ಸಿನಿಮಾ ನೋಡುವ ಕ್ರಮ ಮತ್ತು ತಿಳಿಯುವ ನೆಲೆ
1
ಮನುಷ್ಯ ತಾನು ಸೃಜನಶೀಲವಾಗಿ ಕಂಡುಕೊಂಡಿರುವ
ಅವುಗಳ ಮೂಲಕ ಕಲಿಯುತ್ತಿರುವ ಹಾಗೂ ಅವುಗಳ ಮೂಲಕ ತನ್ನನ್ನು ಪ್ರಕಟಗೊಳಿಸಿಕೊಳ್ಳುತ್ತಿರುವ
ಮಾಧ್ಯಮಗಳಲ್ಲಿ ಕಥೆ, ಕಾದಂಬರಿ, ಸಣ್ಣಕಥೆ, ನಾಟಕಗಳಂತಹ ಸಾಹಿತ್ಯಿಕ ಹಾಗೂ ಸಂಗೀತ ಮತ್ತು ಸಿನಿಮಾಗಳು
ಬಹುಮುಖ್ಯವಾದವುಗಳಾಗಿವೆ. ಈ ಕಾರಣದಿಂದ ಶಾಲೆ-ಕಾಲೇಜುಗಳಲ್ಲಿ ಇದು ಶಿಕ್ಷಣ ವ್ಯವಸ್ಥೆ ಮತ್ತು ಬೋಧನಾಕ್ರಮ-ಪಠ್ಯದ(ಪೆಡಗಗಿ)
ಭಾಗವೂ ಆಗಿದೆ. ಆದರೆ ಭಾರತ ಮತ್ತು ಕನ್ನಡದ ಸಂದರ್ಭದಲ್ಲಿ ಸಾಹಿತ್ಯ ಮತ್ತು ಭಾಷೆಯ ಅಧ್ಯಯನದ ಸಂದರ್ಭದಲ್ಲಿ
ಸಾಹಿತ್ಯದ ವಿವಿಧ ಪ್ರಕಾರಗಳು ನೆಲೆಗೊಂಡಿವೆಯಾದರೂ ಕೂಡಾ ಈ ಸಂಗೀತ ಮತ್ತು ಸಿನಿಮಾಗಳು ಕರಿಕುಲಮ್‍ನ
ಭಾಗವಾಗಿಲ್ಲ. ಸಣ್ಣ ತರಗತಿಗಳಲ್ಲಿ ಮತ್ತು ಪ್ರೌಢಶಾಲೆಗಳಲ್ಲಿ ಈಗೀಗ ಆಡಿಯೋ-ವಿಶುವಲ್ ತರಗತಿ ಕೋಣೆಗಳನ್ನು
ಸ್ಥಾಪಿಸಿಲಾಗಿದೆಯಾದರೂ ಕೂಡಾ ಪಾಠ ಪ್ರವಚನಗಳಿಗೆ ಪೂರಕವಾಗಿ ವಿಜ್ಞಾನ, ಗಣಿತ ಮತ್ತಿತರ ಪಾಠ ಬೋಧನೆಯ
ವೀಡಿಯೋ ಪ್ರದರ್ಶನಗಳಿಗಷ್ಟೇ ಅವು ಸೀಮಿತವಾಗಿದೆ. ಇನ್ನು ನಮ್ಮಲ್ಲಿ ಪದವಿ ಮತ್ತು ಉನ್ನತ ಶಿಕ್ಷಣದ
ಪಠ್ಯಕ್ರಮದಲ್ಲಿ ಕೂಡಾ ಅವುಗಳು ಮುನ್ನೆಲೆಗೆ ಬಂದಿಲ್ಲ. ಎಷ್ಟೆಂದರೆ ಇಡೀ ಕರ್ನಾಟಕದಲ್ಲಿ ಸರಿಸುಮಾರು
ಕೆಲವೇ ಕೆಲವು ಅಂದರೆ ಐದರಿಂದ ಹತ್ತು ಸಂಸ್ಥೆಗಳಲ್ಲಿ ‘ಸಿನಿಮಾ’ ನೋಡುವಿಕೆ ಮತ್ತು ಅಧ್ಯಯನವು ಪಠ್ಯದ ಭಾಗವಾಗಿದೆ. ಎಷ್ಟೆಂದರೆ ಕನ್ನಡದ ಅನೇಕ ಜರ್ನಲಿಸಂ ಕಾಲೇಜುಗಳಲ್ಲಿ
ಕೂಡಾ ಸಿನಿಮಾ ನೋಡುವ ಮತ್ತು ಅಧ್ಯಯನ ಮಾಡುವಿಕೆ ಮಡಿವಂತಿಕೆಯ ವಿಷಯವಾಗಿದೆ.
