ಸಾರ್ವಜನಿಕ ಬುದ್ಧಿಜೀವಿ ( ಪಬ್ಲಿಕ್ ಇಂಟಲಕ್ಚುವಲ್)
ಮೂಲ: ರೊಮಿಲಾ ಥಾಪರ್
ಈ ಉಪನ್ಯಾಸಕ್ಕೆ ಸೂಕ್ತ ವಿಷಯ ನಿರ್ಧರಿಸುವುದು ಸಮಸ್ಯಾತ್ಮಕವಾಗಿದೆ. ನಿಖಿಲ್ ಚಕ್ರವರ್ತಿ ಬಹುಮುಖ್ಯ ವ್ಯಕ್ತಿತ್ವವುಳ್ಳ ವ್ಯಕ್ತಿ. ಅವರು ಆತ್ಮೀಯ ಹಾಗೂ ಪ್ರೀತಿಯ ಗೆಳೆಯ. ಜನರ ಬಗ್ಗೆ, ರಾಜಕೀಯದ ಬಗ್ಗೆ, ನಾವು ವಾಸಿಸುವ ವಿಶ್ವದ ಬಗ್ಗೆ ಕುತೂಹಲ ಹೊಂದಿರುವವರು. ನಮ್ಮಿಬ್ಬರಲ್ಲಿ ಕೆಲವು ಸಮಾನ ಅಂಶಗಳಿವೆ. ನಾವಿಬ್ಬರೂ ಪದ್ಮ ಪ್ರಶಸ್ತಿಯನ್ನು ನಯವಾಗಿ ತಿರಸ್ಕರಿಸಿದ್ದೆವು. ನಿಖಿಲ್‍ನ ಪ್ರಕಾರ ಅದು ಪತ್ರಕರ್ತನಾಗಿ ತನ್ನ ಸ್ವಾಯತ್ತತೆಗೆ ಧಕ್ಕೆ ತರುವುದೆಂದೆನಿಸಿದ್ದರೆ, ಓರ್ವ ಅಕಡೆಮಿಕ್ ಆಗಿ ನನಗೂ ಇದು ಸರಿ ಎನಿಸಿದೆ. ಆತನ ರಾಜಕೀಯ ಗಾಸಿಪ್‍ನ ತುಣುಕುಗಳು ಯಾವಾಗಲೂ ಸ್ವಾರಸ್ಯಕರವಾಗಿರುತ್ತವೆ. ಆತ್ಮಕಥನಗಳು ದಂಡಿಯಾಗಿ ಬರುತ್ತಿರುವ ಈ ಕಾಲಘಟ್ಟದಲ್ಲಿ ಈ ರೀತಿಯ ಲೇಖನಗಳನ್ನು ಈತ ಬರೆದಿದ್ದೇ ಆಗಿದ್ದರೆ ಎಲ್ಲಾ ಟಿವಿ ಸುದ್ದಿವಾಹಿನಿಗಳೂ ಸ್ಫೋಟಗೊಳ್ಳುತ್ತಿದ್ದವು.
ಸಾರ್ವಜನಿಕ ಸಂಗತಿಗಳ ಬಗೆಗಿನ ಬೌದ್ಧಿಕ ಹಾಗೂ ಶೈಕ್ಷಣಿಕ ಅಭಿಪ್ರಾಯಗಳನ್ನು ನಿಖಿಲ್ ಗೌರವಿಸುವ
ವ್ಯಕ್ತಿ. ಸಮಾಜ ಮತ್ತು ರಾಜಕೀಯದ ನಡುವಿನ ಪರಸ್ಪರ ಸಂಬಂಧದ ಸ್ವಭಾವವನ್ನು ಪ್ರಶ್ನಿಸುವ ವ್ಯಕ್ತಿಗಳಿಗೆ
ಆತ ಅವಕಾಶ ನೀಡುತ್ತಿದ್ದ. ಆದರೆ ಇಂದು ಈ ಅವಕಾಶ ಕುಗ್ಗುತ್ತಿದೆ ಹಾಗೂ ಬೌದ್ಧಿಕ ಪ್ರಮಾಣಗಳು ಕಿರಿದಾಗಿವೆ.
ಇಂದು ಅಧಿಕಾರದಲ್ಲಿರುವವರು ಮತ್ತು ಸಾರ್ವಜನಿಕ ಅಭಿಪ್ರಾಯವನ್ನು ಪ್ರಭಾವಿಸುವವರು ಸಾರ್ವಜನಿಕ ಬುದ್ಧಿಜೀವಿಗಳ
ಬಗೆ ಹಿಂದೆಂದಿಗಿಂತಲೂ ಕಡಿಮೆ ಗೌರವ ಹೊಂದಿರುವಂತೆ ಭಾಸವಾಗುತ್ತಿದೆ. ಇದು ಏಕೆ ಹೀಗೆ ಎಂಬ ವಿಷಯ,
ನಿಖಿಲ್‍ಗೆ ಪ್ರಾಯಶ: ಆಸಕ್ತಿ ಕೆರಳಿಸಿತ್ತೋ ಇಲ್ಲವೋ?
ಪ್ರಸ್ತುತ ನಾನು ಇದರ ಬಗ್ಗೆ ಮಾತನಾಡಲು ಬಯಸುತ್ತೇನೆ. ನಮಗೆ ಯಾವ ವಿಧದ ಸಮಾಜ ಬೇಕು, ಏಕೆ
ಬೇಕು ಎಂದಾಗ ಇದು ಬಹಳ ಮುಖ್ಯವೆಂದೆನಿಸುತ್ತದೆ.
ಇಂದಿನ ಭಾಷಣದಲ್ಲಿ ಸಾರ್ವಜನಿಕ ಬುದ್ಧಿಜೀವಿಗಳ ಇರುವಿಕೆ ಮತ್ತು ಅಸ್ತಿತ್ವದ ಬಗ್ಗೆ ನನ್ನ
ಅನಿಸಿಕೆಗಳನ್ನು ನೀಡುತ್ತೇನೆ. ಓರ್ವ ಇತಿಹಾಸಕಾರನಾಗಿ ನಾನು ಇತಿಹಾಸದತ್ತ ಸರಿಯುತ್ತೇನೆ. ನನ್ನ ಮಾತನ್ನು
ಯುರೋಪಿನ ಕೆಲವು ಐತಿಹಾಸಿಕ ವ್ಯಕ್ತಿಗಳನ್ನು ಹೆಸರಿಸುವುದರಿಂದ ಪ್ರಾರಂಭಿಸಲು ಪ್ರಯತ್ನಿಸುತ್ತೇನೆ.
ಇವರ ಅಂದಿನ ಆಲೋಚನೆಗಳು ಇಂದು ಸಾರ್ವಜನಿಕ ಬೌದ್ಧಿಕತೆಯಾಗಿ ಬೆಳೆದು ಬಂದಿದೆ. ನಂತರ ಇದೇ ರೀತಿಯ ಪಾತ್ರವಹಿಸಿದ
ಕೆಲವು ಭಾರತೀಯರನ್ನೂ ಹೆಸರಿಸುತ್ತೇನೆ. ಇವೆರಡರ ನಡುವೆ ಸಂಬಂಧ ಇಲ್ಲದಿರಬಹುದು ಆದರೆ ಅವು ಬಹಳ ವಿಧವಾಗಿ
ಸಮಾನಾಂತರವಾಗಿವೆ. ಅಂತಿಮವಾಗಿ ಸಾರ್ವಜನಿಕ ಬುದ್ಧಿಜೀವಿಗಳ ಪಾತ್ರ ಏನು ಹಾಗೂ ಮತ್ತು ಇಂತಹ ವ್ಯಕ್ತಿಗಳು
ಸಮಾಜದಲ್ಲಿ ಮುನ್ನೆಲೆಗೆ ಬರುವುದು ಏಕೆ ಪ್ರಮುಖವಾಗಿದೆ ? ಎಂಬುದನ್ನು ಸೂಚಿಸುತ್ತೇನೆ.
ಸಾರ್ವಜನಿಕ ಬುದ್ಧಿಜೀವಿ ಆಗಾಗ್ಗೆ ಮಾನವ ಹಕ್ಕುಗಳಿಗೆ ಸಂಬಂಧಿಸಿದ ಮತ್ತು ಸಮಾಜದ ಕಾರ್ಯ ನಿರ್ವಹಣೆಯ
ಸಮಸ್ಯೆಗಳ ಬಗ್ಗೆ ಚಿಂತಿತರಾಗಿರುತ್ತಾರೆ. ಏಕೆಂದರೆ ಇದು ಸಾಮಾಜಿಕ ನ್ಯಾಯದ ಪ್ರಾಮುಖ್ಯತೆಯನ್ನು ಖಾತ್ರಿ
ವಹಿಸುತ್ತದೆ. ಈ ಸಮಸ್ಯೆಗಳ ವ್ಯಾಪ್ತಿ ಬಲು ದೊಡ್ಡದು. ಅವುಗಳಲ್ಲಿ ಒಂದೆರಡು ಆದ್ಯತೆಯುಳ್ಳವು ಎನಿಸಿದುದನ್ನು
ಆರಿಸಿಕೊಂಡಿದ್ದೇನೆ. ಅವುಗಳಲ್ಲಿ ಒಂದು; ಪ್ರಭುತ್ವ, ಅದು ಧರ್ಮವಾಗಿರಲಿ, ರಾಜ್ಯ ಅಥವಾ ಬೇರಾವುದೇ
ಆಗಲಿ ನಮ್ಮ ಚರ್ಚೆಗನುಗುಣವಾಗಿ ಅದರ ಆಯ್ಕೆಯನ್ನು ನಿರ್ಧರಿಸುತ್ತೇವೆ. ಎರಡನೆಯದು; ಜ್ಞಾನವನ್ನು ಹೇಗೆ
ಪಡೆಯುತ್ತೇವೆ ಮತ್ತು ಅದರ ಬಳಕೆ ಹೇಗಾಗುತ್ತಿದೆ ಎನ್ನುವುದಾಗಿದೆ. ನಮ್ಮ ನಿರೀಕ್ಷೆಯಂತೆ ಹೊರ ಜ್ಞಾನವು
ಈಗಾಗಲೇ ಚಾಲ್ತಿಯಲ್ಲಿರುವ ಪಟ್ಟಭದ್ರ ಮನೋಧರ್ಮಗಳನ್ನು ಅಥವ ಸ್ಥಾಪಿತ ಅಧಿಕಾರಶಾಹಿಗಳನ್ನು ವಿರೋಧಿಸುತ್ತದೆ.
ಈ ವಿರೋಧವನ್ನು ನಿಭಾಯಿಸುವುದಾದರೂ ಹೇಗೆ? ಇದಕ್ಕೆ ಉತ್ತರ ನಮ್ಮ ಸುತ್ತಲಿನ ಪ್ರಪಂಚ ಹಾಗೂ ಅದರ ಗತಕಾಲವನ್ನು
ತಾರ್ಕಿಕ ಹಾಗೂ ವಿವೇಚನಾಯುಕ್ತ ಆಲೋಚನೆಗಳ ಮೂಲಕ ಅರ್ಥೈಸಿಕೊಳ್ಳವುದಾಗಿದೆ. ಈ ಹಿನ್ನೆಲೆಯನ್ನು ಒತ್ತಿ
ಹೇಳುತ್ತಿರುವುದರಿಂದ ನಾನು ಕಲ್ಪನಾಶಕ್ತಿಯನ್ನು ಆಲೋಚನೆಯ ಪ್ರಕ್ರಿಯೆಯಾಗಿ ನಿರಾಕರಿಸುತ್ತಿಲ್ಲ,
ಆದರೆ ಭಿನ್ನತೆಯನ್ನು ಕಡೆಗಣಿಸುವಂತೆಯೂ ಇಲ್ಲ.
ಈ ತೆರನಾದ ಆತಂಕ ಮತ್ತು ಕಾಳಜಿಗಳು ಇತ್ತೀಚಿನವುಗಳೇನಲ್ಲ. ಇವುಗಳ ಪ್ರಾಚೀನತೆ ಬಹಳ ಹಿಂದಿನದ್ದು
ಮತ್ತು ಬಹಳ ಶತಮಾನಗಳ ಹಿಂದೆಯೇ ಇವುಗಳನ್ನು ಎದುರಿಸಲಾಗಿದೆ. ನಮ್ಮ ಸಮಾಜವನ್ನು ರೂಪಿಸುತ್ತಿರುವ ಇಂದಿನ
ಜನರಿಗೆ ಪ್ರಶ್ನಿಸುವ ಹಕ್ಕಿಗೆ ತಳಪಾಯ ಹಾಕಿಕೊಟ್ಟಿರುವಂತಹ ಚಿಂತನೆಗಳನ್ನು ನೀಡಿರುವ ಕೆಲವರ ಹೆಸರನ್ನು
ಇಲ್ಲಿ ಹೆಸರಿಸುತ್ತೇನೆ. ಹಿಂದಿನ ದಿನಗಳಲ್ಲಿ ಪ್ರಶ್ನೆಗಳು ಬಹುಪಾಲು ವಿಮರ್ಶಾತ್ಮಕ ಚಿಂತನೆ ಹಾಗೂ
ತಾರ್ಕಿಕ ಆಲೋಚನೆಗಳಿಂದಲೇ ಹುಟ್ಟುತ್ತಿದ್ದವು. ಆದರೆ ಅವು ಮಾನವನ ಸ್ಥಿತಿಯನ್ನು ಗುರ್ತಿಸುವುದರಲ್ಲೂ
ಸಹಕರಿಸುತ್ತಿದ್ದವು. ಅವರ ಉತ್ತರಗಳು ಭೂಮಿಯ ಮೇಲೆ ಉತ್ತಮ ಸಮಾಜದ ಊಹಾತ್ಮಕ ಭವಿಷ್ಯವನ್ನು ತಡೆಹಿಡಿಯಲಾಗಲಿಲ್ಲ
ಹಾಗೂ ನಾವು ಸ್ವರ್ಗಕ್ಕಾಗಿ ಅಥವಾ ಮರುಜನ್ಮದ ತನಕ ಕಾಯಬೇಕಾಗಿರಲಿಲ್ಲ. ಯುರೋಪ್ ತನ್ನಲ್ಲಿ ಇಂತಹ ಚಿಂತನೆಯ
ಪರಂಪರೆಯಿದೆ ಎಂದು ಹೇಳಿಕೊಳ್ಳುತ್ತದೆ. ಈ ತೆರನಾದ ಆಲೋಚನೆ ಭಾರತದಲ್ಲಿದೆ ಎಂಬುದನ್ನು ಹೆಚ್ಚು ಬಾರಿ
ನಿರಾಕರಿಸಲಾಗುತ್ತದೆ. ಆದರೆ ಈ ನಿರಾಕರಣೆಯನ್ನು ಆಕ್ಷೇಪಿಸುತ್ತೇನೆ. ಸಮಾಜಗಳು ತನ್ನಲ್ಲಿರುವ ಕಂದಾಚಾರ,
ಪ್ರಭುತ್ವಗಳನ್ನು ಪ್ರಶ್ನಿಸುವುದನ್ನು ಅನಿವಾರ್ಯವಾಗಿಯಾದರೂ ಸಹಮತಿಸಲೇಬೇಕು ಹಾಗೂ ಕನಿಷ್ಠ ಪಕ್ಷ
ತೀವ್ರತರ ಸ್ಫರ್ಧೆಯ ಕ್ಷಣದಲ್ಲಾದರೂ ಇದು ಆಗಬೇಕು ಇಲ್ಲವಾದರೆ ಅವು ಅವಸಾನದ ಅಂಚಿಗೆ ತಳ್ಳಲ್ಪಡುತ್ತವೆ.
ಯುರೋಪಿನ ಗತಕಾಲವನ್ನು ಅವಲೋಕಿಸಿದ್ದರೆ ಸಾರ್ವಜನಿಕ ಬೌದ್ಧಿಕತೆಯ ಆದ್ಯಪ್ರವರ್ತಕರು ತಾತ್ವಿಕ
ಪ್ರಶ್ನೆಗಳನ್ನು ಕೇಳುವುದರಲ್ಲೇ ತೊಡಗಿಕೊಂಡಿದ್ದರು ಎಂಬುದು ತಿಳಿಯುತ್ತದೆ. ಆದರೆ ಈ ಆಲೋಚನೆಯು ರಾಜಕೀಯ
ವಲಯವನ್ನೂ ಒಳಗೊಂಡಿತು ಹಾಗೂ ಸೂಚಿತ ಸಾಮಾಜಿಕ ಕಾರ್ಯದಲ್ಲೂ ಪ್ರತಿಫಲಿತವಾಯಿತು. ಇಂತಹ ಜನರು ಪ್ರಭುತ್ವವನ್ನು
ವಿಮರ್ಶಿಸುವ ಅಧಿಕಾರ ತಮಗಿದೆ ಎಂದು ಹೇಳತೊಡಗಿದರು. ಅದರಿಂದ ಕೆಲವೊಮ್ಮೆ ಅವರಿಗೆ ಸಾಕ್ರಟೀಸ್‍ನಿಗೆ
ಆದಂತೆ ಕಷ್ಟಗಳೂ ಸಹ ಒದಗಿ ಬಂದವು. ಅಥೆನ್ಸ್‍ನ ಗ್ರೀಕರು ಸಾಕ್ರಟೀಸನ ದೈವಗಳ ಅಸ್ತಿತ್ವದ ನಿರಾಕರಣೆಯನ್ನು
ಆಕ್ಷೇಪಿಸಿದರು ಹಾಗೂ ಅಥೆನ್ಸ್‍ನ ನ್ಯಾಯನಿರ್ಣಯದ ಪದ್ಧತಿಗಳ ಕುರಿತು ಸಾಕ್ರಟೀಸ್‍ನ ವಿಮರ್ಶೆಯನ್ನು
ಆಕ್ಷೇಪಿಸಿದರು. ಇದೆಲ್ಲದರ ಫಲವಾಗಿ ಆತನಿಗೆ ಅವರು ವಿಷಪ್ರಾಶನ ಮಾಡಬೇಕಾಯಿತು.
ಯುರೋಪಿನ ಆಲೋಚನೆಯ ಈ ಪ್ರಮುಖ ಎಳೆಯ ಪ್ರಾಚೀನತೆ ಸಾಕ್ರಟೀಸನ ಕ್ರಿ.ಪೂ. 5ನೇ ಶತಮಾನದ್ದೆನಿಸುತ್ತದೆ.
ಈ ಸಂದರ್ಭದಲ್ಲಿ ಒಂದು ಹೇಳಿಕೆಯನ್ನು ಹಲವಾರು ಪ್ರಶ್ನೆಗಳಿಗೆ ಒಡ್ಡಲಾಗುತ್ತದೆ. ಆ ವಾಕ್ಯದ ವಿಭಿನ್ನ
ಅಂರ್ತಸಂಬಂಧಗಳನ್ನು ಹಾಗೂ ವಿವಿಧ ಭಾಗಗಳನ್ನು ಪರೀಕ್ಷಿಸಲಾಗುತ್ತದೆ. ಇವುಗಳನ್ನು ಒಂದು ಪ್ರಾಗ್‍ಕಲ್ಪನೆ(ಹೈಪೋತಿಸೀಸ್)
ಬರುವವರೆಗೆ ಒಂದಕ್ಕೊಂದು ಸಂಬಂಧ ಕಲ್ಪಿಸಲಾಗುತ್ತದೆ ಮತ್ತು ಪರೀಕ್ಷಿಸಲಾಗುತ್ತದೆ. ರೋಮ್‍ನ ಉಪಾನ್ಯಾಸಪಟು
ಸಿಸಿರೊ (ಕ್ರಿ.ಪೂ ಒಂದನೇ ಶತಮಾನ) ರೋಮನ್ ರಾಜರುಗಳ ಭ್ರಷ್ಟಾಚಾರವನ್ನು ಬಯಲಿಗೆಳೆದನು. ಆತನು, ಯಾವುದಾದರೂ
ಒಂದು ಅಂಶ ಪ್ರಶ್ನಿಸಲು ಅರ್ಹವೆನಿಸಿದರೆ ಅದನ್ನು ಪ್ರಶ್ನಿಸಬೇಕಾದ್ದು ತನ್ನ ಹಕ್ಕೆಂದು ಪ್ರತಿಪಾದಿಸಿದ್ದನು.
ಹಾಗೆ ಮಾಡಲು ತನ್ನ ನ್ಯಾಯಿಕ ಬುದ್ಧಿಮತ್ತೆಯನ್ನು ಬಳಸುತ್ತಿದ್ದನು ಕೂಡಾ. ಕ್ರಿ.ಶ. 2ನೇ ಶತಮಾನದಲ್ಲಿ
ಕ್ಯಾಥಲಿಕ್ ಚರ್ಚ್ ರಾಜರ ಮೇಲೆ ಶಕ್ತಿ ನಿಯಂತ್ರಣ ಹೊಂದಿತ್ತು. ಈ ಶಕ್ತಿಯನ್ನು ಕ್ರಮೇಣ ಪ್ರಶ್ನಿಸಲಾಯಿತು.
ಜ್ಞಾನೋದಯ ಚಳವಳಿಯನ್ನು ರೂಪಿಸಿದ ಯುರೋಪಿನ ಆಲೋಚನೆಗಳಲ್ಲಿ ಇದೂ ಒಂದಾಗಿತ್ತು. ನಮಗೆ ತಿಳಿದಿರುವ
ಲಾಕ್, ಹ್ಯೂಮ್, ವಾಲ್ಟೇರ್, ಮಾಂಟೆಸ್ಕೊ, ಡಿಡೆರಾ, ರೂಸೊ ಮತ್ತು ಇತರ ತತ್ವಶಾಸ್ತ್ರಜ್ಞರೆಲ್ಲರೂ
ಸ್ಥಾಪಿತ ಜ್ಞಾನ ಹಾಗೂ ಪದ್ಧತಿಗಳನ್ನು ಪ್ರಶ್ನಿಸಲಾರಂಭಿಸಿದರು. ತಮ್ಮೊಳಗೆ ಮತ್ತು ಇತರರೊಂದಿಗೂ ಕೂಡಾ
ಇವರಿಗೆ ಅಸಮಾಧಾನ ಹಾಗೂ ಅಭಿಪ್ರಾಯಭೇದಗಳಿದ್ದವು. ಅಂದರೆ ಹೆಚ್ಚೂ ಕಡಿಮೆ ಇವೆಲ್ಲವೂ ಒಂದೇ ಅಂಶವನ್ನು
ಹೊಂದಿದ್ದವು. ಏಕೆಂದರೆ ಅವೆಲ್ಲಾ ವಿಮರ್ಶಾತ್ಮಕ ಆಲೋಚನೆಯಿಂದ ಹೊರಹೊಮ್ಮಿದ್ದವು. ಈ ಅಂಶ ಇವರೆಲ್ಲರನ್ನು
ಒಟ್ಟಿಗೆ ತಂದಿತು. ಇದಲ್ಲದೆ ಇವರೆಲ್ಲರೂ ಇಂದಿನ ನಾಗರಿಕ ಸಮಾಜಕ್ಕೆ ಸಂವಾದಿಯಾಗಿದ್ದ ಅಂದಿನ ಕ್ಯಾಥಲಿಕ್
ಚರ್ಚ್‍ನ ಪ್ರಭುತ್ವದ ವಿರುದ್ಧ ಬಂಡೆದ್ದಿದ್ದರು. ನಾಗರಿಕ ಸಮಾಜವು ಇಂದು ಸೆಕ್ಯುಲರ್ ಅಂಶಗಳನ್ನು
ಒಳಗೊಂಡಿದೆ. ಕೆಲವನ್ನು ರಾಜ್ಯ ನಡೆಸಿ ನಿರ್ವಹಿಸುತ್ತದೆ. ಧಾರ್ಮಿಕ ಅಸಹಿಷ್ಣುತೆ ಮತ್ತು ಸಂಪೂರ್ಣ
ಧಾರ್ಮಿಕ ಮನೋಭಾವವನ್ನು ಹಿಂದುಳಿದ ಆಲೋಚನೆಯಂತೆ ಕಾಣಲಾಗುತ್ತಿತ್ತು. ಪ್ರಗತಿಯು ಯಾವಾಗಲೂ ಒಳಗೊಳ್ಳುವಿಕೆ
ಹಾಗೂ ಮತಭೇದಗಳ ಸಹಿಷ್ಣುತೆಯಿಂದಲೇ ಸಾಧ್ಯ ಎಂಬ ವಾದವಿದೆ.
ಕೇವಲ ಇಡೀ ಧರ್ಮವನ್ನು ಟೀಕಿಸುವ ಸಲುವಾಗಿ ಚರ್ಚನ್ನು ಟೀಕಿಸಲಾಗಿಲ್ಲ. ಆದರೆ ಔಪಚಾರಿಕವಾಗಿ
ಧರ್ಮವು ಸಮಾಜದ ಇತರ ಸಂಸ್ಥೆಗಳ ಮೇಲೆ ಹೊಂದಿದ್ದ ಹಿಡಿತಗಳಿಗಾಗಿ ಟೀಕೆಗೊಳಪಟ್ಟಿತ್ತು. ಕುಟುಂಬ, ಶಿಕ್ಷಣ,
ಆಡಳಿತ ಹಾಗೂ ನ್ಯಾಯದಾನ ವ್ಯವಸ್ಥೆ ಇವೆಲ್ಲವೂ ಅದರಲ್ಲಿದ್ದವು. ಈ ಸಂಸ್ಥೆಗಳ ಮೇಲಿನ ದೈವಿಕ ನಿಯಂತ್ರಣವನ್ನು
ನಿರಾಕರಿಸಲಾಯಿತು. ಆಡಳಿತದ ಅಧಿಕಾರಕ್ಕೆ ಮೂಲ ಜನರ ನಡುವಿನ ಸಾಮಾಜಿಕ ಒಪ್ಪಂದವೇ ಆಗಿತ್ತು. ಇತರ ವಿಷಯಗಳಲ್ಲದೆ
ಸಮಾಜದ ಪ್ರಮುಖವಾದ ಆಡಳಿತವನ್ನು ಗುರ್ತಿಸಲು, ಅಗತ್ಯವಿದ್ದಲ್ಲಿ ಬದಲಾವಣೆ ತರಲು, ಧಾರ್ಮಿಕ ಉಲ್ಲೇಖಕ್ಕಿಂತ
ತಾರ್ಕಿಕ ವಿಶ್ಲೇಷಣೆಯ ಮೇಲಿನ ಹೆಚ್ಚು ಅವಲಂಬನೆಯು ಸುಲಭದ ದಾರಿಯನ್ನು ಹಾಕಿಕೊಟ್ಟಿತು.
ಇಷ್ಟಾದರೂ ಸಾರ್ವಜನಿಕ ಬುದ್ಧಿಜೀವಿಯು ತತ್ವಜ್ಞಾನಿಗಳಿಗಿಂತ ಭಿನ್ನವಾಗಿ 19ನೇ ಶತಮಾನದಲ್ಲಿ
ಗುರ್ತಿಸಬಹುದಾದ ವರ್ಗವಾಗಿ ಹೊರಹೊಮ್ಮಿದ್ದಾನೆ. ಇದರ ಸಂಬಂಧ ಡ್ರೈಫಸ್ ಅಫೇರ್ ಜತೆಗಿದೆ. ಡ್ರೈಫಸ್
ಫ್ರೆಂಚ್ ಸೇನೆಯಲ್ಲಿ ಒಬ್ಬ ಯಹೂದಿ ಕಪ್ತಾನ. ಜರ್ಮನರೊಂದಿಗೆ ರಹಸ್ಯ ಸೋರಿಕೆ ಮಾಡಿದ ಆಪಾದನೆಯಲ್ಲಿ
ಆತನನ್ನು ತಪ್ಪಾಗಿ ಬಂಧಿಸಲಾಗಿತ್ತು. ಈ ಕ್ರಿಯೆಯನ್ನು ಒಪ್ಪದಿರುವ ಎಲ್ಲರ ವಾದವೇನೆಂದರೆ ಸೇನೆಯ ಸಿಬ್ಬಂದಿ,
ರಾಜಕೀಯದವರನ್ನು ಒಳಗೊಂಡು ಡ್ರೈಫಸ್‍ನನ್ನು ಶಿಕ್ಷಿಸಿದ್ದಾರೆ ಎಂಬುದಾಗಿತ್ತು.ಈ ಆಪಾದನೆಯನ್ನು ಎಮಿಲಿ
ಶೋಲಾ ಬರೆದನು ಇದನ್ನು ಬೃಹತ್ ಸಂಖ್ಯೆಯ ಲೇಖಕರು, ಕಲಾವಿದರು, ವಿದ್ವಾಂಸರು ಎಲ್ಲರನ್ನೂ ಒಟ್ಟಾಗಿ
‘ಬುದ್ಧಿಜೀವಿಗಳು’ ಎಂದು ಕರೆಯಲಾಯಿತು.ಅಂತಿಮವಾಗಿ ವಿಚಾರಣೆ ನಡೆದು ಡ್ರೇಫಸ್ ಓರ್ವ
ನಿರ್ದೋಷಿ ಎಂದು ಸಾಬೀತಾಯಿತು.ಆತನ ಸ್ಥಾನ ಮತ್ತೆ ದೊರಕಿತು.‘ಬುದ್ಧಿಜೀವಿ’ ಎಂಬ ಪದದ ಅರ್ಥ ಹರಳುಗಟ್ಟತೊಡಗಿತು.ಏನೆಂದರೆ ಆ ವ್ಯಕ್ತಿ ಓರ್ವ ವಿದ್ವಾಂಸನಾಗಿರಬೇಕೆಂದಿಲ್ಲ
ಆದರೆ ಓರ್ವ ಮಾನ್ಯತೆ ಪಡೆದ ವೃತ್ತಿಪರ ವ್ಯಕ್ತಿಯಾಗಿದ್ದು ಹಾಗೂ ಸಾರ್ವಜನಿಕ ಸೇವೆಯಲ್ಲಿರುವ ಪ್ರಭುತ್ವದಲ್ಲಿರುವ
ವ್ಯಕ್ತಿಗಳ ಕಾರ್ಯಗಳಿಗೆ ಸಊಕ್ತ ವಿವರಣೆಗಳನ್ನು ಬಯಸುವಂತಹವನಾಗಿರಬೇಕು ಹಾಗೂ ಈ ರೀತಿ ಮಾಡುವಾಗ ಪ್ರಭುತ್ವ
ಮತ್ತು ಶಕ್ತಿಯ ಕಟು ವಿಮರ್ಶೆಯಾದರೂ ಆತ ಹಿಂಜರೆಯಬಾರದು.
ಈ ತೆರನಾದ ಪ್ರಶ್ನೆಗಳು ಸಮಾಜದ ಬೌದ್ಧಿಕ ಪರಂಪರೆಯ ವಿಮರ್ಶಾತ್ಮಕ ವಿಶ್ಲೇಷಣೆ ನಡೆಯುತ್ತಿದ್ದಾಗ
ಸುಲಭವಾಗಿ ಹುಟ್ಟುತ್ತವೆ. ವಾದಗಳನ್ನು ಒಪ್ಪಿತ ತಾರ್ಕಿಕ ವಿಧಾನಗಳ ಮೇಲೆ ಆಧರಿಸುವುದು (ಆಧಾರವನ್ನು/ಸಾಕ್ಷ್ಯವನ್ನು)
ಪರಿಶೀಲಿಸುವ ಹಾಗೂ ವಿಶ್ಲೇಷಿಸುವುದನ್ನು ಒಳಗೊಂಡಿದೆ.(ಪ್ರಶ್ನಿಸುವ ವಿಧಾನವನ್ನು ಐತಿಹಾಸಿಕ ಸಂದರ್ಭ
ಬದಲಾಯಿಸಿದರೂ ಸಹ) ಪ್ರಸ್ತುತ ಈ ವಿಧಾನ ಈಗ ವಿಜ್ಞಾನಗಳಿಗಷ್ಟೇ ಅಲ್ಲದೆ ಸಮಾಜವಿಜ್ಞಾನಕ್ಕೂ ತಳಹದಿಯಾಗಿದೆ.
ಏಕೆಂದರೆ ಇದರಲ್ಲಿ ಸಾಮಾಜಿಕ ಹಾಗೂ ರಾಜಕೀಯ ಸಂಸ್ಥೆಗಳು ಮತ್ತು ಚಟುವಟಿಕೆಗಳ ಕುರಿತು ಸರಳ ವಿವರಣೆಗಳು
ದೊರೆಯುತ್ತವೆ. ದುರದೃಷ್ಟವಶಾತ್ ಈ ವಿಧಾನವನ್ನು ಐತಿಹಾಸಿಕ ಸಂಶೋಧನೆಗೆ ಅಳವಡಿಸಿದಾಗ ಹಾಗೂ ಸಾಂಪ್ರದಾಯಿಕ
ದೃಷ್ಟಿಕೋನಗಳನ್ನೂ ಪ್ರಶ್ನಿಸಿದಾಗ ಸಾಕಷ್ಟು ಮೆಚ್ಚುಗೆ ಸಿಗುತ್ತಿಲ್ಲ.
ತಾರ್ಕಿಕ ವಾದಸರಣಿಯ ಕಲ್ಪನೆ ಕಳೆದ ಎರಡು ಶತಮಾನಗಳಿಂದ ವಿಮರ್ಶೆಯನ್ನು ಎದುರಿಸುತ್ತಿದೆ. ವಾದವು
ತಾರ್ಕಿಕವಾಗಿದ್ದರೂ ಅದು ಸಂಪೂರ್ಣ ವಿವರಣೆ ಕೊಡಲು ಸಾಧ್ಯವಿಲ್ಲದ ಕಾರಣ ಅದರ ಪ್ರಾಮುಖ್ಯತೆ ಕಡಿಮೆ
ಹಾಗೂ ಈ ವಿವರಣೆ ತರ್ಕಬದ್ಧವಾಗಿರಲಿ ಇಲ್ಲದಿರಲಿ ಎರಡು ಸಮಾನ ಮೌಲ್ಯವನ್ನು ಹೊಂದಿವೆ. ವಿಮರ್ಶಾತ್ಮಕ
ಚಿಂತನೆಯ ಟೀಕೆಗಳು ಆ ವಿವರಣೆಯಲ್ಲಿ ಒಳಗೊಂಡಿರುವ ಸಾಕ್ಷ್ಯ ಹಾಗೂ ತರ್ಕವನ್ನು ಅವಲಂಬಿಸಿರುತ್ತವೆ.
ಆದರೂ ವಿಮರ್ಶಾತ್ಮಕ ತಾರ್ಕಿಕತೆ ಎಂಬ ಪರಿಕಲ್ಪನೆ ಐತಿಹಾಸಿಕ ಸಂದರ್ಭಗಳಿಗನುಗುಣವಾಗಿ ಬದಲಾಗಬಹುದು
ಮತ್ತು ವಿಮರ್ಶಾತ್ಮಕ ತಾರ್ಕಿಕತೆಯೊಂದೇ ಮುಂದುವರಿಯುತ್ತದೆ.
ಆಧುನಿಕ ಚಿಂತನೆಗಳಾದ ಪ್ರಜಾಪ್ರಭುತ್ವ ಹಾಗೂ ಉದಾರವಾದಿ ತತ್ವಗಳು ಮೊದಲಾದವುಗಳ ಬೇರುಗಳು ಈ
ತತ್ವಶಾಸ್ತ್ರಜ್ಞರು ಮತ್ತು ಇತರರ ನಡುವಿನ ಚರ್ಚೆಗಳಲ್ಲಿ ಅಡಗಿವೆ ಎಂಬುದನ್ನು ನಾವು ಮರೆಯುವಂತಿಲ್ಲ.
ಇವೆಲ್ಲದರಿಂದ ನಾವು ನಮ್ಮನ್ನು ಊಳಿಗಮಾನ್ಯ ಹಾಗೂ ಮಧ್ಯಕಾಲೀನ ಯುಗದ ಮನಸ್ಥಿತಿಯನ್ನು ಹೊಂದಿಲ್ಲದವರೆಂದೂ
ಗುರ್ತಿಸಿಕೊಳ್ಳುತ್ತೇವೆ. ಈ ಚರ್ಚೆಗಳು ಕೇವಲ ಯುರೋಪಿಗೆ ಮಾತ್ರ ಸೀಮಿತವಾಗಿರಲಿಲ್ಲ. ಏಕೆಂದರೆ ಇವುಗಳಲ್ಲಿ
ಕೆಲವು ಪ್ರಪಂಚದ ಇತರ ಭಾಗಗಳಿಗೆ ವಸಾಹತೀಕರಣದ ಸಂದರ್ಭದಲ್ಲಿ ಹರಡಿದಾಗ ಕೆಲವೆಡೆ ಸ್ವೀಕೃತವೂ ಹಾಗೂ
ನಿರಾಕರಣೆಯನ್ನು ಎದುರಿಸಿದವು.
ಸದ್ಯ ಈಗ ನಾನು ಭಾರತೀಯ ಪರಂಪರೆಯಲ್ಲಿ ಬರುವ ಸ್ಥಾಪಿತ ವಿಚಾರಧಾರೆ ಹಾಗೂ ಪದ್ಧತಿಗಳ ವಿರುದ್ಧ
ದನಿಯೆತ್ತಿದ ಮತ್ತು ತಾರ್ಕಿಕ ಹಾಗೂ ವಿಮರ್ಶಾತ್ಮಕ ವಿವರಣೆಗಳನ್ನು ಬದಲಾವಣೆಯ ನಿಮಿತ್ತ ನೀಡಿದ ಕೆಲವು
ವ್ಯಕ್ತಿಗಳ ಬಗ್ಗೆ ಪ್ರಸ್ತಾಪಿಸುತ್ತೇನೆ. ನಮ್ಮ ಪೂರ್ವಜರು ವಿಮರ್ಶೆಯನ್ನು ಜ್ಞಾನ ಸಂಪಾದನೆಯ ಮಾರ್ಗವನ್ನಾಗಿ
ಕಂಡುಕೊಂಡಿರಲಿಲ್ಲ ಎಂಬ ಸಿದ್ಧಾಂತಕ್ಕೆ ಎಷ್ಟು ಅಂಟಿಕೊಂಡಿದ್ದೇವೆ ಎಂದರೆ ವಿಮರ್ಶಾತ್ಮಕ ಚಿಂತನೆಯ
ಪರಂಪರೆ ನಮ್ಮಲ್ಲಿತ್ತು ಎಂಬುದನ್ನೇ ಮರೆತಿದ್ದೇವೆ.
ಪ್ರಶ್ನೆಗಳನ್ನು ಮತ್ತು ಕಾರ್ಯಕಾರಣ ಸಂಬಂಧ ಹಾಗೂ ತಾರ್ಕಿಕ ವಿವರಣೆಗಳನ್ನು ಉತ್ತೇಜಿಸಿದ ಭಾರತೀಯ
ತತ್ವಶಾಸ್ತ್ರಜ್ಞ ಐದನೇ ಶತಮಾನ ಕ್ರಿ.ಪೂ ದ ಸಾಕ್ರೆಟೀಸನ ನಿಕಟ ಸಮಕಾಲೀನವಾಗಿದ್ದನು. ಅವರೀರ್ವರು
ಭೌಗೋಳಿಕವಾಗಿ ದೂರ ಖಂಡಾಂತರವಾಗಿದ್ದರು ಹಾಗೂ ಯಾವುದೇ ಸಂಪರ್ಕದಲ್ಲಿರಲಿಲ್ಲ. ನಾನು ಬುದ್ಧನನ್ನು
ಇಲ್ಲಿ ಪ್ರಸ್ತಾಪಿಸುತ್ತಿರುವೆ. ಅದೃಷ್ಟವಶಾತ್ ಈತ ವಿಷಪ್ರಾಶನ ಮಾಡಬೇಕಾದ ಸಂದರ್ಭ ಒದಗಿ ಬರಲಿಲ್ಲ.
