ಎಲ್ಲೋ ಅರ್ತ್ (1984)
ಚೆನ್ ಕೈಗೇ ಚೀನಾದ ಪ್ರಸಿದ್ಧ ನಿರ್ದೇಶಕ. ಚೀನಾದಲ್ಲಿ ಒಂದು ರೀತಿಯ ಪರ್ಯಾಯ, ಕಸುಬುಗಾರಿಕೆಯ ಸಿನಿಮಾದ ನಿರ್ಮಾಣ ಮತ್ತು ಯೋಚನೆಯನ್ನು ಪ್ರಭಾವಿಸಿದಂತಹ ನಿರ್ದೇಶಕ ಈತ. ಈತನ ಪ್ರಸಿದ್ಧ ಸಿನಿಮಾವೇ ಎಲ್ಲೋ ಅರ್ತ್ ಅಥವಾ ಹಾೈಂಗ್ ತುಡಿ. 1984ರಲ್ಲಿ ಈ ಸಿನಿಮಾ ಬಿಡುಗಡೆಯಾಯಿತು. ಇದು ಚೆನ್ ಕೈಗೆಯ ಪ್ರಥಮ ಸಿನಿಮಾ ಕೂಡಾ ಹೌದು. ವಿಶೇಷವೆಂದರೆ ಇದರ ಸಿನಿಮಟೋಗ್ರಫರ್, ಕೈಗೆಯ ಶಿಷ್ಯ ಮತ್ತು ಆತನ ಸಮಕಾಲೀನ ಹಾಗೂ ಉತ್ತರದ ಒಬ್ಬ ಶ್ರೇಷ್ಠ ನಿರ್ದೇಶಕ ಯಾೈಂಗ್ ಇಮೋ. ಈ ಚಿತ್ರ ಚೀನಾದ ಸಿನಿಮಾ ಇತಿಹಾಸದ ಚರ್ಚೆಯಲ್ಲೇ ಒಂದು ರೀತಿಯ ಮಾದರಿಯೆಂಬಂತಿರುವ ಚಿತ್ರ. 2005ನೇ ಇಸವಿಯಲ್ಲಿ 24ನೇ ಹಾಂಕಾಂಗ್ ಫಿಲ್ಮ್‍ಫೆಸ್ಟಿವಲ್‍ನಲ್ಲಿ ನಮೂದುಗೊಂಡ ಹಾಗೆ, ಸುಮಾರು 100 ಬೆಸ್ಟ್ ಚೈನಾ ಸಿನಿಮಾಗಳ ಸಂದರ್ಭದಲ್ಲಿ ‘ಎಲ್ಲೋ ಅರ್ತ್’ ನಾಲ್ಕನೆಯ ಸ್ಥಾನವನ್ನೂ ಕೂಡಾ ಪಡೆಯಿತು. ಸುಮಾರು, ‘1949ರ ಕಮ್ಯುನಿಸ್ಟ್ ಕ್ರಾಂತಿಯ ನಂತರ, ಸಂಭಾಷಣೆ, ಸಂವಾದಗಳನ್ನಾಶ್ರಯಿಸದೇ ಬರಿಯ ಇಮೇಜ್‍ಗಳ ಮೂಲಕ ಕಥಿತವಾದ ಮೊದಲ ಚಿತ್ರ’ ಎಂಬ ಖ್ಯಾತಿಯೂ ಕೂಡಾ ಇದಕ್ಕಿದೆ. ಈ ನೆಲೆಯಿಂದ ಅದು ಚೈನಾದಲ್ಲಿ ವಿವಾದಗಳನ್ನೂ ಕೂಡಾ ಸೃಷ್ಟಿಮಾಡಿತು. ಈ ಸಿನಿಮಾವು, ಕ್ರಾಂತಿಯ ಸಂದರ್ಭದಲ್ಲಿ ಕಮ್ಯುನಿಸ್ಟ್ ಪಾರ್ಟಿಯು ರೈತರಿಗೆ ಸಹಾಯ ಮಾಡಲು ಕಾರಣವಾದ ಹಲವು ವ್ಯಾಖ್ಯಾನಗಳನ್ನೂ ಕೂಡಾ ನಮ್ಮ ಮುಂದಿಡುತ್ತೆ. ಆದರೆ ಈ ಸಿನಿಮಾ 1949ರ ನಂತರ ಕಮ್ಯುನಿಸ್ಟ್ ಪಕ್ಷವು ತಾನೇ ಸೂಚಿಸಿ ನಿರ್ಮಿಸಿದ ‘ಪ್ರೊಪಗಾಂಡಾ’ ಸಿನಿಮಾಗಳಿಗಿಂತಲೂ ತುಂಬಾ ಭಿನ್ನವಾದುದಾಗಿದೆ. ‘ಎಲ್ಲೋ ಅರ್ತ್’ ಸಿನಿಮಾ, 1939ರ ವಸಂತ ಕಾಲದಲ್ಲಿ ಕೇಂದ್ರ ಚೈನಾ ಪ್ರಾಂತ (ಸೆಂಟ್ರಲ್ ಚೀನಾ)ದ ‘ಶಾಂಕ್ಷಿ’ ಪ್ರದೇಶದಲ್ಲಿ ನಡೆದಂತಹ ಘಟನೆಗಳನ್ನು ಆಧರಿಸಿದಂತಹ ಸಿನಿಮಾವಾಗಿದೆ. ಆ ಹೊತ್ತಿಗೆ ಚೈನಾದ ಕಮ್ಯುನಿಸ್ಟ್ ಪಕ್ಷ ಮತ್ತದರ ವಿರೋಧೀ ಬಣವಾದ ಕ್ಯೊಮಿಂಗ್ ಟಾಂಗ್ ಗುಂಪು ಪರಸ್ಪರ ಸೆಣಸುವುದನ್ನು ನಿಲ್ಲಿಸಿ ಜಂಟಿಯಾಗಿ ಜಪಾನ್ ವಿರುದ್ಧ ದಾಳಿಯನ್ನು ಸಂಘಟಿಸಲು ಸಿದ್ಧವಾದವು. ಈ ನೆಲೆಯಲ್ಲಿ ಅವುಗಳು ಈ ಮೊದಲ ತಮ್ಮ ನಡುವಿನ ದ್ವೇಷಾ-ಅಸೂಯೆಯನ್ನೂ ಕೂಡಾ ಮರೆತವು.
ಗು-ಖಿಂಗ್, ಚೈನಾದ ಕಮ್ಯುನಿಸ್ಟ್ ಪಾರ್ಟಿಯ, ‘ಯೈಟ್ ರೂಟ್ ಆರ್ಮಿ’ಯ ಪ್ರೊಪಗಾಂಡಾ ವಿಭಾಗದ ಸೈನಿಕ. ಈತ ಒಬ್ಬಂಟಿಯಾಗಿ ಕ್ಯೊಮಿಂಗ್ ಟಾಂಗ್ ಅಧೀನದಲ್ಲಿರುವ ‘ಯಾನ್’ ಪ್ರದೇಶದಿಂದ ‘ಶಾಂಕ್ಷಿ’ ಶಾಂನ್ಬಿಯವರೆಗೆ ಪ್ರಯಾಣ ಮಾಡುತ್ತಿರುತ್ತಾನೆ. ಆತನ ಪ್ರಯಾಣದ ಮುಖ್ಯ
ಉದ್ದೇಶ, ಆ ಪ್ರದೇಶದಲ್ಲಿ ಲಭ್ಯವಾಗುವ ಜನಪದದ ಹಾಡುಗಳನ್ನು ಸಂಗ್ರಹಿಸುವುದು ಮತ್ತು ಅವುಗಳನ್ನು ಕಮ್ಯುನಿಸ್ಟ್
ಸಾಹಿತ್ಯ ಪ್ರಕಾರದಲ್ಲಿ ಮರುರಚನೆ ಮಾಡಿ ‘ಯೈಟ್ ರೂಟ್ ಆರ್ಮಿ’ಯ ಸೈನಿಕರ ನೀತಿ,
ಶ್ರದ್ಧೆ, ಆಸ್ಥೆಯನ್ನು ಪುನ:ಶ್ಚೇತನಗೊಳಿಸುವ ಸಲುವಾಗಿ.
ಎಲ್ಲೋ ಅರ್ತ್ ಸಿನಿಮಾದ ಆರಂಭ, ಒಬ್ಬ ಕಮ್ಯುನಿಸ್ಟ್ ಸೈನಿಕ ಕಿಲೋಮೀಟರ್‍ಗಟ್ಟಲೆ ವಾಕಿಂಗ್
ಮಾಡುವ ಮೂಲಕ. ಈ ಸೈನಿಕ ಒಂದು ಸಣ್ಣ ಬರವನ್ನು ಅನುಭವಿಸಿದಂತಹ ಹಳ್ಳಿಯನ್ನು ಸಂದರ್ಶನ ಮಾಡುತ್ತಾನೆ.
