ರಿತ್ವಿಕ್ ಘಟಕ್
01 ಪ್ರಸ್ತಾವನೆ
ಭಾರತದ ಅತ್ಯಂತ
ಪ್ರಮುಖ ಸಿನಿಮಾ ನಿರ್ದೇಶಕರಲ್ಲಿ ಋತ್ವಿಕ್ ಘಟಕ್ ಕೂಡಾ ಒಬ್ಬರು. ಬಂಗಾಳದ ಮತ್ತು ಭಾರತದೇಶದ ಒಂದು
ಶ್ರೀಮಂತ ಚಲನಚಿತ್ರ ಪರಂಪರೆಯನ್ನು ಕಟ್ಟಿ ಬೆಳೆಸಿದ ಅನೇಕ ನಿರ್ದೇಶಕರ ನಡುವೆ ರಿತ್ವಿಕ್ ಕುಮಾರ್
ಘಟಕ್ ಅವರಿಗೆ ಬಹಳ ಗಣನೀಯ ಸ್ಥಾನವಿದೆ. ಮೃಣಾಲ್ ಸೇನ್, ಹಾಗೂ ಸತ್ಯಜಿತ್ ರೇ ಅವರ ಜತೆ ಘಟಕ್ ಸಾಮಾನ್ಯವಾಗಿ
ಗುರುತಿಸಲ್ಪಡುತ್ತಾರೆ. ಸಿನಿಮಾ ನಿರ್ದೇಶನದ ಜತೆಗೆ ರಂಗಭೂಮಿ, ಸಿನಿಮಾ ಚಿತ್ರಕಥೆ ಬರಹ, ಸಣ್ಣಕಥೆ
ಕಾದಂಬರಿ ರಚನೆ ಹಾಗೂ ಸಿನಿಮಾ ವಿಮರ್ಶೆ ಪ್ರಬಂಧಗಳ ರಚನೆಯಂತಹ ಕ್ಷೇತ್ರಗಳಲ್ಲೂ ಅವರು ಕೆಲಸ ಮಾಡಿದ್ದರು.
ಅವರ ಸಿನಿಮಾಗಳು ಬಹುಮುಖ್ಯವಾಗಿ ಸಾಮಾಜಿಕ ವಾಸ್ತವ, ದೇಶ ವಿಭಜನೆ ಹಾಗೂ ಸ್ತ್ರೀವಾದದ ಪ್ರಶ್ನೆಗಳನ್ನು
ಮುಖ್ಯವಾಗಿ ಚಿತ್ರಿಸಿವೆ.
4 ನವೆಂಬರ್
1925ರಲ್ಲಿ ಈಗಿನ ಬಾಂಗ್ಲಾದೇಶದ ಢಾಕಾದ ಜಿಂದಾಬಾಝಾರ್ ಎನ್ನುವ ಪ್ರದೇಶದಲ್ಲಿ ಅವರು ಹುಟ್ಟಿದರು.
ಅವರ ತಂದೆ ತಾಯಿಯ 9ನೆಯ ಮಕ್ಕಳಲ್ಲಿ ಕೊನೆಯ ಮಗುವಾಗಿ ಪ್ರತೀತಿ ಎಂಬ ಕಿರಿಯ ತಂಗಿಯ ಜತೆ ಅವಳಿಯಾಗಿ
ಹುಟ್ಟಿದರು. ಮನೀಷ್, ಸುಧೀಶ್, ತಪತಿ, ಸಂಪ್ರೀತಿ, ಬ್ರೊತೋತಿ, ಅಶಿಷ್ ಚಂದ್ರ ಮತ್ತು ಲೋಕೇಶ್ ಚಂದ್ರ
ಅವರುಗಳು ರಿತ್ವಿಕ್ ಘಟಕ್ ಅವರ ಸಹೋದರ ಸಹೋದರಿಯರು. ಘಟಕ್ ಅವರ ತಂದೆ ರಾಯ್ ಬಹಾದೂರ್ ಸುರೇಶ್ ಚಂದ್ರ
ಘಟಕ್ ಅವರು ಆಗಿನ ಪೂರ್ವ ಬಂಗಾಳದಲ್ಲಿ ಡೆಪ್ಯುಟಿ ಮ್ಯಾಜಿಸ್ಟ್ರೇಟರಾಗಿದ್ದರು. ಅವರ ಇಡೀ ಕುಟುಂಬವು
ಪಾಶ್ಚಿಮಾತ್ಯ ಮತ್ತು ಭಾರತೀಯ ಜೀವನಕ್ರಮವೆರಡರ ಸಮ್ಮಿಶ್ರಣದಂತಿತ್ತು. ರಿತ್ವಿಕ್ ಅವರ ಸೋದರ ಸೊಸೆಯಾದ
ತದನಂತರ ಜ್ನಾನಪೀಠ ಪ್ರಶಸ್ತಿ ಪಡೆದ ಸಾಹಿತಿ ಮಹಾಶ್ವೇತಾದೇವಿ ಹಾಗೂ ಉಳಿದ ಸಹೋದರ ಸಹೋದರಿಯರ ಜತೆಗಿನ
ಬಾಲ್ಯದ ಚಟುವಟಿಕೆ, ಆಟಪಾಠ ಅವರಿಗೆ ಸಮೃಧ್ಧವಾದ ಬಾಲ್ಯದ ಅನುಭವವನ್ನು ನೀಡಿತ್ತು. ಇದರ ಬಗೆಗೆ ಇಬ್ಬರೂ
ಕೂಡಾ ಅನೇಕ ಬಾರಿ ಅನೇಕ ಕಡೆಗಳಲ್ಲಿ ಹೇಳಿದ್ದುಂಟು.
ಬಾಲಕ ರಿತ್ವಿಕ್
ತುಂಬಾ ಮೃದು ಸ್ವಭಾವದವನಾಗಿದ್ದ. ಅನ್ಯಾನ್ಯ ಚಟುವಟಿಕೆಯನ್ನು ಮಾಡುವುದರಲ್ಲಿ, ವಿವಿಧ ಕುತೂಹಲಗಳನ್ನು
ತಾಳುವುದರಲ್ಲಿ ಆತ ಅಪಾರ ಆಸಕ್ತಿಯನ್ನು ಹೊಂದಿದ್ದ. ಅತ್ಯಂತ ಎಳವೆಯಲ್ಲಿಯೇ ಚಿತ್ರಕಲೆ ಮತ್ತು ಸಂಗೀತದಲ್ಲಿ
ಆತ ಆಕರ್ಷಣೆಯನ್ನು ಹೊಂದಿದ್ದ. ಆಗಿನ ಕಾಲದ ಪ್ರಸಿದ್ಧ ಚಿತ್ರಕಾರ, ಮಹಾಕವಿ ರವೀಂದ್ರನಾಥ ಠಾಗೋರರ
ತಮ್ಮ ಅವನೀಂದ್ರನಾಥ ಠಾಕೂರರ ಚಿತ್ರಕಲೆಗಳಿಂದ ಬಾಲಕ ಘಟಕ್ ಸಾಕಷ್ಟು ಪ್ರಭಾವಿತನಾಗಿದ್ದ. ‘ರಾಜ್ ಕಹಿನಿ
ಬುರೋ ಅಂಗ್ಲಾ’ ರೀತಿಯ ಬಾಲ ಸಾಹಿತ್ಯಗಳು ಆತನಿಗೆ ಅತ್ಯಂತ ಖುಷಿಯ ಹಾಗೂ ಆಸಕ್ತಿಯ
ಬಾಲ್ಯವನ್ನು ನೀಡಲು ಕಾರಣವಾಯಿತು. ತಾನು ಬಾಲ್ಯದಲ್ಲಿ ಕೇಳಿದ ಕಥೆಗಳಿಂದ ಘಟಕ್ ಬಹಳಷ್ಟು ಪ್ರಭಾವಿತರಾಗಿದ್ದರು.
ನಂತರದ ದಿನಗಳಲ್ಲಿ ಅವುಗಳನ್ನು ಕೇಳುವವರು ಅತ್ತು ತಮ್ಮ ಕಣ್ಣುಗಳಿಂದ ಕಣ್ಣೀರು ಹರಿಸುವಷ್ಟರ ಮಟ್ಟಿಗೆ
ಪರಿಣಾಮಕಾರಿಯಾಗುವ ರೀತಿಯಲ್ಲಿ ಅವುಗಳನ್ನು ಹೇಳುತ್ತಿದ್ದರು. ತನ್ನ ಮಗ ರಿತಬನ್ಗೆ ಕೂಡಾ ಆ ಕಥೆಗಳನ್ನು
ಬಾಲ್ಯದಲ್ಲಿ ಹೇಳುತ್ತಿದ್ದರಂತೆ. ಬಂಗಾಳದ ಆಗಿನ ಇನ್ನೊಬ್ಬ ಚಿತ್ರ ಕಲಾವಿದ ಗಗನೇಂದ್ರ ಠಾಗೋರರ ಕಲಾಕೃತಿಗಳಿಂದಲೂ
ಕೂಡಾ ಘಟಕ್ ತೀರಾ ಪ್ರಭಾವಿತರಾಗಿದ್ದರು. ಕೌಮಾರ್ಯ ಕಳೆದು ತಾರುಣ್ಯಕ್ಕೆ ಬರುತ್ತಿದ್ದಾಗ ಬಂಗಾಳೀ
ಭಾಷೆಯ ಅಭಿಜಾತ ಲೇಖಕರಾದ ಬಿಭೂತಿ ಭೂಷಣ್ ಬಂಡೋಪಾಧ್ಯಾಯ, ತಾರಾಶಂಕರ ಬಂಡೋಪಾಧ್ಯಾಯ ಹಾಗೂ ಮಾಣಿಕ್
ಬ್ಯಾನರ್ಜಿಯವರ ಕೃತಿಗಳೂ ಕೂಡಾ ಬಹುಪಾಲು ಸಮಕಾಲೀನ ಬಂಗಾಳೀ ಯುವಕರನ್ನು ಆಕರ್ಷಿಸಿದ ಹಾಗೆ ಘಟಕ್ ಅವರನ್ನೂ
ಆಕರ್ಷಿಸಿತು. ಇದಲ್ಲದೇ ಅಮೆರಿಕೆಯ ಅಧ್ಯಕ್ಷ ಅಬ್ರಹಾಂ ಲಿಂಕನ್, ಬಂಗಾಳದ ತತ್ವಜ್ಞಾನಿ ಶಿಕ್ಷಣ ತಜ್ಞ
ಈಶ್ವರ ಚಂದ್ರ ವಿದ್ಯಾಸಾಗರ ಹಾಗೂ ರಷ್ಯಾದ ಕಮ್ಯುನಿಸ್ಟ್ ನಾಯಕ ಲೆನಿನ್ ಅವರ ವಿಚಾರ ಮತ್ತು ಬರವಣಿಗೆಯ
ಪ್ರಭಾವವೂ ಕೂಡಾ ಘಟಕರ ಮೇಲಾಯಿತು.
ಹಿಂದೂಸ್ತಾನಿ ಸಂಗೀತದ
ಬಹಳ ಪ್ರಮುಖ ಸಂಗೀತಾಗಾರ ಉಸ್ತಾದ್ ಅಲ್ಲಾವುದ್ದೀನ್ ಖಾನ್ ಅವರಿಂದ ಅವರು ಸಂಗೀತದ ಅರಿವನ್ನು ಪಡೆದರು.
ಇದೇ ಹೊತ್ತಿಗೆ ಪಾಶ್ಚಿಮಾತ್ಯ ಸಂಗೀತದಿಂದ ಕೂಡಾ ಅವರು ಪ್ರೇರಣೆಯನ್ನು ಪಡೆದರು. ಪ್ರಸಿಧ್ಧ ಸಂಗೀತಗಾರ
ಲುಡ್ವಿಗ್ ಬಿತೋವನ್ನ ರಚಿಸಿದ ಕೋರಲ್, ವಾಯ್ಲಿನ್ ಕನ್ಸರ್ಟೋ, ಲಿಯೋನೋರಾ ಮತ್ತು ಮೂನ್ಲೈಟ್ಗಳು
ಘಟಕ್ರಿಗೆ ಸಾಕಷ್ಟು ಪ್ರಿಯವಾಗಿದ್ದವು. ರಷ್ಯಾದ ಸಂಗೀತಗಾರನಾದ ಚಾಯ್ಕೋವಸ್ಕಿಯ ಸ್ವಾನ್ ಲೇಕ್,
ನಟ್ಕ್ರಾಕರ್ ಸೂಟ್, ಸ್ಲೀಪಿಂಗ್ ಬ್ಯೂಟಿ ಮತ್ತು ಹ್ಯಾಮ್ಲೆಟ್, ಪಾಲ್ ರಾಬ್ಸನ್ಸ್ ಅವರ ‘ಓಲ್ಡ್
ಮ್ಯಾನ್ ರಿವರ್’, ಓಲ್ಡ್ ಫೋಕ್ ಅಟ್ ಹೋಮ್, ಪೂರ್ ಓಲ್ಡ್ ಜೋ ಮತ್ತು ಸಾಂಗ್ಸ್ ಮೈ
ಮದರ್ ಟಾಟ್ ಮಿ ಮುಂತಾದ ಪಶ್ಚಿಮದ ವಿಶೇಷವಾಗಿ ಯುರೋಪ್-ಅಮೇರಿಕಾದ
ಸಂಗೀತದ ರಚನೆಗಳು ಸಾಕಷ್ಟು ಪ್ರಭಾವವನ್ನು ಬೀರಿದ್ದುವು. ಭಾರತೀಯ ಸಮಕಾಲೀನ ಸಂಗೀತ ನಿರ್ದೇಶಕರಾದ
ಎಸ್.ಡಿ. ಬರ್ಮನ್ ಮತ್ತು ಅಬ್ಬಾಸುದ್ದೀನ್ರಿಂದಲೂ ಪ್ರಭಾವಿತರಾಗಿದ್ದರು. ಘಟಕ್ ಮೇಲೆ ಭಾರತದ, ಜಾಗತಿಕ
ಕವಿ ರವೀಂದ್ರನಾಥ ಠಾಗೋರ್ ಮತ್ತು ಅವರು ಸ್ಥಾಪಿಸಿದ ಶಾಂತಿನಿಕೇತನ ಕಲಾಶಾಲೆಯ ಪ್ರಭಾವವೂ ಸಾಕಷ್ಟು
ಉಂಟಾಗಿತ್ತು. ಬಂಗಾಳಿಯ ಇನ್ನೊಬ್ಬ ಕವಿ ಸುಕಾಂತಾ ಭಟ್ಟಾಚಾರ್ಯರಿಂದ ಪ್ರೇರಿತರಾಗಿ ಅವರ ಕವಿತೆಯಾದ
‘ಚೀಲ್’ ಅನ್ನು ತಮ್ಮ ಸಿನಿಮಾವಾದ ‘ಬಾರೀ ತೇಕೇ ಪಾಲಿಯೇ’ನಲ್ಲಿ 1958ರಲ್ಲಿ
ಬಳಸಿದ್ದರು.
ರಿತ್ವಿಕ್ ಕುಮಾರ್
ಘಟಕ್ 1955ರಲ್ಲಿ ಅವರು ತಮ್ಮ ಗೆಳತಿ ಸುರಮಾ ಘಟಕ್ ಎಂಬ ಸ್ವಾತಂತ್ರಹೋರಾಟಗಾರ್ತಿ ಮತ್ತು ಕಮ್ಯೂನಿಸ್ಟ್
ಪಾರ್ಟಿಯ ಕಾರ್ಯಕರ್ತೆ ಅಥವಾ ಆಕ್ಟಿವಿಸ್ಟ್ ಒಬ್ಬರನ್ನು ಮದುವೆಯಾದರು. ಇಬ್ಬರೂ ಕೂಡಾ ಕಮ್ಯೂನಿಸ್ಟ್
ಪಾರ್ಟಿಯ ಇಫ್ತಾ ಎಂಬ ಸಾಹಿತ್ಯಿಕ ಸಾಂಸ್ಕøತಿಕ ಸಂಘಟನೆಯಲ್ಲಿದ್ದಾಗ ಭೇಟಿಯಾಗಿದ್ದರು. ರಿತಬನ್ ಎಂಬ
ಮಗ, ಸಂಹಿತಾ ಮತ್ತು ಸುಚಿಸ್ಮಿತಾ ಎಂಬ ಮಗಳಂದಿರಿಬ್ಬರನ್ನು ಪಡೆದರು. 6 ಫೆಬ್ರವರಿ 1976ರಂದು ಘಟಕ್
ಕಲ್ಕತ್ತಾದ ಎಸ್.ಎಸ್.ಕೆ.ಎಮ್ ಆಸ್ಪತ್ರೆಯಲ್ಲಿ ದೀರ್ಘಕಾಲದ ಅನಾರೋಗ್ಯದಿಂದ ಮರಣಹೊಂದಿದರು. ಬಂಗಾಳ
ಮತ್ತು ದೇಶ ಕಂಡ ಅಭಿಜಾತ ಪ್ರತಿಭೆಗಳ ಹಾಗೆ ಮೈಖಲ್ ಮಧುಸೂದನ್ದತ್, ಬರಹಗಾರ, ನಟ ಮತ್ತು ಸಿನಿಮಾ
ರಚಯಿತ ಪ್ರಮತೇಶ್ ಬರುವಾ, ಸಾಹಿತಿ ಮಾನಿಕ್ ಬಂಡೋಪಾಧ್ಯಾಯರ ರೀತಿಯಲ್ಲಿ ಪ್ರತಿಭಟನೆಯ ಸ್ವಭಾವವನ್ನು
ತಮ್ಮ ಕ್ಷೇತ್ರದಲ್ಲಿ ಇರಿಸಿಕೊಂಡಿದ್ದರು. ಇಂದಿಗೂ ಬಂಗಾಳೀ ಮತ್ತು ಭಾರತೀಯ ಸಿನಿಮಾದ ಚಾಲಕ ಶಕ್ತಿ
ಮತ್ತು ಪ್ರೇರಣೆಯಾಗಿ ಅವರು ಕಂಡುಬರುತ್ತಾರೆ. ಭಾರತೀಯ ಸಿನಿಮಾ ಸಂದರ್ಭದಲ್ಲಿ ರಿತ್ವಿಕ್ ಘಟಕ್ ಕೋಲ್ಮಿಂಚಿನ
ಅಥವಾ ಕ್ರಾಂತಿಯ ಹಾಗೆ ಪ್ರವೇಶಿಸಿದರು, ಆದರೆ ಅಷ್ಟೇ ವೇಗವಾಗಿ ನಿರ್ಗಮಿಸಿದರು. ಆದರೆ ರಿತ್ವಿಕ್
ಘಟಕ್ ಅವರು ನಿಧನರಾದ ನಂತರ ಜಾಗತಿಕವಾಗಿ ಅವರ ಸಿನಿಮಾಗಳು ನೋಡಲ್ಪಟ್ಟು, ಜನಪ್ರಿಯವಾದುವು. ಸಾಕಷ್ಟು
ಚರ್ಚೆ ಕೂಡಾ ಅವುಗಳ ಮೇಲೆ ನಡೆಯಿತು. ಅಮೇರಿಕಾ, ಫ್ರಾನ್ಸ್ ಮತ್ತು ಇಂಗ್ಲೆಂಡಿನ ನಿರ್ದೇಶಕರು ವಿಮರ್ಶಕರು
ಘಟಕ್ ಅವರನ್ನು ಜಾಗತಿಕ ಸಿನಿಮಾದ ಮಹಾ ಪ್ರತಿಭೆಯೆಂದೂ ಕೊಂಡಾಡಿದರು. ಸಿನಿಮಾವಷ್ಟೇ ಅಲ್ಲದೇ ಘಟಕ್
ಅವರು ಒಬ್ಬ ರಂಗ ನಿರ್ದೇಶಕ, ನಟ ಮತ್ತು ಆಕ್ಟಿವಿಸ್ಟ್ ಆಗಿದ್ದರು. ಬಂಗಾಲೀ ಮತ್ತು ಇಂಗ್ಲೀಷ್ ಭಾಷೆ
ಎರಡರಲ್ಲೂ ಕೂಡಾ ಸಣ್ಣ ಕತೆಗಳು, ಪ್ರಬಂಧಗಳು ಮತ್ತು ವಿಮರ್ಶೆಯನ್ನು ಬರೆದಿದ್ದರು. ತಮ್ಮ ಬಹುತೇಕ
ಕವಿತೆಗಳಲ್ಲಿ ಆಗಿನ ಬಂಗಾಳಿ ಕವಿಗಳು ಅನುಸರಿಸುತ್ತಿದ್ದ ಆತ್ಮರತಿಯ ಕುರಿತು ಟೀಕಿಸುತ್ತಿದ್ದರು.
ತಮ್ಮ ಗದ್ಯ ಮತ್ತು ವಿಮರ್ಶೆಯಲ್ಲಿ ಮಾತ್ರ ಅತ್ಯಂತ ಪ್ರಖರವಾಗಿ ಕಮ್ಯುನಿಸ್ಟ್ ವಿಚಾರಧಾರೆಯ ನಿಲುವನ್ನು
ಪ್ರಕಟಪಡಿಸುತ್ತಿದ್ದರು.
02 ಬಾಲ್ಯ
ಹಾಗೂ ಯೌವನ
ಇಂದು ಬಾಂಗ್ಲಾದೇಶವೆಂದು
ಕರೆಯಲ್ಪಡುವ ಪೂರ್ವಬಂಗಾಳವು ದೇಶವಿಭಜನೆಗಿಂತ ಹಿಂದಿನ ಬಂಗಾಳ ಪ್ರಾಂತದಲ್ಲಿನ ಅತ್ಯಂತ ಶ್ರೀಮಂತ ಪ್ರದೇಶವಾಗಿತ್ತು.
ಪೂರ್ವ ಬಂಗಾಳದಲ್ಲಿ ಘಟಕ್ ಜನಿಸಿ ತಮ್ಮ ಬಾಲ್ಯವನ್ನು ಕಳೆದರು. ಹಸಿರು ಭತ್ತದ ಗದ್ದೆಗಳು, ಮೇಘನಾ,
ಪದ್ಮಾ, ತಿತಾಶ್ ಅಂತಹ ನದಿಗಳು, ಮೀನು, ಮಾವಿನ ಮರಗಿಡ, ತೋಪುಗಳು, ಮೀನಿನ ಸಾರಿನ ಖಾದ್ಯ, ಹಕ್ಕಿಗಳ
ಚಿಲಿಪಿಲಿಗಳ ಸಾಂಗತ್ಯ ಅವರ ವ್ಯಕ್ತಿತ್ವದ ಮೇಲೆ ಗಾಢವಾದ ಪ್ರಭಾವವನ್ನು ಬೀರಿತು. ಈ ಕಾರಣದಿಂದ ಇಂತಹ
ಬೇರು, ನೆಲಮೂಲ, ಮಣ್ಣಿನ ಜತೆಗಿನ ಸಂಬಂಧ ಅವರ ಬಹುತೇಕ ಸಿನಿಮಾಗಳ ಪ್ರಧಾನ ಕಾಳಜಿಯಾಯಿತು. ಪೂರ್ವ
ಬಂಗಾಳವನ್ನು ತೊರೆದು ಕಲ್ಕತ್ತಾದಲ್ಲಿ ನೆಲೆನಿಂತ ಮೇಲೂ ಕೂಡಾ ನನ್ನ ಪಾದ ನನ್ನ ಮೂಲ ನೆಲ, ಮಣ್ಣಿನಲ್ಲಿಲ್ಲ
ಎಂಬ ದುಗುಡವನ್ನು ಅವರು ಮಾತಿನಲ್ಲಿ ಮತ್ತು ತಮ್ಮ ಕೃತಿ ಅಥವಾ ಸಿನಿಮಾದಲ್ಲಿ ವ್ಯಕ್ತಪಡಿಸಿದ್ದರು.
ಇಂತಹ ಮೂಲನೆಲದ ಜತೆಗಿನ ಅವರ ನೆನಪು ಮತ್ತು ಸಂಬಂಧ ಪುನ: ತಾಯಿಯ ಗರ್ಭ ಪ್ರವೇಶಿಸಿ ಬೆಚ್ಚಗೆ ಕುಳಿತುಕೊಳ್ಳುವ
ಹಿತದ ರೀತಿಯಲ್ಲಿತ್ತು.
ಬಹುಶ: ಪ್ರತೀ ಕಲಾಕಾರನೂ
ಕೂಡಾ ಇಂತಹ ಬಾಲ್ಯದ ಸ್ಥಿತಿಯನ್ನು ತನ್ನ ಬದುಕು ಮತ್ತು ಕೃತಿಗಳಲ್ಲಿ ಹೊತ್ತಿರುತ್ತಾನೆ. ಬಾಲ್ಯ ನಿಸ್ಸಂಶಯವಾಗಿ
ಬಹುತೇಕ ಕಲಾವಿದರ ಮನಸ್ಸನ್ನು ಗಟ್ಟಿಯಾಗಿ ಕಟ್ಟಿ ರೂಪಿಸುತ್ತದೆ. ಬಾಲ್ಯ ಕಳೆದು ತರುಣಾವಸ್ಥೆಗೆ ಕಾಲಿಡುತ್ತಿದ್ದಂತೆಯೇ
ಆಗ ಭಾರತದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟದ ಬಿಸಿಯೂ ಕೂಡಾ ಘಟಕ್ ಅವರಿಗೆ ತಾಗುತ್ತದೆ.
ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಅಸಹಕಾರ ಚಳುವಳಿಯು ಇವರ ಮೇಲೆ ಗಾಢವಾದ ಪರಿಣಾಮವನ್ನು ಬೀರಿತು.
