ಬಿಪನ್ ಚಂದ್ರ ಎಂಬ ಅಧ್ಯಾಪಕ, ಚರಿತ್ರಕಾರ ಮತ್ತು ಆ್ಯಕ್ಟಿವಿಸ್ಟ್
ಭಾರತದ ಬಹುದೊಡ್ಡ ಇತಿಹಾಸಕಾರ ಬಿಪನ್ಚಂದ್ರ ಇಂದು ಇತಿಹಾಸದ ಭಾಗವಾಗಿ ಹೋಗಿದ್ದಾರೆ. ಬಿಪನ್ ಓರ್ವ ಇತಿಹಾಸಕಾರನಾಗಿ, ಒಬ್ಬ ಒಳ್ಳೆಯ ಅಧ್ಯಾಪಕನಾಗಿ ಮತ್ತು ಚಳುವಳಿಗಳಲ್ಲಿ ಧುಮುಕುತ್ತಿದ್ದ ವ್ಯಕ್ತಿಯಾಗಿ ಪ್ರಸಿದ್ಧರು.ಬಿಪನ್ಚಂದ್ರ, ಚರಿತ್ರೆಯನ್ನಂತೂ ಅತ್ಯಂತ ಗಂಭೀರವಾಗಿ ಪರಿಗಣಿಸಿ ಸ್ವೀಕರಿಸಿದ್ದರು.ಈ ನೆಲೆಯಿಂದಲೇ ಬಿಪನ್, ಸುಮಾರು 40 ವರ್ಷಕ್ಕಿಂತಲೂ ಅಧಿಕ ಕಾಲ ದುಡಿದ ತಮ್ಮ ಅಧ್ಯಾಪನ ವೃತ್ತಿಯ ಬದುಕಲ್ಲಿ ಸಾವಿರಾರು ವಿದ್ಯಾರ್ಥಿಗಳನ್ನು ಆಕರ್ಷಿಸಿದ್ದರು.ಬಿಪನ್ರವರ ಈ ಆಕರ್ಷಣೆಯಿಂದಲೇ ಮುಖ್ಯವಾಗಿ ಅರ್ಜುನ್ದೇವ್, ನೋನಿಕಾ ದತ್ತಾ, ರಣ್ಧೀರ್ಸಿಂಗ್, ಆದಿತ್ಯ ಮುಖರ್ಜಿಯಂತವರು ಚರಿತ್ರಕಾರರಾಗಿ ಹೊಸಕಾಲದಲ್ಲಿ ರೂಪುಗೊಂಡರು. ಬಿಪನ್ ಇರುವಾಗಲೂ ಮತ್ತು
ಗತಿಸಿರುವಾಗಲೂ ಅನೇಕ ವಿದ್ಯಾರ್ಥಿಗಳು, ಪ್ರಾಧ್ಯಾಪಕರುಗಳು, ರಾಯಭಾರಿಗಳು, ಚಿತ್ರನಿರ್ದೇಶಕರು, ಪತ್ರಕರ್ತರು ಮತ್ತು ಸಾಮಾಜಿಕ ರಾಜಕೀಯ ಚಳುವಳಿಗಾರರು ಬೇರೆ ಬೇರೆ ಕಾರಣ, ನೆಲೆ, ಉದ್ದೇಶಗಳಿಂದ ಬಿಪನ್ ಚಂದ್ರರನ್ನು ಸ್ಮರಿಸುತ್ತಿದ್ದರು.ಸಮಾಜೋ-ರಾಜಕೀಯ ಚಿಂತಕ ಯೋಗೇಂದ್ರ ಯಾದವ್ರಿಗೆ,“ಬಿಪನ್ ಎಡಪಂಥೀಯ ರಾಷ್ಟ್ರವಾದಿಯಾಗಿದ್ದರು.ಸಾಮ್ರಾಜ್ಯಶಾಹೀ ವಿರೋಧೀ ನಿಲುವುಗಳು, ಸಮಾನತೆ, ಜಾತ್ಯತೀತತೆ, ಆಧುನಿಕತಾವಾದೀ ಮನೋಭಾವ ಮತ್ತು ರಾಜಕೀಯ ಸಂಕೇತಗಳಿಂದ ಬದ್ಧವಾಗಿದ್ದರು’’. ಜವಹರ್ಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿದ್ದು, ಸರ್ವಪಳ್ಳಿ ಗೋಪಾಲ್, ಸತೀಶ್ಚಂದ್ರ ಮತ್ತು ಬಿಪನ್ ಜತೆಯಲ್ಲಿ ಸಿ.ಹೆಚ್.ಎಸ್. ಅಂದರೆ ಸೆಂಟರ್ ಫಾರ್ ಹಿಸ್ಟಾರಿಕಲ್ ಸ್ಟಡೀಸ್ ವಿಭಾಗವನ್ನು ಕಟ್ಟಿ ಸುಮಾರು ಮೂರು-ನಾಲ್ಕು ದಶಕಗಳ ಕಾಲ ಬಿಪನ್ರ ಸಹೋದ್ಯೋಗಿಯಾಗಿದ್ದ ಇತಿಹಾಸಕಾರೆ ರೊಮಿಲಾ ಥಾಪರ್ಗೆ, ಬಿಪನ್ ಒಬ್ಬ ಅಕಡೆÀಮೀಶಿಯನ್ ಎಂಬ ಪಾತ್ರದ ಜತೆಗೆ, ಮಹಿಳೆಯ ಬಗ್ಗೆ ಹೊಂದಿದ್ದ ಜೀವಮುಖೀ ನಿಲುವುಗಳ ಬಗ್ಗೆ ಹೆಚ್ಚು ಗೌರವ. ಬಿಪನ್,
ರೊಮಿಲಾ ಥಾಪರ್ಗೆ ಎನ್.ಸಿ.ಇ.ಆರ್.ಟಿ.ಯ ಟೆಕ್ಸ್ಟ್ ಬುಕ್ಸ್ ಬರೆಯಲು ಪ್ರೋತ್ಸಾಹಿಸಿ, ‘ಪಠ್ಯಪುಸ್ತಕಗಳ ಬರವಣಿಗೆಯು ಅಕಡೆಮೀಶಿಯನ್ಸ್ ಹೊಂದಿರಬೇಕಾದ ರಾಷ್ಟ್ರೀಯ ಕರ್ತವ್ಯ’ವೆಂದೂ ಕೂಡಾ ಹೇಳಿ ಉತ್ತೇಜಿಸಿದ್ದರು. ರೊಮಿಲಾ ಮತ್ತು ಬಿಪನ್ ನಡುವೆ ಅನೇಕ ಬಗೆಯ ವೈಚಾರಿಕ ಮತ್ತು
ತಾತ್ವಿಕ ವಿಷಯ ಬೇಧಗಳಿದ್ದಾಗ್ಯೂ ಕೂಡಾ ಅತ್ಯಂತ ನಿಯತವಾದ ಬೌದ್ಧಿಕ ವಾಗ್ವಾದಗಳನ್ನು, ಚರ್ಚೆಯನ್ನು ನಡೆಸುವಂತಹ ಮನೋಸ್ಥಿತಿಯನ್ನು ಬಿಪನ್ ಹೊಂದಿದ್ದರೆನ್ನುವುದೂ ಕೂಡಾ ರೊಮಿಲಾ ಥಾಪರ್ರವರ ಅಭಿಪ್ರಾಯ1. ಕಮ್ಯುನಿಸ್ಟ್ ಪಾರ್ಟಿಯಂತೂ, ‘ಬಿಪನ್ ಮುಖ್ಯವಾಗಿ, ಭಾರತೀಯ ಚರಿತ್ರೆಯ ಪುನರ್ರಚನೆಗೆ ಮಾಕ್ರ್ಸಿಸ್ಟ್ ವೈಧಾನಿಕತೆಯನ್ನನುಸರಿಸಿದ್ದರು, ತನ್ಮೂಲಕ ಚಾರಿತ್ರಿಕ ಘಟನೆಗಳಲ್ಲಿ ಆರ್ಥಿಕ ಅಂಶಗಳು ನಿರ್ವಹಿಸಿದ ಪಾತ್ರವನ್ನು ಹೊರಗೆಡಹಿದ ಮಹಾನ್ ಇತಿಹಾಸಕಾರ’ ಎಂದಿತು. ಆದರೆ ಬಿಪನ್ ಎಂದಿಗೂ ಪಾರ್ಟಿಲೈನ್ ಮಾಕ್ರ್ಸಿಸ್ಟ್ ಆಗಿರಲಿಲ್ಲ. ಹಲವಾರು ಜನಪರ ಸಾಮಾಜಿಕ-ರಾಜಕೀಯ ಚಳುವಳಿಗಳಲ್ಲಿ ಭಾಗವಹಿಸಿದ್ದರೂ ಕೂಡಾ ಸಾಂಪ್ರದಾಯಿಕವಾದ ನೆಲೆಯ ಚಿಂತನಶಾಲೆಗಳ ಚೌಕಟ್ಟುಗಳನ್ನು ಪ್ರಶ್ನಿಸಿಯೇ ಅವರ ಬೌದ್ಧಿಕ ಶಿಸ್ತು ಸಾಗಿತ್ತು.ಸಾಮಾನ್ಯ ಓದುಗರ ನೆಲೆಯಲ್ಲಿ ಕೂಡಾ ಬಿಪನ್ಚಂದ್ರರ ಹರಹು ಅತ್ಯಂತ ವಿಶಿಷ್ಠವಾದುದಾಗಿದೆ.ಮುಖ್ಯವಾಗಿ ಯು.ಪಿ.ಎಸ್.ಸಿ ಮತ್ತು ಪಿ.ಎಸ್.ಸಿ ಸೇರಿದಂತೆ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೈಪಿಡಿಯಂತಿದ್ದ ಅವರ ಎನ್.ಸಿ.ಇ.ಆರ್.ಟಿ.ಪ್ರಕಟಣೆಯಾದ ಮಾಡರ್ನ್ ಇಂಡಿಯಾ, ಪೆಂಗ್ವಿನ್ ಪ್ರಕಾಶನದ ಇಂಡಿಯಾಸ್ ಸ್ಟ್ರಗಲ್ ಫಾರ್ ಇಂಡಿಪೆಂಡೆನ್ಸ್ ಮತ್ತು ಇಂಡಿಯಾ ಆಫ್ಟರ್ ಇಂಡಿಪೆಂಡೆನ್ಸ್ ಕೃತಿಗಳಂತೂ ಈ ರೀತಿಯ ನೆಲೆಯಲ್ಲಿ ಸಾಮಾನ್ಯ ಓದುಗರನ್ನು ಮುಟ್ಟಿದುವು.ಇಂಡಿಯಾಸ್ ಸ್ಟ್ರಗಲ್ ಫಾರ್ ಇಂಡಿಪೆಂಡೆನ್ಸ್ ಕೃತಿಯಂತೂ ಸುಮಾರು 2 ಲಕ್ಷಕ್ಕಿಂತಲೂ ಹೆಚ್ಚು ಪ್ರತಿಗಳ ಮಾರಾಟವನ್ನು ಕಂಡಿತು.ಒಂದು ರೀತಿಯಲ್ಲಿ ಆಧುನಿಕ ಭಾರತದ ಚರಿತ್ರೆಯ ಅತ್ಯಂತ ಪಾಪ್ಯುಲರ್ ಬರಹವೋ ಎಂಬಂತೆ ಈ ಪುಸ್ತಕ ಮನೆ ಮಾತಾಯಿತು. ಎನ್.ಸಿ.ಇ.ಆರ್.ಟಿ.ಯ ಮಾಡರ್ನ್ ಇಂಡಿಯಾ ಕೃತಿಯಂತೂ (1999ರಲ್ಲಿ ಬಿ.ಜೆ.ಪಿ ನೇತೃತ್ವದ ಎನ್.ಡಿ.ಎ ಸರ್ಕಾರ ಪಠ್ಯಕ್ರಮದಿಂದ ವಾಪಸ್ ತೆಗೆದುಕೊಂಡರೂ)ಲಕ್ಷಗಟ್ಟಲೆ ಪ್ರತಿಗಳಾಗಿ ಮುದ್ರಣಗೊಂಡು ಇಡೀ ದೇಶದಾದ್ಯಂತ ಸಿವಿಲ್ ಸರ್ವೀಸ್ ಅಭ್ಯರ್ಥಿಗಳಿಗೆ ಚರಿತ್ರೆಯ ಮಾದರಿ ಪಠ್ಯಪುಸ್ತಕವಾಗಿ ಲಭ್ಯವಾಯಿತು ಮತ್ತು ಇಂದಿಗೂ ಲಭ್ಯವಾಗುತ್ತಿದೆ. ಭಾರತೀಯ ಚರಿತ್ರೆಯ ಪಠ್ಯಪುಸ್ತಕಗಳಲ್ಲಿ ಮತ್ತು
ಲೇಖಕರಲ್ಲಿ ಬಿಪನ್ರದು ಎಲ್ಲಾ ರೀತಿಯಲ್ಲೂ ಕೂಡಾ ಸಾರ್ವಕಾಲಿಕ ದಾಖಲೆಯೇ ಸರಿ.
ಸಮಕಾಲೀನ ಚರಿತ್ರಕಾರರಲ್ಲಿ ಅತ್ಯಂತ ಪ್ರಮುಖ ಆ್ಯಕ್ಟಿವಿಸ್ಟ್ ಆಗಿ ಅನೇಕ ಸಲ ಜ್ಞಾನ ಶಿಸ್ತು ಮತ್ತು ಚರಿತ್ರೆಯ ಕಾರಣಕ್ಕಾಗಿ, ಚರಿತ್ರಶಾಸ್ತ್ರದ ಕೋಮುವಾದೀಕರಣವನ್ನು ವಿರೋಧಿಸಿ ಬೀದಿಗೂ ಬಂದು ಹೋರಾಟ ನಡೆಸಿದ ಖ್ಯಾತಿಯೂ ಬಿಪನ್ ಚಂದ್ರರದ್ದು.ರೊಮಿಲಾ ಥಾಪರ್, ಡಿ.ಎನ್.ಝಾ, ಅಮತ್ರ್ಯಸೇನ್ ಮೊದಲಾದ ವಿದ್ವಾಂಸರ ಜೊತೆಗೆ ಅನೇಕ ಬಾರಿ ಬಲಪಂಥೀಯ ಸಂಘಟನೆಗಳ ಬೌದ್ಧಿಕ ಭಯೋತ್ಪಾದನೆಯನ್ನು ವಿರೋಧಿಸುತ್ತಾ ಪ್ರಗತಿಪರ, ಜಾತ್ಯತೀತ, ಜೀವಪರ ಕಾಳಜಿಗಾಗಿ ಪ್ರತಿಕ್ರಿಯಿಸಿದ ಬಿಪನ್ರನ್ನು ಮರೆಯೋದು ಹೇಗೆ? ಸಮಾಜ, ಜನಾಂಗ, ಸಮುದಾಯವನ್ನು ಒಡೆಯುವ, ಸಹಬಾಳ್ವೆಯನ್ನು ಘಾತಿಸುವ ಸಿದ್ಧಾಂತಗಳು ಮತ್ತವುಗಳ ಕ್ರಿಯಾನ್ವಯ, ಮತ್ತದರ ಅನೇಕ ವಿಕೃತಿ, ಪ್ರಕರಣಗಳನ್ನು ನೋಡಿಯೂ ಕೂಡಾ ನೋಡದಂತೆ ನಮಗ್ಯಾಕೆ? ಎಂದು ಸುಮ್ಮನಿರುವ ವಿದ್ವಾಂಸರ ಆಷಾಢಭೂತಿತನ, ಸಮಯ ಸಾಧಕತನ ಮತ್ತು ಅದರ ಮೇಲಿನ ರಾಜಕಾರಣ, ಲಾಭ, ನಿರೀಕ್ಷೆಗಳನ್ನು ದಿನವೂ ನೋಡುತ್ತಿರುವವರಿಗೆ ಬಿಪನ್ರಂತ ಒಬ್ಬ ವಿದ್ವಾಂಸನನ್ನು ಕಳೆದುಕೊಳ್ಳುವ ಸಮಾಜ, ಕಳೆದುಕೊಳ್ಳುವುದು ವ್ಯಕ್ತಿಯನ್ನಲ್ಲ, ಬದಲು ತನ್ನ ಅಂತ:ಸತ್ವವನ್ನೇ ಎಂದೆನಿಸುತ್ತಿದೆ. ಸಂಘ ಪರಿವಾರ ಅಯೋಧ್ಯೆಯಲ್ಲಿನ ಬಾಬರಿ ಮಸೀದಿ ಕೆಡವಿದ ನಂತರ ಹುಟ್ಟಿಕೊಂಡ ಕಲ್ಪಿತ ಕಥೆ ಮತ್ತು ಕೋಮುವಾದೀ ಚರಿತ್ರೆಯನ್ನು ವಿರೋಧಿಸುವ ಸಲುವಾಗಿ ಜಾರಿಗೆ ಬಂದ ಡೆಲ್ಲಿ ಹಿಸ್ಟೋರಿಯನ್ಸ್ ಗ್ರೂಪ್’ ಎನ್ನುವ ವಿದ್ವಾಂಸರ ಫೋರಂನ ಮುಂಚೂಣಿಯಲ್ಲಿದ್ದವರೇ ಬಿಪನ್ಚಂದ್ರ2. ಹೀಗೆ ಬೌದ್ಧಿಕವಾಗಿ ಮತ್ತು ಆ್ಯಕ್ಟಿವಿಸಂ ನೆಲೆಯಲ್ಲಿ ಅತ್ಯಂತ ಸಮಾಜಮುಖಿಯಾಗಿ ತಮ್ಮನ್ನು ನೆಲೆಗೊಳಿಸಿಕೊಂಡಿದ್ದು ಬಿಪನ್ಚಂದ್ರ ವಿಶೇಷ. ಬಿಪನ್, ನ್ಯಾಶನಲ್ ಬುಕ್ಟ್ರಸ್ಟ್ನ ಮುಖ್ಯಸ್ಥರಾಗಿ ವೈವಿಧ್ಯದ, ವಿಭಿನ್ನ ಸ್ತರಗಳ, ಬಹುಜ್ಞಾನಗಳ ಕುರಿತಾದ ಪುಸ್ತಕಗಳ ಪ್ರಕಟಣೆಯನ್ನು ಕೈಗೊಳ್ಳಲು ಕಾರಣವಾಗಿದ್ದರು.
ಮಾಡರ್ನ್ ಇಂಡಿಯಾ, ಐಡಿಯಾಲಜಿ ಆ್ಯಂಡ್ ಪಾಲಿಟಿಕ್ಸ್ ಇನ್ ಮಾಡರ್ನ್ ಇಂಡಿಯಾ,
ಫ್ರೀಡಂ ಸ್ಟ್ರಗಲ್, ಎಸ್ಸೇಸ್ ಆನ್ ಕಲೋನಿಯಲಿಸಂ, ದಿ ರೈಸ್ ಎಂಡ್ ಗ್ರೋತ್ ಆಫ್ ಇಕಾನಾಮಿಕ್ ನ್ಯಾಶನಲಿಸಂ, ಕಲೋನಿಯಲಿಸಂ ಎಂಡ್ ನ್ಯಾಶನಲಿಸಂ ಇನ್ ಮಾಡರ್ನ್ ಇಂಡಿಯಾ, ಕಮ್ಯುನಲಿಸಂ ಇನ್ ಮಾಡರ್ನ್ ಇಂಡಿಯಾ, ಇನ್ ದಿ ನೇಮ್ ಆಫ್ ಡೆಮಾಕ್ರಸಿ: ದಿ ಜೆ.ಪಿ. ಮೂವ್ಮೆಂಟ್ ಎಂಡ್ ದಿ ಎಮರ್ಜನ್ಸಿ, ನೆಹರೂ ಇನ್ ಹಿಸ್ಟೋರಿಕಲ್ ಪರ್ಸ್ಪೆಕ್ಟಿವ್,ದಿ ಮೇಕಿಂಗ್ ಆಫ್ ಮಾಡರ್ನ್ ಇಂಡಿಯಾ: ಫ್ರಂ ಮಾಕ್ರ್ಸ್ ಟು ಗಾಂಧಿ, ಇಂಡಿಯನ್ ನ್ಯಾಶನಲ್ ಮೂವ್ಮೆಂಟ್: ದಿ ಲಾಂಗ್ ಟರ್ಮ್ ಡೈನಾಮಿಕ್ಸ್, ಸ್ಟ್ರಗಲ್ ಫಾರ್ ಇಂಡಿಯಾಸ್ ಇಂಡಿಪೆಂಡೆನ್ಸ್ ಮತ್ತು ಇಂಡಿಯಾ ಆಫ್ಟರ್ ಇಂಡಿಪೆಂಡೆನ್ಸ್ ಬಿಪನ್ರ ಪ್ರಮುಖ ಕೃತಿಗಳು. ಬಿಪನ್ರ ಈ ಎಲ್ಲಾ ಕೃತಿಗಳೂ ಕೂಡಾ ಮೌಲಿಕವಾದವುಗಳು.ಹಾಗೆಯೇ ಬಿಪನ್ ತಮ್ಮ ವಿದ್ವತ್ಜೀವನದ ಆರಂಭದಲ್ಲಿ ತಾಳಿದ
ಅನೇಕ ನಿಲುವುಗಳನ್ನು ತಮ್ಮ ನಂತರದ ಬರಹ ಮತ್ತು ಕೃತಿಗಳಲ್ಲಿ ಮುರಿದು ಕಟ್ಟಿದ, ಸಂಪೂರ್ಣ ನಿರಾಕರಿಸಿದ ಸಂದರ್ಭಗಳೂ ಉಂಟು3.
