ಆ್ಯಕ್ಟ್ ಆಫ್ ಕಿಲ್ಲಿಂಗ್ (2013)
ಜಗತ್ತಿನ ಪ್ರಸಿದ್ಧ ಸಿನಿಮಾ ನಿರ್ದೇಶಕ ವರ್ನರ್ ಹರ್ಝೋಗ್ ಒಂದು ಕಡೆ ಈ ಸಿನಿಮಾದ ಬಗ್ಗೆ ಆಡುವ, ‘ಇದು ಫೀಛರ್ ಫಿಲ್ಮೋ? ಡಾಕ್ಯುಮೆಂಟರೀನೋ? ವಾಸ್ತವವೋ, ಸುರ್ರಿಯಲಿಸಮ್ಮೋ? ಎನ್ನುವ ಪ್ರಶ್ನೆ ಮತ್ತು ಈ ಸಿನಿಮಾ ಸಮಕಾಲೀನ ಸಂದರ್ಭದ ಸಿನಿಮಾ ಫಾರ್ಮ್ ಬಗೆಗೆ ಮತ್ತದರ ಎಸ್ತೆಟಿಕ್ಸ್ ಬಗೆಗೆ ಕೆಲವು ಬಿಕ್ಕಟ್ಟುಗಳನ್ನು ಸೃಷ್ಠಿಸಿದೆ’ ಎನ್ನುವ ಮಾತು ಬಹುಶ: ಈ ಸಿನಿಮಾದ ಬಗ್ಗೆ ಮಾಡಿರುವ ಒಂದು ಬಹುಮುಖ್ಯವಾದ ವಿಮರ್ಶೆಯೆಂದೇ ನಾನು ಗೃಹಿಸಿದ್ದೇನೆ. ಹರ್ಝೋಗ್ ಇನ್ನೂ ಮುಂದುವರಿದು ಆ್ಯಕ್ಟ್ ಆಫ್ ಕಿಲ್ಲಿಂಗ್ ಈ ಸಂದರ್ಭದ ಒಂದು ಸಂಕೀರ್ಣ ಕಥನ ಸಾಧ್ಯತೆ ಎಂದಿರುವುದೂ ಕೂಡಾ ಸಿನಿಮಾದ ತಾತ್ವಿಕತೆಯ ಮೇಲೆ ಮಾಡಿರುವ ಒಂದು ಬಹುಮುಖ್ಯವಾದ ಕಮೆಂಟ್. ಸುಮಾರು 2013ರಲ್ಲಿ ಅಮೇರಿಕಾದ ನಿರ್ದೇಶಕ ಜೋಷುವಾ ಓಪನ್ಹೀಮರ್ ನಿರ್ದೇಶಿಸಿದ, ‘ದಿ ಆ್ಯಕ್ಟ್ ಆಫ್ ಕಿಲ್ಲಿಂಗ್’ ಬಹುಶ: ಈ ತಲೆಮಾರು, ಸಮಕಾಲೀನತೆ ಚರಿತ್ರೆಯನ್ನು ಬಗೆದು ಹೊಸ ಕ್ರಮದಲ್ಲಿ ಹರಡುವ ಬಗೆ, ಸಿನಿಮಾ ಎನ್ನುವ ಫಾರ್ಮ್ ಬಗೆಗೆ ಮತ್ತದು ಹೊಂದಿರುವ ಸಾಂಪ್ರದಾಯಿಕ ಅಥವಾ ಕನ್ವೆನ್ಶನಲ್ಆದ ವ್ಯಾಕರಣ ಮತ್ತು ಭಾಷೆಯನ್ನು ನಿರಾಕರಿಸುವ ಮೂಲಕ ಒಂದು ಹೊಸ ಪ್ರಕಾರ ಮತ್ತು ಕಥನ ಸಾಧ್ಯತೆಯನ್ನು ಸೃಷ್ಠಿಸಿದೆ.
ಸುಮಾರು 1965ರಲ್ಲಿ ಅಸ್ತಿತ್ವಕ್ಕೆ ಬಂದ ಇಂಡೋನೇಶ್ಯಾದ ಉಗ್ರ ಬಲಪಂಥೀಯ ಸರ್ಕಾರ ಮತ್ತದರ ಅನುಯಾಯಿಗಳು ಸ್ವ-ಪ್ರೇರಣೆಯಿಂದ ಹಾಗೂ ಸರ್ಕಾರದ ಪ್ರಾಯೋಜಕತ್ವದ ಮೂಲಕ ಸರಿಸುಮಾರು 5 ಲಕ್ಷ ಕಮ್ಯುನಿಸ್ಟರ ಮತ್ತು ಕಮ್ಯುನಿಸ್ಟರಲ್ಲದ ಚೈನಾದ ಪ್ರಜೆಗಳ ನರಮೇಧವನ್ನು ನಡೆಸಿತ್ತು. ಇಂತಹ ಬೀಭತ್ಸ ಗತದ ಪಾಲುದಾರರಾಗಿದ್ದ ಮತ್ತು ಅಂತಹ ನರಮೇಧವನ್ನು ನಡೆಸಿದ ವ್ಯಕ್ತಿಗಳನ್ನು ಅವರು ನಡೆಸಿದ ಕೃತ್ಯಗಳನ್ನು ನಟನೆ ಮಾಡುವಂತೆ ಮಾಡಿಸಿ ಅವನ್ನು ಸಿನಿಮಾದ ರೂಪಕ್ಕೆ ತಂದಿದ್ದು ಜೋಷುವಾನ ‘ದಿ ಆ್ಯಕ್ಟ್ ಆಫ್ ಕಿಲ್ಲಿಂಗ್’. ಇಂಡೋನೇಶ್ಯಾದಲ್ಲಿ ಇಂತಹ ಒಂದು ನರಮೇಧ ಆಗಿತ್ತು ಎಂಬ ಸತ್ಯ ಜಗತ್ತಿಗೆ ಗೋಚರಿಸಿದ್ದೂ ಕೂಡಾ ಈ ಸಿನಿಮಾದ ಮೂಲಕ. ತನ್ಮೂಲಕ ನರಮೇಧದ ಚರಿತ್ರೆಯನ್ನೂ ಕೂಡಾ ಇದು ಡಿಕನ್ಸ್ಟ್ರಕ್ಟ್ ಮಾಡುತ್ತಾ ಸಾಗಿತು. ನರಮೇಧದ ಬಗ್ಗೆ ಸಾಕಷ್ಟು ಕೆಲಸ ಮಾಡಿರುವ ಮೈಕಲ್ ಸೆಲ್ಸ್, ‘ಹಿಟ್ಲರ್ನ ನರಮೇಧದ ಚರಿತ್ರೆ ಮತ್ತು ಅದರ ದಾಖಲು ಇಂತಹ ಅದೆಷ್ಟೋ ದಾಖಲಾಗದ ನರಮೇಧಗಳನ್ನು ಬೆಳಕಿಗೆ ಬಾರದಂತೆ ಮಾಡಿತು ಮತ್ತು ಇಂತಹ ಚರಿತ್ರೆ ದಾಖಲೆಯ ಯಜಮಾನಿಕೆಯು ದಾಖಲೀಕರಣದ ಸಂದರ್ಭದ ಒಂದು ರಾಜಕೀಯ’ ಎನ್ನುತ್ತಾನೆ. ಇಂತಹ ಅಕ್ಷರೀಯ ಕಥನದ ದೃಶ್ಯ ಅವತರಣಿಕೆಯ ಹಾಗೆ ಈ ಸಿನಿಮಾ ಇದೆ.