ಆ ಹಳ್ಳಿಯ ಒಂದು ಚಿಕ್ಕ ಕುಟುಂಬದ ಮನೆಯಲ್ಲಿ ಉಳಿದು ಜನಪದ ಸಂಗ್ರಹವನ್ನು ಮಾಡಲೆತ್ನಿಸುತ್ತಾನೆ. ಆ
ಮನೆಯಲ್ಲಿ ಮೂರೇ ಸದಸ್ಯರು; ತಂದೆ, ಮಗ, ಮಗಳು. ತಾಯಿ ಸ್ವಲ್ಪ ಸಮಯದ ಹಿಂದಷ್ಟೇ ತೀರಿಕೊಂಡಿದ್ದಳು.
ಸೈನಿಕ ಗು-ಖಿಂಗ್‍ಗೆ, ಇಲ್ಲಿನ ವಾಸದಿಂದ ಕೃಷಿ ಮತ್ತು ಕೃಷಿ ಪರಿವಾರದ ಸಮಸ್ಯೆ-ಸಂಕಷ್ಟಗಳ ವಿಶ್ವರೂಪದರ್ಶನವೂ
ಆಗುತ್ತದೆ. ವಿಶೇಷವಾಗಿ ಮನೆಯ ಹೆಣ್ಣು ಮಗಳಾದಂತಹ ಕ್ವಿಖಿಯಾವೊ ಳು ಮನೆಯನ್ನು ನಿರ್ವಹಿಸುವ, ಪಾಲಿಸುವ
ಮತ್ತು ಪಾಲಿಸಲು ಕಷ್ಟಪಡುವುದನ್ನು ನೋಡಿ ಒಂದು ರೀತಿಯ ಭ್ರಮನಿರಸವೂ ಕೂಡಾ ಆತನಿಗಾಗುತ್ತದೆ. ಅಲ್ಲಿಯ
ಬುಡಕಟ್ಟು ಕೃಷಿಕ ಸಮಾಜ ಅತ್ಯಂತ ಸಂಕೀರ್ಣವಾಗಿತ್ತು. ಹಳ್ಳಿಯ ಆ ಕುಟುಂಬದಲ್ಲಿ ಸುಮಾರು 14 ವರ್ಷದ
ಹುಡುಗಿ ಖ್ವಿಖಿಯಾಮೋ ಳನ್ನು ಮದುವೆ ಮಾಡಿಸಿ, ಅದರಿಂದ ಬರುವಂತಹ ವಧುದಕ್ಷಿಣೆಯಿಂದ ತಾಯಿಯ ಸಾವಿಗಾಗಿ
ಮಾಡಬೇಕಿದ್ದ ಕ್ರಿಯಾವಿಧಿಗಳ ವೆಚ್ಚ ಮತ್ತು ಆಕೆಯ ಸಹೋದರನ ನಿಶ್ಚಿತಾರ್ಥವನ್ನೂ ಕೂಡಾ ಅದೇ ಹಣದಿಂದ
ಭರಿಸಬೇಕೆಂಬ ಯೋಜನೆಯಿದ್ದಿತು. ಆ ನೆಲೆಯಲ್ಲಿ ತಂದೆ ಪ್ರಯತ್ನವನ್ನೂ ಕೂಡಾ ಮಾಡಿದ್ದ, ಆಕೆಯ ಗಂಡನಾಗಬೇಕಿದ್ದ
ವ್ಯಕ್ತಿ ಪ್ರಾಯದಲ್ಲಿ ಆಕೆಯ ತಂದೆಯನ್ನು ಕೂಡಾ ಹೋಲುತ್ತಿದ್ದಾಗ್ಯೂ. ಆಗ ಗು-ಖಿಂಗ್ ಇದನ್ನು ವಿರೋಧಿಸಿ
ಆಕೆಯನ್ನು ಕಮ್ಯುನಿಸ್ಟ್ ಪಾರ್ಟಿ ಆಫ್ ಚೈನಾ ಸೇರುವಂತೆ ಪ್ರಯತ್ನಿಸಿದರೂ ಕೂಡಾ ಆಕೆಯ ಪರಿಸ್ಥಿತಿಯನ್ನು
ನೋಡಿ ತಾಟಸ್ತ್ಯವನ್ನು ತಾಳುತ್ತಾನೆ. ಕೊನೆಗೂ ಕೂಡಾ ‘ಖ್ವಿಖಿಯಾಮೋ ಳಿಗೆ ಮದುವೆಯಾಗುತ್ತೆ ವಯೋವೃದ್ಧ
ವರನೊಂದಿಗೆ. ಆಕೆ ಆ ರಾತ್ರಿಯೇ ಚೀನಾದ ಪ್ರಸಿದ್ಧ ಹಳದಿ ನದಿ(ಯೆಲ್ಲೋ ರಿವರ್)ಯನ್ನು ದಾಟುತ್ತಾಳೆ.