ಬಿಪನ್ಚಂದ್ರರ ಹಿಸ್ಟರಿ ಬರೆಯುವ (ಹಿಸ್ಟೋರಿಯೋಗ್ರಫಿಯ)ಕಸುಬು ಆರಂಭವಾಗಿದ್ದು 1966ರಲ್ಲಿ ಅವರ ಪಿ.ಹೆಚ್.ಡಿ. ಕೃತಿಯಾದ, ‘ದಿ ರೈಸ್ ಆ್ಯಂಡ್ ಗ್ರೋತ್ ಆಫ್ ಇಕಾನಾಮಿಕ್ ನ್ಯಾಶನಲಿಸಂ ಇನ್ ಇಂಡಿಯಾ’ ಕೃತಿಯ ಮೂಲಕ.ಈ ಕೃತಿ ಸಂಪೂರ್ಣ ಮಾಕ್ರ್ಸ್ವಾದದ ಚೌಕಟ್ಟಿನಲ್ಲಿ ಅನೇಕ ಗೃಹೀತ, ಪರಿಶೀಲನೆಗಳನ್ನು ಕೈಗೊಂಡರೂ ಕೂಡಾ ಅದು ನ್ಯಾಶನಲಿಸಂನ ಸ್ಪಿರಿಟ್ನಲ್ಲಿಯೂ ಕೂಡಾ ಸಂಗ್ರಹಿತವಾಯಿತು.ಆದರೆ ಬಹುಮುಖ್ಯವಾಗಿ ಇಲ್ಲಿ ಮಾಕ್ರ್ಸಿಯನ್ ಚೌಕಟ್ಟಿನಲ್ಲಿ ಆರ್ಥಿಕ ರಾಷ್ಟ್ರವಾದದ ಕುರಿತು ಗಾಢವಾಗಿ ಕೆಲವು ಪ್ರಮೇಯಗಳನ್ನು ರೂಪಿಸಿದರು.ಮುಖ್ಯವಾಗಿ ರಾಷ್ಟ್ರೀಯ ಹೋರಾಟದಲ್ಲಿನ ವರ್ಗ, ವರ್ಗ ಪ್ರಜ್ಞೆಯು ಆರ್ಥಿಕ ಭೂಮಿಕೆಯಲ್ಲಿ ಜಾಗೃತವಾಗಿ, ಕ್ರಮೇಣ ಸಾಂದ್ರವಾಗಿ ರಾಷ್ಟ್ರೀಯತೆಯನ್ನು ಹುಟ್ಟು ಹಾಕಿತು ಎನ್ನುವುದು ಇಲ್ಲಿಯ ಪ್ರಮುಖ ಕಾಳಜಿಯಾಗಿತ್ತು4.ಅದುವರೆಗೂ ಯಾವ ವಿದ್ವಾಂಸನಿಗೂ ಕಾಡದಿದ್ದ ಪ್ರಶ್ನೆಯನ್ನು ಬಿಪನ್ ಎತ್ತಿಕೊಂಡರು. ಈ ಕೃತಿಯಲ್ಲಿ 1880ರಿಂದ 1905ರ ನಡುವಿನ ಭಾರತೀಯ ರಾಷ್ಟ್ರೀಯ ಹೋರಾಟ, ಹೋರಾಟದ ಜತೆಗೆ ಸಮಕಾಲೀನ ಸಮಾಜದ ವರ್ಗಗಳ ಹಿತಾಸಕ್ತಿಯನ್ನೇ ಹೆಚ್ಚಾಗಿ ಧ್ವನಿಸುತ್ತಿತ್ತು ಎಂದು ಅವರು ಅಭಿಪ್ರಾಯ ಪಡುತ್ತಾರೆ.ಆಗಿನ ಕಾಲದ ಮಧ್ಯಮವರ್ಗದ ಬೌದ್ಧಿಕತೆ ಮತ್ತು ಪ್ರಜ್ಞೆ ಕೂಡಾ ರೂಪುಗೊಂಡಿದ್ದೇ ಅವರ ಆರ್ಥಿಕ ಮತ್ತು ಭೌತಿಕ ಹಿತಾಸಕ್ತಿಗಳ ಮೇಲೆ ಎಂಬುದು ಮತ್ತು ಆ ರೀತಿಯ ಯೋಚನೆಯನ್ನು ಹೊಂದಿದ್ದ ಆಗಿನ ಕಾಲದ ಚರಿತ್ರೆಕಾರರ, ಎಡಪಂಥೀಯ ಬುದ್ಧಿಜೀವಿಗಳ ಯಾಂತ್ರಿಕ ಸ್ವರೂಪದ ವಿವರಣೆಯನ್ನೇ ಅದು
ಪ್ರಬಲವಾಗಿ ಜಾಡಿಸಿತು. ಪಾರ್ಟಿ ಲೈನ್ ಎಡಪಂಥೀಯರು ಪ್ರತಿಪಾದಿಸಿದ ಎರಡು ಮತ್ತು ಸೀಮಿತ ನೆಲೆಯ ವರ್ಗಗಳ ರಾಜಕಾರಣ ಮತ್ತು ಅಭಿವ್ಯಕ್ತಿಯಾಗಿ ರಾಷ್ಟ್ರೀಯತೆ ಮೂಡಿಬಂತು ಎಂಬ ವಾದವನ್ನು ಬಿಪನ್ ತಿರಸ್ಕರಿಸಿ, ಬಹುವರ್ಗಗಳ ಹಿತಾಸಕ್ತಿಯ ಫಲವಾಗಿ ರಾಷ್ಟ್ರೀಯತೆ ಒಡಮೂಡಿದೆಯೆಂದರು.ಇದರಿಂದ ಅದುವರೆಗೂ ಆಧುನಿಕ ಭಾರತದ, ರಾಷ್ಟ್ರೀಯ ಹೋರಾಟದ ಮೇಲೆ ಸ್ವಲ್ಪಮಟ್ಟಿಗೆ ವೈಚಾರಿಕ ಅಧ್ಯಯನ ನಡೆಸಿದ ಚಿಕಾಗೋ ಚಿಂತನಶಾಲೆ ಮತ್ತದರ ‘ಟ್ರ್ರೆಡಿಶನ್ ವರ್ಸಸ್ ಮಾಡರ್ನಿಟಿ ಮಾದರಿ’ ಹಿಂದೆ ಸರಿಯಿತು ಮತ್ತು ಬಿಪನ್, ನಿಯಾನ್ ಫಗ್ರ್ಯುಸನ್ರಂತಹ ಪ್ರಸಿದ್ಧ ಆರ್ಥಿಕ ಚರಿತ್ರಕಾರ ಮತ್ತು ಆತನ ‘ಇನಿಶಿಯಲ್ ಕಂಡೀಶನ್ ಅಪ್ರೋಚ್’ನ
ಬೆಳಕಿನಲ್ಲಿ ಭಾರತದ ರಾಷ್ಟ್ರೀಯತೆ ಮತ್ತು ವಸಾಹತುಶಾಹಿಯನ್ನು ಗಮನಿಸಿದರು. ಸ್ವತ: ಮಾಕ್ರ್ಸಿಸ್ಟ್ ಆಗಿಯೂ ಈ ಕೃತಿಯಲ್ಲಿನ ಅನೇಕ ಸಂದರ್ಭಗಳಲ್ಲಿ ಸಾಂಪ್ರದಾಯಿಕ ಮಾಕ್ರ್ಸ್ವಾದದ ಬಗ್ಗೆ ಅತೃಪ್ತರಾಗಿ, ಮಾಕ್ರ್ಸ್ನು ಏಶ್ಯಾದ ಸಮಾಜಗಳನ್ನು ಅರ್ಥೈಸಿಕೊಂಡ ಕ್ರಮ ಸಂಪೂರ್ಣ ಅಸಂಬದ್ಧವೆಂದೇ ವಾದಿಸಿದರು5.
ಬಿಪನ್ ಸುಮಾರು 1980ರ ನಂತರದ ಬರವಣಿಗೆಯಲ್ಲಿ ಇನ್ನೊಂದು ಮಾದರಿಯನ್ನು ಅಳವಡಿಸಿಕೊಂಡು, ಆರಂಭದ ಮಾಕ್ರ್ಸಿಯನ್ ಸಿದ್ಧಾಂತಗಳನ್ನು ಮೀರಿ ಒಂದು ಶಿಫ್ಟ್ ಪಡೆದರು.1985ರ ತಮ್ಮ ಪ್ರಸಿದ್ಧ ಬರಹವಾದ, ಇಂಡಿಯನ್ ನ್ಯಾಶನಲ್ ಮೂವ್ಮೆಂಟ್: ದಿ ಲಾಂಗ್ ಟರ್ಮ್ ಡೈನಾಮಿಕ್ಸ್,
ಮೂವ್ಮೆಂಟ್’ ಮೂಲಕ ಬಿಪನ್ ರಾಷ್ಟ್ರಿಯವಾದಿ ಸಂಗತಿಗಳನ್ನು ಹೊಸದಾಗಿ ನೋಡಲು ಆರಂಭಿಸಿದರು. ತಮ್ಮ ಈ ಮೊದಲಿನ ಅನೇಕ ನಿಲುವುಗಳನ್ನು
ನಿರಾಕರಿಸುವ ಮತ್ತು ಅವುಗಳನ್ನು ಮುರಿದುಕಟ್ಟುವ ನೆಲೆಗಳು ಅಲ್ಲಿದ್ದವು. ಬಹುಶ: ಮೊತ್ತಮೊದಲಬಾರಿಗೆ ಚರಿತ್ರಕಾರನೊಬ್ಬ ತಾತ್ವಿಕವಾಗಿ ಭಾರತದ ರಾಷ್ಟ್ರೀಯ ಹೋರಾಟವನ್ನು, ‘ಇಂಡಿಯನ್ ನ್ಯಾಶನಲ್ ಕಾಂಗ್ರೆಸ್’ನ ಜೊತೆಗೆ ಸೂತ್ರೀಕರಿಸಿ ನೋಡಿದಂತಹ ಪ್ರÀಯತ್ನ ಅದಾಗಿತ್ತು.ಅದು ಕಾಂಗ್ರೆಸ್ನ ಜತೆಗೆ ಗಾಂಧಿಯನ್ನೂ ಕೂಡಾ ಹೋರಾಟದ ಕೇಂದ್ರದಲ್ಲಿಟ್ಟು ನೋಡುವ ಪ್ರಯತ್ನವಾಗಿತ್ತು. ಹೋರಾಟವೆಂಬ ಸಂಕೀರ್ಣವಾದ ಪ್ರಕ್ರಿಯೆಯಲ್ಲಿನ ಬಹುರೂಪದ
ಮತ್ತು ಸಮಾನಾಂತರ ಝರಿಗಳನ್ನು ಅಲಕ್ಷಿಸಿ ಗಾಂಧಿಯನ್ನೇ ಕೇಂದ್ರವನ್ನಾಗಿಸಿ ಬಂದ ಮೊದಲ ಮಾದರಿಯ ಬರಹಗಳಲ್ಲಿ ಬಿಪನ್ರ ಈ ಬರಹ ಬಹಳ ಪ್ರಮುಖವಾದುದು. ಬಿಪನ್, “1947ರ ಮೊದಲಿನ ರಾಷ್ಟ್ರೀಯ ಹೋರಾಟದ ಅಧ್ಯಯನವೆಂದರೆ, ಅದರ ಹೃದಯವೆಂದರೆ ಕಾಂಗ್ರೆಸ್ಸೇ ಆಗಿದೆ’ ಎಂದೇ ಆರಂಭಿಸುತ್ತಾರೆ.ಎಡಪಂಥೀಯರು, ಸ್ವರಾಜ್ವಾದಿಗಳು ಮತ್ತು ಅನೇಕರು ರಾಷ್ಟ್ರೀಯ ಹೋರಾಟದ ಓಟದಲ್ಲಿದ್ದರೂ ಕೂಡಾ ಅಂತಿಮವಾಗಿ ಕಾಂಗ್ರೆಸ್ ವಿಜಯಗಳಿಸಿತು ಎಂದು ಬಿಪನ್ ಇಲ್ಲಿ ಅಭಿಪ್ರಾಯಿಸುತ್ತಾರೆ. ಆದರೆ ಎಲ್ಲಿಯೂ ಕೂಡಾ ಈ ರೀತಿ ಅನೇಕ, ಸಮಾನಾಂತರ ಸಾಂಸ್ಥಿಕ ಅಥವಾ ಅಸಾಂಸ್ಥಿಕ ಸಂಗತಿಗಳು ಓಟಕ್ಕೆ ನಿಂತಿರಲೇ ಇಲ್ಲ ಎಂದು ವಾದಿಸುವುದಿಲ್ಲ. ಸುಮಾರು 1989ರ ಹೊತ್ತಿಗಂತೂ ಮಾರ್ಕಿಸ್ಟ್ ಚಿಂತಕರ ಜತೆಗಿನ ತಮ್ಮ ಭಿನ್ನಾಭಿಪ್ರಾಯವನ್ನು ಬಿಪನ್ ತಮ್ಮ ಕೃತಿಯಾದ ‘ ಕಲನಿಯಲ್ ರೂಲ್, ಟ್ರಾನ್ಸ್ಫರ್ಮೇಶನ್ ಫ್ರಂ ಎ ಕಲೋನಿಯಲ್ ಟು ಆ್ಯನ್ ಇಂಡಿಪೆಂಡೆಂಟ್ ಇಕಾನಮಿ: ಎ ಕೇಸ್ ಸ್ಟಡಿ ಆಫ್ ಇಂಡಿಯಾ’ದಲಿ್ಲ6ಪ್ರಮುಖವಾಗಿ ವ್ಯಕ್ತಪಡಿಸುತ್ತಾರೆ ಮತ್ತು
ವಿಶೇಷವಾಗಿ ವಸಾಹತುಶಾಹೀ ವ್ಯವಸ್ಥೆಯು, ಅದರ ಆರ್ಥಿಕತೆಯು ವಸಾಹತುಶಾಹೀ ನೆಲೆಯಿಂದ ಸ್ವತಂತ್ರ ಆರ್ಥಿಕತೆ, ರಾಜಕೀಯ ವ್ಯವಸ್ಥೆಯನ್ನು ಸೃಷ್ಟಿಸುವಲ್ಲಿನ ಸ್ಥಿತ್ಯಂತರ ಮತ್ತು ಪ್ರಕ್ರಿಯೆಯನ್ನು ಕುರಿತು ಹೊಸ ವೈಧಾನಿಕ ಕ್ರಮದಿಂದ ವಾದಗಳನ್ನು ಮಂಡಿಸುತ್ತಾರೆ. ಇದುವರೆಗಿನ ಸಂಪ್ರದಾಯವಾದೀ ಮಾರ್ಕಿಸ್ಟ್ ಚಿಂತನೆಯು 1928ರ 6ನೆಯ ಕಮ್ಯುನಿಸ್ಟ್ ಕಮಿಂಟರ್ನ್ ಕಾಂಗ್ರೆಸ್ ಮೇಲೆ ರೂಪುಗೊಂಡ ‘ಸಿ.ಬಿ.ಎಫ್’ ಮಾದರಿ ಎಂದು ಟೀಕಿಸುತ್ತಾ, ಇದೇ ಚಿಂತನ ಶಾಲೆಯ ಪ್ರಮುಖರಾದ ಪಾಲ್ ಬರನ್, ಆಂದ್ರೆ ಗುಂಡರ್ ಫ್ರಾಂಕ್ ಮುಂತದವರ ಯೋಚನೆಗಳನ್ನು ತಿರಸ್ಕರಿಸುತ್ತಾ, ಅವರ ಪ್ರಮುಖ ವಾದವಾದ, ‘ಯಾವುದೇ ಈ ಮೊದಲಿನ ವಸಾಹತುಶಾಹೀ ಪ್ರದೇಶಗಳ ಸ್ವತಂತ್ರ ಆರ್ಥಿಕ ಅಭಿವೃದ್ಧಿಯು ಬಂಡವಾಳಶಾಹೀತ್ವದಿಂದ ದೂರಸರಿದು, ಸೋಶಿಯಲಿಸ್ಟ್ ದಾರಿಯನ್ನು ಆಯ್ಕೆ ಮಾಡಿಕೊಂಡರಷ್ಟೇ ಉಂಟಾಗುತ್ತದೆನ್ನುವುದನ್ನು ತರ್ಕ ಸಹಿತವಾಗಿ ನಿರಾಕರಿಸಿದರು. ಬಿಪನ್, ಪೋಸ್ಟ್ ಕಲೋನಿಯಲ್ ಸಂದರ್ಭದ ರಾಷ್ಟ್ರವೊಂದು ತನ್ನ ಸ್ವಂತದ್ದಾದ ಮತ್ತು ಸರಿಸುಮಾರು ಮಟ್ಟಿನ ಬಂಡವಾಳಶಾಹೀ ಜಾಗತಿಕ ವ್ಯವಸ್ಥೆಯ ಜತೆಗೇ ಸಾಗಬೇಕಾದುದೇ ನಿಜವಾದ ವಾಸ್ತವವೆಂದೂ ಸಾಧಿಸಿದರು.ಅದನ್ನೇ ಬಿಪನ್ ‘ಇಂಡಿಪೆಂಡೆಂಟ್ ಕ್ಯಾಪಿಟಲಿಸಂ’ ಎಂದರು.ಬಂಡವಾಳಶಾಹಿ ವ್ಯವಸ್ಥೆಯ ಬಂಡವಾಳಶಾಹೀ ಲಕ್ಷಣವನ್ನು ಕೇಂದ್ರೀಕರಿಸದೆ, ಅದರ ಅವಲಂಬನೆ, ಸ್ವಾವಲಂಬನೆ ಬಗ್ಗೆ ಮಾತ್ರ ಚಿಂತಿಸಿದ್ದೇ ಸೋಶಿಯಲಿಸಂನ ವೈಫಲ್ಯಕ್ಕೆ ಕಾರಣವೆಂದೂ ಬಿಪನ್ ಇಲ್ಲಿ ಬಗೆದರು.