ಪೂರ್ವ ಬಂಗಾಳದಲ್ಲಿದ್ದ ಚಿತ್ತಗಾಂಗ್ ಎನ್ನುವ ಪ್ರದೇಶದಲ್ಲಿ ಸೂರ್ಯ ಸೇನ್ ಎನ್ನುವ ಕ್ರಾಂತಿಕಾರಿಯ
ನೇತೃತ್ವದಲ್ಲಿ ನಡೆದ ಬ್ರಿಟೀಷರ ಶಸ್ತ್ರಕೋಠಿಯ (ಅರ್ಮರಿ) ಮೇಲಿನ ಆಕ್ರಮಣವೂ ತರುಣ ಘಟಕ್ ಮೇಲೆ ಸಾಕಷ್ಟು
ಪ್ರಭಾವವನ್ನು ಬೀರಿತ್ತು. ಆಗ ಸಂಭವಿಸಿದ ವಿಶ್ವಯುದ್ಧ, ಅದು ಜನಮಾನಸದ ಮೇಲೆ ಉಂಟುಮಾಡಿದ ವ್ಯಾಪಕವಾದಂತಹ
ಆರ್ಥಿಕ ಸಂಕಷ್ಟ, ಹೊಡೆತವನ್ನೂ ತರುಣ ನೋಡಿ ಅನುಭವಿಸಬೇಕಾಯಿತು. ಜಗತ್ತಿನಲ್ಲಿ ಉಂಟಾದ ಆರ್ಥಿಕ ಸಂಕಷ್ಟದ
ಕಾರಣದಿಂದ ಭಾರತದಲ್ಲಿನ ಕುಟುಂಬ ವ್ಯವಸ್ಥೆಯೂ ಪ್ರಭಾವಿತವಾಗಿ ಕೂಡಾ ಒಡೆಯಲಾರಂಭಿಸಿತು. ಸಣ್ಣ ಕುಟುಂಬಗಳು
ಮುನ್ನೆಲೆಗೆ ಬಂದುವು. ವ್ಯಾಪಕವಾದ ನಿರುದ್ಯೋಗ, ಬಡತನ, ಹಸಿವು ಕೂಡಾ ಕಾಣಿಸಿತು. ಈ ಸಂದರ್ಭದಲ್ಲಿ
ಘಟಕ್ ರೀತಿಯ ಅನೇಕ ಯುವಕರು ಬಂಗಾಳದಲ್ಲಿ ಇವುಗಳಿಗೆ ಪ್ರತಿಕ್ರಿಯೆ ನೀಡುವ ನಿಟ್ಟಿನಲ್ಲಿ ‘ಕಲ್ಲೋಲ್
ಗುಂಪು’ ಎನ್ನುವ ತಂಡವನ್ನು ಕಟ್ಟಿಕೊಂಡರು. ಒಂದು ಕಡೆ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಬೇಕೆನ್ನುವ
ಆಸೆ, ಇನ್ನೊಂದೆಡೆ ವಿಶ್ವಯುದ್ಧ ಮತ್ತಿತರ ಕಾರಣದಿಂದ ಸಂಭವಿಸಿದ ಆರ್ಥಿಕ ಸಂಕಷ್ಟ, ನಿರುದ್ಯೋಗ ಇತ್ಯಾದಿಗಳ
ಕುರಿತು ಏನನ್ನಾದರೂ ಮಾಡುವ ಆಶಯವನ್ನಿಟ್ಟುಕೊಂಡು ಈ ತಂಡ ಕೆಲಸಮಾಡಿತು. ಋತ್ವಿಕ್ ಘಟಕ್ ಅವರ ಹಿರಿಯ
ಸೋದರ ಮನೀಷ್ ಘಟಕ್ ಕೂಡಾ ಈ ತಂಡದ ಪ್ರಮುಖ ಸದಸ್ಯರಾಗಿದ್ದರು. ಮಾನಿಕ್ ಬ್ಯಾನರ್ಜಿ ಎನ್ನುವ ಆ ಕಾಲದ
ಯುವ ಸಾಹಿತಿಯೂ ಕೂಡಾ ಇದರಲ್ಲಿ ಸೇರಿಕೊಂಡಿದ್ದರು. ಇಲ್ಲಿಯ ಚಟುವಟಿಕೆ, ಸಾಹಿತ್ಯಕ ಸಾಂಸ್ಕøತಿಕ ಚರ್ಚೆ,
ಸಂವಾದಗಳು ತರುಣ ರಿತ್ವಿಕ್ರ ಮೇಲೆ ಸಾಕಷ್ಟು ಪ್ರಭಾವವನ್ನು ಬೀರಿತು.
03 ದೇಶವಿಭಜನೆ,
ಇಫ್ತಾ ಮತ್ತು ರಂಗ ಭೂಮಿ ಚಟುವಟಿಕೆಗಳು.
ಸುಮಾರು 1941ರಲ್ಲಿ
ಕವಿ ರವೀಂದ್ರನಾಥ ಟಾಗೋರರ ನಿಧನರಾದರು. ಇದು ತರುಣ ಘಟಕ್ರ ಮೇಲೆ ಸಾಕಷ್ಟು ಪ್ರಭಾವ ಪರಿಣಾಮವನ್ನು
ಬೀರಿತು. ಟಾಗೋರರ ಸಾವಿನಿಂದಾಗಿ ಇಡೀ ಬಂಗಾಳದ ಸಮಾಜ ಜೀವನ, ಸಾಹಿತ್ಯ, ಕಾವ್ಯ, ನಾಟಕ ಮುಂತಾದ ಕ್ಷೇತ್ರಗಳಲ್ಲಿ
ಕೆಲವು ಕಾಲ ಖಾಲಿತನ ಮತ್ತು ದೀರ್ಘ ಮೌನ ಆವರಿಸಿತು. ಆದರೆ ಆಶಾವಾದವೆಂಬಂತೆ ಈ ಮೊದಲೇ ನೆಲೆ ಕಂಡಿದ್ದ
ಇಫ್ತಾ ಅಥವಾ ಇಂಡಿಯನ್ ಪೀಪಲ್ಸ್ ತಿಯೇಟರ್ ಅಸೋಶಿಯೇಶನ್ ಎನ್ನುವ ಕಮ್ಯೂನಿಸ್ಟ್ ಪಕ್ಷದ ಸಾಹಿತ್ಯ,
ಸಾಂಸ್ಕøತಿಕ ಚಟುವಟಿಕೆಯ ಸಂಘಟನೆಯೂ ಸುಮಾರು 1942ರ ನಂತರ ಅತ್ಯಂತ ಕ್ರಿಯಾಶೀಲವಾಯ್ತು. ಭಾರತದ ಆಗಿನ
ಪ್ರಸಿದ್ಧ ಕಲಾಕಾರರಾದ ನೃತ್ಯ ಪಟು ಉದಯ ಶಂಕರ್, ಸಿತಾರ್ ವಾದಕ ರವಿಶಂಕರ್, ನಟ ಬಲ್ರಾಜ್ ಸಹಾನಿ,
ಸಿನಿಮಾ ನಿರ್ದೇಶಕ ಕೆ.ಎ.ಅಬ್ಬಾಸ್, ನಟ ರಂಗಕರ್ಮಿ ಶಂಭು ಮಿತ್ರಾ, ನಟ ಬಿಜೋನ್ ಭಟ್ಟಾಚಾರ್ಯ, ಕವಿ,
ಸಿನಿಮಾ ಗೀತ ರಚನಕಾರ, ಸಂಗೀತ ನಿರ್ದೇಶಕ ಸಲೀಲ್ ಚೌಧರಿ ಮುಂತಾದವರು ಇಫ್ತಾ ಸಂಘಟನೆಯನ್ನು ಸೇರಿದರು.
ಆರಂಭದಲ್ಲಿ ನಾಟಕಗಳ ಮೂಲಕ ಬ್ರಿಟೀಷರನ್ನು ವಿರೋಧಿಸಿ, ಜನಸಮುದಾಯದಲ್ಲಿ ದೇಶಭಕ್ತಿಯನ್ನು ಉದ್ದೀಪನಗೊಳಿಸುವ
ಉದ್ದೇಶವನ್ನು ಇಪ್ತಾ ಹೊಂದಿತ್ತು. 1943ರಲ್ಲಿ ಬಂಗಾಳದಲ್ಲಿ ಭೀಕರವಾದ ಒಂದು ಕ್ಷಾಮ ಸಂಭವಿಸಿತು.
ಇದೂ ಕೂಡಾ ತರುಣ ಋತ್ವಿಕ್ರನ್ನು ಪ್ರಭಾವಿಸಿತು. ಸುಮಾರು 15 ಮಿಲಿಯನ್ ಜನ ಆ ಕ್ಷಾಮದಿಂದ ಸತ್ತಿದ್ದರು.
ಅದೇ ಹೊತ್ತಿಗೆ ಸುಮಾರು 1941ರಲ್ಲಿ ಬ್ರಿಟೀಷರು ನಿರ್ದಯವಾಗಿ ಗಾಂಧೀಜಿಯವರು ಮುನ್ನಡೆಸಲು ಉದ್ದೇಶಿಸಿದ್ದ
ಕ್ವಿಟ್ ಇಂಡಿಯಾ ಚಳುವಳಿಯನ್ನು ಹತ್ತಿಕ್ಕಿದ್ದರು. ಇದೂ ಋತ್ವಿಕರನ್ನು ತೀವ್ರವಾಗಿ ಕಾಡಿತು.
1947ರಲ್ಲಿ ಸ್ವಾತಂತ್ರ್ಯ ಸಿಕ್ಕಿದ ನಂತರ ಉಂಟಾದ ದೇಶ ವಿಭಜನೆಯಿಂದ, ಋತ್ವಿಕ್ರ ಮೂಲನೆಲ ಬಂಗಾಳ
ಎರಡು ಭಾಗವಾಗಿ ಹಿಂದೂಗಳಿಗೆ ಪಶ್ಚಿಮ ಬಂಗಾಳ ಮತ್ತು ಮುಸ್ಲಿಮರಿಗೆ ಪೂರ್ವ ಬಾಂಗ್ಲಾದೇಶ ಅಥವಾ ಪೂರ್ವ
ಪಾಕಿಸ್ತಾನವೆಂದು ಘೋಷಿಸಲಾಯ್ತು. ಆಗ ವ್ಯಾಪಕವಾಗಿ ಹಿಂಸೆ ಉಂಟಾಯಿತು. ಅದರ ಕಾರಣದಿಂದ ಒಂಟಾದ ವಲಸೆಯಿಂದ
ಸುಮಾರು ಮಿಲಿಯಗಟ್ಟಲೆ ಜನರು ಎರಡೂ ದೇಶ ಮತ್ತದರ ಗಡಿಭಾಗದಲ್ಲಿ ಹಾಗೂ ಗಡಿಯ ಆಚೆ ಈಚೆ ನಿರಾಶ್ರಿತರಾದರು.
ವಿಶೇಷವಾಗಿ ಅವರ ಬಡತನ, ಹಸಿವು ಹಾಗೂ ಆರ್ಥಿಕ ಅಸಹಾಯಕತೆಯು ರಿತ್ವಿಕ್ರನ್ನು ಗಂಭೀರವಾಗಿ ಕಾಡಿತ್ತು.
ಇದು ಘಟಕ್ ಅವರ ಜೀವನ ಮತ್ತು ಸಿನಿಮಾದ ಮುಖ್ಯವಾದ ಜೀವಸೆಲೆಯಾಯಿತು. ಇದಕ್ಕೆ ತಕ್ಷಣದ ಪ್ರತಿಕ್ರಿಯೆ
ಎಂಬಂತೆ ಆಗಿನ ಪ್ರಸಿಧ್ಧ ಬಂಗಾಳಿ ನಟ ಬಿಜೋನ್ ಭಟ್ಟಾಚಾರ್ಯರ ಮೂಲಕ ‘ನಬನ್ನ’ ಎಂಬ ಪ್ರಸಿದ್ಧ ನಾಟಕವನ್ನು ಅವರು ಪುನರ್ಸೃಷ್ಟಿಸಲು ಕಾರಣವಾಯಿತು. ನಬನ್ನ ನಾಟಕ ಬಹುತೇಕ
ನಿರಾಶ್ರಿತರ ವ್ಯಥೆಯ ಕುರಿತಾಗಿತ್ತು. ಘಟಕ್ ಅವರೇ ಹೇಳಿದ ಹಾಗೆ, ನಾನಾಗಲೇ ‘ಕಾರ್ಮಿಕರ, ಸಾಮಾನ್ಯರ
ಹಿತವನ್ನು ಬಯಸುವ ಕಮ್ಯುನಿಸ್ಟ್ ಪಕ್ಷದ ಪ್ರಭಾವಕ್ಕೆ ಒಳಗಾಗಿ ಆಲೋಚಿಸತೊಡಗಿದ್ದೆ, ಅದೇ ಹೊತ್ತಿಗೆ
ದೇಶ ವಿಭಜನೆಯ ನೋವು ನನ್ನನ್ನು ನನ್ನ ಆಲೋಚನೆಯನ್ನೂ ಇನ್ನೂ ಗಟ್ಟಿಗೊಳಿಸಿತು’ ಎಂಬ ಮಾತು ಅವರು ಆ ಕಾಲದಲ್ಲಿ ಇದ್ದ ಸ್ಥಿತಿ ಮತ್ತು ವ್ಯಾಕುಲತೆಯ ಮಾನಸಿಕತೆಯನ್ನು ತೋರಿಸುತ್ತದೆ.
ಸುಮಾರು 1946ರ
ಹೊತ್ತಿಗೆ ಘಟಕ್ ಕಮ್ಯೂನಿಸ್ಟ್ ಪಾರ್ಟಿಯ ಅಥವಾ ಮಾಕ್ರ್ಸ್ವಾದೀ ರಾಜಕಾರಣದಲ್ಲಿ ತಮ್ಮನ್ನು ಗುರುತಿಸಿಕೊಂಡರು,
ವಿಶೇಷವಾಗಿ ಅದರ ಕಲೆ, ನಾಟಕ ಮತ್ತು ಸಾಹಿತ್ಯದ ವಿಭಾಗದಲ್ಲಿ ಸಕ್ರಿಯರಾದರು. ಕೆಲವು ವರ್ಷಗಳ ಕಾಲ
ಅವರು ಕಮ್ಯೂನಿಸ್ಟ್ ಪಕ್ಷದ ಸಾಂಸ್ಕøತಿಕ ಸಂಘಟನೆಯಾದ ಇಪ್ತಾದಲ್ಲಿ ಸಕ್ರಿಯರಾಗಿ ಅನೇಕ ನಾಟಕಗಳನ್ನು
ನಿರ್ದೇಶಿಸಿದ್ದರು. ಆದರೆ ಅದೇ ಹೊತ್ತಿಗೆ ಸಿನಿಮಾ ಕುರಿತೂ ಅವರು ಆಸಕ್ತಿಯಿಂದ ತುಡಿಯುತ್ತಿದ್ದರು.
ಇಫ್ತಾದಲ್ಲಿನ ಬಹುತೇಗ ಪ್ರಯೋಗಗಳು ಸುಮಾರು 4 ರಿಂದ 5 ಸಾವಿರ ಪ್ರೇಕ್ಷಕರು ಕುಳಿತು ನೋಡಬಹುದಾದ ಹೊರಾಂಗಣ
ರಂಗಮಂದಿರ ಅಥವಾ ಓಪನ್ ಏರ್ ಥಿಯೇಟರ್ನಲ್ಲಿ ಏರ್ಪಡುತಿದ್ದವು. ಇವುಗಳು ಮುಕ್ತವಾಗಿ ಯಾವುದೇ ಪ್ರೇಕ್ಷಕನನ್ನು
ಅತ್ಯಂತ ಸರಳವಾಗಿ ಆಕರ್ಷಿಸುವ ಸಾಮಥ್ರ್ಯವನ್ನು ಹೊಂದಿದ್ದುವು. ಆದರೆ ಅದೇ ಹೊತ್ತಿಗೆ ಸಿನಿಮಾದ ಮೂಲಕ
ಮಿಲಿಯಗಟ್ಟಲೆ ಜನರನ್ನು ತಲುಪಬಹುದೆನ್ನುವ ವಿಚಾರ ಘಟಕ್ ಅವರ ತಲೆಗೆ ಬಂದ ಕೂಡಲೇ ಸಿನಿಮಾದತ್ತ ಅವರು
ಆಕರ್ಷಿತರಾದರು. ಘಟಕ್ ಇಷ್ಟಕ್ಕೇ ನಿಲ್ಲದೇ, ‘ಸಿನಿಮಾವನ್ನು ಮೀರಿ ಜನರನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ
ಇನ್ನೊಂದು ಕಲೆ ಅಥವಾ ಮಾಧ್ಯಮ ತಲುಪುವುದಿದ್ದರೆ ನಾನು ಇದನ್ನು ಬಿಟ್ಟನ್ನು ಅದನ್ನು ಬಳಸುತ್ತೇನೆ’ ಎಂದೂ ಹೇಳಿದರು.
1948ರಲ್ಲಿ ಬರ್ಹಾಂಪುರ್
ಕಾಲೇಜ್ನಿಂದ ಪದವಿಯನ್ನು ಪಡೆದ ಬಳಿಕ ಇಪ್ತಾ ಅಥವಾ ಜನ ನಾಟ್ಯ ಸಂಘವನ್ನು ಸೇರಿ ಹೆಚ್ಚು ಸಕ್ರಿಯರಾಗುತ್ತಾರೆ.
ಕ್ರಮೇಣ ಈ ಸಂಘಟನೆಯ ನಾಯಕನೂ ಆಗುತ್ತಾರೆ. ಈ ಹೊತ್ತಿಗೆ ಘಟಕ್ ಇಫ್ತಾಕ್ಕೆ ಅನೇಕ ನಾಟಕಗಳನ್ನು ನಿರ್ದೇಶಿಸಿದರು.
1948ರಲ್ಲಿ ಅವರು ‘ಕಾಲೋ ಸಾಯರ್’ ಎಂಬ ತಮ್ಮ ಮೊತ್ತಮೊದಲ ನಾಟಕವನ್ನು ಬರೆದರು. ಇದರ ಜತೆಗೆ ಘಟಕ್
ನಾಟಕದಲ್ಲಿ ಅಭಿನಯವನ್ನೂ ಮಾಡಲು ಆರಂಭಿಸಿದರು. 1949ರಲ್ಲಿ ಬೀರು ಮುಖ್ಯೋಪಾಧ್ಯಾಯರ ‘ದ್ಯೋ’ ಎಂಬ ನಾಟಕದಲ್ಲಿ ವೃದ್ಧ ಬಡರೈತನ ಪಾತ್ರದಲ್ಲಿ ಅವರು ನಟಿಸಿದರು. ಅದು ಎಷ್ಟು ಜನಪ್ರಿಯವಾಯಿತೆಂದರೆ,
ನಂತರ ಅದರ ಅನೇಕ ಪ್ರದರ್ಶನಗಳು ಸಾಲು ಸಾಲಾಗಿ ಬಂದುವು. ಸಿನಿಮಾ ಮತ್ತು ರಂಗನಟ ಉತ್ಪಲ್ ದತ್ ಅವರ
ಜತೆ ಅವರ ನಿರ್ದೇಶನದಲ್ಲಿ ಷೇಕ್ಸ್ಪಿಯರ್ನ ಮ್ಯಾಕ್ಬೆತ್ನಲ್ಲಿ ವಿಚ್ ಪಾತ್ರದಲ್ಲಿ ಘಟಕ್ ಅಭಿನಯಿಸಿದ್ದರು.
ಬಂಗಾಳೀ ನಾಟಕ ಪರಂಪರೆಯ ಪ್ರಮುಖ ವ್ಯಕ್ತಿ ಎಂದು ಗುರುತಿಸಲ್ಪಡುವ ಶಿಶಿರ್ ಕುಮಾರ್ ಬಾಧುರಿಯವರೂ ಕೂಡಾ
ಈ ಪಾತ್ರವನ್ನು ಮೆಚ್ಚಿ ಪ್ರಶಂಸಿಸಿದ್ದರಂತೆ!
ಈ ಹೊತ್ತಿನಲ್ಲಿ
ನಿಕೋಲಾಯ್ ಗೊಗೋಲ್ ಎಂಬ ರಷ್ಯಾದ ನಾಟಕಕಾರನ ‘ದಿ ಗವರ್ನಮೆಂಟ್ ‘ಇನ್ಸ್ಪೆಕ್ಟರ್’ ಎಂಬ ಕೃತಿಯನ್ನು ಘಟಕ್ ನಾಟಕಕ್ಕಾಗಿ ಮರುರಚಿಸಿದರು. ಈಗಾಗಲೇ ಪ್ರಮಥನಾಥ ಬಿಶಿ ಎಂಬ ವ್ಯಕ್ತಿ
ಈ ಮೊದಲೇ ಅದನ್ನು ಅನುವಾದಿಸಿದ್ದರಾದರೂ 1952ರಲ್ಲಿ ‘ಆಫೀಸರ್’ ಎಂಬ ಹೆಸರಿನಲ್ಲಿ ಘಟಕ್ ಇದನ್ನು ನಿರ್ದೇಶಿಸಿ ಪ್ರದರ್ಶಿಸಿದರು. ಈ ನಾಟಕದ ಪ್ರಧಾನ ಪಾತ್ರ
ನಿರ್ವಹಿಸಬೇಕಾಗಿದ್ದವರು ಆಗ ಬಂಗಾಳದ ಪ್ರಸಿಧ್ಧ ನಟನಾಗಿದ್ದ ಖಾಳೀ ಬ್ಯಾನರ್ಜಿಯವರು. ಅವರು ಕಾರಣಾಂತರಗಳಿಂದ
ಕೊನೆಯ ಕ್ಷಣಗಳಲ್ಲಿ ಈ ಪಾತ್ರವನ್ನು ಮಾಡದಾದರು. ಆ ಸ್ಥಾನ ಮತ್ತು ಪಾತ್ರಕ್ಕೆ ಋತ್ವಿಕ್ ಕೇವಲ ಎರಡು
ದಿನಗಳ ರಿಹರ್ಸಲ್ ಮೂಲಕ ಜೀವ ತುಂಬಿ ನ್ಯಾಯವೊದಗಿಸಿದರು. ಆ ನಾಟಕವು ಒಂದು ತಿಂಗಳಿನಲ್ಲೇ 52 ಪ್ರದರ್ಶನ
ಕಂಡು ತುಂಬಾ ಜನಪ್ರಿಯವಾಯಿತು. ಇದಾದ ನಂತರ ಘಟಕ್ ಉತ್ಪಲ್ ದತ್ತ್ ಮುಖ್ಯ ಪಾತ್ರವಹಿಸಿದ ‘ವೋಟ್ ವೋಟ್’ ಎಂಬ ನಾಟಕವನ್ನು ನಿರ್ದೇಶಿಸಿದರು. ಈ ದಿನಗಳಲ್ಲಿ ಆಶುನಾಟಕಗಳು ಭಾರೀ ಜನಪ್ರಿಯವಾಗಿದ್ದುವು.
ಅವುಗಳ ಎಡೆಯಲ್ಲಿ ಕೂಡಾ ರಿತ್ವಿಕ್ ಜನಪ್ರಿಯ ನಾಟಕ ಕೃತಿಗಳನ್ನು ನಾಟಕವಾಗಿಸಿ ನಿರ್ದೇಶಿಸಿದರು.
ರವೀಂದ್ರನಾಥ ಠಾಗೋರರ
ಬಿಸರ್ಜನ್ ಎಂಬ ನಾಟಕವನ್ನು ಸ್ವಲ್ಪ ಸುಧಾರಿಸಿ, ರಘುಪತಿ ಎಂಬ ಅದರ ಪ್ರಧಾನ ಪಾತ್ರವನ್ನು ತಾವೇ ನಿರ್ವಹಿಸಿದರು.
ತನ್ಮೂಲಕ ಹಿಂದಿ ಚಿತ್ರರಂಗದ ಪ್ರಖ್ಯಾತ ನಟ ಪೃಥ್ವೀರಾಜ್ ಕಪೂರ್ ಅವರಿಗೆ ಉಂಟಾದ ಆರ್ಥಿಕ ಸಂಕಷ್ಟವನ್ನು
ಇದರ ಕೆಲವು ಪ್ರದರ್ಶನಗಳ ಮೂಲಕ ತುಂಬಿ ಕೊಡಲಾಯಿತು. ಸಂಪೂರ್ಣ ನಾಟಕದ ಸೆಟ್, ಕಾಸ್ಟ್ಯೂಮ್ (ವಸ್ತ್ರಾಲಂಕಾರ)
ಮತ್ತು ಪ್ರಸ್ತುತಿಯನ್ನು ಘಟಕ್ ಅವರೇ ನಿರ್ವಹಿಸಿದರು. ಈ ನಾಟಕದಲ್ಲಿಯೂ ಘಟಕ್ ಅವರ ಅಭಿನಯ ಕೂಡಾ ಉತ್ಕøಷ್ಟವಾಗಿತ್ತು.
ಶಿಶಿರ್ ಕುಮಾರ್ ಬಾಧುರಿಯಂತಹ ನಾಟಕಕಾರರೇ ಘಟಕ್ ರೂಪಾಂತರಿಸಿದ ಈ ನಾಟಕವನ್ನು ನೋಡಲು ಕುತೂಹಲ ತೋರಿದ್ದರು.
ಈ ನಾಟಕದಲ್ಲಿ ‘ಆತ್ಮಾಹುತಿ ಎನ್ನುವುದು, ತ್ಯಾಗ ಎನ್ನುವುದು ಸಂಪೂರ್ಣ ಅದ್ದಿದ, ಮುಳುಗಿದ ಸ್ಥಿತಿಯಲ್ಲ,
ರಕ್ತ ಅಥವಾ ಪ್ರತೀಕಾರ ಕೂಡಾ ಅಲ್ಲ, ಬದಲು ಶಾಂತಿ, ಎನ್ನುವ ಠಾಗೋರ್ ಅವರ ಸಂದೇಶವನ್ನೇ ಘಟಕ್ ಪ್ರತಿಪಾದಿಸಿದರು.
ಈ ತತ್ವ ಮತ್ತು ಡೈಲಾಗ್ ಆ ಕಾಲದಲ್ಲಿ ಅತ್ಯಂತ ಜನಪ್ರಿಯವೂ ಆಗಿತ್ತು. ನೈಹತಿ ಮತ್ತು ಬಗ್ನಾನ್ ರೀತಿಯ
ಸಣ್ಣ ನಗರಗಳಲ್ಲಿ, ಎಲ್ಲಿ ತಿಯೇಟರ್ ವ್ಯವಸ್ಥೆ ಇರಲಿಲ್ಲವೋ ಅಲ್ಲಿ ಓಪನ್ ಏರ್ನಲ್ಲಿ ಪ್ರದರ್ಶನಗಳನ್ನು
ಮಾಡಲಾಯಿತು. ಆದರೆ ಕಾಲಾಂತರದಲ್ಲಿ ರಷ್ಯಾದ ಚಿತ್ರ ನಿರ್ದೇಶಕ ಸರ್ಗಿ ಐಸಿನ್ಸ್ಟೀನ್ರವರ ‘ಇವಾನ್
ದಿ ಟೆರ್ರಿಬಲ್’ ಸಿನಿಮಾ ನೋಡಿ ಘಟಕ್ ಈ ನಾಟಕದ ರಂಗ ವಿನ್ಯಾಸವನ್ನು ತುಸು ಬದಲಿಸಿಕೊಂಡಿದ್ದರಂತೆ.
