ಅಂಬೇಡ್ಕರ್ ಟೀಕಾಕಾರರ ಸಮಸ್ಯೆಗಳು

ಅಂಬೇಡ್ಕರ್ ವ್ಯಕ್ತಿತ್ವ ತೀವ್ರವಾಗಿ ಬೆಳೆದಿದ್ದು, ೧೯೮೦-೯೦ರ ನಂತರದ ಮಂಡಲ್‌ ಆಯೋಗ ಹಾಗೂ ಅದರ ರಾಜಕಾರಣ, ಸ್ವತಂತ್ರವಾದ ದಲಿತ ಮತ್ತು ಹಿಂದುಳಿದ ವರ್ಗಗಳ ಚಳುವಳಿಗಳ ನಂತರ. ಈ ಸುಮಾರಿಗೆ ಅಂಬೇಡ್ಕರ್ ಮತ್ತು ಅವರ ಯೋಚನೆಗಳು ದಲಿತ ಚಳುವಳಿಯ ಸಂಕೇತವಾದವು. ಇತ್ತೀಚಿನ ದಿನಗಳಲ್ಲಂತೂ “ಅಂಬೇಡ್ಕರ್ ಅನಿವಾರ್ಯತೆ” ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಅಂಬೇಡ್ಕರ್ ೧೯೨೦ರ ಸುಮಾರಿಗೆ “ವಸಹಾತುಷಾಹೀ ಸಂದರ್ಭದಲ್ಲಿನ ಭಾಗವಹಿಸುವಿಕೆ” ಅಥವಾ ಮಧ್ಯ ಪ್ರವೇಶದ ರೂಪದಲ್ಲಿ ಕಂಡುಬಂದರು. ಅಂಬೇಡ್ಕರ್ ಆ ಸಮಯದಿಂದ ಸ್ವಾತಂತ್ರ್ಯ, ಸಮಾನತೆ ಮತ್ತು ಬಂಧುತ್ವದ ಮೇಲೆಯೇ ಒಂದು ವಿಶ್ವಾತ್ಮಕವಾದ ನೆಲೆಯಲ್ಲಿ ಅಸ್ಪೃಶ್ಯತೆಯ ವಿರುದ್ಧದ ಹೋರಾಟವನ್ನು ನಡೆಸಬೇಕೆಂಬ ಯೋಚನೆ ಮಾಡಿದರು. ಅಂಬೇಡ್ಕರ್ ಚಿಂತನೆಗಳೂ ಸಹ ಮುಖ್ಯವಾಗಿ, ಸಾಂವಿಧಾನಿಕ ಪ್ರಜಾಪ್ರಭುತ್ವ, ರಾಷ್ಟ್ರ ಸಮಾಜವಾದ ಮತ್ತು ಬೌದ್ಧವಾದಗಳು ಕೂಡಾ ಸಂಘಟನೆ ಮತ್ತು ಹೋರಾಟದ ಸಂಗತಿಗಳಿಗೆ ತೀರಾ ಹತ್ತಿರವಾದವುಗಳು. ಅಭಿವೃದ್ಧಿ ಮತ್ತು ಅದರ ಮೇಲಿನ ರಾಷ್ಟ್ರದ ಮೂಲಾಂಶಗಳನ್ನು ವಿಮರ್ಶಾತ್ಮಕವಾಗಿ ವ್ಯಾಖ್ಯಾನಿಸುತ್ತಾ ಒಂದು ವ್ಯವಸ್ಥೆಯ ನೆಲೆಯ ಸಾಮಾಜಿಕ ಪ್ರಕ್ರಮ, ಹಿಂದು ಸಮಾಜದ ಸಂಪೂರ್ಣ ಪರಿವರ್ತನೆಯನ್ನು ಕೂಡಾ ಯೋಚಿಸಿ ಜಾತಿರಹಿತ ಸಮಾಜದ ಆಶಯವನ್ನು ಮಾರ್ಕ್ಸ್‌ವಾದ ಮತ್ತು ಬೌದ್ಧವಾದದಗಳ ನಡುವೆ ಸಂವಾದಿಸಿ ಸಿದ್ಧಪಡಿದರು. ಹೀಗೆ ದಲಿತ ಚಿಂತಕನಾಗಿ, ಉದ್ಧಾರಕನಾಗಿ, ರಾಜಕಾರಣಿಯಾಗಿ, ಸಂವಿಧಾನತಜ್ಞನಾಗಿ ಮತ್ತು ಇನ್ನೂ ಕೆಲವು ವಿಶೇಷತೆಗಳೊಂದಿಗೆ ಆಧುನಿಕ ಭಾರತದ ನಿರ್ಮಾತೃಗಳಲ್ಲಿ ಒಬ್ಬರಾದ ಅಂಬೇಡ್ಕರ್ ಟೀಕೆ, ಟಿಪ್ಪಣಿ, ವಿಮರ್ಶೆಗಳಿಂದ ಹೊರತಾಗಿಲ್ಲ. ಸಕಾರಣ ವಿರೋಧ, ವಸ್ತುನಿಷ್ಠತೆಯ ವಿಮರ್ಶೆ, ತಾತ್ವಿಕ, ಭಿನ್ನಾಭಿಪ್ರಾಯಗಳು ಹೀಗೆ ಹಲವು ರೀತಿಯಲ್ಲಿ, ಜೊತೆಗೆ ವಿರೋಧಕ್ಕಾಗಿ ವಿರೋಧವೆನ್ನುವ ನೆಲೆಯಲ್ಲಿ ಕೂಡಾ ಅಂಬೇಡ್ಕರ್ ಚರ್ಚಿತರಾಗಿದ್ದಾರೆ. ನೇರವಾಗಿ ಕೆಲವೋಮ್ಮೆ ತೌಲನಿಕ ಅಂದರೆ ಅವರು ಶ್ರೇಷ್ಠರೋ? ಇವರು ಶ್ರೇಷ್ಟರೋ? ಅಂದರೆ, ಗಾಂಧಿ ಮೇಲೋ, ಅಂಬೇಡ್ಕರ್ ಮೇಲೋ? ಎನ್ನುವ ನೆಲೆಯಲ್ಲಿ ಕೂಡಾ ಅಂಬೇಡ್ಜರ್ ಟೀಕೆಗೊಳಗಾಗಿದ್ದಾರೆ. ತಾತ್ವಿಕತೆ, ವ್ಯಕ್ತಿತ್ವ, ಸಮಾಜಸುಧಾರಣೆ, ದಲಿತ ಚಿಂತನೆ ಹೀಗೆ ಹತ್ತುಹಲವು ಆಯಾಮಗಳಲ್ಲಿ ಕೂಡಾ ಅಂಬೇಡ್ಕರ್ ಸಾಕಷ್ಟು ಟೀಕೆಗಳನ್ನು ಎದುರಿಸಿ ಬೆಳಗಿದ್ದಾರೆ. ಅರುಣ್ ಶೌರಿಯವರಂತಹರ "ವರ್ಶಿಪಿಂಗ್‌ ಫಾಲ್ಸ್‌  ಗಾಡ್ಸ್‌ʼನಿಂದ ಹಿಡಿದು ಅದೇ ಮಾದರಿಯ ನಕಾರಾತ್ಮಕ ಪೂರ್ವಾಗ್ರಹಪೀಡಿತ ಟೀಕೆ ಗಳನ್ನು ಕೂಡಾ ಎದುರುಸುವುದರ ಜೊತೆಗೆ, ವೆಲೇರಿಯನ್ ರೋಡ್ರಿಗಸ್, ಗೋಪಾಲ್ ಗುರು ಮುಂತಾದ, ಅನೇಕರ ಸ್ಕೊಲಾಸ್ಟಿಕ್ ಮತ್ತು ಅನೇಕ ಅಕಡಮಿಕ್ ಚರ್ಚೆ, ಟೀಕೆಗಳನ್ನು, ವಿಮರ್ಶೆ ವಿಶ್ಲೇಷಣೆಗಳನ್ನು ಎದುರಿಸಿದ್ದಾರೆ.

ಪ್ರಸ್ತುತ ಟೀಕೆ ಎನ್ನುವ ಶಬ್ದ ತುಂಬಾ ಸೀಮಿತ ಅರ್ಥವ್ಯಾಪ್ತಿಯದ್ದೆನ್ನುವ ಕಾರಣ ಅದರ ಜೊತೆಗೆ, ಟೀಕೆ, ವಿಮರ್ಶೆ, ವಿಶ್ಲೇಷಣೆ ಮತ್ತು ಕ್ರಿಟಿಕ್  ಮುಂತಾದ ವ್ಯಾಪ್ತಿ ಮತ್ತು ಅರ್ಥಬರುವ ಪದಗಳ ವ್ಯಾಪ್ತಿಯಲ್ಲಿ ಯೋಚಿಸುವ ಪ್ರಯತ್ನ ಮಾಡಿದ್ದೇನೆ. ಅಂಬೇಡ್ಕರ್ ಬಗೆಗಿನ ಟೀಕೆಗಳ ವ್ಯಾಪ್ತಿಯೂ ಕೂಡಾ ವಿಶಾಲವಾದುದ್ದರಿಂದ ಈ ಪ್ರಯತ್ನ ಮತ್ತು ಆರೀತಿಯ ಪದಗಳ ದುಡಿಸಿಕೊಳ್ಳುವಿಕೆ ಕೂಡಾ ಮಹತ್ವದ್ದೆಂಬುದು ನನ್ನ ಅನಿಸಿಕೆ.