ಈ ಅವಧಿಯಲ್ಲಿನ ಬಿಪನ್ರ ಅತಿ ಮಹತ್ವದ ಇನ್ನೊಂದು ಬರಹವೆಂದರೆ 1990ರಲ್ಲಿ ಮುಂಬೈನಲ್ಲಿ ನೀಡಿದ ಡಿ.ಡಿ. ಕೊಸಾಂಬೀ ಸ್ಮರಣ ಉಪನ್ಯಾಸವಾದ ನಂತರ ಪ್ರಕಟಿತವಾದ,‘ ಜವಹರ್ಲಾಲ್ ನೆಹರೂ ಇನ್ ಹಿಸ್ಟಾರಿಕಲ್ ಪರ್ಸ್ಪೆಕ್ಟಿವ್’. ನೆಹರೂ ಮೇಲೆ ಬಿಪನ್ 1975ರಲ್ಲೇ ಸೋಶಿಯಲಿಸಂನ ಹರಿಕಾರ, ಪ್ರಗತಿಪರ ಎಂದೂ, ನೆಹರೂರವರ ಜೀವನ, ಕೃತಿ- ಕಾರ್ಯ,ದೃಷ್ಟಿಕೋನ ಮುಂತಾದವುಗಳು ಪ್ರಸಕ್ತ ಭಾರತಕ್ಕೇನೇ ಚೈತನ್ಯದಾಯೀ ಎಂಬ ನಿಲುವಿನ ತೀರ್ಪುಗಳನ್ನೂ ಕೂಡಾ ನೀಡಿದ್ದರು. ಆಗ ಬಿಪನ್ ಇನ್ನೂ ಕೂಡಾ ಮಾಕ್ರ್ಸ್ವಾದೀ ನಿಲುವು ಬದ್ಧತೆಗಳಿಂದ ಕ್ರಿಟಿಕಲ್ ರಾಷ್ಟ್ರೀಯವಾದೀ ನೆಲೆಗೆ ಬಂದಿರಲಿಲ್ಲ. ಆದರೆ ಜವಾಹರ್ ನೆಹರೂ ಇನ್ ಹಿಸ್ಟಾರಿಕಲ್ ಪರ್ಸ್ಪೆಕ್ಟಿವ್ ಕೃತಿಯಲ್ಲಿ ನೆಹರೂವನ್ನು ತಮ್ಮ ಮೊದಲಿನ ನಿಲುವುಗಳಿಗಿಂತ ಭಿನ್ನವಾಗಿ,ವಿರುದ್ಧವಾಗಿ ನೋಡುತ್ತಾ, ‘ನೆಹರೂರವರು
ರಾಷ್ಟ್ರೀಯ ಹೋರಾಟದ ಸಂದರ್ಭದಲ್ಲಿ ಮಹತ್ತರ ಪಾತ್ರವಹಿಸಿದ ಗಾಂಧೀಯ ನೀತಿ ಮತ್ತು ರಣನೀತಿಗೆ ಸಮ್ಮತಿ ಸೂಚಿಸಿದ ಸಂಗತಿಯೇ ಬಹಳ ಪ್ರಮುಖವೆಂದು ಅಭಿಪ್ರಾಯಿಸಿದರು. ಈ ಅವಧಿಯಲ್ಲಿ ಬಿಪನ್ ಎಡಪಂಥದ ಮೇಲೆ ಎಷ್ಟು ಕ್ರಿಟಿಕಲ್ ಆಗಿದ್ದರೆಂದರೆ, ಒಂದು ಕಡೆ ಕೊಸಾಂಬೀ ಸೇರಿದಂತೆ ಎಡಪಂಥೀಯ ಚಿಂತಕರು ಬರೀ ‘ಆರ್ಥಿಕ ನಿಯತಿವಾದ ಮತ್ತು ವರ್ಗ ನಿಯತಿವಾದ’ವನ್ನು ಹಿಡಿದು ನೇತಾಡುತ್ತಾ ಹರಿದುಕೊಂಡರೆಂದೂ ಅವರು ಇಂತಹ ಸಂಗತಿಯನ್ನು ಮೀರಿದ ಲೋಕವನ್ನು, ಅನುಭವವನ್ನೂ ಹೊಂದಲಿಲ್ಲವೆಂದೂ ವ್ಯಥಿಸುತ್ತಾರೆ. ಸುಮಾರು 1990-94ರ ಹೊತ್ತಿಗಂತೂ ಸ್ಪಷ್ಟ ರಾಷ್ಟ್ರೀಯವಾದೀ ನಿಲುವುಗಳನ್ನು ಕ್ರಿಟಿಕಲ್ ಆಗಿ ವ್ಯಕ್ತಪಡಿಸುತ್ತಾ, ‘ಕಮ್ಯುನಿಸ್ಟರು, ಸೋಶಿಯಲಿಸ್ಟರು, ನೆಹರೂ ಪ್ರಯತ್ನ ಮತ್ತು
ನೀತಿಗಳನ್ನು ಅರ್ಥಮಾಡಿಕೊಳ್ಳಲಿಲ್ಲವೆನ್ನುತ್ತಾ, ನೆಹರೂ ಒಬ್ಬ ಪ್ರಜಾಪ್ರಭುತ್ವವಾದೀ, ರಾಷ್ಟ್ರವಾದೀ ಕಾಂಗ್ರೆಸಿಗರಾಗಿದ್ದರು ಎನ್ನುವ ಆಲೋಚನೆಯನ್ನೂ ತಳೆಯುತ್ತಾರೆ. ಹೀಗೆ ಈ ಅವಧಿಯು ಬಿಪನ್ ತಮ್ಮ 1960ರ ದಶಕದ ಮಾಕ್ರ್ಸ್ವಾದೀ ನಿರೂಪಣೆಗಳನ್ನು ಮೀರಿ, ಒಬ್ಬ ಕ್ರಿಟಿಕಲ್ ನ್ಯಾಶನಲಿಸ್ಟ್ ಹಿಸ್ಟೋರಿಯನ್ ಆಗಿ ಗುರುತಿಸಿಕೊಳ್ಳಲು ನಡೆಸಿದ ಅವರ ವಿಸ್ತøತ ಓದು, ಚರ್ಚೆ, ಸಂವಾದ, ವಾಗ್ವಾದ ಮತ್ತು ಪ್ರಕ್ರಿಯೆ ಮುಂತಾದವುಗಳನ್ನೂ ತಿಳಿಸುತ್ತದೆ.ಈ ಅವಧಿಯು ‘ಬಿಪನ್ಚಂದ್ರ ಇನ್ ದಿ ಮೇಕಿಂಗ್’ ನಲ್ಲಿ ಎಷ್ಟು ನಿರ್ಣಾಯಕವಾಗಿತ್ತು ಎನ್ನುವುದನ್ನೂ ಸೂಚಿಸುತ್ತದೆ. ಗಾಂಧೀಜೀ ರೀತಿಯಲ್ಲೇ ನೆಹರೂ ಕೂಡಾ ಮೂಲಭೂತವಾದ ಬದಲಾವಣೆಯನ್ನು ಹೊಂದಿರುವುದನ್ನು ಹಿಸ್ಟಾರಿಕಲ್ ಪರ್ಸ್ಪೆಕ್ಟಿವ್ನಲ್ಲಿ ಬಿಪನ್ ನಿರೂಪಿಸಿ,ನಿರ್ವಹಿಸಿದರು. 1975ರ ನೆಹರೂ ಬಗೆಗಿನ ಬರಹದಲ್ಲಿ, ‘ನೆಹರೂ 1933 ರಿಂದ 1936ರವರೆಗೆ ಮಾಕ್ರ್ಸಿಸ್ಟ್ ರ್ಯಾಡಿಕಲ್ ಆಗಿ ಆತ್ಯಂತಿಕ ಸ್ಥಿತಿ ತಲುಪಿ ಗಾಂಧಿಯನ್ ಚೌಕಟ್ಟುಗಳನ್ನೂ ಕೂಡಾ ಮುರಿದು ಕ್ರಾಂತಿಕಾರಕವಾದ ಸಾಮಥ್ರ್ಯ ಹೊಂದಿದ್ದರು ಎನ್ನುತ್ತಾರೆ7.ಆದರೆ 1936ರ ನಂತರ ನೆಹರೂವಿನ ಮಾಕ್ರ್ಸಿಸ್ಟ್ ರ್ಯಾಡಿಕಲಿಸಂ ನಿಧಾನವಾಗಿ ಕರಗುತ್ತಾ ‘ಮೃದು ಸ್ವರೂಪದ ಫೇಬಿಯನಿಸಂ’ ರೂಪಪಡೆದು ನಿಧಾನವಾಗಿ ಗಾಂಧಿಯ ತಂತ್ರ, ರಣನೀತಿಗಳಿಗೆ ಶರಣಾಯ್ತು ಎಂದಿದ್ದರು.ಆದರೆ 1990ರ ನೆಹರೂ ಹಿಸ್ಟೋರಿಕಲ್ ಪರ್ಸ್ಪೆಕ್ಟಿವ್ನಲ್ಲಿ, ನೆಹರೂ ‘ಸ್ಟಾಲಿನ್ ಮಾಕ್ರ್ಸಿಸಂ’ ಮಾದರಿಯನ್ನು ಒಡೆದು ಬರಬೇಕಾಯ್ತು.ಯಾಕೆಂದರೆ ಆ ಹೊತ್ತಿಗಾಗಲೇ ಸ್ಟಾಲಿನ್ ಮಾಕ್ರ್ಸಿಸಂ ವಿಫಲವಾಗಿ ನೆಹರೂ ಆದಿಯಾಗಿ ಎಲ್ಲರೂ, ಕಾಂಗ್ರೆಸ್ನಲ್ಲಿ ಉಪೇಕ್ಷಿತರಾಗಿದ್ದರು.ಇಂತಹ ಸಂದರ್ಭದಲ್ಲಿ ನೆಹರೂಗೆ, ಗಾಂಧಿಯು ನಡೆಸಿದ ಗ್ರಾಮ್ಶಿಯನ್ ಮಾದರಿಯ ‘ಎ ವಾರ್ ಆಫ್ ಪೊಸಿಶನ್’ ಹಿಡಿಸಿತು.ಕಾಂಗ್ರೆಸ್ ಕೂಡಾ ಒಂದು ರೀತಿ ಬೂಷ್ರ್ವಾತನಗಳನ್ನು ಹೊಂದಿಲ್ಲದಿರುವ ಸಂಸ್ಥೆಯಾಗಿ ಕಂಡಿತು ಮತ್ತು ಈ ಕಾರಣದಿಂದ ನೆಹರೂ, ಗಾಂಧಿ ಬಳಗಕ್ಕೆ ಬಂದರೆಂದು ಬಿಪನ್ ನೆಹರೂ ಬಗೆಗಿನ ತಮ್ಮ ಮೊದಲಿನ ನಿಲುವನ್ನು ಸರಿಪಡಿಸಿಕೊಂಡರು8.ಈ ನಿಲುವಿನ ಬಗ್ಗೆ ತಮ್ಮ ಸಹೋದ್ಯೋಗಿ ಮಿತ್ರ ಎಸ್. ಗೋಪಾಲ್ ಜತೆ ಅಭಿಪ್ರಾಯ ಬೇಧವನ್ನೂ ಹೊಂದಿದ್ದರು9.
ಬಿಪನ್ಚಂದ್ರರ ಬೌದ್ಧಿಕತೆಯಲ್ಲಿನ ಮೂರನೆಯ ಹಂತ, ಅವರು ಕೋಮುವಾದವನ್ನು ಕುರಿತು 1980ರ ನಂತರದಲ್ಲಿ ನಡೆಸಿದ ಬರವಣಿಗೆ ಮತ್ತು ಅದರ ಕ್ರಿಯಾನ್ವಯರೂಪೀ ಹೋರಾಟಗಳಲ್ಲಿ ತೊಡಗಿಕೊಂಡ ಸಂಗತಿಗಳ ಅವಧಿ. ಮುಖ್ಯವಾಗಿ ನ್ಯಾಶನಲಿಸಂ ಆ್ಯಂಡ್ ಕಮ್ಯುನಲಿಸಂ ಇನ್ ಮಾಡರ್ನ್ ಇಂಡಿಯಾ, ಕಮ್ಯುನಲಿಸಂ ಇನ್ ಮಾಡರ್ನ್ ಇಂಡಿಯಾ, ಎಸ್ಸೇಸ್ ಆನ್ ಕಂಟೆಂಪರರಿ ಇಂಡಿಯಾ, ದಿ ರೈಟಿಂಗ್ಸ್ ಆಫ್ ಬಿಪನ್ ಚಂದ್ರ ಈ ಅವಧಿಯಲ್ಲಿ ಬಂದವುಗಳು. ಜೀವಿತದ ಕೊನೆಯ ಅವಧಿಯಲ್ಲಿ ಕೈಗೊಂಡ ಎರಡು ಬಹುಮುಖ್ಯವಾದ ಪ್ರೊಜೆಕ್ಟ್ಗಳೂ, ಒಂದು ತನ್ನ ಆತ್ಮಕಥೆ ಮತ್ತು ಭಗತ್ಸಿಂಗ್ನ ಜೀವನಚರಿತ್ರೆ ಕೂಡಾ ಮಹತ್ವದವು. ಭಗತ್ಸಿಂಗ್ನ ಬಗೆಗೆ ಬರೆದಿರುವ ಕೆಲವು ತುಣುಕುಗಳು ಭಗತ್ಸಿಂಗ್ನ, ‘ವೈ ಐ ಆ್ಯಮ್ ಆ್ಯನ್ ಅತೀಸ್ಟ್’ನ ಪ್ರವೇಶಿಕೆಯ ರೂಪದಲ್ಲಿ ಬಂದಿದೆ.ಭಗತ್ಸಿಂಗ್ನನ್ನೂ ಬಲಪಂಥ ಮತ್ತು ಪಾರ್ಟಿಲೈನ್ ಎಡಪಂಥಗಳು ತಮ್ಮ ಸೊತ್ತು ಎಂದು ಬಿಂಬಿಸಿದ ಸಂದರ್ಭದಲ್ಲಿ ಭಗತ್ಸಿಂಗ್ನು ಬರೆದ ಮತ್ತು ಲಭ್ಯವಾದ ಒಂದೇ ಹಸ್ತಪ್ರತಿಯನ್ನು ಸಂಪಾದಿಸಿ, ಚರಿತ್ರಕಾರನ ಜವಾಬ್ದಾರಿ ಮತ್ತು ಸಂವಾದಗಳಿಗೆ ಒಗ್ಗಿಸಿ ಭಗತ್ಸಿಂಗ್ ಹೀಗಿರಲಿಲ್ಲ ಎಂಬ ಮಹತ್ವದ ಕಥನಕ್ಕೆ ಬರೆದ ಮಹತ್ವದ ಪ್ರವೇಶಿಕೆಯದು9.
ಬಹುಶ: ಸ್ವಾತಂತ್ರ್ಯೋತ್ತರ ಭಾರತದಲ್ಲಿ ಬಿಪನ್ಚಂದ್ರರಷ್ಟು ಅದ್ಭುತವಾಗಿ ಕೋಮುವಾದದ ಬಗ್ಗೆ, ಅದರ ಉಗಮ, ಲಕ್ಷಣ, ಸಾಮಾಜಿಕ ನೆಲೆ, ಸೈದ್ಧಾಂತಿಕ ಅಂಶಗಳು, ಬೆಳವಣಿಗೆಯ ಕಾರಣಗಳನ್ನು ಮತ್ತು ಸ್ವತಂತ್ರಪೂರ್ವ ಸಂದರ್ಭದ ಕೋಮುವಾದವನ್ನು ವಿವಿಧ ಹಂತಗಳಲ್ಲಿ ಗ್ರಹಿಸಿದ ಇನ್ನೊಬ್ಬ ವಿದ್ವಾಂಸನಿಲ್ಲ. ಗ್ಯಾನೇಂದ್ರ ಪಾಂಡೆ10 , ರಣ್ಧೀರ್ಸಿಂಗ್11 ಮುಂತಾದ ಚಿಂತಕರು ಕೋಮುವಾದವನ್ನು ಅರ್ಥೈಸಿಕೊಂಡು ಥಿಯರೈಸ್ ಮಾಡಿದ ಕ್ರಮಕ್ಕಿಂತಲೂ ಹೆಚ್ಚು ವ್ಯಾಪಕತೆ ಮತ್ತು ಸೂಕ್ಷ್ಮತೆಗಳು ಬಿಪನ್ಗಿತ್ತು. ಕೋಮುವಾದವನ್ನು ತಿಳಿಯುವ ಸಂದರ್ಭದಲ್ಲಿ ಬಿಪನ್ ತುಂಬಾ ಪ್ರಮುಖವಾಗುವುದು ಒಂದು ಬಹುಮುಖ್ಯವಾದ ತಾತ್ವಿಕನೆಲೆಯಿಂದ, ಅದೇನೆಂದರೆ, ಮೂಲಭೂತವಾದ ಮತ್ತು ಕೋಮುವಾದದ ನಡುವಿನ ಸರಳ ತಾತ್ವಿಕ ಮತ್ತು ಪರಿಕಲ್ಪನಾತ್ಮಕ ಪೃಥÀಕ್ಕೀಕರಣವನ್ನು ಸಾಧಿಸುವಲ್ಲಿ.ಇದು ಸಾಮಾನ್ಯ ಚಿಂತಕರಿಗೆ, ವಿದ್ವಾಂಸರಿಗೆ ಸಾಧ್ಯವಾಗದು. ಹೆಚ್ಚಿನವರು, ಎಡಪಂಥೀಯರಾಗಲಿ, ಸೋಶಿಯಲಿಸ್ಟ್ರಾಗಿರಲಿ, ಸೆಕ್ಯುಲರಿಸ್ಟ್ ಆಗಿರಲಿ ಬಹುಬೇಗ ಆಕ್ಟಿವಿಸ್ಟ್ ಆಗಿ ಬಿಡುವ, ಯಾವುದೋ ಒಂದು ಅತಿಯನ್ನು ಮುಟ್ಟುವ ಸಂಭವವೇ ಹೆಚ್ಚು. ಆದರೆ ಬಿಪನ್ ಪ್ರಕಾರ, “ಮೂಲಭೂತವಾದವು ಚರಿತ್ರೆ ಅಥವಾ ಗತವನ್ನು ಟಾರ್ಗೆಟ್ ಮಾಡುತ್ತದೆ, ಆದರೆ ಕೋಮುವಾದ ಚರಿತ್ರೆಯನ್ನು ಬಳಸಿಕೊಂಡರೂ, ವೈಭವವನ್ನೂ ನೆನೆದರೂ ಕೂಡಾ ಅವರ ದೃಷ್ಟಿ ನೆಟ್ಟಿರುವುದು ಆಧುನಿಕವಾದ ಜಗತ್ತು ಮತ್ತು ಭವಿಷ್ಯದ ಮೇಲೆ’’12.ಬಿಪನ್ ಹೇಳುವ ಹಾಗೆ, ‘ಭಾರತದಲ್ಲಿ ಕೋಮುವಾದಿಗಳು ಮೂಲಭೂತವಾದಿಗಳಾಗಿರುವುದರ ಜತೆಗೆ, ಧಾರ್ಮಿಕರೂ ಆಗಿರುತ್ತಾರೆ”.ಈ ಒಳನೋಟ ಮೂಲಭೂತವಾದ ಮತ್ತು ಕೋಮುವಾದವೆರಡನ್ನೂ ಒಂದೇ ಎಂದು ಗ್ರಹಿಸುವ ಸಂದರ್ಭದಲ್ಲಿ ಅವುಗಳನ್ನು ಪ್ರತ್ಯೇಕಿಸಿ ನೋಡಲು ಸಹಕರಿಸುತ್ತದೆ.‘ಇಂಡಿಯಾಸ್ ಸ್ಟ್ರಗಲ್ ಫಾರ್ ಇಂಡಿಪೆಂಡೆನ್ಸ್13 ಕೃತಿಯಲ್ಲೂ ಕೂಡಾ ಕೋಮುವಾದದ ಬೆಳವಣಿಗೆಯನ್ನು ಬಿಪನ್ ಮೂರು ಹಂತಗಳಲ್ಲಿ ಗಮನಿಸುತ್ತಾರೆ.ರೈಸ್ ಆ್ಯಂಡ್ ಗ್ರೋತ್, ಲಿಬರಲ್ ಫೇಸ್ ಮತ್ತು ಎಕ್ಸ್ಟ್ರೀಮ್ ಎಂದು. ಕೋಮುವಾದ ಮೂಲಭೂತವಾಗಿ ಒಂದು ಸಿದ್ಧಾಂತವೆನ್ನುವುದೇ ಬಿಪನ್ಚಂದ್ರರ ವಾದ.ಅದೇ ರೀತಿ ಕೋಮುವಾದವೆಂಬ ಸ್ನೋಬಾಲ್ನಂತಹ ಸಂಗತಿ ಹೇಗೆ ಬೇರೆ ಬೇರೆ ಆವರಣ, ಪದರಗಳನ್ನು ಕಟ್ಟಿಕೊಂಡು ‘ಮಹಾ’ ಸ್ವರೂಪವನ್ನು ತಾಳುತ್ತದೆ, ಮತ್ತದು ಒಂದು ಸಂಕೀರ್ಣ ಪ್ರಕ್ರಿಯೆಯಾಗಿ ಹೇಗೆ ಉದ್ಭವಿಸುತ್ತದೆ ಎನ್ನುವುದರ ಸೂಕ್ಷ್ಮ ಮತ್ತು ಸ್ಥೂಲ ಪರಿಶೀಲನೆಯನ್ನು ಬಿಪನ್ ಅಲ್ಲಿ ನಡೆಸಿದ್ದಾರೆ. ಬಾಬ್ರಿ ಮಸೀದಿ ಧ್ವಂಸದ ನಂತರ ರೊಮಿಲಾ ಥಾಪರ್, ಹರ್ಬನ್ಸ್ ಮುಖಿಯಾ ಜತೆ ಸೇರಿ ಬರೆದ ‘ಕಮ್ಯುನಾಲಿಸಮ್ ಎಂಡ್ ದಿ ರೈಟಿಂಗ್ ಆಫ್ ಇಂಡಿಯನ್ ಹಿಸ್ಟರಿ’ ಎನ್ನುವ ಕೃತಿಯಲ್ಲಿನ ‘ಹಿಸ್ಟೋರಿಯನ್ಸ್ ಆಫ್ ಮಾಡರ್ನ್ ಇಂಡಿಯಾ ಎಂಡ್ ಕಮ್ಯುನಾಲಿಸಮ್’ ಎಂಬ ಇವರ ಬರಹ ಚರಿತ್ರೆ ಮತ್ತು ಚರಿತ್ರೆಯನ್ನು ಬಳಸಿ ಕೋಮುವಾದೀಕರಣಗೊಳಿಸುವ ಚರಿತ್ರೆಯ ಕೋಮುವಾದಿ ರಾಜಕಾರಣದ ತರ್ಕ ಮತ್ತು ವ್ಯಾಕರಣವನ್ನೂ ಕೂಡಾ ಅದ್ಭುತವಾಗಿ ವಿವರಿಸುತ್ತದೆ.13
ಬಿಪನ್ರ ಕೃತಿಗಳು
ಮತ್ತು ಅವುಗಳ ತಾತ್ವಿಕತೆಯನ್ನು ಈ ಲೇಖನದಲ್ಲಿ ಈಗಾಗಲೇ ಗಮನಿಸಲಾಗಿದೆ. ಬಿಪನ್ರ ಒಟ್ಟು ವಿದ್ವತ್ತು ಮತ್ತು ಬಿಪನ್ ಎನ್ನುವ ‘ಇಂಟಲೆಕ್ಚುವಲ್ ಸಿಲ್ ಹಟ್’ನ್ನು ಗುರುತಿಸಬೇಕಾದ ಮೂರು ಹಂತಗಳಲ್ಲಿ ಗಮನಿಸಿಯೂ ಆಗಿದೆ. ಬಿಪನ್ರ ಒಟ್ಟು ಬರಹಗಳಲ್ಲಿ ಒಂದು ತುಂಬಾ ಅಕೆಡಮಿಕ್ ಮತ್ತು ಚರ್ಚೆಯನ್ನು ಹುಟ್ಟುಹಾಕಿದ ಮತ್ತು ಈಗಲೂ ಕೂಡಾ ಸಾಕಷ್ಟು ಮಟ್ಟದಲ್ಲಿ ಸಂವಾದವನ್ನು ನಡೆಸುತ್ತಿರುವ ಎರಡು ಕೃತಿಗಳನ್ನು ಚರ್ಚಿಸಿ ಈ
ಬರಹವನ್ನು ಕೊನೆಗೊಳಿಸಬಹುದಾಗಿದೆ. ಅವುಗಳೆಂದರೆ ಒಂದು: ಇಂಡಿಯನ್ ನ್ಯಾಶನಲ್ ಮೂವ್ಮೆಂಟ್ : ದಿ ಲಾಂಗ್ ಟರ್ಮ್ ಡೆನಾಮಿಕ್ಸ್ ಮತ್ತು ಇನ್ನೊಂದು ಆರಂಭದಲ್ಲಿ ಪ್ರಸ್ತಾಪಿಸಿದ ‘ಮಾಡರ್ನ್ ಇಂಡಿಯಾ’ ಕೃತಿ. ಮಾಡರ್ನ್ ಇಂಡಿಯಾ ಕೃತಿಯ ಅನೇಕ ಅಂಶ, ವಿಶ್ಲೇಷಣೆ ಮತ್ತು ವಾದಗಳು ಈಗ ಹೊಸ ಕಾಣ್ಕೆಯನ್ನು ಕಂಡಿವೆಯಾದರೂ ಕೂಡಾ, 1970ರ ಆ ಸಂದರ್ಭದಲ್ಲಿ ಒಬ್ಬ ಚರಿತ್ರಕಾರನ ಜವಾಬ್ದಾರಿ ಮತ್ತು ಹಲವು ಪ್ರಶ್ನೆಗಳನ್ನು ಎತ್ತಿದ ಮಹತ್ವದ ಕೃತಿಯಾಗಿ ಅದು
ಹೇಗೆ ಇಡೀ ಮಾಡರ್ನ್ ಇಂಡಿಯಾದ ಹಿಸ್ಟೋರಿಯೋಗ್ರಫಿಯಲ್ಲಿ ಅಷ್ಟೊಂದು ಮುಖ್ಯವಾಯಿತು ಮತ್ತು ಇನ್ನೊಂದು ಕೃತಿ ‘ಲಾಂಗ್ ಟರ್ಮ್ ಡೈನಾಮಿಕ್ಸ್’ ಹೊಂದಿರುವ ಬೌದ್ಧಿಕ ಮತ್ತು ಇಂಟಲೆಕ್ಚುವಲ್ ಡಿಬೇಟ್ಗಳನ್ನು ಗಮನಿಸಬೇಕಾದ ನೆಲೆಯಲ್ಲಿ ಅವುಗಳನ್ನು ಪ್ರಾತಿನಿಧಿಕವಾಗಿ ನೋಡಬೇಕಾಗಿದೆ.