ಅವಳು ಕಮ್ಯುನಿಸ್ಟ್ ಪಾರ್ಟಿ ಸೇರಿದಳೋ? ಬೇರೆಲ್ಲಿಯಾದರು ಹೋದಳೋ? ಇತ್ಯಾದಿ ಸ್ಪಷ್ಟವಾಗುವುದಿಲ್ಲ.
ನಂತರದ ದೃಶ್ಯ ಪುನ: ಹಳ್ಳಿಯತ್ತ, ಹಳ್ಳಿಯ ಬೆಳೆ ಮತ್ತು ಭೂಮಿ ಬರಡಾದ ಕಾರಣ ಜನ ‘ಮಳೆನೃತ್ಯ’ಕ್ಕೆ ಅಣಿಯಾಗುತ್ತಿದ್ದಾರೆ. ಜನರಿಂದ ಭರ್ಜರಿ ನೃತ್ಯ ನಡೆಯುತ್ತದೆ, ಸಿನಿಮಾ ಮುಗಿಯುತ್ತದೆ.
ಎಲ್ಲೋ ಅರ್ತ್’, ಸಿನಿಮಾದ ತುಂಬೆಲ್ಲಾ ಪ್ರತೀಕಗಳೇ. ಇದು ಸಿನಿಮಾವನ್ನು ಸರಿಯಾಗಿ
ಅರ್ಥಮಾಡಿಸುವಲ್ಲಿ ಕೂಡಾ ಸಹನೆ, ಪರೀಕ್ಷೆ ಮುಂತಾದ ಗುಣಗಳನ್ನು ಆಗ್ರಹಿಸುತ್ತವೆ. ರೈತರ ಗುಂಪು, ಮೂಳೆ
ತೋರುವ ದೇಹ, ತಲೆ ಸುತ್ತಿಕೊಂಡ ಪೇಟ, ಕೆಂಪು ಡ್ರಮ್ ಬಾರಿಸುವ ಸಂಗೀತಗಾರರು, ನೀಲಿ ಮತ್ತು ಬಿಳಿ ಬ್ಯಾಂಡ್
ತೊಟ್ಟ ನೃತ್ಯಗಾರರು, ಮದುವೆ ಮೆರವಣಿಗೆ, ರೆಡ್ ಬಣ್ಣದ ಸ್ಪರ್ಧಿಯ ಹಾಗೆ ಕಾಣಿಸುವ ಮರುಭೂಮಿ ಮತ್ತವರ
ಬಣ್ಣ, ರೈತನ ಮನೆಯ ಇಂಟೀರಿಯರ್, (ಅದೂ ಭೂಮಿಯ ಭಾಗವೆಂಬಂತೆ ಕಾಣಿಸುವ) ಮದುವೆ ಸಮಾರಂಭದಲ್ಲಿ ಬಡತನದ
ಕಾರಣ ಅತಿಥಿಗಳಿಗೆ ಉಣಬಡಿಸಿದ ಮರದ ಮೀನು, ಆದರೂ ಸಭೆಯಲ್ಲಿ ಪಟಕ್ಕನೇ ಎದ್ದು ‘ಇಂದು ಮೀನೂಟ’ವೆಂದು ಘೋಷಿಸುವ ವ್ಯಕ್ತಿ, ಮೂರು ಕಿಲೋಮೀಟರ್ ದೂರದಿಂದ ಮರದ ಪೆಟ್ಟಿಗೆಯಲ್ಲಿ ನೀರು ತರುವ
14ರ ಹರಯದ ಹುಡುಗಿ ‘ಖ್ವಿಖಿಯೋಮೋ’, ಆಕೆಗೆ ಸಹಕರಿಸಿ ಪ್ರೀತಿ ಗಳಿಸುವ ಸೈನಿಕ, ಮದುವೆ ನಂತರ ಖ್ವಿಖಿಯೊಮೋ
ಸಂಚರಿಸುವ ವೇಳೆ ಬೆಟ್ಟಗಳು ಧ್ವನಿಸುವಂತೆ ಕೇಳುವ,ಕಾಣುವ ‘ ಕಮ್ಯುನಿಸ್ಟ್‍ರು ಮಾತ್ರ ಜನರನ್ನು ಕಾಪಾಡುವವರು’ ಎನ್ನುವ ನಿಹಿತ, ಅಂತಿಮವಾಗಿ ಆಕೆ ನದಿ ದಾಟಿ
ಮುಕ್ತಿಯ ಕಡೆ ಸಾಗುವ ಕ್ರಮದವರೆಗಿನ ಪ್ರತೀ ಇಮೇಜ್‍ಗಳು ಬಹಳ ಮುಖ್ಯವಾಗಿ ಕಾಡುತ್ತವೆ. ಬಹುಶ: ಸಂವಾದ,
ಸಂಭಾಷಣೆಗಿಂತ ಹೆಚ್ಚಿಗೆ ತೂಕ ಮತ್ತು ಔಚಿತ್ಯವನ್ನು ಇವು ಹೊಂದಿರುವುದನ್ನು ಕೂಡಾ ನಾವಿಲ್ಲಿ ಕಾಣಬಹುದಾಗಿದೆ.
