ್ಮೆ ಧಾರ್ಮಿಕ ಮೂಲಭೂತವಾದ ಮತ್ತು ಬುಡಕಟ್ಟು
ಕಲಹಗಳಂತಹ ಪ್ರಕರಣಗಳು ಸಂಭವಿಸುತ್ತದೆ. ಆದರೆ ಗ್ರ್ರಾಮೀಣಜನವರ್ಗವು ತನ್ನ sಠಿoಟಿಣಚಿಟಿeiಣಥಿ ಅಥವಾ
ಸಹಜ ನಿರಂತರತೆಯಲ್ಲಿ ಶಿಸ್ತುಬದ್ಧವಾಗಿ ಮತ್ತು ಪರೋಪಕಾರಿಯಾಗಿಯೂ ಉಳಿದಿರುತ್ತದೆ. ಸಮುದಾಯವನ್ನು
ಮುನ್ನೆಲೆಗೆ ತಂದು, ವ್ಯಕ್ತಿಯು ಬದಿಸರಿಯುತ್ತಾನೆ.
ರೈತಾಪಿ ಜನರು ನಗರವಾಸಿಯ ಕುರಿತು ಅಪನಂಬಿಕೆ ಹೊಂದಿರುತ್ತಾರೆ. ಯುರೋಪಿಯನ್‍ನಂತೆ ವೇಷಭೂಷಣ
ತೊಟ್ಟ, ಅವನ ಭಾಷೆಯನ್ನು ಮಾತನಾಡುವ, ಅವನೊಟ್ಟಿಗೆ ಕೆಲಸಮಾಡುವ ಕೆಲವೊಮ್ಮೆ ಅವನ ನೆರೆಯವನಾಗಿ ಬದುಕುವ
ನಗರವಾಸಿಯನ್ನು ರಾಷ್ಟ್ರೀಯ ಪರಂಪರೆಯಿಂದ ಬೇರ್ಪಟ್ಟು ಮತಾಂತರಗೊಂಡವನೆಂದು ರೈತಾಪಿವರ್ಗವು ಪರಿಗಣಿಸುತ್ತದೆ.
ನಗರವಾಸಿಯು ಒಬ್ಬ ದ್ರೋಹಿ, ಒಬ್ಬ meಡಿಛಿeಟಿಚಿಡಿಥಿ ಅಥವಾ ವೇತನಕ್ಕಾಗಿ ದುಡಿಯೋ ಸೈನಿಕರು ಆಕ್ರಮಣಕಾರನೊಂದಿಗೆ
ಷಾಮೀಲಾಗಿ, ವಸಾಹತು ವ್ಯವಸ್ಥೆಯೊಳಗೆ ಯಶಸ್ಸನ್ನು ಗಳಿಸಲು ಸದಾ ಹವಣಿಸುತ್ತಿರುವವನು. ನಗರವಾಸಿಗಳಿಗೆ
ನೈತಿಕತೆ ಇಲ್ಲ ಎಂದು ರೈತಾಪಿಗಳು ಹೇಳಲು ಇದೇ ಕಾರಣವಾಗಿದೆ. ಹಾಗೆಂದು ಇದು ನಗರ ಮತ್ತು ಹಳ್ಳಿಗಳ
ನಡುವೆ ಇರುವ ಸಾಂಪ್ರದಾಯಿಕವಾದ ವಿರೋಧವಲ್ಲ. ಇದು ವಸಾಹತುಷಾಹೀ ವ್ಯವಸ್ಥೆ ತಂದುಕೊಡುವ ಅನುಕೂಲಗಳಿಂದ
ವಂಚಿತರಾದ ಜನರು ಮತ್ತು ಅವರಿಗೆ ಪ್ರತಿಯಾಗಿ ಇದೇ ವ್ಯವಸ್ಥೆಯನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡ
ಜನರ ನಡುವಿನ ವಿರೋಧವಾಗಿದೆ.
ವಸಾಹತುಶಾಹಿಗಳು ರಾಷ್ಟ್ರೀಯ ಪಕ್ಷಗಳನ್ನು ವಿರೋಧಿಸಲು ನಗರ ಮತ್ತು ಹಳ್ಳಿಗಳ ನಡುವಿನ ಈ ವೈಷಮ್ಯದ
ವಿಷಯವನ್ನೇ ಬಳಸಿಕೊಳ್ಳುತ್ತಾರೆ. ಇವರು ಬೆಟ್ಟಗಾಡುಗಳ ಮತ್ತು ಹಳ್ಳಿಗಾಡಿನ ಜನರನ್ನು ನಗರವಾಸಿಗಳ
ವಿರುದ್ಧವಾಗಿ ಎತ್ತಿಕಟ್ಟುತ್ತಾರೆ ಮತ್ತು ಸಂಘಟಿಸುತ್ತಾರೆ. ಇವರು ಬುಡಕಟ್ಟು ಅಸ್ಮಿತೆಗಳನ್ನು ಹುರಿದುಂಬಿಸುತ್ತಾರೆ
ಮತ್ತು ಪುನಶ್ಚೇತನಗೊಳಿಸ್ತಾರೆ. ಹಾಗಾಗಿಯೇ ಕಾಲೊಂಡ್ಜಿಯನ್ನು ಕಸಾಯ್‍ನ ರಾಜನನ್ನಾಗಿ ಪಟ್ಟಕಟ್ಟಿದ್ದು,
ಮತ್ತು ಕೆಲವು ವರ್ಷಗಳ ಹಿಂದೆ ಗಾನಾದಲ್ಲಿ ಮುಖಂಡರ ಸಭೆ ಅಥವಾ ಅಸೆಂಬ್ಲಿಯು ಎನ್‍ಕ್ರುಮಹ್ ವಿರುದ್ಧ
ನಿಂತಿದ್ದು ಆಶ್ಚರ್ಯವೇನೂ ಅಲ್ಲ.
ರಾಜಕೀಯ ಪಕ್ಷಗಳು ಗ್ರಾಮೀಣ ಭಾಗದಲ್ಲಿ ತಮ್ಮ ಬೇರೂರಲು ಶಕ್ತರಾಗಿಲ್ಲ. ವಸಾಹತು ಸಂದರ್ಭದಲ್ಲಿ
ಈ ಪಕ್ಷಗಳು ಈಗಾಗಲೇ ಇರುವ ಸಾಮಾಜಿಕ ಸಂರಚನೆಗಳನ್ನು ರಾಷ್ಟ್ರೀಯ ಅಥವಾ ಪ್ರಗತಿಪರ ನಿಲುವುಗಳಿಗೆ ಹೊಂದಿಸುವ
ಬದಲು, ಪಾರಂಪರಿಕ ಹಾಗೂ ಸಾಂಪ್ರದಾಯಿಕ ರಚನೆಗಳನ್ನು ಹಾಳುಗೆಡವುದರಲ್ಲಿ ತಲ್ಲೀನರಾಗುತ್ತವೆ. ಈ ಪಕ್ಷಗಳು
ತಮ್ಮ ರಾಷ್ಟ್ರವನ್ನು ಎಲ್ಲಾ ಸಂಕೋಲೆಗಳಿಂದ ಬಿಡಿಸಿ, ಬೆಳೆಸುವೆವು ಎಂದು ಭಾವಿಸುತ್ತಾರೆ. ಆದರೆ ವಸಾಹತು
ವ್ಯವಸ್ಥೆಯ ಸಂಕೋಲೆಗಳು ಇನ್ನೂ ಬಿಗಿಯಾಗಿಯೇ ಬಂಧಿಸಲ್ಪಟ್ಟಿರುತ್ತವೆ. ಇವು ಜನವರ್ಗಗಳತ್ತ ತಲುಪಲು
ಯಾವ ಪ್ರಯತ್ನವನ್ನೂ ಮಾಡುವುದಿಲ್ಲ. ತಮ್ಮ ತಾತ್ವಿಕ ಜ್ಞಾನವನ್ನು ಜನರ ಸೇವೆಗೆ ಮುಡಿಪಾಗಿಡುವುದರ
ಬದಲು ಇವು ಪೂರ್ವ ನಿರ್ಧರಿತ ಯೋಜನೆಗನುಗುಣವಾಗಿ ಜನವರ್ಗವನ್ನು ನಿರ್ಬಂಧಿಸಿಡುತ್ತಾರೆ. ಇದರ ಪರಿಣಾಮವಾಗಿಯೇ
ಇವು ರಾಜಧಾನಿಯಿಂದ ಹಳ್ಳಿಗಳತ್ತ ಅನನುಭವಿಗಳಾದ ಮತ್ತು ಅಪರಿಚಿತರಾದ ನಾಯಕರನ್ನು ನಿಯೋಜಿಸುವುದು.
ಕೇಂದ್ರಶಕ್ತಿಗಳಿಂದ ಸನ್ನದ್ಧರಾದ ಈ ನಾಯಕರುಗಳು ‘ಡೌರ್’ ಅಥವಾ ಹಳ್ಳಿಯನ್ನು
ಒಂದು ಕಂಪೆನಿಯ ಸಮಿತಿಯಂತೆ ನಿಭಾಯಿಸುತ್ತಾರೆ. ಸಾಂಪ್ರದಾಯಿಕ ಮುಖಂಡರನ್ನು ನಿರ್ಲಕ್ಷಿಸಿ ಅವರನ್ನು
ನಗಣ್ಯಗೊಳಿಸುತ್ತಾರೆ. ಹಳ್ಳಿಯ ಇತಿಹಾಸವನ್ನು ಸಮಗ್ರವಾಗಿ ಒಳಗೊಳ್ಳುವ ಬದಲು ಮತ್ತು ಬುಡಕಟ್ಟು ಮತ್ತು
ಪಂಗಡಗಳ ನಡುವಿನ ಕಲಹವನ್ನು ಜನರ ಹೋರಾಟವನ್ನಾಗಿ ರೂಪಿಸುವುದರ ಬದಲು, ಭವಿಷ್ಯದ ರಾಷ್ಟ್ರದ ಇತಿಹಾಸವು
ಅದರ ವಾಸ್ತವಿಕತೆಗೆ ಪ್ರಸ್ತುತವಾದ ಸ್ಥಳೀಯ ಇತಿಹಾಸಗಳನ್ನು ಅವಗಣಿಸಿ ಅಳಿಸಿಹಾಕುತ್ತದೆ. ಸಾಂಪ್ರದಾಯಿಕ
ಸಮಾಜಗಳಲ್ಲಿ ಗೌರವಕ್ಕೆ ಪಾತ್ರರಾದ ಮತ್ತು ಪ್ರಶ್ನಾತೀತ ನೈತಿಕ ಪರಮಾಧಿಕಾರವಳ್ಳ ಹಿರಿಯರನ್ನು ಸಾರ್ವಜನಿಕವಾಗಿ
ಅಪಹಾಸ್ಯಕ್ಕೀಡುಮಾಡಲಾಗುತ್ತದೆ. ಇದರ ಪರಿಣಾಮವಾಗಿ ಉಂಟಾಗುವ ಅಸಹನೆ, ಅತೃಪ್ತಿಯನ್ನು ಯಾವ ಮುಲಾಜಿಲ್ಲದೆ
ಬಳಸಿಕೊಳ್ಳುವ ಆಕ್ರಮಣಕಾರರು ಅಧಿಕಾರದ ಅಣಕದಂತಿರುವ ಈ ನಾಯಕರುಗಳು ಕೈಗೊಂಡ ಸಣ್ಣಪುಟ್ಟ ತೀರ್ಮಾನಗಳ
ಕುರಿತಾದ ಮಾಹಿತಿಯನ್ನು ಪಡೆಯುತ್ತಾರೆ. ವಾಸ್ತವಿಕ ವಿಷಯಗಳನ್ನು ಆಧರಿಸಿದ ಪೋಲೀಸ್ ದೌರ್ಜನ್ಯ ಮತ್ತು
ಬಲಪ್ರದರ್ಶನ ಕೂಡಾ ನಡೆಯುತ್ತದೆ. ಹೊರಗಿನಿಂದ ನೇಮಕಗೊಂಡ ನಾಯಕರು ಮತ್ತು ಹೊಸ ಸಭೆಯ ಪ್ರಮುಖ ಸದಸ್ಯರನ್ನು
ಬಂಧಿಸಲಾಗುತ್ತದೆ.
ಈ ಎಲ್ಲಾ ಹಿನ್ನಡೆಗಳು ರಾಷ್ಟ್ರೀಯ ಪಕ್ಷಗಳ ತಾತ್ವಿಕ ವಿಶ್ಲೇಷಣೆಯನ್ನು ದೃಢಗೊಳಿಸುತ್ತವೆ.
ಗ್ರಾಮೀಣ ಜನವರ್ಗವನ್ನು ನಿರ್ಬಂಧಿಸುವ ಅನಾಹುತಕಾರಿ ಪ್ರಯತ್ನಗಳಿಂದಾಗಿ ಇವುಗಳ ಕುರಿತಾಗಿ ಪಕ್ಷಗಳಿಗಿರುವ
ಅಪನಂಬಿಕೆ ಪುನರ್ಬಲನಗೊಳ್ಳುತ್ತದೆ ಮತ್ತು ಇವರ ಬಗ್ಗೆ ಇರುವ ವಿರೋಧ ಕ್ರಮೇಣ ಹರಳುಗಟ್ಟುತ್ತದೆ. ರಾಷ್ಟ್ರೀಯ
ವಿಮೋಚನೆಗಾಗಿ ನಡೆದ ಹೋರಾಟದ ನಂತರವು ಇದೇ ತಪ್ಪುಗಳನ್ನು ಪುನರಾವರ್ತಿಸಲಾಗುತ್ತದೆ. ವಿಕೇಂದ್ರೀಕರಣ
ಮತ್ತು ಸ್ವಯಂ ಆಡಳಿತದ ಕ್ರಮಗಳನ್ನು ಪೋಷಿಸಲಾಗುತ್ತದೆ. ವಸಾಹತುಶಾಹೀ ಕಾಲಘಟ್ಟದಲ್ಲಿದ್ದ ಬುಡಕಟ್ಟುವಾದವು
ಬದಲಾಗಿ, ರಾಷ್ಟ್ರೀಯ ಕಾಲಘಟ್ಟದಲ್ಲಿ ಪ್ರಾದೇಶಿಕವಾದವಾಗಿದೆ. ಇದು ಸಾಂಸ್ಥಿಕವಾಗಿ ‘ಫೆಡರಲಿಸಂ’ ಎಂಬ ರೂಪದಲ್ಲಿ ವ್ಯಕ್ತವಾಗಿದೆ.
ಆದರೆ ಸೋಜಿಗವೆಂಬಂತೆ, ಪಕ್ಷಗಳು ಈ ಗ್ರಾಮೀಣ ಜನವರ್ಗದ ಮೇಲೆ ಯಾವ ಹಿಡಿತವನ್ನು ಹೊಂದಿಲ್ಲದಿದ್ದರೂ
ಇವು, ರಾಷ್ಟ್ರೀಯ ಪ್ರಜ್ಞೆ ರೂಪುತಳೆಯುವಲ್ಲಿ ಅಥವಾ ರಾಷ್ಟ್ರೀಯ ಪಕ್ಷಗಳ ಚಟುವಟಿಕೆಯನ್ನು ವಿಸ್ತರಿಸುವಲ್ಲಿ
ಮತ್ತು ಇನ್ನು ಕೆಲವು ವಿರಳ ಸಂದರ್ಭಗಳಲ್ಲಿ ಈ ಪಕ್ಷಗಳ ವೈಫಲ್ಯವನ್ನು ಮೀರುವಲ್ಲಿ ಪ್ರಮುಖ ಪಾತ್ರ
ವಹಿಸುತ್ತದೆ. ರಾಷ್ಟ್ರೀಯ ಪಕ್ಷಗಳ ಪ್ರಚಾರಾಂದೋಳನಕ್ಕೆ ರೈತಾಪಿ ವರ್ಗದಿಂದ ಒಂದು ಪ್ರತಿಸ್ಪಂದನ ಸದಾ
ಇದ್ದೇ ಇರುತ್ತದೆ. ವಸಾಹತು ಪೂರ್ವ ಕಾಲದ ನೆನಪುಗಳು ಈಗಲೂ ಹಳ್ಳಿಗಳಲ್ಲಿ ಜೀವಂತವಾಗಿವೆ. ವಸಾಹತು
ಶಕ್ತಿಗಳ ವಿರುದ್ಧ ಹೋರಾಡಲು ಹೊರಟ ಯೋಧನಿಗಾಗಿ ಹಾಡಿದ ಹಾಡುಗಳನ್ನು ತಾಯಂದಿರು ಈಗಲೂ ತಮ್ಮ ಮಕ್ಕಳಿಗೆ
ಹಾಡುತ್ತಾರೆ. ಹಳ್ಳಿಯ ಹುಡುಗರು ಹನ್ನೆರಡೊ ಅಥವಾ ಹದಿಮೂರೋ ವಯಸ್ಸಿಗೆ, ವಸಾಹತು ಶಕ್ತಿಗಳೊಂದಿಗೆ
ನಡೆದ ಕಡೆಯ ದಂಗೆಯಲ್ಲಿ ಪಾಲ್ಗೊಂಡ ತಮ್ಮ ಹಿರಿಯರ ಹೆಸರುಗಳನ್ನು ಕಂಠಸ್ಥ(ಹೃದಯಸ್ಥ) ಮಾಡಿರುತ್ತಾರೆ.
ನಗರದ ಮಕ್ಕಳು ಐಷಾರಾಮಿ ವಸ್ತುಗಳ ಬಗ್ಗೆ, ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವುದರ ಬಗ್ಗೆ ಕನಸು ಕಂಡರೆ
ಹಳ್ಳಿಯ ಮತ್ತು ‘ಡಾರ್ಸ್’ ಮಕ್ಕಳು ಕನಸುಗಳು ಯಾರೋ ಒಬ್ಬ ಹೋರಾಟಗಾರನ (ಹೀರೋ) ಜೊತೆ ಗುರುತಿಸಿಕೊಳ್ಳುವುದಾಗಿರುತ್ತದೆ.
ಆ ಹೋರಾಟಗಾರನ (ಹೀರೋ) ನ ವೀರಮರಣ ಇವರ ಕಣ್ಣುಗಳಲ್ಲಿ ನೀರು ತರಿಸುತ್ತದೆ.
ರಾಷ್ಟ್ರೀಯ ಪಕ್ಷಗಳು ಪಟ್ಟಣಗಳಲ್ಲಿನ ಶ್ರಮಿಕ ವರ್ಗವನ್ನು ಸಂಘಟಿಸುವ ಪ್ರಯತ್ನದಲ್ಲಿರುವಾಗಲೇ
ಗ್ರ್ರಾಮೀಣ ಭಾಗದಲ್ಲಿ ವಿವರಿಸಲಾಗದ ಒಂದು ಸಾಮಾಜಿಕ ಅಶಾಂತಿಯನ್ನು ನಾವು ಗುರುತಿಸುತ್ತೇವೆ. ಇದಕ್ಕೆ
ಒಂದು ಉದಾಹರಣೆಯಾಗಿ, ಮಡಗಾಸ್ಕರ್‍ನಲ್ಲಿ 1947ರಲ್ಲಿ ನಡೆದ ಕುಖ್ಯಾತ ದಂಗೆಯನ್ನು ಹೇಳಬಹುದು. ವಸಾಹತುಶಾಹಿಗಳು
ಸಾರಾಸಗಟಾಗಿ ಇದೊಂದು ರೈತದಂಗೆ ಎಂದು ಸಾರಿದರು. ಆದರೆ ನಮಗೆ ಈಗ ತಿಳಿದಿದೆ, ವಿಷಯ ಆಗ ಎಷ್ಟೊಂದು
ಸಂಕೀರ್ಣವಾಗಿತ್ತು ಎಂದು ? ಎರಡನೇ ಮಹಾಯುದ್ಧದ ಕಾಲದಲ್ಲಿ ಪ್ರಮುಖ ವಸಾಹತು ಕಂಪೆನಿಗಳು ತಮ್ಮ ಪ್ರಭುತ್ವವನ್ನು
ವಿಸ್ತರಿಸಿ ಅಳಿದುಳಿದ ಭೂಮಿಯನ್ನು ದೋಚಿದವು. ಅದೇ ಸಂದರ್ಭದಲ್ಲಿ ಜ್ಯೂಯಿಷ್, ಕೆಬಿಲ್ ಮತ್ತು ವೆಸ್ಟ್‍ಇಂಡೀಸ್
ಮುಂತಾದ ನಿರಾಶ್ರಿತರ ದ್ವೀಪಗಳಲ್ಲಿ ನೆಲೆಯೂರುವ ಮಾತು ಪ್ರಸ್ತಾಪವಾದವು.
ವಸಾಹತುಶಾಹಿಗಳಿಂದ ಉತ್ತೇಜಿತರಾದ ದಕ್ಷಿಣ ಆಫ್ರಿಕಾದ ಬಿಳಿಯರು ಈ ದ್ವೀಪಗಳ ಮೇಲೆ ಆಕ್ರಮಣ
ಮಾಡುವ ಸಂಭವವಿದೆ ಎಂಬ ಗಾಳಿಸುದ್ಧಿಯೂ ಹರಡಿತು. ಆದ್ದರಿಂದಲೇ ಯುದ್ಧದ ನಂತರ ರಾಷ್ಟ್ರೀಯ ಪಕ್ಷದ ಟಿಕೆಟ್
ಪಡೆದ ಅಭ್ಯಥಿಗಳು ಪ್ರಚಂಡ ವಿಜಯದೊಂದಿಗೆ ಆಯ್ಕೆಯಾದರು. ಇದಾದ ತಕ್ಷಣದಲ್ಲಿಯೇ ಅಲ್ಲಿನ ಒಆಖಒ ಪಕ್ಷದ ಗುಂಪುಗಳನ್ನು ಹತ್ತಿಕ್ಕಲಾಯಿತು. ತಮ್ಮ ಉದ್ದೇಶಗಳನ್ನು
ಈಡೇರಿಸಿಕೊಳ್ಳಲು ವಸಾಹತುಶಾಹಿ ಶಕ್ತಿಗಳು ಎಂದಿನಂತೆ ತಮ್ಮ ಕಾರ್ಯವಿಧಾನಗಳಾದ ಬಹುಜನರ ಬಂಧನ, ಜನಾಂಗೀಯ
ಪ್ರಚಾರಾಂದೋಲನವನ್ನೇ ಬಳಸಿದರು ಮತ್ತು ಅವರು ಅಸಂಘಟಿತ ಶ್ರಮಿಕವರ್ಗದ ಗುಂಪಿನಿಂದ ಒಂದು ಪಕ್ಷವನ್ನು
ಕಟ್ಟಿದರು. ಈ ಪಕ್ಷವನ್ನು ‘ಡಿಸ್‍ಇನ್‍ಹೆರಿಟೆಟ್ ಆಫ್ ಮಡಗಾಸ್ಕರ್’ ಎಂದು ಕರೆದರು. ಈ ಪಕ್ಷದ ಪ್ರಚೋದನಕಾರಿ ಚಟುವಟಿಕೆಗಳು ವಸಾಹತುಶಾಹಿ ಶಕ್ತಿಗಳಿಗೆ ಬೇಕಾದ
ಒಂದು ಕಾನೂನಾತ್ಮಕ ನೆಪ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಅಣಕವನ್ನು ಒದಗಿಸಿದವು. ಇಂತಹ ಪೂರ್ವಸಂಕಲ್ಪಿತ,
ಸಹಜ ಎಂಬಂತಿರುವ, ರಾಜಕೀಯ ಪಕ್ಷವೊಂದನ್ನು ಕಿತ್ತೊಗೆಯುವ ಕಾರ್ಯವು ಇಲ್ಲಿ ವಿಪರೀತ (ಅಗಾಧ ಪ್ರಮಾಣದ)
ರೂಪ ತಳೆದು ನಡೆಯಿತು. ಮೂರುನಾಲ್ಕು ವರ್ಷಗಳ ಕಾಲ ರಕ್ಷಣಾತ್ಮಕವಾಗಿಯೇ ಉಳಿದ ಗ್ರ್ರಾಮೀಣ ಜನವರ್ಗವು
ಡಿಢೀರನೆ ಪ್ರಾಣಾಪಾಯಕ್ಕೆ ಒಳಗಾದೆವೆಂದು ಭಾವಿಸಿ ವಸಾಹತುಶಾಹಿ ಶಕ್ತಿಗಳನ್ನು ಹಿಂಸಾತ್ಮಕವಾಗಿ ಪ್ರತಿಭಟಿಸುವ
ತೀರ್ಮಾನ ಮಾಡಿದವು. ಬಹುತೇಕ ಸಂದರ್ಭಗಳಲ್ಲಿ ದೊಣ್ಣೆ, ಕಲ್ಲುಗಳಿಂದ ಮತ್ತು ಮಚ್ಚುಗಳಿಂದ ಸನ್ನದ್ಧರಾದ
ಈ ಜನಸಮೂಹ ರಾಷ್ಟ್ರೀಯ ವಿಮೋಚನೆಯ ಉದ್ದೇಶದಿಂದ ವ್ಯಾಪಕವಾಗಿ ದಂಗೆ ಎದ್ದರು. ಇದು ಹೇಗೆ ಕೊನೆಗೊಂಡಿತು
ಎಂದು ನಮಗೆ ತಿಳಿದಿದೆ.
ಇಂತಹ ಸಶಸ್ತ್ರ ದಂಗೆಯು ಗ್ರ್ರಾಮೀಣ ಜನವರ್ಗವು ರಾಷ್ಟ್ರೀಯ ಹೋರಾಟದಲ್ಲಿ ಪಾಲ್ಗೊಳ್ಳಲು ಬಳಸಿದ
ಒಂದು ಮಾರ್ಗ ಮಾತ್ರವೇ ಆಗಿದೆ. ಇನ್ನು ಕೆಲವು ಸಂದರ್ಭಗಳಲ್ಲಿ ಪಟ್ಟಣಗಳಲ್ಲಿ ಉಂಟಾದ ದಂಗೆಯ ವಾತಾವರಣ
(ಅಶಾಂತಿ)ವನ್ನು ಗ್ರ್ರಾಮೀಣ ಭಾಗಕ್ಕೆ ಕೊಂಡೊಯ್ಯುವ ಮಾಧ್ಯಮವಾಗಿ ರೈತಾಪಿಗಳು ಕೆಲಸಮಾಡುತ್ತಾರೆ.
ಈ ಪಟ್ಟಣಗಳಲ್ಲಿ ರಾಷ್ಟ್ರೀಯ ಪಕ್ಷಗಳು ಪೋಲೀಸ್ ಬಲಪ್ರಯೋಗಕ್ಕೆ ಒಳಗಾಗಿರುತ್ತವೆ. ನಾಯಕರ ಬಂಧನ, ಕೆಲವರನ್ನು
ಬಂದೂಕುಗಳಿಂದ ಬಡಿದು ಕೆಡಹಿದ್ದು, ನಗರದ ರಸ್ತೆಗಳೆಲ್ಲಾ ಕರಿಯರ ರಕ್ತ ಕೆಂಪಾಗಿ ಹರಿದಿದ್ದು, ಬಡ
ಬಿಳಿಯ ನಿವಾಸಿಗಳು ಅರಬ್ ರಕ್ತದಲ್ಲಿ ಮಿಂದೆದ್ದ ಸುದ್ದಿಗಳು ಅತಿಯಾಗಿ ಉತ್ಪ್ರೇಕ್ಷೆಗೊಂಡು ಗ್ರಾಮೀಣ
ಭಾಗವನ್ನು ತಲುಪುತ್ತದೆ. ಇದುವರೆಗೆ ತಡೆಹಿಡಿದಿದ್ದ ದ್ವೇಷ ಒಮ್ಮೆಲೇ ಸ್ಫೋಟಿಸುತ್ತದೆ. ಸ್ಥಳೀಯ ಪೋಲೀಸ್
ಠಾಣೆಯನ್ನು ವಶಕ್ಕೆ ಪಡೆದಿದ್ದು, ಆಫೀಸರ್‍ಗಳನ್ನು ಕಡಿದು ಚೆಲ್ಲಿದ್ದು, ಪ್ರಾಥಮಿಕ ಶಾಲಾ ಶಿಕ್ಷಕರನ್ನು
ಕೊಲೆಗೈದಿದ್ದು ಹಾಗೂ ವೈದ್ಯ ಮಾತ್ರ ಅಂದು ಗೈರುಹಾಜರಾಗಿದ್ದ ಕಾರಣ ಜೀವ ಉಳಿಸಿಕೊಂಡು ಪಾರಾಗಿದ್ದು
ಇತ್ಯಾದಿ. ಘಟನೆಗಳು ನಡದೇ ಹೋಗುತ್ತವೆ. ಶಾಂತಿಸ್ಥಾಪನೆಗೆ ತಂಡವನ್ನು ಗಲಭೆ ಪೀಡಿತ ಸ್ಥಳಗಳಿಗೆ ಕಳಿಸಲಾಗುತ್ತದೆ.
ವಾಯುಪಡೆ ಮೇಲಿನಿಂದ ಬಾಂಬ್ ಉದುರಿಸುತ್ತದೆ. ಕ್ರ್ರಾಂತಿಯ ಪತಾಕೆಯನ್ನು ಹಾರಿಸಲಾಗುತ್ತದೆ, ಹಳೆಯೋಧ
ಪರಂಪರೆ ಮತ್ತೆ ಜಾಗೃತವಾಗುತ್ತದೆ, ಬೆಟ್ಟಗುಡ್ಡಗಳಲ್ಲಿ ಒಟ್ಟಾಗಿ ಸೈನ್ಯಕಟ್ಟಿದ ಗಂಡಸರನ್ನು ಹೆಂಗಸರು
ಹುರಿದುಂಬಿಸುತ್ತಾರೆ, ಹೀಗೆ ಗೆರಿಲ್ಲಾ ಯುದ್ಧ ಶುರುವಾಗುತ್ತದೆ. ರೈತಾಪಿ ಜನರು ಒಂದು ತೀವ್ರ ಅಸುರಕ್ಷಿತತೆಯ
ಭಾವವನ್ನು ವ್ಯಾಪಕವಾಗಿ ಸೃಷ್ಟಿಸುತ್ತಾರೆ. ವಸಾಹತುಶಾಹಿ ಬೆಚ್ಚಿ ಬೀಳುತ್ತದೆ. ಆಗ ಅದು ಯುದ್ಧಕ್ಕೆ
ಇಳಿಯುತ್ತದೆ ಅಥವಾ ರಾಜಿಗೆ ಮುಂದಾಗುತ್ತದೆ.
ರಾಷ್ಟ್ರೀಯ ಹೋರಾಟದೊಳಗೆ, ರೈತಾಪಿಗಳು ನಡೆಸಿದ ಈ ನಿರ್ಣಾಯಕ ಬಂಡಾಯಕ್ಕೆ ರಾಷ್ಟ್ರೀಯ ಪಕ್ಷಗಳು
ಹೇಗೆ ಪ್ರತಿಕ್ರಿಯಿಸುತ್ತವೆ? ಬಹುತೇಕ ರಾಷ್ಟ್ರೀಯ ಪಕ್ಷಗಳು ತಮ್ಮ ಪ್ರಚಾರಾಂದೋಲನದಲ್ಲಿ ಶಸ್ತ್ರ
ಪ್ರಯೋಗದ ಅಗತ್ಯವನ್ನು ಉಲ್ಲೇಖಿಸಿಲ್ಲ ಎಂಬುದನ್ನು ನಾವು ನೋಡಿದ್ದೇವೆ. ಒಂದು ಸುಸ್ಥಿರ ಕ್ರ್ರಾಂತಿಗೆ
ಅವರು ವಿರೋಧಿಗಳೇನೂ ಅಲ್ಲ, ಆದರೆ ಅವರು ಅದನ್ನು ಗ್ರ್ರಾಮೀಣ ಜನವರ್ಗದವರ sಠಿoಟಿಣಚಿಟಿeiಣಥಿ ಅಥವಾ
ಸಹಜ ನಿರಂತರತೆಗೆ ಬಿಟ್ಟುಬಿಡುತ್ತಾರೆ. ಈ ಹೊಸ ಬೆಳವಣಿಗೆಗಳ ಬಗ್ಗೆ ರಾಷ್ಟ್ರೀಯ ಪಕ್ಷಗಳ ವರ್ತನೆ
ಹೇಗಿರುತ್ತದೆಂದರೆ, ಇವೆಲ್ಲಾ ದೈವಕೃಪೆ ಎಂದು ತಿಳಿದ ಅವರು ತಮ್ಮ ಪ್ರಾರ್ಥನೆಯನ್ನು ಮುಂದುವರಿಸುತ್ತಾರೆ.
