ಚಾರಿತ್ರಿಕ ಕೃತಿಯ ಹಲವು ಓದಿನ ಸಾಧ್ಯತೆಗಳು: ಹಿಂದ್ ಸ್ವರಾಜ್ ಮಾದರಿ
ಹಿಂದ್ ಸ್ವರಾಜ್ ಅತ್ಯಂತ ಮುಖ್ಯವಾದ ಪಠ್ಯ. 1909ರಲ್ಲಿ ಗಾಂಧಿ ಲಂಡನಿನಿಂದ ಆಫ್ರಿಕಾಕ್ಕೆ ಬರುವಂತಹ ಸಂದರ್ಭದಲ್ಲಿ ಕಿಲ್ಡೋನನ್ ಕ್ಯಾಸಲ್ ಎಂಬ ಹÀಡಗಿನ ಡೆಕ್ನಲ್ಲಿ ಕುಳಿತು ಹತ್ತು ದಿನಗಳಲ್ಲಿ ಬರೆದ ಪಠ್ಯವಿದು.ತಾನು ಬರೆದ ಸುಮಾರು 700ಕ್ಕಿಂತಲೂ ಹೆಚ್ಚಿನ ಬರಹಗಳಲ್ಲಿ ಬಹಳ ಪ್ರಮುಖವೆಂದು ಸ್ವತಃ ಗಾಂಧಿಯೇ ಇಷ್ಟಪಡುವ ಕೃತಿ ಇದು. ಗುಜರಾತಿಯಿಂದ ಇಂಗ್ಲೀಷಿಗೆ ಅನುವಾದಿಸಿದ್ದೂ ಕೂಡಾ ಗಾಂಧಿಯೇ ಇದನ್ನು. ಗಾಂಧಿಯವರ ಆತ್ಮಕಥೆಗೆ ಕೂಡಾ ಈ ಅವಕಾಶ ಲಭ್ಯವಾಗಿರಲಿಲ್ಲ. ಅದನ್ನು ಗಾಂಧಿಯವರ ಸೆಕ್ರೆಟರಿ ಮಹಾದೇವ್ ದೇಸಾಯಿ ಅನುವಾದಿಸಿದ್ದರು.ಹಿಂದ್ ಸ್ವರಾಜ್ ಗಾಂಧಿಯ ಬರಹಗಳಲ್ಲೇ ಬಹಳ ಅಧಿಕೃತವಾದ ಪಠ್ಯವೂ ಹೌದು. ಇದರ ಅಧಿಕೃತತೆಯ ಕಾರಣದಿಂದ ನೆಹರೂ, ರಾಜಾಜಿ ಮತ್ತು ಸಾಹಿತಿ ಲಿಯೋ ಟಾಲ್ಸ್ಟಾಯ್ ಕೂಡಾ ಇದನ್ನು ಟೀಕಿಸಿದ್ದರು. ನೆಹರೂರವರ ಬರವಣಿಗೆಗಳಿಗಿಂತ ಗಾಂಧಿಯ ಬರವಣಿಗೆಯನ್ನು ಅತ್ಯಂತ ವಿಭಿನ್ನವಾಗಿ, ನಿಲ್ಲಿಸಿದ್ದು ಕೂಡ ಈ ಪಠ್ಯವೇ ಎಂಬುದು ಚಿಂತಕ ಭಿಕ್ಕುಪಾರೆಖ್ ಅಭಿಪ್ರಾಯ.1 ಇಡೀ ಬ್ರಿಟೀಷ್ ಜನಾಂಗದ ಮೂಲಕ, ಅಹಿಂಸೆಯ ಸಂದೇಶವನ್ನು ಪ್ರಸರಿಸಲು ಮತ್ತು ಅಂತಹ ಪ್ರಸಾರ ಇಡೀ ವಿಶ್ವಕ್ಕೆಂಬ ಅಶಯವನ್ನು ಕೂಡಾ ಗಾಂಧಿ ಈ ಪಠ್ಯದ ಮೂಲಕ ವ್ಯಕ್ತಪಡಿಸಿದ್ದರು (ಟು ಯ್ಯೂಸ್ ದ ಬ್ರಿಟಿಷ್ ರೇಸ್ ಫಾರ್ ಟ್ರಾನ್ಸ್ಮಿಟ್ಟಿಂಗ್ ಹಿಸ್ ಮೈಟೀ ಮೆಸೇಜ್ ಆಫ್ ಅಹಿಂಸಾ). ಭವಿಷ್ಯದ ಗಾಂಧಿಯ ಇಡೀ ಬದುಕು ಪ್ರೇರಣೆ ಪಡೆದಿದ್ದು ಭಗವದ್ಗೀತೆಯಿಂದಲ್ಲ, ಬದಲು ಹಿಂದ್ ಸ್ವರಾಜ್ನಿಂದ2.
‘ಗಾಂಧೀ ಚಿಂತನೆಗಳು’ ಎಂಬ ಒಂದು ವಿಚಾರವನ್ನು ಅಧ್ಯಯನ ಮಾಡುವವರಿಗೆ, ಹಿಂದ್ ಸ್ವರಾಜ್ ಒಂದು ಬಿಗಿನರ್ ಇದ್ದ ಹಾಗೆ.ಇಲ್ಲಿ ಇದು ಗಿಡದ ರೀತಿಯಿಂದ ಬೆಳೆದು ಹೆಮ್ಮರವಾಗುತ್ತದೆ. ಹಿಂದ್ ಸ್ವರಾಜ್ ಕೃತಿಯ ಪ್ರತೀ ವಿಷಯಗಳೂ ಕೂಡಾ ಗಾಂಧಿಯ ತಾತ್ವಿಕ ವಿಚಾರಗಳೊಂದಿಗೆ ಪರಸ್ಪರ ಅಂತಃಸ್ಸಂಬಂಧವನ್ನು ಹೊಂದಿವೆÉ. ಗಾಂಧಿಯ ಆತ್ಮಕಥೆಯೂ ಸೇರಿದಂತೆ ಗಾಂಧೀ ಚಿಂತನೆಯ ಒಂದು ಥಿಯರಿಟಿಕಲ್ ದೃಷ್ಟಿ ಸಿಗುವುದು ಹಿಂದ್ ಸ್ವರಾಜ್ನಿಂದ. ಗಾಂಧಿಯ ಉಳಿದ ಚಿಂತನೆಗಳ ತೀವ್ರವಾದ ಗಾಢತೆ ಬಾಧಿಸಿ ಕಕ್ಕಾಬಿಕ್ಕಿಯಾಗದಿರಲೂ ಕೂಡಾ ಹಿಂದ್ ಸ್ವರಾಜ್ ಪಠ್ಯದ ಓದು ಅತ್ಯಗತ್ಯ. ಚಿಂತಕ ‘ಎರಿಕ್ ಎರಿಕ್ಸನ್’ ಇದನ್ನು ‘ಕನ್ಫೆಶನ್ ಮ್ಯಾನಿಫೆಸ್ಟೋ’ ಎಂತಲೂ, ವಿದ್ವಾಂಸ ‘ಡೆನ್ನಿಸ್ ಡಾಲ್ಟನ್’ ಇದನ್ನು ‘ಎ ಪ್ರೊಕ್ಲಮೇಶನ್ ಆಫ್ ಐಡಿಯಾಲಾಜಿಕಲ್ ಇಂಡಿಪೆಂಡೆನ್ಸ್’ ಎಂತಲೂ ಕರೆದರು. ಗಾಂಧಿಯೇ ಹೇಳಿದ ಹಾಗೆ ಅದು, ವ್ಹೋಲ್ ತಿಯರಿ ಆಫ್ ಲೈಫ್3. ಹಿಂದ್ ಸ್ವರಾಜ್ ಕೃತಿಯನ್ನು ಓದುತ್ತಿದ್ದರೆ ಮನುಷ್ಯ ಕುಟುಂಬವನ್ನು ಮತ್ತು ವಿಶ್ವವನ್ನು ಪ್ರೀತಿಸುತ್ತಾ ಇಡೀ ವಿಶ್ವವೇ ನಮ್ಮ ಮನೆಯೆಂದು ಗ್ರಹಿಸುವ ಮನೋಭಾವನೆಯು ಕೂಡಾ ಸಿಗುತ್ತದೆ4. ಇಡೀ ಹಿಂದ್ ಸ್ವರಾಜ್ ಕೃತಿಯನ್ನು ನೈತಿಕ ಮತ್ತು ಅಹಿಂಸಾತ್ಮಕ ನೆಲೆಯಿಂದ ನೋಡುವುದರ ಜತೆಜತೆಯಲ್ಲಿ ಹೆಚ್ಚಿನ ಗಾಂಧಿ ಚಿಂತಕರು ಇದನ್ನು ಆಧುನಿಕತೆ ಮತ್ತು ನಾಗರೀಕತೆಯನ್ನು ಗಾಂಧಿ ಗ್ರಹಿಸಿರುವ ಐತಿಹಾಸಿಕ ಪಠ್ಯವೆಂದೇ ಗ್ರಹಿಸುತ್ತಾರೆ. ಇದು ಆಧುನಿಕ ನಾಗರೀಕತೆಯ ಕೆಡುಕುಗಳ ಬಗ್ಗೆ ಟೀಕೆ ಮತ್ತು ಪ್ರಶ್ನೆಗಳನ್ನು ಎತ್ತುವ ನೈತಿಕ ಪ್ರತಿಕ್ರಿಯೆ ಮತ್ತು ಚಾರಿತ್ರಿಕ ರೂಪವೂ ಆಗಿದೆಯೆಂಬುದು ಇದರ ಚಾರಿತ್ರಿಕ ಓದು. ಹಾಗೆಯೇ ಇದು ಅತ್ಯಂತ ಸೂP್ಷÀ್ಮ ರೂಪದಲ್ಲಿ ಚಾರಿತ್ರಿಕ ಪ್ರಕ್ರಿಯೆಯ ರೂಪದಲ್ಲಿ ಮೂಡಿದ ಗಾಂಧಿ ಎಂಬ ವ್ಯಕ್ತಿತ್ವ ಮತ್ತು ತಾತ್ವಿಕತೆಗೆ ಇರುವ ಕನ್ನಡಿಯೂ ಹೌದು.5 ಇಡೀ ಪಠ್ಯದಲ್ಲಿ ಗಾಂಧಿ, ನಾಗರೀಕತೆ ಮತ್ತು ಹಿಂಸೆ ಪರಸ್ಪರ ಅನುರೂಪವಾದವುಗಳು ಮತ್ತು ಆಧುನಿಕ ನಾಗರೀಕತೆಯೇ ಹಿಂಸೆಯ ಉತ್ಪತ್ತಿಗೆ ಕಾರಣವೆಂಬ ವಾದವನ್ನೂ ಕೂಡಾ ಮಂಡಿಸುತ್ತಾರೆ. ಜತೆಜತೆಯಲ್ಲೇ ಆಧುನಿಕ ನಾಗರೀಕತೆ ಮತ್ತು ಹಿಂಸೆಗೆ ಉತ್ತರವೇ ಹಿಂದ್ ಸ್ವರಾಜ್ ಅಥವಾ ಇಂಡಿಯನ್ ಹೋಮ್ ರೂಲ್ ಎನ್ನುತ್ತಾ ಗಾಂಧಿ ತಮ್ಮ ವಾದಗಳನ್ನು ಹೆಣೆಯುತ್ತಾರೆ. ಗಾಂಧಿಗೆ, ಈ ದಿಸೆಯಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧದ ಹೋರಾಟ ಮಾತ್ರವಲ್ಲ ಬದಲು ಅದು ಉತ್ಪಾದಿಸಿದ ನಾಗರೀಕತೆ ಮತ್ತು ಅದರ ಜತೆಜತೆಯಲ್ಲೇ ಸಾಗುವ ಹಿಂಸೆಯ ವಿರುದ್ಧದ ಹೋರಾಟವೂ ಕೂಡಾ ಹೌದು ಮತ್ತು ಬ್ರಿಟೀಷರನ್ನು ಅವರ ಜನರುಗಳ ಮೂಲಕವೇ ಸಾಮ್ರಾಜ್ಯಶಾಹೀ ಕೆಡುಕಿನ ಆಧುನಿಕ ನಾಗರೀಕತೆ ಮತ್ತು ಹಿಂಸೆಯನ್ನು ವಿರೋಧಿಸುತ್ತಾ ಅಹಿಂಸೆಯನ್ನು ಪ್ರÀಸರಿಸುವ ಕ್ರಮ ಕೂಡಾ ಹೌದು6.