ಲಾಂಗ್ ಟರ್ಮ್ ಡೈನಾಮಿಕ್ಸ್ ಕೃತಿ ಬಹುಶ: ಆರಂಭದ ರಾಷ್ಟ್ರೀಯವಾದಿಗಳನ್ನು ಅಥವಾ ಮಾಡರೇಟ್ಸ್ಗಳನ್ನು ಅವರುಗಳ ಕುಖ್ಯಾತವಾದ ವಿಶೇಷಣವಾದ ಮೆಂಡಿಕೆಂಟ್ಸ್ (ಯಾಚಕರು) ಎನ್ನುವುದರಿಂದ ವಿಮುಕ್ತಗೊಳಿಸಿದಂತಹ ಕೃತಿಯಾಗಿದೆ. ಇದಲ್ಲದೇ ಪಾರ್ಟಿಲೈನ್ ಅಥವಾ ಸಂಪ್ರದಾಯವಾದೀ ಮಾಕ್ರ್ಸಿಸ್ಟ್ ಬರಹಗಾರರು ಗಾಂಧೀ ಪ್ರಣೀತ ರಾಷ್ಟ್ರೀಯ ಹೋರಾಟವನ್ನು ಬೂಷ್ರ್ವಾ, ವರ್ಗ ಸಹಕಾರೀ, ಅ-ಕ್ರಾಂತಿಕಾರೀ ಮತ್ತು ಕ್ರಾಂತಿಕಾರೀ ವಿರೋಧಿಯೆಂಬ ಅನೇಕ ರೀತಿಯ ಹಣೆಪಟ್ಟಿಗಳಿಂದ ವಿಮೋಚನೆಗೊಳಿಸಿದಂತಹ ಕೃತಿಯಾಗಿದೆ. ಬಿಪನ್ ಈ ಕೃತಿಯಲ್ಲಿ, ಭಾರತದ ರಾಷ್ಟ್ರೀಯ ಹೋರಾಟದ ನ್ಯಾಯಬದ್ಧತೆಯ ಕುರಿತು ಇರುವ
ಅನೇಕ ಪ್ರಶ್ನೆ ಮತ್ತು ನಿಲುವುಗಳನ್ನು ಪ್ರಶ್ನಿಸುತ್ತಾರೆ, ವಿಶೇಷವಾಗಿ ಗಾಂಧಿ ಪ್ರೇರಿತ ಹೋರಾಟವನ್ನು ಕುರಿತಿರುವಂತದ್ದನ್ನು. ಇಂತಹ ನಿರಾಕರಣೆಯು ಸರಿಸುಮಾರು ಎಡಪಂಥೀಯ, ವಸಾಹತುಶಾಹೀ, ನವವಸಾಹತುಶಾಹೀ ಮತ್ತು ಸಬಾಲ್ಟರ್ನ್ ಹಿಸ್ಟೋರಿಯೋಗ್ರಫಿಗೂ ಸರ್ವ ಸಾಮಾನ್ಯವಾದುದಾಗಿದೆ. ಈ ಎಲ್ಲಾ ಗುಂಪುಗಳೂ ಕೂಡಾ ರಾಷ್ಟ್ರೀಯ ಹೋರಾಟವನ್ನು ಅತ್ಯಂತ ಗೌಣವಾಗಿ ಮೇಲ್ವರ್ಗದ, ಹಿಂದೂ, ಬಾಬುಗಳ, ಬೂಷ್ರ್ವಾಗಳ, ಭೂಮಾಲೀಕರ ಹೋರಾಟಗಳೆನ್ನುವಂತೆಯೇ ನಿರೂಪಿಸಲ್ಪಟ್ಟಿವೆ. ಈ ಹೋರಾಟವನ್ನು ಅತ್ಯಂತ ಪ್ರಮುಖವಾಗಿ ವಸಾಹತುಶಾಹೀ ವಿರೋಧೀ ಹೋರಾಟವೆನ್ನುವುದಕ್ಕಿಂತಲೂ, ಅದನ್ನು ಸಂಧಾನೀಯ, ಅಧಿಕಾರ ಹಂಚಿಕೆಯ ಅಥವಾ ಇನ್ನೂ ಅದನ್ನು ತಾತ್ವಿಕವಾಗಿ ಕೆಲವರು ಹೇಳುವ ಹಾಗೆ, ‘ವಸಾಹತುಶಾಹೀ ಜತೆ ಒಂದು ಸಮಾನವಾದ ಸಂವಾದ’ವನ್ನು ಹಂಚಿಕೊಂಡ ಪ್ರಕ್ರಿಯೆ’ಯ ರೂಪದಲ್ಲಿಯೇ ನೋಡಲಾಗಿದೆಯೇ ಹೊರತು ಭಾರತೀಯ ಜನರ ರಾಷ್ಟ್ರೀಯ ಹೋರಾಟವೆಂದಲ್ಲ ಎನ್ನುವುದು ಬಿಪನ್ಚಂದ್ರರ ವಾದ. ಸಬಾಲ್ಟರ್ನ್
ಚರಿತ್ರೆಯಂತೂ ಎಡ ಮತ್ತು ಬಲ ಎಂಬ ಎರಡು ಯೋಚನೆಗಳಿಂದ ದೇಣಿಗೆ ಪಡೆದು ಭಾರತೀಯ ಜನರ ನಿಜವಾದ, ಜನಪ್ರಿಯ ತುಡಿತಗಳನ್ನು ಮತ್ತು ಗಾಂಧೀ ಜತೆಗಿನ ಸಂವೇದನೆಗಳನ್ನು ಹೋರಾಟದಲ್ಲಿ ದಮನಿಸಿದೆ ಎನ್ನುವುದು ಬಿಪನ್ಚಂದ್ರರ ವಾದ14.
ಬಿಪನ್ ಇಂತಹ ಆಪಾದನೆಗಳನ್ನು ಅಲ್ಲಗಳೆಯುತ್ತಾ ಇನ್ನೊಂದು ನೆಲೆಯಲ್ಲಿ, ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ಸಂಘಟಿಸಿದ ರಾಷ್ಟ್ರೀಯ ಹೋರಾಟ ನಿಜವಾದ ರೀತಿಯಲ್ಲಿ ಭಾರತೀಯ ಜನರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹೋರಾಟವೆಂದು ಅಭಿಪ್ರಾಯಿಸುತ್ತಾರೆ.ಅದು ಒಂದು ರೀತಿ ಬ್ರಿಟೀಷ್, ಫ್ರೆಂಚ್, ರಶ್ಯನ್, ಚೈನೀಸ್, ಕ್ಯೂಬನ್ ಮತ್ತು ವಿಯೆಟ್ನಾಮ್ನ ಜನ ಮಾಡಿದ ಕ್ರಾಂತಿಗಳನ್ನು ಮತ್ತು ಅದು ತಂದಂತಹ ರಾಜಿಕ, ಸಾಮಾಜಿಕ ಸ್ಥಿತ್ಯಂತರವನ್ನು ನೆನಪು ಮಾಡುತ್ತದೆಂದೂ ಹೇಳುತ್ತಾರೆ.ಬಿಪನ್ ಪ್ರಕಾರ ಕಾಂಗ್ರೆಸ್ ಮತ್ತು ಗಾಂಧೀ ಪ್ರಣೀತ ರಾಷ್ಟ್ರೀಯ ಚಳುವಳಿಯು ಜಾಗತಿಕ ಚರಿತ್ರೆಯಲ್ಲೇ ಒಂದು ಮೈಲಿಗಲ್ಲು ಮತ್ತು ಮಾದರಿ, ಯಾಕೆಂದರೆÉ ಜಗತ್ತಿನ ಹೋರಾಟದ ಚರಿತ್ರೆಯಲ್ಲೇ ಇದೊಂದೇ ಅರೆ-ಪ್ರಜಾಪ್ರಭುತ್ವೀಯ ಅಥವಾ ಪ್ರಜಾಪ್ರಭುತ್ವೀಯ ಹೋರಾಟದ ಉದಾಹರಣೆಯೆನ್ನುವ ಕಾರಣದಿಂದ.ಭಾರತೀಯ ರಾಷ್ಟ್ರೀಯ ಹೋರಾಟವು, ಅಂಟೋನಿಯೋ ಗ್ರಾಮ್ಶಿ ತಾತ್ವಿಕವಾಗಿ ಪ್ರತಿಪಾದಿಸುವ ‘ಎ ವಾರ್ ಪೊಸಿಶನ್’ ಮಾದರಿಯದೆಂದೂ, ಮತ್ತದು ನಿಧಾನವಾಗಿ ಇಂಪೀರಿಯಲ್ ರಾಜ್ಯದ ಸ್ವರೂಪವನ್ನು ಬದಲಿಸುವಂತೆ ಆಗ್ರಹಿಸಿತೆನ್ನುವುದು ಬಿಪನ್ ವಾದ. ಇದರ ಮಹತ್ವವನ್ನು ಅಷ್ಟು ಸುಲಭವಾಗಿ ತಳ್ಳಿಹಾಕುವಂತಿಲ್ಲ, ಅಳೆಯುವಂತೂ ಇಲ್ಲ. ಗ್ರಾಮ್ಶಿಯೇ ಹೇಳುವ ಹಾಗೆ, ‘ ಪಶ್ಚಿಮದ ದೇಶಗಳಲ್ಲಿ ಸಾಮಾಜಿಕ ಪರಿವರ್ತನೆ, ಬದಲಾವಣೆಗಿರುವ, ಒಂದೇ ಒಂದು ರಣ ನೀತಿ’ ಇದೆಂಬುದನ್ನೂ ಬಿಪನ್ ಅನುಮೋದಿಸುತ್ತಾರೆ15. ಈ ನೆಲೆಯ ಕಾರಣದಿಂದಲೇ ಬಿಪನ್ ಮೊದಲಿನ ತನ್ನ ಮಾಕ್ರ್ಸಿಸ್ಟ್ ಸಂಗಾತಿಗಳಿಗೆ ‘ನೀವು ಬರೀ ಮಾಕ್ರ್ಸ್ನ ವರ್ಗ ನಿಯತಿ ಮತ್ತು ಭೌತವಾದ ನಿಯತಿಯಲ್ಲೇ ಇದ್ದೀರಿ.ಬದಲು ಅಲ್ಲಿಂದ ಬಹಳ ಮುಂದೆ ಸಾಗಿ ಬನ್ನಿ’ ಎಂದು ತಾತ್ವಿಕ ಮತ್ತು ಸೈದ್ಧಾಂತಿಕವಾಗಿ ಪಂಥಾಹ್ವಾನವನ್ನು ನೀಡುತ್ತಾರೆ.
ಬಿಪನ್ ಇಡೀ ರಾಷ್ಟ್ರೀಯ ಹೋರಾಟವನ್ನು ಬರೀ ವಿಮುಕ್ತಿಯ ಹೋರಾಟವೆಂದು ಬಗೆಯದೇ ಅದನ್ನು ‘ಒಂದು ಬಹು ವರ್ಗಗಳು, ಸ್ತರಗಳು ತಮ್ಮ ತಮ್ಮ ನೆಲೆಯ ಸಾಮ್ರಾಜ್ಯಶಾಹೀ ಹಿತಾಸಕ್ತಿಗಳನ್ನು ಮುನ್ನೆಲೆಯಲ್ಲಿಟ್ಟು ವಿರೋಧಿಸಿದಂತಹ ಪ್ರತಿರೋಧವೆನ್ನುತ್ತಾರೆ.ಈ ನೆಲೆಯಲ್ಲಿಯೇ ರಾಷ್ಟ್ರೀಯ ಹೋರಾಟವು ಒಂದು ದೂರಗಾಮೀ, ದೂರ ದೃಷ್ಟಿಯ ಡೈನಾಮಿಕ್ಸ್ ಆಗಿ, ರಣನೀತಿಯಾಗಿ ಗಾಂಧಿಯನ್ ತತ್ವ-ಸೂತ್ರಗಳನ್ನು ಒಗ್ಗೂಡಿಸಿಕೊಂಡಿತು.ಬಿಪನ್ ಅಂತಹ ರಣನೀತಿಯನ್ನು ಎಸ್-ಟಿ-ಎಸ್ ಅಥವಾ ಸ್ಟ್ರಗಲ್-ಟ್ರೂಸ್-ಸ್ಟ್ರಗಲ್ ಎನ್ನುತ್ತಾರೆ. ಅದು ಅತ್ಯಂತ ವೈವಿಧ್ಯದ ಸಮುದಾಯಗಳಿಂದ ಆವೃತ್ತವಾಗಿ ಹೋರಾಟ ಮಾಡಿ, ಸ್ವಲ್ಪ ವಿಶ್ರಾಂತಿ, ಚೈತನ್ಯ ಪಡೆದು ಪುನ: ಹೋರಾಟ ಮಾಡುವ ಮಾದರಿಯಾಗಿತ್ತು. ರೈತರು, ಕಾರ್ಮಿಕರು ಬುಡಕಟ್ಟು ಜನರು ಅತ್ಯಂತ ನಿಯತವಾದ, ತಡೆರಹಿತ ಹೋರಾಟ ಮಾಡಿದರೆ ಅವರ ಜೀವಿತಕ್ಕೆ ಕಷ್ಟವಾಗುವ ಕಾರಣ, ಹೋರಾಟ ನಿಂತು, ಪುನ: ಆರಂಭವಾಗಿ, ಪುನ: ನಿಂತು ಪುನ: ಆರಂಭವಾಗುವಂತಹ ವಾಸ್ತವದ ಮೇಲಿತ್ತು ಮತ್ತು ಅದರ ಜತೆಯಲ್ಲಿ ಗಾಂಧೀಜಿಯ ರಚನಾತ್ಮಕ ಕಾರ್ಯಕ್ರಮಗಳನ್ನೂ ಯೋಜಿಸಿ ಒಂದು ದೀರ್ಘಕಾಲೀನ ದೂರದೃಷ್ಟಿಯ ಹೋರಾಟವಾಗಿತ್ತು ಎನ್ನುವುದು ಬಿಪನ್ಚಂದ್ರ ವಾದ. ಭಾರತೀಯ ಈ ಹೋರಾಟ ‘ಎಸ್-ಟಿ-ಎಸ್’ ತತ್ವವನ್ನು ಆಯ್ಕೆ ಮಾಡಿಕೊಂಡಿದ್ದೇ ಅದು ಬೂಷ್ರ್ವಾ ಆಗಿಲ್ಲದಿರುವ ಕಾರಣದಿಂದ.ಗಾಂದಿಯು ಮಾಡಿದ ü ಕೂಡಾ ಹೋರಾಟದ ತಾತ್ಕಾಲಿಕ ಸ್ಥಾಗಿತ್ಯವÀನ್ನು ಶರಣಾಗತಿಯಲ್ಲವೆಂದೂ, ಅದೊಂದು ತಂತ್ರವೆನ್ನುವುದನ್ನು ಬಿಪನ್ ಪೂರಕವಾಗಿ ಬಳಸಿಕೊಳ್ಳುತ್ತಾರೆ.ಇಂತಹ ಹೋರಾಟ ಅಂತ್ಯಗೊಳ್ಳುವುದು ಭಾರತ ತನ್ನದೇ ಆದ ಸಂವಿಧಾನವನ್ನು ಹೊಂದಿದಾಗ.ಈ ನೆಲೆಯಲ್ಲಿ ಬಿಪನ್ ಕಾಂಗ್ರೆಸ್ ಮತ್ತು ಗಾಂಧಿಯ ಹೋರಾಟದ ನೀತಿಯ ಬಗ್ಗೆ ತಾನು ಮೊದಲು ರೂಪಿಸಿದ ಸೂತ್ರ ಪಿ-ಸಿ-ಪಿ (ಪ್ರೆಶರ್-ಕಾಂಪ್ರಮೈಸ್-ಪ್ರೆಶರ್) ಸೂತ್ರವನ್ನೇ ಅಸಮರ್ಪಕ ಎನ್ನುತ್ತಾರೆ16.
