ಪುರಾಣ ಮತ್ತು ಇತಿಹಾಸ: ಪ್ರೊಫೆಸರ್ ಬಿ. ಸುರೇಂದ್ರ ರಾವ್.



 ಇತಿಹಾಸ-ಪುರಾಣಗಳ ಬಗ್ಗೆ ಸಾಮಾನ್ಯವಾಗಿ ನಮಗಿರುವ ಪರಿಕಲ್ಪನೆಗಳ ಕುರಿತು ಆಲೋಚಿಸಿದಾಗ ಅವುಗಳು ಕೆಲವೊಮ್ಮೆ ಅಸ್ಪಷ್ಟ ಅಥವಾ ಗೊಂದಲಮಯವಾಗಿ ತೋರುತ್ತವೆ. ಅದು ಅವುಗಳ ತೊಡಕೇ ಅಥವಾ ನಮ್ಮ ಸಮಸ್ಯೆಯೇ ಎಂಬ ಪ್ರಶ್ನೆಯನ್ನು ನಾವು ಎದುರಿಸಲೇ ಬೇಕು. ಒಂದೆಡೆ ವೇದಶಾಸ್ತ್ರಗಳಿಗೆ ವಿಧಿವತ್ತಾಗಿ ನಮಿಸುವಾಗ ನಾವು ಇತಿಹಾಸ-ಪುರಾಣಗಳನ್ನೂ ತಪ್ಪದೆ ಸೇರಿಸುವುದಿದೆ. ಅವುಗಳ ಬಗ್ಗೆ ಜನಮಾನಸದಲ್ಲಿ ಆದರ ಭಕ್ತಿಯಿದೆ. ಫುರಾಣ ವಾಚನವು ಆಸಕ್ತಿದಾಯಕವೂ, ಪುಣ್ಯಕಾರಕವೂ, ಮೋಕ್ಷದಾಯಕವೂ ಎಂಬ ಭಾವನೆಯಿದೆ. ಪುರಾಣಪುರುಷರನ್ನು ನಾವು ಅನೇಕ ಸಂದರ್ಭಗಳಲ್ಲಿ ತೀರ ನಮ್ಮವರೇ ಎಂಬ ಭಾವನೆಯಿಂದ ನೆನೆಯುತ್ತೇವೆ. ಇನ್ನೊಂದೆಡೆ ಅದೊಂದು ಅನಾವಶ್ಯಕ ಹರಟೆ, ವೃಥಾ ಕಾಲಹರಣ ಎಂಬ ರೂಪಕವಾಗಿ ಪ್ರಯೋಗವಾಗುತ್ತದೆ. “ಸಾಕು ನಿನ್ನ ಪುರಾಣ! ತಲೆಹರಟೆ!” “ನಿಲ್ಲಿಸು ನಿನ್ನ ರಾಮಾಯಣ!” ಎನ್ನುವುದು ಈ ಅರ್ಥದಲ್ಲಿ. ಇದು ನಿಂದಾಸ್ತುತಿಯೇನಲ್ಲ. ಹಾಗೆಂದು ಅಸಡ್ಡೆಯೇ? ತಿರಸ್ಕಾರವೇ? ಶಾಸ್ತ್ರ-ಪುರಾಣಗಳನ್ನು ಆದರಿಸುವವರನ್ನು ಧಿಕ್ಕರಿಸುವ ಪಾಷಂಡಿ ಗುಂಪೊಂದರ ನಿಲುವೇ? ಆ ನಿರ್ಧಾರಕ್ಕೆ ಬರಲೂ ಕಷ್ಟವೇ. ಆಸ್ತಿಕಶ್ರೇಷ್ಠರಲ್ಲಿ, ಸಂಪ್ರದಾಯಪ್ರಿಯರಲ್ಲೂ ಇಂತಹ ವಾಗ್ರೂಢಿಗಳು ನಿರರ್ಗಳವಾಗಿ ಹೊರಬರುವುದು ಅಪರೂಪವೇನಲ್ಲ. ಪ್ರಾಯ: ಯಾವುದರ ಬಗ್ಗೆಯೂ ನಮ್ಮ ನಿಲುವು, ಅಭಿಪ್ರಾಯಗಳಲ್ಲಿ ಅನೇಕ ಪದರುಗಳು ನಮಗೆ ಅರಿಯದಂತೆಯೇ ಇರುವುದು ಸಾಧ್ಯ. ಅವುಗಳಲ್ಲಿ ಎಷ್ಟು ದ್ವಂದ್ವಗಳಿದ್ದರೂ ಅವುಗಳ ಸಹಬಾಳ್ವೆ ಅಸಾಧ್ಯವೇನಲ್ಲ. ದ್ವಂದ್ವಗಳು ಗೊಂದಲಗಳಾಗಿ ನಮ್ಮನ್ನು ಅಣಕಿಸುವುದು ನಮ್ಮ ವಿಚಾರ, ನಿಲುವುಗಳನ್ನು ನಾವು ವಿಶ್ಲೇಷಣೆಯ ಪರೀಕ್ಷೆಗೆ ಒಡ್ಡಿದಾಗ ಮಾತ್ರ, ನಮ್ಮ ಆಲೋಚನೆಗಳ ಬಗ್ಗೆ ನಾವು ಆಲೋಚಿಸತೊಡಗಿದಾಗ. ಅದೇನನ್ನೂ ಮಾಡದೆ ತಮ್ಮ ಪಾಡಿಗೆ ತಾವಿದ್ದು ನಿರಾಳವಾಗಿರುವ ಜನವೇ ಹೆಚ್ಚು. ಅವರನ್ನು ವೈಚಾರಿಕ ಅಶಾಂತಿ ಪೀಡಿಸುವುದು ಕಡಿಮೆ. ಒಂದು ರೀತಿಯಲ್ಲಿ ಅವರು ಸುಖಿಗಳು. ಯಾವುದೋ ಸಂದರ್ಭದಲ್ಲಿ ಅವರ ಆಲೋಚನೆಗಳ ಬಗ್ಗೆ ಅವರು ಆಲೋಚಿಸಬೇಕಾದ ಪರಿಸ್ಥಿತಿಯಲ್ಲಿ ಅವರು ತಮ್ಮ ಶಾಂತಿಯನ್ನು ಕಳೆದುಕೊಂಡು ಪ್ರಕ್ಷುಬ್ಭರಾಗಬಹುದು, ಅಸಹಾಯಕರಾಗಬಹುದು, ಅಥವಾ ಪಲಾಯನವಾದಿಗಳಾಗಬಹುದು.

      ಪುರಾಣಗಳ ಬಗ್ಗೆ ಆದರ-ಅಸಡ್ಡೆಗಳ ದ್ವಂದ್ವ ನಮ್ಮನ್ನು ಅಷ್ಟೇನೂ ವ್ಯಗ್ರರನ್ನಾಗಿ ಮಾಡಬೇಕೆಂದಿಲ್ಲ. ಪುರಾಣಗಳು ಹಿಂದೂಧರ್ಮದ ಹಾಗೂ ಧರ್ಮಕೇಂದ್ರಿತವಾದ ಶ್ರೀಮಂತ ಸಂಸ್ಕøತಿಯ ಅವಿಭಾಜ್ಯ ಅಂಗ ಎಂಬುದು ನಿರ್ವಿವಾದ. ಪುರಾಣಕಥೆಗಳು, ಅದರೊಳಗಿನ ದೇವದೇವಿಯರು, ದೇವಮಾನವರು, ದುರುಳಶ್ರೇಷ್ಠರು, ಅತಿಮಾನವ ಸಾಧ್ಯತೆ-ಸಾಧನೆಗಳು ರೂಪಕಗಳಾಗಿ, ಜೀವನಸತ್ಯಗಳಾಗಿ, ನೀತಿಸೂತ್ರಗಳಾಗಿ, ಸಾಂತ್ವನಗಳಾಗಿ ನಮಗೆ ಲಭ್ಯವಾಗುತ್ತವೆ. ಅವುಗಳು ನಮ್ಮ ಬದುಕಿನೊಳಗೆ ನುಸುಳಿಬಂದು ಸೇರಿಹೋಗುತ್ತವೆ. ಧರ್ಮರಾಯ, ಭೀಮ, ಹಿಡಿಂಬ, ಬಕಾಸುರ, ಭೀಷ್ಮ, ಲಂಕಿಣಿ, ತಾಟಕಿ, ಪೂತನಿ, ಕುಂಭಕರ್ಣ, ಹರಿಶ್ಚಂದ್ರ, ರಂಭೆ, ಮೊದಲಾದ ಅನೇಕ ಹೆಸರುಗಳು ನಮ್ಮ ಭಾಷೆಯೊಳಗೆ ವಾಗ್ರೂಢಿಗಳಾಗಿ ಮೆರೆಯುತ್ತಿವೆ. ರಾಜಕೀಯ ಪ್ರೇರಣೆಯಿಂದ ಅದೆಷ್ಟೋ ಪ್ರಯಾಸದಿಂದ ರಾವಣಾರಾಧನೆಯನ್ನು ಸ್ಥಾಪಿಸಹೊರಟರೂ ರಾಮನೇ ಆರಾಧ್ಯನಾಗಿ ಉಳಿದಿದ್ದಾನೆ. ಕೃಷ್ಣನನ್ನು ಅದೆಷ್ಟು ಲೇವಡಿಮಾಡಿದರೂ ಜನ ಪೂಜಿಸುವುದು ಆತನನ್ನೇ. ಹನುಮಂತನನ್ನು ಇಂಗ್ಲಿಷಿನಲ್ಲಿ ‘ಮಂಕಿ ಗಾಡ್’ (ಮಂಗ ದೇವತೆ) ಎಂದು ವಿವರಿಸಿದರೂ ಆತನ ಆರಾಧನೆ ಸಾರ್ವತ್ರಿಕವಾಗಿಯೇ ಇದೆ. ಗಜಮುಖ ಗಣಪತಿಯನ್ನು ಎಷ್ಟೇ ಸಲಿಗೆಯಿಂದ ಕಂಡರೂ ಆತನ ಜನಪ್ರಿಯತೆ ಏನೂ ಕಡಿಮೆಯಾಗಿಲ್ಲ. ಪುರಾಣ ಕಥೆಗಳ ಅಥವಾ ಅದರಲ್ಲಿ ಬರುವ ನಾಯಕ-ನಾಯಕಿಯರ ಆದರಣೀಯತೆಗೆ ತಾರ್ಕಿಕತೆಯ ನೆಲೆಯಲ್ಲಿ ಕೆಲವೊಮ್ಮೆ ಸವಾಲುಗಳು ಬಂದೊದಗಿದರೂ, ಭಾವುಕತೆಯ, ನಂಬಿಕೆಯ ಸ್ತರಗಳಲ್ಲಿ ಅವುಗಳಿಗೆ ಚ್ಯುತಿ ಬಂದಿಲ್ಲ. ಬದುಕು ಕೇವಲ ವೈಚಾರಿಕತೆಯ ಶುಷ್ಕ ಬುನಾದಿಯಲ್ಲಿ ಬೆಳೆಯುವಂಥದ್ದಲ್ಲ. ಭಾವನೆ, ನಂಬಿಕೆಗಳೂ ಅದರೊಳಗೆ ಚಾಲನಶಕ್ತಿಯಾಗಿ ಸೇರಿಹೋಗಿವೆ. ವಿವೇಚನಾಶಕ್ತಿ ಹಾಗೂ ನಂಬಿಕೆಗಳು ಕದನಕುತೂಹಲರಾಗಿ ಕಂಡರೂ ಬದುಕಿನಲ್ಲಿ ಅವುಗಳಿಗೆ ಅದರದರ ಸ್ಥಾನವಿದೆ. ಮಸ್ತಿಷ್ಕಕ್ಕೆ ಎಷ್ಟಿದೆಯೋ ಹೃದಯಕ್ಕೂ ಅಷ್ಟಿದೆ. ಅದನ್ನು ಗುರುತಿಸಿ ಒಪ್ಪಿಕೊಂಡಾಗಲೇ ಬದುಕು ಅರ್ಥಪೂರ್ಣವಾಗುವುದು; ಅದರಲ್ಲಿ ಸಮಾಧಾನವನ್ನು ಕಂಡುಕೊಳ್ಳಲು ಸಾಧ್ಯವಾಗುವುದು. ಇಲ್ಲವಾದರೆ ಅಪಕ್ವತೆಯಲ್ಲಿ ಅಥವಾ ಅಸಹಾಯ ಸಂದಿಗ್ಧತೆಯಲ್ಲಿ ತೊಳಲಾಡಬೇಕಾಗುತ್ತದೆ.

