ವ್ಯಾರ್ ದಿ ಗ್ರೀನ್ ಆ್ಯಂಟ್ಸ್ ಡ್ರೀಮ್’ (1984)
ವರ್ನರ್ ಹರ್ಜೋಗ್ ಹೆಸರೇ ಒಂದು ವಿಸ್ಮಯ. ಬಹುಶ: ಜಗತ್ತಿನ, ಸಿನಿಮಾ ಜಗತ್ತಿನ ಒಬ್ಬ ಅತ್ಯಂತ ಸೃಜನಶೀಲ ಅಭಿವ್ಯಕ್ತಿಯೆಂದರೆ ಹರ್ಜೋಗ್. ಹರ್ಜೋಗ್ ಒಬ್ಬ ಸವ್ಯಸಾಚಿ. ಫೀಛರ್ ಮತ್ತು ನಾನ್ ಫೀಛರ್ ಎನ್ನುವ ಎರಡೂ ರೀತಿಯ ಸಿನಿಮಾ ಕ್ರಮಗಳಲ್ಲಿ ಯಶಸ್ಸನ್ನು ಸಾಧಿಸಿದ ಒಬ್ಬ ಪ್ರಮುಖ ಸಿನಿಮಾ ನಿರ್ದೇಶಕನೆಂದರೆ ವರ್ನರ್ ಹರ್ಜೋಗ್. ಸಿನಿಮಾ ಎಂಬ ರೋಚಕ ಅನುಭವ ಮತ್ತು ಆಸಕ್ತಿಯನ್ನು ಅಕ್ಷರಶ: ಅನುಭವಿಸಿ ಚಿತ್ರಗಳನ್ನು ನಿರ್ಮಿಸಿದ ಸಾಹಸಿ ಕೂಡಾ ಹೌದೀತ. ಸುಮಾರು ಹದಿನಾಲ್ಕನೇ ವರ್ಷದಲ್ಲಿಯೇ ಸಿನಿಮಾ ಸಂಬಂಧಿತ ವಿಶ್ವಕೋಶವೊಂದರಿಂದ ಪ್ರೇರಿತನಾಗಿ ತನ್ನ ಸಿನಿಮಾಯಾನವನ್ನು ಆರಂಭಿಸಿದವನೀತ. ಹರ್ಜೋಗ್ ಸ್ವತ: ಹೇಳುವಂತೆ, ‘ನಾನು ಸಿನಿಮಾ ಪ್ರವೇಶ ಪಡೆಯಲು ಆರಂಭವನ್ನು ಕೊಟ್ಟಿದ್ದೇ ಈ ವಿಶ್ವಕೋಶ’. ಇಂತಹ ಪ್ರೇರಣೆಯ ಮುಂದುವರಿದ ಭಾಗವೇ ಹರ್ಜೋಗ್ ಮ್ಯೂನಿಚ್ ಫಿಲ್ಮ್ ಸ್ಕೂಲ್‍ನಿಂದ 35 ಎಂ.ಎಂ. ಕ್ಯಾಮೆರಾ ಕದ್ದಿದ್ದು. ಈತ ಸಿನಿಮಾ ಎನ್ನುವ ಮಾಧ್ಯಮದಿಂದ ಎಷ್ಟು ಹುಚ್ಚುಗಟ್ಟಿಸಿಕೊಂಡನೆಂದರೆ ಸುಮಾರು 1960ರ ದಶಕದಲ್ಲಿ ಈತನಿಗೆ ಸಿನಿಮಾ ಮಾಡಲು ಬೇಕಾದ ಹಣಕ್ಕಾಗಿ ಸ್ಟೀಲ್ ಫ್ಯಾಕ್ಟರಿಯಲ್ಲಿ ಹಲವು ಶಿಫ್ಟ್ ಮತ್ತು ಓವರ್ ಟೈಮ್ ದುಡಿದು ವೆಲ್ಡಿಂಗ್ ಮಾಡುತ್ತಿದ್ದ.
ವರ್ನರ್ ಹರ್ಜೋಗ್‍ಗೆ ಬಹುಶ: ಆತನೇ ಸಾಟಿ. ಇಡೀ ಜಗತ್ತಿನ ಸಿನಿಮಾ ಚರಿತ್ರೆಯಲ್ಲೇ, ಅತ್ಯಂತ
ಅನನ್ಯ, ಮಾದರಿಯ ಮತ್ತು ವಿಲಕ್ಷಣ ಪ್ರದೇಶಗಳಿಗೆ ಹೋಗಿ ಸಿನಿಮಾ ಮಾಡಿದವನೆಂದರೆ ಅದು ಹರ್ಜೋಗ್ ಅಷ್ಟೇ.
ಇಂತಹ ಹರ್ಜೋಗ್‍ನ ತುಡಿತ ಮತ್ತು ದುಡಿಮೆ ಆತನ ಜೀವನ ಪ್ರೀತಿಯ ದ್ಯೋತಕವೂ ಕೂಡಾ ಆಗಿದೆ. ವಿಶೇಷವಾಗಿ
ಡಾಕ್ಯುಮೆಂಟರಿ ಸಿನಿಮಾಗಳಿಗಾಗಿ ಅಂಟಾರ್ಟಿಕಾ, ಟೈಗಾ, ಸುಮಾರು 40,000ಕ್ಕೂ ವರ್ಷದ ಹಿಂದಿನ ಫ್ರಾನ್ಸ್‍ನ
ಷೋವೆ ಗುಹೆಗಳು, ಕೆನಡಾ ಮತ್ತು ಸೈಬೀರಿಯನ್ ಪ್ರದೇಶಗಳ ಕರಡಿಗಳನ್ನು ಅಧ್ಯಯನ ಮಾಡಲು ಆಯ್ದುಕೊಂಡ ಪ್ರದೇಶಗಳು,
ಅಬ್ಬಾ! ಬಹುಶ: ಜಗತ್ತಿನ ಸಿನಿಮಾ ಮೇಕಿಂಗ್‍ನಲ್ಲಿ ಒಂದು ಹರ್ಜೋಗಿಯನ್ ವಿದ್ಯಮಾನ ಅಥವಾ ಹರ್ಜೋಗಿಯನ್
ಫಿನಾಮೆನನ್ ಅನ್ನು ಅದು ಸೃಷ್ಟಿಸಿದೆ. ಫೀಛರ್ ಮತ್ತು ನಾನ್ ಫೀಛರ್ ಸಂದರ್ಭದ ಒಂದು ಬಹುದೊಡ್ಡ ಗೆಣೆಕಾರಿಕೆಯ
ಗಳಿಕೆ ಕೂಡಾ ಹರ್ಜೋಗ್‍ನದ್ದೇ ಆಗಿದೆ. ಅದು ಹರ್ಜೋಗ್ ಮತ್ತು ಕ್ಲಾಝ್ ಕಿನ್ಸ್‍ಕಿಯ ಮೂಲಕ. ಮುಖ್ಯವಾಗಿ
ಅಗ್ವೈರ್, ದಿ ರಾತ್ ಆಫ್ ಗಾಡ್ ಹಾಗೂ ಫಿಟ್ಝ್‍ಕ್ಯರಾಲ್ಡೋದಂತಹ ಫೀಛರ್‍ಗಳಲ್ಲಿ ಹರ್ಜೋಗ್ ಮತ್ತು ಕಿನ್ಸ್‍ಕಿಯವರೇ
ಇಡೀ ಸಿನಿಮಾ ಮತ್ತು ನಮ್ಮನ್ನೂ ವ್ಯಾಪಿಸುತ್ತಾರೆ.