ರಾಷ್ಟ್ರೀಯ ಹೋರಾಟದ ಮಾಧ್ಯಮವಾಗಿ ಅಹಿಂಸೆಯ ಆಯ್ಕೆ ಕೂಡಾ ಯಾವುದೇ ವರ್ಗದ ಜತೆ ಸಂಬಂಧಿತವಾಗಿರದೇ, ಒಂದು ರೀತಿಯ ‘ಯಾಜಮಾನೀಯ ಹೋರಾಟದ (ಹೆಜಿಮೋನಿಕ್ ಸ್ಟ್ರಗಲ್) ಮಾಧ್ಯಮವೇ ಆಗಿದೆ, ಅದು ನೈತಿಕ ಶಕ್ತಿಯ ವಲಯದ ಒಂದು ಹೋರಾಟವಾಗಿದೆ’.ಈ ನೆಲೆಯಲ್ಲಿಯೇ ಅದು ಮಿಲಿಯನ್ಗಟ್ಟಲೆ ಜನರನ್ನೂ ಒಳಗೊಂಡಿತು.ರೈತ, ಬುಡಕಟ್ಟು, ಮಹಿಳೆ, ದಲಿತ, ಮುಸ್ಲಿಂ, ಕಾರ್ಮಿಕ ಎಲ್ಲರೂ ಕತ್ತಿ ಹಿಡಿಯುವುದು ಹೇಗೆ ಸಾಧ್ಯ? ಬದಲು ಈ ಮಾದರಿಯ ಹೋರಾಟ ಗ್ರಾಹ್ಯವಾದುದು ಮತ್ತು ಈ ರಣನೀತಿಯಿಂದಲೇ ದೀರ್ಘಕಾಲದವರೆಗೆ ಮುಂದುವರಿಯಿತು.ಜಾಗತಿಕ ಚರಿತ್ರೆಯ ಯಾವ ಗೆರಿಲ್ಲಾ ಹೋರಾಟವಾಗಲೀ, ಕ್ರಾಂತಿಕಾರೀ ಹೋರಾಟವಾಗಲೀ, ಇಂತಹ ಮಾದರಿಗೆ ಒಗ್ಗುತ್ತಿರಲಿಲ್ಲ. ಈ ಕಾರಣದಿಂದ ಅವುಗಳು ಬೇಗ ವಿಫಲವಾದವೂ ಕೂಡಾ. ಅಹಿಂಸೆಯಾಧಾರಿತವಾದ ಭಾರತೀಯ ರಾಷ್ಟ್ರೀಯ ಹೋರಾಟವು ವಸಾಹತುಶಾಹೀ ಪ್ರಭುತ್ವದಲ್ಲಿ ಉಂಟು ಮಾಡಿದ ದ್ವಂದ್ವದ ರೀತಿಯನ್ನು ಮತ್ತೆಲ್ಲಿ ಕೂಡಾ ಕಾಣಲಾಗದು.ಇಂತಹ ಹೋರಾಟವನ್ನು ಒಂದು ವೇಳೆ ದಮನಿಸಿದರೆ ಪ್ರಭುತ್ವದ ನೈತಿಕ-ಯಾಜಮಾನ್ಯ ವಲಯ ಕುಸಿಯುತ್ತಿತ್ತು.ಇಲ್ಲದಿದ್ದರೆ 1947ರಲ್ಲಿ ನಡೆದ ಹಾಗೆ ರಾಜಕೀಯ-ಯಾಜಮಾನ್ಯ ಕುಸಿಯಬೇಕಾಗಿತ್ತು.ಹೀಗೆ ಬಿಪನ್ ಈ ಮೊದಲಿನ ತಮ್ಮ ಗ್ರಹಿಕೆಗಳನ್ನೂ ಕೂಡಾ ಸರಿಪಡಿಸಿಕೊಂಡ, ಹಳೆಯ ವಾದಗಳನ್ನು ಮುರಿದು ಹೊಸತನ್ನು ಕಟ್ಟಿದಂತಹ ಸಂದರ್ಭ ಈ ಕೃತಿಯ ಮೂಲಕ ಒದಗಿಬಂತು. ಗಾಂಧಿಯನ್ನು ನೋಡುವ ಕ್ರಮದಲ್ಲಿ ಕೂಡಾ ಅಂದರೆ, ಗಾಂಧಿ ಬೂಷ್ರ್ವಾ ಮತ್ತು ಕ್ರಾಂತಿಕಾರಿಗಳಿಂದ ಭಿನ್ನವಾಗಿ ಒಂದು ಬಹುಸ್ತರ, ವರ್ಗದ, ಜನಪ್ರಿಯ, ಮಾಸ್ ಚಳುವಳಿಯನ್ನು ಸೃಷ್ಟಿಸಿದಂತಹ, ಎಲ್ಲರನ್ನು ತಲುಪಿದಂತಹ ಒಬ್ಬ ಅನನ್ಯ, ವಿಶಿಷ್ಠ, ಚತುರ ನಾಯಕನ ನೆಲೆಯಲ್ಲಿ ನೋಡುವ ಕ್ರಮ ಸಾಧ್ಯವಾಯಿತು. ಬಿಪನ್ರ ಇಂತಹ ತಾತ್ವಿಕ ಗ್ರಹಿಕೆ ಮತ್ತು ವಿಶ್ಲೇಷಣೆಯ ಪ್ರಾಯೋಗಿಕ ರೂಪವೋ ಎಂಬಂತೆ ನಾವು ಸಬಾಲ್ಟರ್ನ್ ಚರಿತ್ರಕಾರ ಶಹೀದ್ ಅಮೀನ್ ನಡೆಸಿದ ಅವಧ್ ಪ್ರದೇಶದ ರೈತರ ನಡುವೆ ವೈಯಕ್ತಿಕವಾಗಿ, ಸಂಘಟನಾತ್ಮಕವಾಗಿ ಗಾಂಧಿ ಬೀರಿದ್ದ ಪ್ರಭಾವದÀ ಅಧ್ಯಯನವನ್ನೂ ನೋಡಬಹುದು17.ಗಾಂಧಿ ಬಡವರ, ರೈತರ ಪರವಾಗಿಯೇ ಇದ್ದರು ಆ ಭಾಗದಲ್ಲಿ. ಗಾಂಧಿಯು, ಲೆನಿನ್ ನಿರ್ವಚಿಸಿದ ರಾಷ್ಟ್ರೀಯ ವಿಮುಕ್ತಿಯ ಮೂರು ಲಕ್ಷಣಗಳಾದ ವಸಾಹತುಶಾಹೀ ವಿರೋಧ, ಸಮುದಾಯ ಅಥವಾ ‘ಮಾಸ್’ನ ರಾಜಕೀಕರಣ, ಮತ್ತು ಜನರಲ್ಲಿ ಅರಿವು ಮೂಡಿಸುವ ಹಾಗೂ ಅವರನ್ನು
ಸಂಘಟಿಸುವ ಸಂಗತಿಗಳನ್ನು ಹೊಂದಿದ್ದರು.ತಾತ್ವಿಕವಾಗಿ ಮತ್ತು ಪ್ರಾಯೋಗಿಕವಾಗಿ ಈ ನೆಲೆಯಲ್ಲಿಯೇ, ಗಾಂಧಿಯ ಸೈದ್ಧಾಂತಿಕ ನಿಲುಮೆಗಳಿಂದಲೇನೇ ರಾಷ್ಟ್ರೀಯ ಚಳುವಳಿಯ ಕೇಂದ್ರವಾಗಿ ಸೋಶಿಯಲಿಸ್ಟ್ ಸೈದ್ಧಾಂತಿಕ ಪರಿವರ್ತನೆಯನ್ನು ತಂದರೆನ್ನುವುದನ್ನೂ ಕೂಡಾ ಒಪ್ಪಬಹುದಾಗಿದೆ. ಒಟ್ಟಿನಲ್ಲಿ ಒಂದು ಪ್ರಕ್ರಿಯೆ ಮತ್ತು ದೀರ್ಘಕಾಲೀನ ಚಲನೆಯಂತಿರುವ ರಾಷ್ಟ್ರೀಯ ಹೋರಾಟದ ಅತ್ಯಂತ ಸೂಕ್ಷ್ಮ ಮತ್ತು ಸ್ಥೂಲ ವಿಶ್ಲೇಷಣೆಯನ್ನೂ ಸಹಿತ, ಒಪ್ಪುವಂತೆ ವಿಮರ್ಶಿಸಿದ್ದು ಬಿಪನ್ಚಂದ್ರ ಮತ್ತವರ ಕೃತಿ ‘ಲಾಂಗ್ ಟರ್ಮ್ ಡೈನಾಮಿಕ್ಸ್...’
‘ಮಾಡರ್ನ್ ಇಂಡಿಯಾ’ ಒಂದು ಪಠ್ಯಪುಸ್ತಕ.ಸುಮಾರು 1971ರಲ್ಲಿ ಎನ್.ಸಿ.ಇ,ಆರ್.ಟಿ ಇದನ್ನು ಹನ್ನೆರಡನೆಯ ತರಗತಿಗೆ ಪಠ್ಯವಾಗಿ ರಚಿಸಿದ್ದಂತದ್ದು. ಇದು ಆಧುನಿಕ ಭಾರತದ ಬಗ್ಗೆ ಬರೀ ಪಠ್ಯ ಅಂತ ಪರಿಗಣಿತವಾಗದೇ, ಆ ಹೊತ್ತಿಗೆ ಆಧುನಿಕ ಭಾರತದ ಬಗ್ಗೇನೇ ಒಂದು ರೆಫೆರೆನ್ಸ್ ಪುಸ್ತಕದ ರೀತಿಯಲ್ಲಿ ಇದು ಪರಿಗಣಿತವಾಗಿತ್ತು.ಬರೀ ಅಕಡೆಮಿಕ್ ವಲಯದಲ್ಲಿ ಮಾತ್ರವಲ್ಲದೇ ಯು.ಪಿ.ಎಸ್.ಸಿ ಮತ್ತು ರಾಜ್ಯದ ಪಿ.ಎಸ್.ಸಿ ಗಳು ನಡೆಸುವ ನಾಗರೀಕ ಸೇವಾ ಪರೀಕ್ಷೆಗಳಿಗೂ ಕೂಡಾ ಇದು ಮುಖ್ಯವಾಗಿತ್ತು.ಸುಮಾರು 30 ವರ್ಷಗಳ ಕಾಲ ಪಠ್ಯವಾಗಿದ್ದ ಇದನ್ನು ಎನ್ಡಿಎ ಸರಕಾರ ಹಿಂಪಡೆಯಿತು. ಅನಂತರದಲ್ಲಿ ಇದು ಸಿವಿಲ್ ಸರ್ವೀಸ್ ಪರೀಕ್ಷೆ ತಯಾರಿ ಮಾಡುವವರ ನಡುವೆ ಚಾಲ್ತಿಯಲ್ಲಿತ್ತು. 2000ದ ಹೊತ್ತಿಗೆ ಈ ಪಠ್ಯಪುಸ್ತಕವನ್ನು
ವಾಪಾಸ್ ತೆಗೆದುಕೊಂಡಿದ್ದರೂ ಎನ್.ಸಿ.ಇ.ಆರ್.ಟಿ ಮಾತ್ರ ಸಿವಿಲ್ ಸರ್ವೀಸ್ ತಯಾರಿಗರಿಗಾಗಿಯೇ ಇದರ ಏಳು ಆವೃತ್ತಿಗಳನ್ನು ಹೊರಡಿಸಿತ್ತು ಮತ್ತವು ವಿಶೇಷ ಕಾರ್ಯಕ್ಕೆಂಬ ಸೂಚಿಯನ್ನೂ ಕೂಡಾ ಅಂಟಿಸಿ. ತಾತ್ವಿಕವಾಗಿ ಕೂಡಾ ಮಾಡರ್ನ್ ಇಂಡಿಯಾದ ಬಗ್ಗೆ ಬಂದ ಸುಮಾರು 1989ರಲ್ಲಿನ ಸುಮಿತ್ ಸರ್ಕಾರ್ ಅವರ ‘ಮಾಡರ್ನ್ ಇಂಡಿಯಾ’ ಕೃತಿಯಿಂದ ಕೂಡಾ ಬೇರೆ ಬೇರೆ ನೆಲೆಯಲ್ಲಿ ಮುಖ್ಯವಾಗಿದೆ. ಸುಮಿತ್ ಸರ್ಕಾರ್ ಅವರ ತೀವ್ರ ಮಾಕ್ರ್ಸ್ವಾದೀ ಚೌಕಟ್ಟಿನ ಬರವಣಿಗೆ, ಸೋಶಿಯಲ್ ಹಿಸ್ಟರಿಗೆ ನಿಲುಕದ ಬೇರೆ ಬೇರೆ ರೀತಿಯ ಆಯಾಮಗಳನ್ನು ಪರಿಚಯಿಸಿದ ನೆಲೆಯಲ್ಲಿಯೂ ಕೂಡಾ ಇದು ಮುಖ್ಯವಾಯಿತು.ಸಮಗ್ರ ನೆಲೆಯಲ್ಲಿ ಮಾಡರ್ನ್ ಇಂಡಿಯಾವನ್ನು ಪ್ರತಿನಿಧಿಸುವಂತಹ ಒಂದು ಪಠ್ಯಕ್ಕಿಂತಲೂ ಹೆಚ್ಚು ಮಹತ್ವದ ಕೃತಿ ಮಾಡರ್ನ್ ಇಂಡಿಯಾ ಆಗಿತ್ತು.ಎನ್.ಸಿ.ಇ.ಆರ್.ಟಿ ಗಂತೂ ಕೊನೆಕೊನೆಗೆ ಯು.ಪಿ.ಎಸ್.ಸಿ ಪುಸ್ತಕ ವ್ಯಾಪಾರಿಗಳಿಗೆ ಇದನ್ನ ಪೂರೈಸಿಕೊಳ್ಳಲೂ ಕೂಡಾ ಕಷ್ಠವಾಗಿತ್ತು. ಸುಮಾರು 2008-2009ರ ಹೊತ್ತಿಗೆ ಅದೆಷ್ಟೋ ವಿದ್ಯಾರ್ಥಿಗಳು
ಇದರ ಫೋಟೋ ಕಾಪಿ ಪ್ರತಿಗಾಗಿಯೇ ಹೆಚ್ಚು ಹಣವನ್ನು ವ್ಯಯಿಸುತ್ತಿದ್ದರು. ದೆಹಲಿಯ ವಾಜಿರಾಮ್ ಮತ್ತು ಎ.ಯಲ್.ಯಸ್ ಮುಂತಾದ ಪ್ರಸಿದ್ಧ ಕೋಚಿಂಗ್ ಸಂಸ್ಥೆಗಳ ಪುಸ್ತಕ ಪಟ್ಟಿಯಲ್ಲಿ ಇದು ಮುಂಚೂಣಿಯಲ್ಲಿ ನಿಂತಿತು. ತಾತ್ವಿಕವಾಗಿ ನಾನು ಈಗಾಗಲೇ ಹೇಳಿದ ಹಾಗೆ, ಸಾಂಪ್ರದಾಯಿಕವಾಗಿ ಭಾರತದ ಚರಿತ್ರೆಯ ವಿಭಾಗೀಕರಣಗಳಲ್ಲಿನ, ಮಿಡೀವಲ್ನಿಂದ, ಮಾಡರ್ನ್ಗೆ ಪ್ರವೇಶ ಮಾಡುವ ಕಾಲಘಟ್ಟದ ಸಂಕೀರ್ಣತೆ-ಪ್ರಕ್ರಿಯೆಗಳನ್ನೂ ಕೂಡಾ ಸಮರ್ಥವಾಗಿ ದಾಖಲು ಮಾಡಿ ವಿಶ್ಲೇಷಿಸಿದ ಕ್ರಮದಿಂದಲೂ ಕೂಡಾ ಬಹಳ ಪಾಪುಲ್ಯರ್ (ಜನಪ್ರಿಯ) ಎನ್ನುವ ನೆಲೆಗೆ ಮಾಡರ್ನ್ ಇಂಡಿಯಾ ಕೃತಿ ಬಂದು ನಿಂತಿತು. ಬ್ರಿಟಿಷ್
ಸಾಮ್ರಾಜ್ಯಶಾಹೀ ವ್ಯವಸ್ಥೆಗೆ ಭಾರತ ಹೇಗೆ ಬಲಿಯಾಯ್ತು? ಬಲಿಯಾಗಿಸಲು ಬ್ರಿಟಿಷರು ಬಳಸಿದ ಸಾಧನಗಳ್ಯಾವುವು?, ರಾಷ್ಟ್ರೀಯ ಚಳುವಳಿಯ ಸಂಕೀರ್ಣತೆಗಳೇನು? ವಿವಿಧ ರೀತಿಯ ಚಳುವಳಿಗಳು, ಕ್ರಾಂತಿಕಾರೀ ಭಯೋತ್ಪಾದನೆಯ ತಾತ್ವಿಕತೆ ಇತ್ಯಾದಿ ಅನೇಕ ಅಂಶಗಳಿಂದ ಈ ಕೃತಿಯು ವಿಶಿಷ್ಠವಾಗಿ ನಿಲ್ಲುತ್ತದೆ18.
ಮಾಡರ್ನ್ ಇಂಡಿಯಾ ಕೃತಿ ಮುಖ್ಯವಾಗುವುದು ಅದರ ವಿಸ್ತಾರ ಮತ್ತು ವೈವಿಧ್ಯದ ವಸ್ತು ವಿಷಯದಲ್ಲಿ.ಇದು ಮುಘಲ್ ಪತನದಿಂದಾರಂಭಗೊಳ್ಳುತ್ತದೆ ಮತ್ತು ಆಧುನಿಕ ಭಾರತದ ಪ್ರವೇಶವನ್ನು ಇದು ಸುಲಭವಾಗಿಸುತ್ತದೆ ನಂತರದ ಅಧ್ಯಾಯಗಳಾದ 18ನೆಯ ಶತಮಾನದ ಭಾರತೀಯ ಸಂಸ್ಥಾನಗಳು ಮತ್ತು ಸಮಾಜ ಈ ಕೆಲಸವನ್ನು ಇನ್ನೂ ಕೂಡಾ ಸರಳ ಮತ್ತು ಸುಲಭಗೊಳಿಸುತ್ತದ್ತೆ. ಹೆಚ್ಚಿನ ಅಭ್ಯಾಸಿಗಳಿಗೆ, ಓದುಗರಿಗೆ ವಿಷಯ ಪ್ರವೇಶವೇ ದೊಡ್ಡ ಸಮಸ್ಯೆ. ದೊಡ್ಡ ದೊಡ್ಡ ಸಾಹಿತಿಗಳ ಸಂದರ್ಭದಲ್ಲಿ ಬಿಗಿನರ್ಸ್ಗಳು (ಪ್ರವೇಶ) ಇದ್ದರೂ ಕೂಡಾ, ಆಧುನಿಕ ಭಾರತೀಯ ಚರಿತ್ರೆಗೆ ಇಂಥ ಒಂದು ಪ್ರವೇಶಿಕೆ
ಇರಲಿಲ್ಲ. 1970ರ ದಶಕದಲ್ಲಿ ಈ ಕೆಲಸವನ್ನು ಈ ಕೃತಿ ನಿರ್ವಹಿಸುತ್ತದೆ.ಪ್ರವೇಶ ಸರಿಯಾಗಿ ಆದರೆ ಒಳಗಿನ ಉಳಿದ ವಿಷಯಗಳನ್ನು ಅರಿಯುವುದು ಸುಲಭವಾಗುತ್ತದೆ.ಈ ಕೃತಿಯ ಆರಂಭದ ಅಧ್ಯಾಯಗಳು ಸೇರಿದಂತೆ ಉಳಿದ ಅಧ್ಯಾಯಗಳು ಅಂತಹ ಬಿಗಿನರ್ಸ್ ಸ್ವರೂಪದಲ್ಲಿರುವ ಕಾರಣದಿಂದ ದಾರಿಹೋಕನೂ ಕೂಡಾ ಈ ಕೃತಿಯನ್ನು ಅರಗಿಸಿಕೊಳ್ಳಬಹುದು.ಇದಲ್ಲದೇ ಕೆಲವು ಅತ್ಯಂತ ವಿಶೇಷ ಅಧ್ಯಾಯ, ಉಪ ಅಧ್ಯಾಯಗಳ ಮೂಲಕವೂ ಇದು ಬಹಳ ಮುಖ್ಯವಾಗುತ್ತದೆ.ಇವುಗಳು ಇದರ ಮೂಲಕ ಒಂದು ಪಾನ್ ಇಂಡಿಯನ್
ನೆಲೆಯನ್ನು ಮತ್ತು ಚಾರಿತ್ರಿಕವಾಗಿ
ವಿಕಾಸವಾದಂತಹ ನೇಶನ್ನ ಕಲ್ಪನೆಯನ್ನು ಕೂಡಾ ನಮ್ಮೆದುರು ನಿಲ್ಲುವಂತೆ ಮಾಡುತ್ತದೆ. ಬ್ರಿಟೀಷರು ಸಾಮ್ರಾಜ್ಯ ವಿಸ್ತರಣೆಯಲ್ಲಿ ಬಳಸಿದ ವಿವಿಧ ಸಾಧನಗಳು, ಅವರ ಆರ್ಥಿಕ ನೀತಿ, ಸಾಮಾಜಿಕ ಮತ್ತು ಸಾಂಸ್ಕøತಿಕ ನೀತಿಗಳನ್ನು ವಿಶ್ಲೇಷಿಸುತ್ತದೆ. ಅತ್ಯಂತ ಮುಖ್ಯವಾಗಿ 19ನೆಯ ಶತಕದ
ಸಮಾಜೋ-ಸಾಂಸ್ಕøತಿಕ ಜಾಗೃತಿಯನ್ನು ಮನೋಜ್ಞವಾಗಿ ತೆರೆದಿಡುತ್ತದೆ. ವಿಶೇಷವಾಗಿ ಯಾವ ಅಂಶಗಳ ಮೇಲೆ ಅತ್ಯಂತ ಸಂಕೀರ್ಣ ಮತ್ತು ವೈವಿಧ್ಯಮಯವಾಗಿ ಇದು ಮೂಡಿತು ಎನ್ನುವ ಅರಿಕೆಯ ಕ್ರಮ ಕೂಡಾ ಈ ನಿಟ್ಟಿನಲ್ಲಿ ಬಹಳ ಮಹತ್ವದ್ದಾಗಿ ನಮಗೆ ಗೋಚರವಾಗುತ್ತದೆ.ಇದೇ ಅಧ್ಯಾಯದಲ್ಲಿ ಡೆರಾಜಿಯೋ ಮತ್ತು ತರುಣ ಬಂಗಾಳ ಎಂಬ ಉಪಶೀರ್ಷಿಕೆಯಡಿಯಲ್ಲಿ ಇಡೀ ಬಂಗಾಳವನ್ನು ಪ್ರಭಾವಿಸಿದ ಒಂದು ತಾತ್ವಿಕತೆಯ ಚರ್ಚೆಯನ್ನು ಮತ್ತು ಬಂಗಾಳದ ಸಮಾಜೋ-ಸಾಂಸ್ಕøತಿಕ ಪರಿವೇಷವನ್ನು ಸೃಷ್ಟಿ ಮಾಡುವಲ್ಲಿ ಅದು ನಿರ್ವಹಿಸಿದ ಪಾತ್ರವನ್ನು ಚಿತ್ರಿಸಿದ ರೀತಿಯನ್ನು ನಾವು ಬೇರೆಲ್ಲಿಯೂ ಕೂಡಾ ನೋಡಲಾಗದು.ಈಗ ಬಂದಿರುವ ಪಠ್ಯಗಳು ಮುಖ್ಯವಾಗಿ ಶೇಖರ್ ಬಂಡೋಪಾಧ್ಯಾಯರ ‘ಪ್ಲಾಸಿ ಟು ಪಾರ್ಟಿಶನ್’ ಹೊರತುಪಡಿಸಿ (ಅಲ್ಲಿಯೂ ಕೂಡಾ ಈ ರೀತಿ ಚರ್ಚೆಯಿಲ್ಲ) ಈ ರೀತಿ ಚರ್ಚೆ ಮಾಡಿರುವ ಪುಸ್ತಕಗಳಿಲ್ಲ19.ರಾಜಾರಾಮ್ ಮೋಹನ್ ರಾಯ್ ಎನ್ನುವ ಫಿಲಾಸಫಿ ರೂಪುಗೊಳ್ಳುವ ಹಿಂದಿದ್ದ ಕಾಳಜಿಗಳು ಮತ್ತು ಜರೂರನ್ನು ಕೂಡಾ ಈ ಕೃತಿ ಅತ್ಯಂತ ಮನೋಜ್ಞವಾಗಿ ಚರ್ಚಿಸಿದೆ.20ರ ಶತಕದ ಚಳುವಳಿಗಳು, ಅವುಗಳು ಬೆಳೆದು ಬಂದ ಕಾಲದೇಶಗಳ ವಿದೀರ್ಣತೆಗಳೂ ಕೂಡಾ ಸಶಕ್ತವಾಗಿ ಮೂಡಿವೆ.