      ಪುರಾಣೇತಿಹಾಸಗಳು ನಮ್ಮ ಧಾರ್ಮಿಕ ಮತ್ತು ಸಾಂಸ್ಕøತಿಕ ನಂಬಿಕೆಗಳೊಡನೆ ಸೇರಿಹೋದ ಕಾರಣ ಅವುಗಳ ಸತ್ಯ ಅಖಂಡ, ಪ್ರಶ್ನಾತೀತ ಎಂಬ ಭಾವನೆ ನಮ್ಮಲ್ಲಿ ಗಟ್ಟಿಯಗಿ ಬೇರೂರಿರುವುದು ಸಹಜ. ಅದರಲ್ಲೂ ಭಾರತೀಯರಲ್ಲಿ ಇತಿಹಾಸ ಪ್ರಜ್ಞೆ ಇರಲೇಇಲ್ಲ ಎಂಬ ಆಪಾದನೆಯೋ, ಮೂದಲಿಕೆಯೋ ಪಾಶ್ಚಾತ್ಯರಿಂದ ಬಂದಾಗ ಅದನ್ನು ಅಲ್ಲಗೆಳೆದು, ನಮ್ಮಲ್ಲಿ ಅಂತಹ ಚೈತನ್ಯಕ್ಕೆ ಕುಂದೇನೂ ಇರಲಿಲ್ಲ ಎಂದು ಸ್ಥಾಪಿಸಲು ನಾವು ನಮ್ಮ ಅನೇಕ ಪುರಾಣಗಳನ್ನೇ ಅಥವಾ ಅವುಗಳಲ್ಲಿ ಕೆಲವನ್ನು ಇತಿಹಾಸಗಳೆಂದು ಘೋಷಿಸಿದೆವು. ‘ಇತಿಹಾಸ’ ಎಂಬ ಶಬ್ದಕ್ಕೆ ಅರ್ಥವೇ ‘ಹೀಗೆ ನಡೆದದ್ದು’, ಎಂದು. ಅದು ಕೇವಲ ಕಥೆಯಲ್ಲ; ನಿಜವಾಗಿ ನಡೆದ, ಪ್ರಾಮಾಣಿಕವಾಗಿ ವರದಿಯಾದ ಕಥೆ. ಅದಕ್ಕೇ ಅದನ್ನು ಇತಿಹಾಸವೆಂದು ಕರೆದದ್ದು, ಎಂಬ ಧೃಢ ನಂಬಿಕೆ. ಕೆಲವೊಮ್ಮೆ ಅದರೊಳಗೆ ನಂಬಲಾಗದ, ಅಸಾಧ್ಯ ಘಟನೆ ಅಥವಾ ವಿವರಗಳು ಇರುತ್ತವೆ. ಅವುಗಳನ್ನು ಎರಡು ರೀತಿಯಲ್ಲಿ ಕಾಣಲು ಅಥವಾ ಪರಿಗ್ರಹಿಸಲು ಸಾಧ್ಯ. ಕೆಲವರು ಅವುಗಳನ್ನು ವಾಸ್ತವತೆಗೆ ಕಟ್ಟಿಹಾಕದೆ ಭಾವುಕತೆಯ ಅಥವಾ ಸಾಹಿತ್ಯಕ ರೂಪಕಗಳಾಗಿ ಗ್ರಹಿಸಿದರೆ ಇನ್ನು ಕೆಲವರು ಅವುಗಳನ್ನು ಪ್ರಶ್ನಾತೀತವಾದ ಸತ್ಯಘಟನೆಗಳಾಗಿ ಒಪ್ಪಿಕೊಳ್ಳುವುದನ್ನು ಕಾಣುತ್ತೇವೆ. ಹಿಂದಿನ ಯುಗಗಳಲ್ಲಿ ಇವೆಲ್ಲಾ ಸಾಧ್ಯವಿತ್ತು, ಮಾನವನು ಅತಿಮಾನವನಾಗಿದ್ದ, ಆತನ ಗಾತ್ರ, ಶಕ್ತಿಗಳು ಅತಿಶಯವಾಗಿದ್ದುವು, ಅವನು ಬೇರೆಯೇ ಕಾಲವ್ಯಾಪ್ತಿಗೆ, ಕಾಲಧರ್ಮಕ್ಕೆ ಅಧೀನನಾಗಿದ್ದ, ಆತನಿಗಿದ್ದ ಮಂತ್ರಶಕ್ತಿ ಆತನಿಗೆ ದೇವ ದೇವತೆಗಳೊಡನೆ ಸುಲಭ ಸಂಪರ್ಕವನ್ನು ಏರ್ಪಡಿಸಿತ್ತು, ದೇವಲೋಕಕ್ಕೋ ಪಾತಾಳಲೋಕಕ್ಕೋ ಸಲೀಸಾಗಿ ಹೋಗಿಬರಲು ಕೆಲವರಿಗೆ ಸಾಧ್ಯವಿತ್ತು, ಈಗ ಅಸಾಧ್ಯವೆಂದೆನಿಸಿದ್ದೆಲ್ಲಾ ಹಿಂದೆ ಒಂದುಕಾಲದಲ್ಲಿ ಸಾಧ್ಯವಿತ್ತು, ಎಂದು ನಂಬಿರುವವರು ಹಲವರಿದ್ದಾರೆ. ಈ ನಂಬಿಕೆಯನ್ನು ಗಟ್ಟಿಗೊಳಿಸಲು ಮುಂದೆ ಮಾನವನು ಮಾಡಿದ ವೈಜ್ಞಾನಿಕ ಸಾಧನೆಗಳ ದಿರಿಸನ್ನು ಹಿಂದಿನವರಿಗೆ ತೊಡಿಸಿ ಸಂಭ್ರಮಿಸುವುದು ಅಪರೂಪವೇನಲ್ಲ. ನಮಗೀಗ ತಿಳಿದಿದ್ದೆಲ್ಲಾ ನಮ್ಮ ಪೂರ್ವಜರಿಗೆ ತಿಳಿದಿತ್ತು. ಅಷ್ಟೇ ಅಲ್ಲ, ನಮಗೆ ತಿಳಿಯದ ಅನೇಕ ವಿದ್ಯೆಗಳು ಅವರಿಗೆ ಗೊತ್ತಿತ್ತು, ಎಂದು ಪ್ರತಿಪಾದಿಸಿದರು. ನಮ್ಮಲ್ಲಿ ಹಿಂದೆ ವಿಮಾನಯಾನದ ಪರಿಚಯವಿತ್ತು (ವಿಮಾನಕ್ಕೆ ಜಟಾಯುನಂಥಾ ಬ್ರಹತ್ ಪಕ್ಷಿಯ ಢಿಕ್ಕಿಯೂ ಆಗಿತ್ತು!), ರೇಡಿಯೋ (ಆಕಾಶವಾಣಿ ಎಂದರೆ ಮತ್ತೇನು?) ಟೆಲಿವಿಷನ್ನು (ಮಹಾಭಾರತಯುದ್ಧವನ್ನಿಡೀ ವೀಕ್ಷಿಸಿದ ಸಂಜಯ ಕುರುಡ ಧೃತರಾಷ್ಟ್ರನಿಗೆ ನಿರೂಪಕನಾಗಿಯೂ ನೇಮಕಗೊಂಡಿದ್ದ!)ಗಳ ಅನುಭವವಿತ್ತು, ಅಣ್ವಾಸ್ತ್ರಗಳು (ಬ್ರಹ್ಮಾಸ್ತ್ರ ಎಂದರೆ ಅದೇ ಅಲ್ಲವೇ!) ಕೆಲವರಿಗೆ ಕೈಗತವಾಗಿತ್ತು....ಇತ್ಯಾದಿ, ಇತ್ಯಾದಿ. ನಮ್ಮ ಅನೇಕ ನಂಬಿಕೆ, ಆಚರಣೆಗಳು ಸಂಪೂರ್ಣ ವೈಜ್ಞಾನಿಕತೆಯನ್ನು ರೂಢಿಸಿಕೊಂಡಿವೆ. ಅವುಗಳಲ್ಲಿ ಯಾವುದೂ ಮೂಢನಂಬಿಕೆ ಅಲ್ಲ, ಹಾಗೆನ್ನುವ ನಾವೇ ಮೂಢರು ಎಂಬ ಆಕ್ರಮಣಕಾರಿ ನಿಲುವು ಸಾಕಷ್ಟು ವಿಜೃಂಭಿಸುತ್ತಿದೆ. ಇವರಿಗೆ ವಿಕಸನವಾದದಲ್ಲಿ ನಂಬಿಕೆ ಇಲ್ಲವೆಂದೆಲ್ಲ. ಆದರೆ ಅದು ಸದಾ ಹಿಂಚಲನಾ ಕ್ರಮಕ್ಕೆ ಅಂಟಿಕೊಂಡಿರುವಂಥಾದ್ದು. ಅಷ್ಟೇ ಅಲ್ಲ. ಇದರೊಳಗೆ ಇನ್ನೊಂದು ವಿಪರ್ಯಾಸವೂ ಹುದುಗಿಕೊಂಡಿದೆ. ತಮ್ಮ ಪೂರ್ವಜರು ನಮಗಿಂತ ಎಲ್ಲಾ ವಿಚಾರಗಳಲ್ಲೂ ಶ್ರೇಷ್ಠರು, ಜ್ಞಾನವಂತರು, ಬುದ್ಧಿವಂತರು ಎಂದು ಸಂಪ್ರದಾಯ ಆರಾಧಕರು ಈಗಿನ ವಿಜ್ಞಾನವನ್ನು, ವಿಜ್ಞಾನಿಗಳನ್ನು ಹೀಗಳೆಯುವುದು ಸಾಮಾನ್ಯ. ಆದರೆ ಅಂಥವರೇ ನಮ್ಮ ಪೂರ್ವಜರ ಆಚಾರ-ವಿಚಾರಗಳನ್ನು ‘ಪೂರ್ಣ ವೈಜ್ಞಾನಿಕ’ ಎಂಬ ನೆಲೆಯಲ್ಲಿ ಸಮರ್ಥಿಸುವಾಗ ಅವರಿಗೆ ಸ್ವಲ್ಪವೂ ಕಸಿವಿಸಿಯಾಗುವುದಿಲ್ಲ. ಅದರಲ್ಲಿ ಯಾವ ಅಸಾಂಗತ್ಯವನ್ನೂ ಅವರು ಕಾಣುವುದಿಲ್ಲ. 

ವಿಜ್ಞಾನವು ಸೃಷ್ಟಿಯ ರಹಸ್ಯವನ್ನು ಪೂರ್ಣ ಭೇದಿಸಿದೆ ಎಂಬ ಜಂಭ ನಿರಾಧಾರವಾದರೂ, ವಿಜ್ಞಾನವು ಬೆಳೆಯುವಂಥಾದ್ದು, ಬೆಳೆಸಬೇಕಾದದ್ದು, ಪುರೋಗಾಮಿಯಾದದ್ದು ಎಂಬುದು ನಿಜ. ನಮಗೆ ತಿಳಿಯದ್ದು ಬಹಳಷ್ಟಿದೆ; ಅದನ್ನು ತಿಳಿಯುವ ಆಸಕ್ತಿಯಿದೆ; ಅದನ್ನು ತಿಳಿಯುವ ಪ್ರಯತ್ನ ಮಾಡುತ್ತಿದ್ದೇವೆ. ಇದು ವೈಯ್ಯಕ್ತಿಕ ಹಾಗೂ ಸಂಘಟನಾ ನೆಲೆಗಳಲ್ಲಿ ನಡೆಯುತ್ತಿವೆ. ಇದರಿಂದ ನಮ್ಮ ಅರಿವಿನ ಮೇರೆ ವಿಸ್ತಾರಗೊಳ್ಳುತ್ತದೆ. ನಾವು ಸರ್ವಜ್ಞರಲ್ಲ. ನಾವು ಸರ್ವಜ್ಞನೆಂಬವನಿಗೆ ಸಡ್ಡುಹೊಡೆಯುತ್ತಿಲ್ಲ. ಸರ್ವಜ್ಞನ ಕಲ್ಪನೆ ನಮ್ಮಲ್ಲಿ ಬಂದದ್ದೇ ನಮ್ಮ ಜ್ಞಾನದ ಅಪೂರ್ಣತೆಯ ಅರಿವಿನಿಂದ. ಅರಿಸ್ಟಾಟಲ್ ಆತನ ಕಾಲದ ಅತಿದೊಡ್ಡ ಜ್ಞಾನಿ ಹೌದಾದರೂ ಆತನಿಗೆ ಭೌತಶಾಸ್ತ್ರದ ಬಗ್ಗೆ ಇದ್ದ ಜ್ಞಾನ ಇಂದಿನ ಹೈಸ್ಕೂಲು ವಿದ್ಯಾರ್ಥಿಗಿಂತ ತೀರ ಕಡಿಮೆಯೇ. ಇದು ನಮ್ಮ ಹೈಸ್ಕೂಲು ವಿದ್ಯಾರ್ಥಿ ಒಬ್ಬ ಪರಮಜ್ಞಾನಿ ಎಂದು ಪ್ರತಿಪಾದಿಸುವುದಿಲ್ಲ; ನಮ್ಮ ವಿಜ್ಞಾನವು ಮುಂದುವರಿದಿದೆ, ಅದರ ಜ್ಞಾನ ಸಮಾಜದ ಗ್ರಹಿಕೆಗೆ ಬಹಳಷ್ಟು ಸ್ರವಿಸಿದೆ, ಎಂದಷ್ಟೇ ತಿಳಿಸುತ್ತದೆ. ಆದರೆ ಇಲ್ಲಿ ವಿಜ್ಞಾನಕ್ಕೆ ಮರೆಗುಳಿತನದ ಆರೋಪವೇ ಮುಖ್ಯವಾಗುತ್ತದೆ. ಸಾಮಾನ್ಯವಾಗಿ ಮಾನವನು ಲೌಕಿಕ ನೆಲೆಯಲ್ಲಿ ಪ್ರಗತಿಯನ್ನು ಸಾಧಿಸಿದ್ದಾನೆ ಎಂಬುದು ಇತಿಹಾಸ ತಿಳಿಸುತ್ತದೆ. ಹದಿನೆಂಟನೇ ಶತಮಾನದಲ್ಲಿ ಯುರೋಪಿನಲ್ಲಿ ಜನಪ್ರಿಯವಾದ ಪ್ರಗತಿವಾದ ಆಧುನಿಕತೆಯ ಲಾಂಛನವಾಗಿ ಮೆರೆಯಿತು. ಅದರೊಳಗೆ ಅನೇಕ ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕøತಿಕ ಒಳಸೆಳವುಗಳನ್ನು ರೂಢಿಸಿಕೊಂಡದ್ದು ಇತಿಹಾಸಕಾರರಿಗೆ ಅರಿವಿದೆ. ಆದರೆ ಇತಿಹಾಸದ ಮುಂದಿನ ಗತಿ, ಅನುಭವಗಳು ಆಧುನಿಕತೆಯ ಈ ನಂಬಿಕೆ, ಭರವಸೆಗಳು ನಂದಿಹೋಗದಂತೆ ರಕ್ಷಿಸಿಕೊಂಡುಬರಲು ಶಕ್ತವಾಗಿಲ್ಲ. ಆಧುನಿಕೋತ್ತರ ಚಿಂತನೆಗಳು ಪ್ರಗತಿವಾದದ ಬಗ್ಗೆ ನಿಷ್ಠೆಯನ್ನು ಕಳೆದುಕೊಂಡದ್ದೂ ಹೌದು. ಪ್ರಗತಿಯನ್ನು ಅಳೆಯಲು ಅಥವಾ ನಿಷ್ಕರ್ಷಿಸಲು ಮಾನದಂಡಗಳೇನು, ಎಂಬುದು ಗಂಭೀರವಾಗಿ ಚಿಂತಿಸಬೇಕಾದ ವಿಚಾರವೇ. ಇತಿಹಾಸದಲ್ಲಿ ನಮ್ಮ ಅನುಭವಗಳೇ ನಮ್ಮನ್ನು ಹೊಸ ಚಿಂತನೆಯತ್ತ ಪ್ರೇರೇಪಿಸುತ್ತವೆ. ಅದೇನೇ ಇದ್ದರೂ ನಾವು ಆರ್ಥಿಕವಾಗಿ, ಪ್ರಾಪಂಚಿಕವಾಗಿ ಸಾಕಷ್ಟು ಮುಂದುವರಿದಿದ್ದೇವೆ ಎಂಬುದು ಬಹುತೇಕ ಒಪ್ಪುವಂಥ ವಿಚಾರ. ಅದನ್ನು ಒಪ್ಪದವರೂ ಇತಿಹಾಸದಲ್ಲಿ ನಮ್ಮದು ಪೂರ್ತಿ ಹಿಂಚಲನೆಯೇ ಎಂಬ ವಾದವನ್ನು ಮಂಡಿಸಿದರೆ ನಾಗರಿಕತೆಯ ಅನೇಕ ಸಾಧನೆಗಳನ್ನು ಅಲ್ಲಗಳೆದಂಥಾಗುತ್ತದೆ. ಇತಿಹಾಸದಲ್ಲಿ ಮಾನವನ ಸಾಧನೆ-ಸೋಲುಗಳು ಸಂಕೀರ್ಣ. ಅದರೊಳಗಿನ ಹಾವು-ಏಣಿಯಾಟದಲ್ಲಿ ಆತ ಕೆಲವೊಮ್ಮೆ ಸಡಗರದಿಂದ ಮೇಲೇರಿದರೆ ಇನ್ನೊಮ್ಮೆ ಹಾವಿನ ಮುಖವನ್ನು ಇಣುಕಿ ಅದರ ಬಾಲದತ್ತ ಪೆದ್ದುಪೆದ್ದಾಗಿ ಜಾರಿಹೋಗುವುದುಂಟು. ನಾಗರಿಕತೆಯ ಹಲವು ಸಾಧನೆಗಳು ದುಬಾರಿಯಾಗಿ ಪರಿಣಮಿಸುವುದುಂಟು. ಅಲ್ಲಿ ಎಲ್ಲವೂ ಪ್ರಗತಿಯಲ್ಲ; ಹಾಗೆಯೇ ಎಲ್ಲವೂ ಹಿಂಚಲನೆಯಲ್ಲ. ಆದರೆ ನಮ್ಮಲ್ಲಿರುವ ಯುಗಗಳ ಅಗಾಧ, ಭವ್ಯ ಕಲ್ಪನೆ, ಅದರಲ್ಲಿ ಅನುಕ್ರಮವಾಗಿ ಧರ್ಮದ ನಶಿಸುವಿಕೆ ಹಾಗೂ ಕಲಿಕಾಲವು ಅಧರ್ಮವಿಜಯದ ಕಾಲವಷ್ಟೇ ಎಂಬ ಭಾವನೆಗಳು ಇತಿಹಾಸವನ್ನು ತಿರೋಗಮನದ ರೂಪಕವಾಗಿ ಗ್ರಹಿಸಿದೆ. ಕೃತಯುಗದಲ್ಲಿ ಧರ್ಮವೆಂಬ ಗೋವು ತನ್ನ ನಾಲ್ಕುಕಾಲುಗಳ ಮೇಲೆ ಸ್ಥಿರವಾಗಿ ನಿಂತರೆ, ತ್ರೇತಾಯುಗದಲ್ಲಿ ಮೂರುಕಾಲಲ್ಲೂ, ದ್ವಾಪರದಲ್ಲಿ ಎರಡರಲ್ಲೂ, ಕಲಿಕಾಲದಲ್ಲಿ ಕೇವಲ ಒಂದುಕಾಲಿನಲ್ಲಿ ನಿಂತಿದೆ, ಎಂಬ ಚಿತ್ರಣ ಇದಕ್ಕೆ ಸಾಕ್ಷಿ. ಇದು ಧರ್ಮದ ಬಗ್ಗೆಯೂ ಗೋವಿನ ಬಗ್ಗೆಯೂ ಕನಿಕರಪಡುವ ವಿಚಾರವೇ. ಹಿಮ್ಮುಖಿಯಾದ ಈ ಇತಿಹಾಸ ಕಲ್ಪನೆಯಲ್ಲಿ ‘ಸುವರ್ಣಯುಗ’ವನ್ನು ಪ್ರಾಚೀನಕಾಲದಲ್ಲಿ ಹುಡುಕುವುದು ಸುಲಭವಾದದ್ದು ಸೋಜಿಗವೇನಲ್ಲ. ಈಗ ಇಲ್ಲದ್ದು ಹಿಂದೆಯಾದರೂ ಇತ್ತಲ್ಲವೇ ಎಂಬ ವಿಚಾರ ವಸಾಹತುಶಾಹೀ ಪರತಂತ್ರದ ಅನಿಷ್ಟ ಕಾಲಘಟ್ಟದಲ್ಲಿ ಸಾಂತ್ವನವಾಗಿ ಒದಗಿಬಂದದ್ದೂ ನಿಜ.

