ವಿಭಜನೆ, ನೆಹರೂ ಯುಗ ಮತ್ತು ಕೋಮುವಾದ
ವಿಭಜನೆ, ನೆಹರೂ ಯುಗ ಮತ್ತು ಕೋಮುವಾದ
ಕೋಮುವಾದ ಮತ್ತು ಕೋಮುವಾದೀ ಪಕ್ಷಗಳು
ಪ್ರಸ್ತುತ ಸಮಾಜೋ-ರಾಜಕೀಯ ಸಂದರ್ಭದ ಪ್ರಮುಖ ಭಾಗಗಳು. ಇಂದು ಕೋಮುವಾದ ನೇರವಾಗಿ ರಾಜಕಾರಣ ಮತ್ತು
ರಾಜಕೀಯ ಫಲಾಪೇಕ್ಷೆಗೆ ಸಂಬಂಧಿಸಿದೆಯಾದರೂ ಕೂಡಾ ಅದನ್ನು ನೇರವಾಗಿ ಮತ್ತು ಬರೀ ರಾಜಕಾರಣದಿಂದ ಉಂಟಾದಂತಹ
ವಿದ್ಯಮಾನವೆಂದು ಹೇಳುವ ಹಾಗಿಲ್ಲ. ಅಷ್ಟು ಸಲೀಸಾದ ಮತ್ತು ಸುಲಭವಾದ ಸಾಮಾನ್ಯೀಕರಣ ಅಥವಾ ತೀರ್ಪು,
ಧರ್ಮದ ಉಗಮದ ಕುರಿತು ಮಾಕ್ರ್ಸ್ ಹೇಳಿದ ವಿವರಣೆಯ ರೀತಿಯಲ್ಲೋ ಒದಗಿ ಕಾಣಿಸುತ್ತದೆ. ಧರ್ಮವನ್ನೇ ತೆಗೆದುಕೊಂಡರೆ
ಒಂದು ಸಮಾಜದ ಭೌತಿಕತೆಯ ರೂಪಕವಾಗಿ ಅದನ್ನು ಕಾಣಬಹುದಾದರೂ ಅದು ಅಷ್ಟು ಮಾತ್ರವಲ್ಲದೇ ನೀತಿಗೆ, ಭಾವಾತೀತತೆಗೆ,
ಅನಿಮಾನುಷೀಯ ನಂಬಿಕೆಯ ಕ್ರಮ ಮತ್ತು ಮೂಲಾಂಶಗಳ ಫಲವಾಗಿಯೂ ಕೂಡಾ ಗೋಚರಿಸುತ್ತದೆ. ಹೀಗೆ ಕೋಮುವಾದವೂ
ಕೂಡಾ ಅತ್ಯಂತ ಸಪಾಟಾದ, ನೇರಗತಿ (ಲೀನಿಯರ್) ಯ ಸರಳ ವಿದ್ಯಮಾನವಲ್ಲ, ಬದಲು ಅತ್ಯಂತ ಸೂಕ್ಷ್ಮವಾಗಿ
ಅದನ್ನು ನಾವು ಗ್ರಹಿಸಬೇಕಾಗುತ್ತದೆ. ಕೋಮುವಾದ ಸಮಕಾಲೀನ ಸಮಾಜದ ದೊಡ್ಡ ಸವಾಲು ಹಾಗೆ ಸಮಸ್ಯೆ ಕೂಡಾ.