ಗಾಂಧಿಯ `ಹಿಂದ್ ಸ್ವರಾಜ್' ಅತ್ಯಂತ ಹೆಚ್ಚು ಬಿಂಬಿತವಾಗಿರುವುದು ಒಂದು ರಾಜಕೀಯ ಪಠ್ಯವೆಂದು. ಮುಖ್ಯವಾಗಿ ಆಂತನಿ ಜಿ ಪೆರೆಲ್ ಕೇಂಬ್ರಿಡ್ಜ್ ಮೂಲಕ 1993ರಲ್ಲಿ ಹೊರತಂದಿರುವ ಹಿಂದ್ ಸ್ವರಾಜ್ ಆ್ಯಂಡೆ ಅದರ್ ರೈಟಿಂಗ್ಸ್’ ಕೂಡಾ ಇದೇ ಧ್ವನಿಯನ್ನು ಧ್ವನಿಸುತ್ತದೆ.7 ಗಾಂಧಿಯ ಬಗ್ಗೆ ಗಾಂಧಿಯ ರಾಜಕೀಯ ನೀತಿ ಮತ್ತು ತಾತ್ವಿಕತೆಯನ್ನು ತಾತ್ತ್ವಿಕವಾಗಿ ಚರ್ಚಿಸಿದ ಭಿಕ್ಕುಪಾರೇಖ್, ಪಾರ್ಥ ಚಟರ್ಜಿ, ಆಂತನಿ ಜಿ ಪೆರೆಲ್ ಮತ್ತು ಎ. ರಘುರಾಮ್ ರಾಜು ಕೂಡಾ ಹಿಂದ್ ಸ್ವರಾಜ್ ಒಂದು ರಾಜಕೀಯ ಪಠ್ಯವೆಂದು ಅಭಿಪ್ರಾಯಪಡುತ್ತಾರೆ. ಗಾಂಧಿಯನ್ನು ಮತ್ತು ಗಾಂಧಿಯ ಹಿಂದ್ ಸ್ವರಾಜ್ ಚರ್ಚೆಯನ್ನು ಸ್ವಲ್ಪ ಮಟ್ಟಿಗೆ ರಾಘವನ್ ಐಯ್ಯರ್ ಅವರನ್ನು ಹೊರತುಪಡಿಸಿದರೆ ಹಿಂದ್ ಸ್ವರಾಜ್ನ ಚಾರಿತ್ರಿಕ ನೆಲೆ ಮತ್ತು ನಿಲುವುಗಳನ್ನು ಹಾಗೂ ಅದನ್ನು ಕೂಡಾ ಚಾರಿತ್ರಿಕ ಡಿಸ್ಕೋರ್ಸ್ನ ಭಾಗವಾಗಿ ನೋಡುವ ಯತ್ನವನ್ನು ಮಾಡಿರುವಂತಹ ಪ್ರಯತ್ನಗಳು ತೀರಾ ಅಪೂರ್ವವೆಂದೇ ನನ್ನ ಗ್ರಹಿಕೆ.8 ಭಾರತದಲ್ಲಿ ಸಾಮ್ರಾಜ್ಯಶಾಹೀತ್ವ- ಶಿP್ಷÀಣ ಮತ್ತು ಅದರ ಸಾಂಸ್ಕøತಿಕ ಭೂಮಿಕೆ ಮುಂತಾದ ವಿಷಯಗಳನ್ನು ಹೆಚ್ಚು ಗ್ರಹಿಸಿದ ಇತಿಹಾಸಕಾರ ಸವ್ಯಸಾಚೀ ಭಟ್ಟಾಚಾರ್ಯ ಕೆಲವರ್ಷಗಳ ಹಿಂದೆ ಕೊಸಾಂಬೀ ಜನ್ಮದಿನದ ಶತಮಾನೋತ್ಸವ ಸಂದರ್ಭದಲ್ಲಿ ನಾಗರೀಕತೆಯ ಚರ್ಚೆಯನ್ನು ಪ್ರಸ್ತಾಪಿಸುತ್ತ ನಾಗರೀಕತೆಯ ಡಿಸ್ಕೋರ್ಸ್ನಲ್ಲಿ ಗಾಂಧಿಯ ಹಿಂದ್ ಸ್ವರಾಜ್ನ್ನು ಕೊಸಾಂಬಿ ಮತ್ತು ರವೀಂದ್ರನಾಥ ಠಾಗೋರರ ವಿಶ್ಲೇಷಣೆಗಿಂತ ವಿಭಿನ್ನವಾದ ಮಾದರಿಯೆಂದೇ ಗ್ರಹಿಸುವ ಕೆಲವು ವಿಭಿನ್ನ ಪ್ರಯತ್ನಗಳನ್ನು ನಡೆಸಿರುವುದನ್ನು ಬಿಟ್ಟರೆ ಅದನ್ನು ಹಿಸ್ಟೋರಿಕಲ್ ರೀಡಿಂಗ್ ಮತ್ತು ಸಂದರ್ಭದಲ್ಲಿ ಗ್ರಹಿಸಿದ ಪ್ರಯತ್ನಗಳೇ ಕಡಿಮೆ.9 ಹಿಂದ್ ಸ್ವರಾಜ್ ಕೃತಿಯ ಶತಮಾನೋತ್ಸವ ಸಂದರ್ಭದಲ್ಲಿ ಪಾಸಿಂಗ್ ರೆಫರೆನ್ಸ್ ರೂಪದಲ್ಲಿ ಅದರ ಐತಿಹಾಸಿಕ ಬೆಳವಣಿಗೆಯನ್ನು ಚರ್ಚಿಸಿದ ಬಗೆಗಳುಂಟೇ ಹೊರತು ಚರಿತ್ರೆ ಮತ್ತು ಆ ಕಾಲದ ಭೌತಿಕತೆಯ ಉತ್ಪನ್ನವಾಗಿ ಹಿಂದ್ ಸ್ವರಾಜ್ ರೂಪುಗೊಂಡ ಬಗೆ ಮತ್ತು ರೂಪುಗೊಳಿಸಿಕೊಂಡ ಜರೂರನ್ನು ಚರ್ಚಿಸದಿರುವ ಸನ್ನಿವೇಶವನ್ನು ಇದು ಸೃಷ್ಟಿಮಾಡಿದೆ.10
ಹಿಂದ್ ಸ್ವರಾಜನ್ನು ಅತ್ಯಂತ ಸರಳವಾಗಿ ನಾವು ಓದತೊಡಗಿದರೆ ಮತ್ತು ಸಾಮಾನ್ಯ ನೆಲೆಯಲ್ಲಿ ಓದತೊಡಗಿದರೆ ಖಂಡಿತಾ ಅದು ರಾಜಕೀಯ ಕೃತಿಯಾಗಿಯೇ ನಿಲ್ಲುತ್ತದೆ. ತಾತ್ವಿಕವಾಗಿ ರಾಜಕೀಯ ಮೀಮಾಂಸೆಯ ನೆಲೆಯಲ್ಲಿ ಆಂತನಿ ಜಿ ಪೆರೆಲ್ ಮತ್ತು ಇನ್ನೂ ಕೆಲವರ ಓದುಗಳು ಈ ಸಾಮಾನ್ಯ ಓದನ್ನು ಮೀರಿದವುಗಳೆಂದೇ ಬಗೆಯಬೇಕಾಗುತ್ತದೆ. ಅವು ಶುದ್ಧ ಅಕಡೆಮಿಕ್ ಮನ್ನಣೆ ಮತ್ತು ಸ್ಥಾನವನ್ನು ಹೊಂದಿರುವಂತಹವುಗಳು. ಉಳಿದಂತೆ ಹಿಂದ್ ಸ್ವರಾಜನ್ನು ಬರಿಯ ರಾಜಕೀಯ ಪಠ್ಯವೆಂದು ಗ್ರಹಿಸುವ ಕ್ರಮ ಸರಿಯಲ್ಲವೆಂದೇ ನನ್ನ ಅಭಿಪ್ರಾಯ. ಹಿಂದ್ ಸ್ವರಾಜ್ ಚಾರಿತ್ರಿಕ ಪಠ್ಯ ಕೂಡಾ ಹೌದು. ಅದು ನಿರ್ವಾತದಲ್ಲಿ ಸೃಷ್ಟಿಯಾಗದೇ ಒಂದು ನಿರ್ದಿಷ್ಟ ಚಾರಿತ್ರಿಕ ಕಾಲಘಟ್ಟದಲ್ಲಿ ಹುಟ್ಟಿಕೊಂಡದ್ದು. ಅದೊಂದು ಹಿಸ್ಟೋರಿಕಲ್ ಟೆಕ್ಸ್ಟ್ ಎಂದು ನಾನು ಯಾಕೆ ವಾದಿಸುತ್ತೇನೆಂದರೆ, ಗಾಂಧೀ ಹಿಂದ್ ಸ್ವರಾಜ್ನ್ನು ರಚಿಸಲು ಹೊಂದಿದ್ದ ಉದ್ದೇಶ. ಈ ಕೃತಿ ಮಿಶ್ರ ಓದುಗರನ್ನು ಗಮನದಲ್ಲಿರಿಸಿಕೊಂಡು ಬರೆದದ್ದು. ಸುಮಾರು 1900 – 1910ರ ದಶಕದ ರಾಜಕಾರಣದ ಭೌತಿಕ ಮತ್ತು ಚಾರಿತ್ರಿಕ ಹಿನ್ನೆಲೆಯೇ ಈ ಕೃತಿಯ ಹುಟ್ಟಿಗೆ ಕಾರಣ. ಇಂಗ್ಲೆಂಡಿನಲ್ಲಿದ್ದ ಭಾರತೀಯರು ಬ್ರೀಟಿಷರ ವಿರುದ್ಧದ ಭಯೋತ್ಪಾದನೆ ಮತ್ತು ರಾಜಕೀಯ ಹಿಂಸೆಯ ಕಡೆಗೆ ಆಕರ್ಷಿತರಾಗುತ್ತಿದ್ದ ಸಂದರ್ಭದಲ್ಲಿ ವಿಶೇಷವಾಗಿ ಭಾರತೀಯರು ಮತ್ತು ಕಾಂಗ್ರೆಸ್ನ ಮಂದಗಾಮಿಗಳು ಹಾಗೂ ತೀವ್ರಗಾಮಿಗಳನ್ನು ಉದ್ದೇಶಿಸಿ ಒಂದು ಕಡೆಯಿಂದ ಬರೆದ ಪಠ್ಯವಾಗಿ ನಾನು ಇದನ್ನು ಕಾಣುತ್ತೇನೆ. ಇನ್ನೊಂದು ಕಡೆಯಿಂದ ಇಂಗ್ಲೆಂಡ್ನಲ್ಲಿಯೇ ಇಂಗ್ಲೆಂಡ್ ಜನ ಅತ್ಯಂತ ವ್ಯಾಪಕವಾಗಿ ಹಿಂಸೆಗೆ ಆಕರ್ಷಿತರಾಗುತ್ತಿದ್ದ ಸಂದರ್ಭದಲ್ಲಿ ಗಾಂಧೀ ಹಿಂದ್ ಸ್ವರಾಜ್ನ ಬರವಣಿಗೆ ನಡೆಸಿದರು. ಭಾರತೀಯರು ಎನ್ನುವ ಶಬ್ದ ವಿಶೇಷವಾಗಿ ಲಿಂಗ, ವಯಸ್ಸು, ಧರ್ಮ, ಜಾತಿ ಮತ್ತು ಭಾಷೆಯನ್ನು ಮೀರಿದಂತಹ ಹೊಸದಾಗಿ ಸೃಷ್ಠಿಯಾದ ಮಿಡಲ್ಕ್ಲಾಸ್ (ಮಧ್ಯಮವರ್ಗ) ಅಲ್ಲಿಯೂ ಮುಖ್ಯವಾಗಿ ಇಂಗ್ಲೀಷ್ ಕಲಿತು ಚಾಕರಿ ಹಿಡಿದ ವೈದ್ಯರು, ವಕೀಲರು ಮತ್ತು ಶ್ರೀಮಂತರನ್ನು ಉದ್ದೇಶವಾಗಿಟ್ಟು ಬರೆದುದಾಗಿತ್ತು. ಇಂಗ್ಲೀಷರೆಂದರೆ ಬ್ರಿಟನ್ನಲ್ಲಿ ವಾಸಮಾಡುತ್ತಿರುವ ಬ್ರಿಟೀಷರು ಮತ್ತು ಭಾರತದಲ್ಲಿ ಬ್ರಿಟಿಷ್ ಆಳುವ ವರ್ಗವನ್ನು ಸಂಬೋಧಿಸಿದ ಕ್ರಮವಾಗಿತ್ತು. ಹಿಂದ್ ಸ್ವರಾಜ್ನ ಬರವಣಿಗೆ ಕುರಿತು ತಮ್ಮ ಮಿತ್ರ ಹೆನ್ರಿ ಪೊಲಾಕ್ಗೆ ಬರೆದ ಪತ್ರದಲ್ಲಿ ಗಾಂಧೀ ಬಳಸುವ ಕೆಲವು ಪದಗಳು ಮತ್ತವುಗಳ ಅರ್ಥತೀವ್ರತೆಯೂ ಕೂಡಾ ಗಾಂಧಿಯ ಹಿಂದ್ ಸ್ವರಾಜ್ ಆ ಕಾಲಕ್ಕೆ ಕೊಟ್ಟ ಪ್ರತಿಕ್ರಿಯೆ ಎನ್ನುವುದನ್ನು ಮನಗಾಣಿಸುತ್ತದೆ. ಮುಖ್ಯವಾಗಿ, “ದ ತಿಂಗ್ ವಾಸ್ ಬ್ರೀಮಿಂಗ್ ಇನ್ ಮೈಂಡ್” ಎನ್ನುವ ಗಾಂಧಿಯ ಹೇಳಿಕೆ ಇದನ್ನು ನಮಗೆ ಮನಗಾಣಿಸುತ್ತದೆ. ಅಂದರೆ ಗಾಂಧಿಗೆ ತಮ್ಮೊಳಗೆ ಬ್ರೀಮಿಂಗ್ ಆಗುತ್ತಿರುವ ಈ ವಿಚಾರವನ್ನು ಅತ್ಯಂತ ಬೇಗನೆ ಸಂವಹನಿಸಬೇಕಾಗಿತ್ತು. ಅವರಲ್ಲಿ ಅದು ಎಷ್ಟು ತುರ್ತು ಹುಟ್ಟಿಸಿತ್ತು ಎಂದರೆ ಅದನ್ನು ವ್ಯಕ್ತಪಡಿಸಲೇಬೇಕಾದ ತೀವ್ರತೆ ಮತ್ತು ಆತುರವನ್ನು ಹಾಗೂ ಒಂದು ರೀತಿಯಲ್ಲಿ ಹಿಂಸೆಯನ್ನೇ ಇದು ಹುಟ್ಟಿಸಿದೆ ಎಂದು ಬಿಡುತ್ತಾರೆ ಗಾಂಧಿ. ನಾನು ಹೇಳಬೇಕಾಗಿರುವ ವಿಚಾರಗಳು ಅಷ್ಟು ಮೂರ್ತವಾಗಿವೆ, ಹಾಗಾಗಿ ಇನ್ನು ಕಾಯಲೇಬಾರದು ಎನ್ನುವಷ್ಟು ಬಲಿತಿವೆ ಎನ್ನುತ್ತಾರೆ ಗಾಂಧಿ. ಈ ಮೂರ್ತತೆ ಮತ್ತು ಬಲಿಯುವಿಕೆ ಎಂಬ ಗತ ಮತ್ತು ವರ್ತಮಾನದ ಯುಗ ಸಂಧಿಯ ವಿಚಾರ ಮತ್ತು ವಿದ್ಯಮಾನಗಳು ಒಂದು ಇನ್ಸ್ಟಂಟ್ ಆದ ಸಂಗತಿಗಳಾಗಿರದೆ ಒಂದು ಪ್ರಕ್ರಿಯೆಯ, ಅದರಲ್ಲೂ ಸಂಕೀರ್ಣವಾದಂತಹ ಪ್ರಕ್ರಿಯೆಯ ಭಾಗವಾಗಿರುವುದನ್ನು ನಾವು ಗುರುತಿಸಬಹುದು. ಅತ್ಯಂತ ಪ್ರಸಿದ್ಧ ಪೋಸ್ಟ್ ಮಾಡರ್ನಿಸ್ಟ್ ಚಿಂತಕ ಮತ್ತು ಹಿಸ್ಟೋರಿಕಲ್ ಫಿಲಾಸಫರ್ ಕೀತ್ ಜಂಕಿನ್ಸ್ ಇದನ್ನೇ ಹೇಳುತ್ತಾನೆ. ಆತನ ಪ್ರಕಾರ, “ನಿನ್ನೆಗಳಿಂದಷ್ಟೇ ವರ್ತಮಾನ ಸಂಭವಿಸುತ್ತದೆ, ವರ್ತಮಾನದಿಂದ ಭವಿಷ್ಯ ಸಿದ್ಧಪಡಿಸಲ್ಪಡುತ್ತದೆ”. ಚರಿತ್ರೆಯ ನಿರ್ಮಾಣ ಮತ್ತು ಅದರ ಒಂದು ಭಾಗವಾಗಿರುವ ಹಿಸ್ಟೋರಿಯೋಗ್ರಫಿಯ (ಚರಿತ್ರಕಥನಶಾಸ್ತ್ರ) ಭಾಗವಾಗಿ ಹಿಂದ್ ಸ್ವರಾಜ್ ಸಾಗುತ್ತದೆ.
