ಗಾಂಧಿ ಮತ್ತು ಸಿನಿಮಾ

 

ಗಾಂಧಿ ಮತ್ತು ಸಿನಿಮಾ ಸಂಬಂಧ ಬಹಳ ಸ್ವಾರಸ್ಯಕರವಾದುದು. ತನ್ನ ‘ಹಿಂದ್ ಸ್ವರಾಜ್’ ಕೃತಿಯಲ್ಲಿ ಸಿನಿಮಾವನ್ನು ಸೇರಿದಂತೆ ಯಂತ್ರ ನಾಗರೀಕತೆಯ ಹಲವಾರು ಅವತಾರಗಳ ಬಗೆಗೆ ಗಾಂಧಿ ತಕರಾರನ್ನು ತೆಗೆದ ಗಾಂಧಿ ಸಿನಿಮಾವನ್ನು ಆಧುನಿಕತೆ ಒದಗಿಸಿದ ಕೇಡೆಂದೇ ಬಗೆದಿದ್ದರು. ತನ್ನ ಇಡೀ ಜೀವಮಾನದಲ್ಲಿ ಗಾಂಧಿ ನೋಡಿದ್ದು ರಷ್ಯಾದ ಮಿಶನ್ ಟು ಮಾಸ್ಕೋ (1943) ಮತ್ತು ಮುಂಬೈನ ವಿಜಯ ಭಟ್ ನಿರ್ದೇಶಿಸಿದ ರಾಮರಾಜ್ಯ ಎನ್ನುವ ಸಿನಿಮಾವನ್ನು, ಆಮಾ ಅರ್ಥ ಸಿನಿಮಾವನ್ನಷ್ಟೇ ಗಾಂಧಿಯೇ ತನ್ನ ಸ್ನೇಹಿತ ವಿಜಯ್ ಭಟ್‍ರವರಲ್ಲಿ ವೈಷ್ಣವ ಜನತೋವನ್ನ ಬರೆದ ಗುಜರಾತೀ ವೈಷ್ಣವ ಸಂತ ನರಸೀ ಮೆಹತಾ ಬಗೆಗೆ ಸಿನಿಮಾವನ್ನು ಮಾಡಲು ಸೂಚಿಸಿದ್ದರು. ಭಟ್ ಸುಮಾರು 1940ರಲ್ಲಿ ಈ ಕಾರ್ಯವನ್ನು ಸಾಧಿಸಿದರಾದರೂ ಕೂಡಾ ಸ್ವತಂತ್ರ ಚಳುವಳಿಯು – ಕೈಂಕರ್ಯ ಮತ್ತು ಮುಂಚೂಣಿತನವು ಈ ಸಿನಿಮಾವನ್ನು ನೋಡಲು ತುಸು ಸಮಯವನ್ನೂ ನೀಡದಂತೆ ಮಾಡಿತು. ಗಾಂಧಿಯ ಒಂದು ಹಂತದ ಆದರ್ಶವೇ ಆಗಿದ್ದ ಡಿ.ಜಿ. ಫಾಲ್ಕೆಯವರ ‘ರಾಜಾ ಹರೀಶ್ಚಂದ್ರ’ವನ್ನು ಕೂಡಾ ಗಾಂಧಿ ನೋಡಿರಲಿಲ್ಲವಾಗಿತ್ತು.