ಭಾರತದಲ್ಲಿ ಚಾರಿತ್ರಿಕವಾಗಿ ಕೋಮುವಾದದ
ಬೆಳವಣಿಗೆಯನ್ನು ಗಮನಿಸಿರುವ ಅಸ್ಕರ್ ಆಲೀ ಇಂಜಿನಿಯರ್, ಬಿಪನ್ ಚಂದ್ರ ಪ್ರಕಾರ ಸರಿಸುಮಾರು 1920ರ
ಹೊತ್ತಿಗೇನೇ ಕೋಮುವಾದ ಆರಂಭವಾಯಿತು. ಕೆಲವು ಚಿಂತಕರು
ಇದನ್ನು ವಿರೋಧಿಸಿ 1890ರ ದಶಕದ ಸಮಜೋ-ಧಾರ್ಮಿಕ ಚಳುವಳಿಗಳು ಮತ್ತು 1900-1910ರ ಸುಮಾರಿಗೆ ತಿಲಕರು
ಸ್ವತಂತ್ರ ಚಳುವಳಿಯ ಸಂಘಟನೆಗೆ ಬಳಸಿದ ಧಾರ್ಮಿಕ ಪ್ರತಿಮೆ (ಇಮೇಜ್)ಗಳೇ ಕೋಮುವಾದದ ಬೀಜರೂಪವಾಗಿದ್ದವೆಂದೂ
ಅಭಿಪ್ರಾಯಿಸುತ್ತಾರೆ. ಜ್ಯೋತಿರ್‍ಮಯ್ ಶರ್ಮರಂತಹ ರಾಜ್ಯಶಾಸ್ತ್ರಜ್ಞರು ಗಾಂಧೀಜಿಯು ಚಳುವಳಿಯಲ್ಲಿ
ಬಳಸಿ, ಸಂವಹಿನಿಸಿದ ಕೆಲವು ಧಾರ್ಮಿಕ ಪರಿಭಾಷೆ ಮತ್ತು ಕಲ್ಪನೆಗಳನ್ನೂ ಕೂಡಾ ಇದಕ್ಕೆ ಕೊಡುಗೆ ನೀಡಿದ
ಅಂಶಗಳೆಂದೂ ಕೂಡಾ ಕಥಿಸುತ್ತಾರೆ. ಇಂತಹ ತಾತ್ವಿಕ ವಿಷಯ ಭೇದಗಳು ಏನೇ ಇದ್ದರೂ ಕೂಡಾ ಕೋಮುವಾದವೆಂಬ ವಾಸ್ತವ ಮತ್ತು ಅನುಭವ ಬಹುವೈವಿಧ್ಯದ
ಭಾರತೀಯ ಸಮಾಜವನ್ನು ನಲುಗಿಸಿದ್ದಂತೂ ಶತ:ಸಿದ್ಧ. ಅದು ಬರೀ 1947ರ ನಂತರ ರಾಷ್ಟ್ರೀಯ ಹೋರಾಟದ ಪ್ರಮುಖ
ಬಳುವಳಿಯಾದ ಮತನಿರಪೇಕ್ಷತೆಯ (ಸೆಕ್ಯುಲರಿಸಂ) ತತ್ವ ಮತ್ತು ಸಹಬಾಳ್ವೆಯನ್ನು ಮಾತ್ರ ಘಾಸಿಗೊಳಿಸಲಿಲ್ಲ,
ಬದಲಿಗೆ ಈಗಷ್ಟೇ ಸ್ವತಂತ್ರಗೊಂಡು ಸಾಮ್ರಾಜ್ಯಶಾಹೀಯ ತೆಕ್ಕೆಯಿಂದ ಬಿಡಿಸಿಕೊಂಡು ಸಾಮಾಜಿಕವಾಗಿ, ರಾಜಕೀಯವಾಗಿ
ಮತ್ತು ಸಾಂಸ್ಕøತಿಕವಾಗಿ ಡಿಸ್‍ಲೊಕೇಟ್ ಆದಂತಹ, ಪಲ್ಲಟಗೊಂಡಂತಹ ಪರಿಣಾಮಗಳಿಂದ ನೆಲೆಯನ್ನು ಕಂಡುಕೊಳ್ಳಬೇಕಿದ್ದಂತಹ
ಸಮಾಜವನ್ನು ಪುನ: ಬರ್ಬರತೆಯೆಡೆಗೂ ಇದು ಸೆಳೆದ ಕಾರಣ. 1920 ದಶಕದಿಂದ ಪ್ರಬಲಗೊಂಡ ಬಲಪಂಥೀಯ ರಾಜಕಾರಣ