ಸಿನಿಮಾ ಮಾಧ್ಯಮ ಅಥವಾ ಸಿನಿಮಾ ನೋಡುವಿಕೆ ಮತ್ತು ಅದನ್ನು ಒಂದು ಪಠ್ಯದ ರೀತಿಯಲ್ಲಿ ನೋಡುವ
ತುರ್ತು ಇಂದಿದೆ. ಸಾಹಿತ್ಯದ ಕೃತಿ ಮತ್ತು ಸಿನಿಮಾವನ್ನು ಪರಸ್ಪರ ಪೂರಕವಾಗಿ ನೋಡುವ, ಎದುರುಬದುರಾಗಿಸುವ
ಮತ್ತು ಅವುಗಳನ್ನು ಅಕ್ಕಪಕ್ಕದಲ್ಲಿರಿಸಿ ಒಂದು ಹೊಸ ಓದನ್ನು ಹಾಗೂ ತಿಳುವಳಿಕೆಯನ್ನು ಸಾಧಿಸುವ ಅಗತ್ಯ
ಮತ್ತು ಸಂದರ್ಭದಲ್ಲಿ ನಾವಿಂದಿದ್ದೇವೆ. ಮನುಷ್ಯನ ಜೀವನವು ಸಂಪೂರ್ಣ ಪ್ರತ್ಯೇಕೀಕೃತ ಮತ್ತು ವಿಭಾಗೀಕೃತ
ಅಲ್ಲ ಬದಲು ಇಲ್ಲಿ ಹಲವು ವೈವಿಧ್ಯದ, ವೈರುಧ್ಯದ ಕಲಸುಮೇಲೋಗರದ ಹಾಗೂ ಒಂದು ಇನ್ನೊಂದರ ಮೇಲೆ ಕೂರುವ ಮತ್ತು ಎಡತಾಕುವ ಕ್ರಮದಲ್ಲಿದೆ. ಅಂದರೆ ಮನುಷ್ಯನ ಎಲ್ಲ
ಬಗೆಯ ಅನುಭವಗಳು ಸೇರಿ ಆತನ ಸಮಗ್ರವೆನ್ನಬಹುದಾದ ಒಂದು ಅನುಭವ ಪ್ರಪಂಚವನ್ನು ನಿರ್ಮಿಸುವುದು ಬಹುಶ:
ಸಿನಿಮಾವೆಂಬ ಅನುಭವ ಮತ್ತದರ ಅನಂತ ಸಾಧ್ಯತೆಯು ಮನುಷ್ಯನ ಜನಾಂಗ ಮತ್ತು ತಲೆಮಾರನ್ನು ಇನ್ನೂ ಕೂಡಾ
ಸೃಜನಶೀಲವಾಗಿಸಬಲ್ಲದು ಮತ್ತು ಅದು ಆತನನ್ನು ಸುತ್ತಲಿನ ವಿದ್ಯಮಾನಗಳಿಗೆ ಪ್ರತಿಕ್ರಿಯಿಸಲು ಕೂಡಾ
ಕಲಿಸಬಲ್ಲದು. ಹೀಗೆ ಮನಷ್ಯನ ಅನ್ಯಾನ್ಯ ಅನುಭವದ ಸಂದರ್ಭದಲ್ಲಿ ಯಾವುದೋ ಒಂದು ಪ್ರಧಾನ, ಅಥವಾ ಇನ್ನೊಂದು
ಅಧೀನ ಅಥವಾ ಗೌಣ ಎಂಬುದಿಲ್ಲ. ಬದಲಿಗೆ ಪ್ರತೀ ಅನುಭವಗಳೂ ಪರಸ್ಪರ ಪೂರಕ. ಈ ನೆಲೆಯಲ್ಲಿ ಮನುಷ್ಯ ಕಂಡುಕೊಂಡ
ಸೃಜನಾತ್ಮಕ ನೆಲೆ ಮತ್ತು ಆಯಾಮಗಳೂ ಕೂಡಾ ಇದೇ ರೀತಿಯವಾಗಿದೆಯೆಂದು ಅರ್ಥೈಸಬಹುದಾಗಿದೆ. ಈ ಕಾರಣದಿಂದ
ಹೆಚ್ಚು ಹೆಚ್ಚು ಸಿನಿಮಾ ನೋಡುವಿಕೆ ಹೊಸ ದೃಷ್ಠಿ ಮತ್ತು ನೋಟವನ್ನೂ ತನ್ಮೂಲಕ ಹೊಸದಾದ ಒಂದು ತಿಳುವಳಿಕೆಯನ್ನು
ಕಲಿಸಬಲ್ಲದುದಾಗಿದೆ.
ಚಲನಚಿತ್ರ ಸೇರಿದಂತೆ ಯಾವುದೇ ಮಾಧ್ಯಮ ಎಳೆಯ ವಯಸ್ಸಿನಿಂದಲೇ ಪರಿಚಿತವಾಗುವುದು ಒಳಿತು. ಹೀಗಾದರೆ
ಕುವೆಂಪು, ಬೇಂದ್ರೆ, ಅಡಿಗ, ಲಂಕೇಶ್, ತೇಜಸ್ವಿ ಮತ್ತಿತರರ ಕೃತಿಗಳಂತೆಯೇ ಒಂದು ಸಿನಿಮಾ ಕೂಡಾ ಕೃತಿಯಾಗಬಲ್ಲದು
ಎನ್ನುವ ತಿಳುವಳಿಕೆ ಮೂಡುತ್ತದೆ. ಕನ್ನಡದ ಅನೇಕ ಸಾಹಿತಿಗಳೂ ಕೂಡಾ ಸಿನಿಮಾದಿಂದ ಸಾಕಷ್ಟು ಪ್ರೇರಿತರಾಗಿದ್ದರು
ಮತ್ತು ಅದರಿಂದ ಕಲಿತಿದ್ದರು. ಶಿವರಾಮ ಕಾರಂತ, ಗಿರೀಶ ಕಾರ್ನಾಡ್ ಮತ್ತು ಲಂಕೇಶರಂತೂ ಸಿನಿಮಾವನ್ನೂ
ನಿರ್ಮಿಸಿದ್ದರು. ಅವರಿಗೆ ಸಿನಿಮಾ ಕೂಡಾ ಒಂದು ಪ್ರಭಾವೀ ಮಾಧ್ಯಮವೆನ್ನುವ ನಿಜದ ಅರಿವಿತ್ತು. ಕಂಬಾರ
ಮತ್ತು ವಿಶೇಷವಾಗಿ ಗಿರೀಶ್‍ಕಾರ್ನಾಡ್ ಅವರಂತೂ ಸಿನಿಮಾ ಮಾಧ್ಯಮದ ಜತೆ ಅಪಾರ ನಂಟನ್ನೂ ಹೊಂದಿದ್ದರು.
ಸಮಕಾಲೀನ ಕನ್ನಡ ಸಾಹಿತ್ಯದ ಕೆಲವು ಸಾಹಿತಿಗಳು ಸಿನಿಮಾದಿಂದ ಪ್ರೇರಣೆ ಪಡೆದು ತಮ್ಮ ಸಾಹಿತ್ಯಿಕ ಕೃತಿಗಳನ್ನು
ರಚಿಸಿದ್ದೂ ಕೂಡಾ ಉಂಟು. ಹೀಗೆ ಅವರಿಗ್ಯಾರಿಗೂ ಇಲ್ಲದ ಮೈಲಿಗೆ ನಮಗ್ಯಾಕೆ? ಬಹುಶ: ಈ ನೆಲೆಯಲ್ಲಿ
ನಮಗೊಂದು ಹೊಸ ಎಚ್ಚರ ಮತ್ತು ಅರಿವು ಬೇಕು.
ಸಾಹಿತ್ಯ ಮತ್ತು ಸಿನಿಮಾದ ಆದ್ಯತೆ ಮತ್ತು ಕೇಂದ್ರಗಳೂ ಕೂಡಾ ಸರಿಸುಮಾರು ಒಂದೇ ಆಗಿವೆ. ಮನುಷ್ಯನ
ನೋವು, ನಲಿವು, ಹತಾಶೆ, ಪ್ರವೃತ್ತಿ, ಬದುಕು, ದೈನ್ಯ, ಹೋರಾಟ, ದುಡಿಮೆ ಮುಂತಾದವು ಅವುಗಳಲ್ಲಿ ಪ್ರಮುಖವಾಗಿದೆ.