ಆದರೆ ಈತನ ಬೋಧನೆಗಳನ್ನು ಬ್ರಾಹ್ಮಣ ಕರ್ಮಠರು ಕಟುವಾಗಿ ವಿರೋಧಿಸಿದರು.ಈತನ ಬೋಧನೆಯನ್ನು ದಾರಿತಪ್ಪಿಸುವ
ಹಾಗೂ ಭ್ರಮಾಧೀನಗೊಳಿಸುವಂತದ್ದು ಎನ್ನಲಾಯಿತು.ಭಾರತದಿಂದ ಬೌದ್ಧಧರ್ಮ ಹೊರ ಹೋಗಲು ಇದೂ ಒಂದು ಕಾರಣವೆನ್ನಬಹುದು.ನೆರೆಹೊರೆಯ
ದೇಶಗಳಿಗೆ ಹರಡಿದ ಈ ಧರ್ಮ ಅಲ್ಲಿ ಬೆಳೆದು ಕೆಲವು ಕಡೆ ಕಠಿಣವಾದ ಧರ್ಮವೇ ಆಯಿತು.
ಆಲೋಚನೆಗಳ ಇತಿಹಾಸದಲ್ಲಿನ ಸುಂದರವಾದ ಆಯಾಮಗಳಲ್ಲೊಂದು ಸಮಾಜವು ತನ್ನ ವಿಕಾಸ ಹೊಂದುತ್ತಿರುವ
ಸಂರಚನೆಗಳನ್ನು ವಿವರಿಸಲು ಬಳಸುವ ವಿವಿಧ ಮಾರ್ಗಗಳೂ ಆಗಿದೆ. ಸರಕಾರದ ಮೂಲದ ಬಗ್ಗೆ ಕೇಳಿದಾಗ ಬುದ್ಧನು
ಕಾಲದ ಮೊದಲಿನಲ್ಲಿ ಇದ್ದಂತಹ ಎಲ್ಲರೂ ಸಮಾನರೂ ಮತ್ತು ಎಲ್ಲ ಸಂಪನ್ಮೂಲದ ಸಮಾನ ಹಂಚಿಕೆ ಸಾಧ್ಯವಿದ್ದಂತಹ
ಪರಿಶುದ್ಧ ಯೂಟೊಪಿಯ ಬಗ್ಗೆ ವಿವರಿಸುತ್ತಾನೆ. ಕುಟುಂಬಗಳನ್ನು ಗುರ್ತಿಸಿ ಅವುಗಳು ಸಮಾಜದ ಘಟಕಗಳಾದ
ಮೇಲೆ ಮೊದಲನೆ ಈ ವ್ಯವಸ್ಥೆಯಲ್ಲಿ ಬದಲಾವಣೆ ಕಂಡು ಬಂದಿತು. ತದನಂತರ ಮುಂದಿನ ಹಂತದಲ್ಲಿ ಭೂಮಿಯ ಒಡೆತನ,
ಖಾಸಗಿ ಸ್ವತ್ತು ಮುಂತಾದವು ಸೃಷ್ಟಿಯಾದವು. ಈ ಬದಲಾವಣೆಗಳು ಅನುಮಾನ, ಸಂಘರ್ಷಗಳಿಗೆ ಎಡೆಮಾಡಿಕೊಟ್ಟವು.
ಅಂತಿಮವಾಗಿ ಜನ ಒಟ್ಟಿಗೆ ಸೇರಿ ಅವರಲ್ಲೇ ಓರ್ವನನ್ನು ಚುನಾಯಿಸಿ ಆತನಿಗೆ ಮಹಾಸಮ್ಮತ್ ಎಂದು ಹೆಸರಿಸಿ
ಅವನಿಗೆ ತಮ್ಮನ್ನು ಆಳುವ, ಕಾನೂನುಗಳನ್ನು ರಚಿಸುವ, ಅರಾಜಕತೆಯಿಂದ ರಕ್ಷಿಸುವ ಅಧಿಕಾರ ನೀಡಿದರೂ ಈ
ಸಂದರ್ಭದಲ್ಲಿ ಮರೆಯುವ ಮುನ್ನ ನನ್ನ ಒಂದು ಮಾತನ್ನು ಅವರಸರದಿಂದಲೇ ಹೇಳಬಯಸುವೆ ಏನೆಂದರೇ ರೂಸೋ ಆಗಲಿ
ಫ್ರೆಡ್ರಿಕ್ ಎಂಗೆಲ್ಸ್ ಆಗಲಿ ಬುದ್ಧನ ಪಠ್ಯವನ್ನು ಅಭ್ಯಾಸ ಮಾಡೇ ಇಲ್ಲ.!
ಬುದ್ಧನ ವಿವರಣೆಯು ಬ್ರಾಹ್ಮಣಿಕ ಅವತರಣಿಕೆಯನ್ನು ಪ್ರತಿರೋಧಿಸುತ್ತದೆ. ಬ್ರಾಹ್ಮಣಿಕೆಗಳಲ್ಲಿ
ದೇವತೆಗಳ ಹಾಗೂ ರಾಕ್ಷಸರ ಯುದ್ಧವಿದೆ.ಯುದ್ಧದಲ್ಲಿ ಸೋಲಿನ ಭೀತಿಯಿಂದ ಪ್ರಜಾಪತಿಯನ್ನು ಸಹಾಯಕ್ಕೆ
ಕರೆವ ದೇವತೆಗಳಿದ್ದಾರೆ.ಕೆಲವು ವರ್ಷನ್‍ಗಳಲ್ಲಿ ಆತ ತನ್ನ ಮಗನಾದ ಇಂದ್ರನನ್ನು ದೇವತೆಗಳ ಸಹಾಯಕ್ಕಾಗಿ
ನೇಮಿಸಿದನು.ಇಲ್ಲಿ ಆಡಳಿತದ ಬೇರು ಮೂಲ ಅಡಗಿದೆ.ದೇವತೆಗಳು ಹಾಗೂ ದೈವೀ ಶಕ್ತಿಗಾಗಿ ಪ್ರಾರ್ಥಿಸುವುದು
ಅಗತ್ಯವಾಗಿದ್ದು ಇದು ಪ್ರಭುತ್ವದ ಧೋರಣೆಯನ್ನು ಪ್ರಭಾವಿಸುತ್ತದೆ. ಬುದ್ಧನ ಪರಿಕಲ್ಪನೆಯಾದ ‘ಆಯ್ಕೆಯಾದವನು’ ಎಂಬುದು ಬಹು ವಿಧದಲ್ಲಿ ‘ರಾಜ’ನ ಪರಿಕಲ್ಪನೆಯ ವಿರುದ್ಧ ಮುಖವಾಗಿತ್ತು. ರಾಜ ದೈವೀಕವಾಗಿ ನೇಮಿಸಲ್ಪಟ್ಟಿದ್ದು,
ಶಕ್ತಿಯನ್ನೆಲ್ಲಾ ತನ್ನಲ್ಲೇ ಕೇಂದ್ರೀಕರಿಸಿಕೊಳ್ಳುತ್ತಿದ್ದವನಾಗಿದ್ದು, ಎರಡೂ ಮಿಥ್‍ಗಳಲ್ಲಿನ ಊಹೆಗಳು
ಸಂಪೂರ್ಣ ಭಿನ್ನವಾದುವುಗಳಾಗಿವೆ.
ಪ್ರಾಚೀನ ಗ್ರಂಥಗಳಲ್ಲಿ ಧರ್ಮವನ್ನೂ ಉಲ್ಲೇಖಿಸಿದಾಗೆಲ್ಲ ಎಲ್ಲೂ ಹಿಂದುತ್ವದ ಹೆಸರು ಕಂಡುಬರುವುದಿಲ್ಲ.
ಭಾರತೀಯ ಧರ್ಮದೊಳಗೆ ಇದ್ದ ವಿವಿಧ ಪಂಗಡಗಳನ್ನು ಅವುಗಳ ಸ್ವಂತ ಹೆಸರಿನಿಂದಲೇ ಕರೆಯಲಾಗುತ್ತಿತ್ತು.ಸಾಮಾನ್ಯೀಕರಿಸಿದಾಗ
ಅವು ಎರಡು ದೊಡ್ಡ ವಿಭಾಗಗಳಲ್ಲಿ ಹಂಬಿಹೋಗುತ್ತಿದ್ದವು.ಒಂದೋ ಬ್ರಾಹ್ಮಣಿಕ ನಂಬಿಕೆ ಅಥವಾ ಶ್ರಮಣ-ಬೌದ್ಧ
ಅಥವ ಜೈನ ಬೋಧನೆಗಳ ಮಾರ್ಗ, ಬೌದ್ಧ ಬಿಕ್ಕುಗಳಿಗೆ ಬಳಸುತ್ತಿದ್ದ ಪದ ‘ಶ್ರಮಣ’.ಸಾವಿರ ವರ್ಷಗಳ ತನಕವೂ ಇದೇ ರೀತಿಯಲ್ಲಿ ಧರ್ಮಗಳನ್ನು ಹೆಸರಿಸಲಾಗುತ್ತಿತ್ತು. ಕ್ರಿ.ಪೂ
3ನೇ ಶತಮಾನದ ಅಶೋಕನ ಶಿಲಾಶಾಸನದಿಂದ ಕ್ರಿ.ಶ 11ನೇ ಶತಮಾನದಲ್ಲಿ ಅಲ್-ಬರೂನಿ ಬರೆದ ಭಾರತದ ಕುರಿತು
ಪುಸ್ತಕದವರೆಗೂ ಸಂಸ್ಕøತಿ ಹೀಗೆಯೇ ಇತ್ತು. ಪತಂಜಲಿ (ಸಂಸ್ಕøತ ವೈಯಾಕರಣೆ) ಹೊಸ ಸಹಸ್ರಮಾನದ ಆದಿಯಲ್ಲಿ
ತನ್ನ ಬರವಣಿಗೆಯಲ್ಲಿ ಹೊಸ ದೃಷ್ಟಿಕೋನವನ್ನು ನೀಡುತ್ತಾನೆ. ಆತ ಇವೆರಡರ ಸಂಬಂಧವನ್ನು ಹಾವು-ಮುಂಗುಸಿಗೆ
ಹೋಲಿಸುತ್ತಾನೆ. ಇದರಿಂದ ಸ್ಪಷ್ಟವಾಗುವುದೇನೆಂದರೆ ಇವರಿಬ್ಬರ ನಡುವಿನ ಚರ್ಚೆಗಳು ಕಟು ವಿರೋಧದಿಂದ
ಕೂಡಿದವು ಆಗಿದ್ದವು ಹಾಗೂ ಅಲ್ಲಿ ಕೆಲವರು ಏನನ್ನೂ ಪ್ರಶ್ನಿಸದೆ ಅವರಿಗೆ ಹೇಳಿದ್ದನ್ನು ನಂಬುತ್ತಿದ್ದರು
ಮತ್ತೆ ಕೆಲವರು ಪ್ರಶ್ನಿಸುತ್ತಿದ್ದರು.
ಚಾರ್ವಾಕರು ಅಥವಾ ಲೋಕಾಯತರು ಎಲ್ಲ ತತ್ವದ ಗುಂಪುಗಳಿಗೂ ವಿರೋಧಿಗಳಾಗಿದ್ದರು.ಏಕೆಂದರೆ ಅವರು
ಜೀವನವನ್ನು ಭೌತಿಕ ಮಟ್ಟಕ್ಕೆ ಸೀಮಿತಗೊಳಿಸಿದ್ದರು.ಅವರ ಯಾವುದೇ ಗ್ರಂಥಗಳು ಉಳಿದಿಲ್ಲ. ಆದರೆ ಅವರ
ಕುರಿತ ಉಲ್ಲೇಖ ಇತರ ಗ್ರಂಥಗಳಲ್ಲಿ ಆಗಿಂದಾಗ್ಗೆ ಅಚಾನಕ್ಕಾಗಿ ಆಗುತ್ತಿರುತ್ತದೆ.ಬುದ್ಧ ಅವರ ವಾದಗಳನ್ನು
“ಈಲ್ ಮೀನನ್ನು ಹಿಂಡಿದಂತೆ” ಎಂದು ವರ್ಣಿಸುತ್ತಾನೆ.
ಕ್ರಿಸ್ತಶಕೆಯು ಪ್ರಾರಂಭವಾದಂತೆಲ್ಲ ಬೌದ್ಧ ಮತ ಜನಪ್ರಿಯವಾಗತೊಡಗಿತ್ತು.ವರ್ತಕರು, ಭೂಮಾಲೀಕರು,
ರಾಜಧನವುಳ್ಳವರ ನೆರವು ಸಿಗತೊಡಗಿತ್ತು.ಆಗ ಕೆಲವು ಪ್ರಮುಖ ಧಾರ್ಮಿಕ ಬ್ರಾಹ್ಮಣ ಗ್ರಂಥಗಳು ಬೌದ್ಧ
ಮತದ ಮೇಲೆ ತೀಕ್ಷ್ಣವಾಗಿ ಪ್ರತಿರೋಧ ವ್ಯಕ್ತಪಡಿಸಿ ಅವುಗಳನ್ನು ವಶೀಕರಣಶಾಸ್ತ್ರವೆಂದೂ, ನಾಸ್ತಿಕರೆಂದೂ
ದೈವವನ್ನು ನಂಬದವರೆಂದೂ ಕರೆಯಲಾರಂಭಿಸಿದರು.ಬ್ರಾಹ್ಮಣೀಯ ದೃಷ್ಟಿಕೋನದಲ್ಲಿ ಶ್ರಮಣರು, ಚಾರ್ವಾಕರು,
ಅಜೀವಿಕರು, ನಾಸ್ತಿಕರು, ಭೌತಿಕವಾದಿಗಳು ಹಾಗೂ ವಿಮರ್ಶಕರು ಎಲ್ಲರೂ ಒಂದು ವರ್ಗಕ್ಕೆ ಸೇರಿದವರು
– ಅದು ನಾಸ್ತಿಕವರ್ಗ. ಏಕೆಂದರೆ ಇವರೆಲ್ಲರೂ ದೈವದ ಅಸ್ತಿತ್ವವನ್ನೇ ಪ್ರಶ್ನಿಸಿದವರಾಗಿದ್ದರು. ಹಾಗಾಗಿ
ವೇದಗಳು ದೈವದತ್ತವಾಗಿ ಬಂದಿವೆ ಎಂಬುದನ್ನೂ ನಂಬಿರಲಿಲ್ಲ. ಜಾತಿ ಪದ್ಧತಿಯ ನಿಯಮಗಳು, ಆತ್ಮದ ಇರುವಿಕೆ,
ಕರ್ಮಸಿದ್ಧಾಂತ ಇವಾವುಗಳಲ್ಲೂ ಇವರಿಗೆ ನಂಬಿಕೆ ಇರಲಿಲ್ಲ. (ಇಲ್ಲಿ ನನಗೆ ಈಗಿನ ಕಾಲದ ಹಿಂದುತ್ವದ
ಹಿಂಬಾಲಕರು ತಮ್ಮನ್ನು ಯಾರು ಹಿಂಬಾಲಿಸುವುದಿಲ್ಲವೋ ಅವರೆಲ್ಲರನ್ನೂ ಒಂದೇ ವರ್ಗಕ್ಕೆ ಸೇರಿಸಲಾಗಿದ್ದು
ಇವರನ್ನು ಮಾಕ್ರ್ಸ್‍ವಾದಿಗಳೆಂದು ಕರೆಯುವುದು ನೆನಪಾಯಿತು.
ಮನುಧರ್ಮಶಾಸ್ತ್ರ ಇತರ ನಂಬುಗೆಯವರ ಬಗ್ಗೆ ಅಪನಂಬಿಕೆ ಹೊಂದಿದೆ ಅವರನ್ನು ನಿರೀಶ್ವರವಾದಿಗಳು
ಹಾಗೂ ತಪ್ಪು ಸಿದ್ಧಾಂತಗಳ ಬೋಧಕರೆಂದು ಕರೆದಿದೆ.ಅವರೆಲ್ಲಾ ರೋಗಿಷ್ಟರು ಹಾಗೂ ತಮಸ್ಸಿನ ಮೂಲವಾಗಿದ್ದಾರೆ.ಧರ್ಮನಿಷ್ಟ
ಕರ್ಮಕರಿಗೆ ಇದು ಕಷ್ಟಕಾಲವಾಗಿತ್ತು ಯಾಕೆಂದರೆ ಕೆಲವು ಪ್ರಭಾವಶಾಲಿ ತತ್ವಶಾಸ್ತ್ರೀಯ ಸಂಸ್ಥೆಗಳು
ನಿರೀಶ್ವರವಾದದ ಕಡೆಗೇ ಹೊರಳಿದ್ದವು.ಇದೇ ಬೌದ್ಧಿಕವಾಗಿ ಉತ್ಸುಕತೆಯನ್ನು ತರಲು ಕಾರಣವಾಯಿತು.
ಬೇರೆ ನಂಬಿಕೆಯವರು ಯಾವಾಗ ಜನಪ್ರಿಯರಾಗತೊಡಗಿದರೋ ಆಗೆಲ್ಲಾ ಅವರ ಮೇಲೆ ದಾಳಿಯೂ ಪ್ರಬಲವಾಯಿತು.ಕ್ರಿ.ಶ.ದ
ಮೊದಲ ಶತಮಾನಗಳ ವಿಷ್ಣುಪುರಾಣದಲ್ಲಿ ಮಾಯಮೋಹ ಮತ್ತು ಆತನ ಹಿಂಬಾಲಕರ ಪ್ರಸ್ತಾಪವಿದೆ.ಆತನ ಬಗ್ಗೆ ಋಣಾತ್ಮಕವಾಗಿ
ಹೇಳಲಾಗಿದೆ.ಮಿಥ್ಯೆ ಹಾಗೂ ಮೋಸ-ಇದು ಮಾಯಮೋಹದ ಅರ್ಥ ಇವು ಆ ಗುಂಪಿನ ಗುಣಲಕ್ಷಣಗಳಾಗಿವೆ. ಎಲ್ಲಾ ಕೆಟ್ಟದ್ದನ್ನು
ಆಕರ್ಷಿಸುವುದು ಈ ಮಾಯಾಮೋಹ-ಅಸುರರು, ದೈತ್ಯರು- ಹಾಗೂ ಇವರನ್ನು ತಮ್ಮ ಮಾರ್ಗದಲ್ಲಿ ಆಲೋಚಿಸುವಂತೆ
ಮಾಡುತ್ತದೆ ಅವರ ಕೆಲವು ಆಚರಣೆಗಳು ಬೌದ್ಧ ಹಾಗೂ ಜೈನ ಅನುಯಾಯಿಗಳ ಆಚರಣೆಗಳನ್ನು ಹೋಲುತ್ತಿದ್ದವು.
ಉದಾ: ಕೆಂಪು ವಸ್ತ್ರಧಾರಣೇ ಕೇಶ ಮುಂಡನ, ಯಾವುದೇ ಶಾಸ್ತ್ರ ಪಾಲಿಸದಿರುವುದು ಹಾಗೂ ಭಿಕ್ಷೆಯಿಂದ ಜೀವಿಸುವುದು.
