ಸಿನಿ ಪಾಲಿಟಿಕ್ಸ್: ಫಿಲ್ಮ್ ಸ್ಟಾರ್ಸ್ ಆಂಡ್ ಪೊಲಿಟಿಕಲ್ ಎಕ್ಸಿಟ್ಸನ್ಸ್ ಇನ್ ಸೌತ್ ಇಂಡಿಯಾ
ಪ್ರೊಫೆಸರ್ ಮಾಧವ ಪ್ರಸಾದ್, ಸಮಕಾಲೀನ ಸಂದರ್ಭದ ಸಿನಿಮಾ ಮತ್ತು ಕಲ್ಚರಲ್ ಸ್ಟಡೀಸ್‍ನ ಪ್ರಮುಖ
ವಿದ್ವಾಂಸ. ಭಾರತೀಯ ಸಿನಿಮಾ ಅಧ್ಯಯನದಲ್ಲಿ ಹಲವಾರು ಕಾಣ್ಕೆಗಳಿಂದ, ಹಲವಾರು ಮಾದರಿಗಳಿಂದ ಮನೆ ಮಾತಾದವರು.
ಮಾಧವ ಪ್ರಸಾದರ, ‘ಐಡಿಯಾಲಜಿ ಆಫ್ ಹಿಂದಿ ಸಿನಿಮಾ’. ಎ ಹಿಸ್ಟೋರಿಕಲ್ ಕನ್‍ಸ್ಟ್ರಕ್ಷನ್’ ಬಹುಶ: ಅಂತಹ ಒಂದು ಮಾದರಿ ಅಧ್ಯಯನ ಮತ್ತು ಕೃತಿ. ಭಾರತೀಯ ಸಿನಿಮಾ ಬರಹದ ಚರಿತ್ರೆಯಲ್ಲಿ
ಅತ್ಯಂತ ಸಂಕೀರ್ಣವಾದ, ಕಲ್ಚರಲ್ ಸ್ಟಡೀಸ್‍ನ ಪರಿಕಲ್ಪನೆಗಳನ್ನು ದುಡಿಸಿಕೊಂಡು, ಬಳಸಿ ಬರೆದು ಹಿಂದಿ
ಸಿನಿಮಾದ ಚರಿತ್ರೆಯ ಪ್ರಮುಖ ಪ್ರಶ್ನೆ ಮತ್ತು ಕಾಳಜಿಗಳನ್ನು ಎತ್ತಿದ ಕೃತಿಯಾಗಿ ಇದು ಮಹತ್ವದ್ದೆನಿಸುತ್ತದೆ.
ಈ ನೆಲೆಯಲ್ಲಿ ವಿದ್ವಾಂಸ ರವಿ ವಾಸುದೇವನ್ ಇದನ್ನು
ಭಾರತೀಯ ಸಿನಿಮಾ ಅಧ್ಯಯನದ ಸಂದರ್ಭ ಮಾದರಿ ಸ್ಥಿತ್ಯಂತರವನ್ನು ತಂದಂತಹ ಕೃತಿ ಎಂದೇ ಗುರುತಿಸುತ್ತಾರೆ.
ಇದರ ನಂತರದ ಅವರ ಬಹುಮುಖ್ಯ ಕೃತಿ,’ಸಿನಿ ಪಾಲಿಟಿಕ್ಸ್: ಫಿಲ್ಮ್ ಸ್ಟಾರ್ಸ್ ಆಂಡ್ ಪೊಲಿಟಿಕಲ್
ಎಕ್ಸಿಟ್ಸನ್ಸ್ ಇನ್ ಸೌತ್ ಇಂಡಿಯಾ’, ಮಾಧವ ಪ್ರಸಾದರ ಮತ್ತು ಭಾರತೀಯ ಸಿನಿಮಾದ ಬರವಣಿಗೆಯ ಪ್ರಮುಖ ಕೃತಿ.