ಇಂಡೋನೇಶ್ಯಾದ ಚರಿತ್ರೆಯಲ್ಲೂ ಕೂಡಾ ಇಂತಹ ನರಮೇಧವನ್ನು ರಾಜಕೀಯ ಕಾರಣ, ಹತಾಷೆ ಮತ್ತು ಕುಪ್ರಸಿದ್ಧಿಯ ಕಾರಣದಿಂದ ಎಲ್ಲಿಯೂ ಪ್ರಸ್ತಾಪಿಸಿರಲಿಲ್ಲವಾಗಿತ್ತು. ಜೋಷುವಾ ಸಿನಿಮಾದ ಮೂಲಕ ಮಾಡಿದ ಇಂತಹ ಪ್ರಯತ್ನವನ್ನು ಕೂಡಾ ಇಂಡೋನೇಶ್ಯಾದ ಸರ್ಕಾರ ಮತ್ತದರ ಜತೆಗೆ ಗೂಂಡಾ-ಗೂಂಡಾಗಿರಿಯು ವಿಫಲ ಮಾಡಲೂ ಯತ್ನಿಸಿತ್ತು. ಇಡೀ ಸಿನಿಮಾ ಸಂಪೂರ್ಣವಾದ ಮೇಲಂತೂ ಜೋಷುವಾ ಮೇಲೆ ಸಿನಿಮಾ ಪ್ರದರ್ಶನ ನಡೆಸದಂತೆ ಬೆದರಿಕೆ ಕರೆಗಳೂ ಬಂದಿದ್ದುವು. ಆದರೆ ಹರ್ಝೋಗ್ ಮತ್ತು ಆತನ ನಿರ್ಮಾಪಕ ಹಾಗೂ ಸ್ನೇಹಿತರ ಒತ್ತಾಸೆಯಿಂದ ಸಿನಿಮಾವು ಇಂಡೋನೇಶ್ಯಾ ಸೇರಿದಂತೆ ಜಗತ್ತಿನ ಅನೇಕ ಸ್ಥಳ, ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿತು.
ಈ ಸಿನಿಮಾದಲ್ಲಿ ಜೋಷುವಾ ನರಮೇಧ ನಡೆಸಿದ ಅಥವಾ ಅದರಲ್ಲಿ ಪಾಲ್ಗೊಂಡವರನ್ನು ಅವರು ಕ್ರೈಂಸೀನ್ ಅಥವಾ ಘಟನೆ ಘಟಿಸಿದ ಪ್ರದೇಶಗಳಿಗೆ ಕರೆದುಕೊಂಡು ಹೋಗಿ ಗತದಲ್ಲಿ ಅಂದರೆ 60ರ ದಶಕದಲ್ಲಿ ಅವರು ಏನು ಮಾಡಿದ್ದರೋ ಅಂತಹ ಕ್ರಿಯೆಯನ್ನು ಪುನ: ನಾಟಕೀಯವಾಗಿ ಅಭಿನಯಿಸಿಸುತ್ತಾನೆ. ಗ್ಯಾಂಗ್ಸ್ಟರ್ಗಳಂತೆ ವೇಷ ತೊಟ್ಟ ಅಂತಹ ಕೃತ್ಯ ನಡೆಸಿದವರಲ್ಲೇ ಕೆಲವರನ್ನು ಬಲಿಪಶುಗಳ ರೀತಿಯಲ್ಲಿ ಆರಿಸಿಕೊಂಡೋ ಅವರು ನರಮೇಧದ ಬೇರೆ ಬೇರೆ ಕುಕೃತ್ಯಗಳನ್ನು ನಟಿಸುತ್ತಾರೆ. ನಟಿಸುವಾಗ ಅವರ ಅಂತಹ ಕೃತ್ಯಗಳು ಅಮೇರಿಕಾದ ಆ ಹೊತ್ತಿನ ಹಿಂಸೀಯ ಬಗೆ (ಜಾನ್ರಾ) ಯ ಸಿನಿಮಾಗಳು ಹಾಗೂ ಎಲ್ವಿಸ್ ಪ್ರಿಸ್ಲಿಯ ಸಂಗೀತದಿಂದ ಪಡೆದ ಪ್ರೇರಣೆಯನ್ನೂ ಅರುಹುತ್ತಾರೆ. ಈ ಸಿನಿಮಾದ ಬಹುಮುಖ್ಯವಾದ ಸೀನ್ನಲ್ಲಿ, ಹರಿಯುವ ಜಲಪಾತದ ಹಿನ್ನೆಲೆಯಲ್ಲಿ ಒಂದುದೊಡ್ಡ ಮೀನಿನ ಟ್ಯಾಬ್ಲೋವನ್ನು ಸೃಷ್ಠಿಮಾಡುವುದರ ಮೂಲಕ ಅವರು ಒಂದು ರೀತಿಯ ಮುಕ್ತತೆಯನ್ನು ಅನುಭವಿಸುವಂತೆ ಮಾಡಿದಾಗ ಕೂಡಾ ಈ ಪಾತಕಿಗಳು ಅವರು ಕೊಂದ ಒಬ್ಬ ಕಮ್ಯುನಿಸ್ಟ್ನ ಬಾಯಿಂದ ಹೇಳಿದನೆಂಬಂತೆ, ‘ನನ್ನನ್ನು ಕೊಂದದ್ದಕ್ಕೆ ಧನ್ಯವಾದ, ಸ್ವರ್ಗಕ್ಕೆ ಕಳಿಸುತ್ತಿರುವುದಕ್ಕೆ ಧನ್ಯವಾದಗಳು’ ಎನ್ನುತ್ತಾರೆ. ಈ ಸಿನಿಮಾದಲ್ಲಿ ತಮ್ಮ ಹಳೆಯ ಪಾತಕಿಗಳನ್ನು ಕಥಿಸಿದ, ಸೃಷ್ಟಿಸಿದ ಎಲ್ಲರೂ ಕೂಡಾ ಅತ್ಯಂತ ಪ್ರಾಮಾಣಿಕತೆಯಿಂದ ತಮ್ಮ ವೃತ್ತಾಂತ-ವರದಿಯನ್ನು ಕ್ಯಾಮೆರಾ ಮುಂದೆ ಮರೆಯುತ್ತಾರೆ. ಈ ರೀತಿ ನಾನು ಕೊಂದದ್ದು ಇಷ್ಟು ಸಂಖ್ಯೆ, ನಾನು ಹೆಚ್ಚು ಕೊಂದೆ, ನಾನು ವೃಷಣ ಕತ್ತರಿಸಿಕೊಂದೆ, ವೈರ್ನಲ್ಲಿ ಕುತ್ತಿಗೆ ಹಿರಿದು ಕೊಂದೆ, ಕಣ್ಣು ಕಿತ್ತು ಕೊಂದೆ, ತಿವಿದು ಕೊಂದೆ, ತಲೆ ಒಡೆದು ಕೊಂದೆ ಎಂದು