ಮತ್ತು ಅದಕ್ಕೆ ಸಮಾನಾಂತರವಾಗಿ ಸಾಗಿದ ಮುಸ್ಲಿಂ ಲೀಗ್ ರಾಜಕಾರಣವು ಸ್ವತಂತ್ರಗಳಿಕೆಯ ಹೊಸ್ತಿಲಿಗೆ
ದ್ವಿರಾಷ್ಟ್ರ ಸಿದ್ಧಾಂತ ಮತ್ತದರ ಅನ್ವಯವಾದ ದೇಶ ವಿಭಜನೆಯನ್ನೂ ಕೂಡಾ ಕಂಡಿತು. ಆಗಸ್ಟ್ 15,
1947 ವೈರುಧ್ಯದ ವಾಸ್ತವದ ದಿನಾಂಕವಾಗಿ ದೇಶ ಭಾರತ ಮತ್ತು ಪಾಕಿಸ್ತಾನವೆಂದು ವಿಭಜಿತಗೊಂಡಿತು. ಈ
ವಿಭಜನೆಯೇ ಮತನಿರಪೇಕ್ಷತೆ ಮತ್ತು ಕೋಮುವಾದೀ ಶಕ್ತಿಗಳ ನಡುವಿನ ಸಮರದ ಹಾಗೆ ಸಾಗಿತು. ವಿಭಜನೆಗೆ ಕಾಂಗ್ರೆಸ್
ಒಪ್ಪಿದ್ದು ಯಾಕೆ? ಬ್ರಿಟಿಷರು ಭಾರತವನ್ನು ಯಾಕೆ ಬಿಟ್ಟು ಹೋದರು? ಎಂಬ ಬಗ್ಗೆ ಯಾರಿಗೂ ಸಹಮತವಿಲ್ಲದಿದ್ದರೂ
ಕೂಡಾ ಸಾಮಾನ್ಯ ನೆಲೆಯಲ್ಲಿ ನಾವು ವಿಭಜನೆ, ಮತ್ತದಕ್ಕೆ ಕಾರಣ ಹಾಗೂ ಕೋಮುವಾದದ ಬೆಳವಣಿಗೆಯನ್ನು ಗಮನಿಸಬಹುದಾಗಿದೆ.
ಬ್ರಿಟೀಷರ ಸಾಮ್ರಾಜ್ಯಶಾಹೀ ಧೋರಣೆಯ ಅಂತಿಮ ಉತ್ತರ ಭಾರತೀಯರಿಗೆ ಸೆಲ್ಫ್ ಗವರ್ನಮೆಂಟ್ (ಸ್ವ-ಸರ್ಕಾರ)
ಅನ್ನು ನೀಡುವುದೇ ಆಗಿತ್ತಾದರೂ ಕೂಡಾ ವಿಭಜನೆ, ಮತ್ತದು ಸೃಷ್ಟಿಸಿದ ಕೋಮುಗಲಭೆ ಹಾಗೂ ಕೋಮುವಾದ ಅನಿಶ್ಚಿತವಾದುದಾಗಿತ್ತು.
ವಿಭಜನೆ ಮತ್ತು ಕೋಮುವಾದದ ಮೇಲೆ
ಅತ್ಯಂತ ಸೃಜನಶೀಲವಾಗಿ ಅಧ್ಯಯನ ಮಾಡಿದ ಗ್ಯಾನೇಂದ್ರ ಪಾಂಡೆ ತಮ್ಮ ‘ರಿಮೆಂಬರಿಂಗ್ ಪಾರ್ಟಿಶನ್’ ಮತ್ತು ಸುಚೇತಾ ಮಹಾಜನ್, ತಮ್ಮ ‘ ಇಂಡಿಪೆಂಡೆನ್ಸ್ ಆ್ಯಂಡ್ ಪಾರ್ಟಿಶನ್ - ದಿ ಇರೋಶನ್ ಆಫ್
ಕಲನಿಯಲ್ ಪವರ್ ಇನ್ ಇಂಡಿಯಾ’ ಕೃತಿಯಲ್ಲಿ ದ್ವಿತೀಯ ವಿಶ್ವ ಯುದ್ಧೋತ್ತರ ಅವಧಿಯಲ್ಲಿ ಅತ್ಯಂತ
ವೈವಿಧ್ಯವಾಗಿ, ಸಮಾನಾಂತರ ಓಟದ ಹಾಗೆ ಬೆಳೆದಿದ್ದ ಮುಸ್ಲಿಂ ಲೀಗ್‍ನ ರಾಜಕಾರಣ ಮತ್ತು ಕೋಮುವಾದ ಹಾಗೂ
ಹಿಂದೂ ಬಲಪಂಥೀಯ ಕೋಮುವಾದಿಗಳನ್ನು ಪ್ರಮುಖ ಗುರಿಯಾಗಿಸುತ್ತಾರೆ. ಅದು ಈ ಸಂದರ್ಭದಲ್ಲಿ ಅತ್ಯಂತ ಬಿರುಸನ್ನು
