ಸವೆನ್ ಸಮುರಾಯ್ (1954 )ಒಂದು “ಕೆನೆಟಿಕ್ ಎಕ್ಸ್‍ಪೀರಿಯನ್ಸ್”

 

ಅಕಿರಾ ಕುರೋಸವಾನ ಸಿನಿಮಾಗಳ ಬಗ್ಗೆ ಯಾರಿಗೂ ಹೆಚ್ಚಿಗೆ ತಕರಾರಿಲ್ಲವಾದರೂ ಕೂಡಾ ಆತನ ಸಿನಿಮಾಗಳ ಒಟ್ಟು ಆಕೃತಿಯ ಬಗ್ಗೆ, ಆತನ ಸಿನಿಮಾಗಳನ್ನು ಒಟ್ಟಿಗೆ ಸಮಗ್ರವಾಗಿ ನೋಡಬೇಕೇ? ಅಥವಾ ಬಿಡಿಬಿಡಿಯಾಗಿ ಅಂದರೆ ಸಂರಚನೀಯವಾಗಿ ನೋಡಬೇಕೇ? ಎನ್ನುವುದರ ಬಗ್ಗೆ ವಿಷಯ ಭೇದವಿದೆ. ಪ್ರಖ್ಯಾತ ಸಿನಿಮಾ ವಿಮರ್ಶಕ ರೋಜರ್ ಇಬರ್ಟ್ ಮತ್ತು ಭಾರತದ ಸಿನಿಮಾ ವಿದ್ವಾಂಸ, ಎಂ.ಕೆ. ರಾಘವೇಂದ್ರ ಅವರು ಕುರೋಸವಾನ ಸಿನಿಮಾಗಳನ್ನು ಸಮಗ್ರವಾಗಿ (ಇಂಟಗ್ರಲ್) ನೋಡಬೇಕಾಗುತ್ತದೆಂದರೆ, ಕುರೋಸವಾನ ಸಿನಿಮಾಗಳ ಬಗ್ಗೆ ಅಧ್ಯಯನ ಮಾಡಿದ ಮತ್ತು ಒಂದು ರೀತಿ ಆತನ ಸಿನಿಮಾಗಳ ವಕ್ತಾರನಂತಿರುವ ಡೊನಾಲ್ಡ್ ರಿಚೀ, ಕುರಸೋವಾನ ಎಲ್ಲಾ ಕೃತಿಗಳನ್ನು ಬಿಡಿಬಿಡಿಯಾಗಿ, ರಾಚನಿಕ ನೆಲೆಯಿಂದ ನೋಡಬೇಕಾಗುತ್ತದೆ ಎನ್ನುತ್ತಾನೆ. ಇವೆರಡೂ ವಿಶಿಷ್ಠ ನೆಲೆಗಳ ಹೊರತಾಗಿಯೂ ಕೂಡಾ ಕೆಲವು ಚಿಂತಕರು, ಮತ್ತು ಕುರೋಸವಾನ ಸಿನಿಮಾಗಳು ಪುನರ್ ಓದನ್ನು,ವೀಕ್ಷಣೆಯನ್ನು ನಿರ್ಮಿಸುವಂತಹ ನೆಲೆಯಲ್ಲಿಯೇ ನೋಡಬೇಕು ಎನ್ನುತ್ತಾರೆ.ಉದಾಹರಣೆಗೆ ಜಾಗತೀಕರಣ, ಪರಿಸರ, ಅಭಿವೃದ್ಧಿ, ವಿನಾಶ, ಯುದ್ಧ, ನರಮೇಧ, ಹಿಂಸೆ, ಮಾನವಹಕ್ಕುಗಳ ಉಲ್ಲಂಘನೆ, ನವಸಾಮ್ರಾಜ್ಯಶಾಹೀ ಮುಂತಾದ ವಿಷಯಗಳು ವರ್ತಮಾನದಲ್ಲಿ ಚರ್ಚೆಗೆ ಬಂದಾಗ ಆತನ ಪ್ರವಾದೀತನದ, ಮಾನವಕಾಳಜಿಯ ಸಿನಿಮಾಗಳು, ಮುಖ್ಯವಾಗಿ ಡೆರ್ಸು ಉಝಲ,ಇಕಿರು,ರಪ್ಸಡಿ ಇನ್ ಆಗಸ್ಟ್, ಕಾಗೆಮುಶಾ ಮತ್ತು ಡ್ರೀಮ್ಸ್ ಸಿನಿಮಾಗಳು ಸಮನಾಂತರವಾಗಿ ಸುಳಿದು ಚರ್ಚೆಗೆ ಸಹಕರಿಸುತ್ತದೆ. ಡ್ರೀಮ್ಸ್ ಸಿನಿಮಾದ ವಾಟರ್ ಮಿಲ್, ಡೆರ್ಸು ಉಝುಲದ ಡೆರ್ಸುವಿನ ನಗರದ ವಿಶ್ಲೇಷಣೆಯಂತಹ ಕೆಲವು ಪ್ರಕರಣಗಳು, ಗಾಂಧಿಯ ಹಿಂದ್ ಸ್ವರಾಜ್‍ನ ಮೂರ್ತರೂಪ, ಇಮೇಝರಿಯಾಗಿ ಕೂಡಾ ಕಂಡು ಬರುತ್ತದೆ. ವೈಯುಕ್ತಿಕವಾಗಿ ಈ ಮೂರೂ ಕ್ರಮಗಳೂ ಕೂಡಾ ಕುರೋಸವಾ ಸಿನಿಮಾಗಳ ಬಗ್ಗೆ ಮುಖ್ಯವೆಂದೇ ನನ್ನ ಭಾವನೆ, ಯಾಕೆಂದರೆ ಅವು ಮೂರೂ ಕೂಡಾ ಮೂರು ರೀತಿಯ ವಿಭಿನ್ನ ಕ್ರಮ, ದೃಷ್ಟಿಯನ್ನು ನೀಡುತ್ತದೆಂದೇ ನನ್ನ ಗ್ರಹಿಕೆ.