ಈ ಕೃತಿ ದಕ್ಷಿಣ ಭಾರತದಲ್ಲಿ, ಸಿನಿಮಾ ರಾಜಕಾರಣ ಮತ್ತು ಉದ್ಯಮ ರೂಪುಗೊಂಡ ಬಗೆ ಮತ್ತೆ ಸಮಾನಾಂತರವಾಗಿ
ಅದು ಅನುಭವಿಸಿದ, ಕಂಡುಕೊಂಡ ರಾಜಕಾರಣದ ಅನುಭವ ಮತ್ತು ಆಯಾಮದ ಕುರಿತು ಮಾತನಾಡುತ್ತದೆ. ವಿಶೇಷವಾಗಿ
ಸಿನಿಮಾ ರೂಪಿಸುವ ರಾಜಕಾರಣದ ಅನುಭವವಾಗಿ ತಮಿಳುನಾಡು, ಆಂಧ್ರಪ್ರದೇಶ ಮತ್ತು ಕರ್ನಾಟಕದ ಭೂಭಾಗವನ್ನು
ವಿವಕ್ಷೆಗೆ ತೆಗೆದುಕೊಳ್ಳುತ್ತದೆ. ಅಧ್ಯಯನದ ಆರಂಭದಲ್ಲಿಯೇ ಮಾಧವ ಪ್ರಸಾದ್, ದಕ್ಷಿಣ ಭಾರತವನ್ನು
ಒಂದು ಕೌತುಕದ ಅಥವಾ ವಂಡರ್‍ಲ್ಯಾಂಡ್ ಆಗಿ ಗುರುತಿಸದೇ ತರ್ಕ ಮತ್ತು ವೈಚಾರಿಕತೆಯ ಆಧಾರದ ಮೇಲೆ ಒಂದು
ವಿಭಿನ್ನ ಆಯಾಮದ, ವೈವಿಧ್ಯದ ಅಧ್ಯಯನಗಳು ನಡೆಯಬೇಕು? ಎನ್ನುವ ರೀತಿಯ ಭೂಗೋಳ ಎನ್ನುವ ಇಂಗಿತವನ್ನು
ವ್ಯಕ್ತಪಡಿಸುತ್ತಾರೆ (ರಿಚರ್ಡ್ ಡೈಯರ್: ಹೆವೆನ್ಲೀ
ಬಾಡೀಸ್: ಫಿಲ್ಮ್ ಸ್ಟಾರ್ಸ್ ಅಂಡ್ ಸೊಸೈಟಿ,1986.) ಈ ರೀತಿ ಸಿನಿಮಾ ರೂಪಿಸುವ ಪ್ರತಿಮಾ
ರಾಜಕಾರಣ, ಸಿನಿಮಾಗಳು ರೂಪಿಸುವ, ಸಿನಿಮಾದ ಪಾತ್ರಗಳು ಪ್ರಭಾವಿಸಿ ನಿರ್ಮಿಸುವ ಪ್ರತಿಮೆಗಳ ವಿನ್ಯಾಸವು
ಜಗತ್ತಿನ ಇತರೆ ಭಾಗಗಳಲ್ಲಿರುವ ಹಾಗೆ ರೂಪುಗೊಂಡಿದೆಯೆಂಬುದನ್ನು ಇಲ್ಲಿ ಅನುಮೋದಿಸುತ್ತಾರಾದರೂ ಕೂಡಾ,
ದಕ್ಷಿಣ ಭಾರತದ ಸಂದರ್ಭ, ರೂಪುಗೊಂಡ ಈ ವಿನ್ಯಾಸ ಇಲ್ಲಿಯ ಕಾಲ-ದೇಶ, ಭೂಗೋಳದ ಪ್ರತಿಫಲನವೆಂಬುದು ಮಾಧವ
ಪ್ರಸಾದರ ಅನುಮೋದನೆ. ಈ ನೆಲೆಯಲ್ಲಿ ಮಾಧವ ಪ್ರಸಾದ ಅವರು ವಿದ್ವಾಂಸ ಎಂ.ಎಸ್.ಎಸ್. ಪಾಂಡ್ಯನ್‍ರ
(ಎಂ.ಎಸ್. ಪಾಂಡ್ಯನ್:ಇಮೇಜ್ ಟ್ರಾಪ್,1992) ಅನೇಕ ತರ್ಕ, ಊಹೆಗಳನ್ನು ಪುರಸ್ಕರಿಸುತ್ತಾ ದಕ್ಷಿಣಭಾರತದ
ಸಿನಿ ರಾಜಕಾರಣದ ಅನನ್ಯತೆಯನ್ನು ಒಪ್ಪುತ್ತಾ ಒಂದು ಹೊಸದಾದ ಸಮಾಜಶಾಸ್ತ್ರೀಯ ಅಧ್ಯಯನ ನಡೆಯುವ ಅಗತ್ಯ,
ಇರಾದೆಯನ್ನು ವ್ಯಕ್ತಪಡಿಸುತ್ತಾರೆ.