ಕಂಡು 1947 ಸ್ವಾತಂತ್ರ್ಯ-ವಿಭಜನೆ ಮತ್ತು ಅದರ ನಂತರ ಕೋಮುಗಲಭೆ ಹಾಗೂ ನಂತರ ಮುಂದುವರಿದಂತಹ ಕೋಮುವಾದವನ್ನು
ಸೃಷ್ಟಿಸಿತೆಂದೂ ಕೂಡಾ ಅಭಿಪ್ರಾಯಿಸುತ್ತಾರೆ. ಸುಚೇತಾ ಮಹಾಜನ್ ಇನ್ನೂ ಮುಂದುವರಿದು, ಬ್ರಿಟೀಷ್ ರಾಜ್
ಮತ್ತು ರಾಷ್ಟ್ರೀಯ ಹೋರಾಟದ ನಡುವಿನ ವೈರುಧ್ಯಗಳ ಫಲ ಕೂಡಾ ವಿಭಜನೆ ಮತ್ತು ಅದರ ಸುತ್ತಲಿನ ಕೋಮುವಾದದ
ಬೀಜವೆಂದೂ ಕೂಡಾ ಹೇಳುತ್ತಾರೆ. ಆ ಹೊತ್ತಿಗೆ ರಾಷ್ಟ್ರೀಯ ಹೋರಾಟದ ಒಡಲಿನಲ್ಲಿಯೇ ಕಾಂಗ್ರೆಸ್ ಸೆಕ್ಯುಲರಿಸಂ
ಅನ್ನು ಪ್ರಚುರಪಡಿಸುತ್ತಿದ್ದರೆ, ಇನ್ನೊಂದು ಕಾಂಗ್ರೆಸ್‍ಗೆ ಕೆಲವೊಮ್ಮೆ ಸ್ವಲ್ಪ ಹತ್ತಿರ ಬರುತ್ತಿದ್ದ ಹಿಂದೂ ಬಲಪಂಥ, ವಿಶೇಷವಾಗಿ
ಹಿಂದೂ ಮಹಾ ಸಭಾ ಮತ್ತು ಉಳಿದ ಗುಂಪುಗಳು ಅತ್ಯಂತ ಭಾವನಾತ್ಮಕವಾಗಿ ಮತ್ತು ಉಗ್ರವಾಗಿ ತಮ್ಮ ಹೊಸಭಾರತ(ನ್ಯೂ
ಇಂಡಿಯಾ)ವನ್ನು ವ್ಯಾಖ್ಯಾನಿಸುತ್ತಾ, ಅದರ ಅನ್ವಯದ
ಕಾರ್ಯವನ್ನು ಗೈದಿದ್ದೂ ಕೂಡಾ ವಿಭಜನೆಯ ಸಂದರ್ಭದಲ್ಲಿ ಕೋಮುವಾದವು ಹೆಡೆಬಿಚ್ಚಿ ಗರ್ಜಿಸಲು ಕಾರಣವಾಗಿದ್ದೆಂದೂ
ಕೂಡಾ ಸುಚೇತಾ ಅಭಿಪ್ರಾಯಿಸುತ್ತಾರೆ. ಗ್ಯಾನೇಂದ್ರ ಪಾಂಡೆ ಈ ವಿಭಜನೆ ಮತ್ತು ಕೋಮುವಾದವೆನ್ನುವ ಶಬ್ದಗಳನ್ನೇ
ಪ್ರದೇಶ ವಿಶಿಷ್ಠವಾಗಿ ವ್ಯಾಖ್ಯಾನಿಸುತ್ತಾ ಅತ್ಯಂತ ಸಂಕೀರ್ಣವಾಗಿ ಇದನ್ನು, ಇದರ ಚರ್ಚೆಯನ್ನು ನಿರ್ವಹಿಸಿದುದೂ
ಕೂಡಾ ಬಹಳ ಮುಖ್ಯ. ಅವರ ಪ್ರಕಾರ 1940ರ ನಂತರದಲ್ಲಿ
ಸ್ವನೇಮಕಾತಿಗೊಂಡ, (ಸೆಲ್ಫ್ ಅಪಾಯಿಂಟೆಡ್) ಸ್ವಘೋಷಣೆಗೆ ಒಳಗಾದಂತಹ ‘ತಥಾಕಥಿತ ‘ಹಿಂದೂ’ ‘ಮುಸ್ಲಿಂ’ ಮತ್ತು ‘ಸಿಖ್ಖ್’ ಗುರುತುಗಳ ಬೆಳವಣಿಗೆ, ಅಂತಹ ಗುರುತುಗಳ ನಡುವೆ ನಡೆದ ಪೈಪೋಟಿ,
ಚಾರಿತ್ರಿಕ ಸ್ಥಿತಿ ಮತ್ತು ಅನುಭವದ ರೂಪಕ.
