ಸಿಕ್ಕಿಮ್: ಪುಟ್ಟ ರಾಜ್ಯದ ಬಹು ಮತ್ತು ದೊಡ್ಡ ಅನುಭವಗಳು’

 

ಎಣಿಸಿದ ಹಾಗೆ ಫ್ಲೈಟ್ ಬೆಂಗಳೂರಿಂದ ಹೊರಟು ಅರ್ಧ ಗಂಟೆ ಮೊದಲೇ ಅಂದರೆ ಮಧ್ಯಾಹ್ನ 3.30ಕ್ಕೆÉ ಭಾಗ್‍ದೋಗ್ರಾವನ್ನು ತಲುಪಿತ್ತು. ಭಾಗ್‍ದೋಗ್ರಾ ಪಶ್ಚಿಮ ಬಂಗಾಲದ ಉತ್ತರ ತುದಿಯಾದ ಸಿಲಿಗುರಿಯಿಂದ ಸುಮಾರು 15 ಮೀ ಪಶ್ಚಿಮಕ್ಕೆ ಇರುವ ಚಿಕ್ಕದಾದ ಗ್ರೀನ್ ಫೀಲ್ಡ್ ಏರ್‍ಪೋರ್ಟ್. ಇದರ ಮುಖ್ಯ ಉದ್ದೇಶವೇ ಸೈನಿಕರನ್ನು ಮತ್ತು ನಾಗರಿಕರನ್ನು ಸಿಕ್ಕಿಮ್‍ಗೆ ಚಾಚಿಸುವುದು. ಭಾಗ್‍ದೋಗ್ರಾದಿಂದ ಸಿಕ್ಕಿಮ್‍ನ ಗ್ಯಾಂಗ್‍ಟಕ್ ಸರಿಸುಮಾರು 122ಕಿ.ಮೀ. ದೂರವಾದರೂ ರಸ್ತೆಯ ಮೂಲಕ ಕಾರಿನಲ್ಲಿ 6 ಘಂಟೆ ಸಾಗಬೇಕಾಗುತ್ತದೆ. ಬಸ್ ಇನ್ನೂ ಒಂದು ಘಂಟೆ ತಡವಾಗಿ ಗ್ಯಾಂಗ್‍ಟಕ್ ತಲುಪುತ್ತದೆ. ಸಿಲಿಗುರಿಯನ್ನು ದಾಟಿ, ತೀಸ್ತಾ ನದಿಯೊಂದಿಗೆ ಅನುರೂಪವಾಗಿ ಗಿರಿಯನ್ನು ಏರುವ ಖುಷಿ, ಕುತೂಹಲ ಅನುಭವ ವೇದ್ಯವೇ ಸರಿ. ಒಂದು ರೀತಿ ಹಸಿರು ತೋರಣವನ್ನು ಸೀಳಿ ಕಪ್ಪು ರಸ್ತೆಯಲ್ಲಿ ಸಂಚರಿಸಿದ ಅನುಭವವದು. ದೀರ್ಘ ಸಂಚಾರದ ಮೂಲಕ ಆದಾಗಲೇ ಗ್ಯಾಂಗ್‍ಟಕ್ ತಲುಪಿದ್ದ ನನ್ ಪಾಲ್ಫಾಟ್ ಮಿತ್ರರನ್ನು (ಶೈನ್ ದಾಸ್, ಅನೀಶ್ ಮತ್ತು ಪ್ರಿಯೇಶ್) ನಾನೂ ಕೂಡಿಕೊಂಡೆ.

ಸಿಕ್ಕಿಂ ಅತ್ಯಂತ ಚಿಕ್ಕ ರಾಜ್ಯ. ಸರಿಸುಮಾರು ಉಡುಪಿ ಜಿಲ್ಲೆಯನ್ನು 10 ಪಟ್ಟು ಸೇರಿಸಿದರೆ ವಿಸ್ತೀರ್ಣದಲ್ಲಿ ಸರಿದೂಗುವಷ್ಟು. ಬರೀ ನಾಲ್ಕೇ ಜಿಲ್ಲೆಗಳು: ದಕ್ಷಿಣ ಸಿಕ್ಕಿಮ್, ಉತ್ತರ ಸಿಕ್ಕಿಮ್, ಪೂರ್ವ ಸಿಕ್ಕಿಮ್ ಮತ್ತು ಪಶ್ಚಿಮ ಸಿಕ್ಕಿಮ್. ಸಮುದ್ರ ಮಟ್ಟದಿಂದ ಸರಾಸರಿ ಎತ್ತರ 9000 ಅಡಿಗಳು ಅಂದರೆ ಸರಿಸುಮಾರು 2 ರಿಂದ ಮೂರು ಕಿ.ಮೀಗಳಷ್ಟು. ನಾನು ಗ್ಯಾಂಗ್‍ಟಕ್‍ನ್ನು ತಲುಪಿದ ರಾತ್ರಿಯಂತೂ, ಗ್ಯಾಂಗ್‍ಟಕ್‍ನ್ನು ಯಾರೋ ಪರ್ವತದ ಮೇಲೆ ಸೃಷ್ಟಿ ಮಾಡಿ ಇಟ್ಟ ಹಾಗೆಂಬಂತೆ ತೋರಿತು. ಎರಡು ಸಮಾನಾಂತರ ಪರ್ವತಗಳಲ್ಲಿ ಒಂದಾದ ಗ್ಯಾಂಗ್‍ಟಕ್‍ನಿಂದ ಎದುರಿನ ಇನ್ನೊಂದು ಜನವಾಸೀ ಪರ್ವತವನ್ನು ನೋಡಿದಾಗ ಯಾವುದೋ ಪರ್ವತದ ತುಂಬೆಲ್ಲಾ ದೀಪಾವಳಿಯ ದೀಪವನ್ನಿಟ್ಟ ಹಾಗೆಯೇ ಕಾಣಿಸುತ್ತಿತ್ತು. ಗ್ಯಾಂಗ್‍ಟಕ್ ಕೂಡಾ ಒಂತರಾ ರುದ್ರ ರಮಣೀಯ. ತೀರಾ ಕಿರಿದಾದ ರಸ್ತೆಗಳು, ಪರ್ವತವನ್ನೇರುವ ಹಾಗೆ ಏರಬೇಕಾದ ಒತ್ತೊತ್ತಿನ ಮಾರ್ಗಗಳು, ಅಬ್ಬಾ ಒಂತರಾ ರೌದ್ರ ಸೌಂದರ್ಯ. ಕಳೆದ ಬಾರಿ ಸರಿಸುಮಾರು 1 ತಿಂಗಳು ಲಡಾಕ್‍ನ ಅತ್ಯಂತ ಎತ್ತರದ ರಸ್ತೆಗಳಲ್ಲಿ, ಕಣಿವೆ ಮಾರ್ಗಗಳಲ್ಲಿ ಸಂಚರಿಸಿದರೂ (ಜಗತ್ತಿನ ಅತ್ಯಂತ ಎತ್ತರದ ಮೋಟಾರ್‍ವಾಹನ ಸಂಚರಿಸುವ ಕಣಿವೆ ಮಾರ್ಗ ‘ಚಾಂಗ್ ಲಾ ದ ಸಂಚಾರ) ಕೂಡಾ ಆ ರೀತಿಯ ಭಯವಾಗಿರಲಿಕ್ಕಿಲ್ಲ. ಆದರೂ ಡ್ರೈವರ್‍ಗಳು ಮಾತ್ರ ಅತ್ಯಂತ ಕುಶಲಿಗಳು. ಗ್ಯಾಂಗ್‍ಟಕ್‍ನ ರೌದ್ರ ಸೌಂದರ್ಯ ಮತ್ತು ಸ್ವಾಗತದ ಕನಸಿನಲ್ಲೇ ಮಲಗಿದ ನನಗೆ ಎಚ್ಚರವಾಗಿದ್ದು ಬೆಳಿಗ್ಗೆ 10 ಘಂಟೆಗೆ, ಅಷ್ಟು ಹಿತವಾಗಿತ್ತು ಕನಸು ಮತ್ತು ಗ್ಯಾಂಗ್‍ಟಕ್‍ನ ಹವೆ, ಒಂದು ರೀತಿ ಏರ್‍ಕಂಡೀಶನ್ಡ್ ರೀತಿಯದು.

ನಮ್ಮದು ಈ ಬಾರಿ 10 ದಿನಗಳ ಕುತೂಹಲದ ಪ್ರವಾಸವಾಗಿತ್ತು. ಮೊದಲ ದಿನ ಗ್ಯಾಂಗ್‍ಟಕ್ ಸಿಟಿಯನ್ನು ದರ್ಶನ ಮಾಡುವ ಯೋಜನೆಗಾಗಿ ಹೊರಟೆವು. ಬಾಡಿಗೆ ಕಾರ್‍ನಲ್ಲಿ ಅವರೇ ನಿರ್ದಿಷ್ಠ ಪಡಿಸಿದ ಹಾಗೆ ನಾವು ಓದು ಮತ್ತು ನೆಟ್‍ನಿಂದ ಪಡೆದ ಮಾಹಿತಿಯಾಧಾರದ ಸ್ಥಳಗಳನ್ನು ಸಂಯೋಜಿಸಿದ ಸೈಟ್‍ಸೀಯಿಂಗ್ ಆಗಿತ್ತದು. ಗ್ಯಾಂಗ್‍ಟಕ್‍ನಲ್ಲಿ ಈ ಮೂಲಕ ನೋಡಿದ ಕೆಲವು ಪ್ರಮುಖ ಸ್ಥಳಗಳಲ್ಲಿ ಹನುಮಾನ್ ಟೋಕ್ ಕೂಡಾ ಒಂದು. ಹನುಮಾನ್ ಟೋಕ್, ಹನುಮಂತನ ದೇವಸ್ಥಾನ. ಹನುಮಂತ ಸೀತೆಯನ್ನು ಹುಡುಕಲು ಲಂಕೆಗೆ ಹೋಗುವ ಮುಂಚೆ ಆ ಜಾಗದಲ್ಲಿ ವಿಶ್ರಾಂತಿ ಪಡೆದಿದ್ದ ಎನ್ನುವ ಸ್ಥಳ ಪುರಾಣದೊಂದಿಗೆ ಆ ಜಾಗ ಪ್ರಸಿದ್ಧವಾಗಿದೆ. ಇಲ್ಲಿಂದ ಇಡೀ ಗ್ಯಾಂಗ್‍ಟಕ್ ಸಿಟಿಯ ನಯನ ಮನೋಹರ ದೃಶ್ಯವನ್ನು ವೀಕ್ಷಿಸುವ ಲಾಭವು ಇಲ್ಲಿಯ ಸಂದರ್ಶನದಿಂದ ಸಿಗುತ್ತದೆ. ಈ ಜಾಗದಲ್ಲಿ ನಿಂತಾಗ ನನಗೆ ಕಾಡಿದ್ದು, ಭಾರತದಲ್ಲಿ ಈ ರಾಮಕಥೆ, ರಾಮ ಎನ್ನುವ ಫಿನೋಮಿನಾ (ವಿದ್ಯಮಾನ) ದ ಅಚ್ಚರಿ. ಭಾರತದಲ್ಲಿನ ಅನೆಕ ಪ್ರದೇಶಗಳಲ್ಲಿ ಈ ರೀತಿಯಾದ ಹನುಮಂತ ವಿಶ್ರಾಂತಿ ತೆಗೆದುಕೊಂಡ ಕಥೆಯಿದೆ. ಸಿಕ್ಕಿಂನಂತಹ ಗುಡ್ಡಗಾಡು ಪ್ರದೇಶದ ಬಹುತೇಕ ಬುಡಕಟ್ಟು ಸಮಾಜಗಳಿಂದ ವಿಕಾಸವಾಗಿ ನಗರ, ನಾಗರೀಕತೆಯನ್ನು ಬಹುವಾಗಿ ಅನುಭವಿಸಿರುವ ಸಮಾಜಗಳಲ್ಲೂ ಕೂಡಾ ರಾಮನ ಬಗೆಗೆ ಇರುವ ಆಸ್ಥೆ ಮತ್ತು ರಾಮಕಥೆಯ ಕೇಂದ್ರ ಅಥವಾ ತಿರುಳು ವ್ಯಾಪಿಸಿರುವಂತದ್ದು ಸೋಜಿಗವೇ ಸರಿ. ಇದು ಒಂದು ರೀತಿ ರಾಮಕಥೆಯ ಬಹು ಆವೃತಿಗಳನ್ನೂ, ಅವುಗಳ ಸಿಂಧುತ್ವವನ್ನೂ ಮತ್ತು ಅದರ ಜತೆ-ಜತೆಯಲ್ಲೇ ಈ ‘ರಾಮ ಎನ್ನುವ ವಿದ್ಯಮಾನದಂತಹ ಅನೆಕ ಸಂಗತಿಗಳು ಸಾಂಸ್ಕøತಿಕವಾಗಿ ಹೇಗೆ ಒಂದು ಬಹು ಅಭಿವ್ಯಕ್ತಿಯ ನಡುವೆಯೂ ಕೂಡಾ ಇರುವ ಏಕಸೂತ್ರತೆಯನ್ನು ನಮಗೆ ಪದೇ ಪದೇ ನೆನಪಿಸುತ್ತವೆ. ಬಹುಶ: ಜಗತ್ತಿನ ಯಾವುದೇ ದೇಶವೂ,ಸಮಾಜವೂ ಕೂಡಾ ಇಂತಹ ಅನುಭವವನ್ನು ಹೊಂದಿಲ್ಲವೆಂದೇ ನನ್ನ ಅಭಿಮತ. ನಾನು ಒಂದು ರೀತಿ ಪ್ಯೂರಿಸ್ಟ್ ಆಗಿ ಸಾಂಸ್ಕøತಿಕ ರಾಷ್ಟ್ರವಾದವನ್ನು ನೋಡುತ್ತಿಲ್ಲ, ಬದಲಿಗೆ ಒಂದು ಪಾನ್ ಇಂಡಿಯನ್ ನೆಲೆಯಲ್ಲಿ ವ್ಯಾಪಿಸಿರುವ, ನೆಲೆಗೊಂಡಿರುವ ಕಥೆ, ಕಥನದ ಬಹು ಆವೃತ್ತಿಗಳ ಶ್ರೀಮಂತಿಕೆಯನ್ನು ಖುಷಿಯಿಂದ, ಕುತೂಹಲದಿಂದ ನೋಡುತ್ತಿರುವುದು. ಹನುಮಾನ್ ಟೋಕ್ ನೋಡಿದ ಮೇಲೆ ನನಗನಿಸಿರುವುದು, ರಾಮ-ಹನುಮಾನ್-ಸೀತೆ ಯಾರೇ ಆಗಲೀ ನಿಲ್ಲುವುದು, ಸಲ್ಲುವುದು ಮತ್ತು ನಿಂತಿರುವುದು ಗುಡಿಯ ಗಡಿಯ ಹೊರಗೆ. ಪ್ರಕೃತಿ, ಗುಡ್ಡ, ಬೆಟ್ಟ, ಕಲ್ಲು, ಮರ, ನದಿಯ ರೂಪದಲ್ಲಿ ಮತ್ತು ಅಂತಿಮವಾಗಿ ರಾಮ, ಹನುಮಾನ್ ನಿಂತಿರುವುದು, ಹಾರುವುದು ಜನರ ಮನಸ್ಸಿನಲ್ಲೆಂಬುದು.