ಕುರೋಸವಾನ ಸವೆನ್ ಸಮುರಾಯ್, ಸಿನಿಮಾವನ್ನು ಅತ್ಯಂತ ಘನವಾದ ತಾತ್ವಿಕ ಜಿಜ್ಞಾಸೆಯ ಕ್ರಮದಲ್ಲಿ ನೋಡಲಾಗದಿದ್ದರೂ ಕೂಡಾ, ಒಂದು ಪರಿಪೂರ್ಣ ಸಿನಿಮಾ ನಿರ್ಮಾಣ(ಮೇಕಿಂಗ್), ಕಲಾತ್ಮಕ ಪ್ರಾಮುಖ್ಯತೆ ಮತ್ತು ಒಂದು ಅನನ್ಯ ಸಮುರಾಯ್ ಸಿನಿಮಾದ ಮಾದರಿಯಾಗಿ ನೋಡಬಹುದಾಗಿದೆ. ಈ ಸಿನಿಮಾ ಆತನನ್ನು ಜಗತ್ತಿನ ಪ್ರಮುಖ ನಿರ್ದೇಶಕರುಗಳಲ್ಲೇ ಅತ್ಯದ್ಭುತ ಕಲಾಕಾರ (ಕ್ರಾಫ್ಟ್ಸ್‍ಮೆನ್) ನನ್ನಾಗಿಸಿದಂತಹ ಸಿನಿಮಾ. ಸ್ವಭಾವತ: ವೈವಿಧ್ಯತೆಯ ಸಿನಿಮಾಗಳನ್ನು ಮಾಡಿದಂತಹ ಕುರೋಸವಾನ ಸಮುರಾಯ್ ಸಿನಿಮಾ ನಾಯ್ರ್ (ವಿಧ)ನ ಅತ್ಯಂತ ಪ್ರಮುಖ ಸಿನಿಮಾ ಸವೆನ್ ಸಮುರಾಯ್. ಅವನ ಇನ್ನೊಂದು ಸಮುರಾಯ್ ಸಿನಿಮಾ, ‘ದಿ ಹಿಡನ್ ಫೋರ್ಟ್ರೆಸ್ ಮಹತ್ವದ್ದಾದರೂ ಕೂಡಾ ಇಡಿಯಾಗಿ ಎಲ್ಲಾ ಬಗೆಯಲ್ಲೂ ಕೂಡಾ ಸೈ ಅನಿಸಿಕೊಂಡಿರುವ ಸಿನಿಮಾ ‘ಸವೆನ್ ಸಮುರಾಯ್. ಈ ಸಿನಿಮಾ ಎಷ್ಟು ಆಕರ್ಷಕವಾಗಿತ್ತೆಂದರೆ ಜಾನ್ ಫೋರ್ಡ್, ಜಾರ್ಜ್ ಸ್ಟುರ್ಗಸ್ ಮತ್ತು ಕ್ವಿಂಟನ್ ಟರಾಂಟಿನೋ ಕೂಡಾ ಇದರಿಂದ ಸಾಕಷ್ಟು ಪ್ರಭಾವಿತರಾಗಿದ್ದರು. ಸ್ಟುರ್ಗಸ್ ಅಂತೂ ಇಂಗ್ಲೀಷ್‍ನಲ್ಲಿ ‘ಮ್ಯಾಗ್ನಿಫಿಶಂಟ್ ಸವೆನ್ ಸಿನಿಮಾ ಮಾಡಿದ್ರು ಇದರಿಂದ ಪ್ರೇರಿತರಾಗಿ.  

