ಆಧುನಿಕತೆಗೆ ಟಿಪ್ಪು ಸುಲ್ತಾನ್ ಪ್ರತಿಕಿಯೆ


ಇತಿಹಾಸದಲ್ಲಿನ ಕೆಲವು ವ್ಯಕ್ತಿಗಳು ಅನ್ಯಾನ್ಯ ಕಾರಣಗಳಿಂದ ವರ್ತಮಾನ ಮತ್ತು ಭವಿಷ್ಯದಲ್ಲಿ ಸುದ್ದಿಯಾಗುತ್ತಿರುತ್ತಾರೆ. ಅದು ಜೇಮ್ಸ್ ಲೈನ್ ಎಂಬ ವಿದ್ವಾಂಸ ಮತ್ತು ಆತ ಸಂಪಾದಿಸಿದ ಶಿವಾಜಿ ಬಗೆಗಿನ ಪುಸ್ತಕದ ವಿವಾದದ ಪ್ರಸಂಗವಾಗಬಹುದು, ಅಯೋಧ್ಯೆ ಮತ್ತು ಬಾಬರಿ ಮಸ್ಜೀದ್ ಘಟನೆ ಆಗಬಹುದು ಅಥವಾ ಈಚೆಗೆ ಭಾರಿ ಸುದ್ದಿಯಲ್ಲಿರುವ ಟಿಪ್ಪು ಮತ್ತು ಕನ್ನಡ ಪ್ರೇಮವಾಗಬಹುದು. ಇಂತಹ ವಿವಾದಗಳನ್ನು ಕೆಲವೊಮ್ಮೆ ಮೌಲಿಕತೆ ಮತ್ತು ಪ್ರಸ್ತುತತೆ ಬಾಧಿಸಿದರೆ, ಕೆಲವೊಮ್ಮೆ ಇವು ಇವೆರಡೂ ಇಲ್ಲದೇನೇ ಹುಟ್ಟಿಕೊಳ್ಳುತ್ತವೆ. ಕ್ರಮೇಣ ಮೂಲಸಂಗತಿ ಅಥವಾ ಘಟನೆಯು ಇರುವುದಕ್ಕಿಂತ ಭಿನ್ನವಾದ ಚಿತ್ರವನ್ನು ಹಾಗೂ ನಿರೂಪಣೆಯನ್ನು ಪಡೆಯುತ್ತಾ ಹೋಗುತ್ತದೆ. ಹಲವು ಸಿದ್ಧಾಂತಗಳು, ಮೂಗಿನ ನೇರ ತರ್ಕದ ವಾದಸರರಣಿಯ ಬುದ್ಧಿವಂತರು, ತಮಗೆ ಬೇಕಾದ ಹಾಗೆ ಕೂಡಾ ಸುದ್ದಿಯನ್ನು ಪುನರ್ ರಚಿಸಿಕೊಳ್ಳುತ್ತಾ, ಇವರ ಸಿದ್ಧಾಂತದ ಪ್ರಚಾರಕ್ಕೆ ಒಂದು ಆಯುಧವನ್ನಾಗಿ ಮಾಡಿಕೊಳ್ಳುವುದೂ ಸತ್ಯವೇ. ಕೆಲವೊಮ್ಮೆ ಒಂದೇ ವಿಷಯವನ್ನು ವಿರುದ್ಧ ದೃಷ್ಟಿಕೋನಗಳ ಗುಂಪುಗಳು ಆಚೆ ಈಚೆಯಿಂದ ಎಳೆದು ಹರಿದುಹಾಕುವ ತನಕ ಹೋಗುವುದನ್ನೂ ನಾವು ನೋಡುತ್ತೇವೆ. ಹೀಗೆ ಐತಿಹಾಸಿಕ ವಸ್ತುಗಳು ವಿಷಯವಾದರೆ ಐತಿಹಾಸಿಕತೆಯೇ ಮಾಯವಾಗಿ ಕೇವಲ ರಂಜನೆಗೆ ಸಾಮಗ್ರಿಯಾಗುವುದೂ ಕೂಡಾ ಉಂಟು. ಟಿಪ್ಪು ವಿಷಯದಲ್ಲಿ ಕೂಡಾ ಹೀಗೆಯೇ. ಇತಿಹಾಸವನ್ನು ಮಾತನಾಡುವವರು ಕೂಡಾ ಇತಿಹಾಸದ ಬಗ್ಗೆ ಕನಿಷ್ಠ ಮಟ್ಟದ ಜ್ನಾನವನ್ನು ಹೊಂದಿರದವರು. ಎಲ್ಲಿಯೂ ಟಿಪ್ಪುವಿನ ಕನ್ನಡ ಪ್ರೇಮ ಅಥವಾ ದ್ವೇಷದ ಬಗೆಗೆ ವಸ್ತುನಿಷ್ಠವಾದ, ಆಧಾರಜನ್ಯವಾದ ಚಾರಿತ್ರಿಕ ಚರ್ಚೆ ಮತ್ತು ಅದರ ಆಧಾರದ ಮೇಲಿನ ವಿಶ್ಲೇಷಣೆಯ ಮೇಲೆ ಉಂಟಾಗಿಲ್ಲ. ಪ್ರಸಕ್ತ, ಟಿಪ್ಪು ಸುತ್ತ ಎದ್ದಿರುವುದು ಹೆಚ್ಚು ಪೂರ್ವಗ್ರಹ ಪೀಡಿತ ಮತ್ತು ಪಟ್ಟಭದ್ರ ಹಿತಾಸಕ್ತಿ ಪ್ರೇರಿತ ನಿರ್ಣಯಗಳಷ್ಟೇ. ವಿಷಯದಲ್ಲಿ ಕನ್ನಡದ ತಥಾಕಥಿತ ಚಿಂತಕರೂ ಕೂಡ ಐತಿಹಾಸಿಕ ನೆಲೆಯಲ್ಲಿ ವಿಷಯವನ್ನು ಚರ್ಚಿಸದೇ ವೈಯಕ್ತಿಕವಾಗಿ ವಿಷ ಕಾರುವಿಕೆಯನ್ನಷ್ಟೇ ತಮ್ಮ ಧ್ಯೇಯವನ್ನಾಗಿಸಿಕೊಂಡ ಹಾಗಿದೆ.

ಟಿಪ್ಪುವಿನ ಕನ್ನಡಪ್ರೇಮ, ದ್ವೇಷ ಕುರಿತ ಚರ್ಚೆಯೇ ನಗಣ್ಯವೆನಿಸುವ ಮಟ್ಟಿಗೆ ಬಂದಿದೆ. ರೀತಿಯ ಚರ್ಚೆಗಳು ಬಂದಾಗ ಕನ್ನಡ ಪ್ರೇಮ, ರಾಷ್ಟ್ರ, ರಾಷ್ಟ್ರೀಯತೆ ಎಲ್ಲವನ್ನೂ ಹೊಸದಾಗಿ ನಿರ್ವಚಿಸುವ ಅಗತ್ಯವಿದೆಯೆಂದೇ ನಾನು ತಿಳಿಯುತ್ತೇನೆ. ಕನ್ನಡ ವೈಭವದ ಸೂತ್ರಕ್ಕೆ ಸರ್ವದಾ ಸಿಲುಕುವ ವಿಜಯನಗರದ ಕೃಷ್ಣದೇವರಾಯನು ಒಂದೇ ಒಂದು ಕೃತಿಯನ್ನೂ ಕನ್ನಡದಲ್ಲಿ ಬರೆಯಲಿಲ್ಲ. ತೆಲುಗಿನವರನ್ನೇ ಆತ ಅಷ್ಟದಿಗ್ಗಜರುಗಳನ್ನಾಗಿಸಿದ. ಅಶೋಕನ ಶಾಸನಗಳು ಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲಿ ಬರೆಯಲ್ಪಡಲಿಲ್ಲ. ಇಷ್ಟೆಲ್ಲದರ ಜತೆಗೆ ಶೃಂಗೇರಿಯ ಮಠ ಮತ್ತು ದೇಗುಲವನ್ನು ಮರಾಠರ ದಂಡನಾಯಕ ಪರಶುರಾಮ್ ಭಾವೆಯು ಲೂಟಿ ಮಾಡಿ ಅಲ್ಲಿನ ಸ್ವಾಮೀಜಿಗಳನ್ನು ಓಡಿಸಿದ ಸಂದರ್ಭದಲ್ಲಿ, ಪುನ: ಆತ ಅಲ್ಲಿಗೆ ಬರಹೇಳಿ ಸ್ವಾಮೀಜಿಗಳಿಗೆ ಸೌಜನ್ಯದಿಂದ ಬರೆದ ಅನೇಕ ಪತ್ರಗಳು ಮತ್ತು ಕಡತಗಳು ಕನ್ನಡದಲ್ಲಿಯೇ ಇವೆ. ಇಂತಹ ಹಲವು ವಿಚಾರ ದ್ವಂದ್ವ, ಪ್ರಶ್ನೆಗಳು ವಿವಾದದ ಕೇಂದ್ರವಾಗಿರುವ ಕೆಲವು ಅಂಶಗಳ ಹೊಸ ನಿರ್ವಚನಕ್ಕಾಗಿ ಕಾಯುತ್ತವೆ.

ಕೃಷ್ಣದೇವರಾಯನಾಗಲಿ, ಅಶೋಕನಾಗಲಿ, ಕನ್ನಡ ವಿರೋಧಿಗಳೆಂದರೆ ಹೇಗೆ? ಒಟ್ಟಿನಲ್ಲಿ ಇಬ್ಬರೂ ಯುಗಧರ್ಮದ ಗೆರೆಯಲ್ಲಿದ್ದರಷ್ಟೇ. ಟಿಪ್ಪು ಕನ್ನಡ ಪ್ರೇಮಿ, ದ್ವೇಷಿ ಅನ್ನೋದಕ್ಕಿಂತ ಆಧುನಿಕ ಮೈಸೂರಿನ ಪ್ರವರ್ತಕ ಎಂಬ ವಿಷಯ ನನಗೆ ಬಹುಮುಖ್ಯವಾಗಿ ಕಾಣಿಸುತ್ತದೆ. ನಾನು ಪ್ರಬಂಧದಲ್ಲಿ ಆತ ಆಧುನಿಕತೆಗೆ ಹೇಗೆ ವೈಚಾರಿಕವಾಗಿ ಮತ್ತು ಭೌತಿಕವಾಗಿ ಪ್ರತಿಕ್ರಿಯಿಸಿದ ಎಂಬುದನ್ನು ಚರ್ಚಿಸಲು ಬಯಸುತ್ತೇನೆ. ಬಹುಶ: ಬ್ರಿಟೀಷ್ ಭಾರತೀಯ ಸಂದರ್ಭದಲ್ಲಿ ಟಿಪ್ಪುವಿನಷ್ಟು ಒಂದು ಕಡೆಯಿಂದ ಸಾರ್ವಭೌಮೀಯ ನೆಲೆಯಲ್ಲಿ ವಸಾಹತುಷಾಹೀಯನ್ನು ವಿರೋಧಿಸಿದ ಮತ್ತು ಇನ್ನೊಂದು ಕಡೆಯಲ್ಲಿ ವಸಾಹತುಷಾಹೀಯ ಆದಾನವಾದ ಆಧುನಿಕತೆಗೆ ವಿಶಿಷ್ಠವಾಗಿ ಪ್ರತಿಕ್ರಿಯಿಸಿದ ವ್ಯಕ್ತಿ ಇನ್ನೊಬ್ಬನಿಲ್ಲ. ಟಿಪ್ಪು ನಂತರದ, “ಮೈಸೂರಿನ ಆದರ್ಶರಾಜ್ಯ ಆಧುನಿಕತೆಯ ಅಡಿಶಿಲೆಯನ್ನು ಆತ ಹಾಕಿದ್ದ. ಅದರ ಆಧಾರದ ಮೇಲೆ ಮೈಸೂರು ಹುಲುಸಾಗಿ ಬೆಳೆಯಿತು. ಟಿಪ್ಪುವಿಗೆ ವಿಶ್ವೇಶ್ವರಯ್ಯನವರಿಗಿಂತ ಕಡಿಮೆ ಕನಸುಗಳಿರಲಿಲ್ಲ. ಕಾಲಕ್ಕೆ ಟಿಪ್ಪುವಿನ ಆಧುನಿಕತೆ ಸಂಬಂಧಿ ಕನಸುಗಳು ಅಂದಿನ ಯುಗಕ್ಕಿಂತ ಮುಂದಿದ್ದು ಶಕ್ತಿಯುತವಾಗಿದ್ದುವು.

ಸುಮಾರು ಮೂರು ವರ್ಷದ ಹಿಂದೆ ಕನ್ನಂಬಾಡಿ ಕಟ್ಟೆ ಬತ್ತಿದಾಗ ಒಂದು ಶಾಸನ ಸಿಕ್ಕಿತ್ತು. ಅದರ ಪಕ್ಕದಲ್ಲಿಯೇ ವಿಶ್ವೇಶ್ವರಯ್ಯನವರು ಕನ್ನಂಬಾಡಿಗೆ ಹಾಕಿದ್ದ ಶಂಕುಶಿಲೆಯೂ ಗೋಚರವಾಗಿತ್ತು. ಶಾಸನ ಟಿಪ್ಪುವಿನದು; ವಿಷಯ: ಅದೇ ಜಾಗದಲ್ಲಿ ಅಣೆಕಟ್ಟು ನಿರ್ಮಿಸುವ ಬಗ್ಗೆ! ಸಾಮ್ರಾಜ್ಯಶಾಹಿ ವಿರುದ್ಧ ಹೋರಾಡುವ ಸರಿಸಮಯದಲ್ಲೇ ರೀತಿ ಆಧುನಿಕವಾಗಿ ಚಿಂತಿಸಿದ್ದ. ಸುಮಾರು ಇನ್ನೂರು ವರ್ಷಗಳ ನಂತರ ನೆಹರೂ ಭಾರತಕ್ಕೆ ಸ್ವತಂತ್ರ ಬಂದಾಗ ಅಣೆಕಟ್ಟುಗಳನ್ನು ಭಾರತದ ದೇಗುಲಗಳೆಂದು ಪ್ರತಿಕ್ರಿಸುತ್ತಾರೆ. ನೆಹರೂ ಮತ್ತು ಟಪ್ಪೂವಿನ ಎರಡು ಪ್ರತಿಕ್ರಿಯೆಗಳೂ ಕೂಡಾ ಆಧುನಿಕತೆಗೆ ಮಾಡಿದ ಎರಡು ಮಾದರಿಯ ಪ್ರತಿಕ್ರಿಯೆಗಳು. ನಿಜಕ್ಕೂ ಟಿಪ್ಪು ಒಬ್ಬ ಆಧುನಿಕ ಮತ್ತು ಆಧುನಿಕ ಮೈಸೂರಿನ ಪ್ರವರ್ತಕ.

ಟಿಪ್ಪು ಮತ್ತು ಆತನ ಆಧುನಿಕ ಪ್ರವರ್ತನೆಯ ಔತ್ಸುಕತೆಯ ಆಯಾಮವನ್ನು ನಾವು ನಾಲ್ಕು ಅಂಶಗಳಿಂದ ತಿಳಿಯಬಹುದು, ಒಂದು: ಫ್ರೆಂಚರ ದಾಖಲೆಗಳಿಂದ, ಎರಡು: ಟಿಪ್ಪುನ ಉದ್ಯಮ ಸಂಸ್ಥೆಗಳು ಮತ್ತು ಅವುಗಳ ಮೇಲಿನ ನಿಯಮ ನಿಬಂಧನೆಗಳ ಬಗೆಗಿನ ಆಜ್ಞೆಗಳಿಂದ, ಮೂರು: ಟಿಪ್ಪುವಿನ ಕೃಷಿ ಮತ್ತು ತೆರಿಗೆ ನೀತಿಯಿಂದ ಮತ್ತು ನಾಲ್ಕು: ಈತನ ಸಮಕಾಲೀನ ಬ್ರಿಟಿಷ್ ಪ್ರವಾಸಿ ಫ್ರಾನ್ಸಿಸ್ ಬುಕಾನನ್ ಬರವಣಿಗೆಯಿಂದ.

ಫ್ರೆಂಚ್ ದಾಖಲೆಗಳು ಟಿಪ್ಪುವನ್ನು ಆಧುನಿಕತೆಯ ಪ್ರವರ್ತಕ ಎಂಬುದನ್ನು ಸಾಬೀತುಪಡಿಸುತ್ತವೆ. ಪ್ಯಾರಿಸ್ ಆರ್ಕಿವ್ಸ್ ನ್ಯಾಷನಲ್ನಲ್ಲಿನ ಪರ್ಶಿಯನ್ ಮತ್ತು ಸೀಮಿತ ಸಂಖ್ಯೆಯಲ್ಲಿ ತೆಲುಗು ಭಾಷೆಯಲ್ಲೂ ಇರುವ ಹೂ ಚಿತ್ತಾರ ಮತ್ತು ಚಿನ್ನದ ನೂಲಿನಿಂದಾವೃತಗೊಂಡ ಸಿಲ್ಕ್ ಬಟ್ಟೆಯ ಕಡತಗಳು ನಮಗೆ ಕುರಿತು ಮಾಹಿತಿಯನ್ನು ನೀಡುತ್ತವೆ. ಈಗಲೂ ಕೂಡ ಸುಸ್ಥಿತಿಯಲ್ಲಿರುವ ಇವು ಕಲಾತ್ಮಕತೆಯೊಂದಿಗೆ, ಟಿಪ್ಪುವಿನ ಇತಿಹಾಸ ಪುನರ್ರಚನೆಯ ಮೌಲಿಕತೆಯನ್ನೂ ಹೊಂದಿವೆ. ಇವು ಟಿಪ್ಪುವಿನ ಹುಕುಮ್ ಅಥವಾ ಆಜ್ನೆಗಳಾಗಿದ್ದು ಪತ್ರದ ಸ್ವರೂಪವನ್ನು ಹೊಂದಿವೆ. ಉದ್ಯಮ, ವ್ಯಾಪಾರ, ರಾಯಭಾರ, ಹಡಗು ನಿರ್ಮಾಣ ಮತ್ತು ಫ್ರೆಂಚ್ ತಂತ್ರಜ್ಞತೆಯ ಕುರಿತ ಆತನ ಅಪರಿಮಿತ ಕುತೂಹಲ ಮತ್ತು ಅದರ ಬಗೆಗಿನ ಆಗ್ರಹವೆಲ್ಲವನ್ನು ಇಲ್ಲಿ ನೋಡಬಹುದು.

