ಕರ್ನಾಟಕದಲ್ಲಿ ಇಸ್ಲಾಂ

 

ಕರ್ನಾಟಕದಲ್ಲಿ ಇಸ್ಲಾಂ ಎನ್ನುವ ತಲೆಬರಹವು ಕರ್ನಾಟಕದಲ್ಲಿ ಸೂಫೀ ಪರಂಪರೆ ಎನ್ನುವ ತಲೆಬರಹದಷ್ಟು ಸಂಕೀರ್ಣತೆಯನ್ನೂ ಮತ್ತು ಸಮಸ್ಯೆಯನ್ನು ತಂದೊಡ್ಡುತ್ತಿದೆ. ಈಗಾಗಲೇ ಈ ಸಮಸ್ಯೆಯ ಚರ್ಚೆಯನ್ನು ಚರ್ಚಿಸಿದ ಕಾರಣ. ಪುನ: ಅದರ ಚರ್ಚೆ ಅಪ್ರಸ್ತುತ ಎನ್ನುವುದು ನನ್ನ ತಿಳುವಳಿಕೆ. ಆದರೂ ಕರ್ನಾಟಕದಲ್ಲಿ ಇಸ್ಲಾಂ ಪ್ರತಿನಿಧಿತವಾದ, ಬರವಣಿಗೆಗೆ ಒಳಪಟ್ಟ ಅಥವಾ ಆ ನೆಲೆಯಲ್ಲಿ ರಚನೆಗೊಂಡ ಕ್ರಮ ಮತ್ತು ಅದರ ಸಮಸ್ಯೆಯ ಬಗ್ಗೆ ತಕರಾರನ್ನು ಮಾತ್ರ ಇಲ್ಲಿ ಎತ್ತಬಹುದು. ಅದು ಕರ್ನಾಟಕದಲ್ಲಿ ಇಸ್ಲಾಂ ಚರಿತ್ರೆಯ ರಚನೆಯ ಸಂದರ್ಭ ಒದಗಿಬರುವ ರಾಜಕೀಯ ವಂಶ ಅಥವಾ ಡೈನಾಸ್ಟೀಯ ಕಥನ ಕೇಂದ್ರತೆ, ಅಂದರೆ ಕರ್ನಾಟಕದಲ್ಲಿ ಇಸ್ಲಾಂ ಎಂದ ತಕ್ಷಣ ಅದೊಂದು ರಾಜಕೀಯ ವಂಶ ಕೇಂದ್ರಿತ ಎಂದೆಣಿಸುವ ಮತ್ತು ಅದರ  ಸಮಾನಾಂತರವಾದ ಕಥನದಂತೆ ಸಾಗುವ ಕ್ರಮದಿಂದಾಗಿ, ಕರ್ನಾಟಕದಲ್ಲಿ ಅದು ಮುಖ್ಯವಾಗಿ ರಾಜಕೀಯ ಕಥನವೇ ಆಗಿವೆ. ಅದನ್ನು ಹೊರತುಪಡಿಸಿದ ಭೌತಿಕ, ಸಾಮಾಜಿಕ, ಸಾಂಸ್ಕøತಿಕ ಮತ್ತು ಜನಪದರ ಅಥವಾ ಜನಸಾಮಾನ್ಯರ  ಅನುಭವದ ನೆಲೆ ಮತ್ತು ಸಂದರ್ಭಕ್ಕೆ ಒದಗುವುದೇ ಇಲ್ಲ. ಈ ಕಾರಣದಿಂದ ಈ ರೀತಿಯ ಅನೇಕ ಕಥನಗಳು ಅತ್ಯಂತಿಕವಾಗಿ ಇಸ್ಲಾಂ ಆಳ್ವಿಕೆಯನ್ನು ಕೇಂದ್ರೀಕರಿಸುತ್ತವೆ. ಈ ಮೂಲಕ ಇಸ್ಲಾಂ ಅನ್ನು ಅತ್ಯಂತ ವೈವಿಧ್ಯಪೂರ್ಣವಾಗಿ ಮತ್ತು ಬೇರೆಯದೇ ಆದ ನೆಲೆಗಳಿಂದ ಅರ್ಥೈಸಿಕೊಳ್ಳುವ ಕ್ರಮಕ್ಕೆ ತಡೆಯೊಡ್ಡುತ್ತದೆ. ಬಹುಶ: ಈ ನೆಲೆಯ ಅಧ್ಯಾಯಗಳು ಕನ್ನಡದಲ್ಲಿ ಆಗಿರುವುದೇ ಕಡಿಮೆ.