ಅವರು ಈ ದೈವಕೃಪೆಯ ಘಟನೆಗಳನ್ನು ಬಳಸಿಕೊಳ್ಳುತ್ತಾರೆ ಆದರೆ ಈ ಕ್ರ್ರಾಂತಿಯನ್ನು ಸುಸಂಘಟಿಸುವ ಯಾವ
ಪ್ರಯತ್ನವನ್ನು ಮಾಡುವುದಿಲ್ಲ. ಗ್ರ್ರಾಮೀಣ ಜನರ ಹೋರಾಟವನ್ನು ರಾಜಕೀಯ ಹೋರಾಟವಾಗಿ ಪರಿವರ್ತಿಸುವ,
ಅವರ ಪ್ರಜ್ಞೆಯನ್ನು ಉದ್ದೀಪಿಸುವ (ಜಾಗೃತಗೊಳಿಸುವ) ಅಥವಾ ಅವರ ಹೋರಾಟವನ್ನು ಉನ್ನತ ಸ್ತರಕ್ಕೊಯ್ಯುವ
ಉದ್ದೇಶಕ್ಕಾಗಿ ಅವರು ಯಾವ ಪ್ರತಿನಿಧಿಗಳನ್ನೂ ಅಲ್ಲಿಗೆ ಕಳುಹಿಸುವುದಿಲ್ಲ. ಅವರ ಹೋರಾಟದ ವ್ಯಾಪ್ತಿ
ಹಿಗ್ಗುತ್ತಿದ್ದಂತೆ, ಅದರಲ್ಲಿಯೇ ಅದು ಪರ್ಯವಸಾನಗೊಂಡು, ದೀರ್ಘಕಾಲ ಉಳಿಯಲಾರದು ಎಂದು ಅವರು ಆಶಿಸುತ್ತಾರೆ.
ಗ್ರ್ರಾಮೀಣ ಆಂದೋಳನವು, ನಗರ ಕೇಂದ್ರಿತ ಆಂದೋಳನದೊಟ್ಟಿಗೆ ಕೂಡಿ ಬೆರೆಯುವುದಿಲ್ಲ. ಈ ಎರಡೂ ಭಿನ್ನ
ಆಂದೋಳನಗಳು ತಮ್ಮದೇ ಆದ ತಾತ್ವಿಕತೆಗಳಿಗೆ ಬದ್ಧವಾಗಿ ವಿಕಾಸಗೊಳ್ಳುತ್ತವೆ.
ಗ್ರ್ರಾಮೀಣ ಜನವರ್ಗವು ಯಾವುದೇ ಹೊಸತನ್ನು ಸ್ವೀಕರಿಸಲು ಸಿದ್ಧವಿದ್ದಕಾಲಕ್ಕೆ ರಾಷ್ಟ್ರೀಯ
ಪಕ್ಷಗಳು ಅವರನ್ನು ತಮ್ಮ ಅಜೆಂಡಾ ಅಥವಾ ಕಾರ್ಯಸೂಚಿಗಳಿಗೆ ಪರಿಚಯಿಸುವ ಪ್ರಯತ್ನ ಮಾಡುವುದಿಲ್ಲ. ಈ
ಹೋರಾಟಕ್ಕೆ ಯಾವುದೇ ಗುರಿಯನ್ನು ನೀಡಲಾರದು ಇವರು, ಅದು ಅನಿರ್ದಿಷ್ಟಾವಧಿಗೆ ಮುಂದುವರಿಯಲಿ ಎಂದಷ್ಟೇ
ಆಶಿಸುತ್ತಾರೆ ಮತ್ತು ಕೇವಲ ಬಾಂಬ್‍ದಾಳಿಗಳಿಂದ ಏನನ್ನೂ ಸಾಧಿಸಿದಂತಾಗುವುದಿಲ್ಲ ಎಂದು ತಿಳಿಯುತ್ತಾರೆ.
ಹೀಗೆ ರಾಷ್ಟ್ರೀಯ ಪಕ್ಷಗಳು ಗ್ರ್ರಾಮೀಣ ಜನರನ್ನು ಒಳಗೊಳ್ಳುವ, ಅವರಲ್ಲಿ ರಾಜಕೀಯ ಜಾಗೃತಿ ಮೂಡಿಸುವ
ಮತ್ತು ಅವರ ಹೋರಾಟವನ್ನು ಉನ್ನತ ಸ್ತರಕ್ಕೊಯ್ಯುವ ಈ ಅವಕಾಶವನ್ನೂ ಕೈ ಚೆಲ್ಲುತ್ತಾರೆ. ಗ್ರ್ರಾಮೀಣರ
ಕುರಿತಾದ ತಮ್ಮ ಅಪನಂಬಿಕೆಯ ಧೋರಣೆಯನ್ನು ಈ ರಾಷ್ಟ್ರೀಯ ಪಕ್ಷಗಳು ಅತ್ಯಂತ ಜಿಗುಟುತನದಿಂದ (ಕರ್ಮಠತೆಯಿಂದ)
ಮುಂದುವರಿಸುತ್ತಾರೆ. ಪಟ್ಟಣಗಳಲ್ಲಿ ತಳವೂರಿದ ರಾಜಕೀಯ ಪಕ್ಷಗಳ ಪದಾಧಿಕಾರಿಗಳು ತಮಗೆ ಮತ್ತು ಈ ಬಂಡುಕೋರರಿಗೆ
ಯಾವುದೇ ಸಂಪರ್ಕ ಇಲ್ಲ ಎಂದು ವಸಾಹತುಶಾಹಿಗಳಿಗೆ ಸ್ಪಷ್ಟಪಡಿಸುತ್ತಾರೆ, ಇಲ್ಲವೇ ಅವರು ದೇಶವನ್ನೇ
ತೊರೆಯುತ್ತಾರೆ. ಬೆಟ್ಟಗಾಡುಗಳಲ್ಲಿ ಹೋರಾಟನಿರತ ಜನರನ್ನು ಇವರು ಸೇರಿಕೊಳ್ಳುವುದೇ ಇಲ್ಲ. ಉದಾಹರಣೆಗೆ
ಕೀನ್ಯಾದಲ್ಲಿ ಮಾಮಾ? (ಒಚಿu ಒಚಿu) ದಂಗೆಯ ಸಮಯದಲ್ಲಿ ಯಾವೊಬ್ಬ ರಾಷ್ಟ್ರೀಯವಾದಿಯೂ ತಾನು ಆಂದೋಳನದ
ಸದಸ್ಯ ಎಂದಾಗಲೀ ಅಥವಾ ಅದನ್ನು ಸಮರ್ಥಿಸುವ ಪ್ರಯತ್ನವನ್ನಾಗಲೀ ಮಾಡಲಿಲ್ಲ.
ಇಲ್ಲಿನ ಅಂದರೆ ಈ ದೇಶಗಳಲ್ಲಿ ಯಾವುದೇ ರಚನಾತ್ಮಕ ಮಾತುಕತೆಯಾಗಲೀ, ಸಮಾಜದ ವಿವಿಧ ಸ್ತರಗಳ
ನಡುವೆ ಮುಖಾಮುಖಿಯಾಗಲೀ ನಡೆಯುವುದಿಲ್ಲ. ಗ್ರ್ರಾಮೀಣ ಜನವರ್ಗವನ್ನು ಬಗ್ಗು ಬಡಿದ ನಂತರ ಮತ್ತು ವಸಾಹತುಶಾಹಿಗಳ
ಮತ್ತು ರಾಷ್ಟ್ರೀಯವಾದಿ ಪಕ್ಷಗಳ ನಡುವಿನ ತಿಕ್ಕಾಟದ ನಂತರ ಸ್ವಾತಂತ್ರ್ಯ ಸಿಕ್ಕಿದ ಮೇಲೆ ಪರಸ್ಪರರನ್ನು
ಸರಿಯಾಗಿ ಅರಿಯದೇ ಇರುವ ಈ ಸಮಸ್ಯೆ ಬಿಗಡಾಯಿಸುತ್ತದೆ. ಸರಕಾರವು ಪ್ರತಿಪಾದಿಸುವ ರಚನಾತ್ಮಕ ಸುಧಾರಣೆಗಳಿಗೆ
ಮತ್ತು ಪ್ರಗತಿಪರ ಸಾಮಾಜಿಕ ಬದಲಾವಣೆಗಳಿಗೆ ರೈತಾಪಿವರ್ಗ ಅಡ್ಡಗಾಲು ಹಾಕುತ್ತದೆ. ವಸಾಹತುಶಾಹೀ ಕಾಲದಲ್ಲಿ
ಈಗ ಸರಕಾರದ ಭಾಗವಾಗಿರುವ ನಾಯಕರು ತಮ್ಮ ಪಕ್ಷದ ಉದ್ದೇಶಗಳನ್ನು, ರಾಷ್ಟ್ರೀಯ ಪಾಲಿಸಿಗಳನ್ನು, ಅಂತರಾಷ್ಟ್ರೀಯ
ವಿದ್ಯಮಾನಗಳನ್ನು ತಮಗೆ ಸಮರ್ಪಕವಾಗಿ ತಿಳಿಸಿಲ್ಲ ಎಂಬ ಕಾರಣಕ್ಕೆ ಅವು ಹೀಗೆ ವರ್ತಿಸುತ್ತದೆ. ವಸಾಹತುಶಾಹಿ
ಆಡಳಿತದ ಕಾಲದಲ್ಲಿ ಗ್ರಾಮೀಣಜನವರ್ಗ ಮತ್ತು ಸಾಂಪ್ರದಾಯಿಕ ಮುಖಂಡರುಗಳು ರಾಷ್ಟ್ರೀಯವಾದಿ ಪಕ್ಷಗಳ
ಕುರಿತು ಅಪನಂಬಿಕೆ ಹೊಂದಿದ್ದರು. ಸ್ವಾತಂತ್ರ್ಯಾನಂತರದ ರಾಷ್ಟ್ರೀಯವಾದಿ ಆಡಳಿತಕಾಲಕ್ಕೆ ಈ ಅಪನಂಬಿಕೆಗೆ
ಸರಿಹೊಂದುವಂತೆ ದ್ವೇಷವು ಬೆಳೆಯುತ್ತದೆ. ಸ್ವಾತಂತ್ರ್ಯಾನಂತರವೂ ಉಳಿದುಕೊಂಡ ವಸಾಹತುಶಾಹಿಯ ಕೆಲವು
ಗುಪ್ತಕಾರ್ಯಸೂಚಿಗಳು ಈಗಲೂ ಕಾರ್ಯನಿರ್ವಹಿಸುತ್ತಾ ಜನವರ್ಗಗಳ ಅಸಮಧಾನಕ್ಕೆ ಕಾರಣವಾಗುತ್ತವೆ. ಇವು
ಹೊಸ ಸರಕಾರಕ್ಕೆ ಗಂಭೀರ ಸವಾಲುಗಳಾಗುತ್ತವೆ. ವಿಮೋಚನಾ ಹೋರಾಟದ ಕಾಲಕ್ಕೆ ತಾನು ಹೊಂದಿದ್ದ ಜಡತೆಗಾಗಿ
ಮತ್ತು ರೈತಾಪಿಗಳ ಕುರಿತು ತಾನು ಮುಂದುವರಿಸುತ್ತಿರುವ ತಿರಸ್ಕಾರಭಾವಕ್ಕಾಗಿ ಸರಕಾರವು ಈಗ ಬೆಲೆ ತೆರುತ್ತದೆ.
ದೇಶದ ಮುಖವಾಗಿರುವ ಅದರ ನೇತೃತ್ವವು ವಿಚಾರಶೀಲವೂ ಹಾಗೂ ಪ್ರಗತಿಪರವೂ ಆಗಿದ್ದರೂ ಕೂಡ ಅದರ ಉಳಿದ ಆಂಗೋಪಾಂಗಗಳು
ದುರ್ಬಲವಾಗಿಯೂ ಹಾಗೂ ಬಂಡುಕೋರವಾಗಿಯೂ ಇರುತ್ತದೆ.
ಆದ್ದರಿಂದಲೇ ಈ ಬಂಡುಕೋರ ಜನರನ್ನು ಹತ್ತಿಕ್ಕಿ ಅವರನ್ನು ಬಿಗಿ ಹಿಡಿತದಲ್ಲಿಡಲು ಆಡಳಿತದ ಕೇಂದ್ರಿಕರಣ
ಮಾಡಬೇಕೆಂಬ ತುಡಿತ ಹೆಚ್ಚುತ್ತದೆ. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಸರ್ವಾಧಿಕಾರ ಪ್ರಭುತ್ವವೇ
ಬೇಕು ಎಂಬ ಅಭಿಪ್ರಾಯಕ್ಕೆ ಇದೇ ಕಾರಣವಾಗಿದೆ. ನಾಯಕರಿಗೆ ಗಾಮೀಣ ಜನವರ್ಗಗಳ ಮೇಲೆ ವಿಶ್ವಾಸವಿಲ್ಲ.
ಈ ವಿಶ್ವಾಸದ ಕೊರತೆ ಗಂಭೀರ ಸ್ವರೂಪವನ್ನು ಪಡೆಯುತ್ತದೆ. ರಾಷ್ಟ್ರೀಯ ಸ್ವಾತಂತ್ರ್ಯದ ನಂತರವೂ ಕೆಲವು
ಸರಕಾರಗಳು ಗ್ರಾಮೀಣ ಭಾಗವನ್ನು ಅತೃಪ್ತ ಜನರಿರುವ ಪ್ರದೇಶವೆಂದೇ ತಿಳಿದು ಸರಕಾರದ ಮುಖ್ಯಸ್ಥರು ಕೇವಲ
ಸೇನಾ ಕಾರ್ಯಾಚರಣೆಯ ಸಂದರ್ಭದಲ್ಲಷ್ಟೇ ಅಲ್ಲಿಗೆ ತೆರಳುತ್ತಾರೆ. ಗ್ರಾಮೀಣಭಾಗವು ಒಂದು ನಿಗೂಢ ಮತ್ತು
ಅಜ್ಞಾತ ನೆಲವೆಂದೇ ಪರಿಗಣಿತವಾಗುತ್ತದೆ. ವೈರುಧ್ಯವೆಂದರೆ, ರಾಷ್ಟ್ರೀಯವಾದಿ ಸರಕಾರವು ಗ್ರಾಮೀಣ ಜನವರ್ಗದ
ಕುರಿತು ಹೊಂದಿರುವ ಧೋರಣೆಯು ಕೆಲವು ಮಟ್ಟಿಗೆ ವಸಾಹತುಶಾಹಿ ಆಡಳಿತ ಕಾಲದ ಧೋರಣೆಗಳನ್ನೆ ನೆನಪಿಸುತ್ತದೆ.
‘ಜನವರ್ಗವು (ಇದಕ್ಕೆ) ಹೇಗೆ ಪ್ರತಿಕ್ರಿಯಿಸುತ್ತದೆಯೋ ನಮಗೆ ತಿಳಿಯದು, ಈ ದೇಶವು ಕತ್ತಲಯುಗದಿಂದ
ಹೊರಬರುವಂತೆ ಮಾಡಲು ನಾವು ಬಡಿಗೆಯನ್ನೇ ಹಿಡಿಯಬೇಕು ಮತ್ತು ಹಿಂಸೆಗಿಳಿಯಬೇಕು’ ಎಂಬಿತ್ಯಾದಿ ಮಾತುಗಳನ್ನು ಯುವ ಮುಖಂಡರು ಆಡಲು ಹಿಂಜರಿಯುವುದಿಲ.್ಲ ವಸಾಹತುಶಾಹಿ ಆಡಳಿತ
ಕಾಲದಲ್ಲಿ ರಾಜಕೀಯ ಪಕ್ಷಗಳು ಗ್ರಾಮೀಣ ಜನವರ್ಗದ ಕುರಿತಾಗಿ ಹೊಂದಿರುವ ನಿಲುವುಗಳು ರಾಷ್ಟ್ರೀಯ ಏಕತೆ
ಮತ್ತು ರಾಷ್ಟ್ರವನ್ನು ಚಲನಶೀಲಗೊಳಿಸುವ ವಿಷಯಕ್ಕೆ ಸಂಬಂಧಿಸಿದಂತೆ ಕೇವಲ ಪೂರ್ವಗ್ರಹ ಪೀಡಿತವಾಗಿದ್ದವು
ಎಂಬುದನ್ನು ನಾವು ಗುರುತಿಸಿದ್ದೇವೆ.
ವಸಾಹತುಶಾಹಿಯು ಕೆಲವೊಮ್ಮೆ ರಾಷ್ಟ್ರೀಯವಾದಿ ಹೋರಾಟವನ್ನು ಮತ್ತದರ ಭಾವನೆಗಳನ್ನು ಹತ್ತಿಕ್ಕುವ
ಮತ್ತು ಒಡೆಯುವ ಕೆಲಸವನ್ನು ಮಾಡುತ್ತದೆ. ಪಟ್ಟಣಗಳಲ್ಲಿ “ಕ್ರ್ರಾಂತಿಕಾರಿಗಳ ವಿರುದ್ಧವಾಗಿ ಶೇಖ್
ಮತ್ತು ಮುಖಂಡರುಗಳನ್ನು ಸಜ್ಜುಗೊಳಿಸುವ ಬದಲು ನೇಟಿವ್ ಬ್ಯುರೊವು ಬುಡಕಟ್ಟು ಮತ್ತು ಧಾರ್ಮಿಕ ಸಹೋದರತ್ವವನ್ನು
ಪಕ್ಷವಾಗಿ ಸಂಘಟಿಸುತ್ತದೆ. “ದೇಶದ ಇಚ್ಛೆಯನ್ನು ಪ್ರತಿನಿಧಿಸುವಂತೆ” ರೂಪುತಳೆದ ನಗರಕೇಂದ್ರಿತ ಪಕ್ಷವೊಂದು ವಸಾಹತುಶಾಹಿಗೆ ಬೆದರಿಕೆಯಾಗಿ ಪರಿಣಮಿಸುತ್ತದೆ. ಇದಕ್ಕೆ
ಮುಖಾಮುಖಿಯಾಗಿ ಅಥವಾ ಪ್ರತಿಯಾಗಿ ಬುಡಕಟ್ಟು ಆಧಾರಿತ ಮತ್ತು ಪ್ರದೇಶವಾರು ಪಕ್ಷಗಳು ಹುಟ್ಟುತ್ತವೆ.
ಇಡೀ ಬುಡಕಟ್ಟು ಜನಾಂಗವೇ ರಾಜಕೀಯ ಪಕ್ಷದಂತೆ ಮಾರ್ಪಾಟು ಹೊಂದಿ ವಸಾಹತುಶಾಹಿಗಳ ಜೊತೆ ನಿಕಟ ಸಂಪರ್ಕ
ಸಾಧಿಸುತ್ತದೆ. ಈಗ ದುಂಡುಮೇಜಿನ ಸಭೆಗಳು ಆರಂಭಗೊಳ್ಳುತ್ತವೆ. ರಾಷ್ಟ್ರೀಯ ಏಕತೆಯ ಉದ್ದೇಶವುಳ್ಳ ಪಕ್ಷವು
ಹಲವಾರು ರಾಜಕೀಯ ಗುಂಪುಗಳ ಕಾರಣದಿಂದ ಛಿದ್ರಗೊಂಡು ಒಡೆದುಹೋಗುತ್ತದೆ. ಬುಡಕಟ್ಟು ಆಧಾರಿತ ಪಕ್ಷಗಳು
ಕೇಂದ್ರೀಕರಣವನ್ನು ವಿರೋಧಿಸುತ್ತ ಏಕಪಕ್ಷದ ಸರ್ವಾಧಿಕಾರತ್ವವನ್ನು ತಿರಸ್ಕರಿಸುತ್ತವೆ. ನಂತರ ರಾಷ್ಟ್ರೀಯ
ಹೋರಾಟದ ಸಂದರ್ಭದಲ್ಲಿಯೂ ಇದೇ ತಂತ್ರವನ್ನು ಬಳಸಲಾಗುತ್ತದೆ. ಸ್ವಾತಂತ್ರ್ಯಹೋರಾಟವನ್ನು ಮುನ್ನಡೆಸಿದ
ಎರಡು ಅಥವಾ ಮೂರು ರಾಷ್ಟ್ರೀಯವಾದಿ ಪಕ್ಷಗಳಲ್ಲಿ ಒಂದನ್ನು ಆಕ್ರಮಣಕಾರರು ಆಯ್ದುಕೊಳ್ಳುತ್ತಾರೆ. ಈ
ಆಯ್ಕೆವಿಧಾನವೂ ತಕ್ಕುದಾಗಿಯೇ ಇದೆ, ಒಮ್ಮೆ ಒಂದು ಪಕ್ಷವು ಸರ್ವಾನುಮತದಿಂದ ಪ್ರಮುಖ ಒಪ್ಪಂದಕಾರನಾಗಿ
ಹೊರಹೊಮ್ಮಿದ ಮೇಲೆ, ಆಕ್ರಮಣಕಾರನು ವಿಳಂಬನೀತಿಯನ್ನು ಅನುಸರಿಸುತ್ತಾ ಒಪ್ಪಂದದ ಮಾತುಕತೆಯನ್ನು ಎಷ್ಟು
ಸಾಧ್ಯವೋ ಅಷ್ಟು ಮುಂದೂಡುತ್ತಾನೆ. ಈ ವಿಳಂಬನೀತಿಯು ಪಕ್ಷಗಳ ಬಿಗಿಪಟ್ಟಿನ ಬೇಡಿಕೆಗಳನ್ನು ಸಡಿಲಿಸಲು
ಮತ್ತು ಕೆಲವಷ್ಟು ತೀವ್ರಗಾಮಿ ಗುಂಪುಗಳನ್ನು ತೊಡೆದುಹಾಕಲು ಅವರ ನಾಯಕರ ಮನವೊಲಿಸಲು ಅವರಿಗೆ ಸಹಾಯಕವಾಗಿವೆ.
ಯಾವಾಗ ಒಂದು ಪಕ್ಷವು ದೃಢವಾಗಿ ಹೊರಹೊಮ್ಮುದಿಲ್ಲವೋ ಆಗ, ಆಕ್ರಮಣಕಾರನು ತನಗೆ ‘ತಕ್ಕುದೆನಿಸುವ’ ಮತ್ತು ತಾರ್ಕಿಕವಾದ ಒಂದು ಪಕ್ಷವನ್ನು ಹೆಚ್ಚು ಓಲೈಸುತ್ತಾನೆ. ಮಾತುಕತೆಗಳಿಂದ ದೂರ ಇರಿಸಲ್ಪಟ್ಟ
ರಾಷ್ಟ್ರೀಯವಾದಿ ಪಕ್ಷಗಳು, ಆಕ್ರಮಣಕಾರ ಮತ್ತು ಅವನು ಆಯ್ದುಕೊಂಡ ಪಕ್ಷದ ನಡುವಿನ ಒಪ್ಪಂದಗಳನ್ನು
ತಿರಸ್ಕರಿಸುತ್ತವೆ. ಆಕ್ರಮಣಕಾರನಿಂದ ಅಧಿಕಾರವನ್ನು ಹಸ್ತಾಂತರ ಮಾಡಿಕೊಂಡು ಪಕ್ಷವು ತನ್ನ ಎದುರಾಳಿ
ಪಕ್ಷವು ತಂದೊಡ್ಡುವ ಅಪಾಯಗಳ ಕುರಿತು ಸದಾ ಜಾಗೃತವಾಗಿರುತ್ತದೆ. ಎದುರಾಳಿ ಪಕ್ಷದ ಅಸ್ಪಷ್ಟ, ಭಾವೋನ್ಮಾದವನ್ನು
ಉಂಟುಮಾಡುವ ನಿಲುವುಗಳನ್ನು ಅರಿತ ಆಡಳಿತಾರೂಢ ಪಕ್ಷವು, ತನ್ನ ಆ ಎದುರಾಳಿ ಪಕ್ಷವನ್ನು ಛಿದ್ರಗೊಳಿಸುವ
ಮತ್ತು ಅದನ್ನು ಬಹಿಷ್ಕøತ ಪಕ್ಷವನ್ನಾಗಿಸಲು ಪ್ರಯತ್ನಿಸುತ್ತದೆ. ಹೀಗೆ ಆಡಳಿತಾರೂಢ ಪಕ್ಷದಿಂದ ಪೀಡನೆಗೊಳಗಾದ
ಪಕ್ಷಕ್ಕೆ ತನ್ನ ನೆಲೆಯನ್ನು ಪಟ್ಟಣದ ಹೊರವಲಯದಲ್ಲಿ ಮತ್ತು ಹಳ್ಳಿಗಳಲ್ಲಿ ಕಂಡುಕೊಳ್ಳದೆ ಅನ್ಯಮಾರ್ಗವಿರುವುದಿಲ್ಲ.
ಈಗ ಅವರು ಗ್ರ್ರಾಮೀಣ ಜನವರ್ಗವನ್ನು, ‘ವೇತನಕ್ಕಾಗಿ ದುಡಿಯುವ ಸೈನಿಕರ ಮತ್ತು ರಾಜಧಾನಿಗಳಲ್ಲಿ ಬೀಡುಬಿಟ್ಟ
ಭೃಷ್ಟನಾಯಕರ’ ವಿರುದ್ಧ ಸಿಡಿದು ನಿಲ್ಲುವಂತೆ ಮಾಡುತ್ತಾರೆ. ಯಾವುದಾದರೂ ಒಂದು ಕಾರಣಕ್ಕಾಗಿ ಕಾಯುತ್ತಿರುವ
ಇವರಿಗೆ, ಧಾರ್ಮಿಕ ವಾಗ್ವಾದದಿಂದ ತೊಡಗಿ ಹೊಸ ರಾಷ್ಟ್ರೀಯವಾದಿ ಸರಕಾರ ಜಾರಿಗೊಳಿಸಿದ ಹೊಸಯೋಜನೆ,
ನಾವೀನ್ಯತೆಗಳು ಪರಂಪರೆಯನ್ನು ಮುರಿಯುವ ಯೋಜನೆಗಳಂತೆ ಕಂಡು ಹೋರಾಟಕ್ಕೆ ಕಾರಣಗಳನ್ನು ಒದಗಿಸುತ್ತದೆ.
ಗ್ರ್ರಾಮೀಣ ಜನವರ್ಗದಲ್ಲಿರುವ ಪ್ರತಿಗಾಮಿ ಚಿಂತನೆಗಳನ್ನೆ ಇದು ಬಂಡವಾಳಮಾಡಿಕೊಳ್ಳುತ್ತದೆ. ಕ್ರ್ರಾಂತಿಕಾರಿ
ಎಂದು ಕರೆಯಲ್ಪಡುವ ಇದರ ಸಿದ್ಧಾಂತಗಳು ಯಥಾರ್ಥದಲ್ಲಿ ರೈತಾಪಿಗಳ ಪ್ರತಿಗಾಮಿತನ, ಉದ್ರಿಕ್ತತೆ ಮತ್ತು
ಭಾವಾವೇಶದ ಸ್ವಭಾವಗಳಿಂದ ಪ್ರಭಾವಿತವಾಗಿದೆ. ರೈತಾಪಿ ವರ್ಗದಲ್ಲಿ ಅತೃಪ್ತಿ ಇದೆಯೆಂದೂ, ಪರ್ವತ ಪ್ರದೇಶದ
ಜನರು ಒಂದಾಗಿ ಬಂಡೆದ್ದಿದ್ದಾರೆಂಬ ಗಾಳಿಸುದ್ದಿಗಳನ್ನು ಅವರು ಹರಡುತ್ತಾರೆ. ಅಲ್ಲೆಲ್ಲೋ ಒಂದು ಕಡೆ
ರೈತರ ಮೇಲೆ ಗುಂಡು ಹಾರಿಸಿದ್ದಾರೆಂದೂ, ಸೈನ್ಯ ನಿಯೋಜನೆ ಆಗಿದೆಯೆಂದೂ ಮತ್ತು ಸರಕಾರ ಪತನದ ಅಂಚಿನಲ್ಲಿದೆ
ಎಂದು ಮುಂತಾದ ಸುದ್ದಿಗಳನ್ನು ಅವರು ಹರಡುತ್ತಾರೆ. ಯಾವುದೇ ಸ್ಪಷ್ಟ ಕಾರ್ಯತಂತ್ರಗಳಿಲ್ಲದ ಕೇವಲ ಅಧಿಕಾರ
ಪಡೆಯಬೇಕೆಂಬ ಉದ್ದೇಶವುಳ್ಳ ಎದುರಾಳಿ ಪಕ್ಷಗಳು ಭಾವಾವೇಶಭರಿತರಾದ ಗ್ರ್ರಾಮೀಣ ರೈತಾಪಿವರ್ಗದವರ ಕೈಗೆ
ತಮ್ಮನ್ನು ತಾವು ಒಪ್ಪಿಸಿಕೊಳ್ಳುತ್ತಾರೆ.
ಇದಕ್ಕೆ ವಿರುದ್ಧವಾಗಿ ಹಾಗೂ ಭಿನ್ನವಾಗಿ ಕೆಲವು ಸಂದರ್ಭಗಳಲ್ಲಿ ಎದುರಾಳಿ ಪಕ್ಷವು ಗ್ರ್ರಾಮೀಣ
ಜನವರ್ಗದಲ್ಲಿ ತನ್ನ ಬೆಂಬಲ ಪಡೆಯದೆ ದೇಶದ ಕಾರ್ಮಿಕ ಸಂಘಟನೆಯ ಮತ್ತು ಪ್ರಗತಿಪರ ಯುವ ಗುಂಪಿನ ಬೆಂಬಲ
ಪಡೆಯುತ್ತದೆ. ಈ ಸಂದರ್ಭದಲ್ಲಿ ಸರಕಾರವು ಈ ಹೋರಾಟಗಾರರ ನಡೆಯನ್ನು ಹುಂಬತನದ್ದು ಹಾಗೂ ಪರಂಪರೆ ವಿರೋಧಿ
ಎಂದು ಜರೆದು ಇವರ ಬೇಡಿಕೆಗಳನ್ನು ವಿರೋಧಿಸಬೇಕೆಂದು ಗ್ರ್ರಾಮೀಣ ಜನವರ್ಗದವರನ್ನು ಕರೆಯುತ್ತಾರೆ.
ರಾಜಕೀಯ ಪಕ್ಷಗಳ ಕುರಿತಾಗಿ ನಾವು ಗಮನಿಸಿದ ಅಂಶಗಳೇ ಈಗ ಕಾರ್ಮಿಕ ಸಂಘಟನೆಗಳಿಗೂ ಸಲ್ಲುತ್ತದೆ. ವಸಾಹತುಶಾಹಿ
ಪ್ರದೇಶಗಳಲ್ಲಿ ಮೊದಲಾಗಿ ಅಸ್ತಿತ್ವಕ್ಕೆ ಬಂದ ಕಾರ್ಮಿಕ ಸಂಘಟನೆಗಳು ಮಹಾನಗರಗಳಲ್ಲಿನ ಕಾರ್ಮಿಕ ಸಂಘಟನೆಗಳ
ಸ್ಥಳೀಯ ಶಾಖೆಗಳೇ ಆಗಿರುತ್ತವೆ. ಅಲ್ಲಿಯ ಕಾರ್ಮಿಕ ಸಂಘಟನೆಗಳ ಘೋಷಣೆಗಳೇ ಇಲ್ಲಿಯೂ ಮೊಳಗುತ್ತವೆ.
ಒಮ್ಮೆ ರಾಷ್ಟ್ರೀಯ ವಿಮೋಚನಾ ಹೋರಾಟವು ನಿರ್ಣಾಯಕ ಹಂತ ತಲುಪುತ್ತಿದ್ದಂತೆ, ಸ್ಥಳೀಯ ಸಂಘದ ನಾಯಕರ
ಒಂದು ಗುಂಪು ಒಂದು ರಾಷ್ಟ್ರೀಯ ಕಾರ್ಮಿಕ ಚಳುವಳಿಯನ್ನು ಹುಟ್ಟುಹಾಕುವ ತೀರ್ಮಾನ ಮಾಡುತ್ತಾರೆ. ಸ್ಥಳೀಯರೆಲ್ಲ
ಒಂದಾಗಿ ಮಹಾನಗರದಿಂದ ಆಮದುಮಾಡಿಕೊಂಡ ತಮ್ಮ ಹಿಂದಿನ ಸಂಘಟನೆಯನ್ನು ತೊರೆಯುತ್ತಾರೆ. ನಗರ ನಿವಾಸಿಗಳಿಗೆ
ವಸಾಹತುಶಾಹಿಯ ಮೇಲೆ ಒತ್ತಡ ಹೇರಲು ಈ ಸಂಘದ ಸ್ಥಾಪನೆಯು ಒಂದು ಮಾರ್ಗವಾಗಿದೆ. ವಸಾಹತು ಪ್ರದೇಶಗಳಲ್ಲಿರುವ
ಶ್ರಮಿಕವರ್ಗವು ಈಗ ತಾನೆ ಉಗಮಗೊಳ್ಳುತ್ತಿರುವ ಹಂತದಲ್ಲಿದ್ದು, ಅದು ಸಮಾಜದ ಅಪೇಕ್ಷಿತ ವರ್ಗ ಎಂಬಂತೆ
ಬಿಂಬಿತವಾಗುತ್ತದೆ ಎಂಬುದನ್ನು ನಾವು ಈಗಾಗಲೇ ಗಮನಿಸಿದ್ದೇವೆ. ರಾಷ್ಟ್ರೀಯ ವಿಮೋಚನಾ ಹೋರಾಟದೊಳಗಿಂದ
ಹುಟ್ಟಿದ ರಾಷ್ಟ್ರೀಯ ಕಾರ್ಮಿಕ ಸಂಘಟನೆಗಳು, ನಗರಕೇಂದ್ರಿತ ಸಂಘಟನೆಗಳಾಗಿದ್ದು ಅವು ರಾಜಕೀಯವೂ, ರಾಷ್ಟ್ರೀಯವಾದಿಯೂ
ಆದ ಕಾರ್ಯಸೂಚಿಯನ್ನು ಹೊಂದಿರುತ್ತವೆ. ಆದರೆ ಸ್ವಾತಂತ್ರ್ಯ ಹೋರಾಟದ ನಿರ್ಣಾಯಕ ಕಾಲದಲ್ಲಿ ಹುಟ್ಟಿಕೊಂಡ
ಈ ರಾಷ್ಟ್ರೀಯ ಸಂಘಟನೆಯು ಕ್ರಿಯಾಶೀಲವೂ ಮತ್ತು ರಾಜಕೀಯ ಪ್ರಜ್ಞೆಯೂ ಉಳ್ಳ ರಾಷ್ಟ್ರೀಯವಾದಿ ಗುಂಪುಗಳು
ಪಡೆದ ಕಾನೂನಾತ್ಮಕ ಮಾನ್ಯತೆ ಉಳ್ಳ ಒಂದು ರೂಪವಾಗಿದೆ.
