ಅಚಾರಿತ್ರಿಕ ಚರಿತ್ರಕಾರನ ಗತದ ಸಂಗೋಪನೆ: ಮಿಷೆಲ್ ಫುಕೋ ಮತ್ತು ಚರಿತ್ರೆ


ಮಿಷೆಲ್ ಫುಕೋನ ಬಹುತೇಕ ವಾಜ್ಞಯ ಮತ್ತು ಕೃತಿಯನ್ನು ಮಾನವಶಾಸ್ತ್ರಜ್ಞರು, ಸಮಾಜಶಾಸ್ತ್ರಜ್ಞರು, ಮನ:ಶಾಸ್ತ್ರಜ್ಞರು, ಸಾಹಿತ್ಯ ವಿಮರ್ಶಕರು ಮತ್ತು ಚರಿತ್ರಕಾರರು ಓದುತ್ತಾರಾದರೂ ಕೂಡಾ ಅತ್ಯಂತ ಆನುಷಂಗಿಕವಾಗಿ ಅವುಗಳು ಚರಿತ್ರೆಗೆ ಸಂಬಂಧಿಸಿವೆ. ಇದೇ ಹೊತ್ತಿಗೆ ತತ್ವಶಾಸ್ತ್ರವೂ ಕೂಡಾ ಆತನ ಕೃತಿ ಮತ್ತು ವಿಚಾರಗಳನ್ನು ತಮ್ಮದೆಂದೂ ಕ್ಲೈಮು ಮಾಡಿದೆ. ಚರಿತ್ರೆ ಮತ್ತು ಚರಿತ್ರೆ ಬರವಣಿಗೆಗೆ ಫುಕೋ ಒಂದು ಹೊಸ ರೀತಿಯ ಆಲೋಚನೆಯನ್ನು ನೀಡಿದನು. ಸಮಕಾಲೀನ ರಾಜಕೀಯಾತ್ಮಕ ಹೋರಾಟಗಳ ಸಂದರ್ಭದಲ್ಲಂತೂ ಹೊಸದಾಗಿ ಚರಿತ್ರೆಯನ್ನು ಅರ್ಥೈಸಲು ಆತ ಪ್ರಯತ್ನಿಸಿದ. ಆತನ ಕ್ರಾಂತಿಕಾರಕ ಆಲೋಚನೆಗಳಿಂದ ಸಮಾಜವಿಜ್ಞಾನಗಳು ಮುರಿದು ಮುಗ್ಗರಿಸಿದ ಹೊತ್ತಿನಲ್ಲೇ ಅವುಗಳು ಒಂದು ವಿಭಿನ್ನವಾದ ತಾತ್ವಿಕ ಗತಿ ಮತ್ತು ಸ್ವರೂಪವನ್ನು ಕೂಡಾ ಕಂಡವು. ಫುಕೋ ಒಂದು ರೀತಿಯಲ್ಲಿ ಅಚಾರಿತ್ರಿಕ ಚರಿತ್ರಕಾರ. ಚರಿತ್ರೆ ಕುರಿತು ಬರೆಯುತ್ತಲೇ ಅಂತಹ ಶಿಸ್ತನ್ನೇ ಬುಡಮೇಲು ಮಾಡಿದ ಪ್ರತಿಭಾಶಾಲಿ.

ಫುಕೋನ ಕೃತಿಗಳನ್ನು ಅವಲೋಕಿಸಿದರೆ ಒಂದು ತಾತ್ವಿಕ ಚೌಕಟ್ಟಿನ ಸ್ವರೂಪದಲ್ಲಿ ಅಥವಾ ಚರಿತ್ರೆಯ ತಯಾರಿಯ ಕ್ರಮದಲ್ಲಿ ನೇರಾನೇರಾವಾಗಿ ಏನನ್ನೂ ಕೂಡಾ ಮಂಡಿಸಿಲ್ಲ. ಟಾಯ್ನ್ಬಿ ನಡೆಸಿದ ವರ್ಗೀಕರಣದ ನಮೂನೆಯಲ್ಲಿ ಆತ ಏನನ್ನೂ ಕೂಡಾ ನಡೆಸಿಲ್ಲ. ಚರಿತ್ರೆಯಲ್ಲಿ ಮಾನವನ ಬದುಕಿನ ಗತಿಯನ್ನು ನಿರ್ವಹಿಸಿ ನಿರ್ಧರಿಸುವಂತಹ ರೀತಿಯ ಕಾರಣೀಯತೆಯನ್ನೂ ಕೂಡಾ ಆತ ತಂದಿಲ್ಲ. ನೆಲೆಯಲ್ಲಿ ಅರ್ಥೈಸಿದರೆ ಮಾತ್ರ ಮಾನವನ ಜನಾಂಗದ ವಿಕಾಸ ಮತ್ತು ಭವಿಷ್ಯವನ್ನು ತಿಳಿಯಬಹುದೆಂಬ ವಿವರಣೆಯ ಗೋಜಿಗೂ ಹೋಗಲಿಲ್ಲ. ಕಾರಣಕ್ಕಾಗಿ ಚರಿತ್ರೆ ಎಂಬ ಶಿಸ್ತು ಸಮೃದ್ಧವಾದ ಹುಲ್ಲುಗಾವಲಿನಂತೆ ಬೆಳೆದಿರುವ ಅಮೇರಿಕಾದಲ್ಲಿ ಕೂಡಾ ಫುಕೋನನ್ನು ಅವರು ನಮ್ಮವನೆಂದು ತಿಳಿದಿಲ್ಲವಷ್ಟೇ. ಅಲ್ಲಿನ ಬಹುತೇಕ ಚರಿತ್ರಕಾರರು ಆತನನ್ನು ಚರಿತ್ರಶಾಸ್ತ್ರದ ಒಂದು ವಿನೂತನ ವಿದ್ಯಮಾನವೆಂದು ಬಗೆಯದೇ ಆತನ ವಿಚಾರಗಳಿಂದಲೇ ಚರಿತ್ರೆಯ ಶಿಸ್ತು ಧಾಳಿಗೊಳಗಾಗಿದೆ ಎಂಬ ಪೂರ್ವಾಗ್ರಹವನ್ನು ಕೂಡಾ ತಾಳಿದ್ದಾರೆ. ಆತ ಚರಿತ್ರೆಯ ಆಂತರಂಗಿಕ ಗುಣ ಸ್ವಭಾವವನ್ನು ದಮನಿಸಿದನೆಂತಲೂ ಕರೆಯಲಾಗಿದೆ. ಇದೇ ಹೊತ್ತಿಗೆ ಚರಿತ್ರೆಯ ಕುಶಲತೆಗೆ ಫುಕೋ ವಿಚಾರಗಳು ತರಬಹುದಾದ ಧಕ್ಕೆಯ ಬಗೆಗೂ ಸುಮಾರು 1970-1980 ದಶಕದಲ್ಲಿ ವ್ಯಾಪಕವಾಗಿ ಚರ್ಚಿಸಲಾಗಿತ್ತು.

ಇದೆಲ್ಲದರ ಹೊರತಾಗಿಯೂ ಕೂಡಾ ಫುಕೋ ಪ್ಯಾರಿಸ್ ಕಾಲೇಜ್ ಡಿ ಫ್ರಾನ್ಸ್ ಸಂಸ್ಥೆಯಲ್ಲಿ ಚರಿತ್ರೆಯ ಪೀಠದಲ್ಲೇ ಹಿಸ್ಟರಿ ಆಫ್ ಸಿಸ್ಟಮ್ಸ್ ಆಫ್ ತಾಟ್ ಎಂಬ ಪ್ರಾಧ್ಯಾಪಕನಾಗಿದ್ದ. ಆತ ಬರೆದ ಸರಿಸುಮಾರು ಅರ್ಧ ಡಝನ್ಗಿಂತಲೂ ಹೆಚ್ಚು ಪುಸ್ತಕಗಳು ಚರಿತ್ರೆ ಕೇಂದ್ರಿತವಾಗಿ, ಶೀರ್ಷಿಕೆಗಳೂ ಕೂಡಾ ಬಹುತೇಕ ಅವುಗಳ ಸುತ್ತಲೇ ಇವೆ. ಮ್ಯಾಡ್ನೆಸ್ ಆ್ಯಂಡ್ ಸಿವಿಲೈಝೇಶನ್ (1961), ದಿ ಬರ್ತ್ ಆಫ್ ದಿ ಕ್ಲಿನಿಕ್ (1963), ದಿ ಆರ್ಡರ್ ಆಫ್ ದಿ ಥಿಂಗ್ಸ್ (1966), ದಿ ಆರ್ಖಿಯಾಲಜಿ ಆಫ್ ದಿ ನಾಲೆಡ್ಜ್ (1969), ಡಿಸಿಪ್ಲಿನ್ ಆ್ಯಂಡ್ ಪನಿಶ್ (1975) ಮತ್ತು ಹಿಸ್ಟರಿ ಆಫ್ ಸೆಕ್ಸುವಾಲಿಟಿ (1976) ನೆಲೆ ಮತ್ತು ಸ್ವರೂಪದವುಗಳಾಗಿವೆ. ಇಷ್ಟು ಉತ್ಪಾದಕವಾಗಿ ಗತದ ವಸ್ತು ಸಂಗತಿಗಳನ್ನು ಅಧ್ಯಯನ ಮಾಡಿದ ವ್ಯಕ್ತಿಯನ್ನು ಚರಿತ್ರಕಾರ ಅಲ್ಲವೆಂದು ಹೇಗೆ ಕರೆಯುವುದು?