ರಿಚರ್ಡ್ ಈಟರ್ನ್, ಸುಝಾನ್ ಬೈಲಿ ಅಂತವರ ರೀತಿಯ ಕೆಲವು ಅಧ್ಯಯನಗಳು ಇಂತಹ ಅತ್ಯಂತ ವಿರಳ ಮತ್ತು ಅನನ್ಯ ಅಧ್ಯಯನಗಳು ಆಗಿವೆ. ಹೆಚ್ಚಿನ ರಾಜಕೀಯ ಕಥನಗಳು ಇಸ್ಲಾಂನ ಚರ್ಚೆಯನ್ನು ಬಹಮನಿ ರಾಜವಂಶದ ಪ್ರಬುದ್ಧತೆಯ ಮತ್ತು ಅದರ ರಚನೆಯನ್ನು ಆಧರಿಸಿವೆ. ಆದರೆ ಅವುಗಳು ಪ್ರಭುತ್ವವನ್ನು ಹೊರತುಪಡಿಸಿದ ಆಯಾಮಗಳನ್ನು ದಕ್ಕಿಸಿಕೊಡುದಿಲ್ಲ. ರಾಜಕೀಯ ಚರಿತ್ರೆಯ ಸಂದರ್ಭದಲ್ಲೂ ಕೂಡಾ ಸ್ಟೇಟ್ ಫಾರ್ಮೇಶನ್ ಚರ್ಚೆಯನ್ನೂ ಕೂಡಾ ಎತ್ತಿಕೊಳ್ಳುವುದಿಲ್ಲ, ಈ ರಾಜನ ನಂತರ ಈತ, ಇವನ ನಂತರ ಆತ ಎನ್ನುವ ದಾಖಲೆಯನ್ನಷ್ಟೇ ಒದಗಿಸುತ್ತವೆ. ಅವು ಕ್ರಮೇಣ ಕರ್ನಾಟಕದಲ್ಲಿ ಇಸ್ಲಾಂ ಎನ್ನುವ ಕಥನವನ್ನು ಟಿಪ್ಪು ಸುಲ್ತಾನವರೆಗೆ ತಂದು ನಿಲ್ಲಿಸುತ್ತವೆ. ಇಂತಹ ಪ್ರಮುಖ ರಾಜಕೀಯ ಕಥನಗಳು ಚರಿತ್ರ ಶಾಸ್ತ್ರೀಯ ಬರವಣಿಗೆ ದೋಷದಂತೆ(ಹಿಸ್ಟೋರಿಯೋಗ್ರಫಿಕಲ್ ಎರರ್) ಕಾಣಿಸುತ್ತದೆ. ಇವುಗಳು ಹಿಸ್ಟೋರಿಯೋಗ್ರಫಿಯ ಹೊಸ ಸಾಧನಗಳು, ತಾತ್ವಿಕತೆ ಮತ್ತು ವಿವರಣೆಯನ್ನು ಒಳಗೊಂಡಿಲ್ಲ. ಇವುಗಳು ಸರಿಸುಮಾರು 1950ರ ದಶಕದ ಮಾದರಿಗಳು ಅಷ್ಟೇ. ಆದರೆ ನಾವಿಂದು ಹೊಸ ಬಗೆಯ ಮಾದರಿ ಮತ್ತು ಕಥನ ಕ್ರಮಗಳಲ್ಲಿ ಇದ್ದೇವೆ. ಇಂದು ಬಹಮನಿಯ ಇಂತಹ ಚಕ್ರವರ್ತಿಯ ಮುಂದಿನ ದೊರೆ, ನಂತರದ ದೊರೆ ಎನ್ನುವಷ್ಟರವರೆಗೆ ನಿಂತಿರುವ ಸಂದರ್ಭದಲ್ಲಿ ಅನೇಕ ಹೊಸ ಯೋಚನೆ, ಉದಾಹರಣೆಗೆ ಪ್ರಾಯ್ಡ್‍ನ ಸೈಕೋ ಅನಾಲಿಸಿಸ್ ಸಾಧನ ಹಾಗೂ ಅದರ ಮೂಲಕ ಹೊಸ ಆಲೋಚನೆ ಮತ್ತು ವ್ಯಾಖ್ಯಾನದ ಸಾಧ್ಯತೆಗಳನ್ನು ಕಾಣಬಹುದಾಗಿದೆ. ಇಂತಹ ಸಾಧನಗಳು ಹಿಟ್ಲರ್ ಎನ್ನುವ ರಾಜ, ಅಶೋಕ ಎನ್ನುವ ರಾಜ ಹೇಗೆ ರೂಪುಗೊಂಡ ? ಅವನ ಮನಸ್ಸು ಹೇಗಿತ್ತು ? ಮಾನಸಿಕ ನೆಲೆಗಳು ಪ್ರಭುತ್ವವನ್ನು, ಆಡಳಿತವನ್ನು ಆದೇಶವನ್ನು ಹೇಗೆ ಪ್ರಭಾವಿಸಿದ್ದುವು ? ಎನ್ನುವ ನೆಲೆಯ ಕುರಿತು ಚಿಂತನೆ ಮಾಡುತ್ತಿದೆ. ಉದಾಹರಣೆಗೆ ಅಶೋಕನ ಸಂದರ್ಭದಲ್ಲಿ ಧಮ್ಮದ ಪರಿಕಲ್ಪನೆ ಅಶೋಕನ ಸಾಮ್ರಾಜ್ಯ ವಿಸ್ತರಣೆ ಮತ್ತು ಸಾಮ್ರಾಜ್ಯದಲ್ಲಿನ ವೈವಿಧ್ಯತೆಯನ್ನು ಮೆಟ್ಟಿ ನಿಂತು ಏಕರೂಪವಾದ ಸಂಹಿತೆಯನ್ನು ರೂಪಿಸುವಲ್ಲಿ ಹೇಗೆ ಸಾಧ್ಯವಾಯಿತು ? ಇದರ ಮೂಲಕ ವಿಸ್ತಾರವಾದ ಮೌರ್ಯನ್ ಸಾಮ್ರಾಜ್ಯವನ್ನು ನಿಯಂತರಿಸಲು ಹೇಗೆ ಶಕ್ಯವಾಯಿತು ? ಎನ್ನುವ ನೆಲೆಯಲ್ಲಿ ವಿವರಣೆಗಳು ಗಮನ ಹರಿಸುತ್ತಿವೆ. ಪೋಸ್ಟ್ ಮಾಡರ್ನ್ ಚರಿತ್ರೆ ಪರಂಪರೆ ಮತ್ತು ಕಥನಗಳಲ್ಲಿ 50 ಅಥವಾ 60ರ ದಶಕದ ರಾಷ್ಟ್ರೀಯವಾದಿ ಬರವಣಿಗೆ ಕ್ರಮಗಳನ್ನು ಹಿಗ್ಗಾಮುಗ್ಗಾ ಜಾಡಿಸಿವೆÀ ಮತ್ತು ಮುರಿದುಕಟ್ಟಿವೆ ಮತ್ತು ಪುನ: ಮುರಿದಿವೆÉ. ಈ ನೆಲೆಯಲ್ಲಿ ಒಂದು ತರಹ ಚಾರಿತ್ರಿಕ ಕಥನಗಳು, ಸತ್ಯಗಳು ಚರಿತ್ರೆಯ ಅನೇಕ ತೀರ್ಮಾನಗಳು ಸಂವಾದಗಳ ರೀತಿಯಲ್ಲಿ ಒದಗಿವೆ. ಬಹುಶ: ಇಂತಹ ಒದಗುವಿಕೆ ಅತ್ಯಂತ ವೈವಿಧ್ಯತೆಯ ಚಾರಿತ್ರಿಕ ಸಾಧ್ಯತೆಗಳನ್ನು ಒದಗಿಸಿವೆ. ಇಸ್ಲಾಂ ಇನ್ ಕರ್ನಾಟಕ ಅಥವಾ ಕರ್ನಾಟಕದಲ್ಲಿ ಇಸ್ಲಾಂ ಎನ್ನುವ ಗ್ರಹಿಕೆ ಬಹುಶ: ಹೊಸ ರೀತಿಯಲ್ಲಿ ಚರ್ಚಿತವಾಗಬೇಕಾದ ಅಗತ್ಯತೆ ಇದೇ ಎಂದೇ ನಾವು ಈ ಸಂದರ್ಭದಲ್ಲಿ ತಿಳಿಯುತ್ತೇನೆ. ಕರ್ನಾಟಕದ ಮತ್ತು ಕನ್ನಡ ಚರಿತ್ರೆಯ ಬಗೆಗೆ ಬಂದಿರುವ ಅನೇಕ ಕೃತಿಗಳು ಮತ್ತು ಉಧ್ಧಾಮ ಪಂಡಿತರ ಮಹಾನ್ ಗ್ರಂಥಗಳು ಈ ರೀತಿ ಇಸ್ಲಾಂ ಅನ್ನು ಸಾಮಾಜಿಕ ಮತ್ತು ಸಾಂಸ್ಕøತಿಕ ಅನುಭವವಾಗಿ ಗ್ರಹಿಸುವ ನೆಲೆಯನ್ನು ಕಂಡುಕೊಂಡಿಲ್ಲ. ಹಾಗೆಯೇ ನೋಡುತ್ತಾ ಸಾಗಿದರೆ ಇಸ್ಲಾಂನ ರಾಜಕೀಯ ನೆಲೆಗಿಂತ ಅತ್ಯಂತ ಪ್ರಮುಖವಾಗಿರುವುದೇ ಕನ್ನಡದ ಸಂದರ್ಭದಲ್ಲಿ ಇಸ್ಲಾಮ್‍ನ ವ್ಯಾಪಾರಿ ವಹಿವಾಟು, ಆರ್ಥಿಕ ಹಾಗೂ ಸಾಂಸ್ಕøತಿಕ ಕೊಡುಕೊಳುಗೆ, ಸೌಹಾರ್ದತೆ ಮತ್ತು ವಿನಿಮಯಗಳು. ಇದು ಎಷ್ಟು ಪ್ರಮುಖ ಮತ್ತು ಮಹತ್ವದ್ದು ಎಂದರೆ ಉತ್ತರ ಭಾರತದಲ್ಲಿ ಇಸ್ಲಾಂ ಪ್ರವೇಶ ಕಾಣುವ ಹಲವು ದಶಕಗಳ ಮುಂಚೆಯೇ ಕನ್ನಡ ಕರಾವಳಿ ಮತ್ತು ಮಲಬಾರ್ ಕರಾವಳಿಯಲ್ಲಿ ವೈವಿಧ್ಯದ ಇಸ್ಲಾಮಿನ ಜತೆಗೆ ವ್ಯಾಪಾರ ಮತ್ತು ಸಾಂಸ್ಕøತಿಕ ವಿನಿಮಯ ಸ್ವರೂಪದಲ್ಲಿ ನೆಲೆಗೊಂಡಿತ್ತು. ಕ್ರಿಸ್ತ ಶಕ 8 ಮತ್ತು ಅದಕ್ಕಿಂತಲೂ ಮುಂಚೆ ತಾತ್ವಿಕ, ಧಾರ್ಮಿಕ ಮತ್ತು ಅನುಭಾವದ ನೆಲೆಯ ಇಸ್ಲಾಂ ಕನ್ನಡ ಮತ್ತು ಮಲಬಾರ್ ಕರಾವಳಿಯಲ್ಲಿ ಪ್ರತಿಷ್ಠಾಪಿತಗೊಂಡಿತು. ಉತ್ತರ ಭಾರತದಲ್ಲಿ ಇಸ್ಲಾಂ 8ನೇ ಶತಕದಲ್ಲಿ ಪ್ರವೇಶ ಪಡೆಯಿತಾದರೂ, ಕ್ರಿಸ್ತ ಶಕ 8ರ ಹೊತ್ತಿಗೆ ಕೊಚ್ಚಿನ್‍ನಲ್ಲಿ ಭಾರತದ ಮೊಟ್ಟ ಮೊದಲ ಮಸೀದಿ ನಿರ್ಮಾಣವಾಯಿತು. ಕನ್ನಡ ಕರಾವಳಿಯಲ್ಲಿ ಈ ಹೊತ್ತಿಗೇನೇ ಅತ್ಯಂತ ಸಾಂದ್ರವಾಗಿ ವ್ಯಾಪಾರ ಮತ್ತು ಸೂಫಿ ಸಂತರ ಭೌತಿಕ ಮತ್ತು ಅಭೌತಿಕ ವ್ಯಾಪಾರ ವಿನಿಮಯಗಳು ಸಾಧಿತವಾದುವು ಮತ್ತು ನೆಲೆಗೊಂಡವು. ಆದರೆ ಇಲ್ಲಿವರೆಗೆ ಬಂದಿರುವ ಕನ್ನಡ ಚರಿತ್ರೆ ಇದ್ಯಾವುದಕ್ಕೂ ಕೂಡಾ ಜಾಗ ನೀಡುವುದಿಲ್ಲ ಮತ್ತು ಪ್ರಮುಖವಾಗಿ ಪರಿಗಣಿಸುವುದಿಲ್ಲ. ಹೀಗಿರುವಾಗ ಕರ್ನಾಟಕದಲ್ಲಿ ಇಸ್ಲಾಂ ಎನ್ನುವ ಸಂದರ್ಭದ ಬಹಮನಿ ಕೇಂದ್ರಿತ, ಪ್ರಭುತ್ವ ಕೇಂದ್ರಿತ ಮತ್ತು ರಾಜಕೀಯ ಕಥನ ಕೇಂದ್ರಿತ ಕ್ರಮವನ್ನು ಸಂಪೂರ್ಣ ನಿರಾಕರಿಸುವ ಸಂದರ್ಭ ಈಗ ಇದೆ ಮತ್ತು ಚರಿತ್ರೆ ಹೊಸ ಗುರುತು, ಕಥನ, ಪ್ರಾತಿನಿಧ್ಯ ಮತ್ತು ಜರೂರುಗಳನ್ನು ಆಗ್ರಹಿಸುತ್ತಿದೆ. ಇಂತಹ ಅಧ್ಯಯನವನ್ನು ಹೊರತುಪಡಿಸಿದ ಕೆಲವು ಕನ್ನಡದಲ್ಲಿ ಇವೇ ಆದರೂ ಕೂಡ ಅವುಗಳು ತೀರಾ ಅತಿ ಎನ್ನಿಸುವ ಮನೋಭಾವದಿಂದ ಹೊರಬೇಕು ಅಷ್ಟೇ. ಇದರ ಜೊತೆಗೆ ತಮ್ಮ ಪೂರ್ವಾಗ್ರಹದ ನೆಲೆ ನಿಲುವುಗಳಿಂದ, ತಮ್ಮ ಮೂಗಿನ ನೇರದ ತರ್ಕದಿಂದ ಕೂಡ ವಿಮುಕ್ತವಾಗಬೇಕು. ಕನ್ನಡ ಮತ್ತು ಕರ್ನಾಟಕದ ಚರಿತ್ರೆಯ ಕೆಲವು ಚರಿತ್ರೆಯ ಪ್ರಯತ್ನಗಳಾದ ಹಂಪಿ ವಿಶ್ವವಿದ್ಯಾನಿಲಯದ ಚರಿತ್ರೆ ಸಂಪುಟವು ಕೂಡಾ ಇದಕ್ಕೆ ಹೊರತಲ್ಲ. ಸಂಪುಟದ ನಾಲ್ಕನೆಯ ಭಾಗವು ಪುನ: ಹಳೆಯ ಮಾದರಿಯನ್ನೇ ಅನುಸರಿಸುತ್ತಿದೆ. ಅದು ಇಸ್ಲಾಂ ಎನ್ನುವ ಸಮಗ್ರ ಅನುಭವವನ್ನು ಪುನ: ನಿರಾಕರಿಸಿದೆ. ಹಳೆಯ ತರ್ಕಗಳಿಗೆ ನೇತುಹಾಕಿಕೊಂಡಿವೆ, ಹಳೆಯ ಚರಿತ್ರೆಯ ರಚನೆಯ ಕ್ರಮದಿಂದ ಅದು ಹೊರತಾಗಿಲ್ಲ. ಬಹುಶ: ಈ ಸಂಪುಟಗಳ ಅತ್ಯಂತ ಸಮಸ್ಯೆ ಅಥವಾ ದೈನ್ಯವೆಂದು ಕರೆಯಬಹುದಾದ, ಹೊಸ ಪ್ರಶ್ನೆಗಳನ್ನೇ ಕೇಳದಿರುವುದಾಗಿದೆ. ಪ್ರಸ್ತುತ ಸಂಪುಟದ ಒಂದೇ ಒಂದು ವಿಶೇಷವೆಂದರೆ ಕರ್ನಾಟಕದ ಇಸ್ಲಾಂನ ಚರಿತ್ರೆಯನ್ನು ಒಂದನೇಯ ಅಧ್ಯಾಯದಿಂದ ಬದಲು ಎರಡನೇಯ ಅಧ್ಯಾಯದಿಂದ ಆರಂಭಿಸುತ್ತದೆ ಮತ್ತು ಪ್ರಥಮ ಅಧ್ಯಾಯ ಪ್ರವೇಶವೆಂದು ಹೆಸರು ಪಡೆದಿದೆ. ಆದರೂ ಇಂತಹ ಪ್ರವೇಶದ ವಿಶೇಷವು ಹೊಸ ತರ್ಕ, ಅನುಮಾನ, ಪ್ರಶ್ನೆ ಮತ್ತು ಸಾಧ್ಯತೆಗಳಲ್ಲವಾದ್ದರಿಂದ ಮತ್ತು ಈ ಕಾರಣದಿಂದ ಸಂಪುಟ ಸೊರಗುತ್ತದೆ. ಸಂಪುಟದಲ್ಲಿ ಮತ್ತೆ ಅದೇ ವಿಭಾಗೀಕರಣ, ಬಹುಮನಿಗಳ ಉದಯ, ಬೀದರ್ ಹಂತ, ಬಿಜಾಪುರದ ಆದಿಲ್ ಶಾಹೀಗಳ ಉದಯ, ಏಳಿಗೆ ಕಾರಣ, ಅಂತಿಮ ಹಂತ, ರಾಜ್ಯಾಡಳಿತ ನೀತಿ ಮತ್ತು ಬಿಜಾಪುರದ ಆಡಳಿತ, ಹೀಗೆ ಸುಮಾರು 9 ಅಧ್ಯಾಯಗಳು ರಾಜಕೀಯ ಚರಿತ್ರೆಗೋಸ್ಕರ ಹಾಗೂ 5 ಅಧ್ಯಾಯಗಳಲ್ಲಿ ಆರ್ಥಿಕ ಸ್ಥಿತಿಗತಿ, ಧಾರ್ಮಿಕ ಸ್ಥಿತಿಗತಿ, ಭಾಷೆ ಹಾಗೂ ಸಾಹಿತ್ಯ ಮತ್ತು ಕಲೆ ಹಾಗೂ ವಾಸ್ತುಶಿಲ್ಪ ಹೀಗೆ ಪ್ರತಿಯೊಂದಕ್ಕೂ ಒಂದೊಂದು ಅಧ್ಯಾಯ. ಜೊತೆಗೆ ಚಿತ್ತಾಕರ್ಷಕ ಚಿತ್ರಗಳು. ಉಳಿದಂತೆ ಮಾಹಿತಿ ವಿವರಣೆ ವಿನ್ಯಾಸಗಳೆಲ್ಲ ಹಳೆಯ ಮಾದರಿಯ ಮುಂದುವರಿಕೆಯಷ್ಟೇ. ಈ ಸಂಪುಟ ಇಸ್ಲಾಂನ ಅತ್ಯಂತ ಪ್ರಮುಖ ಪ್ರತಿರೋಧ, ಮಾದರಿ ಮತ್ತು ಮುಖಾಮುಖಿಯಾದ ಸೂಫೀ ಪರಂಪರೆಯನ್ನೇ ಅತ್ಯಂತ ಪ್ರಮುಖ ಎಂದು ಪರಿಗಣಿಸುವುದಿಲ್ಲ. ಇದು ರಿಚರ್ಡ್ ಈಟನ್ ಮತ್ತು ಸೂಝಾನ್ ಬೈಲಿ ಯೋಚನೆ ಅಧ್ಯಯನಗಳ ಹತ್ತಿರ ಕೂಡ ಸುಳಿಯುವುದಿಲ್ಲ. ತನ್ಮೂಲಕ ಚರಿತ್ರೆ ಮತ್ತು ಕರ್ನಾಟಕ ಚರಿತ್ರೆ ಸಂಪುಟ ಯಾವುದೇ ಚರ್ಚೆಯಲ್ಲಿ ಭಾಗವಹಿಸುವುದಿಲ್ಲ. ಕರ್ನಾಟಕದಲ್ಲಿ ಇಸ್ಲಾಂ ಸಂದರ್ಭದಲ್ಲಿ ಬಹುಶÀ ಅತ್ಯಂತ ಗಂಭೀರವಾಗಿ ಚರ್ಚಿಸಬೇಕಾದ ಸಂಗತಿಯೆಂದರೆ ಇಸ್ಲಾಂ ಮತ್ತು ಇದರ ಬಹುತ್ವ. ಔಪಚಾರಿಕವಾದ ಇಸ್ಲಾಮ್‍ನಿಂದ ಹಿಡಿದು ಸೂಫೀ ಪರಂಪರೆಯವರೆಗೆ ಮತ್ತು ಕರಾವಳಿಯ ಅತ್ಯಂತ ಪ್ರಸಿಧ್ಧ ಮತ್ತು ಜನಪ್ರಿಯ ದೈವವಾಗಿರುವ ಬೊಬ್ಬರ್ಯನವರೆಗೆ ಮತ್ತು ಅಂತಹ ಅನೇಕ ಪರಂಪರೆಯವರೆಗೆ ಇರುವ ಬಹುತ್ವವನ್ನು ವಿವರಿಸುವಕೊಳ್ಳುವ ಬಗೆ ಹೇಗೆ ? ಬೊಬ್ಬರ್ಯ ಅನ್ನುವ ಪರಂಪರೆಯೇ ವಿಶಿಷ್ಠ ಮತ್ತು ಸಂಕೀರ್ಣ. ಬೊಬ್ಬ ಬ್ಯಾರೀ ಎನ್ನುವ ಏಡನ್ ಪ್ರದೇಶದ ವ್ಯಾಪಾರಿ ಆತ. ಕನ್ನಡ ಮತ್ತು ಮಲಬಾರ್ ಕರಾವಳಿಯಲ್ಲಿ ಆತ ವ್ಯಾಪಾರ ಮಾಡುತ್ತಿದ್ದ. ವ್ಯಾಪಾರದ ಜತೆಗೆ ನಾಟಿವೈದ್ಯವನ್ನೂ ಕೂಡಾ ಆತ ಉಚಿತವಾಗಿ ರಾತ್ರಿ ತಂಗುವ ಸ್ಥಳಗಳಲ್ಲಿ ಮಾಡುತ್ತಿದ್ದ. ಆತ ಮದುವೆ ಆಗಿರಲಿಲ್ಲ, ಒಂದು ದಿನ ಸತ್ತ. ಕರಾವಳಿಯ ಜನ ಉಪಕಾರ ಸ್ಮರಣೆ ಮತ್ತು ಕೃತಜ್ನತೆಯಿಂದ ಆತನನ್ನು ದೈವತ್ವಕ್ಕೇರಿಸಿದರು, ಪೂಜಿಸಿದರು. ಈಗಲೂ ಕೂಡಾ ಬೊಬ್ಬರ್ಯನನ್ನು ಹೆಚ್ಚು ನಂಬುವವರು ಮುಸ್ಲಿಮೇತರರು! ಅಂದರೆ ಕರ್ನಾಟಕ ಎನ್ನುವ ಜಿಯೋಪೊಲಿಟಿಕ್ ಏಕರೂಪವಾಗಿಲ್ಲ. ಇದು ಹಲವು ಭೂಪ್ರದೇಶ, ಕಾಲದೇಶ, ಆಹಾರ, ವಿಹಾರ, ವಿಚಾರ, ಆಲೋಚನೆ ಮತ್ತು ನಂಬಿಕೆಯ ಕ್ರಮಗಳನ್ನು ಸೃಷ್ಟಿಸಿವೆ ಮತ್ತು ಅವುಗಳೆಲ್ಲದರಲ್ಲಿಯೂ ಕೂಡಾ ಮಥನ-ಮೈಥುನ ಮತ್ತು ಬೆರಕೆ ಕಲಬೆರಕೆ ಇದೆ. ಇಂತಹ ಸಂದರ್ಭದಲ್ಲಿ ಮತ್ತು ಇಂತಹ ರಚನೆಯ ಮೇರೆಯ ಕರ್ನಾಟಕ ಎನ್ನುವ ಅನುಭವದಲ್ಲಿ ಚಾರಿತ್ರಿಕವಾಗಿ ಒದಗಿರುವ ಇಸ್ಲಾಂ, ಒಂದು: ಇಸ್ಲಾಂ ಅರೇಬಿಯಾದ ರೀತಿಯ ಅನುಭವವಾಗಿಲ್ಲ. ಎರಡು: ಕನ್ನಡದೊಳಗೆನೇ ಇಸ್ಲಾಂ ಪ್ರದೇಶ ವಿಶಿಷ್ಠವಾದ ಅಭಿವ್ಯಕ್ತಿಯನ್ನು ಹೊಂದಿದೆ. ಈ ನೆಲೆಯಲ್ಲಿ ಕರಾವಳಿ ಇಸ್ಲಾಂ, ಮಲೆನಾಡಿನ ಇಸ್ಲಾಂ, ಮೈಸೂರು ಇಸ್ಲಾಂ, ಬಯಲುಸೀಮೆಯ ಇಸ್ಲಾಂ ಮತ್ತು ಇನ್ನೂ ಅನೇಕ ವೆರೈಟಿಯನ್ನು ರೂಪಿಸಿದೆ. ಸೂಕ್ಷ್ಮವಾಗಿ ನೋಡುವುದಾದರೆ ಇಂತಹ ವೆರೈಟಿಯ, ವೈವಿಧ್ಯತೆಯ ಹಿಂದೆ ಚಾರಿತ್ರಿಕ ಪ್ರಕ್ರಿಯೆಯು ಪ್ರಭಾವಿಯಾಗಿ ಮತ್ತು ಗಂಭೀರವಾಗಿ ಪರಿಣಾಮವನ್ನು ಉಂಟುಮಾಡಿದೆ. ಇಂತಹ ವಿವೇಚನೆ ಎಷ್ಟು ಪ್ರಮುಖವೆಂದರೆ, ಇವುಗಳ ಮೂಲಕವೇ ಬಹುಶ: ಕರಾವಳಿಯ ಸೂಫಿ ಮತ್ತು ಇಸ್ಲಾಂ ಮತ್ತು ಉತ್ತರದ ಬಯಲುಸೀಮೆಯ ಇಸ್ಲಾಂ ಮತ್ತು ಸೂಫಿ ನಡುವಿನ ವ್ಯತ್ಯಾಸ ವೈ-ದೃಶ್ಯಗಳು ಮತ್ತು ಅವುಗಳ ಮುಖಾಂತರ ಪ್ರಥಕ್ಕರಣ ಸಾಧ್ಯವಾಗುವುದು. ಇಂತಹ ಸೂಕ್ಷ್ಮತೆಗಳು ಇಲ್ಲದಿದ್ದರೆ ಇಸ್ಲಾಂ ಆಗಲೀ ಅಥವಾ ಇನ್ನೊಂದು ಯಾವುದೋ ವಿಚಾರವಾಗಲೀ ಗ್ರಹಿಕೆಗೆ ಸಿಗಲಾರದು. ಇದು ಇಸ್ಲಾಂ ಮತ್ತು ಅದು ಒಳಗೊಂಡಿರುವ ಸೋಷಿಯಲ್ ಫಾರ್ಮೇಷನ್ ಬಗೆಗೆ ಭೌತವಾದಿ ವಿವರಣೆಯನ್ನು ಕೂಡ ಒದಗಿಸುತ್ತದೆ. ಅಂದರೆ ಉದಾಹರಣೆಗೆ ಇಂತಹ ವಿವರಣೆಯಿಂದ ಸೂಫಿ ಪರಂಪರೆಯು ಮುಖ್ಯವಾಹಿನಿ ಮತ್ತು ರಷ್ಟಿಕ್ ನೆಲೆಯಲ್ಲಿ ಕಾಣಿಸಿಕೊಳ್ಳುತ್ತಾ ಇರುವ ಸಂದರ್ಭದಲ್ಲಿ ಅವುಗಳನ್ನು ವಿವೇಚನೆ ಇಲ್ಲದೆ ಬರಿಯ ಅನುಭಾವವೆಂದು ಕರೆಯಬಹುದಾದ ಕೃತಕ ಸಾಧ್ಯತೆಗಳನ್ನು ಕೂಡ ನಿರಾಕರಿಸುತ್ತದೆ. ಕರ್ನಾಟಕದಲ್ಲಿ ಇಸ್ಲಾಂ ಸೇರಿದಂತೆ ಯಾವುದೇ ಚಾರಿತ್ರಿಕ ಪ್ರಕ್ರಿಯೆಗಳು ಹುಟ್ಟುವ ಭೌತಿಕ ಪರಿವೇಶವನ್ನು ಇದು ವಿಶಿಷ್ಠವಾಗಿ ವಿವರಿಸುತ್ತದೆ. ಚರಿತ್ರಕಾರ ಅಥವಾ ಚರಿತ್ರೆಯ ಅಭ್ಯಾಸಿಯೊಬ್ಬ ಅತ್ಯಂತ ಸಮಗ್ರವಾದ ನೆಲೆಯಲ್ಲಿ ಚರಿತ್ರೆ ನಿರ್ದಿಷ್ಠ ಪಡಿಸಿದ ಮೆತಡಲಾಜಿಕಲ್ ಸ್ವರೂಪದ ಪ್ರಶ್ನೆಗಳನ್ನು ಎತ್ತುತ್ತದೆ. ಈ ನೆಲೆಯಲ್ಲಿ ಅದು ಸಾಹಿತ್ಯದ ಅಭ್ಯಾಸಿಯೊಬ್ಬ ಸೂಫಿಯನ್ನು ಅನುಭಾವವೆಂದು ನಿಚ್ಚಳವಾಗಿ ಕರೆಯಬಹುದಾದ, ಬ್ರ್ಯಾಂಡ್‍ಮಾಡಬಹುದಾದ ಮತ್ತು ಕಂಪಾರ್ಟ್‍ಮೆಂಟಲೈಝ್‍ಗೊಳಿಸಬಹುದಾದ ನೆಲೆಗಳಿಗಿಂತ ವಿಭಿನ್ನವಾದ ಒಳನೋಟ ದೃಷ್ಠಿಗಳನ್ನು ನೀಡುತ್ತದೆ. ಇದು ಸಾಹಿತ್ಯ ಅಭ್ಯಾಸದ ಕ್ರಮದ ಅನುವರ್ತನೆಗೂ ಭಂಗ ತರುತ್ತದೆ. ದುರಂತವೆಂದರೆ ಕನ್ನಡದ ಸಂದರ್ಭದಲ್ಲಿ ನಡೆದ ಅನೇಕ ಚರಿತ್ರೆ ಅಧ್ಯಯನಗಳು ಸಾಹಿತ್ಯದ ನೆಲೆಯಲ್ಲಿ ಇರುವಂತಹದ್ದಾಗಿದೆ ಮತ್ತು ಅನುಸರಿತಗೊಂಡಿರುವುದಾಗಿದೆ ಮತ್ತು ಕನ್ನಡದಲ್ಲಿ ಇಸ್ಲಾಂ ಸೇರಿದಂತೆ ಅನೇಕ ಚರಿತ್ರೆಯ ವಿಷಯಗಳು ಚರ್ಚೆಗೆ ಬಂದಾಗ ಚರಿತ್ರೆಯನ್ನು ಹೊರತುಪಡಿಸಿದ ಆಖ್ಯಾನ ವಿವರಣೆಗಳು ಮುನ್ನೆಲೆಗೆ ಬರುವುದು ಕೂಡಾ ಈ ನೆಲೆಯಿಂದಲೇನೇ.