ರಾಜಕೀಯ ಪಕ್ಷಗಳಿಂದ ತಿರಸ್ಕøತರಾದ ಗ್ರ್ರಾಮೀಣ ಜನವರ್ಗವು ಮೂಲೆಗುಂಪಾಗಿಯೇ ಉಳಿಯುತ್ತದೆ.
ಅವರಲ್ಲಿ ಒಂದು ಕೃಷಿ ಕೆಲಸಗಾರರ ಸಂಘವೊಂದಿರುತ್ತದೆ. ಆದರೆ ಈ ಸಂಘವು “ವಸಾಹತುಶಾಹಿಯ ವಿರುದ್ಧದ ಒಂದು
ಸಂಘಟಿತ ಯತ್ನ” ಎಂಬ ಒಂದು ಔಪಚಾರಿಕ ಅಗತ್ಯವನ್ನು ಈಡೇರಿಸುವುದಷ್ಟಕ್ಕೆ ಸೀಮಿತವಾಗಿರುತ್ತದೆ.
ಮಹಾನಗರದ ಸಂದರ್ಭದಲ್ಲಿ ಕಾರ್ಯನಿರ್ವಹಿಸಿದ ಸಂಘಟನೆಯ ನಾಯಕರು, ಗ್ರ್ರಾಮೀಣ ಜನರ ಸಂಘಟನೆಯ ವಿಷಯಕ್ಕೆ
ಬಂದಾಗ ವಿಫಲರಾಗುತ್ತಾರೆ ಮತ್ತು ದಿಕ್ಕು ತೋಚದವರಾಗುತ್ತಾರೆ. ರೈತಾಪಿವರ್ಗದೊಂದಿಗೆ ಸಂಪರ್ಕ ಕಳೆದುಕೊಂಡ
ಈ ನಾಯಕರು ಮುಖ್ಯವಾಗಿ ಕಬ್ಬಿಣ ಕೆಲಸಗಾರರು, ಡಾಕ್ಟರ್‍ಗಳು, ನಾಗರಿಕ ಸೇವಕರೇ ಮೊದಲಾದ ಸೇವಾರಂಗದವರನ್ನಷ್ಟೇ
ಗಮನಿಸುತ್ತಾರೆ.
ವಸಾಹತುಶಾಹಿ ಸಂದರ್ಭದಲ್ಲಿ ರಾಷ್ಟ್ರೀಯವಾದಿ ಕಾರ್ಮಿಕ ಸಂಘಟನೆಗಳು ಅದ್ಭುತ ಪ್ರತಿರೋಧದ ಶಕ್ತಿ
ಎಂಬಂತೆ ಬಿಂಬಿತವಾಗಿರುತ್ತದೆ. ಪಟ್ಟಣಗಳಲ್ಲಿ ಈ ಸಂಘಟನೆಗಳು ವಸಾಹತುಶಾಹಿ ಅರ್ಥವ್ಯವಸ್ಥೆಯನ್ನು ಯಾವ
ಹೊತ್ತಿಗಾದರೂ ಬುಡಮೇಲುಗೊಳಿಸುವ, ಛಿದ್ರಗೊಳಿಸುವ ಸಾಮಥ್ರ್ಯವನ್ನು ಹೊಂದಿವೆ. ಯುರೋಪಿಯನ್ ನೆಲೆಗಳು
ಪಟ್ಟಣಗಳಿಗೆ ಸೀಮಿತವಾಗಿರುವುದರಿಂದ ಇದರ ಮಾನಸಿಕ ಮತ್ತು ಮನೋವ್ಶೆಜ್ಞಾನಿಕ ದೂರಗಾಮಿ ಪರಿಣಾಮಗಳನ್ನು
ಪರಿಗಣಿಸಬಹುದಾಗಿದೆ. ಅವುಗಳೆಂದರೆ, ಗ್ಯಾಸ್ ರೀತಿಯ ಇಂಧನ, ವಿದ್ಯುತ್ ಅಭಾವ, ಅಸಮರ್ಪಕ ಕಸವಿಲೇವಾರಿ
ಮತ್ತು ಉತ್ಪನ್ನಗಳು ಬಂದರಿನ ಕಟ್ಟೆಯಲ್ಲಿ ಕೊಳೆಯುತ್ತ ಬಿದ್ದಿರುವುದು. ಇವುಗಳೇ ಮನೋವ್ಶೆಜ್ಞಾನಿಕ
ಪರಿಣಾಮಗಳನ್ನು ಉಂಟುಮಾಡುತ್ತವೆ. ವಸಾಹತು ಸಂದರ್ಭದಲ್ಲಿ, ಮಹಾನಗರಗಳ ನೆರಳಿನಡಿ ಇರುವ ಪಟ್ಟಣಗಳು,
ಕಾರ್ಮಿಕ ಗಲಭೆಗಳಿಂದ ತೀವ್ರವಾಗಿ ಸಂತ್ರಸ್ತವಾಗುತ್ತವೆ. ವಸಾಹತುಶಾಹಿಯ ಕೇಂದ್ರನೆಲೆಯಾದ ರಾಜಧಾನಿಗೆ
ಈ ಆಘಾತವನ್ನು ಎದುರಿಸುವುದು ಕಷ್ಟವಾಗುತ್ತದೆ. ಆದರೆ ಗ್ರ್ರಾಮೀಣ ಜನವರ್ಗವು ಈ ಎಲ್ಲಾ ಗೊಂದಲ, ಗಲಭೆ
ಹಾಗೂ ಮುಖಾಮುಖಿಗಳಿಂದ ಅಬಾಧಿತರಾಗಿರುತ್ತಾರೆ. ಹಾಗಾಗಿ ರಾಷ್ಟ್ರೀಯ ದೃಷ್ಟಿಕೋನದಿಂದ ನೋಡಿದಾಗ ಕಾರ್ಮಿಕ
ಸಂಘಟನೆಗಳ ಮತ್ತು ದೇಶದ ಉಳಿದ ವ್ಯವಸ್ಥೆಗಳ ನಡುವೆ ಸ್ಪಷ್ಟವಾದ ವ್ಯತ್ಯಾಸ ಗೋಚರಿಸುತ್ತದೆ. ಸ್ವಾತಂತ್ರ್ಯದ
ನಂತರ ಸಂಘಟನೆಗಳಲ್ಲಿ ಸೇರ್ಪಡೆಗೊಂಡ ಕಾರ್ಮಿಕರು ತಮಗೆ ಮಾಡಲು ಏನೂ ಇಲ್ಲದ್ದರಿಂದ ತಾವು ಸುಮ್ಮನುಳಿಯುವಂತಾದೆವು
ಎಂದು ಭಾವಿಸುತ್ತಾರೆ. ತಾವು ರೂಪಿಸಿಕೊಂಡ ಸೀಮಿತವಾದ ಉದ್ದೇಶಗಳು ಸಾಧಿತವಾದ ಮೇಲೆ ರಾಷ್ಟ್ರ ನಿರ್ಮಾಣ
ಎಂಬ ದೊಡ್ಡ ಸವಾಲಿನ ಸಂದರ್ಭದಲ್ಲಿಯೂ ಏನೂ ಮಾಡಲು ಇಲ್ಲದಂತಾಗಿ ಅತಂತ್ರರಾಗುತ್ತಾರೆ. ಸರಕಾರದೊಂದಿಗೆ
ಆಪ್ತ ಸಂಬಂಧ ಹೊಂದಿರುವ ರಾಷ್ಟ್ರೀಯ ಬೂಜ್ರ್ವಾ ವರ್ಗದವರನ್ನು ಇವರು ಎದುರಿಸಬೇಕಾಗುತ್ತದೆ. ಆಗ ತಾವು
ಕೇವಲ ಕಾರ್ಮಿಕ ವಿವಾದಗಳಿಗಷ್ಟೇ ಸೀಮಿತವಾಗಿರಲಾಗದು ಎಂಬ ಅರಿವು ಈ ಸಂಘಟನೆಗಳ ನಾಯಕರಿಗೆ ಮೂಡುತ್ತದೆ.
ಆರಂಭದಿಂದಲೂ ಗ್ರ್ರಾಮೀಣ ಜನವರ್ಗಗಳಿಂದ ದೂರಾದ ಮತ್ತು ಪಟ್ಟಣದ ವಲಯಗಳಿಗಿಂತ ಹೊರತಾಗಿ ತಮ್ಮ ಪ್ರಭಾವವನ್ನು
ವಿಸ್ತರಿಸಲಾಗದ ಈ ಸಂಘಟನೆಗಳು ಕ್ರಮೇಣ ಬಿಗುವಾದ ರಾಜಕೀಯ ನಿಲುವುಗಳನ್ನು ತಾಳುತ್ತಾರೆ. ಸಂಘಟನೆಯ
ನಾಯಕರುಗಳು ರಾಜಕೀಯ ಅಭ್ಯರ್ಥಿಗಳೇ ಆಗುತ್ತಾರೆ. ಬೂಜ್ರ್ವಾಗಳನ್ನು ಮೂಲೆಗುಂಪುಮಾಡಲು ಸಾಧ್ಯವಿರುವ
ಸರ್ವಪ್ರಯತ್ನಗಳನ್ನು ಈ ನಾಯಕರು ಮಾಡುತ್ತಾರೆ. ದೇಶೀ ನೆಲದಲ್ಲಿರುವ ವಿದೇಶೀ ನೆಲೆಗಳ ವಿರುದ್ಧ ಪ್ರತಿಭಟನೆಗಳು
ನಡೆಯುತ್ತವೆ, ರಹಸ್ಯ ವಾಣಿಜ್ಯ ಒಪ್ಪಂದಗಳನ್ನು ಬಯಲಿಗೆಳೆಯುತ್ತಾರೆ ಮತ್ತು ರಾಷ್ಟ್ರೀಯವಾದಿ ಸರಕಾರದ
ವಿದೇಶೀ ನೀತಿಯ ಕುರಿತು ಟೀಕೆಮಾಡಲಾಗುತ್ತದೆ. ಈಗ ನಿಜವಾಗಿ ‘ಸ್ವತಂತ್ರ’ರಾದ ಕೆಲಸಗಾರರು ಮಾಡಲೂ ಏನೂ ಇಲ್ಲದೆ ಅತಂತ್ರರಾಗುತ್ತಾರೆ. ಸ್ವಾತಂತ್ರೋತ್ತರದ ಈ ಸಂದರ್ಭದಲ್ಲಿ
ತಮ್ಮ ಸಾಮಾಜಿಕ ಬೇಡಿಕೆಗಳನ್ನು ವ್ಯಕ್ತಪಡಿಸಲು ಹೋರಾಟಕ್ಕಿಳಿದು ಗಲಭೆ ಎಬ್ಬಿಸುವುದೇ ಮಾರ್ಗ ಎಂದು
ಈ ಸಂಘಟನೆಗಳು ಭಾವಿಸುತ್ತವೆ. ಕೆಲಸಗಾರರು ಹೆಚ್ಚಾಗಿ ವ್ಯವಸ್ಥೆಯಿಂದ ಓಲೈಕೆಗೆ ಒಳಗಾದವರಾಗಿರುತ್ತಾರೆ.
ಆದ್ದರಿಂದಲೇ ಅವರು ಸಾಕಷ್ಟು ಅನುಕೂಲಸ್ಥ ವರ್ಗವಾಗಿರುತ್ತಾರೆ. ಈ ಕಾರ್ಮಿಕರ ಮತ್ತು ಡಾಕ್ ಕೆಲಸಗಾರರ
ಜೀವನಮಟ್ಟವನ್ನು ಸುಧಾರಿಸಬೇಕೆಂಬ ಉದ್ದೇಶದಿಂದ ಕೈಗೊಂಡ ಯಾವುದೇ ಹೋರಾಟ ಜನಮನ್ನಣೆ ಪಡೆಯುವ ಬದಲು
ನಿಜವಾಗಿ ಅನೇಕ ಸೌಲಭ್ಯಗಳಿಂದ ವಂಚಿತರಾದ ಗ್ರ್ರಾಮೀಣ ಜನಸಮುದಾಯದ ಆಕ್ರೋಶವನ್ನು ಬಡಿದೆಬ್ಬಿಸುತ್ತದೆ.
ಸಂಘಟನಾ ಚಟುವಟಿಕೆಗೆ ನಿಷೇಧವಿರುವುದರಿಂದ ಈ ಸಂಘಟನೆಗಳು ಯಾವ ಪ್ರಗತಿಯನ್ನೂ ಹೊಂದುವುದಿಲ್ಲ.
ಈ ಸಂಕೀರ್ಣ ಸಮಸ್ಯೆಯನ್ನು ಬಗೆಹರಿಸಲು, ಇಡಿ ದೇಶಕ್ಕೆ ಅನ್ವಯವಾಗುವಂಥ ಒಂದು ಸಾಮಾಜಿಕ ಕಾರ್ಯಕ್ರಮದ
ಅಗತ್ಯತೆ ಕಾಣಬರುತ್ತದೆ. ಗ್ರ್ರಾಮೀಣ ಜನಸಮುದಾಯವನ್ನು ಜಾಗೃತಿಗೊಳಿಸಿ ಸಂಘಟಿಸಬೇಕೆಂದು ಈ ಸಂಘಟನೆಗಳಿಗೆ
ಹೊಳೆಯುತ್ತದೆ. ಆದರೆ ಈ ಸಂಘಟನೆಗಳು ರೈತಾಪಿ ವರ್ಗದೊಡನೆ ಯಾವ ಸಂಪರ್ಕವನ್ನೂ ಹೊಂದಿರುವುದಿಲ್ಲ. ಈ
ವರ್ಗವು ದೇಶದಲ್ಲಿನ ಕೇವಲ ಆವೇಶಪೂರಿತ ಕ್ರ್ರಾಂತಿಕಾರಿ ಗುಂಪು ಎಂಬಂತೆ ಪ್ರತಿನಿಧಿಸಲ್ಪಟ್ಟಿರುತ್ತದೆ.
ಇದನ್ನು ಸಂಘಟಿಸುವಲ್ಲಿ ಸಂಘಟನೆಗಳು ಅಸಮರ್ಥವಾಗಿ ತಮ್ಮ ಕಾರ್ಯವಿಧಾನಗಳು ಪುರಾತನ ಪಳೆಯುಳಿಕೆಯಂತಿದೆ
ಎಂದು ಅರಿಯುತ್ತವೆ. ಕಾರ್ಮಿಕರನ್ನು ನಿಯಂತ್ರಿಸುವ ರಾಜಕೀಯದಲ್ಲೆ ಮುಳುಗಿರುವ ಸಂಘಟನೆಗಳ ನಾಯಕರು
ಅನಿವಾರ್ಯವಾಗಿ ಸರಕಾರವನ್ನು ಮತ್ತು ವ್ಯವಸ್ಥೆಯನ್ನು ಕಿತ್ತೊಗೆಯುವ ಪೂರ್ವಸಿದ್ಧತಾ ಹಂತವನ್ನು ತಲುಪುತ್ತಾರೆ.
ಆದರೆ ಇಲ್ಲಿಯೂ ಗ್ರ್ರಾಮೀಣ ಭಾಗವನ್ನು ಹೊರಗಿಡಲಾಗುತ್ತದೆ. ಇದು ರಾಷ್ಟ್ರೀಯ ಬೂಜ್ರ್ವಾ ಮತ್ತು ಅಸಂಘಟಿತ
ಕಾರ್ಮಿಕ ಆಂದೋಳನಗಳ ನಡುವಿನ ಹೊಂದಾಣಿಕೆಗಷ್ಟೇ ಸೀಮಿತವಾಗಿರುತ್ತದೆ. ರಾಷ್ಟ್ರೀಯ ಬೂಜ್ರ್ವಾಗಳು ವಸಾಹತುಶಾಹಿಯ
ಹಳೆ ಪರಂಪರೆಯನ್ನು ಮೈಗೂಡಿಸಿಕೊಂಡು ತನ್ನ ಮಿಲಿಟರಿ ಮತ್ತು ಪೋಲೀಸ್ ಬಲಗಳನ್ನು ಸಜ್ಜುಗೊಳಿಸಿಕೊಳ್ಳುತ್ತದೆ.
ಇತ್ತ, ಸಂಘಟನೆಗಳು ಸಭೆಗಳನ್ನು ಆಯೋಜಿಸಿ ತನ್ನ ಸಾವಿರಾರು ಸದಸ್ಯರುಗಳನ್ನು ಕಾರ್ಯೋನ್ಮುಖಗೊಳಿಸುತ್ತದೆ.
ತಿನ್ನಲು ಸಾಕಷ್ಟಿರುವ ಅನುಕೂಲಕರ ಸ್ಥಿತಿಯಲ್ಲಿರುವ ಈ ರಾಷ್ಟ್ರೀಯ ಬೂಜ್ರ್ವಾಗಳನ್ನು ಮತ್ತು ಈ ಕಾರ್ಮಿಕರನ್ನು
ರೈತಾಪಿ ಜನರು ಗಮನಿಸುತ್ತಾರೆ. ತಮ್ಮನ್ನು ಕೇವಲ ತಾತ್ಕಾಲಿಕವಾದ ಸಾಧನವಾಗಿ ಬಳಸಿಕೊಂಡಿದ್ದಾರೆ ಎಂದು
ಈ ರೈತಾಪಿಗಳು ಮನಗಾಣುತ್ತಾರೆ. ಒಂದು ರೀತಿಯ ಅನೈತಿಕ ಮೆಕೆವಿಲಿಯನಿಸಂನಲ್ಲಿ ಒಟ್ಟಾದ ಸಂಘಟನೆಗಳು,
ಪಕ್ಷಗಳು ಮತ್ತು ಸರಕಾರ ರೈತಾಪಿವರ್ಗವನ್ನು ಕುರುಡಾದ ಮತ್ತು ನಿಶ್ಚಲವಾದ ಪಶುಬಲ ಎಂಬಂತೆ ಬಳಸಿಕೊಳ್ಳುತ್ತಾರೆ.
ಇನ್ನು ಕೆಲವು ಸಂದರ್ಭಗಳಲ್ಲಿ ರೈತಾಪಿ ವರ್ಗವು ರಾಷ್ಟ್ರೀಯ ವಿಮೋಚನೆಯ ಹೋರಾಟಕ್ಕೆ ಗಣನೀಯ ಕೊಡುಗೆಯನ್ನು
ನೀಡುತ್ತವೆ. ರಾಷ್ಟ್ರದ ಭವಿಷ್ಯಕ್ಕಾಗಿ ಆಯ್ದುಕೊಂಡ ಕಾರ್ಯಯೋಜನೆಗಳಿಗೂ ಸಹಕಾರಿಗಳಾಗುತ್ತಾರೆ. ಅಭಿವೃದ್ಧಿಶೀಲ
ರಾಷ್ಟ್ರಗಳಿಗೆ ಈ ವಿದ್ಯಮಾನವು ಬಹುಮುಖ್ಯವಾಗಿದೆ. ಈ ಕಾರಣಕ್ಕಾಗಿಯೇ ನಾವು ಇದನ್ನು ವಿವರವಾಗಿ ಅಧ್ಯಯನ
ಮಾಡಬೇಕಾಗಿದೆ.
ರಾಷ್ಟ್ರೀಯವಾದಿ ಪಕ್ಷಗಳಿಗೆ ವಸಾಹತುಶಾಹಿಯನ್ನು ನಾಶಗೊಳಿಸುವ ಇಚ್ಛೆಯ ಜೊತೆಗೆ ವಸಾಹತುಶಾಹಿಯ
ಜೊತೆಗೆ ಹಿತಕಾರಿಯಾದ ಸಂಬಂಧದಲ್ಲಿರುವ ಇಚ್ಛೆಯೂ ಇದೆ ಎಂಬ ವೈರುಧ್ಯವನ್ನು ನಾವು ಗಮನಿಸಿದ್ದೇವೆ.
ಈ ಪಕ್ಷಗಳೊಳಗೆ ಎರಡು ತೆರನಾದ ಕಾರ್ಯವಿಧಾನಗಳನ್ನು ಕಾಣಬಹುದಾಗಿದೆ. ಮೊದಲನೆಯದಾಗಿ, ಕೆಲವು ಬುದ್ಧಿ
ಜೀವಿವರ್ಗವು ವಸಾಹತುಶಾಹಿಯ ವಾಸ್ತವಗಳನ್ನು ಮತ್ತು ಅಂತರಾಷ್ಟ್ರೀಯ ವಿದ್ಯಮಾನಗಳನ್ನು ಅಮೂಲಾಗ್ರವಾಗಿ
ವಿಶ್ಲೇಷಿಸಿದವರಾಗಿ, ರಾಷ್ಟ್ರೀಯವಾದಿ ಪಕ್ಷದ ಸೈದ್ಧಾಂತಿಕ ಟೊಳ್ಳುತನವನ್ನು ಮತ್ತು ಅದರ ಕಾರ್ಯಕ್ಷಮತೆಯ
ದೌರ್ಬಲ್ಯವನ್ನು ಟೀಕಿಸುತ್ತಾರೆ. ಇವರು ನಿರಂತರವಾಗಿ ನಾಯಕರುಗಳಿಗೆ ಕೆಲವು ಪ್ರಮುಖ ಪ್ರಶ್ನೆಗಳನ್ನು
ಕೇಳುತ್ತಲೇ ಇರುತ್ತಾರೆ. ‘ರಾಷ್ಟ್ರೀಯವಾದ ಎಂದರೇನು? ’ಅದರ ಕುರಿತಾಗಿ ನಿಮ್ಮ ವ್ಯಾಖ್ಯೆ ಏನು?
‘ಆ ಶಬ್ದದ ಅರ್ಥವೇನು? ‘ಸ್ವಾತಂತ್ರ್ಯದ ಅರ್ಥವೇನು? ‘ಅದನ್ನು ನೀವು ಹೇಗೆ ಸಾಧಿಸಲು ಉದ್ದೇಶಿಸಿದ್ದೀರಿ?
ಮುಂತಾದ ಪ್ರಶ್ನೆಗಳನ್ನು ಕೇಳುವ ಜೊತೆಯಲ್ಲೇ ಕಾರ್ಯವಿಧಾನಗಳಿಗೆ ಸಂಬಂಧಿಸಿದ ವಿಷಯಗಳನ್ನು ಪರಿಣಾಮಕಾರಿಯಾಗಿ
ಮಂಡಿಸಬೇಕೆಂದು ಆಗ್ರಹಿಸುತ್ತಾರೆ. ಚುನಾವಣಾ ಕಾರ್ಯತಂತ್ರಗಳಿಗೆ ಇವರು ಕೊಡುವ ಸಲಹೆಗಳ ಕೊನೆಯಲ್ಲಿ
ಅವರು ಹೀಗೆ ಸೇರಿಸುತ್ತಾರೆ ‘ಇನ್ನಿತರ ಮಾರ್ಗಗಳು ಅಥವಾ ಸಾಧನಗಳು ಮುಖ್ಯವಾದವುಗಳೆಂದು’. ಸಣ್ಣ ಪ್ರಮಾಣದ ಹೋರಾಟವೋ ಅಥವಾ ವಾಗ್ಯುದ್ಧವೋ ಆರಂಭವಾಗುತ್ತಿದ್ದಂತೆ, ನಾಯಕರು ಇವರುಗಳನ್ನು
ಹದಿಹರೆಯದ ಉದ್ರಿಕ್ತ ಪಡೆ ಎಂದು ಕರೆಯುತ್ತಾರೆ. ಆದರೆ ಇವರ ಆಗ್ರಹಗಳು ಅಪ್ರಬುದ್ಧವಾಗಿರದ ಕಾರಣ ಮತ್ತು
ಅವು ಉದ್ರಿಕ್ತ ಮನಸ್ಸಿನ ಚಿಂತನೆಗಳಲ್ಲದ ಕಾರಣ, ಅವುಗಳ ಕುರಿತಾಗಿ ಚಿಂತಿಸುತ್ತಿರುವ ಕ್ರಾಂತಿಕಾರಿ
ಗುಂಪುಗಳನ್ನು ತಕ್ಷಣವೇ ಕಿತ್ತೊಗೆದು ದೂರವಿರಿಸಲಾಗುತ್ತದೆ. ರಾಜಕೀಯದಲ್ಲಿ ಪಳಗಿ ಅನುಭವಸ್ಥರಾದ ನಾಯಕರು
ಇವರನ್ನು “ಅರಾಜಕವಾದಿ ಅಹಂಕಾರಿಗಳು” ಎಂದು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸುತ್ತಾರೆ. ಪಕ್ಷದ ಕಾರ್ಯವಿಧಾನವು
ಯಾವುದೇ ನಾವೀನ್ಯತೆಯನ್ನು ವಿರೋಧಿಸುತ್ತದೆ. ಅಲ್ಪಸಂಖ್ಯಾತರಾದ ಕ್ರಾಂತಿಕಾರಿ ಗುಂಪು, ತಾವು ವ್ಯವಸ್ಥೆಯಿಂದ
ದೂರಾದೆವು ಮತ್ತು ಬೇರಾದೆವು ಎಂಬ ಭಾವಕ್ಕೆ ಒಳಗಾಗುತ್ತಾರೆ. ಒಂದು ಅಗಾಧವಾದ ಸುಳಿಯಲ್ಲಿ ಕೊಚ್ಚಿ
ಹೋಗುವ ಭಯ ಮತ್ತು ಆತಂಕಕ್ಕೆ ಇವರು ಒಳಗಾಗುತ್ತಾರೆ. ಆ ಸುಳಿಯ ಸ್ವರೂಪ, ಶಕ್ತಿ ಮತ್ತು ದಿಶೆಯನ್ನು
ಕಲ್ಪಿಸಿಕೊಳ್ಳುವುದೂ ಇವರಿಗೆ ಸಾಧ್ಯವಾಗುವುದಿಲ್ಲ. ಎರಡನೆ ಕಾರ್ಯವಿಧಾನದ ಕ್ರಮವು ಹಿರಿಯ ಅಥವಾ ಕಿರಿಯ
ಪದಾಧಿಕಾರಿಗಳ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ. ಇದು ವಸಾಹತುಶಾಹಿ ಕಾಲದ ಪೋಲೀಸ್ ಬಲಪ್ರಯೋಗಕ್ಕೆ
ಪಕ್ಕಾದ ಚಟುವಟಿಕೆಗಳಾಗಿರುತ್ತವೆ. ಈ ವ್ಯಕ್ತಿಗಳು ಪಕ್ಷದ ನಾಯಕತ್ವವನ್ನು ಪಡೆದದ್ದು ಕಠಿಣ ಪರಿಶ್ರಮ,
ಸ್ವಯಂ ಬಲಿದಾನ, ತ್ಯಾಗ ಮತ್ತು ಅಪ್ರತಿಮ ದೇಶಭಕ್ತಿಯ ಕಾರಣಗಳಿಂದ ಎಂಬುದು ಗಮನಾರ್ಹ. ಈ ವ್ಯಕ್ತಿಗಳು
ಕಾರ್ಮಿಕರೋ, ಅರೆಕಾಲಿಕ ಉದ್ಯೋಗಿಯೋ ಅಥವಾ ಕೆಲವೊಮ್ಮೆ ಇವರು ಸಂಪೂರ್ಣ ನಿರುದ್ಯೋಗಿಯೋ ಆಗಿರುತ್ತಾರೆ.
ಇವರಿಗೆ ರಾಷ್ಟ್ರೀಯವಾದಿ ಪಕ್ಷವೊಂದರ ಕಾರ್ಯಕರ್ತರಾಗುವುದು ರಾಜಕೀಯದ ಪ್ರಶ್ನೆಯಲ್ಲ. ಬದಲಾಗಿ ತಮ್ಮ
ಪಶುಸಮಾನ ಸ್ಥಿತಿಯನ್ನು ಕಿತ್ತೊಗೆದು ಮನುಷ್ಯರಾಗುವ ಏಕೈಕ ಮಾರ್ಗವಾಗಿದೆ. ಪಕ್ಷದೊಳಗಿನ ಅತಿಯಾದ ಕಾನೂನಾತ್ಮಕ
ಸಂಗತಿಗಳಿಂದ ಇವರು ಅಸಂತುಷ್ಟರಾಗುತ್ತಾರೆ. ತಮ್ಮ ಸೀಮಿತ ಕಾರ್ಯವ್ಯಾಪ್ತಿಯ ಒಳಗೇ ಬದಲಾವಣೆಯತ್ತ ಸಾಗುವ
ಕ್ರಿಯಾಶೀಲತೆಯನ್ನು ಧೈರ್ಯವನ್ನು, ಭರವಸೆಯನ್ನು ಇವರು ಪ್ರಕಟಪಡಿಸುತ್ತಾರೆ. ಇವರ ಈ ಎಲ್ಲಾ ವರ್ತನೆಗಳು
ಇವರನ್ನು ವ್ಯವಸ್ಥಿತವಾಗಿ ವಸಾಹತುಶಾಹಿ ದೌರ್ಜನ್ಯಕ್ಕೆ ಗುರಿಮಾಡುತ್ತವೆ. ಬಂಧನಕ್ಕೆ ಒಳಗಾಗಿ, ಅಪರಾಧಿ
ಎಂದು ಪರಿಗಣಿಸಲ್ಪಟ್ಟು, ಶಿಕ್ಷಿಸಲ್ಪಟ್ಟು ನಂತರ ಬಿಡುಗಡೆಗೊಳ್ಳುವ ಈ ಎಲ್ಲ ಹಂತಗಳನ್ನು ಇವರು ದಾಟುತ್ತಾರೆ.