ಡಿಸ್ಕಂಟಿನ್ಯುಟಿ ಅಥವಾ ಅನಿರಂತರತೆಯೆ ಪ್ರಮೇಯ

ಫುಕೋನಿಗೆ ಕೇವಲ ಗತದ ನಿರಂತರ ವಿಕಾಸವಷ್ಟೇ ದೃಷ್ಠಿಯಲ್ಲಿರಲಿಲ್ಲ. ಗತದ ಕಥೆಗಳಷ್ಟೇ ಆತನನ್ನು ಗಂಭೀರವಾಗಿ ಕಾಡದೇ ವಿಶೇಷವಾಗಿ ಗತದ ಮೂಲಕ ವರ್ತಮಾನದ ಜಾಡನ್ನು ಶೋಧಿಸುವ ಹಾದಿಯಷ್ಟೇ ಆತನಿಗೆ ಗಮನಾರ್ಹವಾಗಿ ಕಾಣಿಸಲಿಲ್ಲ. ನಿರಂತರತೆಯ ಬದಲು ಆತ ಅನಿರಂತರತೆಗೆ ಹೆಚ್ಚು ಗಮನ ಹರಿಸುತ್ತಾನೆ. ಗತವು ಯಾವ ರೀತಿಯಲ್ಲಿ ವಿಲಕ್ಷಣ, ವಿಭಿನ್ನ ಮತ್ತು ಭೀತ್ಯಾತ್ಮಕವಾದುದೆನ್ನುವುದು ಆತನಿಗೆ ಮುಖ್ಯವಾಗುತ್ತದೆ. ಕಾರಣಕ್ಕಾಗಿ ಗತ ಮತ್ತು ವರ್ತಮಾನದ ನಡುವಿನ ಸಾಂಗತ್ಯದ ಕುರಿತು ನಿರಾಸಕ್ತಿಯನ್ನು ಹೊಂದಿದೆ. ರೀತಿಯ ಸಾಂಗತ್ಯವು ಸಾಂಪ್ರದಾಯಿಕ ಚರಿತ್ರಶಾಸ್ತ್ರ ಮತ್ತು ಚರಿತ್ರಕಾರರ ಪ್ರಮುಖ ಲಕ್ಷಣವಾಗಿತ್ತು. ಬಹುಶ: ಫುಕೋ ರೀತಿಯ ಸಾಂಗತ್ಯದ ಸ್ಥಿತಿ ಸಾಧ್ಯತೆಯನ್ನು ಸುಧಾರಿಸುವಂತಹ ಕೆಲಸವನ್ನು ಅತ್ಯಂತ ಪ್ರಮುಖವಾಗಿ ತನ್ನ ಕೃತಿಗಳಲ್ಲಿ ನಡೆಸುತ್ತಾನೆ. ವರ್ತಮಾನದಲ್ಲಿ ಗತದ ಅರ್ಥವನ್ನು ಹುಡುಕುವ ವರ್ತಮಾನವನ್ನು ಗತದ ಮೂಲಕ ಮಾನ್ಯ ಮಾಡಿಕೊಳ್ಳುವಂತಹ ಸ್ವರೂಪದ ವ್ಯಾಖ್ಯಾನ ಮತ್ತು ವಿವೇಚನೆಗಳನ್ನು ಫುಕೋ ಮೀರಿ ಬೆಳೆಯುತ್ತಾ, ಅವುಗಳನ್ನು ಒಂದು ನೆಲೆಯಲ್ಲಿ ಕ್ಲುಲ್ಲಕ ಎನ್ನುವ ರೀತಿಯಲ್ಲಿ ಕಾಣುತ್ತಾನೆ. ರೀತಿಯ ಮಾದರಿಯೊಂದಿಗೆ ಬೆಳೆದ ಚರಿತ್ರಕಾರರನ್ನು ಆತ ಅತ್ಯಂತ ಹರಿತವಾಗಿ ಎದುರುಗೊಳ್ಳುತ್ತಾನೆ. ಇಂತಹ ಚರಿತ್ರೆಕಾರರ ಪ್ರಶ್ನೆ ಮತ್ತು ಅಧ್ಯಯನ ಸಮಸ್ಯೆಗಳು ತೀರಾ ಬಾಲಿಶ ಹಾಗೂ ಅಪ್ರೌಢವೆನ್ನುವುದು ಫುಕೋ ಅಭಿಮತವಾಗಿದೆ.

ಅತ್ಯಂತ ವ್ಯವಸ್ಥಿತವಾಗಿ ಅನಿರಂತರತೆಯ ಪ್ರಮೇಯದ ಕುರಿತಂತೆ ಫುಕೋನ ಬರವಣಿಗೆಗಳು ವಿಕಾಸವಾದುದಲ್ಲ. ಆತನ ಕೆಲವು ಲೇಖನ ಮತ್ತು ಬರಹಗಳ ಮೂಲಕ ನಾವು ಇಂತಹ ಪ್ರಮೇಯವೊಂದರ ಸಾಧ್ಯತೆಯನ್ನು ಗೃಹಿಸಬಹುದಾಗಿದೆ. ತನ್ನ ರೀತಿಯ ಗೃಹಿಕೆಗಳಿಗಾಗಿ ಕಾಲದಲ್ಲಿ ಸಂರಚನೋತ್ತರವಾದಿಗಳೆಂಬ ಯಾರೋ ಮಾಡಿದ ಗುಂಪಿನಲ್ಲಿದ್ದ ತಾತ್ವಿಕರಾದ ಜಿ ಡಲೂಜ್ ಮತ್ತು ಜಾಕೆಸ್ ಜೆರಿಡಾ ಆದಿಗಳು ಫ್ರೆಡ್ರಿಕ್ ನೀಟ್ಷೇಯಿಂದ ಪಡೆದ ಪ್ರೇರಣೆಯನ್ನೇ ಫುಕೋ ಕೂಡಾ ಪಡೆದಿದ್ದ. ನೀಟ್ಷೇಯ ದಿ ಯೂಸ್ ಆ್ಯಂಡ್ ಅಬ್ಯೂಸ್ ಆಫ್ ಹಿಸ್ಟರಿ ಎಂಬ ಪ್ರಮುಖವಾದಂತಹ ಪ್ರಮೇಯವೇ ಫುಕೋ ತನ್ನ ಆಲೋಚನೆಗಳನ್ನು ಸೃಷ್ಟಿಸಿಕೊಳ್ಳಲು ಕೂಡಾ ಕಾರಣವಾಯಿತು. ನೀಟ್ಷೇಯು ಪಶ್ಚಿಮದ ಸಾಂಪ್ರದಾಯಿಕ ಜ್ಞಾನದ ತಿಯರಿಗಳ ಬಗೆಗೆ ಅತ್ಯಂತ ತೀವ್ರವಾದಂತಹ ವಿಮರ್ಶೆಯನ್ನು ಬೆಳೆಸಿಕೊಂಡಿದ್ದ. ಇದೇ ಹೊತ್ತಿಗೆ ಚರಿತ್ರೆಯ ಬಗೆಗಿನ ಜ್ಞಾನ ಮೀಮಾಂಸೆಯನ್ನೂ ಕೂಡಾ ಆತ ಕಟುವಿಮರ್ಶೆಯಿಂದ ಕಂಡಿದ್ದ. ಆತನ ಪ್ರಕಾರ ಕೇವಲ ಸತ್ಯಸಾಧನೆಯ ಸಂದರ್ಭದ ವಸ್ತುನಿಷ್ಠತೆ ಮಾತ್ರ ಮುಖ್ಯವಲ್ಲ, ಬದಲು, ಸತ್ಯಸಾಧಿಸಲ್ಪಡುವವನ ಮನೋದಾಢ್ರ್ಯತೆ ಕೂಡಾ ಮುಖ್ಯ, ಯಾಕೆಂದರೆ ಜ್ಞಾನವು ಅಧಿಕಾರವಾಗಿ ಮೂಲಭೂತವಾಗಿ ಇರುವ ಕಾರಣದಿಂದಾಗಿ. ಕೊನೆಗೂ ಕೂಡಾ ಜ್ಞಾನವೆಂದರೆ ಸತ್ಯ ಸಾಧಿಸುವವನು ವೈಜ್ಞಾನಿಕವಾದ ನಿರಾಸಕ್ತಿಯೊಂದಿಗೆ ತನ್ನ ಖಾಸಗೀಯಾದ ಮೌಲ್ಯಗಳನ್ನು ಪ್ರಕಟಪಡಿಸುವ ಕಾರಣದಿಂದಾಗಿ.

ಫುಕೋ ತನ್ನ ಚರಿತ್ರೆಯ ಬಗೆಗಿನ ವಿವೇಚನೆಯಲ್ಲಿ ಚರಿತ್ರಕಾರನ ಜ್ಞಾನಶಾಸ್ತ್ರೀಯ ಮುಗ್ಧತೆಯನ್ನು ಹೊರತೆಗೆಯುತ್ತಾನೆ. ಒಂದು ಅಹಿತಕರವಾದ ಪ್ರಶ್ನೆಯನ್ನೂ ಕೂಡಾ ಸಂದರ್ಭದಲ್ಲಿ ಕೇಳುತ್ತಾನೆ. ಅದೇನೆಂದರೆ ಗತದ ನಿರಂತರತೆಯನ್ನು ಹುಡುಕದ ಮತ್ತು ಮತ್ತದರ ಕಾರಣಗಳನ್ನು ನೀಡುವಂತಹ ಸಂದರ್ಭದಲ್ಲಿ ಚರಿತ್ರಕಾರ ಏನು ಮಾಡುತ್ತಾನೆ? ಎಂಬುದಾಗಿ. ಫುಕೋಗೆ ಚರಿತ್ರೆಯೆನ್ನುವುದು ಒಂದು ರೀತಿಯ ಜ್ಞಾನ ಮತ್ತು ಅದೇ ಹೊತ್ತಿಗೆ ಅಧಿಕಾರವೂ ಆಗಿರುವ ಕಾರಣ ಗತವನ್ನು ತಿಳಿಯುವುದೆಂದರೆ ಒಂದು ರೀತಿಯಲ್ಲಿ ಜ್ಞಾನದ ಮೂಲಕ ನಿಯಂತ್ರಿಸುವ ಹಾಗೂ ಜ್ಞಾನವನ್ನು ಸಂಗೋಪಿಸುವಂತಹ ಕ್ರಿಯೆಯೇ ಆಗಿದೆ. ಚರಿತ್ರಕಾರನು ಲಿಯೊಪೋಲ್ಡ್ ವಾನ್ ರೊಂಕಾನ ರೀತಿಯಲ್ಲಿ ಅಥವಾ ಮಾದರಿಯಲ್ಲಿ ಇರುವಂತೆ ಗತವನ್ನು ಪುನರ್ ಉತ್ಪಾದಿಸುತ್ತೇವೆಂದು ನಟಿಸುತ್ತಾನಷ್ಟೇ. ದಂತಕಥೆ, ಉಪಾಖ್ಯಾನ, ಅಂಕಿಅಂಶಗಳ ಆಧಾರದ ಮೇಲೆ ಆತ ಗತದ ಭೂದೃಶ್ಯ (ಲ್ಯಾಂಡ್ಸ್ಕೇಪ್)ವನ್ನು ವರ್ತಮಾನದ ಬಣ್ಣಗಳೊಂದಿಗೆ ಚಿತ್ರಿಸುತ್ತಾನೆ. ಚರಿತ್ರಕಾರನು ವರ್ತಮಾನವನ್ನು ವಿವರಿಸಲೋಸುಗ ಗತಕ್ಕೆ ಸರಿಯುತ್ತಾ ಗತ ಮತ್ತು ವರ್ತಮಾನಗಳ ಬಗೆಗಿನ ಸತ್ಯವೆಂಬಂತೆ ವಿವರಿಸುವ ಪ್ರಯತ್ನ ಮಾಡುತ್ತಾನೆ. ಇದೇ ಹೊತ್ತಿಗೆ ಎಲ್ಲಿಯೂ ಕೂಡಾ ತನ್ನನ್ನು ಸಕೀಲಗೊಳಿಸಿಕೊಳ್ಳದೇ ಇಂತಹ ಪ್ರಶ್ನೆಯನ್ನು ಚರಿತ್ರೆಕಾರನು ಸಾಧಿಸುತ್ತಾನೆ. ಬದಲಾಗಿ ಚರಿತ್ರಕಾರನ ಕಾರ್ಯವು ಸತ್ಯದ ಆಕರ್ಷಣೆ ಮತ್ತು ಜ್ಞಾನದ ಬಗೆಗಿನ ತುಡಿತದಿಂದ ಉಂಟಾಗುತ್ತದೆ.