ಸಿನಿ ಪಾಲಿಟಿಕ್ಸ್‍ನ ಅಧ್ಯಯನಗಳು ಬಹುತೇಕ ಸಾಮಾಜಿಕ ಹಾಗೂ ರಾಜಕೀಯ ಆಯಾಮದಿಂದ ನಡೆದಿರುವಂತವುಗಳು.
ಕೃತಿಯು ಆರು ಅಧ್ಯಾಯಗಳನ್ನು ಮತ್ತು ಒಂದು ಅನುಬಂಧವನ್ನೂ ಹೊಂದಿದೆ. ಮೊದಲ ಅಧ್ಯಾಯ, ‘ಸಿನಿ ಪಾಲಿಟಿಕ್ಸ್;
ಆನ್ ದಿ ಪೊಲಿಟಿಕಲ್ ಸಿಗ್ನಿಫಿಕೆನ್ಸ್ ಆಫ್ ಸಿನಿಮಾ ಇನ್ ಸೌತ್ ಇಂಡಿಯಾ’ವು ಹೆಸರೇ ಸೂಚಿಸುವ ಹಾಗೆ ದಕ್ಷಿಣ ಭಾರತದ ಸಿನಿ ರಾಜಕೀಯದ ಸಂದರ್ಭದಲ್ಲಿ ದಕ್ಷಿಣ ಭಾರತದ ಸಿನಿಮಾಗಳ
ಮಹತ್ವವನ್ನು ಚರ್ಚಿಸುತ್ತದೆ. ಎರಡನೆಯ ಅಧ್ಯಾಯ, ‘ಎಂ.ಜಿ.ಆರ್ ಆಂಡ್ ದಿ ರೂಟ್ಸ್ ಆಫ್ ಸಿನಿ ಪಾಲಿಟಿಕ್ಸ್’ ತಮಿಳುನಾಡಿನಲ್ಲಿ ಎಂ.ಜಿ.ಆರ್ ಮತ್ತು ಸಿನಿಮಾ ರಾಜಕಾರಣ ರೂಪುಗೊಂಡ ಬಗೆಯನ್ನು ವಿಶದವಾಗಿ
ಚರ್ಚಿಸುತ್ತದೆ. ಎಂ.ಜಿ. ರಾಮಚಂದ್ರನ್ ಸಕ್ರಿಯ ರಾಜಕಾರಣವನ್ನು ಪ್ರವೇಶಿಸುವ ಮೊದಲೇ ಸಿನಿಮಾದ ಪ್ರತಿಮೆ,
ಪ್ರಭಾವಗಳ ಮೂಲಕ ‘ಸ್ಟಾರ್‍ಡಮ್’ ಅನ್ನು ಗಿಟ್ಟಿಸಿಕೊಂಡಿದ್ದರು. ಈ ಸ್ಟಾರ್‍ಡಂ ಎನ್ನುವ ಪ್ರಭಾವಳಿಯೇ
ಒಂದು ಪ್ಯಾಸಿವ್ ಆದ ರಾಜಕಾರಣದ ಪರಿಪ್ರೇಕ್ಷವನ್ನು ಎಂ.ಜಿ.ಆರ್‍ಗೆ ರೂಪಿಸಿಕೊಟ್ಟಿತ್ತು ಎಂದು ಮಾಧವಪ್ರಸಾದ್
ವಾದಿಸುತ್ತಾರೆ. ದಕ್ಷಿಣ ಭಾರತದಲ್ಲೇ ತಮಿಳು ಮಾದರಿಯನ್ನು ಅವರು ವಿಭಿನ್ನವಾಗಿ ಗುರುತಿಸುತ್ತಾರೆ.