ಅಂಬೇಡ್ಕರ್ ಈಗಲೂ ಕೂಡಾ ಸಾಕಷ್ಟು ಚರ್ಚೆ, ಟೀಕೆಗಳನ್ನು ಪಡೆಯುತ್ತಿರುವುದು ಹಕ್ಕುಗಳು, ಅಸ್ಮಿತೆ ಮತ್ತು ಕಾರಣಗಳು, ಬಹುತ್ವ ಮತ್ತು ಅದರ ಮಿತಿಗಳು, ಸಾಂವಿಧಾನಾತ್ಮಕತೆ ಮತ್ತು ಪ್ರಸ್ತುತ ಸಮಾಜದಲ್ಲಿ ರೂಲ್‌ ಆಫ್‌ ಲಾ ದ ಅನ್ವಯದ ಕುರಿತಿರುವ ಅನೇಕ ವಿಚಾರಗಳ ಮೇಲೆ. ಈ ನೆಲೆಯಲ್ಲಿಯೇ ಅಂಬೇಡ್ಕರ್ ವಿಚಾರಗಳು, ಮಹಾತ್ಮಗಾಂಧಿ ಮತ್ತು ಜವಾಹರ್‌ಲಾಲ್ ನೆಹರು ವಿಚಾರಗಳಿಗಿಂತ ತುಂಬಾ ಪ್ರಸ್ತುತ ಎನ್ನುವುದೂ ಕೂಡಾ ಅಂಬೇಡ್ಕರ್ ಮೇಲಿನ ಒಂದು ಪ್ರಸಿದ್ಧ ವಿಮರ್ಶೆ ಮತ್ತು ಟೀಕೆ. ಗಾಂಧಿ, ಅಶಕ್ತರ ಹಕ್ಕುಗಳ ಬಗ್ಗೆ ಹೆಚ್ಚು ಮಾತನಾಡದೇ, ನೆಹರೂ ಪ್ರಜಾಪ್ರಭುತ್ವೀಯ ರಾಷ್ಟ್ರೀಯವಾದವನ್ನು ಅಭಿವೃದ್ಧಿಯ ಬೆಳಕಿಂಡಿಯಲ್ಲಿ ನೋಡುತ್ತಾ ಸಾಗಿ, ಭಾರತೀಯ ಸಮಾಜೋ-ರಾಜಕೀಯ ಸಂರಚನೆ (ಸೋಸಿಯೋ-ಪೊಲಿಟಿಕಲ್‌ ಫಾರ್ಮೇಶನ್) ಯ ವಾಸ್ತವಗಳನ್ನೇ ಮರೆತರು ಎನ್ನುವುದೂ ಕೂಡಾ ಪ್ರಸಿದ್ಧ ಟೀಕೆ. ಆದರೆ, ಅಂಬೇಡ್ಕರ್ ಮಾತ್ರ ಬಹು ದೃಷ್ಠಿ ಮತ್ತು ಆಯಾಮಗಳಿಂದ ನೋಡಿದರು ಎನ್ನುವುದು ಕೂಡಾ ಟೀಕೆಯೇ.