ಗ್ಯಾಂಗ್‍ಟಕ್ ಸಿಟಿಯಲ್ಲಿರುವ, ‘ಹಿಮಾಲಯನ್-ಆಲ್ಫೈನ್ ಹೂವುಗಳ ಪ್ರದರ್ಶನವಂತೂ ಅತ್ಯದ್ಭುತ. ಈ ಹೂವುಗಳನ್ನು ಸಿಕ್ಕಿಂನ ಗ್ಯಾಂಗ್‍ಟಕ್‍ನಿಂದ ಕೆಲವೇ ದೂರದಲ್ಲಿರುವ ಸಿಲಿಗುರಿ, ಭಾಗ್‍ದೋಗ್ರಾಕ್ಕೆ ತಂದರೆ ಅವು ಅಲ್ಲಿನ ಸೆಕೆಯನ್ನು ತಾಳುವುದಿಲ್ಲ, ಸಾಯುತ್ತವೆ. ವಿವಿಧ ರೀತಿಯ ಆರ್ಕಿಡ್‍ಗಳು, ಮೂರು ವಿಧದಲ್ಲಿರುವ ರೋಡೋಡೆಂಡ್ರಾನ್ ಹೂವಿನ ಸುಧಾರಿತ ಮಾದರಿಗಳು ಅಲ್ಲಿನ ಹವೆಯಲ್ಲಿ ಮಾತ್ರ ಅರಳುತ್ತವೆ. ಬಹುಶ: ಗ್ಯಾಂಗ್‍ಟಕ್ ಸೇರಿದಂತೆ ಸಿಕ್ಕಿಂನಲ್ಲಿರುವಷ್ಟು ಅಲ್ಫೈನ್ ಹೂವಿನ ವಿಭಿನ್ನ ಪ್ರಭೇದಗಳು ಮತ್ತೆಲ್ಲಿಯೂ ಕೂಡಾ ಸಿಗಲಾರವು. ಈ ಹೂವುಗಳ ಪ್ರದರ್ಶನ ಚಳಿಗಾಲವನ್ನು ಹೊರತುಪಡಿಸಿ ಉಳಿದ ಎಲ್ಲಾ ಕಾಲದಲ್ಲೂ ಕೂಡಾ ನೋಡಲು ಸಿಗುತ್ತದೆ.

ಗ್ಯಾಂಗ್‍ಟಕ್ ಸಿಟಿಯಲ್ಲಿರುವ ಮಹತ್ವದ, ಅತ್ಯಂತ ಪ್ರಾಚೀನ ಮೊನಾಸ್ಟರಿ (ಬೌದ್ಧ ಸಂಘಾರಾಮ) ಯೆಂದರೆ ‘ಎಂಚೇ ಮೊನಾಸ್ಟರಿ. ಇಲ್ಲಿಯ ಸಂದರ್ಶನ, ಸ್ವಲ್ಪ ಯೋಚನೆ ಮಾಡುವವರನ್ನು ಕಾಡುತ್ತದೆ. ನಾನು ಕುತೂಹಲಕ್ಕೆ ಮೊನಾಸ್ಟರಿಯ ಒಳಹೋಗಿದ್ದೆ. ಸುಮಾರು 6 ವರ್ಷದಿಂದ ಹಿಡಿದು 80ರ ವರೆಗೆ ವಿವಿಧ ವಯೋಮಾನದ ನೂರಕ್ಕೂ ಹೆಚ್ಚು ಬುದ್ಧ ಸನ್ಯಾಸಿಗಳು ಅಲ್ಲಿದ್ದರು. ಇಲ್ಲಿನ ಭೇಟಿ ಬೌದ್ಧ ಧರ್ಮದ ಬಗ್ಗೆ ನನ್ನನ್ನೂ ಸೇರಿಸಿ ಇನ್ನೂ ಅನೇಕರಿಗಿರುವ ನಂಬಿಕೆ, ಅದ್ಭುತ ರಮ್ಯತೆ(ಫ್ಯಾಂಟಸಿ)ಯನ್ನು ಮುರಿದು ಕಟ್ಟುವಂತೆ ಕೂಡಾ ಮಾಡಬಹುದು. ಯಾವುದೇ ಒಂದು ಧರ್ಮವು ಸಾಂಸ್ಥಿಕವಾಗುತ್ತಾ ಹೋದ ಹಾಗೆ, ಆಲಯವಾಗುತ್ತಾ ಹೋದ ಹಾಗೆ ಟೊಳ್ಳುಗಟ್ಟಿತನವನ್ನು ಹೊಂದುತ್ತದೆ.ಅದು ನಮ್ಮ ಕರ್ನಾಟಕದ ಬ್ರಾಹ್ಮಣ-ಅಬ್ರಾಹ್ಮಣ ಮತ್ತು ಲಿಂಗಾಯತ ಮಠಗಳ ಹಾಗೆಯೇ ಅದೂ ಕೂಡಾ ಎಂಬ ನಮ್ಮ ಪ್ರದೇಶದ ಸಮಾನಾಂತರ ಅನುಭವದ ಹಾಗೆ ಅದು ಕಾಣಿಸಿತು.ಸನ್ಯಾಸವು ಇಲ್ಲಿ ದೂಡಿದ-ಎಳೆದ (ಪುಶ್-ಪುಲ್) ಕಾರಣದಿಂದಲೇ ಹೊರತು ಸ್ವ-ಇಚ್ಚೆಯಿಂದ ಅಲ್ಲ ಎನ್ನುವ ಸಂಗತಿ ಇದರಿಂದ ತಿಳಿಯುತ್ತಿತ್ತು. ಹೆಚ್ಚು ಬೌದ್ಧ ಜನಸಂಖ್ಯೆ ಇರುವ ಈಶಾನ್ಯ ರಾಜ್ಯಗಳು ಮತ್ತು ಹಿಮಾಚಲ-ಲಡಾಖ್ ಭಾಗದಲ್ಲಿ ಒಂದು ಸಂಪ್ರದಾಯವಿದೆ. ಮನೆಯ ಕಿರಿಯ ಸದಸ್ಯ ಕಡ್ಡಾಯವಾಗಿ ಬೌದ್ಧ ಭಿಕ್ಕುವಾಗುವಂತದ್ದು. ಆ ಕಾರಣದಿಂದಲೇನೇ, ಮನೆಯವರ ಒತ್ತಾಯದಿಂದಲೇ ಮತ್ತು ಅಪ್ರಜ್ಞೀಯವಾಗಿಯೇ ನೆರೆದ ಭಿಕ್ಕುಗಳ ಸಮಾವೇಶವಾಗಿತ್ತು ಅಲ್ಲಿಯ ಮೊನಾಸ್ಟರಿ. ಬೌದ್ಧ ಭಿಕ್ಕುವೊಬ್ಬ ಕುಳಿತು ಬೌದ್ಧ ಗ್ರಂಥವೊಂದನ್ನು ಓದುತ್ತಿದ್ದಾನೆ, ಜತೆಯಲ್ಲೇ ಹೆಡ್‍ಫೋನ್ ಬಳಸಿ ಮೊಬೈಲ್‍ನಿಂದ ಹಾಡು ಕೇಳುತ್ತಿದ್ದಾನೆ. ಸುಮಾರು 30 ವರ್ಷವನ್ನು ಮೀರಿದ ಎಲ್ಲಾ ಭಿಕ್ಕುಗಳೂ ಕೂಡಾ ಮೊಬೈಲ್ ಧ್ಯಾನದಲ್ಲೇ ಮುಳುಗಿದ್ದರು. ಸುಮಾರು 15 ರಿಂದ 20ರ ವಯಸ್ಸಿನ ನಡುವಿನ ಭಿಕ್ಕುಗಳ 5 ರಿಂದ 10 ಸದಸ್ಯರ ಗುಂಪೊಂದು ಹೊಸ ಹಿಂದಿ ಸಿನಿಮಾಗಳ ಹಾಡಿನ ಅಂತ್ಯಾಕ್ಷರಿಯನ್ನು ಹಾಡುತ್ತಿತ್ತು. ಇನ್ನೂ ಹತ್ತರ ಹರಯವನ್ನು ದಾಟಿರದ 6 ರಿಂದ 8ರ ಆಸುಪಾಸಿನ ಭಿಕ್ಕುಗಳು ದಭಾಂಗ್ ಶೈಲಿಯಲ್ಲಿ ಸಲ್ಮಾನ್ ಖಾನ್ ಫೈಟ್ ಮಾಡುತ್ತಿದ್ದರು. ಇದೆಲ್ಲದರ ನಡುವೆ ನನಗೆ ತುಂಬಾ ಖುಷಿಕೊಟ್ಟಿದ್ದು 5 ರಿಂದ 10 ಭಿಕ್ಕುಗಳು ಪ್ರಾಮಾಣಿಕವಾಗಿ ಪುಟ್ಬಾಲ್ ಆಡುತ್ತಿದ್ದ ದೃಶ್ಯ. ನಾನೂ ಕೂಡಾ ಕೇಳಿದೆ ತುಂಬಾ ಚಿಕ್ಕ ವಯಸ್ಸಿನ ಭಿಕ್ಕು ಮಕ್ಕಳನ್ನು, ಅವರು ಹೇಳಿದ್ದು, (“ಘರ್ ಸೇ ಬೇಝಾ ಹೈ) ಮನೆಯಿಂದ ಕಳುಹಿಸಲಾಗಿದೆ. ಇದು ಕಳೆದ ಕೆಲವು ವರ್ಷಗಳಲ್ಲಿ ನಮ್ಮ ರಾಜ್ಯದ ಕೆಲವು ಮಠಗಳಲ್ಲಿ ‘ಸನ್ಯಾಸಿಯನ್ನಾಗಿ ದೂಡಿದ ಕೆಲವು ಪ್ರಕರಣಗಳನ್ನು ನೆನಪಿಸುವಂತಿತ್ತು. ಆದರೂ ‘ಎಂಚೆ ಮೊನಾಸ್ಟರಿ ಸಂದರ್ಶನ ಯೋಗ್ಯ ಸ್ಥಳವಾಗಿದೆ.