ಕೊನೆಯದಾಗಿ ಕರ್ನಾಟಕದಲ್ಲಿ ಇಸ್ಲಾಂ ಅನ್ನು ವಸ್ತು ನಿಷ್ಠವಾಗಿ ಚಿತ್ರಿಸಲು ಸಾಧ್ಯವೇ? ಎಂಬ ಪ್ರಶ್ನೆ. ಇದರ ಜೊತೆ ಜೊತೆಯಲ್ಲಿ, ಇಸ್ಲಾಂ ಇನ್ ಕರ್ನಾಟಕ ಅಥವಾ ಕರ್ನಾಟಕದಲ್ಲಿ ಇಸ್ಲಾಂ ಎನ್ನುವ ರಚನೆಯ ಹಿಂದೆ ಇರುವ ಅಗತ್ಯತೆ ಮತ್ತು ಸಮಕಾಲೀನತೆಯ ಚರ್ಚೆಯು ಬಹುಮುಖ್ಯವಾಗುತ್ತದೆ. ಇದರ ಜೊತೆಯಲ್ಲಿ ಜಾಗತೀಕರಣೋತ್ತರ ಸಂದರ್ಭ ಮತ್ತು ಐಡೆಂಟಿಟಿ ಪಾಲಿಟಿಕ್ಸ್ ಇಸ್ಲಾಮ್ ಅನ್ನು ಹೇಗೆ ಕಟ್ಟಿಕೊಡುತ್ತಿದೆ ? ಮತ್ತು ಅದರ ಜರೂರುಗಳೇನು ? ಎನ್ನುವ ಅಂಶವು ಬಹಳ ಪ್ರಾಮುಖ್ಯವಾಗುತ್ತದೆ. ಜಾಗತೀಕರಣವೂ ಕೂಡ ಬಹುತ್ವ ಮತ್ತು ವೈವಿಧ್ಯತೆಯ ಅನುಭವವಾಗಿ ಇಸ್ಲಾಂ ಅನ್ನು ಸಪಾಟಾಗಿ ಒಂದೇ ಬಣ್ಣದಿಂದ ಗ್ರಹಿಸುತ್ತದೆ. ಅದು ಹೆಚ್ಚು ಕಡಿಮೆ ವೈವಿಧ್ಯತೆಯನ್ನು ಮರೆಸಿ ಇಸ್ಲಾಮ್ ಅನ್ನು ರೊಮಿಲಾ ಥಾಪರ್ ಹೇಳುವ ಹಾಗೆ ಒಂದು ಖ್ವಾಮ್ ಅನ್ನಾಗಿ ರೂಪಿಸುತ್ತಿದೆಯೇ? ಇಂತಹ ರೂಪಣೆ ಮತ್ತು ನಿರೂಪಣೆಗೆ ಚರಿತ್ರೆಯು ಎಷ್ಟು ದೇಣಿಗೆಯನ್ನು ನೀಡುತ್ತದೆ ? ಅಂದರೆ ಚಾರಿತ್ರಿಕ ಇಸ್ಲಾಂನ ಸಮಕಾಲೀನ ಅಗತ್ಯತೆ ಮತ್ತು ಮರುನಿರೂಪಣೆಗಳು ಹೇಗೆ ಒದಗಿ ಬರುತ್ತವೆ ? ಎನ್ನುವುದು ಕೂಡ ತೀರಾ ಮುಖ್ಯವಾಗಿದೆ.