‘ಟೀಕೆ’ ಎನ್ನುವ ಸಂಸ್ಕೃತ ಶಬ್ದದ ಅರ್ಥವೇ “ ಟೀಕೃ-ಗತಾ” ಅಂದರೆ ಕ್ಲಿಷ್ಟ ಪದಗಳ ಅರ್ಥವಿವರಣೆ, ವ್ಯಾಖ್ಯಾನವೆಂತಲೂ ಗ್ರಹಿಸಬಹುದು. ಇನ್ನೂ ಕೂಡಾ ವಿಸ್ತರಿಸಿ ಕ್ಲಿಷ್ಠ ಪದ, ಕಲ್ಪನೆ ಗ್ರಹೀತಗಳ ವ್ಯಾಖ್ಯಾನವೆಂತಲೂ ಚಿಂತಿಸಬಹುದು. ಪ್ರಸ್ತುತ ಅಂಬೇಡ್ಕರ್‌ರ ತತ್ವ ಅಥವಾ ಅಂಬೇಡ್ಕರ‍್ತನವೇ ಒಂದು ವಿಚಾರವಾಗಿದ್ದು ಕ್ಲಿಷ್ಠ ಪರಿಕಲ್ಪನೆಯಾಗಿದ್ದು ಅದರ ವ್ಯಾಖ್ಯಾನ, ವಿಮರ್ಶೆ, ವಿಶ್ಲೇಷಣೆ ಹೊಸ ರೀತಿಯಲ್ಲಿ ಅರ್ಥವಿಸ್ತಾರಗೊಳಿಸುವುದಕ್ಕೆ ಎನ್ನುವ ರೀತಿಯಲ್ಲಿಯೂ ಕೂಡಾ ಕಲ್ಪಿಸಬಹುದು. ಅಂಬೇಡ್ಕರ್ ಬದುಕಿನ ಮೇಲೆ ಹೊಂದಿದ್ದ ದೃಷ್ಠಿ ಕೂಡಾ ಟೀಕೆಯೇ. ತಾತ್ವಿಕವಾಗಿ ಮತ್ತು ಪ್ರಾಯೋಗಿಕ ನೆಲೆಯಲ್ಲಿ ಇದರ ಬಗ್ಗೆ ಟೀಕೆಗಳು ಮೂಡಿವೆ. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮಾನವನ ಜೀವನಕ್ಕೆ ಬೇಕಾದ ಅತ್ಯಂತ ಪ್ರಮುಖ ಅಂಶಗಳೆನ್ನುವುದನ್ನು ಕೂಡಾ ಕಲವರು ಟೀಕಿಸಿದ್ದಾರೆ. ಕೆಲವು ದಲಿತ ಚಿಂತಕರೂ ಕೂಡಾ ಅಂಬೇಡ್ಕರ್ ಹಕ್ಕುಗಳ ಬಗೆಗಿನ ದೃಷ್ಠಿಯನ್ನು ಟೀಕಿಸಿದ್ದಾರೆ. ಅಂಬೇಡ್ಕರ್ ಹೇಳುವ ಸಾಂವಿಧಾನಿಕ ಪ್ರಕ್ರಮ, ಹಕ್ಕುಗಳು, ಮಾತ್ರ ಅಶಕ್ತ ಸಮಾಜ ವರ್ಗಗಳನ್ನು ಗೌರವಿಸುವಲ್ಲಿ ಒಂದು ವಿನೂತನ ಮಾಧ್ಯಮಗಳು” ಎನ್ನುವುದನ್ನು ಕೂಡಾ ಮತ್ತು ಒಂದು ಆರೋಗ್ಯಕರವಾದ ಸಾಂವಿಧಾನಿಕ ಪ್ರಕ್ರಮವೂ ಸಾರ್ವಜನಿಕ ವೈಚಾರಿಕತೆ ಮತ್ತು ಜನಪ್ರಿಯ ಭಾಗಗ್ರಹಣಗಳನ್ನು ಸಾಧಿಸಿ ಭಾವನಾತ್ಮಕ ಅಂಶವನ್ನು ಕೂಡಾ ಕಾಯುತ್ತದೆ ಎನ್ನುವ ಅಂಬೇಡ್ಕರ್ ಬರಹ ಯೋಚನೆಗಳ ಬುಡವನ್ನೇ ಪ್ರಶ್ನಿಸಿದ ಟೀಕೆಗಳು ಕೂಡಾ ಇವೆ. ಅಂಬೇಡ್ಕರ್ ಆಧುನಿಕ ಮನು, ಮನುತ್ವ ಎನ್ನುವುದನ್ನು ದಲಿತವೆಂಬ ಅಂಬೇಡ್ಕರ್ ಸ್ವೀಕರಿಸಿದ ರಾಜಕೀಯ ಗ್ರಹೀತ ಕುರಿತು, ಸಾಮಾಜಿಕ ನೆಲೆಯಲ್ಲಿ ಇನ್ನೂ ಕೂಡಾ ವಿಸ್ತರಿಸಬೇಕಾದ ಸಬಾಲ್ಟರ್ನ್ ನೆಲೆಯ ಗ್ರಹಿಕೆಗಳು ಅಂಬೇಡ್ಕರ್ ಸಂವಿಧಾನದ ರೂಪಕದ ಕುರಿತು ಇರುವ ಗ್ರಹಿಕೆಗಳು, ೧೯೯೦ರ ಹೊತ್ತಿಗೆ ಇಡೀ ದೇಶದಲ್ಲಿ ಮೂಡಿದ ರಿಸರ್ವೇಶನ್‌ ವಿರೋಧಿ ಚಳುವಳಿಯ ಗ್ರಹೀತಗಳು ಮತ್ತು ೨೧ನೇ ಶತಕ ಜಾರಿ ೨೨ನೇ ಶತಕದಲ್ಲಿರುವ ನಮ್ಮನ್ನು ವ್ಯಾಪಿಸಿ ಕಾಡುವ ಇಲೀಟ್ ಅಥವಾ ಮಧ್ಯಮವರ್ಗದ ಅಂದಾಜಿನ ಗುಂಡಿನ ಟೀಕೆಗಳು ಅತ್ಯಂತ ಪ್ರಮುಖವಾಗಿ ಅಂಬೇಡ್ಕರ್‌ರೊಂದಿಗೆ ತಳುಕು ಹಾಕಿಕೊಳ್ಳುತ್ತವೆ. ದಲಿತ ಸಮಾಜ-ಸಮುದಾಯ ಅಂಬೇಡ್ಕರ್‌ರನ್ನು ನೋಡುವ ಬಗೆ ಇಲೀಟ್ ಎನ್ನಬಹುದಾದ ಒಂದು ಸಮೂಹ ಅಂಬೇಡ್ಕರ್ ‌ಅನ್ನು ಗ್ರಹಿಸುವ ಶ್ರಮ ಮತ್ತು ೧೯೫೦-೬೦ರಲ್ಲಿ ಅಂಬೇಡ್ಕರ್ ಪ್ರತಿಪಾದಿಸಿದ ಸಮಾಜೋ-ರಾಜಕೀಯ ಚೌಕಟ್ಟಿನೊಳಗೆ ಈಗೀನ ಸಮಾಜ ದಲಿತ ಮಹಿಳೆ ಹೇಗೆ ಹೊಂದುತ್ತಾಳೆ? ಮತ್ತು ಹೇಗೆ ಹೊಂದಿಸಬಹುದೆನ್ನುವ ಒಂದು ಹೊಸ ವಾದಗಳೂ ಕೂಡಾ ಅಂಬೇಡ್ಕರ್ ಬಗೆಗಿನ ಟೀಕೆಗಳ ಹಲವು ವಿಧಗಳಾಗಿವೆ. ಅಂಬೇಡ್ಕರ್ ೧೯೨೦-೩೦ರ ದಶಕದಲ್ಲಿ ಭಾರತೀಯ ಸಮಾಜೋ-ರಾಜಕೀಯ ರಂಗಮಂಚವನ್ನು ಪ್ರವೇಶಿಸಿ ನಂತರ ಚರಿತ್ರೆ ೧೯೩೦ರ ಸುಮಾರಿಗೆ ಉಂಟಾದ ಪೂನಾ ಪ್ಯಾಕ್ಟ್ ನ ತಾತ್ವಿಕ ಧ್ರುವೀಕರಣದ ವಿವಾದ, ಟೀಕೆಗಳನ್ನು ಸೃಷ್ಠಿಸಿತು. ವಿಶೆಷವಾಗಿ ಹಿಂದೂ ಮಹಾಸಭಾ ಮತ್ತು ಅದೇ ರೀತಿಯ ಹಿತಾಸಕ್ತಿಯನ್ನೊಳಗೊಂಡ ‘ದಲಿತ’ ಎನ್ನುವ ಪರಿಕಲ್ಪನೆ ಆಲೋಚನೆಗೆ ಭಿನ್ನವಾದಂತಹ, ವಿರುದ್ಧವಾದಂತಹ ವಾದಗಳೂ ಕೂಡಾ ಅಂಬೇಡ್ಕರ್ ಟೀಕೆಯ ಭಾಗಗಳಾಗಿವೆ. ಇಲ್ಲಿ ಕೆಲವು ಟೀಕೆಗಳು ಸಂಪೂರ್ಣ ವಿರುದ್ಧವಾದರೆ, ಇನ್ನೂ ಕೆಲವು ಮಧ್ಯಮಮಾರ್ಗವನ್ನು, ಇನ್ನೂ ಕೆಲವು ಪೂರ್ವಾಗ್ರಹವನ್ನು, ಕೆಲವು “ವಿಷಉಗುಳುವಿಕೆ”ಯನ್ನು, ಇನ್ನೂ ಕೆಲವು” ವಾದಿತನವನ್ನು, ಕೆಲವು ಅತಿಯಾದ ಮೋಹವನ್ನು, ಮತ್ತುಳಿದವುಗಳು ಸ್ಕೊಲಾಸ್ಟಿಕ್ ಮತ್ತು ಅಕಡಮಿಕ್ ನೆಲೆಯನ್ನು ಹೊಂದಿದ್ದರೆ,‌ ಕೆಲವು ಕನ್ನಡದಲ್ಲಿ ಚಿಂತಕ ಡಿ.ಆರ್. ನಾಗರಾಜ್‌ರ ಮಾದರಿಯ ಸ್ವರ್ಗೀಯ ಕಥನಗಳ ರೀತಿಯಲ್ಲಿವೆ. ಹೀಗೆ ಹಲವು ಮಾದರಿ ಮತ್ತು ಶೈಲಿಯಲ್ಲಿ ಟೀಕೆಗಳು ಸಾಗಿವೆ. ಅನೇಕ ವ್ಯಕ್ತಿ, ವಿಚಾರಗಳ ನೆಲೆಯಲ್ಲಿ ತೌಲನಿಕ ಟೀಕೆಗಳಂತೂ ಲೆಕ್ಕವಿಲ್ಲದಷ್ಟು ಬಂದಿವೆ. ಈ ಎಲ್ಲಾ ಟೀಕೆ-ಟಿಪ್ಪಣಿಗಳು ಕೆಲ ಸಮಸ್ಯೆಯ ಮೇಲೆ ಮೂಡಿದವುಗಳಾಗಿವೆ. ಟೀಕಾಕಾರರು ಹಲವು ಸಮಸ್ಯೆ, ಪ್ರಶ್ನೆಗಳನ್ನು ಆಯ್ದು, ಅವುಗಳ ಮೇಲೆ ಮಾಡಿದಂತವುಗಳು. ಹೆಚ್ಚಿನವುಗಳು ತೀರಾ ಅಕಡಮಿಕ್ ಸ್ಕೊಲಾಸ್ಟಿಕ್ ಆದದ್ದಾದರೂ ಕೂಡಾ ಟೀಕೆಗೋಸ್ಕರ ಟೀಕೆ, ಮತ್ತು ಕೂದಲು ಸೀಳುವ ತರ್ಕದ ಟೀಕೆಗಳು ಮೂಡಿರುವುದನ್ನು ಕೂಡಾ ನಾವು ಗಮನಿಸಬಹುದು. ಕೆಲವು ಅಂಬೇಡ್ಕರ್‌ಗೆ ಪ್ರತಿಯಾಗಿ, ಕೆಲವು ಅಂಬೇಡ್ಕರ್‌ತನಕ್ಕೆ ಕಸಿ ಮಾಡಿ ಹೊಸ ಮಾದರಿಯನ್ನು ಸೃಷ್ಠಿಸಿರುವುದನ್ನು ಮತ್ತು ಕೆಲವು ಅಂಬೇಡ್ಕರ್ ಬಗೆಗೆ ಜನಮಾನಸದಲ್ಲಿರುವ ಗ್ರಹೀತಗಳನ್ನು ಪ್ರಶ್ನಿಸುವ ನೆಲೆಯಲ್ಲಿಯೂ ಕೂಡಾ ಮೂಡಿದೆ. ಮುಖ್ಯವಾದ ಅಂತಹ ಕೆಲವು ಟೀಕೆಗಳನ್ನು ನನ್ನ ನೆಲೆಯಲ್ಲಿ ಪರಿಕ್ಷೀಸುವ ಪ್ರಯತ್ನವನ್ನು ನಾನಿಲ್ಲಿ ಮಾಡಿತ್ತಿದ್ದೇನೆ.