ಕೃತಿಯಲ್ಲಿನ ಎರಡನೆಯ ಅಧ್ಯಾಯದಲ್ಲಿ ನಮಗೆ ಅತ್ಯಂತ ಮುಖ್ಯವಾಗುವುದು, ಬಿಪನ್ ಚರ್ಚಿಸುವ ‘ಪ್ರೋಟೋ ಟೈಪ್ ಹದಿನೆಂಟನೆಯ ಶತಕ’ ಎಂಬ ಪರಿಕಲ್ಪನೆಯ ಚರ್ಚೆಗಳು.ಇಡೀ ಭಾರತೀಯ ಚರಿತ್ರೆಯಲ್ಲಿ 18ನೇ ಶತಕವು ಅತ್ತ ಮಿಡೀವಲ್ಗೂ ಸೇರದೆ ಇತ್ತ ಮಾಡರ್ನ್ಗೂ ಸೇರದೆ ತ್ರಿಶಂಕು ಆಗಿದ್ದ ಸಂದರ್ಭದಲ್ಲಿ ಬಿಪನ್ ಸ್ವಲ್ಪಮಟ್ಟಿಗೆ 18ನೇ ಶತಕದ ಸಮಾಜ-ಆರ್ಥಿಕತೆ-ಸಂಸ್ಕøತಿ ಮತ್ತು ರಾಜಕೀಯವನ್ನು ಚರ್ಚಿಸಿರುವುದು ಒಂದು ಲೀನಿಯರ್ ಕಥನದಂತಿದ್ದ ಭಾರತೀಯ ಚರಿತ್ರೆಯಲ್ಲಿ ಅವಿಚ್ಛಿನ್ನತೆಯನ್ನು ಮೂಡಿಸುತ್ತದೆ.ಮೊಘಲ್ ವಂಶದ ಕೊನೆಯ ಚಕ್ರವರ್ತಿ ಸತ್ತ ನಂತರ ಯಾರು?ಏನು? ಹೇಗೆ? ಯಾಕೆ?ಮುಂತಾದ ಪ್ರಶ್ನೆಗಳ ನಿರ್ವಾತವನ್ನು ಇದು ಕೊಂಚ ಶಮನ ಮಾಡುತ್ತದೆ.ಈಗಲೂ ಕೂಡಾ ಈ ಅವಧಿ ಸಂಶೋಧನೆ ಮತ್ತು ಅಧ್ಯಯನಕ್ಕೆ ತುಂಬಾ ಸಮೃದ್ಧವಾದುದಾಗಿದೆ.ಸೀಮಾ ಅಳವಿ, ಮುಝಾಫರ್ ಅಹಮದ್, ಬರ್ಟನ್ಸ್ಟೀನ್ ಮತ್ತು ಇತ್ತೀಚಿಗೆ ಲಕ್ಷ್ಮೀ ಸುಬ್ರಹ್ಮಣ್ಯಮ್ ಹೊರತಂದಿರುವ ಕೆಲವು ಕೃತಿಗಳನ್ನು ಬಿಟ್ಟರೆ ಉಳಿದಂತೆ ಇದರ ಬಗ್ಗೆ ಚರ್ಚೆಯೇ ನಡೆದಿಲ್ಲ ಎನ್ನುವಷ್ಟರ ಮಟ್ಟಿಗೆ ಇದ್ದರೂ ಕೂಡಾ 1980ರ ದಶಕದಲ್ಲಿಯೇ ಇದನ್ನು ಬಿಪನ್ ಚಂದ್ರ,ಚರ್ಚೆಗೈದಿರುವುದು ನಿಜಕ್ಕೂ ಮಹತ್ವಪೂರ್ಣ20.
‘ಇಂಡಿಯಾಸ್ ಸ್ಟ್ರಗಲ್ ಫಾರ್ ಇಂಡಿಪೆಂಡೆನ್ಸ್’ ಕೃತಿಯಲ್ಲಿ ಕೋಮುವಾದದ ಬೆಳವಣಿಗೆಯನ್ನೇ ಮೂರು ಹಂತಗಳಲ್ಲಿ ವಿಮರ್ಶಿಸಿದ್ದರೂ ಕೂಡಾ ಅದರ ಪ್ರೋಟೋ ರೀತಿಯ ಚರ್ಚೆಗಳನ್ನು ಇಲ್ಲಿ ಈ ಕೃತಿಯಲ್ಲಿ ಬಿಪನ್ ತಾರ್ಕಿಕವಾಗಿ ಒಂದು ನೆಲೆಯಲ್ಲಿ ಚರ್ಚಿಸಿರುವುದು ತುಂಬಾ ಚೆನ್ನಾಗಿದೆ.ಬಿಪನ್ ಹೇಳುವ ಹಾಗೆ, ‘ಕೋಮುವಾದ ಎನ್ನುವುದು ಮೂಲಭೂತವಾಗಿ ಒಂದು ಭಾವನೆ. ಕೋಮುವಾದಿ ಗಲಭೆಗಳು ಮಾತ್ರ ಆ ಭಾವನೆಗಳ ಪ್ರಸರಣದ ಪರಿಣಾಮಗಳು.ಕೋಮುವಾದವು ಒಂದು ನಂಬಿಕೆ.ಒಂದು ಗುಂಪಿನ ಜನರು ಒಂದು ನಿರ್ದಿಷ್ಟ ಧರ್ಮವನ್ನು ಅನುಸರಿಸುವುದರಿಂದ ಅದರ ಪರಿಣಾಮವಾಗಿ, ಅವರು ಸಮಾನ ಜಾತೀಯ ಎಂದರೆ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಹಿತಾಸಕ್ತಿಗಳನ್ನೂ ಹೊಂದಿರುತ್ತಾರೆ ಎಂಬ ನಂಬಿಕೆ ಎಂದು ಅದರ ತಾತ್ವಿಕ ಸ್ವರೂಪವನ್ನು ತಾರ್ಕಿಕವಾಗಿ ಪ್ರಕಟಪಡಿಸುತ್ತಾರೆ.ಇದಲ್ಲದೇ ಕೋಮುವಾದದ ಎರಡನೆಯ ಲಕ್ಷಣ ಎಂದರೆ, ‘ಒಂದು ಧರ್ಮದ ಅನುಯಾಯಿಗಳ ಸಾಮಾಜಿಕ-ಆರ್ಥಿಕ ಮತ್ತು ಸಾಮಾಜಿಕ, ಸಾಮುದಾಯಿಕ,ರಾಜಕೀಯ ಆಸಕ್ತಿಗಳು ಭಿನ್ನವಾಗಿದ್ದು ಅದು ವಿರುದ್ಧ ದಿಕ್ಕಿನಲ್ಲಿರುವುದು ಎನ್ನುವುದು.ಇದಲ್ಲದೆ ಮೂರನೆಯ ಭಾವನೆಯಾದ ಭಿನ್ನ ಧರ್ಮದ ಆಸಕ್ತಿಗಳು ಒಂದು ಹಂತದಲ್ಲಿ ಹೊಂದಾಣಿಕೆಯಾಗದೆ ವಿರೋಧ ಮತ್ತು ದ್ವೇಷವನ್ನು ಉಂಟುಮಾಡಿದಾಗ ಕೋಮುವಾದ ತನ್ನ ತೀವ್ರ ಘಟ್ಟವನ್ನು ತಲುಪುತ್ತದೆ ಎಂಬುದು ಬಿಪನ್ ಅಭಿಮತ.ಕೋಮುವಾದದ ಬಗೆಗಿನ ಇಡೀ ಚರ್ಚೆಯನ್ನು ನಿಷ್ಪಕ್ಷಪಾತವಾಗಿ ಥಿಯರಿಟಿಕಲಿ ಗ್ರಹಿಸಿದ್ದು ಮಾತ್ರ ಬಿಪನ್ ಎನ್ನುವುದು ಕೂಡಾ ಮಹತ್ವದ್ದು. ಸಾಮಾನ್ಯವಾಗಿ ಭಾರತದಲ್ಲಿ ಕೋಮುವಾದದ ಚರ್ಚೆಯೆಂದರೆ ಒಂದೋ ಆರ್.ಎಸ್.ಎಸ್.ನ್ನು ನಿಂದಿಸುವುದು/ಅವಹೇಳನ ಮಾಡುವುದು ಇಲ್ಲವೇ ಮುಸ್ಲಿಮ್ ಮೂಲಭೂತವಾದವನ್ನು, ಮುಸ್ಲಿಂ ಬಲಪಂಥೀಯರನ್ನು ಬಯ್ಯುವ ಕ್ರಮದಲ್ಲಿ ಸಮಾಪ್ತಿಯಾಗಿದೆಯೇ ಹೊರತು, ಅದನ್ನು ಒಂದು ವಿದ್ಯಮಾನ, ಅದರಲ್ಲೂ ಸಂಕೀರ್ಣ ವಿದ್ಯಮಾನವಾಗಿ ಗ್ರಹಿಸುವ, ತಾತ್ವಿಕವಾಗಿ ಸ್ವೀಕರಿಸುವ ಕ್ರಮದಲ್ಲಿ ಸಾಗಿಲ್ಲ. ಈ ಕೃತಿಯಲ್ಲಿ ಸ್ವಲ್ಪಮಟ್ಟಿಗೆ ಬಿಪನ್ ಇದನ್ನು ನಿವಾರಿಸಿದ್ದಾರೆ, ತುಸುಮಟ್ಟಿಗೆ ಅದರ ಚರ್ಚೆಯ ಬೀಜಗಳು ಇಲ್ಲಿವೆ.
ಇಡೀ ಪುಸ್ತಕದಲ್ಲಿ ಕೆಲವು ವಿಶೇಷವಾದ ಚಚೆರ್Àಗಳು ಮುಖ್ಯವಾಗಿ ಮಹಲ್ವಾರಿ ಪದ್ಧತಿ, ಸಿಖ್ಖರಲ್ಲಿ ಧರ್ಮಸುಧಾರಣೆ, ಆರ್ಥಿಕ ನೀತಿಯ ವಿಶ್ಲೇಷಣೆ, ಮಹಮ್ಮದ್ ಇಕ್ಬಾಲ್ರಂತಹ ಚರ್ಚೆಯ ವಿಷಯಗಳು ಅನನ್ಯವಾಗಿದೆ.ಕೆಲವು ಪೂರ್ವಗ್ರಹಗಳನ್ನು ಕೂಡಾ ಈ ಪುಸ್ತಕ ನಿವಾರಿಸುತ್ತದೆ.ಆಧುನಿಕ ಚರಿತ್ರಕಾರರು, ಚಿಂತಕರು ಹೇಳುವ, ತಿಲಕರು ಕೂಡಾ ಕೋಮುವಾದದ ಬೆಳವಣಿಗೆಗೆ ತಮ್ಮ ಯೋಗದಾನವನ್ನು ಗಣೇಶ್ ಚತುರ್ಥಿ ಮತ್ತು ಶಿವಾಜೀ ಜಯಂತಿಗಳ ಇಮೇಜ್ಗಳನ್ನು ಬಳಸಿಕೊಳ್ಳುವುದರ ಮೂಲಕ ನೀಡಿದರು ಎನ್ನುವ ಪ್ರಮೇಯಗಳನ್ನೂ ಇದು ಪರೀಕ್ಷಿಸುತ್ತದೆ21.ಬಿಪನ್ ಹೇಳುವ ಪ್ರಕಾರ ಗಾಂಧಿಯನ್ನು ಹೊರತುಪಡಿಸಿದರೆ ಅತ್ಯಂತ ಸಮಗ್ರ ಎನ್ನುವ ನೆಲೆಯ ಸೆಕ್ಯುಲರ್ ದೃಷ್ಟಿ ಇದ್ದಿದ್ದೂ ಕೂಡಾ ತಿ¯ಕ್ರಿಗೆ ಎನ್ನುವುದನ್ನೂ ಅವರ ಮಾತುಗಳಲ್ಲೇ ಹೀಗೆ ಅನಾವರಣಗೊಳಿಸುತ್ತಾರೆ ಮತ್ತು ಅವರು ಹಿಂದೂ-ಮುಸ್ಲಿಂ ಏಕತೆಯ ಪ್ರಬಲ ಹರಿಕಾರ ಆಗಿದ್ದರು ಅನ್ನುವುದೂ ಕೂಡಾ ತಿಳಿಯುತ್ತೆ ಅವುಗಳ ಮೂಲಕ. ತಿಲಕ್ ಲಕ್ನೊ ಒಪ್ಪಂದದ ಸಂದರ್ಭದಲ್ಲಿ ಹೇಳುವುದು ಹೀಗೆ, ‘ಗಣ್ಯರೇ ಕೆಲವರ ಹೇಳಿಕೆಯ ಪ್ರಕಾರ ನಾವು ಹಿಂದೂಗಳು ಮುಸಲ್ಮಾನ ಸಹೋದರರಿಗೆ ಅತಿಯಾಗಿ ಶರಣಾಗಿದ್ದೇವೆ. ನಾವು ಅತಿಯಾಗಿ ಶರಣಾಗುವ ಅವಶ್ಯಕತೆ ಇಲ್ಲ ಎಂದು ನಾನು ಎಲ್ಲ ಹಿಂದೂ ಸಮುದಾಯದ ಭಾವನೆಗಳನ್ನೂ ಪ್ರತಿನಿಧಿಸಿ ಹೇಳುತ್ತಿದ್ದೇನೆ ಎಂದು ನಂಬಿದ್ದೇನೆ. ಸ್ವರಾಜ್ಯದ ಹಕ್ಕನ್ನು ಮುಸಲ್ಮಾನ ಸಮುದಾಯಕ್ಕೆ ಮಾತ್ರ ನೀಡಿದರೂ ನಾನು ಚಿಂತಿಸುವುದಿಲ್ಲ. ಅದನ್ನು ಹಿಂದೂ ಸಮುದಾಯದ ಕೆಳವರ್ಗ ಅಥವಾ ಅತ್ಯಂತ ಕೆಳವರ್ಗದವರಿಗೆ ನೀಡಿದರೂ ನಾನು ಚಿಂತಿಸುವುದಿಲ್ಲ. ನಾವು ಮೂರನೆಯ ವ್ಯಕ್ತಿಯೊಂದಿಗೆ ಹೋರಾಡಬೇಕಾದಾಗ, ನಾವೆಲ್ಲರೂ ಒಂದೇ ವೇದಿಕೆಯ ಮೇಲೆ ಒಗ್ಗಟ್ಟಾಗಿ ನಿಲ್ಲಬೇಕು ಎನ್ನುವುದು ಅತ್ಯಂತ ಮುಖ್ಯವಾದ ವಿಚಾರ. ಯಾವುದೇ ರಾಜಕೀಯ ಗುಂಪಾದರೂ ಜಾತಿ, ಧರ್ಮಗಳನ್ನು ಮೀರಿ ಒಂದಾಗಿ ನಿಲ್ಲಬೇಕು’ ಎಂಬುದಾಗಿ.
1857 ಕ್ರಾಂತಿ ಬಗ್ಗೆ ಬಿಪನ್ ಯೋಚಿಸಿದ ರೀತಿ ಕೂಡಾ ಅತ್ಯಂತ ಮಹತ್ವದ್ದು.ಬಿಪನ್ 1970ರ ದಶಕದಲ್ಲಿ ಬರೆದ ನಂತರ 1857ರ ಬಂಡಾಯದ ಮೇಲೆ ಪುಸ್ತಕಗಟ್ಟಲೆ ಸಾಹಿತ್ಯ ಬಂದಿದೆಯಾದರೂ ಕೂಡಾ ಆ ಹೊತ್ತಿಗೆ ಬಿಪನ್ ಅತ್ಯಂತ ತಾಳ್ಮೆಯಿಂದ, ತುಸು ಸಮಗ್ರವಾಗಿ ಚರ್ಚಿಸಿರುವ ಕೆಲವು ಕ್ರಮ ಅತ್ಯಂತ ಆಕರ್ಷಕವಾಗಿದೆ.ಸಾಂಪ್ರದಾಯಿಕ ಬರಹಗಾರರಿಂದ ಹಿಡಿದು ಮೊನ್ನೆ ಮೊನ್ನೆ 1857ರ ಘಟನೆಗೆ 250 ವರ್ಷ ತುಂಬಿದ ವೇಳೆಯಲ್ಲಿ ಬಂದ ರುದ್ರಾಂಶು ಮುಖರ್ಜಿ, ಬೋರಿಯಾ ಮಜುಂದಾರ್, ಇರ್ಫಾನ್ ಹಬೀಬ್ರ ಕೃತಿ ಮತ್ತು ವಾದಗಳಿಗಿಂತಲೂ ಇದು ಹೆಚ್ಚು ಗಮನಾರ್ಹವಾಗಿದೆ22.ಇರ್ಫಾನ್ ಪ್ರತ್ಯೇಕವಾಗಿ 1857ರ ಬಗ್ಗೆ ತಂದ ಕೃತಿ ಮತ್ತು ಈಗಾಗಲೇ ಅದು ‘ಫ್ರಂಟ್ ಲೈನ್’ ಪತ್ರಿಕೆಯ ಸರಣಿ ಬರಹಗಳಲ್ಲಿ ಒಂದು ನೆಲೆಯ ಆತುರದ ಸಾಮಾನ್ಯೀಕರಣಕ್ಕೊಳÀಪಡಿಸಿದ್ದನ್ನೂ ಕೂಡಾ ಕಾಣಬಹುದು23. ಆದರೆ 1980ರ ಹೊತ್ತಿಗೇನೇ ಬಿಪನ್ ಅತ್ಯಂತ ಜಾಣ್ಮೆ-ಸಹನೆಯಿಂದ ವ್ಯವಹರಿಸಿ1857 ಕ್ರಾಂತಿಯ ಬಗ್ಗೆ ಸಹಜವಾಗಿ ಕೆಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು
ಮತ್ತು ಅದು ಅಂತಿಮವಲ್ಲ, ಚರ್ಚೆಯ ಆರಂಭ ಎಂದು ಹೇಳಿದ ಕ್ರಮ ಕೂಡಾ ಸಾಮಾನ್ಯವಾಗಿ ಒಬ್ಬ ವಿದ್ವಾಂಸನಿಗೆ ಇರಬೇಕಾದ ಜವಾಬ್ದಾರಿ ಮತ್ತು ಎಚ್ಚರ ಕೂಡಾ ಹೌದು ಎನ್ನುವುದನ್ನು ಸೂಚಿಸುವಂತಿದೆ. ಇಡೀ ಘಟನೆಯನ್ನು ನಿರೂಪಿಸಿ ನಿರ್ವಹಿಸುವಲ್ಲಿ ಬಿಪನ್ ಬಳಸುವ ಮೂಲ ಸಾಮಗ್ರಿ-ರೆಫರೆನ್ಸ್ಗಳೂ ಕೂಡಾ ಅತ್ಯಂತ ಆಕರ್ಷಕ. ಉದಾಹರಣೆಗೆ, 1857ರ ಬಗ್ಗೆ ಲಂಡನ್ ಟೈಮ್ಸ್ ಪತ್ರಿಕೆಯ ಭಾರತೀಯ ರಿಪೋರ್ಟರ್ ಡಬ್ಲ್ಯೂ.ಹೆಚ್.ರೆಸೆಲ್,“ಯಾವುದೇ ಸಂದರ್ಭದಲ್ಲಿ ಬಿಳಿ ಮನುಷ್ಯನ ಬಂಡಿಗೆ ಭಾರತೀಯರು ಸ್ನೇಹಪರ ನೋಟವನ್ನೂ ಬೀರಲಿಲ್ಲ. ಓ! ಅವರ ಕಣ್ಣುಗಳ ಭಾಷೆ! ಯಾರನ್ನು ಅನುಮಾನಿಸುವುದು?ಯಾರನ್ನು ತಪ್ಪಾಗಿ ಅರ್ಥೈಸುವುದು?ಇದೊಂದರಿಂದಲೇ ನಾನು ನಮ್ಮ ಜನರ ಬಗ್ಗೆ ಇವರಲ್ಲಿ ಯಾರಿಗೂ ಭಯವೇ ಇಲ್ಲ ಮತ್ತು ಯಾರಿಗೂ ಮೆಚ್ಚುಗೆ ಇಲ್ಲ ಎಂಬುದನ್ನು ಅರ್ಥಮಾಡಿಕೊಂಡೆ”.ಇಂತಹ ಒಂದು ಸಾಕ್ಶ್ಯದ ಬಳಕೆ,ಪರಂಪರೆ, ಶ್ರಮವೇ ಇಂದಿಲ್ಲ. ಚರಿತ್ರಕಾರನಿಗೆ ಇರಬೇಕಾದ ಕನಿಷ್ಠ ಅರ್ಹತೆಯಿದು.ಸುಸಂಗತತೆ ಮತ್ತು ವಾದರಚನೆಯ ಕ್ರಮ ಕೂಡಾ ಹೌದಿದು.