ಈ ನೆಲೆಯಲ್ಲಿಯೇ ಸ್ವತ: ಕೈಗೇ ಮತ್ತು ‘ಕೈಗೇ’ ಸಿನಿಮಾಗಳ ಮೇಲಿನ ಬಹುದೊಡ್ಡ ವಿಮರ್ಶಕರು ಹೇಳುವುದು ಯೆಲ್ಲೋ ಅರ್ತ್’ ಮುಖ್ಯವಾಗುವುದು ಇಮೇಜ್‍ಗಳಿಂದ. ಈ ಇಮೇಜ್‍ಗಳು ತಮ್ಮ ಆಂತರಂಗಿಕÀ ಗುಣವಾಗಿರುವ ಬಹುವ್ಯಾಖ್ಯಾನಗಳನ್ನೂ
ಧನಾತ್ಮಕ-ಋಣಾತ್ಮಕ ವ್ಯಾಖ್ಯಾನಗಳನ್ನು ಗೈಯ್ಯುವುದೂ ಕೂಡಾ ಅತ್ಯಂತ ಮುಖ್ಯವಾಗುತ್ತದೆ.
ಚೆನ್ ಕೈಗೆ ಒಬ್ಬ ಫಿಫ್ತ್ ಜನರೇಶನ್ (ಐದನೇ ತಲೆಮಾರಿನ) ನಿರ್ದೇಶಕ. ಚೈನಾದ ಸಿನಿಮಾಗಳು ಇದರ
ಮೂಲಕವೇ ಜಗತ್ತನ್ನು ವ್ಯಾಪಿಸಿದುವು. ಜಾಗತಿಕ ಸಿನಿಮಾದಲ್ಲಿ ಚೈನಾವನ್ನು ಮುಂಚೂಣಿಯಲ್ಲಿಡಲು ಕೂಡಾ
ಫಿಫ್ತ್ ಜನರೇಶನ್ ಇದು ಕಾರಣವಾಯಿತು. ಅದುವರೆಗೂ ಇದ್ದ ಜಪಾನೀ ಸಿನಿಮಾಗಳ ಓಟ ಮತ್ತು ಗತಿಯನ್ನು ಇವು
ಕೊಂಚ ಕಡಿಮೆಗೊಳಿಸುವಲ್ಲಿಯೂ ಕೂಡಾ ಕಾರಣವಾಯಿತು. ಅಂತಹ ಎಲ್ಲಾ ಪ್ರಕ್ರಿಯೆಗಳ ನಿಜವಾದ ಆರಂಭವು ‘ಯೆಲ್ಲೋ
ಅರ್ತ್’ ಸಿನಿಮಾದ ಮೂಲಕ ಉಂಟಾಯಿತು. ಚೈನಾದ ಸಂದರ್ಭದಲ್ಲಿಯೂ ಕೂಡಾ ಈ ಸಿನಿಮಾ ಒಂದು ರೀತಿ ಮೈಲಿಗಲ್ಲು
ಅಥವಾ ಸ್ಥಿತ್ಯಂತರದ ಹಾಗೆ ಕಂಡಿತು. ಯಾಕೆಂದರೆ ಅದುವರೆಗಿನ ಎಲ್ಲಾ ಸಿನಿಮಾಗಳು ಕೂಡಾ ಒಂದು ರೀತಿಯ
ಔಪಚಾರಿಕವಾದ ಪ್ರೊಪಗಾಂಡಾದ ಹಾಗೆಯೇ ಇದ್ದುವು. ಯಾವುವೂ ಕೂಡಾ ಪ್ರಭುತ್ವದ ಚೌಕಟ್ಟುಗಳನ್ನು ಮೀರಿ,
ಸೃಜನಶೀಲ ಎನ್ನಬಹುದಾದ ಸಾಧ್ಯತೆಗಳನ್ನು ಸಾಧಿಸುವ, ಡಿಡಾಕ್ವಿಕ್ ಎನ್ನಬಹುದಾದ ಪ್ರಯತ್ನವನ್ನು ಮಾಡಿದ
ಸಿನಿಮಾಗಳು ಅತ್ಯಂತ ಕಡಿಮೆಯಿದ್ದವು. ಈ ಯೆಲ್ಲೋ ಅರ್ತ್ ಸಿನಿಮಾ ಅಂತಹ ಸಾಧ್ಯತೆ ಮತ್ತು ಯುಗವನ್ನೇ
ಸೃಷ್ಟಿಸಿತೆನ್ನುವುದು ಚೈನಾ ಮತ್ತು ಕೈಗೆ ಸಿನಿಮಾಗಳ ಮೇಲಿನ ಒಬ್ಬ ಬಹುದೊಡ್ಡ ವಿಮರ್ಶಕ ರಿಚರ್ಡ್
ಜೇಮ್ಸ್ ಹ್ಯಾವಿಸ್‍ನ ಅಭಿಪ್ರಾಯವಾಗಿದೆ.