ವಿಭಜನೋತ್ತರ ನೆಹರೂ ಭಾರತ ಕೂಡಾ
ಕೋಮುವಾದವನ್ನು ಪ್ರತ್ಯಕ್ಷೀಕರಿಸಿತು. ಆದರೆ ಚರಿತ್ರೆ ಮತ್ತು ಚರಿತ್ರಶಾಸ್ತ್ರ (ಹಿಸ್ಟೋರಿಯೋಗ್ರಫಿ)
ವಿಭಜನೆಯ ಮತ್ತು ಅದರ ನಂತರದ ಸಂದರ್ಭದಲ್ಲಿನ ಹಿಂದೂ ಕೋಮುವಾದ, ಅದರ ಸಾಂಸ್ಥಿಕ ಮತ್ತು ಸಂಘಟಿತ ಪಾತ್ರವನ್ನು
ಮತ್ತು ಅದಕ್ಕೆ ಅನುರೂಪವಾದ ಬೇರೆ ಅಥವಾ ಸಮಾನಾಂತರ ಕೋಮುವಾದದ ವಸ್ತು ವಿಷಯಾಂಶವನ್ನಾಗಲೀ, ಚಾರಿತ್ರಿಕ
ಗತಿಯನ್ನಾಗಲಿ ಚಿತ್ರಿಸದಿರುವುದೂ ಕೂಡಾ ಒಂದು ರೀತಿ ವಿಭಜನೆಯು ಸೃಷ್ಟಿಸಿರುವ ಕೋಮುಹಿಂಸೆಗಿಂತಲೂ
ಮಿಗಿಲೆನ್ನುವುದು ನನ್ನ ಗ್ರಹಿಕೆ. ಆ ಸಂದರ್ಭದ ಹಿಸ್ಟೋರಿಯೋಗ್ರಫಿಯು ಅತ್ಯಂತ ಪ್ರಜ್ಞಾಪೂರ್ವಕವಾಗಿ
ಇದರ ದಾಖಲೆಯನ್ನು ಮತ್ತು ಆ ಹೊತ್ತಿನ ಹಿಂದೂರಾಷ್ಟ್ರದ ಸಿದ್ಧಾಂತದ ಭರಾಟೆಯಿರುವಾಗಲೂ ಅತ್ಯಂತ ಸಕ್ರಿಯವಾಗಿದ್ದಂತಹ
ಸೆಕ್ಯುಲರಿಸಂನ ಸಂಪ್ರದಾಯಗಳನ್ನು ಕಡೆಗಣಿಸಿರುವುದೂ ಕೂಡಾ ಭಾರತದ ರಾಷ್ಟ್ರೀಯತೆಯನ್ನು ಸಮಕಾಲೀನ ಸಂದರ್ಭ
ತಪ್ಪಾಗಿ ವ್ಯಾಖ್ಯಾನಿಸಿದ ಫಲದ ರೂಪದಲ್ಲಿಯೂ ಕಾಣಿಸುತ್ತದೆ. ಒಂದು ರೀತಿಯಲ್ಲಿ ಚರಿತ್ರೆ, ಸಾಹಿತ್ಯ
ಮತ್ತು ಒಟ್ಟಾರೆಯಾಗಿ ಜ್ಞಾನದ ಉದ್ಯಮ ಕೂಡಾ ಪ್ರಜ್ಞೀಯ ಮತ್ತು ಅಪ್ರಜ್ಞೀಯವಾಗಿ ಕೋಮುವಾದದ ಪರಿಸರವನ್ನು
ರೂಪಿಸುವಲ್ಲಿ ಮತ್ತದು ಕೋಮುವಾದವನ್ನು ಸೃಷ್ಟಿಸುವಲ್ಲಿ ಕಾರಣವಾಗುತ್ತದೆ ಎನ್ನುವುದನ್ನು ಕೂಡಾ ನಾವು
ಇಲ್ಲಿ ಗಮನಿಸಬಹುದಾಗಿದೆ.