ರಷ್ಯಾದಲ್ಲಿ ಸ್ಟಾಲಿನ್ ಮಾಡಿದ ರೀತಿಯಲ್ಲೇ ಎಂ.ಜಿ.ಆರ್ ನಡೆಸಿದ ಸಕ್ರಿಯ ರಾಜಕಾರಣವು ಜಸ್ಟೀಸ್ ಪಾರ್ಟಿ,
ನಂತರ ಬಂದ ಡಿ.ಎಂ.ಕೆ ಪಕ್ಷ ಸಿನಿಮಾವನ್ನು ರಾಜಕೀಯ ಸಂದೇಶ ನೀಡುವ ಮಾಧ್ಯಮವಾಗಿ ಬಳಸಿದಾಗ ಜನರನ್ನು
ರಾಜಕೀಯ ತರಬೇತಿ ಮತ್ತು ಸಾಮಾಜಿಕ ಪರಿವರ್ತನೆ ಮೂಡಿಸುವ ನೆಲೆಯಲ್ಲಿ ಕೂಡಾ ಅದು ಕಾರ್ಯ ನಿರ್ವಹಿಸಿರುವುದನ್ನು
ಗುರುತಿಸುತ್ತಾ ಅದನ್ನು ಒಂದು ಅನನ್ಯ ಅನುಭವವಾಗಿ ಅವರು ಕಾಣುತ್ತಾರೆ.
ಮಾಧವ ಪ್ರಸಾದ, ಮೂರನೆ ಅಧ್ಯಾಯವಾದ, ‘ಎನ್.ಟಿ.ಆರ್;ದಿ ಆಕ್ಸಿಡೆಂಟಲ್ ಪೊಲಿಟಿಶಿಯನ್’ ಅಲ್ಲಿ, ರಾಷ್ಟ್ರೀಯತೆ ಗುರುತು ಮತ್ತು ತೆಲುಗು
ಭಾಷಿಕ ಪ್ರದೇಶ ಮತ್ತು ಅನುಭವ ಅತ್ಯಂತ ಪ್ರಭಾವೀಯಾಗಿ, ‘ಎನ್.ಟಿ.ಆರ್’, ತೆಲುಗು ಭಾಷೆಯ ರೆಟರಿಕ್, ವಿಶೇಷವಾಗಿ ತೆಲುಗು ಭಾಷೆಯ ಉಳಿವು, ರಕ್ಷಣೆ ಮತ್ತು ತೆಲುಗು
ಭಾಷೆಯ ರಾಷ್ಟ್ರೀಯತೆಯನ್ನು ದಕ್ಷವಾಗಿ ಬಳಸಿದ ಕಾರಣದಿಂದ ರೂಪುಗೊಂಡರು ಎನ್ನುವುದು ಪ್ರಸಾದರ ಅಭಿಮತ.
ಈ ನೆಲೆಯಲ್ಲಿ ಪ್ರಸಾದ್, ರಾಜಕುಮಾರ್ ಮತ್ತು ಎನ್.ಟಿ. ರಾಮರಾವ್ ಪ್ರತಿನಿಧಿಸಿದ ಕಾಳಜಿಗಳು, ಸಮಕಾಲೀನ
ಬೇಡಿಕೆಗಳು ಸರಿಸುಮಾರಾಗಿ ಸಾದೃಶ್ಯವಾಗಿದ್ದುವು ಎಂದು ಅಭಿಪ್ರಾಯಿಸುತ್ತಾರೆ.
ಕೃತಿಯ ನಾಲ್ಕನೆಯ ಅಧ್ಯಾಯ, ‘ರಾಜ್‍ಕುಮಾರ್, ದಿ ಅನ್‍ಕ್ರೌನ್‍ಡ್ ಕಿಂಗ್’ ರಾಜಕುಮಾರ್ ಎನ್ನುವ ವಿದ್ಯಮಾನವು ರೂಪುಗೊಂಡ ಚಾರಿತ್ರಿಕ ಪರಿಪ್ರೇಕ್ಷವನ್ನು ಕುರಿತು ಕೆಲವು
ಪ್ರಶ್ನೆ, ವಾದ ಮತ್ತು ಅನುಮಾನಗಳನ್ನೂ ತಾರ್ಕಿಕವಾಗಿ ಎತ್ತುತ್ತದೆ. ರಾಜ್‍ಕುಮಾರ್ ಸಕ್ರಿಯ ರಾಜಕಾರಣವನ್ನು
ಪ್ರವೇಶ ಮಾಡದಿರುವ ಸಂದರ್ಭವನ್ನು ಇವರು ಎನ್.ಟಿ.ಆರ್ ಗಿಂತ, ಆತನ ಸಿನಿಮಾ ರಾಜಕಾರಣ ಮತ್ತು ಪ್ರತಿಮಾ
ವಿನ್ಯಾಸಗಳಿಗಿಂತ ವಿಭಿನ್ನ ಮತ್ತು ಅನನ್ಯವೆನ್ನುತ್ತಾ ಕೆಲವು ತರ್ಕಗಳನ್ನು ಮಂಡಿಸುತ್ತಾರೆ. ಬಹುಶ:
ರಾಜ್‍ಕುಮಾರ್ ಎನ್ನುವ ಸಮಾಜೋ-ಸಾಂಸ್ಕøತಿಕ ಮತ್ತು ಚಾರಿತ್ರಿಕ ವಿದ್ಯಮಾನವನ್ನು ಮೊತ್ತಮೊದಲು ಕಾರ್ಯಕಾರಣತೆಯೊಂದಿಗೆ
ಚರ್ಚಿಸಿ, ವಿಶ್ಲೇಷಿಸಿದ್ದು ಮಾಧವಪ್ರಸಾದ್. ರಾಜ್‍ಕುಮಾರ್ ಬಗ್ಗೆ ಇರುವ ಸುಮಾರು ಮೂವತ್ತೆರಡು ಪುಟಗಳಲ್ಲಿ
ರಾಜ್‍ಕುಮಾರ್ ಬಗೆಗೆ ಹಲವು ವಾದಗಳನ್ನು ಮಾಧವ ಪ್ರಸಾದ್ ಚರ್ಚಿಸುತ್ತಾರೆ. ಅವುಗಳಲ್ಲಿ ಅತ್ಯಂತ ಪ್ರಮುಖವಾದ
ಸಂಗತಿಯೆಂದರೆ,’ ಗೋಕಾಕ್ ಚಳುವಳಿ ರೂಪಿಸಿದ ಮತ್ತು ಗೋಕಾಕ್ ಚಳುವಳಿಯನ್ನು ರೂಪಿಸಿದ ರಾಜ್‍ಕುಮಾರ್
ಬಗೆಗಿರುವ ದೈನ್ಯವನ್ನು, ಕರುಣೆ ಅಥವಾ ಜನರು ವ್ಯಕ್ತಪಡಿಸುವ ಕರುಣೆಯ ಬಗೆಗಿನದು. ಅದೇನೆಂದರೆ, ಗೋಕಾಕ್
ಚಳುವಳಿಯ ನಂತರ ರಾಜ್‍ಕುಮಾರ್‍ಗೆ ಸಕ್ರಿಯ ರಾಜಕಾರಣವನ್ನು ಪ್ರವೇಶಿಸುವ ಎಲ್ಲಾ ಸಾಧ್ಯತೆಗಳಿತ್ತು.
ಆದರೆ ರಾಜ್‍ಕುಮಾರ್ ಅದನ್ನು ತಳ್ಳಿ ಹಾಕಿದರು ಎನ್ನುವುದನ್ನು ಮಾಧವಪ್ರಸಾದ್ ಇಂತಹ ಅಭಿಪ್ರಾಯಕ್ಕೆ ಪ್ರತಿರೋಧದ (ಕೌಂಟರ್) ನೆಲೆಯಲ್ಲಿ
ಕೆಲವು ಅದ್ಭುತವಾದ ವಿಚಾರಗಳನ್ನು ಚರ್ಚಿಸುತ್ತಾರೆ. ಮಾಧವಪ್ರಸಾದ್ ಪ್ರಕಾರ (ಸಿನಿಪಾಲಿಟಿಕ್ಸ್: ಪುಟ:99,2014)
ರಾಜ್‍ಕುಮಾರ್, ಸಕ್ರಿಯ ರಾಜಕಾರಣವನ್ನು ಪ್ರವೇಶಿಸದೆಯೇ ರಾಜಕಾರಣಿಯಾಗಿದ್ದರು, ರಾಜಕಾರಣದ ಪ್ರಭಾವಳಿ,
ಪ್ರತಿಮೆ, ವರ್ಚಸ್ಸನ್ನೂ ಹೊಂದಿದ್ದರು. ಇಂತಹ ರಾಜ್‍ಕುಮಾರ್ ಎಂಬ ವರ್ಚಸ್ಸೇ ಸಕ್ರಿಯ ರಾಜಕಾರಣದಲ್ಲಿ
ಭಾಗವಹಿಸಿ, ಭಾಗವಹಿಸುವ ರಾಜಕಾರಣಿ ಮತ್ತು ರಾಜಕಾರಣಕ್ಕಿಂತ ಮಿಗಿಲು ಎಂದು ಪ್ರಬಲವಾಗಿ ತರ್ಕಿಸಿ ಮಂಡಿಸುತ್ತಾರೆ. ಪ್ರಸಾದ್ ಪ್ರಕಾರ, ರಾಜ್‍ಕುಮಾರ್ ಎನ್ನುವ ಗುರುತೇ ಅಥವಾ
ಐಡೆಂಟಿಟಿಯೇ ಅತ್ಯಂತ ಪ್ರಮುಖವಾದ ರಾಜಕೀಯ ಮಾಧ್ಯಮವೆಂಬುದಾಗಿ, ವಿನ್ಯಾಸ ಎಂಬುದಾಗಿ ಗಮನಿಸುತ್ತಾರೆ.