ಇವರೊಂದಿಗೆ ಯಾವುದೇ ಮೀಮಾಂಸೆ ನಿಷಿದ್ಧ ಯಾಕೆಂದರೆ ಈ ರೀತಿಯ ವಿಚಾರವಿನಿಮಯ ಕಲುಷಿತವಾದದ್ದು.ಈ ರೀತಿಯ
ವಾದ-ಚರ್ಚೆಯ ದಾಖಲೆ ಇದ್ದಿದ್ದರೆ ಒಳಿತಾಗುತ್ತಿತ್ತು.ಆದರೆ ಕೆಲವೇ ದಾಖಲೆ/ಉಲ್ಲೇಖಗಳು ಉಳಿದಿವೆ.
ಚಾರ್ವಾಕರು ನೇರವಾಗಿ ಕಾಣದಿದ್ದರೂ ಹಿನ್ನೆಲೆಯನ್ನು ಸಂಪೂರ್ಣವಾಗಿ ತೊರೆದಿಲ್ಲ. ಕ್ರಿ.ಶ
9ನೆ ಶತಮಾನದ ಶಂಕರಾಚಾರ್ಯರು ಚಾರ್ವಾಕರ ಆತ್ಮಕ್ಕಿಂತಲೂ ಭೌತಿಕ ವಸ್ತುಗಳ ಹಿರಿಮೆಯ ಬಗೆಗಿನ ವಾದವನ್ನು
ಉಲ್ಲೇಖಿಸುತ್ತಾರೆ.14ನೇ ಶತಮಾನದ ಮಾಧವಾಚಾರ್ಯರ ವಿರಚಿತ ಪ್ರಮುಖ ತಾತ್ವಿಕ ಗುಂಪುಗಳ ಚರ್ಚೆಗಳ ಸಂಗ್ರಹರೂಪವಾದ
‘ಸರ್ವದರ್ಶನ ಸಂಗ್ರಹ’ ಗ್ರಂಥದ ಪ್ರಾರಂಭದಲ್ಲಿಯೇ ಚಾರ್ವಾಕ ಸಿದ್ಧಾಂತದ ಸಾಧ್ಯತೆ ಬಗ್ಗೆ
ವಿಸ್ತøತ ವಿವರಣೆಯಿದೆ.ಆತ ಅಂತಿಮವಾಗಿ ಇದನ್ನು ತಿರಸ್ಕರಿಸಿದರೂ ಅದರ ಕುರಿತು ದೀರ್ಘ ವಿವರಣೆ ಚರ್ಚೆ
ನಡೆಸಿದ್ದಾನೆ. ಚಾವಾಕ ಸಿದ್ಧಾಂತ ಪ್ರಸ್ತುತವಾಗಿಲ್ಲದಿದ್ದರೆ ಅದನ್ನು ಅವಗಣನೆ ಮಾಡಬಹುದಿತ್ತು.ಇದು
19ನೇ ಶತಮಾನದ ವಸಾಹತುಶಾಹಿ ಅಧ್ಯಯನದಲ್ಲಿ ನಡೆಯಿತು.ಆಗ ಕೆಲವು ವಸಾಹತು ಲೇಖಕರು ಭಾರತೀಯ ನಾಗರಿಕತೆಯಲ್ಲಿ
ಯಾವುದೇ ವಿಮರ್ಶಾತ್ಮಕ ಸಿದ್ಧಾಂತಗಳಲ್ಲ ಎಂದು ಹೇಳಿ ಇದೂ ಸಹ ಭಾರತ ಹಿಂದುಳಿಯಲು ಪ್ರಮುಖ ಕಾರಣಗಳಲ್ಲೊಂದು
ಎಂದರು.ರಾಷ್ಟ್ರೀಯ ಚಿಂತನೆಗೆ ಇದು ಒಪ್ಪಿಗೆಯಾಗದಿದ್ದರೂ ಯಾವುದೇ ಭಾರತೀಯ ವಿದ್ವಾಂಸರು ಇದನ್ನು ಬಲವಾಗಿ
ಖಂಡಿಸಿರುವುದು ಕಂಡುಬಂದಿಲ್ಲ. ಪ್ರಶ್ನೆ ಕೇಳುವವರು ಸರ್ವಾಧಿಕಾರಿ ಪ್ರಭುತ್ವಕ್ಕೆ ಶಾಪವಿದ್ದಂತೆ.ಹಾಗೆಯೇ
ಹಿಂದುತ್ವ ಆಧಾರಿತ ಒಂದು ಭಾರತದ ಗುರುತನ್ನು ಸಾಧಿಸಹೊರಟಿರುವವರು ಬ್ರಾಹ್ಮಣ್ಯವನ್ನು ವಿರೋಧಿಸಿದ
ಸಿದ್ಧಾಂತಗಳನ್ನು ನಿರಾಕರಿಸಬಾರದಿತ್ತು.
ನಂಬದವರನ್ನು ಕರ್ಮಠಸಿದ್ಧಾಂತಿಗಳು ತಿರಸ್ಕರಿಸಿದರು.ಆದರೂ ಅವರ ಸಿದ್ಧಾಂತಗಳನ್ನು ಹಾಗೂ ಇದೇ
ತೆರನಾದ ವಿಚಾರಗಳನ್ನು ಕ್ರಿ.ಶ.ದ ಮೊದಲಿನ ಶತಮಾನಗಳಲ್ಲಿ ಇತರ ಶಾಖೆಗಳು ಚರ್ಚಿಸಿ ವಿಮರ್ಶಿಸಿವೆ.
ವಿದ್ವಾಂಸರ ಮಟ್ಟದಲ್ಲಿ ತಿಳಿದ/ಕಲಿತ ಬ್ರಾಹ್ಮಣರ ಹಾಗೂ ಬೌದ್ಧರ ನಡುವಿನ ಚರ್ಚೆ/ಸಂವಾದಗಳು ಸಾಕಷ್ಟು
ತಾತ್ವಿಕ ಶಾಖೆಗಳಿಗೆ ಜನ್ಮನೀಡಿವೆ. ತರ್ಕ ಹಾಗೂ ವಿಮರ್ಶೆಯ ವಿಧಾನಗಳಯ ಸಂಶೋಧಿಸಲ್ಪಟ್ಟವು.ಆದರ್ಶವಾದ
ಸಿದ್ಧಾಂತಗಳಿಗೆ ಹೆಚ್ಚು ಸಹಾನುಭೂತಿಯುಳ್ಳ ವಿವಿಧ ವಿಧಾನಗಳೂ ಸಹ ಬೆಳಕಿಗೆ ಬಂದವು.ಈ ಕಾಲದ ಪ್ರಮುಖ
ತರ್ಕಶಾಸ್ತ್ರಜ್ಞರು ಬೌದ್ಧ ಪಂಥೀಯರೇ ಆಗಿದ್ದರು. ಅವರೆಂದರೆ ನಾಗಾರ್ಜುನ, ವಸುಬಂಧು, ದಿಗ್ನಾಗ ಮತ್ತು
ಧರ್ಮಕೀರ್ತಿ ಇವರಲ್ಲಿ ಕೆಲವರು ಜನ್ಮತ: ಬ್ರಾಹ್ಮಣರಾದರೂ, ಶಿಕ್ಷಣವನ್ನು ಹಾಗೆಯೇ ಗಳಿಸಿದರೂ ಬೌದ್ಧಧರ್ಮವನ್ನು
ಇಷ್ಟಪಟ್ಟರು. ಅವರು ವಿಚಾರಗಳನ್ನು ಟೀಕಿಸಿದರು ಹಾಗೂ ವಿಶೇಷವಾಗಿ ನಿರೀಶ್ವರವಾದದ ಸೂಕ್ಷ್ಮತೆಗಳನ್ನು
ಚರ್ಚಿಸುವಾಗ ಟೀಕೆ ನಡೆಯುತ್ತಿತ್ತು. ವಿಚಾರಗಳು ಏಕರೂಪದ್ದಾಗಿರದೆ ಹೆಚ್ಚು ಚರ್ಚೆಗೊಳಗಾಗುತ್ತಿದ್ದವು,
ವಾದಗಳು ಕೆಲವೊಮ್ಮೆ ಜiಚಿಟeಛಿಣiಛಿಚಿಟ ಜಿoಡಿm ಆಗುತ್ತಿದ್ದವು.
ಬೌದ್ಧಿಕವಾಗಿ ಬಹುಮುಖ್ಯ ಪ್ರಾಮುಖ್ಯತೆ ಪಡೆಯಬಹುದಾಗಿದ್ದ ಆದರೆ ದುರದೃಷ್ಟವಶಾತ್ ಗುರುತಿಸಲೂ
ಕಷ್ಟವಾಗಿರುವ ಸಂವಾದಗಳೆಂದರೆ ತತ್ವಜ್ಞಾನಿಗಳು ಹಾಗೂ ಖಗೋಳಶಾಸ್ತ್ರಜ್ಞರು ಅಥವ ಗಣಿತಶಾಸ್ತ್ರಜ್ಞರ
ನಡುವೆ ನಡೆದಂತಹವು.ಗಣಿತದ ಲೆಕ್ಕಚಾರವನ್ನು ಆಧರಿಸಿ ಆರ್ಯಭಟ ಸೂರ್ಯನ ಸುತ್ತ ಭೂಮಿ ಸುತ್ತುತ್ತಿದೆ
ಎಂದನು.ಗೆಲಿಲಿಯೋ ಹಾಗೂ ಕೋಪರ್ನಿಕಸ್‍ರಿಗಿಂತಲೂ ಸಹಸ್ರಮಾನ ಮುಂಚೆಯೇ ಸೂರ್ಯಕೇಂದ್ರಿತ ಸಿದ್ಧಾಂತವನ್ನು
ಮಂಡಿಸಿದ್ದನು.ಯುರೋಪಿನಲ್ಲಿ ಈ ವಿಚಾರಗಳನ್ನು ಹೊರತರಲು ಕ್ಯಾಥೊಲಿಕ್ ಧರ್ಮನಿಷ್ಠೆ ಹಾಗೂ ಬೈಬಲ್‍ನ
ಪ್ರಭಾವ ಮತ್ತು ಸಮಾಜದಲ್ಲಿ ಚರ್ಚಿನ ಬಿಗಿಹಿಡಿತ ಇವೆಲ್ಲವೂ ತಡೆಯಾಗಿದ್ದವು ಹಾಗೂ ಗೆಲಿಲಿಯೋ ತನ್ನ
ಸಿದ್ಧಾಂತವನ್ನು ಹಿಂಪಡೆಯಬೇಕಾಯಿತು.
ಭಾರತದಲ್ಲಿ ಸೂರ್ಯ ಕೇಂದ್ರಿತ ಸಿದ್ಧಾಂತದ ಬಗ್ಗೆ ಚರ್ಚೆ ನಡೆಯಿತು ಹಾಗೂ ಅದನ್ನು ಒಪ್ಪಲಾಯಿತು
ಏಕೆಂದರೆ ಇಲ್ಲಿ ಕ್ಯಾಥಲಿಕ್ ಚರ್ಚೆ ಇರಲಿಲ್ಲ. ಇಲ್ಲಿ ಇನ್ನೊಂದು ಕಾರಣವೂ ಇದೆ. ಅದೆಂದರೆ ಸೂರ್ಯಕೇಂದ್ರಿತ
ಸಿದ್ಧಾಂತ ಒಪ್ಪಿದ್ದರೆ ಕೆಲವು ಗ್ರಹಗತಿಗಳ ಲೆಕ್ಕಾಚಾರ(ಜ್ಯೋತಿಷ್ಯ)ದಲ್ಲಿ ದೋಷಗಳಾಗುತ್ತಿದ್ದವು.
ಧಾರ್ಮಿಕ ಪ್ರಭುತ್ವವು ರಾಜ ಪ್ರಭುತ್ವವನ್ನು ಹಿಡಿತದಲ್ಲಿಡಲು ಜ್ಯೋತಿಷ್ಯಶಾಸ್ತ್ರವೂ ಒಂದು ವಿಧಾನವಾಗಿತ್ತು.
ಪುರಾತನ ಜ್ಞಾನವು ಸಾಕಷ್ಟು ಸ್ಥಳಗಳಲ್ಲಿ ಬದಲಾಗಲಿಲ್ಲ. ಗಣಿತಶಾಸ್ತ್ರದ ಭಾರತೀಯ ಸಿದ್ಧಾಂತಗಳು ತಮ್ಮಲ್ಲಿಯೇ
ಸೃಜನಾತ್ಮಕವಾಗಿ ವಿಸ್ತಾರಗೊಂಡವು.ಆದರೆ ಅವು ಬಾಗ್ದಾದ್‍ಗೆ ಹೋದ ನಂತರ ಇನ್ನೂ ಹೆಚ್ಚು ಪ್ರಭಾವಶಾಲಿಯಾಗಿದ್ದು
ವಿಪರ್ಯಾಸ ನಂತರ ವಿಜ್ಞಾನಕ್ಕೆ ಮುನ್ನುಡಿಯೂ ಆದವು.
ಭಾರತದಲ್ಲಿ ಇತರ ಪಂಗಡಗಳು ಇದೇ ತೆರನಾಗಿ ಪ್ರಶ್ನಿಸಲು ಅನುಕೂಲಕರವಾದ ಸನ್ನಿವೇಶಗಳನ್ನು ಸೃಷ್ಟಿಸಿದವು.ಧಾರ್ಮಿಕ
ಪ್ರಭುತ್ವದವರು ಹೊಂದಿದ್ದ ನಂಬಿಕೆಗಳು, ಆಚರಣೆಗಳನ್ನು ವಿದ್ವಾಂಸರು ಪ್ರಶ್ನಿಸತೊಡಗಿದರು. ಆಡಳಿತ
ವರ್ಗದವರನ್ನೂ ಹಾಗೂ ಬ್ರಾಹ್ಮಣರಲ್ಲದ ಇತರ ಅಧಿಕಾರಸ್ಥರನ್ನೂ ಪ್ರಶ್ನಿಸಿದರು.ಇವರಲ್ಲಿ ಕೆಲವರು ಮಹಿಳೆಯರೂ
ಆಗಿದ್ದರು.ಆಂಡಾಳ್, ಅಕ್ಕಮಹಾದೇವಿ ಮತ್ತು ಮೀರಾ ಇವರಲ್ಲಿ ಕೆಲವರು.ಇವರ ಮಾತನ್ನು ಹೆಚ್ಚಿನ ಸಂಖ್ಯೆಯಲ್ಲಿ
ಜನರು ಜಾತಿ, ಮತ ಭೇದವಿಲ್ಲದೆ ಕೇಳಿದರು. ಹೀಗೆ ಇವರು ತಮ್ಮದೇ ಸಾಮಾಜಿಕ ಸಂಹಿತೆಗಳನ್ನು ನಿರ್ಮಿಸಿದರು.ಆದರೆ
ಇಂತಹ ಸಾಮಾಜಿಕ ಸಂವಹನ/ಚರ್ಚೆಗೆ ಅಗತ್ಯವಾದ ಹಾಗೂ ಧರ್ಮಕ್ಕೆ ನೀಡಿದಷ್ಟು ಪ್ರಾಮುಖ್ಯತೆಯನ್ನು ಕೊಡುತ್ತಿಲ್ಲ.
ಅಮೀರ್ ಖುಸ್ರೊ ದೆಹಲಿಯ ಸುಲ್ತಾನರಿಗೆ ಅಪರಿಚಿನೇನಲ್ಲ. ಆಸ್ಥಾನದಲ್ಲಿ ನಡೆದ ರಾಜಕೀಯದ ಕಾವ್ಯಾತ್ಮಕ
ದೃಷ್ಟಿಕೋನ ಆತನ ತುಘಲಕ್‍ನಾಮ (14ನೇ ಶತಮಾನ)ದಲ್ಲಿ ಸಾಂಪ್ರದಾಯಿಕ ಇತಿಹಾಸದ ರೂಪದಲ್ಲಿ ದಾಖಲಾಗುತ್ತದೆ.
ಆತನ ಸೂರ್ಯಕೇಂದ್ರಿತ ವಿಶ್ವದ ಖಗೋಳಶಾಸ್ತ್ರದ ಅಧ್ಯಯನವು ಆತನನ್ನು ಸಾಂಪ್ರದಾಯಿಕ ಇಸ್ಲಾಂನಿಂದ ಪ್ರತ್ಯೇಕಿಸಿತ್ತು.ಸ್ಥಾಪಿತ
ತಥ್ಯಗಳನ್ನು ಪ್ರಶ್ನಿಸಲೂ ಆತನಿಗೆ ಸಾಧ್ಯವಾಯಿತು.ಆತನ ಕಾವ್ಯ ಹಾಗೂ ಸಂಗೀತ ರಚನೆಗಳು ಆತನಿಗೆ ಗೌರವ
ಹಾಗೂ ಕೇಳುಗರನ್ನು ಒದಗಿಸಿತು.ಹೀಗಾಗಿ ಆತ ಆಸ್ಥಾನ ಕವಿಯಾಗಿದ್ದರೂ ಸಹ ಸುಲ್ತಾನರು ಮತ್ತು ಇತರರು
ಆತನ ವಿರೋಧ ಕಟ್ಟಿಕೊಳ್ಳದಿರುವುದೇ ಒಳಿತೆಂದು ಎಣಿಸಿದರು.ಆತನ ಗುರು ಹಾಗೂ ಸ್ನೇಹಿತ ನಿಜಾಮುದ್ದೀನ್
ಜೌಲಿ, ಚಿಸ್ತಿ ಗುಂಪಿನ ಓರ್ವ ಸೂಫಿ ಯಾವಾಗಲೂ ಸುಲ್ತಾನರಿಂದ ದೂರ ಉಳಿದಿದ್ದನಲ್ಲದೆ ಮತ್ತು ಈ ದೂರವನ್ನು
ಖಚಿತಪಡಿಸುತ್ತೂ ಇದ್ದನು.
ಕೆಲವು ಶತಮಾನಗಳ ನಂತರ ಮಹಾರಾಷ್ಟ್ರದಲ್ಲಿ ಏಕನಾಥರೂ ಸಹ ಧರ್ಮದ ಅಧಿಪತ್ಯ/ಹಿಡಿತವನ್ನು ಪ್ರಶ್ನಿಸಿದರು.
ಆತನ ಭಾಗವತ ಪುರಾಣ ಹಾಗೂ ರಾಮಾಯಣ ತನ್ನ ಬ್ರಾಹ್ಮಣಿಕ ಜ್ಞಾನವನ್ನು ವ್ಯಾಖ್ಯಾನಿಸುತ್ತಿದ್ದವು.ಇದಾವುದೂ
ಸಾಮಾಜಿಕ ಆಚರಣೆಗಳನ್ನು ಜಾತಿ ಪದ್ಧತಿಗಳನ್ನು ಪ್ರಶ್ನಿಸಲು ಅಡ್ಡಿಪಡಿಸಲಿಲ್ಲ.