ಆತನು 16ನೇ ಲೂಯಿಯ ಆಸ್ಥಾನಕ್ಕೆ ತನ್ನ ಮೂರು ರಾಯಭಾರಿಗಳನ್ನು ಹಾಗೂ ಉದ್ಯಮ ಪ್ರವರ್ಧನೆಗಾಗಿ ಪಿಯರ್ ಸೆಸರ್ ಮತ್ತು ಹಾಲ್ ಎನ್ನುವ ಇಬ್ಬರು ಉದ್ಯಮಿಗಳನ್ನು ಕಳಿಸಿದ್ದ. ಇನ್ನೊಂದು ಕಡತವು ಟಿಪ್ಪುವಿನ ಶಿಕ್ಷಣದ ದೃಷ್ಠಿಯನ್ನು, ವಿಶೇಷವಾಗಿ ಯುರೋಪಿನ ವೈಚಾರಿಕ ಮತ್ತು ವೈಜ್ಞಾನಿಕ ದೃಷ್ಟಿಯನ್ನು ಹಾಗೂ ಅದರ ಬಗೆಗಿದ್ದ ಟಿಪ್ಪುವಿನ ಒಲವನ್ನೂ ನಮಗೆ ತಿಳಿಸುತ್ತದೆ. ಒಂದು ಕಡತವು ತಿಳಿಸುವ ಹಾಗೆ ತನ್ನ ಒಬ್ಬ ಮಗನನ್ನು ಮಾಧ್ಯಮಿಕ ಶಿಕ್ಷಣಕ್ಕೋಸ್ಕರ ಆತನು ಫ್ರಾನ್ಸ್ಗೆ ಕಳಿಸುವ ಸನ್ನಾಹ ಮಾಡಿದ್ದನು. 18ನೇ ಶತಕದ ಉತ್ತರಾರ್ಧ ಫ್ರಾನ್ಸ್ ಆರ್ಥಿಕ ದಿವಾಳಿತನವನ್ನು ಹೊಂದಿದ್ದ ಸಮಯದಲ್ಲಿ, ಆಗಿನ ದೊರೆ 16ನೇ ಲೂಯಿಗೆ, 19 ಲಕ್ಷ ರೂಪಾಯಿಯನ್ನು ಟಿಪ್ಪು ನೀಡಿದ್ದ. ಇದಕ್ಕಾಗಿಯೇ ಟಿಪ್ಪು ತನ್ನ ರಾಯಭಾರ ನಿಯೋಗವನ್ನು ಫ್ರಾನ್ಸಿಗೆ ಕಳುಹಿಸಿದ್ದು ಮತ್ತು ಪ್ರತಿಯಾಗಿ ಫ್ರಾನ್ಸಿನ ತಂತ್ರಜ್ಞತೆ ಮತ್ತು ಆಧುನಿಕ ವಸ್ತುಗಳನ್ನು ಇಚ್ಛಿಸಿದ್ದು.

ಫ್ರಾನ್ಸ್ ಸರ್ಕಾರ ಟಿಪ್ಪುವಿನ ಶಕ್ತಿಯನ್ನು ನಿಚ್ಚಳವಾಗಿ ಗುರುತಿಸಿತ್ತು. ಆದ್ದರಿಂದಲೇ ಟಿಪ್ಪುವಿನ ಇನ್ನೊಂದು ಬಾರಿ ಆತ ಕಳುಹಿಸಲು ಯೋಚಿಸಿದ್ದ 400 ಜನರ ರಾಯಭಾರ ನಿಯೋಗದ ಹಡಗು  ಅಷ್ಟು ಜನರನ್ನು ಹೊತ್ತು ಫ್ರಾನ್ಸ್ ದಡವನ್ನು ಮುಟ್ಟಿದರೆ ಆಗುವ ಪರಿಣಾಮವನ್ನು ನೆನೆದು ಫ್ರಾನ್ಸ್ ಸರ್ಕಾರವು 400 ಜನರ ಸಂಖ್ಯೆಯನ್ನು ಕಡಿಮೆ ಮಾಡುವಂತೆಯೂ ಕೇಳಿತು. ಆಗಿನ ಫ್ರಾನ್ಸಿನ ಉನ್ನತ ದರ್ಜೆಯ ಅಧಿಕಾರಿಯಾಗಿದ್ದ ಪಿಯರ್ ಮೊನ್ನೆರೋನ್, “ಅವನ ಹಡಗು ಯುರೋಪಿನ ಬಂದರನ್ನು ತಲುಪಿದ ಮೊದಲ ಇಂಡಿಯಾದ ಹಡಗಾಗಿರುತ್ತದೆ. ಆದ್ದರಿಂದ ಅದು ಯೂರೋಪಿನ ಮೇಲೆ ಅಗಾಧ ಪ್ರಭಾವವನ್ನೂ ಬೀರುತ್ತದೆ ಎಂದು ನುಡಿದಿದ್ದ. ಆತನ ನಿಯೋಗವು ಇದಲ್ಲದೆ ಫ್ರಾನ್ಸ್ ಮತ್ತು ಬ್ರಿಟನ್ ನಡುವಿನ ಪ್ಯಾರಿಸ್ ಒಪ್ಪಂದ ಕೂಡ ಬಿದ್ದುಹೋಗುವ ಭಯವನ್ನು ಉಂಟು ಮಾಡಿತ್ತು. ಹೀಗೆ ಮೊದಲ ಬಾರಿಗೆ ಟಿಪ್ಪು ಆಧುನಿಕತೆಯ ಪ್ರವರ್ತಕನಾದ. ಕೊನೆಗೂ 70 ಜನರುಳ್ಳಮೊರೋರ್ ಹಡಗನ್ನು ಕಳುಹಿಸುವ ಮೂಲಕ. ಟಿಪ್ಪುಗಿಂತ ಮೊದಲು ಯಾವ ಭಾರತೀಯ ಭೂಭಾಗದ ದೊರೆಯೂ ರೀತಿಯ ಯತ್ನವನ್ನು ಮಾಡಿರಲಿಲ್ಲ. ಟಿಪ್ಪು ಫ್ರಾನ್ಸ್ನಿಂದ ಕುಶಲಕರ್ಮಿಗಳನ್ನು, ಇಂಜಿನಿಯರ್ರನ್ನು, ವಿಶೇಷ ಗಿಡಗಳನ್ನು, ಉಪಕರಣಗಳನ್ನು, ಬ್ಯಾರೋಮೀಟರ್, ಥರ್ಮಾಮೀಟರ್, ಕನ್ನಡಕಗಳು, ಗಡಿಯಾರಗಳು, ಪ್ರಿಂಟಿಂಗ್ ಯಂತ್ರ ಮತ್ತು ಸೈಪ್ರಸ್ ಮರಗಳನ್ನೂ ತರಿಸಿದ್ದ. ಗಡಿಯಾರಗಳನ್ನು ತರಿಸಿದ ನಂತರ ಅದಕ್ಕೆ ಚಿನ್ನದ ಪಟ್ಟಿಯನ್ನೂ ತಯಾರಿಸಿ ಧರಿಸಿದ್ದ.

ಫ್ರೆಂಚ್ ದಾಖಲೆಗಳು ಟಿಪ್ಪು ಒಬ್ಬ ಒಳ್ಳೆಯ ಹಡಗು ನಿರ್ಮಾಣೋದ್ಯಮವನ್ನು ಹೊಂದಿದ್ದ ಎನ್ನುವುದನ್ನೂ ಶ್ರುತ ಪಡಿಸುತ್ತವೆ. ಟಿಪ್ಪು ಹಡಗು ನಿರ್ಮಾಣದಲ್ಲಿ ಫ್ರೆಂಚ್ ತಂತ್ರಜ್ಞತೆ ಸೇರಿ ಮೈಸೂರು ಮಾದರಿಯನ್ನು ಸೃಷ್ಟಿಸಿದ. ರೀತಿಯ ಹಡಗು ಉದ್ಯಮವು ಕ್ಯಾಲಿಕಟ್ ಮಲೈಕ್ಕಾರರಪರೋಯ್ ಮತ್ತು ಕಣ್ಣಾನೂರ್ಮಮ್ಮಲೀಸ್ ಎಂಬ ಹಡಗಿನ ಮಾದರಿಗಿಂತ ಅನನ್ಯವಾಗಿತ್ತು. ಟಿಪ್ಪು ಫ್ರಾನ್ಸ್ನಿಂದ ತನ್ನ ಸಾಮ್ರಾಜ್ಯಕ್ಕೆ ಬೆನಾರ್ಡ್ ಎನ್ನುವ ಸರ್ಜನ್ನನ್ನು ಕರೆಸಿದ್ದ. ಆದರೆ ಆತನಿಗಿಂತ ಚೆನ್ನಾಗಿರುವ ಸರ್ಜನ್ಗಳು ಹೊತ್ತಿಗಾಗಲೇ ಆತನಲ್ಲಿ ಇದ್ದಾರೆಂದು ತಿಳಿದ ನಂತರ ಈತನನ್ನು ವಜಾಮಾಡಿದ್ದ!

ಫ್ರೆಂಚ್ ದಾಖಲೆಗಳಿಂದ ಟಿಪ್ಪುವಿನ ನಾಣ್ಯ ವ್ಯವಸ್ಥೆಯಲ್ಲಿದ್ದ ಆಧುನಿಕತೆಯನ್ನು ಅರಿಯಬಹುದಾಗಿದೆ. ಟಿಪ್ಪು ತನಗೆ ಮಗ ಹುಟ್ಟಿದಾಗ ಆಗಿನ ಫ್ರೆಂಚ್ ಕಾಲನಿಯ ಪಾಂಡಿಚೇರಿಯ ಗವರ್ನರ್ ಆದ ಕಾಸಿಗ್ನಿಗೆ ಪತ್ರಸಹಿತ 1789 ಸೆಪ್ಟೆಂಬರ್ 21ರಂದು ಎರಡು ಚಿನ್ನದ ರೂಪಾಯಿ, 5 ಪಗೋಡಾ, 2 ಚಿನ್ನದ ಪನಾಮಾ, 5 ಅರ್ಧ ರೂಪಾಯಿ, 5 ಕಾಲು ರೂಪಾಯಿ ಮತ್ತು ಐದು 1/8 ರೂಪಾಯಿಗಳನ್ನು ಉಡುಗೊರೆಯಾಗಿ ನೀಡಿದ್ದ. ಈತನ 1 ರೂಪಾಯಿ ಆಗಿನ ಫ್ರಾನ್ಸ್ 205 ಲೀವ್ರ್ ಅಥವಾ ಲಿವ್ರೆಗೆ ಸಾಟಿಯಾಗಿತ್ತು. ಹೀಗೆ ಆತನು ಮಾಡಿದ ನಾಣ್ಯಗಳ ಸೃಷ್ಟಿ, ಅವುಗಳ ವೈವಿಧ್ಯತೆ ಮತ್ತು ಆಕರ್ಷಕ ವಿನ್ಯಾಸದಿಂದ ಇಡೀ ಫ್ರೆಂಚ್ ಸಮುದಾಯ ಚಕಿತಗೊಂಡಿತ್ತು.

ಆಧುನಿಕ ಶಸ್ತ್ರ ತಯಾರಿಕೆಯಲ್ಲಿನ ಟಿಪ್ಪುವಿನ ನಿಪುಣತೆಯನ್ನು ಸಹ ಫ್ರೆಂಚ್ ದಾಖಲೆಗಳು ನಮಗೆ ತಿಳಿಸುತ್ತವೆ. ಟಿಪ್ಪು ಬೆಂಗಳೂರು ನಗರ ಮತ್ತು ಪಟ್ಟಣ ಅಥವಾ ಈಗಿನ ಶ್ರೀರಂಗಪಟ್ಟಣದಲ್ಲಿ ಉದ್ದ ನಳಿಗೆಯ ಬಂದೂಕುಗಳನ್ನು ತಯಾರಿಸುತ್ತಿದ್ದ. ಸ್ವತ: ಟಿಪ್ಪು 16ನೇ ಲೂಯಿಗೆ ಮೈಸೂರಿನ ಮಾದರಿಯ 2 ಪಿಸ್ತೂಲುಗಳನ್ನು ಕಳಿಸಿದ್ದ. ಇದರಿಂದ 16ನೇ ಲೂಯಿ ಬಹುವಾಗಿ ಆಕರ್ಷಿತನಾಗಿದ್ದ. ಇದಲ್ಲದೆ ಟಿಪ್ಪು ಫ್ರೆಂಚರ ಗವರ್ನರ್ ಆದ ಕಾನ್ವೆಯು ಪಾಂಡಿಚೇರಿಯಿಂದ ಕಳಿಸಿದ್ದ 500 ಕೋವಿಗಳನ್ನು ಮೈಸೂರಿನ ಗುಣಮಟ್ಟವನ್ನು ಹೊಂದಿಲ್ಲವೆನ್ನುವ ಕಾರಣದಿಂದ ವಾಪಸ್ಸು ಕಳಿಸಿದ್ದ. ಹೀಗೆ ಫ್ರೆಂಚರ ಪತ್ರಾಗಾರದಲ್ಲಿರುವ ದಾಖಲೆಗಳು ಟಿಪ್ಪುವಿನ ಆಧುನಿಕತೆ ಮತ್ತು ಅತನಿಗಿದ್ದ ಆಧುನಿಕತೆಯ ಬಗೆಗಿನ ಕುತೂಹಲ ಮತ್ತು ವಿಚಾರದ ಅನ್ವಯವನ್ನೂ ಕಾಣಿಸುತ್ತವೆ.

ಟಿಪ್ಪು ವ್ಯಾಪಾರ ವಹಿವಾಟು ನಿಯಂತ್ರಣ ಸಂಬಂಧಿತ ಹಲವು ಆಜ್ಞೆಗಳನ್ನು ನೀಡಿದ್ದ. ಇವುಗಳೇ ಹುಕುಮ್ಗಳೆಂದು ಕರೆಯಿಸಿಕೊಂಡುಹುಕುಮ್ ನಾಮಾ--ಟಿಪ್ಪು ಸುಲ್ತಾನ್ ಎನ್ನುವ ಹೆಸರಿನಲ್ಲಿ ಕರೆಸಿಕೊಂಡ ದಾಖಲೆಗಳಾಗಿವೆ. ಎಲ್ಲಾ ಹುಕುಮ್ಗಳನ್ನು ಈಸ್ಟ್ ಇಂಡಿಯ ಕಂಪನಿಯ ಕರ್ನಲ್ ಆಗ ಸಂಗ್ರಹಿಸಿದ್ದ. ಈಗ ಇವು ಲಂಡನ್ ಅಲ್ಲಿರುವ ಇಂಡಿಯಾ ಆಫೀಸ್ ಲೈಬ್ರರಿಯಲ್ಲಿವೆ. ಮೈಸೂರು ಮತ್ತು ಹೊರದೇಶದ ವ್ಯಾಪಾರದ ಸ್ವರೂಪವನ್ನು ಇವು ತಿಳಿಸುತ್ತವೆ. ಅಲ್ಲದೆ, ಕೋಠಿಗಳು, ಅಲ್ಲಿದ್ದ ಸರಕುಗಳು, ವ್ಯಾಪಾರದ ನಿಯಮಾವಳಿ, ಮಾಧ್ಯಮ, ಆಡಳಿತವರ್ಗ ಮುಂತಾದುವನ್ನೂ ತಿಳಿಸುತ್ತವೆ. ರೀತಿಯ ಹುಕುಮ್ಗಳನ್ನು ದೇವರ ಹೆಸರಿನಲ್ಲಿ ಹೊರಡಿಸಿ ಟಿಪ್ಪು ಮುದ್ರೆ ಹಾಕುತ್ತಿದ್ದ.

ಟಿಪ್ಪುವಿನ ವ್ಯಾಪಾರ ವಹಿವಾಟು ಒಂದು ಕಂಪನಿಯ ಸ್ವರೂಪವನ್ನು ಹೊಂದಿದ್ದರೂ ಮೂಲಧನವನ್ನು ರಾಜ್ಯದ ಬೊಕ್ಕಸವೇ ಭರಿಸುತ್ತಿತ್ತು. ಟಿಪ್ಪು ಹೆಚ್ಚಿನ ವ್ಯಾಪಾರಕ್ಕಾಗಿ ಹಡಗು ನಿರ್ಮಾಣವನ್ನು ಮತ್ತು ವಿದೇಶೀ ವರ್ತಕರ, ಬಂಡವಾಳಶಾಹಿಗಳ ಆಮಂತ್ರಣದ ಕುರಿತು ಚಿಂತಿಸಿದ್ದ. ಹುಕುಮ್ಗಳನ್ನು ಟಿಪ್ಪು ಮುಖ್ಯ ವ್ಯಾಪಾರೀ ಇಲಾಖೆಯಾದಮಲಿಕು-ತ್-ತುಚಾರ್ಗೆ ಮಾಡಿದ್ದಾಗಿದೆ. ಇವುಗಳು ಸಂರಕ್ಷಣಾ ಸೈನ್ಯದ ಜತೆಗಿನ ಹಡಗು ಪಡೆ, ನಾಣ್ಯ, ಗಟ್ಟಿ ಚಿನ್ನ, ಬಟ್ಟೆ, ಕಾಳುಮೆಣಸು, ಗಂಧ, ದಾಲ್ಚಿನ್ನಿ, ತೆಂಗು, ಕೊಬ್ಬರಿ, ಅಕ್ಕಿ ಮುಂತಾದ ವಸ್ತುಗಳ ತೀವ್ರ ತೆರನಾದ ವ್ಯಾಪಾರದಲ್ಲಿ ನಂಬಿಕಸ್ಥ (ಮತಸದ್ದಿ--ಖಿಫಾಯತ್ಪಾರ್) ಲೆಕ್ಕಪರಿಶೋಧಕ ಮತ್ತು ಮಧ್ಯವರ್ತಿಗಳ (ಗುಮಾಸ್ತ) ಆಯ್ಕೆ, ನಷ್ಟವಾಗದಿರುವಂತೆ ವಹಿವಾಟು, ಬಂದರು ಮತ್ತು ಸಾಗರ ವ್ಯಾಪಾರದಲ್ಲಿ ತಪ್ಪಿಲ್ಲದ ಲೆಕ್ಕವಿಡುವಿಕೆ, ಕಳ್ಳತನ ತಪ್ಪಿಸುವಿಕೆ ಮತ್ತು ಕೋಠಿಯನ್ನು ಅವಜ್ಞೆ ಮಾಡದಿರುವಿಕೆಯೇ ಮುಂತಾದ ಹಲವು ಉದ್ದೇಶಗಳನ್ನು ಹೊಂದಿತ್ತು.