ರಾಜ್‍ಕುಮಾರ್ ಎಂಬ ನಾಯಕನಟನ ದೈಹಿಕ, ಪ್ರತಿಮೀಯ ಸ್ಥಿತಿ ಮತ್ತು ಅನುಭವದ ದಕ್ಷತೆಯನ್ನು ಸ್ವತ: ನಿಯಂತ್ರಿಸಿದ,
ಕಾಪಿಟ್ಟುಕೊಂಡ ಬಗೆಯನ್ನೂ ಇದರ ಒಂದು ಭಾಗವೆಂದೇ ಅವರು ಬಗೆಯುತ್ತಾರೆ. ಇದಕ್ಕೆ ಉದಾಹರಣೆಯಾಗಿ ಬರಿಯ
ಪೌರಾಣಿಕ, ರಾಜರ ಪಾತ್ರಗಳನ್ನು ಮಾಡುತ್ತಿದ್ದ ರಾಜ್‍ಕುಮಾರ್ ‘ರಾಯರ ಸೊಸೆ’ ಎಂಬ ಮೊದಲ ಸಾಮಾಜಿಕ ಚಿತ್ರದಲ್ಲಿ ಹಳೆಯ ಭಾಗವತರ ಜುಟ್ಟು ಬಿಟ್ಟಿದ್ದ ರಾಜ್‍ಕುಮಾರ್ ಅದನ್ನು
ಕ್ರಾಪು ಮಾಡಲು ಕತ್ತರಿಸಬೇಕಾಗಿ ಬಂದಾಗ ಪ್ರತಿರೋಧಿಸುವ ಕ್ರಮವೇ ರಾಜ್‍ಕುಮಾರ್ ಮತ್ತು ಆತನಿಗೆ ರಾಜ,
ಪುರಾಣದ ಪಾತ್ರಗಳು ಕಟ್ಟಿಕೊಟ್ಟ ಪ್ರತಿಮೆ ಮತ್ತು ಅದು ನಿರೂಪಿಸಿ ಕೊಟ್ಟಿರುವ ರಾಜಕಾರಣದ ಭಾಗವಾಗಿ,
ಪ್ರತಿಮೆಯ ಸ್ಥಿರೀಕರಣದ ಕ್ರಮವಾಗಿ ಹಾಗೂ ಅದರ ಹಿಂದಿನ ರಾಜಕೀಯ ವಿನ್ಯಾಸವಾಗಿಯೇ ಪ್ರಸಾದ್ ಗುರುತಿಸುತ್ತಾರೆ.
ಐದನೆಯ ಅಧ್ಯಾಯ, ‘ದಿ ಸಿನಿ-ಪೊಲಿಟಿಕಲ್ ಇವೆಂಟ್: ಸ್ಟ್ರಕ್ಚರ್ ಅಂಡ್ ಕಾಸ್’ದಲ್ಲಿ, ಪ್ರಸಾದ್, ಸಿನಿರಾಜಕಾರಣದ ಕಾರಣವನ್ನೂ ಮತ್ತು ಸಂರಚನೆಯನ್ನೂ ಗುರುತಿಸುತ್ತಾರೆ. ಇಂತಹ
ಕಾರಣಗಳನ್ನು ವೈವಿಧ್ಯ, ಸಾಪೇಕ್ಷ ಮತ್ತು ಚಾರಿತ್ರಿಕವಾಗಿ ವಿಕಾಸವಾಗಿರುವ ಕ್ರಮವಾಗಿ ನೋಡುತ್ತಾರೆ.