ಒಂದು ಒಳ್ಳೆಯ ಸಾಹಿತ್ಯ ಕೃತಿಯಷ್ಟೇ ಪ್ರಮುಖವಾಗಿ ಸಿನಿಮಾ ಕೃತಿಯೂ ಕೂಡಾ ಇವುಗಳನ್ನು ಒಳಗೊಳ್ಳುತ್ತದೆ.
ಈ ನೆಲೆಯಲ್ಲಿ ಒಂದು ಬಗೆಯ ವಿಶ್ವಾತ್ಮಕ ಸಂಬಂಧಗಳ ಜತಕನ್ನು ಸಿನಿಮಾಗಳು ಸಾಹಿತ್ಯಕ ಕೃತಿಗಳಂತೆಯೇ
ಸಾಧಿಸುತ್ತವೆ. ಈ ಕಾರಣದಿಂದಲೇ ನಾವು ಯುರೋಪಿನ ಗಲಿವರನನ್ನೂ, ಶಿಶುಗೀತೆ ಬರೆದ ಅಮೇರಿಕೆಯ ಸಾಹಿತಿಯನ್ನೋ,
ಮಾನವ ಪ್ರವೃತ್ತಿಗಳನ್ನೇ ಪ್ರಧಾನವಾಗಿಸಿ ಬರೆದ ಓ ಹೆನ್ರಿಯಂತಹ ಕಥೆಕಾರನ ಕಥೆಗಳನ್ನೋ, ಎಲ್ಲ ಕಾಲಕ್ಕೂ
ಸಲ್ಲುವ ರಷ್ಯಾದ ದಸ್ತೋವಸ್ಕೀಯಂತವರ ಕಥೆ ಕಾದಂಬರಿಗಳನ್ನೋ ಓದುತ್ತೇವೆ. ಇದೇ ಕಾರಣಕ್ಕಾಗಿ ಬದುಕಿನ
ದಶ-ಶತ-ಸಹಸ್ರ ಅವತಾರವನ್ನು ಉಣಬಡಿಸಿದ ಚಾರ್ಲಿಚಾಪ್ಲಿನ್‍ನ ಸಿನಿಮಾಗಳನ್ನು, ಜೀವನದ ವಿವಿಧ ಹಂತಗಳ
ಅದಮ್ಯತೆಯ ಜೇಡರ ಬಲೆಯಂತೆ ಒದಗುವ ಇರಾನಿನ ಸಿನಿಮಾಗಳನ್ನೋ, ಜಪಾನಿನ ಸಿನಿಮಾ ನಿರ್ದೇಶಕರುಗಳ ಮಕ್ಕಳ
ಕುರಿತ ಚಲನಚಿತ್ರಗಳನ್ನೋ ನೋಡುತ್ತವೆ. ಹೀಗೆ ಸಿನಿಮಾಗಳು ಒಂದು ಪ್ರದೇಶ, ಭಾಷೆ ಮತ್ತು ಸಂಸ್ಕøತಿಯನ್ನು
ಪ್ರತಿನಿಧಿಸುತ್ತಲೇ, ಅವುಗಳನ್ನು ತಮ್ಮ ಅಸ್ಮಿತೆಯನ್ನಾಗಿ ಸ್ವೀಕರಿಸುತ್ತಲೇ ಇನ್ನೊಂದು ನೆಲೆಯಲ್ಲಿ
ಅವುಗಳ ವಿರುದ್ಧ ಅಂದರೆ ತಾವಾಗಲೇ ನಿರ್ದಿಷ್ಠಪಡಿಸಿದ ಅಸ್ಮಿತೆಯ ಆವರಣ, ಗಡಿ ಮತ್ತು ಸೀಮೆಗಳನ್ನು
ಮೀರಿ ಇನ್ನೊಂದು ಪ್ರದೇಶದ ಅಂದರೆ ಆಫ್ರಿಕಾವೋ, ಜಪಾನೋ ಮುಂತಾದ ಪ್ರದೇಶದ ಮಾನವ ಬದುಕಿನ ಮೂಲದ್ರವ್ಯ
ಮತ್ತದರ ಪ್ರಕಟಣೆಯಾದ ನೋವು, ನಲಿವು, ದು:ಖದುಮ್ಮಾನವನ್ನು ನೆನಪಿಸುತ್ತವೆ. ಒಂದು ರೀತಿಯಲ್ಲಿ ಸಹಜ
ಮೇರೆಗಳನ್ನು ಮೀರಿ ಸೀಮೋಲ್ಲಂಘನವನ್ನು ಸಾಧಿಸುವ ಕೈಂಕರ್ಯವನ್ನು ಸಿನಿಮಾಗಳು ಮಾಡುತ್ತವೆ. ಈ ನೆಲೆಯಿಂದ
ನಾವು ಸಿನಿಮಾವನ್ನು ನೋಡಬೇಕಾಗುತ್ತದೆ ಹಾಗೂ ಅವುಗಳು ನಮ್ಮ ಜಗತ್ತಿನ ಮಾನವರ ಪ್ರತಿನಿಧಿಯಾಗಿ ಪಠ್ಯವಾಗುತ್ತವೆ.