ವಸ್ತುನಿಷ್ಠವಾಗಿ ಕರ್ನಾಟಕದ ಇಸ್ಲಾಮ್ ಅನ್ನು ರಚಿಸಬಹುದೇ? ಈ ವಸ್ತುನಿಷ್ಠತೆ ಎನ್ನುವುದೇ ಅತ್ಯಂತ ಸಂಕೀರ್ಣ ಪದ ಮತ್ತು ಅನುಭವ. ಸತ್ಯ, ಚಾರಿತ್ರಿಕ ಸತ್ಯ, ಹೇಗೆ ಆತ್ಯಂತಿಕೆ ಹೊಂದಿಲ್ಲವೋ ವಸ್ತು ನಿಷ್ಠತೆಯೂ ಕೂಡಾ. ಈ ನೆಲೆಯಲ್ಲಿ ವಸ್ತುನಿಷ್ಠವಾದ ಚರಿತ್ರೆಯ ರಚನೆ ಸಾಧ್ಯವಾಗುವುದಿಲ್ಲ. ಚರಿತ್ರೆ ಎನ್ನುವುದೇ ಒಂದು ನಿರೂಪಣೆ. ಗತವನ್ನು ಯಥಾವತ್ತಾಗಿ ರಚಿಸಲು ಸಾಧ್ಯವಿಲ್ಲ. ಇಂತಹ ನಿರೂಪಣೆ ನಿರೂಪಿಸುವ ವ್ಯಕ್ತಿಯೊಬ್ಬನ ಹಿನ್ನೆಲೆ, ತರಬೇತಿ, ಓದು, ಐಡಿಯಾಲಜಿ ಮತ್ತು ಹೊಸ ಟೂಲ್ ಅಥವಾ ಸಾಧನಗಳನ್ನು ಬಳಸುವ ಕ್ರಮದಲ್ಲಿ ಇರುತ್ತವೆ. ಎಷ್ಟೇ ವಸ್ತುನಿಷ್ಠವಾದರೂ ಕೂಡಾ ಸಂಪೂರ್ಣ ಆತ ಮೇಲಿನ ಅಂಶಗಳಿಂದ ಹೊರತಾಗಿ ಇರುವುದು ಸಾಧ್ಯವಿಲ್ಲ. ಕೆಲವೊಮ್ಮೆ ಸಂಶೋಧಕನೊಬ್ಬನ ಒಪ್ಪಿತ ಸಿದ್ದಾಂತ, ಐಡಿಯಾಲಜಿಕಲ್ ಟೂಲ್‍ಗಳು ಮತ್ತು ನಿಲುವುಗಳೇ ಸಂಶೋಧನೆಯಲ್ಲಿ ಆತನಿಗೆ ತೊಡಕನ್ನು ಹಾಗೂ ಮಿತಿಯನ್ನು ತಂದೊಡ್ಡಬಹುದು. ಕನ್ನಡದಲ್ಲಿ ಮತ್ತು ಕನ್ನಡದ ಸಂದರ್ಭದಲ್ಲಿ ಇಸ್ಲಾಂನ ಅಧ್ಯಯನ ಈ ರೀತಿಯಾಗಿ ನಡೆದಿರುವುದಕ್ಕೆ ಹೆಚ್ಚಿನ ನಿದರ್ಶನಗಳು ಇಲ್ಲ. ಆರಂಭದ ರಾಷ್ಟ್ರೀಯವಾದಿ ಬರಹಗಾರರು ಸಾಮ್ರಾಜ್ಯಶಾಹೀ ಬರಹಗಾರರ ನಿಲುವುಗಳನ್ನೇ ತಮಗೆ ಅನುಗುಣವಾಗಿ ಪ್ರಕಟಪಡಿಸಿದರು, ಮರುವ್ಯಕ್ತಗೊಳಿಸಿದರು.

ಸಾಮ್ರಾಜ್ಯಶಾಹೀ ಬರಹಗಾರರ ನಿಲುವುಗಳನ್ನೇ ತಮಗೆ ಅನುಗುಣವಾಗಿ ಪ್ರಕಟಪಡಿಸಿದರು. ಅದರ ಫಲವಾಗಿ ಮೂಡಿದ ಒಂದು ಬಹುಮುಖ್ಯ ಧೋರಣೆಯೆಂದರೆ ಕರ್ನಾಟಕದ ವೈವಿಧ್ಯವಾದ ಇಸ್ಲಾಂ ಎನ್ನುವ ಅನುಭವದ ಬಗೆಗಿನ ಪೂರ್ವಗ್ರಹ ಮತ್ತು ನಿರಾಕರಣೆ. ಈ ಸಲುವಾಗಿ ರಾಷ್ಟ್ರೀಯವಾದಿ ಬರಹಗಳು ಇಸ್ಲಾಂ ಮತ್ತು ಅದರ ಅನುಭವವನ್ನು ನಿಷೇಧಾತ್ಮಕ ನೆಲೆಯಲ್ಲಿ ಅಭಿವ್ಯಕ್ತಿಸಿದರು ಮತ್ತು ಮಧ್ಯಯುಗೀನ ಅಥವಾ ಕರ್ನಾಟಕವನ್ನು ಇಸ್ಲಾಂ ಪ್ರವೇಶಿಸಿದ ಆರಂಭ ಮತ್ತು ಮಧ್ಯಕಾಲವನ್ನು ಕರ್ನಾಟಕದಲ್ಲಿ ಕೂಡ ಕಗ್ಗತ್ತಲಿನ ಮತ್ತು ಅಂಧಕಾರದ ಯುಗ ಎನ್ನುವ ರೀತಿಯಲ್ಲಿ ಪ್ರಕಟಪಡಿಸಲಾಯಿತು. ಕರ್ನಾಟಕದ ಬಹುತೇಕ ದೇಗುಲಗಳು ಮತ್ತು ಹಿಂದೂ ಯಾತ್ರಾ ಸ್ಥಳಗಳ ಧ್ವಂಸ ಮತ್ತು ಸಂಹಾರಕ್ಕೆಂದೇ ಬಂದವರೆಂದು ಇಸ್ಲಾಂ ಅನ್ನು ಮತ್ತು ಇಸ್ಲಾಮ್ ಸಮುದಾಯವನ್ನು ಜರಿಯಲಾಯಿತು. ವಿಜಯನಗರವಂತೂ ಸಂಪೂರ್ಣ ನಾಶವಾಗಿದ್ದೇ ಇಸ್ಲಾಂನ ಧಾಳಿಯಿಂದ ಎನ್ನುವ ರೀತಿಯ ಕಥನಗಳು ಚಲಾವಣೆಗೆ ಬಂದವು. ಈ ರೀತಿಯ ಕಥನ ಮತ್ತು ವಾದಗಳಿಗೆ ಪೂರಕವಾಗಿ ಕನ್ನಡ ಚರಿತ್ರೆಯನ್ನು ರಚಿಸಿದ ಅನೇಕ ಮಹಾನುಭಾವರು ಸ್ವಲ್ಪವೂ ತರ್ಕ, ವೈಚಾರಿಕತೆ, ಪ್ರಶ್ನೆ ಮತ್ತು ಅನುಮಾನಗಳನ್ನು ವ್ಯಕ್ತಪಡಿಸಲಿಲ್ಲ ಓದು ಮತ್ತು ಬರವಣಿಗೆಯಲ್ಲಿ. ಕರ್ನಾಟಕ ಚರಿತ್ರೆಯ ಪ್ರಸಿದ್ಧ ಇತಿಹಾಸಕಾರರು ಒಬ್ಬರು ತಮ್ಮ ಚರಿತ್ರೆಯ ಪುಸ್ತಕದಲ್ಲಿ ಇಸ್ಲಾಂನಿಂದ ಉಂಟಾದ ವಿಜಯನಗರದ ಭಂಜನೆಯನ್ನು ಆಮೂಲಾಗ್ರವಾಗಿ ವಿವರಿಸಿ ಸಾವಿನ ತನಕವೂ ಕೂಡ ತಮ್ಮ ತೀರ್ಮಾನಗಳಿಗೆ ಬದ್ಧರಾಗಿದ್ದರು. ಅವರಲ್ಲಿ ವಿಜಯನಗರದಲ್ಲಿ ಇದ್ದ ಶೈವ ವೈಷ್ಣವ ಸಂಘರ್ಷವನ್ನು ಮತ್ತು ಇದರ ಫಲವಾಗಿ ಉಂಟಾದ ವೈಷ್ಣವ ಮಂದಿರಗಳ ನಾಶ ಮುಂತಾದ ವಿವರಣೆಂiÀiನ್ನು ನಿರೀಕ್ಷಿಸಲು ಸಾಧ್ಯವೇ ಆಗಲಿಲ್ಲ. ಪುನ: ಪುನ: ಇಂತಹ ಕೋಮುವಾದಿ ನಿರೂಪಣೆ ಮತ್ತು ಕರ್ನಾಟಕ ಇತಿಹಾಸ ಲೇಖನ ಕ್ರಮ ಮುಂದುವರಿಯಿತು. ಬಹುಶ: ಇಂತಹ ಕ್ರಮಗಳಿಂದÀ ಹೊರಬರಬೇಕಾದ ಅನಿವಾರ್ಯತೆಯ ಕಾಲದಲ್ಲಿ ನಾವಿಂದು ಇದ್ದೇವೆ. ಬಹುಶ: ಇಂತಹ ಅನಿವಾರ್ಯತೆ ಮತ್ತು ಜವಾಬ್ದಾರಿ ಚರಿತ್ರೆ ಲೇಖನದ ಜವಾಬ್ದಾರಿಯೂ ಕೂಡಾ ಹೌದು.