ಹರ್ಜೋಗ್ ಬಗ್ಗೆ ಹೇಳಿದರೆಷ್ಟೇ ತೀರದು. ಅದಕ್ಕಾಗಿಯೇ ನಾನು ಬೇರೊಂದು ಸಂದರ್ಭವನ್ನು ಸೃಷ್ಟಿಸಿಕೊಳ್ಳುತ್ತೇನೆ
ಖಂಡಿತವಾಗಿಯೂ. ಇಲ್ಲಿ, ಈ ಬರಹದಲ್ಲಿ ನನಗೆ ಹರ್ಜೋಗ್‍ನ ಒಂದು ಅತ್ಯಂತ ಪ್ರಮುಖ ಸಿನಿಮಾ ಎಂದು ಕಂಡು
ಬಂದಿರುವ, “ವ್ಯ್ಹಾರ್ ದಿ ಗ್ರೀನ್ ಆ್ಯಂಟ್ಸ್ ಡ್ರೀಮ್” ಸಿನಿಮಾವನ್ನು
ಪ್ರಾತಿನಿಧಿಕವಾಗಿ ಚರ್ಚೆಗೆ ಎತ್ತಿಕೊಳ್ಳುತ್ತೇನೆ. ಈ ಚಿತ್ರವನ್ನು 1984ರಲ್ಲಿ ಹರ್ಜೋಗ್ ನಿರ್ಮಿಸಿದ.
ಇದು ಹರ್ಜೋಗ್‍ನ ಮೊದಲ ಇಂಗ್ಲೀಷ್ ಸಿನಿಮಾ, ನಂತರ ಇದನ್ನು ಆತನ ಮಾತೃಭಾಷೆ ಜರ್ಮನ್‍ಗೆ ಅನುವಾದಿಸಲಾಯಿತು.
ಇದು ನಿಜಕಥೆ ಅಥವಾ ಪ್ರಕರಣವನ್ನಾಧರಿಸಿದ ಸಿನಿಮಾ ಕೂಡಾ. ಆಸ್ಟ್ರೇಲಿಯಾದಲ್ಲಿ ಯುರೇನಿಯಂ ಗಣಿಗಾರಿಕೆಯಲ್ಲಿ
ತೊಡಗಿದ್ದ ನಬಾಲ್ಕೋ ಪ್ರೈವೇಟ್ ಲಿಮಿಟೆಡ್ ವರ್ಸಸ್ ಮಿಲಿರ್ರ್‍ಪುಮ್ ನಡುವಿನ ಪ್ರಕರಣ ಅಥವಾ ಕೇಸ್
ಆಧಾರಿತವಾದುದು. ಇಲ್ಲಿ ಹರ್ಜೋಗ್ ಪ್ರೊಫೆಶನಲ್ ನಟರನ್ನು ಮತ್ತು ಆ ಪ್ರದೇಶದ ಆದಿವಾಸೀ ಜನರನ್ನೂ ಕೂಡಾ
ಬಳಸಿ ಸಿನಿಮಾ ನಿರ್ಮಿಸಿದ. ಇಲ್ಲಿ ವಸ್ತು ವಿಷಯಾಂಶ ಅಥವಾ ಫ್ಯಾಕ್ಟ್ಸ್ ಕೂಡಾ ಇದೆ. ಹಾಗೆಯೇ ಮಿಥ್ಯಗಳ,
ಪುರಾಣಶಾಸ್ತ್ರದ ಬಳಕೆ ಕೂಡಾ ಇದೆಯಷ್ಟೇ. ಇಲ್ಲಿನ ‘ಇರುವೆ’ಯ ಮಿಥ್ಯ ಅಥವಾ
ಮೈಥಾಲಜಿ ಹರ್ಜೋಗ್‍ನ ಸೃಷ್ಟಿಯಾಗಿದೆಯಾದರೂ ಕೂಡಾ, ಅದನ್ನೇ ಹೋಲುವಂತಹ ಹಸಿರಿರುವೆ ಮಿತ್‍ಗಳು ಆಸ್ಟ್ರೇಲಿಯಾದ
ಅನೇಕ ಬುಡಕಟ್ಟು ಸಮುದಾಯಗಳಲ್ಲಿರುವುದನ್ನೂ ಕೂಡಾ ಗಮನಿಸಬಹುದಾಗಿದ್ದು, ಈ ಹಸಿರು ಇರುವೆಯೇ ಜಗತ್ತು
ಮತ್ತು ಮನುಷ್ಯನನ್ನು ಸೃಷ್ಟಿಸಿದೆಯೆಂಬ ನಂಬಿಕೆ ನಿಯತಿಗಳೂ ಕೂಡಾ ಇವೆ. ಇಡೀ ಸಿನಿಮಾದ ಚಿತ್ರೀಕರಣ
ಆಸ್ಟ್ರೇಲಿಯಾದ ಮರುಭೂಮಿಯಲ್ಲಿ ನಡೆದಿರುವಂತದ್ದು. ಇಡೀ ಚಿತ್ರದ ಕಥೆಯೆಂದರೆ, ಈ ಪ್ರದೇಶದಲ್ಲಿ ಯುರೇನಿಯಂ
ಗಣಿಗಾರಿಕೆ ನಡೆಸುತ್ತಿರುವಂತಹ ಕಂಪೆನಿ ಅದನ್ನು ನಿಲ್ಲಿಸಬೇಕೆಂಬ ಆಗ್ರಹ ಮತ್ತು ಪ್ರಯತ್ನಗಳು ಸಮುದಾಯದ
ಕಡೆಯಿಂದ, ಯಾಕೆಂದರೆ ಆ ಪ್ರದೇಶದಲ್ಲಿ ಈ ಬುಡಕಟ್ಟು ಸಮುದಾಯದ ಜನರು ನಂಬಿರುವ ಹಾಗೆ, ‘ಹಸಿರು ಇರುವೆಗಳು
ಕನಸು ಕಾಣುತ್ತವೆ ಮತ್ತು ಅಂತಹ ಸಂಗತಿಯನ್ನು ಅಡ್ಡಿಪಡಿಸಿದರೆ ಅವುಗಳು ಇಡೀ ಮಾನವತೆಯನ್ನು, ಮಾನವ
ಜನಾಂಗವನ್ನೇ ನಾಶಪಡಿಸುತ್ತದೆ ಎಂಬುದಾಗಿ. ಚಿತ್ರ ಹೀಗೆಯೇ ಸಾಗುತ್ತದೆ. ಇಡೀ ಚಿತ್ರ ಡಾಕ್ಯುಮೆಂಟರಿ
ಮತ್ತು ಫೀಛರ್ ಎಂಬ ವಿಭಾಗಗಳ ನಡುವೆ ವಾದಗೈಯ್ಯುತ್ತಾ ನಿಲ್ಲುತ್ತದೆ.