ಘಟಕ್ ಅವರು ಬರೆದ
ಪ್ರಮುಖ ನಾಟಕಗಳಲ್ಲಿ ಜ್ವಾಲಾ, ಸಂಕೋ ಮತ್ತು ದಲೀಲ್ ಸಾಕಷ್ಟು ಜನಪ್ರಿಯವಾಗಿತ್ತು. 1951ರಲ್ಲಿ ಬರೆದ
ಜ್ವಾಲಾ ಘಟಕ್ ಅವರ ಮೊದಲ ನಾಟಕ. ಆಗಿನ ರಾಜಕೀಯ ಪರಿಸ್ಥಿತಿಯನ್ನು ಆಧರಿಸಿ ಘಟಕ್ ನಾಟಕ ಬರೆಯುತ್ತಿದ್ದ
ಕಾರಣ ಅವುಗಳು ಬಹುಜನಪ್ರಿಯವಾಗಿದ್ದುವು. ಕಮ್ಯೂನಿಸ್ಟ್ ಪಾರ್ಟಿಯ ನೇತಾರ ಪಿ.ಸಿ. ಜೋಷಿಯವರ ಇಂಡಿಯನ್
ವೇ ಪತ್ರಿಕೆಯಲ್ಲಿ ಬಂಗಾಳದ ಪ್ರತಿನಿಧಿಯಾಗಿದ್ದ ಘಟಕ್ ಕಲ್ಕತ್ತಾ ನಗರದಲ್ಲಿ ಸಂಭವಿಸಿದ 32 ಆತ್ಮಹತ್ಯೆಗಳ
ವರದಿಯನ್ನು ಆಧರಿಸಿ ಈ ಜ್ವಾಲಾ ನಾಟಕ ಬರೆಯಲ್ಪಟ್ಟಿತ್ತು. ಈ ನಾಟಕವು ರೇಡಿಯೋದಲ್ಲಿ ಪ್ರಕಟಗೊಂಡಾಗ
ಘಟಕ್ ಅವರು ಬಬೇಶ್ ಬಗ್ಚಿ ಎನ್ನುವ ಗೂಢನಾಮದಿಂದ ಖ್ಯಾತರಾಗಿದ್ದರು. 1967ರಲ್ಲಿ ಅದು ಪುನ: ಪ್ರಸಾರವಾದಾಗ
ತನ್ನ ನಿಜನಾಮಧೇಯವನ್ನೇ ಅವರು ತೆರೆದಿಟ್ಟಿದ್ದರು. ಒಂದು ಹಂತದಲ್ಲಿ ಘಟಕ್ ಜ್ವಾಲಾವನ್ನು ಸಿನಿಮಾ
ಮಾಡಲು ಆಸಕ್ತಿಯನ್ನೂ ತೋರಿದ್ದರು. ಜ್ವಾಲಾ ನಾಟಕ ಕ್ರಾಂತಿಕಾರೀ ಹೋರಾಟ, ಸಂಘಟನೆ ಮತ್ತು ಘೋಷಣೆಯ
ಕಥಾವಸ್ತುವನ್ನು ಆದ್ಯತೆಯನ್ನಾಗಿಸಿತ್ತು.
ದಲೀಲ್ ನಾಟಕದ ನಂತರ,
ಅದರ ಯಶಸ್ಸಿನ ನಂತರ ಇಫ್ತಾದ ಸೆಂಟ್ರಲ್ ಸÁ್ಕ್ವ್ಯಡ್ ಮತ್ತು ಕಮ್ಯೂನಿಸ್ಟ್ ಪಕ್ಷದಿಂದ ಅವರನ್ನು ವಿಚಿತ್ರ
ಕಾರಣಗಳನ್ನು ಒಡ್ಡಿ 1955ರಲ್ಲಿ ಹೊರ ಹಾಕಲಾಯ್ತು. ಇವರ ನಾಟಕ ನಿರ್ದೇಶನದ ಕೌಶಲ ಮತ್ತು ನಾಯಕತ್ವದ
ಗುಣವನ್ನು ಪಕ್ಷದ ಕೆಲವು ಇತರ ಸದಸ್ಯರು ಸಹಿಸದಿದ್ದುದೇ ಈ ರೀತಿಯ ಪಾರ್ಟಿಯ ವರ್ತನೆಗೆ ಕಾರಣವಾಯ್ತು.
ಹೀಗಾದಾಗ ಘಟಕ್ ಇದರಿಂದ ಮನನೊಂದು ಇಪ್ತಾ ಮತ್ತು ಕಮ್ಯುನಿಸ್ಟ್ ಪಕ್ಷದಿಂದಲೂ ಹೊರಬಂದರು.
ಆದರೆ ಕಮ್ಯೂನಿಸ್ಟ್
ಪಾರ್ಟಿ ತೋರಿದ ಈ ರೀತಿಯ ವರ್ತನೆ ಹಾಗೂ ನಾಟಕದಿಂದ ಆದ ಬೇಸರವನ್ನು ಘಟಕ್ ನಂತರ ಕೋಮಲ್ ಗಾಂಧಾರ್ ಎಂಬ
ಸಿನಿಮಾದ ವಸ್ತುವನ್ನಾಗಿಸಿದರು. ಈ ಸಿನಿಮಾ ಒಂದು ರೀತಿಯಲ್ಲಿ ಅವರ ನಾಟಕ ಜೀವನ ಹಾಗೂ ಇಫ್ತಾದಲ್ಲಿನ
ಅನುಭವದÀ ಆತ್ಮಕಥನದಂತಿದೆ. ಕೋಮಲ್ ಗಾಂಧಾರ್ ಸಿನಿಮಾವು ಕೆಲವು ಯುವಕರು ಕ್ರಾಂತಿಕಾರಿ ವಿಚಾರಗಳಿಂದ,
ಸ್ವಾತಂತ್ರ್ಯ ಹೋರಾಟ ಹಾಗೂ ಸಮಾಜ ಸುಧಾರಣೆಗಾಗಿ ಸಂಘಟಿತರಾಗಿ ಹೋರಾಡುವ ಕಥಾವಸ್ತುವನ್ನು ಹೊಂದಿದೆ.
ಇಂತಹ ಸಂಘಟನೆಯು ಕ್ರಮೇಣ ದೊಡ್ಡ ಚಳುವಳಿಯಾಗಿಯೂ ಬೆಳೆಯುತ್ತದೆ. ಅದು ಕಮ್ಯುನಿಸ್ಟ್ ಪಕ್ಷದ ಸಾಂಸ್ಕøತಿಕ
ಸಂಘಟನೆಯಾದ ಇಫ್ತಾದ ನಿಯಂತ್ರಣದಲ್ಲಿದ್ದರೂ, ಅಲ್ಲಿಯ ಸದಸ್ಯರ ವೈಯುಕ್ತಿಕ ಹಿತಾಸಕ್ತಿ, ಸ್ವಾರ್ಥದ
ಕಾರಣದಿಂದ ಕ್ರಮೇಣ ಸಂಪೂರ್ಣ ನಾಶಗೊಳ್ಳುತ್ತದೆ. ಘಟಕ್ ಜರ್ಮನಿಯ ಪ್ರಸಿದ್ಧ ನಾಟಕಕಾರ ಬರ್ಟೊಲ್ವ್
ಬ್ರೆಕ್ಟ್ನ ‘ದಿ ಲೈಫ್ ಆಫ್ ಗೆಲಿಲಿಯೋ’ ಮತ್ತು ‘ಕಕೇಸಿಯನ್ ಚಾಕ್ ಸರ್ಕಲ್’ ಕೃತಿಗಳನ್ನು ಅನುವಾದಿಸಿದ್ದರು. ಅಯನಾಂತ ಹಾಗೂ ಆಕಾಶ್ಗಂಗರ್ ಎನ್ನುವ ಕಾದಂಬರಿಯನ್ನೂ ಈ
ಕಾಲಘಟ್ಟದಲ್ಲಿ ಬರೆದರು. ನಾಟಕ ಅಥವಾ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದಾಗಲೇ ಸಿನಿಮಾಗಳನ್ನು ನೋಡಿ
ಅವುಗಳ ಕುರಿತು ಘಟಕ್ ವಿಮರ್ಶೆ ಹಾಗೂ ಪ್ರಬಂಧಗಳನ್ನು ಬರೆಯುತ್ತಿದ್ದರು. ಅದೇ ಹೊತ್ತಿನಲ್ಲಿ ಅವರು
‘ಅಭಿಧಾರಾ’ ಮತ್ತು ‘ಅಭಿನಯ ದರ್ಪಣ’ ಎಂಬ ರಂಗಭೂಮಿ ಮತ್ತು ಅಭಿನಯಕ್ಕೆ ಸಂಬಂಧಿಸಿದ ಪತ್ರಿಕೆಗಳನ್ನೂ
ತಂದರು. ಹೀಗೆ ಘಟಕ್ ಯಾವುದೋ ಒಂದು ವೃತ್ತಿ, ಅಭಿರುಚಿಗಷ್ಟೇ ತನ್ನನ್ನು ಸೀಮಿತಗೊಳಿಸಿಕೊಳ್ಳದೇ ಬಹು
ಆಸಕ್ತಿಯ ಕ್ಷೇತ್ರಗಳನ್ನು ಆಗಲೇ ಹುಡುಕುತ್ತಿದ್ದರು.
04 ಘಟಕ್ರ
ಸಿನಿಮಾ ಪ್ರಪಂಚ
ಘಟಕ್ರ ಆರಂಭದ
ಸಿನಿಮಾ ಆಸಕ್ತಿಯು, ಅವರು ಭವಿಷ್ಯದಲ್ಲಿ ಜಗತ್ತಿನ ಸಿನಿಮಾಕ್ಕೆ ಅವರು ಗಣನೀಯವಾದ ಕೊಡುಗೆಯನ್ನು ನೀಡಬಹುದೆಂಬ
ಯಾವ ಊಹೆಯನ್ನೂ ನೀಡಿರಲಿಲ್ಲವಾಗಿತ್ತು. ಅವರ ಎರಡನೆಯ ಅಣ್ಣ ಸುದೀಶ್ ಘಟಕ್ ಕಲ್ಕತ್ತಾದ ಪ್ರಸಿದ್ಧ
ಸ್ಟುಡಿಯೋ ‘ನ್ಯೂ ತಿಯೇಟರ್ಸ್’ನಲ್ಲಿ ಕ್ಯಾಮೆರಾಮೆನ್ ಅಥವಾ ಸಿನಿಮಟೋಗ್ರಫರ್ ಆಗಿದ್ದರು. ‘ಸ್ಟ್ರೀಟ್ ಸಿಂಗರ್’ ಎನ್ನುವ ಸಿನಿಮಾದಲ್ಲಿ ಅಸಿಸ್ಟೆಂಟ್ ಆಗಿದ್ದ ಈತ ಋತ್ವಿಕ್ರನ್ನು
ದೇವ್ದಾಸ್ ಖ್ಯಾತಿಯ ನಿರ್ದೇಶಕ ಪ್ರಮತೇಶ್ ಬರುವಾ ಹಾಗೂ ಬಿಮಲ್ ರಾಯ್ ಅವರ ಬಳಿ ಒಯ್ದಿದ್ದರು. ಆದರೆ
ಋತ್ವಿಕ್ರಿಗೆ ಆರಂಭದಲ್ಲಿ ಸಿನಿಮಾ ಪ್ರವೇಶ ಕಷ್ಟವಾಯಿತು. ಈ ಕಾರಣಕ್ಕಾಗಿ ಅಣ್ಣ ಸುಧೀಶ್ ಘಟಕ್ರನ್ನು
ಕಾನ್ಪುರದಲ್ಲಿದ್ದ ಒಂದು ಬಟ್ಟೆ ಮಿಲ್ನಲ್ಲಿ ಕೆಲಸ ಮಾಡಲು ಕಳಿಸಿದರು. ಸಾಕಷ್ಟು ಓದು ಬರೆಯಲೂ ಕಾರಣವಾಗಿಸಿತು.
ಇದು ಅವರಿಗೆ ಬಟ್ಟೆ ಕಾರ್ಖಾನೆಯ ಕಾರ್ಮಿಕನೊಬ್ಬನ ದೈನ್ಯದ ಬದುಕಿನ ಕುರಿತು ಕಥೆಯೊಂದನ್ನು ಬರೆಯಲು
ಕಾರಣವಾಗಿಸಿತು. ಅದು ‘ಸಾನೀ ಬಾರೇರ್ ಚಿತಿ’ ಎಂಬ ಪತ್ರಿಕೆಯಲ್ಲಿ ‘ರಾಜಾ’ ಎಂಬ ಕಥೆಯಾಗಿ ಪ್ರಕಟವಾಯಿತು.
ಸ್ವಾತಂತ್ರ್ಯ ಬಂದ
ಮೇಲೆ ಸುಮಾರು 1949ರಲ್ಲಿ ಬಂಗಾಳದ ಕ್ಷಾಮವನ್ನು ಕುರಿತು ಕೆ.ಎ. ಅಬ್ಬಾಸ್ ‘ಧರತೀ ಕೆ ಲಾಲ್’ ಎಂಬ ಹೆಸರಿನ ಸಿನಿಮಾವನ್ನು ಮಾಡಿದರು. ಈ ರೀತಿಯ ವಸ್ತುಗಳನ್ನು ಆಧರಿಸಿ ಸಿನಿಮಾ ಮಾಡುವ ಒಂದು
ಚಳುವಳಿಯೇ ಆಗ ಆರಂಭವಾಯಿತು. ಘಟಕ್ ಕೂಡಾ ಇದರಿಂದ ಪ್ರೇರಿತರಾಗಿ ಇದನ್ನು ಸೇರಿಕೊಂಡರು. ಆಗಲೇ ಮೃಣಾಲ್
ಸೇನ್, ಹೃಷಿಕೇಶ್ ಮುಖರ್ಜಿ ಮತ್ತು ಉತ್ಪಲ್ ದತ್ತ್ ಕೂಡಾ ಈ ಗುಂಪಿನ ಪ್ರಮುಖರಾಗಿದ್ದರು. ಮುಖ್ಯವಾಗಿ
ಇಫ್ತಾ ಸಂಘಟನೆ ಮತ್ತು ಭಾರತೀಯ ಕಮ್ಯೂನಿಸ್ಟ್ ಪಕ್ಷದ ಸಿದ್ಧಾಂತಗಳಿಂದ ಇವರು ಪ್ರಭಾವಿತರಾಗಿದ್ದರು.
ಇದೇ ಹೊತ್ತಿಗೆ 1952ರಲ್ಲಿ ರಷ್ಯಾದ ಪ್ರಸಿದ್ಧ ಸಿನಿಮಾ ನಿರ್ದೇಶಕನಾದ ಪುಡೋವ್ಕಿನ್ ಹಾಗೂ ನಟ ಚೆರ್ಕಸೋವ್ರವರ
ನಿಯೋಗವು ಭಾರತವನ್ನು ಭೇಟಿ ಮಾಡಿತ್ತು. ಆ ಸಂದರ್ಭ ಘಟಕ್ ಅವರನ್ನು ಸಂದರ್ಶಿಸಿ ಅವರಿಂದ ಸಿನಿಮಾ ಕುರಿತಾದ
ಕೆಲವು ಪ್ರಾಥಮಿಕ ಸಂಗತಿಗಳನ್ನು ತಿಳಿದರು. ರಷ್ಯಾದ ಸಿನಿಮಾ ದಿಗ್ಗಜರುಗಳಾದ ಸರ್ಗಿ ಐಸಿನ್ಸ್ಟೀನ್,
ಪುಡೋವ್ಕಿನ್, ಸೀಗ್ಪ್ರೀಢ್ ಕ್ರೌಸರ್, ತತ್ವಜ್ಞಾನಿ ಮತ್ತು ಲೇಖಕ ಪಾಲ್ರೋತಾ, ರೋಜರ್ ಮ್ಯಾನ್ವಿಲ್
ಮುಂತಾದವರಿಂದ ಘಟಕ್ ಬಹಳ ಪ್ರೇರಣೆಯನ್ನು ಪಡೆದರು. 1952ರಲ್ಲಿ ಕಲ್ಕತ್ತಾದಲ್ಲಿ ಭಾರತೀಯ ಅಂತರಾಷ್ಟ್ರೀಯ
ಚಲನಚಿತ್ರೋತ್ಸವ ನಡೆದಾಗ ಜಗತ್ತಿನ ಬೇರೆ ಬೇರೆ ದೇಶಗಳ ಸಿನಿಮಾಗಳನ್ನು ನೋಡುವುದರ ಮೂಲಕ ಕೂಡಾ ಸ್ಫೂರ್ತಿ
ಹಾಗೂ ದೃಶ್ಯ ತರಬೇತಿಯನ್ನು ಪಡೆದರು. ಘಟಕ್ ಹೀಗೆ ಸಿನಿಮಾ ಪ್ರಪಂಚವನ್ನು ಪ್ರವೇಶಿಸಿದ್ದು ಬಂಗಾಳದ
ನಿರ್ದೇಶಕ ನಿಮಾಯ್ ಘೋಷ್ ಅವರ 1950 ಸಿನಿಮಾವಾದ ‘ಚಿನ್ನಮೂಲ್’ನಲ್ಲಿ ನಟ ಮತ್ತು ಸಹಾಯಕ ನಿರ್ದೇಶಕನಾಗಿ. ಅದಾದ ಎರಡೇ ವರ್ಷದಲ್ಲಿ ಅವರು ತಮ್ಮ ಮೊದಲ ಸಿನಿಮಾವಾದ
ನಾಗರಿಕ್ ಅನ್ನು ನಿರ್ದೇಶಿಸಿದರು. ಅವರ ಆರಂಭದ ಸಿನಿಮಾಗಳು ರಂಗ ಭೂಮಿಯ ಶೈಲಿ ಮತ್ತು ತಂತ್ರದಿಂದ
ಸ್ವಲ್ಪ ಮಟ್ಟಿನ ಪ್ರಭಾವಕ್ಕೆ ಒಳಗಾಗಿದ್ದವು. ಕ್ರಮೇಣ ಅವುಗಳಿಂದ ಘಟಕ್ ಬಿಡಿಸಿಕೊಂಡರು.
ಘಟಕ್ ತಮ್ಮ ಮೊದಲ
ಪ್ರಯತ್ನ ಎಂಬಂತೆ ತೆಲಂಗಾಣದಲ್ಲಿನ ರೈತರ ಹೋರಾಟ ಹಾಗೂ ಇಫ್ತಾದಲ್ಲಿ ಅನುಭವಿಸಿದ ಕಹಿಘಟನೆ ನೋವನ್ನು
ಆಧರಿಸಿ 1952ರಲ್ಲಿ ‘ನಾಗರಿಕ್’ ಸಿನಿಮಾವನ್ನು ನಿರ್ದೇಶಿಸಿದರು. ಆದರೆ ಈ ಸಿನಿಮಾ ಆಗ ಬಿಡುಗಡೆಯಾಗದೇ,
ಘಟಕ್ ಅವರ ಸಾವಿನ ನಂತರ 1977ರಲ್ಲಿ 24 ವರ್ಷಗಳ ನಂತರ ಬಿಡುಗಡೆಯಾಯಿತು. ಇದು ಆಗ ಭಾರತದ ಸಿನಿಮಾ
ಚರಿತ್ರೆಯ ಮೇಲೆ ಸಾಕಷ್ಟು ಪ್ರಭಾವವನ್ನು ಬೀರಿತು. 1955ರಲ್ಲಿ ಘಟಕ್ ಬಿಹಾರದ ಒರವಾನ್ ಬುಡಕಟ್ಟು
ಜನರ ಮೇಲೆ ‘ಒರವಾನ್’ಎಂಬ ಹೆಸರಿನ ಡಾಕ್ಯುಮೆಂಟರಿಯನ್ನು ಮಾಡಿದರು, ಬಿಹಾರ ಸರ್ಕಾರ ಮತ್ತು
ಅರೋರಾ ಫಿಲ್ಮ್ ಕಂಪೆನಿಯು ಇದನ್ನು ಉತ್ಪಾದಿಸಿತು.
ಅದೇ ವರ್ಷ ಘಟಕ್
ಮುಂಬೈಗೆ ವಲಸೆಹೋಗಿ ಅಲ್ಲಿನ ಫಿಲ್ಮಿಸ್ತಾನ್ ಎಂಬ ಕಂಪೆನಿಗೆ ಸ್ಕ್ರಿಪ್ಟ್ರೈಟರ್ (ಬರಹಗಾರ) ಕೆಲಸಕ್ಕೆ
ಸೇರಿಕೊಂಡರು. ಅಲ್ಲಿ ಬರೆದ ‘ಮಧುಮತಿ’ ಎಂಬ ಕಥೆಯನ್ನು ನಿರ್ದೇಶಕ ಬಿಮಲ್ರಾಯ್ ಅವರು ‘ಮಧುಮತಿ’ ಎಂಬ ಹೆಸರಿನಲ್ಲಿ ಸಿನಿಮಾ ಮಾಡಿದರು. ಘಟಕ್ ಅವರ ಮೂರು ಸಣ್ಣ ಕಥೆಗಳಿಂದ ಕೂಡಿದ್ದ ‘ಮುಸಾಫಿರ್’ ಎಂಬ ಕಥೆಯನ್ನು ಹೃಷಿಕೇಶ್ ಮುಖರ್ಜಿಯವರು ‘ಮುಸಾಫಿರ್’ ಎಂಬ ಹೆಸರಿನಲ್ಲಿ ಸಿನಿಮಾ ಮಾಡಿದರು. ಅದು ಮುಖರ್ಜಿಯವರ ಮೊದಲ ಸಿನಿಮಾವಾಗಿತ್ತು. ಮಧುಮತಿ
ಸಿನಿಮಾದಿಂದ ಬಿಮಲ್ರಾಯ್ ಹಣ ಮತ್ತು ಖ್ಯಾತಿ ಎರಡನ್ನು ಪಡೆದರೂ, ಘಟಕ್ ಮಾತ್ರ ತೃಪ್ತರಾಗದೇ ಮುಂಬೈ
ತೊರೆದು ಕಲ್ಕತ್ತಾಕ್ಕೆ ಬಂದರು.
ನಾನು ಸಿನಿಮಾ ಸೇರಿದ್ದು
ಹಣ ಮಾಡಲು ಅಲ್ಲ ಎಂಬುದು ರಿತ್ವಿಕ್ರ ಪ್ರಮುಖ ಇಂಗಿತವಾಗಿತ್ತು. ನಾನು ಮನರಂಜನೆಗಾಗಿ ಸಿನಿಮಾ ಮಾಡುವುದಿಲ್ಲ,
ಬದಲು ನನ್ನ ನೋವನ್ನು ಹೊರಹಾಕಲು ಮತ್ತು ನನ್ನ ಜನರ ದು:ಖವನ್ನು ತೋರಲು, ಹೊರಹಾಕಲು ಸಿನಿಮಾ ಮಾಡುತ್ತೇನೆ
ಎಂದು ಅವರು ಹೇಳುತ್ತಿದ್ದರು. ಜಗತ್ತು, ನನ್ನ ದೇಶ, ಸುತ್ತಲಿನ ಸಮಾಜ, ಅಲ್ಲಿನ ಜನರ ಸ್ಥಿತಿಗತಿಯ
ಬಗೆಗಷ್ಟೇ ನನ್ನ ಗಮನವೆಂದು ಘಟಕ್ ಹೇಳುತ್ತಿದ್ದರು. ಜನರಿಗಾಗಿ ಸಿನಿಮಾ ನಿರ್ಮಾಣ ಮಾಡಬೇಕೆಂಬ ಇರಾದೆ
ಅವರಿಗಿತ್ತು. ನಿರ್ದೇಶಕನೊಬ್ಬ ಸಿನಿಮಾ ಮಾಡಿದಾಗ, ಅದನ್ನು ನೋಡುವ ಪ್ರೇಕ್ಷಕನ ಬಳಿ ಆತ ವಿಚಾರವೊಂದನ್ನು
ಎಸೆಯುತ್ತಾನೆ, ಅಂತಹ ವಿಚಾರವನ್ನು ಪೂರೈಸುವ ಜವಾಬ್ದಾರಿ ಪ್ರೇಕ್ಷಕನದಾಗಿರುತ್ತದೆ, ಆಗ ಮಾತ್ರ ಒಂದು
ಸಿನಿಮಾ ಪರಿಪೂರ್ಣವಾಗುತ್ತದೆ ಎಂದು ಅವರು ನಂಬಿದ್ದರು. ಸಿನಿಮಾ ನೋಡುವುದೆಂದರೆ ಒಂದು ಪೂಜೆ, ಕ್ರಿಯಾವಿಧಿ
ಅಥವಾ ಯಜ್ಞವಿದ್ದ ಹಾಗೆ. ಸಿನಿಮಾ ತಿಯೇಟರ್ನಲ್ಲಿ ಸಿನಿಮಾ ಆರಂಭವಾಗುವ ಮುಂಚೆ ಲೈಟ್ ಆಫ್ ಆಗುತ್ತದೆ,
ಆಗ ಕತ್ತಲೆ ಎರಗಿ ಇಡೀ ತಿಯೇಟರಿನಲ್ಲಿರುವ ಪ್ರೇಕ್ಷಕರು ಒಂದಾಗಿ ಬದಲಾಗುತ್ತಾರೆ. ಅದೊಂದು ರೀತಿಯಲ್ಲಿ
ಎಲ್ಲರೂ ಒಂದಾಗಿ ಸಮುದಾಯ, ಸಮಷ್ಠಿಯನ್ನು ಅನುಭವಿಸಿದ ಹಾಗೆ. ಇದನ್ನು ಚರ್ಚ್, ಮಂದಿರ ಮತ್ತು ಮಸೀದಿಯಲ್ಲಿ
ಜರಗುವ ಸಾಮುದಾಯಿಕ ಕ್ರಿಯೆಗೆ ಹೋಲಿಸಬಹುದೆಂದೂ ಋತ್ವಿಕ್ ಹೇಳುತ್ತಿದ್ದರು. ಸಿನಿಮಾ ಮನರಂಜನೆಯ ಜತೆಗೆ
ಶಿಕ್ಷಣದ ಉದ್ದೇಶದಿಂದ ಕೂಡಾ ಸೃಷ್ಟಿಯಾಗಬೇಕು ಎನ್ನುತ್ತಿದ್ದರು. ಈ ಕಾರಣದಿಂದ ಘಟಕ್ರ ಸಿನಿಮಾಗಳು
ಆಕಸ್ಮಿಕಗಳಿಂದ, ಪುರಾಣದಿಂದ ಆಯ್ದ ರೂಪಕಗಳಿಂದ ಹಾಗೂ ಮೆಲೋಡ್ರಾಮಗಳಿಂದ ರಚಿತವಾಗುತ್ತಿತ್ತು. ಮೆಲೋಡ್ರಾಮಾಗಳೆಂದರೆ
ಸಂಗೀತ, ಭಾವ ಪ್ರಧಾನವಾದ ಸಿನಿಮಾಗಳ ಬಗೆಯಾಗಿದೆ. ಇಂತಹ ಪುರಾಣ ರೂಪಕಗಳನ್ನು ಹಾಗೂ ಮೆಲೋಡ್ರಾಮಾಗಳನ್ನು
ಬಳಸುವಲ್ಲಿ ನನಗೆ ಯಾವುದೇ ಹಿಂಜರಿಕೆಯಿಲ್ಲ, ಮೆಲೋಡ್ರಾಮಾವಂತೂ ನನ್ನ ಜನ್ಮಜಾತ ಹಕ್ಕು ಎಂದು ಅವರು
ಘೋಷಿಸಿದ್ದರು. ಅವರು ನದಿಗಳ ಬಗೆಗೆ ವಿಶೇಷವಾಗಿ ಪದ್ಮಾ, ಗಂಗಾ, ಸುಬರ್ಣರೇಖಾ ಮತ್ತು ತಿತಾಶ್ ಬಗೆಗೆ
ತೋರಿದ ಆಸಕ್ತಿ ಕೂಡಾ ನದಿಯ ರೀತಿಯಲ್ಲಿ ಎಲ್ಲೆ, ಕಾಲ ಸಾವನ್ನು ಮೀರಿ ಹರಿಯುವ ರೂಪಕ ಹಾಗೂ ಅರ್ಥಗಳಿಗೆ
ಸಾಕ್ಷಿಯಾಗಿದ್ದುವು.