1857ರ ಬಂಡಾಯದ ಸಂದರ್ಭದಲ್ಲಿ ಉಲ್ಲೇಖವಾಗುವ ಸಂಗತಿಗಳಲ್ಲಿ ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಕೂಡಾ ಒಬ್ಬಳು. ಹೆಚ್ಚಿನ ಕೃತಿಗಳಲ್ಲಿ ಅವಳು ಪುರುಷ-ಸಿಂಹೆಯಂತಲೋ,ಪರಮವೀರಾಗ್ರಣಿಯಂತಲೋ ಬಿಂಬಿತಗೊಂಡಿರುವುದು ಕೂಡಾ ನಮ್ಮ ಗಮನಕ್ಕೆ ಬಂದಿರುವ ಸತ್ಯ. ಅಂತಹ ಲಕ್ಷ್ಮೀಬಾಯಿಯ ಬಗ್ಗೆ ಪಾಪ್ಯುಲರ್ ಅಲ್ಲದ ಒಂದು ಸಂಕೀರ್ಣವಾದ ನೆಲೆಯಲ್ಲಿ ಬಂದಿರುವ ಉಲ್ಲೇಖ ಕೂಡಾ ನಮಗೆ ಬೇರೆಲ್ಲಿಯೂ ಸಿಗುವ ಸಾಧ್ಯತೆಗಳು ಕಡಿಮೆ.ಇಂತಹ ರಾಣಿ, ಕುಪಿತ ರಾಣಿಯಾಗುವ ಹಿಂದೆ ಇದ್ದ ವಿನ್ಯಾಸಗಳನ್ನು, ಭೌತವಾದೀ ಅಹವಾಲು ಆಗ್ರಹಗಳನ್ನೂ ಕೂಡಾ ಬಿಪನ್ ಅತ್ಯಂತ ಚೆನ್ನಾಗಿ ವಿಶದಪಡಿಸುತ್ತಾರೆÉ. ಪ್ರಸಕ್ತ ಸಂದರ್ಭದಲ್ಲಂತು ಝಾನ್ಸಿರಾಣಿ, ಒಬ್ಬಳು ‘ಹಿಂದೂ-ಹಿಂದುತ್ವ’ದ ಇಮೇಜರಿಯ ಜತೆ ಇಡೀ ದೇಶದಲ್ಲಿ ಬಲವಂತವಾಗಿ ಚರ್ಚೆಯಾಗಿರುವ ಸಂದರ್ಭದಲ್ಲಿ,ಬಲಪಂಥೀಯ ಕಲ್ಚರಲ್ ಅಪ್ರಾಪ್ರಿಯೇಶನ್ನ ಭಾಗವಾಗಿರುವ ಸಂದರ್ಭದಲ್ಲಿ ರಾಣಿಯು ಬರೀ ಹಿಂದುವಾಗಿರಲಿಲ್ಲ ಬದಲು ಒಬ್ಬಳು ಮನುಷ್ಯೆಯಾಗಿದ್ದಳು ಮತ್ತು ಅವಳ ಸೈನ್ಯದ 90% ಸೈನಿಕರು ಅ¥sóÀ್ಘನ್ ಮುಸ್ಲಿಮರಾಗಿದ್ದರು ಎನ್ನುವ ಅಂಶವನ್ನು ಕೂಡಾ ಮನದಟ್ಟು ಮಾಡಿಸುತ್ತಾರೆ. ಇದನ್ನು ಸೆಕ್ಯುಲರ್ ಅನ್ನುವ ಕಾರ್ಯ ಸೂಚಿಯ ಜತೆ ಗುರುತಿಸುವುದಕ್ಕಿಂತಲೂ ಕೂಡಾ ಅತ್ಯಂತ ಸರಳ-ಸಹಜ ಸಮಕಾಲೀನ ಸತ್ಯವೆಂದೇ ಬಗೆಯುವುದು ಉತ್ತಮ.ಇಡೀ ಪಠ್ಯದಲ್ಲಿ ಒದಗಿ ಬರುವ ಈ ರೀತಿಯ ನಿರೂಪಣೆ ಎಲ್ಲಿಯೂ ಕೂಡಾ ನಮಗೆ ಕೃತಕವೆನ್ನಿಸದೂ ಕೂಡಾ24.
ಹುಡುಗರು ಎಲ್ಲಾ ಕಡೆ ಹುಡುಗರು ಎನ್ನುವ ರೀತಿಯಲ್ಲೇ ಇಂಪೀರಿಯಲಿಸಮ್ ಕೂಡಾ. ಅದು ಕಾಲ, ದೇಶ, ಭೂಗೋಳವನ್ನು ಮೀರಿ ಏಕಾಕೃತಿಯ ಸ್ವರೂಪ ರಚನೆಯನ್ನು ಹೊಂದಿರುವಂತದ್ದು. ಇಷ್ಟು ಆರಂಭದ ಕೃತಿಯಲ್ಲೇ ಇಮ್ಯಾನ್ಯುವಲ್ ವ್ಯಾಲೆಸ್ಟೀನ್ ನಿಂದ ಹಿಡಿದು ನೋಮ್ ಚಾಮ್ಸ್ಕಿಯವರೆಗೆ ಹರಡಿದ ಮಾಡರ್ನ್ ವಲ್ರ್ಡ್ ಸಿಸ್ಟಮ್ ಮತ್ತು ಇಂಪೀರಿಯಲಿಸಮ್ನ ಚರ್ಚೆ ಮತ್ತು ಸದ್ಯದ ಮಾಡರ್ನ್ ವಲ್ರ್ಡ್ ಸಿಸ್ಟಮ್ನಲ್ಲಿ
ಅಮೇರಿಕಾ ಅನ್ವಯ ಮಾಡುತ್ತಿರುವ ನಿಯೋ ಇಂಪೀರಿಯಲಿಸಮ್ ಮತ್ತು ಅಮೇರಿಕಾದ ಚಾರಿತ್ರಿಕ ಚಲನೆಯ ಒಂದು ಘಟ್ಟವಾಗಿ ದಾಖಲಾಗಿರುವ ವೆಸ್ಟ್ವರ್ಡ್ ಎಕ್ಸ್ಪಾನ್ಶನ್ ಕೂಡಾ ಒಂದು ನೆಲೆಯಲ್ಲಿ ಬ್ರಿಟನ್ ಅನುಸರಿಸಿದ ಇಂಪೀರಿಯಲಿಸಮ್ನ ಚೌಕಟ್ಟಿನಲ್ಲೇ ಗ್ರಹಿಸುವುದು ಸಾಧ್ಯವಾಗುತ್ತದೆ ಎಂಬ ಯೋಚನೆಯನ್ನೂ ಬಿಪನ್ ಈ ಕೃತಿಯಲ್ಲಿ ಹರಿಯಬಿಡುತ್ತಾರೆ. ಇಡೀ ಸಾಮ್ರಾಜ್ಯಶಾಹಿಯ ಕೃತಿ (ಕೆಲಸ) ಏಕಸ್ವಾಮ್ಯ (ಹೆಜಿಮನಿ) ಮತ್ತು ಏಕಸ್ವಾಮ್ಯಕ್ಕೊಳಪಡಿಸಿದ ಸಮುದಾಯಗಳ ಸಮಾಜ, ಸಂಸ್ಕøತಿ ಮತ್ತು ವೈವಿಧ್ಯದ ವ್ಯವಸ್ಥೆಗಳ ನಾಶವೆನ್ನುತ್ತಾ, ಇದಕ್ಕೆ ರೂಪಕವಾಗಿ 1830ರ ದಶಕದ ಬ್ರಿಟಿಷ್-ಅಫ್ಘನ್ ಸರಣಿಯುದ್ಧಗಳು ಮತ್ತು ರಾಜಕಾರಣಗಳನ್ನು ಅವರು ಸಾಕ್ಷ್ಯವಾಗಿ ಕೊಡುತ್ತಾರೆ.
1857ರ ನಂತರದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಣೆಗಳು ಎಂಬ ಚರ್ಚೆ ಕೂಡಾ ಅತ್ಯಂತ ಗಮನಾರ್ಹವಾಗಿದೆ. ಈ ಸಂದರ್ಭದಲ್ಲಿ ಬರುವ ವಿವೇಕಾನಂದರ ಚರ್ಚೆ, ಈಗ 150ನೇ ಜನ್ಮದಿನವನ್ನು ಕಂಡ ಸಂದರ್ಭದ ಆಚರಣೆ, ವಿಜೃಂಭಣೆ, ಮೂಗಿನ ನೇರಕ್ಕೆ, ತಮ್ಮ ಗುಂಪಿನ ನೇರಕ್ಕೆ ಉಪಯೋಗಿಸಿ ಬಳಸುವ ಸಂದರ್ಭ ಹಾಗೂ ಜಾರ್ಗನ್ ಪದಾವಳಿಗಳಿಂದ ಆವೃತ್ತವಾದ ಬಳಸುಕೊಳ್ಳುವಿಕೆಯ ಪ್ರಕ್ರಿಯೆಯ ಸಂಕೀರ್ಣತೆ ಮತ್ತು ಅಪಾಯವನ್ನೂ ಕೂಡಾ ನಮ್ಮೆದುರು ಬಿಪನ್ ಚರ್ಚೆ ಇದಿರಾಗಿಸುತ್ತದೆ25. ವಿವೇಕಾನಂದರ ಕನಸು, ಮನಸು, ಆಶಂiÀÀುವು ವಿಚ್ಚಿದ್ರ, ಬಡ, ಗುಡಿಸಲಿನ ತಿಪ್ಪೆ ಗುಂಡಿಯ, ಕೃಷಕೃಷಿಕನ, ದುರ್ಬಲ ದೇಹದವರ, ಸುಕ್ಕುಗಟ್ಟಿದ
ವೃದ್ಧರ, ಚಿಂದಿ ಕಂಬಳಿ ಹೊದ್ದ ದಲಿತರನ್ನು ಸೂತ್ರೀಕರಿಸಿತ್ತೇ ಹೊರತು ಶೈನಿಂಗ್ ಭಾರತವನ್ನಲ್ಲ, ಅಭಿವೃದ್ಧಿ ಎಂಬ ಮನಮೋಹನ್ಸಿಂಗ್ರ ಮತ್ತು ಮೋದಿಯವರನಾಯಕತ್ವದ ಭಾರತವನ್ನಲ್ಲ. ಒರಿಸ್ಸಾದಂತಹ ರಾಜ್ಯದಲ್ಲಿ ಸಾಮಾನ್ಯ ಜನ ಮೂರು ಹೊತ್ತಿನಲ್ಲಿ ಒಂದು ಹೊತ್ತಿನ ಗಂಜಿಯನ್ನು ಪಡೆಯದಿದ್ದಂತಹ ಸಂದರ್ಭದಲ್ಲಿ ಸಾಂಸ್ಕøತಿಕ ರಾಷ್ಟ್ರೀಯವಾದ ಅಥವಾ ಹಿಂದುತ್ವವೆಂಬ ಪರಮೌಷಧಿಯೇ ಇದನ್ನು ಪರಿಹರಿಸಬಲ್ಲದು ಮತ್ತು ವಿವೇಕಾನಂದರು ಇದರ ಉಗ್ರ ಪ್ರತಿಪಾದಕರಾಗಿದ್ದರು ಎಂದು ಬಿಂಬಿಸುವವರ ತರ್ಕದ ಬೆನ್ನನ್ನೇ ಕತ್ತರಿಸುವ ಹಾಗೆ ಬಿಪನ್ ವಿವೇಕಾನಂದರನ್ನು ವಿಶ್ಲೇಷಿಸಿದ್ದು ಅವರ ಮಾತುಗಳ ಮೂಲಕ ಹೀಗೆ, ‘ಚಿಂದಿಯಾದ ಕಂಬಳಿಗಳನ್ನು ಹೊದ್ದು, ಅಲ್ಲಿಂದಿಲ್ಲಿಗೆ ಬಡಕಲು ದೇಹ ಹೊತ್ತು ಓಡಾಡುವ, ನೂರು ವರ್ಷಗಳಿಗೂ ಹೆಚ್ಚು ಅವಧಿಯ ನಿರಾಶೆ ಮತ್ತು ಬಡತನದಿಂದ ಸುಕ್ಕುಗಟ್ಟಿದ ಮುಖದ, ತರುಣರು ಮತ್ತು ವೃದ್ಧರು; ಎಲ್ಲೆಲ್ಲಿಯೂ ಸಾಮಾನ್ಯವಾಗಿ ಕಾಣುವ ಹಸುಗಳು, ಎತ್ತುಗಳು, ಕೋಣಗಳು.ಓ, ಅವರ ಕಣ್ಣುಗಳಲ್ಲಿಯೂ ಅದೇ ಖಿನ್ನತೆ, ಅದೇ ದುರ್ಬಲ ದೇಹ, ಹಾದಿಬದಿಯ ತಿಪ್ಪೆ, ಕೊಳಕು ಇದು ವರ್ತಮಾನದ ನಮ್ಮ ಭಾರತ! ಅರಮನೆಗಳ ಪಕ್ಕದ ಮುರಿದುಬಿದ್ದ ಗುಡಿಸಲುಗಳು, ದೇವಸ್ಥಾನಗಳ ಸಮೀಪದಲ್ಲೇ ತಿಪ್ಪೆಗುಂಡಿಗಳು.ನಡುವಿಗೆ ತುಂಡುಬಟ್ಟೆ ಉಟ್ಟ ಸನ್ಯಾಸಿ, ಆಡಂಬರದ ಉಡುಪು ಧರಿಸಿದವರ ಪಕ್ಕದಲ್ಲೇ ನಡೆಯುವ ಹಸಿವಿನ ಬಳಲಿಕೆಯಿಂದ ಕಾಂತಿ ಕಳೆದುಕೊಂಡ ಮರುಕದ ಕಣ್ಣುಗಳ ನೋಟದ ಬದಿಯಲ್ಲೇ ಚೆನ್ನಾಗಿ ತಿಂದು ಕೊಬ್ಬಿದ ವ್ಯಕ್ತಿ-ಇದು ನಮ್ಮ ಜನ್ಮಭೂಮಿ! ಹಸಿವು, ಅರೆ ಹಸಿವು, ಆಗಾಗ್ಗೆ ತನ್ನ ದುರಂತ ನರ್ತನವನ್ನು ಮಾಡುವ ಮರಣಸದೃಶವಾದ ಕ್ಷಾಮ, ನೋಡಲು ಮಾತ್ರ ಮನುಷ್ಯರಂತೆ ಕಾಣುವ ಮೂರುನೂರು ದಶಲಕ್ಷ ಆತ್ಮಗಳ ಮೇಳ; ತಮ್ಮದೇ ಜನರಿಂದ ಮತ್ತು ವಿದೇಶೀ ರಾಷ್ಟ್ರಗಳಿಂದ ಕೆಳಗೆ ತುಳಿಯಲ್ಪಟ್ಟು ಜೀವ ಕಳೆದುಕೊಂಡ, ಯಾವುದೇ ಭರವಸೆ ಇಲ್ಲದೆ, ಯಾವುದೇ ಭೂತಕಾಲವಿಲ್ಲದೆ, ಯಾವುದೇ ಭವಿಷ್ಯವಿಲ್ಲದೆ, ಹಗೆ ಸಾಧನೆಯ ಸ್ವಭಾವಕ್ಕೆ ಸಿದ್ಧಗೊಂಡ ಗುಲಾಮನಾಗಿ, ತಮ್ಮ ಜೊತೆಯ ಜನರಿಗೇ ಹೊರಲಾರದ ಹೊರೆಯಾದ, ಬಲಿಷ್ಠರ ಪಾದಗಳ ಧೂಳನ್ನು ನೆಕ್ಕುತ್ತಾ, ಆದರೂ ದುರ್ಬಲರಾದವರಿಗೆ, ಸಾವಿನ ಏಟನ್ನು ಕೊಡುವ; ಪೂರ್ಣ ವಿಕಾರವಾದ ದುರ್ಬಲರಾದವರಿಗೆ ಮತ್ತು ಭವಿಷ್ಯದ ಬಗ್ಗೆ ಭರವಸೆಯೇ ಇಲ್ಲದವರಿಗೆ ಸಹಜವಾಗಿ ಬರುವ ಪೈಶಾಚಿಕ ಮೂಢನಂಬಿಕೆಯ, ತಮ್ಮ ಬೆನ್ನುಮೂಳೆಯಂತೆಯೇ ಯಾವುದೇ ಮಾದರಿಯ ನೈತಿಕತೆಯೂ ಇಲ್ಲದ, ಭಾರತದ ದೇಹದ ಮೇಲೆ ಹೇನಿನಂತೆ ಕೂಡಿರುವ, ಕೊಳೆತು ನಾರಿ ವಾಸನೆ ಬಂದ ಶವದ ಮೇಲಿನ ಹುಳುಗಳ ಹಾಗೆ, ಮೂರುನೂರು ದಶಲಕ್ಷ ಆತ್ಮಗಳು, ಇದು ಸ್ವಾಭಾವಿಕವಾಗಿ ಇಂಗ್ಲೀಷ್ ಅಧಿಕಾರಿಗಳ ಗಮನಕ್ಕೆ ಬರಬೇಕಾದ, ನಮಗೆ ಸಂಬಂಧಿಸಿದ ಚಿತ್ರ”26.
ವಿವೇಕಾನಂದರ ಈ ಮೇಲಿನ ಹೇಳಿಕೆ ಚಾರಿತ್ರಿಕ ಸಂದರ್ಭದಲ್ಲಿನ 80% ಅಂಶಗಳು ಈಗಿನ ನವ ಉದಾರವಾದೀ ಭಾರತಕ್ಕೆ ಅನ್ವಯವಾಗುತ್ತದೆ.ಅದು ವಿವೇಕಾನಂದ ಪ್ರತಿನಿಧಿಸಿದ ಭಾರತ ಕೂಡಾ ಹೌದು.ಅವರು ಅಂಬಾನಿಯನ್ನು ಪ್ರತಿನಿಧಿಸದೇ ಬಡವ ಬೋರೆಗೌಡನನ್ನು ಪ್ರತಿನಿಧಿಸಿದರು.ಹೀಗೆ ಅನೇಕ ವಿಷಯಗಳನ್ನು ಬಿಪನ್ ಚಂದ್ರ ಈ ಕೃತಿಯಲ್ಲಿ ಪ್ರಸ್ತಾಪಿಸುತ್ತಾರೆ.