ತಾವು ಬಂಧಿತರಾಗಿದ್ದ ಕಾಲದಲ್ಲಿ ತಮ್ಮ ವಿಚಾರಗಳ ಬಗ್ಗೆ ಚಿಂತನೆ ನಡೆಸಿ ತಮ್ಮ ಸಂಕಲ್ಪಗಳನ್ನು ಇನ್ನಷ್ಟು
ದೃಢಗೊಳಿಸಿಕೊಳ್ಳುತ್ತಾರೆ. ಸ್ಮಶಾನದಂತಿರುವ ಜೈಲಿನ ಕಠಿಣತಮ ಬದುಕು, ಉಪವಾಸ, ಸತ್ಯಾಗ್ರಹ ಹೋರಾಟ
ಮುಂತಾದ ಅಗ್ನಿದಿವ್ಯಗಳಿಂದ ಇವರು ಗಟ್ಟಿಗೊಳ್ಳುತ್ತಾರೆ. ಇವೆಲ್ಲವುಗಳಿಂದ ಬಿಡುಗಡೆಗೊಂಡು ಬಂದ ಮೇಲೆ,
ಸಶಸ್ತ್ರ ಹೋರಾಟ ನಡೆಸಲು ದೈವವೇ ನಮಗಿತ್ತ ಅವಕಾಶ ಇದು ಎಂದು ಬಗೆಯುತ್ತಾರೆ. ಈ ನಡುವೆ ವಸಾಹತುಶಾಹಿ
ಶಕ್ತಿಗಳು ಎಲ್ಲಾ ಕಡೆಯಿಂದಲೂ ತಮ್ಮ ವಿರುದ್ಧವಾದ ಶಕ್ತಿಗಳು ಸುತ್ತುವರಿಯಲ್ಪಟ್ಟದ್ದನ್ನು ಕಂಡು ಮಂದಗಾಮಿ
ರಾಷ್ಟ್ರೀಯವಾದಿಗಳತ್ತ ಮುಖಮಾಡಿ ಸಂಬಂಧ ಸುಧಾರಿಸಲು ತೊಡಗುತ್ತಾರೆ. ಈ ಎಲ್ಲದರ ಪರಿಣಾಮವೇನೆಂದರೆ
ಪಕ್ಷವು ಅಫೀಶಿಯಲ್ ಮತ್ತು ಅನ್‍ಅಫೀಶಿಯಲ್ ಗುಂಪುಗಳೆಂದು ಎರಡು ಹೋಳಾಗಿ ಇಬ್ಭಾಗವಾಗುವ ಹಂತವನ್ನು
ತಲುಪುತ್ತದೆ. ಅನ್‍ಅಫೀಶಿಯಲ್ ಗುಂಪು ಅನಪೇಕ್ಷಿತವೆಂದು ಭಾವಿಸಲಾಗಿ ತಿರಸ್ಕಾರಕ್ಕೆ ಹಾಗೂ ಅವಗಣನೆಗೆ
ಒಳಗಾಗುತ್ತದೆ. ಕಾನೂನು ಈಗ ಇವರ ಸಹಾಯಕ್ಕೆ ಬರುತ್ತದೆ. ಆದರೆ ಸಾಕಷ್ಟು ಮುಂಜಾಗೃತೆಗಳನ್ನು ತೆಗೆದುಕೊಂಡ
ಅನ್‍ಅಫೀಶಿಯಲ್ ಗುಂಪು ಅದಾಗಲೇ ತಾವು ಹೊರಗಿನವರಾದೆವು ಎಂಬ ಭಾವತಳೆಯುತ್ತಾರೆ. ಆಗ ಅವರು ತಾವು ಕೆಲವು
ವರ್ಷಗಳ ಹಿಂದೆ ಆರಾಧಿಸುತ್ತಿದ್ದ ಬುದ್ಧಿಜೀವಿ ವರ್ಗವನ್ನು ಸಂಪರ್ಕಿಸುತ್ತಾರೆ. ಇವರೀರ್ವರ ನಡುವಿನ
ಮುಖಾಮುಖಿ ಅಫೀಶಿಯಲ್ ಪಾರ್ಟಿಗೆ ಸಮಾನಾಂತರವಾಗಿ ಒಂದು ಭೂಗತ ಪಕ್ಷ ಅಥವಾ ಛಾಯಾ ಪಕ್ಷದ ರಚನೆಗೆ ಕಾರಣವಾಗುತ್ತದೆ.
ಆಫೀಶಿಯಲ್ ಪಾರ್ಟಿಯು ವಸಾಹತುಶಾಹಿಗೆ ಹತ್ತಿರವಾಗಿ ಅದನ್ನು ‘ಒಳಗಿನಿಂದಲೇ’ ಬದಲಾಯಿಸಲು ತೊಡಗಿದಂತೆ, ಈ ಅನ್‍ಅಫೀಶಿಯಲ್ ಗುಂಪನ್ನು ಹತ್ತಿಕ್ಕುವ ಪ್ರಯತ್ನಗಳು ತೀವ್ರ
ಸ್ವರೂಪವನ್ನು ಪಡೆಯುತ್ತದೆ. ಈಗ ಈ ಅನ್‍ಅಫೀಶಿಯಲ್ ಗುಂಪು ಮುಂದೆ ಹೋಗಲಾಗದ ಒಂದು ಐತಿಹಾಸಿಕ ಬಿಕ್ಕಟ್ಟಿನಲ್ಲಿ
ಸಿಲುಕಿಕೊಳ್ಳುತ್ತದೆ ಅಥವಾ ಒಂದು ಐತಿಹಾಸಿಕ ದಿಗ್ಬಂಧನಕ್ಕೆ ಒಳಗಾಗುತ್ತದೆ. ನಗರಗಳಿಂದ ಹೊರದೂಡಲ್ಪಟ್ಟ
ಇವರು ಮೊದಲು ಪಟ್ಟಣದ ಹೊರವಲಯಗಳಲ್ಲಿ ಆಶ್ರಯ ಪಡೆಯುತ್ತಾರೆ. ಆದರೆ ಪೋಲೀಸ್ ಪಡೆಗಳು ಅವರನ್ನು ಬಲತ್ಕಾರದಿಂದ
ನಗರಗಳಿಂದ ಹೊರದೂಡಿ, ರಾಜಕೀಯ ರಂಗವನ್ನೆ ತ್ಯಜಿಸುವಂತೆ ಮಾಡುತ್ತಾರೆ. ಆಗ ಇವರು ಗ್ರಾಮೀಣ ಭಾಗದತ್ತ,
ಪರ್ವತ ತಪ್ಪಲುಗಳತ್ತ ಮತ್ತು ಗ್ರಾಮೀಣ ಜನಸಮುದಾಯದತ್ತ ತೆರಳುತ್ತಾರೆ. ಹಳ್ಳಿಗಳಲ್ಲಿ ರೈತಾಪಿ ವರ್ಗವು
ಇವರನ್ನು ಸುತ್ತುವರಿದು ಪ್ರಾಣಾಪಾಯದಿಂದ ಇವರನ್ನು ರಕ್ಷಿಸುತ್ತಾರೆ. ಹೀಗೆ ರಾಷ್ಟ್ರೀಯವಾದಿ ಹೋರಾಟಗಾರನೊಬ್ಬ
ನಗರಗಳಲ್ಲಿ ಪೋಲೀಸರೊಟ್ಟಿಗೆ ಕಣ್ಣಮುಚ್ಚಾಲೆ ಆಡುವ ಬದಲು ತನ್ನ ಜೀವವನ್ನೆ ಅಥವಾ ವಿಧಿಯನ್ನೇ ರೈತಾಪಿಗಳ
ಕೈಗೊಪ್ಪಿಸುತ್ತಾನೆ. ಈ ಬಗ್ಗೆ ಅವನು ಎಂದಿಗೂ ಪಶ್ಚಾತ್ತಾಪ ಪಡುವುದಿಲ್ಲ. ರೈತಾಪಿಗಳು ತೊಡಿಸಿದ ಈ
ರಕ್ಷಾಕವಚ ಈ ಹೋರಾಟಗಾರನು ಕಲ್ಪನೆ ಮಾಡಲೂ ಸಾಧ್ಯವಾಗದಷ್ಟು ಕೋಮಲವಾಗಿ ಮತ್ತು ಸಶಕ್ತವಾಗಿ ಇವನ್ನು
ಆವರಿಸಿಕೊಳ್ಳುತ್ತದೆ. ರಾಷ್ಟ್ರ, ರಾಜಕೀಯ ಹೋರಾಟ ಮುಂತಾದ ಕಲ್ಪನೆಗಳನ್ನು ಪಡೆದ ನಗರಕೇಂದ್ರಗಳಿಂದ
ದೂರಾದ ಇವರು ‘ಮಾಕ್ವಿಸ್’ಗಳತ್ತ ಹೊರಳುತ್ತಾರೆ. ತಮ್ಮದೇ ದೇಶದಲ್ಲಿ ಜೀವನ ನಡೆಸುತ್ತಾರೆ.
ಪೋಲೀಸ್ ಕಣ್ಗಾವಲು ತಪ್ಪಿಸಲು ಸದಾ ಸಂಚಾರದಲ್ಲೇ ಇರಬೇಕಾದ ಇವರು, ರಾತ್ರಿ ಹೊತ್ತು ಸಂಚರಿಸುತ್ತ ದೇಶದ
ಉದ್ದಗಲವನ್ನು ಕ್ರಮಿಸಿ ತಮ್ಮ ದೇಶವನ್ನು ಅರಿಯುತ್ತಾರೆ. ಕೆಫೆಯಲ್ಲಿ ಕೂರುತ್ತಿದ್ದ ದಿನಗಳು, ಮುಂಬರುವ
ಚುನಾವಣೆ ಕುರಿತಾದ ಚರ್ಚೆ ಅಥವ ಯಾರೋ ಒಬ್ಬ ಪೋಲೀಸ್ ಆಫೀಸರ್‍ನ ಕ್ರೌರ್ಯದ ಕುರಿತಾದ ಮಾತುಗಳು ಮುಗಿದುಹೋದ
ಅಧ್ಯಾಯಗಳಾಗುತ್ತವೆ. ಇವರ ಕಿವಿಗಳು ಈಗ ಗ್ರಾಮೀಣ ಭಾಗದ ನಿಜಧ್ವನಿಗಳನ್ನು ಆಲಿಸುತ್ತವೆ. ಕಣ್ಣುಗಳು
ಜನರ ಅನಂತ ಸಂಕಟಗಳನ್ನು ನೋಡುತ್ತವೆ. ಅವರಿಗೀಗ ತಾವು ಅಮೂಲ್ಯವಾದ ಸಮಯವನ್ನು ವಸಾಹತುಶಾಹಿಯ ಕುರಿತಾದ
ವ್ಯರ್ಥಪ್ರಲಾಪದಲ್ಲಿ ಕಳೆದೆವು ಎಂಬ ಅರಿವಾಗುತ್ತದೆ. ಬದಲಾವಣೆ ಎಂದರೆ ಸುಧಾರಣೆ ಅಲ್ಲ, ಬದಲಾವಣೆ
ಎಂದರೆ ಪ್ರಗತಿಯಲ್ಲ ಎಂಬ ಅರಿವು ಕೊನೆಗೂ ಅವರಿಗಾಗುತ್ತದೆ. ವಸಾಹತುಶಾಹಿಯನ್ನು ಕಿತ್ತೊಗೆಯಲು ನಗರ,
ಪಟ್ಟಣಗಳಲ್ಲಿ ನಡೆಸುವ ರಾಜಕೀಯ ಹೋರಾಟಗಳು ಯಾವಾಗಲೂ ದುರ್ಬಲವಾಗಿರುತ್ತವೆ ಎಂಬ ವಿಷಾದಯುಕ್ತ ಅರಿವು
ಅವರಿಗೆ ಈಗ ಮೂಡುತ್ತದೆ. ರೈತಾಪಿಗಳೊಡನೆ ಚರ್ಚೆ ನಡೆಸುವುದು ಇವರಿಗೀಗ ದಿನನಿತ್ಯದ ಪದ್ಧತಿಯಾಗುತ್ತದೆ.
ಹಿಂಸೆಯ ಮೂಲಕ ಸಾಧಿಸುವ ವಿಮೋಚನೆಯು ತಂದೊಡ್ಡುವ ಸಮಸ್ಯೆಗಳನ್ನು ಮತ್ತು ‘ರಾಷ್ಟ್ರೀಯ ಹೋರಾಟ’ ಮತ್ತು ಸಶಸ್ತ್ರ ದಂಗೆಯ ಮೂಲಕ ವಿದೇಶಿಯರಿಂದ ನಮ್ಮ ನೆಲವನ್ನು ಮರಳಿಪಡೆಯುವ ಪ್ರಯತ್ನಗಳು
ಉಂಟು ಮಾಡುವ ಸಮಸ್ಯೆಗಳ ಕುರಿತು ಗ್ರಾಮೀಣ ಜನವರ್ಗವು ಸದಾ ಜಾಗೃತವಾಗಿರುತ್ತದೆ ಎಂಬ ತಿಳಿವು ಈಗ ಈ
ಹೋರಾಟಗಾರರಿಗೆ ಮೂಡುತ್ತದೆ. ಇಲ್ಲಿ ಎಲ್ಲವೂ ಸರಳವಾಗಿರುತ್ತವೆ. ಎಂತಹ ಭಯಾತಂಕದ ಸಂದರ್ಭದಲ್ಲೂ ತಮ್ಮತನವನ್ನು
ಉಳಿಸಿಕೊಂಡು ಬದುಕುವ, ತಮ್ಮ ನೈತಿಕ ಮೌಲ್ಯಗಳನ್ನು ಕಾಪಿಟ್ಟುಕೊಳ್ಳುವ, ದೇಶದ ಬಗೆಗೆ ಬದ್ಧತೆ ಉಳ್ಳ
ಜನರನ್ನು ಇವರೀಗ ಕಾಣುತ್ತಾರೆ. ತ್ಯಾಗಕ್ಕೆ ಸಿದ್ಧರಾದ ಉದಾರಿಗಳನ್ನು ತಮ್ಮಲ್ಲಿರುವುದನ್ನೆಲ್ಲಾ ಕೊಡಲು
ಸಿದ್ಧರಾಗಿರುವವರನ್ನು, ನಾಶಪಡಿಸಲಾಗದ ಗರ್ವವನ್ನು ಹೊಂದಿರುವ ದುಡುಕಿನ ಸ್ವಭಾವದವರನ್ನು ಇವರೀಗ ಈ
ಜನರಲ್ಲಿ ಕಾಣುತ್ತಾರೆ. ಈ ಹೋರಾಟಗಾರರ ಮತ್ತು ದುಡುಕು ಸ್ವಭಾವದ, ಸ್ವಭಾವತ: ಬಂಡುಕೋರರಾದ ಈ ಜನಸಮುದಾಯದ
ನಡುವಿನ ಮುಖಾಮುಖಿ ಮತ್ತು ಮೈತ್ರಿ ಸ್ಫೋಟಕ ಗುಣವುಳ್ಳ ಒಂದು ಅನಿರೀಕ್ಷಿತ ಶಕ್ತಿಯ ಉಗಮಕ್ಕೆ ಕಾರಣವಾಗುತ್ತದೆ.
ಪಟ್ಟಣದ ಈ ಮಂದಿ ಗ್ರಾಮೀಣ ಜನರಿಂದ ಮಾರ್ಗದರ್ಶನ ಪಡೆಯುತ್ತ ಪ್ರತಿಯಾಗಿ ಅವರಿಗೂ ಸೈನಿಕ ತರಬೇತಿ ಮತ್ತು
ರಾಜಕೀಯ ಪಾಠಗಳನ್ನು ಮಾಡುತ್ತಾರೆ. ಜನ ತಮ್ಮ ಆಯುಧಗಳನ್ನು ಹರಿತಗೊಳಿಸಿಕೊಳ್ಳುತ್ತಾರೆ, ಹಾಗೆ ನೋಡಿದರೆ
ಸೈನಿಕ ತರಬೇತಿ ಅಲ್ಪಕಾಲದಲ್ಲೆ ಕೊನೆಯಾಗುತ್ತದೆ. ತಮ್ಮ ತೋಳ್ಬಲದಲ್ಲಿ ನಂಬಿಕೆಯುಳ್ಳ ಈ ಜನ ನಾಯಕರನ್ನು
ಹುರಿದುಂಬಿಸಿ ಸಶಸ್ತ್ರ ದಂಗೆಯ ಕಿಡಿ ಹೊತ್ತಿಸುತ್ತಾರೆ.
ಈ ದಂಗೆಯು ರಾಜಕೀಯ ಪಕ್ಷಗಳನ್ನು ದಿಕ್ಕುತಪ್ಪಿಸಿ ಕಂಗೆಡಿಸುತ್ತದೆ. ಈ ಪಕ್ಷಗಳ ಸಿದ್ಧಾಂತವು
ಈ ತೆರನ ಹೋರಾಟವನ್ನು ಒಪ್ಪುವುದಿಲ್ಲ. ಇವುಗಳ ಅಸ್ತಿತ್ವವೇ ಕ್ರಾಂತಿಯಂತ ವಿಚಾರವನ್ನು ತಿರಸ್ಕರಿಸುವುದರಲ್ಲಿರುತ್ತದೆ.
ಕೆಲವು ರಾಜಕೀಯ ಪಕ್ಷಗಳು ವಸಾಹತುಶಾಹಿಗಳಂತೆ ಆಶಾವಾದಿಗಳಾಗಿ ಕೇವಲ ರಕ್ತಪಾತವನ್ನುಂಟುಮಾಡುವ ಈ ಹುಚ್ಚಾಟದಲ್ಲಿ
ಸೇರಿಕೊಳ್ಳುವುದಿಲ್ಲ. ಆದರೆ ಕ್ರಾಂತಿಯ ಕಿಡಿಗಳನ್ನು ಹಚ್ಚಲಾಗಿ ಅವು ಕಾಡ್ಗಿಚ್ಚಿನಂತೆ ಇಡೀ ದೇಶವನ್ನು
ವ್ಯಾಪಿಸುತ್ತದೆ. ವಸಾಹತುಶಾಹಿ ಶಕ್ತಿ ಹೊಂದಿರುವ ಟ್ಯಾಂಕ್‍ಗಳಾಗಲೀ, ಪ್ಲೇನ್‍ಗಳಾಗಲೀ ಏನನ್ನೂ ಮಾಡಲಾಗದೆ
ನಿಷ್ಫಲವಾಗುತ್ತವೆ. ಮುಂದಾಗಬಹುದಾದ ಅಗಾಧ ಹಾನಿಯ ಪ್ರಮಾಣವನ್ನು ಮನಗಂಡ ವಸಾಹತುಶಾಹಿ ಆಲೋಚನೆಗೆ ತೊಡಗುತ್ತದೆ.
ಇತ್ತ ಶೋಷಕ ರಾಷ್ಟ್ರದೊಳಗೂ ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಆಕ್ರೋಶದ ಧ್ವನಿಗಳು ಮೊಳಗಿ ಪರಿಸ್ಥಿತಿಯ
ಗಂಭೀರ ಸ್ವರೂಪದತ್ತ ಗಮನ ಹರಿಸಲಾಗುತ್ತದೆ. ಇತ್ತ ಗುಡಿಸಿಲಿನಲ್ಲಿ, ತಮ್ಮ ಕನಸುಗಳಲ್ಲಿ ಬದುಕುತ್ತಿರುವ
ಜನರ ಹೃದಯಗಳು ಈ ಪರಿಯ ಹೊಸ ರಾಷ್ಟ್ರೀಯ ನಿನಾದಕ್ಕೆ ಮಿಡಿಯುತ್ತವೆ. ಹೋರಾಟಗಾರರನ್ನು ಸ್ಮರಿಸುತ್ತಾ
ಅವರ ಗುಣಗಾನದ ಮಧುರಗೀತೆಗಳನ್ನು ಇವರು ಹಾಡತೊಡಗುತ್ತಾರೆ. ಈ ದಂಗೆಯು ಈಗಾಗಲೇ ಇಡೀ ದೇಶವನ್ನು ವ್ಯಾಪಿಸುತ್ತದೆ.
ಈಗ ಏಕಾಂಗಿಯಾಗಬೇಕಾದ ಸರದಿ ರಾಜಕೀಯ ಪಕ್ಷಗಳದ್ದಾಗುತ್ತದೆ.
ಕಾಲಕ್ರಮೇಣ ಈ ದಂಗೆಯ ನಾಯಕರು ತಮ್ಮ ದಂಗೆಯ ವ್ಯಾಪ್ತಿಯನ್ನು ಪಟ್ಟಣದತ್ತ ವಿಸ್ತರಿಸುವ ಅಗತ್ಯವನ್ನು
ಮನಗಾಣುತ್ತಾರೆ. ಈ ಅರಿವು ಕಾಕತಾಳೀಯವೇನೂ ಅಲ್ಲ. ಇದು ರಾಷ್ಟ್ರೀಯ ವಿಮೋಚನೆಗಾಗಿ ನಡೆಸಿದ ಸಶಸ್ತ್ರ
ಹೋರಾಟದ ಬೆಳವಣಿಗೆಯನ್ನು ನಿಯಂತ್ರಿಸಿದ ತಾತ್ವಿಕತೆಯನ್ನು ಪೂರ್ಣಗೊಳಿಸುತ್ತದೆ. ಗ್ರಾಮೀಣ ಭಾಗಗಳು
ಸಮಷ್ಟಿ ಶಕ್ತಿಯ ಸೆಲೆಯಾಗಿದ್ದರೂ, ವಸಾಹತುಶಾಹಿಯು ತನ್ನ ಶಕ್ತಿಯ ಕುರಿತಾಗಿ ಎಂದೂ ಅನುಮಾನಪಡುವುದಿಲ್ಲ.
ಬಂದೊದಗಿದ ನಿಜವಾದ ಅಪಾಯವನ್ನು ಅದು ಅರಿಯುವುದೇ ಇಲ್ಲ. ಹಾಗಾಗಿ ದಂಗೆಯ ನಾಯಕರು ತಮ್ಮ ಯುದ್ಧವನ್ನು
ತಮ್ಮ ಶತ್ರು ಪ್ರದೇಶದತ್ತ ಅಂದರೆ ಶಾಂತವಾದ ಮತ್ತು ಆಡಂಬರದಿಂದ ಕೂಡಿದ ನಗರಗಳತ್ತ ಒಯ್ಯುತ್ತಾರೆ.
ನಗರಗಳಲ್ಲಿ ದಂಗೆಯ ಕಿಡಿ ಹೊತ್ತಿಸುವುದು ಈ ನಾಯಕರುಗಳಿಗೆ ಸುಲಭದ ವಿಷಯವೇನೂ ಅಲ್ಲ. ಇವರು ನಗರಗಳಲ್ಲೆ
ಹುಟ್ಟಿ ಬೆಳೆದರೂ ವಸಾಹತುಶಾಹಿಯ ಪೋಲೀಸ್ ಬಲದಿಂದ ತಪ್ಪಿಸಿಕೊಂಡು ಬಂದವರಾಗಿರುತ್ತಾರೆ. ಆದ್ದರಿಂದ
ಕೆಲವಷ್ಟು ವಿಚಾರಶೀಲ ಜನರೂ ಮತ್ತು ರಾಜಕೀಯ ಪಕ್ಷಗಳ ಸಂಭಾವಿತ ಪದಾಧಿಕಾರಿಗಳು ಇವರನ್ನು ಓಡಿಹೋದವರೆಂದೇ
ತಪ್ಪಾಗಿ ಗ್ರಹಿಸುತ್ತಾರೆ. ಶೋಷಣೆಯಿಂದ ತಪ್ಪಿಸಿಕೊಳ್ಳಲು ಮತ್ತು ಹಳೆಯ ರಾಜಕೀಯ ವ್ಯವಸ್ಥೆಯ ಕುರಿತಾಗಿ
ಇವರಿಗಿರುವ ಅಪನಂಬಿಕೆ ಕಾರಣವಾಗಿ ಇವರು ಗ್ರಾಮೀಣ ಭಾಗಗಳತ್ತ ಪಲಾಯನಗೈದವರಾಗಿರುತ್ತಾರೆ. ನಗರಗಳಲ್ಲಿ
ರಾಜಕೀಯ ಪಕ್ಷಗಳಲ್ಲಿ ತಕ್ಕಮಟ್ಟಿಗೆ ಹೆಸರು ಮಾಡಿದ ರಾಷ್ಟ್ರೀಯವಾದಿ ನಾಯಕರನ್ನೇ ಇವರು ಸಹಜವಾಗಿ ಅವಲಂಬಿಸಬೇಕಾಗುತ್ತದೆ.
ಆದರೆ ರೈತಾಪಿ ಜನರ ನಡುವೆ ಕಲೆತು ಸಜ್ಜಗೊಂಡು ಬಂದ ಈ ನಾಯಕರುಗಳಿಗೂ, ನಗರದಲ್ಲಿರುವ ಅಳ್ಳೆದೆಯ ನಾಯಕರುಗಳಿಗೂ
ಬಹಳ ವ್ಯತ್ಯಾಸವಿರುತ್ತದೆ. ನಗರದ ನಾಯಕರಾದರೋ ವಸಾಹತುಶಾಹಿಯ ಕೆಡುಕುಗಳ ಕುರಿತ ಕೊನೆಯಿಲ್ಲದ ಒಣಚರ್ಚೆಯಲ್ಲೇ
ಮುಳುಗಿಹೋಗಿರುತ್ತಾರೆ. ಅಷ್ಟಲ್ಲದೆ, ನಗರದಲ್ಲಿರುವ ತಮ್ಮ ಹಳೆ ಒಡನಾಡಿಗಳನ್ನು ಸೇರಿಕೊಳ್ಳಲು ಇವರು
ನಡೆಸುವ ಪ್ರಯತ್ನವು ಇವರಲ್ಲಿರುವ ಭಯವನ್ನು ದೃಢಪಡಿಸುತ್ತದೆ ಮತ್ತು ಹಳೆ ಪರಿಚಯವನ್ನು ನವೀಕರಿಸುವ
ಇವರ ಆಸೆಯನ್ನು ನಿರ್ಮೂಲನಗೊಳಿಸುತ್ತದೆ. ಹಳ್ಳಿಗಳಲ್ಲಿ ಆರಂಭಗೊಂಡ ದಂಗೆಯು ನಗರಗಳತ್ತ ವ್ಯಾಪಿಸುವುದು
ಯಾರಿಂದ ಎಂದರೆ ನಗರದ ಹೊರವಲಯದಲ್ಲೇ ನಿರ್ಬಂಧಿಸಲ್ಪಟ್ಟ ರೈತಾಪಿಗಳಿಂದ. ಇವರು ವಸಾಹತುಶಾಹೀ ವ್ಯವಸ್ಥೆಯಿಂದ
ಯಾವ ಪ್ರಯೋಜನವನ್ನು ಪಡೆದವರಾಗಿರುವುದಿಲ್ಲ. ಹಳ್ಳಿಗಳಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ವಸಾಹತುಶಾಹಿಯ
ಆಕ್ರಮಣಗಳಿಂದ ಈ ಜನರು ತಮ್ಮದೇ ನೆಲದಿಂದ ಹೊರದೂಡಲ್ಪಟ್ಟಿರುತ್ತಾರೆ. ಎಂದಾದರೊಂದು ದಿನ ನಗರಗಳು ತಮ್ಮನ್ನು
ಒಳಸೇರಿಸಿಕೊಳ್ಳುತ್ತವೆ ಎಂಬ ಭರವಸೆಯಿಂದ ಈ ಜನ ನಗರದ ಹೊರಗೆ ಸುತ್ತುವರಿಯುತ್ತಾರೆ. ಈ ರೈತಾಪಿಗಳಿಂದ,
ಪಟ್ಟಣದ ಗುಡಿಸಲುಗಳಲ್ಲಿ ವಾಸಿಸುವ ಬಡಜನರಿಂದ ಮತ್ತು ಶ್ರಮಿಕವರ್ಗದಿಂದ ನಗರದ ದಂಗೆಯು ಮುನ್ನಡೆಸಲ್ಪಡುತ್ತದೆ.
ವಸಾಹತುಗೊಂಡ ಜನರ ಒಂದು ಆವೇಶಪೂರಿತ, ಸಹಜ ನಿರಂತರ ಸಮರ್ಥ ಕ್ರಾಂತಿಕಾರಿ ಪಡೆ ರೂಪುಗೊಳ್ಳುವುದು ಇದೇ
ಶ್ರಮಿಕವರ್ಗ ಮತ್ತು ಸಮಾನವಯಸ್ಕ ಹಸಿದ ಬಡಜನರಿಂದ. ಇವರು ತಮ್ಮ ಬುಡಕಟ್ಟು ಮತ್ತು ಕುಲದಿಂದಲೇ ಬೇರ್ಪಟ್ಟವರಾಗಿರುತ್ತಾರೆ. ಅವರ ವಿರುದ್ಧದ ಬೆದರಿಕೆಯ ತಂತ್ರಗಳನ್ನು ಹೆಚ್ಚಿಸಿದ್ದರು.
1950-51 ರ ವರ್ಷಗಳಲ್ಲಿ ಹಳ್ಳಿಗಾಡು ಮತ್ತು ಅರಣ್ಯಗಳಿಂದ ಯಾವುದೇ ಕೆಲಸವಿಲ್ಲದೇ ಕಳ್ಳತನ, ವ್ಯಭಿಚಾರ
ಮತ್ತು ಕುಡಿತಕ್ಕೆಳೆಸಿದ ಯುವ ಕೆನ್ಯನ್ನರ ಅಪಾರ ಪ್ರಮಾಣದ ಒಳಹರಿವಿಗೆ ಪ್ರತಿಕ್ರಿಯಿಸಿ ಪೋಲಿಸ್ ಮತ್ತು ಮಶಿನರಿಗಳು ಅವರಿಗೆ ಸಹಕಾರ ನೀಡಿದ್ದವು. ವಸಾಹತುಶಾಹಿ ದೇಶಗಳಲ್ಲಿ ಬಾಲಾಪರಾಧವೂ ಕೂಡ ನೇರವಾಗಿ ಈ ಕೆಳವರ್ಗದವರಿಂದಲೇ ಚಿಗುರೊಡೆದಿತ್ತು. ಅದೇ ರೀತಿ,
1957ರ ನಂತರ ಕಾಂಗೋದಲ್ಲಿ ಶಾಂತಿಯನ್ನು ಕದಡುತ್ತಿದ್ದ ಯುವ ಗೂಂಡಾಗಳನ್ನು ಒಳಪ್ರದೇಶಗಳಿಗೆ ವಾಪಾಸು
ಕಳುಹಿಸಲು ತೀವ್ರ ಕ್ರಮಗಳು ಕೈಗೊಳ್ಳಲ್ಪಟ್ಟವು. ಬೆಲ್ಜಿಯನ್ ಸೇನೆಯ ರಕ್ಷಣೆಯಲ್ಲಿ ಪುನರ್ವಸತಿಯ ಕ್ಯಾಂಪ್‍ಗಳು
ತೆರೆಯಲ್ಪಟ್ಟವು. ಕೆಳವರ್ಗದ ರಚನೆ ಎನ್ನುವುದು ತನ್ನ ಸ್ವಂತ ತರ್ಕದಿಂದ ಆಳಲ್ಪಟ್ಟ ಒಂದು ಸಂಗತಿಯಾಗಿತ್ತು
ಮತ್ತು ಮಿಶನರಿಗಳ ಅತ್ಯುತ್ಸಾಹವಾಗಲೀ, ಕೇಂದ್ರ ಪ್ರಾಧಿಕಾರದವರ ಕಟ್ಟಳೆಗಳಾಗಲೀ ಅದರ ಬೆಳವಣಿಗೆಯನ್ನು
ತಡೆಯಲು ಸಾಧ್ಯವಿರಲಿಲ್ಲ. ಮರದ ಬೇರುಗಳನ್ನು ಕಡಿದು ಕಡಿದು ಸವೆಯಿಸುವ ಇಲಿಗಳ ಗುಂಪಿನಂತೆ, ಜೋರಾಗಿ
ಒದ್ದಷ್ಟೂ ಅಥವಾ ಕಲ್ಲು ಹೊಡೆದಷ್ಟೂ ತಳಮಟ್ಟದಲ್ಲಿ ಅದು ಬಿಡದೇ ಕಡಿಯುತ್ತಿತ್ತು.
ವಿರೋಧಿ ಕೋಟೆಯನ್ನು ಹೇಗಾದರೂ ಮಾಡಿ, ಅವಶ್ಯಕತೆ ಬಿದ್ದರೆ ಭೂಗತ ದಾರಿಗಳ ಮೂಲಕವೂ, ಆಕ್ರಮಿಸುವ
ವಸಾಹತುಶಾಹಿಯ ಗುಣ ಸ್ವಾಭಾವಿಕ ನಿರ್ಧಾರದ ಪ್ರತಿಷ್ಠೆಯಾಗಿತ್ತು. ಈ ಗುಡಿಸಲುಗಳ ಪಟ್ಟಣ, ಕೆಳವರ್ಗ
ಪಟ್ಟಣದ ಬಧ್ರತೆಗೆ ಗಂಭೀರ ಅಪಾಯವನ್ನೊಡ್ಡಿತ್ತು ಮತ್ತು ವಸಾಹತು ಪ್ರಾಬಲ್ಯದ ಹೃದಯವನ್ನು ಹೊಕ್ಕಿರುವ
ಮಾರ್ಪಡಿಸಲಾಗದ ಕೊಳೆತ ಮತ್ತು ಗ್ಯಾಂಗ್ರೀನ್ ಅನ್ನು ಸೂಚಿಸುವಂತಿತ್ತು. ಹಾಗಾಗಿ ದಲ್ಲಾಳಿಗಳು, ರೌಡಿಗಳು,
ನಿರುದ್ಯೋಗಿಗಳು ಮತ್ತು ಸಣ್ಣಪುಟ್ಟ ಕ್ರಿಮಿನಲ್‍ಗಳು ಸಂಪರ್ಕಿಸಲ್ಪಟ್ಟಾಗ ವಿಮೋಚನಾ ಹೋರಾಟಕ್ಕೆ ತಮ್ಮನ್ನು ತಾವು ವೀರ ಕಟ್ಟಾಳುಗಳಂತೆ
ತಮ್ಮನ್ನು ಅರ್ಪಿಸಿಕೊಂಡರು ಮತ್ತು ತಮ್ಮಲ್ಲಿದ್ದುದನೆಲ್ಲಾ ಸಮರ್ಪಿಸಿದರು. ಈ ಅಲೆಮಾರಿಗಳು, ಈ ಎರಡನೇ
ದರ್ಜೆಯ ನಾಗರಿಕರು ತಮ್ಮ ನಿರ್ಣಾಯಕ ಮಿಲಿಟರಿ ಕ್ರಮದಿಂದ ದೇಶಕ್ಕೆ ವಾಪಾಸಾಗಲು ದಾರಿ ಕಂಡುಕೊಂಡರು.