2
ಸುಮಾರು 2000ದಲ್ಲಿ ಹೊರ ಬಂದ ದಿಬೋರಾ ಎಲ್ಲಿಸ್ ಅವರ ಕಾದಂಬರಿಯ ಸಿನಿಮಾ ರೂಪವೇ ‘ದಿ ಬ್ರೆಡ್
ವಿನ್ನರ್’. ಸುಮಾರು 1999ರ ಹೊತ್ತಿಗೆ ಐರ್‍ಲ್ಯಾಂಡ್‍ನ ಕಿಲ್‍ಕೆನ್ನಿಯಲ್ಲಿ ಪ್ರಸಿದ್ಧ ಆ್ಯನಿಮೇಶನ್
ಸ್ಟುಡಿಯೋ ನಿರ್ಮಿಸಿ ಅದರ ಮೂಲಕ ಈಗಾಗಲೇ ಹಲವು ಸಿನಿಮಾಗಳನ್ನು ನಿರ್ಮಿಸಿದ್ದ ‘ನೋರಾತಾಮಿ’ ಈ ಕಾದಂಬರಿಯ ಪ್ರಧಾನ ಪಾತ್ರವಾದ ‘ಪರ್ವಣ’ಳಿಂದ ಪ್ರೇರಿತರಾಗಿ ಈ ಸಿನಿಮಾವನ್ನು ನಿರ್ದೇಶಿಸಿದರು. ಯುಧ್ಧಗ್ರಸ್ತ ಅಫಘಾನಿಸ್ತಾನದ ಮಕ್ಕಳ
ಕುರಿತ ಕಥೆ ಮತ್ತು ಅನುಭವಗಳು ಈ ಸಿನಿಮಾದ ವಸ್ತು. ಕಾದಂಬರಿಕಾರ್ತಿ ಎಲ್ಲಿಸ್ ಅವರು ಕಾಬೂಲ್‍ಗೆ ಹತ್ತಿರವಿರುವ
ಅನೇಕ ಪ್ರದೇಶಗಳನ್ನು ಕಾದಂಬರಿಗಾಗಿ ಸಂದರ್ಶಿಸುತ್ತಿದ್ದಾಗ ಆಕೆಗೆ ಈ ಪರ್ವಣಳನ್ನು ಹೋಲುವ ಪಾತ್ರ
ಮತ್ತು ವಸ್ತು ಲಭಿಸಿದಳಂತೆ. ಅಲ್ಲಿನ ಒಬ್ಬಳು ಹುಡುಗಿಯ ತಂದೆಯನ್ನು ಅನ್ಯಾಯವಾಗಿ ಜೈಲಿಗಟ್ಟಿದಾಗ,
ಆಕೆ ಹುಡುಗಿಯಾದ ಕಾರಣ ಜೈಲು ಪ್ರವೇಶ ನಿರ್ಬಂಧವಿದ್ದ ಸಂದರ್ಭದಲ್ಲಿ ಕೂದಲು ಕತ್ತರಿಸಿಕೊಂಡು ಹುಡುಗನ
ಪೋಷಾಕು ಧರಿಸಿ ತಂದೆಯನ್ನು ಹುಡುಕುವ ಮತ್ತು ಕೊನೆಯಲ್ಲಿ ಆಕೆ ತನ್ನ ತಂದೆಯನ್ನು ಕಾಣುವ ಕಥಾನಕವೇ
ಈ ಸಿನಿಮಾವಾಗಿದೆ.