ಅಂಬೇಡ್ಕರ್ ಭಾರತೀಯ ಸಾಮಾಜಿಕ ನೇಯ್ಗೆಯಲ್ಲಿ ಗುರುತು ಮಾಡಿಸಿದ ಚಿಂತಕ ಎನ್ನುವುದು ಸದ್ಯದ ಸ್ಕೊಲಾಸ್ಟಿಕ್ ನೆಲೆಯಲ್ಲಿ ಚರ್ಚಿತವಾಗಿತ್ತಿರುವ ಟೀಕೆ. ಇದು ಅತ್ಯಂತ ಮಹತ್ವದ್ದು. ಸ್ವಾತಂತ್ರ್ಯ ನಂತರದ ಭಾರತದ ಸಮಾಜೋ-ರಾಜಕೀಯ ವಲಯದಲ್ಲಿ ಪ್ರಭಾವದ ಮೂಲಾಂಶಗಳನ್ನು ನಿರ್ಮಾಣ ಮಾಡುವಲ್ಲಿ ಅಂಬೇಡ್ಕರ್ ವಿಚಾರ-ಯೋಚನೆ ಅಂತ್ಯಂತ ಮಹತ್ವ ಎನ್ನುವುದು ಕೆಲವು ಚಿಂತಕರ ಅಭಿಪ್ರಾಯ. ಅತ್ಯಂತ ಪ್ರಧಾನ ಭೂಮಿಕೆಯಲ್ಲಿ ಅಂಬೇಡ್ಕರ್ ವಿಚಾರಗಳು ಕಾರ್ಯನಿರ್ವಹಿಸಿ ಅವರ ವಿಚಾರಗಳು ಇಲ್ಲದಿದ್ದರೆ, ವೈಚಾರಿಕ ಕ್ರಾಂತಿಯ ವಿಚಲನೆ ನಿರ್ಮಾಣವಾಗುವುದೇ ಕಷ್ಟ. ಮತ್ತು ಅಂಬೇಡ್ಕರ್ ವಿಚಾರಗಳು ಸದ್ಯದ ಸ್ಥಿತಿ ಮತ್ತು ಸಮಾಜದಲ್ಲಿ ವಿಚಾರ ಮತ್ತು ಸಾಮಾಜಿಕ ನ್ಯಾಯ ಸಂವಿಧಾನಾತ್ಮಕತೆ. ಹಕ್ಕುಗಳು ಮುಂತಾದವುಗಳಲ್ಲಿದ್ದ ನಿರ‍್ವಾತವನ್ನು ಉಂಟುಮಾಡುತ್ತದೆ ಎನ್ನುವುದೇ ಈ ರೀತಿ ಚಿಂತಿಸುವ ಚಿಂತಕರ ಅಭಿಪ್ರಾಯ. ಯೋಗೇಂದ್ರ ಯಾದವ್, ವಲೇರಿಯನ್ ರೋಡ್ರಿಗಸ್ ರಂತಹ ಹೊಸ ತಲೆಮಾರಿನ ಮತ್ತು ನವ ಉದಾರವಾದಿ ಸಂದರ್ಭದ ಜಿಜ್ಞಾಸುಗಳು ಈ ರೀತಿಯಲ್ಲಿ ಅಭಿಪ್ರಾಯಿಸುತ್ತಾರೆ. ಸುಮಾರು ೨೦೦೨ರವರೆಗೂ ಜಗತ್ತಿನ ಅನೇಕ ಚಿಂತಕರನ್ನು ರೀಡರ್, ವಾಚಿಕೆ ಮತ್ತು ಎಸನ್ಶಿಯಲ್‌ ರೈಟಿಂಗ್ ಗಳ ಮೂಲಕ ಕೇವಲ ಅಂಬೇಡ್ಕರ್‌ರನ್ನಷ್ಟೇ ಪರಿಚಯಿಸದೇ, ೨೦೦೨ರ ನಂತರ ಅಂಬೇಡ್ಕರ್ ಮಹತ್ವ ಮತ್ತು ಅನಿವಾರ್ಯತೆಯನ್ನು ಪರಿಗಣಿಸಿ ಜಗತ್ತಿಗೆ ಪರಿಚಯಿಸುವ ಶ್ರಮವನ್ನು ಆರಂಭಿಸಿದ್ದು, ಅಂಬೇಡ್ಕರ್‌ರ ಅನುವಾರ್ಯತೆ ಮತ್ತು ಅಂಬೇಡ್ಕರ್ ಮಾದರಿಯ  ಸಾಮಾಜಿಕ ನೇಯ್ಗೆ ಅಥವಾ ಸೋಶಿಯಲ್‌ ಟ್ಯಾಪಿಸ್ಟ್ರಿಯ ಅಗತ್ಯವನ್ನು ಮನಗಂಡ ನಂತರ. ವಿಶೇಷವಾಗಿ ಅಂಬೇಡ್ಕರ್, ಹೊಸರೀತಿಯ ಸಾಮಾಜಿಕ ಸಂಬಂಧಗಳು ಮತ್ತು ಸಂವಿಧಾನಾತ್ಮಕ ಪ್ರಜಾಪ್ರಭುತ್ವೀಯ ನೆಲೆಯ ಆಧಾರದ ಮೇಲೆ ಭಾರತದ ನೈತಿಕ-ಸಾಮಾಜಿಕತೆಯನ್ನು ನಿರ್ಮಿಸಬೇಕೆನ್ನುವ ಯೋಚನೆಯ ಸಾವಯವ, ನೈಸರ್ಗಿಕ ಅಗತ್ಯತೆ ಮತ್ತು ಮಹತ್ವದ ಕಾರಣದಿಂದಾಗಿ. ಅತ್ಯಂತ ಆತ್ಯಂತಿಕವಾದ, “ಆಧುನಿಕ ನುಡಿಗಟ್ಟು”ನ್ನು ಪ್ರವರ್ತಿಸಿದ ಮತ್ತು ನಿಸ್ಸಂದೇಹ-ಅಪ್ರಶ್ನೀಯ ನೆಲೆಯ ದಲಿತನಾಯಕ ಮತ್ತು ಪ್ರಖಂಡ ವಿದ್ವಾಂಸರೆನ್ನುವ ಅಂಬೇಡ್ಕರ್‌ರ ಬಗೆಗಿನ ಆಸ್ಥೆ ಮತ್ತು ಆದರಣೀಯತೆ ಅತ್ಯಂತ ಸಹಜವಾದಂತಹ ಈ ಮೇಲಿನ ವಾದಗಳ ಮೇಲೆ ಪುರಸ್ಕೃತಗೊಂಡಿರುವುದನ್ನೂ ಕೂಡಾ ನಾವು ಅಸ್ಖಲಿತವಾಗಿ ಒಪ್ಪಬಹುದು.