ವಸಾಹತುಶಾಹಿ ಸಮಾಜದ ದೃಷ್ಟಿಯಲ್ಲಿ ಬದಲಾಗದೇ, ವಸಾಹತುಗಾರರ ನೈತಿಕ ಸ್ಟಾಂಡರ್ಡ್‍ಗಳಿಗೆ ಮುಖಾಮುಖಿಯಾಗದೇ,
ನಗರಗಳನ್ನು ಪ್ರವೇಶಿಸಲು ಬಂದೂಕು ಅಥವಾ ಹ್ಯಾಂಡ್ ಗ್ರೆನೇಡ್‍ಗಳು ಏಕೈಕ ಮಾರ್ಗವೆಂದು ಅವರು ನಂಬಿದ್ದರು.
ಕೆಲಸವಿಲ್ಲದ ಈ ಕೆಳವರ್ಗದ ಮನುಷ್ಯರು ಇತಿಹಾಸ ಮತ್ತು ತಮ್ಮ ಸ್ವಂತ ಕಣ್ಣುಗಳೆದುರು ತಮ್ಮನ್ನು ತಾವು ಉದ್ಧರಿಸಿಕೊಂಡರು. ವೇಶ್ಯೆಯರು, ತಿಂಗಳಿಗೆ
ಎರಡು ಸಾವಿರ ಫ್ರಾಂಕ್ ಪಡೆಯುವ ಸಂಸಾರಿಗಳು, ನಿರಾಶಾದಾಯಕ ಕೇಸ್‍ಗಳು, ಹುಚ್ಚುತನ ಮತ್ತು ಆತ್ಮಹತ್ಯೆಯ
ಮಧ್ಯೆ ತೊಯ್ದಾಡುತ್ತಿದ್ದ ಗಂಡಸರು ಹೆಂಗಸರೆಲ್ಲ ಚಿತ್ತಸ್ವಾಸ್ಥ್ಯ ಪಡೆದುಕೊಂಡರು. ತಮ್ಮ ಕಾರ್ಯಕ್ಷೇತ್ರಕ್ಕೆ
ವಾಪಾಸಾಗಿ ಮುನ್ನಡೆಯುತ್ತಿರುವ ದೇಶದ ಮಹಾನ್ ನಡಿಗೆಯಲ್ಲಿ ತಮ್ಮತಮ್ಮ ಮಹತ್ವದ ಸ್ಥಾನವನ್ನು ಪಡೆದುಕೊಂಡರು.
ದೇಶೀಯ ಪಕ್ಷಗಳು ಅವುಗಳ ವಿಯೋಜನೆಯನ್ನು ತೀವ್ರಗೊಳಿಸುವ ಈ ಹೊಸ ವಿದ್ಯಮಾನವನ್ನು ಗ್ರಹಿಸಲು
ಅಸಮರ್ಥವಾಗಿದ್ದವು. ಪಟ್ಟಣಗಳಲ್ಲಿನ ಬಂಡಾಯದ ಸ್ಫೋಟ ಹೋರಾಟದ ಸ್ವರೂಪವನ್ನೇ ಬದಲಾಯಿಸಿತ್ತು. ಪಟ್ಟಣದ
ಒಳಭಾಗಗಳೆಡೆ ಗುರಿಯಿಟ್ಟಿದ್ದ ವಸಾಹತುಶಾಹಿಯ ಬಹುತೇಕ ಸೇನಾತುಕಡಿಗಳು ಜನರನ್ನು ಮತ್ತು ಅವರ ಆಸ್ತಿಯನ್ನು
ರಕ್ಷಿಸಲು ಪಟ್ಟಣಕ್ಕೆ ವಾಪಾಸಾಗುತ್ತಿದ್ದವು. ದಮನಕಾರೀ ಶಕ್ತಿಗಳು ಚದುರಿಸಲ್ಪಟ್ಟವು, ಅಪಾಯ ಪ್ರತೀ
ಮೂಲೆಯಲ್ಲೂ ಹೊಂಚುಹಾಕುತ್ತಿತ್ತು. ರಾಷ್ಟ್ರೀಯ ಪ್ರದೇಶವಾದಂತಹ ಇಡೀ ವಸಾಹತು ಒಂದುರೀತಿಯ ವಶೀಕರಣಕ್ಕೊಳಪಟ್ಟಂತಿತ್ತು.
ಸೇನೆ ತನ್ನ ಹಿಡಿತವನ್ನು ಸಡಿಲಗೊಳಿಸುತ್ತಿದ್ದುದನ್ನು ಶಸ್ತ್ರಸಜ್ಜಿತರಾದ ರೈತರ ಗುಂಪು ಗಮನಿಸುತ್ತಿತ್ತು.
ಪಟ್ಟಣಗಳಲ್ಲಿನ ಬಂಡಾಯ ಒಂದು ಅನಿರೀಕ್ಷಿತ ಜೀವರಕ್ಷಕವಾಗಿತ್ತು. ವಸಾಹತುಶಾಹಿ ಯಂತ್ರಕ್ಕೆ ನಿರ್ಣಾಯಕ
ಪೆಟ್ಟುಗಳನ್ನು ನೀಡುತ್ತಿರುವ ಜನರ ಹುಮ್ಮಸ್ಸು ಮತ್ತು ಉತ್ಸಾಹವನ್ನು ನೋಡಿ ಬಂಡಾಯದ ಮುಖಂಡರ ಸಾಂಪ್ರದಾಯಿಕ
ರಾಜಕೀಯದೆಡೆಗಿನ ಅಪನಂಬಿಕೆ ಹೆಚ್ಚಾಗತೊಡಗಿತ್ತು. ಪ್ರತೀ ಗೆಲುವೂ ಅವರು ಈಗ ಜಂಭ, ಶಬ್ದಾಡಂಬರ, ಟೀಕೆ, ವ್ಯರ್ಥ ಮತ್ತು ಧರಣಿ ಎಂದೆಲ್ಲ ಕರೆಯುವ ಅವರ ಹಗೆತನವನ್ನು ಸಮರ್ಥಿಸುತ್ತಿತ್ತು. ರಾಜಕೀಯ
ಮತ್ತು ಪುಢಾರಿಗಿರಿಯ ಬಗ್ಗೆ ಅವರು ದ್ವೇಷದ ಭಾವನೆಯನ್ನು ಹೊಂದಿದ್ದರು. ಹಾಗಾಗಿ ನೈಸರ್ಗಿಕತೆಯ ಪಂಥದ
ಆರಂಭಿಕ ಹಂತ ವಿಜೃಂಭಿಸಿತ್ತು.
ದೇಶದ ಗಣನೀಯ ಹಾಜರಿ ಪ್ರತೀ ಮೂಲೆಯಲ್ಲೂ ಇದೆ ಎನ್ನುವುದಕ್ಕೆ ಒಳಭಾಗಗಳಲ್ಲಿ ಸ್ಫೋಟಗೊಂಡ ಪ್ರತಿಭಟನೆಗಳು
ಸಾಕ್ಷಿಯಾಗಿದ್ದವು. ಶಸ್ತ್ರಸಜ್ಜಿತನಾಗಿದ್ದ ವಸಾಹತುಕರಣಗೊಂಡ ಪ್ರತೀ ಪ್ರಜೆ, ಚಲನೆಯಲ್ಲಿರುವ ದೇಶದ ತುಣುಕೊಂದನ್ನು ಪ್ರತಿನಿಧಿಸುತ್ತಿದ್ದ.
ವಸಾಹತುಶಾಹಿ ಆಳ್ವಿಕೆಯನ್ನು ಈ ಈ ದಂಗೆಗಳು ಗಂಡಾಂತರಕ್ಕೆ ಸಿಕ್ಕಿಸುತ್ತಿದ್ದವು, ತಮ್ಮ ಪಡೆಗಳನ್ನು
ಚೆದುರಿಸುವ ಮೂಲಕ ಅವನ್ನು ಒಟ್ಟುಗೂಡಿಸಲು ಒತ್ತಾಯಿಸುತ್ತಿದ್ದವು, ಯಾವುದೇ ಸಮಯದಲ್ಲಿ ಅವನ್ನು ಉಸಿರುಕಟ್ಟಿಸುವ
ಬೆದರಿಕೆಯನ್ನೊಡ್ಡುತ್ತಿದ್ದವು. ಅವು ಸರಳ ನಿಯಮಗಳಿಂದ ಆಳಲ್ಪಟ್ಟಿದ್ದವು. ದೇಶ ಕಡ್ಡಾಯವಾಗಿ ಅಸ್ತಿತ್ವದಲ್ಲಿ
ಇರಬೇಕು. ಕಾರ್ಯಕ್ರಮಗಳಿಲ್ಲ, ಪ್ರವಚನಗಳಿಲ್ಲ, ಸಂಕಲ್ಪಗಳಿಲ್ಲ ಮತ್ತು ಬಣಗಳಿಲ್ಲ. ಸಮಸ್ಯೆ ಸ್ಪಷ್ಟ,
ವಿದೇಶೀಯರು ತೊಲಗಬೇಕು. ಶೋಷಕನ ವಿರುದ್ಧ ಸಾಮಾನ್ಯ ಫ್ರಂಟ್ ಅನ್ನು ಕಟ್ಟುವುದು ಮತ್ತು ಶಸ್ತ್ರ ಸಜ್ಜಿತ
ಹೋರಾಟದಿಂದ ಅದನ್ನು ಬಲಪಡಿಸುವುದು. ಎಲ್ಲಿಯವರೆಗೆ ವಸಾಹತುಶಾಹಿ ಆತಂಕದ ಸ್ಥಿತಿಯಲ್ಲಿರುತ್ತದೆಯೋ
ರಾಷ್ಟ್ರೀಯ ಉದ್ದೇಶ ಮುಂದುವರೆಯುತ್ತದೆ ಮತ್ತು ಪ್ರತಿಯೊಬ್ಬರ ಉದ್ದೇಶವಾಗುತ್ತದೆ. ಬಿಡುಗಡೆಯ ಹೋರಾಟ ಒಂದು ರೂಪ ಪಡೆಯುತ್ತದೆ ಮತ್ತು ದೇಶವನ್ನೆಲ್ಲ
ಒಳಗೊಳ್ಳುತ್ತದೆ. ಈ ಅವಧಿಯಲ್ಲಿ ನೈಸರ್ಗಿಕತೆ ಆಳುತ್ತದೆ. ಸ್ಥಳೀಯ ಪ್ರದೇಶಗಳಿಂದ ಅದು ಪ್ರಾರಂಭವಾಗುತ್ತದೆ.
ಪ್ರತೀ ಗುಡ್ಡದ ತುದಿಯಲ್ಲೂ ಸರ್ಕಾರದ ಪುಟ್ಟ ಪ್ರತಿಕೃತಿ ಕಾರ್ಯನಿರ್ವಹಿಸುತ್ತದೆ. ಕಣಿವೆಗಳಲ್ಲಿ,
ಅರಣ್ಯಗಳಲ್ಲಿ, ಹಳ್ಳಿಗಾಡುಗಳಲ್ಲಿ, ಎಲ್ಲೆಡೆ ರಾಷ್ಟೀಯ ಪ್ರಾಧಿಕಾರವೊಂದನ್ನು ಸಂಧಿಸಬಹುದಿತ್ತು.
ಪ್ರತಿಯೊಬ್ಬರ ಕಾರ್ಯ ದೇಶದ ಗೆಲುವನ್ನು ಸ್ಥಳೀಯವಾಗಿ ಖಚಿತಪಡಿಸುತ್ತದೆ. ಎಲ್ಲರನ್ನೂ ತೆಕ್ಕೆಗೆ ತೆಗೆದುಕೊಳ್ಳುವ
ಮತ್ತು ಮೂಲಭೂತವೂ ಆಗಿರುವ ತತಕ್ಷಣದ ನೀತಿಯೊಂದಿಗೆ ನಾವು ವ್ಯವಹರಿಸುತ್ತಿದ್ದೇವೆ. ತನ್ನಿಂದ ತಾನೇ
ರಚನೆಗೊಂಡ ಪ್ರತೀ ಗುಂಪಿನ ಉದ್ದೇಶವೆಂದರೆ ಸ್ಥಳೀಯ ಮಟ್ಟದಲ್ಲಿ ಬಿಡುಗಡೆ ಹೊಂದುವುದು. ದೇಶ ಎಲ್ಲೆಡೆ
ಇದೆ ಎಂದಾದರೆ ಅದು ಇಲ್ಲಿ ಇರಲೇಬೇಕು. ಒಂದು ಹೆಜ್ಜೆ ಮುಂದೆ ಎಂದಾದರೆ ಅದು ಇಲ್ಲಿ ಮಾತ್ರ ಇದೆ. ತಂತ್ರಗಾರಿಕೆಗಳು
ಒಂದಾಗುತ್ತವೆ. ರಾಜಕೀಯದ ಕಲೆ ಯುದ್ಧಕಲೆಯಾಗಿ ಪರಿವರ್ತನೆಗೊಳ್ಳುತ್ತದೆ. ಉಗ್ರನೊಬ್ಬ ಹೋರಾಟಗಾರನಾಗುತ್ತಾನೆ.
ಯುದ್ಧವನ್ನು ಹೂಡುವುದು ಮತ್ತು ರಾಜಕೀಯದಲ್ಲಿ ಸಕ್ರಿಯನಾಗುವುದು ಎರಡೂ ಒಂದೇ.
ಸಂಘರ್ಷ ಮತ್ತು ವೈಷಮ್ಯದ ಸಂಕುಚಿತ ಚಕ್ರದಲ್ಲಿ ವಾಸವಾಗಿರುವುದು ರೂಢಿಯಾಗಿರುವ ಈ ಸ್ಥಳಾಂತರಗೊಂಡ ಜನಸಂಖ್ಯೆ, ದೇಶದ ಸ್ಥಳೀಯ ಮುಖವನ್ನು
ಶುಚಿಗೊಳಿಸುವ ಮತ್ತು ಶುದ್ಧೀಕರಿಸುವ ಕಾರ್ಯದಲ್ಲಿ ಪ್ರಮಾಣಬದ್ಧವಾಗಿ ತೊಡಗಿತ್ತು. ನೈಜ ಸಾಮೂಹಿಕ
ಸಂತಸದ ಸ್ಥಿತಿಯಲ್ಲಿ ಶತ್ರು ಕುಟುಂಬಗಳು ಸ್ಲೇಟನ್ನು ಸ್ವಚ್ಛವಾಗಿ ಒರೆಸುವ ಮತ್ತು ಹಳೆಯದನ್ನು ಮರೆಯುವ
ನಿರ್ಧಾರ ಮಾಡಿದವು. ಸಮನ್ವಯಗಳು ವಿಪುಲವಾದವು. ಆಳದಲ್ಲಿ ಹುಗಿಯಲ್ಪಟ್ಟ ಸಾಂಪ್ರದಾಯಿಕ ದ್ವೇಷಗಳು
ಬೇರು ಸಹಿತ ಕೀಳಲೆಂದು ಅಗೆದು ತೆಗೆಯಲ್ಪಟ್ಟವು. ದೇಶದೆಡೆಗಿನ ನಂಬಿಕೆ ರಾಜಕೀಯ ಪ್ರಜ್ಞೆಯನ್ನು ಹೆಚ್ಚಿಸಿತು.
ಗುಂಪಿನ ಏಕತೆಯೊಂದಿಗೆ ದೇಶದ ಏಕತೆಯೂ ಪ್ರಾರಂಭವಾಯಿತು. ಹಳೆಯ ಬಾಕಿಯನ್ನೆಲ್ಲ ತೀರಿಸುವುದರೊಂದಿಗೆ
ಎಲ್ಲ ಅಸಮಾಧಾನಗಳೂ ತೆಗೆದುಹಾಕಲ್ಪಟ್ಟವು. ಆಕ್ರಮಣಕಾರರೊಂದಿಗಿನ ತಮ್ಮ ಚಟುವಟಿಕೆಗಳ ಕ್ಲಿಷ್ಟತೆಯಿಂದ
ದೇಶವನ್ನು ಅವಮಾನಿಸಿದ್ದ ಸ್ಥಳೀಯ ಜನರೂ ಕೂಡ ಈ ಶುಚಿಗೊಳಿಸುವ ಪ್ರಕ್ರಿಯೆಯಲ್ಲಿ ತೊಡಗಿದರು. ಮೋಸಗಾರರು
ಮತ್ತು ದುಡ್ಡಿಗಾಗಿ ಕೆಲಸ ಮಾಡಿದವರು ವಿಚಾರಣೆಗೊಳಪಟ್ಟು ಶಿಕ್ಷಿಸಲ್ಪಟ್ಟರು. ಸ್ವಹುಡುಕಾಟದ ಮುಂದುವರಿದ
ದಾರಿಯಲ್ಲಿ ಜನರು ಅವರ ಸಾರ್ವಭೌಮತ್ವವನ್ನು ಪ್ರತಿಪಾದಿಸಿದರು. ಪ್ರತೀ ಘಟಕವೂ ತನ್ನ ವಸಾಹತುಶಾಹಿ
ನಿಷ್ಕ್ರಿಯತೆಯ ಬದುಕಿನಿಂದ ಕುದಿಯುವ ಬಿಂದುವಿನ ಮಟ್ಟಕ್ಕೇರಿತು. ಅದ್ಭುತವಾದ ಉದಾರತೆ ಮತ್ತು ನಿಶ್ಯಸ್ತ್ರಗೊಳಿಸುವ
ಕರುಣೆಯ ಶಾಶ್ವತವಾದ ಪ್ರದರ್ಶನಕ್ಕೆ ಹಾಗೂ ‘ಕಾರಣ’ಕ್ಕೋಸ್ಕರ ಪ್ರಾಣ ನೀಡುವ ಪ್ರಶ್ನಾತೀತವಾದ ನಿರ್ಣಯಕ್ಕೆ ಹಳ್ಳಿಗಳು
ಸಾಕ್ಷಿಯಾದವು. ಇವೆಲ್ಲವೂ ಧಾರ್ಮಿಕ ಭಾತೃತ್ವ, ಚರ್ಚ್, ಅಥವಾ ಅತೀಂದ್ರಿಯ ಬೋಧನೆಗಳ ಸ್ಮರಣೆಯಾಗಿತ್ತು.
ಯಾವ ಸ್ಥಳೀಯ ಜನರೂ ದೇಶವನ್ನು ಮುನ್ನಡೆಸುತ್ತಿರುವ ಈ ಹೊಸ ತಾಳಕ್ಕೆ ಹೆಜ್ಜೆ ಹಾಕದಿರಲು ಸಾಧ್ಯವಿರಲಿಲ್ಲ.
ಪಕ್ಕದ ಬುಡಕಟ್ಟುಗಳಿಗೆ ಗುಪ್ತಚರರು ರವಾನಿಸಲ್ಪಟ್ಟಿದ್ದರು.
ದಂಗೆಯ ಮೊದಲ ಸಂಪರ್ಕ ವ್ಯವಸ್ಥೆಯನ್ನು ಅವರು ಪ್ರತಿನಿಧಿಸುತ್ತಿದ್ದರು ಮತ್ತು ಇನ್ನೂ ನಿಶ್ಚಲತೆಯಲ್ಲಿ
ಸಿಲುಕಿರುವ ಪ್ರಾಂತ್ಯಗಳಿಗೆ ಕ್ರಾಂತಿಯ ಗತಿಯನ್ನು ಪರಿಚಯಿಸುತ್ತಿದ್ದರು. ತಮ್ಮ ಮೊಂಡು ವೈರತ್ವಕ್ಕೆ
ಹೆಸರುವಾಸಿಯಾಗಿದ್ದ ಬುಡಕಟ್ಟುಗಳು ಹಿಗ್ಗು ಮತ್ತು ಕಣ್ಣೀರಿನ ನಡುವೆ ನಿರಾಯುಧರಾದರು ಮತ್ತು ಅವರ
ಸಹಾಯಹಸ್ತ ಚಾಚಿದರು. ರಾಷ್ಟೀಯ ವೃತ್ತ ವಿಸ್ತರಿಸುತ್ತ ಹೋಯಿತು ಮತ್ತು ಪ್ರತೀ ಹೊಸ ಆಮ್ಬುಶ್ ಅಥವಾ
ಹೊಚುದಾಳಿ ಕೂಡಾ ಹೊಸ ಬುಡಕಟ್ಟಿನ ಬರುವಿಕೆಯ ಸೂಚನೆಯಾಗಿತ್ತು. ಪ್ರತೀ ಹಳ್ಳಿಯೂ ಒಂದು ಸ್ವತಂತ್ರ
ಮಧ್ಯವರ್ತಿ ಮತ್ತು ರಿಲೇ ಪಾಯಿಂಟ್ ಆಯಿತು. ಬುಡಕಟ್ಟುಗಳ, ಹಳ್ಳಿಗಳ ನಡುವಿನ ಐಕಮತ್ಯ ರಾಷ್ಟ್ರಮಟ್ಟದಲ್ಲಿ
ಮೊದಲು ಶತ್ರುಗಳಿಗೆ ಹೆಚ್ಚುತ್ತಿರುವ ಆಘಾತಗಳಿಂದ ಗ್ರಹಿಸಬಲ್ಲುದಾಗಿತ್ತು. ಪ್ರತೀ ಹೊಸ ಗುಂಪು, ಕ್ಷಿಪಣಿಗಳ
ಗುಂಪಿನ ಪ್ರತೀ ಹೊಸ ಗುಂಡು, ಪ್ರತಿಯೊಬ್ಬರೂ ಶತ್ರುವನ್ನು ಬೇಟೆಯಾಡುತ್ತಿದ್ದಾರೆಂಬ, ಪ್ರತಿಯೊಬ್ಬನು
ತನ್ನ ನಿಲುವನ್ನು ತೆಗೆದುಕೊಳ್ಳುತ್ತಿದ್ದಾನೆಂಬ ಸೂಚನೆಯನ್ನೂ ನೀಡಿತ್ತು.
ಈ ಐಕಮತ್ಯ ಎರಡನೇ ಅವಧಿಯಲ್ಲಿ ಶತ್ರುಗಳ ಆಕ್ರಮಣ
ಪ್ರಾರಂಭವಾದಾಗ ಬಲಿಷ್ಠವಾಗಿ ಬೆಳೆಯಿತು. ಒಮ್ಮೆ ಬಂಡಾಯ
ಪ್ರಾರಂಭವಾದೊಡನೆ ವಸಾಹತುಶಾಹಿ ಶಕ್ತಿಗಳು ಪುನರ್ ವರ್ಗೀಕರಣ, ಪುನರ್ ಸಂಘಟನೆಗೊಂಡು ತಮ್ಮ ಹೋರಾಟದ
ತಂತ್ರಗಳನ್ನು ದಂಗೆಯ ರೀತಿಗೆ ಹೊಂದಿಸಿಕೊಂಡವು. ಈ ಆಕ್ರಮಣ ಮೊದಲ ಹಂತದ ಸುಖದ ಭ್ರಮೆ ಅಥವಾ ಯುಫೋರಿಯಾವನ್ನು
ಪ್ರಶ್ನೆಗೊಳಪಡಿಸಿತು. ಶತ್ರು ದಾಳಿಯನ್ನು ಆರಂಭಿಸಿ ಪ್ರಮುಖ ಸ್ಥಳಗಳಲ್ಲಿ ದೊಡ್ಡ ಸಂಖ್ಯೆಯ ತುಕಡಿಗಳನ್ನು
ಜಮಾಯಿಸಿತ್ತು. ಆರಂಭಿಕ ಹಂತದ ಆಶಾವಾದದಿಂದ ಸ್ಥಳೀಯ ಪಡೆಗಳು ನಿರ್ಭೀತಿಯಿಂದ ದಾಳಿ ಪ್ರಾರಂಭಿಸಿದವು.
ಗುಡ್ಡದ ಪ್ರತೀ ತುದಿಯನ್ನೂ ತಮ್ಮ ತಮ್ಮ ದೇಶವಾಗಿಸಿಕೊಂಡ ಗುಂಪುಗಳು ಹಿಮ್ಮೆಟ್ಟಲು ನಿರಾಕರಿಸಿದವು.
ನಷ್ಟ ಗಣನೀಯ ಪ್ರಮಾಣದಲ್ಲಿತ್ತು ಮತ್ತು ಬದುಕುಳಿದವರು ಶಂಕೆಯಿಂದ ನಿರ್ಗಮಿಸಿದರು. ಒಂದು ಅಗತ್ಯ ಪರೀಕ್ಷೆ
ಎಂಬಂತೆ ಸ್ಥಳೀಯ ಸಮುದಾಯ ದಾಳಿಯನ್ನು ಸಹಿಸಿಕೊಂಡಿತು. ದೇಶದ ಭವಿಷ್ಯ ಆ ಕ್ಷಣದಲ್ಲಿ ಪಣಕ್ಕೊಡ್ಡಲ್ಪಟ್ಟಿದೆಯೇನೋ
ಎಂಬಂತೆ ಅದು ಅಕ್ಷರಶಃ ವರ್ತಿಸಿತು. ಆದರೆ ಒಂದು ತತ್ವ ಸಿದ್ಧಾಂತವಾಗಿ ಇದು ವಿಫಲವಾಗುವುದು ಖಾತ್ರಿಯಾಗಿತ್ತು.
ಒಂದು ಆಳವಾದ ಲೌಕಿಕ ವಾಸ್ತವ ನಿನ್ನೆಯ ಸಂಭ್ರಮ ಮತ್ತು ಶಾಶ್ವತತೆಯ ಭ್ರಮೆಯನ್ನು ಸ್ಥಳಾಂತರಗೊಳಿಸಿತ್ತು.
ಕಟು ವಾಸ್ತವದ ಪಾಠಗಳು ಮತ್ತು ಮಶಿನ್ ಗನ್‍ನಿಂದ್ ಉರುಳಿಸಲ್ಪಟ್ಟ ದೇಹಗಳು, ಘಟನೆಗಳ ತೀವ್ರ ಮರುಚಿಂತನೆಗೆ
ಎಡೆಮಾಡಿದ್ದವು. ಬದುಕುಳಿಯುವಿಕೆಯ ಮೂಲಭೂತ ಪ್ರವೃತ್ತಿ ಲಗುಬಗೆಯ ಹೊಂದಿಕೊಳ್ಳುವ ಅಗತ್ಯವನ್ನುಂಟುಮಾಡಿತ್ತು.
ಹೋರಾಟ ತಂತ್ರದಲ್ಲಿನ ಈ ಹೊಂದಾಣಿಕೆ ಅಂಗೋಲಿಯನ್ನರ ವಿಮೋಚನಾ ಹೋರಾಟದ ಮೊದಲ ತಿಂಗಳುಗಳಲ್ಲಿ ಸಾಮಾನ್ಯವಾಗಿತ್ತು.
1961 ರ ಮಾರ್ಚ್ 15 ರಂದು ಅಂಗೋಲನ್ ರೈತರು ಎರಡು ಮೂರು ಸಾವಿರದ ಗುಂಪುಗಳಲ್ಲಿ ಪೋರ್ಚುಗೀಸ್ ವಾಸಸ್ಥಳದ
ಮೇಲೆ ದಾಳಿ ಮಾಡಿದರು. ಶಸ್ತ್ರಸಹಿತರಾದ, ನಿಶ್ಯಸ್ತ್ರರಾದ ಗಂಡಸರು, ಹೆಂಗಸರು ಮತ್ತು ಮಕ್ಕಳು ಎಲ್ಲರೂ
ಧೈರ್ಯ ಮತ್ತು ಉತ್ಸಾಹದಿಂದ ಅಲೆಯ ಮೇಲೆ ಅಲೆಬಂದಂತೆ ವಲಸೆಗಾರರ ವಾಸಸ್ಥಳ, ಮಿಲಿಟರಿ ಹಾಗೂ ಪೋರ್ಚುಗೀಸ್
ಧ್ವಜದ ಮೇಲೆ ಮುಗಿಬಿದ್ದರು. ಹಳ್ಳಿಗಳು ಮತ್ತು ವಿಮಾನ
ನಿಲ್ದಾಣಗಳು ಸುತ್ತುವರಿಯಲ್ಪಟ್ಟವು, ಆಕ್ರಮಣಕ್ಕೀಡಾದವು. ಆದರೆ ಸಾವಿರಾರು ಅಂಗೋಲನ್ನರು ಪೋರ್ಚುಗೀಸರ ಗುಂಡಿಗೆ ಬಲಿಯಾದರು. ನಿಜವಾಗಿಯೂ
ತಮ್ಮ ದೇಶವನ್ನು ಬಿಡುಗಡೆಗೊಳಿಸಬೇಕಾದರೆ ಬೇರೆ ತಂತ್ರಗಳನ್ನು ಅಳವಡಿಸಿಕೊಳ್ಳಬೇಕಿತ್ತೆಂದು ಅಂಗೋಲನ್
ಹೋರಾಟದ ನಾಯಕರಿಗೆ ಅರ್ಥವಾಗತೊಡಗಿತು. ಆದ್ದರಿಂದ ಅಂಗೋಲನ್ ನಾಯಕ ರಾಬರ್ಟೋ ಹೋಲ್ಡನ್ ಇತ್ತೀಚೆಗೆ ಅಂಗೋಲನ್ ರಾಷ್ಟ್ರೀಯ ಸೇನೆಯನ್ನು ಇತರ ವಿಮೋಚನಾ
ಹೋರಾಟ ಮತ್ತು ಗೆರಿಲ್ಲಾ ಯುದ್ಧ ತಂತ್ರಗಳ ಮಾದರಿಯಲ್ಲಿ ಪುನರ್ ಸಂಘಟಿಸಿದ್ದ. ಗೆರಿಲ್ಲಾ ತಂತ್ರದಲ್ಲಿ
ನೀವು ಯುದ್ಧದ ಸ್ಥಳದಲ್ಲಿ ಹೋರಾಟ ಮಾಡುವ ಬದಲು ಪ್ರಯಾಣಿಸುತ್ತಲೇ ಯುದ್ಧ ಮಾಡುತ್ತೀರಿ. ಪ್ರತೀ ಹೋರಾಟಗಾರನೂ
ತನ್ನ ಬೆತ್ತಲೆ ಕಾಲ್ಬೆರಳುಗಲ ನಡುವೆ ತಾಯ್ನಾಡಿನ ಮಣ್ನನ್ನು ಕೊಂಡೊಯ್ಯುತ್ತಾನೆ. ರಾಷ್ಟ್ರೀಯ ವಿಮೋಚನಾ
ಸೇನೆ ಎದುರಾಳಿಗಳನ್ನು ಒಂದು ಸ್ಥಳದ ನಿರ್ಣಾಯಕ ಯುದ್ಧದಲ್ಲಿ ಸೋಲಿಸುವ ಪಡೆಯಾಗಿರಲಿಲ್ಲ. ಹಳ್ಳಿಯಿಂದ
ಹಳ್ಳಿಗೆ ಪಯಣಿಸಿ, ಕಾಡಿಗೆ ಹಿಮ್ಮೆಟ್ಟಿ, ಎದುರಾಳಿಯ ಸೇನೆ ಕಣಿವೆಯಲ್ಲಿ ಬರುವಾಗ ಎದ್ದ ಧೂಳಿನ ಮೋದವನ್ನು
ನೋಡಿ ಖುಷಿಯಿಂದ ಕುಣದಾಡುವ ಸೇನೆಯಾಗಿತ್ತು. ಸೇನೆ ಜಮೆಯಾಗಲು ಪ್ರಾರಂಭಿಸಿತ್ತು. ತುಕಡಿಗಳು ತಮ್ಮ
ಸ್ಥಳವನ್ನು ಬದಲಾಯಿಸಿ ನಿರ್ದಿಷ್ಟ ಜಾಗಗಳನ್ನು ಸೇರಿಕೊಂಡವು. ಉತ್ತರದ ಜನರು ಪಶ್ಚಿಮದ ಕಡೆಗೆ ಹೊರಟರೆ,
ಬಯಲು ಪ್ರದೇಶದ ಜನರು ಏದುಸಿರು ಬಿಡುತ್ತ ಪರ್ವತಗಳ ಕಡೆಗೆ ಹೊರಟರು. ಶತ್ರು ತಾನು ಅನ್ವೇಷಣೆಯಲ್ಲಿ
ಇದ್ದೇನೆಂದು ಅಂದುಕೊಂಡರೂ ನಾವು ಹಿಂದೆಯೇ ಇದ್ದು ಶತ್ರು ನಿರೀಕ್ಷಿಸದÀ ಸಮಯದಲ್ಲಿ ದಾಳಿ ಮಾಡುತ್ತಿದ್ದೆವು.