ಚರಿತ್ರೆಯ ಬಗೆಗಿನ ಫುಕೋನ ಬಹುತೇಕ ನಿರಾಕರಣೆಗಳು ಕೇವಲ ವಸ್ತುನಿಷ್ಠತೆ, ಸಾಪೇಕ್ಷತೆ ಹಾಗೂ ವಿಜ್ಞಾನ ಮತ್ತು ಸಿದ್ಧಾಂತದೊಂದಿಗಿನ ವಿರೋಧದಿಂದ ಒದಗಿದುದಲ್ಲವಾಗಿದೆ. ಆತನ ಆಶಯವು ಒಂದು ರೀತಿಯಲ್ಲಿ ಮೌಲ್ಯ ತಟಸ್ಥತೆಗೆ ಮಾಡಿದ ಧಾಳಿಯೆಂಬಂತೆ ಕಂಡರೂ ಕೂಡಾ, ಪ್ರಶ್ನೆಯಲ್ಲಿ ಇದನ್ನು ಹೊರತಾದ ಬೇರೆಯದೇ ಕೆಲವು ಅಂಶ ಆಯಾಮಗಳಿವೆ. ಚರಿತ್ರಕಾರನು ಅತ್ಯಂತ ಮುಕ್ತವಾಗಿ ತನ್ನ ಮೌಲ್ಯಗಳನ್ನು ಮನ್ನಿಸಿದರೆ ಇದು ಉಂಟಾಗುವುದಿಲ್ಲ. ಆತನ ರಾಷ್ಟ್ರ ಭಾಷೆ, ಪಕ್ಷ ಮತ್ತು ಸೈದ್ಧಾಂತಿಕವಾದಂತಹ ಹಿನ್ನೆಲೆಗಳು ಆತನ ಮೇಲೆ ಸಾಕಷ್ಟು ಪ್ರಭಾವವನ್ನು ಬೀರುತ್ತವೆ. ಇದೇ ಹೊತ್ತಿಗೆ ಚರಿತ್ರಕಾರನ ವಸ್ತುನಿಷ್ಠತೆ ಮತ್ತು ಸೈದ್ಧಾಂತಿಕ ಹಿನ್ನೆಲೆ ಕೂಡಾ ಪರಿಗಣನೆಗೆ ಒಳಗಾಗುವುದಿಲ್ಲ. ಬದಲಿಗೆ ವ್ಯಕ್ತಿಯೋರ್ವನ ಪ್ರಜ್ಞೆಯು ಗತದ ಬಗೆಗಿನ ಅಂತಹ ಬರವಣಿಗೆಗಳಲ್ಲಿ ಪ್ರತಿನಿಧಿತವಾಗುವ ಸತ್ಯದ ಕುರಿತಾದುದು. ಫುಕೋ ಇಂತಹ ಪ್ರಯತ್ನಗಳನ್ನು ಅಮಾನ್ಯ ಮತ್ತು ಅಸಾಧ್ಯವೆಂದು ಬಗೆಯುವುದಿಲ್ಲವಾದರೂ ಚರಿತ್ರೆ ನಿರ್ಮಾಣಕ್ಕೆ ಬಳಸುವ ವಸ್ತುಗಳು, ಆಧಾರಗಳು, ಸೃಷ್ಠಿ, ಕಥನಗಳು ಮತ್ತು ಒಟ್ಟಾರೆ ಪ್ರಕ್ರಿಯೆಯ ಬಗೆಗೆ ಫುಕೋ ತಕರಾರುಗಳನ್ನು ಮಂಡಿಸುತ್ತಾ ಹೋಗುತ್ತಾನೆ. ಸಂದರ್ಭದಲ್ಲಿ ಪೊಸಿಟಿವಿಸ್ಟ್ಗಳು, ಮಾಕ್ರ್ಸ್ವಾದಿಗಳ ನಡೆಸುವ ಇಂತಹ ಚರಿತ್ರೆ ರಚನೆಯ ಉದ್ಯಮ ಮತ್ತು ರೂಢಿಯನ್ನು ಟೀಕಿಸುತ್ತಾನೆ. ಮಾಕ್ರ್ಸ್ವಾದದ ಚರಿತ್ರಕಾರನು ತನ್ನ ಪರಿಚಯ ಮತ್ತು ಪರಿಧಿಗೆ ಬಂದಂತಹ ಪ್ರತಿಯೊಬ್ಬರನ್ನೂ ಕೂಡಾ ಇಂತಹ ಪ್ರಕ್ರಿಯೆಯಲ್ಲಿ ತನ್ನನ್ನು ಸೆಳೆಯುತ್ತಾನೆ. ಫುಕೋ ಪ್ರಕಾರ ಚಾರಿತ್ರಿಕ ಬರವಣಿಗೆಯು ತನ್ನದೇ ಆದ ಒಂದು  ರೀತಿಯ ಪ್ರಭಾವ ಮತ್ತು ಪರಿಣಾಮವನ್ನು ಹೊಂದಿರುವಂತದ್ದಾಗಿದೆ. ರೀತಿಯ ಪರಿಣಾಮವು ಬರೆದವನು ಹೊಂದಿರುವ ಯಾವುದೇ ರೀತಿಯ ಪಕ್ಷ ಸಿದ್ಧಾಂತವನ್ನು ಮೀರಲಾಗದೇ ಗತ ಮತ್ತು ವರ್ತಮಾನವನ್ನು ಅದೇ ರೀತಿಯಲ್ಲಿ ಅರ್ಥೈಸಲು ಬಯಸುತ್ತದೆ. ಇದು ಫುಕೋಗೆ ಒಂದು ತಾತ್ವಿಕ ಮೂಲಜಿಜ್ಞಾಸಿಕ ಬಿಕ್ಕಟ್ಟಿನ ರೀತಿಯಲ್ಲಿ ಕಾಣಿಸುತ್ತದೆ. ಇದು ಒಂದು ರೀತಿಯ ಆವೃತ್ತೀಯ ಸ್ವರೂಪದ ಗತ ಮತ್ತು ವರ್ತಮಾನವನ್ನಷ್ಟೇ ಸೃಷ್ಠಿಸುತ್ತದೆ. ಏಕ ರೀತಿಯ ಸಾಧ್ಯತೆಯೇ ಸತ್ಯದ ಪಾಶ್ರ್ವಿಕ ನೆಲೆ ಮತ್ತು ಸಾಧ್ಯತೆಯಾಗಿ ಕಾಣಿಸುತ್ತದೆ. ಇದು ಉಳಿದ ಆವೃತ್ತಿಗಳನ್ನು ನಿರಾಕರಿಸುವ ನೆಲೆ ಕೂಡಾ. ಅದು ಉಳಿದ ಸತ್ಯ, ವಿಶೇಷವಾಗಿ ಚಾರಿತ್ರಿಕ ಸತ್ಯಗಳನ್ನು ದೂರೀಕರಿಸುವ ಪ್ರಜ್ಞೀಯ ರಾಜಕೀಯದಂತೆ ಎನ್ನುವುದು ಫುಕೋ ಅಭಿಪ್ರಾಯವಾಗಿದೆ. ಇದೆಲ್ಲದರ ಜತೆಗೆ ಗತದ ಬಗೆಗಿನ, ಅದರ ಸೃಷ್ಠಿಯ ಬಗೆಗಿನ ಅಭ್ಯಾಸ ಮತ್ತು ಅನುಷ್ಠಾನವೇನಿದೆ ಅದು ಚರಿತ್ರಕಾರನನ್ನು ಗತದ ಬಗೆÉಗಿನ ತಿಳುವಳಿಕೆಯನ್ನು ಹೊಂದಿದ ಕಾರಣದಿಂದ, ಕಾರಣದಿಂದ ಗಳಿಸಿದ ಅಧಿಕಾರದ ಒಂದು ರೀತಿಯ ವಿಶೇಷ ಗೌರವ, ಹಕ್ಕು, ಸುಯೋಗಗಳಿರುವ ವ್ಯಕ್ತಿಯನ್ನಾಗಿಸುತ್ತದೆ.. ಕ್ರಮೇಣ ಚರಿತ್ರಕಾರನು ಒಬ್ಬ ಬುದ್ಧಿಜೀವಿಯೂ ಆಗಿ ಗತದ ಕುರಿತು ಅಧ್ಯಕ್ಷತೆ ವಹಿಸಿ, ಅದನ್ನು ಬೆಳೆಸುತ್ತಾ, ವರ್ಧಿಸುತ್ತಾ ಕ್ರಮೇಣ ನಿಯಂತ್ರಿಸತೊಡಗುತ್ತಾನೆ. ಆದರೆ ಇದೇ ಹೊತ್ತಿಗೆ ಚರಿತ್ರಕಾರನು ತನ್ನ ನಿರೂಪಣೆಗಳ ಹಿಂದೆ ಇರುವ ಅಧಿಕಾರದ ವಿನ್ಯಾಸವನ್ನೂ ಕೂಡಾ ನಿರಾಕರಿಸುತ್ತಾ ಸಾಗುತ್ತಾನೆ.