೧೯೩೨ರ ಕಮ್ಯೂನಲ್‌ ಅವಾರ್ಡ್ ಸಂದರ್ಭದಲ್ಲಿನ ಪ್ರತಿಕ್ರಿಯೆ ಮತ್ತು ಟೀಕೆಗಳು ಒಂದು ನೆಲೆಯಲ್ಲಿ ಗಂಭೀರವೆನ್ನಬಹುದಾದರೂ ಕೂಡಾ, ಕಾಲದ ಎತ್ತರದ ದಿಣ್ಣೆಯಲ್ಲಿ ನಿಂತು ಸಿಂಹಾವಲೋಕನ ಕ್ರಮದಿಂದ ಕಾಲದೇಶದ ಸಂದರ್ಭವನ್ನು ಗಮನಿಸಿದರೆ ಚಾರಿತ್ರಿಕ, ಸಮಾಜೋ-ರಾಜಕೀಯ ಸಂದರ್ಭಗಳು ಅದನ್ನು ಸೃಷ್ಟಿಸಿದ್ದು ಅತ್ಯಂತ ಅನಿವಾರ‍್ಯ ಎನ್ನುವುದನ್ನು ಮನಗಾಣಿಸಿ, ಅಂಬೇಡ್ಕರ್‌ತನದ, ಸತ್ವದ ನಿರ್ಮಾಣಕ್ಕೆ ಅತ್ಯಂತ ಗಣನೀಯ ಪ್ರಮಾಣದಲ್ಲಿ ಕಾಣಿಕೆ ನೀಡಿರುವುದನ್ನು ಗಮನಿಸಬಹುದು. ಅಂಬೇಡ್ಕರ್ ಒಂದು ಸಂಕೇತ, ಪ್ರತಿಮೆ ಎನ್ನುವುದಾದರೆ ಅಥವಾ ಕೊಲಾಝ್ ಎನ್ನುವುದಾದರೆ ಈ ರೀತಿಯ ಘಟನೆಗಳು, ಚಾರಿತ್ರಿಕ ವೃತ್ತಾಂತಗಳು ಕೊಲಾಝ್‌ನ ಬಿಡಿಬಿಡಿಭಾಗಗಳು. ಅಂಬೇಡ್ಕರ್ ಸಾಂವಿಧಾನಿಕ ಅವಕಾಶಗಳ ಮೇಲಿನ ರಾಷ್ಟ್ರ ಸಮಾಜವಾದವನ್ನು ಪ್ರತಿಪಾದಿಸಿದ್ದು, ಸಾಂಪ್ರದಾಯಿಕ ಹಿಂದೂಗಳಿಗೆ ಸಮಸ್ಯೆಯನ್ನು ಸೃಷ್ಟಿಸಿತು. ಅದು ಕ್ರಮೇಣ ಹರಿತವಾದ, ಲಗ್ಗು ಲಗಾಮಿಲ್ಲದ, ಅಪ್ರಜಾಪ್ರಭುತ್ವೀಯ ನೆಲೆಯ ಟೀಕೆಗಳನ್ನೂ ಸೃಷ್ಟಿಸಿತು. ಅಂಬೇಡ್ಕರ್ ಪ್ರತಿಪಾದಿತ ಸಾಮಾಜಿಕ ಸಮಾನತೆ, ಹಕ್ಕುಗಳು, ಪ್ರಜಾಪ್ರಭುತ್ವದಂತಹ ವಿಚಾರ ಮತ್ತು ಆಶಯಗಳು ಕಟ್ಟರ್ಪಂಥಿ ಹಿಂದೂಗಳಿಗೆ ಅಪಥ್ಯವೆನಿಸಿದುವು. ಅತ್ಯಂತ ಅಪ್ರಜಾಪ್ರಭುತ್ವೀಯ ನೆಲೆಯ, ಊಳಿಗಮಾನ್ಯಾವ್ಯಸ್ಥೆಯ ಉತ್ಪನ್ನವಾದ, ಮನುವನ್ನೇ, ಆತನ ಅಸಮಾನತೆಯ ಬೀಜಮಂತ್ರಗಳಂತಿದ್ದ ಶ್ಲೋಕಗಳನ್ನೇ ಉಚ್ಚರಿಸಿ, ಅದೇ ಸತ್ಯ-ನಿತ್ಯವೆಂಬುದಾಗಿ ಎಚ್ಚರಿಸಿ, ಆಧುನಿಕತೆ, ಪ್ರಜಾಪ್ರಭುತ್ವದ ಮೌಲ್ಯಗಳ ಮೇಲೆ ರಾಷ್ಟ್ರ ನಿರ್ಮಾಣ (ನೇಶನ್‌ ಮೇಕಿಂಗ್) ಆಗಬೇಕು ಎನ್ನುವವರನ್ನು ಹುಚ್ಚರನ್ನಾಗಿಸಿದವು. ಅಂಬೇಡ್ಕರ್ ಸದ್ಯದ ಸಮಾಜದ ಬಂಡಿಯನ್ನು ಮುಂದೆ ಜಗ್ಗುತ್ತಾ ಸಾಗಿದರೆ ಅತ್ತ ಸಂಪ್ರದಾಯವಾದಿಗಳು ಹಿಂದಕ್ಕೆ ಜಗ್ಗುತ್ತಾ ಮಧ್ಯಯುಗದ ಮೌಢ್ಯದ ಮನೋಸ್ಥಿತಿ ಮತ್ತು ಕಾಲಕ್ಕೆ ಎಳೆದವು. ಅಂಬೇಡ್ಕರ ಹಿಂದೂ ಸಮಾಜ, ಧರ್ಮದ ಒಳಗಡೆ ಪರಿವರ್ತನೆ ನಡೆಯಬೆಕು ಎಂದು ಬಯಸಿದ್ದ ಆಶಯವನ್ನು ೧೯೩೨ರ ಪ್ರತ್ಯೇಕ ಮತಕ್ಷೇತ್ರದ ಹಂಚಿಕೆಯ ಸಂದರ್ಭದಲ್ಲಿ ಸಂಪ್ರದಾಯವಾದಿಗಳು ಹುಸಿಗೊಳಿಸಿದರು. ೧೯೩೦ರ ದಶಕದಲ್ಲಿ ಮೂಡಿದ ಹಿಂದೂ ಕೋಡ್ ಬಿಲ್ ಅನ್ನೂ ಕೂಡ ವಿರೋಧಿಸಿದರು. ಪೂರ‍್ವಾಗ್ರಹ, ಸಾಮಾಜಿಕ ಸಂರಚನೆಯನ್ನು ಬಯಸದ ಮನೋಸ್ಥಿತಿ ಮತ್ತು ಊಳಿಗಮಾನ್ಯ ವ್ಯವಸ್ಥೆಯಲ್ಲಿ, ಏಕಸ್ವಾಮ್ಯ ಅಥವಾ ಹೆಜಿಮನಿ ಅಥವಾ ಯಜಮಾನಿಕೆಯ ಮೂಲಕ ಇತರರಿಗೆ ಸಿಗದಂತೆ ಅನುಭವಿಸಿದ ಸಮಾಜೋ, ರಾಜಿಕ, ಆರ್ಥಿಕ, ಧಾರ್ಮಿಕ ಅವಕಾಶಗಳು ಮತ್ತು ಅತ್ಯಂತ ಕೆಟ್ಟದಾದ ಅಪ್ರಜಾಪ್ರಭುತ್ವೀಯ ಮಾನಸಿಕತೆಯ ಸಮಸ್ಯೆಗಳು ಟೀಕೆಗಳನ್ನು, ಪ್ರತಿರೋಧಗಳನ್ನು ಅಂಬೇಡ್ಕರ್ ಮೇಲೆ ರೂಪಿಸಲಿಕ್ಕೆ ಕಾರಣವಾಯ್ತು. ಇಂಗ್ಲೆಂಡಿನಲ್ಲಿ ಕುಳಿತು ಭಾರತದ ಸಮಾಜೋ-ಸಾಂಸ್ಕೃತಿಕ ವಾಸ್ತವ ಅರಿಯದ ಸಾವರ್ಕರ್ರಂತಹ ದೇಶಭಕ್ತರು ಮತ್ತು ಪುಣೆ-ಮುಂಬೈ ಕೇಂದ್ರಿತ, ಮಧ್ಯಮ ವರ್ಗದ ಮನಸ್ಸುಗಳಿಂದಾವೃತಗೊಂಡ ಹಿಂದೂ ಮಹಾಸಭಾ ಮತ್ತು ಇತರ ಹಿಂದೂ ಸಂಘಟನೆಗಳು ಈ ರೀತಿಯಾಗಿ ಟೀಕಿಸಿದ್ದು ಕೂಡಾ ಚಾರಿತ್ರಿಕ ಸತ್ಯ. ಇದು ಮಧ್ಯಯುಗದ ಮೌಢ್ಯದ ಮನೋಸ್ಥಿತಿ ಮತ್ತು ಕಾಲದ ರೂಪಕ.

ಆಧುನಿಕ ಭಾರತದಲ್ಲಿ ಅಂಬೇಡ್ಕರ್ ಅತ್ಯಂತ ಹೆಚ್ಚು ಟೀಕೆಗೊಳಗಾಗುವುದು ಮೀಸಲಾತಿಯ ಸಂದರ್ಭದಲ್ಲಿ. ಒಂದು ಕಾಲಘಟ್ಟದಲ್ಲಿ ದಲಿತ ಸಮುದಾಯವು ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಮತ್ತು ಧಾರ್ಮಿಕ ಅವಕಾಶಗಳಿಂದ ನಿರಾಕರಣೆಗೊಳಪಟ್ಟು, ಮಾನವನ ಹಕ್ಕುಗಳು, ಸಮಾನತೆ ಮತ್ತು ಮನುಷ್ಯನ ಘನತೆಯನ್ನೇ ನಿರಾಕರಿಸಿದ ಹಿಂದೂ ಅಥವಾ ಭಾರತೀಯ ಸಮಾಜ, ಅಂತಹ ದಲಿತರಿಗೆ ಈಗ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಅಂತಹ ಅವಕಾಶಗಳನ್ನು ನೀಡಲಾಗಿ ಅವುಗಳನ್ನು ಪ್ರಶ್ನಿಸಿರುವುದು ಆಕ್ರೋಶ, ಹೊಟ್ಟೆಕಿಚ್ಚು, ಮತ್ತು ಅತೃಪ್ತಿಯೇ ಮುಂತಾದ ಮಾನವಸಹಜವಾದ ಪ್ರವೃತ್ತಿಗಳಿಂದಾಗಿ. ಅವರು ಮಾಡುವ, ಮಾಡಿರುವ ಟೀಕೆಗಳೂ ಕೂಡಾ ಶುದ್ಧ, “ಪ್ರವೃತ್ತಿ”ಗೆ ಸಂಬಂಧಿಸಿದವುಗಳೆಂದೇ ನನ್ನ ಅಭಿಪ್ರಾಯ.

