ಪೋಸ್ಟ್‌ಗಳು

2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಚಾರಿತ್ರಿಕ ಕೃತಿಯ ಹಲವು ಓದಿನ ಸಾಧ್ಯತೆಗಳು: ಹಿಂದ್ ಸ್ವರಾಜ್ ಮಾದರಿ

ಹಿಂದ್ ಸ್ವರಾಜ್ ಅತ್ಯಂತ ಮುಖ್ಯವಾದ ಪಠ್ಯ. ೧೯೦೯ರಲ್ಲಿ ಗಾಂಧಿ ಲಂಡನಿನಿಂದ ಆಫ್ರಿಕಾಕ್ಕೆ ಬರುವಂತಹ ಸಂದರ್ಭದಲ್ಲಿ  ಕಿಲ್ಡೋನನ್‌ ಕ್ಯಾಸಲ್ ಎಂಬ ಹಡಗಿನ ಡೆಕ್‌ನಲ್ಲಿ ಕುಳಿತು ಹತ್ತು ದಿನಗಳಲ್ಲಿ ಬರೆದ ಪಠ್ಯವಿದು. ತಾನು ಬರೆದ ಸುಮಾರು ೭೦೦ಕ್ಕಿಂತಲೂ ಹೆಚ್ಚಿನ ಬರಹಗಳಲ್ಲಿ ಬಹಳ ಪ್ರಮುಖವೆಂದು ಸ್ವತಃ ಗಾಂಧಿಯೇ ಇಷ್ಟಪಡುವ ಕೃತಿಯಿದು.  ಇದನ್ನು ಗುಜರಾತಿಯಿಂದ ಇಂಗ್ಲೀಷಿಗೆ ಅನುವಾದಿಸಿದ್ದೂ ಕೂಡಾ ಗಾಂಧಿಯೇ. ಗಾಂಧಿಯವರ ಆತ್ಮಕಥೆಗೆ ಕೂಡಾ ಈ ಅವಕಾಶ ಲಭ್ಯವಾಗಿರಲಿಲ್ಲ. ಅದನ್ನು ಗಾಂಧಿಯವರ ಸೆಕ್ರೆಟರಿ ಮಹಾದೇವ್ ದೇಸಾಯಿ ಅನುವಾದಿಸಿದ್ದರು. ಹಿಂದ್ ಸ್ವರಾಜ್ ಗಾಂಧಿಯ ಬರಹಗಳಲ್ಲೇ ಬಹಳ ಅಧಿಕೃತವಾದ ಪಠ್ಯವೂ ಹೌದು. ಇದರ ಅಧಿಕೃತತೆಯ ಕಾರಣದಿಂದ ನೆಹರೂ, ರಾಜಾಜಿ ಮತ್ತು ಸಾಹಿತಿ ಲಿಯೋ ಟಾಲ್‌ಸ್ಟಾಯ್ ಕೂಡಾ ಇದನ್ನು ಟೀಕಿಸಿದ್ದರು. ನೆಹರೂರವರ ಬರವಣಿಗೆಗಳಿಗಿಂತ ಗಾಂಧಿಯ ಬರವಣಿಗೆಯನ್ನು ಅತ್ಯಂತ ವಿಭಿನ್ನವಾಗಿ, ನಿಲ್ಲಿಸಿದ್ದು ಕೂಡ ಈ ಪಠ್ಯವೇ ಎಂಬುದು ಚಿಂತಕ ಭಿಕ್ಕು ಪಾರೆಖ್ ಅಭಿಪ್ರಾಯ. 1 ಇಡೀ ಬ್ರಿಟೀಷ್ ಜನಾಂಗದ ಮೂಲಕ, ಅಹಿಂಸೆಯ ಸಂದೇಶವನ್ನು ಪ್ರಸರಿಸಲು ಮತ್ತು ಅಂತಹ ಪ್ರಸಾರ ಇಡೀ ವಿಶ್ವಕ್ಕೆಂಬ ಅಶಯವನ್ನು ಕೂಡಾ ಗಾಂಧಿ ಈ ಪಠ್ಯದ ಮೂಲಕ ವ್ಯಕ್ತಪಡಿಸಿದ್ದರು (ಟು ಯ್ಯೂಸ್ ದ ಬ್ರಿಟಿಷ್ ರೇಸ್ ಫಾರ್ ಟ್ರಾನ್ಸ್‌ಮಿಟ್ಟಿಂಗ್ ಹಿಸ್ ಮೈಟೀ ಮೆಸೇಜ್ ಆಫ್ ಅಹಿಂಸಾ). ಭವಿಷ್ಯದ ಗಾಂಧಿಯ ಇಡೀ ಬದುಕು ಪ್ರೇರಣೆ ಪಡೆದಿದ್ದು ಭಗವದ್ಗೀತೆಯಿಂದಲ್ಲ...