ಕರ್ನಾಟಕದಲ್ಲಿ ಇಸ್ಲಾಂ ಎನ್ನುವ ಅನುಭವವನ್ನು ಹೊಸ ವಿವೇಚನೆ ಮತ್ತು ವೈಚಾರಿಕತೆಯೊಂದಿಗೆ ನಿರೂಪಿಸಬೇಕಾದ ಅಗತ್ಯವಿದೆ. ಈಗಾಗಲೇ ಹೇಳಿದ ಹಾಗೆ ಜಾಗತೀಕರಣ ಸಂದರ್ಭದ ಐಡೆಂಟಿಟಿ ಪಾಲಿಟಿಕ್ಸ್ ಮತ್ತದು ರೂಪಿಸಿದ ಕ್ಯಾಪಿಟಲ್ ಜೀವನಾನುಭವದ ಮತ್ತು ಅದರ ಮೂಲಕ ಎಲ್ಲವನ್ನೂ ಏಕಶಿಲೀಯಗೊಳಿಸುವ ಸಾಂಸ್ಕøತಿಕ ಅಪಾಯ ಮತ್ತು ಅದರದೇ ಉಪ-ಉತ್ಪನ್ನವಾದ ಕೋಮುವಾದ ಮತ್ತು ಅದರ ನಾನಾ ಅವತಾರಗಳನ್ನು ಬಹುಶ: ಸರಿಯಾಗಿ ನಿರೂಪಿಸುವ ಕ್ರಮವೆಂದರೆ ಕರ್ನಾಟಕದಲ್ಲಿ ಇಸ್ಲಾಂ ಚಾರಿತ್ರಿಕವಾಗಿ ಹೇಗೆ ಬೆಳೆಯಿತು ? ಎನ್ನುವ ಚರಿತ್ರೆ ಒದಗಿಸುವ ಮೆಥಡಲಾಜಿಕಲ್ ವಿವರಣೆ, ಬಹುಶ: ಇಂತಹ ಚರಿತ್ರೆ ರೊಮಿಲಾ ಥಾಪರ್ ಹೇಳುವ ಹಾಗೆ, ‘ಚರಿತ್ರೆಯಲ್ಲ ಬದಲು ವರ್ತಮಾನ ಎನ್ನುವ ನೆಲೆಯಲ್ಲಿ ಭಾರತದಂತೆ ಕರ್ನಾಟಕದಲ್ಲಿ ಕೂಡಾ ಇಸ್ಲಾಂ ಒಂದು ಕೋಮಿನ (ಖ್ವಾಮ್) ಸ್ವರೂಪ ಪಡೆದಿರುವುದು ಮತ್ತು ಅದರ ಮೇಲಿನ ಪೂರ್ವಾಗ್ರಹಕ್ಕೆ ಹಾಗೂ ಅದಕ್ಕೆ ಅದರದೇ ಆದ ಅಂಟಿಕೊಡಿರುವ ಸಂಲಗ್ನೀಯತೆಯ ರಾಜಕಾರಣವನ್ನು ವಿವರಿಸಲೂ ಸಾಧ್ಯವಾಗುತ್ತದೆ. ಬಹುಶಃ ಇಂತಹ ಅನುಭವ ಕರ್ನಾಟಕದ ಇಸ್ಲಾಂ ಏಕರೂಪೀ ಇಸ್ಲಾಂ ಅಲ್ಲ ಮತ್ತು ಅದು ಸೂಫಿ ಅನುಭಾವೀ ಪರಂಪರೆ, ಅದರಲ್ಲೂ ಹಲವಾರು ಶಾಖೆ ಅಥವಾ ಸಿಲ್‍ಸಿಲಾ ಸ್ವರೂಪದ್ದು ಎನ್ನುವುದನ್ನು ಅರ್ಥೈಸಲು ಕಷ್ಟವಾಗಿಸುತ್ತದೆ. ಬಹುಶ: ಭಾರತದ ಮತ್ತು ಕರ್ನಾಟಕದ ಸಂದÀರ್ಭದಲ್ಲಿ ಇಂತಹ ಬಹುತ್ವಗಳ ಅರಿವನ್ನು ಮಾಡಿಸಿಕೊಡುವ ಮತ್ತು ಅದರ ಚಾರಿತ್ರಿಕ ಪ್ರಕ್ರಿಯೆಯನ್ನು ಮನಗಾಣಿಸುವ ಜವಾಬ್ದಾರಿ ಬಹುಮುಖ್ಯ. ಇಂತಹ ಜವಾಬ್ದಾರಿ ಮತ್ತು ಕಾರ್ಯ ಅತ್ಯಂತ ವಿಷಮ ಸ್ವರೂಪದ ಕೋಮುವಾದವನ್ನೂ ಕೂಡಾ ಉತ್ತರಿಸಲು ಸಾಧ್ಯವಾಗಿಸುತ್ತದೆ. ಉದಾಹರಣೆಗೆ ಬಾಬಬುಡಾನಗಿರಿಯ ಇಡಿಯ ಪ್ರಕರಣವನ್ನು ಅರ್ಥ ಮಾಡಿಕೊಂಡು ಸಹಬಾಳ್ವೆಯ ಹೊಸ ವರ್ತಮಾನ ರೂಪುಗೊಳ್ಳಬೇಕಾದರೆ ಬಾಬಾ ಬುಡಾನಗಿರಿ ಸೇರಿದಂತೆ ಕರ್ನಾಟಕದ ಹತ್ತು ಹಲವು ವೈವಿಧ್ಯಪೂರ್ಣ ಇಸ್ಲಾಂನ ಸಾಂಸ್ಕøತಿಕ ಪರಂಪರೆಯನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಇಂತಹ, ಚರಿತ್ರೆಯ ಯಾವುದೋ ಒಂದು ವಸ್ತು ವಿಷಯ ವರ್ತಮಾನದಲ್ಲಿ ಪೊಲಿಟಿಕಲ್ ಐಡೆಂಟಿಟಿಯಾಗಿ ವಿಷಮತೆಯನ್ನು ಸಾಧಿಸುತ್ತದೆ ಎನ್ನುವ ನೆಲೆಯನ್ನೂ ಕೂಡಾ ಇದರಿಂದ ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ. ಬಹುಶ: ಕರ್ನಾಟಕದಲ್ಲಿ ಇಂದು ನಮ್ಮೆದುರು ಇರುವ ಅ-ಸಹಬಾಳ್ವೆ, ವಿಷಮತೆ ಮತ್ತು ಕೋಮುವಾದ ಏರ್ಪಟ್ಟಿರುವುದೇ ಕರ್ನಾಟಕದ ಇಸ್ಲಾಂ ಅನ್ನು ಮತ್ತು ಅದರ ಬಹು ಸಂಪ್ರದಾಯಗಳು ಹಾಗೂ ಅದರ ಚಾರಿತ್ರಿಕ ಬೆಳವಣಿಗೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳದಿರುವ ಮತ್ತು ತಿಳಿಹೇಳದಿರುವ  ಕ್ರಮದಿಂದಾಗಿ ಎಂದೇ ನನ್ನ ಅಭಿಪ್ರಾಯ.