ಫುಕೋ ಮಾಡಿದ ಚಾರಿತ್ರಿಕ ಅನುಷ್ಠಾನದ ಜ್ಞಾನಮೀಮಾಂಸೆಯ ಬಗೆಗಿನ ವಿಮರ್ಶೆಯನ್ನು ನಾವು ಪ್ರಗತಿಯನ್ನು ಮುಂದೆ ಮಾಡಿ ಕಥನವನ್ನಾಗಿಸಿ ನಿರೂಪಿಸುತ್ತಿರುವ ಚಾರಿತ್ರಿಕ ಅಧ್ಯಯನದ ಚಿಂತನಶಾಲೆಗಳ ಜತೆಯಲ್ಲಿಟ್ಟು ನೋಡಿದಾಗ ನಮಗೆ ಹೆಚ್ಚು ಅರ್ಥವಾಗುತ್ತದೆ. ಚರಿತ್ರೆ ಬರವಣಿಗೆ ಮತ್ತು ಸಮಕಾಲೀನ ಕ್ರಾಂತಿ ಮತ್ತು ಮುಕ್ತಿಯ ನಡುವೆ ಸಂಬಂಧವೇರ್ಪಟ್ಟಾಗ ಫುಕೋ ಪ್ರತಿಪಾದಿತ ಪ್ರಮೇಯವಾದ ನಿರಂತರತೆ ಅಥವಾ ಡಿಸ್ಕಂಟ್ಯೂನಿಟಿಯು ಹೆಚ್ಚು ಹೆಚ್ಚು ಸಮರ್ಪಕ ಮತ್ತು ಅರ್ಥವತ್ತಾಗುತ್ತಾ ಹೋಗುತ್ತದೆ. ಬಹುಶ: ಮಾಕ್ರ್ಸ್ವಾದೀಯ ಚರಿತ್ರಶಾಸ್ರವೇನಿದೆ ಅದು ಬಗೆಗೆ ಪ್ರಮುಖವಾದ ಉದಾಹರಣೆಯಾಗಿದೆ. ಚಾರಿತ್ರಿಕ ಭೌತವಾದದ ಪ್ರಕಾರ, ಒಂದು ಕಡೆಯಿಂದ ತಿಯರಿ ಮತ್ತು ಚಾರಿತ್ರಿಕ ಬರವಣಿಗೆಗಳ ನಡುವೆ ಗಾಢವಾದ ಸಂಬಂಧವಿದೆ, ಇನ್ನೊಂದು ನೆಲೆಯಲ್ಲಿ ಸಾಮಾಜಿಕ ಸಶಕ್ತೀಕರಣ ಮತ್ತು ಏಳ್ಗೆಯ ಜತೆಗೆ ಕೂಡಾ ಸಂಬಂಧವನ್ನು ಹೊಂದಿದೆ. ಮಾಕ್ರ್ಸ್ವಾದದ ಬಹುಮುಖ್ಯ ಪ್ರಮೇಯವಾದಂತಹ ವರ್ಗ ಸಂಘರ್ಷವೇನಿದೆ ಅದು ಉತ್ಪಾದನಾ ಸಂಬಂಧಗಳ ಕುರಿತಾಗಿದ್ದು, ಸಮಕಾಲೀನ ಹೋರಾಟಗಳಿಗೆ ಒಂದು ಮಾರ್ಗದರ್ಶಿಯ ರೀತಿಯಲ್ಲಿ ಒದಗುತ್ತದೆ. ಮಾಕ್ರ್ಸ್ವಾದಿಗಳಿಗೆ ಚರಿತ್ರೆ ಎನ್ನುವುದು ಒಂದು ರೀತಿಯಲ್ಲಿ ಮನರಂಜನೆಗೆ ಅಥವಾ ವ್ಯಕ್ತಿಗತ ಹಿತಾಸಕ್ತಿಯಿಂದ ರಚಿತವಾಗುವಂತದ್ದಲ್ಲ, ಕ್ರಾಂತಿಯನ್ನು, ಹೋರಾಟವನ್ನು ಉತ್ತೇಜಿಸುವ ಸಲುವಾಗಿ ಅದು ಬರೆಯಲ್ಪಡುತ್ತದೆ. ಗತದ ವರ್ಗ ಸಂಘರ್ಷಗಳು ತಮ್ಮಲ್ಲೇ ಆಂತರಂಗಿಕ ವ್ಯತ್ಯಾಸ ಮತ್ತು ವೈವಿಧ್ಯತೆಯನ್ನು ಹೊಂದಿದ್ದಾಗ್ಯೂ ಕೂಡಾ ಅವುಗಳನ್ನು ಚರಿತ್ರಕಾರರು ಸಮಕಾಲೀನ ಹೋರಾಟಗಳಿಗೆ ಆಹಾರವಾಗಿ ಬಳಸುತ್ತಾರೆ. ಹೀಗೆ ಗತ ಮತ್ತು ವರ್ತಮಾನದ ನಿರಂತರತೆಯನ್ನು ಹಾಗೆಯೇ ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡಲಾಗಿದೆ. ಮೂಲಕ ಮಾಕ್ರ್ಸ್ವಾದೀ ಚರಿತ್ರಕಾರನು ಈಗಾಗಲೆ ಘಟಿಸಿರುವ ಹೋರಾಟಗಳ ಮ್ಯೂಸಿಯಂ ಅನ್ನು ನಿರ್ಮಿಸುವುದರ ಜತೆಜತೆಯಲ್ಲೇ, ಸದ್ಯದ ಅಥವಾ ವರ್ತಮಾನದ ಹೋರಾಟದಲ್ಲಿ ಒಂದು ಬಗೆಯ ವಿಶೇಷ ಸ್ಥಾನಮಾನಗಳನ್ನು ಹೊಂದಿರುವಂತಹ ಭಾಗವಹಿಸುವಿಕೆಯನ್ನೂ ಪಡೆಯುತ್ತಾನೆ. ಬದಲಾವಣೆ ಮತ್ತು ಅದರ ಕುರಿತ ರಣನೀತಿಯನ್ನು ಆಗ್ರಹಿಸುವ ಕಾರ್ಮಿಕನಿಗಿಂತಲೂ ಹೆಚ್ಚು ಮಾಹಿತಿ ಮತ್ತು ಜ್ಞಾನವನ್ನು ಇಲ್ಲಿ ಚರಿತ್ರಕಾರ ಹೊಂದಿರುತ್ತಾನೆ. ಕಾರಣದಿಂದ ಮಾಕ್ರ್ಸ್ವಾದವು ಚಳುವಳಿಯಲ್ಲಿ ಭಾಗವಹಿಸುವ ಕಾರ್ಮಿಕನಿಗೆ ಬೇಕಾಗುವ ಹಾಗೂ ಆತ ಪ್ರತಿನಿಧಿಸಬೇಕಾದ ಬೌದ್ಧಿಕತೆಯನ್ನು ನೀಡುತ್ತದೆ. ಕಾರಣಕ್ಕಾಗಿ ಲೆನಿನ್ವಾದವು ಚಾರಿತ್ರಿಕ ಭೌತವಾದದ ಮೂಲಕ ತನ್ನ ಭೂಮಿಕೆ ಮತ್ತು ಪ್ರೋತ್ಸಾಹವನ್ನು ಪಡೆದಿರುವಂತದ್ದು. ಚರಿತ್ರಕಾರ ತನ್ನ ಜ್ಞಾನದ ಯಜಮಾನಿಕೆಯಿಂದ ಕಾರ್ಮಿಕರ ಮೇಲೆ ರೀತಿಯ ಅಧಿಕಾರವನ್ನು ಸಾಧಿಸಿದ. ಸಾಮಾಜಿಕ ಚಳುವಳಿಯ ಸತ್ಯವನ್ನು ಮೂಲಕ ಕಾರ್ಮಿಕರ ಕೈಯಿಂದ ಎತ್ತಿ ಬುದ್ಧಿಜೀವಿಗಳ ಮನಸ್ಸಿನಲ್ಲಿ ಇರಿಸಲಾಯಿತು. ಫುಕೋವಾದದ ಪ್ರಕಾರ ಚರಿತ್ರೆಯನ್ನು ರೀತಿಯಲ್ಲಿ ಅಪ ಬಳಕೆ (ಅಬ್ಯೂಸ್) ಮಾಡಲಾಗಿದೆ. ಇಂತಹ ನಿರಂತರೆಯ ತತ್ವವೇ ಚರಿತ್ರೆಯ ಪ್ರಮುಖವಾದ ತತ್ವವಾಗಿ ಹೋರಾಟಗಳ ಸಂದರ್ಭದಲ್ಲಿ ಬುದ್ಧಿಜೀವಿಗಳು ಕಾರ್ಮಿಕರನ್ನು ಒಳಗೊಳ್ಳಲು ಕಾರಣವಾಯಿತು.

ಮೇಲಿನ ಫುಕೋ ಯೋಚನೆಯೇನಿದೆ ಅದು ಕೇವಲ ಮಾಕ್ರ್ಸ್ವಾದವನ್ನು ಹಳಿಯಲೋಸುಗ ಸೃಷ್ಟಿಸಿದ್ದಲ್ಲ ಎನ್ನುವುದೂ ಕೂಡಾ ತಿಳಿಯುತ್ತದೆ. ಇಂತದ್ದೇ ಯೋಚನೆಯನ್ನು ನಾವು ಉದಾರವಾದೀ ಚರಿತ್ರೆ ಮತ್ತು ಚರಿತ್ರಕಾರರ ಕುರಿತೂ ಆಡಬಹುದಾಗಿದೆ. ಜತೆಗೆ ಉಳಿದ ಬೇರೆ ಬೇರೆ ಗುಂಪುಗಳ ಕುರಿತೂ ಕೂಡಾ ಆಲೋಚಿಸಬಹುದಾಗಿದೆ. ಅಮೇರಿಕೆಯ ಅತ್ಯಂತ ಪ್ರಸಿದ್ಧ ಚರಿತ್ರೆ ಬರವಣಿಗೆಯ ಚಿಂತನಾ ಶಾಲೆಯಾದ ಎಂಪಿರಿಸಿಸಮ್ (ಅನುಭವಜನ್ಯವಾದ) ಇಂದಿಗೂ ಕೂಡಾ ಇಂತಹ ಬಹಳ ಪ್ರಬಲವಾದಂತಹ ಕ್ರಮವಾಗಿದೆ.