ಸವೆನ್ ಸಮುರಾಯ್ ಕಥೆ ಭಾರೀ ವಿಶಿಷ್ಠವಾದುದು. ಜಾಗತಿಕ ನಿರ್ದೇಶಕರುಗಳ ಪೈಕಿ ಅತ್ಯುತ್ತಮವಾಗಿ ಕಥೆ ಹೇಳುವ ಕುಶಲತೆ ಸಿದ್ಧಿಸಿರುವುದೂ ಕೂಡಾ ಕುರೋಸವಾನಿಗೆ. ಒಂದು ರೀತಿ ನಾವು ನಮ್ಮಜ್ಜಿ ಬಾಯಿಂದ ಕಥೆ ಕೇಳಿದ ರೀತಿಯಲ್ಲೇ ‘ಒಂದಾನೊಂದು ಕಾಲದಲ್ಲಿ, ಒಂದ್ಸಲ ಎನ್ನುವ ರೀತಿಯಲ್ಲೇ ಅವನ ಹೆಚ್ಚಿನ ಸಿನಿಮಾಗಳು ಕಥೆಯನ್ನು ಹೇಳುತ್ತವೆ. ಸವೆನ್ ಸಮುರಾಯ್ (1954) ಸಿನಿಮಾದಲ್ಲಿ ಬರುವುದು ಏಳು ಜನ ತಲವಾರು ವೀರರ, ಸಮುರಾಯ್‍ಗಳ ಕಥೆ. ಜಪಾನಿನ ಒಂದು ಹಳ್ಳಿ, ಆ ಹಳ್ಳಿಗೆ ಯಾವಾಗಲೂ ಕೂಡಾ ಢಕಾಯಿತರು ಲೂಟಿ ಮಾಡಿ ಅಲ್ಲಿನ ಧವಸಧಾನ್ಯ, ನಗನಾಣ್ಯ ಕದಿಯುತ್ತಿದ್ದರು. ಜೀವಹಾನಿ, ಭೌತಿಕ ಹಾನಿಯನ್ನೂ ಕೂಡಾ ಮಾಡುತ್ತಿದ್ದರು. ಇಂತಹ ಸಂದರ್ಭದಲ್ಲಿ ಆ ಹಳ್ಳಿಯ ಜನ ತಮ್ಮ ಹಳ್ಳಿಯನ್ನು ಢಕಾಯಿತರಿಂದ ರಕ್ಷಿಸಲು ಏಳು ಜನ ಸಮುರಾಯ್ ವೀರರನ್ನು ನೇಮಕ ಮಾಡಿಕೊಳ್ಳುತ್ತಾರೆ. ಹಳ್ಳಿಯ ಜನ ಈ ಸಮುರಾಯ್‍ಗಳನ್ನು ನೇಮಕ ಮಾಡುವ ರೀತಿ-ನೀತಿ ಪ್ರಕ್ರಿಯೆ, ಅದಕ್ಕೆ ಪ್ರತಿಯಾಗಿ ಸಮುರಾಯ್‍ಗಳು ಪ್ರಕಟಪಡಿಸುವ ಸಾಹಸ, ಅವರುಗಳು ರಸ್ತೆಯಲ್ಲಿ ನಡೆದು ಸಾಗುತ್ತಿದ್ದರೆ ನಿಂತಲ್ಲಿಂದಲೇ ಪರೀಕ್ಷಾ ರೂಪದ ಬಾಣದ ದೃಷ್ಟಿಯನ್ನು ಎಸೆಯುವ ಜನರ ಮನೋಭಾವ, ಪರೀಕ್ಷಿಸುವ ಕ್ರಮ, ಅಂತಿಮವಾಗಿ ಹಲವಾರು ಮುಖಾಮುಖಿಗಳಲ್ಲಿ ಸಮುರಾಯ್‍ಗಳು ಢಕಾಯಿತರನ್ನು ಹಿಮ್ಮೆಟ್ಟಿಸುವುದೇ ಸಿನಿಮಾದ ಕಥಾವಸ್ತು. ಒಂದು ಸಮುರಾಯ್ ಡ್ರಾಮಾವಾಗಿ ಸವೆನ್ ಸಮುರಾಯ್ ಅದ್ಭುತವಾಗಿ ಅಭಿನಯಿತಗೊಂಡಿದೆ. ಇಡೀ ಸಿನಿಮಾದಲ್ಲಿನ ಚಲನಶೀಲತೆ, ಅದು ಫೈಟಿಂಗ್‍ನಲ್ಲಿ ಇರಬಹುದು ಅಥವಾ ಢಕಾಯಿತರು ಬಂದಾಗ ಹಳ್ಳಿಯ ಜನ ಹೆದರಿ ಪಲಾಯನಗೈದು ಅಡಗುವ ಸಂಗತಿಯಿರಬಹುದು, ಇಡೀ ಸಿನಿಮಾವೇ ಒಂದು ರೀತಿಯ ಪ್ರವಾಹದ ಹಾಗೆ ಕಾಣಿಸುತ್ತದೆ. ಸವೆನ್ ಸಮುರಾಯ್ ಅತ್ಯಂತ ಸರಳವಾದಂತಹ, ನೇರವಾದಂತಹ ಸಮುರಾಯ್ ಕಥನ. ಸಮುರಾಯ್‍ಗಳ ಹಿಂದಿರುವಂತಹ ಸಮಕಾಲೀನ ಮತ್ತು ಭೌತಿಕ ಕಾರಣಗಳನ್ನು ವಿವರಿಸುತ್ತಾ ಈ ಸಿನಿಮಾ ಸಂಕೀರ್ಣವಾಗುವುದಿಲ್ಲ.ಸೆವೆನ್ ಸಮುರಾಯ್ ಬೇರೆಯೇ ದಿಕ್ಕಿನಲ್ಲಿ ಸಾಗುತ್ತುದೆ. ಸಮಕಾಲಿಕ ಕಥೆಯೊಂದರ ಕಲಾತ್ಮಕ ಅಭಿವ್ಯಕ್ತಿಯೇ ಅದಕ್ಕೆ ಬಹುಮುಖ್ಯವಾಗುತ್ತದೆ.ಬಹುಶ: ಜಪಾನಿನ ಇನ್ನೊಬ್ಬ ಪ್ರಸಿದ್ಧ ನಿರ್ದೇಶಕ ಮಸಾಕೀ ಕೊಬಾಯಾಶಿಯ ‘ಸೆಪ್ಪುಕು ಅಥವಾ ಹರಾಕಿರಿ(1902) ಸಿನಿಮಾ ಸಮುರಾಯ್‍ಗಳ ಕಥಾವಸ್ತುವಿನ ಮೇಲೆ,ಅಂದರೆ ಸಮುರಾಯ್ ವ್ಯವಸ್ತೆ ನಿರ್ಮಿತವಾದಂತಹ ಸಮಾಜೋ-ಆರ್ಥಿಕ ಮತ್ತು ಭೌತಿಕ ಅಂಶಗಳ ಮೇಲೆ ಆಧರಿತವಾದಂತಹ ಒಂದು ಅಪೂರ್ವವಾದಂತಹ ಸಂಕೀರ್ಣ ಸಿನಿಮಾ. ಸವೆನ್ ಸಮುರಾಯ್‍ನಲ್ಲಿ ಕುರಸೋವಾನಿಗೆ ಆ ಉದ್ದೇಶವಿರಲಿಲ್ಲ ಮತ್ತು ಸಮುರಾಯ್, ಸಮುರಾಯ್ ಕೋಡ್, ಸಾವು ಮತ್ತು ಗೌರವದ ಚರ್ಚೆಗಿಂತ ಆ ಕಾಲದ ಸೌಂದರಾತ್ಮಕ ಸರಳತೆಯನ್ನು, ಪಾತ್ರಗಳ ನಡುವಿನ ಸಹಜ ಪ್ರಾಕೃತಿಕವಾದ ಸಂಬಂಧವನ್ನು, ಅವರುಗಳ ವೈಯುಕ್ತಿಕ ತತ್ವಬದ್ಧತೆಯನ್ನು ಚರ್ಚಿಸುತ್ತದೆ. ಒಂದು ರೀತಿ ಮಾನವೀಯತೆ ಮತ್ತು ವೈಯುಕ್ತಿಕತೆಯ ಆಶಾವಾದದ ಪ್ರತೀಕವಾಗಿಯೂ ಕೂಡಾ ಸವೆನ್ ಸಮುರಾಯ್ ನಮ್ಮೆದುರು ಕಾಣಿಸುತ್ತದೆ.

ಸವೆನ್ ಸಮುರಾಯ್ ಸರಿಸುಮಾರು 270 ನಿಮಿಷದ ಸಿನಿಮಾ. ಕುರೊಸವಾ ಸಿನಿಮಾವನ್ನು ಅತ್ಯಂತ ದಕ್ಷವಾಗಿ ಸಾಗಿಸುವುದು ,ಆತನ ಸರಳ ಕಥನ ತಂತ್ರ ಮತ್ತು ಇಡೀ ಸಿನಿಮಾದ ಪ್ರಚ್ಛನ್ನ ಚಲನೆ ಅಥವಾ ಅನುಭವ ನಮ್ಮನ್ನು ಬಹಳ ಮುಖ್ಯವಾಗಿ ಕಾಡುತ್ತದೆ. ಇದನ್ನೇ ಡೊನಾಲ್ಡ್ ರಿಚೀ “ಕೆನೆಟಿಕ್ ಎಕ್ಸ್‍ಪೀರಿಯನ್ಸ್ ಎನ್ನುತ್ತಾನೆ. ಪಶ್ಚಿಮದ ತಂತ್ರಜ್ಞಾನೀಯ ವೈಧಾನಿಕತೆ ಮತ್ತು ಪೂರ್ವದ ಕೌಶಲ್ಯದ ಶುದ್ಧ ಅನುಸಂಧಾನವೆಂದಿದನ್ನು ಕೆಲವು ಸಿನಿಮಾ ವಿಮರ್ಶಕರು ಕರೆದಿರುವುದೂ ಕೂಡಾ ಅತ್ಯಂತ ಸಮಂಜಸವಾಗಿದೆ. ಬಹುಶ: ಈ ರೀತಿಯ ಚಾರಿತ್ರಿಕ ಕಥಾವಸ್ತು, ಆಕರ್ಷಕ ಕಥನ ಕ್ರಮ, ಚೈತನ್ಯದ ಪ್ರಚ್ಛನ್ನ ಚಲನೆ ಮತ್ತು ತುಸುಮಟ್ಟಿನ ತಾತ್ವಿಕ ಹಿನ್ನೆಲೆಯೇ, ಈ ರೀತಿಯ ಸಮುರಾಯ್ ಸಿನಿಮಾದ ವಿಧ ಮತ್ತು ಸಾಂಸ್ಕøತಿಕ ಮಿತಿಗಳ ಹೊರತಾಗಿಯೂ ಕೂಡಾ, ಸವೆನ್ ಸಮುರಾಯ್ ಸಿನಿಮಾವನ್ನು ಒಂದು ಜಾಗತಿಕವಾದ, ವಿಶ್ವಾತ್ಮಕವಾದ ಸ್ವೀಕಾರಾರ್ಹ ಕಲಾಕೃತಿಯಾಗಿ ಜಗತ್ತು ಸ್ವೀಕರಿಸಿತು. ಕುರಸೋವಾ ‘ಸವೆನ್ ಸಮುರಾಯ್ ಸಿನಿಮಾದಲ್ಲಿ ವಾಸ್ತವ ಮತ್ತು ಭ್ರಮೆಗಳೆರಡನ್ನೂ ಕೂಡಾ ಅತ್ಯಂತ ಸಮಪಾಕದಿಂದ ಬೆರೆಸಿದ್ದೂ ಕೂಡಾ ಜಗತ್ತು ಅಚ್ಚರಿ ಮತ್ತು ಪ್ರೀತಿಯಿಂದ ಈ ಸಿನಿಮಾವನ್ನು ಸ್ವೀಕರಿಸುವಂತೆ ಮಾಡಿತು.

ಸವೆನ್ ಸಮುರಾಯ್‍ನ, ಏಳೂ ಸಮುರಾಯ್ ಪಾತ್ರಗಳು ಒಂದು ರೀತಿಯಲ್ಲಿ ಏಳು ವಿಭಿನ್ನವಾದಂತಹ ವ್ಯಕ್ತಿತ್ವಗಳನ್ನು ಪ್ರತಿನಿಧಿಸುವಂತಹ ಪಾತ್ರಗಳೂ ಆಗಿವೆ. ಅವಗಳು ಅತ್ಯಂತ ವೈಯುಕ್ತಿಕವಾದ ಅನನ್ಯತೆಯನ್ನು ಹೊಂದಿದ್ದಾಗ್ಯೂ ಕೂಡಾ ಒಂದು ರೀತಿಯ ಸಹಜ-ಜೈವಿಕವೆಂಬಂತಹ ಮಾನವೀಯ ಸಂಬಂಧಗಳ ಸ್ವರೂಪವೂ ಆಗಿವೆ. ತಮ್ಮನ್ನೂ ಬಾಡಿಗೆಗೆ ಪಡೆದ ಹಳ್ಳಿ ಮತ್ತು ಬಡ ಹಳ್ಳಿಗರ ಮೇಲೂ ಕೂಡಾ ಅವರುಗಳು ಸಹಜ ಸಂಬಂಧ, ಸ್ನೇಹ ಮತ್ತು ಪಾಲನೆಯ ಗುಣವನ್ನು ಚಾಚುತ್ತವೆ ಕೂಡಾ. ಈ ನೆಲೆಯಲ್ಲಿ ಸವೆನ್ ಸಮರಾಯ್ ಸಿನಿಮಾವನ್ನು ಬರಿಯ ಸಮುರಾಯ್ ವಿಧದ್ದೆಂದು ನೋಡದೇ ಅಂತ:ಕರಣದ ಆತ್ಮಸಾಕ್ಷಿಯ ದ್ಯೋತಕವಾಗಿಯೂ ಕೂಡಾ ನೋಡಬಹುದು. ಈ ಸಮುರಾಯ್‍ಗಳು