ಇಂದು ಸಂಪೂರ್ಣ ಕೇಸರಿ ಬಣ್ಣದಿಂದ ಅಥವಾ ಬರೀ ಹಸಿರು ಪತಾಕೆಗಳಿಂದ ಆವೃತಗೊಂಡು ಧ್ರುವೀಕರಣಗೊಂಡು ನಿಂತಿರುವ ಕರಾವಳಿ ಕರ್ನಾಟಕ ಹಿಂದೊಮ್ಮೆ ಸೂಫಿ ಸಂತರುಗಳ ಮತ್ತು ಸಮಕಾಲೀನ ಸಾಮಾಜಿಕರ ನಡುವೆ ಸಾಂಗತ್ಯಗೊಂಡಿದ್ದ ಸ್ವರ್ಗವಾಗಿತ್ತು ಎನ್ನುವುದನ್ನು ಕಲ್ಪಿಸಲು ತಿಳಿದುಕೊಳ್ಳಲು ಸಾಧ್ಯವೇ? ಬಹುಶ: ಇಂದು ಅಂತಹ ಒಂದು ಸಾಧ್ಯತೆಯ ಮತ್ತು ಸೃಜನಶೀಲತೆಯ ಪರಿಕ್ರಮವನ್ನು ಕೂಡಾ ನಾವು ಸಾಧಿಸಲಾಗದ ಮಾತು, ಕೃತಿ, ಸಂವಾದ ಮತ್ತು ಸಾಂಗತ್ಯ ಸೋತ ಸ್ಥಿತಿಯಲ್ಲಿ ಇದ್ದೇವೆ. ಕರಾವಳಿ ಸೇರಿದಂತೆ ಕನ್ನಡದ ಸಹಬಾಳ್ವೆ, ಸೌಹಾರ್ದ ಮತ್ತು ಅಭಿವ್ಯಕ್ತಿ ಸೋತಿದೆ. ಇಂತಹ ಸೋಲು ಬರೀ ಸಮುದಾಯದ ಸೋಲಲ್ಲ, ಬದಲು ಸಮುದಾಯವೊಂದು ಚರಿತ್ರೆಯನ್ನು ಮತ್ತು ಚಾರಿತ್ರಿಕ ಪ್ರಕ್ರಿಯೆಗಳನ್ನು ತಿಳಿದುಕೊಳ್ಳಲು ಹಾಗೂ ಅರ್ಥೈಸಿಕೊಳ್ಳಲು ಮರೆತು, ಉಪೇಕ್ಷಿಸಿ ಮತ್ತು ತಪ್ಪು ತಿಳಿದುಕೊಂಡ ಕ್ರಮದ ಭಾಗವಾಗಿಯೇ ನೋಡಬಹುದು. ಧಾರ್ಮಿಕವೆಂದು ಕರೆಯಬಹುದಾದ ವಿಕೃತಿ ವಿಕಾರಗಳು, ಆಚರಣೆಗಳು ರಾಜಕೀಯ, ಸ್ಪರ್ಧೆ, ಗುರುತು ಮತ್ತು ಅವುಗಳ ಜೊತೆ ಇರುವ ಉಗ್ರ ಬಲಪಂಥ ಮತ್ತು ಉಗ್ರವಾಗಿ ಇಸ್ಲಾಮ್ ಅನ್ನು ಕೆಟ್ಟದಾಗಿ ವ್ಯಾಖ್ಯಾನಿಸುವ ಮೂಲಭೂತವಾದಿಗಳು ಸತ್ಯದ ಮತ್ತು ರಾಜಕೀಯದ ತಿಳುವಳಿಕೆಗೆ ಅದರ ಕೃತಕತೆಯನ್ನು ಆಮೂಲಾಗ್ರತೆಯನ್ನು ತಿಳಿಯಲು ಬಹುಶ: ಕರ್ನಾಟಕದ, ಕರಾವಳಿ ಕರ್ನಾಟಕದ ಸೂಫಿ ಸಂತರನ್ನು, ಕಾಲು ದಾರಿ ಸಂತರನ್ನು ಮತ್ತು ಇಸ್ಲಾಮ್ ಅನ್ನು ತಿಳಿಯಬೇಕಾಗುತ್ತದೆ. ಇಲ್ಲದಿದ್ದರೇ ಬಲಪಂಥ, ಸೂಫಿಸಂತರುಗಳು, ದತ್ತಪೀಠ, ಬಾಬಾಬುಡನ್‍ಗಿರಿ ಎಲ್ಲವೂ ಕೂಡಾ ಒಂದೇ ಬಣ್ಣವನ್ನು ಪಡೆಯುತ್ತದೆ. ಅದರ ಹಿಂದಿನ ದಾಳವಾಗುತ್ತದೆ. ಕನ್ನಡದ ಮನುಷ್ಯನೊಬ್ಬ ಹಿಂದೂ-ಮುಸ್ಲಿಂ ಅನ್ಯೋನ್ಯತೆ, ಸಹಬಾಳ್ವೆ, ಉದಾರತೆ, ಮತನಿರಪೇಕ್ಷತೆ ಮತ್ತು ಮುಕ್ತತೆಯನ್ನು ಅರ್ಥಮಾಡಿಕೊಂಡ ಎಂದರೆ ಅದು ಕನ್ನಡದ ಇಸ್ಲಾಮ್ ಅನ್ನು ಹೊಸರೂಪ ಮತ್ತು ಹೊಸ-ಪ್ರಕ್ರಿಯೆಯ ಸ್ವರೂಪದಲ್ಲಿ ನೋಡುವುದರಿಂದಾಗಿದ್ದು ಎಂದೇ ಅರ್ಥೈಸಬಹುದಾಗಿದೆ.

 

ಪೂರಕ ಓದು

ಖiಛಿhಚಿಡಿಜ ಒಚಿxತಿeಟಟ ಇಚಿಣoಟಿ. Suಜಿis oಜಿ ಃiರಿಚಿಠಿuಡಿ 1300-1710. ಅಚಿmbಡಿiಜge Uಟಿiveಡಿsiಣಥಿ Pಡಿess. ಓeತಿ ಆehಟi. 1985.

ಖiಛಿhಚಿಡಿಜ ಒಚಿxತಿeಟಟ ಇಚಿಣoಟಿ. ಇssಚಿಥಿs oಟಿ Isಟಚಿm ಚಿಟಿಜ Iಟಿಜiಚಿಟಿ ಊisಣoಡಿಥಿ. ಔUP. ಓeತಿ ಆehಟi. 2000.

ಸೂರ್ಯನಾಥ ಕಾಮತ್ ಯು. ಕರ್ನಾಟಕದ ಸಂಕ್ಷಿಪ್ತ ಇತಿಹಾಸ. ಬೆಂಗಳೂರು.

Suಡಿಥಿಚಿಟಿಚಿಣh ಏಚಿmಚಿಣh U. ಏಚಿಡಿಟಿಚಿಣಚಿಞಚಿ Sಣಚಿಣe ಉಚಿzeಣಣeeಡಿ ಃeಟgಚಿm ಆisಣಡಿiಛಿಣ. ಉoveಡಿಟಿmeಟಿಣ oಜಿ ಏಚಿಡಿಟಿಚಿಣಚಿಞಚಿ. ಃಚಿಟಿgಟoಡಿe. 1987.

ಏಚಿಡಿಟಿಚಿಣಚಿಞಚಿ Sಣಚಿಣe ಉಚಿzeಣಣeeಡಿ ಃiಜಚಿಡಿ ಆisಣಡಿiಛಿಣ. ಉoveಡಿಟಿmeಟಿಣ oಜಿ ಏಚಿಡಿಟಿಚಿಣಚಿಞಚಿ. ಃಚಿಟಿgಟoಡಿe. 1977.

ಫಕೀರ್ ಮಹಮದ್ ಕಟ್ಪಾಡಿ. ಕರಾವಳಿಯಲ್ಲಿ ಸೂಫಿ ಪರಂಪರೆ. ಅಂಕಿತ ಪ್ರಕಾಶನ. ಬೆಂಗಳೂರು.