ಜ್ಞಾನವೇ ಅಧಿಕಾರ

ಸುಮಾರು 1970 ದಶಕದಲ್ಲಿ ಬಂದ ಫುಕೋನ ಕೃತಿಗಳಾದ ಡಿಸಿಪ್ಲಿನ್ ಆ್ಯಂಡ್ ಪನಿಶ್, ಹಿಸ್ಟರಿ ಆಫ್ ಸೆಕ್ಷುವಾಲಿಟಿ ಹಾಗೂ ಮ್ಯಾಡ್ನೆಸ್ ಆ್ಯಂಡ್ ಸಿವಿಲೈಝೇಶನ್ಗಳಲ್ಲಿ ಗುಂಪುಶ: ವ್ಯಕ್ತಿ ವಿಚಾರಗಳನ್ನು ಹೊರಗಿಡುವಿಕೆಯೇನಿದೆ ಅದು ಪಶ್ಚಿಮದ ವೈಚಾರಿಕತೆಯ ಯಜಮಾನಿಕೆಯಿಂದೆಂಬ ಅಭಿಪ್ರಾಯವನ್ನು ತಳೆದಿದ್ದ. ಆದರೆ ಅದರ ನಂತರದ ಆತನ ಜೀವಿತದ ದ್ವಿತೀಯ ವೈಚಾರಿಕ ಪ್ರಸ್ಥಾನದಲ್ಲಿ ಬಂದ ಬಹುತೇಕ ಬರವಣಿಗೆಗಳು ರೀತಿಯ ವೈಚಾರಿಕತೆ ಅಥವಾ ಜ್ಞಾನವೇನಿದೆ ಅದು ದಮನಕಾರೀ ಮತ್ತು ಹೊರಗಿಡುವ ಕಾರ್ಯಕ್ಕಿಂತಲೂ ಭಿನ್ನವಾದಂತಹ ಕಾರ್ಯವನ್ನು ಸಾಧಿಸಲೋಸುಗ ಸೃಷ್ಠಿಯಾದದ್ದೆಂದು ಅಭಿಪ್ರಾಯಿಸುತ್ತಾ ಜ್ಞಾನವೇ ಅಥವಾ ಇಂತಹ ಕಾರಣವೇ ಸೃಷ್ಠಿಶೀಲವಾದ, ರಚನೀಯವಾದ ಮತ್ತು ಮತ್ತೇನೊಂದನ್ನೋ ಸಾಧಿಸಬಹುದಾದಂತಹ ಶಕ್ತಿಯೆಂದೂ ಅಭಿಪ್ರಾಯಿಸುತ್ತಾನೆ. ಬಹುತೇಕ ಹಂತದ ಬರವಣಿಗೆಗಳಲ್ಲಿ ಜ್ಞಾನವನ್ನೇ ಆತ ಒಂದು ಬಗೆಯ ಅಧಿಕಾರವೆನ್ನುತ್ತಾನೆ. ಇಂತಹ ಸಂಗತಿಯು 20ನೇ ಶತಮಾನದ ಯುರೋಪ್ ಮತ್ತು ಅಮೇರಿಕನ್ ಸಮಾಜಗಳಲ್ಲಿ ಹಾಸುಹೊಕ್ಕಾಗಿರುವುದನ್ನು ಆತ ಗಮನಿಸುತ್ತಾನೆ. ಜ್ಞಾನ ಮತ್ತು ಅಧಿಕಾರವು ತುರೀಯಾವಸ್ಥೆಯ ಕೈಗಾರೀಕೃತ ಹಾಗೂ ಉದ್ಯೋಗಸ್ಥ ಸಮಾಜದಲ್ಲಿ ಪ್ರತಿನಿತ್ಯವೂ ತಾನು ವಿಚಿತ್ರ ಅವತರಣಿಕೆಯಲ್ಲಿ ಪ್ರಕಟವಾಗಿ ನಿಯಂತ್ರಿಸುತ್ತಾ ಸಾಗುತ್ತದೆ ಎನ್ನುವ ಬಗೆಗೆ ಗಮನಹರಿಸುತ್ತಾನೆ. ಅತಿ ಬಂಡವಾಳಶಾಹಿಯು ತನ್ನ ನಿಯಂತ್ರಣದ ಸ್ವರೂಪವನ್ನು ಶೋಷಣೆ, ಪರಕೀಯತೆ, ಮನೋಮೂಲೀಯ ದಮನ, ಅನೋಮಿ ಅಥವಾ ಅಪಕ್ರಿಯಾತ್ಮಕ ವರ್ತನೆಗಳಲ್ಲಿ ಕಂಡುಕೊಂಡಿಲ್ಲ. ಬದಲಿಗೆ ಹೊಸತೊಂದು ಸಾಮಾಜಿಕ ನಿಯಂತ್ರಣದ ನಮೂನೆಯಾಗಿ, ಒಂದು ತೆರದ ನಿಯೋಗಿ ಅಥವಾ ಏಜೆಂಟ್ ಆಗಿ ಜ್ಞಾನವು ಪ್ರಭಾವಿಯಾಗಿ ಕಾಣಿಸಿಕೊಂಡಿದೆ. ಇಂತಹ ಫುಕೋನ ಪ್ರತಿಪಾದನೆಯು ಅತ್ಯಂತ ನಿಚ್ಚಳವಾಗಿ ಪಶ್ಚಿಮದ ಮಾಕ್ರ್ಸ್ವಾದೀಯ ಕೇಂದ್ರದ ಶ್ರಮ ಅಥವಾ ಲೇಬರ್ ಪರಿಕಲ್ಪನೆಯೇನಿದೆ ಅದರ ಬೇರೆ ಬೇರೆ ಸ್ತರೀಯ ಸಿದ್ಧಾಂತದ ಮೇಲಿನ ಖಟುವಾದ ವಿಮರ್ಶೆಯ ಸ್ವರೂಪದಲ್ಲಿ ಬಂದಿದೆ.

ಫುಕೋ ಮತ್ತು ಆತನ ರೀತಿಯ ಅನೇಕ ಸಿದ್ಧಾಂತಗಳು ಮುಖ್ಯವಾಗಿ ಜಿ ಡೆಲುಜ್, ಫೆಲಿಕ್ಸ್ ಗ್ವಟ್ಟಾರಿ, ಜೀನ್ ಬಾದ್ರಿಲಾ ಹಾಗೂ ಜೀನ್ ಫ್ರಾನ್ಸಿಸ್ ಲ್ಯೋಟಾರ್ಡ್ ಆದಿಗಳು ಮಾಕ್ರ್ಸ್ ಪರಿಕಲ್ಪನೆಯ ಶ್ರಮ (ಲೇಬರ್) ಏನಿದೆ ಅದನ್ನು ಒಂದು ರೀತಿಯ ಇನ್ನೂ ನೆಗೆಯದ ಸ್ವರೂಪದಲ್ಲಿರುವ ಉದಾರವಾದೀಯ ಮೂಲದಿಂದಲೇ ಗುರುತಿಸುತ್ತಾರೆ. ಇಂತಹ ಶ್ರಮವನ್ನು ಕಾರ್ಮಿಕ ಅಥವಾ ಶ್ರಮಿಕರ ಸಾಮೂಹಿಕ ಬಂಧದ ಮೂಲಕ ಹುಟ್ಟಿದ ಸಾಮಾಜಿಕವಾದ ಜಗತ್ತಿನ ರೂಪದಲ್ಲಿ ಗುರುತಿಸುತ್ತಾರೆ. ಕ್ರಮೇಣ ಇಂತಹ ಶ್ರಮಿಕರ ಶ್ರಮವನ್ನು ಯಾವ ರೀತಿಯಲ್ಲಿ ಶೋಷಣೆಯ ಮೂಲಕ ಅಪಹರಿಸಲಾಗಿದೆ ಎನ್ನುವುದರ ಕುರಿತು ಗಮನ ಹರಿಸುತ್ತಾರೆ. ಆದರೆ ಬಹುತೇಕ ಇದೇ ರೀತಿಯ ವಿವರಣೆಯು ಉದಾರವಾದಿಗಳಿಗೂ ಕೂಡಾ ಬಹುತೇಕ ಅನ್ವಯಿಸಿದರೂ ಮಾರುಕಟ್ಟೆ ನಿರ್ಧರಿಸಿದ ಸ್ವರೂಪದಲ್ಲಿ ಕೇವಲ ವೇತನವನ್ನು ಪಡೆಯುವ ಕಾರಣದಿಂದ ಶೋಷಣೆಯನ್ನು ಕಾಣಲಾಗದಷ್ಟೇ. ಇವೆರಡೂ ಪ್ರಕರಣಗಳಲ್ಲಿ ಚಾರಿತ್ರಿಕ ಸಾಮಾಜಿಕ ವಿಶ್ಲೇಷಣೆಯೂ ಕೇಂದ್ರದಲ್ಲಿ ಕಂಡು ಗೋಚರಿಸುತ್ತದೆ. ಉದಾರವಾದಿಗಳಿಗೆ ಸಂಕಟವು, ಪರಸ್ಪರ ಇಬ್ಬರು (ಶ್ರಮಿಕ ಮಾಲಿಕ) ಒಪ್ಪಂದಕ್ಕೆ ಸಹಿ ಮಾಡಿದ ನಂತರವಾದರೆ, ಮಾಕ್ರ್ಸ್ವಾದಿಗಳಿಗೆ ಎರಡು ಸ್ತರಗಳಲ್ಲಿ ಉಂಟಾಗುತ್ತದೆ. ಆದರೆ ಎರಡೂ ಪ್ರಕರಣಗಳಲ್ಲೂ ಸಮಾಜೋ-ಚಾರಿತ್ರಿಕ ಪರಿಸರವು ವಿಶ್ಲೇಷಣೆಗೆ ದೊರೆಯುತ್ತದೆ.