ಗಾಂಧೀ ಈ ಕೃತಿಗೆ ಬರೆದ ಮುನ್ನುಡಿ ಕೂಡಾ ಒತ್ತಡ ಮತ್ತು ಆತುರದಿಂದಲೇ ಕೂಡಿದೆ. ಇದು ಬರೀ ಒತ್ತಡವಲ್ಲ, ಬದಲು ಗಾಂಧಿಯ ಚಿತ್ತ ಮತ್ತು ಹೃದಯ ತುಂಬಿದ ಪರಿಯಾಗಿತ್ತು. ಈ ಕೃತಿಯ ಮೂಲಕ ಆ ಚಾರಿತ್ರಿಕ ಘಟ್ಟದ ಅಗತ್ಯತೆಯಾಗಿದ್ದ ಸ್ವರಾಜ್ ಪರಿಕಲ್ಪನೆಯನ್ನು ಗಾಂಧಿ ವ್ಯಾಖ್ಯಾನ ಮಾಡುವ ಸಲುವಾಗಿ ಕೂಡಾ ಈ ಕೃತಿಯನ್ನು ಬರೆದರು. ಗಾಂಧಿಗೆ, ಆ ಹೊತ್ತಿಗೆ ಸ್ವರಾಜ್ ಮತ್ತು ಸ್ವ-ಸರ್ಕಾರವೆಂದು ಅನುವಾದಿಸಬಹುದಾದ ‘ಸೆಲ್ಫ್ ಗವರ್ನಮೆಂಟ್’ ನಡುವೆ ವ್ಯತ್ಯಾಸ ತೋರಿಸಬೇಕಿತ್ತು. ಅವುಗಳು ಒಂದೇ ಅಲ್ಲ ಬದಲು ಪ್ರತ್ಯೇಕ ಐಡೆಂಟಿಟಿಗಳೆಂದು ಸಿದ್ಧಪಡಿಸಿ ತೋರಿಸಬೇಕಾದ ಸಮಕಾಲೀನ ಸಮಯಕ್ಕೆ ಗಾಂಧಿ ಪ್ರತಿಕ್ರಿಯಿಸಿದ ಕ್ರಮವೂ ಇದಾಗಿತ್ತು. ಇದರ ಜತೆಗೆ ಗಾಂಧಿ ಆ ಕಾಲದ ಭಾರತೀಯ ಇಂಗ್ಲೆಂಡ್ ವಾಸಿಗಳು ಅನುಸರಿಸುತ್ತಿದ್ದ ಹಿಂಸೆ ಮತ್ತು ಭಯೋತ್ಪಾದನೆಯ ಮಾರ್ಗಕ್ಕೆ ಪರ್ಯಾಯವಾಗಿ ಅಹಿಂಸಾತ್ಮಕತೆಯನ್ನು ಪ್ರಸ್ತುತಗೊಳಿಸಬೇಕಿತ್ತು. ಗಾಂಧಿ ಪ್ರಕಾರ ರಾಜಕೀಯ ಭೀತಿವಾದವು ಆತ್ಮಹತ್ಯೆಯ ನೀತಿಗೆ ಸಮವಾಗಿತ್ತು. ಗಾಂಧಿ ಅದನ್ನೇ ‘ಸುಸೈಡಲ್ ಪಾಲಿಸಿ’ ಎನ್ನುತ್ತಿದ್ದರು. ಇದೇ ಹೊತ್ತಿನಲ್ಲಿ ಗಾಂಧಿ ಭಾರತದ ನಾಗರೀಕತೆಯು ಚರಿತ್ರೆಯ, ದೀರ್ಘ ಇತಿಹಾಸದ ಫಲವಾಗಿದ್ದು ಅದಕ್ಕೆ ಹಿಂಸೆ ಒಗ್ಗುವುದಿಲ್ಲವೆಂದೂ, ಬ್ರಿಟನ್ನ ನಾಗರೀಕತೆ ಹಿಂಸೆಯನ್ನು ಆಯ್ಕೆ ಮಾಡಿಕೊಂಡಿದ್ದು ಅದರ ಶಿಶು ಸಹಜ ವಯಸ್ಸಿನ ಕಾರಣವೆಂದೂ ತಮ್ಮ ತರ್ಕಗಳನ್ನು ಮಂಡಿಸಿದ್ದರು. ಅಂದರೆ ಬ್ರಿಟನ್ ನಾಗರಿಕತೆಯು ಆಧುನಿಕತೆ ಮತ್ತು ಕೈಗಾರೀಕರಣದ ಫಲವಾಗಿ ಅಂದರೆ ಮೊನ್ನೆ ಮೊನ್ನೆ ಸರಿಸುಮಾರು ಸುಮಾರು 100 ವರ್ಷಗಳ ಇತಿಹಾಸವನ್ನು ಹೊಂದಿರುವಂತದ್ದು ಎನ್ನುವುದು ಗಾಂಧಿಯ ಪ್ರಮುಖವಾದ ವಾದ. ಇಲ್ಲಿ ಗಾಂಧಿ ಎರಡು ರೀತಿಯ ನಾಗರೀಕತೆಯನ್ನು ಸೂಚ್ಯವಾಗಿ ಚರ್ಚಿಸುತ್ತಾರೆ. ಒಂದು; ಅಭಿಜಾತತೆ(ಕ್ಲಾಸಿಕಲ್) ಅಂಶ ಹೊಂದಿರುವ ಪ್ರಾಚೀನ, ಸಾವಿರ ವರ್ಷಕ್ಕೂ ಹಿಂದಿನ ನಾಗರೀಕತೆ, ಎರಡು; ಆಧುನಿಕತೆ- ಯಂತ್ರ-ತಂತ್ರಜ್ಞಾನ-ಕೈಗಾರಿಕೀಕರಣ ಹುಟ್ಟಿಸಿದ ಶಿಶು ಸಹಜ ನಾಗರೀಕತೆ. ಇಂತಹ ಶಿಶುಸಹಜ ನಾಗರೀಕತೆ ತುಂಬಾ ಪ್ರೌಢವಲ್ಲ ಮತ್ತು ಸಹಜವೂ ಅಲ್ಲ ಎನ್ನುವುದು ಗಾಂಧಿಯ ಆಕ್ಷೇಪ.
ಹೀಗೆ ಗಾಂಧಿ ನಾಗರೀಕತೆಯ ಬಗ್ಗೆ ಮತ್ತು ಅದು ಹುಟ್ಟಿಸಿದ ಹಿಂಸೆಯ ಬಗ್ಗೆ ಹಾಗೆಯೇ ಅದರಿಂದ ಉಂಟಾದ ಅರಾಜಕತೆಯವರೆಗೆ ಅತ್ಯಂತ ಸಮಗ್ರ ನೆಲೆಯಿಂದ ತುಲನಾತ್ಮಕವಾಗಿ ಉತ್ತರಗಳನ್ನು ಕಂಡುಕೊಳ್ಳುವ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾರೆ. ಇಂತಹ ಅನಿವಾರ್ಯತೆ ನಿಶ್ಚಿತವಾಗಿ ಆ ಕಾಲ ದೇಶದ ಫಲಶ್ರುತಿ. ಹಾಗೆಯೇ ಅದು ಆ ಕೃತಿಯ ಹಿಸ್ಟೋರಿಕಲ್ ಸಂದರ್ಭ ಕೂಡಾ. ಇಡೀ ಕೃತಿಯಲ್ಲಿ ಗಾಂಧಿ ನಡೆಸುವ ಪ್ರಶ್ನೆ-ಉತ್ತರ, ಸಂವಾದಗಳು ನಾಗರೀಕತೆಯ ಚರ್ಚೆಯನ್ನು ಒಳಗೊಂಡಂತೆ ಮೂಡಿರುವುದು ಅಂದಿನ ಸಂದರ್ಭದಿಂದ. ಗಾಂಧಿಯ ದೂರದೃಷ್ಟಿಯ ಮಾತುಗಳು, ಮತ್ತು ಕಾಣ್ಕೆಯ ಒಳನೋಟಗಳು, ಉದಾಹರಣೆಗೆ ಆಧುನಿಕ ನಾಗರೀಕತೆ ಉಂಟುಮಾಡುವ ಕೆಡುಕುಗಳು ವಸಾಹತುಶಾಹಿ ಕೆಡುಕುಗಳಿಗಿಂತ ಘೋರ ಮತ್ತು ವಸಾಹತುಶಾಹಿತ್ವ ಕೂಡಾ ಆಧುನಿಕ ನಾಗರೀಕತೆಯ ವಿಕಟತೆಯಿಂದ ಹುಟ್ಟಿದ್ದೆನ್ನುವ ಯೋಚನೆಗಳು ಕೂಡಾ ಗಾಂಧಿ ಆ ಕಾಲವನ್ನು ಆ ಕಾಲದ ಸಮಾಜ, ರಾಜಕೀಯ, ಆರ್ಥಿಕತೆ ಮತ್ತು ಉಳಿದ ಸಂಕೀರ್ಣತೆಯನ್ನು ಚೆÀನ್ನಾಗಿ ಅರ್ಥಮಾಡಿಕೊಂಡಿದ್ದರ ಫಲವೆಂದೇ ಗ್ರಹಿಸಬೇಕಾಗುತ್ತದೆ. ಬ್ರಿಟೀಷರ ಪೊಲಿಟಿಕಲ್ ಡಾಮಿನೇಶನ್ಗಿಂತ ಗಾಂಧಿಗೆ ಆಧುನಿಕತೆ ಹುಟ್ಟುಹಾಕಿರುವ ಸಿವಿಲೈಝೇಶನಲ್ ಡಾಮಿನೇಶನ್ ಅತ್ಯಂತ ಕೆಡುಕಾಗಿ ಕಾಣಿಸುವುದು ಕೂಡಾ ಗತ ಮತ್ತು ವರ್ತಮಾನವನ್ನು ಗಾಂಧಿ ತಕ್ಕಡಿಯಲ್ಲಿ ತೂಗಿ ವಿವೇಚಿಸುವುದರಿಂದ. ಗಾಂಧಿಗೆ ಆ ಕಾಲದ ಸಮಾಜ ಧರ್ಮದ ಬೇರಿನಿಂದ ವಿಮುಖವಾಗಿದ್ದರಿಂದಲೇ ಅದು ಹಿಂಸೆಯನ್ನು ಮೈಗೂಡಿಸಿಕೊಂಡಿದೆ ಎಂಬ ನಂಬಿಕೆ ಇತ್ತು. ಭಾರತದಲ್ಲಿನ ಧರ್ಮಗಳು ಮತ್ತು ಯುರೋಪಿನ ಕ್ರಿಶ್ಚಿಯಾನಿಟಿ ಎರಡೂ ಕೂಡಾ ಈ ಬಗೆಯದೆನ್ನುತ್ತಾ ಒಂದು ಸಮುದಾಯ ತನ್ನ ಬೇರುಗಳನ್ನು ಧರ್ಮ ಮತ್ತು ಅದರ ನೀತಿಗಳ ಮೇಲೆ (ಬದಲು ಕ್ರಿಯಾ ವಿಧಿಯ ಮೇಲಲ್ಲ) ಹೊಂದಬೇಕು ಎಂದು ಯೋಚಿಸಿದ ಗಾಂಧಿಯ ಕಳಕಳಿಯ ಪ್ರತೀಕವಾಗಿ ಹಿಂದ್ ಸ್ವರಾಜ್ ಕಾಣಿಸುತ್ತದೆ. ಈ ಕಳಕಳಿ ನಿರ್ವಾತದಲ್ಲಿ ಉಂಟಾಗದೆ ಸಮಕಾಲೀನ ಕಾಲದ ಮೂಸೆಯಿಂದ ಒಡಮೂಡುತ್ತದೆ ಎನ್ನುವುದು ಕೂಡಾ ಹಿಂದ್ ಸ್ವರಾಜ್ಗೆ ಒಂದು ಬಲಿಷ್ಠವಾದ ಚಾರಿತ್ರಿಕ ಭೂಮಿಕೆ ಇದೆ ಎನ್ನುವುದನ್ನು ಸ್ಪಷ್ಟಗೊಳಿಸುತ್ತದೆ. ಭಾರತೀಯರಿಗೆ ಹಿಂದ್ ಸ್ವರಾಜ್ ಎನ್ನುವುದು ಗಾಂಧಿ ಕೊಡಮಾಡಿದ ಒಂದು ಹೊಸ ರೀತಿಯ ಪೊಲಿಟಿಕಲ್ ಫಿಲಾಸಪಿ, ಮತ್ತದು ಧರ್ಮದ ಮೌಲ್ಯ ಮತ್ತು ನೀತಿ – ಅನೀತಿಗಳ ಮೇಲಿದ್ದು (ವಿಧಿನಿಷೇದ ಅಥವಾ ಟ್ಯಾಬೂ ಮೇಲಲ್ಲ) ಹೊಣೆಗಾರಿಕೆ ಮತ್ತು ಕರ್ತವ್ಯಗಳ ಜತೆ ಬಂಧಿತವಾಗಿದ್ದು ಅಂತಹ ಸಂಗತಿಗಳ ಪ್ರಯೋಗ ಮತ್ತು ಕ್ರಿಯಾನ್ವಯಕ್ಕೋಸ್ಕರ ಹಿಂದ್ ಸ್ವರಾಜ್ ಕೃತಿ ತನ್ನಿಂದ ಬರೆಯಲ್ಪಟ್ಟಿದೆ ಎಂಬುದು ಗಾಂಧಿಯ ಇಂಗಿತವಾಗಿತ್ತು. ಆ ಕಾರಣಕ್ಕಾಗಿಯೇ ಗಾಂಧಿ ಇದನ್ನು ಬರಿಯ ರಾಜಕೀಯ ಕೃತಿ ಅಲ್ಲ ಎನ್ನುತ್ತಾರೆ. ಗಾಂಧಿಯೇ ಹೇಳುವ ಹಾಗೆ, ‘ನಾನಿಲ್ಲಿ ರಾಜಕೀಯ ಭಾಷೆಯನ್ನು ಬಳಸಿದರೂ ಕೂಡಾ ನನ್ನ ಉದ್ದೇಶ ಧರ್ಮ’ ಎನ್ನುವುದು ಆ ಕಾಲದ ಅಗತ್ಯತೆಯ ಪ್ರತಿಫಲನದಂತೆಯೇ ಗೋಚರಿಸುತ್ತದೆ. ಹೀಗೆ ಗಾಂಧಿಯ ಹಿಂದ್ ಸ್ವರಾಜ್ ‘ಪ್ಲೇಟೋನ ಸಂಭಾಷಣೆಗಳು’ ಸಾಗುವ ಮಾದರಿಯಲ್ಲೇ ಅಥವಾ ಅವುಗಳನ್ನು ಓದುವ ರೀತಿಯ ‘ರಿಫ್ಲೆÉ್ಲಕ್ಟಿವ್ ಮಾದರಿ’ಯಲ್ಲಿ ಓದಿದರೆ ಅದರ ಚಾರಿತ್ರಿಕ, ಬೌದ್ಧಿಕ, ತಾತ್ವಿಕ ನೆಲೆಗಳು ಗೋಚರಿಸುತ್ತಾ ಹೋಗುತ್ತದೆ.