ಆಗಿನ ಕಾಲಘಟ್ಟದಲ್ಲಿ ಊಳಿಗಮಾನ್ಯ ವ್ಯವಸ್ಥೆಯ ನಾಶದಿಂದ, ನಾಯಕನಿಲ್ಲದೆ ತಿರುಗಾಡುತ್ತಿದ್ದವರು. ತಾಂತ್ರಿಕವಾಗಿ ಸಮುರಾಯ್ ಎಂದೆನಿಸಿಕೊಳ್ಳಬೇಕಾದರೆ ಅವರಿಗೆ ಒಬ್ಬ ಯಜಮಾನ ಬೇಕು. ಆದ್ದರಿಂದಲೇ ಅವರನ್ನು ಆ ಕಾಲದಲ್ಲಿ ರೊನಿನ್, ಅಂದರೆ ಯಜಮಾನನಿರದ ಸಮುರಾಯ್ ಎಂದೇ ಕರೆಯಲಾಗತ್ತಿತ್ತು. ಅವರುಗಳು ಹೇಗೆ ಬೇಕೋ ಹಾಗೆ ಇರಬಹುದಿತ್ತು ತಮ್ಮ ಇಚ್ಛೆಗನುಸಾರವಾಗಿ. ಆದರೆ ಇಂತಹ ಔಪಚಾರಿಕತೆಯ ಕಟ್ಟಿನಲ್ಲಿಲ್ಲದ ರೊನಿನ್‍ಗಳನ್ನು ರೊನಿನ್‍ಗಳೆನ್ನದೇ ಕುರೋಸವಾ ಸಮುರಾಯ್‍ಗಳೆಂದು ಕರೆಯುವುದು ಒಂದು; ಕುರೋಸವಾ ತನ್ನ ಪಾತ್ರಗಳಿಗೆ ಒಂದು ಸಮಾಜಮುಖಿಯಾದಂತಹ ಧನಾತ್ಮಕ ಮಾನವೀಯ ಮುಖವನ್ನು ಧಾರೆಯೆರೆದುದರ ಪ್ರತೀಕವಾಗಿಯೂ ಕೂಡಾ ಗಮನಿಸಬಹುದಾಗಿದೆ. ಈ ನೆಲೆಯಲ್ಲಿಯೇ ಪ್ರಖ್ಯಾತ ವಿಮರ್ಶಕ ರೋಜರ್ ಇಬರ್ಟ್, “ಇಂತಹ ಪಾತ್ರಗಳು ಸಮಾಜವಿಧಿಸಿದ ಪಾತ್ರಗಳಾಗಿವೆ’’ ಎಂದೇ ಕರೆಯುತ್ತಾನೆ. ಕುರೋಸವಾನ ಈ ಸಮುರಾಯ್‍ಗಳೂ ಕೂಡಾ ಸ-್ವಹಿತಾಸಕ್ತಿಯನ್ನು ತೊರೆದು ಸಮಾಜಮುಖಿಯಾಗಿ, ಸಮುರಾಯ್‍ಗಳ ಅಧಿಕೃತ ನೀತಿ ಸಂಹಿತೆಯಾದ ‘ಬುಷಿಡೋ ಕೋಡ್ಗಳಲ್ಲಿ ನಿರೂಪಿತವಾಗಿರುವ ಮಾನವೀಯ ಕಾಳಜಿಯ ಪಾತ್ರಗಳ ಹಾಗೆಯೇ ಗೋಚರಿಸುತ್ತಾರೆ.

ಈಗಾಗಲೇ ಪ್ರಸ್ತಾಪಿಸಿದ ಹಾಗೆ ಈ ಏಳೂ ಸಮುರಾಯ್ ಪಾತ್ರಗಳೂ ಕೂಡಾ ಏಳು ಬಗೆಯ ವಿಭಿನ್ನ ವ್ಯಕ್ತಿತ್ವದ ಸೂಚಕಗಳಾಗಿವೆ. ರೈತರು, ಹಳ್ಳಿಯ ಜನ ಮೊತ್ತ ಮೊದಲು ಸಮುರಾಯ್ ನಾಯಕ ‘ಕಾಂಬಿ (ತಕಾಶಿ ಶಿಮುರಾ)ಯನ್ನು ಎದುರುಗೊಂಡಾಗ ಆತ ಅತ್ಯಂತ ಗರಿಷ್ಠ ವಿಧೇಯತೆ ಮತ್ತು ಶೌರ್ಯವನ್ನು ತೋರಿಸುತ್ತಾನೆ ಮತ್ತು ಹಳ್ಳಿಯವರು ಇಂತಹ ಸಮುರಾಯ್‍ಗಳ ಬಗೆಗೆ ಹೊಂದಿದ್ದ ಪೂರ್ವಾಗ್ರಹವನ್ನು ಕೂಡಾ ಬಿಡಿಸುತ್ತಾನೆ. ಕುರಸೋವಾ ಇಲ್ಲಿ ಕಾಂಬಿಯನ್ನು ಮಸಾಕೀ ಕೊಬಾಯಾಶೀಯ ಸೆಪ್ಪುಕು-ಹರಾಕಿರಿಯ ‘ತತ್ಸುಯಾ ನಕಾಡಾಯ್ನ ಸಮುರಾಯ್ ಪಾತ್ರಕ್ಕಿಂತ ವಿಭಿನ್ನವಾಗಿ ನಿರ್ವಹಿಸುತ್ತಾನೆ. ಕಾಂಬಿ ಪಾತ್ರ ನಿರ್ವಹಿಸಿದ ‘ತಕಾಶೀ ಶಿಮುರಾನ ಅಭಿನಯ ಕೂಡಾ ಅತ್ಯದ್ಭುತವಾಗಿದೆಯಿಲ್ಲಿ. ನನಗನಿಸಿದ ಹಾಗೆ ಕುರೋಸವಾನ ‘ಇಕಿರು ಸಿನಿಮಾವನ್ನು ಹೊರತುಪಡಿಸಿದರೆ ಶಿಮುರಾ ತನ್ನ ಮನೋಜ್ಞ ಅಭಿನಯವನ್ನು ನೀಡಿದ್ದು ಸವೆನ್ ಸಮುರಾಯ್‍ನಲ್ಲಿ ಎಂದೇ ನನ್ನ ಭಾವನೆ. ಕಾಂಬಿಯ ಶೌರ್ಯದ ಜತೆಗೆ ಆತನ ತೆಳು ಹಾಸ್ಯದ ಗುಣದಿಂದಾಗಿಯೇ ಆತ ಹಳ್ಳಿಯ ಜನರ ಮನಸನ್ನೂ ಕೂಡಾ ಗೆಲ್ಲಲು ಸಾಧ್ಯವಾಗಿದ್ದು ಮತ್ತು ಹಳ್ಳಿಯ ಜನರೂ ಕೂಡಾ ಸವೆನ್ ಸಮುರಾಯ್‍ಗಳ ತಂಡದ ನಾಯಕತನವನ್ನು ಆತನಿಗೆ ನೀಡಿದ್ದು. ಆತನ ಈ ಹೃದ್ಯ ಸಂಬಂಧ ಸ್ಥಾಪನೆಯ ಗುಣದಿಂದಾಗಿಯೇ ಉಳಿದ ಸಮುರಾಯ್‍ಗಳು ಆತನ ಆಹ್ವಾನವನ್ನು ಸ್ವೀಕರಿಸಿ ಈ ತಂಡದಲ್ಲಿ ಬಂದು ಸೇರಿಕೊಂಡಿದ್ದು. ಒಂದು ರೀತಿ ಕುರೋಸವಾ ಪ್ರಜ್ಞೀಯ ಆದರ್ಶ ಮತ್ತು ವ್ಯಕ್ತಿತ್ವದ ಲಕ್ಷಣಗಳನ್ನು ಇಂತಹ ಪಾತ್ರಗಳಲ್ಲಿ ತುಂಬಿ ನಿರ್ವಹಿಸುತ್ತಾನೆ. ಸಮುರಾಯ್ ಕೋಡ್‍ಗೆ ವಿರುದ್ಧವಾಗಿ ಕಾಂಬಿಯ ತಲೆಯನ್ನು ಬೋಳಿಸುವ ಮತ್ತು ಅದಕ್ಕೆ ಪೂರಕವಾದ ಆದರ್ಶ ನಾಯಕತ್ವ ಮತ್ತು ಸ್ವಾರ್ಥರಹಿತತೆಯನ್ನು ತುಂಬಿಸುವ ಕುರೋಸವಾನ ಪ್ರಯತ್ನಗಳು ನಿಚ್ಚಳವಾಗಿ ಇದನ್ನು ಪ್ರಕಟಪಡಿಸುತ್ತವೆ. ಇನ್ನು ‘ತೋಶಿರೋ ಮಿಫುನೆಯ ಪಾತ್ರವೂ ಕೂಡಾ ಹಾಗೆ, ಅದೊಂದು ಮನೋಭಾವ, ವ್ಯಕ್ತಿತ್ವದ ಕನ್ನಡಿಯಾಗಿಯೇ ಕಾಣಿಸುತ್ತದೆ. ಇಡೀ ಸಿನಿಮಾದ ಈ ಕೈನೆಟಿಕ್ ಚಲನೆ ಮತ್ತು ಅನುಭವ ಏನಿದೆ, ಅದರ ಸಾಕ್ಷಾತ್ಕಾರವಾಗುವುದೇ ಮಿಫುನೆಯಿಂದ, ಆತನ ಅದ್ಭುತ ಅಭಿನಯದಿಂದ.