ಕಲೆಯ ಕ್ಷೇತ್ರದಲ್ಲಿ
ಕ್ರಾಂತಿಯು ಒಮ್ಮಿಂದೊಮ್ಮೆಲೇ ಸಂಭವಿಸುವುದಿಲ್ಲ, ಬದಲು ಒಂದು ಕಲೆಯ ಪ್ರಕಾರವು ಇನ್ನೊಂದು ಕಲೆಯ ಜತೆ
ಒಂದು ನೆಲೆಯ ಸಂಪರ್ಕ, ಸಮನ್ವಯವನ್ನು ಸಾಧಿಸುವುದರ ಮೂಲಕ ಉಂಟಾಗುತ್ತದೆ. ಯಾವುದೇ ಒಂದು ಪ್ರಕಾರವು
ತನಗಿಂತ ಹಳೆಯ ಕಲೆಯ ಪ್ರಕಾರಗಳಿಂದ ಸಾಕಷ್ಟು ದೇಣಿಗೆ, ಕೊಡುಕೊಳುಗೆಂiÀiನ್ನು ಪಡೆದೇ ಬೆಳೆಯುತ್ತದೆ.
ಇದು ಪ್ರತಿಯೊಂದು ಕಲೆಯ ತಾನು ತನ್ನನ್ನು ಬೆಳೆಸಿಕೊಳ್ಳುವ ಸ್ವರೂಪವನ್ನು ತೋರಿಸುತ್ತದೆ. ರವೀಂದ್ರನಾಥ
ಠಾಗೋರ್ರಂತಹ ಮಹಾಕವಿಯನ್ನೂ ಕೂಡಾ ಜನ ಊಳಿಗಮಾನ್ಯ ಮನೋಸ್ಥಿಯ, ಅರೆ ಬ್ರಿಟೀಷ್ ಮಾನಸಿಕತೆಯ ಹಾಗೂ
ಅತಿಧಾರ್ಮಿಕ (ಅನುಭಾವೀ) ನೆಲೆಯ ಕವಿಯೆಂದಿದ್ದರು. ಯಾವ ಕಲಾ ಪ್ರಕಾರವೂ ಸಂಪೂರ್ಣ ಪರಿಶುದ್ಧವಲ್ಲ.
ಟೀಕೆಗೆ ಹೊರತಾದುದೂ ಅಲ್ಲ. ಆದರೆ ಇದೇ ಹೊತ್ತಿಗೆ ಸಿನಿಮಾದಂತಹ ಕಲಾ ಮಾಧ್ಯಮ ಬೇರೆಲ್ಲಾ ಕಲಾ ಪ್ರಕಾರದೊಂದಿಗೆ
ಸಹವಾಸ ಮಾಡಿ ಒಂದು ಕ್ರಾಂತಿಕಾರಕ ಕಲಾ ಸ್ವರೂಪವನ್ನು ಪಡೆದುಕೊಂಡಿದೆ’ ಎಂದು ಘಟಕ್ ಆಗಾಗ ಹೇಳುತ್ತಿದ್ದರು.
ಘಟಕ್ ಒಬ್ಬ ಹುಟ್ಟಾ
ಬಂಡುಕೋರ, ಪ್ರತಿಭಟನೆಯ ಸ್ವಭಾವವನ್ನು ಹೊಂದಿದ್ದ ವ್ಯಕ್ತಿ. ಆ ಕಾಲದಲ್ಲಿದ್ದ ಕಲೆ ಮತ್ತು ಸಂಸ್ಕøತಿಗೆ
ಸಂಬಂಧಿಸಿದ ಅನೇಕ ಸಾಂಪ್ರದಾಯಿಕ ರೂಢ ಮೂಲ ಸಂಗತಿಗಳನ್ನು ಅವರು ಪ್ರಶ್ನಿಸಿದರು. ಮುಖ್ಯವಾಹಿನಿ ಕಮರ್ಶಿಯಲ್
ಸಿನಿಮಾಗಳನ್ನು ಅವರು ಸೃಜನಶೀಲತೆ, ಹೊಸತನವನ್ನು ಸೃಷ್ಟಿಸದಿರುವಿಕೆ ಮತ್ತು ಸಂಶೋಧನೆಗೆ ಅವಕಾಶ ಕೊಡದಿರುವ
ಕಾರಣದಿಂದ ನಿರಾಕರಿಸಿ, ಟೀಕಿಸಿದರು. ಅವರ ಸಿನಿಮಾ ಪ್ರಯೋಗಗಳು ಅವರಿಗೆ ಕೆಲವೊಮ್ಮೆ ಖುಷಿಯನ್ನೂ ಕೆಲವೊಮ್ಮೆ
ದು:ಖವನ್ನೂ ಕೊಟ್ಟಿದುವು. ಭಾರತದ ಸಿನಿಮಾಗಳು ವೈವಿಧ್ಯದ ಸಂಸ್ಕøತಿಯನ್ನು ಪ್ರಕಟಿಸದಿದ್ದರೆ ಅವುಗಳು
ಅರ್ಥಹೀನವೆಂದೂ ನಂಬಿದ್ದರು.
ಆಜಾಂತ್ರಿಕ್ (1958)
ಬಿಮಲ್ ಬಂಗಾಳದ
ಒಂದು ಸಣ್ಣ ಪಟ್ಟಣದಲ್ಲಿ ಕ್ಯಾಕ್ಸಿ ಡ್ರೈವರ್ ಆಗಿರುತ್ತಾನೆ. ಆತ ಒಬ್ಬಂಟಿ. ಆತನ ಕಾರ್ ಅವನಿಗೆ ಸರ್ವಸ್ವ.
ಅದು 1920ರ ಮಾಡೆಲ್ ನ ಶೆವರ್ಲೆ ಜಲೋಪಿ ಕಾರ್. ಬಿಮಲ್ ಅದನ್ನು ಪ್ರೀತಿಯಿಂದ ಜಗದ್ದಲ್ ಎಂದು ಕರೆಯುತ್ತಾನೆ.
ಜಗದ್ದಲ್ ಸ್ವಲ್ಪ ಹಳೆಯದಾದರೂ ಬಿಮಲ್ ನ ಒಬ್ಬ ಒಳ್ಳೆಯ ಫ್ರೆಂಡ್. ಜನ ಈತನ ಹಳೆ ಕಾರನ್ನು ಬಹಳ ಟೀಕಿಸಿದರೂ
ಅತನಿಗೆ ಅದರ ಮೇಲೆ ವಿಶೇಷ ಮೋಹ. ಪ್ರತೀ ಪ್ರಯಾಣದಲ್ಲೂ ಇದರಲ್ಲಿ ಪ್ರಯಾಣಿಸುವವರಿಗೆ ಇದು ಎಲ್ಲಿ ಮುರಿದು
ಹೋಗುತ್ತದೋ ಎಂಬ ಭಯ. ಆದರೆ ಜಗದ್ದಲ್ ಮಾತ್ರ ಯಶಸ್ವಿಯಾಗಿ ಎಲ್ಲಾ ಯಾತ್ರೆಗಳನ್ನು ಸುಸೂತ್ರವಾಗಿ ಮುಗಿಸುತ್ತದೆ.
ಈ ನಡುವೆ ಪ್ರತೀ ಪ್ರಯಾಣದಲ್ಲೂ ಕೂಡಾ ಆತ ಕಾರಿನೊಂದಿಗೆ ಅದರದೇ ಭಾಷೆಯಲ್ಲಿ ಮಾತನಾಡುತ್ತಾನೆ. ಅದೂ
ಕೂಡಾ ಪ್ರತಿಕ್ರಿಯೆ ನೀಡುತ್ತದೆ ಎನ್ನುವ ರೀತಿಯಲ್ಲಿ ಬಿಮಲ್ ಭಾವಿಸುತ್ತಾನೆ. ಕೊನೆಗೂ ಕಾರಿಗೆ ವಯಸ್ಸಾಗಿ
ಅದನ್ನು ಗುಜರಿಗೆ ಹಾಕಬೇಕಾಗಿ ಬಂದಾಗ ಬಿಮಲ್ ಸಾಕಷ್ಟು ನೋವನ್ನು ಅನುಭವಿಸುತ್ತಾನೆ ಹಾಗೂ ಮಾನಸಿಕವಾಗಿ
ಕ್ಲೇಷಕ್ಕೆ ಒಳಗಾಗುತ್ತಾನೆ.
1958ರ ಅಜಾಂತ್ರಿಕ್
ಸಿನಿಮಾ ಬಂಗಾಳೀ ಸಾಹಿತಿ ಸುಬೋಧ್ ಘೋಷ್ ಅವರ ಕಥೆಯನ್ನು ಆಧರಿಸಿ ನಿರ್ಮಾಣವಾಯಿತು. ಜಾಗತಿಕವಾಗಿ ಬಹಳ
ಜನಪ್ರಿಯತೆಯನ್ನೂ ಈ ಸಿನಿಮಾ ಪಡೆಯಿತು. ಫ್ರಾನ್ಸ್ ದೇಶದ ಪ್ರಸಿದ್ಧ ಸಿನಿಮಾ ವಿಮರ್ಶಕ ಜಾರ್ಜ್ ಶಾಡೋಲ್
ಈ ಸಿನಿಮಾ ಕುರಿತು, ‘ನನಗೆ ಅಜಾಂತ್ರಿಕ್’ ಎಂಬ ಶಬ್ದದ ಅರ್ಥ ಗೊತ್ತಿಲ್ಲ, ಸಿನಿಮಾ ಭಾಷೆಯೂ ಗೊತ್ತಿಲ್ಲ, ಆದರೆ
ನಾನು ಮಾತ್ರ ಒಟ್ಟಾರೆ ಸಿನಿಮಾ ಮುಗಿದ ಮೇಲೆ ಮೂಕವಿಸ್ಮಿತನಾದೆ’ ಎಂದಿದ್ದರು. 1959ರಲ್ಲಿ ಇಟೆಲಿಯಲ್ಲಿ ನಡೆಯುವ ಪ್ರಸಿದ್ಧ ವೆನಿಸ್ ಚಿತ್ರೋತ್ಸವಕ್ಕೆ ಈ ಸಿನಿಮಾ
ಆಯ್ಕೆಯಾಗಿತ್ತು. ಜಗತ್ತಿನ ಪ್ರಸಿದ್ಧ ಸಿನಿಮಾ ಸಂಗ್ರಹಕಾರ ಫ್ರಾನ್ಸಿನ ಹೆನ್ರಿ ಲಂಗಲೋ ಕೂಡಾ ಇದರ
ಒಂದು ಪ್ರತಿ ಅವನ ಹತ್ತಿರ, ವಿಶೇಷವಾಗಿ ಅವನ ಫ್ರೆಂಛ್ ಫಿಲ್ಮ್ ಆರ್ಖೈವ್ಸ್ನಲ್ಲಿ ಇರಬೇಕೆಂದು ಬಯಸಿದ್ದನಂತೆ.
ಅಜಾಂತ್ರಿಕ್ ಸಿನಿಮಾ ಜಗತ್ತಿನಲ್ಲಿ ಒಂದು ಮಾಸ್ಟರ್ಪೀಸ್. ಮನುಷ್ಯ ಮತ್ತು ಯಂತ್ರದ ನಡುವಿನ ಗಾಢ
ಸಂಬಂಧದ ಸಾಧ್ಯತೆಯನ್ನು ಅದು ನಮಗೆ ತಿಳಿಸುತ್ತದೆ. ಯಂತ್ರದ ಜತೆ ಮನುಷ್ಯನೋರ್ವ ಸಂವಹನ ಸಾಧಿಸಬಹುದು,
ಮಾತನಾಡಬಹುದು, ತನ್ನ ಭಾವನೆಗಳನ್ನು ಹಂಚಿಕೊಳ್ಳಲು ಅಸಾಧ್ಯ ಎಂಬುದನ್ನು ಅದು ಮೀರಿ ಸಾಧಿಸಿತು. ಯಂತ್ರರಾಕ್ಷಸ
ಎನ್ನುವ ಕಲ್ಪನೆಯನ್ನೂ ನಿವಾರಿಸಿತು. ಜೀವ ನಿರ್ಜೀವ ಸಂಗತಿಗಳ ಸಂಯೋಗ, ಸಮನ್ವಯವು ಸಾಧ್ಯ ಎಂಬಂತೆ
ಮೂಡಿತು. ಜಗದ್ದಲ್ ಎಂಬ ಯಂತ್ರ ಅಥವಾ ಷೆವರ್ಲೇ ಕಾರನ್ನು ಅದು ಮಾನವೀಯಗೊಳಿಸಿತು.
ತಿತಾಶ್ ಏಕ್ತಿ ನಾದಿರ್ ನಾಮ್ (1973)
ಸುಬರ್ಣರೇಖಾದ ನಂತರ
ಘಟಕ್ ಬಹುತೇಕ ಸಿನಿಮಾ ನಿರ್ಮಾಣವನ್ನು ಕೈ ಬಿಟ್ಟರು. ತೀರಾ ಕುಡಿತವನ್ನು ರೂಢಿಸಿಕೊಂಡುಬಿಟ್ಟರು.
ಹಿಂದೊಮ್ಮೆ ಘಟಕ್ ಅವರೇ ಕುಡಿತದ ವಿರುಧ್ಧ ಕಲ್ಕತ್ತಾದಲ್ಲಿ ಸಮರ ಸಾರಿದ್ದರು. ಒಂದು ರೀತಿಯ ಮಾನಸಿಕ
ಖಿನ್ನತೆ ಮತ್ತು ಸ್ಕಿಝೋಪ್ರೇನಿಯಾದಿಂದ ಅವರು ಬಳಲಿದರು. ಘಟಕ್ ಪುನ: ಸಿನಿಮಾ ನಿರ್ದೇಶನ ಮಾಡುತ್ತಾರೆಂಬ
ಬಗೆಗೆ ಯಾರಿಗೂ ಕೂಡಾ ವಿಶ್ವಾಸವಿರಲಿಲ್ಲವಾಗಿತ್ತು. ಆದರೆ ಒಬ್ಬ ಬಾಂಗ್ಲಾದೇಶದ ಯುವಕ ಫೈನಾನ್ಶಿಯರ್
ಹಬೀಬುರ್ ರೆಹಮಾನ್ ಖಾನ್ಗೆ ಘಟಕ್ ಬಗ್ಗೆ ಸಾಕಷ್ಟು ವಿಶ್ವಾಸವಿರಿಸಿದ್ದ. ಆತ ಘಟಕ್ಗೆ ಒಂದು ಪೂರ್ಣ
ಪ್ರಮಾಣದ ಫೀಛರ್ ಫಿಲ್ಮ್ ಅನ್ನು ನಿರ್ದೇಶಿಸಲು ಹಣ ಹೊಂದಿಸುತ್ತೇನೆಂದ. ಬಾಂಗ್ಲಾದೇಶದ ತಿತಾಶ್ ನದಿಯ
ತೀರದ ಮೀನುಗಾರರ ಕಷ್ಟ ಮತ್ತು ದುರಂತ ದೈನ್ಯದ ಬದುಕಿನ ಕಥೆಯ ಕಾದಂಬರಿಯನ್ನು ಘಟಕ್ ಸಿನಿಮಾ ಮಾಡಲು
ತೀರ್ಮಾನಿಸಿದರು. ಅದ್ವೈತ ಮಲ್ಲಬರ್ಮನ್ ಅವರ ಕಾದಂಬರಿ ಆಧಾರಿತ ಅಂತಹ ಸಿನಿಮಾ ‘ತಿತಾಶ್ ಏಕ್ತಿ ನಾದಿರ್
ನಾಮ್’. ಸುಮಾರು 1947ರಲ್ಲಿ ಪೂರ್ವ ಬಂಗಾಳವನ್ನು ಬಿಟ್ಟು ಕಲ್ಕತ್ತಾಗೆ ಬರುವ ಸಂದರ್ಭದಲ್ಲಿಯೇ ಘಟಕ್
ಆ ನೆಲದ ಕುರಿತು ಸಿನಿಮಾ ಮಾಡುವ ಇರಾದೆಯನ್ನು ವ್ಯಕ್ತಪಡಿಸಿದ್ದರು. ಈಗಾಗಲೇ ಮೂರು-ನಾಲ್ಕು ಫೀಛರ್
ಫಿಲ್ಮ್ಗಳನ್ನು ಅರ್ಧದಲ್ಲಿಯೇ ಕೈಬಿಟ್ಟಿದ್ದ ಘಟಕ್, ಈ ಸಿನಿಮಾವನ್ನು ಕೈಬಿಡಬಹುದೆಂದು ಅನೇಕರು ಭಾವಿಸಿದ್ದರು.
1973ರಲ್ಲಿ ಘಟಕ್ ‘ತಿತಾಶ್ ಏಕ್ತಿ ನಾದಿರ್ ನಾಮ್’ ಸಿನಿಮಾವನ್ನು ಪೂರ್ಣಗೊಳಿಸಿದರು.
ಕಿಶೋರ್ ಒಬ್ಬ ಮೀನುಗಾರ
ಯುವಕ. ಆತ ತನ್ನ ಪಕ್ಕದ ಹಳ್ಳಿಗೆ ಹೋಗಿದ್ದಾಗ ಅಲ್ಲಿನ ಹುಡುಗಿಯೊಬ್ಬಳನ್ನು ನೋಡಿ ಮದುವೆಯಾಗುತ್ತಾನೆ.
ಆದರೆ ಮದುವೆಯ ದಿನದ ರಾತ್ರ್ರಿಯೇ ಆಕೆಯನ್ನು ಯಾರೋ ಕಿಡಿಗೇಡಿಗಳು ಅಪಹರಿಸುತ್ತಾರೆ. ಅಂದಿನಿಂದ ಕಿಶೋರನ
ಸ್ಥಿತಿಯು ಹುಚ್ಚನಂತಾಗುತ್ತದೆ. ಆದರೆ ಅಪಹರಣವಾದ ರಾತ್ರಿಯೇ ಕಿಶೋರನ ಮಡದಿಯು ಕಿಡಿಗೇಡಿಗಳ ಕೈಯಿಂದ
ತಪ್ಪಿಸಿಕೊಂಡು ನದಿಗೆ ಹಾರುತ್ತಾಳೆ. ಬೇರೊಂದು ಹಳ್ಳಿಯವರು ಅವಳನ್ನು ರಕ್ಷಿಸುತ್ತಾರೆ. ಆದರೆ ಅವಳಿಗೆ
ಕಿಶೋರನ ಬಗೆಗೆ ಏನೂ ಗೊತ್ತಿರದೆ ಆತನ ಹಳ್ಳಿಯ ಹೆಸರು ಮಾತ್ರ ಗೊತ್ತಿರುತ್ತದೆ. ಹತ್ತು ವರ್ಷಗಳ ನಂತರ
ಆಕೆಯು ತನ್ನ ಮಗುವಿನೊಂದಿಗೆ ಕಿಶೋರನ ಹಳ್ಳಿಗೆ ಹೋಗುತ್ತಾಳೆ. ಹಳ್ಳಿಯವರು ಆಕೆಯನ್ನು ತಿರಸ್ಕಾರದಿಂದ
ನೋಡಿದಾಗ ಬಸಂತಿ ಎನ್ನುವ ವಿಧವೆ ಅವಳನ್ನು ಮತ್ತು ಆಕೆಯ ಮಗುವನ್ನು ಆರೈಕೆ ಮಾಡುತ್ತಾಳೆ. ಕೊನಗೆ ಆಕೆಗೆ
ಕಿಶೋರ್ ಮತ್ತು ಬಸಂತಿ ಇಬ್ಬರೂ ಕೂಡಾ ಬಾಲ್ಯಕಾಲದಿಂದ ಪ್ರೇಮಿಗಳೆಂದು ತಿಳಿಯುತ್ತದೆ.
ಅದು ಬಾಂಗ್ಲಾದೇಶದಲ್ಲಿ
ಆಗ ಬಿಡುಗಡೆಯನ್ನು ಹೊಂದಿತು. ಅನೇಕ ಬಾಂಗ್ಲಾದೇಶದ ಕೆಲವು ವಿಮರ್ಶಕರು ಈ ಸಿನಿಮಾವನ್ನು ಮೆಚ್ಚದಿದ್ದರೂ
ಕೂಡಾ ಜಾಗತಿಕ ಸಿನಿಮಾ, ಅಲ್ಲಿನ ಪ್ರೇಕ್ಷಕರು ಹಾಗೂ ವಿಮರ್ಶಕರು ಮತ್ತು ನಿರ್ದೇಶಕರು ಇದನ್ನು ಬಹುವಾಗಿ
ಮೆಚ್ಚಿಕೊಂಡರು. ಅಮೇರಿಕಾದ ಮಾರ್ಟಿನ್ ಸ್ಕೋರ್ಸೀಸಿಯಂತಹ ನಿರ್ದೇಶಕರು ಈ ಸಿನಿಮಾವನ್ನು ಒಂದು ಮಾದರಿಯೆಂದು
ತಿಳಿದರು. ತಮ್ಮ ವಿಶ್ವ ಸಿನಿಮಾ ಫೌಂಡೇಶನ್ ಮೂಲಕ ಇದನ್ನು ಪುನರ್ಸಂಸ್ಕರಿಸಿ ಅಮೇರಿಕಾದ ಕ್ರೈಟೀರಿಯಾ
ಕಲೆಕ್ಷನ್ ಕಂಪೆನಿಯ ಮೂಲಕ ಬಿಡುಗಡೆಗೊಳಿಸಿದರು. ಬಹುಶ: ಘಟಕ್ ಅವರ ಅಷ್ಟು ಸಿನಿಮಾಗಳ ಪೈಕಿ ಅತ್ಯಂತ
ಸಂಕೀರ್ಣವಾದ ಸಿನಿಮಾವೆಂದರೆ ತಿತಾಶ್ ಏಕ್ತಿ ನಾದಿರ್ ನಾಮ್. ಅತಿ ಕುಡಿತ ಮತ್ತು ಖಿನ್ನತೆಯ ನಡುವೆಯೂ
ಕೂಡಾ ಘಟಕ್ ಸಾಧಿಸಿದ ಮಹಾನ್ ಸಾಧನೆಯದು ಇದನ್ನು ತಿಳಿಯಬಹುದಾಗಿದೆ. ಈ ಸಿನಿಮಾಕ್ಕೆ ಬಾಂಗ್ಲಾದೇಶದ
ಸಿನಿ ಜರ್ನಲಿಸ್ಟ್ಸ್ ಅಸೋಸಿಯೇಶನ್ ಸಂಸ್ಥೆಯು ಶ್ರೇಷ್ಠ ನಿರ್ದೇಶಕ ಪ್ರಶಸ್ತಿಯನ್ನೂ ನೀಡಿತು.
ಜುಕ್ತಿ ಟಕ್ಕೋ, ಓರ್ ಗಪ್ಪೋ (1974)
(ಕಥೆ)‘ ‘ಜುಕ್ತಿ
ಟಕ್ಕೋ, ಓರ್ ಗಪ್ಪೋ’ ಒಂದು ವಿಫಲ ಜೀವನದ ಕಥೆಯನ್ನು ಕುರಿತಾದಂತಹ ಸಿನಿಮಾ. ತಮ್ಮ ಈ ಕೊನೆಯ
ಸಿನಿಮಾವನ್ನು 1974ರಲ್ಲಿ ಘಟಕ್ ಪೂರೈಸಿದರು. ಆಗ ಅವರು ಬಹುತೇಕ ತಮ್ಮ ಸಿನಿಮಾ ಜೀವನ, ಜೀವನ ಮತ್ತು
ಆರೋಗ್ಯದ ಕೊನೆಯ ಹಂತದಲ್ಲಿದ್ದರು. ವಿಪರೀತ ಕುಡಿತವನ್ನು ಘಟಕ್ ಈ ಹೊತ್ತಿನಲ್ಲಿ ಆರಂಭಿಸಿದ್ದರು.
ಆಗ ತಾನೇ ಸ್ವತಂತ್ರಗೊಂಡ ಭಾರತದಲ್ಲಿ ಮತ್ತು ಬಂಗಾಳ ರಾಜ್ಯದಲ್ಲಿ ಭೃಷ್ಟಾಚಾರ, ಸ್ವಜನ ಪಕ್ಷಪಾತ ತಲೆಯೆತ್ತಿತ್ತು.
ಆ ಸಂದರ್ಭದಲ್ಲಿ ರಾಜಕಾರಣಿಗಳಿಂದ ರಾಜಕೀಯ ಲಾಭದ ಲೆಕ್ಕಾಚಾರ ಆರಂಭವಾಗಿತ್ತು. ಆಡಳಿತ ವ್ಯವಸ್ಥೆಯು
ಹದಗೆಟ್ಟಿತ್ತು. ಕ್ರಾಂತಿಕಾರೀ ವಿಚಾರ, ಚಳುವಳಿ ಮತ್ತು ಹೋರಾಟ (ಆ್ಯಕ್ಟಿವಿಸಮ್) ಮಂದವಾಗಿತ್ತು.
ಅಂತಹ ಸ್ಥಿತಿಗೆ ಒಬ್ಬ ನಿರ್ದೇಶಕ ಪ್ರತಿಕ್ರಿಯಿಸುವ ರೂಪದಲ್ಲಿ ಘಟಕ್ ಈ ಸಿನಿಮಾವನ್ನು ನಿರ್ದೇಶಿಸಿದರು.
ಅತ್ಯಂತ ಕ್ರಾಂತಿಕಾರಕವಾಗಿ ಮನುಷ್ಯನ ಘನತೆಯ ಕುರಿತು ಈ ಚಿತ್ರ ಮಾತನಾಡುತ್ತದೆ. ಆದಾಗ್ಯೂ ಈ ಸಿನಿಮಾದ
ಒಂದು ಹಾಡಿನಲ್ಲಿ, ‘ಯಾವ ನಿರ್ದೇಶಕನೂ ಹಾಗೂ ಆತನ ಸಿನಿಮಾ ಸಮಾಜದಲ್ಲಿ ಬದಲಾವಣೆಯನ್ನು ತರಲು ಸಾಧ್ಯವಿಲ್ಲ,
ಬದಲಾವಣೆಯನ್ನು ಜನರೇ ತರಬೇಕು. ಅವರು ತುಂಬಾ ಮುಖ್ಯರು. ನಿರ್ದೇಶಕ ಅವರು ತರುವ ಬದಲಾವಣೆಯನ್ನಷ್ಟೇ
ದಾಖಲಿಸಬಲ್ಲ’ ಎಂದರು. 1974ರಲ್ಲಿ ಭಾರತ ಸರ್ಕಾರದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಶ್ರೇಷ್ಠ ಚಿತ್ರಕಥೆಯ
ವಿಭಾಗದಲ್ಲಿ ಗೆದ್ದು ರಜತಕಮಲ ಅಥವಾ ರಾಷ್ಟ್ರಪತಿಗಳ ಬೆಳ್ಳಿ ಪದಕವನ್ನು ಪಡೆಯಿತು.