ಗ್ರೀನ್ ಆ್ಯಂಟ್ಸ್ ಡ್ರೀಮ್ ಆದಿವಾಸೀ ಸಂಸ್ಕøತಿಗೆ ನೀಡಿರುವ ಒಂದು ಕಾವ್ಯಾತ್ಮಕ ಕೊಡುಗೆ.
ಇದು ಜತೆಜತೆಯಲ್ಲೇ ಆಸ್ಟ್ರೇಲಿಯಾಕ್ಕೆ ಆಧುನಿಕ ನಾಗರೀಕತೆಯನ್ನು ತಂದ ಯುರೋಪ್‍ಗೆ ಎಚ್ಚರಿಕೆಯನ್ನು
ನೀಡುತ್ತಾ ಸಾಗುತ್ತದೆ. ಇಡೀ ಸಿನಿಮಾದಲ್ಲಿ ಮೂಲನಿವಾಸಿಗಳು ಆಕರ್ಷಣೀಯವಾಗಿ ಕಂಡರೆ ಪಾಶ್ಚಿಮಾತ್ಯರು
ಮೂರ್ಖರು ಹಾಗೂ ಕಳ್ಳರ ಹಾಗೆ ಕಾಣಿಸುತ್ತಾರೆ. ಇಲ್ಲಿ ಆಸ್ಟ್ರೇಲಿಯನ್ ಅಬೋರಿಜಿನ್ಸ್‍ಗಳು ಯಾವುದೇ
ಕಾರಣಕ್ಕೆ ಗಣಿಗಾರಿಕೆಯನ್ನು ಇಷ್ಟಪಡುವುದಿಲ್ಲ. ಕೊನೆಗೂ ಪ್ರಕರಣ ಕೋರ್ಟ್ ಮೆಟ್ಟಿಲೇರಿದಾಗ ಆದಿವಾಸಿಗಳು
ಗಣಿಗಾರಿಕೆ ಕಂಪೆನಿಯ ವಿಮಾನದ ಒಳಗೆ-ಹೊರಗೆ ಮನೆ ಮಾಡಿಕೊಳ್ಳುತ್ತಾರೆ. ಏಕೆಂದರೆ ವಿಮಾನ ಒಂದು ರೀತಿ
ಇರುವೆಯ ಬೃಹತ್ ರೂಪದಂತೆ ಕಂಡುಬಂದ ಕಾರಣದಿಂದಾಗಿ.
ಇಡೀ ಸಿನಿಮಾದ ವಸ್ತು ಇರುವುದೇ ಸತ್ಯಸಂಗತಿಯ ಮೇಲೆ, ಚರಿತ್ರೆ ಮತ್ತು ಫ್ಯಾಕ್ಟ್ಸ್‍ನ ಮೇಲೆ.