ಇದರರ್ಥ ಹೊಸ ರೀತಿಯ ಬೋಧನೆ ಅಥವಾ ಧಾರ್ಮಿಕ ಪೂಜೆ-ಪುನಸ್ಕಾರ ಮಾಡಿದವರೆಲ್ಲರೂ ಪ್ರಭುತ್ವವನ್ನು
ಪ್ರಶ್ನಿಸಿದರೆಂದೇನಲ್ಲ. ಆದರೆ ಅವರು ಎಲ್ಲಿದ್ದರೂ ಇದನ್ನು ನಾವು ಪುನರ್‍ಸಂಘಟನೆ ಮಾಡಿಕೊಳ್ಳಬೇಕು.ಇದನ್ನು
ಮಾಡಲು ನಾವು ಹಿಂಜರಿದಿದ್ದೇವೆ. ಏಕೆಂದರೆ ಹಿಂದೆ ಯಾವ ರೀತಿ ಸಾಮಾಜಿಕ ಸಂಚಲನ (Soಛಿiಚಿಟ ಅommeಟಿಣಚಿಡಿಥಿ)
ನಡೆಯುತ್ತಿತ್ತು ಎಂಬುದು ನಮಗೆ ಅಪರಿಚಿತ. ಈ ವ್ಯಕ್ತಿಗಳು ನಂಬಿಕೆ ಹಾಗೂ ದೈವಭಕ್ತಿ ಆಧ್ಯಾತ್ಮ, ಪೂಜೆ
ಹೊರತುಪಡಿಸಿ ವ್ಯಕ್ತಪಡಿಸುವ ಬೇರಾವುದೇ ವಿಚಾರಗಳನ್ನು ನಾವು ಅಲಕ್ಷಿಸುತ್ತೇವೆ. ಏಕೆಂದರೆ ಧಾರ್ಮಿಕ
ನಂಬಿಕೆ ಜೀವನದ ಎಲ್ಲಾ ಸ್ತರದ ಅಂಶಗಳನ್ನು ಒಳಗೊಂಡಿರುತ್ತದೆ ಎಂಬುದನ್ನು ಮರೆತಿದ್ದೇವೆ. ಪ್ರಾಥಮಿಕವಾಗಿ
ಯಾರನ್ನು ಧಾರ್ಮಿಕ ಬೋಧಕರು ಎಂದು ಕರೆಯುತ್ತೇವೆಯೋ ಅವರಿಗೂ ಸಹ ಸಮಾಜ ಹಾಗೂ ಸಾಮಾಜಿಕ ಮೌಲ್ಯಗಳ ಬಗ್ಗೆ
ತಮ್ಮದೇ ಆದ ದೃಷ್ಟಿಕೋನವಿರುತ್ತದೆ. ಇಂತಹ ದೃಷ್ಟಿಕೋನಗಳು ಧಾರ್ಮಿಕ ಪಂಗಡಗಳು ವಿಚಾರಗಳನ್ನು ವಿವಿಧ
ಬಹು ವ್ಯಾಪಕ ಮುಖಗಳಿಂದ ಪಡೆಯುತ್ತಿರುವ ಸಂದರ್ಭದಲ್ಲಿ ಐತಿಹಾಸಿಕವಾಗಿ ಪ್ರಮುಖವಾಗುತ್ತವೆ.
ಆಧುನಿಕ ಕಾಲಕ್ಕೆ ಬಂದಾಗ ರಾಷ್ಟ್ರೀಯತೆಯ ಪರಿಕಲ್ಪನೆಯು ಸಮಾಜವನ್ನು ಪುನರ್‍ಸಂಘಟಿಸಲು ಪ್ರಯತ್ನಿಸಿದೆ.
ರಾಷ್ಟ್ರೀಯತೆಯು ವಸಾಹತುವಾದಕ್ಕೆ ವಿರುದ್ಧವಾಗಿದ್ದರೂ ವಸಾಹತು ಸಿದ್ಧಾಂತಗಳಿಂದ ಸಂಪೂರ್ಣ ವಿಮುಖವಾಗೇನಿಲ್ಲ.
ಹಿಂದೂ ಧರ್ಮದ ಮೇಲ್‍ಸ್ತರದ ಸಾಮಾಜಿಕ ಸುಧಾರಣಾ ಚಳವಳಿಗಳು ಉದಾಹರಣೆಗೆ ಬ್ರಹ್ಮಸಮಾಜ, ಪ್ರಾರ್ಥನ ಸಮಾಜ
ಮತ್ತು ಆರ್ಯಸಮಾಜ ಇವುಗಳೆಲ್ಲಾ ಹಿಂದೂ ಧರ್ಮದ ನವೀನ ರೀತಿ ಹಾಗೂ ಜಾತಿಯ ಪಾತ್ರದ ಬಗ್ಗೆ ತಮ್ಮದೇ ಆದ
ಅನಿಸಿಕೆಗಳನ್ನು ಹೊಂದಿದ್ದವು. ರಾಜಾರಾಂ ಮೋಹನರಾಯರ ಈ ಧಾರ್ಮಿಕ ಸುಧಾರಣೆ ಬಗ್ಗೆ ನಮಗೆ ತಿಳಿದಿದೆ.
ಆದರೆ ಇವರ ಸಮಕಾಲೀನರಾಗಿದ್ದ ತಂಜಾವೂರಿನ 2ನೇ ಸರ್ಫೋಜಿಯ ಬಗ್ಗೆ ನಮಗೆ ತಿಳಿದಿರುವುದು ಬಹಳ ಕಡಿಮೆ.ಈತ
ಓರ್ವ ಚಿಕ್ಕ ಮರಾಠ ರಾಜ.ಈತ ಸಾಂಪ್ರದಾಯಿಕ ಧಾರ್ಮಿಕ ಕಂದಾಚಾರವನ್ನು ಶಿಕ್ಷಣಕ್ಕೆ ಆದ್ಯತೆ ನೀಡುವುದರ
ಮೂಲಕ ಪ್ರಶ್ನಿಸಿದನು. ಹೊಸಜ್ಞಾನದ ಲೇಖಕರ ಅಧ್ಯಯನದಿಂದ ಜ್ಞಾನವು ತಾರ್ಕಿಕ ತಳಹದಿಯನ್ನು ಹೊಂದಿದ್ದು
ಶಿಕ್ಷಣದ ಮೂಲಕ ಕಲಿಸಲಾಗುತ್ತದೆ ಎಂಬುದು ಆತನಿಗೆ ಮನದಟ್ಟಾಯಿತು. ಈ ಉದ್ದೇಶ ಸಾಧನೆಗೆ ಆತ ಶಾಲೆಗಳನ್ನು
ತೆರೆದನು, ಹಾಗೆಯೇ ಸರಸ್ವತಿ ಮಹಲ್ ಗ್ರಂಥಾಲಯಕ್ಕೆ ಪುಸ್ತಕಗಳ ಸಂಗ್ರಹವೂ ಆಯಿತು.
ಈ ಎಲ್ಲ ಚಳುವಳಿಗೂ ಬೌದ್ಧಿಕ ಸಂಪ್ರದಾಯವನ್ನು ವಿಮರ್ಶಾತ್ಮಕವಾಗಿ ಪ್ರಶ್ನಿಸಲೆಂದೇ ಬಂದವೇನಲ್ಲ.
ಆದರೂ ಸಾಂದರ್ಭಿಕವಾಗಿ ಅವು ಮೇಲ್ಮಟ್ಟದಲ್ಲಿ ಸಂಚಲನ ಸೃಷ್ಟಿಸಿದವು.ಧರ್ಮನಿಷ್ಠೆ ಜಾತಿ ಆಧಾರಿತ ಶ್ರೇಣೀಕೃತ
ವ್ಯವಸ್ಥೆ ಇದ್ದರೂ ಧರ್ಮ ಹಾಗೂ ಜಾತಿ ನಡುವಿನ ಕೊಡುಕೊಳ್ಳವಿಕೆ ಅತಿ ಕಡಿಮೆ ಪ್ರಮಾಣದಲ್ಲಿ ಚರ್ಚೆಯಾಯಿತು.19ನೇ
ಶತಮಾನದಲ್ಲಿ ಬಾಲಗಂಗಾಧರ ತಿಲಕರು ಭಾರತದ ನಾಗರಿಕತೆಯು ಆರ್ಯರ ತಳಹದಿಯಲ್ಲಿದೆ ಎಂಬ ವಾದವನ್ನು ಸಮರ್ಥಿಸಿದರು
ಮತ್ತು ಮೇಲ್ಮಟ್ಟದ ಸಂಸ್ಕøತಿ ಅವರ ಪ್ರಕಾರ ಆರ್ಕ್‍ಟಿಕ್‍ನಿಂದ ಭಾರತದವರೆಗೂ ಆರ್ಯರೊಂದಿಗೆ ನಡೆದೇ
ಬಂದಿರಬೇಕು.ಆದರೆ ಜ್ಯೋತಿಬಾಫುಲೆ ಆರ್ಯನ್ನರ ಬರುವಿಕೆಯನ್ನು ತಳಮಟ್ಟದ ಜಾತಿಗಳ ಶೋಷಣೆಗೆ ನೀಡಿದ ಒಂದು
ತಾರ್ಕಿಕ ಸಮಜಾಯಿಷಿ ಎಂದೇ ಪರಿಗಣಿಸಿದರು.ಆತನ ಪ್ರಕಾರ ಆರ್ಯನ್ನರು ಬ್ರಾಹ್ಮಣರು ಹಾಗೂ ಅವರು ಸ್ಥಳೀಯ
ಮೂಲನಿವಾಸಿಗಳನ್ನು ಶೂದ್ರರನ್ನು ಶೋಷಿಸಿದರು.ಸ್ಥಾಪಿತ ನಿಲುವನ್ನು ತಿಲಕರು ವಿಸ್ತರಿಸಿದರು.ಫುಲೆ
ಇದನ್ನು ಪ್ರಸ್ತುತ ಸಮಾಜವನ್ನು ವಿವರಿಸುವ ಸಲುವಾಗಿ ಪ್ರಶ್ನಿಸಿದರು. ಎರಡೂ ಹೇಳಿಕೆ ವಿವರಣೆಗಳೂ ಐತಿಹಾಸಿಕವಾಗಿ
ದೋಷಪೂರ್ಣವಾಗಿವೆ. ಆದರೆ ಫುಲೆ ಇಲ್ಲಿ ಎಲ್ಲವನ್ನೂ ಒಳಗೊಂಡಂತೆ ಪ್ರಶ್ನಿಸಿದ್ದಾರೆ.
ಉಳಿದ ಕೆಲವರು ಜಾತಿ ಪದ್ಧತಿಯ ಹಾಗೂ ಬ್ರಾಹ್ಮಣಿಕ ಪದ್ಧತಿಗಳನ್ನೂ ಪ್ರಶ್ನಿಸಿದ್ದಾರೆ.ಪರಿಯಾರ್
ಅಥವಾ ಇಗಿಖ, ಓರ್ವ ವಿದ್ವಾಂಸನಲ್ಲದಿದ್ದರೂ, ತನ್ನ ಇತರ ವಿದ್ವಾಂಸ ಸಹೋದ್ಯೋಗಿಗಳಂತೆ ಸಾಕಷ್ಟು ಅಧ್ಯಯನಶೀಲನಾಗಿದ್ದನು.
ಹಿಂದೂ ಪುರಾಣದಲ್ಲಿರುವ ವೈರುಧ್ಯಗಳ ಬಗ್ಗೆ ವಿಮರ್ಶಾತ್ಮಕವಾಗಿದ್ದರು.ಈತ ಓರ್ವ ವಿಮರ್ಶಾತ್ಮಕ ವ್ಯಕ್ತಿಯಾಗಿ
ಇಂಡೋ-ಆರ್ಯನ್ ಜನಾಂಗದ ವಾದಗಳನ್ನು ತಳ್ಳಿಹಾಕಿದ್ದನು.ಈತನು ಸಾಮಾಜಿಕ ಸಮಾನತೆ ಅದರಲ್ಲೂ ವಿಶೇಷವಾಗಿ,
ಮಹಿಳಾ ಸಮಾನತೆ ಬಗ್ಗೆ ಬಲವಾದ ಸಮರ್ಥನೆಯನ್ನು ಮಾಡಿದನು.
ಈಗ ಹೆಸರಿಸಿದ ಜನರೆಲ್ಲರೂ ಆಧುನಿಕ ಅರ್ಥದಲ್ಲಿ ಸಾರ್ವಜನಿಕ ಬುದ್ಧಿಜೀವಿಗಳಲ್ಲ. ಅವರೆಲ್ಲ
ಒಂದು ಸುಧಾರಿತ ಸಮಾಜ ಸ್ಥಾಪಿಸುವ ಸಲುವಾಗಿ ಆಗ ಇದ್ದಂತಹ ವಾಸ್ತವವನ್ನು ಪ್ರಶ್ನಿಸಿದವರು ಅವರು ಬೇರೆ
ಬೇರೆ ವೃತ್ತಿಗಳಲ್ಲಿ ಹೆಸರುಗಳಿಸಿದ್ದರಿಂದ ಅವರ ಮಾತುಗಳಿಗೂ ಬೆಲೆಯಿರುತ್ತಿತ್ತು.ಅವರ ಪ್ರಶ್ನೆಗಳೂ
ಒಂದೇ ತೆರನಾಗಿರುತ್ತಿದ್ದವು ಎಂಬುದು ಮುಖ್ಯವಲ್ಲ. ಆ ಕ್ಷಣದ ಸಮಸ್ಯೆಗಳಿಗೆ ತಕ್ಕಂತೆ ಪ್ರಶ್ನೆಗಳ
ಸ್ವಭಾವವನ್ನು ತರ್ಕಿಸುತ್ತಿದ್ದ ವಿಧಾನಗಳು ಮುಖ್ಯ. ಈ ರೀತಿಯ ಪ್ರಶ್ನೆಗಳು ಯಾದೃಚ್ಛಿಕವಾಗಿರಲಿಲ್ಲ.
ಅವುಗಳು ತಾರ್ಕಿಕ ಅಧ್ಯಯನವನ್ನು ಆಧರಿಸಿಯೇ ಇರಬೇಕಿತ್ತು ಮತ್ತು ಪ್ರಶ್ನಿಸುವ ವ್ಯಕ್ತಿಗಳು ಅಂದೂ
ಮತ್ತು ಇಂದು ಮಹತ್ವಪೂರ್ಣ ಐತಿಹಾಸಿಕ ಬದಲಾವಣೆಗಳ ಕುರಿತು ಚರ್ಚಿಸುತ್ತಾರೆ.
ಐತಿಹಾಸಿಕ ಬದಲಾವಣೆಯ ಕ್ಷಣಗಳು ಸಮಾಜವನ್ನು ವ್ಯವಸ್ಥೀಕರಣಗೊಳಿಸುವ ಹೊಸ ವಿಧಾನಗಳೊಂದಿಗೆ ಅಂತರ್ಗತವಾಗುತ್ತದೆ.
ಇದು ಭಾರತದ ಇತಿಹಾಸದಲ್ಲಿ ಆಗಾಗ್ಗೆ ಘಟಿಸುತ್ತಲೇ ಇದೆ. ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳು
ಹೇಗೆ ಸಮಾಜಕ್ಕೆ ಹೊಸ ರೂಪವನ್ನು ಕೊಡುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಈಗ ನಮಗೆ ಹೆಚ್ಚು ಅರ್ಥಪೂರ್ಣ
ಮಾರ್ಗಗಳಿವೆ. ಈ ಕೊಂಡಿ/ಸಂಪರ್ಕಗಳು (ಅoಟಿಟಿeಛಿಣioಟಿs) ಹೆಚ್ಚಿನ ಅನ್ವೇಷಣೆಯನ್ನು ಬೇಡುತ್ತವೆ.
ಈ ಕಾರ್ಯಕ್ಕೆ ಸಾರ್ವತ್ರಿಕ ಬುದ್ಧಿಜೀವಿಗಳು ತಮ್ಮ ಜ್ಞಾನವನ್ನು ಒರೆಗೆ ಹಚ್ಚಬೇಕಾಗುತ್ತದೆ.ಜತೆಗೆ
ವಿಮರ್ಶಾತ್ಮಕ ಆಲೋಚನೆಯ ಸ್ಪಷ್ಟ ಪರಂಪರೆಯನ್ನು ನಮ್ಮ ಬೌದ್ಧಿಕ ಪರಂಪರೆಯೊಳಗೆ ತರಬೇಕು. ಈ ಕ್ರಮವನ್ನು
ಈಗ ವ್ಯವಸ್ಥಿತವಾಗಿ ತುಕ್ಕುಹಿಡಿಸಲಾಗುತ್ತದೆ.
ಪ್ರಧಾನವಿಚಾರಧಾರೆಯ ವಸಾಹತುಶಾಹಿ ವಿರೋಧಿ ಭಾರತೀಯ ರಾಷ್ಟ್ರೀಯವಾದ ಹಾಗೂ ಉದಾರವಾದಿ ಪ್ರಜಾಪ್ರಭುತ್ವದ
ಉದಯ ಹಾಗೂ ಜಾತ್ಯತೀತವಾಗಲು ಇರುವ ತುಡಿತ ಇವೆಲ್ಲವೂ ಸಾರ್ವಜನಿಕ ಬೌದ್ಧಿಕವಾದವು.ಸಾರ್ವಜನಿಕವಾಗಿ
ಗೋಚರವಾಗಲು ಸಹಕರಿಸಿದೆ.ಸ್ವಾತಂತ್ರ್ಯಾನಂತರ ಸಾಕಷ್ಟು ಜನ ಈ ಪಾತ್ರವನ್ನು ತಾವಾಗಿಯೇ ನಿರ್ವಹಿಸಿದರು.ವಿಶಾಲ
ಹರಹಿನ ಚರ್ಚೆಗಳಿಗೆ ಅವರು ಕಾರಣರಾದರು.ನಂತರ ನಡೆದ ಘಟನೆಗಳಾದ ತುರ್ತುಪರಿಸ್ಥಿತಿ, ಧಾರ್ಮಿಕ ಪಂಗಡಗಳ
ನರಮೇಧ, ಸಾರ್ವಜನಿಕ ಬುದ್ಧಿಜೀವಿಗಳ ಅಗತ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಅರಿವಿಗೆ ತಂದವು.ಇಲ್ಲವಾದರೆ
ಇಂತಹ ದುರ್ಘಟನೆಗಳ ಪುನರಾವರ್ತನೆ ತಡೆಯಲು ಸಾಧ್ಯವಿಲ್ಲ ಎಂಬುದು ತಿಳಿಯಿತು.ನಿಖಿಲ್ ಚಕ್ರವರ್ತಿ,
ರೊಮೇಶ್ ಥಾಪರ್‍ನಂತಹವರು ಸೆನ್ಸಾರ್‍ಶಿಪ್‍ನ್ನು ವಿರೋಧಿಸಿದರು ಮತ್ತು ಇತರರ ದನಿಗಳನ್ನು ಅಡಗಿಸುವಿಕೆಯನ್ನು
ವಿರೋಧಿಸಿದರು ಎಂಬುದನ್ನು ನಾವು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು.
ಇಂದು ನಾವು ವೈವಿಧ್ಯಮಯ ವೃತ್ತಿಗಳಲ್ಲಿ ತಜ್ಞರನ್ನೂ ಪರಿಣಿತರನ್ನೂ ಕಾಣುತ್ತೇವೆ. ಆದರೆ ಇವರ್ಯಾರೂ
ತನ್ನ ಕ್ಷೇತ್ರವನ್ನು ಹೊರತುಪಡಿಸಿದ ಬೇರೆಯ ಪ್ರಪಂಚಕ್ಕೆ ಅಪರಿಚಿತರಾಗಿದ್ದಾರೆ.ಆದರೆ ಕೆಲವೊಮ್ಮೆ
ಅವರು ಸಾರ್ವಜನಿಕ ಬುದ್ಧಿಜೀವಿಗಳ ಪಾತ್ರವನ್ನು ತುಂಬುತ್ತಾರೆ ಎನ್ನಲಾಗುತ್ತಿದೆ.ಆದರೆ ಇವೆರಡೂ ಏಕರೂಪದ್ದಲ್ಲ.
ಇಂದು ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ವಾಂಸರು ಇದ್ದಾರೆ.ಆದರೆ ಇದರಲ್ಲಿ ಬಹಳಷ್ಟು
ಜನರಿಗೆ ಪ್ರಭುತ್ವವನ್ನು ಅದು ಮುಕ್ತ ಆಲೋಚನೆಯನ್ನು ಹಿಡಿತದಲ್ಲಿಟ್ಟರೂ ಅದರ ವಿರೋಧಿಸುವ ಗೋಜಿಗೆ
ಹೋಗದೆ ಇರಲು ಇಚ್ಛಿಸುತ್ತಾರೆ ಎಂದೆನಿಸುತ್ತಿದೆ.ಇದು ಜ್ಞಾನವನ್ನು ಯಾವುದೇ ಅಡಚಣೆಯಿಲ್ಲದೆ ಗಳಿಸುವುದಕ್ಕಾಗಿಯೋ
ಅಥವಾ ಪ್ರಭುತ್ವ ಇಚ್ಛಿಸಿದರೆ ಜ್ಞಾನವನ್ನೂ ತ್ಯಜಿಸಲೂ ಸಿದ್ಧರಿದ್ದಾರೆ ಎಂದೋ?