ಇವುಗಳ ಜತೆಯಲ್ಲಿ ಚರಿತ್ರೆಯ ಥಿಯರಿಯನ್ನು ವಿವರಿಸುವಲ್ಲಿ ಮಾಕ್ರ್ಸ್ವಾದ ಅಪರಿಪೂರ್ಣವಾಗುತ್ತದೆ ಎನ್ನುವ ಇರಾದೆಯನ್ನು ಫುಕೋ ವ್ಯಕ್ತಪಡಿಸುತ್ತಾನೆ. ಮಾಕ್ರ್ಸ್ವಾದದ ಪ್ರಮುಖ ಲಕ್ಷಣವಾದ ಉತ್ಪಾದನೆಯ ಪ್ರಕಾರ (ಮೋಡ್ಸ್ ಆಫ್ ಪ್ರೊಡಕ್ಷನ್) ಏನಿದೆ ಅದು ಇಪ್ಪತ್ತನೆಯ ಶತಕದ ಪ್ರಮುಖವಾದ ಸಮಾಜೋ-ಆರ್ಥಿಕ-ರಾಜಿಕ ಪ್ರತಿಫಲನವಾಗಿದೆಯೇ ಹೊರತು ಚರಿತ್ರೆ ವಿಷಯದ ವ್ಯಾಂಟೇಜ್ ಪಾಯಂಟ್ನಿಂದ ಆಗಿಲ್ಲ ಎನ್ನುವುದು ಫುಕೋನ ವಾದವಾಗಿದೆ. ಬದಲಿಗೆ ಇಂದು ಉತ್ಪಾದನೆಯ ಸ್ವರೂಪ ಮತ್ತು ಪ್ರಕಾರಗಳಿಗಿಂತಲೂ ಜ್ಞಾನ ಮತ್ತು ಅಧಿಕಾರದ ಸಂಯೋಗವೇ ಯಜಮಾನಿಕೆ ಹಾಗೂ ಪ್ರಬಲೀಯತೆಯನ್ನು ಸೃಷ್ಟಿಸಿದೆ. ಚರಿತ್ರೆಯ ವಿಮರ್ಶೀಯ ಸ್ವರೂಪದ ಥಿಯರಿಯೇನಿದೆ ಅದು ಇಂದು ಕೇವಲ ನಿಂದನೆ ನಡೆಸುವ ನೌಕರಶಾಹಿಗಳು ಹಾಗೂ ಶೋಷಣೆ ನಡೆಸುವ ಬಂಡವಾಳಿಗರಿಂದ ಉಂಟಾಗುವಂತದ್ದೇನಲ್ಲ. ಮಾಕ್ರ್ಸ್ ಪ್ರಮೇಯವು ಇಂದಿನ ಕಾಲದ ಶೋಷಣೆಯ ಮಾಧ್ಯಮಗಳನ್ನು ಶೋಷಿಸುವ ವೈಚಾರಿಕತೆಯನ್ನು ಹೊಂದಿಲ್ಲವೆಂದೂ ಆತ ಹೇಳುತ್ತಾನೆ. ಇದರರ್ಥ ಶೋಷಣೆ ಇಲ್ಲವೆಂದಲ್ಲ, ಬದಲು ಮಾಕ್ರ್ಸ್ವಾದವೇನಿದೆ ಅದು ಶ್ರಮ-ಶ್ರಮಿಕ (ಲೇಬರ್) ಎನ್ನುವ ಪರಿಕಲ್ಪನೆಯನ್ನೇ ಅತ್ಯಂತ ಕುಬ್ಜಗೊಳಿಸಿದೆ ಎನ್ನುವ ಕಾರಣದಿಂದಾಗಿ. ಜ್ಞಾನ ಮತ್ತು ಅಧಿಕಾರವು ನಿಯಂತ್ರಣದ ಮಾಧ್ಯಮಗಳಾಗಿರುವಂತೆಯೇ ತನ್ನ ಸೆಕ್ಸುವಾಲಿಟಿ ಮತ್ತು ಶಿಕ್ಷೆಯ ಕುರಿತಾದ ಕೃತಿಯಲ್ಲಿ ಮಿಲಿಟರಿ, ಅಸಿಲಿಮ್, ಶಿಕ್ಷೆ ಮತ್ತು ಸೆಕ್ಸುವಾಲಿಟಿಗೆ ಸಂಬಂಧಿಸಿದ ವರ್ಗೀಕೃತ ಪ್ರದೇಶಗಳು, ಜನನ ಮತ್ತು ಬೆಳವಣಿಗೆ ಮುಂತಾದ ಸಂಗತಿಗಳನ್ನು ನಿಯಂತ್ರಣದ ಮಾಧ್ಯಮಗಳೆಂದು ಅಭಿಪ್ರಾಯಿಸುತ್ತಾನೆ. ಅನೇಕ ಆಧುನಿಕ ಆಚರಣೆಗಳನ್ನೂ ಕೂಡಾ ಸಂದರ್ಭದಲ್ಲಿ ಮಾಧ್ಯಮಗಳನ್ನಾಗಿಸುತ್ತಾನೆ. ಮಾಕ್ರ್ಸ್ ಆರ್ಥಿಕ ನಿಯತಿವಾದವನ್ನು ಮೀರಿದ ಅನೇಕ ಸಂಗತಿಗಳ ಬಗೆಗೆ ನಮ್ಮ ಗಮನ ಸೆಳೆಯುತ್ತಾನೆ. ಕಾರಣದಿಂದ ಫ್ಯಾಕ್ಟರಿಯೇನಿದೆ ಅದು ಕೇವಲ ಆರ್ಥಿಕ ಶೋಷಣೆಯ ಕೇಂದ್ರವಷ್ಟೇ ಆಗಿರದೆ ಬೇರೆಯದಾದ ಅನೇಕ ಸಾಧ್ಯತೆಗಳನ್ನು ಹೊಂದಿರುವಂತದ್ದು ಎನ್ನತ್ತಾನೆ.

ಫುಕೋ ತನ್ನ ಡಿಸಿಪ್ಲಿನ್ ಆ್ಯಂಡ್ ಪನಿಶ್ ಹಾಗೂ ದಿ ಹಿಸ್ಟರಿ ಆಫ್ ಸೆಕ್ಸುವಾಲಿಟಿ ಕೃತಿಯಲ್ಲಿ ಅಪರಾಧ ಮತ್ತು ಲೈಂಗಿಕತೆಯ ಚರಿತ್ರೆಯನ್ನು ಮುಖ್ಯವಾದ ಮೂರು ವಿಭಾಗಗಳಲ್ಲಿ ವಿಭಾಗಿಸಿ, ಹದಿನೆಂಟನೆಯ ಶತಕವನ್ನು ಒಂದು ಯುಗಸಂಧಿಕಾಲದ ರೀತಿಯಲ್ಲಿ ಕರೆಯುತ್ತಾನೆ. ಮೊದಲಿನ ಅವಧಿಯಲ್ಲಿ ಅಪರಾಧ ಮತ್ತು ಲೈಂಗಿಕತೆಯ ಜ್ಞಾನ ಮತ್ತು ಅಧಿಕಾರವು ದೇಹದ ಜತೆ ಹೊಂದಿರುವ ಸಂಗತಿಯನ್ನು ಅದರ ಸಂಬಂಧವನ್ನು ಕುರಿತು ನಮ್ಮನ್ನು ಗಮನಸೆಳೆಯುತ್ತಾನೆ. ಹೊತ್ತಿಗೆ ಅಪರಾಧಿಯನ್ನು ಆತನ ದೇಹವನ್ನು ಆತ ಮಾಡಿದ ಅಪರಾಧಕ್ಕೆ ದಂಡಿಸಲಾಗುತ್ತಿತ್ತು ಅಥವಾ ಮೂಲಕ ಅಪರಾಧದ ಸತ್ಯವನ್ನು ಹೊರಗೆಡಹಲಾಗುತ್ತಿತ್ತು. ದೇಹವೇ ಆಗ ಅಧಿಕಾರದ ನಿಯಂತ್ರಣಕ್ಕೊಳಪಡುತ್ತಿತ್ತು. ಕಟ್ಟಕಡೆಗೆ ಆತನಿಗೆ ಮರಣದಂಡನೆಯನ್ನೋ ವಿಧಿಸಿ ಪ್ರಕರಣ ಇತ್ಯರ್ಥವಾಗುತ್ತಿತ್ತು. ಲೈಂಗಿಕತೆ ಕೂಡಾ, ಯುರೋಪಿನಲ್ಲಿ ಜ್ಞಾನಪರ್ವಕ್ಕಿಂತಲೂ ಮುಂಚೆ ಇದೇ ರೀತಿಯಲ್ಲಿತ್ತು. ದೇಹಮೂಲದಿಂದಲೇ ನೋಡಲಾಗುತ್ತಿತ್ತು. ಹತ್ತೊಂಬತ್ತನೆಯ ಶತಕ ಮತ್ತು ಆಧುನಿಕತೆಯ ಪ್ರವೇಶವು ಇವೆರಡೂ ಸಂಗತಿಗಳಲ್ಲಿ ಅಸಾಮಾನ್ಯವಾದಂತಹ ಬದಲಾವಣೆಯನ್ನು ಉಂಟುಮಾಡಿತು. ಇದು ಒಂದು ರೀತಿಯ ನಾಟಕೀಯವಾದಂತಹ ಅನಿರಂತರತೆಯನ್ನು ಕುರಿತು ತಂದಿತು. ಅಪರಾಧ ಮತ್ತು ಲೈಂಗಿಕತೆಯು ಆಧುನಿಕವಾದ ತಂತ್ರಜ್ಞಾನದಿಂದ ಅದರ ಅಧಿಕಾರ ವಿನ್ಯಾಸ (ಪ್ರಭುತ್ವ)ದಿಂದ ನಿರೂಪಿತವಾದ ವಿದ್ಯಮಾನವಾಯಿತು. ಕಾರಣದಿಂದಲೇ ಜೈಲು, ಮಿಲಿಟರಿ, ಪೋಲಿಸ್ ಮುಂತಾದವುಗಳು ಸಾಮಾಜಿಕ ಭೂದೃಶ್ಯದಲ್ಲಿ ಕಾಣಿಸಿಕೊಂಡವು.

ಈಗ ಪ್ರಭುತ್ವವು ಇಂತಹ ಸಂಸ್ಥೆಗಳ ಮೂಲಕ ವ್ಯಕ್ತಿಗತವಾದ ಹಾಗೂ ಕೌಟುಂಬಿಕ ಮತ್ತು ಸಾಮಾಜಿಕ ಜೀವನವನ್ನೂ ನಿಯಂತ್ರಿಸತೊಡಗಿದುವು. ಅಂದರೆ ದೇಹದಿಂದ ನಿಯಂತ್ರಣದ ಸ್ವರೂಪವು ಬದಲಾಗಿ ಮನಸ್ಸಿಗೆ ತಲುಪಿತು. ಪ್ರಭುತ್ವವು ಹೊಸ ರೀತಿಯ ನಿಯಂತ್ರಣದ ಸಾಧನಗಳನ್ನು ಅಧೀನದ ಗುಂಪುಗಳನ್ನು ಅಂದರೆ ಅಧಿಕಾರದ ಮತ್ತು ಆಡಳಿತದ ಏಣಿಶ್ರೇಣಿಗಳನ್ನು ತೆರನಾಗಿ ಸೃಷ್ಟಿಸಿಕೊಂಡುವು. ಹೊತ್ತಿನಲ್ಲಿ ಸೃಷ್ಟಿಯಾದ ಆಧುನಿಕವಾದ ನೌಕರಶಾಹೀ ಏನಿದೆ ಅದು ಜನಮಾನಸವನ್ನು ತೀವ್ರವಾಗಿ ನಿಯಂತ್ರಿಸತೊಡಗಿತು. ಹೊಸ ಹೊಸ ಸಂಶೋಧನೆಗಳು ಹಾಗೂ ಜ್ಞಾನಶಿಸ್ತುಗಳು ಕಾರಣಕ್ಕಾಗಿ ಹುಟ್ಟಿಕೊಂಡುವು. ಹೀಗೆ ಒಂದು ನೆಲೆಯ ಸಾಂಸ್ಥೀಕೃತವಾದಂತಹ ಡಿಸ್ಕೋರ್ಸ್ (ಪ್ರಭುತ್ವ ರೂಪಿಸಿದ ಜ್ಞಾನ) ಇದಕ್ಕಾಗಿ ಜನ್ಮತಾಳಿತು. ವಿಕ್ಟೋರಿಯನ್ ಯುಗದ ಲೈಂಗಿಕತೆ ಕುರಿತಂತಹ ಪ್ರತಿಗಾಮೀ ಮೌಲ್ಯಗಳನ್ನು ಫುಕೋ ನೆಲೆಯಲ್ಲಿ ಕಾಣುತ್ತಾನೆ. ಬಹುಶ: ಮನುಷ್ಯನ ಮತ್ತು ಚರಿತ್ರಕಾರನ ಚರಿತ್ರೆಯಲ್ಲೇ ಫುಕೋ ಮೊತ್ತಮೊದಲ ಬಾರಿಗೆ ಇಂತಹ ವಿಲಕ್ಷಣ ಪ್ರಸ್ಥಾನದ ಚಿಂತನೆಯನ್ನು ಹರಿಸುತ್ತಾನೆ.