      ‘ಇತಿಹಾಸ’ ಎಂಬ ಪದಕ್ಕೆ ‘ಹೀಗೆ ನಡೆದದ್ದು’ ಎಂಬ ಶಬ್ದಾರ್ಥವನ್ನು ಜೋಡಿಸಿದಾಗ ಇತಿಹಾಸವನ್ನು ಒಪ್ಪಿಕೊಳ್ಳುವ ನೆಲೆ ಕೇವಲ ಅದರ ಬಗ್ಗೆ ನಾವಿಟ್ಟ ನಂಬಿಕೆಯೇ. ಅದನ್ನು ಮೀರಿದ ಪರೀೀಕ್ಷೆಗೆ ಅದು ಒಡ್ಡಿಕೊಳ್ಳುವುದಿಲ್ಲ. ‘ನಂಬಿ ಕೆಟ್ಟವರಿಲ್ಲ’ ಎಂದು ನಾವು ನಮ್ಮಲ್ಲೇ ಸಮಾಧಾನಪಟ್ಟುಕೊಂಡರೆ ಇತಿಹಾಸವು ಕೇವಲ ಪ್ರಮಾಣೀಕೃತ ಕಥೆಯಾಗಬಹುದು, ಹಾಗೂ ಅದನ್ನು ಒಪ್ಪಿಕೊಳ್ಳುವ ವಾಡಿಕೆಯಾಗಬಹುದು. ಆದರೆ ಅದು ಕೆಲವು ಪ್ರಶ್ನೆಗಳನ್ನು ನಮ್ಮತ್ತ ಎಸೆಯುತ್ತಲೇ ಇರುತ್ತದೆ: ಯಾರಿಂದ ಪ್ರಮಾಣೀಕೃತ? ‘ಇತಿಹಾಸ’ ಎಂಬ ಪದದಿಂದಲೇ? ಅಥವಾ ಅದರೊಳಗಿನ ಕೆಲವು ಘೋಷಿತ ಅಥವಾ ಅಘೋಷಿತ ವಿಧಾಯಕ ಶಕ್ತಿಗಳಿಂದಲೇ? ಕಥೆಯು ಸತ್ಯವೆಂದು ಘೋಷಿತವಾದದ್ದಕ್ಕಾಗಿ, ರೋಚಕವಾಗಿದ್ದಕ್ಕಾಗಿ ಅದನ್ನು ನಾವು ಒಪ್ಪತಕ್ಕದ್ದೇ? ನಾವು ಅದನ್ನು ನಂಬಲು ನಮ್ಮ ಹೊಣೆಗಾರಿಕೆಯೇನಿಲ್ಲವೇ? ಗ್ರೀಸ್ ದೇಶದಲ್ಲಿ ಹೋಮರನ ಕಾಲದಲ್ಲಿ ಹಿಂದೆ ನಡೆದ ವಿಶೇಷ ವಿದ್ಯಮಾನಗಳನ್ನು ಕಥಾರೂಪದಲ್ಲಿ ಅದನ್ನು ಕೇಳುವ ಕುತೂಹಲ, ವ್ಯವಧಾನವಿದ್ದವರಿಗೆ ಹೇಳುವ ವಾಡಿಕೆಯಿತ್ತು. ಹೋಮರನ ‘ಇಲಿಯಡ್’ ಮತ್ತು ‘ಒಡಿಸ್ಸಿ’ಗಳು ಹೀಗೆ ಸೃಷ್ಟಿಯಾದುವು. ಮೌಖಿಕವಾಗಿ ಪಸರಿಸಿ ಉಳಿಸಿಕೊಂಡುಬಂದ ಈ ಪರಂಪರೆಯಲ್ಲಿ ಮೆರೆದ ಇವು ಬಹುತೇಕ ವಿಶೇಷಮಾನವರ ವಿಶೇಷ ಕಥೆಗಳಾದರೂ ಇಲ್ಲಿ ಕೆಲವೊಮ್ಮೆ ದೇವತೆಗಳ ಹಸ್ತಕ್ಷೇಪ ನಡೆಯುವುದುಂಟು. ಪಡೆಯುವ ಶಾಪ, ನಡೆಯುವ ಶಾಪಪರಿಹಾರ ಇಂತಹ ಕಥೆಗಳ ಹೂರಣ. ಮಾನವರು ದೇವತೆಗಳತ್ತ ಸವಾಲನ್ನೆಸೆಯುವುದು ಅಥವಾ ದೇವತೆಗಳು ಮಾನವರಂತೆ ವ್ಯವಹರಿಸುವುದು ಇಲ್ಲಿ ಅಪರೂಪವೇನಲ್ಲ. ಇದನ್ನು ಕೇಳಿ ಹೂಂಗುಟ್ಟುವುದೇ ಇದಕ್ಕೆ ನಾವು ಮಾಡುವ ಸನ್ಮಾನ. ನಮ್ಮಲ್ಲೂ ಈ ಪರಂಪರೆ ಸಮೃದ್ಧವಾಗಿ ಬೆಳೆಯಿತು. ಇದನ್ನು ಇತಿಹಾಸವೆಂದು ಗ್ರಹಿಸುವುದು ಒಂದು ಅಮಾಯಕ ನೆಲೆಯಲ್ಲಿ ಮಾತ್ರ. ಇದರೊಳಗೆ ಸತ್ಯಾಸತ್ಯದ ವಿಶ್ಲೇಷಣೆಗೆ ಸ್ಥಾನವಿಲ್ಲ. ಇದು ನಡೆದದ್ದು ಹೀಗೆ ಎಂದು ನಿರ್ಧಾರವಾಗಿಯೇ ನಮಗೆ ಹೇಳಲ್ಪಟ್ಟದ್ದು; ಅದನ್ನು ದೇವಭಾಷೆಯಲ್ಲಿ ಹೇಳಿದರಂತೂ ಅದಕ್ಕೊಂದು ದಿವ್ಯ ಅಧಿಕಾರವಾಣಿ ಪ್ರಾಪ್ತವಾಗುತ್ತದೆ. ಅದನ್ನು ಒಪ್ಪಿ ಸಾರ್ಥಕ್ಯವನ್ನು ಪಡೆಯುವ ಮನಸ್ಥಿತಿಯಲ್ಲೇ ಕೇಳುಗನು ಕೇಳಿದ್ದು. ಈ ಚೌಕಟ್ಟಿನೊಳಗೆ ಇತಿಹಾಸವು ಸಂತೋಷ, ಸಾಂತ್ವನಗಳನ್ನು ನೀಡಬಲ್ಲುದು, ಬದುಕಿಗೆ ಪ್ರೇರಣೆಯಾಗಬಹುದು, ನೀತಿಬೋಧಕವಾಗಬಹುದು; ಆದರೆ ಸತ್ಯಾಸತ್ಯದ ಪ್ರಶ್ನೆಗಳನ್ನು ಎತ್ತಲಾರದು. ಇತಿಹಾಸವು ಸತ್ಯಕಥೆಯೆಂದು ಘೋಷಿತಗೊಂಡು ನೀತಿಕಥೆಯಾಗಿ ಉಳಿದರೆ ಅದು ಬೆಳೆಯಲಾರದು; ಜ್ಞಾನಪ್ರಕಾರ ಆಗಲಾರದು. ಕೇಳಿದ್ದನ್ನು, ಹೇಳಿದ್ದನ್ನು ಪುನರಪಿ ಕೇಳಿ, ಹೇಳಿ ಸಂತೋಷಪಡುವ ಕಾರ್ಯಕ್ರಮವಷ್ಟೇ ಆಗಬಹುದು. ಇದೇ ಇತಿಹಾಸ ಎಂಬ ಭಾವನೆ ನಮ್ಮಲ್ಲಿ ಅನೇಕರಲ್ಲಿ ಬೇರೂರಿದೆ. ಇತಿಹಾಸವೆಂದರೆ ಹಿಂದೆ ನಡೆದ ಕಥೆ. ಅದು ಬದಲಾಗಲು ಸಾಧ್ಯವೇ? ಅದೇ ಹಳೇಕಥೆಯನ್ನು ಅದೇ ಹಳೇಮೇಸ್ಟ್ರ ಬಾಯಲ್ಲಿ ಕೇಳಿ, ಅದೇ ಹಳೇಪುಸ್ತಕದಿಂದಲೋ, ಹಳೇನೋಟ್ಸ್‍ನಿಂದಲೋ ಓದಿಕೊಳ್ಳುವ, ವರ್ತಮಾನಕ್ಕೆ ಸಂಬಂಧವಿಲ್ಲದ, ಸತ್ತ ನಿನ್ನೆಗಳ ಅನಾವಶ್ಯಕ ವ್ಯಥೆಯೇ ಇತಿಹಾಸ ಎಂಬ ಪರಿಕಲ್ಪನೆ ನಮ್ಮಲ್ಲಿ ಇದೆ.  ಉಪಯೋಗಿ ಎನ್ನುವ ಜ್ಞಾನ ಸಮುಚ್ಛಯಗಳನ್ನು ಮಾತ್ರ ಬೆನ್ನತ್ತಿಹೋಗುವ ಮಂದಿ ಇತಿಹಾಸದ ವಿದ್ಯಾರ್ಥಿಗಳನ್ನು ಲೇವಡಿಮಾಡುವ ರೀತಿಯೂ ಇದೇ.

      ಇತಿಹಾಸಕ್ಕೆ ಹಿಂದಿನಕಾಲ, ಘಟನೆ, ಪರಿಸ್ಥಿತಿಗಳ ಬಗ್ಗೆ ಶೋಧ, ಅನ್ವೇಷಣೆ, ತನಿಖೆ, ತಪಾಸಣೆ, ಜಿಜ್ಞಾಸೆ ಎಂಬ ಅರ್ಥವನ್ನು ನೀಡಿದಾಗಲೇ ಅದು ಒಂದು ಬೆಳೆಯುವ, ಬೆಳೆಯಬಲ್ಲ ಜ್ಞಾನಪ್ರಕಾರವಾಗಿ ಪರಿಣಮಿಸಿದ್ದು, ಸಂಶೋಧನೆಗೆ ಯೋಗ್ಯವಾಗಿ ಕಂಡದ್ದು. ಇದನ್ನು ಗ್ರೀಕರು ಕ್ರಿ.ಪೂ.5ನೇ ಶತಮಾನದಲ್ಲಿ ಕಂಡುಕೊಂಡರು. ಹೆರೊಡೋಟಸ್ ಅಥವಾ ಥುಸಿಡೈಡಿಸ್ ಇತಿಹಾಸವನ್ನು ಅರ್ಥೈಸಿದ್ದರಲ್ಲಿ ಹೊಸತನ ಇದೇ. ಹಾಗೆಂದು ಇತಿಹಾಸದ ಪಿತೃಸ್ಥಾನವನ್ನು ಅಲಂಕರಿಸಿದ ಹೆರೊಡೋಟಸನ ‘ಪರ್ಶಿಯನ್ ಯುದ್ಧಗಳು’ ಎಂಬ ಕೃತಿಯಲ್ಲಿ ಇತಿಹಾಸವು ಪರಿಪೂರ್ಣವಾಗಿ ಕಂಗೊಳಿಸುತ್ತದೆ ಎಂದಲ್ಲ. ಅದರೊಳಗೆ ಅನೇಕ ಕಾಗಕ್ಕ-ಗುಬ್ಬಕ್ಕ ಕಥೆಗಳು ಸಾಕಷ್ಟು ಸೇರಿಹೋಗಿವೆ. ಆದರೆ ಅದರಲ್ಲಿ ಅಂತರ್ಗತವಾದ ಇತಿಹಾಸಪ್ರಜ್ಞೆ ಹೊಸತು, ಭಿನ್ನವಾದದ್ದು ಹಾಗೂ ವಿಶೇಷವಾದದ್ದು. ತಾನು ಆಯ್ದ ವಿಷಯದ ಬಗ್ಗೆ ಸಿಕ್ಕಿದ ಮಾಹಿತಿಗಳನ್ನು ಸಂಗ್ರಹಿಸಿ, ಅಭ್ಯಸಿಸಿ, ಕ್ಷೇತ್ರಕಾರ್ಯವನ್ನು ನಡೆಸಿ, ಯುದ್ಧದಲ್ಲಿ ಭಾಗವಹಿಸಿ ಬದುಕಿ ಉಳಿದವರನ್ನು ಸಂದರ್ಶಿಸಿ ಆತ ನಡೆಸಿದ ಸಂಶೋಧನೆ ಆ ಕಾಲಕ್ಕೆ ಹೊಸತು. ಅದರ ಇತಿಮಿತಿಗಳ ಅರಿವು ಇತಿಹಾಸಕಾರರಿಗೆ ಇದೆ. ಅದರ ಮೊದಲು ಗತಕಾಲದ ಕೆಲವು ವಿಶೇಷ ಕಥಾನಕಗಳನ್ನು ರೋಚಕವಾಗಿ ತಿಳಿಸುವ, ತಿಳಿಸಿ ರಂಜಿಸುವ ಅಥವಾ ತನ್ಮೂಲಕ ಕೆಲವು ನೀತಿಪಾಠಗಳನ್ನು ನೀಡುವ ಪರಂಪರೆಯಿತ್ತು. ಆದರೆ ಹಿಂದೆ ನಡೆದ ಘಟನೆಗಳ ಕುರಿತು ನಮ್ಮ ವೈಯ್ಯಕ್ತಿಕ ಜ್ಞಾಪಕತೆ ತೀರ ಸೀಮಿತವಾದದ್ದು, ನಮ್ಮ ಹಿಡಿತದಿಂದ ಜಾರಿಹೋಗುವಂಥಾದ್ದು. ಅದನ್ನು ಸಮಾಜವು ಒಂದು ಸಾಂಘಿಕ, ಪರಂಪರಾಗತ   ನೆಲೆಯಲ್ಲಿ, ಒಂದು ತಲೆಮಾರಿನಿಂದ ಇನ್ನೊಂದಕ್ಕೆ ವರ್ಗಾಯಿಸಲು ಪ್ರಯತ್ನಿಸಿ ಸ್ವಲ್ಪಮಟ್ಟಿಗೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಬಹುದು. ಜಾನಪದ ಸಂಪತ್ತು ನಮಗೆ ಪ್ರಾಪ್ತವಾಗುವುದು ಬಹುತೇಕ ಹೀಗೆಯೇ. ಬರವಣಿಗೆಯ ಚೌಕಟ್ಟಿಗೋ ಸಂಕಲೆಗೋ ಸಿಗುವ ಮುನ್ನ ಶಿಷ್ಟವೆಂದೆನ್ನುವ ಅನೇಕ ಜ್ಞಾನವಿಶೇಷಗಳೂ ಹೀಗೆಯೇ ಉಳಿದು, ಬೆಳೆದು ಬಂದದ್ದು. ಆದರೆ ಅವುಗಳೊಳಗೆ ನಿರ್ದಿಷ್ಟವಾದ ಆಯ್ಕೆಗಳು ನೆಲೆಸುತ್ತವೆ. ಹಿಂದೆ ನಡೆದ ಘಟನೆಗಳೇನು ಎಂದರುಹುದು ಹೇಳುಗನ ಅಥವಾ ಅವನ ಪರಂಪರೆಯ ಆಯ್ಕೆಗೆ ಒಳಪಟ್ಟದ್ದು. ಅದಕ್ಕೆ ಬೆಲೆ ಕಟ್ಟುವವನು ಅವನೇ ಅಥವಾ ಅವನ ಸಾಂಘಿಕ ನೆಲೆ. ಲಭ್ಯವಾದದ್ದನ್ನು ಕೇಳಿ ಆನಂದಿಸುವುದಷ್ಟೇ ಶ್ರೋತೃಗಳ ಭಾಗ್ಯ. ಅವರ ಆಯ್ಕೆ ಹೇಳುಗನ ಆಯ್ಕೆಗೆ ಅಧೀನ. ಕೇಳುಗನ ಆಸಕ್ತಿ ಅದರಿಂದ ಬೇರೆಯಾಗಿದ್ದರೆ ಹೇಳಿದ್ದು ನೀರಸವೋ ಅನಾವಶ್ಯವೋ ಆಗಬಹುದು. ಹಿಂದೆ ನಡೆದದ್ದೇನು ಎಂಬ ಕುತೂಹಲ ಕೇಳುಗನದ್ದಾದಾಗ ಪರಿಹಾರವೇನು? ಅಂದರೆ ಭೂತಕಾಲದ ಬಗ್ಗೆ ನಾವು ಕುತೂಹಲರಾದರೆ ಅದನ್ನು ಪರಿಹರಿಸುವ ಕೆಲಸ ನಾವೇ ಮಾಡಬೇಕಷ್ಟೆ.