ಹಿಂದ್ ಸ್ವರಾಜ್ ಎಂಬ ಕೃತಿಯ ಸಂದರ್ಭ ಮ್ಯಾಕ್ವೆಲ್ಲಿಯ ‘ದಿ ಪ್ರಿನ್ಸ್’ ಅಥವಾ ಹಾಬ್ಸ್ನ ಲೆವಿಯಥಾನ್ ಸೃಷ್ಟಿಯಾದಂತಹ ಭೌತಿಕ ಪರಿಸರ ಮತ್ತು ಚಾರಿತ್ರಿಕ ಅವಧಿಯ ಸಂದರ್ಭಗಳ ಹಾಗೆ ಕಾಣಿಸುತ್ತದೆ. ಹಿಂದ್ ಸ್ವರಾಜ್ ಕೂಡಾ ಅದನ್ನು ಬರೆಯಲೇಬೇಕಾದ ತುರ್ತು ಮತ್ತು ಅಂತಹ ಭೌತಿಕ ಸನ್ನಿವೇಶದಲ್ಲಿ ಜನಿಸಿತ್ತು. ಜಗತ್ತಿನ ಯಾವುದೇ ಒಂದು ಭೌತಿಕ ಪರಿಸರ ಅಥವಾ ಸಾಮಾಜಿಕ ಪರಿಸರ ರೂಪಿತವಾಗುವುದು ಚಾರಿತ್ರಿಕ ಕಾಲಘಟ್ಟಗಳಲ್ಲಿ. ಕಾಲದೇಶಗಳೆಂಬ ಎರಡು ಸಂಗತಿಗಳು ಅದನ್ನು ರೂಪಿಸುತ್ತವೆ. ಇಂತಹ ಸಂದರ್ಭದಲ್ಲಿ ಪ್ರತಿಯೊಂದು ಕೃತಿಗಳು ಅದು ಸಾಹಿತ್ಯಿಕ ಕೃತಿ, ರಾಜಕೀಯ ಕೃತಿ ಅಥವಾ ಸಾಂಸ್ಕøತಿಕ ಕೃತಿಯಾದರೂ ಕೂಡಾ ಮೂಲಭೂತವಾಗಿ ಚಾರಿತ್ರಿಕ ಕೃತಿಯೇ ಆಗಿರುತ್ತದೆ. ಚರಿತ್ರೆ ಕೂಡಾ ಅಂತಹ ಕೃತಿಯನ್ನು ಪ್ರಭಾವಿಸಿದುದರ ಫಲವಾಗಿಯೇ ಅದು ರೂಪುಗೊಳ್ಳುತ್ತದೆ.11 ಇನ್ನು ಹಿಂದ್ ಸ್ವರಾಜ್ ಚರ್ಚೆಗೆ ಹಚ್ಚುವ ವಿಷಯಗಳಾದಂತಹ ನಾಗರಿಕತೆ, ಅಹಿಂಸೆ, ಹಿಂಸೆ ಮತ್ತು ಆಧುನಿಕತೆಗಳಂತಹ ಸಾಮಾಜಿಕ ವಿದ್ಯಮಾನಗಳೂ ಕೂಡಾ ಚಾರಿತ್ರಿಕ ಉತ್ಪನ್ನವಾದವುಗಳೇ ಹೊರತು ಅದು ನಿರ್ವಾತದಿಂದ ಹುಟ್ಟಿದಂತಹ ಅಥವಾ ಅತಿಮಾನುಷ ಶಕ್ತಿಯೊಂದರ ಉತ್ಪತ್ತಿಯಲ್ಲವೆಂಬ ಅಂಶವೂ ಕೂಡಾ ಈ ಹಿಂದ್ ಸ್ವರಾಜ್ ಕೃತಿಯ ಐತಿಹಾಸಿಕ ಓದನ್ನು ಜರೂರುಗೊಳಿಸುತ್ತದೆ. ಅದು ಗಾಂಧಿಯ ವೈಚಾರಿಕ, ಚಾರಿತ್ರಿಕ ಸ್ವರೂಪವನ್ನು ಮತ್ತು ಐತಿಹಾಸಿಕ ಪ್ರವಾದಿತನವನ್ನೂ ಕೂಡಾ ಜಾಹೀರು ಮಾಡುತ್ತಾ ಸಾಗುತ್ತದೆ.
ಗಾಂಧಿ ಆಧುನಿಕ ಭಾರತದಲ್ಲಿ ಮಾಡಿದ ರಾಜಕಾರಣದಿಂದ ಮತ್ತು ಸಮುದಾಯ ರಾಜಕಾರಣದ ವಸ್ತುವಿಷಯಗಳಾದ ಸಾಮ್ರಾಜ್ಯಶಾಹಿತ್ವ, ವಸಾಹತುಶಾಹಿತ್ವ, ಧರ್ಮ, ನೈತಿಕತೆ, ಸಮುದಾಯ, ಹಿಂಸೆ, ಅಹಿಂಸೆ, ಸ್ವರಾಜ್ಯ ಮುಂತಾದವುಗಳಲ್ಲಿ ಒಳಗೊಂಡು ಭಾಗವಹಿಸಿದ ಕಾರಣದಿಂದ ಹಿಂದ್ ಸ್ವರಾಜ್, ರಾಜಕೀಯ ಪಠ್ಯವೆನ್ನುವುದಾದರೆ ಒಂದು ನೆಲೆಯಲ್ಲಿ ಇದು ಸತ್ಯ. ಇನ್ನೊಂದು ನೆಲೆಯಲ್ಲಿ ಅಸಮರ್ಪಕ. ಗಾಂಧಿಯು ರಾಜಕಾರಣದ ಜೊತೆ ಹೊಂದಿದ್ದ ಸಂಬಂಧದ ಸ್ವರೂಪವೇನು? ಅವರೇ ಬರೆದ ತಾತ್ವಿಕ ರಾಜಕೀಯ ಚಿಂತನೆಗಳನ್ನು ಗಾಂಧಿ ರಾಜಕೀಯಾತ್ಮಕವಾಗಿ ಮಾಡಿದ್ದಾರೆಯೇ? ಎನ್ನುವಂತಹ ಪ್ರಶ್ನೆಗಳು ಗಾಂಧಿ ಒಬ್ಬ ಪಕ್ಕಾ ರಾಜಕಾರಣಿ ಹಾಗೂ ಹಿಂದ್ ಸ್ವರಾಜ್ ಒಂದು ರಾಜಕೀಯ ಕೃತಿ ಎಂಬುದನ್ನು ವಿವೇಚಿಸುವ ಹಾಗೆ ಮಾಡುತ್ತದೆ.12 ಹಿಂದ್ ಸ್ವರಾಜ್ ಬರೀ ಒಂದು ಪಠ್ಯವಾಗಿರದೇ ಜೀವನದಲ್ಲಿನ ಅಸ್ತಿತ್ವ ಮತ್ತು ಒಂಟಾಲಜಿಕಲ್ ಕಥನವಾಗಿ, ಬದುಕಿನ ಕ್ರಮದ ರೂಪಕವಾಗಿ ಕೂಡಾ ಮುನ್ನೆಲೆಯಲ್ಲಿ ಇದೆ.13 ಗಾಂಧಿಯೇ ಹೇಳುವ ಹಾಗೆ ``ಸಮಾಜ ಸುಧಾರಣೆಯ ಕೃತಿಯೊಂದು ರಾಜಕೀಯ ಕೃತಿಯೊಂದಕ್ಕೆ ಅಧೀನವಾಗಲಾರದು.''14 ಇನ್ನೂ ಮುಂದುವರಿದು ಗಾಂಧಿ, ನನ್ನ ಕೃತಿಯು ಸಾಮಾಜಿಕವಾಗಬೇಕಾದರೆ ಅದು ರಾಜಕೀಯ ಆಯಾಮದಿಂದ ಸಹಾಯವನ್ನು ಪಡೆಯಿತು ಎನ್ನುವುದು ಮುಖ್ಯವಲ್ಲ, ಬದಲು ಸಾಮಾಜಿಕವಾಗಿ ಸ್ವರಾಜ್ ರೂಪುಗೊಂಡಿz್ದÉೀ ಪ್ರಮುಖ15 ಎನ್ನುವ ಮಾತು ಹಿಂದ್ ಸ್ವರಾಜ್ ಸಾಮಾಜಿಕ ಕೃತಿ ಎಂಬುದನ್ನು ಹೇಳುವಂತಿದೆ. ತಾತ್ವಿಕ ರಚನೆ ಹಾಗೂ ಒಟ್ಟಾರೆಯಾಗಿ ಸ್ವಯಂ ಸರಳತೆ, ಸ್ವಯಂ ಬಡತನ ಮತ್ತು ನಿಧಾನಗತಿ16 ಎನ್ನುವ ನನ್ನ ಆದರ್ಶಗಳ ಚಿತ್ರವಾಗಿ ರೂಪುತಾಳಿತು ಎನ್ನುವ
ಗಾಂಧಿಯ ವಾದವನ್ನೂ ಕೂಡಾ ಇದು ಮಾನ್ಯ ಮಾಡುತ್ತದೆ.17 ಇದಲ್ಲದೆ ಇಡೀ ಕೃತಿಯ ಹಿಂದೆ ರಾಜಕಾರಣದ ಗಾಂಧಿಯ ಆಶಯವಿದೆ ಎನ್ನುವುದನ್ನೇ ಇದು ನಿರಾಕರಿಸುತ್ತಾ ಸಾಗುತ್ತದೆ. ಇನ್ನೊಂದು ಸಂದರ್ಭದಲ್ಲಿ ಗಾಂಧಿಯೇ ಹೇಳುವ ಹಾಗೆ, ನನಗೆ ಸಾಮಾಜಿಕ ಸುಧಾರಣೆ ಮತ್ತು ಸ್ವ-ಪರಿಶುದ್ದೀಕರಣದ ಪ್ರಕ್ರಿಯೆಗಳು ರಾಜಕೀಯ ಕಾರ್ಯಗಳಿಗಿಂತ ನೂರು ಪಟ್ಟು ಪ್ರಿಯವಾದುದು ಎನ್ನುವ ಮಾತು ಕೂಡಾ ಹಿಂದ್ ಸ್ವರಾಜ್ ಬರೀ ರಾಜಕೀಯ ಪಠ್ಯವಲ್ಲ, ಬದಲು ಅದು ರಾಜಕೀಯವನ್ನು ಮೀರಿದ ಒಂದು ದಾರ್ಶನಿಕ ಕೃತಿಯೆಂಬುದನ್ನು ಮನವರಿಕೆ ಮಾಡುತ್ತ ಹೋಗುತ್ತದೆ.18 ತಾತ್ವಿಕವಾಗಿ ಮತ್ತು ಪ್ರಾಯೋಗಿಕವಾಗಿ ಗಾಂಧಿಯೇ ಹೇಳುವ ಹಾಗೆ ರಾಜಕೀಯ ಗಾಂಧಿಗೆ ಸೆಕೆಂಡರಿ ಆಗಿತ್ತು.19 ಇದು ಬರೀ ಹಿಂದ್ ಸ್ವರಾಜ್ ಮಟ್ಟಿಗಿರುವ ತರ್ಕವಲ್ಲ. ಹೇಗೆ ಕಮ್ಯುನಿಸ್ಟ್ ಮ್ಯನಿಫೆಸ್ಟೋಗೆ ರಾಜಕೀಯ ಪಠ್ಯಗಳನ್ನು ಮೀರಿದ ಆಯಾಮವಿದೆಯೇ ಅದೇ ರೀತಿಯಲ್ಲಿ ಹಿಂದ್ ಸ್ವರಾಜ್ನ್ನು ಕೂಡಾ ಹಲವು ನೆಲೆ, ಕೋನ ಮತ್ತು ಆಯಾಮಗಳ ಮೂಲಕ ಪರಿಭಾವಿಸಬಹುದು. ಜೊತೆಗೆ ಮುಖ್ಯವಾಗಿ ಚರಿತ್ರೆಯ ಹಾಗೂ ಮಾನವ ಜೀವನದ ತಾತ್ವಿಕ ಪಠ್ಯವನ್ನಾಗಿಯೂ ಗುರುತಿಸಬಹುದು.20