ಗ್ಯಾಂಗ್‍ಟಕ್ ಬಗ್ಗೆ ಬರೆಯುವಾಗ ಅಲ್ಲಿಯ ಎಂ.ಜಿ.ರೋಡ್ (ಮಹಾತ್ಮ ಗಾಂಧೀಜೀ) ಬಗ್ಗೆ ಬರೆಯದಿದ್ದರೆ ತಪ್ಪಾಗುತ್ತದೆ. ಇದು ಪ್ರತೀ ಊರಿನಲ್ಲಿ ಇರಲೇಬೇಕಾದ ಎಂ.ಜಿ.ರೋಡ್, ಗಾಂಧೀ ಮೈದಾನದ ಹಾಗಲ್ಲ. ಸರಿಸುಮಾರು 100 ರಿಂದ 200 ಮೀ ಉದ್ದದ ಡಬಲ್ ರೋಡ್ ಇದು. ಆದರೆ ಇಲ್ಲಿ ಯಾವುದೇ ವಾಹನ ಸಂಚಾರವಿಲ್ಲ. ಎರಡೂ ರೋಡ್‍ನ ಫುಟ್‍ಪಾತ್ ಪಕ್ಕದಲ್ಲಿ ವಿಧವಿಧದ ಅಂಗಡಿ ಮುಂಗಟ್ಟು, ಶಾಪ್, ಮಾಲ್, ಬ್ಯಾಂಕ್, ಎ.ಟಿ.ಎಮ್, ತೀರ್ಥಕೇಂದ್ರಗಳು (ವೈನ್ ಶಾಪ್‍ಗಳು), ರೆಸ್ಟೋರೆಂಟ್, ಮೆಡಿಕಲ್‍ಗಳು ಮತ್ತು ಇನ್ನೂ ಹತ್ತು ಹಲವು ಸಂಗತಿಗಳು. ರೋಡಿನ ಮಧ್ಯೆ ಕಾರಂಜಿ, ಹೂವಿನ ಕುಂಡಗಳು, ಕುಳಿತುಕೊಳ್ಳಲು ವಿವಿಧ ರೀತಿಯ ಕಟ್ಟೆಗಳು ಮತ್ತು ಆಸನಗಳು. ಸಂಜೆಯಾಯಿತೆಂದರೆ ಮಹಾತ್ಮಾ ಗಾಂಧೀಜಿ ರಸ್ತೆ ಶೃಂಗಾರಗೊಂಡು, ಜನರ ಚಲನೆ, ಜಂಗುಳಿಯಿಂದ, ವಿವಿಧ ಕ್ರಿಯೆ, ಚಟುವಟಿಕೆಗಳಿಂದ ತುಂಬಿ ಹೋಗುತ್ತದೆ. ಪ್ರವಾಸಿಗರ ಮಾತುಕತೆ, ಪ್ರವಾಸಿಗರು ಬೆರಗಾಗಿ ಸಿಕ್ಕಿಂನ ನಿವಾಸಿಗಳನ್ನು ಕಣ್ತುಂಬಿಕೊಳ್ಳುವ ಬಗೆ, ದೊಡ್ಡದಾಗಿ ಹಾಕಿದ ಎಲ್.ಇ.ಡಿ ಡಿಸ್‍ಪ್ಲೇಯಲ್ಲಿ ಮ್ಯಾಚ್ ನೋಡುವ ಮಂದಿ, ಬರ್ಮುಡಾ ಚಡ್ಡಿ ಧರಿಸಿ ಬ್ರೀಝ್ - ಬಿಯರ್ ಹಿಡಿದು, ಚಪ್ಪರಿಸುತ್ತಾ ಕೂದಲು ಸೀಳುವ  ಗಾಢ ಚರ್ಚೆಯಲ್ಲಿ ತೊಡಗಿರುವ ಜನ, ರಸ್ತೆಯನ್ನೇ ಮೈದಾನವೆಂದು ತಿಳಿದು, ಸ್ವಾತಂತ್ರ್ಯ ಘೋಷಿಸಿಕೊಂಡು ಆಡುವ ಮಕ್ಕಳು, ಗಿಟಾರ್‍ನ್ನು ಹಿಡಿದು ಮೊದಲೇ ಕುಡಿದ ಬಿಯರ್‍ನ ಮತ್ತಿನಿಂದ ಬಾಬ್ ಮಾರ್ಲಿಯ ಸಂಗೀತವನ್ನು ಉದುರಿಸುವ ಯುರೋಪ್-ಅಮೇರಿಕಾದ ಪ್ರವಾಸಿಗಳು, ಹೀಗೆ ಗ್ಯಾಂಗ್‍ಟಕ್‍ನ ಈ ಮಹಾತ್ಮಾಗಾಂಧಿ ರಸ್ತೆ ಬದುಕು ಮತ್ತು ಬದುಕಿನ ಸಂಭ್ರಮದ ಹಲವು ಮಗ್ಗುಲುಗಳ ವಿಶ್ವರೂಪ ದರ್ಶನವನ್ನೂ ಮಾಡಿಸುತ್ತದೆ. ಗಾಂಧೀಜೀಯೇ ನಾಚುವ ಹಾಗೆ ಹಲವು ಚಟುವಟಿಕೆಗಳಿಗೆ ಸಾಕ್ಷಿಯಾಗುತ್ತದೆ. ಎಂ.ಜಿ. ರೋಡ್‍ನಲ್ಲಿ ಹಲವು ಪ್ರಸಿದ್ಧ ಟಿಬೇಟಿಯನ್ ರೆಸ್ಟೋರೆಂಟ್‍ಗಳೂ ಕೂಡಾ ಸಿಗುತ್ತವೆ. ಇಲ್ಲಿ ಸಿಕ್ಕಿಮ್ ಮತ್ತು ಟಿಬೇಟಿಯನ್ ಖಾದ್ಯಗಳು ವಿಶೇಷವಾಗಿ ‘ಸಿಸ್ನೂ ಎಂಬ ಸೊಪ್ಪಿನ ಸೂಪ್ ಮತ್ತು ‘ವಿಂಗ್ರೋ ಸೊಪ್ಪಿನ ಪಲ್ಯ ಹಾಗೂ ಮಾಂಸಾಹಾರಿಗಳಿಗಂತೂ ಅತ್ಯದ್ಭುತ ಹಂದಿ ಮಾಂಸದ ಸ್ಲೈಸ್‍ಡ್ ಚಿಲ್ಲಿಯಂತೂ ವಿಶೇಷವಾಗಿ ದೊರೆಯುತ್ತದೆ.