 ಹಾಗೆಂದು ಭೂತಕಾಲವನ್ನೆಲ್ಲಾ ಒಟ್ಟಾಗಿ ಆಲಂಗಿಸಿ ರಮಿಸಲು ಅಸಾಧ್ಯ. ಅದರೊಳಗೆ ನಡೆದದ್ದೆಲ್ಲಾ ನಮ್ಮೊಡನೆ ಸಂಬಂಧ ಸ್ಥಾಪಿಸಲು ಅಸಾಧ್ಯ. ಅವುಗಳೆಲ್ಲವೂ ನಮ್ಮ ಆಸಕ್ತಿಯನ್ನು ಕೆರಳಿಸಲಾರವು. ಅವುಗಳೆಲ್ಲವೂ ಇತಿಹಾಸವಾಗಲಾರದು. ಅವುಗಳಲ್ಲಿ ಅನೇಕ ವಿಷಯಗಳು ನಮಗೆ ಅಪ್ರಸ್ತುತವಾಗಿ, ಬಾಲಿಶವಾಗಿ ಕಾಣಬಹುದು. ನಮಗೆ ಯಾವುದು ಮುಖ್ಯ, ಯಾವುದು ಅಸಂಗತ ಎಂಬುದು ನಮ್ಮ, ನಾವಿರುವ ಪರಿಸರದ, ನಮ್ಮ ಸಮಾಜದ, ನಮ್ಮ ಬದುಕಿನ ಆಶಯಗಳ ಪ್ರಕಟಿತ ಅಥವಾ ಅಪ್ರಕಟಿತ ಒಟ್ಟಾರೆ ಆಯ್ಕೆ. ಅದನ್ನು ಹುಡುಕುವ, ಶೋಧಿಸುವ ಕಾಯಕ ನಮ್ಮದೇ ಆಗಬೇಕು. ನಾವು ಇನ್ನೊಬ್ಬರ ಕುತೂಹಲ, ಆಸಕ್ತಿಗಳ ಪೂರ್ಣಾವಲಂಬಿಗಳಾದಲ್ಲಿ ನಮ್ಮ ತುಡಿತ, ಸೃಜನಶೀಲತೆಗಳಿಗೆ ಅವಕಾಶಗಳೇ ಇಲ್ಲವಾಗುತ್ತದೆ.  ಇತಿಹಾಸವು ಹೇಳುವ-ಕೇಳುವ ಮುಗ್ಧ ವರ್ತುಲವನ್ನು ಮೀರಿ ಅದನ್ನು ಅರಸುವ, ಶೋಧಿಸುವ ಕ್ರಿಯಾತ್ಮಕ ಸ್ತರಕ್ಕೆ ಏರಿದಾಗಲೇ ಅದೊಂದು ಚಲನಶೀಲ ಜ್ಞಾನಪ್ರಕಾರವಾಗುತ್ತದೆ. ಅಲ್ಲಿ ಇಂದು-ನಿನ್ನೆಗಳ ನಡುವೆ ಸಂವಾದ ಏರ್ಪಡುತ್ತದೆ. ಸಂದ ನಿನ್ನೆಗಳಿಗೆ ವಿವಿಧ ರೂಪ, ಅರ್ಥಗಳು ಬರುವುದು ನಾವು ಇಂದು ಎತ್ತುವ ಸವಾಲುಗಳಿಂದ; ಅಪೇಕ್ಷಿಸುವ, ಪಡೆಯುವ ಅಥವಾ ಪಡೆಯದ ಉತ್ತರಗಳಿಂದ. ಈ ಸಂವಾದವು ನಿರಂತರವಾಗಿ ನಡೆಯುವಂಥಾದ್ದು. ಏಕೆಂದರೆ ನಾವು ‘ಇಂದು’ ‘ಇಂದಿನ ಸಮಾಜ’ ಎಂದೆಲ್ಲಾ ಹೇಳುವಾಗ ಅದು ವಾಸ್ತವವಾಗಿ ಒಂದಲ್ಲ, ಅನೇಕ; ಅದರೊಳಗಿನ ಒಲವು, ಒತ್ತಡ, ಹಿತಾಸಕ್ತಿಗಳು ಹಲವು. ಅವುಗಳು ಎತ್ತುವ ಪ್ರಶ್ನೆಗಳು ಬಹುವಿಧವಾದದ್ದು. ವರ್ತಮಾನವೆಂಬುದು ಕಾಲಪ್ರವಾಹದಿಂದ ಕಾಲ್ಪನಿಕವಾಗಿ ನಾವಿಂದು ಕಸಿದು ನಮ್ಮದೆಂದುಕೊಂಡಿರುವ, ಕ್ಷಣಮಾತ್ರದಲ್ಲಿ ಹಬೆಯಾಗಿ ಭೂತಕಾಲಕ್ಕೆ ಸೇರಿಹೋಗುವ ಒಂದು ಹನಿ ಮಾತ್ರ. ಭೌತಿಕವಾಗಿಯೂ ಜೀವನಾನುಭವವಾಗಿಯೂ ವರ್ತಮಾನವು ನಮ್ಮನ್ನು ಅನೇಕ ರೀತಿಯಲ್ಲಿ ತಟ್ಟುತ್ತದೆ. ಈ ಎಲ್ಲಾ ಕಾರಣಗಳಿಂದ ನಮ್ಮಲ್ಲಿ ಅನೇಕ ‘ಇಂದು’ಗಳ ಸೃಷ್ಟಿಯಾಗುತ್ತವೆ, ಅವುಗಳ ಪುನಸ್ಸøಷ್ಟಿಯಾಗುತ್ತಿರುತ್ತವೆ; ಅವುಗಳ ಅನುಭವವಾಗುತ್ತದೆ.  ಅವುಗಳೇ ತಮ್ಮ ಸಂದ ಹಿಂದಿನ ಬಗ್ಗೆ ಸಂವಾದ ಏರ್ಪಡಿಸಿ ಇತಿಹಾಸದ ನಿರಂತರ ಸೃಷ್ಟಿ, ಜಿಜ್ಞಾಸೆ, ನಿರಾಕರಣ, ನವೀಕರಣಗಳಿಗೆ ಕಾರಣವಾಗುತ್ತವೆ. ಅದೇ ಕಾರಣದಿಂದ ಇತಿಹಾಸರಚನೆಯಲ್ಲಿ ಚರ್ಚೆ ವಿವಾದಗಳಿಗೆ ವಿಪುಲ ಅವಕಾಶಗಳು ಒದಗಿಬರುತ್ತವೆ. ಇತಿಹಾಸದ ಬಗ್ಗೆ ನಮ್ಮ ಅಭಿಮಾನ, ದುರಭಿಮಾನ, ಈಷ್ರ್ಯೆ, ಅಸಹನೆಗಳು ಪ್ರಕಟಗೊಳ್ಳುತ್ತವೆ. ವರ್ತಮಾನವನ್ನು ತಮ್ಮದಾಗಿಸಿಕೊಳ್ಳುವ ನಮ್ಮ ಆಂತರಿಕ ಆವೇಗವೇ ಇತಿಹಾಸವನ್ನು ತಮ್ಮದಾಗಿಸುವ ಪ್ರೇರಣೆಯಾಗುತ್ತದೆ. ಅದು ಭಾವುಕತೆಯನ್ನು ಮೀರಿ ಬೌದ್ಧಿಕ ಸ್ತರವನ್ನೇರಿದಾಗ ಇತಿಹಾಸವನ್ನು ಒಂದು ಜ್ಞಾನಪ್ರಕಾರವಾಗಿ ನೋಡುವುದಾಗಲೀ, ಸೃಷ್ಟಿಸುವುದಾಗಲೀ ಸಾಧ್ಯವಾಗುತ್ತದೆ.

ಇತಿಹಾಸವನ್ನು ಒಂದು ನಿರಂತರ ಶೋಧ ಅಥವಾ ರಚನೆ, ಅದರ ಕುರಿತು ಮುಗಿಯದ ಜಿಜ್ಞಾಸೆ ಎಂದು ಪರಿಭಾವಿಸಿದಾಗ ನಮ್ಮ ಪುರಾಣಗಳ ಸ್ಥಾನಮಾನವೇನು? ಅವುಗಳು ಧಾರ್ಮಿಕ ನಂಬಿಕೆಗಳನ್ನು ಹುಟ್ಟುಹಾಕುವ, ಪುಷ್ಟೀಕರಿಸುವ ವಿಲಕ್ಷಣ ಸಲಕರಣೆಗಳೇ? ವಾಸ್ತವತೆಗೆ ದೂರವಿರುವ ಕೇವಲ ರಮ್ಯ ಕಥೆಗಳ ದೊಡ್ಡ ಕಂತೆಯೇ? ಈ ನಿಲುವನ್ನು ತಳೆದು ಅವುಗಳನ್ನು ಸಾರಾಸಗಟಾಗಿ ತಿರಸ್ಕರಿಸುವುದು ದೊಡ್ಡ ಅಪಚಾರವೇ. ಅದು ಪುರಾಣಗಳ ಅನೇಕ ರೂಪ, ಸಾಧ್ಯತೆಗಳನ್ನು ಕಡೆಗಣಿಸಿದಂತಾಗುತ್ತದೆ. ಹಾಗೆಂದು ಅವುಗಳನ್ನು ಪರಿಪೂರ್ಣ ಇತಿಹಾಸವೆಂದು ಪರಿಗಣಿಸಿ ನಮ್ಮ ಇತಿಹಾಸ ಪ್ರಜ್ಞೆಯ ವಿರುದ್ಧ ಪ್ರಶ್ನಾರ್ಥಚಿಹ್ನೆಯನ್ನು ಎಸೆದ ಪಾಶ್ಚಾತ್ಯರಿಗೆ ಸಡ್ಡುಹೊಡೆಯಲು ಪುರಾಣಗಳಿಗೆ ನಾವೇನೂ ಆವೇಶಪೂರ್ಣ ಜೈಕಾರ ಹಾಕಬೇಕೆಂದಿಲ್ಲ. ಆದರೆ ಅವುಗಳು ನಿಜವಾಗಿ ಬಿಂಬಿಸುವುದು ನಮ್ಮ ಇತಿಹಾಸಪ್ರಜ್ಞೆಯ ಬೆಳವಣಿಗೆಯ ಕೆಲವು ಮೊದಲ ಹಂತಗಳನ್ನು. ಇತಿಹಾಸಪ್ರಜ್ಞೆಯು ನಿಧಾನವಾಗಿ, ಕ್ರಮೇಣ ಬೆಳೆಯುವಂಥಾದ್ದು. ಅದು ಸೂರ್ಯಪುತ್ರ ಕರ್ಣನಂತೆ ಹುಟ್ಟುವಾಗಲೇ ಕವಚ, ಕರ್ಣಕುಂಡಲಗಳಿಂದ ಪೂರ್ಣಾಲಂಕೃತವಾಗಿರುವುದಿಲ್ಲ. ಅದು ಶೈಶವ, ಬಾಲ್ಯಗಳನ್ನು ದಾಟಿಯೇ, ಅಂಬೆಗಾಲಿಟ್ಟು, ತೊದಲುಮಾತುಗಳನ್ನಾಡಿಯೇ ಮುಂದೆ ಪ್ರೌಢಾವಸ್ಥೆಗೆ ತಲುಪುವಂಥಾದ್ದು. ಪುರಾಣಗಳಲ್ಲಿ ನಾವು ಅಪೇಕ್ಷಿಸುವ ಸಂಪೂರ್ಣ ಇತಿಹಾಸಪ್ರಜ್ಞೆಯು ಸಾಕಾರಗೊಂಡಿರದಿದ್ದರೆ ಅದೇನೂ ದೊಡ್ಡ ಸೋಲು ಎಂದು ತಿಳಿಯಬೇಕಾಗಿಲ್ಲ. ಅವುಗಳಲ್ಲಿ ಇತಿಹಾಸಪ್ರಜ್ಞೆಯನ್ನು ಗುರುತಿಸಿ ವಿವೇಚಿಸಬೇಕಾದರೆ ಪುರಾಣಗಳ ರಚನೆ, ಸ್ವರೂಪಗಳ ಕುರಿತು ಕೆಲವು ಮಾಹಿತಿ, ಸ್ಪಷ್ಟೀಕರಣಗಳು ಅವಶ್ಯ.

ಸಾಮಾನ್ಯವಾಗಿ ಪುರಾಣಗಳ ರಚನೆ ದೈವ ಸಂಕಲ್ಪದಿಂದ ಅಥವಾ ದೈವೀಪ್ರೇರಣೆಯಿಂದ ನಡೆದದ್ದು ಎಂಬ ಭಾವನೆ ಆಸ್ತಿಕರಲ್ಲಿದೆ. ಹಾಗೆಂದು ಪುರಾಣಗಳೇ ಘೋಷಿಸುವುದರಿಂದ ಅದನ್ನು ನಂಬದಿದ್ದರೆ ಅವರಿಗೆ ಅದೊಂದು ದೈವದೂಷಣೆಯಾಗುತ್ತದೆ. ದೇವರು ಅಸತ್ಯದ ವಕ್ತಾರರಾಗಲು ಹೇಗೆ ಸಾಧ್ಯ? ದೈವೀವಾಣಿಯು ಸತ್ಯದ ಮೂರ್ತರೂಪವಷ್ಟೇ? ಈ ನಿಲುವು ಅಚಲವಾದರೆ ಪುರಾಣಗಳ ಸತ್ಯಾಸತ್ಯತೆಗಳ ವಿವೇಚನೆ ಅಸಾಧ್ಯ. ಅದು ಸಾಧ್ಯವಾಗುವುದು ಪುರಾಣ ರಚನೆಯನ್ನು ದೇಶ-ಕಾಲಗಳ ವಾಸ್ತವಿಕ ಚೌಕಟ್ಟಿನಲ್ಲಿ ನೋಡಿದಾಗ ಮಾತ್ರ. ಅದು ಯಾವಾಗ, ಯಾರಿಂದ, ಎಲ್ಲಿ ರಚನೆಯಾಯಿತು ಎಂಬ ಪ್ರಶ್ನೆಗಳೆನ್ನೆತ್ತಿ ಅವುಗಳಿಗೆ ಉತ್ತರಗಳನ್ನು ಹುಡುಕುವುದು ಅವಶ್ಯ. ಹೆಚ್ಚಿನ ಪುರಾಣಗಳನ್ನು ವೇದವ್ಯಾಸ ವಿರಚಿತವೆಂದು ಆಸ್ತಿಕರ ನಂಬಿಕೆ. ಆದರೆ ಪುರಾಣಗಳು ಒಬ್ಬ ಕೃತಿಕಾರನ ಕೆಲಸವಲ್ಲ. ಅವು ಸುಮಾರು ಕ್ರಿ. ಪೂ. 500 ರಿಂದ ಕ್ರಿ.ಶ.500ರ ವಿಸ್ತಾರವಾದ ಕಾಲಘಟ್ಟದಲ್ಲಿ ಬೆಳದುಬಂದವು. ಇವುಗಳು ಕಾಲಕಾಲಕ್ಕೆ ಅನೇಕ ಪ್ರಕ್ಷೇಪಗಳನ್ನು ರೂಢಿಸಿಕೊಂಡಿವೆ. ‘ಜಯಸಂಹಿತೆ’ಯು ಒಂದು ಲಕ್ಷ ಶ್ಲೋಕಗಳ ‘ಮಹಾಭಾರತ’ವಾಗಿ ಬೆಳೆದದ್ದು ಹೀಗೆ ಎಂದು ಸುಖ್ತನ್ಕರರು ಸಮರ್ಥವಾಗಿ ಪ್ರತಿಪಾದಿಸಿದ್ದಾರೆ. ‘ರಾಮಾಯಣ’ ಮಹಾಕಾವ್ಯವು ಆದಿಕವಿ ಮಹರ್ಷಿ ವಾಲ್ಮೀಕಿಯಿಂದ ರಚಿತವಾದದ್ದು ಹೌದಾದರೂ ರಾಮಕಥೆಯು ಅದರ ಮೊದಲೇ ಜನಮಾನಸದಲ್ಲಿ ನೆಲೆಸಿತ್ತು, ಅದು ಮುಂದೆ ವಿವಿಧ ಕಥನ, ಆಖ್ಯಾನ, ಕಾವ್ಯಗಳಿಗೆ ವಸ್ತುವಾಯಿತು ಎಂಬುದನ್ನು ಪ್ರಸಿದ್ಧ ವಿದ್ವಾಂಸ ಕಾಮಿಲ್ ಬುಲ್ಕೆ ತೋರಿಸಿಕೊಟ್ಟಿದ್ದಾರೆ. ರಾಮಾಯಣ ಮಹಾಭಾರತಗಳು ದೇಶ ಅತಿಶ್ರೇಷ್ಠ ಕಾವ್ಯಗಳಾಗಿರುವುದಕ್ಕೆ ಪ್ರಮಾಣ ಅವುಗಳು ಸಮಾಜದ ಮನಸ್ಸನ್ನು ಸಂಪೂರ್ಣ ಗೆದ್ದುಕೊಂಡ ಬಗೆ.