ಅಂಬೇಡ್ಕರ್ ಸಂಬಂಧ ಇರುವಂತಹ ದೊಡ್ಡ, ಸಮುಚಿತ ಚರ್ಚೆ, ಟೀಕೆಯೆಂದರೆ ‘ದಲಿತ’ ಎನ್ನುವ ಪದ, ವ್ಯುತ್ಪತ್ತಿ ಪರಿಕಲ್ಪನೆಯ ಬಗ್ಗೆ. ಪ್ರಮುಖ ಚಿಂತಕ ಗೋಪಾಲ್ ಗುರು, ‘ಅಂಡರ್‌ಸ್ಟ್ಯಾಂಡಿಂಗ್‌ ದ ಕೆಟಗರಿ ದಲಿತ್’ ಎನ್ನುವ ಬರಹದಲ್ಲಿ ಅತ್ಯಂತ ತಾರ್ಕಿಕವಾಗಿ ವೈಚಾರಿಕ, ಐತಿಹಾಸಿಕ ಆಯಾಮದಲ್ಲಿ ಈ ಬಗೆಗೆ ಚಿಂತಿಸುತ್ತಾರೆ. ಸ್ವತಃ ಅಂಬೇಡ್ಕರ್‌ರವರೇ ಹಿಂದೂ ಸಮಾಜ ಎನ್ನುವುದನ್ನು ತಿರಸ್ಕರಿಸಿದ್ದ ಸಂದರ್ಭದಲ್ಲಿ, ಹಿಂದೂ ಸಮಾಜದಿಂದ ದಲಿತರ ಶೋಷಣೆ ಎನ್ನುವಲ್ಲಿನ ದಲಿತ-ಹಿಂದೂ ಸಮಾಜವೆನ್ನುವುದನ್ನು ಪುನರ್ ಪರಿಶೀಲನೆಗೆ ಒಳಪಡಿಸುವಂತಹ ಸ್ಥಿತಿಯನ್ನು ನಿರ್ಮಿಸುತ್ತಾರೆ ಎಂದು ಗೋಪಾಲ್ ಗುರು ಅಭಿಪ್ರಾಯಿಸುತ್ತಾರೆ. ಅಂಬೇಡ್ಕರ್‌ರವರೇ ಹೇಳುವ ಹಾಗೆ, “ದಲಿತ, ದಲಿತತನ ಎನ್ನುವುದು ಜೀವನದ ಒಂದು ವಿಧ. ಅದು ಉನ್ನತ ಜಾತಿಗಳ ಬ್ರಾಹ್ಮಣ ಐಡಿಯಾಲಜಿಯ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಪ್ರಾಬಲ್ಯದಿಂದ ದಲಿತರ ಮೇಲಾಗುವ ಶೋಷಣೆ, ದಮನಕ್ಕೆ ಒಳಗಾದ ಸ್ಥಿತಿಯಾಗಿದೆ. ಈ ನೆಲೆಯಲ್ಲಿ ಅಂಬೇಡ್ಕರ್ ಗ್ರಹಿಕೆಯ ದಲಿತ ಮತ್ತು ‘ಹಿಂದೂ ಸಮಾಜ’ ಕಲ್ಪನೆಗಳ ಅವಿರ್ಭಾವತೆ, ದ್ವಂಧ್ವವನ್ನೂ, ಇರಿಸುಮುರುಸನ್ನೂ ಉಂಟುಮಾಡುತ್ತದೆ. ಅಂಬೇಡ್ಕರ್‌ಗಿಂತಲೂ ಸ್ವಲ್ಪ ಮಟ್ಟಿಗೆ ಸ್ಪಷ್ಟವಾಗಿ ‘ದಲಿತ’ ಪರಿಕಲ್ಪನೆಯನ್ನು ಅರ್ಥೈಸಿಕೊಂಡ ಮತ್ತು ಅಂಬೇಡ್ಕರ್‌ರಿಂದ ಸಾಕಷ್ಟು ಸ್ಫೂರ್ತಿಯನ್ನು ಪಡೆದಂತಹ” ದಲಿತ ಪ್ಯಾಂಥರ್ ಸಂಘಟನೆ”, ‘ದಲಿತ’ ಪದ, ಪರಿಕಲ್ಪನೆಯನ್ನು ನಿರ್ವಚಿಸುವ ಕ್ರಮ ಹೀಗೆ, “ದಲಿತ” ಅನ್ನುವುದು ಜಾತಿಯಷ್ಟೇ ಅಲ್ಲದೇ, ಈ ದೇಶದ ಸಂಪ್ರದಾಯದ ಚೌಕಟ್ಟಿನಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ, ಶೋಷಿತವಾಗಿರುವವನು. ಇವನಿಗೆ ಪುನರ್‌ಜನ್ಮ, ದೇವರು ಧರ್ಮಗಳಲ್ಲಿ ನಂಬಿಕೆಯಿಲ್ಲ. ಅವೆಲ್ಲವೂ ಅವನನ್ನು ಗುಲಾಮನನ್ನಾಗಿಸುತ್ತದೆ. ದಲಿತನಿಗೆ ನಂಬಿಕೆಯಿರುವುದು ಮಾನವೀಯತೆಯಲ್ಲಿ. ಬದಲಾವಣೆ ಮತ್ತು ಕ್ರಾಂತಿಯ ಸಂಕೇತವೇ ನಿಜವಾದ ‘ದಲಿತ’. ಕನ್ನಡದ ದಲಿತ ಸಂಘರ್ಷ ಸಮಿತಿ ಮತ್ತು ಅದರ ಪ್ರವರ್ತಕರಲ್ಲಿ ಒಬ್ಬರಾದ ಅರವಿಂದ ಮಾಲಗತ್ತಿಯವರು ‘ದಲಿತ’ ಪರಿಕಲ್ಪನೆಯನ್ನು ನಿರ್ವಚಿಸುವುದು ಹೀಗೆ, “ಅಸ್ಪೃಶ್ಯರೂ ಸೇರಿದಂತೆ ಅಸ್ಪೃಶ್ಯತೆಯ ನೋವನ್ನು ಅನುಭವಿಸದಿದ್ದರೂ, ಅಸ್ಪೃಶ್ಯರ ಹಾಗೆ ಆರ್ಥಿಕ, ರಾಜಕೀಯ, ಸಾಮಾಜಿಕ ರಂಗದಲ್ಲಿ ಶೋಷಣೆಗೆ ಒಳಗಾದ ಬಡವರು ದಲಿತರೆಂದು ಕರೆಯಿಸಿಕೊಳ್ಳುತ್ತಾರೆ”. ಹೀಗೆ ಅಂಬೇಡ್ಕರ್ ನೆಲೆಯ, ಪರಿಗ್ರಹಿಸಿದ ಕ್ರಮದ ‘ದಲಿತ’ ಪರಿಕಲ್ಪನೆಯನ್ನೇ ಅನೇಕರು ಪ್ರಶ್ನಿಸಿರುವುದು ಅಂಬೇಡ್ಕರ್ ಪ್ರತಿಪಾದನೆಯಲ್ಲಿನ ಕೆಲವು ಸಮಸ್ಯೆಗಳೆ ಕಾರಣ. ಯಾವುದೇ ಯೋಚನೆ, ಚಿಂತನೆಗಳೂ ಕೂಡಾ ಕಾಲದೇಶದ ಗರ್ಭದಲ್ಲಿ ಹುಟ್ಟಿದ ಕಾರಣ, ೧೯೫೦ರ ದಶಕದ ಅಂಬೇಡ್ಕರ್ ಚಿಂತನೆ, ಪದ, ಪರಿಕಲ್ಪನೆಗಳು ಸದಾ ಪರೀಕ್ಷೆಗೊಳಪಡುವುದು, ಚರ್ಚೆ, ವಿಮರ್ಶೆ, ಟೀಕೆಗೊಳಪಡುವುದು ಕೂಡಾ ಸಹಜವೇ ಆಗಿದೆ. ಒಂದು ರೀತಿ ಮಾರ್ಕ್ಸ್ ನಿಂದ ಅಂತೋನಿಯೋ ಗ್ರಾಮ್ಶಿ ಪ್ರಭಾವಿತನಾದರೂ ಕೂಡಾ ಮಾರ್ಕ್ಸ್ ವಿಚಾರಗಳನ್ನು ಪ್ರಶ್ನಿಸಿ ಹೊಸತನ್ನು, ಹೊಸತನವನ್ನು ಸೃಜಿಸಿದ ಮಾದರಿ, ಉದಾಹರಣೆ ಕೂಡಾ ಇಲ್ಲಿ ನಮಗೆ ನೆನಪಾಗುತ್ತದೆ. ಗೋಪಾಲ್ ಗುರು, ದಲಿತ ಪ್ಯಾಂಥರ್ ಪಕ್ಷ, ದಲಿತ ಸಂಘರ್ಷ ಸಮಿತಿ ಮುಂತಾದವುಗಳು, ಅಂಬೇಡ್ಕರ್‌ನ್ನು ಒಪ್ಪುತ್ತಾ ಈ ಭೌತಿಕ ಪರಿಸ್ಥಿತಿ, ಕಾಲದೇಶ, ಪರಿವರ್ತನೆಗನುಗುಣವಾದ ಚೌಕಟ್ಟಿನಲ್ಲಿ ಹೊಂದಿಸುವ ಪ್ರಯತ್ನವನ್ನೂ ಮಾಡಿದರೆಂಬುದು ನನ್ನ ಅಭಿಮತ. ಇಂತಹ ಪ್ರಯತ್ನಗಳೂ ಕೂಡಾ ಶಾಶ್ವತವಲ್ಲ. ಹೊಸ ಹೊಸ ಸನ್ನಿವೇಶ, ಸಂದರ್ಭಗಳಿಗೆ ಬದಲಾವಣೆಯ ಗಾಳಿಗೆ ಒಗುತ್ತಾ, ಹೊಸ ರೂಪದಲ್ಲಿ ಗಾಂಧಿ, ಲೋಹಿಯಾ ಹಾಗೂ ಮಾರ್ಕ್ಸ್ ಮುಂತಾದವರು ನಿಲ್ಲಬೇಕು ಮತ್ತು ನಿಲ್ಲುತ್ತಾರೆ ಎಂಬ ಸಂಗತಿಗೆ ಸಂಬಂಧಿಸಿದ ಸಂವಾದ, ಪ್ರಶ್ನೆಗಳ ಉತ್ತರ ರೂಪವೇ, ಈ ರೀತಿಯ ನಿರಚನೀಯ ಅಥವಾ ಡಿಕನ್‌ಸ್ಟ್ರಕ್ಟಿವ್ ನೆಲೆ ಮತ್ತು ರೀತಿಯ ನಿದರ್ಶನಗಳು. ಇದಲ್ಲದೇ, ಕೆಲವು ಚಿಂತಕರು ಹೇಳುವ ಹಾಗೆ, ಅಂಬೇಡ್ಕರ್ ಗ್ರಹಿಸಿದ ‘ದಲಿತ’ ಪರಿಕಲ್ಪನೆ, ಶುದ್ಧ ರಾಜಕೀಯ ಪರಿಕಲ್ಪನೆ. ಅಂಬೇಡ್ಕರ್ ಆ ಹೊತ್ತಿಗೆ ರಾಜಕೀಯ, ಸಂಘನಾತ್ಮಕ ಚಳುವಳಿಯ ಸಂದರ್ಭದಲ್ಲಿ ಸೃಜಿಸಿಕೊಂಡ ಒಂದು ಪದ ‘ದಲಿತ’. ಈ ಶಬ್ಧ ಮತ್ತು ಪರಿಕಲ್ಪನೆ ಸಮಗ್ರವಾಗಿ ರಾಜಕೀಯ, ಸಾಂಸ್ಕೃತಿಕ, ಸಮಾಜೋ - ಆರ್ಥಿಕ ಸಂಗತಿಗಳನ್ನು ಧ್ವನಿಸುವುದಿಲ್ಲ ಎನ್ನುವುದೂ ಕೂಡಾ ದಲಿತ ಪರಿಕಲ್ಪನೆಯ ಸಂಬಂಧಿತ ಸಮಸ್ಯೆಗಳು.