ಇಡೀ ಆಸ್ಟ್ರೇಲಿಯನ್ ಚರಿತ್ರೆಯಲ್ಲಿನ ಒಂದು ಸಂಘರ್ಷದ, ಬಿಕ್ಕಟ್ಟಿನ, ಹೊಂದಾಣಿಕೆಯಾಗದ ಅಧ್ಯಾಯದ ಹಾಗೆ
ಇದು ಕಂಡುಬರುತ್ತದೆ. ಆ ಚರಿತ್ರೆಯಲ್ಲಿನ ಆದಿವಾಸೀ ಮತ್ತು ಯುರೋಪಿನ ವಸಾಹತುಶಾಹೀಗಳು ಅಥವಾ ಠಿಕಾಣಿ
ಹೂಡಿದವರ ನಡುವಿನ ಕಥೆಯಾಗಿ, ಚರಿತ್ರೆಯಾಗಿ ಮುಖ್ಯವಾಗುತ್ತದೆ. ರಾಕ್ಷಸೀ ನೆಲೆಯ, ಪೈಶಾಚಿಕವಾದಂತಹ
ಯುರೋಪಿನ ಅಟ್ಟಹಾಸದ, ಆಕ್ರಮಣದ ಸೂಚಕವಾಗಿಯೂ ಇದೆ. 18ನೇ ಶತಕದಲ್ಲಿ ಯುರೋಪಿಯನ್ನರು ಬಂದಾಗ ಸುಮಾರು
ಮೂರುಲಕ್ಷ ಆಸ್ಟ್ರೇಲಿಯನ್ ಅಬೋರಿಜಿನ್ಸ್ ಆದಿವಾಸಿಗಳಿದ್ದರು, ಅದೂ ಅತ್ಯಂತ ವೈವಿಧ್ಯದ ಸಂಸ್ಕøತಿಗಳನ್ನು
ಆಚರಿಸುತ್ತಾ. ಅತ್ಯಂತ ವೈವಿಧ್ಯದ ಕಾಲ-ದೇಶದ ಅನುಭವದ ಜೀವನವೂ ಕೂಡಾ ಅವರದಾಗಿತ್ತು. ಯುರೋಪಿಯನ್ನರು
ಅದೆಲ್ಲವನ್ನೂ ಹಾಳುಮಾಡಿದರು. ಅಬೋರಿಜಿನ್‍ಗಳ ಕಲೆ, ಚಿತ್ರ, ಪ್ರಕೃತಿ, ಸಂಗೀತ, ಭಾಷೆ, ಜನಾಂಗ ಎಲ್ಲವನ್ನೂ
ಕೂಡಾ ನಾಶ ಮಾಡಿದರು. ಯುರೋಪಿಯನ್ನರು ಅವರ ಮೇಲೆ ವಿಧಿ ನಿಷೇಧಗಳನ್ನು ಜಾರಿಗೆ ತಂದರು. ಸಂಹಿತೆಗಳನ್ನು
ಹೇರಿದರು. ನಿಸರ್ಗದೊಂದಿಗೆ, ಚೈತನ್ಯದೊಂದಿಗೆ ಮಾತನಾಡುತ್ತಿದ ಮರುಕಪಡುತ್ತಿದ್ದ ಅಬೋರಿಜಿನ್‍ಗಳ ಮನೋನೆಲೆಗಳನ್ನೂ,
ಅನುಭಾವೀ ಅನುಭವಗಳನ್ನೂ ನಾಶಪಡಿಸಿದರು. ಭೌತಿಕವಾಗಿ ಮಾಡಿದ ನಾಶವಂತೂ ಹೇಳತೀರದು. ಖನಿಜ ಗಣಿಗಾರಿಕೆ,
ಕಲ್ಲು ಗಣಿಗಾರಿಕೆ ಮುಂತಾದ ಅನೇಕ ಸಂಗತಿಗಳಿಂದ ಈ ಅಬೋರಿಜಿನ್‍ಗಳ ಮಾನಸಿಕ, ಅನುಭಾವೀ, ಭೌತಿಕ ನೆಲೆ
ಮತ್ತು ಸಂಬಂಧಗಳನ್ನೇ ಅಪಹರಿಸಿದರು.
ವಸಾಹತುಶಾಹೀ ಶಕ್ತಿಗಳನ್ನು ಅಬೋರಿಜಿನ್ಸ್ ಕೂಡಾ ಕೆಲವೊಮ್ಮೆ ವ್ಯಾಪಕವಾಗಿ ಎಡತಾಕಿದ್ದೂ ಉಂಟು.
ನಮ್ಮಲ್ಲಿನ ತೇಜಸ್ವಿಯ ಕರ್ವಾಲೋ ಕಥೆಯ ಮಂದಣ್ಣ ಮತ್ತು ಆತನ ಪ್ರತಿನಿಧಿ ಸಮುದಾಯಗಳ ಹಾಗೆ ಒಂದು ಬುಡಕಟ್ಟು,
ಹಳ್ಳಿಯ ಸಮುದಾಯವೊಂದು ಪಶ್ಚಿಮದ, ಪಶ್ಚಿಮ ಪ್ರಣೀತ ಗರ್ವದ ಅಹಮ್ಮಿನ ವಿಜ್ಞಾನಕ್ಕೆ ಕಿರಿಕಿರಿ ಉಂಟುಮಾಡಿದ,
ಮುಖಾಮುಖಿಯಾದ ಕಥೆ, ಅನುಭವಗಳೂ ಕೂಡಾ ಇದೆ. ಈ ನೆಲೆಯಿಂದ, ಅಂದರೆ ಈ ಪಾಶ್ರ್ವಿಕ ನೆಲೆಯನ್ನೇ ಬುಡಕಟ್ಟು
ಎಂದು ಭಾವಿಸಿ, ಬಿಂಬಿಸಿ ಅಮೇರಿಕಾದ ಹಾಗೆ (ವೆಸ್ಟ್‍ವರ್ಡ್ ಎಕ್ಸ್‍ಪಾನ್ಶನ್) ಆಸ್ಟ್ರೇಲಿಯಾದಲ್ಲೂ
ಕೂಡಾ ಬೇಟೆಯಾಡಿದ್ದೂ ಚಾರಿತ್ರಿಕ ಸತ್ಯ. ಈ ಸಿನಿಮಾ ಅಂತಹ ಒಂದು ಮುಖಾಮುಖಿಯೊಂದರ ಪ್ರತಿನಿಧಿತವಾಗಿ
ಕಂಡುಬರುತ್ತದೆ. ಅದು ಬರೀ ಪ್ರತಿನಿಧಿತವಲ್ಲ ಬದಲು ಬುಡಕಟ್ಟು ಸಹಜವಾದಂತಹ ಪ್ರತಿಭಟನೆಯ ರೂಪಕವಾಗಿ
ಕೂಡಾ ನಮಗದು ಕಾಣಿಸುತ್ತದೆ. ಈ ಕಾರಣದಿಂದಲೇನೇ ಅಬೋರಿಜಿನ್ಸ್‍ಗಳು ಗಣಿಗಾರಿಕೆ ಕಂಪೆನಿಯ ಯಂತ್ರಗಳನ್ನು
ಎದುರಿಸಿ ರಸ್ತೆಯಲ್ಲಿ ಕುಳಿತಿದ್ದು, ವಸಾಹತುಶಾಹೀ ವ್ಯವಸ್ಥೆ ಮತ್ತು ಯುರೋಪ್ ತಂದಿರುವ, ಆಧುನಿಕತೆ,
ಅಭಿವೃದ್ಧಿ ಎನ್ನುವ ಹತ್ಯಾರಗಳನ್ನು ಅದರ ಸ್ವರೂಪ ವಿನ್ಯಾಸಗಳ ಸಮಗ್ರ ಜ್ಞಾನ, ಆಪತ್ತುಗಳನ್ನು ಈ ಬುಡಕಟ್ಟು
ಗ್ರಹಿಸಿದೆ ಎನ್ನುವುದಕ್ಕಿಂತಲೂ, ಅಂತಹದೊಂದು ಚರಿತ್ರೆಯನ್ನು ತಿಳಿದಿದೆ ಎನ್ನುವುದಕ್ಕಿಂತಲೂ ಆ ಬುಡಕಟ್ಟು
ಪ್ರತಿರೋಧ ಒಡ್ಡುತ್ತಿರುವಂತಹ ಕಾಲ-ದೇಶ ಹಾಗೂ ಭೂಗೋಳದ ಅನುಭವಜನ್ಯವಾದ ಒಂದು ನಿದರ್ಶನವಾಗಿ ಈ ಸಿನಿಮಾ
ನಮ್ಮ ಮುಂದೆ ಪ್ರಮುಖವಾಗುತ್ತದೆ. ಹರ್ಜೋಗ್ ಎಲ್ಲಿಯೂ ಆಕ್ಟಿವಿಸಂನ ನೆಲೆಯಲ್ಲಿ, ಚಿತ್ರವನ್ನು ಪ್ರಸ್ತುಪಡಿಸುವುದಿಲ್ಲ.