          ಸುಮಾರು 1927-28ರ ಅವಧಿಯಲ್ಲಿ ಅಂದಿನ ಬ್ರಿಟೀಷ್ ಸರ್ಕಾರ ಮದ್ರಾಸ್ ಹೈಕೋರ್ಟ್‍ನ ನಿವೃತ್ತ ನ್ಯಾಯಾಧೀಶ ಟಿ. ರಂಗಾಚಾರಿಯರ್ ನೇತೃತ್ವದಲ್ಲಿ ಇಂಡಿಯನ್ ಸಿನಿಮಾಟೋಗ್ರಾಫ್ ಕಮಿಟಿಯನ್ನು ರಚಿಸಿ ಸಿನಿಮಾ ಪ್ರದರ್ಶನ ಅಧವ್ಯಾಕ್ಟಶ್ಚನೇರ್‍ಗಳ ಮುಖಾಂತರ ವಿಚಾರಣೆ ಮತ್ತು ಅಭಿಪ್ರಾಯವನ್ನು ಸಂಗ್ರಹಿಸುವ ಕೆಲಸವನ್ನು ಮಾಡಿತ್ತು. ಈ ಸಮಿತಿಯು ಗಾಂಧಿಯ ಸಂದರ್ಶನವನ್ನು ಬಯಸಿದಾಗ ಗಾಂಧಿಯ, ನನಗೆ ಸಂದರ್ಶನ ನೀಡಬೇಕೆಂಬ ಮನಸ್ಸಿದ್ದರೂ ಕೂಡಾ, ನೀಡುವ ಯೋಗ್ಯತೆ ನನ್ನಲ್ಲಿಲ್ಲ. ಸಿನಿಮಾ ನನಗೆ ತೀರಾ ಅಪರಿಚಿತ. ಆದರೆ ಸಿನಿಮಾವು ಕೆಡುಕನ್ನು ಸಾಧಿಸುತ್ತಿದೆ. ಅದು ಒಂದು ವೇಳೆ ಒಳ್ಳೆಯದನ್ನು ಏನಾದರೂ ಮಾಡಿದಿದ್ದರೆ ಅದು ಇನ್ನಷ್ಟೇ ತಿಳಿಯಬೇಕಷ್ಟೇ’ ಎಂದಿದ್ದರು. ಆಗಿನ ಪ್ರಸಿದ್ಧ ನಿರ್ದೇಶಕ ಕೆ.ಎ. ಅಬ್ಬಾಸ್ ಆ ಕಾಲದ ಪ್ರಸಿದ್ಧ ಸಿನಿಮಾ ಪತ್ರಿಕೆಯಾಗಿದ್ದ ಫಿಲ್ಮ್ ಇಂಡಿಯಾದಲ್ಲಿ, “ಗಾಂಧಿ ಯಾವ ರೀತಿಯ ಜ್ಞಾನದ ಹಿನ್ನೆಲೆ ಮತ್ತು ಆಧಾರದ ಮೇಲೆ ಸಿನಿಮಾದ ಮೇಲೆ ಈ ರೀತಿಯ ಬಡ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೋ” ಎನ್ನುತ್ತಾರೆ.

          ಗಾಂಧಿ ಮತ್ತು ಚಾರ್ಲಿ ಚಾಪ್ಲಿನ್ ಭೇಟಿ ಕೂಡಾ ಗಾಂಧಿಯ ಆಸಕ್ತಿ ಮತ್ತು ಉತ್ಸುಕತೆಯಿಂದ ಉಂಟಾದುದೇನೂ ಅಲ್ಲ. ಚಾಪ್ಲಿನ್ ಬರೀ ಒಬ್ಬ ಹಾಸ್ಯನಟ(ಕಾಮಿಕ್) ಎಂದೇ ತಿಳಿದಿದ್ದರು. ಆದರೆ ಭೇಟಿಯ ನಂತರವಷ್ಟೇ ಆತ ಆ ಕಾಲದ ಪ್ರಮುಖ ಕಾರ್ಮಿಕರ ನಾಯಕ ಮತ್ತು ಹೀರೊ ಎಂಬುದು ಚಾಪ್ಲಿನ್‍ಗೆ ತಿಳಿಯಿತು. ಲಂಡನ್‍ನ ದುಂಡು ಮೇಜಿನ ಸಭೆಯ ಸಂದರ್ಭದ ಈ ಭೇಟಿ ಬಗ್ಗೆ ಚಾಪ್ಲಿನ್‍ಗೆ ಮಾತ್ರ ಅತೀವ ಕುತೂಹಲ ಮತ್ತು ಆಸಕ್ತಿ ಇತ್ತು. ಆತ ‘ಗಾಂಧಿಯೊಬ್ಬ ಅತ್ಯಂತ ಪ್ರಮುಖ ವ್ಯಕ್ತಿತ್ವ. ಆತನೊಬ್ಬ ಅಂತರಾಷ್ಟ್ರೀಯ ವ್ಯಕ್ತಿ. ಇದಲ್ಲದೆ ಆತ ಬಹಳ ಪ್ರಮುಖ ನಾಟಕೀಯ ವ್ಯಕ್ತಿತ್ವ (ಡ್ರಾಮಾಟಿಕ್ ಫಿಗರ್) ಹೊಂದಿರುವಂತವನು’ ಎಂದಿದ್ದ. ತಾತ್ವಿಕವಾಗಿ ಗಾಂಧಿಯ ಹಿಂದ್ ಸ್ವರಾಜ್‍ನ ಯಂತ್ರನಾಗರೀಕತೆ, ಮಾನವನ ಪರಕೀಯತೆ, ಆಧುನಿಕತೆ ಮತ್ತದರ ಉಪಉತ್ಪನ್ನಗಳು ಮನುಷ್ಯನನ್ನು ಕೊಳ್ಳುಬಾಕನನ್ನಾಗಿಸುವುದು, ಮನುಷ್ಯ ಕೇಂದ್ರವನ್ನು ಯಂತ್ರ ನಾಗರೀಕತೆ ಆವರಿಸುವುದು ಮತ್ತು ಪ್ರಕೃತಿಯ ಶೋಷಣೆ ಮೊದಲಾದ ವಿಚಾರಗಳ, ಚರ್ಚೆಯ ಸಿನಿಮಾ ಎರಕದಂತೆ ಚಾಪ್ಲಿನ್‍ನ ‘ಮಾಡನ್ ಟೈಮ್ಸ್’ ಕಂಡುಬರುತ್ತದೆ.

          ಸಿನಿಮಾರಂಗ ಮೊದಲಿಂದಲೂ ಕೂಡಾ ಗಾಂಧಿಯ ಬಗೆಗೆ ಒಂದು ರೀತಿಯ ತೀರದ ಕುತೂಹಲವನ್ನು ಹೊಂದಿತ್ತು. ಮೊತ್ತಮೊದಲಿಗೆ ಸುಮಾರು 1922ರ ‘ಗಾಂಧಿ ನೌ ಕಂಡೆಮ್ನ್‍ಡ್ ಟು ಸಿಕ್ಸ್ ಈಯರ್ಸ್ ಇಂಪ್ರಿಸನ್‍ಮೆಂಟ್’ ನ್ಯೂಸ್ ರೀಲ್ ಒಂದರಲ್ಲಿ ಬ್ರಿಟಿಷ್ ಸಂಸ್ಥೆ ‘ಫ್ಹಾತೆ’ ಚಿತ್ರಿಸಿತ್ತು. ಸುಮಾರು 1932ರ ಹೊತ್ತಿನ ಪೂನಾ ಫ್ಯಾಕ್ಟ್ ಆಸುಪಾಸಿನ, ‘ಗಾಂಧಿ ಫಾಸ್ಟ್ ಬ್ರಿಂಗ್ಸ್ ನ್ಯೂ ಇಂಡಿಯಯನ್ ಕ್ರೈಸಿಸ್’ ಎರಡನೇ ನ್ಯೂಸ್ ರೀಲ್ ಆಗಿತ್ತು. 1931-32ರಲ್ಲಿ ಅಮೆರಿಕನ್ ನ್ಯೂಸ್‍ರೀಲ್ ಕಂಪೆನಿ ಫಾಕ್ಸ್ ಮೂವಿಟೋನ್ ‘ಮಹಾತ್ಮಾಗಾಂಧಿ ಟಾಕ್ಸ್’ ಎನ್ನುವುದನ್ನು ನಿರ್ಮಿಸಿತ್ತು, ಆಗ ಗಾಂಧಿ ವಾಸಿಸಿದ್ದ ‘ಬೊರ್ಸಾದ್’ ಗ್ರಾಮದಲ್ಲಿ ಚಿತ್ರೀಕರಣಕ್ಕಿಂತ ಮುಂಚೆ ಗಾಂಧಿ, ‘ನನಗಿದೆಲ್ಲ ತೀರಾ ಇಷ್ಟವಾಗುವುದಿಲ್ಲ, ಆದರೂ ನಾನು ನನ್ನ ನಿಲುವನ್ನು ಪುನರ್ ಪರಿಶೀಲಿಸುತ್ತೇನೆ.’ ಎಂದಿದ್ದರು.