ಪೋಸ್ಟ್‌ ಮಾಡರ್ನಿಸ್ಟ್ ಚಿಂತನೆಯ ಫಲವಾಗಿ ಹುಟ್ಟಿಕೊಂಡ ಸಬಾಲ್ಟರ್ನ್ ಚಿಂತನಶಾಲೆ, ‘ದಲಿತ’ ಕಲ್ಪನೆಯನ್ನು ಅತ್ಯಂತ ಭಿನ್ನವಾಗಿ ವ್ಯಾಖ್ಯಾನಿಸುತ್ತದೆ. ಅದು ಅತ್ಯಂತ ವಿಶಾಲ, ಸಮಗ್ರತೆಯನ್ನು ದಲಿತತೆಗೆ ಆರೋಪಿಸುತ್ತದೆ. ಅಂಬೇಡ್ಕರ್ ವಾದಿಸಿದ ಜಾತಿ ವ್ಯವಸ್ಥೆಯ ಗಡಿಗಳನ್ನೂ ಮೀರಿ ಜಿಗಿಯುತ್ತಾ, ಜಾತಿಯನ್ನು, ಧರ‍್ಮವನ್ನು ಮೀರಿ ದಮನಿತತೆ, ಶೋಷಣೆಗೊಳಗೊಂಡ ಕಾರ‍್ಮಿಕ, ದೀನ, ದಲಿತ, ಆದಿವಾಸೀ, ಮಹಿಳೆ ಮುಂತಾಗಿ ಒಂದು ಸಮಗ್ರ, ಇನಕ್ಲೂಸಿವ್‌ ಅಥವಾ ಒಳಗೊಳ್ಳುವ ನೆಲೆಯ ದಲಿತತೆಯನ್ನು ಮನಗಾಣಿಸುತ್ತದೆ. ಇದುವರೆಗೆ ಬಂದಿರುವ ಸುಮಾರು ೧೩ ಸಬಾಲ್ಟರ್ನ್  ಸಂಪುಟಗಳೂ ಕೂಡಾ ಇದನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದಿವೆ. ರಣಜಿತ್ ಗುಹಾ, ದೀಪೇಶ್ ಚಕ್ರವರ್ತಿ, ಪಾರ್ಥ ಚಟರ್ಜಿ, ಶಹೀದ್ ಅಮೀನ್ ಮುಂತಾದ ಈ ಚಿಂತನ ಶಾಲೆಯ ಚಿಂತಕರು, ಅತ್ಯಂತ ವೈವಿಧ್ಯದ ‘ದಲಿತ’ ನೆಲೆಯನ್ನು ನಮ್ಮ ಮುಂದೆ ತೆರೆದಿಡುತ್ತಾರೆ. ಈ ಚಿಂತಕರ ಅನೇಕ, ಬರವಣಿಗೆಗಳು ಅಂಬೇಡ್ಕರ್ ಪ್ರತಿಪಾದಿಸಿದ ‘ದಲಿತ’ ಪರಿಕಲ್ಪನೆಯನ್ನು ಮರು ವ್ಯಾಖ್ಯಾನಗೊಳಿಸುತ್ತಾ ಅಂಬೇಡ್ಕರ್‌ವಾದ ನಿಶ್ಚಿತವಾಗಿ ೧೯೫೦ರ ದಶಕದ್ದು ಹಾಗೂ ಅದನ್ನು ಸಾಕಷ್ಟು ವಿಸ್ತರಿಸಬೇಕಾದ ಅನಿವಾರ‍್ಯತೆಯನ್ನೂ ತಿಳಿಸುತ್ತಾ ಸಾಗುತ್ತದೆ. ಇದೇ ಚಿಂತನ ಶಾಲೆಯ ಪಾರ್ಥ ಚಟರ್ಜಿಯಂತೂ, ಈ ಮೊದಲು ನಡೆದಂತಹ ಎಲ್ಲಾ ರೀತಿಯ ನಿಷ್ಕರ್ಷೆಗಳನ್ನು ನಿರಾಕರಿಸಿ, ಅಂಬೇಡ್ಕರ್ ಮತ್ತು ‘ದಲಿತ’, “ದಲಿತತನ”, ದಲಿತತ್ವ ಮುಂತಾದುವುಗಳನ್ನು ನಿರಚನೀಯ ನೆಲೆಯಲ್ಲಿ ನಿರೂಪಿಸುತ್ತಾರೆ. ಪಾರ್ಥ ಚಟರ್ಜಿ ಅತ್ಯಂತ ಸ್ಪಷ್ಠವಾಗಿ ದಲಿತತೆ ಮತ್ತು ಆ ಸಂವೇದನೆ ವಸ್ತುಶಃ ಪ್ರದೇಶ ವಿಶಿಷ್ಠವಾದುದೆಂದೂ ವಾದಿಸುತ್ತಾರೆ. ಹೀಗೆ ಹೊಸದಾದ ಸಮಸ್ಯೆಗಳನ್ನು ಮೇಲಿನ ನೆಲೆಗಳಿಂದ ಇವರು ನೋಡುತ್ತಾರೆ.

೧೯೨೦-೧೯೫೦ರ ದಶಕದಲ್ಲಿ ಹುಟ್ಟಿದ ಅಂಬೇಡ್ಕರ್ ಚಿಂತನೆ ಈಗಿನ ಜಾಗತೀಕೃತ, ನವ-ಉದಾರೀಕೃತ ಸಮಾಜಕ್ಕೆ ಎಷ್ಟು ಒಗ್ಗುತ್ತದೆ ಎನ್ನುವುದೂ ಕೂಡಾ ಮಹತ್ವದ ಪ್ರಶ್ನೆಯೇ ಆಗಿದೆ. ಆಗಿನ ಸಮಾಜೋ-ರಾಜಕೀಯ ವಿನ್ಯಾಸಗಳಿಗಿಂತ ಭಿನ್ನವಾದ ವಿನ್ಯಾಸ ಹೊಂದಿರುವ ಈಗಿನ ಸಂದರ್ಭದಲ್ಲಿ ಅಂಬೇಡ್ಕರ್ ಚಿಂತನೆಯನ್ನು ಹೇಗೆ ಒಗ್ಗಿಸಬೇಕು? ಎನ್ನುವ ಚರ್ಚೆ ಕೂಡ ಸಾಕಷ್ಟಿದೆ. ಅಂಬೇಡ್ಕರ್ ರವರ ದಲಿತ, ಮಹಿಳೆಯ ಮೇಲಿನ ಯೋಚನೆಗಳನ್ನು ಪ್ರಶ್ನಿಸಿ ಹೊಸ ಸ್ವರೂಪದಲ್ಲಿ, ಅಂದರೆ ಈಗಿನ ಸಮಾಜದ ಬೇಡಿಕೆಗನುಗುಣವಾಗಿ ನೀಡುವುದು ಅನಿವಾರ್ಯ ಎಂಬುದು ಈ ರೀತಿ ಯೋಚಿಸುವ ಚಿಂತಕರ ಅಭಿಪ್ರಾಯ ಮತ್ತು ಟೀಕೆ.