ಉತ್ತರ ಸಿಕ್ಕಿಮ್, ಮುಖ್ಯವಾಗಿ ಅಲ್ಲಿನ ಐದು ಸ್ಥಳಗಳಾದ ಗುರುದೊಂಗ್‍ಮಾರ್ ಸಾಗರ್, ಲಾ ಚುಂಗ್, ಲಾಚೆನ್, ಯುಮ್ತಾಂಗ್-ಸಿಂಗ್ಬಾ ರೋಡೋ ಡೆಂಡ್ರಾನ್ ವ್ಯಾಲಿ & ಸ್ಯಾಂಕ್ಚುಅರಿ ಹಾಗೂ ಝೀರೋ ಪಾೈಂಟ್‍ಗಳನ್ನು ಅವಶ್ಯ ಸಂದರ್ಶಿಸಬೇಕು. ಗ್ಯಾಂಗ್‍ಟಕ್‍ನಿಂದ ಟೂರಿಸ್ಟ್ ಕಂಪೆನಿಗಳ ಸಹಾಯದಿಂದ ಇಲ್ಲಿಗೆ ಕಾರ್ ಹಿಡಿಯಬಹುದು, ಈ ಐದೂ ಸ್ಥಳಗಳನ್ನು ಸಂದರ್ಶನ ಮಾಡುವ ಪ್ಯಾಕೇಜ್ ಮೂಲಕ ಗ್ಯಾಂಗ್‍ಟಕ್‍ನಿಂದ ಮಂಗನ್-ಚುಂಗ್‍ತಾಂಗ್ ಎಂಬ ಪ್ರದೇಶದ ಮೂಲಕ ಲಾಚೆನ್ ಮುಟ್ಟುವುದೇ ಒಂದು ಅತ್ಯದ್ಭುತ ಅನುಭವ. ಸಂಪೂರ್ಣ ಮಲೆ, ಕಿರಿದಾದ ರಸ್ತೆಗಳು, ಹಸಿರು ಹಾಗೂ ಮಂಜಿನ ಹನಿಗಳ ಜತೆ ಮಾತನಾಡುತ್ತಾ ನಿಧಾನವಾಗಿ ಸಾಗುವುದೇ ಅವರ್ಣನೀಯ, ಅದನ್ನು ಅನುಭವಿಸಿಯೇ ತೀರಬೇಕು. ಲಾಚೆನ್ ಸಮೀಪಿಸಬೇಕು ಎನ್ನುವಾಗ ಸಿಗುವ ಸುಮಾರು 500-600 ಮೀ ಎತ್ತರದ, 100 ಮೀ ಉತ್ತರದ ‘ಬನ್‍ಸೋಯಿ ಬ್ರಿಜ್‍ನ ಭೀಕರ ಸೌಂದರ್ಯವನ್ನು ನೋಡುವಾಗಲಂತೂ ಎದೆ ಹಾರಿದರೂ ಹಾರೀತು. ಸೇತುವೆಯ ಕೆಳಗಿನಿಂದ ಸಾಗುವ ಬೋರ್ಗರೆಯುವ ತೀಸ್ತಾ ನದಿಯ ತೊರೆ ಗಂಟೆಗಟ್ಟಲೆ ಅಲ್ಲಿಯೇ ನಿಂತರೆ ಕಿವಿಯನ್ನೂ ಕೆಪ್ಪು ಮಾಡೀತು. ಲಾಚೆನ್ ಸುಮಾರು ಸಮುದ್ರ ಮಟ್ಟದಿಂದ 2700ಮೀ ಎತ್ತರದ ಪ್ರದೇಶ. ಇಲ್ಲಿ ಯಾವಾಗಲೂ ಹನಿಮಳೆ ಇದ್ದೇ ಇರುತ್ತದೆ. ಅದೊಂದು ಚಿಕ್ಕದಾದಂತಹ, ಮುಖ್ಯವಾಗಿ ಪ್ರವಾಸಿಗರಿಗೆ ರಾತ್ರಿ ಉಳಿಯಲು ವ್ಯವಸ್ಥೆ ಹೊಂದಿರುವಂತಹ ಮನೆಗಳನ್ನೇ ಹೋಟೆಲ್‍ಗಳನ್ನಾಗಿ ಪರಿವರ್ತಿಸಿದಂತಹ ಮನೆಗಳಿರುವ ಒಂದು ಪುಟ್ಟದಾದ ಗ್ರಾಮ. ಇಲ್ಲಿಗೆ ಬರುವ ಬಹುಮುಖ್ಯವಾದ ಉದ್ದೇಶ ಇಲ್ಲಿಂದ ಸರಿಸುಮಾರು 62 ಕಿ.ಮೀ ದುಸ್ತರದ ರಸ್ತೆ ಮಾರ್ಗದ ದೂರವನ್ನು ಹೊಂದಿರುವಂತಹ ಗುರುದೊಂಗ್‍ಮಾರ್ ಸಾಗರ್ ಸರೋವರದ ಸಂದರ್ಶನ. ಈ ಸರೋವರ ನೋಡಲು, ಜತೆಗೆ ಸಿಕ್ಕಿಮ್ ಸೇರಿದಂತೆ ಉತ್ತರದ ಗಡಿ ಭಾಗದ ಹಿಮಾಚಲ್, ಜಮ್ಮುಕಾಶ್ಮೀರ-ಲಡಾಖ್‍ನ ಎಲ್ಲಾ ಪ್ರದೇಶಗಳನ್ನು ನೋಡಲು ಅನುಮತಿ ಮತ್ತು ಪರವಾನಗಿ ಪಡೆಯಬೇಕಾಗುತ್ತದೆ. ಇದನ್ನು ನಾವು ಸಂಪರ್ಕಿಸುವ ಟೂರಿಂಗ್-ಟ್ರಾವೆಲ್ಸ್ ಏಜೆನ್ಸಿಯವರೇ ಫೋಟೋ ಮತ್ತು ಅಧಿಕೃತವಾದ ದಾಖಲೆಯೊಂದನ್ನು ನೀಡಿದರೆ ಒದಗಿಸಿಕೊಡುತ್ತಾರೆ ಉಚಿತವಾಗಿ. ಗುರುದೊಂಗ್‍ಮಾರ್‍ಸಾಗರ್ ಭಾರತ ಮತ್ತು ಚೀನಾ ಗಡಿಭಾಗದಲ್ಲಿರುವಂತಹ ಒಂದು ಹಿಮಸಾಗರವಾಗಿರುವ ಕಾರಣ ಮತ್ತು ಎಪ್ರಿಲ್-ಮೇ ತಿಂಗಳಿನ ಬೇಸಿಗೆಯಲ್ಲೂ ಕರಗದ ಕಾರಣ, ಅದು ಶೀತ-ಒಣ (ಕೋಲ್ಡ್-ಡ್ರೈ) ಪ್ರದೇಶದಲ್ಲಿರುವ, ಸಮುದ್ರಮಟ್ಟದಿಂದ ಸರಿಸುಮಾರು 15,000 ಅಡಿ ಎತ್ತರದಲ್ಲಿರುವ ಕಾರಣ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದೂ, ಆರೋಗ್ಯದ ಬಗ್ಗೆ ನಿಗಾವಹಿಸುವುದೂ ಕೂಡಾ ಮುಖ್ಯವಾಗಿರುತ್ತದೆ. ಮುಖ್ಯವಾಗಿ ನಮಗೆ ಅಸಹಜ ಮತ್ತು ತುಸು ಹೆಚ್ಚೆಂದೆನಿಸುವಂತಹ ಚಳಿಯನ್ನು ತಡೆಯಲು ಒಳ ಉಡುಪಿನ ನಂತರ ಥರ್ಮಲ್ಸ್, ನಂತರ ಪ್ಯಾಂಟ್ ಮತ್ತು ಉದ್ದ ತೋಳಿನ ಅಂಗಿ, ಶ್ವೆಟರ್, ಜರ್ಕಿನ್, ನಂತರ ವಿಂಡ್ ಶೀಟರ್ ತೊಡುವುದು ಒಳಿತು. ಇಡೀ ಸಿಕ್ಕಿಮ್ ಯಾತ್ರೆಗೆ ಸಾಧ್ಯವಾದರೆ ಶೂಗಳ ಬದಲು ಬೂಟ್ ಅಥವಾ ರೈನೀ ಬೂಟ್‍ಗಳನ್ನು ತೊಡುವುದು ಒಳಿತು. ಕೈಗೆ ಕವರ್ಸ್ ತೊಟ್ಟು ಅದರ ಮೇಲೆ ಗ್ಲೌಸ್ ಧರಿಸಬೇಕಾಗುತ್ತದೆ. ತಲೆಗೆ ಸಿಕ್ಕಿಂನಲ್ಲಿಯೇ ಲಭ್ಯವಾಗುವ ಕಿವಿಯ ಕಡೆ ಬಾಲ ಮತ್ತು ತಲೆಯ ಮೇಲೆ ಬಾಲವಿರುವ ಕ್ಯಾಪ್‍ಗಳನ್ನು ಧರಿಸುವುದು ಉತ್ತಮ. ಇದರ ಜತೆಜತೆಯಲ್ಲೆ ಅತೀ ಎತ್ತರದ ಹಿಮಾಲಯದ ಪ್ರದೇಶಗಳನ್ನು ಸಂಚರಿಸುವಾಗ ಉಂಟಾಗುವ ಆಮ್ಲಜನಕದ ಕೊರತೆಯ ಕಾರಣದಿಂದ ಉಂಟಾಗುವ ಉಸಿರಾಟದ ಸಮಸ್ಯೆ, ತಣ್ಣನೆ ಕೊರೆಯುವ ತಲೆನೋವು ಹಾಗೂ ಹೈ ಅಲ್ಟಿಟ್ಯೂಡ್ ಸಿಕ್‍ನೆಸ್ (ಹೆಚ್.ಎ.ಎಸ್.) ತಡೆಯುವ ಕಾರಣದಿಂದ ಬಳಸಲಾಗುವ ಡೈಮೋಸ್ ಮಾತ್ರೆಯನ್ನು ಅವಶ್ಯ ಒಯ್ಯಲೇ ಬೇಕಾಗುತ್ತದೆ. ಗುರುದೊಂಗ್‍ಮಾರ್ ಸಾಗರ್ ಸರೋವರ ಅತ್ಯಂತ ಕ್ಲಿಷ್ಟವಾದ ಒಂದು ಡೆಸ್ಟಿನೇಶನ್. ಯಾವಾಗಲೂ ಕೂಡಾ ಒಣ-ತಣ್ಣನೆ ಗಾಳಿ ಬೀಸುತ್ತಿರುತ್ತದೆಯಾದ ಕಾರಣ ಗಾಳಿಗೆ ಮೈ ಮತ್ತು ಕಿವಿಯನ್ನು ಒಡ್ಡದಿರುವುದೂ ಕೂಡಾ ಉತ್ತಮ. ಗುರುದೊಂಗ್ ಮಾರ್‍ಸಾಗರ್ ಸುಮಾರು ಕ್ರಿಸ್ತಪೂರ್ವದಲ್ಲಿ ಟಿಬೆಟ್‍ನ ಬೌದ್ಧಗುರು ಪದ್ಮಸಂಭವನಿಂದ ರಚಿತವಾಯಿತೆಂದೂ ಕೂಡಾ ಹೇಳುತ್ತಾರೆ. ಈ ಕಾರಣದಿಂದ ಬೌದ್ಧ ಧರ್ಮೀಯರಿಗೆ ಇದು ಪವಿತ್ರಕ್ಷೇತ್ರವೂ ಹೌದು. ಅನೇಕ ಜನ ಟಿಬೆಟ್, ಸಿಕ್ಕಿಂನ ಬೇರೆ ಭಾಗದ ಬೌದ್ಧ ಧರ್ಮೀಯರು ಇಲ್ಲಿ ಅನೇಕ ಕಿರು ಪೂಜೆ ಮತ್ತು ಕಾಣಿಕೆಯನ್ನೂ ಅರ್ಪಿಸುತ್ತಾರೆ. ಅತ್ಯಂತ ಒಣ ಮತ್ತು ಶೀತ ಪ್ರದೇಶವಾದ ಕಾರಣ ಆದಷ್ಟು ಬೇಗ ಇಲ್ಲಿಂದ ಜಾಗ ಖಾಲಿ ಮಾಡುವುದೇ ಒಳಿತು. ಹೆಚ್ಚಿನ ಸಲ ಹೆಚ್ಚು ಸಮಯ ಕಳೆದು ಹೈ ಅಲ್ಟಿಟ್ಯೂಡ್ ಸಿಕ್‍ನೆಸ್ ಹಾಗೂ ತೀಕ್ಷ್ಣ ತಲೆ ನೋವನ್ನು ಕೂಡಾ ಯಾತ್ರಿಕರು ಹೊಂದಬೇಕಾಗುತ್ತದೆ. ಸುಮಾರು 50 ರಿಂದ ನೂರು ಎಕರೆಯಷ್ಟು ವಿಸ್ತಾರವಾಗಿ ಹಬ್ಬಿರುವ ಹಿಮದ ಸರೋವರ ಬೇಸಿಗೆಯಲ್ಲೂ ಕೂಡಾ ಕರಗುವುದಿಲ್ಲ. ನನಗೆ ಆಶ್ಚರ್ಯವಾಗಿದ್ದು, ಗುರು ಪದ್ಮ ಸಂಭವ ಅದನ್ನು ನಿರ್ಮಿಸಿದ ಎನ್ನುವುದಕ್ಕಿಂತಲೂ ಕೂಡಾ, ಅಂಥಹ ಕಠಿಣ ಭೂಗೋಳದ ಪ್ರದೇಶಗಳನ್ನು ಮುಟ್ಟಿದ ಬೌದ್ಧ ಭಿಕ್ಷುಗಳ ಮನೋಭಾವ, ಸ್ಥೈರ್ಯ, ತಣ್ಣಗೆ ಹಿಮದ ಹಾಗಿರುವ ಅವರ ಶಾಂತತೆ ಮತ್ತು ಪಕ್ಕದಲ್ಲಿರುವ ಪರ್ವತದ ಹಾಗಿರುವ ಅವರ ಮನೋದಾಢ್ರ್ಯತೆ ಮುಂತಾದ ಗುಣಗಳು. ಬೌದ್ಧ ಧರ್ಮದ ಬಗ್ಗೆ, ಅದರ ವಿಸ್ತಾರ ವ್ಯಾಪ್ತಿಯ ಬಗ್ಗೆ ಮೆಚ್ಚುಗೆಯನ್ನೇ ಸೂಸಬೇಕಷ್ಟೇ. ಬಹುಶ: ಜಗತ್ತಿನಲ್ಲಿ ಬೇರೆ ಯಾವ ಧರ್ಮವೂ ಕೂಡಾ ಈ ರೀತಿಯ ವ್ಯಾಪ್ತತೆಯನ್ನು, ವ್ಯಾಪ್ತತೆಯ ಕಠಿಣ-ಸಂಕೀರ್ಣತೆಯನ್ನು ಹೊಂದಿಲ್ಲವೆಂಬ ‘ವಿದ್ವಾಂಸೆ ರೊಮಿಲಾ ಥಾಪರ್ ಅವರ ಮಾತನ್ನು ನಾನು ಅಕ್ಷರಶ: ನಂಬಿದ್ದು ಇಂತಹ ಗುರುದೊಂಗ್‍ಮಾರ್, ಹಿಮಾಚಲ ಪ್ರದೇಶದ ಸ್ಪಿತಿ ವ್ಯಾಲೀ ಮತ್ತು ಲಡಾಖ್‍ನ ದಿಸ್ಕಿತ್-ಪನಾಮಿಕ್, ಸಿಲ್ಕ್‍ರೂಟ್‍ನ ಕೆಲವು ವಿಶಿಷ್ಠ ಬೌದ್ಧಧರ್ಮದ ನಿವೇಶನಗಳನ್ನು ಸಂದರ್ಶನ ಮಾಡಿದ ನಂತರ. ನಮಗೆ ಅವುಗಳನ್ನು ಸಂದರ್ಶಿಸಿ ಅರ್ಧಘಂಟೆ ಅಲ್ಲಿ ನೆಲೆ ನಿಲ್ಲುವುದೇ ಕಷ್ಟ, ಅಧ್ವಾನ, ಅಂತದ್ದರಲ್ಲಿ ಅವರು ತಿಂಗಳುಗಟ್ಟಲೆ, ವರ್ಷಗಟ್ಟಲೇ ನೆಲೆ ನಿಂತು ಮಾಡಿದ ವಿಪಶ್ಯನ, ಪ್ರಾರ್ಥನೆ, ಧ್ಯಾನ.........! ಗುರುದೊಂಗ್‍ಮಾರ್ ಸಾಗರ್‍ನಿಂದ ಬರುವ-ಹೋಗುವ ದಾರಿ ಸುಮಾರು ಒಟ್ಟು 124(62+62) ಕಿ.ಮೀ ಆಗುತ್ತದೆ. ಒಳ್ಳೆಯ ದರ್ಶನಕ್ಕಾಗಿ ಬೆಳಿಗ್ಗೆ 4 ಘಂಟೆಗೇನೇ ಹೋಟೆಲ್‍ನ್ನು ಲಾಡೆನ್‍ನಿಂದ ಬಿಡಬೇಕಾಗುತ್ತದೆ. ಸುಮಾರು 10 ಘಂಟೆಯ ಹೊತ್ತಿಗೆ ನಾವು ಸರೋವರವನ್ನು ತಲುಪುತ್ತೇವೆ. ದಾರಿಯಲ್ಲಿ ಸಿಗುವ ತಂಗು ಮತ್ತು ಸೋಪ್ತಾ ಎನ್ನುವ ಗ್ರಾಮಗಳ ಟೀ ಅಂಗಡಿಗಳು ಟೀ, ಮ್ಯಾಗಿಯನ್ನೂ ಕೂಡಾ ದೊರಕಿಸಿಕೊಡುತ್ತದೆ. ಆಸಕ್ತಿ ಇದ್ದವರು ‘ಯಾಕ್ ಪ್ರಾಣಿಯ ಮಾಂಸವನ್ನೂ ಕೂಡಾ ಸವಿಯಬಹುದಾಗಿದೆ. ಎಲ್ಲಾ ಅಂಗಡಿಗಳಲ್ಲಿ ಒಲೆಯ ಮೇಲ್ಗಡೆ ಯಾಕ್ ಪ್ರಾಣಿಯ ಮಾಂಸವನ್ನು ನೇತುಹಾಕಿರುತ್ತಾರೆ. ಕೊರೆಯುವ ಚಳಿಯಲ್ಲಿ ತೀರ್ಥ ಸೇವನೆ ಮಾಡಿ ದೇಹ ಬೆಚ್ಚಗಿಡಲೂ ಕೂಡಾ ವ್ಯವಸ್ಥೆಗಳುಂಟು. ಪುನ: ಲಾಚೆನ್ ತಲುಪಿ ಅದೇ ಹೋಟೆಲ್‍ನಲ್ಲಿ ಉಳಿದು, ಮರುದಿನ ಬೆಳಿಗ್ಗೆ ಲಾಚುಂಗ್ ತಲುಪಲು ನಾವು ಬೆಳಿಗ್ಗೆ ಸುಮಾರು 9 ಘಂಟೆಗೆ ಹೋಟೆಲನ್ನು ಚೆಕ್‍ಔಟ್ ಮಾಡಿ ಹೊರಟೆವು. ಪುನ: ಚುಂಗ್‍ತಾಂಗ್ (ಇದರ ಇನ್ನೊಂದು ಹೆಸರು ಯುಂಗ್ತಾಂಗ್) ವರೆಗೆ ಲಾಚುಂಗ್‍ಗೆ ಹೋದ ದಾರಿಯನ್ನೇ ಬಳಸಿ ಬಂದು ಚುಂಗ್‍ತಾಂಗ್‍ನಿಂದ ನೇರವಾಗಿ ಲಾಚೆನ್ ತಲುಪಿದಾಗ ಸುಮಾರು 5 ಘಂಟೆ. ಆ ಹೊತ್ತಿಗಾಗಲೇ ಸೂರ್ಯ ಮುಳುಗಿ ನಸುಗತ್ತಲು ಆವರಿಸಿತ್ತು.