ಗಾಂಧಿಯ ‘ಸ್ವ-ಶುದ್ಧಿ’ (ಸೆಲ್ಫ್ ಪ್ಯುರಿಪಿಕೇಶನ್)ಯೆನ್ನುವ ಈ ಪರಿಕಲ್ಪನೆ ಇದುವರೆಗೂ ಸಮಾಜದ ಹೊರಗಿದ್ದು ಈಗ ಸಾಮಾಜಿಕ ಅಸ್ತಿತ್ವವನ್ನು ಕಂಡುಕೊಳ್ಳುವ ಪ್ರಯತ್ನವಲ್ಲ, ಬದಲಿಗೆ `ಸ್ವ-ಶುದ್ಧಿ' ಆ ಸಮಕಾಲೀನ ಸಮಾಜದ ಜವಾಬ್ದಾರಿ ಕೂಡಾ ಹೌದು ಎನ್ನುವ ಚಾರಿತ್ರಿಕ ಸತ್ಯವನ್ನು ಪ್ರಕಟಪಡಿಸುವಂತಹ ಬಗೆಯದು. ಅದು ತಾನು ಎನ್ಲೈಟನ್ಡ್ ರಿಫಾರ್ಮರ್ ಆಗುವ ಬಗೆಗಿಂತ, ಸಮಾಜ ಅಂತಹ ಆಚರಣೆಯನ್ನು ವೈಯಕ್ತಿಕವಾಗಿ ಮತ್ತು ಸಾಮಾಜಿಕವಾಗಿ ಕ್ರಿಯಾಶೀಲ ನೆಲೆಗಳಲ್ಲಿ ಹೊಂದಬೇಕು ಎಂಬುದು ಇದರ ಇಂಗಿತ. ಇದು ಸಾಮಾಜಿಕವಾಗಿ ನಿಹಿತಗೊಳ್ಳುವ ಚಾರಿತ್ರಿಕ ಸಂದರ್ಭವೂ ಅಲ್ಲ. ಬದಲು ಅದÀ ಆ್ಯಕ್ಟವ್ ವಲ್À್ರ್ಡ ಎಂಗೇಜ್ಮೆಂಟ್ ಆಗಿದೆ. ಒಂದು ರೀತಿ ಸಮಾಜವನ್ನು, ಹೋರಾಟ ಮಾಡಬೇಕಾದ ಸಮುದಾಯ ಸಮಷ್ಟಿಯನ್ನು ಗದ್ದೆಯ ನಾಟಿಗಿಂತ ಮುಂಚೆ ಹದಗೊಳಿಸುವ, ಅಥವಾ ಕ್ಷೇತ್ರ ಸಜ್ಜುಗೊಳಿಸುವ ಚರಿತ್ರೆಯ ಅವಕಾಶವಷ್ಟೇ.21 ಈ ರೀತಿಯ ಕ್ರಮ ಅಥವಾ ವಿಧಾನಗಳ ಮೂಲಕ ವಸಾಹತುಶಾಹೀ ಎಂಬ ಚಾರಿತ್ರಿಕ ಪ್ರಕ್ರಿಯೆಯಿಂದ ಭಾರತವನ್ನು ಬಿಡಿಸುವುದು ಇದರ ಜವಾಬ್ದಾರಿ. ಒಟ್ಟಾರೆ ಈ ಪ್ರಕ್ರಿಯೆಯನ್ನು ವಿರೋಧಿಸಲು, ಸಮಕಾಲೀನ ಚಾರಿತ್ರಿಕ ಸಮಕಾಲಿಕ ಸಮಾಜವನ್ನು ಸಜ್ಜುಗೊಳಿಸಲು ಹೆಣೆದ ತಾತ್ವಿಕ ಮತ್ತು ವೈಚಾರಿಕ ಪ್ರಣಾಳಿಕೆಯೇ ಹಿಂದ್ ಸ್ವರಾಜ್. ಇಂತಹ ಪ್ರಣಾಳಿಕೆ ಅಥವಾ ಮುಕ್ತಿಯ ಕಾರ್ಯಸೂಚಿಯನ್ನು ವ್ಯವಸ್ಥಾಪಿಸುವ ನಾಯಕ ಕೂಡಾ ಸ್ವ-ಶುದ್ಧಿಗೆ ಒಳಪಡಬೇಕು22 ಮತ್ತು ಈ ಕಾರಣದಿಂದಲೇ ಭಾರತದಲ್ಲಿ 19ನೆಯ ಶತಮಾನÀದ ಸಮಾಜೋ-ಧಾರ್ಮಿಕ ಸಾಂಸ್ಕøತಿಕ ಚಳುವಳಿ ಮತ್ತು ಇಂಗ್ಲಿಷ್ ಶಿP್ಷÀಣದಿಂದ ಹುಟ್ಟಿದಂತಹ ಯುರೋಪಿಯನ್ ಮಾದರಿಯ ಅಥವಾ ವಸಾಹತುಶಾಹೀ ಉಪಉತ್ಪನ್ನರೂಪೀ ಮಾದರಿಯ ಆ್ಯಕ್ಟಿವಿಸ್ಟ್ ಮಾಡರ್ನ್ನೈಸರ್ ಅನ್ನು ಗಾಂಧಿ ತಿರಸ್ಕರಿಸಿದರು.23 ಅಂತಹ ಒಂದು ಮುಕ್ತಿಯ ಚಾರಿತ್ರಿಕ ಹಂತz ಸೋಶಿಯಲ್ ರಿಫಾರ್ಮ್ ಅಥವಾ ಗಾಂಧಿ ಹೇಳುವ ಸೆಲ್ಫ್ ಪ್ಯುರಿಪಿಕೇಶನ್ ಪ್ರಕ್ರಿಯೆಯ ನಾಯಕನನ್ನು ದೇಸೀಯ ಅಥವಾ ಆಧುನಿಕತೆಗೆ ವಿರೋಧವಾದಂತಹ ಭಾರತೀಯ ಪ್ರದೇಶದ ವಿಶಿಷ್ಟ ಅವಕಾಶಗಳಲ್ಲಿ ಹುಡುಕಬೇಕೆಂದು ಪ್ರತಿಪಾದಿಸಿದರು.24 ಹೀಗೆ ಒಟ್ಟಾರೆ ಗಾಂಧಿಯ ಆಶಯಗಳನ್ನು ನಾವು ಹಿಂದ್ ಸ್ವರಾಜ್ನ ಮೂಲಕ ಗಮನಿಸುವುದಾದರೆ ಹಿಂದ್ ಸ್ವರಾಜ್ ಕೇವಲ ಒಂದು ರಾಜಕೀಯ ಪಠ್ಯವೆನ್ನುವುದೇ ಒಂದು ಮಿಥ್ಯ. ರಾಜಕೀಯ ಆಶಯಕ್ಕಿಂತ ಹೆಚ್ಚು ಗಾಂಧಿ ಹಿಂದ್ ಸ್ವರಾಜ್ನ ಮೂಲಕ ಬರೀ ವೈಯಕ್ತಿಕ ಪ್ರಜ್ಞೆಯನ್ನು ಮಾತ್ರ ಸಂಕೇತಿಸಲಿಲ್ಲ. ಬದಲು ಇಡೀ ಪರಿಸರ ಅಥವಾ ಸಮಷ್ಠಿಯ ಪ್ರಜ್ಞೆಯನ್ನೂ, ಅದು ಬಲಿಯಬೇಕಾದುದನ್ನು ವಿವರಿಸುತ್ತಾ ಅದನ್ನು ಸ್ವ-ಶುದ್ಧಿ ಎನ್ನುವ ಅತ್ಯಂತ ಸಂಕೀರ್ಣ ಮತ್ತು ವಿಸ್ತಾರವಾದ ನುಡಿಗಟ್ಟುಗಳಲ್ಲಿ ವಿವರಿಸಿದರು. ಗಾಂಧಿಗೆ ಇಂತಹ ಸ್ವ-ಶುದ್ಧಿಯು ಬರೀ ಚಿಕ್ಕ ಗುಂಪುಗಳಲ್ಲಿ ಉಳಿಯದೇ ಸಾರ್ವಜನಿಕವಾಗಿ ಚರ್ಚೆಗೊಳಗಾಗಿ ಅದು ಕಾಣಬೇಕು ಮತ್ತು ವ್ಯಕ್ತವಾಗಬೇಕು ಎಂಬ ಅಭಿಪ್ರಾಯವಿತ್ತು. 1909ರಲ್ಲಿ ಬಂದ ಈ ಪಠ್ಯದ ಇಂಗ್ಲಿಷ್ ಆವೃತ್ತಿಯನ್ನು 1939ರ ಹೊತ್ತಿಗೆ ಗಾಂಧಿ ತರುವ ಹೊತ್ತಿಗೆ ಹಿಂದ್ ಸ್ವರಾಜ್ ಪಠ್ಯದ ಮೂಲಭೂತ ಆಶಯಗಳನ್ನೇ ಪರೀಕ್ಷಿಸಿದಂತಹ ಘಟನೆಗಳು ಘಟಿಸಿದವು. ಮುಖ್ಯವಾಗಿ 1939ರ ಪಾಕಿಸ್ತಾನ್ ರೆಸಲ್ಯೂಶನ್ ಮತ್ತು ಸುಮಾರು 1935ರ ನಂತರ ಉಂಟಾದ ಗಾಂಧಿ ಅಂಬೇಡ್ಕರ್ ಇಬ್ಬಂದಿತನಗಳು. ಇವೆರಡೂ ಕೂಡಾ ಗಾಂಧಿಯ ತಾತ್ವಿಕ ಆಶಯಗಳಾದ ಹಿಂದೂ ಮುಸ್ಲಿಂ ಏಕತೆ ಮತ್ತು ಹಿಂದೂ ಸಮಾಜದ ಸುಧಾರಣೆಯನ್ನೇ ಪ್ರಶ್ನಿಸಿದುವು.25ಹೀಗೆ ಅP್ಷÀರಶಃ ಗಾಂಧಿ ನಿರೂಪಿಸಿದ ಓದುಗ ಮತ್ತು ಸಂಪಾದಕ ಎನ್ನುವ ಎರಡು ಪಾತ್ರಗಳ ನಡುವೆ ಸೃಷ್ಟಿಸಿದ ಚಾರಿತ್ರಿಕ ಮತ್ತು ಬದುಕಿನ ತಾತ್ವಿಕತೆಯ ಒಂಟಾಲಜಿಕಲ್ ನಾಟಕವಾಯ್ತು ಹಿಂದ್ ಸ್ವರಾಜ್.26 ಒಟ್ಟಾರೆಯಾಗಿ ಹಿಂದ್ ಸ್ವರಾಜ್ ಎಂಬ ಪಠ್ಯ ಆಧುನಿಕತೆ ಮತ್ತು ಯುರೋಪಿನ ಸಾಮ್ರಾಜ್ಯಶಾಹಿಯನ್ನು ಎದುರಿಸಿದ ತಾತ್ವಿಕ ಚಾರಿತ್ರಿಕ ಪ್ರತಿರೋಧವಾಯ್ತು.27 ಪ್ರಗತಿ ಮತ್ತು ಆಧುನಿಕತೆಯನ್ನು ವಿರೋಧಿಸಿ ಹೊಸ ಸೌಂದರ್ಯ ಪ್ರಜ್ಞೆಯನ್ನು ಕಾಣಬೇಕಿದ್ದ ಗಾಂಧಿ ಚರಿತ್ರೆಯ ಪ್ರವಾದಿಯಾದರು.28 ಇಂತಹz್ದÉೀ ಸ್ವರೂಪವನ್ನು ನಾವು 1909ರಲ್ಲಿ ಪ್ರಕಟವಾದ ಫ್ಯೂಚರಿಸ್ಟ್ ಮ್ಯನಿಫೆಸ್ಟೋ ಕೃತಿಯಲ್ಲಿಯೂ ಕಾಣಬಹುದು ಮತ್ತು ರಾಜಕೀಯ ಪಠ್ಯವನ್ನು ಮೀರಿ ಹಲವಾರು ಆಯಾಮಗಳಲ್ಲಿ ಅದು ಗೋಚರಿಸುವುದನ್ನೂ ಕೂಡಾ ಕಾಣಬಹುದು.