ಇಲೀಟ್ ದಲಿತರು, ಮತ್ತು ಸಾಮಾಜಿಕ ಅಂತಸ್ತಿನ ಏಣಿ ಶ್ರೇಣಿಯಲ್ಲಿ ಮೇಲೇರಿರುವ ದಲಿತರು ಅಂಬೇಡ್ಕರ್‌ನ್ನು ಸಾರಾಸಗಟಾಗಿ ಸ್ವೀಕರಿಸದೇ, ತಮ್ಮದೇ ಆದ ಟೀಕೆಗಳೊಂದಿಗೆ ಹೊಸದಾಗಿ ಸ್ವೀಕರಿಸುತ್ತಿದ್ದಾರೆ.

ಅಂಬೇಡ್ಕರ್ ಮೇಲಿರುವ ಒಂದು ಮಹತ್ವದ ಚರ್ಚೆ, “ಅಭಿನವ ಮನುತ್ವ”ದ ಕುರಿತು. ಮೊದಲನೆಯದಾಗಿ ವರ್ಣಾಶ್ರಮ ಧರ್ಮದ ವಾಸನೆಯಿದೆ ಎನ್ನುವ ಕಾರಣಕ್ಕಾಗಿ, ಮನು ಎಂಬ ವಿಶೇಷಣ ಸಲ್ಲದು ಎಂಬ ಟೀಕೆ ಮತ್ತು ಸಂವಿಧಾನ ರಚನೆಯ ಸಂದರ್ಭದಲ್ಲಿ ಅಂಬೇಡ್ಕರ್, ಇಡೀ ಸಂವಿಧಾನದ ರೂಪಕವಾಗಿದ್ದರು ಎಂಬ ನೆಲೆಯ ವಿರೋಧ. ಅತ್ಯಂತ ಪ್ರಮುಖವಾಗಿ ಗ್ರಾನ್‌ವಿಲ್ ಆಸ್ಟಿನ್ ಎಂಬ ಬ್ರಿಟಿಷ್ ಸಂವಿಧಾನತಜ್ಞ ಮತ್ತು ಅಂಬೇಡ್ಕರ್ ತಜ್ಞ ವಲೇರಿಯನ್ ರೋಡ್ರಿಗಸ್ ಅತ್ಯಂತ ವಿಮರ್ಶಾತ್ಮಕವಾಗಿ, ನಿರ್ಭಾವುಕರಾಗಿ ‌ ಈ ರೀತಿ ಪ್ರತಿಕ್ರಿಯಿಸುತ್ತಾರೆ. ಇಲ್ಲಿ ಅಂಬೇಡ್ಕರ್ ಅತ್ಯಂತ ಪ್ರಮುಖ, ಜತೆಗೆ ಉಳಿದವರೂ ಕೂಡಾ ಅಷ್ಟೇ ಪ್ರಮುಖ ಎಂಬ ನಿಲುವನ್ನೂ ತಳೆಯುತ್ತಾರೆ. ಒಂದು ಲಿವಿಂಗ್‌ ಡಾಕ್ಯುಮೆಂಟ್ ಆಗಿ ನಿಂತಿರುವ ಭಾರತದ ಸಂವಿಧಾನದ ತಿದ್ದುಪಡಿಗಳು, ಅದಕ್ಕೆ ಕಾರಣರಾದ ನ್ಯಾಯಪಂಡಿತರು, ಭಾರತದ ನಾಗರೀಕರೂ, ಪ್ರಮುಖ ಪ್ರಕರಣಗಳು ಕೂಡಾ ಅತ್ಯಂತ ಮುಖ್ಯ ಮತ್ತು ಇಡೀ ಸಂವಿಧಾನ ಒಂದು ಜೀವಂತ ಪ್ರಕ್ರಿಯೆ ಮತ್ತು ಸಮೂಹವನ್ನು ಪ್ರತಿನಿಧಿಸುತ್ತದೆ ಎಂಬುದು ಇವರ ಯೋಚನೆ. ರೋಡ್ರಿಗಸ್ ಪ್ರಕಾರ, ಸಂವಿಧಾನವೆಂಬುದು, "ಎ ಕಲೆಕ್ಟಿವ್ಲಿ ನೆಗೋಶಿಯೇಟಡ್ ಎಂಟರ್ಪ್ರೈಸ್‌ ಅಥವಾ ಒಂದು ಸಾಮೂಹಿಕ ಹೊಣೆಗಾರಿಕೆಯ ಸಂಧಾನೀಕೃತ ಉದ್ಯಮ”. ಸಂವಿಧಾನದಲ್ಲಿ ಅಂಬೇಡ್ಕರ್‌ತನ ಅತ್ಯಂತ ಸ್ಪಷ್ಠವಾಗಿ ಕಾಣಸಿಗುತ್ತದಾದರೂ ಕೂಡಾ, ಅತ್ಯಂತ ದೊಡ್ಡದಾದ ಆ ರೀತಿಯ ಪಠ್ಯ ತಯಾರಿಕೆಯಲ್ಲಿ ವಿವಿಧ ಭಾಷೆಗಳ ಬಳಕೆ, ಪರಿಕಲ್ಪನೆಗಳ ಬಳಕೆ, ಜಗತ್ತಿನ ವಿವಿಧ ಸಂವಿಧಾನಗಳಿಂದ ಪಡೆದು ತೇಪೆ ಹಚ್ಚಿದ ಗಂಭೀರ ಪ್ರಕ್ರಿಯೆಗಳು ಕೇವಲ ಒಬ್ಬ ವ್ಯಕ್ತಿಯಿಂದ ಸಾಧ್ಯವಿಲ್ಲ, ಬದಲು ಅದೊಂದು ಸಾಮೂಹಿಕ ಕ್ರಿಯೆ ಮತ್ತು ಹೊಣೆಗಾರಿಕೆಯಾಗಿತ್ತು.

ಇನ್ನು ಅರುಣ್ ಶೌರಿಯವರ “ವರ್ಶಿಪಿಂಗ್ ಫಾಲ್ಸ್‌ಗಾಡ್” ಬಗ್ಗೆ ನಾನೇನು ತೀವ್ರವಾಗಿ ಚರ್ಚಿಸುವ ಅಗತ್ಯವೇ ಇಲ್ಲ ಎನ್ನುವ ಭಾವನೆ ಇದೆ. ಅರುಣ್ ಶೌರಿ ಕಥನ ಒಂದು ಬಯಾಸ್ಡ್‌ ಅಥವಾ ಅತಿಒಲವಿನ, ಪೂರ‍್ವಾಗೃಹ ಪೀಡಿತ, ಸ್ಕೊಲಾಸ್ಟಿಕ್‌ ಅಲ್ಲದ, ಅಕಡಮಿಕ್‌ ಅಲ್ಲದ ಮತ್ತು ಗಂಭೀರತೆ ಇಲ್ಲದ್ದೆಂದೇ ನನ್ನ ಅಭಿಪ್ರಾಯ. ಇದೊಂದು ರೀತಿಯ “ವಿಷವುಗುಳುವಿಕೆಯ ಕ್ರಮ”ವೆಂದೇ ನನ್ನ ಅನಿಸಿಕೆ. ಇದು ಸಮಯ ವ್ಯರ್ಥ ಮಾಡುವ, ಕಸರತ್ತು ಕೂಡಾ ಆಗಬಹುದು.

ನಾನು ಈ ಮೇಲೆ ಚರ್ಚಿಸಿದ ಟೀಕೆಗಳನ್ನು ಹೊರತುಪಡಿಸಿದ ಅನೇಕ ಟೀಕೆ, ಚರ್ಚೆಗಳಿವೆ. ಪ್ರಾತಿನಿಧ್ಯ, ಟೀಕೆಯ ಸಾಪೇಕ್ಷತೆ, ಸಮಯ ಮಿತಿಯ ಕಾರಣದಿಂದ ನಾನು ಮೇಲಿನವುಗಳಿಗೆ ಮಿತಿಗೊಳಿಸಿದ್ದೇನೆ.

**********

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ಸಿನಿಮಾ ಚರಿತ್ರೆ : ಸಮಾಜ, ಸಂಸ್ಕøತಿ ಮತ್ತು ರಾಜಕಾರಣ

ಕರ್ನಾಟಕದಲ್ಲಿ ಸೂಫಿಗಳು

ಚಾರಿತ್ರಿಕ ಕೃತಿಯ ಹಲವು ಓದಿನ ಸಾಧ್ಯತೆಗಳು: ಹಿಂದ್ ಸ್ವರಾಜ್ ಮಾದರಿ