ನಿರಾಶ್ರಿತರು, ಬದುಕು ಹಾಗೂ ಸಿನಿಮಾ
ರಿತ್ವಿಕ್ ಘಟಕ್
ಅವರ ಬಹುತೇಕ ಸಿನಿಮಾಗಳಲ್ಲಿ ಪದೇ ಪದೇ ಈ ನಿರಾಶ್ರಿತರು ಯಾರು? ಎಂಬ ಪ್ರಶ್ನೆ ಬರುತ್ತದೆ. ಯಾರು ನಿರಾಶ್ರಿತರಲ್ಲ?
ಎಂಬ ಉತ್ತರವನ್ನು ಅವರೇ ನೀಡುತ್ತಾರೆ. ಘಟಕ್ ಅವರ ಮೂಲ ನೆಲೆ ಬಾಂಗ್ಲಾದೇಶ ಮತ್ತು ದೇಶ ವಿಭಜನೆಯ ನಂತರ
ನೆಲೆಗೊಂಡ ನೆಲ ಕಲ್ಕತ್ತಾ ಅವರ ಪ್ರಶ್ನೆಯನ್ನು ಉತ್ತರಿಸುತ್ತದೆ. ಘಟಕ್ ತಮ್ಮ ಸಿನಿಮಾಗಳಲ್ಲಿ ದೇಶ,
ರಾಷ್ಟ್ರ, ರಾಷ್ಟ್ರೀಯತೆ, ಗಡಿಗಳು ಮತ್ತು ಗಡೀಪಾರು ಹಾಗೂ ವಲಸೆಯ ಕುರಿತು ವ್ಯಾಪಕವಾಗಿ ಚರ್ಚಿಸುತ್ತಾರೆ.
ಸ್ವತ: 1947ರ ದೇಶ ವಿಭಜನೆಯನ್ನು ಅನುಭವಿಸಿ, ಅದರ ಕಾರಣದಿಂದ ಉಂಟಾಗುವ ನೆಲೆರಹಿತತೆ ಅಥವಾ ತಮ್ಮ
ಮೂಲನೆಲೆಯನ್ನು ಕಳೆದುಕೊಳ್ಳುವಿಕೆ ಅಥವಾ ಮನೆರಹಿತತೆಯನ್ನು ರಾಷ್ಟ್ರೀಯ ಆಯಾಮದ ಜತೆ ಇಟ್ಟು ನೋಡುತ್ತಾರೆ.
ಗಡೀಪಾರು(ಎಕ್ಸೈಲ್) ಮತ್ತು ಮನೆರಹಿತತೆಯು ನಮ್ಮನ್ನು ಯಾವುದೇ ಸೀಮೆ ಮತ್ತು ಗಡಿರೇಖೆಯನ್ನು ಇಲ್ಲದಂತೆ
ಬದುಕಲು ಕಲಿಸುತ್ತದೆ ಎನ್ನುವುದು ಘಟಕ್ ಅಭಿಪ್ರಾಯ. ವಿಭಜನೆ ಉಂಟುಮಾಡಿದ ವಿನಾಶದಲ್ಲೇ ಜೀವದ ಸೆಲೆಯಿದೆ.
ಜೀವ ಮತ್ತು ಜೀವಿಯ ನಿರಂತರತೆಯು ಬಹಳ ಪ್ರಮುಖ ನಂಬಿಕೆ ನನಗೆ ಎನ್ನುತ್ತಿದ್ದರು ಘಟಕ್. ಇದೇ ಹೊತ್ತಿಗೆ
ಅವರು ವಿಭಜನೆ ಕುರಿತು ಮಾಡಿದ ಸಿನಿಮಾಗಳು ಅವರ ಮನಸ್ಸಿನ ಮೇಲೆ ಉಂಟಾದ ಅತ್ಯಂತ ಆಳವಾದ ಗಾಯದ ರೀತಿಯಲ್ಲಿ
ಕಾಣಿಸುತ್ತಿದ್ದವು. ಅದು ಒಂದು ರೀತಿ ನದಿಯ ಹಾಗೆ. ನದಿಗೆ ಪ್ರವಾಹ ತುಂಬಿ ಬಂದಾಗ ಜನ, ಜಾಗ ತೀರವನ್ನು
ಹರಿದು ಕೋಪದಲ್ಲಿ ತೊಳೆದುಕೊಂಡು ಕ್ರಮೇಣ ಅದು ನಿಧಾನವಾಗಿ ಶಮನವಾಗುವ ಅಥವಾ ನೆರೆಯಿಳಿಸಿಕೊಳ್ಳುವ
ಯಥಾಸ್ಥಿತಿ. ಪುನಃ ನದೀತೀರದಲ್ಲಿ ಬದುಕು ಆರಂಭವಾಗುತ್ತದೆ. ಹೀಗೆ ವಿನಾಶದಲ್ಲೂ ಜೀವ, ಭರವಸೆ ಪುನ:
ಯಥಾಸ್ಥಿತಿಯಲ್ಲಿ ವಿನಾಶ, ಇದುವೇ ಬದುಕಿನ ತತ್ವವೆಂಬುದು ಘಟಕ್ ಆಲೋಚನೆ. ಇದನ್ನು ತಮ್ಮ ಸಿನಿಮಾಗಳಲ್ಲೂ
ಅವರು ಚಿತ್ರಿಸಿದರು. ಈ ಕಾರಣಕ್ಕಾಗಿ ಘಟಕ್ ಅವರ ಸಿನಿಮಾಗಳು ಒಂದು ರೀತಿಯಲ್ಲಿ ಯಾತ್ರೆ, ಜೀವನ ಯಾತ್ರೆಯ
ರೀತಿಯಲ್ಲಿ ಕಾಣುತ್ತವೆ. ನದಿಯ ಉಬ್ಬರವಿಳಿತದ ರೀತಿಯದು. ಸುಬರ್ಣರೇಖಾ ನದಿಯ ತರಹ, ಗುಡ್ಡದಲ್ಲಿ ಹುಟ್ಟಿ,
ಕಣಿವೆಯಲ್ಲಿ ಇಳಿದು, ಅರಣ್ಯ ಹೊಕ್ಕು, ಬಯಲನ್ನು ಆವರಿಸಿ ಸಮುದ್ರ ಸೇರಿದ ಹಾಗೆ. ಇದೊಂದು ಜೀವನದ ರೂಪಕ.
ಈ ಕಾರಣದಿಂದ ಬಹುತೇಕ ಘಟಕ್ ಸಿನಿಮಾಗಳಲ್ಲಿ ಹಲವು ನದಿಗಳು ಕಾಣುತ್ತವೆ.
‘ಸುಬರ್ಣರೇಖಾ’ ಸಿನಿಮಾ ಕೂಡಾ ಘಟಕ್ರ ನಿರಾಶ್ರಿತ ಜೀವನವನ್ನು ಸ್ವಲ್ಪ ಆಧರಿಸಿದ್ದಾಗಿದೆ.
ಸುವರ್ಣ ಬಾಲ್ಯದನುಭವದಿಂದ, ವಿಭಜನೆಯ ಆಸುಪಾಸಿನ ಕ್ಷೋಭೆಯ ತಾರುಣ್ಯ ಕ್ರಮೇಣ ಕಲ್ಕತ್ತಾಕ್ಕೆ ಹೋಗುವಲ್ಲಿಯವರೆಗೆ
ಅದು ಸಾಗುತ್ತದೆ. ನಿರಾಶ್ರಿತ ಒಂದು ಹೆಣ್ಣು ಮತ್ತು ಗಂಡು ಈ ರೀತಿಯಲ್ಲಿ ಒಂದು ಸಿನಿಮಾದ ಪಾತ್ರಗಳಾಗಿ
ಸಂಚಾರವನ್ನು ಮಾಡುತ್ತವೆ. ಈ ಸಂಚಾರದ ವೇಳೆ ಒಂದು ಗಟ್ಟಿಯಾದ ಜೀವನದ ನೆನಪನ್ನು ಹೊತ್ತು ಸಾಗುತ್ತವೆ.
ಪ್ರೀತಿ, ಅಗಲುವಿಕೆ, ಕಳೆದುಕೊಳ್ಳುವಿಕೆ (ಲಾಸ್), ಗಡೀಪಾರು ಮತ್ತು ಆದರೂ ತೀರದ ಬದುಕಿನ ಭರವಸೆಯು
ಘಟಕ್ರ ಬಹುಪಾಲು ಸಿನಿಮಾಗಳಂತೆ ಸುಬರ್ಣರೇಖಾ ಸಿನಿಮಾದ ಕಾಳಜಿಯೂ ಆಗಿದೆ.
ಕಲ್ಕತ್ತಾ, ಘಟಕ್ ಮತ್ತು ಸಿನಿಮಾಗಳು
ದೇಶ ವಿಭಜನೆಯ ನಂತರ
ಘಟಕ್ ಕಲ್ಕತ್ತಾಕ್ಕೆ ಬಂದರು. ಕಲ್ಕತ್ತಾದಲ್ಲಿ ಅವರು ಕಂಡು ಅನುಭವಿಸಿದ ಲೋಕ ಅವರ ಅನೇಕ ಸಿನಿಮಾಗಳಲ್ಲಿ
ಪ್ರತಿಫಲಿತಗೊಂಡಿವೆ. ಬಡತನ, ಹಸಿವು, ರೋಗರುಜಿನ, ನೋವು, ಭ್ರಷ್ಟಾಚಾರ ಮುಂತಾದವುಗಳು ನಿಚ್ಚಳವಾಗಿ
ಕಂಡುಬಂದಿವೆ. ಅಲ್ಲಿ ಬರುವವರ ಹಾಗೆ ಇರುವವರ ಮೇಲೆ ನಗರ ಎಸಗುವ ಹಿಂಸೆಯ ಬಗೆಗೂ ಕೂಡಾ ಘಟಕ್ ಸಿನಿಮಾಗಳು
ಮಾತನಾಡುತ್ತವೆ. ಸ್ವತ: ಘಟಕ್ ಅವರೇ ವಿಭಜನೆಯ ಅನುಭವ ಹೊಂದಿದ ಕಾರಣದಿಂದ ಅವರ ಸಿನಿಮಾಗಳು ಗಟ್ಟಿಯಾಗಿ
ಈ ಕುರಿತು ಮಾತನಾಡುತ್ತವೆ. ಅವರ ನಾಗರಿಕ್ (1952), ಸುಬರ್ಣರೇಖಾ (1962), ಮೇಘೆ ಢಾಕಾತಾರಾ
(1960) ಮತ್ತು ಬಾರೀ ತೇಕೇ ಪಾಲಿಯೇ (1959) ಈ ರೀತಿಯ ಅನುಭವದವು. ನಾಗರಿಕ್ ಮತ್ತು ಸುಬರ್ಣರೇಖಾ
ಸಿನಿಮಾಗಳಲ್ಲಂತೂ ಕಲ್ಕತ್ತಾ ನಗರವು ಒಂದು ರೀತಿಯ ಕೇಡಿನ ರೀತಿಯಲ್ಲಿ ಸಂಭವಿಸುತ್ತದೆ. ನಗರದ ಕುರಿತು
ಕೆಲವೊಮ್ಮೆ ಸಾಧಾರಣವಾದ ಕೋಪ ಮತ್ತು ಇನ್ನೂ ಕೆಲವೊಮ್ಮೆ ಕೋಪದ ಆಸ್ಫೋಟನೆಯೂ ಕಾಣುತ್ತದೆ. ಇದರ ಜತೆಗೆ
ನಗರದೊಳಗೆ ಇನ್ನೂ ತನ್ನನ್ನು ಕಲ್ಪಿಸಿಕೊಳ್ಳದ ಹತಾಶೆಯೊಂದಿಗೆ ಒಂದು ರೀತಿಯ ಭರವಸೆ, ಪ್ರೀತಿ, ನಂಬಿಕೆ
ಕೂಡಾ ಕಾಣಿಸುತ್ತದೆ. ಕಲ್ಕತ್ತಾದಲ್ಲಿ ಬಂದು ವಾಸ ಮಾಡುವ ಜನರಿಗೆ ಪುನ: ಪೂರ್ವ ಬಂಗಾಳಕ್ಕೆ ಹೋಗುವುದು
ಒಂದು ಚರಿತ್ರೆ, ಗತವೂ ಹಾಗೂ ರಾಜಕೀಯವೂ ಹೌದು. ಬಹುತೇಕ ಸಿನಿಮಾಗಳಲ್ಲಿ ಇಂತಹ ಪ್ರಜ್ಞೆ, ನೆನಪು,
ಮರುಕಳಿಸುತ್ತದೆ. ಕಲ್ಕತ್ತಾದಲ್ಲಿ ಘಟಕ್ ಏನನ್ನು ಸಾಧಿಸಿದ್ದರೂ ಕೂಡಾ ಪೂರ್ವ ಬಂಗಾಳದ ನೆನಪು ಅವರಿಗೆ
ಉತ್ಕøಷ್ಟವಾದ ಮಾಲ್ಡಾದ (ಪೂರ್ವ ಬಂಗಾಳದ ಒಂದು ಪ್ರದೇಶ) ರಸಭರಿತ ಮಾವಿನ ಹಣ್ಣಿನ ಹಾಗೆ. ಈ ಕಾರಣದಿಂದ
ಕಲ್ಕತ್ತಾ ಒಂದು ರೀತಿಯ ಭಾವನಾತ್ಮಕವಾದ ಪರಕೀಯತೆಯನ್ನೂ ಅವರಿಗೆ ಸೃಷ್ಠಿಸಿತು.
ನಾಗರಿಕ್ 1952
ಘಟಕ್ ಹೇಳಿದ ಹಾಗೆ
ಈ ಸಿನಿಮಾ ಏನಿದೆ ಅದು ಒಂದು ರೀತಿಯ ರಾಜಕೀಯ ವ್ಯಾಖ್ಯಾನವಾಗಿದೆ. ನಾಗರಿಕ್ ಸಿನಿಮಾದಲ್ಲಿ ವಿರೋಧದ
ಸಾಮಾಜಿಕ ಶಕ್ತಿಗಳ ನಡುವೆ ಬದುಕಲು ಹೆಣಗುವ ಒಂದು ಕಲ್ಕತ್ತಾದ ಮಧ್ಯಮವರ್ಗದ ಒಂದು ಕಥೆಯಿದೆ. ಅತ್ಯಂತ
ನಿಧಾನಗತಿಯಲ್ಲಿ ನಾಶವಾಗುತ್ತಿರುವ, ಬೀಳುತ್ತಿರುವ ಮಧ್ಯಮವರ್ಗದ ಮನೆಯ ಕುರಿತು ಅದು ಹೇಳುತ್ತದೆ.
ಮನೆಯ ಜತೆಗೆ ಮನೆಯ ಪ್ರತೀ ಸದಸ್ಯನ ಅವನತಿಯನ್ನೂ ಅದು ಮನಗಾಣಿಸುತ್ತದೆ. ನಗರದ ರಾಕ್ಷಸ ಪ್ರವೃತ್ತಿಯನ್ನು
ಘಟಕ್ ತೋರಿಸುತ್ತಾ ಹೋಗುತ್ತಾರೆ. ಒಂದು ರೀತಿ ಕಲ್ಕತ್ತಾ ನಗರವೇ ದಾರುಣವಾಗಿ ರೋಗಗ್ರಸ್ತವಾಗಿದೆ ಎನ್ನುವ ರೀತಿಯಲ್ಲಿ ಅವರು ಚಿತ್ರಿಸುತ್ತಾರೆ. ಕಲ್ಕತ್ತೆಯು
ಜನರನ್ನು ಬಲಿ ತೆಗೆದುಕೊಳ್ಳುವ ರೀತಿ ಇದು ಎನ್ನುತ್ತಾರೆ. ಇದೇ ಹೊತ್ತಿಗೆ ಕಲ್ಕತ್ತೆಯು ಕೂಡಾ ಅಸಹಾಯಕ
ನಗರವೆಂದೂ ಹೇಳುತ್ತಾ ಹೋಗುತ್ತಾರೆ. ಆಗಿನ ಕಲ್ಕತ್ತೆಯಲ್ಲಿನ ಸಾವಿರಾರು ನಿರಾಶ್ರಿತರು, ಕಿತ್ತು ತಿನ್ನುವ
ಬಡತನ ಹಾಗೂ ಜನಸಾಂದ್ರತೆಯು ಅತಿಯಾದಾಗ ಹೇಗೆ ಕಲ್ಕತ್ತೆಯು ಕಸ ಮತ್ತು ತಿಪ್ಪೆಗುಡ್ಡೆಯಾಗಿರುವುದನ್ನೂ
ಚಿತ್ರಿಸುತ್ತಾರೆ.
ಘಟಕ್ ಅವರ ವ್ಯಕ್ತಿಗತ
ನೋವು ಏನಿದೆ, ಅದು ತೆರೆಯಲ್ಲಿ ಅಲೆಅಲೆಯಾಗಿ ಈ ಸಿನಿಮಾದಲ್ಲಿ ಕಾಣಿಸುತ್ತದೆ. ಶಿಕ್ಷಕನ ಮಗ ರಾಮು
ಜೀವಿತ ಮತ್ತು ಅಸ್ತಿತ್ವಕ್ಕಾಗಿ ಕೂಲಿ ಮಾಡಬೇಕಾಗಿ ಬರುವುದು ನಿರ್ದೇಶಕನ ನೋವಿನಂತೆಯೂ ಕಾಣಿಸುತ್ತದೆ.
ರಾಮು ಕೊನೆಗೂ ತನ್ನ ಸ್ನೇಹಿತೆಯಿಂದ ದೂರವಾಗಿ, ತಾಯಿಯ ಜತೆ ಕಲ್ಕತ್ತೆಯ ಕೊಳಗೇರಿಯೊಂದರಲ್ಲಿ ಬದುಕಬೇಕಾಗಿ
ಬರುವುದೂ ನೋವಿನ ಮುಂದುವರಿಕೆಯಾಗಿದೆ. ರಾಮುವಿನ ಸ್ನೇಹಿತೆ ಉಮಾಳ ತಂಗಿ ಕುಟುಂಬ ನಿರ್ವಹಣೆಗೆ ವೇಶ್ಯಾವಾಟಿಕೆಗಿಳಿಯಬೇಕಾದ
ಪ್ರಸಂಗವಂತೂ ಆ ಕಾಲದ, ನಗರದ, ಜನರ ಅಸಹಾಯಕತೆಯ ಸೂಚನೆಯಾಗಿ ಕಂಡುಬರುತ್ತದೆ. ಸಿನಿಮಾದ ಕೊನೆಯಲ್ಲಿ
‘ಕಮ್ಯುನಿಸ್ಟ್ ಇಂಟರ್ನ್ಯಾಶನಲ್’ಯ ಹಿನ್ನೆಲೆ ಸಂಗೀತ ಬಂದು ಮುಗಿಯುವುದು ಘಟಕ್ರ ಸಮಬಾಳು ಸಮಪಾಲಿನ
ಸಮಾಜವಾದೀ ಆಶಯವೂ ಆಗಿದೆ. ನಾಗರಿಕ್ ಸಿನಿಮಾದ ಮೂಲಕ ಘಟಕ್ ಚಿತ್ರಭಾಷೆ, ಅಥವಾ ಸಿನಿಮಾದ ವ್ಯಾಕರಣಕ್ಕೆ
ಸಂಬಂಧಿಸಿ ಕೆಲವು ಪ್ರಯೋಗಗಳನ್ನು ಮಾಡುತ್ತಾರೆ. ಪಾತ್ರಗಳು ಚಲಿಸುವ, ವಾಸಿಸುವ ಪ್ರದೇಶಗಳ ಮೇಲೆ
‘ಡೀಪ್ ಫೋಕಸ್’ ಮಾಡುವುದನ್ನು ವಿಶೇಷವಾಗಿ ಬಳಸುತ್ತಾರೆ. ಸಿನಿಮಾದ ಆರಂಭದಲ್ಲಿ
ಕ್ಯಾಮರಾವನ್ನು ಎಡದಿಂದ ಬಲಕ್ಕೆ ವೃತ್ತಾಕಾರ ಮತ್ತು ಅರೆ ವೃತ್ತಾಕಾರದಲ್ಲಿ ತಿರುಗಿಸುವ (ಪ್ಯಾನಿಂಗ್)
ಮೂಲಕ ಇಡೀ ಕಲ್ಕತ್ತಾ ಸಿಟಿ, ಅಲ್ಲಿನ ಭೂದೃಶ್ಯ, ಜನವಸತಿ, ಕಟ್ಟಡ, ಸ್ಲಂ, ನದಿ, ಕರೆಂಟ್ ವೈರ್, ಬೀದಿಗಳು,
ಜನಸಂಚಾರ ಇತ್ಯಾದಿಗಳನ್ನು ದಾಖಲಿಸುತ್ತಾರೆ. ನಂತರ ಸುಮಾರು 20 ರಿಂದ 30 ಫೀಟ್ ಎತ್ತರದ ಕ್ರೇನ್ ಮೂಲಕ
ಇಂತಹ ನಗರದೊಳಗೆ, ಜನಜಂಗುಳಿಯೊಳಗೆ ಕಷ್ಟಪಟ್ಟು ನಡೆದು ಮನೆ ಸೇರುವ ಸಾಮಾನ್ಯ ಮನುಷ್ಯನನ್ನು ಫೋಕಸ್
ಮಾಡುತ್ತಾರೆ. ನಂತರ ನಡೆದು ಮನೆ ಸೇರಿದ ವ್ಯಕ್ತಿಯ ಮುಖ (ನಾಯಕ ರಾಮು)ಕ್ಕೆ ಕ್ಯಾಮೆರಾ ಹಿಡಿದು, ಆತನ
ಗುರುತು, ಪ್ರಾಮುಖ್ಯತೆಯನ್ನು ಜಾಹೀರುಮಾಡುತ್ತಾರೆ.
ಮೇಘೆ ಢಾಕಾ ತಾರಾ 1960
ಘಟಕ್ ತಾನು ಕಲ್ಕತ್ತಾದ
ನಗರದ ಮೇಲೆ, ವಿಶೇಷವಾಗಿ ಅಲ್ಲಿಯ ಸ್ಲಮ್, ಸಾಮಾನ್ಯ ನಿರಾಶ್ರಿತರ, ದೀನರ ಮೇಲೆ ಅವರ ಬದುಕಿನ ಕುರಿತು
ಮಾಡಿದ ಸಿನಿಮಾವಿದು. ಕಲ್ಕತ್ತಾದ ಜಾಧವ್ಪುರ್, ನೇತಾಜಿನಗರ್, ಬಿಜೋಯ್ಘರ್ ಪ್ರದೇಶದ ನಿರಾಶ್ರಿತರ
ಕಾಲನಿಯಲ್ಲಿ ಸಿನಿಮಾದ ಪ್ರಧಾನ ಪಾತ್ರವಾದ ನೀತಾ ತನ್ನ ಚಪ್ಪಲಿ ಹರಿದಾಗ ಅದನ್ನು ಎಳೆದು ತೆಗೆಯುವ
ಸಲುವಾಗಿ ನಿಲ್ಲುವ ದೃಶ್ಯದಿಂದ ಆರಂಭವಾಗುತ್ತದೆ. ಅವಳ ನಿರಾಶ್ರಿತ ಕುಟುಂಬದಲ್ಲಿ ಆಕೆಯೊಬ್ಬಳೇ ದುಡಿಯುವಾಕೆ.
ಆಕೆಯ ಅಣ್ಣ ಶಂಕರ್ ಸಂಗೀತಗಾರನಾಗಬೇಕೆಂಬ ಕನಸು ಹೊತ್ತವ, ಆದರೆ ದುಡಿಯುತ್ತಿರದ ವ್ಯಕ್ತಿ. ತಂದೆ ನಿವೃತ್ತ
ಸ್ಕೂಲ್ ಮಾಸ್ಟರ್. ತಂಗಿ ಮತ್ತು ತಮ್ಮ ಶಾಲೆಗೆ ಹೋಗುತ್ತಿರುತ್ತಾರೆ. ನೀತಾಳ ಗೆಳೆಯ ಸನತ್ ಆಕೆಯನ್ನು
ಬಿಟ್ಟು ಆಕೆಯ ತಂಗಿಯ ಜತೆ ಮದುವೆಯಾಗುತ್ತಾನೆ. ಸಂಸಾರಕ್ಕಾಗಿ ಈಕೆ ದುಡಿದು ಹೆಣವಾಗುತ್ತಾಳೆ. ಶಂಕರ್
ಮನೆಬಿಟ್ಟು ಮುಂಬೈ ತಲುಪಿ ಪ್ರಸಿದ್ಧ ಸಂಗೀತಗಾರನಾಗುತ್ತಾನೆ. ನೀತಾಳಿಗೆ ತೀವ್ರವಾದ ಕ್ಷಯ (ಟ್ಯುಬರ್ಕಲೋಸಿಸ್)
ರೋಗ ಕಾಡುತ್ತದೆ. ಹಲವು ವರ್ಷಗಳ ನಂತರ ಶಂಕರ್ ಮನೆಗೆ ಬಂದಾಗ ರೋಗ ಪೀಡಿತ ತಂಗಿಯನ್ನು ಚಿಕಿತ್ಸೆಗೆ
ಕರೆದೊಯ್ಯುತ್ತಾನೆ. ಕೊನೆಗೆ ನೀತಾ ತನ್ನ ಅಣ್ಣನ ತೋಳಲ್ಲಿ ಮಲಗಿ ಅಣ್ಣಾ ನಾನು ಬದುಕಬೇಕು ಎಂದು ಚೀರುತ್ತಾಳೆ.
ಕೊನೆಯ ದೃಶ್ಯದಲ್ಲಿ, ಸಿನಿಮಾ ಆರಂಭದ ಮೊದಲ ದೃಶ್ಯದಲ್ಲಿ ಕಿತ್ತು ಹೋದ ಚಪ್ಪಲಿಯನ್ನು ತೆಗೆಯುವ ಸಲುವಾಗಿ
ನೀತಾ ನಿಂತ ಹಾಗೆ ದುಡಿಯಲು ಹೊರಟ ಇನ್ನೊಂದು ಹೆಣ್ಣು, ಅವಳೂ ಚಪ್ಪಲಿ ಬಿಸಾಕಿ ಮುಂದೆ ಸಾಗುತ್ತಾಳೆ.