ಈ ನೆಲೆಯಿಂದಲೇ ಸಿನಿಮಾ ಮೇಕಿಂಗ್ ಕೂಡಾ ರೂಪುಗೊಂಡಿದೆ. ಅಂದರೆ ಸಿನಿಮಾದ ಪ್ರಮುಖ ಎರಡು ಪ್ರಕಾರಗಳಾದ
ಫೀಛರ್ ಮತ್ತು ನಾನ್ ಫೀಛರ್ ಎನ್ನುವ ವರ್ಗಗಳಲ್ಲಿ ಇದನ್ನು ಈ ಕಾರಣದಿಂದಲೇ ಫಿಕ್ಸ್ ಮಾಡಲಾಗುವುದಿಲ್ಲ.
ಈ ನೆಲೆಯಿಂದ ಈ ಚಿತ್ರ ಅಂತ್ರೋಪೋಲಾಜಿಕಲ್ ನೆಲೆಯನ್ನು ಹೊಂದಿದೆ ಎನ್ನಲಾಗದು ಕೂಡಾ. ಇದು ಮತ್ತು ಇಲ್ಲಿಯ
ಚಿತ್ರಕಥನ ಸಮಾನಾಂತರವಾಗಿ ಚಾರಿತ್ರಿಕ ಕಥನವಾಗಿಯೇ ನಮ್ಮನ್ನು ತಟ್ಟುತ್ತದೆ.
ಗ್ರೀನ್ ಆ್ಯಂಟ್ಸ್ ಡ್ರೀಮ್ ಕಥನ ಆಸ್ಟ್ರೇಲಿಯನ್ ಚರಿತ್ರೆಯ ಅನುರೂಪ ಕಥನದ ಸ್ವರೂಪವೇ ಆಗಿದೆ
ಎನ್ನುವುದನ್ನು ಸಾಮ್ರಾಜ್ಯಶಾಹೀ ಚರಿತ್ರೆಯ ದಾಖಲೆ, ಅಂಕಿ-ಅಂಶಗಳೇ ದೃಢಪಡಿಸುತ್ತವೆ. 18ನೇ ಶತಕದಲ್ಲಿ
ವಸಾಹತುಶಾಹೀ ಪ್ರಭುಗಳು ಆಸ್ಟ್ರೇಲಿಯಾವನ್ನು ಮುಟ್ಟಿದಾಗ ಸುಮಾರು 3ಲಕ್ಷದಷ್ಟು, ವೈವಿಧ್ಯದ ಆದಿವಾಸಿ
ಅಬೋರಿಜಿನ್ ಸಮೂಹಗಳಿದ್ದುವು. ಅದೇ 19ನೇ ಶತಕದ ಕೊನೆ, 20ನೇ ಶತಕದ ಆರಂಭ ಅಂದರೆ ಸರಿಸುಮಾರು
1921ರಲ್ಲಿ ಅಬೋರಿಜಿನ್ಸ್‍ಗಳು ಸುಮಾರು 60,000, ಇದರ ನಂತರದಲ್ಲಿ 1937ರಿಂದ ಇನ್ನೂ ಹೆಚ್ಚಿನ, ತೀವ್ರವಾದ
ಸಕ್ರಿಯ ಮಿಶನರಿ ಚಟುವಟಿಕೆ ಮತ್ತಿತರ ಕ್ರಿಯೆಗಳಿಂದ ಈಗ ಕೆಲವೇ ಸಂಖ್ಯೆಯವರೆಗೆ ಈ ಜನಸಂಖ್ಯೆ ಮುಟ್ಟಿದೆ.