ಹಿಂದ್ ಸ್ವರಾಜ್ ಸೇರಿದಂತೆ ಗಾಂಧಿಯ ಎಲ್ಲ ಬರವಣಿಗೆಗಳನ್ನು ರಾಜಕೀಯೇತರ ಮತ್ತು ಸಾಹಿತ್ಯೇತರ ನೆಲೆಯಲ್ಲಿ ನೋಡುವುದಕ್ಕಿಂತ ಹೆಚ್ಚು ಇನ್ನೂ ಸಮಗ್ರವಾಗಿ, ವಿವಿಧ ಆಯಾಮಗಳಿಂದ ನೋಡಬೇಕಾಗುತ್ತದೆ. ಪೆÇೀಸ್ಟ್ ಮಾಡರ್ನಿಸ್ಟ್ ನೆಲೆಯೂ ಸೇರಿದಂತೆ ಸಮಗ್ರ ನೆಲೆ ಈ ಕುರಿತಂತೆ ಬೇಕಿದೆ. ಹಾಗೆಂದರೆ ಹಿಂದ್ ಸ್ವರಾಜ್ ಮತ್ತು ಗಾಂಧಿಯ ಹೆಚ್ಚಿನ ಬರಹಗಳು ಮಿಸ್ರೀಡಿಂಗ್ ಆಗಿವೆ ಎಂದಲ್ಲ. ಅವೂ ಕೂಡಾ ಗಾಂಧಿಯನ್ನು, ಗಾಂಧಿಯ ಅಲೋಚನೆಯನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನದಲ್ಲಿ ಆಸುಪಾಸಿನಲ್ಲಿ ಸುಳಿದಂತಹ, ಕೆಲವೊಮ್ಮೆ ಗಾಂಧಿಯನ್ನು ಮುಟ್ಟಿದಂತಹ ಅನುಭವದ ಓದುಗಳೂ ಕೂಡಾ ಆಗಿವೆ. ಗಾಂಧಿಯನ್ನು ಓದುವ ಕ್ರಮ ಕೆಲವೊಮ್ಮೆ ಕವಿತೆಯನ್ನು ಓದುವ ಬಗೆ ಮತ್ತು ಕ್ರಮವೂ ಕೂಡಾ ಆಗಬೇಕು. ಕವಿಯ ಅರ್ಥ ಮತ್ತು ಕವಿಯು ಅರ್ಥೈಸಿಕೊಳ್ಳುವಲ್ಲಿನ ಮಿತಿರಾಹಿತ್ಯತೆ ಕೂಡಾ ಈ ನೆಲೆಯಲ್ಲಿ ಗಾಂಧಿಯನ್ನು ಹೆಚ್ಚು ಅರ್ಥ ಮಾಡಿಕೊಳ್ಳಲು ನೆರವಾಗಬಲ್ಲುದು. ಇದರ ಬದಲಿಗೆ ಗಾಂಧಿಯ ಬರಹ ಮತ್ತು ಹಿಂದ್ ಸ್ವರಾಜ್ನÀಂತಹ ಪಠ್ಯವನ್ನು ಬರೀ ರಾಜಕೀಯ ಪಠ್ಯ ಎಂದು ಮಾತ್ರ ವರ್ಗೀಕರಿಸಿ ಅದನ್ನು ಓದುತ್ತಾ ಹೋದರೆ ಅದು ಇತರ ಸತ್ಯ ಮತ್ತು ಅರ್ಥಸಾಧ್ಯತೆಗಳನ್ನು ನಿರಚಿಸಲು ಹೆಣಗುತ್ತದೆ. ಗಾಂಧಿಯ ಬದುಕನ್ನು ಮತ್ತು ಅವರ ಸಾಮಾಜಿಕ ಜೀವನವನ್ನು ಗಾಢವಾಗಿ ಪ್ರಭಾವಿಸಿದ ಭಗವದ್ಗೀತೆಯ ಕುರಿತು ಜೀವಿತದ ಕೊನೆಯಲ್ಲಿ ಗಾಂಧಿ ಹೊಂದಿದ ಅಭಿಪ್ರಾಯ ತುಂಬಾ ಭಿನ್ನವಾದುದಾಗಿತ್ತು. ಜೀವನದಲ್ಲಿ ಸಂಪೂರ್ಣ ನಿಸ್ಸಂಗ ಸಾಧ್ಯವಾಗುವುದು ಗೀತೆ ಮತ್ತು ವೀರತ್ವದಿಂದಲ್ಲ. ಬದಲು ಅಹಿಂಸೆಯೆಂಬ ಮಂತ್ರದಿಂದ ಎಂಬ ನಿಲುವನ್ನು ಗಾಂಧಿ ಹೊಂದಿದ್ದರು. ಹೀಗೆ ಗಾಂಧಿಗೆ ಆರಂಭದ ಭಗವದ್ಗೀತೆಯ ಆಪ್ತತೆ ಕಳೆದು ಅಹಿಂಸೆ ಲಭ್ಯವಾಗಿರುವ ವೈಚಾರಿಕ ಮತ್ತು ತಾತ್ವಿಕ ಮನೋಭಾವದ ಸ್ಥಿತ್ಯಂತರ ಉಂಟಾಗಿರುವುದನ್ನು ಕೂಡಾ ನಾವು ಗಮನಿಸಬಹುದು. ದೇವರ ಬಗೆಗೂ ಕೂಡಾ ಗಾಂದಿಯ ದೃಷ್ಟಿ ಹೀಗೆ ಇತ್ತು. ಮೊದಲು ಗಾಂಧಿ ದೇವರೇ ಸತ್ಯವೆನ್ನುತ್ತಿದ್ದರು, ಆದರೆ ಕ್ರಮೇಣ 1930-40ರ ಹೊತ್ತಿಗೆ ಸತ್ಯವೇ ದೇವರು ಎನ್ನುವ ಸ್ಥಿತ್ಯಂತರವನ್ನು ಸಾಧಿಸಿದರು. ಹೀಗೆ ಹಿಂದ್ ಸ್ವರಾಜ್ ಸೇರಿದಂತೆ ಗಾಂಧಿಯ ಬರಹವನ್ನು ಕೇವಲ ಒಂದೇ ನೆಲೆಯ ಪಠ್ಯವೆಂದು ಗ್ರಹಿಸುವುದರಿಂದ ಈ ರೀತಿ ಗಾಂಧಿ ತಾತ್ವಿಕತೆಯ ಅಸ್ಥಿತಿಸ್ಥಾಪಕತೆ ಗೋಚರವಾಗದೆ ಹೋಗಬಹುದು.29
ಹಿಂದ್ ಸ್ವರಾಜ್ ಅನ್ನು ಕೇವಲ ರಾಜಕೀಯ ಪಠ್ಯವೆಂದು ಬಗೆಯುವಲ್ಲಿರುವ ಇನ್ನೊಂದು ತೊಡಕೆಂದರೆ ಅದು ಒಳಗೊಂಡಿರುವಂತಹ ಆಧುನಿಕ ನಾಗರಿಕತೆಯನ್ನು ಕಟುವಾಗಿ ವಿಮರ್ಶಿಸಿದ ಕ್ರಮ. ಗಾಂಧಿಯೇ ಹೇಳುವ ``ಭಾರತವೀಗ ಯುರೋಪಿನ ನಾಗರೀಕತೆಯ ಚಪ್ಪಲಿಯಡಿಯಲ್ಲಿದೆ'' ಎಂಬ ಹೇಳಿಕೆ ಹಿಂದ್ ಸ್ವರಾಜ್ ಬರೀ ಯಂತ್ರ ಮತ್ತು ತಂತ್ರಜ್ಞಾನವನ್ನು ಮಾತ್ರ ಕಟುವಾಗಿ ವಿಮರ್ಶಿಸಿದೆÀ ಎಂದು ಹೇಳುವ ಹಾಗಿಲ್ಲ. ಇದರ ಜೊತೆಗೆ ಆಧುನಿಕತೆ, ಯಂತ್ರ, ಜ್ಞಾನ, ತಂತ್ರಜ್ಞಾನ, ತಥಾಕಥಿತ ನಾಗರಿಕ ಸಮಾಜಗಳನ್ನೊಳಗೊಂಡಂತಹ ಒಂದು ನಾಗರೀಕತೆಯನ್ನೇ ವಿಮರ್ಶಿಸುವ ಚಾರಿತ್ರಿಕ ಸಂದರ್ಭವನ್ನು ಸೃಷ್ಟಿಸಿದ ಕ್ರಮದ ಮೂಲಕವೂ ಹಿಂದ್ ಸ್ವರಾಜ್ ಅನ್ನು ನೋಡಬಹುದು. ಗಾಂಧಿ ಹಿಂದ್ ಸ್ವರಾಜ್ನಲ್ಲಿ ಉಲ್ಲೇಖಿಸುವ ಧಾರ್ಮಿಕತೆ, ದೇವರ ಅಗತ್ಯತೆ ಮತ್ತು ಇದರ ವಿರುದ್ಧದ ಮಾನವನ ಉಡಾಫೆತನಗಳೂ, ಅಹಂಕಾರವೂ ಕೂಡಾ ಆಧುನಿಕತೆ ಮತ್ತು ಯುರೋಪಿನ ಸಾರ್ವಭೌಮ ನಾಗರೀಕತೆ ಸೃಷ್ಟಿಸಿದ ಪರಿಣಾಮಗಳೆಂದೇ ಅಭಿಪ್ರಾಯಿಸುತ್ತಾರೆ.30 ಗಾಂಧಿ, ರೈಲು ಮತ್ತು ಯಂತ್ರ-ತಂತ್ರಜ್ಞಾನವನ್ನು ವಿರೋಧಿಸಿದ್ದೂ ಕೂಡಾ ಮಾನವನಿಗೆ ಹೊಸ ನಾಗರೀಕತೆ ಕೊಟ್ಟ ಉಡಾಫÉಯ ಶಕ್ತಿ ಸಂಕೇತಗಳ ಕಾರಣದಿಂದ. ಇಂತಹ ನಾಗರೀಕತೆಯಿಂದಾಗಿ ಮಾನವ ಮತ್ತು ನಿಸರ್ಗದ ನಡುವೆ ಕಂದಕÀವುಂಟಾಗಿದೆ ಎಂಬುದನ್ನು ಹಾಗೂ ಆಧುನಿಕತೆಯು ಕೊಳ್ಳ್ಳುಬಾಕತನವನ್ನು ಉಂಟುಮಾಡಿದೆ ಎಂಬುದನ್ನು ಬಯಲಿಗೆಳೆದದ್ದೂ ಕೂಡಾ ಗಾಂಧಿಯೇ. ಮಾನವನೇ, ತನ್ನ ಮತ್ತು ಮಾನವೇತರ ಜೀವಿಗಳ ಸಂಬಂಧವನ್ನು ಕಡೆಗಣಿಸುತ್ತಾ ಬಂದ ಎನ್ನುತ್ತಾ ಒಂದು ಹಂತದಲ್ಲಿ ನಾನು ಹ್ಯೂಮನಿಸ್ಟ್ ಅಲ್ಲವೇ ಅಲ್ಲ ಎಂಬ ಅಭಿಪ್ರಾಯವನ್ನೂ ಗಾಂಧಿ ತಾಳಿದರು. ಈ ಹ್ಯೂಮನಿಸ್ಟ್ ನೆಲೆ ಬರೀ ಮಾನವ ಕೇಂದ್ರಿತವಾಗಿ, ಮಾನವೇತರರನ್ನು ಪರಿಧಿಗೆ ತಳ್ಳಿ ಸಹಜತೆಯನ್ನು ಮುರಿಯುತ್ತದೆ ಎಂಬುದು ಗಾಂಧಿಯ ವಾದವಾಗಿತ್ತು. ಅದರರ್ಥ ಪುನಃ ಮಾನವ ಸಮುದಾಯ ಪ್ರಾಗಿತಿಹಾಸದ ಗವಿಗಳಿಗೆ ತೆರಳುವ ಪ್ರತಿಗಾಮೀತನದ ತರ್ಕ ಗಾಂಧಿಯದಾಗಿರಲಿಲ್ಲ. ಬದಲು ಮಾನವ-ಪ್ರಕೃತಿಯ ಜೊತೆಗಿನ ಸಂಬಂಧಕ್ಕೆ ಬಿಗುವು ಬರಬಾರದು ಎಂಬುದು ಗಾಂಧಿಯ ಒಟ್ಟಾರೆ ನಾಗರೀಕತೆಯ ಟೀಕೆಯ ಹಿಂದಿರುವ ತರ್ಕ. ಮಾನವ ದೇಹವೇ ಪ್ರಕೃತಿ ಸೃಜಿಸಿದ ಒಂದು ಯಂತ್ರವೆಂದು ಗಾಂಧಿ ನಂಬಿದ್ದರು. ಆದರೆ ಆಧುನಿಕ ಯಂತ್ರಕ್ಕೆ ಮಾನವ ದಾಸನಾಗುವುದು ಮತ್ತು ತನ್ಮೂಲಕ ಸೃಷ್ಟಿಯ ಜೊತೆಗಿನ ಸಖ್ಯದ ಮುರಿತ ಗಾಂಧಿಯ ಆತಂಕವಾಗಿತ್ತು. ಇದಲ್ಲದೇ ಹಿಂದ್ ಸ್ವರಾಜ್ನಲ್ಲಿ ಆಧುನಿಕ ನಾಗರೀಕತೆಯು ತಂದ ಚರಿತ್ರೆಯನ್ನು ವಿಮರ್ಶಿಸುವ ಗಾಂಧಿ, ಚರಿತ್ರೆ ಬರೀ ಜ್ಞಾನವ್ಯವಸ್ಥೆಯಾಗಿದೆಯೇ ಹೊರತು ಸತ್ಯದ ವ್ಯವಸ್ಥೆಯಲ್ಲವೆನ್ನುತ್ತಾ ಚರಿತ್ರೆ ಪ್ರಕೃತಿಯಲ್ಲಿ ಮಾನವ ಮಾಡುವ ಹಸ್ತಕ್ಷೇಪವನ್ನು ದಾಖಲಿಸುತ್ತದೆಯೇ ಹೊರತು ವಿನಯ, ಸಹಜತೆ ಮತ್ತು ವಿಧೇಯತೆಯನ್ನಲ್ಲ ಎಂದು ವಾದಿಸುತ್ತಾರೆ. ಚರಿತ್ರೆಯು ಗೆಲುವನ್ನು ಅಂದರೆ ಪ್ರಕೃತಿಯ ಮೇಲೆ ಮಾನವ ನಡೆಸುವ ಗೆಲುವಿನ ದಾಖಲೆಯನ್ನು ತಿಳಿಸುತ್ತದೆ ಹಾಗಾಗಿ ಅದು ವ್ಯರ್ಥ ಎಂಬ ನಿಲುವನ್ನೂ ಕೂಡಾ ಗಾಂಧಿ ಈ ಸಂದರ್ಭದಲ್ಲಿ ತಳೆದರು. ಸತ್ಯವೂ ಕೂಡಾ ಚರಿತ್ರೆಯ ಈ ಬಗೆಯ ದಾಖಲೆಯ ಕ್ರಮದಿಂದ ಮತ್ತು ಪರಿಧಿಯಿಂದ ಹೊರನಿಲ್ಲುತ್ತದೆಯೆಂಬ ಗ್ರಹಿಕೆ ಕೂಡಾ ಗಾಂಧಿಯದಾಗಿತ್ತು. ಇಲ್ಲಿ ನನಗೆ ಬಹಳ ಮುಖ್ಯವಾಗುವುದು ಚರಿತ್ರೆಯ ತಾತ್ವಿಕತೆ ಅಥವಾ ಫಿಲಾಸಫಿಯನ್ನು ಗಾಂಧಿ ಪರೀಕ್ಷೆಗೊಡ್ಡುವ ಕ್ರಮ. ಜಗತ್ತಿನ ಪ್ರಸಿದ್ಧ ಚರಿತ್ರೆಯ ಫಿಲಾಸಫರ್ ಆದಂತಹ ಆರ್.