ಈಗ ನಾವು ಅವರನ್ನು ಬೆಂಬತ್ತುತ್ತಿದ್ದೆವು. ತಮ್ಮ ಎಲ್ಲ ಆಧುನಿಕ ಆಯುಧಗಳ ಹೊರತಾಗಿಯೂ ಶತ್ರುಗಳು ತಾವು
ಸೋಲುತ್ತಿದ್ದೇವೆಂದು ಅಂದುಕೊಳ್ಳುತ್ತಿದ್ದರು. ನಾವು ಹಾಡುವುದನ್ನು ಎಂದಿಗೂ ನಿಲ್ಲಿಸಲಿಲ್ಲ.
ಆ ಸಂದರ್ಭದಲ್ಲಿ ತಮ್ಮ ಪಡೆಗಳಿಗೆ ಜ್ಞಾನ,
ಸೂಚನೆ ಮತ್ತು ನಿಯಮಾವಳಿಗಳನ್ನು ಟೀಕಿಸದೇ ಒಪ್ಪಿಕೊಳ್ಳುವ ತರಬೇತಿಯ ಅವಶ್ಯಕತೆಯಿದೆಯೆಂದು ಬಂಡಾಯದ
ಮುಖಂಡರು ಅರಿತುಕೊಂಡಿದ್ದರು. ಒಂದು ಸೈನ್ಯವನ್ನು ತಯಾರು ಮಾಡಬೇಕಾಗುತ್ತದೆ, ಒಂದು ಕೇಂದ್ರೀಯ ಪ್ರಾಧಿಕಾರ
ರಚನೆಯಾಯಿತು. ಆಯುಧಗಳಲ್ಲಿರುವ ವಿಭಜಿತ ದೇಶದ ಚಿತ್ರಣ ಪುನರ್ ಯೋಚನೆ ಮತ್ತು ಹೊಸ ದೃಷ್ಟಿಕೋನಕ್ಕೆ
ಕರೆ ನೀಡಿತ್ತು. ನಗರದ ರಾಜಕೀಯದ ನಿರರ್ಥಕ ವಾತಾವರಣವನ್ನು ಬಿಟ್ಟು ಓಡಿ ಹೋಗಿದ್ದ ಮುಖಂಡರು ರಾಜಕೀಯವನ್ನು
ಪುನರ್‍ಸಂಶೋಧಿಸಿದರು. ಇದು ರಾಷ್ಟ್ರ ನಾಯಕತ್ವದ ಸ್ಪಷ್ಟ ಚಿತ್ರಣಕ್ಕಾಗಿ ಜನರನ್ನು ಸಿದ್ಧಗೊಳಿಸಲು
ಹಾಗೂ ಹೋರಾಟಕ್ಕೆ ಕಿಚ್ಚು ತುಂಬಲು ಮಾತ್ರವಾಗಿತ್ತೇ ವಿನಹ ವಂಚಿಸುವ ಮಾಧ್ಯಮವಾಗಿಯೋ, ನಿದ್ರಾ ಪ್ರಚೋದಕವಾಗಿಯೋ
ಆಗಿರಲಿಲ್ಲ. ರೈತ ಬಂಡಾಯ, ಎಷ್ಟು ದೊಡ್ಡ ಮಟ್ಟದ್ದಾದರೂ ಸರಿ, ಅದಕ್ಕೆ ಸರಿಯಾದ ನಿಯಂತ್ರಣ ಮತ್ತು
ಮಾರ್ಗದರ್ಶನ ಇರಬೇಕೆಂದು ದಾಳಿಯ ಮುಖಂಡರು ತಿಳಿದಿದ್ದರು. ಆದ್ದರಿಂದ ಈ ಚಳುವಳಿಯನ್ನು ರೈತಬಂಡಾಯದಿಂದ
ಕ್ರಾಂತಿಕಾರಿ ಯುದ್ಧವಾಗಿಸಬೇಕಿತ್ತು. ಯಶಸ್ವಿಯಾಗಲು ಹೋರಾಟವು ಸ್ಪಷ್ಟ ಗುರಿಗಳು, ಉತ್ತಮವಾಗಿ ವ್ಯಾಖ್ಯಾನಿಸಲ್ಪಟ್ಟ
ವಿಧಾನವನ್ನು ಹೊಂದಿರಬೇಕು ಅಷ್ಟೇ ಅಲ್ಲ, ಈ ಒಂದು
ತುರ್ತು ವೇಳಾಪಟ್ಟಿಯ ಅಗತ್ಯ ಜನರಿಗೆ ಗೊತ್ತಾಗಬೇಕು. ಪ್ರಜೆಗಳ ಬಂಧಿಸಿಟ್ಟ ಅಸಮಾಧಾನವನ್ನು ಉಪಯೋಗಿಸಿಕೊಂಡು
ಮೂರು ದಿನ ಹೆಚ್ಚೆಂದರೆ ಮೂರು ತಿಂಗಳ ಕಾಲ ಬಂಡಾಯವನ್ನು ಹಿಡಿದಿಟ್ಟುಕೊಳ್ಳಬಹುದು, ಆದರೆ ರಾಷ್ಟ್ರೀಯ
ಯುದ್ಧವೊಂದನ್ನು ಗೆಲ್ಲಲು ಸಾಧ್ಯವಿಲ್ಲ. ಯುದ್ಧದಲ್ಲಿರುವ ವ್ಯಕ್ತಿಯ ಜಾಗೃತಿಯನ್ನು ಹೆಚ್ಚಿಸದೇ ಹೋದರೆ
ವ್ಯಕ್ತಿಯನ್ನು ಬದಲಾಯಿಸುವುದಾಗಲೀ ಅಥವಾ ಎದುರಾಳಿಯನ್ನು ಹಿಮ್ಮೆಟ್ಟಿಸುವುದಾಗಲೀ ಅಸಾಧ್ಯವಾದ ಮಾತು.
ಯುದ್ಧ ಮುಗಿಸಲು ವೀರೋಚಿತ ಹೋರಾಟ ಮತ್ತು ಯುದ್ಧ ರೋಧನದ ಸೌಂದರ್ಯ ಎರಡೂ ಸಾಕಾಗುವುದಿಲ್ಲ.
ಈ ವಿಮುಕ್ತಿಯ ಹೋರಾಟದ ವಿಸ್ತರಣೆಯನ್ನು ನಾಯಕರ ಬದ್ಧತೆಯನ್ನು ಘಾತಿಸುವ ಸಲುವಾಗಿನ ಸಂಗತಿಯ
ಜತೆ ಗಮನಿಸಬಹುದು. ಶತ್ರು ಈಗ ತನ್ನ ತಂತ್ರಗಳನ್ನು ಪರಿಷ್ಕರಿಸಿಕೊಳ್ಳುತ್ತಿದ್ದಾನೆ. ತನ್ನ ಹೇಯ ದಮನಕಾರೀ
ನೀತಿಗೆ ಅದೀಗ ನ್ಯಾಯಿಕ ಮತ್ತು ವೈಷಮ್ಯ ತಗ್ಗಿಸುವ, ವಿಭಜನ ಪ್ರಯತ್ನದ ಕುಶಲತೆಗಳನ್ನು ತಗ್ಗಿಸುವ
ಮತ್ತು ಮನ:ಶ್ಯಾಸ್ತ್ರೀಯ ಯುದ್ಧಗಳಲ್ಲಿ ತೊಡಗಿದೆ. ಎಲ್ಲೆಲ್ಲೂ ಅದು ಯಶಸ್ವಿಯಾಗಿ ಪ್ರಚೋದನಕಾರೀ ಗುಣವುಳ್ಳ
ಮಾಧ್ಯಮಗಳ ಮೂಲಕ ಪ್ರತಿರೋಧವನ್ನು ತೋರದ ರೀತಿಯಲ್ಲಿ ಬುಡಕಟ್ಟು ದಂಗೆಗಳನ್ನು ಚೋದಿಸುತ್ತದೆ. ವಸಾಹತುಶಾಹೀಯ
ಎರಡು ರೀತಿಯ ದೇಶೀಯ ಸಹವರ್ತಿ, ಸಹಯೋಗಿಗಳನ್ನು ತನ್ನ ಗುರಿಸಾಧನೆಗಾಗಿ ಬಳಸಿಕೊಳ್ಳುತ್ತಿದೆ. ಮೊದಲಿಗೆ,
ಸಾಮಾನ್ಯ ಸಂದೇಹಿಗಳು : ಮುಖ್ಯಸ್ಥರು, ಕೈದ್ ಎಂದು ಕರೆಯಲ್ಪಡುವ ಆಫ್ರಿಕನ್/ಮೂರಿಶ್ ಗವರ್ನರ್ ಅಥವಾ
ನಾಯಕ ಹಾಗೂ ಮಾಟಗಾರ ಅಥವಾ ಶಮನ್ ವೈದ್ಯರ ಮೂಲಕ ನಾವು ನೋಡಿದ ಹಾಗೆ ರೈತ ಸಮುದಾಯಗಳು ಮತ್ತು ಮಾಸ್
ಒಂದು ಏಕತಾನತೆಯ ಬದಲಾಗದ, ಗತದ ಜೀವನಶೈಲಿಗೆ ತಳ್ಳಲ್ಪಟ್ಟ, ಅವರು ತಮ್ಮ ಧಾರ್ಮಿಕ ನಾಯಕರುಗಳನ್ನು
ಹಾಗೂ ತಮ್ಮ ವಂಶಜರನ್ನು ಗೌರವಿಸುವುದನ್ನು ಕೂಡಾ ನೋಡಬಹುದು. ಒಂದು ಬುಡಕಟ್ಟು, ಒಂದೇ ಧ್ವನಿ ಮತ್ತು
ಸಹಮತದಿಂದ ಇಂತಹ ನಾಯಕರನ್ನು, ಅವರ ಹಾದಿಯನ್ನು ತುಳಿಯಲಾರಂಭಿಸುತ್ತವೆ. ಸಾಮ್ರಾಜ್ಯಶಾಹಿಯು ಇಂತಹ
ವಿಧೇಯ ಸೇವಕರ ಸೇವೆಯನ್ನು, ಅವರಿಗೆ ಕಿರು ಅದೃಷ್ಟ ಮತ್ತು ಕೊಡುಗೆಯನ್ನು ನೀಡುವುದರ ಮೂಲಕ ಗಳಿಸುತ್ತವೆ.
ವಸಾಹತುಶಾಹೀಯು ತನ್ನ ಕಾರ್ಯಚಟುವಟಿಕೆಗಾಗಿ ಕೆಳಸ್ತರ ಮತ್ತು ವರ್ಗಗಳೆಡೆಯಲ್ಲಿ ಹಲವು ಸಾಮಗ್ರಿಗಳನ್ನು
ಕಂಡುಕೊಂಡಿದೆ. ನಿಜವಾಗಿಯೂ ಕೂಡಾ ಈ ಎಲ್ಲಾ ರಾಷ್ಟ್ರೀಯ ಚಳುವಳಿಯೂ ಕೂಡಾ ಕೆಳಸ್ತರ ಮತ್ತು ವರ್ಗಗಳಿಗೆ
ಮಹತ್ವದ ಗಮನವನ್ನು ನೀಡಿದೆ. ಅದು ಬಂಡಾಯ ಮತ್ತು ಚಳುವಳಿಗಳಿಗೆ ಯಾವಾಗಲೂ ಸ್ಪಂದಿಸುತ್ತಾ ಸಾಗುತ್ತದೆಯಾದರೂ,
ಆದರೆ ಅಂತಹ ಬಂಡಾಯ ಮತ್ತು ಸಂಘಟಿತ ಪ್ರತಿರೋಧವು ಅದನ್ನು ಉಪೇಕ್ಷಿಸಿದರೆ, ಆಗ ಹಸಿವಿನಿಂದ ಬಳಲುವ
ಕೆಳಸ್ತರ-ವರ್ಗಗಳು, ಸಹಜವಾಗಿ ಸಂಘರ್ಷದಲ್ಲಿ ಭಾಗವಹಿಸುತ್ತವೆ. ಆದರೆ ಅದು ಈ ಬಾರಿ ದಮನಿಸುವ, ಶೋಷಿಸುವ
ಪಕ್ಷದವರ ಪರವಾಗಿ, ಶೋಷಿಸುವವ ಈ ರೀತಿಯ ಅವಕಾಶಗಳನ್ನು ಯಾವ ಕಾರಣಕ್ಕು ಕೈಚೆಲ್ಲುವುದಿಲ್ಲ. ಇಲ್ಲಿ
ಕರಿಯರು ಪರಸ್ಪರ ಒಬ್ಬರ ನಾಲಿಗೆಯನ್ನು ಇನ್ನೊಬ್ಬರು ಸೀಳುತ್ತಾರೆ. ಈ ಕೆಳಸ್ತರ ಮತ್ತು ವರ್ಗಗಳ ಪ್ರಮುಖ
ಲಕ್ಷಣವಾದ ರಾಜಕೀಯ ಪ್ರಜ್ಞೆಯ ಕೊರತೆ ಮತ್ತು ಅಜ್ಞಾನವನ್ನು ಶೋಷಿಸುವ ಪ್ರಜ್ಞಾಪೂರ್ವಕ ಕ್ರಿಯೆಯಾಗಿಯೇ
ಇದನ್ನು ಕಾಣಿಸುತ್ತಾರೆ. ಬಂಡಾಯವು, ಸಿದ್ಧಗೊಂಡ ಈ ಮಾನವ ಸಂಪತ್ತನ್ನು ಸಂಘಟಿಸದಿದ್ದರೆ, ಅದು ಸಾಮ್ರಾಜ್ಯಶಾಹಿಗಳ
ಮರ್ಸಿನರಿ (ವೇತನ ಪಡೆಯುವ ಸೈನಿಕರು) ಈ ಸೈನ್ಯವನ್ನು ಸೇರುತ್ತದೆ. ಅಲ್ಜೀರಿಯಾದಲ್ಲಿ ಅದು ಕೆಳಸ್ತರ
ಮತ್ತು ವರ್ಗಗಳಿಂದ ಆಯ್ದ ಹರ್ಕಿಸ್ ಮತ್ತು ಮೆಸಾಲಿಗಳಾಗಿರಬಹುದು. ಅಂಗೋಲಾದಲ್ಲಿ ಅದು ಪೋರ್ಚುಗೀಸ್
ಸೈನ್ಯಕ್ಕೆ ಪ್ರವೇಶ ಕಲ್ಪಿಸಿದ ರಸ್ತೆ ಗ್ಯಾಂಗ್‍ಗಳಿರಬಹುದು. ಕಾಂಗೋದಲ್ಲಿ ಅದು ಕಸಾಯಿ ಮತ್ತು ಕತಂಗಾ
ಪ್ರದೇಶದಲ್ಲಿ ಕಂಡುಬರುವ ಪ್ರಾದೇಶಿಕ ಮೆರವಣಿಗೆಗಳಿರಬಹುದು. ಲಿಯೋಪೋಲ್ಡ್‍ವಿಲ್ಲೆಯಲ್ಲಿ ಇದನ್ನು
ಕಾಂಗೋದ ವೈರಿಗಳು ‘ಲುಮುಂಬಾ’ನ ವಿರುದ್ಧ ಸಂಘಟಿಸಿದ ಸರಣಿ ಮತ್ತು ನಿಯತ ಸಭೆಗಳ ಸ್ವರೂಪದಲ್ಲಿ
ಕಾಣಬಹುದು.
ಬಂಡಾಯ ಅಥವಾ ದಂಗೆಯ ಶಕ್ತಿಯನ್ನು ವಿಶ್ಲೇಷಿಸುವ ಶತ್ರುವು, ಜಾಗತಿಕ ವಿಷಮತೆ, ಸಾಮ್ರಾಜ್ಯಶಾಹಿ
ತೆಕ್ಕೆಗೆ ಸಂದ ಜನರು ಹಾಗೂ ಕೆಲವು ಸಾಮಾಜಿಕ ವಿಭಾಗ
ಅಥವಾ ಸ್ತರಗಳ ಸೈದ್ಧಾಂತಿಕ ದೌರ್ಬಲ್ಯ ಹಾಗೂ ಆಧ್ಯಾತ್ಮಿಕ ಅದಕ್ಷತೆಯ ಬಗೆಗಿನ ಅಧ್ಯಯನಗಳ ಗುಂಡಿಯನ್ನು
ಬಹಳ ಆಳವಾಗಿ ತೋಡಲಾರಂಭಿಸುತ್ತವೆ. ಶತ್ರುವು ಇದೇ ಹೊತ್ತಿಗೆ ಒಂದು ವ್ಯವಸ್ಥಿತವಾದ ಬಂಡಾಯದ ಮುಖ್ಯ
ಭೂಮಿಕೆಯನ್ನು, ಬಡತನ, ಅವಮಾನ ಮತ್ತು ಜವಾಬ್ದಾರಿ ಇಲ್ಲದ ಸ್ಥಿತಿಯಿಂದ ತ್ರಸ್ಥ, ಗ್ರಸ್ಥವಾದ ಮಾನವ
ಸಮುದಾಯ ಮತ್ತು ಚಾಕ್ರಿಕ ಭೌಗೋಳೀಯ ರಾಶಿಯನ್ನು ಶೋಧಿಸುತ್ತದೆ. ಶತ್ರುವು ಇಂತಹ ಮಾನವರಾಶಿ ಅಥವಾ ಮಾಸ್
ಅನ್ನು ಅದಕ್ಕೆ ತುಸು ಅದೃಷ್ಟದ ಭವಿಷ್ಯವನ್ನು ಒದಗಿಸಬೇಕಾದರೂ ಕೂಡಾ ಬಳಸುತ್ತದೆ. ಶತ್ರುವು, ಬಯೋನೆಟ್
ಮೂಲಕ ಅಥವಾ ತುಸುಗೌರವ ಹೊಂದಿದ ಶಿಕ್ಷೆಗಳ ಮೂಲಕ ಒಂದು ನಿರಂತರತೆಯನ್ನು ಇದಕ್ಕಾಗಿ ಸೃಷ್ಟಿಸುತ್ತದೆ.
ಕಾಂಗೋದಲ್ಲಿ ಡಾಲರ್ ಮತ್ತು ಬೆಲ್ಜಿಯನ್ ಫ್ರಾಂಕ್‍ಗಳನ್ನು ಈ ಸಂಬಂಧ ಹರಿಸಲಾಗುತ್ತಿದೆ. ಇದೇ ಹೊತ್ತಿಗೆ
ಮಡಗಾಸ್ಕರ್‍ನಲ್ಲಿ ಹೋವಾ ಸಮುದಾಯದ ವಿರುದ್ಧದ ದೌರ್ಜನ್ಯಗಳು ಹೆಚ್ಚಿದುವು. ಅಲ್ಜೀರಿಯಾದಲ್ಲಿ ಯುದ್ಧ
ಖೈದಿಗಳನ್ನು ಫ್ರೆಂಚ್ ಸೈನ್ಯದಲ್ಲಿ ಭರ್ತಿ ಮಾಡಲಾಯ್ತು. ಈ ರೀತಿಯ ಬಂಡಾಯಗಳ ನಾಯಕರು ಅಕ್ಷರಶ: ದೇಶ
ಪತನ ಹೊಂದುವುದನ್ನು ಕಾಯುತ್ತಾರೆÉ. ಪ್ರತೀ ಬುಡಕಟ್ಟುಗಳನ್ನು ಹರ್ಖೀಸ್ ಅಥವಾ ಯುದ್ಧೋನ್ಮಾದಿಗಳನ್ನಾಗಿಸುತ್ತಾ,
ಪ್ರತಿಯೊಂದು ಹೋರಾಟವನ್ನು ರಾಷ್ಟ್ರೀಯತೆಯ ಹೋರಾಟವೆಂದು ಬಗೆಯುತ್ತಾ ಪ್ರತೀ ವ್ಯಕ್ತಿಯ ಕೈಯಲ್ಲೂ ಹೊಚ್ಚಹೊಸದಾದ
ಆಯುಧವನ್ನು ನೀಡಿ, ಒಂದು ಮತ್ತು ಇನ್ನೊಂದು ಬುಡಕಟ್ಟಿನ ನಡುವೆ ಎತ್ತಿಕಟ್ಟಲಾಯಿತು. ಈ ರೀತಿಯ ಬಂಡಾಯಗಳಲ್ಲಿನ
ಸಹಮತ, ಆರಂಭದ ಹೊತ್ತಿನಲ್ಲಿನ ವೈಭವ ಮತ್ತು ಶ್ರೀಮಂತಿಕೆಗಳನ್ನು ಕಡೆಗಣಿಸಲಾಯ್ತು. ರಾಷ್ಟ್ರೀಯ ಏಕತೆಯು
ಪತನಗೊಂಡಿತು. ದಂಗೆಯು ಒಂದು ಹಂತದಲ್ಲಿ ಅತಿ ಪ್ರಮುಖವಾಯ್ತು. ಸಮೂಹ, ಮಾಸ್ ಮತ್ತು ಸಮುದಾಯದ ರಾಜಕೀಯ
ಶಿಕ್ಷಣವು ಈಗ ಚಾರಿತ್ರಿಕ ಅಗತ್ಯದ ರೀತಿಯಲ್ಲಿ ಮನ್ನಿತವಾಯ್ತು.
ಈ ರೀತಿಯ ಸ್ವಯಂಸೇವಕತನವು, ಸಾಮ್ರಾಜ್ಯಶಾಹೀ ವ್ಯವಸ್ಥೆಗೆ ಒಳಪಟ್ಟ ಜನರು ಒಂದು ಆತ್ಯಂತಿಕ
ಸಾರ್ವಭೌಮಾಧಿಕಾರವನ್ನು ಸಾಧಿಸಲು ಕಾರಣವಾಯಿತು. ಅಧ:ಪತನಗೊಂಡ ರಾಷ್ಟ್ರದ ಹಲವು ಚೂರುಗಳನ್ನು ಒಟ್ಟಿಗೆ
ಸಾಧಿಸುವ ನಿಶ್ಚಿತತೆ ಕೂಡಾ ದೊರಕಿತು. ಇದರ ಮೂಲಕ ಸಮನ್ವಿತ ಮತ್ತು ಸಮವಾಗಿ ಅನುಭವಿಸಿದ ದೃಷ್ಟಿ ಮತ್ತು
ಶಕ್ತಿಗಳನ್ನು ಒಂದು ದೊಡ್ಡದಾದ ವಿಫಲತೆಯನ್ನು ತೊಡೆಯುವ ಸಂದರ್ಭದ ಮಾರ್ಗ ಮತ್ತು ಮಾಧ್ಯಮಗಳೆಂದು ತಿಳಿಯಲಾಯ್ತು.
ಈ ರೀತಿಯಲ್ಲಿ ಸಾಮ್ರಾಜ್ಯಶಾಹೀ ವ್ಯವಸ್ಥೆಗೆ ಒಳಪಟ್ಟ ವ್ಯಕ್ತಿಯು, ನೇರವಾಗಿ ಈ ಸಾಮ್ರಾಜ್ಯಶಾಹೀ ವ್ಯವಸ್ಥೆಯಿಂದ,
ಸಾರ್ವಭೌಮ ವ್ಯವಸ್ಥೆಯ ಸ್ವತಂತ್ರ ರಾಷ್ಟ್ರದ ಮತ್ತು ಅನುಭವವನ್ನು ಸಾಧಿಸುವ ಕ್ರಮವೆಂದೇ ಕಲ್ಪಿಸಿಕೊಳ್ಳುತ್ತಾನೆ.
ಇದು ಆತ ತನ್ನ ಅದಮ್ಯವಾದ ಭೌತಿಕ ಬಲ ನೆಚ್ಚಿದ ಕಾರಣದ ಮರೀಚಿಕೆಯನ್ನು ಅವಲಂಬಿಸಿರುತ್ತದೆ. ಈ ನೆಲೆಯಲ್ಲಿ
ಸಾಮ್ರಾಜ್ಯಶಾಹೀತ್ವವನ್ನು ಅನುಭವಿಸಿದ ವ್ಯಕ್ತಿಯೊಬ್ಬ ಜ್ಞಾನದ ಮಾರ್ಗದಲ್ಲಿ, ತಿಳುವಳಿಕೆಯ ಹಾದಿಯಲ್ಲಿ
ಯಾವುದೇ ರೀತಿಯ ಪ್ರಗತಿಯನ್ನು ಸಾಧಿಸಲು ಆತನ ಪ್ರಜ್ಞೆಯು ಅತ್ಯಂತ ಪ್ರಾಥಮಿಕವಾದುದಾಗಿದೆ. ನಾವು ನೋಡಿದ
ಹಾಗೆ ಸಾಮ್ರಾಜ್ಯಶಾಹಿತ್ವದಡಿಯ ವ್ಯಕ್ತಿಯೊಬ್ಬ ಅದಮ್ಯ ಉತ್ಸಾಹದಿಂದ ಸಶಸ್ತ್ರ ಹೋರಾಟದಲ್ಲಿ ಭಾಗವಹಿಸುತ್ತಾನೆ.
ರೈತರು ಈ ಹೊತ್ತಿನಲ್ಲಿ ಬಂಡಾಯವನ್ನು ಸೇರುತ್ತಾರೆ ಯಾಕೆಂದರೆ, ಅವರು ನಿಯಮಿತವಾದ ವಸಾಹತುಶಾಹೀ ವಿರೋಧದ
ಮನೋಭೂಮಿಕೆ ಹೊಂದಿರುವ ಕಾರಣ. ಒಂದು ದೀರ್ಘವಾದ ಅವಧಿಯಿಂದ ಇಲ್ಲಿಯವರೆಗೂ ರೈತರು ಹೆಚ್ಚು ಕಡಿಮೆ ತಮ್ಮ
ಹಿತಾಸಕ್ತಿಗಳನ್ನು ವಸಾಹತುಶಾಹೀ ಹೇರಿಕೆಯಿಂದ ಕಾಯ್ದುಕೊಂಡು ಬಂದಿದ್ದಾರೆ. ಬಹುಶ: ರೈತರ ಈ ರೀತಿಯ
ರಣತಂತ್ರ ಮತ್ತು ಮ್ಯಾಜಿಕ್‍ಗಾಗಿ ಅವರನ್ನು ನಾವು ಅಭಿನಂದಿಸಲೇಬೇಕು. ಅವರು ವಸಾಹತುಶಾಹಿಯನ್ನು, ವಿಜಯಿಯಲ್ಲದ
ವಿದ್ಯಮಾನವೆಂದೇ ಬಗೆಯುತ್ತಾರೆ. ರೈತನ ಘನತೆ, ವಿದೇಶೀಯ ವಸಾಹತು ರಚಿಸಿದ ಪಟ್ಟಣದಲ್ಲಿ ಸಂಚರಿಸಿ ಆತನ
ಹೆಗಲುಜ್ಜದಿರುವಿಕೆ ಮತ್ತು ಪ್ರತೀ ಬಾರಿಯೂ ಸಾಮ್ರಾಜ್ಯಶಾಹೀ ಆತನ ಹತ್ತಿರ ಬಂದಾಗಲೆಲ್ಲಾ ಅದನ್ನು
ಆತ ಕುಗ್ಗಿಸುವುದೇ ಮೊದಲಾದ ಕಾರ್ಯಗಳೇ ಆತ ವಸಾಹತುಶಾಹೀ ವಿರುದ್ಧ ಹೊಂದಿರುವ ದ್ವಂದ್ವ ಮತ್ತು ತಕರಾರನ್ನು
ಪುನರ್ ನೆನಪಿಸುವ ಸಂಗತಿಗಳಾಗಿವೆ.
ಜನಾಂಗೀಯ ವಿರೋಧಿ ಜನಾಂಗವಾದ ಮತ್ತು ಯಾವುದೋ ಒಂದೇ ಚರ್ಮ, ಬಣ್ಣ ಅಥವಾ ಜನಾಂಗದ ಪರವಾಗಿರುವ
ನಿರ್ಧಾರವು ವಸಾಹತು ಶೋಷಣೆಯ ವಿರುದ್ಧ ಶೋಷಿತರು ನೀಡುವ ಪ್ರತಿಕ್ರಿಯೆಯ ಲಕ್ಷಣವಾಗಿದೆ. ಇದು ಅತ್ಯಂತ
ಸ್ಪಷ್ಟವಾಗಿ ಅವರು ಹೋರಾಟದಲ್ಲಿ ಭಾಗಿಯಾಗುವುದರ ಕಾರಣವಾಗಿದೆ. ಆದರೆ ಯಾರೂ ಕೂಡಾ ಯುದ್ಧವನ್ನು ತಾಳಿಕೊಳ್ಳಲು
ಸಾಧ್ಯವಾಗುವುದಿಲ್ಲ. ಯಾರೂ ಕೂಡಾ ದೀರ್ಘಕಾಲದವರೆಗೆ ಒಂದು ಬಂಡಾಯವನ್ನು ಸಹಿಸಿಕೊಂಡು, ಜನಾಂಗೀಯ ಕಲಹದಿಂದ
ವಿಜಯ ಸಾಧಿಸಲು ತಮ್ಮ ಕುಟುಂಬವು ಮಾಯವಾಗುವುದನ್ನು ಕಾಣುತ್ತಾ ನಿಲ್ಲಲು ಸಾಧ್ಯವಾಗುವುದಿಲ್ಲ. ಜನಾಂಗೀಯ
ತರತಮ, ದ್ವೇಷ, ಮೋಸದಿಂದೊದಗುವ ಕೋಪ ಮತ್ತು ಪ್ರತೀಕಾರಕ್ಕಾಗಿನ ನ್ಯಾಯಬದ್ಧ ಬಯಕೆ ಮುಂತಾದವುಗಳು ಮಾತ್ರ
ಒಂದು ವಿಮುಕ್ತಿಯ ಹೋರಾಟವನ್ನು ಬೆಳೆಸಲು ಸಾಧ್ಯವಿಲ್ಲ. ಇಂತಹ ಪ್ರಜ್ಞೆಯ ಪ್ರತಿಫಲನಗಳು ಒಂದು ರೀತಿಯ
ಅಶಾಂತಿಯ, ಕ್ಷೋಭೆಯ ವಲಯವನ್ನು ಪ್ರವೇಶಿಸಿ ಅದೊಂದು ಅಕ್ಷರಶ: ದಯನೀಯ ದುಸ್ವಪ್ನ ಸಾದೃಶ ರಾಷ್ಟ್ರವನ್ನು
ಉತ್ಪಾದಿಸುತ್ತದೆ. ಅಂತಹ ರಾಷ್ಟ್ರದಲ್ಲಿ ಉಳಿದವರ ದೃಷ್ಟಿಯು ದೃಷ್ಟಿಹೀನವಾಗಿ ಅಲ್ಲಿ ಒಬ್ಬರ ರಕ್ತವು
ಇನ್ನೊಬ್ಬನ ರಕ್ತವನ್ನು ಬಯಸಿ, ಒಬ್ಬನ ಸಾವು ಉದಾಸೀನತೆಯಿಂದ ಇನ್ನೊಬ್ಬರ ಸಾವನ್ನು ಬಯಸುತ್ತಾ, ಈ
ರೀತಿಯ ಮೋಹಕವಾದ ಸ್ಫೋಟವು ಪ್ರಥಮ ಹಂತದಲ್ಲಿ ಕಂಡು, ಅದು ಅದರ ಮೇಲೆಯೇ ಉಣಬಿಟ್ಟರಂತೂ ಸಂಪೂರ್ಣ ಅಸಂಘಟಿತತೆ
ಮತ್ತು ವಿಚ್ಛಿದ್ರಕಾರಿ ಸ್ಥಿತಿಯನ್ನು ಕೂಡಾ ಉಂಟುಮಾಡುತ್ತದೆ. ಇದಲ್ಲದೇ ವಸಾಹತುಶಾಹಿಯು ಜಾರಿಗೆ
ತಂದ ಅಸಂಖ್ಯ ನಿಂದೆಗಳಂತೂ ಹೋರಾಟದಲ್ಲಿ ಭಾವನಾತ್ಮಕ ಅಂಶಗಳಾಗಿ ಒದಗಿ, ಶೋಷಿತ ಅಥವಾ ಹೋರಾಟಗಾರ ಅಥವಾ
ಉಗ್ರನು, ದ್ವೇಷಿಸಲು ಹಾಗೂ ವಸಾಹತುಶಾಹಿಗಳನ್ನು ಕೊಲ್ಲುವ ಸಂದರ್ಭದ ಹೊಸ ಹತಾರಗಳ ರೀತಿಯಲ್ಲಿ ಅವುಗಳು
ಗೋಚರಿಸುತ್ತದೆ. ಆದರೆ ದಿನ ಸರಿದಂತೆ, ದಂಗೆಯ ಹೋರಾಟಗಾರರೂ ಕೂಡಾ ದ್ವೇಷ ಮತ್ತು ಹಿಂಸೆಯನ್ನು ತಮ್ಮ
ಪ್ರಣಾಳಿಕೆಗಳಲ್ಲವೆಂಬುದನ್ನು ಕೂಡಾ ಅರಿಯುತ್ತಿದ್ದಾರೆ. ಈ ರೀತಿ ಸಾಕಷ್ಟು ಅಪರಾಧಗಳನ್ನೆಸಗುವ ಶತ್ರುವಿನ
ವಿರುದ್ಧ ಈ ರೀತಿ ಮುಖಾಮುಖಿಯಾಗುವುದು ಕೂಡಾ ಅನೀತಿಯಾಗಬಹುದು. ಇದಲ್ಲದೇ ಅದು ಈಗಾಗಲೇ ಬಂಡಾಯದ ಹೆಸರಿನಲ್ಲಿ
ವಿಘಟಿತವಾದ ಅಂತರಗಳನ್ನು ಇನ್ನೂ ಕೂಡಾ ಹೆಚ್ಚಿಸಬಹುದು. ಅದು ಇಡೀ ದಂಗೆಗೆ ಅಷ್ಟು ಜನಸಂದಣಿಯನ್ನು
ಕೂಡಾ ಹೇಗೆ ಎಳೆಯಬಹುದಾಗಿದೆ ? ಏನೇ ಸಂಗತಿಯಿದ್ದಾಗ್ಯೂ ಕೂಡಾ, ಶತ್ರುವು ಜನಸಮುದಾಯದ ಕೆಲವು ಪ್ರದೇಶ,
ನಾಯಕರ ಮತ್ತು ಸ್ತರಗಳ ಮೇಲೆ ವಿಜಯಿಯಾಗುವುದನ್ನು ಕೂಡಾ ಗಮನಿಸಬಹುದಾಗಿದೆ. ಈ ಹೋರಾಟದವಧಿಯಲ್ಲಿ ವಸಾಹತುಶಾಹಿಗಳು
ಹಾಗೂ ಪೋಲಿಸರು ತಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳುವಂತೆ ಹೇಳಿ, ಅವರು ಹೆಚ್ಚು ಮಾನವೀಯರಾಗಿರುವಂತೆ
ಕೂಡಾ ನಿರ್ದೇಶಿಸಲಾಯ್ತು. ಅವರು ಇನ್ನೂ ಸ್ವಲ್ಪ ಮುಂದೆ ಸಾಗಿ ‘ಸರ್’ ಅಥವಾ ‘ಮ್ಯಾಮ್’ ಎನ್ನುವ ಸಂಬೋಧನೆಗಳನ್ನು ಶೋಷಿತರ ಸಂಬಂಧಗಳ ಸಂದರ್ಭದಲ್ಲಿ ಬಳಸಲಾರಂಭಿಸಿದರು.