ಸಾರ್ವಜನಿಕ ಬುದ್ಧಿಜೀವಿಯನ್ನು ವ್ಯಾಖ್ಯಾನಿಸಲು ಬಹಳ ಬರೆದಿದ್ದಾಗಿದೆ.ಅಂತಹ ವ್ಯಕ್ತಿ ಅಧಿಕಾರದಲ್ಲಿ
ಇರುವವರು ಯಾರೇ ಆಗಿದ್ದರೂ ಸ್ವತಂತ್ರವಾಗಿ ತನ್ನ ಸ್ಥಾನವನ್ನು ನಿರ್ವಹಿಸಬೇಕು.ಯಾಕೆಂದರೆ ಅವನು ಚರ್ಚಿಸದ
ಆಲೋಚನೆಗಳನ್ನು ಯಾರೇ ತಂದರೂ ಪ್ರಶ್ನಿಸುವ ಛಾತಿ ಬೆಳೆಸಿಕೊಳ್ಳಬೇಕು.ತಾರ್ಕಿಕ ವಿಮರ್ಶೆಗಳು ಸಾಮಾನ್ಯವಾಗಿ
ಆರಂಭಿಕ ಬಿಂದುಗಳಾಗಿವೆ. ಸಾರ್ವಜನಿಕ ಬುದ್ಧಿಜೀವಿಯೂ ಸಾಧ್ಯವಾದಷ್ಟೂ ಸ್ವಾಯತ್ತವ್ಯಕ್ತಿಯಾಗಿರಬೇಕು.
ಬೇರೆಯವರಿಗೆ ಈತ ಸ್ವಾಯತ್ತ ವ್ಯಕ್ತಿಯಂತೆ ಗೋಚರಿಸಲೂಬೇಕು.
ಒಬ್ಬ ವೃತ್ತಿಪರ ವ್ಯಕ್ತಿ ಸ್ವಾಯತ್ತ ವ್ಯಕ್ತಿಯಾಗುವುದು ಸುಲಭ. ಇಂದಿನ ಸಾರ್ವಜನಿಕ ಬುದ್ಧಿಜೀವಿ
ತನ್ನ ಅಂತಸ್ತಿನ ಜತೆ ಒಬ್ಬ ಪೌರನ ಹಕ್ಕು ಮತ್ತು ಸಾಮಾಜಿಕ ನ್ಯಾಯದ ಸಮಸ್ಯೆಗಳ ಬಗ್ಗೆ ಆಸಕ್ತಿ ಮತ್ತು
ಸಮಯ ಇವೆ. ಇದಲ್ಲದೆ ಈ ರೀತಿಯ ವಿಚಾರಗಳನ್ನು ಸಾರ್ವಜನಿಕ (ಕಾಳಜಿ)ನೀತಿಯಾಗಿ ದನಿ ಎತ್ತಬಲ್ಲ ಚಾಕಚಕ್ಯತೆಯೂ
ಇವರಲ್ಲಿದೆ.
ವಿಮರ್ಶೆಯ ಸಮರ್ಥನೆ ಏನೆಂದರೆ ಸಮಾಜಕ್ಕಾಗಿ ದನಿ ಎತ್ತುವುದೇ ಆಗಿದೆ, ಜೊತೆಗೆ ನೈತಿಕ ಸ್ವಾಯತ್ತತೆಯನ್ನೂ
ಗಳಿಸುವುದೇ ಆಗಿದೆ.ವ್ಯಾಪಕ ವೃತ್ತಿಪರ ಗೌರವ ಹಾಗೂ ಸಮಾಜಕ್ಕಾಗಿ ಇರುವ ಕಾಳಜಿ ಇವೆರಡೂ ಓರ್ವ ವ್ಯಕ್ತಿಯ
ನೈತಿಕ ಪ್ರಭುತ್ವವನ್ನು ಸ್ಥಾಪಿಸಬಲ್ಲವು ಮತ್ತು ಸಾರ್ವಜನಿಕರಿಂದ ಬೆಂಬಲೂ ದೊರಕಬಲ್ಲದು.ಇದು ಒಂದು
ಇತರರಿಂದ ನೀಡಲ್ಪಟ್ಟ ಅರ್ಹತೆಯೇ ಹೊರತು ನಿಜವಾದದ್ದಲ್ಲ. ಗತಕಾಲದಲ್ಲಿ ಯಾರು ತಮ್ಮನ್ನು ಸಮಾಜದಿಂದ
ದೂರವಿರಿಸಿಕೊಂಡಿದ್ದರೋ ಅವರು ತಾವು ಸೂಚಿಸಿದ ಬದಲಾವಣೆಗಳಲ್ಲಿ ಯಾವುದೇ ಮರೆಮಾಚಿದ ಉದ್ದೇಶಗಳನ್ನು
ಹೊಂದಿಲ್ಲವೆಂದು ನಂಬಲಾಗುತ್ತಿತ್ತು.ಆದರೆ ಇದು ಎಲ್ಲಾ ಸಮಯದಲ್ಲೂ ನಿಜವಲ್ಲ. ಈಗಿನ ಕಾಲದಲ್ಲಿ ಯಾವುದಾದರೊಂದು
ಪಕ್ಷದೊಂದಿಗೆ ಗುರ್ತಿಸಿಕೊಳ್ಳುವುದರಿಂದ ಆ ವ್ಯಕ್ತಿಯು ಸ್ವತಂತ್ರವಾಗಿ ಆಲೋಚಿಸುವುದನ್ನು ತಡೆಗಟ್ಟಬಲ್ಲದು.ಇದು
ಆ ಪಕ್ಷದಿಂದ ಆತನಿಗೆ ಬೆಂಬಲ ಸಿಗುವ ಸಂದರ್ಭದಲ್ಲೂ ಆಗಬಹುದು.
ಓರ್ವ ವಿದ್ವಾಂಸ/ವೃತ್ತಿಪರನಿಂದ ಮನಸ್ಸಿನ ಮನೋಧೋರಣೆಯ ವಿಷಯ ಬಂದಾಗ ಸ್ವಾಯತ್ತತೆ ಬಹಳ ಮುಖ್ಯವಾದ
ಅರ್ಹತೆಯೆನಿಸುತ್ತದೆ.ಇಂತಹ ವ್ಯಕ್ತಿಗಳು ಆಲೋಚನೆಯ ವಿವಿಧ ಬೇರೆ ಪರ್ಯಾಯ ವಿಧಾನಗಳನ್ನೂ ಸೂಚಿಸಬಲ್ಲರು.ದೊಡ್ಡ
ಸಮಾಜದ ಸಮಸ್ಯೆಗಳ ಬಗ್ಗೆಯೂ ಪರ್ಯಾಯಮಾರ್ಗ ಸೂಚಿಸಬಲ್ಲರು. (ಬೇರೆಯವರೂ ಈ ಕಾರ್ಯ ಮಾಡಬಲ್ಲರು) ಈ ರೀತಿಯ
ಆಲೋಚನೆಯು ವಿಮರ್ಶಾತ್ಮಕ ಹಾಗೂ ತಾರ್ಕಿಕ ವಿಶ್ಲೇಷಣೆಯ ಫಲವಾಗಿರುತ್ತದೆ.ಆದರೂ ಇಂದಿನ ವಿದ್ವಾಂಸರು
ಯಾವುದನ್ನು ವಿಶಾಲಾರ್ಥದಲ್ಲಿ ಪರ್ಯಾಯ ಮಾರ್ಗವೆಂದು ಕರೆಯಬಹುದೋ, ಅವು ತಾರ್ಕಿಕ ಅರ್ಥವಿವರಣೆ ಅಲ್ಲದಿದ್ದರೂ,
ಎಷ್ಟೇ ಸೂಕ್ಷ್ಮವಾಗಿ ಅಭಿವ್ಯಕ್ತಿಸಿಕೊಳ್ಳಲು ಸಮರ್ಥಿಸಿಕೊಳ್ಳಲೂ ಸಹ ಹಿಂಜರಿಯುತ್ತಿದ್ದಾರೆ.ಕೃತಿಗಳನ್ನು
ಕೊಳ್ಳಲು ಇರುವ ಹಕ್ಕನ್ನು ನಿಷೇಧಿಸುವ, ಮುಟುಗೋಲು ಹಾಕಿಕೊಳ್ಳುವ ಅಥವಾ ಶೈಕ್ಷಣಿಕ ಪಠ್ಯಕ್ರಮದಿಂದ
ಹಿಂಪಡೆಯುವ ಮತ್ತು ಇದೆಲ್ಲಾ ಧಾರ್ಮಿಕ ಹಾಗೂ ರಾಜಕೀಯ ಶಕ್ತಿ ಬಣಗಳಿಂದ ನಡೆಯುವ ಹಾಗೂ ನೇರವಾಗಿ ಪ್ರಭುತ್ವವೇ
ಇದನ್ನೆಲ್ಲಾ ಅನುಮೋದಿಸುವಾಗ ಈ ವಿಷಯ ನಿಚ್ಚಳವಾಗಿ ಗೋಚರಿಸುತ್ತದೆ.ಸ್ಥಾಪಿತ ಪ್ರಕಾಶಕರೂ ಸಹ ತಮ್ಮ
ಮೂಳೆಗೆ ಪಾಶ್ರ್ವವಾಯು ಬಡಿದಂತಾಗಿದ್ದಾರೆ. ಇಂತಹ ಕ್ರಮಗಳ ವಿರುದ್ಧ ವೃತ್ತಿಪರರಾಗಲಿ/ವಿದ್ವಾಂಸರಾಗಲಿ
ಯಾಕೆ ಸಣ್ಣ ಪ್ರತಿಭಟನೆಯ ಸೊಲ್ಲನ್ನು ಎತ್ತುವುದಿಲ್ಲ? ಇದಕ್ಕೆ ಸಿದ್ಧ ಉತ್ತರವೆಂದರೆ ಇದರ ಹಿಂದಿರುವ
ಪ್ರಭಾವಶಾಲಿ ರಾಜಕೀಯ ಪಕ್ಷಗಳ ಬೆಂಬಲ ಪಡೆದಂತಹ ಕಿಡಿಗೇಡಿಗಳ ಭಯವೇ ಆಗಿದೆ. ಹಾಗಾದರೆ ಈ ಎಲ್ಲದಕ್ಕೂ
ಇದೊಂದೇ ಉತ್ತರವೇ?
ಕಳೆದೆರಡು ದಶಕಗಳಲ್ಲಿ ಉಂಟಾಗಿರುವ ಉದಾರವಾದಿ ಅವಕಾಶ ಕಿರಿದಾಗುತ್ತಿರುವ ಬಗ್ಗೆ ಬಹಳಷ್ಟು
ಜನ ಚರ್ಚಿಸುತ್ತಿದ್ದಾರೆ.ಇದನ್ನು ಪ್ರತಿರೋಧಿಸಲಾಗಿತ್ತು.ಆದರೆ ಇದು ಮತ್ತೆ ನಮ್ಮ ಮೇಲೆಯೇ ಇದೆ. ಯಾರು
ರೂಢಿಗತ ಪ್ರಭುತ್ವವನ್ನು ಪ್ರತಿನಿಧಿಸುತ್ತಾರೋ ಅವರನ್ನು ಪ್ರಶ್ನಿಸಲು ಮತ್ತು ಜವಾಬ್ದಾರಿಯುತವಾದ
ಕ್ರಮವನ್ನು ಒತ್ತಾಯಿಸಲು ಪ್ರಯತ್ನ ಪುನ:ಪುನ: ಮರುಕಳಿಸುತ್ತಿರಬೇಕು. ಅದರಲ್ಲೂ ವಿಶೇಷವಾಗಿ ನ್ಯಾಯದ
ನಿರಾಕರಣೆ ನಡೆಯುತ್ತಿರುವ ಸಂದರ್ಭದಲ್ಲಿ ಇದು ತುಂಬಾ ಮುಖ್ಯವಾಗುತ್ತದೆ.ಸಾಮಾಜಿಕ ಮಾಧ್ಯಮಗಳನ್ನು
ಮುಕ್ತ ವಲಯ/ಸ್ಥಳವೆಂದು ನಂಬಲಾಗಿದೆ ಹಾಗೂ ಅದು ಕೆಲಮಟ್ಟಿಗೆ ನಿಜವೂ ಹೌದು.ಆದರೆ ಅಲ್ಲಿಯೂ ಸಹ ಪ್ರಸಕ್ತ
ರಾಜಕೀಯ/ಧಾರ್ಮಿಕ ವಿಚಾರಗಳ ಬಗ್ಗೆ ವಿಮರ್ಶಾತ್ಮಕ ಟೀಕೆಟಿಪ್ಪಣಿಗಳನ್ನು ತಮ್ಮ ವಿರುದ್ಧ ಕೈಗೊಳ್ಳಬಹುದಾದ
ಕಾನೂನು ಕ್ರಮದ ಭಯದಿಂದ ಜನ ಅಭಿವ್ಯಕ್ತಿಗೊಳಿಸಲು ಹಿಂಜರಿಯುತ್ತಿದ್ದಾರೆ. ವಿಶೇಷವಾಗಿ ಧಾರ್ಮಿಕ ಗುರ್ತಿಸಿಕೊಳ್ಳುವಿಕೆ
ಹಾಗೂ ಅದರ ರಾಜಕೀಯದ ವಿಚಾರದಲ್ಲಿ ದ್ವೇಷದ ಪ್ರಚಾರ ಹೆಚ್ಚು ಪ್ರಸ್ತುತವಾಗಿದೆ.ಅದರಲ್ಲೂ ನಿರ್ದಿಷ್ಟ
ಮತಗಳ ವಿರುದ್ಧ ವಿಕೃತ ಭ್ರಮಾಲೋಕದಲ್ಲಿ ವಿಹರಿಸುವ ದ್ವೇಷದ ಪ್ರಚಾರಗಳನ್ನು ನಾವು ಪ್ರಶ್ನಿಸುತ್ತಿಲ್ಲ.
ಈ ರೀತಿ ಪ್ರಶ್ನಿಸುವುದೆಂದರೆ ಧಾರ್ಮಿಕವೆಂದು ಹೇಳಿಕೊಂಡು ಧಾರ್ಮಿಕವಲ್ಲದ ಕಾರ್ಯಗಳಿಗೆ ತಮ್ಮ
ಅಧಿಕಾರವನ್ನು ಬಳಸುವ ವಿವಿಧ ಸಂಘ-ಸಂಸ್ಥೆಗಳ ಬಗ್ಗೆ ವಿಮರ್ಶಾತ್ಮಕ ಮನೋಭಾವ ಹೊಂದಿರುವುದೇ ಆಗಿದೆ.ತಮ್ಮ
ಕಾರ್ಯಗಳನ್ನು ಸಮರ್ಥಿಸಿಕೊಳ್ಳುವುದಕ್ಕಾಗಿ ಇವರು ಧರ್ಮದ ಕೆಲವು ನಿಯಮಗಳನ್ನು ಮುನ್ನೆಲೆಗೆ ತರುತ್ತಾರೆ.ಅದರಲ್ಲಿ
ಕೆಲವು ಇತ್ತೀಚಿಗೆ ಆವಿಷ್ಕರಿಸಿದಂತಹವೂ ಇರುತ್ತವೆ. ಇಂತಹ ಕಾರ್ಯಗಳಿಂದ ಕೊಲೆ, ಅತ್ಯಾಚಾರ ಹಾಗೂ ಪ್ರಕ್ಷುಬ್ಧ
ಪರಿಸ್ಥಿತಿ ಉಂಟಾಗುತ್ತದೆ.ಇಂತಹ ಸಂಸ್ಥೆಗಳಿಗೆ ಸಂಬಂಧ ಪಡದವರು ಹೇಳುವಂತೆ ಧರ್ಮದ ಮೌಲ್ಯಗಳಾವುವೂ
ಹಿಂಸೆಯನ್ನು ಪ್ರಚೋದಿಸುವುದಿಲ್ಲ ಎನ್ನುವರು.ಆದರೆ ಸಮಸ್ಯೆ ಇದಲ್ಲ. ನಿಜ, ಎಲ್ಲ ಧರ್ಮಗಳೂ ಒಳ್ಳೆಯ
ಮೌಲ್ಯಗಳನ್ನೇ ಎತ್ತಿಹಿಡಿಯುತ್ತದೆ.ಆದರೆ ಪ್ರಶ್ನಿಸಬೇಕಾಗಿರುವುದು ಧಾರ್ಮಿಕ ಮೌಲ್ಯಗಳನ್ನಲ್ಲ ಆದರೆ
ಯಾವ ಸಂಸ್ಥೆಗಳು ಧರ್ಮದ ಆಧಾರಾದಲ್ಲಿ ಸಕ್ರಿಯವಾಗಿವೆಯೋ ಅವುಗಳ ನಂಬಿಕೆ ಮತ್ತು ಅವುಗಳ ಕೃತ್ಯಗಳನ್ನು
ಏಕೆಂದರೆ ಅವು ಧರ್ಮದ ಮೌಲ್ಯಗಳಿಗನುಗುಣವಾಗಿ ಇಲ್ಲದಾಗಿರುವುದು ನಿಶ್ಚಯವಾಗಿ ಗೋಚರಿಸುತ್ತಿದೆ.
ಹಿಂದೂ, ಇಸ್ಲಾಂ ಹಾಗೂ ಸಿಖ್ ಧರ್ಮದೊಂದಿಗೆ ಗುರ್ತಿಸಿಕೊಂಡು ಹಿಂಸೆ ಮತ್ತು ಭಯವನ್ನು ಹರಡಲು
ಸ್ವಲ್ಪವೂ ಹಿಂಜರಿಯದ ಹಲವು ಸಂಘಟನೆಗಳನ್ನು ನಾವು ನೋಡಿದ್ದೇವೆ. ಧರ್ಮದ ಹೆಸರಿನಲ್ಲಿ ಕಾನೂನನ್ನು
ಉಲ್ಲಂಘಿಸುವವರನ್ನು ಕಾನೂನಿನ ಅನ್ವಯವೇ ಶಿಕ್ಷಿಸಲು ಸಾಧ್ಯವಿಲ್ಲವೇ?ಇಂತಹ ಕೃತ್ಯಗಳನ್ನು ಹತ್ತಿಕ್ಕಿದರಷ್ಟೇ
ಸಾಲದು.ಇಂತಹ ಕೃತ್ಯಗಳು ಧರ್ಮದ ಹೆಸರಿನಲ್ಲಿ ಜನ್ಮ ತಾಳುವುದೇಕೆ?ಇವುಗಳನ್ನು ಕೊನೆಗಾಣಿಸುವುದಾದರೂ
ಹೇಗೆ ಎಂಬುದನ್ನು ಯೋಚಿಸಬೇಕಾಗಿದೆ.ಧರ್ಮಗಳನ್ನು ನಂಬುವವರು ಇಂತಹ ಕೃತ್ಯಗಳನ್ನು ಸಮರ್ಥಿಸುವರೇ?ಇಲ್ಲವಾಧರೆ
ಅವರು ಇಂತಹ ಹಿಂಸೆ/ಭಯಾನಕ ಕೃತ್ಯ ನಡೆಸುವ ಕಿಡಿಗೇಡಿಗಳಿಂದ ತಮ್ಮನ್ನು ದೂರವಿರಿಸಿ/ಸಂಪರ್ಕ ಕಡಿದುಕೊಂಡು
ತಮ್ಮ ಧರ್ಮದ ಮೌಲ್ಯ ರಕ್ಷಿಸುವ ಕಾರ್ಯ ಮಾಡಬಾರದೆ?