ಇದರ ಜತೆಯಲ್ಲೇ ಬಿಳಿಯರು-ಯುರೋಪಿಯನ್ನರು ಜಾರಿಗೆ ತಂದ ಜನಾಂಗೀಯ ಕಲಹ, ತಾರತಮ್ಯ, ಶೋಷಣೆ, ಅತ್ಯಾಚಾರ
ಮುಂತಾದವುಗಳ ಕಾರಣದಿಂದ ಅಬೋರಿಜಿನ್ ಸಮುದಾಯದಿಂದ ಮಾದರಿಯ, ಕೆಲವೇ ಕೆಲವು ನಮೂನೆಯ ಲಿವಿಂಗ್ ಪ್ರಿ-ಹಿಸ್ಟರಿಯಾಗಿ
ಪರಿಣಮಿಸಿದೆ. ಬಹುಶ: ಮೂರು ವರ್ಷಗಳ ಹಿಂದೆ ಆಸ್ಟ್ರೇಲಿಯಾದ ಸಂಸತ್ತಿನಲ್ಲಿ ಬಿಳಿ ಚರ್ಮದ ಯುರೋಪಿನವರು
ಸಾಮೂಹಿಕ ಕ್ಷಮೆ ಕೇಳಿರಬೇಕಾದರೆ ಅವರು ಮಾಡಿದ ಪಾಪದ ಪ್ರಮಾಣವೇನಿರಬಹುದು? 1960ರ ನಂತರ ಅಬೋರಿಜಿನ್‍ಗಳಿಗೆ
ತುಸುಮಟ್ಟಿನ ಸ್ವಾತಂತ್ರ್ಯ ಸಿಕ್ಕರೂ ಕೂಡಾ, ಪೋಸ್ಟ್ ಕಲನಿಯಲ್ ಸಂದರ್ಭದ, ಕಲನಿಯಲ್ ಚಾರಿತ್ರಿಕ ಅನುಭವವಾದ
ಅಭಿವೃದ್ಧಿ ಎಂಬ ಬ್ರಹ್ಮರಾಕ್ಷಸವು ರಸ್ತೆ, ಕಾಮಗಾರಿ, ಗಣಿಗಾರಿಕೆ ಮುಂತಾದ ವಿಕೃತಿಗಳಲ್ಲಿ ಅಭಿವ್ಯಕ್ತವಾದ
ಕಾರಣ ಆಸ್ಟ್ರೇಲಿಯಾದ ಬುಡಕಟ್ಟು ಸಮೂಹಗಳು ವಿಧ್ವಂಸವಾದುವು. ಅದು ಎಷ್ಟರಮಟ್ಟಿಗೆ ಉಂಟಾಯಿತೆಂದರೆ
18-19ನೇ ಶತಕದಲ್ಲಿ ಕಂಡು ಬರುತ್ತಿದ್ದ 300-400 ಬುಡಕಟ್ಟು ಭಾಷೆಗಳಲ್ಲಿ ಈಗ ಉಳಿದಿರುವುದು 50 ರಿಂದ
60 ಮಾತ್ರ. ಅದೆಷ್ಟೋ ಒಳನುಡಿಗಳನ್ನು ಕೇವಲ ಒಂದು ಕುಟುಂಬ ಅಥವಾ 4 ರಿಂದ 5 ಜನರಷ್ಟೇ ಮಾತನಾಡುತ್ತಿರುವ
ದುರಂತ ಅನುಭವವೂ ಇಂದಿದೆ. ಚಿತ್ರದಲ್ಲಿಯೇ ಬರುವ ಒಂದು ಅನುಭವವೂ ಕೂಡಾ ನಾನೀಗಾಗಲೇ ಹೇಳಿದ ಹಾಗೆ ಸಮಕಾಲೀನ
ಚರಿತ್ರೆ, ವರ್ತಮಾನದಂತೆ ಕಾಣುತ್ತದೆ. ಮುಖ್ಯವಾಗಿ ಬುಡಕಟ್ಟು ಜನರು ಗಣಿಗಾರಿಕೆಯ ವಿರುದ್ಧ ಕೋರ್ಟ್‍ಗೆ
ಹೋಗಿ, ಅಲ್ಲಿ ಪ್ರಕರಣದ ವಾದ ವಿವಾದ ನಡೆಯುತ್ತಿರುವಾಗ ವಾದವಿವಾದದ ಭಾಷೆಯಾದ ಇಂಗ್ಲೀಷ್‍ನ ಒಂದು ಪದವೂ
ತಿಳಿಯದ ಅಬೋರಿಜಿನ್ ಕಟಕಟೆಗೆ ನುಗ್ಗಿ ಬರುತ್ತಾನೆ. ಬುಡಕಟ್ಟು ಜನರ ಭೂಮಿಯ ಹಕ್ಕುದಾರಿಕೆ ತೀರ್ಮಾನವಾಗುತ್ತಿದ್ದ
ಸಮಯವಿದು. ಆಗ ನುಗ್ಗಿದವ ಯಾರಿಗೂ ತಿಳಿಯಲಾಗದ ಭಾಷೆಯೊಂದರಲ್ಲಿ ಸುದೀರ್ಘ ಭಾಷಣ ನೀಡುತ್ತಾನೆ. ಜಡ್ಜ್
ಆತನನ್ನು ಇಂಗ್ಲೀಷ್‍ನಲ್ಲಿ ಸುಮ್ಮನಿರು ಎಂದರೆ ಆತನಿಗೆ ಅರ್ಥವಾಗುವುದಿಲ್ಲ. ಉಳಿದ ಬುಡಕಟ್ಟು ಜನರ
ಮೂಲಕ ಆತನ ಭಾಷೆಯನ್ನು ತಿಳಿಯಲೂ ಕೂಡಾ ಸಾಧ್ಯವಾಗುವುದಿಲ್ಲ. ನಂತರ ತಿಳಿಯುತ್ತದೆ ಈ ರೀತಿ ನುಗ್ಗಿ
ಬಂದು ಕಟಕಟೆಯಲ್ಲಿ ನಿಂತಿರುವುದು ಒಂದು ನಾಶವಾದಂತಹ ಆಸ್ಟ್ರೇಲಿಯಾದ ಅಬೋರಿಜಿನ್ ಬುಡಕಟ್ಟಿನ ಕೊನೆಯ
ಒಬ್ಬನೇ ವ್ಯಕ್ತಿ ಎಂದು. ಈ ಕಾರಣದಿಂದಲೇ ಆತನ ಭಾಷೆ, ಅಭಿವ್ಯಕ್ತಿಯನ್ನು ಯಾರೂ ಅರ್ಥೈಸಿಕೊಳ್ಳುವುದಿಲ್ಲ.
ಬಹುಶ: ಇಡಿಯಾಗಿ, ಧ್ವಂಸಕಾರಿಯಾಗಿ ನಮ್ಮೊಡನಿರುವ ಅಭಿವೃದ್ಧಿ ಎಂಬ ಅನುಭವವೇ ಅದಕ್ಕೆ ಕಾರಣವೆಂಬ ಮನವಿಯನ್ನು
ಹರ್ಜೋಗ್ ನಡೆಸುತ್ತಾನೆ. ಸಿನಿಮಾ ಈ ನೆಲೆಯಲ್ಲಿ ತೀವ್ರವಾಗಿ ಕಾಡುತ್ತದೆ. ಅತ್ಯಂತ ಸ್ಟ್ರೇಂಜ್ ಆದ
ಸಿನಿಮಾ ಮೇಕರ್ ಆಗಿರುವ ಹರ್ಜೋಗ್ ಸಿನಿಮಾಗಳೂ ಕೂಡಾ ಸ್ಟ್ರೇಂಜ್ ಆಗಿರುವುದು ಈ ಕಾರಣಕ್ಕಾಗಿ.