ಟಿಪ್ಪು ಹಲವು ಹುಕುಮ್ಗಳನ್ನು ನೀಡುತ್ತಾನೆ. ಅವುಗಳಲ್ಲಿ ಕೆಲವು ಅತಿ ಪ್ರಮುಖವಾಗಿವೆ. ಮುಖ್ಯವಾಗಿ, ‘ವ್ಯಾಪಾರಕ್ಕಿಂತ ಮುಂಚೆ ವ್ಯಾಪಾರಿಗಳೆಲ್ಲರೂ ಒಂದು ಕಡೆ ಕೂತು ಚರ್ಚಿಸಬೇಕು. ಪ್ರತಿಯೊಬ್ಬರ ಸಲಹೆಯನ್ನು ಸಹಿ ಸಹಿತ ದಫ್ತರ್ನಲ್ಲಿ ಬರೆದು ಮುದ್ರೆಯೊತ್ತಬೇಕು. ಬಹುಮತ ಇಲ್ಲಿ ಮುಖ್ಯವಾಗಿರುತ್ತಿತ್ತು. ಮುಂದೆ ಇದರ ಸಂಬಂಧೀ ವಿಚಾರಣೆ ಬಂದರೆ ಪ್ರಶ್ನೆಗಳನ್ನು ಲಿಖಿತರೂಪದಲ್ಲಿ ಇದರ ಸಹಿತ ಮಂಡಿಸಬೇಕಿತ್ತು. ವಿಷಯ ಗಂಭೀರವಿದ್ದರೆ ಅಥವಾ ವ್ಯಾಪಾರಕ್ಕೆ ಸಂಬಂಧಿಸಿದಂತೆ ಯಾವುದಾದರೂ ವ್ಯಾಜ್ಯಗಳಿದ್ದರೆ ಟಿಪ್ಪುವೇ ನ್ಯಾಯಾಧೀಶನಾಗಿ ಮೂರನೇ ಅಹಮದಿ ತಿಂಗಳಿನಲ್ಲಿ ತೀರ್ಪನ್ನು ನೀಡುತ್ತಿದ್ದ.

ತನ್ನ ಆಡಳಿತಾವಧಿಯಲ್ಲಿ ಟಿಪ್ಪುವು ಖಿಜ್ರಿ ಮತ್ತು ಇಲ್ಯಾಸೀ ಎಂಬ ಮಾದರಿಯ 100 ಹಡಗುಗಳನ್ನು ನಿರ್ಮಿಸಲು ಆಜ್ಞೆ ಮಾಡಿದ್ದ. ಇವು ಶಸ್ತ್ರಸಹಿತವಿರಬೇಕೆಂದೂ, ಹಡಗುಗಳಲ್ಲಿ ನುರಿತ ವರ್ತಕರು ಹಾಗೂ ಅವರ ಸುರಕ್ಶೆಗೆ ಕಬ್ಬಿಣ, ಮರ, ಬಳ್ಳಿ ಮುಂತಾದ ಅಗತ್ಯದ ವಸ್ತುಗಳನ್ನು ಉಪಸ್ಥಾಪಿಸಬೇಕೆಂದಿದ್ದ. ಇಲ್ಲಿನ ಕಾರ್ಮಿಕರಿಗೆ ಸಂಬಳವನ್ನು ನಿಯಮಿತವಾಗಿ ನೀಡಬೇಕೆಂದಿದ್ದ.

ಟಿಪ್ಪುವು ಮೈಸೂರಿನಲ್ಲಿ 30 ಮತ್ತು ಮೈಸೂರಿನ ಹೊರಗೆ 17 ಕೋಠಿಗಳನ್ನು ಅಥವಾ ಗೋಡೌನ್ಗಳನ್ನು ಹೊಂದಿದ್ದ. ಝೆಡ್ಡಾ, ಮಸ್ಕತ್ ಮತ್ತು ಒಮನ್ಗಳಲ್ಲಿ ಕೂಡ ಈತನಿಗೆ ಕೋಠಿಯಿತ್ತು. ಪತ್ತನ್ ಅಥವಾ ಶ್ರೀರಂಗಪಟ್ಟಣ, ಸಲಾಮಾಬಾದ್ ಅಥವಾ ಸತ್ಯಮಂಗಲಮ್, ವೇಫಿ ಮುಂಗಲ್ ಅಥವಾ ಅರಿವ ಕೂಚೀ, ಬೆಂಗಳೂರು, ಕೋಲಾರ, ಮುರ್ವಗಲ್, ಮದನಹಳ್ಳಿ, ಝಫರಾಬಾದ್ ಅಥವಾ ಗುರುಮಕೊಂಡ, ಪುಂಗನೂರ್, ರಾಯಚೌಟಿ, ಪೈಝ್ಹಿಸಾರ್ ಅಥವಾ ಗೂಟಿ, ಧರ್ಮಾವರಮ್, ಫರೂಕ್ ಯಾತ್ ಹಿಸಾರ್ ಅಥವಾ ಖೆತಲ್ದುರ್ಗ, ಬೇನಝೀರ್, ಹುರಿಯಲ್, ನಗರ ಅಥವಾ ಬಿದನೂರು, ಶಿಕಾರಿಪುರ, ಸೋಂದಾ, ಕುರಾೈಲ್ ಕುಡ್ಲ ಅಥವಾ ಮಂಗಳೂರು, ಈಶಾಲ್ಪುರ, ಬಾರ್ಕೂರು, ಕಾರವಾರ, ಜಮಾಲಾಬಾದ್, ಭಟ್ಕಳ, ಫತ್ಹೇಬಾದ್, ಕರೂರ್, ಕುರಾಪ್, ಬನವಾಸೀ ಮತ್ತು ಗರ್ದುನ್ ಷುಕೋಹ್ ಅಥವಾ ನಂದಿದುರ್ಗ ಮುಂತಾದವು ಮೈಸೂರಿನೊಳಗಿನ ಪ್ರಸಿದ್ಧ ಕೋಠಿಗಳಾಗಿದ್ದುವು.

ವ್ಯಾಪಾರ ನಡೆಸಲು ಸುಮಾರು 4 ಲಕ್ಷ ರಹತಿ ಅಂದರೆ  ವಿಲಿಯಂ ಕರ್ಕ್ಪ್ಯಾಟ್ರಿಕ್ ಎಂಬ ಬ್ರಿಟೀಷ್ ಅಧಿಕಾರಿ ಅಂದಾಜಿಸುವ ಹಾಗೆ ಸುಮಾರು 1,28,000 ಸ್ಟೆರ್ಲಿಂಗ್ ಪೌಂಡ್ ಹಣವನ್ನು ಅಥವಾ ಚಿನ್ನ, ಬೆಳ್ಳಿ, ಟಂಕಿತ-ಅಟಂಕಿತ ಹಣ ಮತ್ತು ಆನೆಗಳನ್ನು ಮೂಲಧನದ ಹಾಗೆ ಸಂರಕ್ಷಣೆಯ ಉದ್ದೇಶದಿಂದ ಇರಿಸುವಂತೆ ಕಾನೂನು ರೂಪಿಸಿದ್ದ. ವ್ಯಾಪಾರ ವಸ್ತುಗಳನ್ನುಕಛೇರಿ ಎನ್ನುವ ಇಲಾಖೆಯಲ್ಲಿಆಸೀರ್ಫ ಎನ್ನುವ ಅಧಿಕಾರಿಯ ಅಡಿಯಲ್ಲಿ ಇಡಲಾಗುತ್ತಿತ್ತು. ಈತನಿಂದ ವರ್ತಕರು ವಸ್ತುಗಳನ್ನು ಪಡೆದು ಹಣವನ್ನು ನೀಡಿ ರಸೀತಿಯನ್ನು ಪಡೆಯಬೇಕಿತ್ತು. ಪಡೆದದ್ದು, ಕೊಟ್ಟದ್ದು, ತೆರಿಗೆ ಎಲ್ಲವನ್ನೂ ದಫ್ತರ್ನಲ್ಲಿ ಸಹಿ ಸಹಿತ ಮುದ್ರೆಯೊತ್ತಿ ಸಂರಕ್ಷಿಸಿ ಇಡಬೇಕೆಂದು ಟಿಪ್ಪು ಹುಕುಮ್ ಹೊರಡಿಸಿದ್ದ. ಇದರ ನಕಲು ಪ್ರತಿಗಳನ್ನು ಶ್ರೀರಂಗಪಟ್ಟಣದಲ್ಲಿಅರೀಝ್ ದೇಖೀ ಎಂಬ ವಿಭಾಗದ ಅಧಿಕಾರಿಗಳು ಮತ್ತು ಹಿಂದೂ ಬ್ರಾಹ್ಮಣ ಕರಣಿಕರು ಕಾಪಿಡುತ್ತಿದ್ದರು ಮತ್ತು ಮೇಲ್ವಿಚಾರಣೆ ಮಾಡುತ್ತಿದ್ದರು. ಸರಿಯಾದ ನಾಣ್ಯೀಯ ಮತ್ತು ಅನಾಣ್ಯೀಯ ವ್ಯಾಪಾರ ವಹಿವಾಟು ನೋಡಿಕೊಳ್ಳಲು 30 ಕಡೆ ಮಧ್ಯವರ್ತಿಗಳನ್ನು ನೇಮಿಸುವಂತೆ ಟಿಪ್ಪು ಹುಕುಂ ಹೊರಡಿಸಿದ್ದ. ಪ್ರತಿ ತಾಲ್ಲೂಕಿನಲ್ಲಿ 1000 ದಿಂದ 2000 ರಹತಿಯಷ್ಟು ವ್ಯಾಪಾರವನ್ನು ಆತ ಬಯಸಿದ್ದ. ಚಿನ್ನ, ಬೆಳ್ಳಿ ಮತ್ತು ಹಣ ಟಂಕಿಸುವ ಸಂಬಂಧಿತ ವಹಿವಾಟಿನಲ್ಲಿ ಖಾಸಗೀ ಸಾಮಾನ್ಯ ವ್ಯಕ್ತಿಯನ್ನು ಅಥವಾ ಹಣವಂತ ಆಡ್ಯನನ್ನು ಟಿಪ್ಪು ಬಿಡುತ್ತಿರಲಿಲ್ಲ. 1000 ರೂಪಾಯಿಗಿಂತ ಕಡಿಮೆ ಶೇರುದಾರರು ಬಂದರೆ ಅವರಿಗೆ ಆರ್ಥಿಕ ಚಟುವಟಿಕೆಯಲ್ಲಿ ಅವಕಾಶವಿರಲಿಲ್ಲ. ಒಬ್ಬ ವ್ಯಕ್ತಿ ಇಲ್ಲಿ ವ್ಯಾಪಾರ ಮಾಡಬೇಕಾದರೆ ಮೊದಲು 1200 ರೂಪಾಯಿ ಚೀಟಿ ಖರೀದಿಸಿ ಪ್ರವೇಶಿಸಬೇಕಿತ್ತು.