ಕೆಲವೊಮ್ಮೆ ನಮ್ಮ ಪುರಾಣಗಳನ್ನು ಗ್ರೀಕ್ ಪುರಾಣಗಳಿಗೆ ಹೋಲಿಸಿ ನಮ್ಮದು ಹೇಗೆ ಇಂದೂ ಜೀವಂತವಾಗಿವೆ, ಗ್ರೀಕ್ ಪುರಾಣಗಳು ಕೆಲವೇ ವಿದ್ವಜ್ಜನರಿಗೆ ಮಾತ್ರ ಪರಿಚಿತವಾಗಿವೆ, ಎಂದು ಹೆಮ್ಮೆಪಡುವುದುಂಟು. ಆದರೆ ಈ ಹೋಲಿಕೆಯಲ್ಲಿ ಒಂದು ಬಹುಮುಖ್ಯ ವ್ಯತ್ಯಾಸವನ್ನು ನಾವು ಗಮನಿಸಿದಂತೆ ಕಾಣುತ್ತಿಲ್ಲ. ಪುರಾಣಗಳು ಜನಮಾನಸದಲ್ಲಿ ನೆಲೆಸುವುದು ಅವುಗಳು ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳೊಡನೆ ಸೇರಿಹೋದಾಗ. ಅವುಗಳು ನಮ್ಮಲ್ಲಿ ಜೀವಂತವಾಗಿರುವುದು ಇದೇ ಕಾರಣದಿಂದ. ಗ್ರೀಕ್ ಪುರಾಣಗಳಲ್ಲಿ ಆಗೊಮ್ಮೆ ಈಗೊಮ್ಮೆ ಇಣುಕುವ ದೇವರು ಈಗ ನೇಪಥ್ಯಕ್ಕೆ ಸಂದಿದ್ದಾರೆ. ಯುರೋಪಿನಲ್ಲಿ ಕ್ರೈಸ್ತಮತವು ಸ್ಥಾಪನೆಯಾದನಂತರ ಅದರ ಮೊದಲಿದ್ದ ದೇವರುದಿಂಡರಿಗೆ ‘ಪೇಗನ್ ಗಾಡ್ಸ್’ ಅಂದರೆ ‘ಧರ್ಮಬಾಹಿರರ ದೇವರುಗಳು’, ಎಂಬ ಪಟ್ಟವನ್ನಿತ್ತು ಪುರಾಣದೊಳಗೆ ನೂಕಿಬಿಟ್ಟರು. ಅದರೊಳಗಿನ ಯುಲಿಸಿಸ್, ಹೆಕ್ಟರ್, ಅಖಿಲಸ್, ಹೆಲೆನ್ ಮೊದಲಾದವರ ವೀರಗಾಥೆ ಪುರಾಣಗಳಲ್ಲಿ ಉಳಿಯಿತಷ್ಟೇ ವಿನಹ ಅಲ್ಲಿಯ ದೇವರು ಜಗತ್ತು ಬಿಟ್ಟು ಓಡಿಹೋದರು. ನಮ್ಮಲ್ಲಿ ಹಾಗಾಗಲಿಲ್ಲ. ರಾಮ, ಕೃಷ್ಣರು ದೇವರಾಗಿಯೇ ಉಳಿದಿದ್ದಾರೆ. ಆದುದರಿಂದಲೇ ನಮ್ಮಲ್ಲಿ ‘ಅನೇಕ ರಾಮಾಯಣ’ಗಳಿವೆ. ಬೌದ್ಧ, ಜೈನ ರಾಮಾಯಣಗಳಷ್ಟೇ ಅಲ್ಲ, ಅನೇಕ ಕವಿಗಳು ಅದನ್ನು ತಮ್ಮ ವಸ್ತುವಾಗಿಸಿಕೊಂಡು ಅದರೊಡನೆ ಕಾವ್ಯಸಂವಾದಗಳನ್ನು ನಡೆಸಿದ್ದಾರೆ. ಕಂಬನ್, ಗೋಸ್ವಾಮಿ ತುಳಸೀದಾಸ, ಕೃತ್ತಿವಾಸ, ಎಳುತ್ತಚ್ಚನ್, ಕನ್ನಡದ ನರಹರಿ, ಕುವೆಂಪು ಮೊದಲಾದವರು ರಾಮಾಯಣದ ಎಲ್ಲೆಯನ್ನು ಹೆಚ್ಚಿಸಿದ್ದಾರೆ. ಅದನ್ನು ಶ್ರೀಮಂತಗೊಳಿಸಿದ್ದಾರೆ. ಅದರ ಅನೇಕ ರೂಪಾಂತರಗಳು ಮಲೆಯೇಶ್ಯಾ, ಇಂಡೋನೇಶ್ಯಾ, ಥಾಯಿಲೆಂಡ್ ಮೊದಲಾದ ದೇಶಗಳಿಗೆ ಹಿಂದೂಧರ್ಮ-ಸಂಸ್ಕøತಿಗಳೊಡನೆ ನಿರ್ಯಾತಗೊಂಡಿವೆ. ಆ ಸಂಸ್ಕøತಿಗಳೊಳಗೆ ಸೇರಿಹೋಗಿವೆ. ಅನೇಕ ಬುಡಕಟ್ಟು ಜನಾಂಗಗಳೂ ತಮ್ಮತಮ್ಮ ರಾಮಾಯಣಗಳನ್ನು ಹೊಸೆದುಕೊಂಡಿದ್ದಾರೆ. ಮಹಾಭಾರತವೂ ಅದರೊಳಗಿನ ವಿವಿಧ ಪಾತ್ರಗಳೂ ಕಾವ್ಯದ, ನೀತಿವಿವೇಚನೆಯ ಅಥವಾ ಸಾಮಾಜಿಕ ವಿಶ್ಲೇಷಣೆಯ ನೆಲೆಗಳಲ್ಲಿ ಅನೇಕ ರೀತಿಯಲ್ಲಿ ಚರ್ಚಿತವಾಗಿದೆ. ಇವು ಈ ಕಥೆಗಳನ್ನು ತಿರುಚಿ ವಿರೂಪಗೊಳಿಸುವ ಹುನ್ನಾರವಲ್ಲ. ಮಹಾಭಾರತದಲ್ಲಿ ಅರ್ಜುನನ ಪಾತ್ರ ದೊಡ್ಡದೋ ಕರ್ಣನದ್ದೋ? ದುರ್ಯೋಧನನ್ನು ಸುಯೋಧನನ್ನಾಗಿ ಮಾಡಿದ್ದು ಸರಿಯೇ? ದ್ರೋಣಾಚಾರ್ಯರು ಏಕಲವ್ಯನ ಹೆಬ್ಬೆಟ್ಟನ್ನು ಗುರುದಕ್ಷಿಣೆಯಾಗಿ ಕೇಳಿಪಡೆದದ್ದು ದುಷ್ಟತನವಲ್ಲವೇ? ರಾಮನು ವಾಲಿಯನ್ನು ಮರೆಯಲ್ಲಿ ನಿಂತು ಬಾಣಹೊಡೆದು ಸಾಯಿಸಿದ್ದು ಧರ್ಮವೇ? ರಾವಣನು ಅಧರ್ಮಿಯೇ? ವಿಭೀಷಣನ ಪಕ್ಷತ್ಯಾಗ ಸರಿಯೇ? ಈ ಎಲ್ಲಾ ಪ್ರಶ್ನೆಗಳು ಯಕ್ಷಗಾನದಲ್ಲೋ ತಾಳಮದ್ದಲೆಯಲ್ಲೋ ಚರ್ಚೆಗೊಳಗಾದರೆ ಅವು ರಮ್ಯವಾಗುತ್ತವೆ, ರೋಚಕವಾಗುತ್ತವೆ, ಮಾತುಗಾರರ ಅಥವಾ ಕೇಳುಗರ ಆಲೋಚನಾ ಪರಿಧಿಯನ್ನು ವಿಸ್ತರಿಸುತ್ತವೆ. ಚಪ್ಪಾಳೆಗಿಟ್ಟಿಸುತ್ತವೆ. ಇದು ಶುಷ್ಕ ಚರ್ಚೆಯಲ್ಲ. ಪುರಾಣ ವಿಷಯಗಳ ಬಗ್ಗೆ ನಾವು ಇಟ್ಟುಕೊಂಡ ತುಂಟ ಸ್ವಾತಂತ್ರ್ಯವಲ್ಲ. ಬದಲಾಗಿ ಇದು ರಾಮಾಯಣ-ಮಹಾಭಾರತಗಳು ನಮ್ಮ ಜನಗಳ ಭಾವನೆಗಳನ್ನು, ಯೋಚನಾಕ್ರಮಗಳನ್ನು ರೂಪಿಸಿದ ರೀತಿ ಅಥವಾ ಜನಮಾನಸವನ್ನು ಆಲಂಗಿಸಿಕೊಂಡ ಕ್ರಮವನ್ನು ತಿಳಿಸುತ್ತದೆ. ಅವುಗಳ ಕಥಾವಸ್ತು, ಕಥನ ವೈವಿಧ್ಯ, ಪಾತ್ರವಿಶೇಷಗಳು ಅಥವಾ ಅವುಗಳು ಪ್ರತಿನಿಧಿಸುವ, ಪ್ರತಿಪಾದಿಸುವ ನೀತಿಸಂಹಿತೆಗಳು ನಮ್ಮ ಸಮಾಜದೊಡನೆ ಹಾಸುಹೊಕ್ಕಾಗಿ ಬೆಳೆದಿವೆ. ಆದರೆ ಈ ಎರಡು ಮಹಾಕೃತಿಗಳು ನಮ್ಮ ಧಾರ್ಮಿಕ ನಂಬಿಕೆಗಳೊಡನೆ ನಂಟನ್ನಿರಿಸಿಕೊಂಡ ಕಾರಣ ನಾವು ಇವಕ್ಕೆ ಒಂದು ನಿರ್ದಿಷ್ಟ ಸ್ವರೂಪವನ್ನು ಆರೋಪಿಸುತ್ತೇವೆ, ಅಥವಾ ಅವುಗಳಿಂದ ಒಂದು ಖಚಿತವಾದ ಕಥನವನ್ನು ನಿರೀಕ್ಷಿಸುತ್ತೇವೆ. ಅದಲ್ಲದೆ ಬೇರೊಂದು ಚಿತ್ರಣವೇನಾದರೂ ಮೂಡಿಬಂದರೆ ಅದರ ಬಗ್ಗೆ ಅಸಹನೆಯನ್ನು ತಾಳುತ್ತೇವೆ. ಸಮೂಹ ಮಾಧ್ಯಮಗಳು ಇವುಗಳ ಬಗ್ಗೆ ಜನತೆಗೆ ನೀಡುವ ಚಿತ್ರಣ, ಅಥವಾ ತಲುಪಿಸುವ ರೀತಿಗಳು ಅದಕ್ಕೆ ಅಧಿಕೃತ ಸ್ಥಾನವನ್ನು ನೀಡುತ್ತದೆ. ಹೀಗೆ ಒಂದು ಮೂಲಭೂತವಾದವು ಏರ್ಪಡುತ್ತದೆ. ಇದನ್ನು ರಾಜಕೀಯವಾಗಿ ಉಪಯೋಗಿಸಿಕೊಂಡಾಗ ಅದರ ದಂತ, ನಖಗಳು ಹರಿತವಾಗಿ ಆಕ್ರಮಣಕಾರಿಗಳಾಗುತ್ತವೆ. ಈ ಮಹಾಕೃತಿಗಳು ತಮ್ಮ ಸಾಂಸ್ಕøತಿಕ ಸ್ವಾತಂತ್ರ್ಯವನ್ನು ಕಳೆದುಕೊಂಡು ಮೊಂಡುರಾಜಕೀಯದ ಕೈಗೊಂಬೆಯಾಗುತ್ತವೆ. ಇದು ರಾಮಾಯಣ ಮಹಾಭಾರತಗಳಿಗೆ ಮಯ್ರ್ಯಾದೆ ನೀಡುವ ಬದಲು ಮಾಡುವ ಅಪಚಾರ.

ವೇದಗಳು ಮತ್ತು ಪುರಾಣಗಳು ಸಮಾಜದಲ್ಲಿ ತಮ್ಮ ಅಸ್ಥಿತ್ವವನ್ನು ವಿಭಿನ್ನ ರೀತಿಯಲ್ಲಿ ಸ್ಥಾಪಿಸಿಕೊಂಡಿವೆ. ವೇದಗಳು ದೇವದೇವತೆಗಳನ್ನು ಹೊಗಳಿ ಒಲಿಸಿಕೊಳ್ಳುವ ಯಜ್ಞಸಂಸ್ಕಾರಗಳಿಗೆ ಸಂಬಂಧಿಸಿದ ಮೌಖಿಕವಾಗಿ ಕಾಪಾಡಿಕೊಂಡು ಬಂದ ಸಾಹಿತ್ಯಸಮುಚ್ಛಯ. ಆದ್ದರಿಂದ ಇವುಗಳ ಉಪಯೋಗ, ಸುಪರ್ದು ಹಾಗೂ ಪ್ರಸಾರಣೆ ಪುರೋಹಿತ ವರ್ಗಕ್ಕೆ ಮೀಸಲಾಯಿತು. ಅದು ಈ ಕಾರ್ಯವನ್ನು ಬಹಳ ಜಾಗರೂಕತೆಯಿಂದ ಮಾಡಿತು. ವೇದಾಧ್ಯಯನದ ಏಕಸ್ವಾಮ್ಯವನ್ನು ಪಡೆದ ಈ ವರ್ಗವು ಅದನ್ನು ಉಳಿಸಲು ವೇದವನ್ನು ಯಾರು ಅಭ್ಯಸಿಸಲು ಯೋಗ್ಯ, ಯಾರೆಲ್ಲ ಅನರ್ಹ, ಅದರ ಅಭ್ಯಾಸವನ್ನು ನಡೆಸುವ ಕ್ರಮ ಹೇಗೆ ಎಂಬುದರ ಬಗ್ಗೆ ನಿರ್ದಿಷ್ಟ ಕಟ್ಟಳೆಗಳನ್ನು ಮಾಡಿತು. ಇದರಿಂದ ವೇದಾಧ್ಯಯನವು ಕೆಲವೇ ಮಂದಿಯ ಸೊತ್ತಾಗಿ ಪರಿಣಮಿಸಿದರೂ ಅದನ್ನು ಸಾವಿರಾರು ವರ್ಷಗಳಲ್ಲಿ ನೂರಾರು ಪೀಳಿಗೆಗೆ ಅದರ ಮೂಲರೂಪಕ್ಕೆ ಭಂಗ ಬರದಂತೆ ಹಸ್ತಾಂತರಗೊಳಿಸಲು ಸಾಧ್ಯವಾಯಿತು. ಇದೊಂದು ವಿಸ್ಮಯಕಾರಿ ಸಾಧನೆ ಎಂದು ಒಪ್ಪಿಕೊಂಡರೂ ವೇದಗಳ ಸ್ವರೂಪ, ಯಜ್ಞಕೇಂದ್ರಿತ, ಪುರೋಹಿತಕೇಂದ್ರಿತ ಪ್ರಯೋಗಗಳು ಹಾಗೂ ಉಪಯೋಗಗಳು ಇತಿಹಾಸ ರಚನೆಗೆ ತನ್ನದೇ ಆದ ಇತಿಮಿತಿಯನ್ನು ಹೇರುತ್ತವೆ ಎಂದು ಪಾರ್ಗಿಟರ್ ಅಭಿಪ್ರಾಯಪಡುತ್ತಾನೆ. ಆದರೆ ಪುರಾಣಗಳು ತಮ್ಮ ಹುಟ್ಟು, ಪ್ರಸಾರಣಗಳಲ್ಲಿ ಹೆಚ್ಚು ಸ್ವಾತಂತ್ರ್ಯವನ್ನು ಅನುಭವಿಸಿವೆ. ಅವುಗಳು ಸಮಾಜದ ಸಾಕಷ್ಟು ದೊಡ್ಡ ಭೂಪಟವನ್ನು ಪ್ರತಿನಿಧಿಸುತ್ತವೆ. ಅಷ್ಟೇ ಅಲ್ಲ ಬದಲಾಗುವ ಸಮಾಜದ ಅನೇಕ ಆಕಾಂಕ್ಷೆಗಳನ್ನು, ನಿಟ್ಟುಸಿರನ್ನು, ಸಂವೇದನೆಗಳನ್ನು ಪುರಾಣಗಳನ್ನು ಅನಾವರಣಗೊಳಿಸುತ್ತವೆ.

ಪುರಾಣಗಳು ಒಬ್ಬ ಲೇಖಕನ ಸೃಷ್ಟಿಯಲ್ಲ; ಅದರೊಳಗೆ ಬೇರೆಬೇರೆ ಕಾಲಘಟ್ಟಗಳ, ಬದಲಾಗುವ ಸಮಾಜದ ಅನೇಕ ಸಂವೇದನೆಗಳ ಕುರುಹುಗಳಿವೆ ಎಂದಾದರೆ ಅವುಗಳನ್ನು ಗುರುತಿಸಿ, ಆದರಿಸುವುದು ಇತಿಹಾಸಕಾರನ ಕರ್ತವ್ಯವಾಗುತ್ತದೆ. ಅಂದರೆ ಪುರಾಣಗಳನ್ನು ಪರಿಪೂರ್ಣ ಇತಿಹಾಸವೆಂದು ಪರಿಗಣಿಸುವ ಬದಲಾಗಿ ಇತಿಹಾಸದ ಆಕರಗಳನ್ನಾಗಿ ಉಪಯೋಗಿಸುವುದು ಹೆಚ್ಚು ಅರ್ಥಪೂರ್ಣ. ಹಾಗೆಂದು ಪುರಾಣಗಳನ್ನು ಇತಿಹಾಸಕಾರನು ಸಂಪೂರ್ಣವಾಗಿ ನಂಬುವುದು ಅಸಾಧ್ಯ. ಹಂಸಕ್ಷೀರ ನ್ಯಾಯದಂತೆ ಕೆಲವನ್ನು ಸ್ವೀಕರಿಸಿ ಇನ್ನು ಕೆಲವನ್ನು ತಿರಸ್ಕರಿಸಿ ಅವುಗಳನ್ನು ಉಪಯೋಗಿಸಬೇಕಷ್ಟೆ. ಪುರಾಣಗಳಲ್ಲಿ ನೆಲೆಸಿರುವ ಒಟ್ಟಾರೆ ಇತಿಹಾಸಪ್ರಜ್ಞೆಯನ್ನು ಗುರುತಿಸಿ, ಅದನ್ನು ಹೊರಗೆಡಹುವುದಷ್ಟೇ ಅಲ್ಲ, ಅವುಗಳಲ್ಲಿ ಉಲ್ಲೇಖಗೊಂಡ ವಂಶಾವಳಿಗಳನ್ನು ಹಾಗೂ ಅವುಗಳಲ್ಲಿ ವ್ಯಕ್ತಗೊಂಡ ಅಥವಾ ಸೂಚ್ಯವಾಗಿರುವ ಸಾಮಾಜಿಕ, ರಾಜಕೀಯ ಹಾಗೂ ಧಾರ್ಮಿಕ ವ್ಯವಸ್ಥೆ-ಸಿದ್ಧಾಂತಗಳ ಪರಿಚಯಮಾಡಿಕೊಳ್ಳುವುದು ಅತ್ಯವಶ್ಯ. ಪುರಾಣಗಳನ್ನು ಇತಿಹಾಸ ಸಂಶೋಧನೆಯ ವಸ್ತುವಾಗಿಸಿ, ಅದರ ಶಿಸ್ತಿನ ಒರೆಗೆ ಹಚ್ಚಿ ಅವುಗಳ ಹೆಚ್ಚಿನ ಸಾಧ್ಯತೆಗಳನ್ನು ನಿಷ್ಕರ್ಷಿಸುವುದು ಇತಿಹಾಸಕಾರನು ಮಾಡಬೇಕಾದ ಕೆಲಸ. ಇದರಿಂದ ಪುರಾಣಗಳ ಬಗ್ಗೆ ಸಂಪೂರ್ಣ, ಚರ್ಚಾತೀತ ನಂಬಿಕೆ ಅಥವಾ ಆರಾಧನಾ ಮನೋಭಾವಕ್ಕೆ ತುಸು ಧಕ್ಕೆಯಾದರೂ ಅವುಗಳನ್ನು ಇತಿಹಾಸದ ಖಚಿತ ಪರಿಕಲ್ಪನೆಯೊಳಗೆ ಹೊಸೆಯುವ ಕೆಲಸ ಸಾಧ್ಯವಾಗುತ್ತದೆ.