ಸಾರ್ವಜನಿಕ ಬುದ್ಧಿಜೀವಿಯ ಅವನತಿಗೆ ಸಾಕಷ್ಟು ಕಾರಣಗಳಿವೆ. ಕೆಲವನ್ನು ಮಾತ್ರ ಇಲ್ಲಿ ಹೆಸರಿಸಲು
ಸಾಧ್ಯವಿದೆ.ನಿಚ್ಚಳವಾಗಿ ಕಾಣುವ ಆದರೆ ಅತಿ ಕಡಿಮೆ ಒಪ್ಪಿಕೊಳ್ಳುವ ಕಾರಣ ಎಂದರೆ ನವ ಉದಾರವಾದಿ ಸಂಸ್ಕøತಿ
ಸೃಷ್ಟಿಸಿರುವ ಅಭದ್ರತೆಗಳೇ ಆಗಿದೆ.ಇವು ಆರ್ಥಿಕ ಪ್ರಗತಿಯ ಜಿಗಿತದಿಂದಾಗಬೇಕಾಗಿದ್ದು ಆದರೆ ಈ ಜಿಗಿತ
ದಾರಿತಪ್ಪಿದೆ.ಉದ್ಯೋಗಗಳು ತುಂಬಾ ಸ್ಪರ್ಧಾತ್ಮಕವಾಗಿದೆ ಮತ್ತು ಇದು ಈಗಾಗಲೇ ಇರುವ ಸಂಘರ್ಷಗಳನ್ನು
ಉತ್ತೇಜಿಸಿ, ಮಾನವ ಸಂಬಂಧಗಳ ಮೇಲಿನ ಅವಲಂಬನೆಯನ್ನು ಕುಂಠಿತಗೊಳಿಸುತ್ತಿದೆ.ಸಂಪತ್ತಿನ ಹಂಚಿಕೆಯಲ್ಲಿ
ಆಗಿರುವ ನೀಚ ಅಸಮರ್ಪಕತೆಯೂ ಸಂಘರ್ಷವನ್ನು ಹೆಚ್ಚಿಸುತ್ತಿದೆ.ಮೌಲ್ಯಗಳು ಕೇವಲ ಆಕರ್ಷಕ ತೋರಿಕೆಯ ವಸ್ತುಗಳಾಗಿ
ಬದಲಾಗಿವೆ. ಭ್ರಷ್ಟಾಚಾರವನ್ನು ಒಪ್ಪಿಕೊಂಡಿರುವುದು ಸಾಮಾನ್ಯ ಸಂಗತಿಯಾಗಿದೆ.ಶ್ರೀಮಂತರಲ್ಲಿ ಪೂಜೆಗೊಳಕ್ಕಾಗುತ್ತಿರುವ
ಹೊಸ ದೈವ ಹಣವೇ ಆಗಿದೆ.ಇತರರೆಲ್ಲರೂ ಉತ್ಸುಕತೆಯಿಂದ ಬೀಳುವ ಹನಿಗಾಗಿ ಕಾಯುತ್ತಿದ್ದಾರೆ.ಸಮಾನತೆಯನ್ನು
ಬೇಡಲು ಇರುವ ಹಕ್ಕಿರುವ ಬಗ್ಗೆ ಉತ್ಸುಕತೆಯಿದೆ.ಆದರೆ ಅದನ್ನೂ ನಿರಾಕರಿಸಲು ಜಾತಿ ಹಾಗೂ ಹಣವು ಹೊಸ
ರೂಪ ತಳೆದು ನಿಂತಿವೆ.
ನವ-ಉದಾರವಾದಿ ಸಂಸ್ಕøತಿಯನ್ನು ಮತ್ತು ಅರ್ಥವ್ಯವಸ್ಥೆಯನ್ನು ಸುಲಭವಾಗಿ ಬದಲಾಯಿಸಲು ಸಾಧ್ಯವಿಲ್ಲ.
ಆದರೆ ಅದರ ಕೆಟ್ಟ ಪರಿಣಾಮಗಳನ್ನು ಕಡಿಮೆಮಾಡಬಹುದು.ಇದು ಯಾವಾಗ ಸಾಧ್ಯವೆಂದರೆ ಸಮಾಜವು ತನ್ನ ಪೌರರ
ಹಕ್ಕುಗಳು ಮತ್ತು ಸಂಪನ್ಮೂಲಗಳನ್ನು ಆಧರಿಸಿದೆ ಹಾಗೂ ಇದರ ಬಳಕೆ ಜನರ ಕಲ್ಯಾಣಕ್ಕೆ ಹಾಗೂ ಸಾಮಾಜಿಕ
ನ್ಯಾಯಕ್ಕೆ ವಿನಿಯೋಗವಾಗಬೇಕು ಎಂಬುದರ ಅರಿವು ಇದ್ದಾಗ ಮಾತ್ರವಾಗಿದೆ.ಇದು ಸ್ವಾತಂತ್ರ ಸಿಕ್ಕಾಗ ಭಾರತ
ಒಂದು ನವರಾಷ್ಟ್ರವಾದಾಗ ಇದ್ದ ಸಮಸ್ಯೆಯಾಗಿತ್ತು.1960-70ರ ದಶಕಗಳಲ್ಲಿ ಸಮಾನ ಹಕ್ಕುಳ್ಳ (ಕೇವಲ ಸಿದ್ಧಾಂತದಲ್ಲಲ್ಲ-ವಾಸ್ತವವಾಗಿ)
ಪೌರರ ಸಮಾಜ ನಿರ್ಮಾಣ ಹೇಗೆ ಎಂಬ ಚರ್ಚೆ ನಡೆಯುತ್ತಿದ್ದುದನ್ನು ನಾನು ನೆನಪಿಸಿಕೊಳ್ಳಬಲ್ಲೆ.ಇಂತಹ
ಚರ್ಚೆಗಳು ಮುಂದುವರಿಯಬೇಕಾದರೆ, ಒಂದು ಎಚ್ಚೆತ್ತ ಸಮಾಜದ ಲಕ್ಷಣವಾಗಬೇಕಾದರೆ, ಪ್ರಶ್ನೆಗಳು ಕೇಳಬೇಕಾದರೆ,
ನಾವು ಸಾರ್ವಜನಿಕ ಬುದ್ಧಿಜೀವಿಗಳ ಕಡೆ ನೋಡಬೇಕು.ಅವರನ್ನು ಮುಂದೆ ತರಬೇಕು.ಇದಲ್ಲದೆ ಇಂತಹ ಪ್ರಶ್ನೆಗಳನ್ನು
ಕೇಳುವುದು ಸಮಂಜಸ ಎಂದು ಭಾವಿಸುವ ಸಾರ್ವಜನಿಕರ ಅಗತ್ಯವೂ ಇದೆ.
ಏನನ್ನು ಚರ್ಚಿಸಬೇಕು ಮತ್ತು ಏಕೆ ಚರ್ಚಿಸಬೇಕು ಎಂಬ ಅರಿವುಳ್ಳ ಸಾರ್ವಜನಿಕರನ್ನು ಹೇಗೆ ಸೃಷ್ಟಿಸಬಹುದು?ತೀವ್ರ
ತರ್ಕಬದ್ಧ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುವ ಸಾರ್ವಜನಿಕರನ್ನು ಸೃಷ್ಟಿಸಬೇಕು. ಪ್ರತಿಕ್ರಿಯೆಯು ಸೂಚಿಸಿದ
ಅಭಿಪ್ರಾಯಗಳನ್ನು ಅನುಮೋದಿಸುವಂತೆಯೇ ಇರಬೇಕು ಎಂದೇನಿಲ್ಲ, ಕನಿಷ್ಠ ಪಕ್ಷ ಪರ್ಯಾಯ ಚಿಂತನೆಗಳನ್ನು
ಚರ್ಚೆ ಹಾಗೂ ಪರಿಹಾರವಾಗಿ ಸೂಚಿಸಬಹುದು.ಹೀಗಾದಲ್ಲಿ ಒಂದು ಸುರಕ್ಷಿತ ಸಾರ್ವಜನಿಕ ಗುಂಪು ಪ್ರಾರಂಭವಾಗುತ್ತದೆ
ಮತ್ತು ಈ ಗುಂಪು ಸಾರ್ವಜನಿಕ ಬುದ್ಧಿಜೀವಿಯ ಪಾತ್ರವನ್ನು ಮೆಚ್ಚುತ್ತದೆಯಷ್ಟೇ ಅಲ್ಲದೆ ಅವರ ಅವಶ್ಯಕತೆಯನ್ನೂ
ಶ್ಲಾಘಿಸುತ್ತದೆ.
ಓರ್ವ ಸುಶಿಕ್ಷಿತ ಸಾರ್ವಜನಿಕನಾಗಲು ನಮ್ಮನ್ನು ನಾವು ಹೇಗೆ ಶಿಕ್ಷಕರನ್ನಾಗಿಸಿಕೊಳ್ಳಬೇಕು?ಈ
ಪ್ರಶ್ನೆಯು ಬೇರೆ ಬೇರೆ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೃತ್ತಿಪರರು ಹಾಗೂ ಸಾರ್ವಜನಿಕ
ಬುದ್ಧಿಜೀವಿಗಳು ಯಾರು ತಮ್ಮ ವೃತ್ತಿಪರತೆಯಿಂದಲೇ ಪರ್ಯಾಯ ಪ್ರಭುತ್ವವನ್ನು ಗಳಿಸಿಕೊಳ್ಳುತ್ತಾರೋ
ಇವರನ್ನು ಒಳಗೊಂಡಿದೆ.ಇವತ್ತು ನಮಗೆ ಶಿಕ್ಷಣ ಕೊಡಬಲ್ಲ ಎರಡು ಮೂಲಗಳಿವೆ.
ಮೊದಲನೆಯದು ಅನೌಪಚಾರಿಕ ಹಾಗೂ ಪರೋಕ್ಷವಾದ ದೃಶ್ಯ ಮಾಧ್ಯಮ ಇದು ಮೌಖಿಕ ರೂಪದಲ್ಲಿ ಮತ್ತು ಎರಡನೆಯದು
ಔಪಚಾರಿಕವಾದ ಶೈಕ್ಷಣಿಕ ಸಂಸ್ಥೆಗಳು.ಇವೆರಡಕ್ಕೂ ಮಧ್ಯದಲ್ಲಿರುವುದು ಅಂತರ್ಜಾಲ.ಆದರೆ ಪ್ರಸ್ತುತ ಉಳಿದೆರಡರಂತೆ
ಅಂತರ್‍ಜಾಲದ ಹರಹು ಪೂರ್ಣ ಸಮಾಜವನ್ನು ಒಳಗೊಂಡಿಲ್ಲ. ಟಿವಿ ಚಾನಲ್‍ಗಳು ಒಂದನ್ನೊಂಧು ಅನುಕರಿಸುತ್ತವೆ
ಹಾಗೂ ಚರ್ಚೆಗಳಲ್ಲಿ ಭಾಗವಹಿಸುವ ಚರ್ಚಾಪಟುಗಳು ಒಂದು ಚಾನಲ್‍ನಿಂದ ಮತ್ತೊಂದಕ್ಕೆ ಹಾರುತ್ತಿರುತ್ತಾರೆ.ಇದಕ್ಕೆ
ವಿರಳ ಅಪವಾದಗಳೂ ಇವೆ. ಎಲ್ಲದನ್ನೂ ಪ್ರಸ್ತುತ ರಾಜಕೀಯದ ಕಣ್ಣಿನಿಂದ ನೋಡಲಾಗುತ್ತದೆ.ಅದು ಅಪ್ರಸ್ತುತವಾಗಿದ್ದರೂ
ಅದನ್ನು ರಾಜಕೀಯದಿಂದ ಹೊರಗಿಡುವುದಿಲ್ಲ. ಪ್ರತಿಯೊಂದು ಚರ್ಚೆಯಲ್ಲೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳು
ತಮ್ಮ ಸಿದ್ಧಾಂತಗಳ ಅತಿಯಾದ ಭಾರವನ್ನು ಹೊರಿಸಿ ಚಚೆಯ ದಿಕ್ಕು ತಪ್ಪಿಸುತ್ತಾರೆ.ಸತ್ಯದ ಅನ್ವೇಷಣೆ
ಆಗುವುದೇ ಇಲ್ಲ. ಅವರ ಮಾತಿನ ಹಿಂದಿರುವ ನಿಜದ ಅರಿವು ಯಾರಿಗೂ ಉಂಟಾಗುವುದಿಲ್ಲ.
ಬಹಳಷ್ಟು ಬಾರಿ ಒಂದು ಪರ್ಯಾಯ ಟಿವಿ ಚಾನಲ್ ಹೊಂದಲು ಸಾಧ್ಯವಿಲ್ಲದೇ ಎಂದು ಯೋಚಿಸಲು ಪ್ರಾರಂಭಿಸಿದ್ದೇನೆ.
ಇದು ಆರ್ಥಿಕವಾಗಿ ಹೊರ ಎನಿಸಿದರೆ ರೇಡಿಯೋ ಸ್ಟೇಶನ್‍ನಲ್ಲಿ ಪ್ರಸಾರ ಮಾಡುವುದು ಅದೂ ಯಾವುದೇ ಆರ್ಥಿಕ
ಲಾಭದ ಚಿಂತೆಯಿಲ್ಲದೆ ಸಾಧ್ಯವೇ?ಪರ್ಯಾಯ ಆಲೋಚನೆಗಳನ್ನು ಚಿಂತಿಸುವ, ಪರಿಹಾರ ಮಾರ್ಗಗಳನ್ನು ಸೂಚಿಸುವ,
ವಿಮರ್ಶಾತ್ಮಕ ಒಳನೋಟದಿಂದ ಹೊರಹೊಮ್ಮುವ, ತಕ್ಷಣದ ಭಾವಾವೇಶದ ಉತ್ತರಕ್ಕೆ ಹೊರತಾಗಿರುವ ಚರ್ಚೆ ಅಗತ್ಯವಿದೆ.ಇಂತಹ
ಧ್ವನಿಗೆ ಆರ್ಥಿಕ ಆಧಾರ ಒದಗಿಸುವುದಾದರೂ ಹೇಗೆ?
ಮತ್ತೊಂದು ಮೂಲವೆಂದರೆ ಔಪಚಾರಿಕ ಶಿಕ್ಷಣದ್ದಾಗಿದೆ. ಇದನ್ನೂ ಎರಡು ಸ್ತರಗಳಲ್ಲಿ ಕಾಣಬಹುದು:
ಶಿಕ್ಷಣದ ಪಠ್ಯಾಂಶಗಳು ಹಾಗೂ ಶಿಕ್ಷಣ ಸಂಸ್ಥೆಗಳ ಸ್ವಾಯತ್ತತೆ. ಶಿಕ್ಷಣವು ಶಿಕ್ಷಣತಜ್ಞರ ಕೈಬಿಟ್ಟು
ರಾಜಕಾರಣಿಗಳ ಹಾಗೂ ರಾಜಕೀಯ ಸಂಘಟನೆಗಳ ಹಾಗೂ ಸಾಂಸ್ಕøತಿಕ, ಧಾರ್ಮಿಕ ಸಂಸ್ಥೆಗಳೆಂದು ತಮ್ಮನ್ನು ತಾವು
ಕರೆದುಕೊಳ್ಳುವವರ ಕೈ ತಲುಪಿದೆ.ಇದು ಹೇಗೆ ರಾಜಕಾರಣಿಗಳು ತಮ್ಮನ್ನು ಬುದ್ಧಿಜೀವಿಗಳೊಂದಿಗೆ ಸಮೀಕರಿಸಿಕೊಳ್ಳುತ್ತಿದ್ದಾರೆ
ಎಂಬುದನ್ನು ಗಣನೆಗೆ ತೆಗೆದುಕೊಳ್ಳಲು ಬಹಳ ಮುಖ್ಯವಾಗಿರುತ್ತದೆ.
ಕಲಿಕೆಯ ಅಂತಿಮ ಗುರಿ ಆದರ್ಶ ಸ್ಥಿತಿಯಲ್ಲಿ ಓರ್ವ ವ್ಯಕ್ತಿಯನ್ನು ವಿಶ್ಲೇಷಣೆಯಿಂದ, ತರ್ಕಬದ್ಧವಾಗಿ
ಹಾಗೂ ಸ್ವಾಯತ್ವವಾಗಿ ಹಾಗೂ ಸೃಜನಾತ್ಮಕವಾಗಿ ಆಲೋಚಿಸುವಂತೆ ಮಾಡುವುದೇ ಆಗಿದೆ.ತಾರ್ಕಿಕ ಶಕ್ತಿಯೊಂದರಿಂದಲೇ
ಓರ್ವ ಸುಶಿಕ್ಷಿತ ವ್ಯಕ್ತಿಗೆ ಈ ಅರಿವು ಮೂಡಿಸಲು ಸಾಧ್ಯ ಅದೇನೆಂದರೆ ತಂತ್ರಜ್ಞಾನದ ರೂಪ ತಳೆಯುವ
ಜ್ಞಾನವು ಒಂದು ನಿರ್ದಿಷ್ಟ ಸಂದರ್ಭದಲ್ಲಿ ಉಂಟಾದದ್ದು ಹಾಗೂ ಅದನ್ನು ಸುಸ್ಥಿರಗೊಳಿಸಬಲ್ಲದು. ನಿರ್ವಾತದಿಂದ
ಅದು ರೂಪ ತಳೆಯಲು ಸಾಧ್ಯವಿಲ್ಲ. 20ನೆ ಶತಮಾನದ ಕೆಲವು ತಾಂತ್ರಿಕ ಅವಿಷ್ಕಾರಗಳನ್ನು ಈ ಶತಮಾನದಲ್ಲಿಯೇ
ಮಾಡಲು ಸಾಧ್ಯ. ಇವು 3000 ವರ್ಷಗಳ ಹಿಂದೆ ಯಾವುದೇ ತಾಂತ್ರಿಕ ಜ್ಞಾನದ ಸಹಾಯವಿಲ್ಲದೆ ಬೆಳಕಿಗೆ ಬರಲಾಗುತ್ತಿರಲಿಲ್ಲ.
ವೈಜ್ಞಾನಿಕ ಅನ್ವೇಷಣೆಗಳು ಬಲು ದೀರ್ಘ ನಿಶ್ಚಲಾವಸ್ಥೆ ಹೊಂದಿವೆ ಹಾಗೂ ವಿಜ್ಞಾನದ ಇತಿಹಾಸಕಾರರು ಈ
ಅವಧಿಯನ್ನು ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ಗುರ್ತಿಸಬಲ್ಲರು.ತಂತ್ರಜ್ಞಾನ ಮತ್ತು ಜ್ಞಾನವು ಹೀಗೆ
ಅನ್ವೇಷಣೆಯನ್ನು ಇತಿಹಾಸದ ನಿರ್ದಿಷ್ಟ ಅವಧಿಯಲ್ಲಿ ಸಾಧ್ಯಗೊಳಿಸಿವೆ ಎಂಬುದನ್ನೂ ಇತಿಹಾಸಕಾರರು ಅವಲೋಕಿಸಬಲ್ಲರು.