ಮಸ್ಕತ್, ಝೆಡ್ಡಾ ಮತ್ತು ಒಮನ್ನಲ್ಲಿನ ತನ್ನ ಸ್ವಂತ ಕೋಠಿಗಳಿಗೆ ನುರಿತ ಕಾರ್ಮಿಕರನ್ನು, ವರ್ತಕರನ್ನು ನಿಯಮಿಸಬೇಕೆಂದು ಆಜ್ಞೆ ಹೊರಡಿಸಿದ್ದ ಟಿಪ್ಪು ಇಲ್ಲಿಗೆ ಒಳ್ಳೆ ಗುಣಮಟ್ಟದ ಕಾಳುಮೆಣಸು, ಗಂಧ, ತೆಂಗಿನಕಾಯಿ, ವೀಳ್ಯದೆಲೆ, ಅಕ್ಕಿಯನ್ನು ಪೂರೈಸಬೇಕೆಂದೂ ಹುಕುಮ್ ಮಾಡಿದ್ದ ಮತ್ತು 600 ಒರಟು ಪ್ರಥಮ ದರ್ಜೆಯ ಕರ್ಪೂರವನ್ನೇ ಕಳಿಸಬೇಕೆಂಬ ಆಜ್ಞೆ ಕೂಡ ಇತ್ತು. ಕಳಿಸಿದ್ದಕ್ಕೆ ಸರಿಯಾಗಿ ರಸೀತಿಯನ್ನೂ ಅಧಿಕಾರಿಗಳು ಇರಿಸಬೇಕಾಗಿತ್ತು.

ಟಿಪ್ಪುವಿನ ರಾಷ್ಟ್ರದ ಪರಿಕಲ್ಪನೆ ಆಧುನಿಕ ಪ್ರೌಢವಾದುದಾಗಿರಲಿಲ್ಲ. ಇದಕ್ಕೆ ಆತನ ಕೊನೆಯ ಹುಕುಮ್ಗಳೇ ನಿದರ್ಶನವಾಗುತ್ತವೆ. ನಿರ್ಧಾರಗಳು ಅಥವಾ ಆಜ್ಞೆಗಳು ಮೈಸೂರು ಮತ್ತು ವಿದೇಶದ ಕೋಠಿಗಳೆರಡಕ್ಕೆಂದು ನಿಖರವಾಗಿ ಹೇಳಿರುವುದನ್ನು ಗಮನಿಸಿದರೆ ಮೈಸೂರು ಅಥವಾ ಭಾರತವು ರಾಷ್ಟ್ರವಾಗಿ ನಿರ್ಮಾಣವಾಗುತ್ತಿರುವ ಆದಿಮ ಹಂತವನ್ನೂ ಮತ್ತು ರಾಷ್ಟ್ರೀಯತೆ ರಾಷ್ಟ್ರ ನಿರ್ಮಾಣ ಒಂದು ಉತ್ಪನ್ನವಲ್ಲ, ಬದಲು ಪ್ರಕ್ರಿಯೆ ಎನ್ನುವುದನ್ನೂ ಗಮನಿಸಬಹುದಾಗಿದೆ. ಇದರ ಜತೆಗೆ ಭಾರತವೆಂಬ ರಾಜಕೀಯ ಘಟಕದ ಅನಸ್ತಿತ್ವವನ್ನೂ ಕೂಡಾ ನಮಗೆ ಮನವರಿಕೆ ಮಾಡುತ್ತದೆ. ಟಿಪ್ಪು ಹೊರದೇಶದ ಕೋಠಿಗಳಿಂದ ವ್ಯಾಪಾರ ಸರಿಯಾಗಿ ನಡೆಯಬೇಕಾದ ಅನಿವಾರ್ಯತೆಯನ್ನೂ ಹಾಗೂ ವ್ಯಾಪಾರಕ್ಕೆ ತೊಂದರೆಯಾದರೆ ಖಡಾಖಂಡಿತವಾಗಿ ಅಲ್ಲಿಯ ರಾಜರಿಗೆ ದೂರಿಡಬೇಕೆಂದೂ ಆದೇಶಿಸುತ್ತಾನೆ. ಕರ್ನೂಲ್, ಚೆನೈಪಟ್ಣ ಅಥವಾ ಮದ್ರಾಸ್, ಪಹಲಛೇರಿ ಅಥವಾ ಪಾಂಡಿಚೇರಿ, ಪೂನಾ, ಕುರ್ಪಾಹ್, ಚಂದ್ರನಾಗೋರ್, ವೇರಾಝ್ ಅಥವಾ ಮೀರಝ್, ಮಾಲೇಗಾವ್, ದಾಗಾರ್ಕೋಛ್, ಉತ್ಕೀ, ನಾಂದ್ವಾಲ್, ಹುಮ್ನಾಬಾದ್, ರಾಯಚೂರು, ಮಸ್ಕತ್, ಕಛ್, ಸಿಂಧ್, ಕರಾಚಿ ಮತ್ತು ಮಾಹೆಯು ಟಿಪ್ಪೂ ಕಾಲದಲ್ಲಿನ ಪ್ರಮುಖವಾದ ವಿದೇಶದ ಜತೆಗಿನ ವ್ಯಾಪಾರದ ಕೋಠಿಗಳಾಗಿದ್ದುವು.   

ಹೀಗೆ ಮೇಲಿನ ಎಲ್ಲಾ ಸಂಗತಿಗಳೂ ಟಿಪ್ಪುವಿನ ಆಧುನಿಕ ಪ್ರವರ್ತನೆಯ ಇನ್ನೊಂದು ಮುಖವನ್ನು ದರ್ಶಿಸುತ್ತವೆ. ಟಿಪ್ಪುವಿನ ಕೃಷಿ ಮತ್ತು ನೀರಾವರಿ ಸುಧಾರಣೆಯು ಅವನ ಆಧುನಿಕೀಕರಣದ ಉತ್ಸಾಹದ ಕೈಗನ್ನಡಿ. ಮೈಸೂರಿನ ಕೆಲವು ಭಾಗಗಳು, ವಿಶೇಷವಾಗಿ ಶಿರಾದಂತಹ ಭಾಗಗಳು ಮೊಘಲ್ ಮನ್ ಸಬ್ದಾರಿಕೆಯಲ್ಲಿ, ನಂತರದ ನೈಝಾಮೀಯ ಮತ್ತು ಹೈದರ್ ಆಳ್ವಿಕೆಯಲ್ಲಿ ಕೂಡ ಭೂಮಾಲೀಕರ ಕರಾಳ ಕೃತ್ಯಗಳಿಗೆ ಇತಿಹಾಸವಾಗಿದ್ದುವು. ಭೂಮಾಲೀಕರು, ರಾಜ್ಯದ ಪರವಿದ್ದ ತೆರಿಗೆ ಸಂಗ್ರಾಹಕರೂ ಕೂಡ ಜನರನ್ನು ಮನಸೋ ಇಚ್ಚೆ ಹಿಂಸಿಸುತ್ತಿದ್ದರು. ಎಷ್ಟೋ ಬ್ರಿಟಿಷ್ ದಾಖಲೆಗಳು ಇದನ್ನು ನಮ್ಮ ಮುಂದೆ ತೆರೆದಿಡುತ್ತವೆ. ಫ್ರಾನ್ಸಿಸ್ ಬುಕಾನನ್ ಸಹ ಇದನ್ನು ಉಲ್ಲೇಖಿಸುತ್ತಾನೆ. ಟಿಪ್ಪು ಸುಲ್ತಾನ್ ಮೊದಲ ಬಾರಿಗೆ ಇದನ್ನು ಸರಿಪಡಿಸಿದ ಆತ ನಮಗೆ ಮಹತ್ವದ ದಾಖಲೆಗಳನ್ನು ನೀಡುತ್ತಾನೆ. ಟಿಪ್ಪುವಿನ ತಂದೆ ಜೀವಂತವಿದ್ದಾಗ ಧರ್ಮಪುರಿಯ ಜಾಗೀರ್ದಾರಿಕೆ ನಡೆಸಿ ಸಾಕಷ್ಟು ಅನುಭವಿಸಿದ್ದ ಕಾರಣ ಪಟ್ಟಕ್ಕೆ ಬಂದ ತರುವಾಯ ಅಲ್ಲಿ ಗಳಿಸಿದ ಅನುಭವದ ಆಧಾರದ ಮೇಲೆ ತೆರಿಗೆ ಮತ್ತು ಕೃಷಿ ಸುಧಾರಣೆಗಳನ್ನು ತಂದ.