ಎಲ್ಲೋ ಅರ್ತ್ ಕೂಡಾ ಅತ್ಯಂತ ನೇರವಾಗಿ ಕಮ್ಯುನಿಸ್ಟ್ ಪಕ್ಷವನ್ನು, ಚೈನಾವನ್ನು ವಿರೋಧಿಸಿತೆನ್ನಲಾಗದಿದ್ದರೂ
ಕೂಡಾ ಅದು ಸಮಕಾಲೀನ ಪ್ರಭುತ್ವವನ್ನು ವಿವಿಧ ಮಗ್ಗಲುಗಳಿಂದ ಪ್ರಶ್ನಿಸಿದ ಕ್ರಮವಂತೂ ಅತ್ಯಂತ ಪ್ರಮುಖವಾಗಿದೆ.
ಈ ಸಿನಿಮಾದ ಮೂಲಕ ಹಲವು ದೃಶ್ಯ, ಇಮೇಜ್‍ಗಳನ್ನು ಬಳಸಿ ದರ್ಶಿಸಿದ ಕ್ರಮವೇ ಅಂತಹ ಗತಿ ತಾರ್ಕಿಕ ನೆಲೆಯ
ಪ್ರಶ್ನಾವಳಿಯ ಕ್ರಮವಾಗಿದೆ. ಅಂತಹ ಕ್ರಮ ಅದೆಷ್ಟೋ ಸಿನಿಮಾಗಳಲ್ಲಿ ಬರುವ ಪ್ರಶ್ನಿಸುವ ಕ್ರಮವಾದ,
‘ಪಾಟೀ ಸವಾಲಿ’ನ ಕ್ರಮಕ್ಕಿಂತ ಭಿನ್ನ ಮತ್ತು ಅನನ್ಯ. ಒಂದು ರೀತಿ ತಣ್ಣಗಿನ ಪ್ರತಿರೋಧ,
ಪ್ರಶ್ನೆ, ಮನಸ್ಸಿಲ್ಲದ ಮನಸ್ಸಿನ ಪ್ರತಿಭಟನೆ ಕೂಡಾ ಇಲ್ಲಿ ಕಾಣಿಸುತ್ತದೆ. ಒಂದು ಔಪಚಾರಿಕ ಸೈನ್ಯದ,
ವ್ಯವಸ್ಥೆಯ ಭಾಗವಾಗಿರುವ, ‘ಗು-ಖಿಂಗ್’ಗೂ ಕೂಡಾ ಅಲ್ಲಿಯವರೆಗೂ ವ್ಯವಸ್ಥೆ-ಕಮ್ಯುನಿಸ್ಟ್ ಪಾರ್ಟಿ ಮುಚ್ಚಿಟ್ಟಿದ್ದ
ಹಳ್ಳಿಯ-ದಾರುಣ-ದುರಂತದ ಚಿತ್ರ, ಬಿಂಬ ಗೋಚರಿಸಿ ಅನುಭವವಾದಾಗ ಆತನೂ ಕೂಡಾ ವ್ಯವಸ್ಥೆಯ ಬಗ್ಗೆ ತಣ್ಣಗಿನ
ವಿರೋಧ ಮತ್ತು ಅಸಮ್ಮತಿಯನ್ನು ತಳೆಯುತ್ತಾನೆ. ಕಮ್ಯುನಿಸ್ಟ್ ವ್ಯವಸ್ಥೆ ಮತ್ತು ಪಾರ್ಟಿಯು ಇಂತಹ ಬರಪೀಡಿತ,
ಶುಷ್ಕ ಹಳ್ಳಿಗಳನ್ನು ಭೌತಿಕವಾಗಿ ಸುಧಾರಿಸದಿದ್ದ ಬಗೆಗೂ ಕೂಡಾ ಆತನಿಗೆ ಭ್ರಮನಿರಸನ ಉಂಟು ಮಾಡುತ್ತದೆ.