ಋಗ್ವೇದದಿಂದ ಮೊದಲ್ಗೊಂಡು ಭಾರತದಲ್ಲಿ ಇತಿಹಾಸಪ್ರಜ್ಞೆಯನ್ನು ಗುರುತಿಸಹೊರಟಾಗ ಅದರ ಅಸ್ಪಷ್ಟ ಬೆಳವಣಿಗೆನ್ನು ವೇದಸಾಹಿತ್ಯದ ದಾನಸ್ತುತಿ, ಹಾಗೂ ಮುಂದೆ ಬೆಳೆದುಬಂದ ಗಾಥೆ, ನಾರಶಂಸಿ, ಆಖ್ಯಾನ ಮತ್ತು ವಂಶಾನುಚರಿತಗಳಲ್ಲಿ ಕಾಣುತ್ತೇವೆ. ಗಾಥೆಗಳು ಕಾವ್ಯಾತ್ಮಕ ಕಥನಗಳಾಗಿದ್ದು ಅವುಗಳು ದಾನಸ್ತುತಿ ಅಥವಾ ನಾರಶಂಸಿ (ವೀರಗಾಥೆ)ಗಳಾಗಿ ಅಭಿವ್ಯಕ್ತಗೊಳ್ಳಬಹುದು. ಆಖ್ಯಾನಗಳು ನಿರ್ದಿಷ್ಟ ವಿಶೇಷ ಘಟನಾನಿರೂಪಣೆಗಳು. ವೇದಸಾಹಿತ್ಯದಲ್ಲಿ ಕಂಡುಬರುವ ಈ ಅಂಶಗಳು ಮುಂದೆ ಪುರಾಣಗಳೊಳಗೆ ಹೆಚ್ಚಾಗಿ ಬೆಳೆದು ಪ್ರಕಟಗೊಂಡದ್ದು ವಿದಿತವಾಗುತ್ತದೆ. ಶತಪಥ ಬ್ರಾಹ್ಮಣ ಮತ್ತು ನಿರುಕ್ತಗಳು ಆಖ್ಯಾನ ವನ್ನು ಇತಿಹಾಸ-ಪುರಾಣಗಳಿಂದ ಬೇರೆ ಎಂದು ಪರಿಗಣಿಸಿವೆ. ಸಾಹಿತ್ಯೋಪಾಸಕ ಗುಂಪೊಂದು ಆಖ್ಯಾನಗಳನ್ನು ವಿಶೇಷವಾಗಿ ಕೃಷಿಮಾಡಿತು; ಆದರೆ ಮುಂದೆ ಇತಿಹಾಸ-ಪುರಾಣಗಳೊಡನೆ ಸೇರಿಹೋಯಿತು ಎಂಬುದು ವಿ.ಎಸ್. ಪಾಠಕ್ ಅವರ ಅಭಿಮತ. ಇತಿಹಾಸ-ಪುರಾಣಗಳಲ್ಲಿ ವಂಶಾನುಚರಿತ ಭಾಗವು ರಾಜವಂಶಗಳನ್ನು ಕುರಿತೇ ರಚಿತವಾದದ್ದು. ಇದರೊಳಗೆ ನಿರ್ದಿಷ್ಟ ಐತಿಹಾಸಿಕ ವಿವರಗಳನ್ನು ಲೌಕಿಕ ಕಾಲಚೌಕಟ್ಟಿಗೆ ಅಳವಡಿಸಿ ಉಲ್ಲೇಖಿಸುವುದು ಇತಿಹಾಸಕಾರನಿಗೆ ಖಚಿತ ನೆಲೆಯಲ್ಲಿ ಉಪಯೋಗಿಯಾಗುತ್ತದೆ. ಇದು ಸಮಾಜದ ಹಾಗೂ ರಾಜಕೀಯದ ಕೆಲವು ನಿರ್ದಿಷ್ಟ ಬೆಳವಣಿಗೆಗಳನ್ನೂ ಪ್ರತಿಬಿಂಬಿಸುತ್ತದೆ ಎಂಬುದನ್ನು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ.

ನಮ್ಮ ಇತಿಹಾಸ ಪ್ರಜ್ಞೆಯನ್ನು ಹಾಗೂ ಅದರ ಬೆಳವಣಿಗೆಯನ್ನು ತಿಳಿಯುವಾಗ ನಮ್ಮ ಪುರಾಣಗಳಲ್ಲಿ ಎರಡು ಪ್ರಕಾರದ ಇತಿಹಾಸ ಸಂವೇದನೆಗಳನ್ನು ಗುರುತಿಸಲಾಗಿದೆ. ಮೊದಲನೆಯದು ಅವುಗಳಲ್ಲಿ ಹುದುಗಿಕೊಂಡ ಅಥವಾ ಅಂತರ್ಗತವಾದ ಇತಿಹಾಸಪ್ರಜ್ಞೆ; ಎರಡನೆಯದು ಪ್ರಕಟಗೊಂಡ ಅಥವಾ ನಿಚ್ಚಳವಾಗಿ ವ್ಯಕ್ತವಾದ ಇತಿಹಾಸ ಚಿತ್ರಣ. ಇವುಗಳಲ್ಲಿ ಮೊದಲನೆಯದು ಮೇಲುನೋಟಕ್ಕೆ ತೀರ ಕಾಲ್ಪನಿಕವಾಗಿ ತೋರುತ್ತದೆ. ಪುರಾಣಗಳಲ್ಲಿ ಕೆಲವು ಪದರುಗಳು ಕಾಲ್ಪನಿಕ ಕಥನಗಳೇ ಆಗಿರುವುದನ್ನು ನಾವು ಕಾಣಬಹುದು. ಉದಾಹರಣೆಯಾಗಿ ಜಗತ್ತಿನ ಸೃಷ್ಟಿಯ ಕಲ್ಪನೆ. ಶತಪಥ ಬ್ರಾಹ್ಮಣದಲ್ಲಿ ಬರುವ ಯುಗಾಂತಿಕ ನೆರೆ; ಅದರಲ್ಲಿ ಮನುವಿನ ಬೊಗಸೆಯಲ್ಲಿ ಬಂದಿಳಿದ ಚಿಕ್ಕ ಮೀನು; ಅದು ವಿರಾಟ್ ಸ್ವರೂಪವನ್ನು ಧರಿಸಿ ಪ್ರಳಯದಿಂದ ಮನುವನ್ನು ಹಾಗೂ ಸಪ್ತಋಷಿಗಳನ್ನು ರಕ್ಷಿಸಿದ್ದು; ಮನುವಿನ ಪೀಳಿಗೆಯ ಕಥೆ: ಇಕ್ಷ್ವಾಕುವಿನಿಂದ ಸೂರ್ಯವಂಶ, ಇಳಾ ಮೂಲಕ ಚಂದ್ರವಂಶಗಳ ಹುಟ್ಟು, ಇತ್ಯಾದಿ ವಿವರಗಳು ಸೃಷ್ಟಿಯನ್ನು ದೇವಸಂಕಲ್ಪಕ್ಕೂ, ಅದನ್ನು ಪ್ರಥಮ ಮಾನವನೆಂದುಕೊಂಡ ಮನು ಮತ್ತು ಅವನ ಕುಲಕ್ಕೂ, ಅದನ್ನು ಧರೆಯನ್ನಾಳಿದ ಸೂರ್ಯವಂಶ-ಚಂದ್ರವಂಶಗಳಿಗೂ ಪೋಣಿಸಿದ ಈ ಕಥೆ ಮತ್ಸ್ಯಪುರಾಣದಲ್ಲಿ ವಿಷ್ಣುವಿನ ಅವತಾರದ ಪುಣ್ಯಕಥೆಯೊಡನೆ ಸೇರಿಕೊಂಡಿತು. ಯುಗಾಂತಿಕ ಪ್ರಳಯದ ಈ ಕಥನವು ಮೆಸಪೊಟೇಮಿಯದ ಸದೃಶ್ಯ ನಿರೂಪಣೆಗೆ ಹೋಲುತ್ತದೆ. ಇದು ಮುಂದೆ ಯಹೂದಿಯರಿಗೆ ಬಳುವಳಿಯಾಗಿ ಬಂದು ಬೈಬಲ್ಲಿನ ‘ಹಳೇ ಒಡಂಬಡಿಕೆ’ಯೊಳಗೂ ನುಸುಳಿ ಬಂತು. ಈ ಪರಿಕಲ್ಪನೆಯನ್ನು ಯಾರಿಂದ ಯಾರು ಕಸಿದುಕೊಂಡರು ಎಂಬ ಚರ್ಚೆಯಲ್ಲಿ ಒಮ್ಮತ ಮೂಡುವ ಸಾಧ್ಯತೆ ಕಡಿಮೆ. ರಾಷ್ಟ್ರಪ್ರೇಮ, ಧರ್ಮಪ್ರೇಮಗಳು ಇದಕ್ಕೆ ಸಹಾಯಕವಲ್ಲ. ಆದರೆ ಈ ಕಥನವು ತಮ್ಮ ವಂಶಪರಂಪರೆಗೆ ಹೊಸ ಕಾಲಘಟ್ಟವನ್ನು ಉದ್ಘಾಟಿಸುವ ಹಿರಿಮೆ ಹಾಗೂ ಅದಕ್ಕೆ ನಾಮಸೂಚಕ ಗೌರವವನ್ನು ಹೊಂದಿಸಿಕೊಳ್ಳುವ ವರಸೆಯನ್ನು ಅರುಹುತ್ತದೆ. ಇದು ವಂಶಕೇಂದ್ರಿತ ಅಥವಾ ವಂಶಪ್ರಧಾನ ಸಮಾಜವು ತನ್ನನ್ನು ತಾನು ಪ್ರಕಟಿಸಿಕೊಳ್ಳುವ ಒಂದು ನಮೂನೆ ಎಂಬುದು ಪರಿಶೀಲನಾರ್ಹವಾದ ವಿಚಾರ. ಕಾಲ್ಪನಿಕ ಕಥೆಗಳು ರಚನೆಗೊಳ್ಳುವುದು ಅವುಗಳ ಕತೃಗಳ ತುಂಟತನದಿಂದಲ್ಲ. ಬದಲಾಗಿ ಅವುಗಳು ಕೆಲವು ವಾಸ್ತವತೆಗಳ ವಿಶೇಷ ರೂಪಕಗಳಾಗಬಹುದು ಅಥವಾ ಧ್ವನ್ಯಾತ್ಮಕ ನಿರೂಪಣೆಯಾಗಬಹುದು. ಅವುಗಳನ್ನು ಸೂಕ್ತರೀತಿಯಲ್ಲಿ ಗುರುತಿಸುವ ಚೈತನ್ಯ ನಮ್ಮಲ್ಲಿರಬೇಕು, ಅಷ್ಟೆ. ರೂಪಕಗಳನ್ನು ವಾಸ್ತವತೆ ಎಂದೇ ತಿಳಿದು ವ್ಯವಹರಿಸಿದಾಗ ನಮ್ಮ ಪುರಾಣ ಪ್ರೇಮವು ಒಂದು ಆಕ್ರಮಣಕಾರಿ ಹುಂಬತನದ ಮಟ್ಟವನ್ನು ತಲುಪುವ ಸಾಧ್ಯತೆ ಬಹಳಷ್ಟಿದೆ. ಹಾಗಾದುದಕ್ಕೆ ದೃಷ್ಟಾಂತಗಳನ್ನು ಹೇಳಿ ಸದ್ಯಕ್ಕೆ ತೂಕಡಿಸುತ್ತಿರುವ ಅನಿಷ್ಟವೊಂದನ್ನು ಸಮಾಜದ ವಿರುದ್ಧ ಛೂಬಿಡುವ ಕೆಲಸ ಇಲ್ಲಿ ಮಾಡುತ್ತಿಲ್ಲ.

ಕೆಲವೊಮ್ಮೆ ಕಾಲ್ಪನಿಕ ಕಥಾನಕಗಳು ಪ್ರಚಲಿತ ಸಾಮಾಜಿಕ ಸ್ಥಿತಿಗತಿ ಅಥವಾ ಸಮೀಕರಣಗಳನ್ನು ಅನುಮೋದಿಸುವ ಹಾಗೂ ತನ್ಮೂಲಕ ಅವುಗಳನ್ನು ಸ್ಥಿರೀಕರಿಸುವ ಕೆಲಸಮಾಡುತ್ತವೆ. ಋಗ್ವೇದದ ಹತ್ತನೇ ಮಂಡಲದ ಪುರುಷಸೂಕ್ತದಲ್ಲಿ ಚಿತ್ರಿತವಾದ ಚಾತುರ್ವಣ್ರ್ಯದ ಉಗಮ ಇದಕ್ಕೊಂದು ದೃಷ್ಟಾಂತ. ಇದು ವೇದಕಾಲದ್ದೇ ಅಥವಾ ವೇದೋತ್ತರಕಾಲದಿಂದ ಪ್ರಕ್ಷಿಪ್ತವಾಗಿ ನುಸುಳಿಬಂದದ್ದೇ ಎಂಬ ಬಗ್ಗೆ ಚರ್ಚೆಗಳು ನಡೆದಿವೆ. ಅದು ಈ ಬೆಳವಣಿಗೆಯನ್ನು ಯಾವ ಕಾಲಘಟ್ಟಕ್ಕೆ ಹೊಂದಿಸಿಕೊಳ್ಳಬೇಕು ಎಂಬುದರ ಮೇಲೆ ನಿಂತಿದೆ. ಆದಿಪುರುಷನ ಮುಖದಿಂದ ಬ್ರಾಹ್ಮಣ, ಭುಜಗಳಿಂದ ಕ್ಷತ್ರಿಯ, ಜಂಘೆಗಳಿಂದ ವೈಶ್ಯ ಹಾಗೂ ಪಾದಗಳಿಂದ ಶೂದ್ರನು ಉದ್ಭವವಾದ ಚಿತ್ರಣ ಶ್ರೇಣೀಕೃತ ಸಮಾಜದ ಬೆಳವಣಿಗೆ ಮತ್ತು ಅದರ ತಾತ್ವಿಕ ಸಮರ್ಥನೆಗೆ ರೂಪಕವಾಗಿದೆ. ಇಂತಹ ಸಮಾಜವು ಸೃಷ್ಟಿಯ ಸಂಕಲ್ಪವೆಂದು ಪರಿಗಣಿಸಿದಾಗ ಅದರ ಅನುಮೋದನೆ, ಅಂಗೀಕಾರಗಳು ನಮ್ಮ ಆಯ್ಕೆಯನ್ನು ಮೀರಿದಂತಾಗುತ್ತದೆ. ಹಾಗೆಯೇ ಮಹಾಭಾರತ, ವಿಷ್ಣುಪುರಾಣ ಹಾಗೂ ಮತ್ಸ್ಯಪುರಾಣಗಳಲ್ಲಿ ಉಲ್ಲೇಖವಾದ ಪೃಥುವಿನ ಕಥೆಯು ಬದಲಾದ ಸಾಮಾಜಿಕ, ರಾಜಕೀಯ ಸ್ಥಿತಿಗತಿಗಳನ್ನು ಸೂಚಿಸುತ್ತದೆ. ಯಜ್ಞಕಾರ್ಯಗಳನ್ನು ಮಾಡಲೊಲ್ಲದ ದುಷ್ಟ ವೇನನನ್ನು ಋಷಿಗಳು ಕೊಂದರೆಂದೂ, ಆತನ ತೊಡೆಯಿಂದ ಉದ್ಭವಗೊಂಡ ಕರಿಯ, ಕುಬ್ಜ, ಕುರೂಪಿಯಾದ ನಿಷಾದನನ್ನು ರಾಜ್ಯವಾಳಲು ಅನರ್ಹನೆಂದು ಮನಗಂಡು ಅಡವಿಗಟ್ಟಿದರೆಂದೂ, ವೇನನ ಬಲಭುಜವನ್ನು ಮಥಿಸಿ ಅಲ್ಲಿ ಹುಟ್ಟಿದ ನೀತಿವಂತ ಪೃಥುವನ್ನು ರಾಜನೆಂದು ಘೋಷಿಸಿದರೆಂದೂ, ಸದ್ಗುಣಿಯಾದ ಪೃಥುವು ಕೃಷಿ, ಪಶುಪಾಲನೆಯ ಬೆಳವಣಿಗೆಗೆ ಕಾರಣವಾಗಿ ಜನರಿಗೆ ಕ್ಷೇಮಕಾರಕನಾದುದರಿಂದ ಭೂಮಿಯು ಕೃತಜ್ಞತಾಪೂರ್ವಕವಾಗಿ ಪೃಥ್ವಿಯೆಂಬ ಹೆಸರನ್ನು ಧರಿಸಿಕೊಂಡಳೆಂದೂ ಕಥೆಯಿದೆ. ನಾಗರಿಕತೆಯ ಹಾಗೂ ಅದಕ್ಕೆ ಅಂಟಿಕೊಂಡ ಆರ್ಥಿಕತೆಯ ಬೆಳವಣಿಗೆಯ ಸಂದರ್ಭದಲ್ಲಿ ಕೆಲವು ಜನಜಾತಿಗಳು ತಿರಸ್ಕರಿಸಲ್ಪಟ್ಟು ಕಾಡುಪಾಲಾದರು; ನಾಗರಿಕತೆಯ ಪರಿಧಿಯಿಂದ ಹೊರದಬ್ಬಲ್ಪಟ್ಟರು. ನಾಗರಿಕ-ಅನಾಗರಿಕರೊಳಗಿನ ವ್ಯತ್ಯಾಸ, ವಿರೋಧಗಳ ಪರಿಕಲ್ಪನೆ ಧೃಢಗೊಂಡಿತು. ಈ ಕಥೆಯನ್ನು ಈ ಐತಿಹಾಸಿಕ ಪ್ರಕ್ರಿಯೆಯ ರೂಪಕವಾಗಿ ಗ್ರಹಿಸಬಹುದು ಎಂದು ರೊಮಿಲಾ ಥಾಪರ್ ಅಭಿಪ್ರಾಯಪಡುತ್ತಾರೆ. ಇದು ವಂಶಕೇಂದ್ರಿತ ಸಮಾಜವು ಹುಟ್ಟುಹಾಕುವ ಸೈದ್ಧಾಂತಿಕ ರೂಪಕ. ಇದನ್ನು ಯಜ್ಞದೊಡನೆ, ಋಷಿಕಾಯಕದೊಡನೆ, ಅಥವಾ ಪವಾಡಗಳೊಡನೆ ಸೇರಿಸಿದಾಗ ಇದಕ್ಕೆ ವಿವೇಚನೆಯನ್ನು ಮೀರಿದ ಒಂದು ಭಾವುಕತೆಯ ಅನುಮೋದನೆ ದೊರಕುತ್ತದೆ.