ಟಿಪ್ಪು ಒಣ, ತೇವ, ಹಿಸ್ಸಾ ಮತ್ತು ಇಚ್ರಾ ಭೂಮಿಗಳಲ್ಲಿ ಹೊಸ ತೆರಿಗೆ ವಿತರಣೆಯನ್ನು ತಂದ. ವಿಶೇಷವಾಗಿ, ಮೀರಾಸ್ ಅಂದರೆ ಸಾಂಪ್ರದಾಯಿಕ ಅಥವಾ ಅನುವಂಶೀಯವಾಗಿ ಹೊಂದಿದ್ದ ಪೂರ್ವಜರ ಭೂಮಿಯ ಮೇಲಿನ ತೆರಿಗೆಯನ್ನು ಸರಿಯಾದ ಬೆಳೆ ಇದ್ದರೆ ಮಾತ್ರ ಸಂಗ್ರಹಿಸುತ್ತಿದ್ದ. ಇದಲ್ಲದೇ ಭೂಗೇಣಿ ಅಂದರೆ ಸರ್ಕಾರದ ಭೂಮಿಯನ್ನು ಉಳುತ್ತಿದ್ದ ಗೇಣಿದಾರರಿಂದ ಜಮೀನ್ದಾರ ಸಂಗ್ರಹಿಸಿ ರಾಜ್ಯಕ್ಕೆ ಒಪ್ಪಿಸುತ್ತಿದ್ದ ತೆರಿಗೆಯನ್ನು ಮಾನ್ಯ ಮಾಡುತ್ತಾನೆ. ಬಿದನೂರ್, ಮೈಸೂರು ಮತ್ತು ಪಯೂರ್ನಲ್ಲಿ ರೀತಿಯ ತೆರಿಗೆ ಮಾದರಿಯಿತ್ತು. ಕೆನರಾ ಪ್ರದೇಶದಲ್ಲಿ ಸಾಂದರ್ಭಿಕತೆಗೆ ತಕ್ಕಂತೆ ಹಣ ಅಥವಾ ನಗದು ಮಾದರಿಯಲ್ಲಿ ಜನರು ನೇರವಾಗಿ ಸರ್ಕಾರಕ್ಕೆ ಸಲ್ಲಿಸಬಹುದಾದ ರೈತವಾರಿ ಮಾದರಿಯ ತೆರಿಗೆ ಪದ್ಧತಿಯನ್ನು ಜಾರಿಗೆ ತಂದಿದ್ದ. ಟಿಪ್ಪು ವಿಶೇಷವಾದ ತೆರಿಗೆಗಳನ್ನು ನಗದು ರೂಪದಲ್ಲಿ ಸ್ವೀಕರಿಸಿದ ಮತ್ತು ಕೆಲವೊಮ್ಮೆ ಚಿನ್ನ, ಬೆಳ್ಳಿ ಮತ್ತು ತಾಮ್ರ ನಾಣ್ಯಗಳಲ್ಲೂ ಸ್ವೀಕರಿಸಿದ. ರಾಜ್ಯದ ರೈತರಿಗೆ ತೊಂದರೆ ಮಾಡದಂತೆ ಆಜ್ಞೆ ವಿಧಿಸಿದ್ದ. ರೈತರ ನಡುವಿನ ಹೆಚ್ಚಿನ ಮಧ್ಯವರ್ತಿಗಳನ್ನು ಕಿತ್ತುಹಾಕಿದ್ದ. ಮಧ್ಯಮ ಸ್ವರೂಪದ ತೆರಿಗೆಯನ್ನು ವಿಧಿಸಿದ ಕಾರಣ ರೈತರು ನಿರಾಳತೆಯನ್ನು ಕಂಡಿದ್ದರು.

ಭೂಮಿಗೆ ಎಷ್ಟು ಬೀಜವನ್ನು ಬಿತ್ತಿದ್ದಾರೆ ಎಂಬುದರ ಮೇಲೆ ಫಲವತ್ತತೆ ಹಾಗೂ ತೆರಿಗೆಯನ್ನು ಅಳೆಯಲಾಗುತ್ತಿತ್ತು. ಖಂಡುಗ, ಕುಡು ಮತ್ತು ಸೇರು ಸಾಮಾನ್ಯ ಮಾಪಕಗಳಾಗಿದ್ದುವು. ಟಿಪ್ಪು ಬ್ರಾಹ್ಮಣರಿಗೆ ಬರೀ 1/4 ಭಾಗವನ್ನು ಮಾತ್ರ ತೆರಿಗೆಯೆಂದು ವಿಧಿಸಿದ್ದ. ತೆರಿಗೆ ವ್ಯವಸ್ಥೆಯಲ್ಲಿ ಟಿಪ್ಪು ತಂದ ಸುಧಾರಣೆಗಳು ಅದ್ಭುತವಾಗಿದ್ದುವು. ಕೆಲವು ಇತಿಹಾಸಕಾರರು ಇಂಗ್ಲೆಂಡಿನ ಅಂದಿನ ತೆರಿಗೆ ವ್ಯವಸ್ಥೆಗೆ ಹೋಲಿಸ ಟಿಪ್ಪುವಿನ ವ್ಯವಸ್ಥೆಯೇ ಅತ್ಯುತ್ತಮವೆಂದು ಅಭಿಪ್ರಾಯಪಟ್ಟಿದ್ದಾರೆ. ಆಗ ಇಂಗ್ಲೆಂಡ್ನಲ್ಲಿ ಉತ್ಪನ್ನದ 2/3 ಭಾಗ ರಾಜ್ಯಕ್ಕೆ ಮತ್ತು 1/3 ಭಾಗ ರೈತನಿಗಾದರೆ ಮೈಸೂರಿನಲ್ಲಿ ರಾಜ್ಯವು ಬರೀ 1/3 ಭಾಗವನ್ನು ಹೊಂದಿ 2/3 ಭಾಗವನ್ನು ರೈತನಿಗೆ ಬಿಟ್ಟುಕೊಡುತ್ತಿತ್ತು. ಟಿಪ್ಪು ರಾಗಿ, ಭತ್ತ, ಬಾಜ್ರಾ, ಬೇಳೆ, ಹುರುಳಿ, ಉದ್ದು, ಹೆಸರು, ಕಡಲೆ ಮತ್ತು ಕಬ್ಬು ಮುಂತಾದ ಆಹಾರ ಬೆಳೆಗಳ ಜತೆ ವಾಣಿಜ್ಯ ಅರಣ್ಯ ಬೆಳೆಗಳಾದ ಅಡಿಕೆ, ಮೆಣಸು, ದಾಲ್ಚಿನ್ನಿ, ತಂಬಾಕು ಹಾಗೂ ಗಂಧವನ್ನು ಬೆಳೆಸಲೂ ಸಹ ಪ್ರೋತ್ಸಾಹ ನೀಡಿದ್ದ. ಅನೇಕ ಕೆರೆ ಬಾವಿ ಕಾಲುವೆಗಳನ್ನು ಫ್ರೆಂಚ್ ಇಂಜಿನಿಯರ್ಗಳ ಸಹಾಯದಿಂದ ಪುನರ್ನಿರ್ಮಿಸಿ ಕೃಷಿಗೆ ಪೂರಕವಾಗಿಸಿದ್ದ. ಹೀಗೆ ಟಿಪ್ಪು ಕೃಷಿ ತೆರಿಗೆ ಮತ್ತು ಕೃಷಿ ವಿಧಾನದಲ್ಲಿ ಸಂಪೂರ್ಣವಾಗಿ ಆಧುನಿಕತೆಯ ಛಾಪನ್ನು ಮೂಡಿಸಿದ.