‘ಎಲ್ಲೋ ಅರ್ತ್’ ಸಿನಿಮಾದಲ್ಲಿ ಎಲ್ಲವೂ ಕೂಡಾ ಅಭಿನಯಿತವಾಗಿರುವುದು ಭೂಮಿಯ ವಿರುದ್ಧವಾಗಿದೆ.
‘ದಿ ಎಲ್ಲೋ ಅರ್ತ್’ ಅತ್ಯಂತ ನೇರವಾಗಿ ತ್ರಿಕೋನೀಯ ನೆಲೆಯಲ್ಲಿ ಭೂಮಿ, ಪಕ್ಷ ಮತ್ತು
ರೈತರನ್ನು ಸಂಬಂಧಿಸಿರುವಂತದ್ದಾಗಿದೆ. ಒಂದು ರೀತಿಯಲ್ಲಿ ಆ ಸಂಬಂಧವು ಮಾವೋ ಕ್ರಾಂತಿಕಾರೀ ಚಿಂತನೆಯನ್ನು
ಕೆಳಮಟ್ಟಕ್ಕೆ ಸ್ತರೀಕರಿಸಿ, ಕಾರಣವಾಗಿ ನೋಡುತ್ತದೆ. ಎಲ್ಲೋ ಅರ್ತ್‍ನ ರೈತರು ಭೂಮಿಯ ಕಷ್ಟ-ಪರಿತಾಪಗಳ
ನಡುವೆಯೇ, ಭೂಮಿಯೆದುರಿನ ಅಸ್ತಿತ್ವದ ನೆಲೆಯಲ್ಲಿ ಚಾರಿತ್ರಿಕವಾಗಿ ಬೆಳೆದ ಸಂಗತಿಯನ್ನು ಮನಗಾಣಿಸುತ್ತದೆ.
ಕಮ್ಯುನಿಸಂ ಎಂದರೆ ರೈತರ ಬಾಳನ್ನು ಹಸನುಗೊಳಿಸುವ ಸಂಗತಿ ಮತ್ತು ಸಿನಿಮಾದ ಒಂದು ದೃಶ್ಯದಲ್ಲಿ ‘ಖ್ವಿಖಿಯಾಮೋ’, ಕೂಡಾ, ‘ಇಲ್ಲಿ ಜನರನ್ನು ಕಾಪಾಡುವುದು ಕಮ್ಯುನಿಸಂ’ ಎನ್ನುತ್ತಾಳೆ.
ಪದಶ: ನೋಡಿದರೆ ಈ ಸಾಲು ರಾಜಕೀಯವಾಗಿ ಸರಿಯಾದುದು, ಅದು ಅನ್ವಯಕ್ಕೆ ಬಂದರೂ ಕೂಡಾ ಭವಿಷ್ಯವೂ ಕೂಡಾ
ಸುಂದರವಾಗುತ್ತದೆ. ಆದರೆ ಸಿನಿಮಾದ ಸಮಗ್ರವಾದ ಸಂದರ್ಭದಲ್ಲಿ ಗಮನಿಸಿದರೆ, ಒಂದು ಅನಿಶ್ಚಿತವಾದಂತಹ
ಎಲ್ಲೋ(ಹಳದಿ) ಭೂಮಿಯ ಮುಖಾಮುಖಿಯಲ್ಲಿ ಯಾವುದೇ ಒಂದು ರಾಜಕೀಯ ಪಕ್ಷ ಹೇಗೆ ದಕ್ಷವಾಗುತ್ತದೆ, ದಕ್ಷವಾಗಲು
ವಿಫಲವಾಗುತ್ತದೆ ಎನ್ನುವುದರ ಪಲ್ಲಟಗೊಂಡ ಹೇಳಿಕೆಯೇ ಆಗಿದೆ ಅದು. ಒಂದು ರೀತಿ ಔಪಚಾರಿಕವಾದಂತಹ ರಾಜಕೀಯ
ವ್ಯವಸ್ಥೆ, ವಿಚಾರ ಮತ್ತು ಪ್ರಣಾಳಿಕೆಯನ್ನು ತೀಕ್ಷ್ಣವಾಗಿ ಪ್ರಶ್ನಿಸುವ ಹಾಗೂ ಅದರ ಏಕರೂಪೀಯಾದಂತಹ
ಒಂದು ಮಾದರಿಯನ್ನು ವೈವಿಧ್ಯವಾದ ಪ್ರದೇಶದಲ್ಲಿ ಅನ್ವಯಿಸಿದಾಗ ಉಂಟಾಗುವಂತಹ ಸಂಗತಿಯ ಅನುಮಾನವನ್ನೂ
ಕೂಡಾ ಎಲ್ಲೋ ಅರ್ತ್ ನಡೆಸುತ್ತದೆ.