ಜಿ. ಕಾಲಿಂಗ್ ವುಡ್, ಆರ್ಥರ್ ಮಾರ್ವಿಕ್, ಹೇಡನ್ ವೈಟ್, ಕಾರ್ಲ್. ಸಿ. ಪೊಪ್ಪರ್, ಪೀಟರ್ ಜಂಕಿನ್ಸ್ ಮತ್ತು ಈ.ಎಚ್. ಕಾರ್ ಯೋಚಿಸಿದ ರೀತಿಯಲ್ಲಿ ಚರಿತ್ರೆಯ ಫಿಲಾಸಫಿಯನ್ನು ಗಾಂಧಿ ಆಲೋಚಿಸುತ್ತಾರೆ. ಆಧುನಿಕೋತ್ತರ ನೆಲೆಯಲ್ಲಿ ಯೋಚನೆ ಮಾಡಿದರೆ ದೀಪೇಶ್ ಚಕ್ರವರ್ತಿ ಹೇಳುವ ಹಾಗೆ, ``ಮರಕ್ಕೆ ಕೂಡಾ ಚರಿತ್ರೆ ಬೇಕು.'' ಆಗಷ್ಟೇ ಚರಿತ್ರೆ ತುಸು ಮಟ್ಟಿಗೆ ಸಮಗ್ರವಾಗುತ್ತದೆ ಎನ್ನುವ ನೆಲೆಗೆ ಹತ್ತಿರದ ಇಕಾಲಾಜಿಕಲ್- ಆಧುನಿಕೋತ್ತರ ಯೋಚನೆಯನ್ನು ಗಾಂಧಿ 100 ವರ್ಷದ ಹಿಂದೆ ಯೋಚಿಸಿ, ವಿವರಿಸಿ, ಆಗ್ರಹಿಸಿದ ಕ್ರಮದ ಸಾದೃಶ ಕಾಣ್ಕೆಯೂ ಆಗಿದೆ ಈ ಕೃತಿ. ಜೊತೆಗೆ, ಇದುವರೆಗೆ ಹಿಂದ್ ಸ್ವರಾಜ್ ಅನ್ನು ಬಹಳ ಸರಳವಾಗಿ ವಿವರಿಸಲಾಗಿದೆಯೇನೋ ಎನ್ನುವ ಸಂಶಯವನ್ನೂ ತಾಳುವಂತೆ ಮಾಡುತ್ತದೆ. 1940ರ ಸುಮಾರಿಗೆ ವಾಲ್ಟರ್ ಬೆಂಜಮಿನ್ ತನ್ನ ‘ಹಿಸ್ಟರಿ ಆಫ್ ಫಿಲಾಸಪಿ’ü ಎಂಬ ಕೃತಿಯಲ್ಲಿ ಪ್ರಗತಿ ಮತ್ತು ಚರಿತ್ರೆಯನ್ನು ತಳುಕುಹಾಕಿ ವಿಮರ್ಶಿಸಿದ ಕ್ರಮಕ್ಕಿಂತ ಸಂಕೀರ್ಣವಾಗಿ ಗಾಂದಿ,ü ಹಿಂದ್ ಸ್ವರಾಜ್ನಲ್ಲಿ ಒಬ್ಬ ಚರಿತ್ರೆಯ ಫಿಲಾಸಫರ್ ಎನ್ನುವಷ್ಟ್ಟರ ಮಟ್ಟಿಗೆ ಚರಿತ್ರೆಯ ತಾತ್ತ್ವಿಕತೆಯನ್ನು ಚರ್ಚಿಸಿರುವುದು ಚೋದ್ಯವೇ ಸರಿ.31 ಹೀಗೆ ಆಧುನಿಕ ನಾಗರೀಕತೆ ತನ್ನೆಲ್ಲಾ ಆಯಾಮಗಳ ಜೊತೆ ಹಿಂಸೆಯನ್ನು ಉತ್ಪಾದಿಸುತ್ತದೆ. ನಾನು ಈ ಹಿಂಸೆಯನ್ನು ವಿರೋಧಿಸಿ ಬ್ರಿಟೀಷರ ಮೂಲಕವೇ ಅಹಿಂಸೆಯನ್ನೂ ಪ್ರಚುರಪಡಿಸಿ, ಆಧುನಿಕ ನಾಗರೀಕತೆ, ಸಾಮ್ರಾಜ್ಯಶಾಹಿತ್ವ ಮತ್ತು ಹಿಂಸೆಯ ವಿರುದ್ಧ ಹೋರಾಟ ಮಾಡುವುದೇ ಪರಿಹಾರವೆಂಬುದು ಗಾಂಧಿಯ ಇಂಗಿತ ಆಗಿತ್ತು. ಹೀಗೆ ಬರೀ ರಾಜಕೀಯ ಪಠ್ಯಕ್ಕಿಂತ ಹೆಚ್ಚಿನದನ್ನು, ಸಮಗ್ರತೆಯನ್ನು ಹಿಂದ್ ಸ್ವರಾಜ್ ಹೊಂದಿದೆ. ನಾಗರೀಕತೆಯನ್ನು ಗಾಂಧಿ ವಿಮರ್ಶಿಸಿದ ಕ್ರಮವೂ ಕೂಡಾ ಇದಕ್ಕೆ ಸಾಕ್ಷಿ. ಇದು ಹಿಂದ್ ಸ್ವರಾಜನ್ನು ಬರೀ ರಾಜಕೀಯ ಪಠ್ಯವಾಗುವುದರಿಂದ ವಿಮುಖವಾಗಿಸಿ ಅದನ್ನೊಂದು ತಾತ್ವಿಕ, ಬದುಕಿನ ದರ್ಶನ, ಚಾರಿತ್ರಿಕ ಗ್ರಹಿಕೆಯ ಮತ್ತು ಕವಿಸತ್ಯದ ನಿರಚನೆಯ ಪಠ್ಯವಾಗಿ ನಮ್ಮೆದುರು ಕಾಣಿಸುತ್ತದೆ.32 ಸಿವಿಲೈಝೇಶನ್ ಎಂಬ ಶಬ್ದವೇ ಸರಿಯಲ್ಲ ಎಂಬುದು ಗಾಂಧಿಯ ಆಕ್ಷೇಪ. ನಾಗರೀಕತೆಯನ್ನು ಅದರ ಕೇಡನ್ನು ಮರೆಸಲು ಪಶ್ಚಿಮದ ಸಮಾಜ ರಾಷ್ಟ್ರವನ್ನು ಸೃಷ್ಟಿಸಿತು.33 ಗಾಂಧಿಗೆ ಆಧುನಿಕ ನಾಗರೀಕತೆ ಎಂಬುದು ‘ಸುಧಾರೋ’ ಅಲ್ಲ, (ಸುಧಾರೋ ಎಂಬುದು ಗುಜರಾತಿ ಶಬ್ದ) ಬದಲು ‘ಖುದಾರೋ ಅಥವಾ ಬಾರ್ಬರಿಸಮ್ ಆಗಿತ್ತು.34 ಗಾಂಧಿ ನಡೆಸಿದ ಈ ನಾಗರೀಕತೆಯ ಚರ್ಚೆಯ ಪ್ರೇರಣೆಗೆ ಮೂಲ ಕಾರಣ, ಅವರು ಸುಮಾರು 1906ರಲ್ಲಿ “ಲಂಡನ್ ಯೂನಿಯನ್ ಆಫ್ ಎಥಿಕಲ್ ಸೊಸೈಟೀಸ್”ನಲ್ಲಿ ಒಳಗೊಂಡು ಮಾಡಿದ ಕಾರ್ಯಚಟುವಟಿಕೆಗಳು. ಇದಲ್ಲದೇನೇ, ಲಂಡನ್ನ ವೈಟ್ವೇ ಪ್ರದೇಶದಲ್ಲಿ ಎಕ್ಸ್ ಟಾಲ್ಸ್ ಟಾಯ್ ಕಾಲನಿಯಲ್ಲಿನ ತಾತ್ವಿಕತೆ ಮತ್ತು ಲಂಡನ್ನ ಇನ್ನೊಂದು ಭಾಗದಲ್ಲಿದ್ದ, ಜಾನ್ ರಸ್ಕಿನ್ನ ವಿಚಾರಗಳಾದ ಗ್ರಾಮಜೀವನ, ಕೃಷಿ, ಕೈಮಗ್ಗ, ಗುಡಿಕೈಗಾರಿಕೆÉಗಳು ಮತ್ತು ಯಂತ್ರಗಳ ಮೇಲಿನ ಅವಲಂಬನೆ ಮುಂತಾದ ತತ್ವ-ಅನ್ವಯಗಳನ್ನು ಅನುಭವಿಸಿದ ಹಿನ್ನೆಲೆಯೂ ಇದರ ಹಿಂದೆ ಇದೆ. ಸುಮಾರು 1905ರಲ್ಲಿ ಗಾಂಧಿ ತಮ್ಮ ‘ಇಂಡಿಯನ್ ಒಪೀನಿಯನ್’ನಲ್ಲಿ, ನ್ಯೂ ಕ್ರುಸೇಡ್ ಸೊಸೈಟಿಯ ಚೈತನ್ಯಶಕ್ತಿಯಾಗಿದ್ದ ಗಾಡ್ಫ್ರೇ ಬ್ಲೌಂಟ್ನ ಪುಸ್ತಕವಾದ ‘ಎ ನ್ಯೂ ಕ್ರುಸೇಡ್: ಆ್ಯನ್ ಅಪೀಲ್’ನ ಸಾರಾಂಶ ಮತ್ತು ಚಟುವಟಿಕೆಯನ್ನು ಕೂಡಾ ಪ್ರಕಟಿಸಿದ್ದರು.35 ‘ಎಡ್ವರ್ಡ್ ಕಾರ್ಪೆಂಟರ್ ನ ಸಿವಿಲೈಝೇಶನ್: ಇಟ್ಸ್ ಕಾಸ್ ಆ್ಯಂಡ್ ಕ್ಯೂರ್’ನಲ್ಲಿ ನಾಗರೀಕತೆ ಒಂದು ರೋಗ ಎನ್ನುವ ವೈಚಾರಿಕತೆಯನ್ನು ಗಾಂಧಿ ಬಹಳ ಗಾಢವಾಗಿ ಸ್ವೀಕರಿಸಿದ್ದರು.36 ನಾಗರೀಕತೆಯ ಪ್ರತಿನಿಧಿಗಳು ಉದಾಹರಣೆಗೆ ನೂರು ವರ್ಷದ ಹಿಂದೆ ಸಾಮಾನ್ಯ ಮನೆಯಲ್ಲಿದ್ದವರು ಈಗ ವ್ಯವಸ್ಥಿತ ಮನೆಗಳಲ್ಲಿದ್ದಾರೆ ಎನ್ನುವ ರೀತಿಯ ಗ್ರಹಿಕೆಗಳು ಗಾಂಧಿಗೆ ನಾಗರೀಕತೆಯ ರೂಪಕಗಳಾಗಿ ಗೋಚರಿಸಿದ್ದುವು.37 ಗಾಂಧಿ ಪ್ರಶ್ನಿಸುವುದು ಕೈಗಾರಿಕೀಕರಣ, ಕೈಗಾರಿಕಾ ಕ್ರಾಂತಿ ಮತ್ತು ಆಧುನಿಕತೆ ಹುಟ್ಟು ಹಾಕಿದ ನಾಗರೀಕತೆಯನ್ನು. ಯಂತ್ರ ಎನ್ನುವ ನುಡಿಗಟ್ಟು ಕೂಡಾ ಇದರಿಂದ ಹುಟ್ಟಿ ಬಂದಿದ್ದೇ ವಿನ: ಬೇರೆ ಯಾವುದರಿಂದಲ್ಲ. ಸುಮಾರು 100 ವರ್ಷಗಳ ಈ ಪ್ರಕ್ರಿಯೆಯಿಂದ ಹುಟ್ಟಿದ ಯುರೋಪಿನ ನಾಗರೀಕತೆ 50 ವರ್ಷಗಳಲ್ಲೇ ಈ ಗತಿಯನ್ನು ಅಂದರೆ ಸಾಂಸ್ಕøತಿಕ ನಿಯಮರಾಹಿತ್ಯತೆ (ಕಲ್ಚರಲ್ ಅನಾರ್ಕಿ)ಯನ್ನು ಹೊಂದಿದ ಸಮಾಜವಾಗಿ ಮಾರ್ಪಟ್ಟಿರುವಾಗ, ಭಾರತ ಇಂತಹ ಅವಸ್ಥೆಯನ್ನು ಹೊಂದಬಾರದೆನ್ನುವುದೇ ತನ್ನ ಆಂತರ್ಯದ ನಿವೇದನೆ ಎಂದು ಗಾಂಧಿ ವ್ಯಕ್ತಪಡಿಸಿರುವ ಮಾತೂ ಕೂಡಾ ಇದನ್ನು ಅನುಮೋದಿಸುತ್ತದೆ.38 ಗಾಂಧಿ, ಬ್ರಿಟಿಷ್ ಜನ ಮತ್ತು ಆಧುನಿಕ ಬ್ರಿಟಿಷ್ ನಾಗರೀಕತೆಯನ್ನು ಪಕ್ಕಾ ಪೃಥಕ್ಕರಿಸಿ ಆಧುನಿಕ ನಾಗರೀಕತೆ ಜನರನ್ನು ಭ್ರಷ್ಟಗೊಳಿಸಿದೆ ಎನ್ನುತ್ತಾ, ಇದಕ್ಕೆ ಆಧುನಿಕ ಬ್ರಿಟನ್ನನ್ನು ಡಿ-ಕ್ರಿಶ್ಚಿಯನೈಝೇಷನ್ಗೊಳಿಸಿದ್ದೂ ಕೂಡಾ ಕಾರಣವೆಂದರು. ಗಾಂಧಿಯ ನಾಗರೀಕತೆಯ ಕಲ್ಪನೆಯ ಹಾಗೆಯೇ, ಡಿ-ಕ್ರಿಶ್ಚಿಯನೈಝೇಷನ್ ಆದಂತಹ ಧರ್ಮ ಅದು ನೈತಿಕ ನಿಯಮಗಳ ಅನುಷ್ಠಾನ ಅಥವಾ ವೈಯಕ್ತಿಕ ಮೌಲ್ಯಗಳ ಸಂಹಿತೆಯನ್ನು ಪ್ರಕಟಪಡಿಸುತ್ತದೆಯೇ ಹೊರತು ಅತ್ಯಂತ ಸರಳವಾದ ಗ್ರಹಿಕೆಯನ್ನಲ್ಲ ಮತ್ತು ಕ್ರಿಯಾವಿಧಿಗಳನ್ನಲ್ಲ. ನನಗನಿಸಿದ ಹಾಗೆ ಆಧುನಿಕ ಸಂದರ್ಭದಲ್ಲಿ ಜಾಗತಿಕ ನೆಲೆಯಲ್ಲಿ ಗಾಂಧಿಯ ಹಾಗೆ ಧರ್ಮ ಪರೀಕ್ಷೆಯನ್ನು, ಶಬ್ದಶ: ಮತ್ತು ತತ್ವಶ: ಪ್ರಯೋಗಕ್ಕೆ ಒಳಪಡಿಸಿದ ವ್ಯಕ್ತಿ ಮತ್ತೊಬ್ಬನಿಲ್ಲ ಎಂದೇ ಬಗೆಯಬಹುದೇನೋ.