ಬಿಪನ್ ಮೇಲೆ ಬಂದಿರುವ ಒಂದು ಮುಖ್ಯವಾದ ಟೀಕೆ ಎಂದರೆ ಅವರು
ಕಾಂಗ್ರೆಸ್ ಹಿಸ್ಟೋರಿಯನ್ ಎಂಬುದಾಗಿ.ಅದು ವಿಶೇಷವಾಗಿ ಲಾಂಗ್ ಟರ್ಮ್ ಡೈನಾಮಿಕ್ಸ್, ಇಂಡಿಯಾಸ್ ಸ್ಟ್ರಗಲ್ ಫಾರ್ ಇಂಡಿಪೆಂಡೆನ್ಸ್ ಮತ್ತು ಇಂಡಿಯಾ ಆಫ್ಟರ್ ಇಂಡಿಪೆಂಡೆನ್ಸ್ ಕೃತಿಗಳ ಕಾರಣದಿಂದ.ಲಾಂಗ್ ಟರ್ಮ್ ಡೈನಾಮಿಕ್ಸ್ನಲ್ಲಿ ಬಿಪನ್ ಕಾಂಗ್ರೆಸ್ ಅನ್ನು ಕೇಂದ್ರಕ್ಕೆ ತರುವುದು ಚಾರಿತ್ರಿಕ ಸತ್ಯ.ಅದನ್ನು ಹೇಗೆ ಮರೆಮಾಚಲು ಸಾಧ್ಯ.ತಾತ್ವಿಕವಾಗಿ ಮತ್ತು ಪ್ರಾಯೋಗಿಕವಾಗಿ ಸ್ವಾತಂತ್ರ್ಯ ಹೋರಾಟದ ಕೇಂದ್ರ ಗಾಂಧಿ ಮತ್ತು ಕಾಂಗ್ರೆಸ್ಸೇ ಆಗಿದೆ.ಅದನ್ನು ಪೂರ್ವಗ್ರಹವಿಲ್ಲದೆ
ಗುರುತಿಸುವ ಮನಸ್ಸು ಬೇಕಷ್ಟೇ. ಬಿಪನ್ ಸಮಕಾಲೀನ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತಾಡಿದ್ದಲ್ಲ ಬದಲು ಕಾಂಗ್ರೆಸ್ ಎಂಬ ಚಾರಿತ್ರಿಕ ವಿದ್ಯಮಾನವನ್ನು ಕುರಿತು ಚರ್ಚಿಸಿದ್ದು ಎಂಬುದನ್ನು ಗಮನಿಸಬೇಕಾಗಿದೆ.ಬಿಪನ್ಗೆ ಕಾಂಗ್ರೆಸ್ ಒಂದು ರಾಜಕೀಯ ಪಕ್ಷವಾಗಿ ಕಾಣಲಿಲ್ಲ, ಬದಲಾಗಿ ಅದೊಂದು ಜನಾಂದೋಲನವಾಗಿ ಕಂಡಿತ್ತು.ಇಂಡಿಯಾ ಆಫ್ಟರ್ ಇಂಡಿಪೆಂಡೆನ್ಸ್ ಕೃತಿಯಲ್ಲಿ ಬಿಪನ್ ಅತೀ ಹೆಚ್ಚು ಅಧ್ಯಾಯ ಮತ್ತು ಪುಟಗಳನ್ನು ಕಾಂಗ್ರೆಸ್ಗೆ ಕೊಟ್ಟರು ಎನ್ನುವ ಇನ್ನೊಂದು ವಾದವಿದೆ.ಆದರೆ ಸ್ವತಂತ್ರ ಭಾರತದಲ್ಲಿ ಅತ್ಯಂತ ಹೆಚ್ಚು ಸುಮಾರು 80 ಪ್ರತಿಶತ ಕಾಲ ಆಡಳಿತ ಮಾಡಿದ್ದು ಕಾಂಗ್ರೆಸ್,ಇದೂ ಕೂಡಾ ಚಾರಿತ್ರಿಕ ಸತ್ಯ.ಹೀಗಿರುವಾಗ ಸಹಜವಾಗಿ ಯಾರೂ ಕೂಡಾ ಅದೇ ರೀತಿ ಪ್ರತಿನಿಧೀಕರಿಸಬೇಕಾಗಿ ಬಂದೇ ಬರುತ್ತದೆ.ಆದರೆ ಕಾಂಗ್ರೆಸ್ ನೀತಿಗಳ ಬಗ್ಗೆ ಬಿಪನ್ ಯಾವ ರೀತಿ ಅಭಿಪ್ರಾಯ ಹೊಂದಿದ್ದರು ಅನ್ನುವುದು ಮುಖ್ಯವಾಗುತ್ತದೆ ಅಷ್ಟೇ.ಬಿಪನ್ಗೆ ಇಂದಿರಾ ಗಾಂಧಿ ಮತ್ತು ಎಮರ್ಜೆನ್ಸಿಯ ಬಗ್ಗೆ ತುಂಬಾ ವಿಭಿನ್ನವಾದ ನಿಲುವಿತ್ತು.ಬಿಪನ್ ಪ್ರಕಾರ ಇಂದಿರಾ ಗಾಂಧಿ ಎಮರ್ಜೆನ್ಸಿ ಘೋಷಣೆ ಮಾಡಿದ್ದು ಕೂಡಾ ನ್ಯಾಯ ಸಮ್ಮತವೇ ಆಗಿತ್ತು.ಯಾಕೆಂದರೆ ಜೆ.ಪಿ ಬಳಗ ಕೂಡಾ ಅತ್ಯಂತ ಆದರ್ಶ ಎನ್ನುವ ಪ್ರಜಾತಾಂತ್ರಿಕ ಮಾರ್ಗದಲ್ಲಿ ಆಕೆಯ ಜತೆ ವ್ಯವಹರಿಸಲಿಲ್ಲ.ಜೆ.ಪಿ ಬಳಗ ಸುಪ್ರೀಮ್ ಕೋರ್ಟ್ಗೆ ತೆರಳಬಹುದಿತ್ತು,ಆದರೆ ಅವರು ಹಾಗೆ ಮಾಡಲಿಲ್ಲ.ಜೆ.ಪಿ ಬಳಗ ಇಂದಿರಾ ಮನೆಯ ಮೇಲೆ ಕಲ್ಲನ್ನೂ ತೂರಿತು,ಹಿಂಸೆಗೂ ಇಳಿಯಿತು.ಒಂದು ಪ್ರಜಾಪ್ರಭುತ್ವೀಯ ಸಂವಾದವೇ ಪ್ರಜಾಪ್ರಭುತ್ವದ ನಿಜವಾದ ಸೌಂದರ್ಯ.ಆದರೆ ಜೆ.ಪಿ ಬಳಗ ನಡೆಸಿದ ಅಂತಹ ಚಟುವಟಿಕೆ ಕೂಡಾ ಪ್ರಜಾಪ್ರಭುತ್ವದ ನಿಜವಾದ ಲಕ್ಷಣವಲ್ಲ,ಮುಳ್ಳು ಮುಳ್ಳನ್ನೇ ಸೃಷ್ಠಿಸುತ್ತದೆಯೇ ಹೊರತು ಹೂವನ್ನಲ್ಲ ಎನ್ನುವುದು ಬಿಪನ್ ಚಂದ್ರ ವಾದ27À. ಒಂದಂತೂ ಸತ್ಯ, ಬಿಪನ್ಗೆ ಮತ್ತು ಕಾಂಗ್ರೆಸ್ಸಿನ ಅಧಿಕೃತ ಚರಿತ್ರಕಾರರಾದ ಬಿ.ಆರ್.ನಂದಾರಿಗೂ ಸಾಕಷ್ಟು ವ್ಯತ್ಯಾಸವಿದೆ. ಬಿಪನ್ ಎಂದೂ ಮುಖವಾಣಿ ಆಗಿರಲಿಲ್ಲ. ತುರ್ತು ಪರಿಸ್ಥಿತಿಯ ಬಗ್ಗೆ ಕೂಡಾ ಅವರಿಗೆ ಸಮ್ಮತಿಯಿರಲಿಲ್ಲವಾಗಿತ್ತು.ಅದೂ ಕೂಡಾ ಅ-ಪ್ರಜಾಪ್ರಭುತ್ವೀಯ ಅನ್ನುವ ಅಭಿಪ್ರಾಯವನ್ನೇ ಅವರು ಕೃತಿಯಲ್ಲಿ ವ್ಯಕ್ತಪಡಿಸಿದ್ದರೂ ಕೂಡಾ.
ಏನೇ ಇರಲಿ, ಬಿಪನ್ ಈಸ್ ಬಿಪನ್. ಬಿಪನ್ ತನ್ನನ್ನು ಎಂದೂ ಕೂಡಾ ಪ್ರೊಫೆಸರ್, ಹಿಸ್ಟೋರಿಯನ್ ಅಂತ ಕರೆದುಕೊಂಡಿರಲಿಲ್ಲ. ಕರೆಯಿಸಿಕೊಳ್ಳುತ್ತಲೂ ಇರಲಿಲ್ಲ. ತನ್ನ ಸಂಗಡಿಗರಿಗೆ ಜಸ್ಟ್ ಕಾಲ್ ಮಿ ಬಿಪನ್ ಅನ್ನುತ್ತಿದ್ದರು.ಸರಳತೆ,ಸ್ನೇಹ,ವಿದ್ಯಾರ್ಥಿಪ್ರೇಮ,ವಿದ್ಯಾರ್ಥಿಗಳನ್ನು ಬೆಳೆಸುವ ಕ್ರಮ ಇತ್ಯಾದಿಗಳಿಗೆ ಅವರು ರೂಪಕವಾಗಿದ್ದರು.ಒಬ್ಬ ಒಳ್ಳೆಯ ಮನುಷ್ಯರಾಗಿದ್ದರು.ಭಾರತ ಕಂಡ ಒಬ್ಬ ಒಳ್ಳೆಯ ಚರಿತ್ರಕಾರ ಇಂದು ಚರಿತ್ರೆಯಾಗಿದ್ದಾರೆ.
ಅಡಿಟಿಪ್ಪಣಿಗಳು
1. ಎ ಲಿಜೆಂಡರಿ ಟೀಚರ್, ಸ್ಕಾಲರ್, ಆ್ಯಂಡ್ ಆ್ಯಕ್ಟಿವಿಸ್ಟ್-ಆದಿತ್ಯ ಮುಖರ್ಜಿ, ದಿ ಹಿಂದು, ಆಗಸ್ಟ್ 31, 2014.
2. ನೋಡಿ ಈ ಮೇಲಿನ ಬರಹ.
3. ಪ್ರೊಫೆಸರ್ ಬಿಪನ್ಚಂದ್ರ (1928-2014), ಪ್ರೊ ಸಭ್ಯಸಾಚೀ ಭಟ್ಟಾಚಾರ್ಯ, ಈಪಿಡಬ್ಲ್ಯೂ, ಅಕ್ಟೋಬರ್ 11, 2014.
4. ದಿ ರೈಸ್ ಆ್ಯಂಡ್ ಗ್ರೋತ್ ಆಫ್ ಇಕನಾಮಿಕ್ ನ್ಯಾಶನಲಿಸಂ ಇನ್ ಇಂಡಿಯಾ; ಬಿಪನ್ಚಂದ್ರ, ಪೀಪಲ್ಸ್ ಪಬ್ಲಿಶಿಂಗ್ ಹೌಸ್, ನ್ಯೂಡೆಲ್ಲಿ, 1966.
5. ಇಬಿಡ್.
6. ಕಲನಿಯಲ್ ರೂಲ್, ಟ್ರಾನ್ಸ್ಫರ್ಮೇಶನ್ ಫ್ರಂ ಎ ಕಲನಿಯಲ್ ಟು ಆ್ಯನ್ ಇಂಡಿಪೆಂಡೆಂಟ್ ಇಕಾನಮಿ: ಎ ಕೇಸ್ ಸ್ಟಡಿ ಆಫ್ ಇಂಡಿಯಾ, ಬಿಪನ್ಚಂದ್ರ.
7. ಜವಹರ್ಲಾಲ್ ನೆಹರೂ ಆ್ಯಂಡ್ ದಿ ಇಂಡಿಯನ್ ಕ್ಯಾಪಿಟಲಿಸ್ಟ್ ಕ್ಲಾಸ್ ಇನ್ ನ್ಯಾಶನಲಿಸಂ ಆ್ಯಂಡ್ ಕಲನಿಯಲಿಸಂ ಇನ್ ಮಾಡರ್ನ್ ಇಂಡಿಯಾ, ಬಿಪನ್ಚಂದ್ರ, ಒರಿಯಂಟ್ ಲಾಂಗ್ಮನ್, 1979, ನ್ಯೂಡೆಲ್ಲಿ.
8. ಜವಹರ್ಲಾಲ್ ನೆಹರೂ ಇನ್ ಹಿಸ್ಟಾರಿಕಲ್ ಪರ್ಸ್ಪೆಕ್ಟಿವ್,
9. ನೆಹರೂ: ಬಯಾಗ್ರಫಿ, ಎಸ್. ಗೋಪಾಲ್, ಓ.ಯು.ಪಿ, ನ್ಯೂಡೆಲ್ಲಿ.
9ಅ. ವೈ ಐಯಾಮ್ ಯಾನ್ ಅಥೀಸ್ಟ್,ಎಡಿಟಡ್ ಬೈ ಬಿಪನ ಚಂದ್ರ,ಎನ್.ಬಿ.ಟಿ,ನ್ಯೂ ಡೆಲ್ಲಿ,2013.
10. ರಿಮೆಂಬರಿಂಗ್ ಪಾರ್ಟಿಶನ್: ವಾಯ್ಲೆನ್ಸ್,ನ್ಯಾಶನಲಿಸಂ ಆ್ಯಂಡ್ ಹಿಸ್ಟರಿ ಇನ್ ಇಂಡಿಯಾ, ಗ್ಯಾನೇಂದ್ರ ಪಾಂಡೆ,ಕೇಂಬ್ರಿಡ್ಜ್ ಯುನಿವರ್ಸಿಟಿ ಪ್ರೆಸ್, ಕೇಂಬ್ರಿಡ್ಜ್,2001.
11. ತಿಯರೈಸಿಂಗ್ಕಮ್ಯುನಲಿಸಂ – ಎಫ್ರಾಗ್ಮೆಂಟರಿ ನೋಟ್ ಇನ್ ದಿ ಮಾಕ್ರ್ಷಿಸ್ಟ್ ಮೋಡ್,ರಣ್ಧೀರ್ಸಿಂಗ್,ಈ.ಪಿ.ಡಬ್ಲ್ಯೂ,ವಾಲ್ಯುಮ್ 23, ಜುಲೈ 23_1988.
12. ಫಂಡಮೆಂಟಲಿಸಂ ಆ್ಯಂಡ್ ಕಮ್ಯುನಲಿಸಂ, ಇನ್ ದಿ ರೈಟಿಂಗ್ಸ್ ಆಫ್ ಬಿಪನ್ಚಂದ್ರ, ಎಡಿಟಡ್ ಬೈ ಆದಿತ್ಯ ಮುಖರ್ಜಿ, 2012.
13. ಇಂಡಿಯಾಸ್ ಸ್ಟ್ರಗಲ್ ಫಾರ್ ಇಂಡಿಪೆಂಡೆನ್ಸ್, ಬಿಪನ್ಚಂದ್ರ, ಪೆಂಗ್ವಿನ್,ನ್ಯೂಡೆಲ್ಲಿ,1989.
13ಅ. ಹಿಸ್ಟೋರಿಯನ್ಸ್ ಆಫ್ ಮಾಡರ್ನ್ ಇಂಡಿಯಾಎಂಡ್ ಕಮ್ಯುನಾಲಿಸಮ್ ಇನ್ ಕಮ್ಯುನಾಲಿಸಮ್ ಎಂಡ್ ದಿ ರೈಟಿಂಗ್ ಆಫ್ ಇಂಡಿಯನ್ ಹಿಸ್ಟರಿ, ರೊಮಿಲಾ ಥಾಪರ್-ಹರ್ಬನ್ಸ್ ಮುಖಿಯಾ-ಬಿಪನ್ ಚಂದ್ರ, ಪೀಪಲ್ಸ್ ಪಬ್ಲಿಷಿಂಗ್ ಹೌಸ್, ನ್ಯೂಡೆಲ್ಲಿ,1969.
14. ಇಂಡಿಯನ್ ನ್ಯಾಶನಲ್ ಮೂವ್ಮೆಂಟ್: ದಿ ಲಾಂಗ್ ಟರ್ಮ್ ಡೈನಾಮಿಕ್ಸ್, ಬಿಪನ್ಚಂದ್ರ, ವಿಕಾಸ್, ನ್ಯೂಡೆಲ್ಲಿ, 1988.
15. ಮಾಡರ್ನ್ ಪ್ರಿನ್ಸ್ ,ಅಂಟೋನಿಯೋಗ್ರಾಮ್ಶಿ,ಮಾರ್ಕ್ಸಿಸ್ಟ್.ಒಅರ್ಜಿ,2000.
16. ಇಂಡಿಯನ್ ನ್ಯಾಶನಲ್ ಮೂವ್ಮೆಂಟ್: ದಿ ಲಾಂಗ್ ಟರ್ಮ್ ಡೈನಾಮಿಕ್ಸ್, ಬಿಪನ್ಚಂದ್ರ, ವಿಕಾಸ್, ನ್ಯೂಡೆಲ್ಲಿ 1988.
17. ಗಾಂಧಿ ಆ್ಯಸ್ ಮಹಾತ್ಮ; ಗೋರಕ್ ಪುರ್ ಡಿಸ್ಟ್ರಿಕ್ಟ್ ಈಸ್ಟರ್ನ್ ಯು.ಪಿ 1921-22, ಶಹೀದ್ ಅಮೀನ್, ಇನ್ ಸೆಲೆಕ್ಟಡ್ ಸಬಾಲ್ಟರ್ನ್ ಸ್ಟಡೀಸ್ ಎಡಿಟಡ್ ಬೈ ರಣ್ಜಿತ್ ಗುಹಾ ಎಂಡ್ ಗಾಯತ್ರಿ ಸ್ಪಿವಾಕ್ ಚಕ್ರವರ್ತಿ,ಒಯುಪಿ,ನ್ಯೂ ಡೆಲ್ಲಿ,1988.
18.ಮಾಡರ್ನ್ ಇಂಡಿಯಾ,ಬಿಪನ್ ಚಂದ್ರ,ಎನ್.ಸಿ.ಇ.ಆರ್.ಟಿ, ನ್ಯೂಡೆಲ್ಲಿ,1971.
19. ಪ್ಲಾಸೀ ಟು ಪಾರ್ಟಿಶನ್:ಎ ಹಿಸ್ಟರಿ ಆಫ್ ಮಾಡರ್ನ್ ಇಂಡಿಯಾ,ಶೇಖರ್ ಬಂಡೋಪಾಧ್ಯಾಯ,ಒರಿಯಂಟ್ ಬ್ಲಾಕ್ಸ್ವಾನ್,2004.
20. ದಿ ಯೈಟೀಂತ್ ಸೆಂಚುರಿ ಇನ್ ಇಂಡಿಯಾ, ಸೀಮಾ ಅಳವಿ,ಒಯುಪಿ,ನ್ಯೂ ಡೆಲ್ಲಿ,2007.
21.ಇರ್ಫಾನ್ ಹಬೀಬ್,ಪೀಪಲ್ಸ್ ಹಿಸ್ಟರಿ ಆಫ್ ಇಂಡಿಯಾ,ತುಲಿಕಾ,ನ್ಯೂ ಡೆಲ್ಲಿ.
22.ರಿವಿಸಿಟಿಂಗ್ 1857ಮಿಥ್ ಮೆಮರಿ ಹಿಸ್ಟರಿ,ಬೋರಿಯಾ ಮಜುಂದಾರ್-ಶರ್ಮಿಷ್ಠಾ ಗೂಪ್ತು,ರೋಲಿ ಬುಕ್ಸ್, ನ್ಯೂಡೆಲ್ಲಿ,2007.
ಅವಧ್ ಇನ್ ರಿವೋಲ್ಟ್ 1857-1858, ರುದ್ರಾಂಶು ಮುಖರ್ಜಿ,ಪರ್ಮನೆಂಟ್ ಬ್ಲಾಕ್, ನ್ಯೂಡೆಲ್ಲಿ,2002.
23. ಹಿಸ್ಟರಿ ಫ್ರಂ ಬಿಲೋ,ಇರ್ಫಾನ್ ಹಬೀಬ್,ವಾಲ್ಯುಮ್ 24_ಇಶ್ಶ್ಯು 12,ಫ್ರಂಟ್ಲೈನ್,ಜೂನ್ 16_29_2007.
24. ಮಾಡರ್ನ್ ಇಂಡಿಯಾ,ಬಿಪನ್ ಚಂದ್ರ,ಎನ್.ಸಿ.ಇ.ಆರ್.ಟಿ, ನ್ಯೂಡೆಲ್ಲಿ,1971.
25. ಇನ್ ದಿ ನೇಮ್ ಆಫ್ ನ್ಯಾಶನಲಿಸಮ್,ಕೆ.ಎನ್.ಫಣಿಕ್ಕರ್,ಫ್ರಂಟ್ಲೈನ್, ವಾಲ್ಯುಮ್ 21_ಇಶ್ಶ್ಯು 06,ಮಾರ್ಚ್ 26 2004.
26. ಮಾಡರ್ನ್ ಇಂಡಿಯಾ,ಬಿಪನ್ ಚಂದ್ರ,ಎನ್.ಸಿ.ಇ.ಆರ್.ಟಿ, ನ್ಯೂಡೆಲ್ಲಿ,1971.
27. ಇಂಡಿಯಾಸ್ ಸ್ಟ್ರಗಲ್ ಫಾರ್ ಇಂಡಿಪೆಂಡೆನ್ಸ್, ಬಿಪನ್ಚಂದ್ರ, ಪೆಂಗ್ವಿನ್,ನ್ಯೂಡೆಲ್ಲಿ,1989.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