ಆರನೆಯ ಅಧ್ಯಾಯವಾದ, ‘ಫ್ಯಾನ್ ಭಕ್ತಿ ಆಂಡ್ ಸಬಾಲ್ಟರ್ನ್ ಸಾವರ್ನಿಟಿ: ಎಂತೂಸಿಯಾಸಂ ಇನ್ ಇಂಡಿಯನ್
ಪೊಲಿಟಿಕಲ್ ಲೈಫ್’. ಅಧ್ಯಾಯವು ದಕ್ಷಿಣ ಭಾರತ, ಅದರಲ್ಲೂ ತಮಿಳುನಾಡಿನ ಪ್ರೇಕ್ಷಕರು
ಸಿನಿಮಾಗಳಿಗೆ ವ್ಯಕ್ತಪಡಿಸುವ ಪ್ರತಿಕ್ರಿಯೆಯನ್ನು, ಅದರ ಸ್ವರೂಪವನ್ನು ಮಂಡಿಸುತ್ತಾರೆ. ಸಿನಿಮಾವನ್ನು
ನೋಡುವ ಸಮುದಾಯ, ಮಾಸ್, ಅದು ಸಬಾಲ್ಟರ್ನ್ ಅಥವಾ ಕೆಳಸ್ತರದ ಜನರನ್ನು ಒಳಗೊಂಡಂತೆ, ಸಿನಿಮಾದ ಕುರಿತು
ತಾಳುವ ಕುತೂಹಲ ಮತ್ತು ಅಂತಹ ಕುತೂಹಲ ರಾಜಕೀಯ ಜೀವನದ ಮೇಲೆ ತಾಳುವ ಶಕ್ತಿಯನ್ನೂ ಕೂಡಾ ಅತ್ಯಂತ ಆಸಕ್ತಿಯಿಂದ
ವಿವೇಚಿಸಿದ್ದಾರೆ. ಕೃತಿಯ ಅನುಭಂದ, ‘ಜಯಲಲಿತಾ- ಜೆಂಡರ್ ಅಂಡ್ ಸಿನಿ-ಪೊಲಿಟಿಕ್ಸ್’, ವಿಶದವಾಗಿ ಜಯಲಲಿತಾ ಹೇಗೆ ರೂಪುಗೊಂಡರು ಲಿಂಗೀಯ ರಾಜಕಾರಣದ ನೆಲೆಯಲ್ಲಿ ಎನ್ನುವ ಜಿಜ್ಞಾಸೆಯನ್ನು
ವಿವೇಚಿಸುತ್ತದೆ.
ಒಟ್ಟಾರೆ ಸಿನಿ ಪಾಲಿಟಿಕ್ಸ್ ಕೃತಿಯು ಸಿನಿಮಾದ, ಅದರಲ್ಲೂ ದಕ್ಷಿಣ ಭಾರತದ ಸಿನಿಮಾದ ಚರಿತ್ರೆ
ಮತ್ತು ರಾಜಕಾರಣವನ್ನು ತುಂಬಾ ಸಮರ್ಥವಾಗಿ ನಮ್ಮ ಮುಂದೆ ತೆರೆಯುತ್ತದೆ. ದಕ್ಷಿಣ ಭಾರತದ ಸಿನಿಮಾ ಚರಿತ್ರೆ
ಮತ್ತು ರಾಜಕಾರಣದ ಏಕತಾನತೆಯನ್ನೂ ಮುರಿಯುತ್ತದೆ. ಈ ಕೃತಿ ಕಲ್ಚರಲ್ ಸ್ಟಡೀಸ್‍ನ ಭಾರದಿಂದ ಬಳಲುವುದಿಲ್ಲ,
ಬಳುಕುವುದೂ ಇಲ್ಲ. ಸಿನಿಮಾ ಮತ್ತು ಸಿನಿಮಾ ಚರಿತ್ರೆಯನ್ನು ಅಧ್ಯಯನ ಮಾಡಬೇಕಾದ ಸಂದರ್ಭದ ಕೆಲವು ವಿಚಾರಗಳನ್ನೂ,
ವೈಚಾರಿಕತೆಯನ್ನೂ ಇದು ಚರ್ಚಿಸುತ್ತದೆ. ಕನ್ನಡದ ಸಂದರ್ಭದಲ್ಲಿ ಲೇಖಕರು ರಾಜ್‍ಕುಮಾರ್ ಬಗೆಗೆ ಇನ್ನೂ
ಕೆಲವು ಪುಟಗಳನ್ನು ವಿಸ್ತರಿಸಬಹುದಾಗಿತ್ತೆನ್ನುವುದಷ್ಟೇ ನನ್ನ ತಕರಾರು.
***
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