ಇದು ಋತ್ವಿಕ್ ಘಟಕ್
ಅವರ ಅತ್ಯಂತ ಜನಪ್ರಿಯ, ಬಹುಚರ್ಚಿತ ಸಿನಿಮಾ. ಸಿನಿಮಾ ಜಗತ್ತಿನಲ್ಲಿ ಘಟಕ್ ಅವರಿಗೆ ಸಾಕಷ್ಟು ಪ್ರಸಿದ್ಧಿಯನ್ನು
ತಂದುಕೊಟ್ಟ ಸಿನಿಮಾವಿದು. ಈ ಸಿನಿಮಾ ಮುಖ್ಯ ಪಾತ್ರವಾದ ನೀತಾಳಿಗೆ ಮತ್ತು ನೀತಾಳ ರೀತಿಯದೇ ಇನ್ನೊಬ್ಬ
ಹೆಣ್ಣು ಮಗಳಿಗೆ ಆ ಚಪ್ಪಲಿಯನ್ನು ಒಬ್ಬ ಸಮಗಾರನಲ್ಲಿ ಹೊಲಿಸಲೂ ಸಮಯವಿಲ್ಲ. ಬಡತನ, ಹಸಿವು, ಕುಟುಂಬದ
ಪಾಲನೆ ಆಕೆಯ ಸಮಯವನ್ನೇ ತಿಂದಿದೆ. ಕೊನೆಯಲ್ಲಿ ನೀತಾಳ ರೀತಿಯ ಹೆಣ್ಣು ಮಗಳು ಈ ರೀತಿಯ ಬಡತನದ ಚಕ್ರವನ್ನು
ಚಪ್ಪಲಿ ಹರಿಸಿಕೊಂಡು ಪೂರ್ಣಗೊಳಿಸಿದಾಳೆ. ಘಟಕ್ ತಾನು ಕ್ರೂರ ಕಲ್ಕತ್ತಾ ನಗರದ ಮೇಲೆ ಮಾಡುವಂತಹ ಪ್ರಬಲವಾದಂತಹ
ಟೀಕೆಯೂ ಇದಾಗಿದೆ. ನೀತಾಳಿಗೆ ಅಂತಹ ದಾರುಣತೆಯ ಮೇಲೆ ಬೇಜಾರೂ ಇದೆ, ಕೋಪವೂ ಇದೆ. ಅದೇ ಹೊತ್ತಿಗೆ
ನೀತಾಳ ರೀತಿಯ ಇನ್ನೊಂದು ಹೆಣ್ಣು ಪುನ: ಬರಿಗಾಲಲ್ಲಿ ಸಾಗುವುದೂ ಕೂಡಾ ಬೇರೆ ದಾರಿಯಿಲ್ಲದ, ಒಂದು
ಅಸಹಾಯಕ ಸ್ಥಿತಿಯನ್ನು ಕೂಡಾ ನಮಗೆ ನೆನಪಿಸುತ್ತದೆ.
ಸುಬರ್ಣರೇಖಾ 1962
ಸುಬರ್ಣರೇಖಾ ಸಿನಿಮಾ
ಕೂಡಾ ಘಟಕ್ ಅವರ ಅತ್ಯಂತ ಜನಪ್ರಿಯ ಸಿನಿಮಾಗಳಲ್ಲೊಂದು. ಪೂರ್ವ ಬಂಗಾಳದಿಂದ ಬಂದ ನಿರಾಶ್ರಿತರು ಕಲ್ಕತ್ತಾದ
ಹೊರವಲಯದ ಸ್ಲಮ್ಗಳಲ್ಲಿ ನೆಲೆನಿಂತ ಮೇಲೆ ರೂಪುಗೊಂಡ ನವಜೀವನ್ ಕಾಲೋನಿಯಲ್ಲಿ ನಡೆಯುವ ಕಥೆಯಿದಾಗಿದೆ.
ಕೋಮಲ್ ಗಾಂಧಾರ್, ಮೇಘೆ ಢಾಕಾ ತಾರಾ ಜತೆಗಿನ ಇದು ಒಂದು ಟ್ರಲಜಿ (ತ್ರಿವಳಿ ಚಿತ್ರ) ಎಂಬ ಖ್ಯಾತಿಯನ್ನೂ
ಹೊಂದಿದೆ. ಇದೂ ಕೂಡಾ ಘಟಕ್ರ ಉಳಿದ ಚಿತ್ರಗಳಂತೆ ದೇಶ ವಿಭಜನೆಯ ವಸ್ತುವನ್ನು ಹೊಂದಿದೆ. ವಿಭಜನೆಯ
ಕಾರಣದಿಂದ ಪೂರ್ವ ಪಾಕಿಸ್ತಾನ್ ಅಥವಾ ಪೂರ್ವ ಬಾಂಗ್ಲಾದಿಂದ ಬಂದು ಕಲ್ಕತ್ತೆಯ ಹೊರವಲಯದ ಕೊಳಗೇರಿಯಲ್ಲಿ
ನೆಲೆ ನಿಲ್ಲುವ ಈಶ್ವರ ಚಕ್ರವರ್ತಿಯ (ಅಭಿ ಭಟ್ಟಾಚಾರ್ಯ) ಸಂಸಾರದ ಕಥೆಯನ್ನು ಈ ಸಿನಿಮಾ ಹೇಳುತ್ತದೆ.
ಈತ ತನ್ನ ತಂಗಿ ಸೀತಾಳೊಂದಿಗೆ ನವಜೀವನ ಕಾಲನಿಯಲ್ಲಿ ಹೊಸ ಜೀವನದ ನಿರೀಕ್ಷೆಯಲ್ಲಿದ್ದ. ಆ ಕಾಲನಿಯಲ್ಲಿ
ಒಮ್ಮೆ ದೊಂಬಿ ಸಂಭವಿಸಿದಾಗ ಆಗ ಕೆಳಜಾತಿಯೆಂದು ಕರೆಯಲ್ಪಡುತ್ತಿದ್ದ ಮಹಿಳೆಯೊಬ್ಬಳಿಂದ ಕಳೆದುಕೊಂಡ
ಬಾಲಕ ಅಭಿರಾಮನನ್ನೂ ಕೂಡಾ ಮನೆಗೆ ಸೇರಿಸಿ ಪೊರೆಯುತ್ತಾನೆ. ಆದರೆ ಈಶ್ವರ ಚಕ್ರವರ್ತಿಯನ್ನು ಅವನ ಗೆಳೆಯ
ರಾಮ್ವಿಲಾಸ್ ತಾನು ಸುಬರ್ಣರೇಖಾ ನದಿ ಹತ್ತಿರದ ಛತಿಮ್ಪುರ್ನಲ್ಲಿ ಹೊಂದಿದ್ದ ಕುಲುಮೆಯಲ್ಲಿ ಅಕೌಂಟೆಂಟ್
ಆಗಿ ಕೆಲಸಕ್ಕೆ ಸೇರಿಸ್ತಾನೆ. ಇತ್ತ ಅಭಿರಾಮ್ ತನ್ನ ಶಿಕ್ಷಣ ಪೂರೈಸಿ ಮನೆಗೆ ಬಂದ ದಿನವೇ ಈಶ್ವರ್
ಚಕ್ರವರ್ತಿಯು ಮ್ಯಾನೇಜರ್ ಹುದ್ದೆಗೆ ಪ್ರಮೋಶನ್ ಪಡೆಯುತ್ತಾನೆ. ಅಭಿರಾಮ್ ಜರ್ಮನಿಯಲ್ಲಿ ಇಂಜಿನಿಯರಿಂಗ್
ಪದವಿ ಪಡೆಯುವ ಸಲುವಾಗಿ ಅಣ್ಣ ಈಶ್ವರ್ ಏರ್ಪಾಟು ಮಾಡಿಕೊಂಡಿರುತ್ತಾನೆ. ಆದರೆ ಅಭಿರಾಮ್ ಇದನ್ನು ನಿರಾಕರಿಸುತ್ತಾನೆ
ಮತ್ತು ತಾನು ಸಾಹಿತಿ, ಲೇಖಕನಾಗುವುದನ್ನು ತಿಳಿಸುತ್ತಾನೆ. ಇದೇ ಹೊತ್ತಿಗೆ ಅಭಿರಾಮ್ ಮತ್ತು ಸೀತಾಳ
ಪ್ರೇಮವು ಅಣ್ಣನಿಗೆ ತಿಳಿಯುತ್ತದೆ. ಅಭಿರಾಮ್ ಬಗೆಗೆ ಪೂರ್ವಾಗ್ರಹ ಮತ್ತು ಆತ ಕೆಳ ಜಾತಿಯವನೆಂಬ ಕಾರಣಕ್ಕಾಗಿ
ಈಶ್ವರ್ ಅದನ್ನು ನಿರಾಕರಿಸುತ್ತಾನೆ. ಆದರೂ ಸೀತಾ ಮತ್ತು ಅಭಿರಾಮ್ ಅಣ್ಣನ ಮಾತನ್ನು ಮೀರಿ ಕಲ್ಕತ್ತೆಗೆ
ಓಡಿ ಹೋಗಿ ಮದುವೆಯಾಗಿ ಸಂಸಾರ ಹೂಡುತ್ತಾರೆ.
ಕಲ್ಕತ್ತೆಯ ಕೊಳಗೇರಿಗಳಲ್ಲಿ
ಕಷ್ಟಪಟ್ಟು ದಿನಕಳೆಯುತ್ತಾರೆ. ಕೊನೆಗೂ ಅಭಿರಾಮನಿಗೆ ಕಲ್ಕತ್ತೆಯ ಸರಕಾರಿ ಬಸ್ನ ಡ್ರೈವರ್ ಆಗಿ ಕೆಲಸ
ಸಿಗುತ್ತದೆ. ಆದರೆ ಆತ ಆಕಸ್ಮಿಕವಾಗಿ ಒಂದು ಸಣ್ಣ ಬಾಲಕಿಯ ಮೇಲೆ ಬಸ್ಸನ್ನು ಹರಿಸಿದ ಕಾರಣ ಆಕೆ ಸಾಯುತ್ತಾಳೆ.
ಜನ ಗುಂಪಾಗಿ ಅಭಿರಾಮನನ್ನು ಬಡಿದು ಸಾಯಿಸ್ತಾರೆ. ನಂತರ ಜೀವನ ಸಾಗಿಸುವುದೇ ಕಷ್ಟವಾದಾಗ ಸೀತಾ ಬಲವಂತವಾಗಿ
ವೇಶ್ಯಾವಾಟಿಕೆಗೆ ಇಳಿಯಬೇಕಾಗುತ್ತದೆ. ಇತ್ತ ಒಂಟಿ ಬದುಕಿನಿಂದ ಬೇಸತ್ತ ಈಶ್ವರ್ನನ್ನು ನೋಡಲು ಆತನ
ಹಳೆಯ ಮಿತ್ರ ಹರಿಪ್ರಸಾದ್ ಬರುತ್ತಾನೆ. ಇಬ್ಬರೂ ಕೂಡಾ ಮಜವಾಗಿ ತಿಂದು ಕುಡಿಯಲು ಕಲ್ಕತ್ತೆಗೆ ಬರುತ್ತಾರೆ.
ವೇಶ್ಯೆಯ ಮನೆಯರಸಿ ಅವರಲ್ಲಿ ಈಶ್ವರ್ ಗಿರಾಕಿಯಾಗಿ ಸೀತಾಳ ಮನೆಗೆ ಬರುತ್ತಾನೆ. ಆಗ ಅಣ್ಣನ ಗುರುತು
ಹಿಡಿದ ಸೀತಾ ಈಳಿಗೆ ಮಣೆಯಿಂದ ಕತ್ತು ಕೊಯ್ದುಕೊಂಡು ಭೀಕರವಾಗಿ ಸಾಯುತ್ತಾಳೆ. ಈಶ್ವರನಿಗೆ ವಿಷಯ ತಿಳಿದು
ಆತ ಸೀತಾಳ ಮಗ ಬಿನುವನ್ನು ಕರೆದುಕೊಂಡು ಛತಿಮ್ಪುರ್ ಹೋಗಿ ರೈಲು ಇಳಿದಾಗ ಆತನನ್ನು ಕೆಲಸದಿಂದ ಕಿತ್ತು
ಹಾಕಿರುವ ವಿಷÀಯ ತಿಳಿಯುತ್ತದೆ. ಈಶ್ವರ್ ಶಾಂತವಾಗಿ ಬಿನುವನ್ನು ಎತ್ತಿಕೊಂಡು ತನ್ನ ಖ್ವಾರ್ಟರ್ಸ್
ಖಾಲಿ ಮಾಡಿ ಸುಬರ್ಣರೇಖಾ ನದಿಯ ಹತ್ತಿರ ಕರೆದೊಯ್ಯುತ್ತಾನೆ.
ಸುಬರ್ಣರೇಖಾ, ಸೀತಾಳು
ತಾನು ಭೌಗೋಳಿಕ, ಭಾವನಾತ್ಮಕ ಮತ್ತು ನೈತಿಕವಾದ ಬೇರುಗಳಿಂದ ವಂಚಿತವಾಗುವ ನೆಲೆಯನ್ನು ನಮಗೆ ಮನಗಾಣಿಸುತ್ತದೆ.
132 ನಿಮಿಷದ ಈ ಸಿನಿಮಾ ಅನೇಕ ಕಡೆ ನಮಗೆ ಕರೆಂಟ್ ಶಾಕ್ ಕೊಡುತ್ತದೆ. ಪ್ರೇಕ್ಷಕನನ್ನು ಈ ಸಿನಿಮಾ
ಭಾವನಾತ್ಮಕವಾಗಿ ಕಾಡುತ್ತದೆ. ಕಲ್ಕತ್ತೆ ನಗರವು ಸೀತೆಗೆ ಮಾಡಿರುವ ಬಹುವಿಧದ ಮಾನಸಿಕ ಹಿಂಸೆ ಮತ್ತು
ಗಾಯವನ್ನು ಇದು ತೋರಿಸುತ್ತದೆ. ಸೀತಾಳ ಪಾಲಿಗೆ ಕಲ್ಕತ್ತೆ ಕ್ರೂರವಾಗುತ್ತದೆ. ಕಲ್ಕತ್ತೆಯ ನವಜೀವನ
(ಹೊಸ ಜೀವನ) ಕಾಲನಿ ಹೊಸದನ್ನು ಏನನ್ನೂ ಆಕೆಯ ಪಾಲಿಗೆ ಕೊಡುವುದೇ ಇಲ್ಲ. ಆಕೆಯ ಆತ್ಮಹತ್ಯೆ ಆಕೆಯ
ದೇಹದ ಹತ್ಯೆಗಿಂತ ಮಾನಸಿಕವಾದ ಹತ್ಯೆಯೇ ಆಗಿದೆ. ಸೀತಾ ಕಲ್ಕತ್ತೆಗೆ ಅಭಿರಾಮ್ ಜತೆಯಲ್ಲಿ ಓಡಿ ಬಂದಾಗಲೇ
ಅಣ್ಣ ಈಶ್ವರ್ ಅರ್ಧ ಸತ್ತಿದ್ದ, ಈಗ ಇನ್ನೂ ಮಾನಸಿಕವಾಗಿ ಸಾಯುತ್ತಾನೆ. ಆದರೆ ಸೀತಾಳ ಮಗನ ಕಾರಣದಿಂದ
ಸಂಪೂರ್ಣವಾಗಿ ಸಾಯದೇ ಬದುಕುತ್ತಾನೆ. ಪುರಾಣದ ರಾಮಾಯಣದ ಸೀತೆಯಂತೆ ಆಧುನಿಕ ಕಲ್ಕತ್ತಾ ನಗರದಲ್ಲಿ
ಆಕೆ ಬದುಕಲು ಕಷ್ಟಪಡುತ್ತಾಳೆ. ಕೊನೆಯಲ್ಲಿ ನಗರವೇ ರಾವಣನಂತಾಗಿ ಆಕೆಯ ನಾಶಕ್ಕೆ ಕಾರಣವಾಗುತ್ತದೆ.
ಸುಬರ್ಣರೇಖಾ ಸಿನಿಮಾದಲ್ಲಿನ
ನಾಟಕೀಯತೆ ಮತ್ತು ಹರಿತತೆಯು ಈ ಉದ್ದೇಶವನ್ನು ಈಡೇರಿಸುವ ಸಲುವಾಗಿ ಕಂಡು ಬಂತು. ಈ ಕಾರಣಕ್ಕಾಗಿ ರಿತ್ವಿಕ್
35mm ನಿಂದ 100mm ಲೆನ್ಸ್ ಅನ್ನು ಘಟಕ್ ಬಳಸಿದರು. ಈ ಸಿನಿಮಾದಲ್ಲಿ ಘಟಕ್ ಕ್ಯಾಮರಾ, ಎಡಿಟಿಂಗ್
ಸಂಬಂಧಿಸಿದ ಅನೇಕ ಸಂಪ್ರದಾಯಗಳನ್ನು ಮುರಿದರು. ಬಾಲಕಿ ಸೀತಾಳ ಎದುರಿಗೆ ಸಾಧುವೇಶದ ಬಹುರೂಪಿ ಬರುವ
ಸನ್ನಿವೇಶವಂತೂ ಅತ್ಯಂತ ಅದ್ಭುತವಾದ ನಾಟಕೀಯತೆಯನ್ನು ಸೃಷ್ಠಿಸಿತು. ಇದು ಅತ್ಯಂತ ಆಕಸ್ಮಿಕವಾಗಿ ಬಂದಂತಹ
ಘಟನೆ, ಬಹುರೂಪಿಯನ್ನು ಸೃಷ್ಟಿ ಮಾಡಿದ್ದೇನಲ್ಲ, ಘಟಕ್ ಪ್ರಕಾರ ಜೀವನವೂ ಕೂಡಾ ಇದೇ ರೀತಿಯಲ್ಲಿ ಆಕಸ್ಮಿಕವಾಗಿ
ಒದಗುತ್ತದೆ. ಜೀವನದಲ್ಲಿ ಆಕಸ್ಮಿಕಗಳು ಉಂಟಾಗುತ್ತವೆ.
ಬಾರಿ ತೇಕೆ ಪಾಲಿಯೇ 1958
ಈ ಸಿನಿಮಾ ಬಹುತೇಕ
ನಿರ್ದೇಶಕ ರಿತ್ವಿಕ್ ಘಟಕ್ ಅವರ ಬಾಲ್ಯದ ನೆನಪನ್ನು, ಚಿತ್ರಗಳನ್ನು ಆತ್ಮಕಥೆಯ ರೂಪದಲ್ಲಿ ನಮ್ಮ ಮುಂದಿಡುತ್ತದೆ.
ಬಂಗಾಳದ ಒಂದು ಹಳ್ಳಿಯಿಂದ ಪೇಟೆಗೆ ಓಡಿಹೋದ ಒಬ್ಬ ಹುಡುಗನ ಕಥೆಯಿದು. ಹಳ್ಳಿ ಮತ್ತು ಪೇಟೆ ಯಾವುದೆಂದು
ನಿರ್ದೇಶಕ ಹೇಳದಿದ್ದರೂ ಕೂಡಾ ನಗರ ಬಂದಾಗ ಅಲ್ಲಿ ನಮಗೆ ಕಲ್ಕತ್ತಾ ಕಾಣಿಸುತ್ತದೆ. ಇಂತಹ ಹುಡುಗ ಕಾಂಚನ್ಗೆ
ಪೇಟೆಯಲ್ಲಿ ಅನೇಕರು ಸಹಾಯ ಮಾಡುತ್ತಾರೆ. ಅತ್ಯಂತ ಸಾಮಾನ್ಯರು, ಅವರು ಕೆಲವೊಮ್ಮೆ ಗುರುತು ಪರಿಚಯವೇ
ಇಲ್ಲದಂತವರು. ಕೇವಲ ಎಂಟು ವರ್ಷದ ಕಾಂಚನ್ ತನ್ನ ಕ್ರೂರ ತಂದೆಯ ಕಾರಣದಿಂದ ಪೇಟೆಗೆ ಬಂದು, ಮಿನಿ ಎಂಬ
ಬಾಲಕಿ, ಆಕೆಯ ಕುಟುಂಬ, ಜನಪದ ಹಾಡುಗಾರರು, ಕಳ್ಳರು ಮತ್ತು ಮ್ಯಾಜಿಕ್ ಮಾಡುವ ವ್ಯಕ್ತಿ ಹೇಗೆ ಅನೇಕರನ್ನು
ಸಂಧಿಸುತ್ತಾನೆ. ಪೇಟೆಯಲ್ಲಿ ಬದುಕಲು ಕಾಂಚನ್ ಸಾಕಷ್ಟು ಕಷ್ಟಪಡುತ್ತಾನೆ. ಕೊನೆಗೆ ಈ ನಗರ ಅತ್ಯಂತ
ಕೆಟ್ಟದ್ದೆಂಬ ತೀರ್ಮಾನ ಮಾಡಿ ಹಳ್ಳಿಗೆ ಮರಳುತ್ತಾನೆ. ಈಗ ತನ್ನ ತಂದೆಯು ಈ ಕಲ್ಕತ್ತೆಯ ನಗರಕ್ಕೆ
ಹೋಲಿಸಿದರೆ ಅಷ್ಟು ದುಷ್ಟನಲ್ಲ ಎಂಬ ನಿಲುವನ್ನು ತಾಳುತ್ತಾನೆ. ಆದರೆ ಈಗ ಆತನ ನಿಜವಾದ ಕೇಡು, ಶತ್ರು
ಆತನ ಮನೆಯ ಪರಿಸ್ಥಿತಿ ಮತ್ತು ಬಡತನವಾಗಿರುತ್ತದೆ. ಘಟಕ್ ಈ ಸಿನಿಮಾದಲ್ಲಿ ಸಾಮಾನ್ಯ ಜನರು ವಿಶೇಷವಾಗಿ
ಪೇಟೆಯಲ್ಲಿರುವವರ ಬಗೆಗೆ, ಅವರ ಅಸಾಮಾನ್ಯತೆ ಹಾಗೂ ಒಳ್ಳೆಯತನದ ಬಗ್ಗೆ ಗಮನಹರಿಸುತ್ತಾರೆ. ಇದೇ ಹೊತ್ತಿಗೆ
ಸಂಪೂರ್ಣ ಯಂತ್ರದಿಂದ ನಿಯಂತ್ರಿತವಾದ ಕಲ್ಕತ್ತಾ ನಗರದ ಬಗೆಗೆ ತಿರಸ್ಕಾರ ಮತ್ತು ರೇಜಿಗೆಯನ್ನೂ ಪ್ರಕಟಪಡಿಸುತ್ತಾರೆ.
ಈ ಸಿನಿಮಾದಲ್ಲಿ ಘಟಕ್ ಕೆಲವು ಟೆಕ್ನಿಕಲ್ ಅಥವಾ ತಾಂತ್ರಿಕ ಪ್ರಯೋಗಗಳನ್ನೂ ಕೂಡಾ ಮಾಡುತ್ತಾರೆ. ಸಿನಿಮಾದಲ್ಲಿ
ಕೆಲವು ಕಡೆ ಶಬ್ದದ ಗತಿ (ವೇಗ)ಯನ್ನು ಬೇಕಾದ ರೀತಿಯಲ್ಲಿ ಹೆಚ್ಚು ಕಡಿಮೆ ಮಾಡುವ ಪ್ರಯೋಗ ಮಾಡಿದರು.
35ಎಂ.ಎಮ್ ಲೆನ್ಸ್ ಜತೆಗೆ 300ಎಮ್. ಎಮ್. ಹಾಗೂ 18 ಎಮ್.ಎಮ್. ಲೆನ್ಸ್ಗಳನ್ನೂ ಬಳಸಿದರು.
ಹೀಗೆ ಬಹುತೇಕ ಘಟಕ್
ಅವರ ಕಲ್ಕತ್ತಾ ಮೂಲದ ಸಿನಿಮಾಗಳು ಬಂಗಾಳ ವಿಭಜನೆಯ ಪ್ರಶ್ನೆಯನ್ನು ಅತ್ಯಂತ ಗಂಭೀರವಾಗಿ ಎತ್ತಿದುವು.
ಇದು ಆದಾಗಲೇ ಇದ್ದ ಕಲ್ಕತ್ತಾ ನಗರದ ವಿವಿಧ ವರ್ಗಗಳು ಹಾಗೂ ನಿರಾಶ್ರಿತರಿಂದ ರೂಪುಗೊಂಡ ಹೊಸವರ್ಗಗಳು,
ಅವುಗಳ ನಡುವಿನ ವ್ಯತ್ಯಾಸ, ನಿರಾಶ್ರಿತರ ದು:ಖ, ದುಮ್ಮಾನ, ಹಸಿವು ಬಡತನವನ್ನು ಪರಿಣಾಮಕಾರಿಯಾಗಿ
ಚಿತ್ರಿಸಿದುವು. ಬಹುಶ: ಇಡೀ ಭಾರತೀಯ ಚಲನಚಿತ್ರ ಚರಿತ್ರೆಯಲ್ಲಿ ನಿರಾಶ್ರಿತ ಎಂದರೆ ಯಾರು? ಆತ ಹೇಗೆ
ಉಂಟಾದ, ಯಾಕೆ ಉಂಟಾದ, ಸದ್ಯದ ಅವನ ದಾರುಣ ಸ್ಥಿತಿಯೇನು? ಎಂಬ ಬಗ್ಗೆ ರಿತ್ವಿಕ್ ಘಟಕ್ರ ಸಿನಿಮಾಗಳು
ಚಿತ್ರಿಸಿದ ರೀತಿಯಲ್ಲಿ ಬೇರೆ ಯಾರ ಸಿನಿಮಾಗಳೂ ಚಿತ್ರಿಸಲಿಲ್ಲ. ಇವರ ಸಿನಿಮಾದ ಬಹುತೇಕ ಪಾತ್ರಗಳು
ತನ್ನ ಮೂಲನೆಲೆ ಅಥವಾ ಮಾತೃಭೂಮಿಯನ್ನು ತೊರೆದು ಕಲ್ಕತ್ತಾದ ಕೊಳಗೇರಿಗಳಲ್ಲಿ ತನ್ನ ಅಸ್ತಿತ್ವ, ಗುರುತು
ಹಾಗೂ ಅಸ್ಮಿತೆಯನ್ನು ಹುಡುಕಲು ಪ್ರಯತ್ನಿಸುತ್ತವೆ. ಇದೇ ಹೊತ್ತಿಗೆ ಕಲ್ಕತ್ತಾ ನಗರದ ಕುರಿತು ತಮ್ಮ
ಅಸಹನೆ, ಕೋಪ, ವ್ಯಂಗ್ಯವನ್ನು ಹೊರಹಾಕುತ್ತವೆ. ಜತೆಗೆ ಎಲ್ಲಿಯೂ ಕೂಡಾ ಜೀವನದ ಬಗೆಗೆ ನಿರಾಸೆಯನ್ನು
ಅವುಗಳು ಅಲ್ಲಿಯ ಪಾತ್ರಗಳು ವ್ಯಕ್ತಪಡಿಸುವುದಿಲ್ಲ. ಜೀವನದಿಂದ ವಿರಮಿಸುವುದಿಲ್ಲ. ಇಷ್ಟೆಲ್ಲಾ ಆದರೂ
ಈಶ್ವರ್ ಬಿನುವಿನ ಕಾರಣದಿಂದ ಭರವಸೆಯನ್ನು ಕಳೆದುಕೊಳ್ಳದೇ ಪುನ: ಬದುಕುವತ್ತ ಮನಸ್ಸು ಮಾಡುತ್ತಾನೆ.