ತರಹೇವಾರಿ ಪ್ರಕರಣಗಳನ್ನು ಅತ್ಯಂತ ಖುಷಿಯಿಂದ, ಹೆಮ್ಮೆಯಿಂದ ಹೇಳುತ್ತಾರೆ. ಈ ಮೂಲಕ ರಾಷ್ಟ್ರದ ಕೆಲಸ, ಸಮಾಜದ ಕೆಲಸ, ರಾಷ್ಟ್ರದ್ರೋಹಿಗಳನ್ನು ಸಾಯಿಸುವ ಕರ್ತವ್ಯ ನಿರ್ವಹಣೆ ಮತ್ತು ಕೈಂಕರ್ಯವನ್ನು ನಡೆಸಿದುದಾಗಿಯೂ ಮರೆಯುತ್ತಾರೆ. ಆದರೆ ಎಲ್ಲಿಯೂ ಕೂಡಾ ಅವರು ಕೊಂದದ್ದರ ಬಗ್ಗೆ ಒಂದಿನಿತೂ, ಸಾಸಿವೆ ಕಾಳಿನಷ್ಟೂ ಪಶ್ಚಾತ್ತಾಪ ಪಡುವುದಿಲ್ಲ. ಈ ನರಮೇಧದ ಅತ್ಯಂತ ಪ್ರಮುಖ ಪಾತಕಿ ಅನ್ವರ್ ಕಾಂಗೋಗೆ ನಿರ್ದೇಶಕ ಜೋಷುವಾ, ‘ ನಿನ್ನನ್ನು ಒಂದು ವೇಳೆ ಹೇಗ್ನ ಅಂತರಾಷ್ಟ್ರೀಯ ನ್ಯಾಯಾಲಯಕ್ಕೆ ನಿನ್ನ ಅಪರಾಧಗಳ ಆಧಾರದ ಮೇಲೆ ವಿಚಾರಣೆಗೆ ಒಳಪಡಿಸಿದರೆ ಏನ್ ಮಾಡ್ತೀಯಾ’ ಎಂದು ಕೇಳಿದಾಗ ಕಾಂಗೋ ಮಾತ್ರ, ‘ನಾನು ಖುಷಿಯಿಂದ ಹೋಗ್ತೇನೆ ಅದರಲ್ಲೇನು? ಅದು ನನ್ನ ಹೆಮ್ಮೆ ಮತ್ತುಇಂಡೋನೇಶ್ಯಾದ ಹೆಮ್ಮೆ’ ಎನ್ನುತ್ತಾನೆ. ಆದರೆ ವೀಕ್ಷಕನನ್ನು ಮಾತ್ರ ಇದು ಹೆಚ್ಚು ಚಿಂತೆ ಮತ್ತು ಚಿಂತನಾಶೀಲನನ್ನಾಗಿಸಿ ಕಾಡುತ್ತದೆ. ಆ ಹೊತ್ತಿಗೆ ಅನ್ವರ್ನನ್ನದು ಕಾಡುವುದಿಲ್ಲ. ಆತನಲ್ಲಿ ಪಶ್ಚಾತ್ತಾಪದ ಲವಲೇಶವೂ ನಮಗೆ ಕಾಣಿಸುವುದಿಲ್ಲ. ಅಷ್ಟು ನಿರ್ಲಿಪ್ತತೆ ಮತ್ತು ನರಮೇಧದಲ್ಲಿ ಒಳಗೊಂಡ ಸಂತೃಪ್ತಿ ಕಾಂಗೋನ ಛಾಯೆ ಮತ್ತು ಲಕ್ಷಣವಾಗಿ ಕಾಣುತ್ತದೆ.