          ಸುಮಾರು 1944ರ ಹೊತ್ತಿಗೆ ಅಮೇರಿಕಾದ ‘ಫಾತೇ ನ್ಯೂಸ್’ನಲ್ಲಿ ಕ್ಯಾಮರಾಮೆನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮದ್ರಾಸಿನ ಎ.ಕೆ. ಚೆಟ್ಟಿಯಾರ್ ಜಗತ್ತಿನ ಅನೇಕ ದೇಶಗಳನ್ನು ಸಂಚರಿಸಿ ಅಲ್ಲಿ ಗಾಂಧಿಯನ್ನು ಕುರಿತು ಚಿತ್ರೀಕರಿಸಿದ್ದ ಸುಮಾರು 50,000 ಅಡಿಯ ಫ್ಹೂಟೇಟ್ ಅಥವಾ ವೀಡಿಯೋವನ್ನು ಸಂಗ್ರಹಿಸಿ 21 ನಿಮಿಷಗಳ ಕಾಲದ ಗಾಂಧಿ ಬಗೆಗಿನ ಮೊತ್ತಮೊದಲ ಡಾಕ್ಯುಮೆಂಟರಿ ಸಿನಿಮಾವಾದ, ‘ಮಹಾತ್ಮಗಾಂಧಿ: ಟ್ವೆಂಟಿಯತ್ ಸೆಂಚುರಿ ಪ್ರೊಫೆಟ್’ ಅನ್ನು ನಿರ್ಮಿಸಿದರು. ಕೆ.ಎ. ಅಬ್ಬಾಸ್ ಅವರು ಈ ಡಾಕ್ಯುಮೆಂಟರಿ ಸಿನಿಮಾವನ್ನು ‘ಜೋರಿಸ್ ಇವೆನ್ಸ್’ನ ‘ದಿ ಸ್ಪಾನಿಷ್ ಅರ್ತ್’ ಮತ್ತು ‘ಜಿಗಾ ವರ್ತೋವ್’ನ ‘ತ್ರೀ ಸಾಂಗ್ಸ್ ಅಬೌಟ್ ಲೆನಿನ್’ ಜತೆ ತೂಗಿ ನೋಡುತ್ತಾರೆ. ಫಿಲ್ಮ್ ಇಂಡಿಯಾದಲ್ಲಿ ಅವರು ಮಾಡಿದ ಇದರ ಬಗೆಗಿನ ವಿಮರ್ಶೆಯಲ್ಲಿ, ‘ಗಾಂಧಿ ನೋಡುವ ಮೊದಲ ಸಿನಿಮಾದಲ್ಲಿ ಗಾಂಧಿ ಪಾತ್ರದ ಪಾತ್ರಧಾರಿಯೇ ಗಾಂಧಿಯಾಗಿರುತ್ತಾರೋ’ ಎನ್ನುತ್ತಾರೆ.