ನೋವು ಹತಾಶೆಯನ್ನು ಅವುಗಳು ಪ್ರಕಟಿಸುತ್ತಲೇ ನೀತಾಳ ರೀತಿಯಲ್ಲಿ, ‘ನಾನು ಬದುಕಬೇಕು, ನಾನು ಬದುಕಬೇಕು’ ಎನ್ನುತ್ತಾ ಬದುಕಿನ ಪರವಾಗಿ ಮಾತನಾಡುತ್ತವೆ. ಬದುಕಿನ ಪರವಹಿಸುತ್ತವೆ.
ಋತ್ವಿಕ್
ಬರಹ ಮತ್ತು ಕೃತಿಗಳು
ಸಿನಿಮಾ ನಿರ್ದೇಶನ
ಮತ್ತು ರಂಗಭೂಮಿ ನಟನೆ ನಿರ್ದೇಶನದ ಜತೆಗೆ ಸೃಜನಶೀಲವೆಂದು ಕರೆಯುವ ಸಣ್ಣ ಕಥೆ ಮತ್ತು ಕವಿತೆಗಳನ್ನು
ಕೂಡಾ ಅವರು ಬರೆಯುತ್ತಿದ್ದರು. ಅದೇ ಹೊತ್ತಿಗೆ ಸಿನಿಮಾ ವಿಮರ್ಶೆ, ಸಿನಿಮಾ ಭಾಷೆ ವ್ಯಾಕರಣದ ಕುರಿತು
ದೀರ್ಘ ಪ್ರಬಂಧಗಳು, ಬೇರೆ ಬೇರೆ ಕಲಾ ಪ್ರಕಾರಗಳು, ಸಾಹಿತ್ಯ, ಸಂಗೀತ, ರಾಜಕೀಯ ತತ್ವಜ್ಞಾನದ ಕುರಿತೂ
(ಸೃಜನೇತರ) ಸಾಕಷ್ಟು ಬರಹಗಳನ್ನೂ ಬರೆದಿದ್ದಾರೆ. 1954ರಲ್ಲಿ ಕಮ್ಯುನಿಸ್ಟ್ ಪಾರ್ಟಿಯ ಸಾಂಸ್ಕøತಿಕ
ವಿಭಾಗಕ್ಕೆ ಬರೆದ, ‘ಎ ತಿಸೀಸ್ ಸಬ್ಮಿಟ್ಡ್ ಬೈ ರಿತ್ವಿಕ್ ಘಟಕ್ ಟು ದಿ ಕಮ್ಯೂನಿಸ್ಟ್ ಪಾರ್ಟಿ ಆಫ್
ಇಂಡಿಯಾ’ ಬರಹವು ಘಟಕ್ ಅವರು ಬರೆದ ಅತ್ಯಂತ ಗಂಭೀರವಾದ ಒಂದು ಬರವಣಿಗೆಯಾಗಿದೆ. ಈ ಇಡೀ ಪ್ರಬಂಧವು ಒಂದು
ಪ್ರಸ್ತಾವನೆಯನ್ನು ಹಾಗೂ ನಾಲ್ಕು ಭಾಗಗಳನ್ನು ಹೊಂದಿದೆ. ಇದನ್ನು ಕಲ್ಕತ್ತೆಯ ಡೇ ಪಬ್ಲಿಶರ್ಸ್ ಪ್ರಕಟ
ಮಾಡಿದೆ. ಇದೇ ಪ್ರಕಾಶನವು ಘಟಕ್ ಅವರ 17 ಕಥೆಗಳ ಒಂದು ಸಂಕಲನವನ್ನು ಪ್ರಕಟಿಸಿದೆ. ಲೇಖಕನಾಗಿ ಅವರ
ಸಣ್ಣಕಥೆಗಳು ಓದುಗರ ಮೇಲೆ ಸಾಕಷ್ಟು ಪ್ರಭಾವವನ್ನು ಬೀರಿದೆ. ಆಗಿನ ಬಂಗಾಳೀ ಸಮಾಜ, ರಾಜಕೀಯ, ಬೇರೆ
ಬೇರೆ ಸಾಮಾಜಿಕ ವರ್ಗಗಳು. ಬಡತನ, ಕಾಲ, ಸಂಸ್ಕøತಿಯ ಕುರಿತು ಅವುಗಳು ಮಾತನಾಡುತ್ತವೆ. ಋತ್ವಿಕ್ ಘಟಕ
ಒಬ್ಬ ಕವಿಯೂ ಹೌದು. ಸುಮಾರು 1950ರಿಂದ 1967ರ ಅವಧಿಯಲ್ಲಿ ಅವರು ಯಾವುದೇ ಕಥೆಯನ್ನೇ ಬರೆದಿರಲಿಲ್ಲವಾಗಿತ್ತು.
1962ರಲ್ಲಿ ತನ್ನ ಬಾಲ್ಯ ಮತ್ತು ಯೌವನದ ಜೀವನಾನುಭವವನ್ನು ಆತ್ಮಕಥೆಯ ರೂಪದಲ್ಲಿ ಬರೆದಿದ್ದರು. ಒಂದು
ಕಾದಂಬರಿಯ ಕ್ರಮದಲ್ಲಿ ಅದನ್ನವರು ಬರೆದಿದ್ದರು. ಅಂತಹ ಕಾದಂಬರಿಯಲ್ಲಿ ಅವರು ಪೂರ್ವ ಬಂಗಾಳದಲ್ಲಿ
ಸವೆಸಿದ ಬಾಲ್ಯ, ಹಸಿರು, ಗದ್ದೆ, ಪದ್ಮಾನದಿಯ ಬಗ್ಗೆ ವ್ಯಾಪಕವಾಗಿ ದಾಖಲಿಸಿ ಸುಖವೆಂದರೆ ಬಾಲ್ಯವಷ್ಟೇ
ಎಂಬ ಅಭಿಪ್ರಾಯವನ್ನೂ ದಾಖಲಿಸಿದ್ದರು. 1965ರಲ್ಲಿ ‘ಪಂಡಿತ್ ಮೊಶಾಯ್’ ಎನ್ನುವ ಹೆಸರಿನ ನೀಳ್ಗತೆ ಅಥವಾ ಕಾದಂಬರಿಯನ್ನು ಇಂಗ್ಲೀಷ್ನಲ್ಲಿ ಬರೆದಿದ್ದರು. ಇದನ್ನೇ
ಆಧಾರವಾಗಿಸಿ ಮಾತೃಭೂಮಿ ಅಥವಾ ಜನ್ಮ ಭೂಮಿ ಎನ್ನುವ ಸಿನಿಮಾ ಸ್ಕ್ರಿಪ್ಟ್ ಅನ್ನು ರಚಿಸಿದ್ದರು.
1963ರಿಂದ 1971ರ ಹೊತ್ತಿಗೆ ಘಟಕ್ ಅವರಲ್ಲಿ ಸಾಕಷ್ಟು ಸಿನಿಮಾ ಕೈಯಲ್ಲಿರಲಿಲ್ಲ. ಆಗ ಸಿನಿಮಾ ಮತ್ತು
ಕಲೆ ಕುರಿತಾದ ಅನೇಕ ಪ್ರಬಂಧಗಳನ್ನು ಹಾಗೂ ಒಂದು ಡಝನ್ ಚಿತ್ರಕಥೆಗಳನ್ನು ಅವರು ರಚಿಸಿದ್ದರು.
ಅವರ ಕಥೆಗಳಲ್ಲಿ
ಸಾವು ಅತ್ಯಂತ ವಿಶಿಷ್ಠ, ಅಸಂಗತವಾಗಿ ಕಾಣಿಸಿಕೊಳ್ಳುತ್ತದೆ. ಎಜಹಾರ್, ಪ್ರೇಮ್, ಕಥೆಗಳಲ್ಲಿ ಈ ರೀತಿ
ಅನುಭವಗಳು ಕಾಣುತ್ತವೆ. ಇಲ್ಲಿ ಹೇಗೆ ಸಾವು ಎನ್ನುವುದಕ್ಕಿಂತಲೂ ಏಕೆ ಸಾವು ಎನ್ನುವುದು ಬಹಳ ಮುಖ್ಯವಾಗುತ್ತದೆ.
ಅವರ ಕಾಮ್ರೇಡ್, ಚೋಕ್ (ಕಣ್ಣುಗಳು), ರೂಪಕಥಾ, ಭೂಸ್ವರ್ಗ ಅಚಂಚಲ ಕಥೆಗಳು ಬಹಳ ಜನಪ್ರಿಯ ಮತ್ತು ಪ್ರಮುಖವಾದವುಗಳು.
ಭೂಸ್ವರ್ಗ ಅಚಂಚಲ್ ಕಥೆಯು ಅವರ ಕೊನೆಯ ಕಥೆಯಾಗಿದ್ದು ಕಾಶ್ಮೀರದಲ್ಲಿ ಶೇಖ್ ಅಬ್ದುಲ್ಲಾ ಇದ್ದ ಹೊತ್ತಿಗೆ
ರಾಜಕೀಯ ಪ್ರೇರಿತವಾಗಿ ನಡೆದಂತಹ ಕೋಮು ಗಲಭೆಗಳಲ್ಲಿ ಪ್ರತ್ಯೇಕ ರಾಜ್ಯವನ್ನು ಬಯಸದಿದ್ದರೂ ಕೂಡಾ ಮುಸ್ಲಿಮರು
ಯಾವ ರೀತಿ ಬಲಿಪಶುಗಳಾದರು ಎನ್ನುವುದನ್ನು ತಿಳಿಸುತ್ತದೆ. ಇದೇ ಹೊತ್ತಿಗೆ ಆಗ ಸಕ್ರಿಯವಾಗಿದ್ದ ಆಝಾದ್
ಕಾಶ್ಮೀರ್ ಚಳುವಳಿಯ ಫ್ಯಾಸಿಸ್ಟ್ ಗುಂಪನ್ನು ಅವರು ಹಿಟ್ಲರ್ನ ಪೋಲೀಸ್ ಪಡೆಯಾಗಿದ್ದ ಗೆಸ್ಟಾಪೋ ಜತೆ
ಹೋಲಿಸುತ್ತಾರೆ. ಇಲ್ಲಿ ನಡೆದ ಕೊಲೆಯ ರೀತಿಯ ಕೆಲವು ದೃಶ್ಯ ವಿವರಗಳನ್ನು ವಸ್ತುವಿನ ದೃಷ್ಠಿಯಿಂದ
ಸಂಬಂಧಿಸಿರದಿದ್ದರೂ ಕೂಡಾ ಸುಬರ್ಣರೇಖಾ ಸಿನಿಮಾದಲ್ಲಿ ಚಿತ್ರಿಸುತ್ತಾರೆ. ಈ ಕಥೆಯಲ್ಲಿ ಬಂಗಾಳೀ ಸ್ಥಳೀಯ
ಭಾಷೆಯನ್ನು ಅವರು ಬಳಸುತ್ತಾರೆ. ಇದೇ ಹೊತ್ತಿಗೆ ಅವರ ಇನ್ನೊಂದು ಪ್ರಸಿದ್ಧ ಕಥೆ ‘ದಲೀಲ್’ನಲ್ಲಿ ಅವರು ಪಕ್ಕಾ ಪೂರ್ವ ಬಂಗಾಳದ ಬಂಗಾಳೀ ಭಾಷೆಯನ್ನು ಬಳಸುತ್ತಾರೆ. ಶಬ್ದ ಮತ್ತು ಸಂಗೀತವನ್ನು
ಒಂದು ವಿಶಿಷ್ಠ ಹದದಲ್ಲಿ ಬಹುತೇಕ ತಮ್ಮ ಕಥೆಗಳಲ್ಲಿ ಅವರು ಬಳಸುತ್ತಾರೆ. ಪರಾಶ್ ಪತಾರ್ ಎನ್ನುವ ಕಥೆಯಲ್ಲಿ
ಕಲ್ಲಿದ್ದಲು ಗಣಿಯ ಸ್ಫೋಟಕ್ಕೆ ರಾಗ್ ಕೈಫಿಯ ಸ್ವರವನ್ನು ಬಳಸಿದರು. ಶಬ್ದ ಮತ್ತು ಸಂಗೀತದ ಅನುಭವಕ್ಕೆ
ಹಲವು ಪಾತ್ರಗಳನ್ನು ತಮ್ಮ ಕಥೆಗಳಲ್ಲಿ ಸೃಷ್ಠಿಸಿದರು. ಆಕಾಶಗಂಗರ್ ಸ್ರೋತ್ ದ್ಹೋರೆ ಅವರ ಮೊದಲ ಕಥೆಯಾಗಿದೆ,
ಅದು ಗಲ್ಫೋ ಭಾರತಿ ಎಂಬ ಬಂಗಾಳಿ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ದೇಶ್, ಅಗ್ರಣಿ, ಶನಿಬಾರೇರ್ ಚಿತಿ,
ನೋತುನ್ ಸಾಹಿತ್ಯ, ಮತ್ತು ಪತ್ವಾದಂತಹ ಪತ್ರಿಕೆಗಳಲ್ಲಿ ಅವರ ಕಥೆಗಳು ಪ್ರಕಟವಾಗುತ್ತಿದ್ದವು. ದಲೀಲ್,
ರಾಜಾ ಕೂಡಾ ಅವರ ಪ್ರಮುಖ ಕಥೆಗಳಾಗಿದ್ದುವು. ರಾಜಾದಲ್ಲಿ ಕವಿಯೊಬ್ಬ ಕಾರಣಾಂತರದಿಂದ ಪಿಕ್ ಪಾಕೆಟರ್
ಆಗಿ ಬದಲಾದ ಪ್ರಸಂಗವಿದೆ.
ಘಟಕ್ ಅವರ ಗದ್ಯ
ಬರಹಗಳು ಕವಿತೆಯಂತೆ ನಮ್ಮನ್ನು ಓದಿಸಿಕೊಂಡು ಹೋಗುತ್ತವೆ. ಅಲ್ಲಿ ಸಾಕಷ್ಟು ವಿವರಣೆಗಳು ಹಾಗೂ ದೃಶ್ಯದ
ರೀತಿಯ ವಿವರ ಹಾಗೂ ಪ್ರತೀಕಗಳು ಓದುಗರಿಗೆ ಸಾಕಷ್ಟು ಮುದವನ್ನು ನೀಡುತ್ತವೆ. ಘಟಕ್ ಅವರ ಮೇಲೆ ಇಂಗ್ಲೀಷ್
ಕವಿ ವಿಲಿಯಂ ವಡ್ರ್ಸ್ವರ್ತ್ ಹಾಗೂ ವಿಲಿಯಂ ಅರ್ನೆಸ್ಟ್ ಹೆನ್ರಿಯ ಪ್ರಭಾವ ಸಾಕಷ್ಟಾಗಿತ್ತು. ಈ ಕಾರಣದಿಂದ
ತಮ್ಮ ರಚನೆಗಳಲ್ಲಿ ಅರಣ್ಯ, ಗಿಡಮರ ಬಳ್ಳಿ, ನಿಗೂಢತೆ, ಮತ್ತು ದಟ್ಟವಾದ ಗಾಳಿ ಮುಂತಾದವುಗಳ ಉಪಮೆ
ರೂಪಕಗಳನ್ನು ಬಳಸಿ ಮನುಷ್ಯ ಸಂಬಂಧದ ಅನಾವರಣ ಮಾಡುತ್ತಿದ್ದರು.
ಘಟಕ್ ಅವರು ಅತ್ಯಂತ
ಗಂಭೀರವಾಗಿ ಸಿನಿಮಾಗಳ ಕುರಿತು ವಿಮರ್ಶೆ, ಅಧ್ಯಯನ ಪ್ರಬಂಧಗಳನ್ನು ಬರೆದಿದ್ದರು. ಅಂತಹ ಸಿನಿಮಾ ಬರಹಗಳ
ಸಂಕಲನವೇ ‘ಸಿನಿಮಾ ಆ್ಯಂಡ್ ಐ’ ಕೃತಿ. ಇಲ್ಲಿನ ಬರಹಗಳ ಮೂಲಕ ಘಟಕ್ ಸಾಮಾನ್ಯವಾಗಿ ಅರ್ಥೈಸಿಕೊಂಡ
ಸಿನಿಮಾಗಳ ಸ್ವರೂಪ ಮತ್ತು ವಸ್ತುವನ್ನು ಪ್ರಶ್ನಿಸುತ್ತಿದ್ದರು. ಅವರು ಸಿನಿಮಾಗಳ ಕುರಿತಂತೆ ಇಲ್ಲಿ
ತನ್ನದೇ ಆದ ಅನೇಕ ವಿಚಾರಗಳನ್ನು ವ್ಯಕ್ತಪಡಿಸಿದ್ದಾರೆ. ಅವರ ಇನ್ನೊಂದು ಕೃತಿ ‘ಆಗ್ರ್ಯುಮೆಂಟ್ಸ್
ಅಥವಾ ಸ್ಟೋರೀಸ್’ ಕೂಡಾ ಸಿನಿಮಾದ ರೂಪ ಮತ್ತು ವಸ್ತುಗಳ ಕುರಿತು ಮಾತನಾಡುತ್ತದೆ.
ಘಟಕ್ ಸರಿಸುಮಾರು 50ಕ್ಕಿಂತಲೂ ಹೆಚ್ಚು ಪ್ರೌಢ ಪ್ರಬಂಧಗಳನ್ನು ಸಿನಿಮಾ ಕುರಿತಂತೆ ರಚಿಸಿದ್ದಾರೆ.
‘ಇವುಗಳು ಬಹುತೇಕ ಸಿನಿಮಾದ ಎಲ್ಲಾ ಅಂಶ ಆಯಾಮಗಳನ್ನು ಸ್ಪರ್ಶಿಸಿದೆ’ ಎಂದು ಇನ್ನೊಬ್ಬ ಪ್ರಸಿಧ್ಧ ಬಂಗಾಳೀ ಭಾರತೀಯ ನಿರ್ದೇಶಕ ಸತ್ಯಜಿತ್ ರೇ ತಿಳಿಸುತ್ತಾರೆ.
‘ಚಲನಚಿತ್ರ, ಮಾನುಷ್ ಎ ಬೊಂಗ್ ಅರೋ ಕಿಚು’ ಎನ್ನುವ ಅವರ ಮಹತ್ವದ ಕೃತಿ ಕೂಡಾ ಸಿನಿಮಾದ ಕುರಿತ ಪ್ರಬಂಧಗಳ ಸಂಕಲನವಾಗಿದೆ.
ಇಂಗ್ಲೀಷ್ ಭಾಷೆಯಲ್ಲಿ ಅವರು ಪ್ರಕಟಿಸಿದ, ‘ರೋವ್ಸ್ ಆ್ಯಂಡ್ ರೋವ್ಸ್ ಆಫ್ ಫೆನ್ಸಸ್: ರಿತ್ವಿಕ್ ಘಟಕ್
ಆನ್ ಸಿನಿಮಾ’ ಕೃತಿಯೂ ಕೂಡಾ ಸಿನಿಮಾ ಭಾಷೆ, ರಚನೆ, ಸಿನಿಮಾ ವ್ಯಾಕರಣದ ಕುರಿತಾಗಿದೆ.
ಘಟಕ್ ಅವರು ಸತ್ಯಜಿತ್
ರೇ ಅವರ ಪಥೇರ್ ಪಾಂಚಾಲಿಯಂತಹ ಭಾರತದ ಬಹುಶ್ರೇಷ್ಠ ಸಿನಿಮಾ ನಿರ್ದೇಶಕನ ಸಿನಿಮಾ ಬಗೆಗೆ ಕೂಡಾ ಕಟುವಾದ
ವಿಮರ್ಶೆಯನ್ನು ನಡೆಸಿದ್ದರು. ‘ಪಥೇರ್ ಪಾಂಚಾಲಿ ಒಂದು ಸಾಹಿತ್ಯ ಕೃತಿಯ ರೂಪಾಂತರವಾದರೂ ಕೂಡಾ ಸಿನಿಮಾ
ಮಾಧ್ಯಮದಲ್ಲಿ ಹೇಳಲ್ಪಟ್ಟಿದೆ. ಚಿತ್ರ ಮತ್ತು ಶಬ್ದವು ಇಂತಹ ಮೌಲ್ಯವನ್ನು ವರ್ಧಿಸಿದೆ’ ಎಂದು ಇದರ ಕುರಿತು ಅವರು ಅಭಿಪ್ರಾಯಪಟ್ಟಿದ್ದರು. ಸಿನಿಮಾವಾಗಲೀ, ರಂಗಭೂಮಿ ಅಥವಾ ಸಾಹಿತ್ಯವಾಗಲೀ
ಒಬ್ಬ ವ್ಯಕ್ತಿಯು ಮಾನವ ಬದುಕಿನ ಎಲ್ಲಾ ಆಯಾಮದ ಹಾಗೂ ರಂಗದ ಅನುಭವವನ್ನು ಪಡೆಯಬೇಕೆಂದು ಘಟಕ್ ಅಭಿಪ್ರಾಯಪಟ್ಟಿದ್ದರು.
ಘಟಕ್ ಅವರು ಸಿನಿಮಾ,
ರಂಗಭೂಮಿ ಮತ್ತು ಸಾಹಿತ್ಯಕ ಬರವಣಿಗೆಗೆ ವೈವಿಧ್ಯದ ಸಾಹಿತ್ಯ, ವೈಚಾರಿಕ ಬರವಣಿಗೆಗೆ ಸ್ಫೂರ್ತಿಯನ್ನು
ಸಂಸ್ಕøತ ಸಾಹಿತ್ಯ, ವೇದ, ಪುರಾಣ ಉಪನಿಷತ್ಗಳಿಂದಲೂ ಪಡೆದರು. ಅಂತಹ ಸಾಕ್ಷ್ಯಗಳು ಅವರ ಸಿನಿಮಾಗಳಲ್ಲೂ
ಕಾಣಸಿಗುತ್ತವೆ. ಅನೇಕ ಸಂದರ್ಭದಲ್ಲಿ ಸಂಸ್ಕøತದ ಶ್ಲೋಕಗಳನ್ನು, ಸೂಕ್ತಿಗಳನ್ನು ಅವರು ಬಳಸಿದ ಉದಾಹರಣೆಗಳಿವೆ.
ಸುಬರ್ಣರೇಖಾದಲ್ಲಿ ಈಶ್ವರನ ಸ್ನೇಹಿತನಾದ ಹರಪ್ರಸಾದ್ ಕಲ್ಕತ್ತೆಯ ಬಾರ್ನಲ್ಲಿಯೂ ಸಂಸ್ಕøತ ಶ್ಲೋಕಗಳನ್ನು
ಬಾಯಿ ತುಂಬಾ ಹೇಳುವ ಸಂದರ್ಭಗಳನ್ನೂ ನಾವು ಗಮನಿಸಬಹುದಾಗಿದೆ. 1942ರಲ್ಲಿ ಕಾನ್ಪುರದಲ್ಲಿನ ಮಿಲ್ನಲ್ಲಿ
ಕೆಲಸ ಮಾಡುತ್ತಿದ್ದಾಗ ಸುಮಾರು ಸಾವಿರ ಪುಸ್ತಕಗಳನ್ನು ಖರೀದಿಸಿ ಪೂರ್ವ ಬಂಗಾಳದಲ್ಲಿ ಅವರ ಮನೆ (ರಾಜಶಾಹಿ)ಯಲ್ಲಿ
ಘಟಕ್ ಗ್ರಂಥಾಲಯ ಮಾಡಿಕೊಂಡಿದ್ದರು. ಮಾಕ್ರ್ಸ್ನ ಬರವಣಿಗೆ ಕುರಿತು ಆಸಕ್ತಿ, ಹಿಟ್ಲರ್-ಮುಸಲನಿಯಂತಹ
ಫ್ಯಾಸಿಸ್ಟ್ಗಳ ವಿರೋಧದ ವಿಚಾರವನ್ನವರು ನೆಚ್ಚಿದ್ದರು. ಇದಲ್ಲದೇ ಕ್ರಮೇಣ ಬುದ್ಧನ ಕುರಿತು, ಚರಿತ್ರೆ
ಮತ್ತು ಆರ್ಖಿಯಾಲಜಿಯ ಕುರಿತು ಮನ:ಶಾಸ್ತ್ರದ ಕುರಿತು ಆಸಕ್ತಿಯನ್ನು ಬೆಳೆಸಿಕೊಂಡಿದ್ದರು. ವಿಶೇಷವಾಗಿ
ಮನ:ಶಾಸ್ತ್ರಜ್ಞ ಕಾರ್ಲ್ ವೋನ್ ಯೂಂಗ್ನ ಬರಹಗಳು ಹಾಗೂ ಭಾರತೀಯ ಕಲೆ, ಸಂಸ್ಕøತಿ, ತತ್ವಶಾಸ್ತ್ರದ
ಮೇಲೆ ಕೆಲಸ ಮಾಡಿದ ಶ್ರೀಲಂಕಾದ ತತ್ವಜ್ಞಾನಿ ಹಾಗೂ ವಿದ್ವಾಂಸ ಆನಂದಕುಮಾರ ಸ್ವಾಮಿಯವರ, ‘ದಿ ಡ್ಯಾನ್ಸ್
ಆಫ್ ಶಿವ’ ಮತ್ತಿತರ ಕೃತಿಗಳಿಂದ ಪ್ರೇರಣೆ ಪಡೆದಿದ್ದರು. ಎರಿಕ್ ನ್ಯುಮಾನ್ನ ದಿ ಗ್ರೇಟ್ ಮದರ್’, ಫ್ರಾಂಕ್ ಪರ್ಟ್ನ ‘ಬಿಫೋರ್ ಫಿಲಾಸಫಿ’, ಲಿವಿಸ್ ಸ್ಪೆನ್ಸ್ನ ‘ದಿ ಔಟ್ಲೈನ್ಸ್ ಆರ್ಫ ಮೈತಾಲಜಿ’, ರಾಬರ್ಟ್ ಲಿವಿಸ್ನ ‘ದಿ ಮೆತಡ್ ಆಫ್ ಮ್ಯಾಡ್ನೆಸ್’ ಕೃತಿಗಳು ಘಟಕ್ ಮೇಲೆ ವ್ಯಾಪಕವಾದ ಪ್ರಭಾವ ಪರಿಣಾಮವನ್ನು ಬೀರಿದ್ದುವು. ಸುಮಾರು 1956 ಮತ್ತು
1966ರ ನಡುವೆ ರಿತ್ವಿಕ್ ಮಾಡಿದ ಬಹುತೇಕ ಸಿನಿಮಾಗಳಲ್ಲಿ ಈ ರೀತಿಯ ಕೃತಿಗಳ ವಿಚಾರ ಮತ್ತು ತತ್ವಗಳ
ಪ್ರೇರಣೆಯನ್ನು ಕೂಡಾ ನಾವು ಗಮನಿಸಬಹುದಾಗಿದೆ.