ಪರ್ವಣಳ ತಂದೆ ಸೋವಿಯತ್ ವಿರುದ್ಧ ಹೋರಾಡಿದ್ದ ಅಫ್ಘನೀ ಸೈನಿಕ ಮತ್ತು ನಿವೃತ್ತ ಶಿಕ್ಷಕ. ಜೀವನದ
ಬಗೆಗಿನ ಸಮೃದ್ಧ ಮತ್ತು ಶ್ರೀಮಂತ ಅನುಭವಗಳನ್ನು ಹೊಂದಿದ್ದ ಮನುಷ್ಯ. ಆತನ ತರಬೇತಿ ಮತ್ತು ಸಾಂಗತ್ಯದಲ್ಲಿ
ಪರ್ವಣಳು ನಿಜವಾದ ಸಂವೇದನಾಶೀಲ ಹಾಗೂ ತಲ್ಲಣಗಳು ಇರಬಹುದಾದ ಮನುಷ್ಯೆಯಾಗಿ ಹೊರಹೊಮ್ಮುತ್ತಾಳೆ. ಪರ್ವಣಳ
ಇಂತ ರೂಪುಗೊಳ್ಳುವಿಕೆಯಲ್ಲಿ ಆಕೆಯ ತಂದೆ ಹೇಳುತ್ತಿದ್ದ ಕಥೆಗಳೂ ಕೂಡಾ ತುಂಬಾ ಪರಿಣಾಮಕಾರಿಯಾಗಿದ್ದುವು.
ವಿಶೇಷವಾಗಿ ತಂದೆಯು ಹೇಳುತ್ತಿದ್ದ ‘ಎಲ್ಲವೂ ಬದಲಾಗುತ್ತದೆ, ದು:ಖವೂ ಕೂಡ’ ಎನ್ನುವ ತಂದೆಯ ಮಾತು ಮತ್ತು ಆತ ಹೇಳುತ್ತಿದ್ದ ಆನೆರಾಜನನ್ನು ಹುಡುಕಿ ಹೋಗುವ ‘ಸಾಹಸೀ ಹುಡುಗನ
ಕಥೆ’ ಚಮತ್ಕಾರಿಕವಾಗಿ ಆಕೆಯನ್ನು ಸೃಷ್ಠಿಸಿತು. ಕೊನೆಗೂ ಕೂಡಾ ಪರ್ವಣ, ಒಳ್ಳೆಯ ಜನರ, ಕೆಟ್ಟಜನರ,
ಸಂದೇಹಿಸುವ ಜನರ ಮತ್ತು ಮಕ್ಕಳ ಹಾಗೂ ಯುವಕರ ತಲೆಮಾರನ್ನೇ ನಾಶಮಾಡಿದ ತಾಲಿಬಾನೀ ಜನರನ್ನು ಎದುರಿಸಿ
ಕೊನೆಗೂ ತಂದೆಯನ್ನು ಕಾಣುತ್ತಾಳೆ. ನಿರ್ದೇಶಕಿ ನೋರಾ ಟಾಮಿಯ ಪ್ರಕಾರ ಜಗತ್ತು ಇಂದು ಎದುರಿಸುತ್ತಿರುವ
ಸಂಕೀರ್ಣತೆಯೇ ಚಿತ್ರದ ಕಥನವಾಗಿದೆ. ಅದು ಅಫ್‍ಘಾನಿಸ್ತಾನದ ಮಕ್ಕಳ ಮತ್ತು ಅಂತಹ ಪ್ರತಿನಿಧಿಯಾದ ಒಬ್ಬಳು
ಹುಡುಗಿಯ ಕಥೆಯಾದರೂ ಕೂಡಾ ಅದು ಜಗತ್ತಿನ ವಿವಿಧ ಪ್ರದೇಶ ಮತ್ತು ಭಾಗಗಳ ಮಕ್ಕಳ ಬದುಕಿನ ಒಂದು ತೌಲನಿಕ
ಚಿತ್ರವನ್ನು ಕಟ್ಟಿಕೊಡುತ್ತಾ ಹಲವು ಅನುಭವಗಳ ನೆಲೆಯನ್ನು ನಮ್ಮ ಮುಂದಿಡುತ್ತಾ ಅಂತಹ ನೋವಿನ ಕಥನಗಳಿಗೆ
ಪ್ರತಿಕ್ರಿಯೆಯನ್ನು ಮುಂದಿಡಬೇಕಾದ ಅಗತ್ಯತೆಯನ್ನು ಕೂಡಾ ಅದು ಸೃಷ್ಠಿಸುತ್ತದೆ.
***
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