ಲಾಚುಂಗ್ ಕೂಡಾ ಋತು ಬದ್ಧವಾದ ಚಿಕ್ಕ ಹೋಬಳಿ ರೀತಿಯ ಪಟ್ಟಣ. ಇದೂ ಕೂಡಾ ಚಳಿಗಾಲದಲ್ಲಿ ಸಂಪೂರ್ಣ ಚಟುವಟಿಕೆಗೆ ಮುಚ್ಚಿರುತ್ತದೆ. ಇದರ ಉದ್ದೇಶವೂ ಕೂಡಾ ಲಾಚೆನ್ ರೀತಿಯದ್ದೇ ಆಗಿದೆ. ಇದು ಸಿಂಗ್ಬಾ-ಯುಮ್‍ತಾಂಗ್-ರೋಡೋಡೆಂಡ್ರಾನ್ ವ್ಯಾಲೀ ಮತ್ತು ಯೂಮ್‍ಸ್ಯಾಮ್‍ಡೊಂಗ್ ಅಥವಾ ಝೀರೋ ಪಾೈಂಟ್ ಎನ್ನುವ ಸ್ಥಳವನ್ನು ನೋಡಲು ಹೋಗುವ ಯಾತ್ರಿಕರಿಗೆ ತಂಗಲು ಹೋಟೆಲ್, ಊಟ, ತಿಂಡಿ-ತೀರ್ಥ ಮತ್ತು ಬೂಟ್-ಜರ್ಕೀನ್-ಕ್ಯಾಪ್ ಅನ್ನು ಒದಗಿಸುವ ಸ್ಥಳವಾಗಿದೆ. ಲಾಚುಂಗ್ ಪಟ್ಟಣದ ಹಿನ್ನೆಲೆಯ ಪರ್ವತ ಮತ್ತು ಅದರಿಂದ ಧುಮುಕುವ ಧಾರೆಗಳು ನೋಡಲು ಮುದ ನೀಡುತ್ತದೆ. ಚಳಿಗಾಲದಲ್ಲಿ ಅದು ಹಿಮದ ಸಲಾಕೆಯಂತೆ ಮಾರ್ಪಡುತ್ತದಂತೆ. ಇಡೀ ಚಳಿಗಾಲದಲ್ಲಿ ಲಾಚುಂಗ್ ಎನ್ನುವುದು ಸುಮಾರು 4 ರಿಂದ 10 ಅಡಿಯಷ್ಟು ಹಿಮಾವೃತವಾಗುತ್ತದೆ. ಬೇಸಿಗೆಯ ಆ ಹವೆಯಲ್ಲಿ ನಾನು ನನ್ನ ಗೆಳೆಯರು ಸಂಜೆ ಸಣ್ಣ ವಾಕ್ ಕೂಡಾ ಮಾಡಿದೆವು. ಅಲ್ಲಿ ಇರುವ ಮತ್ತು ಸಿಕ್ಕಿಮ್ ನಾಲ್ಕೂ ಜಿಲ್ಲೆಗಳಲ್ಲಿ ಇರುವ ಹೆಚ್ಚಿನ ಅಂಗಡಿ-ಹೋಟೆಲ್‍ಗಳನ್ನು ನಿರ್ವಹಿಸುವುದು ಮಹಿಳೆಯರು. ಇಡೀ ತಮ್ಮ ಮನೆಯಲ್ಲಿ ಒಂದು ಭಾಗ ಮನೆ ಮತ್ತು ಕಿಚನ್, ಇನ್ನೊಂದು ಭಾಗ ಅಂಗಡಿಯನ್ನು ಹೊಂದಿರುತ್ತಾ ಇತ್ತ ಅಂಗಡಿಗಳಲ್ಲಿ ಸರಕನ್ನು ಮಾರುತ್ತಾ, ತಿಂಡಿ-ತೀರ್ಥ ಮತ್ತು ಎಲ್ಲಾ ರೀತಿಯ ಮದ್ಯವನ್ನು ಜತೆಗೆ ಆಹಾರವನ್ನು ಕಿಚನ್‍ನಲ್ಲಿ ನೀಡುತ್ತಾರೆ. ಗಂಡಸರು ಹೆಚ್ಚಿನವರು ಡ್ರೈವಿಂಗ್ ಮತ್ತಿತರ ಕೆಲಸ ನಡಸುತ್ತಾ ಸಂಜೆ ಮನೆ ಸೇರುತ್ತಾರೆ.

ಭಾರತದ ಎಲ್ಲಾ ಪ್ರದೇಶಗಳಲ್ಲಿರುವ ಹಾಗೆ ಸಿಕ್ಕಿಮ್ ಕೂಡಾ ಸ್ಥಳೀಯವೆನ್ನಬಹುದಾದ ಮದ್ಯ ಮತ್ತದರ ತಯಾರಿಯ ಕ್ರಮ-ಪರಂಪರೆಯನ್ನು ಹೊಂದಿದೆ. ನಾನು ಮತ್ತು ನನ್ನ ಪಾಲ್ಘಾಟ್ ಮಿತ್ರರು ಲಾಚುಂಗ್‍ನಲ್ಲಿ ಅನುಭವಕ್ಕಾಗಿ ರುಚಿಯನ್ನು ಸವಿದೆವು. ಸಿಕ್ಕಿಮ್‍ನ, ಬಹುತೇಕ ನಾವು ಸಂದರ್ಶನ ಮಾಡಿದ ಪ್ರದೇಶಗಳಲ್ಲಿ ಎಲ್ಲಿ ನೋಡಿದರೂ ಮದ್ಯದಂಗಡಿಗಳಿವೆ, ಶಾಲೆಗಳಿಗಿಂತ ಹೆಚ್ಚು. ನಾವು ಶಾಲೆಯನ್ನು ನೋಡಿದ್ದೇ ಮಂಗನ್ ಎನ್ನುವ ಪ್ರದೇಶದಲ್ಲಿ. ಆದರೆ ಎಲ್ಲಿ ನೋಡಿದರೂ ಪ್ರವಾಸ-ಟೂರಿಸಂ ಕಾರಣದಿಂದ ಸಿಕ್ಕಿಂನ ಹಳ್ಳಿಹಳ್ಳಿಯಲ್ಲೂ ಶಾಲೆ ಮತ್ತು ಪಡಿತರ ಅಂಗಡಿಗಳಿಗಿಂತ ಹೆಚ್ಚು ಮದ್ಯದಂಗಡಿಗಳು. ಈ ಸಿಕ್ಕಿಮ್‍ನ ಪ್ರಸಿದ್ಧ ಲೋಕಲ್ ಮದ್ಯದ ಹೆಸರು, ‘ಚಾಂಗ್. ಚಾಂಗ್ ಅಂದರೆ ರಾಗಿ, ಅಲ್ಲಿನ ಸ್ಥಳೀಯ ಭಾಷೆಯಲ್ಲಿ. ರಾಗಿಯನ್ನು 5 ದಿನ ಹದ ನೀರಿನಲ್ಲಿ ನೆನೆಸಿ, ಅದಕ್ಕೆ ಅಕ್ಕಿಯ ಹುಡಿಯನ್ನು ಪ್ರಮಾಣವತ್ ಸೇರಿಸಿ, 6ನೇ ದಿನದಿಂದ ಬಿಯರಿನ ಬೌಲ್ ಅನ್ನು ಮೂರು ಪಟ್ಟು ಹೋಲುವ ಬಿದಿರಿನ ಬೊಂಬಿನಲ್ಲಿ ಮುಕ್ಕಾಲುಪಟ್ಟು ತುಂಬಿಸಿ, ಉಳಿದ 25% ಭಾಗದಷ್ಟು ಬಿಸಿ-ಬಿಸಿಯಾದ ನೀರನ್ನು ತುಂಬಿಸಿ, ಬಿದಿರಿನ ಪೈಪ್ ಮೂಲಕ ನಿಧಾನವಾಗಿ ಹೀರುವುದರಿಂದ ಕರಗಿದ ರಾಗಿ ರಾಮರಸ ಬಿಸಿಬಿಸಿಯಾಗಿ ಒಡಲನ್ನು ಸೇರುತ್ತದೆ. ಒಂಥರಾ ಬಿಯರ್‍ನದೇ ಆದ ಸ್ವಾದ ಮತ್ತು ರುಚಿಯನ್ನು ಹೊಂದಿದ್ದರೂ ಬಿಯರ್ ಹೊಂದಿರುವ ರಾಸಾಯನಿಕದ ಅಂಶಗಳನ್ನು ಹೊಂದಿಲ್ಲದೇ ರುಚಿಯಲ್ಲೂ, ಮತ್ತಿನಲ್ಲೂ ಕೂಡಾ ಬಿಯರ್‍ನ್ನು ಚಾಂಗ್ ಮೀರಿಸಿತು. ಚಾಂಗ್ ಒಳ ಸೇರಿದ ಕ್ಷಣದಲ್ಲಿ ನಾವು ನಾಲ್ಕೂ ಜನ, ಚಾಂಗ್ ಬರೀ ಚಾಂಗ್ ಅಲ್ಲ, ಬದಲು ಅದು ಭಾರತದಲ್ಲಿ ಜನಪದಗಳು ಹೇಗೆ ತಮ್ಮ ಸೃಷ್ಟಿಶೀಲ ಪಾನ ಕಲೆಯನ್ನು, ಪಾನವನ್ನು ನಿರ್ಮಿಸಿಕೊಂಡಿವೆ ಎಂಬುದರ ಕುರಿತು ಒಂದು ಅನೌಪಚಾರಿಕ ದುಂಡು ಮೇಜಿನ ಪರಿಷತ್ತನ್ನೂ ನಡೆಸಿದೆವು. ನಾನು ಚರಿತ್ರೆಯ ಅಧ್ಯಾಪಕನಾದ್ದರಿಂದ, ದಕ್ಷಿಣದ, ಕನಕದಾಸರ ರಾಗಿಯು ಹೇಗೆ ಈ ಘಟ್ಟವನ್ನು ಸೇರಿಕೊಂಡಿತು ಎಂಬುದರ ಕುರಿತು ಒಂದು ಊಹಾತ್ಮಕ ವಾದಗಳನ್ನೂ ಮಂಡಿಸಿದೆ. ಮಾರನೇ ದಿನ ಕೆಲವು ನಾಗರಿಕರನ್ನೂ, ಬೌದ್ಧ ಭಿಕ್ಕುಗಳನ್ನೂ, ಕೂಡಾ ರಾಗಿಯ ಕುರಿತು ಕೇಳಿದೆ. ಯಾರೂ ಕೂಡಾ ಸಮರ್ಪಕವಾದ ಉತ್ತರವನ್ನು ನೀಡಲಿಲ್ಲವಾದರೂ ಕೂಡಾ ಸಿಕ್ಕಿಮ್‍ನ ಹಲವು ಪ್ರದೇಶಗಳಲ್ಲಿ ರಾಗಿಯನ್ನು ಅನೇಕ ವರ್ಷಗಳಿಂದ ಬೆಳೆಯುತ್ತಿರುವುದನ್ನೂ, ಅನೇಕ ಮೊನಾಸ್ಟರಿಗಳಲ್ಲಿ ಚಾಂಗ್, ರಾಗಿ ಮತ್ತು ರಾಗಿಯಿಂದ ಮಾಡಿದ ಖಾದ್ಯವನ್ನು ಬುದ್ಧನಿಗೆ ಅರ್ಪಿಸುವ ಕ್ರಮವಿರುವುದನ್ನೂ ಕೂಡಾ ತಿಳಿಸಿದೆವು. ಇದೇ ರೀತಿಯಲ್ಲಿ ಸ್ವತ: ಭೂಗೋಳ ಶಾಸ್ತ್ರದ ಉಪನ್ಯಾಸಕನಾದ ಮಿತ್ರ ಶೈನ್ ಶಂಕರ್‍ದಾಸ್‍ಗೂ ಕೂಡಾ ಸಿಕ್ಕಿಮ್ ಹಾಗೂ ರಾಗಿಯ ಕಥೆ, ಸಾದೃಶ್ಯ ತಿಳಿಯಲಿಲ್ಲ.