ಘಟಕ್
ಅವರ ಮಹಿಳಾಪಾತ್ರಗಳು
ಘಟಕ್ ಅವರ ಸಿನಿಮಾಗಳಲ್ಲಿ
ಬಹುತೇಕ ಮಹಿಳಾಪಾತ್ರಗಳು ಅತ್ಯಂತ ಅನಂತ ಚೈತನ್ಯ, ಶಕ್ತಿಯನ್ನು ಸೂಸುವ ಪಾತ್ರಗಳಾಗಿವೆ. ಅವುಗಳಿಗೆ
ಭಾರತೀಯ ಪುರಾಣಗಳ ಮಹಿಳೆಯ ಗುಣಲಕ್ಷಣಗಳೂ ಉಂಟು. ಅದೇ ಹೊತ್ತಿಗೆ ವರ್ಗ ಸಂಘರ್ಷದ ಕುರಿತು ಹೇಳುತ್ತಾ,
ಕ್ರಾಂತಿಯೇ ತಾಯಿ, ಸುಧಾರಣೆ ಹಾಗೂ ರಾಜಕೀಯ ಹೋರಾಟವೇ ತಾಯಿಯೆಂದು ಕರೆದ ಕಮ್ಯೂನಿಸ್ಟ್ ವಿಚಾರದ ಪ್ರೇರಣೆಯೂ
ಅವುಗಳಿಗೆ ಇದೆ. ಕೆಲವೊಮ್ಮೆ ಇವೆರಡರ ಕಸಿಯಾಗಿಯೂ ಅವುಗಳು ಕಾಣುತ್ತವೆ. ಅನುದಿನದ ಬೇಗೆಯಲ್ಲಿ ಬೇಯುತ್ತಾ
ತನ್ನ ಮತ್ತು ಸಂಸಾರದ ಅಸ್ತಿತ್ವಕ್ಕಾಗಿ ಅವುಗಳು ಸಾಕಷ್ಟು ಹೋರಾಟ ನಡೆಸುತ್ತವೆ. ಬಹುತೇಕ ಮಹಿಳಾಪಾತ್ರಗಳು
ಪೂರ್ವ ಬಂಗಾಳದ ತಮ್ಮ ಬೇರು ಮೂಲದಿಂದ ವಂಚಿತವಾಗಿ ಈಗ ವಲಸೆ ಬಂದು ನೆಲೆಸಿದ ಕಲ್ಕತ್ತೆಯಲ್ಲಿ ಸಾಕಷ್ಟು
ಕಷ್ಟಪಡುತ್ತವೆ. ನಾಗರಿಕ್ ಸಿನಿಮಾದ ಮುಖ್ಯ ಪಾತ್ರವಾದ ರಾಮುವಿನ ತಾಯಿ, ಆತನ ಸ್ನೇಹಿತೆ ಉಮಾ, ಆಕೆಯ
ತಂಗಿಯ ದುರಂತಗಳು ಮಹಿಳೆಯ ಹೋರಾಟದ ಹಾಡನ್ನು ನೆನಪಿಸುತ್ತವೆ. ಉಮಾಳಂತೂ ಸಿನಿಮಾ ಆರಂಭದಲ್ಲಿ ಗಟ್ಟಿಯಾಗಿ
ಕ್ರಮೇಣ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ನಲುಗಿ ಹೋಗುತ್ತಾಳೆ. ತನ್ನ ಸಂಸಾರವನ್ನು ಪಾಲನೆ ಮಾಡಿ,
ಪೊರೆದು ಸುಸ್ತಾಗುತ್ತಾಳೆ.
ಮೇಘೆ ಡಾಕಾ ತಾರಾ
ಸಿನಿಮಾದ ಮುಖ್ಯ ಪಾತ್ರವಾದ ನೀತಾಳಂತೂ ಬಂಗಾಳದ ಪ್ರಸಿದ್ಧ ದೇವಿ ಆರಾಧನೆಯ ಪೂಜಾ ದಿನವಾದ ಜಗದ್ಧಾತ್ರಿಯ
(ದುರ್ಗೆಯ) ಜಯಂತಿಯಂದು ಹುಟ್ಟಿದವಳು. ಆದರೆ ಕಡುಕಷ್ಟದ ನಡುವೆ ಇಡೀ ಕುಟುಂಬವನ್ನು ದುಡಿದು ಪೊರೆದು
ಕೊನೆಗೆ ಕ್ಷಯರೋಗಕ್ಕೆ ತುತ್ತಾಗಿ ಕುಸಿತವನ್ನು ಅನುಭವಿಸುತ್ತಾಳೆ. ಆಕೆ ತನ್ನ ಆರೋಗ್ಯ ಮತ್ತು ಸ್ವಂತದಕ್ಕೆ
ಸ್ವಲ್ಪವೂ ಗಮನಹರಿಸುವುದೇ ಇಲ್ಲ. ಸಾಂಪ್ರದಾಯಿಕವಾದ ಭಾರತೀಯ ಮಹಿಳೆಯ ಮಾದರಿಯಾಗಿ ನೀತಾ ಇಲ್ಲಿ ಕಂಡುಬರುತ್ತಾಳೆ.
ಪಾಲನೆಯೇ ಅವಳಿಗೆ ಬಹಳ ಪ್ರಮುಖವಾಗುತ್ತದೆ.
ಸುಬರ್ಣರೇಖಾ ಸಿನಿಮಾದ
ಸೀತಾಳದಂತೂ ಇನ್ನೂ ಗೋಳಿನ ಕಥೆ. ಆಕೆಗೂ ಕೂಡಾ ಸ್ವತಂತ್ರ ಅಸ್ತಿತ್ವವಿಲ್ಲ. ಆಕೆ ಕೂಡಾ ಪೂರ್ವ ಬಂಗಾಳದಿಂದ
ತನ್ನ ಬೇರನ್ನು ಕಿತ್ತುಕೊಂಡು ಕಲ್ಕತ್ತೆಯ ಕೊಳಗೇರಿಯಲ್ಲಿ ತನ್ನ ನೆಲೆಯನ್ನು ಕಾಣದೇ ವಿಫಲವಾಗಿ ಸತ್ತವಳು.
ರಾಮಾಯಣದ ಸೀತೆಯಂತೆಯೇ ನಮ್ಮ ಈ ಆಧುನಿಕ ಸೀತೆ ಉಳಿದವರ ಬಗ್ಗೆ ಗಮನಹರಿಸಿ, ತನ್ನನ್ನು ಆರೈಕೆ ಮಾಡಿಕೊಳ್ಳದೇ
ದುರಂತ ಅಂತ್ಯವನ್ನು ಕಾಣುತ್ತಾಳೆ. ಘಟಕ್ರ ಬಹುತೇಕ ಸ್ತ್ರೀಪಾತ್ರಗಳು ದುರಂತ ಅಂತ್ಯವನ್ನು ಕಾಣುತ್ತವೆ.
ಅವರ ಇನ್ನೊಂದು
ಮಹತ್ವದ ಸಿನಿಮಾ, ‘ತಿತಾಶ್ ಏಕ್ತಿ ನಾದಿರ್ ನಾಮ್’ ಕೂಡಾ ಬಸಂತಿ ಎಂಬ ಬಡ ಮೀನುಗಾರ ಮಹಿಳೆಯು ಬಡತನ ಮತ್ತು ದೈನ್ಯದ
ನಡುವೆ ಕಷ್ಟಪಟ್ಟು ದುಡಿದು ಸಾಯುವ ಕುರಿತಾದುದು. ಇದೇ ಸಿನಿಮಾದ ಮುಂಗ್ಲಿ, ಮಾಲೋ ಮತ್ತು ಉಳಿದ ಮಹಿಳಾ
ಪಾತ್ರಗಳು ಕಷ್ಟದಲ್ಲಿ ಬದುಕಿದರೂ ಕೂಡಾ ತೀರಾ ಅಸಹಾಯಕವಲ್ಲ. ಕುಟುಂಬದ ಪಾಲನೆ ಮತ್ತು ಅವುಗಳು ಪುರುಷ
ಪಾತ್ರಗಳನ್ನು ನಿವಾಳಿಸಿ ತೋರುವಂತಹ ಮಾನವೀಯತೆ ಏನಿದೆ ಅದು ಹಿಮಾಲಯದಷ್ಟು ಎತ್ತರವಾಗಿರುವಂತದ್ದಾಗಿದೆ.
ಸಮ್ಮಾನ,
ಪ್ರಶಸ್ತಿ, ಗೌರವಗಳು ಹಾಗೂ ಶಿಷ್ಯ ಸಂಪ್ರದಾಯ
ಘಟಕ್ ಅವರಿಗೆ ಭಾರತ
ಸರ್ಕಾರವು 1970ರಲ್ಲಿ ಕಲೆ ಮತ್ತು ಸಿನಿಮಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಪದ್ಮಶ್ರೀ ಪ್ರಶಸ್ತಿಯನ್ನು
ನೀಡಿತು. ಅವರು ಚಿತ್ರಕಥೆ ರಚಿಸಿದ ಹೃಷಿಕೇಶ್ ಮುಖರ್ಜಿಯವರ ಮೊದಲ ಸಿನಿಮಾ ಮುಸಾಫಿರ್ 5ನೇ ರಾಷ್ಟ್ರೀಯ
ಸಿನಿಮಾ ಪ್ರಶಸ್ತಿ ಪಟ್ಟಿಯಲ್ಲಿ ಶ್ರೇಷ್ಠ ಸಿನಿಮಾ ಎಂಬ ಪ್ರಶಸ್ತಿಯನ್ನು ಪಡೆಯಿತು. ಅವರ ಜುಕ್ತಿ
ಟಕ್ಕೋ ಆರ್ ಗಪ್ಪೋ ಸಿನಿಮಾವು 1974ರಲ್ಲಿ ಭಾರತ ಸರ್ಕಾರದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ
ಶ್ರೇಷ್ಠ ಚಿತ್ರಕಥೆಯ ವಿಭಾಗದಲ್ಲಿ ಗೆದ್ದು ರಜತಕಮಲ ಅಥವಾ ರಾಷ್ಟ್ರಪತಿಗಳ ಬೆಳ್ಳಿ ಪದಕವನ್ನು ಪಡೆಯಿತು.
1970ರಲ್ಲಿ ಅವರು ಚಿತ್ರಕಥೆ ಬರೆದು ಶಾಂತಿ ಪಿ ಚೌಧರಿ ಅವರು ನಿರ್ದೇಶಿಸಿದ ಹೀರೇರ್ ಪ್ರಜಾಪತಿ ಎಂಬ
ಸಿನಿಮಾ ಶ್ರೇಷ್ಠ ಮಕ್ಕಳ ಚಿತ್ರಕ್ಕಾಗಿ ಸ್ವರ್ಣಕಮಲ ಪ್ರಶಸ್ತಿಯನ್ನು ಪಡೆಯಿತು.
ಫ್ರಾನ್ಸಿಸ್ ತ್ರೂಪೋ
ಎಂಬ ನಿರ್ದೇಶಕ 1959ರಲ್ಲಿ 400 ಬ್ಲೋಸ್ ಎಂಬ ಹೆಸರಿನಲ್ಲಿ ಫ್ರಾನ್ಸ್ ದೇಶದಲ್ಲಿ ಹೊಸ ಅಲೆ ಎಂಬ ಸಿನಿಮಾ
ಚಳುವಳಿಯನ್ನು ರೂಪಿಸುವುದಕ್ಕಿಂತ ಮುಂಚೆಯೇ ಬಂಗಾಳಿ ಭಾಷೆಯಲ್ಲಿ 1958ರಲ್ಲಿ ಬಹುತೇಕ ಈ ಸಿನಿಮಾದ
ಕಥಾವಸ್ತುವನ್ನೇ ಹೋಲುವಂತಹ ಬಾರಿ ತೇಕೇ ಪಾಲಿಯೇ ಸಿನಿಮಾವನ್ನು ರಿತ್ವಿಕ್ ಮಾಡಿದ್ದರು. ಯಂತ್ರಗಳನ್ನು
ಮನುಷ್ಯರಂತೆ ಚಿತ್ರಿಸಿ ಅಥವಾ ಮಾನವೀಯಗೊಳಿಸಿ 1982ರಲ್ಲಿ ಹರ್ಬೀ, ದಿ ಲವ್ ಬಗ್ ಎನ್ನುವ ಸಿನಿಮಾವನ್ನು
ಅಮೇರಿಕಾದ ವಾಲ್ಟ್ ಡಿಸ್ನಿ ಕಂಪೆನಿ ನಿರ್ಮಿಸುವ ಮುಂಚೆಯೇ ಘಟಕ್ ಅಜಾಂತ್ರಿಕ್ ಸಿನಿಮಾವನ್ನು ಮಾಡಿದ್ದರು.
ಭಾರತೀಯ ಸಿನಿಮಾ ಚರಿತ್ರೆಯಲ್ಲಿ ಕಲಾತ್ಮಕ ಸಿನಿಮಾವು 1955ರಲ್ಲಿನ ಸತ್ಯಜಿತ್ ರೇ ಅವರ ಬಂಗಾಲೀ ಸಿನಿಮಾ
ಪಥೇರ್ ಪಾಂಚಾಲಿಯೊಂದಿಗೆ ಆರಂಬವಾಯಿತು ಎನ್ನಲಾಗುತ್ತದೆ. ಆದರೆ ಘಟಕ್ ಅವರ ನಾಗರಿಕ್ ಸಿನಿಮಾ
1952ರಲ್ಲಿಯೇ ಸಿಧ್ಧವಾಗಿತ್ತು ಆದರೆ ಘಟಕ್ ಅವರ ಮರಣದ ನಂತರ 1977ರಲ್ಲಿ ಅದು ಬಿಡುಗಡೆಗೊಂಡಿತು.
ಜಗತ್ತಿನ ಚಲನಚಿತ್ರ ಚರಿತ್ರೆಯಲ್ಲೇ ಹಲವು ಪಾತ್ರಗಳ, ಕಥೆಗಳನ್ನು ಹೆಣೆದ ಸಿನಿಮ ಪ್ರಕಾರವಾಗಿ (ಅದನ್ನು
ಹೈಪರ್ಲಿಂಕ್ ಸಿನಿಮಾ ಎಂದು ಕರೆಯುತ್ತಾರೆ) ಘಟಕ್ ಅವರ ತಿತಾಶ್ ಎಕ್ತಿ ನಾದಿರ್ ನಾಮ್ ಮೂಡಿತು. ಅದಾದ
ನಂತರದ ಮೂರು ವರ್ಷದಲ್ಲಿ ಮೊದಲ ಹೈಪರ್ ಲಿಂಕ್ ಸಿನಿಮಾವಾಗಿ ಅಮೇರಿಕಾದ ನಿರ್ದೇಶಕ ರಾಬರ್ಟ್ ಆಲ್ಟ್ಮಾನ್
ಅವರ ನ್ಯಾಶ್ವಿಲ್ಲೇ ರಚಿತವಾಯಿತು.
ಘಟಕ್ ಅವರು ರೂಪಿಸಿ
ಪ್ರಭಾವಿಸಿದ ಶಿಷ್ಯಗಣ ಬಹಳ ದೊಡ್ಡದು. 1966ರಲ್ಲಿ ಪುಣೆಯಲ್ಲಿರುವ ಎಫ್.ಟಿ.ಐ.ಐ ಅಥವಾ ಭಾರತೀಯ ಸಿನಿಮಾ
ಮತ್ತು ದೂರದರ್ಶನ ಸಂಸ್ಥೆಯ ಉಪಪ್ರಾಂಶುಪಾಲರಾಗಿ ಹಾಗೂ ಬೋಧಕರಾಗಿ ಕೆಲಸ ನಿರ್ವಹಿಸಿ ಅಪಾರ ವಿದ್ಯಾರ್ಥಿಗಳನ್ನು
ಪ್ರೇರಿಸಿದರು. ಭಾರತದಲ್ಲಿ ಹೊಸ ಅಲೆ ಎಂಬ ಸಿನಿಮಾ ಚಳುವಳಿಗೆ ಕಾರಣರಾದ ಮಣಿ ಕೌಲ್ ಇವರ ವಿದ್ಯಾರ್ಥಿ.
ಕುಮಾರ್ ಸಹಾನೀ, ಅಡೂರ್ ಗೋಪಾಲಕೃಷ್ಣನ್, ಜಾನ್ ಅಬ್ರಾಹಮ್, ಸಯೀದ್ ಅಕ್ತರ್ ಮಿರ್ಝಾ ಮತ್ತು ಸುಭಾಷ್
ಘಾಯ್ ಮೊದಲಾದವರು ಇವರ ನೇರ ಶಿಷ್ಯರು. ಅಲ್ಲಿ ಬೋಧಿಸುತ್ತಿದ್ದಾಗ ವಿದ್ಯಾರ್ಥಿಗ ಜತೆ ಸೇರಿ ಫಿಯರ್
ಮತ್ತು ರೆಂಡೆಝ್ವಸ್ ಎಂಬ ಸಿನಿಮಾಗಳಿಗೆ ಮಾರ್ಗದರ್ಶನ ಮಾಡಿದ್ದರು. ಪರೋಕ್ಷವಾಗಿ ಕೂಡಾ ಘಟಕ್ ನೂರಾರು
ಸಿನಿಮಾಗಳಿಗೆ ಪ್ರೇರಣೆ ನೀಡಿದ್ದಾರೆ. ಹಿಂದಿ ನಿರ್ದೇಶಕ ಕೇತನ್ ಮೆಹ್ತಾ, ಸಲಾಮ್ ಬಾಂಬೆ ಸಿನಿಮಾ
ಖ್ಯಾತಿಯ ಮೀರಾ ನಾಯರ್ ಹಾಗೂ ಬಾಂಗ್ಲಾದೇಶದ ನಿರ್ದೇಶಕ ಶಾಹ್ ನವಾಝ್ ಕಾಕೋಲಿ, ಜರ್ಮನಿಯ ಕಲಾವಿದೆ
ಎಲೆನಾ ಕಝನ್ ಹಾಗೂ ಅಮೇರಿಕಾದ ಪ್ರಖ್ಯಾತ ನಿರ್ದೇಶಕ ಮಾರ್ಟಿನ್ ಸ್ಕೋರ್ಸೀಸಿ ಕೂಡಾ ಘಟಕ್ರಿಂದ ಪ್ರಭಾವಿತರು
ಭಾರತದ ಚಲನಚಿತ್ರ
ಚರಿತ್ರೆಯ ಸಂದರ್ಭದಲ್ಲಿ ಕ್ಯಾಮರಾ ಕೇವಲ ಒಂದು ಯಂತ್ರವಷ್ಟೇ ಆಗಿರದೆ ಅದು ವಿಚಾರಗಳನ್ನು ತಿಳಿಸುವ,
ವಿಮರ್ಶೆ ಮಾಡುವ, ಕವಿಯಷ್ಟೇ ಸ್ಪಂದಿಸುವ, ಚರಿತ್ರಕಾರನೂ ಆಗುವ ಹಾಗೂ ತತ್ವಜ್ಞಾನಿಯೂ ಆಗಬಲ್ಲದು ಎಂಬುದನ್ನು
ವ್ಯವಸ್ಥಿತವಾಗಿ ತೋರಿಸಿಕೊಟ್ಟ ನಿರ್ದೇಶಕನೆಂದರೆ ರಿತ್ವಿಕ್ ಘಟಕ್. ತನ್ನ ಸಿನಿಮಾದ ಅನೇಕ ಪಾತ್ರಗಳ
ಮೂಲಕ ಅವುಗಳು ಸವೆಸಿದ ಬದುಕನ್ನು ಅವುಗಳು ಪ್ರೀತಿಸುವ, ನಿರಾಕರಿಸುವ, ಹಳಿಯುವ, ಪ್ರಶ್ನಿಸುವ ಕೆಲಸವನ್ನು,
ನಿರೂಪಣೆಯನ್ನು ಘಟಕ್ ಮಾಡಿದರು. ಭಾರತೀಯ ಸಿನಿಮಾ ಭಾಷೆಗೆ ಅಮೂಲ್ಯ ತೊಡುಗೆಯನ್ನು ಘಟಕ್ ನೀಡಿದರು.
ಅತ್ಯಂತ ವಿಶಿಷ್ಠವಾದ ಸಂಗೀತ ಮತ್ತು ಶಬ್ದ ವಿನ್ಯಾಸವನ್ನು ತಮ್ಮ ಸಿನಿಮಾಗಳಲ್ಲಿ ತಂದು ತಮ್ಮ ಸಿನಿಮಾಗಳಲ್ಲಿ
ಒಂದು ಗತಿ ಶೀಲವಾದ ಸದಾ ಚಲಿಸುವ ಅರ್ಥ ಮತ್ತು ಮಹತ್ವವನ್ನು ಹೊಮ್ಮಿಸಿದರು. ಇದಕ್ಕಿಂತ ಮುಂಚೆ ಭಾರತೀಯ
ಭಾಷಾ ಸಿನಿಮಾಗಳಲ್ಲಿ ಸಂಭಾಷಣೆಯನ್ನು ಉದ್ದೀಪನಗೊಳಿಸುವ ಮತ್ತು ಪ್ರಭಾವಿಗೊಳಿಸುವ ಕಾರಣಕ್ಕಾಗಿ ಸಂಗೀತ
ಹಾಗೂ ಶಬ್ದವನ್ನಷ್ಟೇ ಬಳಸುತ್ತಿದ್ದರು. ಸಂಗೀತವನ್ನು ಮೂಡ್ ಮ್ಯೂಸಿಕ್ (ಭಾವ ಸಂಗೀತ) ಅಥವಾ ಯಾವುದೋ
ಒಂದು ಭಾವನೆಯನ್ನು ಪ್ರೇಕ್ಷಕರಿಗೆ ತಲುಪಿಸಲು, ಉದ್ದೀಪಿಸಲು ಬಳಸುತ್ತಿದ್ದರು. ಅಜಾಂತ್ರಿಕ್ನಿಂದ
ಆರಂಭಿಸಿ ಬಾರೀ ತೇಕೇ ಫಾಲಿಯೇ, ಮೇಘೇ ಡಾಕಾ ತಾರಾ, ಕೋಮಲ್ ಗಾಂಧಾರ್, ಸುಬರ್ಣ ರೇಖಾದವರೆಗೆ ಶಬ್ದ
ಮತ್ತು ಸಂಗೀತದ ಬಳಕೆಯ ಸಂದರ್ಭದಲ್ಲಿ ಒಂದು ವಿಶಿಷ್ಠವಾದ ಶೈಲಿಯನ್ನೇ ಅವರು ರೂಪಿಸಿದರು. ಅಂತಹ ಶೈಲಿಯು
ಸಿನಿಮಾದ ಸಾಮಾನ್ಯ ನೆಲೆಯ ಅರ್ಥವನ್ನು, ಮೌಲ್ಯವನ್ನು ವಿಶೇಷವಾಗಿ ಹೆಚ್ಚಿಸುತ್ತಿತ್ತು.
ಘಟಕ್ ಎಂಬ ವ್ಯಕ್ತಿಯೇ
ಒಂದು ಅತ್ಯಂತ ಅಪರೂಪದ ಮನುಷ್ಯ ಮತ್ತು ಮನಸ್ಸಿನ ದ್ಯೋತಕ. ಬಂಗಾಳದ ವಿಭಜನೆ ಇಂತಹ ಮನಸ್ಸನ್ನು, ವ್ಯಕ್ತಿತ್ವವನ್ನು
ಅತ್ಯಂತ ಪ್ರಭಾವಿಯಾಗಿ ಪರಿಣಮಿಸಿದೆ. ವಿಭಜನೆಯ ನಂತರ ಉಂಟಾದ ಧಾರ್ಮಿಕ-ಕೋಮು-ಮತೀಯ ಹಿಂಸೆ, ಆಸ್ತಿಪಾಸ್ತಿ
ನಾಶ, ನಿರಾಶ್ರಿತರ ಕ್ಯಾಂಪ್ಗಳು ಅಲ್ಲಿನ ಸಂಕಷ್ಟ, ಜನರ ನೋವು ದೈನ್ಯ ಈ ನಿರ್ದೇಶಕನನ್ನು ಬಹುವಾಗಿ
ಕಾಡಿದೆ. ಅದು ಒಂದು ರೀತಿಯಲ್ಲಿ ಅವರಿಗೆ ಮೂಲಬೇರನ್ನೇ ಅಥವಾ ನೆಲೆಯನ್ನೇ ಕಳೆದುಕೊಂಡ ಅಮಾನವೀಯ ಅನುಭವವಾಗಿತ್ತು.
ಇದು ಒಂದು ಕೆಟ್ಟ ವರ್ಗ ವ್ಯವಸ್ಥೆಯನ್ನೂ ಅಲ್ಲಿ ಸೃಷ್ಟಿಸಿತ್ತು. ಇಂತಹ ಸ್ಥಿತಿಯಿಂದಾಗಿ ಜನರು ಒಂದು
ರೀತಿಯ ಕೆಟ್ಟ ಏಕಾಂತ ಮತ್ತು ಪರಕೀಯ ಪ್ರಜ್ಞೆಯನ್ನೂ ಅನುಭವಿಸುವಂತಾಯ್ತು. ಇಂತಹ ಸ್ಥಿತಿಯನ್ನು ಸ್ವತ:
ಅನುಭವಿಸಿ ಘಟಕ್, ತಮ್ಮ ತಲೆಯಲ್ಲಿ ವಿಚಾರ ಮತ್ತು ಹೃದಯದಲ್ಲಿ ಅನುಕಂಪವಿರಿಸಿಕೊಂಡು ತಮ್ಮ ಸಿನಿಮಾದಲ್ಲಿ
ಅವುಗಳನ್ನು ಪಾತ್ರಗಳಾಗಿ ಎರಕಹೊಯ್ದರು. ಜಗತ್ತಿಗೆ ಇಂತಹ ಲೋಕವನ್ನು ಪರಿಚಯಿಸಿದರು. ಈ ಕಾರಣದಿಂದ
ಮಾನವನ ಸಮಾಜದ ಒಂದು ದಾರುಣ ಅನುಭವವಾಗಿ ಇವರ ಸಿನಿಮಾಗಳು ಬಂಗಾಳೀ ಭಾಷೆಯ ಗಡಿಯನ್ನೇ ಮೀರಿ ದೂರದ ಪಂಜಾಬ್,
ದಕ್ಷಿಣದ ಕರ್ನಾಟಕ, ಕೇರಳ, ರಷ್ಯಾ, ಪೋಲಂಡ್, ಕೊರಿಯಾ, ಪ್ಯಾಲಸ್ತಿನ್, ಅಮೆರಿಕಾ ಮತ್ತು ಸಂಪೂರ್ಣ
ಜಗತ್ತಿಗೆ ವ್ಯಾಪಿಸಿ ತೆರೆದುಕೊಂಡಿದ್ದು.
***
ಸೊಗಸಾದ ಲೇಖನ,ಘಟಕ ಅವರ ಚಿತ್ರಗಳನ್ನೆಲ್ಲ ಮತ್ತೊಮ್ಮೆ ನೋಡಲು ಪ್ರೇರೇಪಿಸಿತು
ಪ್ರತ್ಯುತ್ತರಅಳಿಸಿ