ಸಮಾಜದಲ್ಲಿ ವೈಜ್ಞಾನಿಕ ಪ್ರಗತಿಯನ್ನು ಗಳಿಸಬೇಕೆಂದರೆ ಇತಿಹಾಸದಲ್ಲಿ ವಿಜ್ಞಾನದ ಪಾತ್ರವನ್ನು
ಗುರ್ತಿಸಬೇಕು.ಅದು ಜ್ಞಾನದ ಮಟ್ಟದಲ್ಲಿ ಹಾಗೂ ಅದರ ಅನ್ವಯದ ತಂತ್ರಜ್ಞಾನಗಳಲ್ಲಿಯೂ ಆಗಬೇಕು.20ನೆ
ಶತಮಾನದ ಅನ್ವೇಷಣೆಗಳು ಪ್ರಾಚೀನ ಭಾರತೀಯರಿಗೆ ಮೊದಲೇ ತಿಳಿದಿತ್ತು ಎಂದು ವಾದಿಸುವ ಬದಲಿಗೆ ನಮ್ಮಲ್ಲಿ
ಮೊದಲಿನಿಂದಲೇ ಇದ್ದ ಜ್ಞಾನದ ಸ್ವರೂಪ ಮತ್ತು ತಂತ್ರಜ್ಞಾನದ ಬಳಕೆಯನ್ನು ಅನ್ವೇಷಿಸಬೇಕಿದೆ. ಅದು ಇತಿಹಾಸದುದ್ದಕ್ಕೂ
ಇತ್ತು ಎಂದು ಸಾಬೀತಾಗಿದ್ದರೂ ಅದರಿಂದ ನಾವು ಯಾವ ಪ್ರಯೋಜನ ಪಡೆದಿದ್ದೇವೆ ಎಂದೂ ಅರಿಯಬೇಕಾಗಿದೆ.
ಕ್ರಿ.ಶ. 15ನೇ ಶತಮಾನದ ಕೇರಳದ ಗಣಿತಜ್ಞನೋರ್ವ ಕಲನಶಾಸ್ತ್ರವನ್ನೂ ಅನ್ವೇಷಿಸಿದ್ದರೆ ಅದರಿಂದ ಜ್ಞಾನದ
ವಿಸ್ತರಣೆಗೆ ಹೇಗೆ ಸಹಾಯವಾಯಿತು ಎಂಬುದನ್ನು ತಿಳಿದುಕೊಳ್ಳಬೇಕು.
ಈಗಿರುವ ಜ್ಞಾನವನ್ನು ಒದಗಿಸುವುದು ಶಿಕ್ಷಣದ ಮೊದಲ ಹೆಜ್ಜೆ.ಎರಡನೆಯ ಹೆಜ್ಜೆಯೆಂದರೆ ಈಗಿರುವ
ಜ್ಞಾನವನ್ನು ಹೊಸ ಸುಧಾರಿತ ಜ್ಞಾನದಿಂದ ಬದಲಾಗುವ ಅವಶ್ಯಕತೆ ಇದೆಯೇ ಎಂದು ಮೌಲ್ಯಮಾಪನ ಮಾಡುವುದು.ಆದರೆ
ಇಂದಿನ ಶಿಕ್ಷಣ ವ್ಯವಸ್ಥೆಯು ಮೊದಲನೆಯ ಹೆಜ್ಜೆಯನ್ನೂ ಸಮರ್ಪಕವಾಗಿ ತಲುಪದಂತಹ ಸ್ಥಿತಿಯಲ್ಲಿದೆ.ಸಾಕಷ್ಟು
ಶಾಲೆಗಳಲ್ಲಿ/ಕೆಲವರ ಪ್ರಕಾರ ಶಾಲೆಗಳ ಸಂಖ್ಯೆಯ ತೀವ್ರವಾದ ಕೊರತೆ ಹಾಗೂ ಅಸ್ತಿತ್ವದಲ್ಲಿರುವ ಶಾಲೆಗಳ
ಶೋಚನೀಯ ಸ್ಥಿತಿಗತಿ ಬೇಕಂತಲೇ ಮಾಡಿರುವ ನೀತಿಯಾಗಿರಬಹುದೆಂಬ ಗುಮಾನಿಯೂ ಆಗಿದೆ.ಏಕೆಂದರೆ ಪೌರರು ಇದರಿಂದ
ಅಕ್ಷರಸ್ಥರಲ್ಲದೇ ವಿದ್ಯಾವಂತರೂ ಆಗಬಹುದು ಎಂಬ ಭಯವೇ ಆಗಿರಬಹುದು. ಹಾಗಾಗಿ ಎದ್ದು ಕಾಣುವಂತಹ ನಿರ್ಲಕ್ಷ್ಯ
ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಕಳೆದ ಅರ್ಧ ಶತಮಾನದಲ್ಲಿ ಕಂಡು ಬಂದಿದೆ. ವಿಶ್ವವಿದ್ಯಾನಿಲಯಗಳ ಮಾತಿರಲಿ,
ಕನಿಷ್ಠ ಪ್ರೌಢಶಾಲೆಗಳಲ್ಲಾದರೂ ಜ್ಞಾನವನ್ನು ಅನುಸಂಧಾನ ಮಾಡುವ ಸನ್ನಿವೇಶದಲ್ಲಿ ಸಿದ್ಧತೆಯೇ ಇರದ
ಅನಿಶ್ಚತತೆ ಕಾಡುವಂತಹ ಪರಿಸ್ಥಿತಿಯಲ್ಲಿ ನಾವು ಇಂದು ಇದ್ದೇವೆ. ಇಷ್ಟಾದರೂ ಹೊಸ ವಿ.ವಿ.ಗಳನ್ನು ತೆರೆಯುವ
ಧಾವಂತದಲ್ಲಿ ನಾವಿದ್ದೇವೆ. IIಖಿಗಳು, IIಒಗಳು ಮತ್ತು eಣಛಿಗಳನ್ನು ತೆರೆಯಲು ಉತ್ಸುಕರಾಗಿದ್ದೇವೆ.
ಇದರೆಲ್ಲದರ ಪರಿಣಾಮ ಅನಿವಾರ್ಯವಾಗಿ ಶಿಕ್ಷಣವನ್ನು ದುರ್ಬಲಗೊಳಿಸಿ ಅದನ್ನು ಅರ್ಥಹೀನತೆಯೆಡೆಗೆ ತಳ್ಳುವಂತೆ
ಕಾಣುತ್ತಿದೆ.-ಇದು ಐಅಆ ಶಿಕ್ಷಣ ಕನಿಷ್ಠ ಸಾಮಾನ್ಯ ಛೇದ ಶಿಕ್ಷಣವಾಗಲಿದೆ.
ಹೆಚ್ಚಿನ ಯುವಜನತೆಗೆ ಪ್ರಶ್ನಿಸುವ ಮನಸ್ಸಿಗೆ ಬೇಕಾದಂತಹ ಆಲೋಚನಾ ವಿಧಾನಗಳನ್ನೂ ನಮ್ಮ ಶಿಕ್ಷಣ
ವ್ಯವಸ್ಥೆಯೋ ಚಿವುಟಿ ಹಾಕುತ್ತಿದೆ. ಇದರಿಂದ ಯುವಜನತೆ ಸಾರ್ವಜನಿಕ ಬುದ್ಧಿಜೀವಿಗಳೊಂದಿಗೆ ಸಮಾನ ಚಿಂತನೆ
ಬೆಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ಕೆಲವರು ಈ ವ್ಯವಸ್ಥೆಯ ಆಚೆ ಸ್ವತಂತ್ರ ಆಲೋಚನೆ ಮತ್ತು ಸೃಜನಶೀಲವಾಗಿ ಯೋಚಿಸುವವರು ಇದ್ದಾರೆ. ಅದು
ಸಂತಸದ ಸಂಗತಿಯೇ ಸರಿ.ಆದರೆ ಅವರು ನಮಗೆ ಬೇಕಾಗಿರುವ ವಿಮರ್ಶಾತ್ಮಕ ಆಲೋಚನೆಗೆ ಸೇರಿಕೊಳ್ಳುವುದಿಲ್ಲ.
ನಮ್ಮ ಶಿಕ್ಷಣ ವ್ಯವಸ್ಥೆಯು ವಿದ್ಯಾರ್ಥಿಗಳನ್ನು ಪ್ರಶ್ನಿಸುವ, ಸ್ವತಂತ್ರವಾಗಿ ಆಲೋಚಿಸುವಂತಹ ವಿಧಾನಗಳನ್ನು
ಪ್ರೋತ್ಸಾಹಿಸಿದ್ದೇ ಆದರೆ ಎಂತಹ ಶಕ್ತಿಶಾಲಿ, ಆಲೋಚನಾಯುಕ್ತ ಸಮಜದ ನಿರ್ಮಾಣ ಸಾಧ್ಯವೆಂಬುದನ್ನೂ ಯೋಚಿಸಿ.
ಸಮಕಾಲೀನ ಸಾರ್ವಜನಿಕ ಬುದ್ಧಿಜೀವಿಗಳು ಕೇಳಬಹುದಾದ ಸಮಸ್ಯೆಗಳಾವುವು ಎಂದು ಯಾರಾದರೂ ಆಲೋಚಿಸಿರಬಹುದು.ಓರ್ವ
ಸೌಲಭ್ಯವಂಚಿತ ಪೌರನಿಗೆ ಅಂದರೆ ಬಹುಪಾಲು ಭಾರತೀಯರಿಗೆ ಉತ್ತಮ ಆಡಳಿತ ವ್ಯವಸ್ಥೆಯ ಅವಶ್ಯಕತೆಗಾಗಿ
ಓಬೀರಾಯನ ಕಾಲದ, ವಸಾಹತುಶಾಹಿ ಬೇರುಗಳನ್ನುಳ್ಳ ವ್ಯವಸ್ಥೆಯ ಬದಲಾವಣೆ ಆಗಬೇಕಿದೆ.ದೇಶದ ಸಂಪತ್ತಿನ
ಅಸಮರ್ಪಕ ವಿತರಣೆಯು ಬಡತನ ರೇಖೆಯನ್ನು ಇನ್ನೂ ಎತ್ತರದಲ್ಲೇ ಇರಿಸಿದೆ.ಜಾತಿ ಹಾಗೂ ಧಾರ್ಮಿಕ ಕಟ್ಟುಪಾಡುಗಳು
ಇನ್ನೂ ವಸಾಹತು ನೀತಿಗಳಂತೆಯೇ ಮುಂದುವರಿಯುತ್ತಿವೆ. ವಸಾಹತು ಆಡಳಿತವು ಅಲ್ಪಸಂಖ್ಯಾತ ಸಮುದಾಯ ಮತ್ತು
ಬಹುಸಂಖ್ಯಾತ ಸಮುದಾಯಗಳೆಂದು ವಿಭಾಗಗಳನ್ನು ಹುಟ್ಟುಹಾಕಿ ಅವುಗಳ ಅಸ್ತಿತ್ವದ ರಾಜಕೀಯ ಮತ್ತು ಧರ್ಮದ
ರಾಜಕೀಯವನ್ನು ಉತ್ತೇಜಿಸಿತು. ಈಗ ಇವುಗಳನ್ನು ಶಾಶ್ವತ ವರ್ಗಗಳೆಂದು ಕಾಣಲಾಗುತ್ತಿದೆ.ಇವು ಪ್ರಜಾಸತ್ತಾತ್ಮಕ
ಕಾರ್ಯನಿರ್ವಹಣೆಯನ್ನು ತಡೆಯುತ್ತವೆ. ಏಕೆಂದರೆ ಪ್ರಜಾಪ್ರಭುತ್ವದಲ್ಲಿ ಯಾರು ಬಹುಮತದಲ್ಲಿರುತ್ತಾರೋ
ಅವರು ಸಮಸ್ಯೆಯಿಂದ ಸಮಸ್ಯೆಗೆ ಬದಲಾಗುತ್ತಿರುತ್ತಾರೆ.ಶಿಕ್ಷಣ ಮತ್ತು ಉದ್ಯೋಗದಲ್ಲಿನ ಮೀಸಲಾತಿಯನ್ನು
ಶಾಶ್ವತವಾಗಿ ಉಳಿಸಿಕೊಂಡಿದ್ದೇ ಆದಲ್ಲಿ ಧಾರ್ಮಿಕ ಹಾಗೂ ಜಾತೀಯ ಅಸ್ಮಿತೆಗಳನ್ನು ಪ್ರತಿಸ್ಥಾಪಿಸಿದಂತಾಗುತ್ತದೆ-ಇದರಿಂದಾಗುವ
ಲಾಭ ಬಹಳ ಅಲ್ಪ ಪ್ರಮಾಣದ್ದಾಗಿರುತ್ತದೆ.ಇದಕ್ಕೆಲ್ಲಾ ಪರಿಹಾರವೇನೆಂದರೆ ನಮ್ಮ ಸಮಾಜ ಹಾಗೂ ಅರ್ಥವ್ಯವಸ್ಥೆಯನ್ನು
ವಿಭಿನ್ನ ರೀತಿಯಲ್ಲಿ ಸರಿದಾರಿಗೆ ತರುವುದೇ ಆಗಿದೆ.ಇದಕ್ಕಾಗಿ ವಸಾಹತುಶಾಹಿ ವರ್ಗೀಕರಣವನ್ನು ಪಕ್ಕಕ್ಕಿಟ್ಟು
ಸಂಪತ್ತನ್ನು ಹೆಚ್ಚು ಸಮಾನವಾಗಿ ಹಂಚಿಕೆ ಮಾಡುವ ಪ್ರಯತ್ನಗಳನ್ನು ಮಾಡಬೇಕಾಗಿದೆ.
ಪ್ರಜಾಪ್ರಭುತ್ವ ಯಶಸ್ಸು ಸಮಾಜದ ಜಾತ್ಯತೀತತೆಯ ಮೇಲೆ ನಿಂತಿದೆ. ನನ್ನ ಮಾತಿನ ಅರ್ಥ ಎಲ್ಲ
ಧರ್ಮಗಳ ಸಹಬಾಳ್ವೆಯನ್ನು ಮೀರಿದ ಸಮಾಜ, ಸಮಾನ ಸಾಮಾಜಿಕ, ಆರ್ಥಿಕ ಹಕ್ಕುಗಳನ್ನುಳ್ಳ ಜನರ ಸಮಾಜ ಮತ್ತು
ತಮ್ಮ ಹಕ್ಕುಗಳನ್ನು ತಮ್ಮ ಧರ್ಮದ ಹಂಗಿಲ್ಲದೆ ಚಲಾಯಿಸಬಲ್ಲ ಪೌರರ ಸಮಾಜ, ಧಾರ್ಮಿಕ ಸಂಘಟನೆಗಳ ಹಿಡಿತಗಳಿಂದ
ಈ ಹಕ್ಕುಗಳ ಚಲಾವಣೆಗೆ ಯಾವುದೇ ನಿರ್ಬಂಧಗಳಿಲ್ಲದ ಸಮಾಜ, ಯಾವುದೇ ಮತ, ಧರ್ಮಕ್ಕೆ ಸೇರಲು/ಸೇರದಿರಲು
ಮುಕ್ತತೆ ಇರುವ ಸಮಾಜ, ಸಾರ್ವತ್ರಿಕ ಬುದ್ಧಿಜೀವಿಯೂ ಜಾತ್ಯತೀತತೆ ಎಲ್ಲಿದೆ ಮತ್ತು ಅದು ಪ್ರಜಾಪ್ರಭುತ್ವದಲ್ಲಿ
ಏಕೆ ಅನಿವಾರ್ಯ ಮತ್ತು ಜಾತ್ಯತೀತತೆಯನ್ನು ಸಮರ್ಥಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತಾನೆ.
ಸಾರ್ವಜನಿಕ ಬುದ್ಧಿಜೀವಿಗಳು ನಮ್ಮ ಸಮಾಜದಲ್ಲಿ ಅದೃಶ್ಯರಾಗಿಲ್ಲ. ಅವರೇನು ಅನ್ಯಗ್ರಹದಿಂದ
ಆಮದಾಗಬೇಕಿಲ್ಲ. ಅವರ ಪರಂಪರೆಯೇ ಇದೆ. ಅದನ್ನೂ ಈ ಹಿಂದೆ ವಿವರಿಸಿದ್ದೇವೆ. ಐತಿಹಾಸಿಕ ಬದಲಾವಣೆಗಾಗಿ
ನಾವು ಅವರ ಪಾತ್ರವನ್ನು ಗುರ್ತಿಸಬೇಕಾಗಿದೆ. ಪ್ರಾಚೀನ ಬುದ್ಧಿಜೀವಿಗಳಂತೆ ಸಂಪೂರ್ಣ ಬೇರೆಯಲ್ಲದಿದ್ದರೂ
ನಮ್ಮ ಈಗಿನ ಕಾಲಕ್ಕೆ ವಿಸ್ತರಿಸಬೇಕಿದೆ.ಅವರ ಪೂರ್ವಜರು ಸಮಾಜವನ್ನು ಅರ್ಥಮಾಡಿಕೊಳ್ಳಲು ಹೊಸ ಆಯಾಮವನ್ನು
ನೀಡಿದ್ದಾರೆ.ಇಂತಹವರ ಸುಪ್ತ ಮನಸ್ಸನ್ನು ಹಿಂದಿನ ಭಿನ್ನ ಆಲೋಚನೆಗಳು ಮಾನವನ ಪರಿಸ್ಥಿತಿಯ ತಾರ್ಕಿಕ
ಹಾಗೂ ವಿಮರ್ಶಾತ್ಮಕ ವಿಚಾರಗಳಿಂದ ಮತ್ತು ಜಾತ್ಯತೀತ ನೈತಿಕ ಪ್ರಭುತ್ವವನ್ನು ಇತರ ಆಲೋಚನೆಗಳನ್ನು
ಮೀರಿ ಸ್ಥಾಪಿಸುವ ಮೂಲಕ ಪೋಷಿಸಬಹುದೆ? ಹಾಗೂ ನಮ್ಮ ಸಮೀಪದ ಕಾಲದಲ್ಲಿ ವಸಾಹತುಶಾಹಿ ದಬ್ಬಾಳಿಕೆಯನ್ನು
ನಿರಾಕರಿಸಬಹುದೆ? ವಿಮರ್ಶಾತ್ಮಕವಾಗಿ ಆಲೋಚಿಸುವ ಸಾರ್ವಜನಿಕ ಬುದ್ಧಿಜೀವಿಗಳು ಈ ಗುಣದ ವಾರಸುದಾರರು.
ನಾನು ಒಂದು ದೀರ್ಘವಾದ ಪ್ರಶ್ನೆಯೊಂದಿಗೆ ಈ ಲೇಖನವನ್ನು ಮುಗಿಸಲು ಇಷ್ಟಪಡುತ್ತೇನೆ. ಸ್ವತಂತ್ರವಾಗಿ
ಆಲೋಚಿಸುವ ಮತ್ತು ಸೂಕ್ತವಾಗಿ ಪ್ರಶ್ನಿಸುವ ವ್ಯಕ್ತಿಗಳು ನಮ್ಮಲ್ಲಿಲ್ಲ ಎಂಬುದು ನಮ್ಮ ಚಿಂತೆಯಲ್ಲ.
ಆದರೆ ಬಹಳಷ್ಟು ಸಾರಿ ಎಲ್ಲಿ ದನಿಯಿರಬೇಕಿತ್ತೋ ಅಲ್ಲಿ ನಿಶ್ಶಬ್ದವಿದೆ.ನಾವೆಲ್ಲರೂ ಬೇರೆಯವರಂತೆ ಇದ್ದುಬಿಡುವ
ಪರಿಸ್ಥಿತಿಗೆ ಅಷ್ಟು ಸುಲಭವಾಗಿ ಒಪ್ಪಿಕೊಂಡಿದ್ದೇವೆಯೇ?ಪ್ರಶ್ನಿಸುವುದರಿಂದ ನಮಗೆ ಸಿಗಬಹುದಾದ ಹಾಗೂ
ಆಗಾಗ ಸಿಗುವ ಶಿಕ್ಷೆಯ ಭಯವೇ?ನಮ್ಮೆಲ್ಲರಿಗೂ ಆಲೋಚಿಸಲು ಉತ್ತೇಜಿಸುವೆ ಹಾಗೂ ಒಟ್ಟಿಗೆ ಆಲೋಚಿಸಲು
ಸಹಾಯ ಮಾಡುವ ಒಂದು ವೈಯಕ್ತಿಕ ಜಾಗದ ಅವಶ್ಯಕತೆ ಇದೆಯೇ?
***
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