ಈ ಸಿನಿಮಾವನ್ನು, ಈ ರೀತಿಯ ಮನುಷ್ಯರ, ಬುಡಕಟ್ಟುಗಳ ಜೀವನವನ್ನು ಏಕಾಂಗಿಯಾದ, ಆತನ ಎಲ್ಲಾ
ಸಂಬಂಧಗಳನ್ನು ಅಭಿವೃದ್ಧಿಯು ಹರಿದ ರೂಪದಲ್ಲಿ ಕೂಡಾ ನೋಡಬಹುದು. ಇದರ ಜತೆಗೆ ಆತನು ಜಗತ್ತಿನ ಇನ್ಯಾರೊಂದಿಗೂ
ಸಂವಹಿಸಲಾಗದ ಅಸಹಾಯಕ ಸ್ಥಿತಿಯ ಮತ್ತು ಒಬ್ಬಂಟಿಯಾಗಿ ಸಾಯಬೇಕಾದ ಅನಿವಾರ್ಯತೆಯನ್ನೂ ಕೂಡಾ ಮನಗಾಣಿಸುತ್ತದೆ.
ಆತನ ವಿಲೀನೀಕರಣ ಮತ್ತು ಭವಿಷ್ಯದಲ್ಲಿ ಒದಗುವ ಸಾವು ಕೂಡಾ ಯಾವುದೋ ಕುಲದ, ಪಂಗಡದ ಮತ್ತು ಸಾಂಸ್ಕøತಿಕ
ಜೀವಿಯೊಂದರ ಅಂತಿಮ, ಆತ್ಯಂತಿಕ ಕ್ಷಣವೂ ಆಗಿಬಿಡುತ್ತದೆ. ಮುಖ್ಯವಾಹಿನಿ ಪ್ರಜ್ಞೆಯೊಂದು, ಅದರ ಪ್ರವಾಹವೊಂದು,
ಮಹತ್ತರವೆನಿಸದ ಎಂದು ಅವರು ಪರಿಗಣಿಸಿರುವ ಸಮುದಾಯವೊಂದನ್ನು ಸಹಿಸದ, ಜೀರ್ಣಿಸಿಕೊಳ್ಳದ, ಸಹಬಾಳ್ವಿಸಿದ,
ಸೂಕ್ಷ್ಮರಾಹಿತ್ಯದ ಸ್ಥಿತಿಯಾಗಿ, ಪೈಶಾಚಿಕತೆಯ ರೂಪಕವಾಗಿ ಕೂಡಾ ಗೋಚರಿಸುತ್ತದೆ. ಭಾರತದ ಒಬ್ಬ ಪ್ರಸಿದ್ಧ
ಚಿಂತಕ ಆಶಿಷ್ ನಂದಿ ಇನ್ನೂ ಮುಂದುವರಿದು ಈ ಚಿತ್ರದ ಬಗ್ಗೆ, ‘ಪೈಶಾಚಿಕತೆ ಎಂಬುದು ಸ್ಥಳೀಯ ಜನರಿರುವೆಡೆ,
ಇದ್ದೆಡೆ ಇರುವುದಿಲ್ಲ, ಆದರೆ ಸಮಚಿತ್ತದ ನ್ಯಾಯ ಹಾಗೂ ಕಾಸ್ಮೋಪಾಲಿಟನಿಸಂನ ಕಲ್ಪನೆಯನ್ನು ಬೆಳೆಸುವ
ಸಾಂಸ್ಕøತಿಕ ಕೇಂದ್ರಗಳಲ್ಲಿ ನರ್ತಿಸುತ್ತದೆ ಎನ್ನುವುದನ್ನು ಈ ಚಿತ್ರದ ಮೂಲಕ ಹರ್ಜೋಗ್ ಸೂಚಿಸಿರುವಂತಿದೆ” ಎನ್ನುತ್ತಾರೆ.
“ಜರ್ಮನಿಯ ಪುನರ್ ನಿರ್ಮಾಣ, ಬೃಹತ್ ಬೆಳವಣಿಗೆ ಹಾಗೂ ಹಸಿರು ಕ್ರಾಂತಿಯಂತಹ
ಅನುಭವಗಳನ್ನು ಪ್ರಾಯಶ: ಪಡೆದಿರಬಹುದಾದ ಹರ್ಜೋಗ್, ತನ್ನ ಅನೇಕ ಸಿನಿಮಾತ್ಮಕವಾದ ತಂತ್ರಗಳ ಮೂಲಕ ಇವೆಲ್ಲದರ
ಪರಿಣಾಮಗಳನ್ನೂ ಕ್ಷೀಣಗೊಳಿಸುತ್ತಾನೆ. ಉದಾಹರಣೆಗೆ ಒಟ್ಟಾರೆ ಕಲುಷಿತವಾದ ವಾತಾವರಣವನ್ನು, ನಲ್ಮೆಯುಳ್ಳ
ಭೂದೃಶ್ಯಗಳನ್ನೂ ಯಾವುದೋ ಭಯಾನಕವಾದ ಚರ್ಮವ್ಯಾಧಿ ಪೀಡಿತವಾದ ದೇಹದಂತೆ ತೋರಿಸುತ್ತಾನೆ. ಜೊತೆಗೆ ಮೊದಲಿಗೆ
ಆತ ಜಗತ್ತಿನ ಯುದ್ಧಗಳನ್ನು ಗೆದ್ದವರಾರು? ಹಾಗೂ ಜಗತ್ತನ್ನು ಇಂದು ಆಳುತ್ತಿರುವವರ್ಯಾರು? ಎಂಬುದನ್ನು
ಸ್ಪಷ್ಟಪಡಿಸಿಬಿಡುತ್ತಾನೆ. ಆದರ್ಶಗಳುಳ್ಳ ಏಕಾಂಗೀ ಮನುಷ್ಯರಷ್ಟೇ ಇಂದು ಇಂತಹ ವ್ಯವಸ್ಥೆಯ ಹಿನ್ನೆಲೆಯ
ಮೂಲಕ ನೋಡಬಲ್ಲರು. ಇಂತವರು ಒಬ್ಬಂಟಿ, ಮುಗ್ಧ, ಅಸಹಾಯಕ ಆದರೆ ಒಳ್ಳೆ ಉದ್ದೇಶದ ಬುಡಕಟ್ಟಿನವನಂತೆ
ಇರಬೇಕು, ಇಲ್ಲವೇ ಆಳುತ್ತಿರುವ ಸಂಸ್ಕøತಿಯಿಂದ ನೈತಿಕವಾಗಿ ಭಿನ್ನಮತೀಯನಾಗಿರಬೇಕು. ಸಾರ್ವಜನಿಕ ಹಿತಾಸಕ್ತಿಯುಳ್ಳ
ಮುಕ್ತ ಮನಸ್ಸಿನ ಲಾಯರ್ ಆಗಲಿ ಅಥವಾ ನಾಗರೀಕತೆಯ ಹೊರಗೆ ಜೀವಿಸುತ್ತಿರುವ ಮಾನವಶಾಸ್ತ್ರಜ್ಞನಾಗಲೀ
ಇಂತಹ ಭಿನ್ನಮತೀಯರು. ಇಂತವರಷ್ಟೇ ಚೂರುಪಾರು ಪರಿಣಾಮಕಾರಿಯಾದ, ಆದರೆ ಗೆಲುವರಿಯದ ಭಿನ್ನಮತವನ್ನು
ಅಥವಾ ತಡೆಯನ್ನು ಒಡ್ಡುವರು. ಇಂತಹದೇ ತಡೆಯನ್ನೂ ಬುಡಕಟ್ಟಿನವರೂ ಈ ಸಿನಿಮಾದಲ್ಲಿ ಒಡ್ಡುತ್ತಾರೆ.