              ಲಾಚುಂಗ್‍ನಿಂದ ಸುಮಾರು 10ಕಿ.ಮೀ. ದೂರದಲ್ಲಿರುವ ರೋಡೋ ಡೆಂಡ್ರಾನ್ ಕಣಿವೆ ನಯನಮನೋಹರ. ಈ ಹೂವುಗಳನ್ನು ನೋಡುವ ಕಾರಣದಿಂದಲೇನೇ, ಇವುಗಳು ವಾರ್ಷಿಕವಾಗಿ ಅರಳುವ ಸಮಯ ಮಾರ್ಚ್‍ನಿಂದ ಮೇ ಸಮಯದಲ್ಲಿ ಹೋಗಬೇಕು. 36 ಬೊಟಾನಿಕಲ್ ಪ್ರಭೇದಗಳಿರುವ ರೋಡೋಡೆಂಡ್ರಾನ್ ಇದು ಸಿಕ್ಕಿಮ್‍ನ ರಾಷ್ಟ್ರೀಯ ಪುಷ್ಪವೂ ಆಗಿದೆ. ಸ್ಥಳೀಯ ಸಿಕ್ಕಿಮೀ, ಲೆಪ್ಚಾ, ಟಿಬೇಟಿಯನ್ ಮತ್ತು ನೇಪಾಲೀ ಭಾಷೆಯಲ್ಲಿ ಇದನ್ನು ‘ಗುರೀಝ್ ಇಂದು ಕರೆಯುತ್ತಾರೆ. ಸಾಮಾನ್ಯವಾಗಿ ರೋಡೋಡೆಂಡ್ರಾನ್‍ನಲ್ಲಿ ನೀಲಿ, ಬಿಳಿ ಮತ್ತು ಕೆಂಪೆಂಬ ಮೂರು ಪ್ರಕಾರವಿದೆ. ರೆಡ್ ರೋಡೋಡೆಂಡ್ರಾನ್ ಕಾಳಿದಾಸನ ‘ಅಗ್ನಿಶಿಖೆ ಶಬ್ದದ ಅನ್ವರ್ಥವೆಂಬಂತೆ ಕಾಣುತ್ತದೆ. ಬಿಳಿ ರೋಡೋಡೆಂಡ್ರಾನ್ ಹೂ ಬಿಡುವುದು ಡಿಸೆಂಬರ್ ತಿಂಗಳಿನಲ್ಲಿ. ಸರಿಸುಮಾರು 1000 ಎಕರೆಗಿಂತಲೂ ಹೆಚ್ಚಿರುವ ರೋಡೋಡೆಂಡ್ರಾನ್ ವ್ಯಾಲಿ ಸಂರಕ್ಷಿತಾರಣ್ಯವೂ ಆಗಿದೆ. ಅಲ್ಲಿನ ನಿವಾಸಿಗಳಿಗೆ ಮತ್ತು ಟೂರಿಸ್ಟ್ ವಾಹನ ಚಾಲಕರಿಗೆ ಈ ಹೂಗಳು ಶ್ರದ್ಧೆಯ ಭಾಗವೂ ಆಗಿದೆ. ಸಂರಕ್ಷಿತ ಕಣಿವೆ ಮತ್ತು ಶ್ರದ್ಧೆಯ ಹೂವಾದ ಕಾರಣ ಇದನ್ನು ಕೀಳುವುದನ್ನು ಅವರುಗಳು ಸಹಿಸುವುದಿಲ್ಲ ಕೂಡಾ. ಅಲ್ಲಿ ನಿಂತು ನೋಡಿದರೆ ಸರಿಸುಮಾರು 500 ಎಕರೆಗಿಂತಲೂ ಹೆಚ್ಚು ಪ್ರದೇಶವನ್ನು ಪ್ರಕೃತಿ ಕೆಂಪು ಬಣ್ಣವೊಂದರಿಂದಲೇ ಪೈಂಟ್ ಮಾಡಿದೆಯೇನೋ ಎಂಬಂತೆ ಕಾಣುತ್ತದೆ. ನಿಜವಾಗಿಯೂ ಕೂಡಾ ಈ ಅನುಭವಕ್ಕಾಗಿ ಅಲ್ಲಿಗೆ ಹೋಗಿಯೇ ಸಲ್ಲಬೇಕು. ರೋಡೋಡೆಂಡ್ರಾನ್ ಅಲ್ಲದೇನೇ ವಿವಿಧ ರೀತಿಯ ಆರ್ಕಿಡ್‍ಗಳು ಮತ್ತು ಪ್ರಿಮುಲ ಪ್ರಭೇದದ ಹೂವುಗಳಿಗೂ ಕೂಡಾ ಆಶ್ರಯ ತಾಣ ಈ ವ್ಯಾಲಿ. ಇಲ್ಲಿಯ ಪ್ರಕೃತಿ, ಜೀವವೈವಿಧ್ಯದ ರಹಸ್ಯವಂತೂ ನಿಗೂಢವೇ ಸರಿ.

ರೋಡೋಡೆಂಡ್ರಾನ್ ಕಣಿವೆಯನ್ನು ದಾಟಿ ಸುಮಾರು 30ಕಿ.ಮೀ ಸಾಗಿದರೆ ಸಿಗುವುದೇ ಝೂಮ್ ಸ್ಯಾಮ್‍ಡಂಗ್ ಅಥವಾ ಝೀರೋ ಪಾೈಂಟ್. ಇದು ಚೀನಾ-ಭಾರತ ಗಡಿಭಾಗದಲ್ಲಿದೆ. ಉಷ್ಣತೆ ಝೀರೋ ಡಿಗ್ರಿಯನ್ನು ಮುಟ್ಟುವ, ಮಟ್ಟದ ಪ್ರದೇಶವಾದ ಕಾರಣ ಇದನ್ನು ಹಾಗೆ ಕರೆಯುವುದು. ನಮಗಿಲ್ಲಿ ಹಿಮ, ಹಿಮಗಡ್ಡೆ ನೋಡಲು ಸಿಗುತ್ತದೆ, ಮನಬಂದಷ್ಟು ಆಟವಾಡಲೂ ಬಹುದು, ಆದರೆ ದೇಹದ ಯಾವುದೇ ಭಾಗವನ್ನು ಹೊರಗೆಡಹದಿದ್ದರೆ ಒಳಿತು. ಝೀರೋ ಪಾೈಂಟ್‍ನಿಂದ ತುಸು ಕೆಳಗೆ ಬಂದರೆ ಸ್ವಲ್ಪಮಟ್ಟಿನ ಬಯಲು ಎನ್ನಬಹುದಾದ ಜಾಗ, ನದಿ-ಸಿಗುತ್ತದೆ, ಅದುವೆ ಯುಮ್‍ತಾಂಗ್ ವ್ಯಾಲೀ. ಇಲ್ಲಿ ಹಲವಾರು ಯಾಕ್‍ಗಳೂ ಕೂಡಾ ಮೇಯುತ್ತಿರುತ್ತವೆ. ಅವುಗಳು ಸಾಧು ಪ್ರಾಣಿಗಳಾದರೂ ಕೂಡಾ ಜಾಗರೂಕವಾಗಿ ಅವುಗಳನ್ನು ಮಾತನಾಡಿಸಿ, ಮೈದಡವಲೂಬಹುದು. ಅಲ್ಲಿಂದಲೇ ಆರಂಭವಾಗುವ ರೋಡೋಡೆಂಡ್ರಾನ್ ಕಣಿವೆಯಲ್ಲಿ ಹೆಚ್ಚು ದಟ್ಟ ಮತ್ತು ಸಾಂದ್ರವಾದ ಗಿಡಗಳೆಡೆಯಲ್ಲಿ ಸಾಗದಿರುವುದೂ ಕೂಡಾ ಒಳಿತು. ಆ ಪ್ರದೇಶದಲ್ಲಿ ನಮಗೆ ಸಿಕ್ಕ ಬೊಟಾನಿಕಲ್ ಸರ್ವೇ ಆಫ್ ಇಂಡಿಯಾ (ಬಿ.ಎಸ್.ಐ)ದ ಸಿಕ್ಕಿಮ್‍ನ ಗ್ಯಾಂಗ್‍ಟಕ್ ಕ್ಯಾಂಪಸ್‍ನ ಸಂಶೋಧಕ ಹೇಳಿದ ಹಾಗೆ, ಅತ್ಯಂತ ವಿಷಕಾರಿಯಾದ ಹಿಮಪ್ರದೇಶವಾಸೀ ಹಾವುಗಳನ್ನು ಕೂಡಾ ಇಲ್ಲಿ ನೋಡುವ ಕಾರಣ ಅಪರಿಚಿತ, ಅಸಹಜ ಸ್ಥಳವಾದ ಕಾರಣ ಯಾತ್ರಿಕರು ತಮ್ಮ ಸಾಹಸ, ಗರಡಿಯ ಕಸರತ್ತು ಇಂದ್ರಿಯ ಜಾಗೃತಿಗೊಳಿಸದಿದ್ದರೆ ಒಳಿತು.