ಸುಮಾರು 1970ರ ದಶಕದಲ್ಲಿ ಉಂಟಾದ ಕಲ್ಚರಲ್ ರೆವಲ್ಯೂಶನ್‍ನಿಂದ ಚೆನ್ ಕೈಗೆ ಮತ್ತು ಆತನ ಸ್ನೇಹಿತರು
ಸೈನ್ಯ ಸೇರಬೇಕಾಗಿ ಬಂದು, ಕೈಗೆ ಕ್ಶಿಶುವಾಂಗ್‍ಬನ್ನಾ ಹಳ್ಳಿಯಲ್ಲಿ ಅರಣ್ಯ ಸೈನ್ಯದ ಪರವಾಗಿ ಕೆಲಸಮಾಡಿ
ಆತ ಕಂಡುಕೊಂಡಂತಹ ಚಾರಿತ್ರಿಕ ಸತ್ಯ ಮತ್ತು ಅನುಭವದ ಪಡಿಯಚ್ಚು ಕೂಡಾ ಹೌದು ಈ ಸಿನಿಮಾ. ಈ ಕಲ್ಚರಲ್
ರೆವಲ್ಯೂಶನ್ ಕಾರಣದಿಂದ ಬೀಜಿಂಗ್ ಫಿಲ್ಮ್ ಅಕಾಡೆಮಿಯೂ ಕೂಡಾ ಮುಚ್ಚಲ್ಪಟ್ಟಿತ್ತು ಆ ಸಂಧರ್ಭ.
1980ರ ದಶಕದಲ್ಲಿ ಪುನ: ಅದೇ ಬೀಜಿಂಗ್ ಅಕಾಡೆಮಿಯು ಪುನ: ಆರಂಭವಾದ ನಂತರ ಅಲ್ಲಿಂದ ಪದವಿ ಪಡೆದು,
ತನ್ನ ಅಪಾರ ಅನುಭವಗಳನ್ನು, ಅಧ್ಯಯನವನ್ನು ಸಂಮ್ಮಿಶ್ರಣಗೊಳಿಸಿ ನಿರ್ಮಿಸಿದ ಸಿನಿಮಾವೇ ಯೆಲ್ಲೋ ಅರ್ತ್.
ಸಮಾಜವನ್ನು, ವ್ಯವಸ್ಥೆಯನ್ನು ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕøತಿಕವಾಗಿ ಸಿನಿಮಾದ ಮೂಲಕ ಅಭಿವ್ಯಕ್ತಗೊಳಿಸಬಹುದೆಂಬ
ಕಾರಣದಿಂದ ಕೈಗೆ ಈ ಮಾಧ್ಯಮವನ್ನು ಆಯ್ಕೆ ಮಾಡಿಕೊಂಡ. ಕಮ್ಯುನಿಸಂನ ನಿಷ್ಕರ್ಷೆ, ಅನುಮಾನದ ಬಗೆಗಿನ
ಮಾದರಿಗಳಲ್ಲೇ ಒಂದು ವಿಭಿನ್ನ ಮಾದರಿಯದು ಆತನ ಈ ಸಿನಿಮಾ. ಅದು ಬಲಬನೋವ್, ಪಾಸೋಲನಿ, ಸುಕ್ರೋವ್ ಮಾದರಿಗಿಂತ
ಭಿನ್ನ ಕೂಡಾ. ಪ್ರೊಪಗಾಂಡಾ ಸಿನಿಮಾಗಳು ಸಾಧ್ಯವಾಗದಿದ್ದ ಆ ಕಾಲದಲ್ಲಿ ಯೆಲೋ ಅರ್ತ್ ‘ನೀರಿನೊಳಗಿನ
ಬೆಂಕಿಯ ಹಾಗಿನ ಪ್ರತಿರೋಧದ ಮಾದರಿಯದಾಗಿ ಗೋಚರಿಸುತ್ತದೆ.
***
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