          1939ರಲ್ಲಿನ ಕ್ಯಾರಿ ಗ್ರಾಂಟ್, ವಿಕ್ಟರ್ ಮೆಕ್‍ಲನೆನ್ ಮತ್ತು ಡಗ್ಲಾಸ್ ಫೈರ್‍ಬ್ಯಾಂಕ್ಸ್ ಜೂನಿಯರ್ ಅಭಿನಯದ ಸಾಹಸ ಪ್ರಧಾನ ಚಿತ್ರ ಚಿತ್ರಿಸಿತು. ಈ ಚಿತ್ರದ ನೀರು ಹೊರುವವ ಅಥವಾ ಬಿಷ್ತಿ ಸರಿಸುಮಾರು ಗಾಂಧಿ ಧರಿಸುತ್ತಿದ್ದ ಪೋಷಾಕನ್ನೇ ಧರಿಸಿದ್ದ. ಇದರ ವಿರುದ್ಧದ ಪಾತ್ರವಾದ ಖಳನಾಯಕ ಕೊಲೆಪಾತಕಿಯಾಗಿ ಗಾಂಧಿ ವಿರುದ್ಧದ ಪ್ರತಿಮೆಯಂತಿದ್ದ. 1935ರ ಇನ್ನೊಂದು ಸಿನಿಮಾ ಹಾಸ್ಯ ಪ್ರಧಾನವಾದ, ‘ಎವರಿಬಡಿ ಲೈಕ್ಸ್ ಮ್ಯೂಸಿಕ್’ ವು ಗಾಂಧಿಯು ಪಾನಮತ್ತರಾಗಿ ಮಹಿಳೆಯ ಜತೆ ನರ್ತಿಸುತ್ತಿರುವಂತೆ ಚಿತ್ರಿಸಿತ್ತು. ಇವೆರಡನ್ನೂ ಕೂಡಾ ಆ ಕಾಲದ ಪತ್ರಿಕೆಗಳು ಮತ್ತು ಭಾರತೀಯರು ಖಟುವಾಗಿ ಟೀಕಿಸಿದ್ದರು. 1963ರ ಸಿನಿಮಾ ಹಲಿವುಡ್ ಸಿನಿಮಾ ‘ನೈನ್ ಅವರ್ಸ್ ಟರಾಮಾ’ ‘ಸ್ಟಾನ್ಲೀ ವೋಲ್ಟರ್’ನ ಕಾದಂಬರಿ ಆಧರಿಸಿತ್ತು ಮತ್ತು ಗಾಂಧಿ ಹತ್ಯೆಯ ಸಂದರ್ಭದ ಕಾಲವನ್ನು ಆಧರಿಸಿತ್ತು. ಗಾಂಧಿ ಪಾತ್ರ ನಿರ್ವಹಿಸಿದ ಜೆ.ಎಸ್. ಕಶ್ಯಪ್ ಬಹು ಮನೋಜ್ಞವಾಗಿ ಅಭಿನಯಿಸಿದ್ದರು. ಗಾಂಧಿ ಹತ್ಯೆಯ ಈ ಸಿನಿಮಾದ ದೃಶ್ಯವನ್ನೇ ಸಾಮಾಜಿಕ ಜಾಲತಾಣ ಮತ್ತಿತರ ಕಡೆ ನಿಜವಾದ ವೀಡಿಯೋ ಎಂಬಂತೆ ಬಳಸಲಾಗುತ್ತಿದೆ.

          ವಿಶ್ವದ ಮತ್ತು ಭಾರತೀಯ ಸಿನಿಮಾಗಳು ಗಾಂಧಿಯನ್ನು ಚಿತ್ರಿಸಿವೆ ಹಾಗೂ ವಸ್ತುವಾಗಿಸಿವೆ. ಗಾಂಧಿ ಬಗೆಗೆ ಒಂದು ಸಿನಿಮಾ ಮಾಡಬೇಕೆನ್ನುವುದು ಭಾರತೀಯರ ಮನಸ್ಸಿನಲ್ಲೂ ಇತ್ತು, ಬ್ರಿಟೀಷರಲ್ಲೂ ಇತ್ತು. ಬ್ರಿಟೀಷ್ ಸಾಮ್ರಾಜ್ಯಕ್ಕೆ ಗಾಂಧಿ ನೀಡುತ್ತಿದ್ದ ಸಂಕಟ ಮತ್ತು ಪ್ರತ್ಯುತ್ತರವನ್ನು ತಾಳಲಾರದೆ 1923ರಲ್ಲಿ ಬ್ರಿಟೀಷ್ ಸರ್ಕಾರ ಆಗಿನ ಪ್ರಸಿದ್ಧ ಅಮೇರಿಕನ್ ನಿರ್ದೇಶಕ ಡಿ.ಡಬ್ಲ್ಯು. ಗ್ರಿಫಿತ್ ಅನ್ನು ಒಂದು ಗಾಂಧಿ ವಿರೋಧಿ ಸಿನಿಮಾ ಮಾಡುವಂತೆ ಕೋರಿತ್ತು. ಹಂಗೇರಿಯಾದ ನಿರ್ದೇಶಕ ಗೇಬ್ರಿಯಲ್ ಪ್ಯಾಸ್ಕಲ್ ಮತ್ತು ಇಂಗ್ಲೀಷ್ ನಿರ್ದೇಶಕ ಡೇವಿಡ್ ಲೀನ್‍ಗೆ ಗಾಂಧಿ ಮೇಲೆ ಸಿನಿಮಾ ಮಾಡಬೇಕೆಂಬ ಮಹದಾಸೆ ಇದ್ದಿತ್ತು. ಲೀನ್ ಅಂತೂ 1958ರಲ್ಲಿ ಚಿತ್ರಕಥೆಯೊಂದಿಗೆ ಅನುಮತಿಗಾಗಿ ಭಾರತಕ್ಕೆ ಬಂದರಾದರೂ ಅವರಿಗೆ ಅನುಮತಿಯನ್ನು ನೀಡಲಿಲ್ಲವಾಗಿತ್ತು. ಈ ಬೇಸರದಿಂದ ಲೀನ್ 4 ವರ್ಷಗಳ ನಂತರ ‘ಲಾರೆನ್ಸ್ ಆಫ್ ಅರೇಬಿಯಾ’ಎನ್ನುವ ಅದ್ಭುತ ಸಿನಿಮಾವನ್ನು ನೀಡಿದರು. ಬ್ರಿಟೀಷ್ ಗಾಂಧಿವಾದಿ ಮೋತಿಲಾಲ್ ಕೊಢಾರಿಯವರ ಯೋಜನೆ ಹಿಡಿದು ಅಟೆನ್‍ಬರೋ ಭಾರತಕ್ಕೆ ಬಂದಾಗ ನೆಹರು, ‘ನೀವು ಯಾವ ರೀತಿ ಬೇಕಾದರೂ ಸಿನಿಮಾ ಮಾಡಿ ಆದರೆ ಗಾಂಧಿಯನ್ನು ಅವಮಾನಿಸದಿರಿ, ಭಂಜಿಸದಿರಿ’ ಎಂದರಂತೆ. ಗಾಂಧಿ ಪಾತ್ರಕ್ಕೆ ನೆಹರೂ ಆಯ್ಕೆ ನಟ ‘ಅಲೆಕ್‍ಗಿನ್ನಿಸ್’ ಆಗಿದ್ದರಂತೆ. ಆದರೆ ಇಂಗ್ಲೀಷ್ ನಟನನ್ನು ಗಾಂಧಿಯಾಗಿಸುವುದು ಒಂದು ವಿಡಂಬನೆ ಎಂಬ ಭಾವವೂ ಅವರಿಗಿದ್ದಿತ್ತು. ನೆಹರೂ ಭೇಟಿಯ 18 ವರ್ಷಗಳ ನಂತರೆ ಅಟೆನ್‍ಬರೋ ಗುಜರಾತಿ-ಬ್ರಿಟೀಷ್ ವ್ಯಕ್ತಿಯಾದ ಬೆನ್ ಕಿಂಗ್‍ಸ್ಲೇಯನ್ನು ಗಾಂಧಿಯಾಗಿಸಿ ಚಿತ್ರ ನಿರ್ಮಿಸಿದರು.