ಐಡಿಯಾಲಜಿಯ ಪರಿಕಲ್ಪನೆ

ಐಡಿಯಾಲಜಿಯ ಕುರಿತಾದ ಫುಕೋನ ವಿವೇಕ ವಿಶಿಷ್ಠವಾದುದಾಗಿದೆ. ಇದುವರೆಗೆ ಐಡಿಯಾಲಜಿಯ ಬಗೆಗೆ ಬಂದಿರುವ ವಿವೇಕಗಳ ಪೈಕಿ ಮಾಕ್ರ್ಸ್ವಾದದ ವಿವರಣೆಯು ಆಕರ್ಷಕವಾದುದು. ಆದರೆ ಫುಕೋ ಪ್ರಕಾರ ಮಾಕ್ರ್ಸ್ವಾದವು, ಜ್ಞಾನ ಮತ್ತು ಡಿಸ್ಕೋರ್ಸ್ ಏನಿದೆ ಅದರ ಚಾರಿತ್ರಿಕ ವಿಕಾಸವನ್ನು ಹೇಳಲು ವಿಫಲವಾಗಿದೆ ಎನ್ನುವುದು ಬಹುಮುಖ್ಯವಾದಂತಹ ತಕರಾರು. ಸುಮಾರು 19ನೆಯ ಶತಕದಲ್ಲಿ ಮಾಕ್ರ್ಸ್ವಾದವು ಫ್ರಾನ್ಸ್, ಜರ್ಮನಿ, ಇಟೆಲಿ ಹಾಗೂ ಜರ್ಮನಿಗಳಲ್ಲಿ ಬಂಡವಾಳಶಾಹೀ ವ್ಯವಸ್ಥೆಯ ಕುರಿತ ತಿಳುವಳಿಕೆಗಳ ಸಂದರ್ಭಲ್ಲಿ ಐಡಿಯಾಲಜಿಯ ಪರಿಕಲ್ಪನೆಯನ್ನು ವ್ಯಾಪಕವಾಗಿ ಬಳಸಿತು. ಇದು ಮುಂದುವರಿದು ಅಂಟೋನಿಯೋ ಗ್ರಾಂಶಿ, ಜಾರ್ಜ್ ಲುಕಾಕ್ಸ್, ಫ್ರಾಂಕ್ಫರ್ಟ್ ಸ್ಕೂಲ್, ಜೀನ್ ಪಾಲ್ ಸಾತ್ರ್ರೆ ಹಾಗೂ ಲೂಯಿ ಅಲ್ತೂಸರ್ ಆದಿಗಳು ಸಾಂಪ್ರದಾಯಿಕ ಮಾಕ್ರ್ಸ್ವಾದೀಯ ಆಲೋಚನೆಯನ್ನು ಸುಧಾರಿಸಿ ಮರುನಿರೂಪಿಸಿದರು. ಇಂತಹ ಐಡಿಯಾಲಜಿಯೇ ಬಂಡವಾಳಿಗರ ಪ್ರಮುಖ ಸತ್ವವಾಗಿ ಕಾರ್ಮಿಕರ ಕ್ರಾಂತಿಯನ್ನು ಹಾಗೂ ಮುಂಬರಲಿರುವ ಕಮ್ಯುನಿಸ್ಟ್ ಸ್ವರ್ಗವನ್ನು ಮುಂದೆ ತಳ್ಳಿದ್ದವು. ವರ್ಗ ಸಂಘರ್ಷವನ್ನು ಹುಟ್ಟಿಸಿದ ರಾಷ್ಟ್ರೀಯವಾದ, ಕಾರ್ಮಿಕರ ಐಕ್ಯವನ್ನು ಮುರಿಯುವ ವೈವಿಧ್ಯದ ಜನಾಂಗಗಳು, ಬಂಡವಾಳಶಾಹಿತ್ವವನ್ನು ಗಟ್ಟಿಗೊಳಿಸುವ ರೀತಿಯಲ್ಲಿ ಮತ್ತು ಕಾರ್ಮಿಕರು ಅದನ್ನು ಮಾನ್ಯ ಮಾಡುವ ರೀತಿಯಲ್ಲಿನ ಕೊಳ್ಳುಬಾಕತನ, ಶಿಕ್ಷಣ ವ್ಯವಸ್ಥೆಯ ಪಾತ್ರ ಮತ್ತು ಮಾಧ್ಯಮದ ದಾಯಿತ್ವ ಮುಂತಾದವುಗಳು ವೈರುಧ್ಯಗಳನ್ನೇ ಮನ್ನಿಸುವ ಮೂಲಕ ಅವುಗಳನ್ನು ಒಪ್ಪಿತವಾಗುವ ಹಾಗೆ ಮಾಡಿವೆ. ಇಂತಹ ಸಂಗತಿ ಮತ್ತು ಲಕ್ಷಣಗಳು, ವಿಚಾರಗಳು ಆಳುವ ವರ್ಗದ ವಿಚಾರಗಳಾಗಿ ಉಳಿದಿವೆ ಮತ್ತು ಮುಂದೆಯೂ ಉಳಿಯುತ್ತವೆ. ಮಾಕ್ರ್ಸ್ವಾದಿಗಳ ಪ್ರಕಾರ ವರ್ಗ ಸಂಘರ್ಷದ ಪ್ರಜ್ಞೆಯು ಅಸತ್ಯದ ಪ್ರಜ್ಞೆಯಾಗಿ ಮಾರ್ಪಾಟಾಗಿರುವಂತದ್ದಾಗಿದೆ. ಕಾರಣದಿಂದ ಎಲ್ಲಿಯವರೆಗೆ ಇಂತಹ ಐಡಿಯಾಲಜಿ ಉಳಿಯುವುದೋ ಅಲ್ಲಿಯವರೆಗೆ ಪೂರ್ಣ ಪ್ರಮಾಣದ ಕ್ರಾಂತಿ ಸಾಧ್ಯವಿಲ್ಲ.

ಫುಕೋಗೆ ರೀತಿಯ ಮಾಕ್ರ್ಸಿಯನ್ ಮಾದರಿಯು ಮೂರು ಮುಖ್ಯವಾದಂತಹ ತಾತ್ವಿಕ ತಕರಾರುಗಳನ್ನು ತಂದೊಡ್ಡುವ ಕಾರಣದಿಂದ ಅದನ್ನು ನಿರಾಕರಿಸುತ್ತಾನೆ. ಒಂದನೆಯದಾಗಿ, ಇಂತಹ ಸ್ಥಿತಿಯನ್ನು ಒಬ್ಬನು ಬಯಸುತ್ತಾನೋ ಇಲ್ಲವೋ ಆದರೆ ಸತ್ಯದ ವಾಚ್ಯ ಸ್ವರೂಪಕ್ಕೆ ಅದು ವಿರುದ್ಧವಾದುದು. ಫುಕೋ ಪ್ರಕಾರ, ಆತ ಕರೆಯುವ ಡಿಸ್ಕೋರ್ಸ್ (ಐಡಿಯಾಲಜಿಗೆ ಸರಿಸುಮಾರು ಹೊಂದುವ) ಏನಿದೆ, ಅದರೊಳಗೆ ಸಂಭವಿಸುವ ಸತ್ಯವೇನಿದೆ ಅದು ಚಾರಿತ್ರಿಕವಾದ ಪ್ರಭಾವ ಪರಿಣಾಮದಿಂದ ಇತ್ತ ಸತ್ಯವೂ ಅಲ್ಲ ಅತ್ತ ಸುಳ್ಳು ಅಲ್ಲದ ಸ್ಥಿತಿಯಲ್ಲಿರುತ್ತದೆ. ಎರಡನೆಯದಾಗಿ, ಒಂದು ವಿಷಯಾತ್ಮಕ ಅಸಮರ್ಪಕತೆಯ ಕಾರಣದಿಂದ, ಮೂರನೆಯದಾಗಿ, ಐಡಿಯಾಲಜಿ ಎನ್ನುವುದೇ ಒಂದು ರೀತಿಯಲ್ಲಿ ಅಸ್ಖಲಿತವಾದ ಆರ್ಥಿಕ ನಿಯತಿವಾದದ (ಇಕಾನಾಮಿಕ್ ಡಿಟರ್ಮಿನಿಸಮ್) ಸ್ವರೂಪದಲ್ಲಿ ತನ್ನನ್ನು ಮಿತಿಗೊಳಿಸಿದ ಕಾರಣದಿಂದ. ಮಾಕ್ರ್ಸ್ವಾದಿಗಳ ಪ್ರಕಾರ ಐಡಿಯಾಲಜಿ ಎನ್ನುವುದು ಜ್ಞಾನಕ್ಕೆ ವಿರುದ್ಧಾತ್ಮಕವಾದ ನೆಲೆಯಾಗಿದೆ. ಅದು ಜ್ಞಾನವನ್ನು, ಅದರ ಸ್ಥಾನವನ್ನು ತಲುಪುವುದೇ ಇಲ್ಲವಾಗಿದೆ. ಇಲ್ಲಿ ಐಡಿಯಾಲಜಿಯ ಅಧ್ಯಯನವೆಂದರೆ ಒಂದು ನೆಲೆಯಲ್ಲಿ ವಿಚಾರಗಳನ್ನು ದುರ್ಬಲಗೊಳಿಸಿದ ಅಥವಾ ನಿಸ್ಸಾರಗೊಳಿಸಿದ ಕ್ರಮವೇ ಆಗಿದೆ. ಇದಲ್ಲದೇ ಮಾಕ್ರ್ಸಿಯನ್ ವೈಚಾರಿಕನು ಜನಮಾನಸದ ಮೇಲೆಯೇ ಇದ್ದು, ವಿಶ್ವಾತ್ಮಕತೆಯನ್ನು ಪ್ರತಿನಿಧಿಸುತ್ತಾನೆ. ಆದರೆ ಇದೇ ಹೊತ್ತಿಗೆ ಮಾಕ್ರ್ಸಿಸಮ್ ರೀತಿಯಲ್ಲಿ ಬೇರೆ ಬೇರೆಯ ವೈಚಾರಿಕ ಪ್ರಮೇಯಗಳೂ ಇರುವ ಕಾರಣ, ಹಲವು ಪ್ರಮೇಯಗಳಲ್ಲಿ ಇದೂ ಒಂದಾಗಿರುತ್ತದೆ. ಪ್ರತೀ ಪ್ರಮೇಯಗಳಿಗೂ ಕೂಡಾ ಅವುಗಳದೇ ಆದಂತಹ ಅಭಿಪ್ರಾಯ ಮತ್ತು ವಕ್ತತೆಯಿರುತ್ತದೆ.