ಲಾಚುಂಗ್‍ನಿಂದ ಪುನ: ಚುಂಗ್‍ತಾಂಗ್‍ನ್ನು ಬಳಸಿ ಬಂದೆವು, ಮಂಗನ್ ಮತ್ತು ಗ್ಯಾಂಗ್‍ಟಕ್‍ಗೆ. ಚುಂಗ್‍ಚಾಂಗ್ ಅನ್ನುವುದು ಲಾಚುಂಗ್ ಮತ್ತು ಲಾಚೆನ್ ಎರಡು ಸ್ಥಳಗಳ ದಾರಿಯನ್ನು ಸಂಧಿಸುವ ಸ್ಥಳ. ಚುಂಗ್‍ತಾಂಗ್ ಒಂದು ಪ್ರಮುಖ ಪಟ್ಟಣ ಸಿಕ್ಕಿಮ್‍ನದು. ಒಂದು ಪ್ರಮುಖ ಸೇನಾ ಬಿಡಾರ ಹಾಗೂ ಆಧುನಿಕವಾದ ಈ ಡೆವಲಪ್‍ಮೆಂಟ್ ಎನ್ನುವ ರಾಕ್ಷಸನಿಗೆ ಬಾಯಿತೆರೆದುಕೊಂಡಿರುವ ಪಟ್ಟಣದ ಪ್ರತೀಕವಾಗಿಯೂ ಕಾಣಿಸುತ್ತದೆ. ಈ ಪ್ರದೇಶ ಎರಡು ಗುಡ್ಡಗಳ ನಡುವಿನ ಕಣಿವೆ ತೀರದಲ್ಲಿ ಕಣಿವೆಯಲ್ಲಿ ತೀಸ್ತಾ ನದಿ ಹರಿಯುತ್ತಿದೆ ರಭಸದಿಂದ. ಆಕೆಗೆ ಎನ್.ಟಿ.ಪಿ.ಸಿಯವರು ವಿದ್ಯುತ್ ತಯಾರಿಸುವ ಸಲುವಾಗಿ ದೊಡ್ಡದಾದ ಡ್ಯಾಂ ಕಟ್ಟಿದ್ದಾರೆ. ಗ್ಯಾಂಗ್‍ಟಕ್‍ನ ಸಿಟಿ ಬೆಳಗಲು ಈ ಪ್ರದೇಶದಲ್ಲಿ ಡ್ಯಾಂ, ಅದಕ್ಕಾಗಿ ಅಲ್ಲಿಯ ಜನರ, ಜನರ ಪ್ರದೇಶದ ಒತ್ತುವರಿ. ಇಡೀ ಭಾರತದಲ್ಲಿ ಸಿಕ್ಕಿಮ್ ಬಿಟ್ಟರೆ ಮತ್ತೆಲ್ಲಿಯೂ ಕಾಣಸಿಗದ ಚದುರಿದ ಮುಗಿಲೆತ್ತರದ ಮರಗಳು, ನಶಿಸಿದ ಮರವನ್ನಾಶ್ರಯಿಸಿದ ಬಳ್ಳಿ, ಟೊಂಗೆಯಲ್ಲಿ ಗೂಡು ಕಟ್ಟಿರುವ ಸಾವಿರಾರು ಪಕ್ಷಿ ಮತ್ತು ಮತ್ತದರ ಗೂಡುಗಳು, ಅವುಗಳಿಗೆ ಅನುರೂಪವಾಗಿ ಬದುಕುವ ಜೀವ ಪ್ರಭೇದಗಳು ಮತ್ತೆಲ್ಲಿಯೂ ಕಾಣಸಿಗುವುದಿಲ್ಲ. ಆದರೆ ಆ ಪ್ರದೇಶ ಮಾತ್ರ ಸಂಪೂರ್ಣ ಉಧ್ವಸ್ತ. ಒಟ್ಟಾರೆ ಹೇಳುವುದಾದರೆ ಒಂದು ವಿಶಿಷ್ಠವಾದಂತಹ ಜೀವ ಪರಿಸ್ಥಿತಿ (ಇಕಾಲಜಿಯ) ಯನ್ನೇ ನಲುಗಿಸುವ ಕ್ರೇನ್, ಜೆ.ಸಿ.ಬಿಯಂತಹ ಯಂತ್ರಗಳು, ಅವುಗಳೆಲ್ಲವನ್ನು ನಾಶಮಾಡಿ ಸಿಕ್ಕಿಮ್ ರಾಷ್ಟ್ರೀಯ ಪ್ರಾಣಿಗಳ ಹಾಗೆ ದೈತ್ಯಾಕರವನ್ನು ದರ್ಶಿಸಿ, ಮರಗಿಡಗಳನ್ನು ಕಿತ್ತೆಸೆದು ಭೋರ್ಗರೆಯುವ ಸದ್ದನ್ನೂ ಮಾಡುತ್ತಿದ್ದವು. ಅದನ್ನು ನೋಡಿ ನಾವೂ ನಾಲ್ಕೂ ಮಿತ್ರರು ಒಂದೇ ಮನಸ್ಥತಿಯಲ್ಲಿ ಯೋಚಿಸಿದ್ದು ಹೀಗೆ, ‘ಆ ಜೆ.ಸಿ.ಬಿ ಕಂಡು ಹಿಡಿದವನೆಲ್ಲಿಯಾದರೂ ಸಿಕ್ಕಿದಿದ್ದರೆ ಹಿಡ್ಕೊಂಡ್ ನಾಲ್ಕು ಚಚ್ಬಿಡ್ಬೇಕು ಅಂತ. ‘ಗೂಗಲ್ ಮ್ಯಾಪ್‍ನಲ್ಲಿ ಯಾರಾದರೂ ಇಡೀ ಭಾರತವನ್ನು ವೀಕ್ಷಿಸಿದರೆ ಅತ್ಯಂತ ಹೆಚ್ಚು ಹಸಿರು ಕಾಣಿಸುವುದು ಸಿಕ್ಕಿಮ್‍ನಲ್ಲಿ. ಆದರೆ ಈ ನಾಶಮಾಡುವ, ಪರಿಸರದ ಒಡಲಿಗೆÉ ಕೊಡಲಿಯಿಕ್ಕುವ ಅಭಿವೃದ್ಧಿ ಹೀಗೇ ಮುಂದುವರಿದರೆ ಖಂಡಿತಾ ಅಂತಹ ಅಭೇದ್ಯ ಇಕಾಲಜಿಯೂ ಕೂಡಾ ಇನ್ನೂ 20-30 ವರ್ಷಗಳಷ್ಟು  ಮಾತ್ರ ಉಳಿಯಬಹುದೆಂದೇ ನನ್ನ ಅಂದಾಜು. ಆದ್ದರಿಂದ ಸಿಕ್ಕಿಮ್ ಪ್ರವಾಸದ ಯೋಚನೆಯಲ್ಲಿರುವವರು ಬೇಗನೇ ಮುಗಿಸಿಕೊಳ್ಳಿ ಎಂದು ನನ್ನ ಮನವಿ.

ನಾಥುಲಾ, ಗ್ಯಾಂಗ್‍ಟಂಕ್‍ನಿಂದ ಸುಮಾರು 54 ಕಿ.ಮೀ. ದೂರದಲ್ಲಿರುವ ಚೀನಾ ಮತ್ತು ಭಾರತದ ನಡುವಿನ ಪಾಸ್. ಶೀತ ಅಥವಾ ಚಳಿಗಾಲದಲ್ಲಿ ಇಲ್ಲಿಗೆ ರಸ್ತೆಯ ಮೂಲಕ ಹೋಗಲಾಗುವುದಿಲ್ಲವಾದರೂ ಕೂಡಾ ಎಪ್ರಿಲ್ ಮೇ ತಿಂಗಳಿನ ಬೇಸಿಗೆ ಪ್ರಶಸ್ತವಾದುದು. ಈ ಪ್ರದೇಶದಲ್ಲಿ ಸೊಂಗೋ ಅಥವಾ ಚಾಂಗು ಸರೋವರ ಮತ್ತು ಕ್ಯೋಂಗೋಸ್ಲಾ ಸಂರಕ್ಷಿತ ಹಿಮಾರಣ್ಯ ಕೂಡಾ ಇರುವುದು. ನಾಥುಲಾ ಪಾಸ್‍ಗಿಂತ ಸುಮಾರು 1 ಕಿ.ಮೀ. ಹಿಂದೆ ಇರುವ ಶಿವಬಾಬಾ ಮಂದಿರ ಕೂಡಾ ವೀಕ್ಷಣಾಯೋಗ್ಯ. ‘ನಾಥುಲಾ ಪಾಸ್‍ನಲ್ಲಿ ಭಾರತ-ಚೀನಾ ಎರಡೂ ದೇಶದ ಗಡಿಯಿರುವುದು. ಒಪ್ಪಿಗೆ-ಅನುಮತಿಯ ಮೇಲೆ ಚೈನಾ ಸೈನಿಕರನ್ನು ಕಂಡು ಮಾತನಾಡಿಸಿ ಅವರ ಜತೆ ಫೋಟೋ ಕೂಡಾ ತೆಗೆಸಿಕೊಳ್ಳುವ ಅವಕಾಶವೂ ಇಲ್ಲಿದೆ. ಗಡಿಯ ಹತ್ತಿರವಿರುವಂತಹ ಎತ್ತರದ ಜಾಗವನ್ನು ಮೆಟ್ಟಿಲುಗಳಿಂದ ಹತ್ತಿ ಚೈನಾದ ಭೂಭಾಗವನ್ನೂ ಕೂಡಾ ದರ್ಶಿಸಬಹುದು. ನಾಥುಲಾ ಪಾಸ್‍ನಿಂದ ಸರಿಸುಮಾರು 4 ಕಿ.ಮೀ ಕೆಳಗಡೆ ಚೈನಾ ಮಾರುಕಟ್ಟೆ ಕೂಡಾ ಇದೆ. ವಸ್ತುಗಳನ್ನು ಕೂಡಾ ಇಚ್ಚೆಯಿದ್ದರೆ ಖರೀದಿಸಬಹುದು. ಈ ನಾಥುಲಾ ಪ್ರದೇಶ ಮತ್ತು ಮಾರ್ಗದ ಒಂದು ದೊಡ್ಡ ಸಮಸ್ಯೆಯೆಂದರೆ ಯಾರೂ ಊಹಿಸಲಾಗದ ಅಕಾಲಿಕ ಹಿಮಪಾತ. ಒಂದು ವೇಳೆ ಎಲ್ಲಿಯಾದರೂ ವಾಯುಭಾರ ಕುಸಿದು ಮಂಜು ಸುರಿಯತೊಡಗಿತೆಂದರೆ ಮತ್ತೆ ಭಯವಾಗಬೇಕು, ನಿರಂತರವಾಗಿ 4 ರಿಂದ 5 ಘಂಟೆಗಳ ಕಾಲ ಮಂಜು ಸುರಿದು ನೆಲದಿಂದ 5 ರಿಂದ 6 ಅಡಿಯವರೆಗೆ ಸಂಗ್ರಹವಾಗಿ, ಸಾಗುವ  ರಸ್ತೆ ಮುಚ್ಚಿ ಹೋಗುತ್ತದೆ. ಇಂತಹ ಸಂದರ್ಭದಲ್ಲೆಲ್ಲಾ ಇಂಡಿಯನ್ ಆರ್ಮಿ ಆದಷ್ಟು ಬೇಗ ಹಿಮವನ್ನು ಸರಿಸಿ ಪ್ರಯಾಣಾನುಕೂಲತೆಯನ್ನು ಒದಗಿಸುತ್ತದೆ. ನಮಗೂ ಕೂಡಾ ಇಂತಹ ಅನುಭವ ಆಯ್ತು.