          ಅಟೆನ್ ಬರೋ ವಿನ ‘ಗಾಂಧಿ’ ಸಿನಿಮಾ ಗಾಂಧಿಯನ್ನು ಒಂದು ಸೆಕ್ಯುಲರ್ ನೆಲೆಯಲ್ಲಿ ಐಕಾನಿಕ್ ಆಗಿ ರೂಪಿಸುತ್ತದೆ. ಭಾರತದಲ್ಲಿ ಯೋಗಿ, ಬಾಬಾ, ಗುರು, ಸನ್ಯಾಸಿ ಮತ್ತಿತರರನ್ನು ಆಧ್ಯಾತ್ಮದ ನೆಲೆಯಲ್ಲಿ ‘ಐಕಾನ್’ ಗಳಾಗಿಸುವ ಪರಿಪಾಠ ಭಾರತದಲ್ಲಿದೆ. ಒಂದು ಮತ ನಿರಪೇಕ್ಷ ದೇವರಾಗಿ ಗಾಂಧಿ ಇಲ್ಲಿ ಗೋಚರಿಸುತ್ತಾರೆ. ಅಟೆನ್ ಬರೋ ಕೂಡಾ ಒಬ್ಬ ಭಕ್ತ ನಿರ್ದೇಶಕನಾಗುತ್ತಾನೆ. ಬೆನ್ ಕಿಂಗ್‍ಸ್ಲೇಯಂತೂ ತನ್ನ ದಢೂತಿ ದೇಹವನ್ನು ಕರಗಿಸಲು ಅನ್ನಾಹಾರ ಬಿಟ್ಟು ಕೊನೆಗೂ 50 ಕೆ.ಜಿ.ಯ ಆಸುಪಾಸಿಗೆ ಬಂದು ಫಕೀರನೇ ಆಗುತ್ತಾನೆ. ಒಂದು ರೀತಿ ಈ ಸಿನಿಮಾ ಒಂದು ಭಾವನಾವಾದೀಯ-ಭಕ್ತಿಯ ರೂಪಕದಂತೆಯೇ ಕಾಣಿಸುತ್ತದೆ. ಗಾಂಧಿ ತನ್ನ ಕೃತಿ ‘ಹಿಂದ್ ಸ್ವರಾಜ್’ನ ಮೂಲಕ ತಾತ್ವಿಕ ಮತ್ತು ಒಂದು ಅನುಭಾವೀಯ ಪ್ರವಾದೀತನವನ್ನು ತರ್ಕಗಳ ಮೂಲಕ ಪಡೆದರೆ ಈ ಸಿನಿಮಾ ದೃಶ್ಯ ಮತ್ತು ಬಾಂಬ್‍ಗಳ ಮೂಲಕ ಆತನನ್ನು ಪ್ರವಾದಿಯನ್ನಾಗಿಸುತ್ತದೆ.

          ಶ್ಯಾಂ ಬೆನಗಲ್‍ರ ‘ಮೇಕಿಂಗ್ ಆಫ್ ಮಹಾತ್ಮ’ವು ಗಾಂಧಿ ಮತ್ತು ಆಫ್ರಿಕಾದ ಪ್ರಯೋಗಶಾಲೆ ಹಾಗೂ ಅದು ರೂಪಿಸಿದ ಹೋರಾಟದ ಅಸ್ತ್ರಗಳಾದ ಸತ್ಯಾಗ್ರಹ, ಅಹಿಂಸೆ ಮುಂತಾದವು ರೂಪುಗೊಂಡ ಬಗೆಯನ್ನು ತಿಳಿಸುತ್ತದೆ. ಇದರ ಜತೆಗೆ ಕಸ್ತೂರ ಬಾ ಮೂಲಕ ಗಾಂಧಿಯನ್ನು ವಿಮರ್ಶೆಗೆ ಹಚ್ಚುವ ನೆಲೆ ಕೂಡಾ ಬಹಳ ಪರಿಣಾಮಕಾರಿಯಾದುದು. 2007ರ ಫಿರೋಝ್‍ಖಾನ್‍ರ ‘ಗಾಂಧಿ ಮೈ ಫಾದರ್’ ಗಾಂಧಿಯ ಮಗ ಹರಿಲಾಲ್ ಮೂಲಕ ಗಾಂಧಿಯನ್ನು ಕುಟುಂಬಿಕ ಮತ್ತು ವೈಯುಕ್ತಿಕ ಮೌಲ್ಯಗಳನ್ನು ನಿರ್ವಹಿಸಿದ ಮತ್ತು ವಿಫಲತೆಯ ಮಾದರಿಯಾಗಿ ನಿರೂಪಿಸುತ್ತದೆ. 