ಜರ್ನೀ ರ್ಫರಂ ಮದ್ರಾಸ್ ಥ್ರೂ ದಿ ಕಂಟ್ರೀಸ್ ಆಫ್ ಮೈಸೂರ್, ಕೆನರಾ ಆ್ಯಂಡ್ ಮಲಬಾರ್ ಎನ್ನುವ ಶಿರೋನಾಮೆಯಲ್ಲಿ 1807ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ನಿರ್ದೇಶಕ ಮಂಡಲಿಯ ಪ್ರಾಧಿಕಾರದಲ್ಲಿ ಪ್ರಕಟಿಸಿ ತನ್ನ ಕೆನರಾ, ಮೈಸೂರ್, ಮದ್ರಾಸ್, ಮಲಬಾರ್ ಪ್ರವಾಸದ ಅನುಭವಗಳನ್ನು ಹೇಳುತ್ತಾ ಟಿಪ್ಪುವಿನ ಆಧುನಿಕೀಕರಣ ಪ್ರವೃತ್ತಿಯ ಪರಿಣಾಮಗಳನ್ನು, 1800-01ರಲ್ಲಿ ಮಾಕ್ರ್ವೆಸ್ ವೆಲ್ಲೆಸ್ಲಿಗೆ ಸಲಹೆಗಾರನಾಗಿ ಬಂದ ಫ್ರಾನ್ಸಿಸ್ ಬುಕಾನನ್ ತುಂಬಾ ವಿವರವಾಗಿ ಮತ್ತು ಚೆನ್ನಾಗಿ ತಿಳಿಸುತ್ತಾನೆ. ಬುಕಾನನ್ ಟಿಪ್ಪುವಿನ ಆಧುನಿಕ ಶೈಲಿಯ ಶ್ರೀರಂಗಪಟ್ಟಣದ ಅರಮನೆ, ನಾಗರಿಕ ಆಡಳಿತದ ದಕ್ಷತೆ, ದೊಡ್ಡ ಖಟ್ಟೆ, ಪೇಪರ್, ಗಡಿಯಾರ, ಕಟ್ಲೇರಿ ಮತ್ತಿತರ ಯೂರೋಪಿಯನ್ ಮಾದರಿ ವಸ್ತುಗಳು ಟಿಪ್ಪು ಹೊಂದಿದ್ದ ಆಧುನಿಕತೆಯ ಮನೋಭಾವದ ಲಕ್ಷಣವೆನ್ನುತ್ತಾನೆ. ಫ್ರೆಂಚ್ ಕುಶಲಿಯಿಂದ ನಿರ್ಮಿತ ಪಿಸ್ತೂಲು, ಹರಿಯುವ ನೀರಿನ ಮೂಲಕ ಚಲಿಸುವ ಯಂತ್ರ, ನೀರಾವರಿಗೆ ಟಿಪ್ಪು ನಿರ್ಮಿಸಿದ ಕಾಲುವೆಗಳು ಮತ್ತು ಸುಧಾರಿತ ಹಗುರ ತೆರಿಗೆ ವ್ಯವಸ್ಥೆ ಎಲ್ಲವೂ ಕೂಡ ಟಿಪ್ಪು ಹೊಂದಿದ್ದ ಆಧುನಿಕತೆಯ ಲಕ್ಷಣವೆಂದು ಬುಕಾನನ್ ಉಲ್ಲೇಖಿಸುತ್ತಾನೆ.

ಹೀಗೆ ಮೇಲಿನ ನಾಲ್ಕು ಆಯಾಮಗಳಿಂದ ಟಿಪ್ಪು ಒಬ್ಬ ಆಧುನಿಕ ಮತ್ತು ಆಧುನಿಕ ಮೈಸೂರನ್ನು ನಿರ್ಮಿಸುವಲ್ಲಿ ತನ್ನದೇ ಆದ ಮಹತ್ವದ ಪಾತ್ರ ವಹಿಸಿದ್ದಾನೆ ಎಂಬುದನ್ನು ತಿಳಿಯಬಹುದು. ಇಲ್ಲಿ ಟಿಪ್ಪು ಯುಗಕ್ಕೆ ಎಷ್ಟು ಪುರೋಗಾಮಿತ್ವವನ್ನು ಹೊಂದಿದ್ದ ಎನ್ನುವುದು ಮುಖ್ಯವಾಗುತ್ತದೆಯೇ ಹೊರತು, ಆತ ಈಗಿನ ಹಾಗೆ ಸಂದರ್ಭವು ವ್ಯಾಖ್ಯಾನಿಸುವ ಹಾಗೆ ಆಧುನಿಕತೆಯ ಪರಿಕಲ್ಪನೆಯನ್ನು ಹೊಂದಿರಲಿಲ್ಲ ಎನ್ನುವುದು ಅರ್ಥಹೀನವಾಗುತ್ತದೆ. ಮಾನವ ಸಮಾಜದಲ್ಲಿ ಒಂದು ಆದರ್ಶವೆನ್ನುವುದು ಥಾಮಸ್ ಮೋರ್ ಯುಟೋಪಿಯಾದಂತೆಯೇ ಸರಿ. ಪ್ರವೃತ್ತಿಗಳು ಇರುವವರೆಗೆ ಮಾನವ ಆದರ್ಶವನ್ನು ತಲುಪುವುದು ಕಷ್ಟ. ಇದು ಎಲ್ಲಾ ತಥಾಕಥಿತ ಆದರ್ಶ ವ್ಯಕ್ತಿಯ ಹಾಗೂ ಮಹಾತ್ಮರ ಬದುಕಿನಲ್ಲೂ ಇರುವಂತಹ ಸತ್ಯ. ಹಾಗಿರುವಾಗ ಟಿಪ್ಪು, ಶಿವಾಜಿ, ಔರಂಗಜೇಬರಲ್ಲಿ ಇದನ್ನು ಯಾಕೆ ನಿರೀಕ್ಷಿಸಬೇಕು? ಅವರೆಲ್ಲರೂ ನಮ್ಮ ಹಾಗೆಯೇ ಪ್ರವೃತ್ತಿಗಳಲ್ಲಿ ಮಾನವರೇ. ಹೀಗಾದಾಗ ಒಬ್ಬ ವ್ಯಕ್ತಿಯ ರಚನಾತ್ಮಕ ಕಾರ್ಯಗಳೆಷ್ಟು ಎನ್ನುವುದನ್ನು ಮೆಲುಕುಹಾಕುವುದೇ ಸಮನ್ವಯದ ಸ್ವಸ್ಥ ಸಮಾಜದ ಆರೋಗ್ಯವನ್ನು ಕಾಯ್ದುಕೊಳ್ಳಲು ಇರುವ ಮಾರ್ಗರೂಪೀ ಔಷಧ. ಬದಲಾಗಿ ಇರುವ ಅಥವಾ ಇಲ್ಲದಿರುವ ತಥಾಕಥಿತ ಅಪರಿಪೂರ್ಣ ಅಥವಾ ದೋಷವೆನ್ನುವ ಕಪ್ಪುಚುಕ್ಕೆಯನ್ನು ಕೆದುಕುವುದರಿಂದ ಬಹುಮುಖೀ ಸಂಸ್ಕøತಿಯ ನಮ್ಮ ಸಮಾಜ ಕೆಟ್ಟುಹೋಗುತ್ತದೆ. ಭಾರತೀಯ ಚರಿತ್ರೆಯಲ್ಲಿ ಟಿಪ್ಪುವಿನಷ್ಟು ಆಧುನಿಕನೊಬ್ಬನನ್ನು ಕಾಣಲು ಸಾಧ್ಯವಿಲ್ಲ. ಅಂತಹ ಆಧುನಿಕತೆ ಮತ್ತು ಅದರ ಚಹರೆಗಳನ್ನು ಆತ ಅಷ್ಟು ಗಂಭೀರವಾಗಿ ಅನುಕರಿಸಿ ಅನುಸರಿಸಲು ಕಾರಣಗಳೂ ಕೂಡಾ ಇವೆ. ಮೈಸೂರಿನ ಆಡಳಿತವನ್ನು ಆತ ತಂದೆಯ ಮಾದರಿಯಲ್ಲಿ ನಡೆಸಲಿಲ್ಲ. ಅಂದರೆ ಹೈದರಾಲಿ ಮೈಸೂರನ್ನು ಅಲ್ಲಿನ ಅಧಿಕಾರವನ್ನು ತನ್ನ ಬಲದಿಂದ ಸಳೆದುಕೊಂಡರೂ ಕೂಡಾ ಮೊದಲಿನ ಮಹಾರಾಜರಿಗೆ ಸಾಂಕೇತಿಕವಾದ ಗೌರವವನ್ನು ತೋರಿಸಿದ್ದ. ಆದರೆ ಟಿಪ್ಪೂ ಮಾತ್ರ ಸಂಪೂರ್ಣ ಸ್ವತಂತ್ರತೆಯನ್ನು ಹಾಗೂ ಸಾರ್ವಭೌಮತೆಯನ್ನು ಮತ್ತು ಅರಸರಿಗೆ ಯಾವುದೇ ರೀತಿಯ ಗೌರವ ಕೊಡದ ಮತ್ತು ಮನ್ನಿಸದ ರಾಜ್ಯವನ್ನು ಸ್ಥಾಪಿಸದ್ದ. ಕಾರಣಕ್ಕಾಗಿ ಆತನ ಆಧುನಿಕವಾದ ಮನೋಭಾವ, ಆಲೋಚನೆ ಮತ್ತು ಆಡಳಿತದ ಮೂಲಕ ತನ್ನ ಆಡಳಿತವನ್ನು ನ್ಯಾಯಬಧ್ಧಗೊಳಿಸುವ ಅಥವಾ ಮಾನ್ಯತೀಕರಿಸುವ ಮಾಧ್ಯಮ ಮತ್ತು ಪ್ರಕ್ರಿಯೆಯೂ ಕೂಡಾ ಆಗಿತ್ತು.

***

 

 

 

 

 

 

 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ಸಿನಿಮಾ ಚರಿತ್ರೆ : ಸಮಾಜ, ಸಂಸ್ಕøತಿ ಮತ್ತು ರಾಜಕಾರಣ

ಕರ್ನಾಟಕದಲ್ಲಿ ಸೂಫಿಗಳು

ಚಾರಿತ್ರಿಕ ಕೃತಿಯ ಹಲವು ಓದಿನ ಸಾಧ್ಯತೆಗಳು: ಹಿಂದ್ ಸ್ವರಾಜ್ ಮಾದರಿ