ಸ್ವತಂತ್ರೋತ್ತರ ನೆಹರೂ ಯುಗದಲ್ಲಿ
ಈ ವಿಭಜನೆಯ ಸಂದರ್ಭ ಅಥವಾ 1940ರ ದಶಕದ ಕೋಮುವಾದ ಪುನರುಜ್ಜೀವನವನ್ನು ಪಡೆಯಿತಷ್ಟೇ. ನೆಹರೂ ಪ್ರಣೀತ
ಹೊಸ ಆರ್ಥಿಕ ಮಾದರಿಯು ಸಾಮಾಜಿಕವಾಗಿ, ಆರ್ಥಿಕವಾಗಿ ಅನೇಕ ಅವಕಾಶ ಮತ್ತು ಭೌತಿಕ ಅಭಿವೃದ್ಧಿಗೆ ಕಾರಣವಾಯಿತಾದರೂ
ಕೂಡಾ ಬಡತನ, ನಿರುದ್ಯೋಗ, ಅಸಮಾನತೆಯು ಮುಂದುವರಿದುವು. ಈ ಸಂದರ್ಭದ ನೆಹರೂ ಯೋಜನೆಗಳು ಮತ್ತು ಒಟ್ಟಾರೆ
ಆರ್ಥಿಕ ನೀತಿ ಮತ್ತು ಸಾಮ್ರಾಜ್ಯಶಾಹೀ ದೇಣಿಗೆಯಾದ ಅನಭಿವೃದ್ಧಿಯ ನಡುವಿನ ವೈರುಧ್ಯಗಳೂ ಕೂಡಾ, ಇದರ
ಜತೆ ಜತೆಯಲ್ಲೇ ಸ್ಫೋಟಗೊಂಡ ಜನಸಂಖ್ಯೆಯು ಸಮುದಾಯಗಳಲ್ಲಿ ಒಂದು ರೀತಿಯ ಮಾನಸಿಕ ಕುಸಿತ ಹಾಗೂ ವೈಯಕ್ತಿಕ
ಮತ್ತು ಸಾಮಾಜಿಕ ದುಗುಡವನ್ನೂ ಕೂಡಾ ಉಂಟುಮಾಡಿತು. ಇದು ಒಂದು ರೀತಿಯ ಅಸಮವಾದ ಆರ್ಥಿಕ ಅವಕಾಶವನ್ನು
ಸೃಷ್ಟಿಸಿ ಕೊರತೆಯನ್ನೂ ಸೃಷ್ಟಿಸಿತು. ಇದು ತೀವ್ರವಾಗುತ್ತಾ ಹೋಗಿ ಜಾತಿ ಮತ್ತು ಸಮುದಾಯ ಹಾಗೂ ಕೋಮುಗಳ
ನಡುವಿನ ಅನರ್ಥೈಸಿಕೊಳ್ಳುವಿಕೆ ಹಾಗೂ ಕೋಮುವಾದಕ್ಕೆ ಕಾರಣವಾಯಿತು.