ಸಿನಿಮಾ ಮೇಕಿಂಗ್ ದೃಷ್ಟಿಯಿಂದ ಕೂಡಾ ಜೋಷುವಾನ ತಂತ್ರಗಳು ವಿಶೇಷವಾಗಿ ಸುರ್ರಿಯಲಿಸಂನ ವಾಸ್ತವೀಕರಣ, ಆಲ್ ಸ್ಟಾಫ್ ಔಟ್ ವಿಧಾನ, ಮೆಟಾ ಸಿನಿಮೀಯ ನಿರೂಪಣೆಗಳು ಬಹುಶ: ಡಾಕ್ಯುಮೆಂಟರಿ ಬಗೆಯನ್ನೇ ಹೊಸ ರೀತಿಯಲ್ಲಿ ವಿಸ್ತರಿಸಿ ವ್ಯಾಖ್ಯಾನಿಸಿ ಸಮೃದ್ಧಗೊಳಿಸುತ್ತಾ ಸಾಗುತ್ತವೆ. ಬಹುಶ: ಈ ತಂತ್ರಗಳ ಕಾರಣದಿಂದ ಅನ್ವರ್ಕಾಂಗೋನಂತಹ ಪಾತಕಿ ಮತ್ತು ಪಾತ್ರ ಅತ್ಯಂತ ಸ್ಪಷ್ಟವಾಗಿ ತನ್ನ ಅಭಿವ್ಯಕ್ತಿಯನ್ನು ಪ್ರಕಟಿಸುತ್ತಾ ಹೋಗುತ್ತದೆ. ಈ ಸಿನಿಮಾದ ಇಡಿಯ ಶಿಲ್ಪದ ಪರಿಕಲ್ಪನೆಯನ್ನು ಈ ತಂತ್ರಗಳು ಒಂದು ಸುರ್ರಿಯಲ್ ಆದಂತಹ ಪ್ರಜ್ಞೆ-ಪ್ರದೇಶ ಮತ್ತು ಅನುಭವದ ನೆಲೆಗೆ ತಳ್ಳುತ್ತವೆ. ಈ ಕಾರಣದಿಂದ ಕಾಂಗೋ ತನ್ನ ಮೊಮ್ಮಕ್ಕಳಿಗೆ ನರಮೇಧದ ವೀಡಿಯೋಗಳನ್ನು ಸ್ವಲ್ಪವೂ ವಿಚಲಿತನಾಗದೇ ತೋರಿಸುವುದನ್ನು ಕಾಣಿಸಲು ಸಾಧ್ಯವಾಗುವುದು. ಹೀಗೆ ಇಡೀ ಸಿನಿಮಾ ಒಂದು ಅವರ್ಣನೀಯ ಸುರ್ರಿಯಲಿಸಂತನದಿಂದ, ಒಂದು ಖಟು ವಾಸ್ತವದೆಡೆಗೆ ನಮ್ಮನ್ನು ತೆರೆಯುತ್ತದೆ. ಈ ಕಾರಣದಿಂದ ಕಲ್ಲಿನಂತಿದ್ದ, ಹೆಮ್ಮೆಯ ಶಿಖರದಂತಿದ್ದ ಒಂದು ಅತಿಹಿಂಸೆ ಮತ್ತು ದ್ವೇಷವನ್ನು ತನ್ನೆದೆಯಲ್ಲಿ ಹುದುಗಿಕೊಂಡಿದ್ದ ಕಾಂಗೋನ ಹೃದಯ ಸಿನಿಮಾದ ಕೊನೆಯಲ್ಲಿ ಬಹುಭಾರವಾಗುತ್ತದೆ. ಆ ರೀತಿಯ ಕರಗದ ಗುಳ್ಳೆ ಕೊನೆಗೆ ಒಡೆಯುತ್ತದೆ, ವೀಕ್ಷಕ ವಿಚಲಿತನಾಗುತ್ತಾನೆ. ನಿರ್ದೇಶಕ ಹೊಸತೊಂದನ್ನು ಸಾಧಿಸುತ್ತಾನೆ. ಅತ್ತ ಡಾಕ್ಯುಮೆಂಟರಿಯೋ ಇತ್ತ ಫೀಛರ್ ಫಿಕ್ಶನ್ ಎಂಬ ಭ್ರಮೆಯ ನಡುವೆ ಸಾಗಿ ಡಾಕ್ಯುಡ್ರಾಮಾವಾದ ‘ಆ್ಯಕ್ಟ್ ಆಫ್ ಕಿಲ್ಲಿಂಗ್’ ಈ ನೆಲೆಯಲ್ಲಿ ಬಹುಶ: ಮನುಷ್ಯ ನೋಡಬೇಕಾದ ಮತ್ತು ಮನುಷ್ಯನ ಬಗೆಗಿನ ಒಂದು ಪ್ರಮುಖ ಮಾನವೀಯ ದಾಖಲೆಯಾಗಿ ಬಿಡುತ್ತದೆ.
***
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