ಧರ್ಮ, ಸತ್ಯ ಮತ್ತು ನಾಗರೀಕತೆಯ ಸಂದರ್ಭದಲ್ಲಿ, ಅದರ ವ್ಯಾಖ್ಯಾನ ಮತ್ತು ಪ್ರಕಟಪಡಿಸುವ ಅನೇಕ ಸಂದರ್ಭಗಳಲ್ಲಿ ಗಾಂಧಿ ಬಹಳ ವಿಶಾಲವಾದ ಅರ್ಥದಲ್ಲಿ, ಅವುಗಳ ಸಂಕೀರ್ಣ ನೆಲೆಗಳ ಅರಿವಿದ್ದೇ ಅವುಗಳನ್ನು ಬಳಸಿದ್ದನ್ನು ನಾವು ನೋಡಬಹುದು. ಗಾಂಧಿ ಬಳಸಿದ ಧರ್ಮ ಎಂಬ ಶಬ್ದ ಮತ್ತು ಅನುಭವಿಸಿದ ಅನುಭವಗಳು ಕೂಡಾ ಕಾಲಕಾಲಕ್ಕೆ ಪರೀಕ್ಷೆಗೊಳಪಟ್ಟಂತವುಗಳು. ನಾಗರೀಕತೆ ಕೂಡಾ ಅತ್ಯಂತ ಸರಳವಾಗಿ ಗಾಂಧಿಯ ಗ್ರಹಿಕೆಗೆ ಒಳಪಟ್ಟು, ಯಾವುದೇ ರೀತಿಯಾದ ಮೌಲ್ಯಮಾಪನಕ್ಕೆ ವ್ಯಾಲ್ಯೂ ಜಟ್ಜ್ಮೆಂಟ್ಗೆ ಒಳಗಾಗದೇ ಗಾಂಧಿಗೆ ಒದಗಿದ್ದು ಕೂಡಾ, ಅವರು ಅವುಗಳನ್ನು ಕಾಲಕಾಲದ ಪರೀಕ್ಷೆಗೊಳಪಡಿಸಿದ್ದ ಕಾರಣದಿಂದ. ಹಿಂದ್ ಸ್ವರಾಜ್ನ ಗ್ರಹಿಕೆಯ ಸಿವಿಲೈಝೇಷನ್ ಇನ್ನೂ ವಿಸ್ತಾರವಾದ ನೆಲೆಗಳಲ್ಲಿ ವ್ಯಾಪಿಸುತ್ತಾ ಹೋದರೂ ಕೂಡಾ, ಸ್ವರಾಜ್ನಲ್ಲಿಯೇ ಸಿವಿಲೈಝೇಷನ್ನ ಪ್ರಾಥಮಿಕ ಲಕ್ಷಣಗಳನ್ನು ಗಾಂಧಿ ಬಹಳ ಚೆನ್ನಾಗಿ ಅರಿತಿದ್ದರು. ಇಂತಹ ಯುರೋಪಿನ, ‘ನಾಗರೀಕತೆ’, ಭೌತದ ಆಧಾರದ ಮೇಲಿನ ಪ್ರಗತಿಯ ಮೇಲಿದೆಯೇ ಹೊರತು ಅದು ನೈತಿಕ ಪ್ರಗತಿಯನ್ನು ಕೇಂದ್ರವಾಗಿರಿಸಿಕೊಂಡಿಲ್ಲ,’ ಎನ್ನುವುದೇ ಗಾಂಧಿಯ ಪ್ರಮುಖವಾದ ವಾದವಾಗಿತ್ತು. ಗಾಂಧಿ ಪಟ್ಟಿ ಮಾಡಿದ ನಾಗರೀಕತೆ ಅಥವಾ ಆಧುನಿಕವಾದ ಸಿವಿಲೈಝೇಷನ್ನ ಲಕ್ಷಣಗಳನ್ನು ಗಮನಿಸಿದರೆ ಅದು ಸಮಾನಾಂತರವಾಗಿ ಯುರೋಪಿನ ಕೈಗಾರಿಕೀಕೃತ ಸಮಾಜ ಸಾಗಿದ ರೇಖೀಯ ಚರಿತ್ರೆಯ ಗತಿಯನ್ನು ನೆನಪಿಸುತ್ತದೆ. ಇಡೀ ನೂರಿನ್ನೂರು ವರ್ಷದ ಚರಿತ್ರೆಯನ್ನು ಗಾಂಧಿ ಕೆಲವು ರೂಪಕ, ಪ್ರತಿಮೆಗಳಲ್ಲಿ ಕಟ್ಟಿ ಕೊಡುವ ಕ್ರಮವೂ ಹಿಂದ್ ಸ್ವರಾಜ್ನಲ್ಲಿ ಅದ್ಭುತ ಎನಿಸುವಂತಿದೆ. ಈ ನಾಗರೀಕತೆ ಧರ್ಮ ಮತ್ತು ನೀತಿ ಬಾಹಿರ ಎಂಬ ಮಾತನ್ನು ಗಾಂಧಿ ಹೇಳುವುದು ಕೂಡಾ ಇದೇ ನೆಲೆಯಿಂದ.39 ಇದೇ ನೆಲೆಯಲ್ಲಿ ಗಾಂಧಿ, ಈ ಸಿವಿಲೈಝೇಷನ್ ಹೇಗೆ ಇದೆಯೆಂದರೆ ಪ್ರವಾದಿ ಮುಹಮ್ಮದರು ಹೇಳಿದ ಸೈತಾನ್ ಅಥವಾ ಹಿಂದೂ ಧರ್ಮದ ಕಲಿಯುಗದ ಕಲಿಯೆನ್ನುತ್ತಾ ಇವುಗಳಿಗೆ ಆಧುನಿಕ ಯುರೋಪ್ ನಾಗರೀಕತೆಯನ್ನು ಮುಖಾಮುಖಿಯಾಗಿಸಿ ತುಲನೆಗೈಯುವ ಕ್ರಮ ಹಿಂದ್ಸ್ವರಾಜ್ ಅನ್ನು ನಾವು ಒಂದು ತಾತ್ವಿಕ ಪಠ್ಯವಾಗಿಯೂ ನೋಡುವ ಹಾಗೆ ಮಾಡುತ್ತದೆ.40 ಒಂದು ನೆಲೆಯಲ್ಲಿ ಬೈಬಲ್ನ ಮೊದಲ ಅಧ್ಯಾಯದಲ್ಲಿ ವ್ಯಕ್ತಪಡಿಸುವ ‘ಮೆಸಯ್ಯಾನಿಕ್ ಮಿಶನ್’ನ (ಪ್ರವಾದಿ ಸಂದೇಶ) ರೀತಿ ಹಿಂದ್ ಸ್ವರಾಜ್ ಕಾಣಿಸುತ್ತದೆ. ಇದಲ್ಲದೇ ಒಂದು ಚಾರಿತ್ರಿಕ ಸತ್ಯವಾಗಿರುವ ಈ ನಾಗರೀಕತೆ ತನ್ನ ನಾಶವನ್ನು ಹುದುಗಿಸಿಕೊಂಡಿರುವುದೇ ಅದರ ಭವಿಷ್ಯದಲ್ಲೆನ್ನುತ್ತಾ, ಚರಿತ್ರೆಯಲ್ಲಿ ಇದು ರೋಗಗ್ರಸ್ತವಾಗಿಯೇ ಹುಟ್ಟಿತೆಂದು ಗಾಂಧಿ ಪದೇಪದೇ ವಾದಿಸುತ್ತಾರೆ.41
ಹೀಗೆ ಈ ಮೇಲಿನ ನನ್ನೆಲ್ಲ ವಾದಗಳು ಮತ್ತು ತರ್ಕಗಳು ಹಿಂದ್ ಸ್ವರಾಜ್ ಒಂದು ಚಾರಿತ್ರಿಕ ಕೃತಿ, ಒಂದು ತಾತ್ವಿಕ ಕೃತಿ, ಒಂದು ಸಮಾಜಶಾಸ್ತ್ರೀಯ ಕೃತಿ ಕೂಡಾ ಆಗಬಲ್ಲದು ಎನ್ನುವುದನ್ನು ನಿರೂಪಿಸುವ ಕ್ರಮವಾಗಿ ಸಾಗುತ್ತದೆ. ಆಧುನಿಕತೆ ಕೊಟ್ಟ ಜೀವನಕ್ರಮವನ್ನು ಗಾಂಧಿ ತಮ್ಮ ಹಿಂದ್ ಸ್ವರಾಜ್ನ ಮೂಲಕ ನಿರಾಕರಿಸುವ ಸಂದರ್ಭದಲ್ಲೇ ಆಧುನಿಕವಲ್ಲದ ಜೀವನ ವಿಧಾನಗಳು ಶಿಥಿಲವಾಗುತ್ತಿರುವ ಸಂದರ್ಭದಲ್ಲಿ ಬದುಕಿ, ಪ್ರವಾದಿಯ ಹಾಗೆ ಚರಿತ್ರೆಯಾಗುತ್ತಾರೆ ಮತ್ತು ಚರಿತ್ರೆಯ ಪ್ರವಾದಿಯಾಗುತ್ತಾರೆ.42
References
1. Gandhi,
A Very Short Introductions, Bhiku
Parekh, OUP, New Delhi,2007.
2. Hind
Swaraj and Other Writings, Edited by Anthony J. Parel, Cambridge University
Press, New Delhi, 2009.
3. Ibid.
4. Hind
Swaraj-A fresh Look_Moral Foundation of Hind Swaraj and
Nonviolence"-Ramashraya Roy, Edited by N. Prasad, Gandhi Peace foundation,
New Delhi, 1985.
5. Interpreting
Gandhi, Rudolf C Heredia, EPW, Mumbai, June_2009
6. Text
and Context of Hind Swaraj_in
Reflections on Hind Swaraj, Renu Bahl,
7. Hind Swaraj and Other Writings, Edited by
Anthony J. Parel, Cambridge University Press,
New Delhi, 2009.
8. The Moral and Political Writings of Mahatma
Gandhi Volume1. Civilisation, Politics and Religion, Ragahavan Iyer, OUP, London,1986.
9. Gandhi-The
Angel of History; Reading Hind Swaraj Today, Aditya Nigam, EPW, Mumbai,March
2009.
10. Ibid
11. Historical Reading of Arthashastra, Keshavan
Veluthat, Unpublished Preseneted Paper
on Arthashastra In an International
Seminar.
12. Gandhi-The Angel of History; Reading Hind
Swaraj Today, Aditya Nigam, EPW, Mumbai, March 2009.
13. Ibid
14. Hind Swaraj or Indian Home Rule, M. K.
Gandhi, Navajivan Publishing House, Ahmedabad, 1939.
15. Ibid
16. Ibid
17. Ibid
18. Gandhi-The Angel of History; Reading Hind
Swaraj Today, Aditya Nigam, EPW, Mumbai, March 2009.
19. Ibid
20. Ibid
21. Ibid
22. Colonialism, Tradition and Reform–An
analysis of Gandhi’s Political Discourse,
Bhikhu Parekh, Sage Publications,
New Delhi, 1999.
23. Ibid
24. Ibid
25. Modern India_1885-1947, Sumth Sarkar, Macmillan, Newdelhi,
1983.
26. Gandhi-The Angel of History; Reading Hind
Swaraj Today, Aditya Nigam, EPW, Mumbai, March 2009.
27. Colonialism, Tradition and Reform–An
analysis of Gandhi’s Political Discourse,
Bhikhu Parekh, Sage Publications,
New Delhi, 1999.
28. Gandhi-
The Angel of History; Reading Hind Swaraj Today, Aditya Nigam, EPW, Mumbai, March
2009.
29. Ibid
30. Hind Swaraj or Indian Home Rule, M. K. Gandhi,
Navajivan Publishing House, Ahmedabad, 1939.
31. Theses on the Philosophy of History Walter Benjamin,1940.
32. ‘History and the Interpretation of Texts’
in Handbook of Political Theory, Terence Ball,
edited by Gerald F. Gaus, Chandran Kukathas, Sage Publications, London.
33. Hind Swaraj or Indian Home Rule, M. K. Gandhi,
Navajivan Publishing House, Ahmedabad, 1939.
34. Ibid.
35. Hind Swaraj and Other Writings, Edited by
Anthony J. Parel, Cambridge University Press, New Delhi, 2009.
36. Hind Swaraj or Indian Home Rule, M. K. Gandhi,
Navajivan Publishing House, Ahmedabad, 1939.
37. Ibid.
38. Ibid.
39. Ibid.
40. Ibid
41. Hind Swaraj and Other Writings, Edited by
Anthony J. Parel, Cambridge University Press, New Delhi, 2009.
42. Gandhi-The Angel of History; Reading Hind
Swaraj Today, Aditya Nigam, EPW, Mumbai, March 2009.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