ನೆಹರೂ ಯುಗದಲ್ಲಿ ಬೇರೆ ಬೇರೆ ಸಮಾಜೋ,
ಆರ್ಥಿಕ, ರಾಜಕೀಯ ಕಾರಣಗಳಿಂದ ಉಂಟಾದಂತಹ ಸಾಮಾಜಿಕ ದ್ವಂದ್ವತೆ, ಉದ್ವಿಗ್ನತೆ ಅಥವಾ ಇಬ್ಬಂದಿತನ ಕೂಡಾ
ಮಹತ್ವದ್ದು. ಮಧ್ಯಮ ವರ್ಗ ಅಥವಾ ರಣ್‍ಧೀರ್ ಸಿಂಗ್ ಮತ್ತು ಬಿಪನ್ ಚಂದ್ರರ ಮಾತುಗಳಲ್ಲಿ ಹೇಳುವುದಾದರೆ
ಪೆಟ್ವಿ ಬೂಝ್ರ್ವಾ (ಕೆಳ ಮಧ್ಯಮ, ಸಣ್ಣ ವರ್ಗ) ಅತ್ಯಂತ ತೀವ್ರತೆರನಾದಂತಹ ನಿರುದ್ಯೋಗ ಮತ್ತು ವೈಪರೀತ್ಯದ
ಸಮಾಜೋ-ಆರ್ಥಿಕ ಕಠಿಣತೆಯನ್ನು ಅನುಭವಿಸಿತು. ಇದೂ ಕೂಡಾ ಹಳ್ಳಿಯ, ನಗರದ ಮಧ್ಯಮವರ್ಗ ನೆಹರೂ ಅರ್ಥವ್ಯವಸ್ಥೆ
ಸೃಷ್ಟಿಸಿದ ಶಿಕ್ಷಣ, ಉದ್ಯೋಗ, ಅವಕಾಶಗಳನ್ನೂ ಬಳಸಿತು. ಆದರೆ ಕೆಳ ಮಧ್ಯಮವರ್ಗ ಇದರಿಂದ ವಂಚಿತವಾಯಿತು.
ಇವರನ್ನು ಆರ್ಥಿಕ ಮತ್ತು ಅಭಿವೃದ್ಧಿಯ ಮುಖ್ಯವಾಹಿನಿಯಲ್ಲಿ ಸೇರ್ಪಡೆ ಮಾಡಲಾಗಲೇ ಇಲ್ಲ. ಇದು ಅತ್ಯಂತ
ಮಹತ್ವದ ಕಾರಣ ಕೋಮುವಾದಕ್ಕೆ. ಇಂದು ಕೂಡಾ ಇದನ್ನು ಅನುರೂಪವಾಗಿ ನೋಡುವುದಾದರೆ, ಝೆಹಾದೀ ಭಯೋತ್ಪಾದನೆಯಲ್ಲಿ
ಮುಂಚೂಣಿಯ ಬಂಟರಾಗಿರುವ ನಗರದ, ಅರೆನಗರದ ಕೆಳವರ್ಗದ ಸಮುದಾಯದ ಜನರನ್ನು ಆರ್ಥಿಕ, ಸಾಮಾಜಿಕ, ಸಾಂಸ್ಕøತಿಕವಾಗಿ
ನಾವು ಹೊರಗಿಡುವಿಕೆಯ ಪ್ರಕ್ರಿಯೆಯಲ್ಲಿ (ಎಕ್ಸ್‍ಕ್ಲೂಶನ್) ಇಡುತ್ತಿರುವುದರಿಂದ ಅದು ಇನ್ನೂ ಕೂಡಾ ಸಕ್ರಿಯವಾಗಿರುವುದು.
ಆ ಸಂದರ್ಭದಲ್ಲಿ ಈ ರೀತಿಯ ಎಕ್ಸ್‍ಕ್ಲೂಶನ್ ಕೋಮುವಾದದ ಬೆಳವಣಿಗೆಗೆ ಮಹತ್ವದ ಕಾರಣವಾಯಿತು.
ಸಮಕಾಲೀನ ಸಂದರ್ಭದ ಹಳೆಯ ಸಾಮಾಜಿಕ
ವ್ಯವಸ್ಥೆ ಮತ್ತು ಸಂಸ್ಥೆಗಳಾದ ಜಾತಿ, ಕೂಡು ಕುಟುಂಬ, ಗ್ರಾಮ, ನೆರೆಹೊರೆ ಮುಂತಾದವುಗಳನ್ನು ಹೊಸ
ಸಂಸ್ಥೆಗಳಾದ ವರ್ಗ, ಟ್ರೇಡ್ ಯೂನಿಯನ್, ಕಿಸಾನ್ ಸಭಾ, ರಾಜಕೀಯ ಪಕ್ಷಗಳು, ಒತ್ತಡ ಗುಂಪುಗಳು ಮುಂತಾದವು
ಪಲ್ಲಟಗೊಳಿಸಿದ್ದೂ ಕೂಡಾ ಒಂದು ಮಹತ್ವದ ಕಾರಣ. ಸಮಕಾಲೀನ ಸಂದರ್ಭ ಆಗಷ್ಟೇ ರಾಷ್ಟ್ರೀಯ ಹೋರಾಟ ಮತ್ತು