2006ರ ರಾಜ್‍ಕುಮಾರ್ -- ನಿರ್ದೇಶನದ ‘ಲಗೋ ರಹೋ ಮುನ್ನಾ ಭಾೈ’ ಕೂಡಾ ಅತ್ಯಂತ ಪ್ರಮುಖವಾದ ಸಿನಿಮಾ. ಒಂದು ರೀತಿಯ ಗಾಂಧೀವಾದದ ಗ್ರಾಮ್ಶಿಯನ್ ನಿರೂಪಣೆ ಮತ್ತು ಕಥನದಂತಿದೆ ಈ ಸಿನಿಮಾ. ಮುಂಬೈನ ಡಾನ್ ಒಬ್ಬ ಮಹಾತ್ಮಾ ಗಾಂಧಿಯಿಂದ ಪ್ರೇರಣೆ ಪಡೆದು, ಗಾಂಧಿಯ ಚೈತನ್ಯವನ್ನು ಅನುಭವಿಸಿ, ಆತನ ಜತೆ ಸಂವಾದ ಸಾಧಿಸಿ, ಸಾಮಾನ್ಯ ಜನರೂ ಕೂಡಾ ಗಾಂಧಿಯನ್ನು ಕಂಡು, ಸಂವಾದಿಸಿ ಅವರ ಸಮಸ್ಯೆ-ಸಂಕಷ್ಟಗಳನ್ನು ನಿವಾರಿಸಿಕೊಳ್ಳಬಹುದಾದ ಒಂದು ಜನಪ್ರಿಯ ಮಾದರಿಯಾದ ‘ಗಾಂಧಿಗರಿ’ಯನ್ನು ಉತ್ಪಾದಿಸುತ್ತಾನೆ. ಬಹುಶ: ಗಾಂಧಿ ಕುರಿತ ಸಿನಿಮಾಗಳಲ್ಲೇ ಒಂದು ವಿನೂತನ ಮಾದರಿಯದು. 2013ರ ಕೇರಳದ ನಿರ್ದೇಶಕ ಜಯನ್ ಚೆರಿಯನ್‍ರವರ ‘ಪ್ಯಾಪಿಲಿಯೋ ಬುದ್ಧ’ ದಲಿತ ರಾಜಕಾರಣ ಮತ್ತದರ ಚರಿತ್ರೆ ಹಾಗೂ ವರ್ತಮಾನವನ್ನು ಚರ್ಚಿಸುತ್ತಾ ಮೊತ್ತ ಮೊದಲ ಬಾರಿಗೆ ಗಾಂಧಿಯ ವಿರುದ್ಧ ಪ್ರತಿ ಮತ್ತು ವಿರೋಧಾತ್ಮಕ ಕಥನವಾಗಿ ಏರ್ಪಟ್ಟಿತು. ಗಾಂಧಿಯೆಂಬ ಐಕನ್ ಮತ್ತು ವಿಗ್ರಹ ಭಂಜನೆಯನ್ನು ಮಾಡಿದ ಕಾರಣದಿಂದ ಸರ್ಕಾರ ಇದರ ಪ್ರತಿಬಂಧವನ್ನೂ ಕೂಡಾ ಹೇರಿತು. ಗಾಂಧಿಯು 1932ರ ಪೂನಾ ಒಪ್ಪಂದದ ಮೂಲಕ ಜಾತಿ ಪ್ರಶ್ನೆಯನ್ನು ಮತ್ತದರ ಮೇಲಿನ ರಾಜಕಾರಣವನ್ನು ಸ್ಥಿರೀಕರಿಸಿದರು. ಅಂಬೇಡ್ಕರ್ ಆಲೋಚನೆಯ ಜಾತಿಯಿಂದ ಸಂಪೂರ್ಣ ವಿಮೋಚನೆಯು ಗಾಂಧಿಯ ಆದ್ಯತೆಯಾಗಿರಲಿಲ್ಲ ಎನ್ನುವುದು ಜಯನ್ ಅವರ ಅಭಿಪ್ರಾಯವಾಗಿತ್ತು.

                                                          ---

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ಸಿನಿಮಾ ಚರಿತ್ರೆ : ಸಮಾಜ, ಸಂಸ್ಕøತಿ ಮತ್ತು ರಾಜಕಾರಣ

ಕರ್ನಾಟಕದಲ್ಲಿ ಸೂಫಿಗಳು

ಚಾರಿತ್ರಿಕ ಕೃತಿಯ ಹಲವು ಓದಿನ ಸಾಧ್ಯತೆಗಳು: ಹಿಂದ್ ಸ್ವರಾಜ್ ಮಾದರಿ