ಸವೆನ್ ಸಮುರಾಯ್‍ನ ಸಿನಿಮಾದ ಮೂಲಕ ಜಪಾನಿನ ಸಮುರಾಯ್ ಸಿನಿಮಾ ಬಗೆಯಲ್ಲಿ ಒಂದು ರೀತಿ ಉತ್ಕಾøಂತಿಯೇ ಸಂಭವಿಸುತ್ತದೆ. ಅಲ್ಲಿಯವರೆಗೂ ಕೂಡಾ ಜಪಾನೀ ಸಿನಿಮಾಗಳಲ್ಲಿ ಸಮುರಾಯ್ ಎಂದರೆ, ಒಬ್ಬ ಅತಿಮಾನುಷ, ಅತಿಪ್ರಾಕೃತಿಕ, ಕೌಬಾಯ್ ಅಥವಾ ಮಾನವನಲ್ಲದ ಅಥವಾ ಸಹಜವಲ್ಲದ, ಸತ್ಯವಲ್ಲದ ಪಾತ್ರಾಭಿವ್ಯಕ್ತಿಯಾಗಿತ್ತು. ಆದರೆ ಈ ಸಿನಿಮಾ ಮಾತ್ರ ಏಳೂ ಸಮುರಾಯ್‍ಗಳನ್ನೂ ಕೂಡಾ ಒಂದು ರೀತಿಯ ಅಚ್ಛ ಮಾನವನ ಪ್ರತಿನಿಧಿಗಳಂತೆ ಚಿತ್ರ್ರಿಸುತ್ತದೆ. ಈ ಕಾರಣದಿಂದಲೇನೇ ಕಾಂಬೀ ಮತ್ತು ಮಿಫುನೆಯ ಪಾತ್ರಗಳು ಅಸಹಜವೆನ್ನುವ ರೀತಿಯ ಚಲನೆ ಸಾಹಸವನ್ನು ದರ್ಶಿಸಿಯೂ ಕೂಡಾ ಮಾನವ ಸಹಜವಾದಂತಹ ಹಾಸ್ಯವನ್ನು ಪ್ರಕಟಿಸುವ, ಕೀಟಲೆ ಮಾಡುವ, ಸಹಜ ಮಾನವರ ಗುಣಗಳನ್ನೂ ದರ್ಶಿಸುತ್ತವೆ. ಅಂತಹ ಗುಣಗಳೇ ಈ ಪಾತ್ರಗಳ ಪ್ರಭಾವಳಿಯಾಗಿಯೂ ಕೂಡಾ ಕಾಣಿಸುತ್ತದೆ. ಒಂದು ರೀತಿಯಲ್ಲಿ ರಾಬರ್ಟ್ ಅಲ್ಟ್‍ಮನ್ ಹೇಳಿದ ಹಾಗೆ, ‘ಸವೆನ್ ಸಮುರಾಯ್ ಮಾನವೀಯ ಗುಣಗಳ ಅಭಿವ್ಯಕ್ತಿಯ ಶೃಂಖಲೆ.

ಸವೆನ್ ಸಮುರಾಯ್ ಎಷ್ಟು ಪ್ರಸಿದ್ಧ ಸಿನಿಮಾವೆಂದರೆ ಅದು ‘ಸವೆನ್ ಸಮುರಾಯ್ ಇಫೆಕ್ಟ್ ಎನ್ನುವ ವಿದ್ಯಮಾನವನ್ನೇ ಸೃಷ್ಟಿಸಿತು. ಜಾನ್ ಸ್ವರ್ಜಸ್, ಸರ್ಗಿ ಲಿಯೋನ್, ಸ್ಟೀವ್ ಮೆಕ್‍ಕ್ವೀನ್, ಯೂಲ್ ಬ್ರೈನರ್, ಚಾರ್ಲ್ ಬ್ರಾನ್ಸ್‍ಸ್ ಮೊದಲಾದವರು ಇದನ್ನು ನೋಡಿ ಆಕರ್ಷಿತರಾಗಿ ಹೊಸ ಆಕಾರ, ಅಳತೆ, ಭಾಷೆ ಮತ್ತು ಕಥಾಮಾಧ್ಯಮದಲ್ಲಿ ಪುನರ್ ನಿರ್ಮಿಸಿದರೂ ಕೂಡಾ. ಸುಮಾರು 1975ರಲ್ಲಿ ಕ್ರಾಂತಿ ಮಾಡಿದ ಹಿಂದೀ ಸಿನಿಮಾ ‘ಶೋಲೆಗೆ ಪ್ರೇರಣೆ ಕೂಡಾ ಸವೆನ್ ಸಮುರಾಯ್. ಪಿಕ್ಸಾರ್‍ನ, ‘ಎ ಬಗ್ಸ್ ಲೈಫ್, ಜಪಾನೀ ಕಿರುಚಿತ್ರ ಸರಣಿಯಾದ ‘ಸಮುರಾಯ್-7’ ಎಲ್ಲವೂ ಈ ಪರಿಣಾಮದ ಪರಿಣಾಮಗಳೇ. ಬಹುಶ ಪುನ: ಪುನ: ನೋಡಿದರೂ ಕೂಡ ಬೋರ್ ಹೊಡೆಸದ, ಶಕ್ತಿಯ ಜತೆಯಲ್ಲೇ ಅನುರೂಪವಾಗಿ ಸಂಚರಿಸುವ ಹಾಗೆ ಮಾಡುವ ಜಗತ್ತಿನ ಅಪ್ರತಿಭ ಚಿತ್ರ ಸೂರಿಯ ಒಂದು ಅದ್ಭುತ ಹಿಸ್ಟೋರಿಕಲ್ ಥೀಮ್ ಎಂದರೆ, ‘ಸವೆನ್ ಸಮುರಾಯ್.

***

                                                         

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ಸಿನಿಮಾ ಚರಿತ್ರೆ : ಸಮಾಜ, ಸಂಸ್ಕøತಿ ಮತ್ತು ರಾಜಕಾರಣ

ಕರ್ನಾಟಕದಲ್ಲಿ ಸೂಫಿಗಳು

ಚಾರಿತ್ರಿಕ ಕೃತಿಯ ಹಲವು ಓದಿನ ಸಾಧ್ಯತೆಗಳು: ಹಿಂದ್ ಸ್ವರಾಜ್ ಮಾದರಿ