ಫಕೀರ್ ಮಹಮದ್ ಕಟ್ಪಾಡಿ. ಸೂಫಿ ಮಹಿಳೆಯರು. ನವಕರ್ನಾಟಕ ಪ್ರಕಾಶನ. ಬೆಂಗಳೂರು.

Sಚಿಡಿoರಿiಟಿi ಆevi ಏಚಿಟಿಜuಡಿi. ಖeಟigioಟಿ Iಟಿ ಗಿiರಿಚಿಥಿಚಿಟಿಚಿgಚಿಡಿಚಿ ಇmಠಿiಡಿe. Sಣeಡಿಟiಟಿg Pubಟisheಡಿs. ಓeತಿ ಆehಟi.

ಂ. ಏ. ಖಚಿmಚಿಟಿuರಿಚಿಟಿ. Sಠಿeಚಿಞiಟಿg oಜಿ Shivಚಿ. Peಟಿguiಟಿ Pubಟiಛಿಚಿಣioಟಿs. 1973.

ಅಟಚಿuಜe ಐevi Sಣಡಿಚಿuss. Sಣಡಿuಛಿಣuಡಿಚಿಟ ಂಟಿಣhಡಿoಠಿoಟogಥಿ. ಃಚಿsiಛಿ ಃooಞs. 1974.

ಖomiಟಚಿ ಖಿhಚಿಠಿಚಿಡಿ. ಅuಟಣuಡಿಚಿಟ Pಚಿsಣs : ಇssಚಿಥಿs iಟಿ ಇಚಿಡಿಟಥಿ Iಟಿಜiಚಿಟಿ ಊisಣoಡಿಥಿ. ಔUP. ಓeತಿ ಆehಟi. 2003.

ಆ. ಆ. ಏosಚಿmbi. ಒಥಿಣh ಚಿಟಿಜ ಖeಚಿಟiಣಥಿ : Sಣuಜies iಟಿ ಣhe ಈoಡಿmಚಿಣioಟಿ oಜಿ Iಟಿಜiಚಿಟಿ ಅuಟಣuಡಿe. Sಚಿಟಿgಚಿm ಃooಞs. 1961.

 ಶೆಲ್ಡನ್ ಪೊಲಾಕ್. ವಿಶ್ವಾತ್ಮಕ ದೇಶ ಭಾಷೆ. ಅಕ್ಷರ ಪ್ರಕಾಶನ. ಹೆಗ್ಗೋಡು.

ಖizvi S. ಂ. ಂ. Woಟಿಜeಡಿ ಣhಚಿಣ ತಿಚಿs Iಟಿಜiಚಿ : ಂ Suಡಿveಥಿ oಜಿ ಣhe ಊisಣoಡಿಥಿ ಚಿಟಿಜ ಅuಟಣuಡಿe oಜಿ ಣhe Iಟಿಜiಚಿಟಿ Sub ಅoಟಿಣiಟಿeಟಿಣ ಜಿಡಿom ಣhe ಛಿomiಟಿg oಜಿ ಣhe ಒusಟims ಣo ಣhe ಃಡಿiಣish ಅoಟಿquesಣ 1200-1700. Souಣh ಂsiಚಿ ಃooಞs. ಓeತಿ ಆehಟi. 1966.

ಖizvi S. ಂ. ಂ. ಊisಣoಡಿಥಿ oಜಿ Suಜಿism iಟಿ Iಟಿಜiಚಿ. ಒuಟಿshiಡಿಚಿm ಒಚಿಟಿohಚಿಡಿಟಚಿಟ. ಓeತಿ ಆehಟi. 1997.

Sಚಿಣish ಅhಚಿಟಿಜಡಿಚಿ. ಊisಣoಡಿಥಿ oಜಿ ಒeಜievಚಿಟ Iಟಿಜiಚಿ ಗಿoಟ 1. ಊಚಿಡಿ ಂಟಿಚಿಟಿಜ Pubಟiಛಿಚಿಣioಟಿs. ಓeತಿ ಆehಟi. 

Susಚಿಟಿ ಃಚಿiಟeಥಿ. Sಚಿiಟಿಣs, ಉoಜಜesses ಚಿಟಿಜ ಏiಟಿgs : ಒusಟims ಚಿಟಿಜ ಅhಡಿisಣiಚಿಟಿs iಟಿ Souಣh Iಟಿಜiಚಿಟಿ Soಛಿieಣಥಿ 1700-1900. ಅಚಿmbಡಿiಜge Uಟಿiveಡಿsiಣಥಿ Pಡಿess. 1989.  

ರಹಮತ್ ತರೀಕೆರೆ. ಕರ್ನಾಟಕದ ಸೂಫಿ ಸಂತರು. ಅಭಿನವ ಪ್ರಕಾಶನ. ಬೆಂಗಳೂರು.

ಐ. ಖ. ಏuಟಞಚಿಡಿಟಿi. Some ಂsಠಿeಛಿಣs oಜಿ ಣhe ಟiಜಿe oಜಿ ಣhe ಠಿeoಠಿಟe uಟಿಜeಡಿ ಃಚಿhಚಿmಚಿಟಿi ಖuಟe. ಏಞಚಿಡಿಟಿಚಿಣಚಿಞಚಿ Uಟಿiveಡಿsiಣಥಿ ಆhಚಿಡಿಚಿvಚಿಜ.

ಒiಣಛಿheಟಟ ಎoಡಿge ಚಿಟಿಜ ಖiಛಿhಚಿಡಿಜ ಇಚಿಣoಟಿ. ಈeಡಿozಚಿbಚಿಜ Pಚಿಟಚಿಛಿe ಅiಣಥಿ oಜಿ ಣhe ಆeಛಿಛಿಚಿಟಿ. ಔUP. ಐoಟಿಜoಟಿ. 1992.

Sಚಿಟಚಿhuಜಜiಟಿ ಒuಟಿshi. ಒusಟim ಒoಟಿumeಟಿಣs oಜಿ ಉuಟbಚಿಡಿgಚಿ : ಂ ಅuಟಣuಡಿಚಿಟ Sಣuಜಥಿ. ಏಚಿಡಿಚಿಟಿಚಿಣಚಿಞಚಿ Uಟಿiveಡಿsiಣಥಿ ಆhಚಿಡಿvಚಿಜ.

Sheಡಿvಚಿಟಿi ಊ. ಏ ಚಿಟಿಜ ಎoshi P. ಒ. ಊisಣoಡಿಥಿ oಜಿ  ಒeಜievಚಿಟ ಆeಛಿಛಿಚಿಟಿ ಗಿoಟ. 1. ಉoveಡಿಟಿmeಟಿಣ oಜಿ ಂಟಿಜhಡಿಚಿ Pಡಿಚಿಜesh. 1973.

Shಡಿiಟಿivಚಿsಚಿ ಏ. ಐ. Suಜಿism: ಂ Sಣuಜಥಿ. Shಡಿi Pಡಿಚಿಞಚಿshಚಿಟಿಚಿ. ಃಚಿಟಿgಟoಡಿe. 2000. ಙಚಿzಜಚಿಟಿi ಉ. ಃiಜಚಿಡಿ, Iಣs ಊisಣoಡಿಥಿ ಚಿಟಿಜ ಒoಟಿumeಟಿಣs. ಉoveಡಿಟಿmeಟಿಣ oಜಿ ಓizಚಿm. 1947.

ಪ್ರೊ. ಶೇಖ್ ಆಲಿ. ಕರ್ನಾಟಕ ಚರಿತ್ರೆ. ಸಂಪುಟ ಒಂದು. ಪ್ರಸಾರಾಂಗ ಕನ್ನಡ ವಿಶ್ವ ವಿದ್ಯಾನಿಲಯ ಹಂಪಿ.

ಪ್ರೊ. ಶೇಖ್ ಆಲಿ. ಕರ್ನಾಟಕ ಚರಿತ್ರೆ. ಸಂಪುಟ ಎರಡು. ಪ್ರಸಾರಾಂಗ ಕನ್ನಡ ವಿಶ್ವ ವಿದ್ಯಾನಿಲಯ ಹಂಪಿ.

ಪ್ರೊ. ಶೇಖ್ ಆಲಿ. ಕರ್ನಾಟಕ ಚರಿತ್ರೆ. ಸಂಪುಟ ಮೂರು. ಪ್ರಸಾರಾಂಗ ಕನ್ನಡ ವಿಶ್ವ ವಿದ್ಯಾನಿಲಯ ಹಂಪಿ.

ಪ್ರೊ. ಶೇಖ್ ಆಲಿ. ಕರ್ನಾಟಕ ಚರಿತ್ರೆ. ಸಂಪುಟ ನಾಲ್ಕು. ಪ್ರಸಾರಾಂಗ ಕನ್ನಡ ವಿಶ್ವ ವಿದ್ಯಾನಿಲಯ ಹಂಪಿ.

 

    

 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ಸಿನಿಮಾ ಚರಿತ್ರೆ : ಸಮಾಜ, ಸಂಸ್ಕøತಿ ಮತ್ತು ರಾಜಕಾರಣ

ಕರ್ನಾಟಕದಲ್ಲಿ ಸೂಫಿಗಳು

ಚಾರಿತ್ರಿಕ ಕೃತಿಯ ಹಲವು ಓದಿನ ಸಾಧ್ಯತೆಗಳು: ಹಿಂದ್ ಸ್ವರಾಜ್ ಮಾದರಿ