 ಯಜ್ಞವು ಕೇವಲ ದೇವಸಂಬಂಧ ವ್ಯವಹಾರವಾಗಿರದೆ ಸಾಮಾಜಿಕ-ರಾಜಕೀಯ ಸಂಬಂಧಗಳನ್ನು ನಿರೂಪಿಸುವ, ಪುನಾರೂಪಿಸುವ, ಸ್ಥಾಪಿಸುವ ಕೆಲಸವನ್ನು ಮಾಡಿದೆ. ಇದು ವಂಶಕೇಂದ್ರಿತ ಸಮಾಜದಲ್ಲಿ ಸಂಪತ್ತಿನ ವಿಭಜನೆಯನ್ನು ಆಯಾಯ ಪಂಗಡಗಳ ಶಕ್ತಿ, ಪ್ರಭಾವ, ಸ್ಥಾನಮಾನಗಳ ಪ್ರಕಾರ ನಡೆಸಲಾಗುತ್ತಿತ್ತು. ರಾಜಸೂಯ ಯಜ್ಞದಲ್ಲಿ ರಾಜನ ಕ್ಷಾತ್ರ ಹಿರಿಮೆಯನ್ನು ಮಾತ್ರ ಘೋಷಿಸುವುದಲ್ಲ, ಅದಕ್ಕೆ ಆಮಂತ್ರಿತರಾದ ರಾಜರನ್ನು ಅವರ ವಂಶದ ಘನತೆಗನುಸಾರವಾಗಿ ಆದರಿಸುವುದೂ ಒಂದು ಮುಖ್ಯ ಅಂಗ. ಅದರೊಳಗೆ ಏರ್ಪಡುವ ವಿವಾದಗಳು ವಂಶಕೇಂದ್ರಿತ ಸಾಮಾಜಿಕ, ರಾಜಕೀಯ ಬದಲಾವಣೆಗಳ ಪ್ರತಿಬಿಂಬ. ಧರ್ಮರಾಯನ ರಾಜಸೂಯ ಯಾಗದಲ್ಲಿ ವೃಷ್ಣಿಕುಲವನ್ನು ಪ್ರತಿನಿಧಿಸಿದ ಶ್ರೀಕೃಷ್ಣನಿಗೆ ಅಗ್ರಪೂಜೆ ಸಂದದ್ದು, ಅದು ಚೇಡಿ ನರೇಶ ಶಿಶುಪಾಲನಿಗೆ ಅಪಥ್ಯವಾದದ್ದು, ಆತ ಶ್ರೀಕೃಷ್ಣನನ್ನು ಅವಹೇಳನ ಮಾಡಿದ್ದು, ಮತ್ತು ಆತನ ಪಾಪದ ಕೊಡ ತುಂಬಿದಾಗ ಆತನ ವಧೆಯಾದದ್ದು ಆಸ್ತಿಕರಿಗೆ ಪ್ರಿಯವಾದ ಪೌರಾಣಿಕ ಕಥೆ. ಆದರೆ ಅದು ಮಾತ್ರವಲ್ಲದೆ ಶ್ರೀಕೃಷ್ಣಾವತಾರದ ವಿವರ ಅಥವಾ ದುಷ್ಟ ಶಿಕ್ಷಣದ ನೀತಿಪಾಠಗಳೊಳಗೆ ಹಲವು ಸಾಮಾಜಿಕ ಮತ್ತು ರಾಜಕೀಯ ವಾಸ್ತವಗಳು ಅವಿತುಕೊಂಡಿವೆ. ಇದನ್ನೇ ಪುರಾಣಗಳಲ್ಲಿ ಅಂತರ್ಗತವಾದ ಇತಿಹಾಸಪ್ರಜ್ಞೆಯೆಂದು ಗ್ರಹಿಸಬೇಕು. ಅದನ್ನು ಹೊರಗೆಡಹುವ ಕೆಲಸ ಮಾತ್ರ ಇತಿಹಾಸಕಾರನದ್ದು. 

ಅಂತರ್ಗತ ಇತಿಹಾಸ ಸಂವೇದನೆಗಳಿರುವುದು ಕಾಲ್ಪನಿಕ ಕಥಾನಕಗಳಲ್ಲಷ್ಟೇ ಅಲ್ಲ, ಅದು ದಾನಸ್ತುತಿ, ಗಾಥಾ, ನಾರಶಂಸಿ ಹಾಗೂ ಆಖ್ಯಾನಗಳಲ್ಲೂ ಅಡಗಿರುತ್ತದೆ. ಯಜ್ಞಕರ್ಮಗಳೊಡನೆ ಜೋಡಣೆಗೊಂಡ ಈ ಅಂಶಗಳು ಕುಲಪಂಗಡಗಳ ಸ್ಥಾನ, ಸಂಪತ್ತಿಗಾಗಿ ಅವುಗಳೊಳಗಿ ಪೈಪೋಟಿ, ಅದರಲ್ಲಿ ವಿಜಯಿಗಳ ಪ್ರಶಂಸೆ, ವೀರರ, ರಾಜರ ಕುರಿತಾದ ಕಥೆಗಳಾಗಿ ವೇದಸಾಹಿತ್ಯದಲ್ಲಿ ಪ್ರಕಟಗೊಂಡಿವೆ. ಮುಂದೆ ವಂಶಪ್ರಧಾನ ವ್ಯವಸ್ಥೆಯು ರಾಜಪ್ರಭುತ್ವವಾಗಿ ಬೆಳೆದು ವಿಕಸನಗೊಂಡಾಗ ಅಂತರ್ಗತ ಇತಿಹಾಸ ಸಂವೇದನೆಗಳು ಹೊಸ ಸನ್ನಿವೇಶಕ್ಕೆ ಹೊಂದಿಕೊಂಡು ಮುಕ್ತವಾಗಿ ಪ್ರಚುರಗೊಳ್ಳುವುದನ್ನು ಕಾಣುತ್ತೇವೆ. ಪ್ರಭುತ್ವವು ತನ್ನನ್ನು ಘೋಷಿಸುವಾಗ ಸೃಷ್ಟಿಯ ಉಗಮದ ಕಾಲ್ಪನಿಕ ಕಥಾನಕದೊಳಗೆ ಅಳವಡಿಸಿಕೊಂಡು, ಅಷ್ಟೇ ಕಾಲ್ಪನಿಕವಾದ ಕಲ್ಪ, ಮನ್ವಂತರ, ಯುಗಗಳಂಥಾ ಕಾಲದ ವಿರಾಟ್ ಚಕ್ರವನ್ನು ಸೂರ್ಯ-ಚಂದ್ರವಂಶಗಳಿಗೆ, ಅವುಗಳನ್ನು ತಮ್ಮ ಮನೆತನಗಳಿಗೆ ರೂಢಿಸಿಕೊಂಡು, ತಮ್ಮ ವಂಶಾವಳಿಯನ್ನು ಪುರಾಣಗಳಲ್ಲಿ ವಿವರಿಸುತ್ತದೆ. ಒಂದು ಅಮೋಘ ಅವಾಸ್ತವತೆಯು ನಿಜ ಕಾಲಚೌಕಟ್ಟಿನ, ನಿಜ ವಂಶಾವಳಿಯ ಪೀಠಿಕೆಯಾಗಿ ಪುರಾಣಗಳಲ್ಲಿ ಒದಗಿ ಬರುತ್ತದೆ. ಅಲ್ಲಿ ಈ ಅಮೋಘ ಅವಾಸ್ತವತೆಯು ಅಸಂಗತವೆಂದುಕೊಳ್ಳುವುದು ಸಾಧುವಲ್ಲ. ಬದಲಾಗಿ ಅದು ವಾಸ್ತವ ಪ್ರಭುತ್ವಕ್ಕೆ ನಿರಂತರತೆಯ, ದೈವೀ ಕೈವಾಡದ ದಿವ್ಯ ಚೌಕಟ್ಟನ್ನು ನೀಡುತ್ತದೆ.  ಅಮೋಘ ಅವಾಸ್ತತೆಯ ಸಹಯೋಗ ಪ್ರಭುತ್ವಕ್ಕೆ ಒಂದು ವಿಲಕ್ಷಣವಾದ ಅನುಮೋದನೆಯನ್ನು ನೀಡುತ್ತದೆ. ಧರೆಯನ್ನಾಳುವವನು ಹಾಗೂ ಆತನ ವಂಶವು ಸೃಷ್ಟಿಯೊಡನೆ, ಅದರ ಕಾಲ ಮತ್ತು ಮಹಾ ನಿರಂತರತೆಯೊಡನೆ ಸೇರಿಕೊಳ್ಳುವುದು ಆತನ ಮತ್ತು ಆತನ ವಂಶದ ಹಿರಿಮೆಯನ್ನು ಸ್ಥಾಪಿಸುವ ವಿಧಾನ. ಇದು ಇತಿಹಾಸಪ್ರಜ್ಞೆಯು ಹೊರಹೊಮ್ಮುವ ಒಂದು ಕ್ರಮ; ಅದನ್ನು ರಾಜಕೀಯ ಚೌಕಟ್ಟಿಗೆ ತೂರಿಸಿ ಅದರಿಂದ ಲಾಭ ಗಳಿಸುವ ವಿಶೇಷ ವಿಧಾನ.

ಸಾಮಾನ್ಯವಾಗಿ ನಮ್ಮಲ್ಲಿ ಹದಿನೆಂಟು ಪುರಾಣಗಳನ್ನು ಗುರುತಿಸಲಾಗಿದೆ. ಅವುಗಳನ್ನು ಸೂತಮುನಿ ಲೋಮಹರ್ಷಣ ಅಥವಾ ಆತನ ಮಗ ಉಗ್ರಶ್ರವಸ್ ನಿರೂಪಿಸಿದರೆಂದೂ ನಂಬಲಾಗಿದೆ. ಅವುಗಳ ನಿರೂಪಣೆಯ ಸಂದರ್ಭ ಯಜ್ಞಕಾರ್ಯಗಳಾದುದರಿಂದ ಅವುಗಳು ಪುಣ್ಯಸಂಚಯನದಲ್ಲಿ ಭಾಗಿಯಾಗುತ್ತವೆ ಎಂಬ ನಂಬಿಕೆಯನ್ನೂ ಅವು ಧೃಢೀಕರಿಸುತ್ತವೆ. ಪುರಾಣಗಳು ಈ ಮೊದಲು ಚರ್ಚಿತವಾದ ಐದು ಅಂಶಗಳನ್ನು ಒಳಗೊಂಡಿರಬೇಕು: ಸರ್ಗ (ಸೃಷ್ಟಿಯ ಕಥೆ), ಪ್ರತಿಸರ್ಗ (ಸೃಷ್ಟಿಯು ಪ್ರಳಯದಲ್ಲಿ ಕೊನೆಗೊಂಡು ಹೊಸ ಸೃಷ್ಟಿಯ ನಾಂದಿ); ವಂಶ (ದೇವ ದೇವತೆಗಳ ಹಾಗೂ ಆದಿಋಷಿಗಳ ವಂಶಾವಳಿಗಳು), ಮನ್ವಂತರ ( ಮಹಾಯುಗ, ಕಲ್ಪಗಳೇ  ಮೊದಲಾದ ವಿರಾಟ್ ಕಾಲಚಕ್ರಗಳು ಮತ್ತು ಅವುಗಳ ಪ್ರವರ್ತಕರಾಗಿ ಮನು) ಹಾಗೂ ವಂಶಾನುಚರಿತ (ಪುರಾತನ ರಾಜವಂಶಗಳ ಚರಿತ್ರೆ). ಇವುಗಳಲ್ಲಿ ಕೊನೆಯ ಅಂಶದಲ್ಲಿ ಮಾತ್ರ ವಾಸ್ತವತೆಗೆ ನಿಷ್ಠೆಯನ್ನು ತೋರುವ ಪ್ರಯತ್ನವನ್ನು ಕಾಣುತ್ತೇವೆ. ಅದರಲ್ಲೂ ಕೆಲವೊಮ್ಮೆ ಉತ್ಪ್ರೇಕ್ಷೆ, ಕಾಲಗಣನೆಯಲ್ಲಿ ಅಥವಾ ನೀಡುವ ವಿವರಗಳಲ್ಲಿ ಅಸಡ್ಡೆ, ಅವಿಶ್ವಸನೀಯತೆಯನ್ನು ಕಾಣಲು ಸಾಧ್ಯ. ವಂಶಾನುಚರಿತವು ಮೊದಲ ನಾಲ್ಕು ಅಂಶಗಳೊಡನೆ ಇಟ್ಟುಕೊಂಡ ಸಂಬಂಧ ಅದಕ್ಕೆ ವಿಶೇಷ ಅನುಗ್ರಹಕ್ಕೆ ವಾರಸುದಾರನಾಗಲು ಎಂಬ ವಾದದಲ್ಲಿ ಹುರುಳಿಲ್ಲದಿಲ್ಲ.