ಕೊನೆಗೆ ವಿಧೇಯತೆ ಮತ್ತು ಪರಿಗಣನೆಗೆ ಅಂತ್ಯವೇ ಇಲ್ಲವೆಂಬಂತೆ, ಮಿತಿಯಿಲ್ಲದಂತೆ ನಡೆದುಕೊಳ್ಳಲಾಯ್ತು.
ಈ ನೆಲೆಯಲ್ಲಿ ವಸಾಹತೀಕರಣಕ್ಕೊಳಪಟ್ಟವರು, ‘ಎಲ್ಲವೂ ಬದಲಾಗುತ್ತಿದೆ’ ಎಂಬ ಭಾವವನ್ನೂ ಕೂಡಾ ತಳೆದರು.
ವಸಾಹತೀಕರಣಕ್ಕೊಳಪಟ್ಟವರು, ಹಸಿವಿನಿಂದ ಸಾಯುವ ಮತ್ತು ಅವರ ಸಮಾಜ ವಿಘಟಿತವಾದ ಸಾಕ್ಷಿಯ ಅನುಭವದ
ನೆಲೆಯಿಂದ ಮಾತ್ರ ಶಸ್ತ್ರವನ್ನು ಹಿಡಿಯದೇ, ಅವರನ್ನು ವಸಾಹತುಶಾಹಿಗಳು ಪ್ರಾಣಿಗಳ ರೀತಿಯಲ್ಲಿ ಉಪಚರಿಸಿದ್ದರ
ಮತ್ತು ಅವರನ್ನು ಪಶುಗಳಿಗಿಂತ ಕಡೆಯಾಗಿ ನೋಡಿದ್ದರ ವಿರುದ್ಧವಾಗಿತ್ತು. ಅಂತಹ ಮನ:ಶ್ಯಾಸ್ತ್ರೀಯ ತಂತ್ರಗಳ
ಕಾರಣಗಳಿಂದ ಶೋಷಿತರ ಹಿಂಸೆ ಹರಡಿ ವಿಘಟಿತವಾಯ್ತು. ವಿದ್ವಾಂಸರು ಮತ್ತು ಸಮಾಜಶಾಸ್ತ್ರಜ್ಞರುಗಳು,
ವಸಾಹತುಶಾಹೀಯ ಮೋಸದ ಅರಿವನ್ನು ವಿಸ್ತರಿಸುವ ಮಾಧ್ಯಮಗಳಾಗಿ ಶೋಷಿತರಿಗೆ ಒದಗಿದರು. ವಸಾಹತುಶಾಹೀ ವಂಚನೆಯ
ಹಲವು ವಿಷಯ ಸಂಕೀರ್ಣತೆಯ ಮೇಲೆ ಮುಖ್ಯವಾಗಿ ಹತಾಶೆಯ ಮೇಲೆ, ವಸಾಹತುಶಾಹೀ ದುರಾಕ್ರಮಣದ ಸಂಕೀರ್ಣತೆ
ಮೇಲೆ ಮತ್ತು ವಸಾಹತೀಕರಣತೆಯ ಸಂಕೀರ್ಣತೆಯ ಮೇಲೆ ಹಲವು ಅಧ್ಯಯನಗಳನ್ನು ನಡೆಸಿದರು. ಹಣ ಮತ್ತು ಸಂಪತ್ತಿನ
ಅಮಿಷ ತೋರಿಸಿ, ಮನ:ಶ್ಯಾಸ್ತ್ರೀಯವಾಗಿ ವಸಾಹತೀಕರಣಕ್ಕೊಳಪಟ್ಟವರನ್ನು ನಿರಾಯುಧರನ್ನಾಗಿಸುವ ಪ್ರಯತ್ನಗಳ
ಮೂಲಕ ಪರಿಷ್ಕರಿಸಲಾಯಿತು. ಈ ರೀತಿಯ ಸಂಕುಚಿತ ವಿಧಾನಗಳು ಮತ್ತು ಬುದ್ಧಿವಂತ ನಡೆಗಳು ಸ್ವಲ್ಪ ಪ್ರಮಾಣದ
ಯಶಸ್ಸನ್ನು ಗಳಿಸಲೂ ಕೂಡಾ ಕಾರಣವಾದುವು. ವಸಾಹತೀಕರಣಕ್ಕೊಳಪಟ್ಟು, ಸಮುದಾಯ ಮತ್ತು ಜನರು ಅವರನ್ನು
ಮಾನವೀಯಗೊಳಿಸುವ ಎಲ್ಲಾ ಸಂಗತಿಗಳಿಗಾಗಿ ಹಸಿದರು, ಗ್ರಸ್ತರಾದರು. ಅದು ತೃತೀಯ ದರ್ಜೆಯಲ್ಲಿದ್ದರೂ
ಕೂಡಾ ಮತ್ತು ಈ ಸಂಕುಚಿತ ಕರಪತ್ರಗಳು ಹಾಗೂ ವಿಚಾರಗಳೂ ಕೂಡಾ ಅವರನ್ನು ಗಣನೀಯವಾಗಿ ಆಕರ್ಷಿಸಿದುವು.
ಅವರ ಪ್ರಜ್ಞೆ ನರಳಿತು ಹಾಗೂ ಸಣ್ಣ ಕಿಡಿಯಿಂದ ಹೊತ್ತಿದ ಬೆಂಕಿಯ ರೀತಿಯಲ್ಲಿ ತೀವ್ರ ಕಷ್ಟವನ್ನು ಹೊಂದಿತು.
ಅವರ ಆರಂಭದ ದಿನದ ತರತಮವಿಲ್ಲದ ಜ್ಞಾನೋದಯದ ತಹತಹಿಕೆಯನ್ನು ಒಂದು ನಿಗೂಢತೆಯ ಪ್ರಮಾಣಗಳ ಮೂಲಕ ಬೆದರಿಸಲಾಯ್ತು.
ಒಮ್ಮೆ ಕ್ರಾಂತಿಯ ಹಿಂಸಾತ್ಮಕ ಮತ್ತು ಸಹಮತದ ಬೇಡಿಕೆಗಳನ್ನು ಅವುಗಳು ಆಕಾಶದೆತ್ತರಕ್ಕೆ ಬೆಳೆದಿದ್ದರೂ
ಕೂಡಾ ಈಗ ಅವುಗಳನ್ನು ಸಾಧಾರಣ ಪ್ರಮಾಣಗಳಿಗಿಳಿಸಲಾಯ್ತು. ಈ ರೀತಿಯ ಕ್ರಿಯಾಶೀಲ ಮತ್ತು ಅನಿರೀಕ್ಷೀಯತೆಯ
ತೋಳವು(ಸಮುದಾಯ) ಹಸಿವು ಮತ್ತು ಸುಂಟರಗಾಳಿಗೆ ಸಿಲುಕಿ ಬಂಡಾಯದ ನಿಜವಾದ ಗಾಳಿಯಲ್ಲಿ ಊದಲಾರಂಭಿಸಿತು
ಮತ್ತು ಹರಿಯಿತು. ಈ ರೀತಿಯ ಮುಂದುವರಿದ ಹಾಗೂ ಮುಂದುವರಿಯುತ್ತಿರುವ ಬಂಡಾಯ ಅಥವಾ ಹೋರಾಟದಲ್ಲಿ ಸಂಪೂರ್ಣ
ಸಮರ್ಪಿಸಿಕೊಂಡು, ಗುರುತಿಸಲಾರದಂತಾಯಿತು ಮತ್ತು ಮನ್ನಣೆಯನ್ನು ಪಡೆಯದಂತಾಯಿತು.
ಬಂಡಾಯ ಅಥವಾ ಹೋರಾಟದ ನಾಯಕರು ಈ ರೀತಿಯ ವಸಾಹತೀಕರಣಕ್ಕೊಳಪಟ್ಟವರ ಅದಕ್ಷತೆಯನ್ನು ದಿಗಿಲಿನಿಂದ
ಕಂಡರು. ಮೊದಲಿಗೆ ಅವರು ಇದನ್ನು ಅಸ್ತವ್ಯಸ್ತವೆಂದು ಗುರುತಿಸಿದರು. ನಂತರ ಅವರು ವಸಾಹತೀಕೃತ ಜನರ
ಪ್ರಜ್ಞೆಯು ಪತಿತವಾಗದ ಅಥವಾ ಬೀಳದ ರೀತಿಯಲ್ಲಿ ವಿವರಣೆಯನ್ನು ನೀಡುವ ಸ್ಥಿತಿಯನ್ನು ಮನಗಂಡರು. ಈ
ತನ್ಮಧ್ಯೇ ಯುದ್ಧ ನಡೆಯುತ್ತಾ ಸಾಗಿತ್ತು. ಶತ್ರುವು ಸರಿಯಾಗಿ ಸಂಘಟಿತಗೊಂಡಿತ್ತು, ಶಕ್ತಿ ಸಂಚಯಿಸಿಕೊಂಡು
ವಸಾಹತೀಕೃತ ಜನರ ರಣನೀತಿಗಳನ್ನು ಕಬಳಿಸುತ್ತಿತ್ತು. ಈ ರಾಷ್ಟ್ರೀಯ ವಿಮೋಚನೆಯ ಹೋರಾಟವೆಂದರೆ, ಒಂದು
ದೊಡ್ಡ ಹೆಜ್ಜೆಯ ಮೂಲಕ, ಉಂಟಾಗಿರುವ ಕಂದಕವನ್ನು ಮುಚ್ಚುವ ಪ್ರಶ್ನೆಯಲ್ಲ. ಬದಲಿಗೆ ಒಂದು ಕಷ್ಟದ ಮತ್ತು
ದೈನಂದಿನ ನೆಲೆಯ ಮತ್ತು ವಸಾಹತುಶಾಹೀ ಅವಧಿಗಿಂತಲೂ ದೂರ ಸಾಗಿದ ದೀರ್ಘಾವಧಿಯ ನೋವಿನ ವಿಸ್ತøತ ಕಾವ್ಯ.
ಇನ್ನು ನಗರ, ಮಹಾನಗರಗಳಲ್ಲಂತೂ ವಸಾಹತುಶಾಹಿಗಳು ಸ್ಪಷ್ಟವಾಗಿ ಬದಲಾದರು. ನಮ್ಮ ಜನಗಳು ಖುಷಿಗೊಂಡರು.
ಅವರನ್ನು ಗೌರವಿಸಲಾಯ್ತು. ಒಂದು ಹೊಸ ದೈನಂದಿನತೆ ಸೃಷ್ಟಿಯಾಗಿ, ವಸಾಹತೀಕೃತ ಜನರು ಹೋರಾಟದಲ್ಲಿ ತೊಡಗಿಕೊಂಡರಾದರೂ
ಕೂಡಾ, ಹೋರಾಟದಲ್ಲಿ ಸಹಾಯ ಮಾಡಬೇಕಿದ್ದ ಜನರು ಮಾತ್ರ ಸಹಾಯ ಮಾಡಲಾಗಲಿಲ್ಲ. ಅವರು ತಮ್ಮ ಉದ್ದೇಶ ಈಗಾಗಲೇ
ಸಾಧಿತವಾದ ಬಗೆಗೂ ಕೂಡಾ ಯೋಚಿಸದಂತಾದರು. ಹೋರಾಟದ ನಿಜವಾದ ಉದ್ದೇಶಗಳನ್ನು ವಿವರಿಸಿದಾಗ ಅವರು ಅವುಗಳು
ಅಸಾಧ್ಯವೆಂಬ ಸಂಗತಿಗಳ ಬಗೆಗೂ ಚಿಂತಿಸದಂತಾಯಿತು. ಪುನ: ಸೃಷ್ಟೀಕರಣ ಅಗತ್ಯವಾಯ್ತು ಮತ್ತು ಜನರು ತಾವೆಲ್ಲಿಗೆ
ಹಾಗೂ ಹೇಗೆ ಹೋಗುತ್ತಿದ್ದೇವೆ ? ಎಂಬುದರ ಬಗೆಗೂ ಎಚ್ಚರ ತಾಳುವಂತಾಯಿತು. ಯುದ್ಧವೆಂದರೆ ಇಲ್ಲಿ ಒಂದು
ಯುದ್ಧವಲ್ಲ, ಬದಲು ಅನೇಕ ಸರಣಿ ಸ್ಥಳೀಯ ಹೋರಾಟಗಳಷ್ಟೇ. ಇಲ್ಲಿನ ಯಾವೊಂದು ಹೋರಾಟವೂ ಕೂಡಾ ತೀರಾ ನಿರ್ಣಾಯಕವಾದುದಲ್ಲ.
ಆದ್ದರಿಂದ ನಮ್ಮ ಸಾಮಥ್ರ್ಯವನ್ನು ಒಗ್ಗೂಡಿಸಿಟ್ಟುಕೊಳ್ಳಬೇಕಲ್ಲದೆ ಅದನ್ನು ವೃಥಾ ವ್ಯರ್ಥಗೊಳಿಸದಿರುವುದು
ಅವಶ್ಯವಾಗಿದೆ. ವಸಾಹತುಶಾಹಿಯು ಹೊಂದಿರುವ ನಿಹಿತಬಲವು ವಸಾಹತುಗೊಂಡ ಜನರ ಬಲಕ್ಕಿಂತ ಎಷ್ಟೋ ಪಾಲು
ಶ್ರೀಮಂತವೂ, ಸದೃಢವೂ ಆಗಿದೆ. ಆಗ ಸಂಘರ್ಷವು ಮುಂದುವರಿದು ಶತ್ರುಬಲವು ತನ್ನ ರಕ್ಷಣೆಗೆ ಮುಂದಾಗುತ್ತದೆ.
ಸಂಘರ್ಷದ ಈ ನಿರ್ಣಾಯಕ ಘಟ್ಟವು ಇಂದೋ, ನಾಳೆಯೋ ಸಾಧಿತವಾಗುವುದಿಲ್ಲ. ಯಾವಾಗ ವಸಾಹತುಶಾಹಿಯು, ಈ ಸಂಘರ್ಷವನ್ನು
ನಿಲ್ಲಿಸಿ ವಸಾಹತುಜನರ ಸಾರ್ವಭೌಮತೆಯನ್ನು ಒಪ್ಪುವುದೋ, ತನ್ನ ಹಿತಾಸಕ್ತಿಯ ಸಂರಕ್ಷಣೆಯೂ ಹೌದು ಎಂಬುದನ್ನು
ಅರಿಯುತ್ತದೆಯೋ ಆಗಲೇ, ಈ ಘಟ್ಟವನ್ನು ತಲುಪಿಯಾಗಿರುತ್ತದೆ. ಹಾಗಾಗಿ ಶತ್ರುವಿನ ಅವಸಾನದೊಂದಿಗೆ ಮುರಿದು
ಹೋಗುವ ಪ್ರಕ್ರಿಯೆ ಇದಲ್ಲ. ಸಂಘರ್ಷದ ಉದ್ವೇಗಗಳು, ಅದು ಆರಂಭವಾಗುವಾಗ ಇದ್ದಂತೆ ಈಗಲೂ ಅಸ್ಪಷ್ಟವಾಗಿ
ಉಳಿಯುವಂತಿಲ್ಲ. ಅದು ಸ್ಪಷ್ಟಗೊಳ್ಳಬೇಕಾಗುತ್ತದೆ. ನಾವು ಎಚ್ಚರಿಕೆ ವಹಿಸದೆ ಇದ್ದಲ್ಲಿ, ಪ್ರತೀ ಬಾರಿ
ವಸಾಹತುಶಾಹಿಯು ರಿಯಾಯಿತಿಗಳನ್ನು ನೀಡಲು ಮುಂದಾದಾಗಲೂ ಮತ್ಯಾಕೆ ಯುದ್ಧ ? ಎಂಬ ಪ್ರಶ್ನೆಯನ್ನು ಜನ
ಕೇಳುವ ಅಪಾಯ ಇದ್ದೇ ಇರುತ್ತದೆ. ಆಕ್ರಮಣಕಾರನ ತಿರಸ್ಕಾರಕ್ಕೆ ಮತ್ತು ನಮ್ಮ ಮೇಲೆ ಬಿಗಿಹಿಡಿತ ಸಾಧಿಸುವ
ಅವನ ದೃಢನಿಲುಮೆಗೆ ನಾವು ಅದೆಷ್ಟು ಒಗ್ಗಿಹೋಗಿದ್ದೇವೆಂದರೆ, ಔದಾರ್ಯದಂತೆ ತೋರುವ, ಸದಾಶಯದಂತೆ ಭಾಸವಾಗುವ
ಅವನ ನಡೆಯನ್ನು, ಆಶ್ಚರ್ಯದಿಂದ ಮತ್ತು ಅದು ಪರಮಾನಂದದ ಸಂಗತಿ ಎಂಬಂತೆ ನಾವು ಸ್ವಾಗತಿಸುತ್ತೇವೆ.
ಗೆದ್ದೇ ಬಿಟ್ಟೆವು ಎಂದು ಭಾವಿಸುವ ವಸಾಹತು ಜನರು ವಿಜಯಗೀತೆ ಮೊಳಗಿಸುತ್ತಾರೆ. ವಸಾಹತುಶಾಹಿಯು ನೀಡುವ
ರಿಯಾಯಿತಿಗಳು, ಒಬ್ಬ ಹೋರಾಟಗಾರನನ್ನು ವಾಸ್ತವ ಸಂಗತಿಗಳ ಕುರಿತು ಕುರುಡನನ್ನಾಗಿಸದಂತೆ ತಡೆಯಲು ಅವನಿಗೆ
ಸ್ಪಷ್ಟವಾದ ಸಮಗ್ರವಾದ ತಿಳುವಳಿಕೆಯನ್ನು ಹಾಗೂ ವಿವರಣೆಯನ್ನು ನೀಡಬೇಕಾಗುತ್ತದೆ. ಕೇವಲ ರಿಯಾಯಿತಿಯಷ್ಟೇ
ಆಗಿರುವ ಈ ರಿಯಾಯಿತಿಗಳು ಸಮಸ್ಯೆಯ ಮೂಲವನ್ನು ಹುಡುಕಿ ಪರಿಹರಿಸುವುದಿಲ್ಲ. ಇನ್ನು ವಸಾಹತು ಜನರ ದೃಷ್ಟಿಕೋನದಿಂದ
ಹೇಳುವುದಾದರೆ, ಎಲ್ಲಿಯವರೆಗೆ ಒಂದು ರಿಯಾಯಿತಿಯು ವಸಾಹತು ಆಡಳಿತ ವ್ಯವಸ್ಥೆಯ ಅಂತರಂಗವನ್ನೇ ಕೆಣಕುವುದಿಲ್ಲವೋ,
ಅಲ್ಲಿಯವರೆಗೆ ಆ ರಿಯಾಯಿತಿಯು ಸಮಸ್ಯೆಯ ಮೂಲಕ್ಕೆ ಸ್ಪಂದಿಸುವುದಿಲ್ಲ.
ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ, ಆಕ್ರಮಣಕಾರನು ತನ್ನ ಹಿಂಸಾತ್ಮಕ ನಡೆಗಳನ್ನು ಹಂತಹಂತವಾಗಿ
ನಿಲ್ಲಿಸತೊಡಗುತ್ತಾನೆ. ಹಿಂಸೆಯನ್ನು ನಿಲ್ಲಿಸುವ ಈ ನಾಟಕೀಯ ನಡೆಯು ಆಕ್ರಮಣಕಾರನು ಭರಿಸಬೇಕಾಗಿದ್ದ
ವೆಚ್ಚವನ್ನು ಕಡಿತಗೊಳಿಸುವುದಷ್ಟೇ ಅಲ್ಲದೆ, ತನ್ನ ಸಾಮಥ್ರ್ಯದ ಮೇಲೆ ಏಕಾಗ್ರ ಗಮನವನ್ನು ಸಾಧಿಸಲು
ಅವನಿಗೆ ಅವಕಾಶ ಒದಗಿಸುತ್ತದೆ. ಆದರೆ ಒಂದು ದುಬಾರಿ ಬೆಲೆಯನ್ನು ತೆರಬೇಕಾಗಿದೆ. ಅದು ಯಾವ ಬೆಲೆ ಎಂದರೆ;
ಒಂದು ದೇಶದ ಭವಿಷ್ಯದ ಮೇಲೆ ಸಾಧಿಸುವ ಹೆಚ್ಚು ಬಲತ್ಕಾರಯುತವಾದ ಹಿಡಿತದ ಬೆಲೆ. ಹೀಗೆ ಮುಖವಾಡ ಹೊತ್ತು,
ಧರಿಸಿ ಬರುವ ರಿಯಾಯಿತಿಗಳಿಗೆ ಮಾರುಹೋಗಿ, ದುಬಾರಿ ಬೆಲೆಯನ್ನು ತೆತ್ತು ಕೊನೆಯಲ್ಲಿ ಸಂಪೂರ್ಣ ಗುಲಾಮಗಿರಿಗೆ
ಒಳಗಾದ ದೇಶಗಳಿವೆ ಎಂಬುದಕ್ಕೆ ಇತಿಹಾಸದಲ್ಲಿ ನಿದರ್ಶನಗಳಿವೆ. ಕೆಲವು ರಿಯಾಯಿತಿಗಳು ನಮ್ಮನ್ನು ಬಂಧಿಸುವ
ಸಂಕೋಲೆಗಳೇ ಆಗಿವೆ ಎಂಬ ಐತಿಹಾಸಿಕ ನಿಯಮವನ್ನು ಜನರು ಮತ್ತು ಪ್ರತಿ ಹೋರಾಟಗಾರನು ಅರಿಯಬೇಕು. ಈ ಸಂಗತಿಯನ್ನು
ಸ್ಪಷ್ಟಪಡಿಸುವ ಪ್ರಯತ್ನವೇ ನಡೆಯದಿದ್ದರೆ, ಕೆಲವು ರಾಜಕೀಯ ಪಕ್ಷಗಳ ನಾಯಕರು ತಮ್ಮನ್ನಾಳಿದ ವಸಾಹತು
ದೊರೆಗಳೊಂದಿಗೆ ಹೇಗೆ ಅಪವಿತ್ರ ಸಂಧಾನದಲ್ಲಿ ತೊಡಗುವುದು ಸುಲಭವಾಗಿದೆ ಎಂಬ ವಿಷಯವು ಆಶ್ಚರ್ಯವಾಗಿ
ತೋರುತ್ತದೆ. ವಸಾಹತುಶಾಹಿಯು ತನಗೆ ಲಾಭವಿಲ್ಲದೆ ಏನನ್ನೂ ಅಂದರೆ ಧರ್ಮಾರ್ಥ ನೀಡುವುದಿಲ್ಲ ಎಂಬುದನ್ನು
ವಸಾಹತು ಜನರಿಗೆ ಮನಗಾಣಿಸಬೇಕು. ವಸಾಹತು ಜನರು ತಮ್ಮ ಸೈನಿಕ ಅಥವಾ ರಾಜಕೀಯ ಹೋರಾಟಗಳ ಮೂಲಕ ಏನೆಲ್ಲಾ
ಸಾಧಿಸಿ ಪಡೆಯುತ್ತಾರೋ, ಅವು ವಸಾಹತುಶಾಹಿಯ ಸದ್ಬುದ್ಧಿಯ ಅಥವಾ ಅವರ ವಿಶಾಲಹೃದಯದ ಪರಿಣಾಮವಾಗಿ ಪಡೆದದ್ದಲ್ಲ.
ಈ ತೆರದ ರಿಯಾಯಿತಿಯ ಕೊಡುಗೆಗಳನ್ನು ಕೊಡದೆ ವಸಾಹುಶಾಹಿಗೆ ಗತ್ಯಂತರವಿರಲಿಲ್ಲ. ಈ ತೆರದ ಕೊಡುಗೆಗಳು
ಸಾಧ್ಯವಾದದ್ದು ವಸಾಹತುಶಾಹಿಯಿಂದಲ್ಲ, ಬದಲಾಗಿ ತನ್ನಿಂದಲೇ ಎಂದು ವಸಾಹತು ಪ್ರಜೆಯೊಬ್ಬ ತಿಳಿಯಬೆಕು.
ಬ್ರಿಟಿಷ್ ಸರಕಾರವು ಆಫ್ರಿಕನ್ ಜನರಿಗೆ ಕೀನ್ಯಾದ ಅಸೆಂಬ್ಲಿಯಲ್ಲಿ ಹೆಚ್ಚುವರಿ ಸೀಟುಗಳನ್ನು ನೀಡಲು
ತೀರ್ಮಾನಿಸಿದ್ದು, ಬ್ರಿಟಿಷ್ ಸರಕಾರ ನೀಡಿದ ಕೊಡುಗೆ ಅಥವಾ ರಿಯಾಯಿತಿ ಎಂದು ತಿಳಿಯುವುದು ಮೂರ್ಖತನವಾಗುತ್ತದೆ.
ಕೀನ್ಯಾದ ಜನರೇ ಈ ಕೊಡುಗೆಗಳನ್ನು ಅಥವಾ ರಿಯಾಯಿತಿಗಳನ್ನು ಗೆದ್ದರು ಎಂಬುದೇ ನಿಚ್ಚಳವಾದ ಸತ್ಯವಲ್ಲವೇ? ವಸಾಹತು ಜನರು ಮತ್ತು ತಮ್ಮ ಸ್ವತ್ತು, ಸೌಲಭ್ಯಗಳನ್ನು ಕಳಕೊಂಡ
ಜನರು ತಾವು ಇದುವರೆಗೂ ಹೊಂದಿದ್ದ ಮಾನಸಿಕತೆಯಿಂದ ಹೊರಬರಬೇಕು. ವಸಾಹತು ಜನರು ತಮ್ಮ ವಸಾಹತು ಪ್ರಭುಗಳಿಂದ,
ಪರಮಾವಧಿ ಎಂದರೆ ರಿಯಾಯಿತಿಗಳನ್ನು ಒಪ್ಪಬಹುದೇ ವಿನಹ, ಎಂದಿಗೂ ಸಂಧಾನ ಅಥವಾ ರಾಜಿಯನ್ನಲ್ಲ.
ವಸಾಹತು ಜನರು ಒಂದು ವ್ಯವಸ್ಥಿತವಾದ ಸಂಘಟನೆ ಮತ್ತು ಮಾರ್ಗದರ್ಶನಕ್ಕೆ ಒಳಪಟ್ಟಾಗಲಷ್ಟೆ, ಈ
ಎಲ್ಲಾ ಸ್ಪಷ್ಟೀಕರಣ, ತದನಂತರದ ವಿವೇಕ ಜಾಗೃತಿ ಮತ್ತು ತಮ್ಮ ಸಮಾಜಗಳ ಇತಿಹಾಸವನ್ನು ಅರಿಯುವ ಪ್ರಯತ್ನಗಳು
ಸಾಧ್ಯವಾಗುತ್ತವೆ. ಈ ಸಂಘಟನೆ ಸ್ಥಾಪನೆಯಾಗುವುದು ಯಾರಿಂದ ಎಂದರೆ, ದಂಗೆಯು ಆರಂಭಗೊಂಡಾಗ ಪಟ್ಟಣಗಳಿಂದ
ಬಂದ ಕ್ರಾಂತಿಕಾರಿ ಗುಂಪುಗಳಿಂದ ಮತ್ತು ದಂಗೆಯು ತೀವ್ರಗೊಂಡಂತೆ ಗ್ರಾಮಾಂತರದತ್ತ ನುಗ್ಗಿದ ಜನರಿಂದ.
ಈ ಜನರ ಗುಂಪೇ ದಂಗೆಯ ಸಂದರ್ಭದಲ್ಲಿ ರೂಪುತಳೆಯುವ ಮತ್ತು ಉಗಮವಾಗುವ ರಾಜಕೀಯ ಸ್ವರೂಪದ ಸಂಸ್ಥೆಯಾಗುತ್ತದೆ.
ಇನ್ನುಳಿದಂತೆ, ರೈತಾಪಿಗಳು ಪ್ರಾಯೋಗಿಕ ಅನುಭವಗಳ ಮೂಲಕ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳುತ್ತಾ
ಜನರ ಹೋರಾಟವನ್ನು ಮುನ್ನಡೆಸಲು ಸಮರ್ಥರಾಗುತ್ತಾರೆ. ಒಂದು ಜಾಗೃತಿಯ ಅಲೆ ಉಂಟಾಗಿ, ಯುದ್ಧಸನ್ನದ್ಧವಾದ
ದೇಶ ಮತ್ತು ಅದರ ನಾಯಕರುಗಳ ನಡುವೆ ಪರಸ್ಪರರಿಗೆ ಬೆಂಬಲದ ಅಲೆಯಾಗಿ ಪ್ರವಹಿಸುತ್ತದೆ. ಸಾಂಪ್ರದಾಯಕ
ಸಂಸ್ಥೆಗಳನ್ನು ನಾಶಪಡಿಸಲಾಗುತ್ತದೆ ಮತ್ತು ಕೆಲವೊಮ್ಮೆ ಅವುಗಳನ್ನು ಅಕ್ಷರಶ: ರೂಪಾಂತರಿಸಲಾಗುತ್ತದೆ.
ಸ್ಥಳೀಯ ವಿವಾದಗಳನ್ನು ನಿಭಾಯಿಸುತ್ತಿದ್ದ ಟ್ರಿಬ್ಯೂನಲ್‍ಗಳನ್ನು, ಪಂಚಾಯತಿ, ಡೆಜೆಮಾಗಳನ್ನು ಮತ್ತು
ಹಳ್ಳಿಯ ಸಭೆಗಳನ್ನು ಕ್ರಾಂತಿಕಾರಿ ಟ್ರಿಬ್ಯೂನಲ್‍ಗಳಾಗಿ ಮತ್ತು ರಾಜಕೀಯ ಮಿಲಿಟರಿ ಲಕ್ಷಣಗಳುಳ್ಳ
ಸಮಿತಿಗಳಾಗಿ ರೂಪಾಂತರಿಸಲಾಗುತ್ತದೆ. ಪ್ರತಿಯೊಂದು ಹೋರಾಟದ ತುಕಡಿಯಲ್ಲಿ ಮತ್ತು ಹಳ್ಳಿಯಲ್ಲಿ, ಜನರಿಗೆ
ಗೊಂದಲವಿರುವ ವಿಷಯಗಳ ಬಗ್ಗೆ ಸ್ಪಷ್ಟ ತಿಳಿವು ಮೂಡಿಸಲು ರಾಜಕೀಯ ಕಮಿಷನರ್‍ಗಳ ಒಂದು ಪಡೆಯನ್ನು ನೇಮಿಸಲಾಗುತ್ತದೆ.