ಯುರೇನಿಯಂ ಗಣಿಕಾರ್ಯ ಆರಂಭವಾದರೆ ಅದು ಹಸಿರು ಇರುವೆಗಳ ಕನಸನ್ನು ನಾಶಪಡಿಸುತ್ತವೆಂತಲೂ ತನ್ಮೂಲಕ
ಜಗತ್ತಿನ ಅಸ್ತಿತ್ವಕ್ಕೆ ವಿನಾಶವೆಂದು ನಂಬುವುದರ ಮೂಲಕ ಹರ್ಜೋಗ್‍ನ ನಿಲುವು, ‘ಬುಡಕಟ್ಟಿನವರ ನಂಬಿಕೆಗೊಂದು
ಭವಿಷ್ಯವಿರಬೇಕು ಮತ್ತದು ಮನೋವಿಜ್ಞಾನದ ಸೀಮಿತತೆಯನ್ನು ಮೀರುವಂತಿರಬೇಕು’ ಎನ್ನುತ್ತದೆ. ಕ್ಷುಲ್ಲಕ ರಾಜಕಾರಣದಿಂದ ದೂರಾಗಲು ಹಾಗೂ ತಾರ್ಕಿಕತೆ ಮತ್ತು ಸಮಚಿತ್ತತೆಯ
ಉತ್ತಮ ಸ್ತರವನ್ನು ಇಂತಹ ನಂಬಿಕೆ ಚಿತ್ರಿಸುತ್ತದೆ.
ಇಡೀ ಚಿತ್ರ ನಾಗರೀಕತೆಯ ಚರ್ಚೆಯನ್ನೇ ನಡೆಸುತ್ತದೆ. ಜತೆಗೆ ನಾಗರೀಕತೆ ಮತ್ತು ಸಂಸ್ಕøತಿಗಳನ್ನು
ತೌಲನಿಕವಾಗಿ ವಿಮರ್ಶಿಸುತ್ತಾ ನಾಗರೀಕತೆಯ ಓರೆಕೋರೆಗಳನ್ನು ಚರ್ಚಿಸುತ್ತದೆ. ಆಧುನಿಕತೆ, ಅಭಿವೃದ್ಧಿ
ಮತ್ತು ಕಾರ್ಪೋರೇಟ್ ಹೌಸ್ ಮತ್ತು ಅದರ ಶುಷ್ಕ ಹೃದಯ ಮತ್ತು ಬರಡು ಆತ್ಮದ ವಿನ್ಯಾಸಗಳನ್ನೂ ಹೊರಗೆಡಹುತ್ತದೆ.
ಕೋರ್ಟ್‍ನಲ್ಲಿ ಟ್ರಯಲ್ ನಡೆಯುತ್ತಿರುವಾಗ ಹಠಾತ್ತನೆ ಪ್ರವೇಶಿಸುವ ಬುಡಕಟ್ಟು ಮನುಷ್ಯ ಮತ್ತಾತನ ಪ್ರಲಾಪವೂ
ಸಹ ನೇರವಾಗಿ ಯುರೋಪಿನ-ಆಂಗ್ಲ ನ್ಯಾಯ ವ್ಯವಸ್ಥೆಯ ಎತ್ನೋಗ್ರಾಫಿಕ್ ಕ್ರಿಯಾವಿಧಿಗಳ ವ್ಯಂಗ್ಯವೂ ಆಗಿದೆ.
ಹರ್ಜೋಗ್ ಸ್ವತ: ಸಿನಿಮಾ ಕುರಿತು ಹೇಳುವಂತೆ, ‘ಅಬೋರಿಜಿನ್‍ಗಳನ್ನು
ಈ ಭೂಮಿಯ ಮಹತ್ವದ ಭಾಗವೆಂದು ತಿಳಿಯುವ ಪ್ರಯತ್ನವಿದು. ಒಂದು ವೇಳೆ ವೈಶ್ಚಿಕವಾದ ಯಾವುದಾದರೂ ಒಂದು
ವ್ಯವಸ್ಥೆ ಇದ್ದರೆ ಅವರು ಮಾತ್ರ ಅಂತಹ ವ್ಯವಸ್ಥೆ, ಜೀವದ ಭಾಗ. ಈ ಕಾರಣದಿಂದಲೇ ಸ್ಯಾಮ್ ಮೂಲಾಗೂಚಾನಂತಹ
ಒಬ್ಬ ಮನುಷ್ಯ ಹೇಳಿದ ಹಾಗೆ, ‘ನೋಡು ಅವರಿಲ್ಲಿ ತೋಡಿದ ಗುಂಡಿ ಹೊಂಡಗಳು, ಅವರು ಭೂಮಿಯನ್ನು ಛಿದ್ರಿಸಿದರು,
ನಿನಗೆ ಕಾಣುತ್ತಿಲ್ಲವೇ? ನನ್ನ ದೇಹದ ಮೇಲೂ ಉಂಟಾಗಿರುವ ಛಿದ್ರ ವಿಚ್ಚಿದ್ರ ಹೊಂಡಗಳು.
***
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