ಮಾಕ್ರ್ಸಿಯನ್ ಐಡಿಯಾಲಜಿಗೆ ಫುಕೋ ಒಡ್ಡುವ ಇನ್ನೊಂದು ತಕರಾರೆಂದರೆ ಅದು ಮಾನವತಾವಾದ ವಿರೋಧಿ ಎಂಬುದಾಗಿ. ಅವನ ಪ್ರಕಾರ ಐಡಿಯಾಲಜಿಯು ಅತ್ಯಂತ ಪ್ರಮುಖವಾಗಿ ವಿಚಾರಗಳನ್ನೇ ಕೇಂದ್ರದಲ್ಲಿಟ್ಟು ಆಲೋಚಿಸುತ್ತದೆಯೇ ಹೊರತು ಮಾನವನನ್ನಲ್ಲ ಎನ್ನುವುದು ಫುಕೋ ಅಭಿಪ್ರಾಯವಾಗಿದೆ. ಮುಖ್ಯವಾಗಿ ಐಡಿಯಾಲಜಿಯು ಆಳುವ ವರ್ಗದಿಂದ ಬಂದಿದೆಯೇ ಹೊರತು ಆಳಲ್ಪಡುವ ವರ್ಗದ ಜನರಿಂದಲ್ಲ ಎನ್ನುವುದು. ಕಾರಣದಿಂದ ಐಡಿಯಾಲಜಿಯು ತನ್ನ ಪ್ರಮುಖ ಕಾಳಜಿಯಾದ ಅಧೀನವಾಗಿಸುವ ಆಯಾಮವನ್ನು ನೋಡಲು ಸಾಧ್ಯವಾಗುವುದಿಲ್ಲ ಎನ್ನುತ್ತಾನೆ. ಫುಕೋ, ಐಡಿಯಾಲಜಿಯು ಒಂದೇ ಸ್ವರೂಪದ ಉತ್ಪಾದನಾ ಪ್ರಕಾರವನ್ನು ನೆಚ್ಚಿರುವುದನ್ನು ಅಥವಾ ಅದಕ್ಕೆ ಮಾತ್ರ ಉಳಿದಿರುವುದನ್ನು ವಿರೋಧಿಸುತ್ತಾನೆ. ಆತ ಜ್ಞಾನ ಮತ್ತು ಅಧಿಕಾರದ ವಿವರಣೆಯ ಮೂಲಕ ಜ್ಞಾನದ ಭೌತವಾದೀ ಚರಿತ್ರೆಯ ಕುರಿತು ಗಮನ ಸೆಳೆಯುತ್ತಾನೆ. ಮಾಕ್ರ್ಸ್ವಾದದ ಚಾರಿತ್ರಿಕ ವಿವರಣೆಯ ಕೇಂದ್ರವಾದದಂತಹ ಚಾರಿತ್ರಿಕ ಭೌತವಾದವನ್ನು ನಿರಾಕರಿಸುತ್ತಾನೆ. ಅದರ ಮೇಲಿನ ವಿವರಣೆಯಾದಂತಹ ಬೇಸ್ ಮತ್ತು ಸೂಪರ್ ಸ್ಟ್ರಕ್ಚರ್ ಅನ್ನು ಮೇಲುಮೇಲಿ£ ತಿಳುವಳಿಕೆÀ ಎನ್ನುತ್ತಾನೆ. ಮಾಕ್ರ್ಸ್ವಾದದ ಮೇಲಿನ ಪ್ರಬಲ ಟೀಕೆಯ ಹೊರತಾಗಿಯೂ ಕೂಡಾ ಯಾವುದೇ ಸಾಮಾಜಿಕ ರಚನೆಯ ವಿವೇಚನೆಯ ಸಂದರ್ಭದಲ್ಲೂ ಇರಬೇಕಾದಂತಹ ಬಹ್ವಾಯಾಮದ ಸಾಮಾಜಿಕ ಶಕ್ತಿಗಳ ಕುರಿತು ಫುಕೋ ಒತ್ತಿ ಹೇಳುತ್ತಾನೆ. ಯಾವುದೇ ರೀತಿಯ ಸಾಮಾಜಿಕ ತಾತ್ವಿಕತೆಯನ್ನು ಒಂದೇ ಪೆಟ್ಟಿನಲ್ಲಿ ಗ್ರಹಿಸಲಾಗದು ಎನ್ನುವ ಅಭಿಪ್ರಾಯವನ್ನು ತಾಳುತ್ತಾನೆ. ಕಾರಣಕ್ಕಾಗಿ ಪ್ರತಿಯೊಂದು ಡಿಸ್ಕೋರ್ಸ್ ಅನ್ನೂ ಕೂಡಾ ಪ್ರತ್ಯೇಕ ಪ್ರತ್ಯೇಕವಾಗಿಯೇ ಗ್ರಹಿಸಬೇಕು. ನೆಲೆಯಲ್ಲಿ ಸಂಪೂರ್ಣ ಮತ್ತು ಸಮಗ್ರ ಚರಿತ್ರೆ ಎನ್ನುವ ವಿವೇಚನೆಯೇ ಸಮಸ್ಯಾತ್ಮಕವಾದುದೆನ್ನುವುದು ಫುಕೋ ಅಭಿಪ್ರಾಯವಾಗಿದೆ. ಮಾಕ್ರ್ಸ್ವಾದ ಕೂಡಾ ಚರಿತ್ರೆಯನ್ನು ಸಮಗ್ರವಾಗಿ, ಜಾಗತಿಕವಾಗಿ ಏನನ್ನು ನೋಡುತ್ತದೆ ಅದು ಸಮಸ್ಯಾತ್ಮಕವಾದುದು, ಬದಲು ನಮಗೆಜನರಲ್ ಹಿಸ್ಟರಿ ಅಗತ್ಯವಿದೆ ಎನ್ನುತ್ತಾನೆ. ಫುಕೋ ತನ್ನ ಆಲೋಚನೆಗಳ ಕೊನೆಯ ಹಂತದಲ್ಲಿ ಜ್ಞಾನ ಮತ್ತು ಅಧಿಕಾರವನ್ನು ಮೀರಿ ಎಪಿಸ್ಟೆಮ್ ಎನ್ನುವ ಅಂದರೆ ಒಂದು ರೀತಿ ಪ್ರತೀ ಯುಗವೂ ಪ್ರತಿನಿಧಿಸಬಹುದಾದಂತಹ ಯುಗಧರ್ಮದ ಕುರಿತು ಬೆಳಕು ಹರಿಸುತ್ತಾ ಅದು ಅತ್ಯಂತ ಪ್ರಬಲವಾದ ಸಂಗತಿ ಎನ್ನುತ್ತಾನೆ.

ಇದೇ ಹೊತ್ತಿಗೆ ಆತನ ಆರ್ಖಿಯಾಲಜಿ ಮತ್ತು ಜೀನಿಯಾಲಜಿ ಏನಿದೆ ಅಷ್ಟು ಸ್ಪಷ್ವವಾದಂತಹ ಚಾರಿತ್ರಿಕ ಅಧ್ಯಯನದ ಸ್ವರೂಪದಲ್ಲಿರದ ಕಾರಣದಿಂದಾಗಿ ಅದನ್ನು ಪ್ರಬಂಧದಲ್ಲಿ ಹೆಚ್ಚು ಗಮನ ಹರಿಸಿಲ್ಲ.

                        

***

 

ಪರಾಮರ್ಶನಗಳು

ಎನ್ ಎಸ್ ಗುಂಡೂರ, ವರ್ತಮಾನದ ಇತಿಹಾಸಕಾರ ಮಿಶೆಲ್ ಫುಕೋ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು, 2016.

ಕೀತ್ ಜಂಕಿನ್ಸ್, ‘ರೀತಿಂಕಿಂಗ್ ಹಿಸ್ಟರಿ? ರೌಟ್ಲಡ್ಜ್, 2003.

ಕೀತ್ ಜಂಕಿನ್ಸ್, ‘ಆನ್ ವ್ಹಾಟ್ ಈಸ್ ಹಿಸ್ಟರಿ?’: ಫ್ರಮ್ ಕಾರ್ ಆ್ಯಂಡ್ ಎಲ್ಟನ್ ಟು ರಾರ್ಟಿ ಆ್ಯಂಡ್ ವ್ಹೈಟ್, ರೌಟ್ಲಡ್ಜ್, 1991.

ಮಾರ್ಕ್ ಪೋಸ್ಟರ್, ಫುಕೋ ಆ್ಯಂಡ್ ಹಿಸ್ಟರಿ, ಸೋಶಿಯಲ್ ರಿಸರ್ಚ್ ವಾಲ್ಯುಮ್ 49, ನಂ.1, ಮಾಡರ್ನ್ ಮಾಸ್ಟರ್ಸ್(ಸ್ಪ್ರಿಂಗ್ 1982), ಪುಟಗಳು 116-142.

ಡೇವಿಡ್ ಗಾರ್ಲ್ಯಾಂಡ್, ವ್ಹಾಸ್ ಈಸ್ ಹಿಸ್ಟರಿ ಆಫ್ ದಿ ಪ್ರೆಸೆಂಟ್’? ಆನ್ ಜೀನಿಯಾಲಜೀಸ್ ಆ್ಯಂಡ್ ದೆಯರ್ ಕ್ರಿಟಿಕಲ್ ಪ್ರೀಕಂಡೀಶನ್ಸ್, ಸೇಜ್ ಪನಿಶ್ಮೆಂಟ್ ಆ್ಯಂಡ್ ಸೊಸೈಟಿ 2014, ವಾಲ್ಯುಮ್ 16(4), ಪುಟಗಳು 365-384, 2014.

ರಿಯಲ್ ಫಿಲ್ಲೊನ್, ಫುಕೋ ಆನ್ ಹಿಸ್ಟರಿ ಆ್ಯಂಡ್ ದಿ ಸೆಲ್ಫ್, ಲಾವಲ್ ಥಿಯಾಲಜಿಕೆ ಎಟ್ ಫಿಲಾಸಫಿಕೆ, 54, 1 (ಫೆವ್ರೀರ್ 1998): ಪುಟಗಳು 143-162, ಮಾಂಕ್ಟನ್.

ಕೀತ್ ವಿಂಡ್ಶಟಲ್, ಫುಕೋ ಆ್ಯಸ್ ಹಿಸ್ಟೋರಿಯನ್, ಕ್ರಿಟಿಕಲ್ ರಿವೀವ್ ಆಫ್ ಇಂಟರ್ನ್ಯಾಶನಲ್ ಸೋಶಿಯಲ್ ಆ್ಯಂಡ್ ಪೊಲಿಟಿಕಲ್ ಫಿಲಾಸಫಿ ವಾಲ್ಯುಮ್ 01 ಇಶ್ಶು 02, 1998.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ಸಿನಿಮಾ ಚರಿತ್ರೆ : ಸಮಾಜ, ಸಂಸ್ಕøತಿ ಮತ್ತು ರಾಜಕಾರಣ

ಕರ್ನಾಟಕದಲ್ಲಿ ಸೂಫಿಗಳು

ಚಾರಿತ್ರಿಕ ಕೃತಿಯ ಹಲವು ಓದಿನ ಸಾಧ್ಯತೆಗಳು: ಹಿಂದ್ ಸ್ವರಾಜ್ ಮಾದರಿ