ಸಿಕ್ಕಿಮ್ ಯಾತ್ರೆಯ ಅತ್ಯಂತ ಮಹತ್ವದ ಭಾಗ ವೆಸ್ಟ್‍ಸಿಕ್ಕಿಮ್ ಜಿಲ್ಲೆಯದು. ಅದಕ್ಕಾಗಿ ನಾವು ಗ್ಯಾಂಗ್‍ಟಕ್ ಇರುವ ಪೂರ್ವ ಸಿಕ್ಕಿಮ್‍ನಿಂದ ರಾವಾಂಗ್ಲಾ ಪ್ರದೇಶದ ಮೂಲಕ ವೆಸ್ಟ್ ಸಿಕ್ಕಿಮ್‍ನ ಅತ್ಯಂತ ಪ್ರಸಿದ್ಧ ಸ್ಥಳವಾದ ‘ಪೀಲಿಂಗ್ ತಲುಪಿದೆವು. ಪೀಲಿಂಗ್ ತಲುಪುವ ಮಾರ್ಗ ಅತ್ಯಂತ ಸೊಗಸು. ಇಡೀ ಸಿಕ್ಕಿಮ್‍ನ ಅತ್ಯಂತ ಸಾಂದ್ರ ಮತ್ತು ದಟ್ಟವಾದಂತಹ ಹಸಿರು ಕಾಡಿರುವುದು ಈ ಭಾಗದಲ್ಲಿ. ಈ ಭಾಗದಲ್ಲಿ ಹಸಿರು ಸೀರೆಯನ್ನು ಪ್ರಕೃತಿ ಮಾತೆ ಬದಲಾಯಿಸುವುದೇ ಇಲ್ಲ. ಎತ್ತರದ ರಸ್ತೆಯ ಬದಿಗಳಲ್ಲಿ ಆ ಪ್ರದೇಶದಲ್ಲಿ ಬೆಳೆದ ತರಕಾರಿ, ಸೊಪ್ಪು, ಬಾಳೆಯ ಹಣ್ಣುಗಳನ್ನು ಹಿಡಿದು, ಚಿಕ್ಕ ಅಂಗಡಿಗಳಲ್ಲಿ ಕೂತು ಮಾರುವ ಮಕ್ಕಳು ಮತ್ತು ಹಿರಿಯನಾಗರಿಕರನ್ನು ಮಾತನಾಡಿಸುವುದೇ ಬಹು ಹರ್ಷದ ವಿಚಾರ. ಈ ರೀತಿ ಮಾರುವ ಕೃಷಿ ಉತ್ಪನ್ನ ಸಾಮಗ್ರಿಗಳು, ವಸ್ತುಗಳು ಬಹುತೇಕ ಸಾವಯವ ಕೃಷಿಯ ಮೂಲಕ ಬೆಳೆದಿರುವುದೂ ಆಗಿದೆ. ವಿಶೇಷವೆಂದರೆ ಇಡೀ ಭಾರತದಲ್ಲಿ ಅತ್ಯಂತ ದಕ್ಷವಾದ ಸಾವಯವ ಕೃಷಿಯ ನೀತಿ ಮತ್ತು ಅನುಷ್ಠಾನವಿರುವುದೂ ಕೂಡಾ ಸಿಕ್ಕಿಮ್‍ನಲ್ಲಿ. ಸಿಕ್ಕಿಮ್ ಆಡಳಿತ ಈ ಕಾರಣದಿಂದ ರಾಸಾಯನಿಕ ಗೊಬ್ಬರದ ಮೇಲಿನ ಸಬ್ಸಿಡಿಯನ್ನು ಕೂಡಾ ಸಂಪೂರ್ಣ ರದ್ದುಪಡಿಸಿದೆ. ಸರ್ಕಾರದ ನೀತಿಗಿಂತಲೂ ವ್ಯಕ್ತಿಗತವಾಗಿ ಈ ಸಹಜ-ಪರಿಸರ ಸ್ನೇಹಿ ವಿಧಾನವನ್ನು ಒಪ್ಪಿ ಅದನ್ನು ಅನುಷ್ಠಾನಗೊಳಿಸುವ ರೈತರನ್ನು ಹ್ಯಾಟ್ಸಫ್ ಎನ್ನಲೇ ಬೇಕು. ಇಡೀ ಸಿಕ್ಕಿಮ್‍ನ ಸರಿಸುಮಾರು 60% ಕೃಷಿ ಉತ್ಪನ್ನ ಬರುವುದು ವೆಸ್ಟ್ ಸಿಕ್ಕಿಮ್‍ನ ಪ್ರಮುಖ ಪ್ರದೇಶಗಳಾದ ರಾವಾಂಗ್ಲಾ, ಗೀಝಿಂಗ್ ಮತ್ತು ಪೀಲಿಂಗ್ ಪ್ರದೇಶದಿಂದ. ಪೀಲಿಂಗ್‍ಗೆ ಸುಮಾರು 30ಕಿ.ಮೀ. ದೂರದಲ್ಲಿರುವ ಗೀಜಿಂಗ್ ಪ್ರದೇಶದ ರಸ್ತೆಗಳು ಉಚಿತವಾಗಿ ರುಚಿಯಾದ ನೆಲ್ಲಿಕಾಯಿಗಾತ್ರದಷ್ಟಿರುವ ಕಾಡು ಸ್ಟ್ರಾಬೆರಿಗಳನ್ನು ಸವಿಯಲು ಒದಗಿಸುತ್ತವೆ. ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಯಾರು ಬೇಕಾದರೂ ಕೂಡಾ ಮನಸೋ ಇಚ್ಛೆ ಕಾಡು ಸ್ಟ್ರಾಬೆರಿಯನ್ನು ಸವಿಯಬಹುದು ಮತ್ತು ಸಂಗ್ರಹಿಸಿಕೊಂಡು ಹೋಗಲೂಬಹುದು. ಪೀಲಿಂಗ್ ಸಂದರ್ಶನದ ಮುಖ್ಯವಾದ ಉದ್ದೇಶವೆಂದರೆ, ಒಂದು: ದಾರಿಯುದ್ದಕ್ಕೂ ಪ್ರಕೃತಿಯ ಹಸಿರಿನ ರಮಣೀಯತೆಯನ್ನು ಸವಿಯುವುದು, ಇನ್ನೊಂದು: ಪೀಲಿಂಗ್‍ನ ಸಿಟಿಯಿಂದ ಅರ್ಧ ಕಿ.ಮೀ. ದೂರದಲ್ಲಿರುವ ಹೆಲಿಪ್ಯಾಡ್‍ನಿಂದ ಕಾಂಚನಜಂಗಾ ಪರ್ವತದ ದರ್ಶನ. ಹೆಲಿಪ್ಯಾಡ್ ಇರುವುದು ಇಂಡಿಯನ್ ಆರ್ಮಿಯ ವಶದಲ್ಲಿ, ಆದರೂ ಕೂಡಾ ಪೀಲಿಂಗ್‍ನ್ನು ಈ ಕಾರಣದಿಂದಲೇ ಸಂದರ್ಶಿಸುವ ಯಾತ್ರಿಗಳಿಗಾಗಿ ಅದು ಮುಕ್ತವಾಗಿ ತೆರೆಯುತ್ತದೆ. ಈ ಭಾಗದಲ್ಲಿ ಬೆಳಿಗ್ಗೆ 4.30 ಘಂಟೆಗೇನೇ ಸೂರ್ಯ ಉದಯಿಸುತ್ತಾನೆ. ಸೂರ್ಯನ ಕೆಂಬಣ್ಣವು ಕಾಂಚನಜಂಗಾ ಪರ್ವತದ ಮೇಲೆ ಬಿದ್ದು ಶಿಖರ, ಹೊನ್ನಿನ ಬಣ್ಣವನ್ನು ತಾಳಿ ನಿಲ್ಲುವ ಆಕರ್ಷಕ ದೃಶ್ಯಕ್ಕಾಗಿ ನಾವು ಬೇಗ ಏಳಬೇಕಷ್ಟೇ. ಪೀಲಿಂಗ್‍ನ ವಾತಾವರಣವು ಅನಿಶ್ಚಿತವಾಗಿ ಏರುಪೇರಾಗಿ ಮಂಜು ಆವರಿಸಿ ಮಳೆ ಸುರಿಯುವ ಕಾರಣ, ಸಂಜೆ ಸರಿಯಾಗಿ ಮಳೆ ಸುರಿದರಷ್ಟೇ ಬೆಳಿಗ್ಗೆ ಅತ್ಯಂತ ಅಪೂರ್ವದಾದಂತಹ ಕಾಂಚನಜಂಗಾ ದರ್ಶನವಾಗುತ್ತದೆ. ಬರೀ ಮೋಡ ಕವಿದು ಮಳೆ ಬರದಿದ್ದರೆ ನೋಡುವ ಅವಕಾಶವು ಸಿಗುವುದಿಲ್ಲವಷ್ಟೇ. ಪೀಲಿಂಗ್ ಪೇಟೆಯ ಹತ್ತಿರದಲ್ಲೇ ಇರುವ ವೀಕ್ಷಣಾ ಗೋಪುರದಿಂದ ಇಡೀ ಪೀಲಿಂಗ್ ಪೇಟೆಯನ್ನೂ ಗಮನಿಸಿ ಆನಂದಿಸಬಹುದಾಗಿದೆ. ಪೀಲಿಂಗ್‍ನಲ್ಲಿ ಲೋಕಲ್ ಸೈಟ್ ಸೀಯಿಂಗ್‍ಗೂ ಕೂಡಾ ಅವಕಾಶಗಳುಂಟು. ಕಾಂಚನಜಂಗಾ ಫಾಲ್ಸ್, ಕೇಚಿಯೋಪಾಲ್ರಿ ಸರೋವರ ಮತ್ತು ಅದರ ಮೀನುಗಳು, ಪೆಮಾಂಗ್‍ಸೇ ಸಂಘಾರಾಮ, ರಾಬ್‍ಡೆಂಟ್ಸ್ ಅರಮನೆ, ಸಂಘ್‍ಚೋಲಿಂಗ್ ಗೋಂಪಾ ಇದರಲ್ಲಿ ಪ್ರಮುಖವಾದವುಗಳು. ಪ್ರವಾಸಿಗರು ಸಿಕ್ಕಿಮ್‍ನ ಎಲ್ಲಾ ಪ್ರದೇಶಗಳನ್ನು ಮುಗಿಸಿ ಪೀಲಿಂಗ್‍ನಲ್ಲಿ ಒಂದು ರಾತ್ರಿ ಉಳಿದು, ಕಾಂಚನಜಂಗಾ ಮತ್ತು ಉಳಿದ ಸ್ಥಳೀಯ ಪ್ರದೇಶಗಳನ್ನು ನೋಡಿ ಇಲ್ಲಿಂದಲೇ ಕೂಡಾ ಡಾರ್ಜಿಲಿಂಗ್‍ಗೆ ಹೋಗುವ ಕಾರ್ಯಕ್ರಮವನ್ನು ಹಾಕಿಕೊಳ್ಳಬಹುದು. ಈ ಡಾರ್ಜಿಲಿಂಗ್ ಇಲ್ಲಿಂದ ಹತ್ತಿರ ಮತ್ತು ರಸ್ತೆ, ಪ್ರಯಾಣದ ದೃಷ್ಟಿಯಿಂದ ಕೂಡಾ ಉತ್ತಮವಾದುದು. ನಾವು ಕೂಡಾ ಇಲ್ಲಿಂದಲೇ ಡಾರ್ಜಿಲಿಂಗ್ ಸಂದರ್ಶಿಸಿ ಅಲ್ಲಿಂದ ಸಿಲಿಗುರಿಗೆ ಬಂದು, ಬಾಗ್‍ಡೋಗ್ರಾ ಏರ್‍ಪೋರ್ಟ್‍ನಿಂದ ಬೆಂಗಳೂರಿಗೆ ಹಾರಿದೆವು ಸುಂದರ ನೆನಪುಗಳನ್ನು ಮೆಲುಕು ಹಾಕುತ್ತಾ.

ಸಿಕ್ಕಿಮ್ ನಿಜಕ್ಕೂ ಪ್ರವಾಸಕ್ಕೆ ಒಂದು ಯೋಗ್ಯ ಪ್ರದೇಶ. ಪ್ರಕೃತಿ, ಹಸಿರ ಸಿರಿ, ಸಂಘಾರಾಮಗಳು, ಸರೋವರಗಳು, ಕರಕುಶಲ ಕೇಂದ್ರಗಳು, ಸ್ಥಳೀಯ ನೇಪಾಲೀ-ಟಿಬೇಟಿಯನ್ ಆಹಾರ, ಜನರ ಜೀವನ ಮತ್ತು ಭೌತಿಕ ಸ್ಥಿತಿ, ಕಾಂಚನಜಂಗಾ ದರ್ಶನ, ಟ್ರಕ್ಕಿಂಗ್, ಜಲಪಾತಗಳು, ರೋಡೋಡೆಂಡ್ರಾನ್ ಸೇರಿದಂತೆ ಹಲವು ಹೂಗಳ ದರ್ಶನ, ಇನ್ನೂ ಮುಂತಾದ ವೈವಿಧ್ಯದ ಅನುಭವಗಳಿಗೆ ನಮ್ಮನ್ನು ನಾವಿಲ್ಲಿ ತೆರೆದುಕೊಳ್ಳಬಹುದು. ಆದರೆ ಒಂದು ಸಮಗ್ರವಾದ ಭೌತಿಕ ತಯಾರಿ, ರೂಪುರೇಷೆ, ಮುನ್ನೆಚ್ಚರಿಕೆ, ಸೌಂದರ್ಯಾತ್ಮಕ ಅನುಭವಗಳಿಗೆ ತೆರೆದುಕೊಳ್ಳುವ ಮನೋಸ್ಥಿತಿ ಬೇಕಷ್ಟೆ. ಯಾವುದೇ ರೀತಿಯ ಸಿಕ್ಕಿಮ್ ಪ್ರವಾಸದ ಮಾಹಿತಿಗಾಗಿ ಸಿಕ್ಕಿಂ ಟೂರಿಸಂನ ವೆಬ್‍ಸೈಟ್ ಮತ್ತು ‘ಲೋನ್‍ಲಿ ಪ್ಲಾನೆಟ್ ಪ್ರಕಾಶನದ ‘ಇಂಡಿಯಾ ಟೂರ್ ಗೈಡ್ಗಳನ್ನೂ ಬಳಸಬಹುದು. ಹಾಗಿದ್ದಾಗ ಮಾತ್ರ ಒಂದು ಮುದ ನೀಡುವ, ನ್ಯಾಯಯುತವಾಗಿ ವ್ಯಯಿಸಿದ, ಮನಸ್ಸಿಗೆ ಆತ್ಮತೃಪ್ತಿ ನೀಡುವ ಪ್ರವಾಸವಾಗಬಲ್ಲದು. ವೈಯುಕ್ತಿಕವಾಗಿ ನನಗಂತೂ ಸಿಕ್ಕಿಮ್‍ನಲ್ಲಿ ಸಾಕಷ್ಟು ಅನುಭವ, ಆಹ್ಲಾದ ಸಿಕ್ಕಿದೆ. ಅದು ಮುಂದಿನ ಹಿಮಾಲಯ ರಾಜ್ಯದ ಪ್ರವಾಸದ ಯೋಜನೆಯನ್ನೂ ಪ್ರೇರಿಸಿದೆ.

***

                                                              

 

                                        

 

         

 

 

    

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ಸಿನಿಮಾ ಚರಿತ್ರೆ : ಸಮಾಜ, ಸಂಸ್ಕøತಿ ಮತ್ತು ರಾಜಕಾರಣ

ಕರ್ನಾಟಕದಲ್ಲಿ ಸೂಫಿಗಳು

ಚಾರಿತ್ರಿಕ ಕೃತಿಯ ಹಲವು ಓದಿನ ಸಾಧ್ಯತೆಗಳು: ಹಿಂದ್ ಸ್ವರಾಜ್ ಮಾದರಿ