ಅದರ ಆದರ್ಶಗಳಿಂದ ವಿಮೋಚಿತವಾಗಿ ಯಾವುದೇ ರಾಜಕೀಯ ಆದರ್ಶವಾದವನ್ನೂ ಅನುಭವಿಸದಿದ್ದದ್ದೂ ಕೂಡಾ ಒಂದು
ಸಾಂಸ್ಕøತಿಕ, ತಾತ್ವಿಕ ಕಾರಣ. ಕೋಮುಗಲಭೆ ಮತ್ತು ಕೋಮುವಾದದ ನಿರ್ವಹಣೆಯಲ್ಲಿ ಪೋಲಿಸರ ನಿರ್ವಹಣೆ
ಮತ್ತು ಧನಾತ್ಮಕ ಮತ್ತು ಋಣಾತ್ಮಕ ನೆಲೆಯ ಅವರ ಭಾಗಿದಾರಿಕೆ, ರಾಜಕೀಯ ಅವಕಾಶವಾದ, ರಾಜಕೀಯವಾಗಿ ಸಮುದಾಯಗಳ
ತುಷ್ಠೀಕರಣ ಮುಂತಾದವೂ ನೆಹರೂ ಯುಗ ಅಥವಾ ವಿಭಜನೋತ್ತರ ಯುಗದಲ್ಲೂ ಕೋಮುವಾದ ಎದ್ದು, ಉಜ್ಜೀವನವನ್ನು
ಪಡೆಯಲು ಕಾರಣವಾಯಿತು.
ಹೀಗೆ ವಿಭಜನೆ ಮತ್ತು 1940-50ರ
ದಶಕದಲ್ಲಿ ಕೋಮುವಾದವನ್ನು ಅತ್ಯಂತ ಸೂಕ್ಷ್ಮವಾಗಿ ಗ್ರಹಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ನಾವು
ಅತ್ಯಂತ ತುರ್ತಿನ ತೀರ್ಮಾನವನ್ನು ಕೈಗೊಳ್ಳುವುದು ಸಾಧ್ಯವಾಗುವುದಿಲ್ಲ. ಗ್ಯಾನೇಂದ್ರ ಪಾಂಡೆಯಂತಹ
ಚಿಂತಕ ಪಾರ್ಟಿಶನ್ ಎನ್ನುವ ಶಬ್ದವನ್ನೇ ಹೊಸ ರೀತಿಯಲ್ಲಿ ಮರು ವಿವೇಚನೆಗೆ ಒಳಪಡಿಸಬೇಕಾದ ಸಂಗತಿಯನ್ನು
ಪ್ರಶ್ನೆಯನ್ನು ನಮ್ಮ ಮುಂದೆ ಇಡುತ್ತಾರೆ. ಪಾರ್ಟಿಶನ್ ಮತ್ತು ಅದರ ಪ್ರದೇಶ ಮತ್ತು ಭಾಷಾ ವಿಶಿಷ್ಠ
ಶಬ್ದ ಸರಣಿಗಳನ್ನು ಕಾಲ ದೇಶದ ಮೇಲೆ ವ್ಯಾಖ್ಯಾನಿಸಿ ಪರಿಶೀಲಿಸಬೇಕೆಂದು ಆಗ್ರಹಿಸುತ್ತಿದ್ದಾರೆ. ಅದು
ಅಲ್ಲದೆ ಪಾರ್ಟಿಶನ್, ಕೋಮುವಾದ ಮತ್ತು ಅದರ ಸುತ್ತಲಿನ ಬೆಳವಣಿಗೆಗಳು ಯಾವುದನ್ನೂ ಕೂಡಾ ಒಂದು ಮುಚ್ಚಿದ
ಏಕಶಿಲೀಯ (ಮೊನೋಲಿಥಿಕ್) ಗ್ರಹಿಕೆಗಳಾಗಿ ನೋಡುವ ಪರಿಪಾಠವನ್ನು ಕೂಡಾ ಇಂದು ಪ್ರಶ್ನಿಸಲಾಗುತ್ತಿದೆ.
ಈ ನೆಲೆಯಲ್ಲಿ ಈ ಬರಹ ಅತ್ಯಂತ ಸಾಪೇಕ್ಷವಾದ ಕೆಲವು ಚದುರಿದ ಚಿಂತನೆಗಳ ದಾಖಲು.
***
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