ಬಿಪನ್ ಚಂದ್ರ ಎಂಬ ಅಧ್ಯಾಪಕ, ಚರಿತ್ರಕಾರ ಮತ್ತು ಆ್ಯಕ್ಟಿವಿಸ್ಟ್
ಭಾರತದ ಬಹುದೊಡ್ಡ ಇತಿಹಾಸಕಾರ ಬಿಪನ್ ಚಂದ್ರ ಇಂದು ಇತಿಹಾಸದ ಭಾಗವಾಗಿ ಹೋಗಿದ್ದಾರೆ . ಬಿಪನ್ ಓರ್ವ ಇತಿಹಾಸಕಾರನಾಗಿ , ಒಬ್ಬ ಒಳ್ಳೆಯ ಅಧ್ಯಾಪಕನಾಗಿ ಮತ್ತು ಚಳುವಳಿಗಳಲ್ಲಿ ಧುಮುಕುತ್ತಿದ್ದ ವ್ಯಕ್ತಿಯಾಗಿ ಪ್ರಸಿದ್ಧರು . ಬಿಪನ್ ಚಂದ್ರ , ಚರಿತ್ರೆಯನ್ನಂತೂ ಅತ್ಯಂತ ಗಂಭೀರವಾಗಿ ಪರಿಗಣಿಸಿ ಸ್ವೀಕರಿಸಿದ್ದರು . ಈ ನೆಲೆಯಿಂದಲೇ ಬಿಪನ್ , ಸುಮಾರು 40 ವರ್ಷಕ್ಕಿಂತಲೂ ಅಧಿಕ ಕಾಲ ದುಡಿದ ತಮ್ಮ ಅಧ್ಯಾಪನ ವೃತ್ತಿಯ ಬದುಕಲ್ಲಿ ಸಾವಿರಾರು ವಿದ್ಯಾರ್ಥಿಗಳನ್ನು ಆಕರ್ಷಿಸಿದ್ದರು . ಬಿಪನ್ ರವರ ಈ ಆಕರ್ಷಣೆಯಿಂದಲೇ ಮುಖ್ಯವಾಗಿ ಅರ್ಜುನ್ ದೇವ್ , ನೋನಿಕಾ ದತ್ತಾ , ರಣ್ ಧೀರ್ ಸಿಂಗ್ , ಆದಿತ್ಯ ಮುಖರ್ಜಿಯಂತವರು ಚರಿತ್ರಕಾರರಾಗಿ ಹೊಸಕಾಲದಲ್ಲಿ ರೂಪುಗೊಂಡರು . ಬಿಪನ್ ಇರುವಾಗಲೂ ಮತ್ತು ಗತಿಸಿರುವಾಗಲೂ ಅನೇಕ ವಿದ್ಯಾರ್ಥಿಗಳು , ಪ್ರಾಧ್ಯಾಪಕರುಗಳು , ರಾಯಭಾರಿಗಳು , ಚಿತ್ರನಿರ್ದೇಶಕರು , ಪತ್ರಕರ್ತರು ಮತ್ತು ಸಾಮಾಜಿಕ ರಾಜಕೀಯ ಚಳುವಳಿಗಾರರು ಬೇರೆ ಬೇರೆ ಕಾರಣ , ನೆಲೆ , ಉದ್ದೇಶಗಳಿಂದ ಬಿಪನ್ ಚಂದ್ರರನ್ನು ಸ್ಮರಿಸುತ್ತಿದ್ದರು . ಸಮಾಜೋ - ರಾಜಕೀಯ ಚಿಂತಕ ಯೋಗೇಂದ್ರ ಯಾದವ್ ರಿಗೆ ,“ ಬಿಪನ್ ಎಡಪಂಥೀಯ ರಾಷ್ಟ್ರವಾದಿಯಾಗಿದ್ದರು . ಸಾಮ್ರಾಜ್ಯಶಾಹೀ ವಿರೋಧೀ ನಿಲುವುಗಳು , ಸಮಾನತೆ , ಜಾತ್ಯತೀತತೆ , ಆಧುನಿಕತಾವಾದೀ ಮನೋಭಾವ ಮತ್ತು...