ಕೆಲವು ವಿಷಯಗಳ ಕುರಿತು ನಿಷ್ಠುರವಾಗಿಯಾದರೂ ಮಾತನಾಡಲು ಅಂಜದ ಇಂತಹ ಕಮಿಷನರ್‍ಗಳು ಇರದಿರುತ್ತಿದ್ದರೆ
ಜನ ದಿಕ್ಕು ತಪ್ಪಿದಂತಾಗುತ್ತಿದ್ದರು. ಉದಾಹರಣೆಗೆ, ಶಸ್ತ್ರಸಜ್ಜಿತನಾದ ಒಬ್ಬ ಹೋರಾಟಗಾರನಿಗೆ ನಿರ್ಣಾಯಕವಾದ
ಒಂದು ಹೋರಾಟ ಆರಂಭವಾದದ್ದೇ ನಮಗೆ ಗೊತ್ತಿಲ್ಲ ಎಂಬಂತೆ, ದೇಶದ ವಿದ್ಯಮಾನಗಳ ಬಗೆಗೆ ವಿಮೂಢರಾಗಿ ತಮ್ಮದೇ
ವ್ಯವಹಾರಗಳಲ್ಲಿ ಮುಳುಗಿಹೋದ ಸ್ಥಳೀಯ ಜನರನ್ನು ಕಂಡಾಗ ಕಿರಿಕಿರಿಯೂ, ಹತಾಶೆಯೂ ಉಂಟಾಗುತ್ತದೆ. ಪಟ್ಟಣಗಳಲ್ಲಿ
ಜನಜೀವನ ಎಂದಿನಂತೆ ಶಾಂತವಾಗಿ ಸಾಗುತ್ತಿರುವುದನ್ನು ಕಂಡ ರೈತಾಪಿಗಳಿಗೆ, ದೇಶದ ಬಹುದೊಡ್ಡ ವರ್ಗವೊಂದು
ಎಲ್ಲವನ್ನೂ ನಿರುಮ್ಮಳವಾಗಿ ವೀಕ್ಷಿಸುತ್ತಾ ಸುಖವಾಗಿರುವುದನ್ನು ಕಂಡು ಹತಾಶೆಯೂ, ಕಹಿ ಭಾವವೂ ಉಂಟಾಗುತ್ತದೆ.
ಇವೆಲ್ಲವುಗಳಿಂದ ಜಿಗುಪ್ಸೆಗೊಂಡ ರೈತಾಪಿಗಳು ಪಟ್ಟಣಿಗರ ಕುರಿತಾಗಿ ತಿರಸ್ಕಾರದ ಮತ್ತು ವಿರೋಧದ ಭಾವವನ್ನು
ತಳೆಯುತ್ತಾರೆ. ಈಗ ರಾಜಕೀಯ ಕಮಿಷನರ್‍ಗಳ ಕೆಲಸವೇನೆಂದರೆ ಈ ಹೋರಾಟಗಾರರಲ್ಲಿ ಸೂಕ್ಷ್ಮ ತಿಳುವಳಿಕೆಯನ್ನು
ಮೂಡಿಸಿ, ದೇಶದ ಕೆಲವು ನಿರ್ದಿಷ್ಟ ಗುಂಪುಗಳಿಗೆ ತಮ್ಮದೇ ಆದ ನಿರ್ದಿಷ್ಟ ಹಿತಾಸಕ್ತಿಗಳಿದ್ದು, ಆ
ಹಿತಾಸಕ್ತಿಗಳು ಎಲ್ಲಾ ಸಂದರ್ಭದಲ್ಲಿಯೂ ರಾಷ್ಟ್ರೀಯ ಹಿತಾಸಕ್ತಿಯ ಜೊತೆ ತಾಳೆಯಾಗುವುದಿಲ್ಲ ಎಂಬ ಅರಿವನ್ನು
ಮೂಡಿಸುವುದಾಗಿದೆ. ರಾಷ್ಟ್ರೀಯ ಸ್ವಾತಂತ್ರ್ಯವು ಬಹುಸ್ತರದ ವಾಸ್ತವಗಳನ್ನು ತೆರೆದಿಟ್ಟು, ಈ ವಾಸ್ತವಗಳು
ಕೆಲವು ಸಂದರ್ಭಗಳಲ್ಲಿ ಭಿನ್ನವಾಗಿಯೂ, ಪರಸ್ಪರ ವಿರೋಧವುಳ್ಳವಾಗಿಯೂ ಇವೆ ಎಂಬ ಅರಿವು ಜನರಿಗೆ ಮೂಡುತ್ತದೆ.
ಹೋರಾಟದ ಈ ಹಂತದಲ್ಲಿಯೇ ವಿವರಣೆಯ, ಸ್ಪಷ್ಟೀಕರಣದ ಕಾರ್ಯಮಹತ್ವದ್ದಾಗಿದ್ದು, ಇದರ ಫಲವಾಗಿಯೇ ಜನರು
ತಾವು ಹೊಂದಿದ್ದ ಸಮಗ್ರ ತರತಮಪ್ರಜ್ಞೆ ಇಲ್ಲದ ರಾಷ್ಟ್ರೀಯವಾದದ ಬದಲಾಗಿ ಒಂದು ಸಾಮಾಜಿಕ ಮತ್ತು ಆರ್ಥಿಕ
ಪ್ರಜ್ಞೆಯನ್ನು ಮೂಡಿಸಿಕೊಳ್ಳುತ್ತಾರೆ. ಹೋರಾಟದ ಆರಂಭದ ದಿನಗಳಲ್ಲಿ ತಮ್ಮ ವಸಾಹತು ದೊರೆಗಳಂತೆಯೇ
ಕರಿಯ ವರ್ಸಸ್ ಬಿಳಿಯ, ಅರಬ್ ವರ್ಸಸ್ ಇನ್‍ಫಿ ಎಂಬಂತಹ ಪುರಾತನ ದ್ವಂದ್ವವಾದವನ್ನು ಅಳವಡಿಸಿಕೊಂಡಿದ್ದ
ವಸಾಹತು ಜನರು ಕ್ರಮೇಣ ಭಿನ್ನವಾದ ಸಾಮಾಜಿಕ ಅರಿವನ್ನು ಪಡೆಯುತ್ತಾರೆ. ಕೆಲವು ಕರಿಯರು ಬಿಳಿಯರಿಗಿಂತ
ಹೆಚ್ಚು ಬಿಳಿಯರಾಗಬಹುದೆಂದೂ, ಸ್ವಾತಂತ್ರ್ಯ ಬಂದ ರಾಷ್ಟ್ರಧ್ವಜದ ಅಡಿಯಲ್ಲಿ ಎಲ್ಲವೂ ಸರಾಗವಾಗಿ ಸರಿಹೋಗಿ,
ಕೆಲವು ಜನರು ತಾವು ಹೊಂದಿರುವ ಸವಲತ್ತುಗಳನ್ನು, ಹಿತಾಸಕ್ತಿಗಳನ್ನು ಬಿಟ್ಟು ಬಿಡುತ್ತಾರೆ ಎಂದೇನೂ
ಇಲ್ಲ. ನಮ್ಮ ನಡುವೆಯೇ ಇರುವ ನಮ್ಮದೇ ನೆಲದ ಕೆಲವು ಗುಂಪುಗಳು ಈ ಯುದ್ಧ ಸಂದರ್ಭದಲ್ಲೂ ಕೊಂಚವೂ ವಿಚಲಿತರಾಗದೆ,
ಈ ಸಂದರ್ಭವನ್ನೇ ತಮ್ಮ ಲಾಭಕ್ಕೆ ಬಳಸಿಕೊಂಡು ತಮ್ಮ ಲೌಕಿಕ ಸಂಪದವನ್ನು, ಸಾಮಥ್ರ್ಯವನ್ನು ಕ್ಷಿಪ್ರಗತಿಯಲ್ಲಿ
ವೃದ್ಧಿಸಿಕೊಳ್ಳುತ್ತಿರುವ ಅಂಶ ಜನರ ಅರಿವಿಗೆ ಬರುತ್ತದೆ. ಈ ಲಾಭಕೋರ ಗುಂಪುಗಳು ಯುದ್ಧದ ಸಂದರ್ಭದಲ್ಲಿ
ಜನರ ವೆಚ್ಚದಲ್ಲಿ ತಾವು ಸಾಕಷ್ಟು ಗಳಿಕೆ ಮಾಡಿಕೊಳ್ಳುತ್ತಾರೆ. ಇನ್ನು ಈ ಹೋರಾಟದಲ್ಲಿ ಪಾಲ್ಗೊಂಡ
ಜನರಂತೂ ರಾಷ್ಟ್ರದ ನೆಲವನ್ನು ತಮ್ಮ ರಕ್ತದಿಂದ ತೋಯಿಸುತ್ತ ಎಂತಹ ತ್ಯಾಗಕ್ಕೂ ಸಿದ್ಧರಾದವರಾಗಿರುತ್ತಾರೆ.
ತನ್ನ ಸೀಮಿತ ಸಂಪನ್ಮೂಲಗಳಿಂದ ವಸಾಹತುಶಾಹಿಯ ವಿರುದ್ಧ ಯುದ್ಧಕ್ಕೆ ನಿಂತ ಒಬ್ಬ ಹೋರಾಟಗಾರ, ವಸಾಹತುಸಾಹಿಯ
ದೌರ್ಜನ್ಯಗಳನ್ನು ನಾಶಪಡಿಸುತ್ತಲೇ ಪರೋಕ್ಷವಾಗಿ ಮತ್ತೊಂದು ಶೋಷಣೆಯ ವ್ಯವಸ್ಥೆಯನ್ನು ಕಟ್ಟುತ್ತಿರುತ್ತಾನೆ.
ಈ ಅರಿವು ಅತ್ಯಂತ ಯಾತನಾಮಯವಾಗಿದ್ದು, ಹೋರಾಟಗಾರರನ್ನು ಕ್ರುದ್ಧರನ್ನಾಗಿಸುತ್ತದೆ. ಮೊದಲು ಇದು
‘ಒಳಿತು’ ಒಂದು ಕಡೆ, ‘ಕೆಡುಕು’ ಒಂದು ಕಡೆ ಎಂಬಂತೆ ಹೋರಾಟಗಾರನಿಗೆ ತಿಳಿಯಲು ಸುಲಭವಾಗುವಂತೆ ಸರಳ
ಸಮೀಕರಣ ಸಾಧ್ಯವಾಗಿತ್ತು. ಆರಂಭದಲ್ಲಿದ್ದ ಭ್ರಾಮಕ, ಅವಾಸ್ತವಿಕ ತಿಳುವಳಿಕೆಗಳು ಕಳೆದುಹೋಗಿ, ಪ್ರಜ್ಞೆಯನ್ನೇ
ಪಲ್ಲಟಗೊಳಿಸುವ ಅರೆ-ನೆರಳೊಂದು ಜನರ ಮನಸ್ಸನ್ನು ಆವರಿಸುತ್ತದೆ. ಶೋಷಣೆ ಎಂಬ ಅಧರ್ಮದ ಈ ರೂಪಕ್ಕೆ
ಯಾವುದೇ ನಿರ್ದಿಷ್ಟ ಮುಖ ಎಂಬುದಿಲ್ಲದೆ, ಅದು ಕರಿಯ ಮುಖವನ್ನಾದರೂ, ಅರಬ್ ಮುಖವನ್ನಾದರೂ ಧರಿಸಬಹುದು
ಎಂಬ ಅರಿವಾಗುತ್ತದೆ. ಈ ತೆರದ ದ್ರೋಹವನ್ನು ಕಂಡು ಜನರು ಹೌಹಾರುತ್ತಾರೆ. ಆದರೆ ಇದು ರಾಷ್ಟ್ರದ್ರೋಹ
ಆಗಿರದೆ, ಸಮಾಜದ್ರೋಹ ಆಗಿರುತ್ತದೆ. ವಿಚಾರಶೀಲರಾಗಲು ತಾವು ತುಳಿಯುತ್ತಿರುವ ಈ ಪ್ರಯಾಸಕರ ಪಥದಲ್ಲಿ,
ಮೊದಲು ಶೋಷಕನ ಕುರಿತಾಗಿ ತಾವು ತಳೆದಿರುವ ಸರಳೀಕೃತ ತಿಳುವಳಿಕೆಗಳನ್ನು ಜನರು ತೊಡೆದುಹಾಕಬೆಕು. ಶೋಷಕನ
ಕುರಿತಾದ ಜನರ ಅಭಿಪ್ರಾಯ ಬದಲಾಗತೊಡಗುತ್ತದೆ. ವಸಾಹತುಶಾಹಿಯ ಒಳಗೇ ಇರುವ ಕೆಲವು ಜನರು ಅದು ಒಳಗೊಂಡಿರುವ
ಕ್ರಿಮಿನಲ್ ಉನ್ಮಾದದ ವಾತಾವರಣದಿಂದ ಪ್ರಭಾವಿತರಾಗದೆ ಅದರಿಂದ ಹೊರಗುಳಿಯುತ್ತಾರೆ. ಇಂತಹ ಜನರನ್ನು
ವಸಾಹತುಶಾಹಿಯು ಬದಿಗೆ ಸರಿಸುತ್ತದೆ. ಈ ಜನರು ವಸಾಹತುಶಾಹಿ ನಡೆಸುವ ಯುದ್ಧವನ್ನು ಖಂಡಿಸುತ್ತಾರೆ.
ದೊಡ್ಡ ವಿಪ್ಲವ ಸಂಭವಿಸುವುದು ಯಾವಾಗೆಂದರೆ, ವಸಾಹತುಶಾಹಿಯ ಒಳಗಿನ ಜನರೇ ಅದರ ದೌರ್ಜನ್ಯಗಳನ್ನು ಖಂಡಿಸಿ
‘ನೇಟಿವ್ಸ್’ ಪರ ನಿಲುವು ತಾಳಿ, ಕಷ್ಟ, ಹಿಂಸೆ ಸಾವುಗಳಿಗೆ ಸ್ವಪ್ರೇರಣೆಯಿಂದ ತಮ್ಮನ್ನು ತಾವು ಅರ್ಪಿಸಿಕೊಳ್ಳುವಾಗ.
ಇಂತಹ ನಿದರ್ಶನಗಳ ಕಾರಣದಿಂದ ವಸಾಹತು ಜನರು ವಿದೇಶ ಆಕ್ರಮಣಕಾರನ ಕುರಿತು ಹೊಂದಿರುವ ದ್ವೇಷಭಾವವು
ಒಂದಿಷ್ಟು ಶಾಂತವಾಗುತ್ತದೆ. ವಸಾಹತುಶಾಹಿಯ ಒಳಗಿನ ಇಂತಹ ಭಿನ್ನ ಜನರನ್ನು ವಸಾಹತುಗೊಂಡ ಜನರು ತುಂಬು
ಹೃದಯದಿಂದ ಸ್ವಾಗತಿಸಿ, ಭಾವಪರವಶರಾಗಿ ತಮ್ಮ ಪೂರ್ಣ ವಿಶ್ವಾಸವನ್ನು ಅವರಲ್ಲಿ ಇರಿಸುತ್ತಾರೆ. ಕ್ರೂರಿಯೂ
ರಕ್ತದಾಹಿಯೂ ಆದ ಮಲತಾಯಿ ಎಂಬಂತೆ ಬಿಂಬಿತವಾದ ಮಹಾನಗರಗಳಲ್ಲಿ ಭಿನ್ನ ಧ್ವನಿಗಳು ತಲೆ ಎತ್ತುತ್ತವೆ.
ಇವರು ತಮ್ಮದೇ ಸರಕಾರದ ಯುದ್ಧನೀತಿಗಳನ್ನು ಖಂಡಿಸುತ್ತಾರೆ. ವಸಾಹತು ಜನರ ರಾಷ್ಟ್ರೀಯ ಹಿತಾಸಕ್ತಿಗಳನ್ನು
ಗಣನೆಗೆ ತೆಗೆದುಕೊಳ್ಳಬೇಕೆಂದು ವಾದಿಸುತ್ತಾರೆ. ಕೆಲವು ಸೈನಿಕರು ವಸಾಹತುಶಾಹಿ ಸೇನಾವ್ಯವಸ್ಥೆಯನ್ನು
ತೊರೆದು ಬರುತ್ತಾರೆ, ಇನ್ನು ಕೆಲವು ಜನರು ಸ್ವಾತಂತ್ರ್ಯದ ವಿರುದ್ಧ ಹೋರಾಡಲು ನಿರಾಕರಿಸುತ್ತಾರೆ.
ಇಂತವರನ್ನು ಜೈಲಿಗಟ್ಟಲಾಗುತ್ತದೆ. ಜನರ ಸ್ವಾತಂತ್ರ್ಯದ ಹಕ್ಕಿಗಾಗಿ ಮತ್ತು ತಮ್ಮ ವ್ಯವಹಾರಗಳನ್ನು
ತಾವೇ ನಿಭಾಯಿಸುವ ಹಕ್ಕಿಗಾಗಿ ಇಂತಹ ಜನರು ಜೈಲಿನಲ್ಲಿ ಬಂಧಿಗಳಾಗಿ ಕಷ್ಟ ಅನುಭವಿಸುತ್ತಾರೆ.
ವಸಾಹತುಶಾಹಿ, ಈಗ ಹೆಚ್ಚುಕಡಿಮೆ ಸಾರ್ವಜನಿಕ ಶತ್ರುವಾಗಿಲ್ಲ. ವಸಾಹತುಶಾಹೀ ಜನಸಂಖ್ಯೆ ಮತ್ತು
ಸಮುದಾಯದ ಕೆಲವರು ತೀರಾ ಹತ್ತಿರವಾಗುತ್ತಿದ್ದಾರೆ. ಅನಂತತೆಯನ್ನೇ ಮೀರಿ, ಸ್ಥಳೀಯ ಜನರಿಗಿಂತಲೂ ಕೂಡಾ
ಅವರು ರಾಷ್ಟ್ರೀಯ ಹೋರಾಟಕ್ಕೆ ಹತ್ತಿರವಾಗುತ್ತಿದ್ದಾರೆ. ಎರಡೂ ಕಡೆಗಳಲ್ಲಿ ಕೂಡಾ ಈ ಜನಾಂಗೀಯ ಮತ್ತು
ಜನಾಂಗೀಯ ತಾರತಮ್ಯದ ಆಯಾಮ ಧುತ್ತನೆ ಮೇಲೆತ್ತುತ್ತಿರುತ್ತದೆ. ಮುಸ್ಲಿಂ ಒಬ್ಬ ಅಥವಾ ಎಲ್ಲಾ ಕರಿಯವನೊಬ್ಬನಿಗೆ
ಸ್ವಯಂ ಚಾಲತವಾಗಿ ವಿಶ್ವಾಸಮತವನ್ನು ನೀಡಲಾಗಿಲ್ಲ. ಪ್ರತಿ ಬಾರಿಯೂ ಕೂಡಾ ವಸಾಹತುಶಾಹಿಯು ಪ್ರವೇಶಿಸುತ್ತಿದ್ದಂತೆಲ್ಲಾ,
ಒಬ್ಬನು ಈಗ ಕೋವಿ ಅಥವಾ ಬಂದೂಕನ್ನು ಎತ್ತಿಕೊಳ್ಳುವಂತಿಲ್ಲ. ಪ್ರಜ್ಞೆ ಈಗ ಪಾಶ್ರ್ವಿಕ, ಅಂತತೆಯ ಮತ್ತು
ಬದಲಾಗುವ ಸತ್ಯದ ರೀತಿಯಲ್ಲಿ ಪತನವನ್ನು ಕಾಣುತ್ತಿದೆ. ಇವೆಲ್ಲವೂ ಕೂಡಾ, ಒಬ್ಬರು ಯೋಚಿಸುವ ಹಾಗೆ
ಬಹು ಕಷ್ಟಕರವಾದುದು. ವ್ಯವಸ್ಥಿತ ಸಂಘಟನೆ ಮೂಲಕ ಮತ್ತು ನಾಯಕರುಗಳ ಸೈದ್ಧಾಂತಿಕ ಸ್ತರದ ಮೂಲಕ ಜನರನ್ನು
ಪ್ರೌಢರನ್ನಾಗಿಸುವುದು ಕೂಡಾ ಸೂಕ್ತವಾದುದಾಗಿದೆ. ಹೋರಾಟ ಹೆಚ್ಚುತ್ತಿದ್ದಂತೆಲ್ಲಾ, ಸೈದ್ಧಾಂತಿಕತೆಯ
ಶಕ್ತಿಯು ವಿಸ್ತøತವಾಗುವುದು ಮತ್ತು ಶಕ್ತಿಯುತವಾಗುವುದು. ಶತ್ರುವಿನ ಚಲನೆ, ವಿಜಯದ ಗತಿ ಮತ್ತು ಹಿನ್ನಡೆ
ಕೂಡಾ ಸಿದ್ಧಾಂತದ ಬಲವರ್ಧಿಸುವುದು. ನಾಯಕತ್ವವೂ ಕೂಡಾ ಅನುಭವದ ಮೂಲಕ ತನ್ನ ತಪ್ಪುಗಳನ್ನು ಪ್ರಕಟಪಡಿಸಿ,
ತನ್ನ ಶಕ್ತಿ ಮತ್ತು ಅಧಿಕಾರವನ್ನು ಪ್ರದರ್ಶಿಸುತ್ತದೆ. ಈ ರೀತಿಯಲ್ಲಿ ಒಂದೊಂದು ಹೆಜ್ಜೆ ಮುಂದಿಡಲು
ಕಲಿತಾಗಲೆಲ್ಲಾ ಪ್ರತಿ ಬಾರಿಯೂ, ಪ್ರಜ್ಞೆ ಮಾತ್ರ ಒಂದು ಹೆಜ್ಜೆ ಹಿಂದೆ ಸರಿಯುತ್ತದೆ. ಸ್ಥಳೀಯ ಮಟ್ಟದ
ಪ್ರತಿಯೊಂದು ಹೋರಾಟವೂ ಕೂಡಾ, ಪ್ರತೀ ಗ್ರಾಮ ಮತ್ತು ತನ್ನ ಜಾಲದ ವಿದ್ಯಮಾನಗಳನ್ನು, ಸಂಗತಿಗಳನ್ನು
ಎತ್ತಿಕೊಳ್ಳುತ್ತದೆ. ಈ ರೀತಿಯ ಪ್ರತಿರೋಧ ಅಥವಾ ಹೋರಾಟವೇ ತನ್ನ ವೈಚಾರಿಕತೆಯನ್ನು ಸಾಬೀತುಗೊಳಿಸುತ್ತಾ,
ಜನರ ಪ್ರಜ್ಞೆಯನ್ನು ಮುನ್ನಡೆಸುವ ಸಂದರ್ಭ ಅದು ಪ್ರತೀ ಬಾರಿಯೂ ಕೂಡಾ ತನ್ನ ಪ್ರೌಢಿಮೆಯನ್ನು ಮೆರೆಯುತ್ತದೆ.
ಇದರ ಹೊರತಾಗ್ಯೂ, ತನ್ನ ಚಲನೆ ಮತ್ತು ಚಳುವಳಿಯ ಒಳಗೆಯೇ ಕೆಲವರು ಮತ್ತು ಕೆಲವು ಸಂಗತಿಗಳು ಹಲವು ಅರ್ಥ
ಸಾಧ್ಯತೆ ಮತ್ತು ಅನುಭವಗಳನ್ನು ನೀಡಿದರೆ ಅವುಗಳು ಅಪಾಯಕಾರಿಯೆಂದೂ ಮತ್ತು ಅವುಗಳು ಒಂದು ರೀತಿಯ ಜನಪ್ರಿಯ
ಐಕ್ಯತೆಯನ್ನು ಭಂಗಿಸುತ್ತದೆಂದೂ ತಿಳಿಯುತ್ತಾರೆ. ವಿಮುಕ್ತಿಗಾಗಿ, ಹೋರಾಡಿದ ಜನರ ಸಂಘರ್ಷದ ವ್ಯಾಪಕತೆ
ಮತ್ತು ರಾಷ್ಟ್ರೀಯ ಹೋರಾಟದ ತತ್ವಗಳಡಿಯಲ್ಲಿ ರೂಪಿತವಾದ ನಾಯಕತ್ವ ಕೂಡಾ ಭೀತ್ಯವಾಗುತ್ತದೆಂದೂ ತಿಳಿಯುತ್ತಾರೆ.
ಅಲ್ಲಿ ಒಂದು ರೀತಿಯ ತಿಳಿಯಲು ಕಷ್ಟವಾದ ಮತ್ತು ಬಾಧಿತ ಅಸಭ್ಯತೆ ಮತ್ತು ತಿರಸ್ಕಾರವಿದೆ. ಇದೇ ಹೊತ್ತಿಗೆ
ಕ್ರಾಂತಿಕಾರಿ ಎಂದು ಪರಿಗಣಿತವಾದ ವೈಯುಕ್ತಿಕ ಪ್ರಕರಣಗಳು ಮೂಲತ: ಹಾಗಿದ್ದರೂ ಕೂಡಾ ಅಲ್ಲಿ ಇನ್ನೊಂದು
ರೀತಿಯ ಅಸಭ್ಯತೆ ಮತ್ತು ಪಾಶವೀತನವು, ಮೊದಲಿನದಕ್ಕೆ ಹೋಲುವ ಹಾಗಿನ ಪ್ರತಿ ಬಂಡಾಯಾತ್ಮಕ, ಸಾಹಸೀ ಮತ್ತು
ಅರಾಜಿಕವಾಗಿಯೂ ಗೋಚರಿಸುತ್ತದೆ. ಈ ರೀತಿಯ ಪರಿಶುದ್ಧವಾದ, ಸಮಗ್ರ ಪಾಶವೀಯತೆ ಅದು ತಕ್ಷಣ ಉಂಟಾಗಿ
ಹೊಂದಿದುದಲ್ಲವಾದರೂ ಕೂಡಾ, ಅದು ನಿಸ್ಸಂದೇಹವಾಗಿ ಚಳುವಳಿಯನ್ನು ಕೆಲವೇ ವಾರಗಳಲ್ಲಿ ಉದ್ವಸ್ಥಗೊಳಿಸುತ್ತದೆ.
ನಗರಕ್ಕೆ ವಲಸೆ ಹೋದ ರಾಷ್ಟ್ರೀಯವಾದಿ ಯುದ್ಧ ಪ್ರಿಯ ವ್ಯಕ್ತಿಯು, ರಾಜಕಾರಣದಿಂದ ಭ್ರಮಾವಿಮೋಚಿತನಾಗಿ,
ಸುಧಾರಣಾವಾದೀ ನಾಯಕರುಗಳ ಚಲನೆಯ ಜನಸಂಖ್ಯೀಯ ಹಾಗೂ ಗತಿ ಮತ್ತು ನಿರ್ಧಾರದಿಂದ ಪ್ರತಿರೋಧವನ್ನು ತೋರುತ್ತಾನೆ.
ಈ ನೆಲೆಯಲ್ಲಿ ಆತ ಹಳೆಯ ಮಾದರಿಯನ್ನು ಹೋಲದ, ಹೊಸದಾದ ರಾಜಕೀಯ ಕ್ರಮವನ್ನು ಶೋಧಿಸುತ್ತಾನೆ. ಈ ಹೊಸ
ರಾಜಕಾರಣವು ಹೊಸ ನಾಯಕರ ಮತ್ತು ಪಡೆಗಳ ಕೈಯಲ್ಲಿದ್ದು, ಚರಿತ್ರೆಯ ಅಲೆಯಲ್ಲಿ ವಿಮುಕ್ತಿಯ ಹೋರಾಟದಲ್ಲಿ
ತಮ್ಮ ಸ್ನಾಯು ಮತ್ತು ಮಿದುಳನ್ನು ಬಳಸಿ ಮುನ್ನಡೆಸಿದವರ ಕೈಯಲ್ಲಿ ಕೇಂದ್ರೀಕೃತವಾಗಿರುತ್ತದೆ. ಅದು
ರಾಷ್ಟ್ರೀಯ, ಕ್ರಾಂತಿಕಾರೀ ಮತ್ತು ಸಾಮೂಹಿಕವಾಗಿರುತ್ತದೆ ಕೂಡಾ. ಈ ರೀತಿಯ ಹೊಸ ವಾಸ್ತವ, ಮುಖ್ಯವಾಗಿ
ವಸಾಹತೀಕೃತ ಜನ ತೋರಿಸುವ, ಪ್ರಕಟವಾಗುವ ಕ್ರಮ ಕೇವಲ ಕ್ರಿಯೆಯಲ್ಲಿ ಮಾತ್ರ ಅಸ್ತಿತ್ವದಲ್ಲಿರುತ್ತದೆ.
ಈ ಮೊದಲಿನ ಸಾಮ್ರಾಜ್ಯಶಾಹೀ ವಾಸ್ತವವನ್ನು ಒಡೆಯುವ ಮೂಲಕ, ಹೋರಾಟವು ಹಲವು ಬಗೆಯ ಅಜ್ಞಾತ ಆಯಾಮಗಳನ್ನು,
ಹೊಸ ಅರ್ಥಶೋಧಗಳನ್ನು ಹಾಗೂ ವಾಸ್ತವವು ಅದುವರೆಗೂ ಹುದುಗಿಸಿದ್ದ ವೈರುಧ್ಯಗಳನ್ನು ಗೆರೆಯೆಳೆದು ಮುನ್ನೆಲೆಗೆ
ತಂದು ಗಂಭೀರವಾಗಿ ಕಾಣಿಸುತ್ತದೆ. ಶಸ್ತ್ರಗಳನ್ನು ಹೊಂದಿದ ಜನರು, ಹೊಸ ವಾಸ್ತವಗಳನ್ನು ಪರಿಚಯಿಸುವ
ಹೋರಾಟಗಳ ಜನರು, ಅವುಗಳಲ್ಲೇ ಬದುಕುತ್ತಿರುವವರು, ಅದರಲ್ಲೇ ಪಥಸಂಚಲನ ಸಾಧಿಸಿದ ಜನರು, ವಸಾಹತುಶಾಹಿಯಿಂದ
ವಿಮುಕ್ತರಾದವರು ಮತ್ತು ಮುನ್ನೆಚ್ಚರಿಸುವ ಜನರು, ರಾಷ್ಟ್ರವನ್ನು ವೈಭವೀಕರಿಸುವ ಮತ್ತು ನಿಗೂಢೀಕರಿಸುವ
ಯಾವುದೇ ಪ್ರಯತ್ನವನ್ನು ಕೂಡಾ ಮಾಡಲಾರರು. ಹಿಂಸೆಯೊಂದೇ ಇಲ್ಲಿ ಜನರಿಂದ ತಪ್ಪಿತಸ್ಥವೆಂದೆನಿಸಿದ್ದು.
ನಾಯಕತ್ವದಿಂದ ಸಂಘಟಿತ ಮತ್ತು ಪ್ರೇರಿತ ಹಿಂಸೆಯು ಮಾಸ್ ಅಥವಾ ಸಮೂಹಗಳಿಗೆ ಸಾಮಾಜಿಕ ವಾಸ್ತವವನ್ನು
ಕಂಡುಹಿಡಿಯಲು ಒದಗಿದ ಬೀಗಮುದ್ರೆಯ ಹಾಗೆ ಸಂಭವಿಸಿದುವು. ಈ ರೀತಿಯ ಹೋರಾಟಗಳಿಲ್ಲದೆ, ಈ ರೀತಿಯ ಪ್ರಾಯೋಗಿಕ
ಅನ್ವಯವಿರದಿದ್ದಿದ್ದರೆ, ಅದು ಬರಿಯ ಹಬ್ಬದ, ಜನಸಂದಣಿಯಾಗಿ ಅದು ಹೆಚ್ಚು ಬಿಸಿಯ ಉತ್ಪಾದನೆಗೆ ಕಾರಣವಾಗುತ್ತಿತ್ತು.
ಒಟ್ಟಿನಲ್ಲಿ ಅಷ್ಟಕ್ಕೂ ಉಳಿದಿದ್ದೆಂದರೆ ಒಂದು ತುಸು ಹೊಸ ಹೊಂದಾಣಿಕೆಯ, ಮೇಲ್ಮಟ್ಟದಲ್ಲಿನ ಕೆಲವು
ಸುಧಾರಣೆಗಳ, ಒಂದು ಧ್ವಜದ ಮತ್ತು ತಳಭಾಗದಲ್ಲಿ ಯಾವುದೇ ಆಕಾರವಿಲ್ಲದ, ತಿರುಚಿದ ಮಾಸ್ ಅಥವಾ ಸಮೂಹ-ಸಮುದಾಯ,
ಮತ್ತದು ಈಗಲೂ ಕತ್ತಲೆಯ ಯುಗದ ಆಳವಾದ ಹೊಂಡದಲ್ಲಿ ಮುಳುಗಿರುವಂತದ್ದಾಗಿದೆ.
***
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