ತಮ್ಮ ವಂಶದ ಉಗಮವನ್ನು ಅಲೌಕಿಕ ಘಟನೆಗಳೊಡನೆ ಅಥವಾ ದೇವರ ಹಸ್ತಕ್ಷೇಪಕ್ಕೆ ಜೋಡಿಸಿಕೊಳ್ಳುವ ಹವ್ಯಾಸವನ್ನು ಮುಂದೆ ಆಳಿದ ರಾಜಮನೆತನಗಳು ಸಾಮಾನ್ಯವಾಗಿ ರೂಢಿಸಿಕೊಂಡದ್ದನ್ನು ಕಾಣುತ್ತೇವೆ. ಅನೇಕಬಾರಿ ಇದರದೊಳಗೆ ಒಬ್ಬ ಋಷಿಯೋ ಒಬ್ಬ ಮಹಾತ್ಮನೋ ಪಾಲುಗೊಳ್ಳುವುದುಂಟು. ಚಾಲುಕ್ಯ, ಕದಂಬ, ಗಂಗ, ಹೊಯ್ಸಳ, ವಿಜಯನಗರದ ಇತಿಹಾಸಗಳಲ್ಲೆಲ್ಲಾ ಇಂತಹ ಅಲೌಕಿಕ ಉಗಮಗಳ ರಮ್ಯ ಕಥೆಗಳು ಸ್ಥಾಪಿತಗೊಂಡಿವೆ. ಶಿವಪಾರ್ವತಿಯರು ವಿಹಾರಕ್ಕೆಂದು ಬಂದಾಗ ಅವರಿಗೆ ಕದಂಬ ವೃಕ್ಷದಡಿಯಲ್ಲಿ ಪುತ್ರನೊಬ್ಬ ಜನಿಸಿದ್ದು, ಮುನಿಯು ಸಂಧ್ಯಾವಂದನೆಯನ್ನು ಮಾಡುತ್ತಿದ್ದಾಗ ಆತನ ಚುಲುಕ (ಬೊಗಸೆ)ದಿಂದ ನೆಗೆದು ಉದ್ಭವಿಸಿದ ವೀರಪುರುಷ ಚಾಲುಕ್ಯನಾದದ್ದು, ಗಂಗ ವಂಶ ಸ್ಥಾಪನೆಯಲ್ಲಿ ಸಿಂಹನಂದಿಯ ಪಾತ್ರ, ಸಳನಿಗೆ ‘ಪೊಯ್ ಸಳ’ ಎಂದು ಆದೇಶಿಸಿದ ಸುದತ್ತ ಮುನಿ, ಚಿನ್ನದ ಮಳೆಬರಿಸಿ ರಾಜ್ಯಕಟ್ಟಲು ಸಹಯೋಗ ನೀಡಿದ ವಿಜಯವಿದ್ಯಾರಣ್ಯರು..... ಇಂತಹ ಅನೇಕ ರಮ್ಯಕಥೆಗಳು ಆಯಾ ರಾಜವಂಶಗಳ ಇತಿಹಾಸದೊಳಗೆ ಹಾಯಾಗಿ ನೆಲೆಸಿವೆ. ಅವುಗಳನ್ನು ದಾಟಿಯೇ ನಾವು ನಂಬಲರ್ಹವಾದ ಇತಿಹಾಸವನ್ನು ರಚಿಸುವ ಪ್ರಯತ್ನಮಾಡಲು ಸಾಧ್ಯ.  ಎಂ.ಎ. ವಿದ್ಯಾರ್ಥಿಯಾಗಿದ್ದಾಗ ನಾವು ತಲಕಾಡಿಗೆ ಪ್ರವಾಸ ಹೋಗಿದ್ದೆವು. ಆ ಪ್ರದೇಶದಲ್ಲಿ ವಿಶೇಷವಾಗಿ ಹರಡಿರುವ ಮರಳನ್ನು ಅಲಮೇಲಮ್ಮನ ಶಾಪ ಎಂದು ನಮ್ಮ ಅಧ್ಯಾಪಕರೋರ್ವರು ವ್ಯಾಖ್ಯಾನಿಸಿದ್ದು ಈಗಲೂ ನೆನಪಿದೆ. ಅದಕ್ಕೆ ಭೌತಿಕ ಕಾರಣಗಳೇನು ಎಂಬುದನ್ನು ತಿಳಿದುಕೊಳ್ಳುವ ಆವಶ್ಯಕತೆಯನ್ನು ಅವರು ಕಾಣಲೇಇಲ್ಲ. ಕೆಲವೊಮ್ಮೆ ಇತಿಹಾಸಕಾರರು ಈ ರಮ್ಯ ಕಥೆಗಳಿಗೆ ಸತ್ಯದ ಲೇಪವನ್ನು ಹಚ್ಚುವ ಪ್ರಯತ್ನವನ್ನು ಮಾಡಿದ್ದಾರೆ. ಅಲೌಕಿಕ ಘಟನೆಗಳನ್ನು, ದೈವಸಂಕಲ್ಪವನ್ನು ಅಥವಾ ಋಷಿಸಾನಿಧ್ಯವನ್ನು ನಂಬದಿದ್ದರೆ ನಾಸ್ತಿಕರೆಂದೆನಿಸಿಕೊಳ್ಳುವ ಪಾಪಪ್ರಜ್ಞೆಯಿಂದಲೋ ಅಥವಾ ತಮ್ಮ ನೈಜ ಅಮಾಯಕತನದಿಂದಲೋ ಜೀವನದಲ್ಲಿ ಹಾಗೂ ಇತಿಹಾಸದಲ್ಲಿ ಯಾವುದು ಸಾಧ್ಯ ಯಾವುದು ಅಸಾಧ್ಯ ಎಂಬ ಬಗ್ಗೆ ಧೈರ್ಯವಾಗಿ ನಿಷ್ಕರ್ಷೆಮಾಡಲು ಹಿಂದೇಟು ಹಾಕುವುದುಂಟು. ಇವುಗಳು ‘ಹೀಗೆ ನಡೆದದ್ದು’ ಎಂಬ ಸೀಮಿತ ಅರ್ಥದಲ್ಲಿ ಇತಿಹಾಸವೆಂದು ತಿಳಿಯುವುದು ವಿವೇಚನಾ ಶಕ್ತಿಯನ್ನು ಆಹ್ವಾನಿಸಲೊಲ್ಲದ ಕೇವಲ ಬಾಲಿಶತನವಾಗಬಹುದು. ಆದರೆ ಇದು ತೀರ ಅಸಂಗತವಾಗದೆ ‘ನಿಜ’ವನ್ನು ಮೀರಿದ ಸಾಧನಭೂತ ಸತ್ಯವಾಗಬಹುದು. ಒಂದು ವಾಸ್ತವತೆಯನ್ನು ಎತ್ತಿಹಿಡಿಯುವ, ಸ್ಥಿರೀಕರಿಸುವ ಸಾಧನವಾಗಬಹುದು. ಇಂತಹ ಅಮೋಘ ಅವಾಸ್ತವಗಳನ್ನು ರಾಜತ್ವದ ಘೋಷಣೆಗೆ, ಆಳುವ ವಂಶದ ಹಿರಿಮೆಯ ಜಾಹೀರಾತಾಗಿ ಉಪಯೋಗಿಸುವುದನ್ನು ನಾವು ಗುರುತಿಸಲು ಸಾಧ್ಯ. ಯಾವುದೇ ರಾಜನ ಅಥವಾ ಆತನ ವಂಶದ ಆಳ್ವಿಕೆಯನ್ನು ಕೇವಲ ಬಲಪ್ರದರ್ಶನದಿಂದ ಅಥವಾ ಬಲಪ್ರಯೋಗದಿಂದ ಸ್ಥಾಪಿಸುವುದಲ್ಲ. ಅದಕ್ಕೆ ಕೆಲವು ಅಲೌಕಿಕತೆಯ, ಧಾರ್ಮಿಕತೆಯ ಉಡುಪನ್ನು ತೊಡಿಸಿ ಪ್ರದರ್ಶಿಸಿದಾಗ ಅದು ಒಂದು ದಿವ್ಯ ಮೆರುಗನ್ನು ಮಾತ್ರ ಪಡೆಯುವುದಷ್ಟೇ ಅಲ್ಲ, ಪ್ರಜೆಗಳ ಅನುಮೋದನೆ, ಗೌರವಗಳಿಗೂ ಪಾತ್ರವಾಗುತ್ತದೆ; ಪ್ರಜೆಗಳ ವಿಧೇಯತೆಯನ್ನು ಗಳಿಸುವ ದಾರಿ ಹಸನಾಗುತ್ತದೆ; ಅವರನ್ನು ಆಳುವುದು ಸುಲಭವಾಗುತ್ತದೆ. ರಾಜನನ್ನು ಪ್ರತ್ಯಕ್ಷ ದೇವರು ಎಂದು ಘೋಷಿಸಿದಾಗ ಅದು ನಿಜವಾಗಿಯೂ ಸತ್ಯವೇ ಎಂಬ ಪ್ರಶ್ನೆ ಅನವಶ್ಯ. ಅದನ್ನು ರಾಜನೆದುರು ಕೇಳಿದಾಗ ಅಪಾಯವೇ ಹೆಚ್ಚು! ಅದೃಶ್ಯ ದೇವರನ್ನು ನಾವು ನೋಡಿಲ್ಲವಾದುದರಿಂದ ಪ್ರತ್ಯಕ್ಷದೇವರಿಗೆ ವಂದಿಸಿ ಓಲೈಸುವುದರಲ್ಲಿದೆ ಜಾಣತನ ಎನ್ನುವವರು ಬಹಳ ಮಂದಿ. ಆದರೆ ವಾಸ್ತವವಾಗಿ ಇದು ಗೊಡ್ಡು ಚರ್ಚೆ. ಇದನ್ನು ಸಾಧನಭೂತ ಸತ್ಯವಾಗಿ ಗ್ರಹಿಸಿದರೆ ಮಾತ್ರ ಇದರ ನಿಜವಾದ ಅರ್ಥ ಹೊರಹೊಮ್ಮಬಹುದು. ಇದನ್ನು ಜಗತ್ತಿನ ಪ್ರಭುತ್ವಗಳೆಲ್ಲಾ ಗುರುತಿಸಿ ಉಪಯೋಗಿಸಿವೆ. ತಮ್ಮ ವಂಶಾವಳಿಗಳನ್ನು ಓರಣಗೊಳಿಸಿ, ಅದನ್ನು ಯಾವುದಾರೂ ಅಲೌಕಿಕ ವಿಶೇಷ ಘಟನೆಗಳಿಗೆ ಅಥವಾ ದಿವ್ಯ ವ್ಯಕ್ತಿಗೆ ಹೊಂದಿಸಿಕೊಂಡು ಇತಿಹಾಸವನ್ನು ಪ್ರಶಸ್ತಿಯಾಗಿ, ಪ್ರಶಂಸನಾಗಾಥೆಯಾಗಿ ಬರೆದದ್ದುಂಟು. ಅದು ಕಾವ್ಯಗಳಲ್ಲಿ, ಶಾಸನಗಳಲ್ಲಿ ಅಥವಾ ಇತರ ರಾಜಪ್ರೇರಣೆಯಿಂದ ರಾಜಪ್ರೀತಿಗಾಗಿ ಹುಟ್ಟಿದ ಸಾಹಿತ್ಯಗಳಲ್ಲಿ ಸಾಕಷ್ಟು ಪ್ರಕಟವಾಗಿದೆ. ಇತಿಹಾಸದ ಆಕರಗಳಾಗಿ ಸಾರ್ಥಕ್ಯವನ್ನು ಹೊಂದಿದೆ. ಅವುಗಳೊಡನೆ ವ್ಯವಹರಿಸುವಾಗಲೇ ಇತಿಹಾಸಕಾರನು ವಿಶೇಷ ಎಚ್ಚರಿಕೆ ವಹಿಸಬೇಕಾಗುತ್ತದೆ. ಇದು ನಮ್ಮ ರಾಜವಂಶಗಳ ಕಥೆಗೆ ಮಾತ್ರ ಸೀಮಿತವಾದದ್ದಲ್ಲ. ನಮ್ಮ ಕಲ್ಪನಾ ಚಾತುರ್ಯವನ್ನು ಗೇಲಿಮಾಡುವ ಯುರೋಪಿಯನ್ನರಲ್ಲೂ ಈ ಹವ್ಯಾಸ ನೆಲೆಗೊಂಡಿದೆ. 1804ರಲ್ಲಿ ಫ್ರಾನ್ಸಿನ ಸಾಮ್ರಾಟನಾಗಿ ಅಭಿಷಿಕ್ತನಾದ ನೆಪೋಲಿಯನ್ನನಿಗೆ ಇಂತಹ ವಂಶಾವಳಿಯೊಂದನ್ನು ಸೃಷ್ಟಿಸಿ ಕೊಡುತ್ತೇವೆ ಎಂದು ಕೆಲವು ಹೊಗಳುಭಟ್ಟ ಪಾದ್ರಿಗಳು ಸೂಚಿಸಿದ್ದರು. ಅದನ್ನು ತಿರಸ್ಕರಿಸುವ ಶಕ್ತಿ, ಧಾಷ್ಟ್ಯ ನೆಪೋಲಿಯನ್‍ಗೆ ಇತ್ತು, ಎಂಬುದು ಬೇರೆ ವಿಚಾರ.

ಪ್ರಭುತ್ವದ, ರಾಜವಂಶಗಳ ದಿವ್ಯ ಉಗಮದ ಕಾಲ್ಪನಿಕ ಕಥಾನಕವನ್ನು ಸೃಷ್ಟಿಸಿ ಅದರ ಉಪಯೋಗವನ್ನು ಪಡೆಯುವ ವರಸೆಯನ್ನು ಸ್ಥಳಪುರಾಣಗಳ ರಚನೆಯಲ್ಲೂ ಅನುಕರಿಸಲಾಗಿದೆ. ನಮ್ಮಲ್ಲಿರುವ ಪ್ರಾಚೀನ ಅಥವಾ ಪ್ರಾಚೀನವೆಂದೆನ್ನುಕೊಳ್ಳುವ ದೇವಸ್ಥಾನಗಳಿಗೆಲ್ಲಾ ಭವ್ಯ ಸ್ಥಳಪುರಾಣಗಳಿವೆ. ಅವುಗಳ ಪ್ರತಿಷ್ಠಾಪನೆಗೆ ದಿವ್ಯ ಪ್ರಾಚೀನತೆಯ ಮೆರುಗು ಸದಾ ಲಭ್ಯವಿದೆ. ಯಾವುದೋ ಮುನಿಯು ತಪಸ್ಸನ್ನಾಚರಿಸಿದ ತಾಣ, ಆತನಿಗೆ ದೇವರು ಒಲಿದ ಸ್ಥಳ, ಯಾವುದೋ ರಾಕ್ಷಸನನ್ನು ಸಂಹರಿಸಿದ, ಯಾವುದೋ ಭಕ್ತನನ್ನು ಉದ್ಧರಿಸಿ, ಆತನ ಕೋರಿಕೆಯಂತೆ ದೇವರು ನೆಲೆಸಿದ ಕ್ಷೇತ್ರ, ರಾಮಲಕ್ಷ್ಮಣಸೀತೆಯರು ಅಥವಾ ಪಾಂಡವರು ತಮ್ಮ ವನವಾಸದ ಸಮಯದಲ್ಲಿ ಬಂದ, ತಂಗಿದ ಜಾಗ, ಹಾಗಾದ, ಹೀಗಾದ ವಿಶೇಷ ಪವಿತ್ರ ಸ್ಥಳ ಎಂಬ ಉಲ್ಲೇಖ ಆ ಪುರಾಣದಲ್ಲಿ, ಈ ಪುರಾಣದಲ್ಲಿ, ಸಹ್ಯಾದ್ರಿಖಂಡದಲ್ಲಿ ಕಾಣುತ್ತೇವೆ. ಅದಿಲ್ಲದಿದ್ದರೆ ಅಂಥ ಕತೆಗಳು ಸೃಷ್ಟಿಯಾಗುತ್ತವೆ. ಇಂತಹ ಆಸ್ತಿಕ ಬುನಾದಿಯ ಮೇಲೆ ಅದರ ಸಂಶೋಧಿತ ಇತಿಹಾಸವನ್ನು ನಿರೂಪಿಸಲಾತ್ತದೆ. ದೇವಸ್ಥಾನಗಳಲ್ಲಿ ದೇವಸನ್ನಿಧಿಯನ್ನು ಉದ್ಘೋಷಿಸಲು ಇಂತಹ ಕಥೆಗಳು ಸಹಾಯವಾಗುತ್ತವೆ. ದೇವಳಕ್ಕೊಂದು ದಿವ್ಯ ಪ್ರಭಾವಳಿಯು ಪ್ರಾಪ್ತವಾಗುತ್ತದೆ. ಅವುಗಳಿಗೆ ಆಸ್ತಿಕರಿಂದ ಪೂರ್ಣ ಮನ್ನಣೆ ದೊರಕುತ್ತದೆ. ಅವರ ನಂಬಿಕೆಯ, ಭಕ್ತಿಯ ನೆಲೆಗಟ್ಟು ಗಟ್ಟಿಯಾಗುತ್ತದೆ. ದೇಗುಲವು ತನ್ನ ಪರಿಚಯವನ್ನು ಅಚ್ಚುಹಾಕಿಸಿ ಮಾರುವ ಕೈಪಿಡಿಗಳಲ್ಲಿ ಇಂತಹ ಕಥೆಗಳು ವಿಜೃಂಭಿಸುತ್ತವೆ. ಆದರೆ ಅದನ್ನೆಲ್ಲಾ ನಿಜ ಘಟನೆಗಳೆಂದು ನಂಬೋಣವೇ ಎಂಬ ಪ್ರಶ್ನೆ ನಮ್ಮನ್ನು ಕಾಡುವುದು ಸಹಜ. ಇದು ನಾಸ್ತಿಕರ ಪ್ರಶ್ನೆಯಲ್ಲ. ಇತಿಹಾಸ ಪ್ರಜ್ಞೆಯುಳ್ಳವರ ಪ್ರಶ್ನೆ. ಇಂತಹ ರಮ್ಯ ಕಾಲ್ಪನಿಕ ಉಗಮಕಥೆಗಳು ದೇಶದ ಎಲ್ಲಾ ನದಿಗಳ ಬಗ್ಗೆ, ಹಲವು ಸರೋವರ, ಬೆಟ್ಟ, ಪರ್ವತಶ್ರೇಣಿಗಳ ಬಗ್ಗೆ ಹುಟ್ಟಿಕೊಂಡಿವೆ. ಇವೆಲ್ಲಾ ಪ್ರಕೃತಿಯ ದೇಣಿಗೆ ಎಂದುಕೊಂಡಾಗ ಈ ಕಥೆಗಳನ್ನು ಸತ್ಯಾಸತ್ಯದ ಒರೆಗೆ ಹಚ್ಚದೆ ಬಿಡಬಹುದು. ಇದು ಮಾನವನ ಆಸ್ತಿಕತೆ, ಭಾವುಕತೆಗಳಲ್ಲಿ ಕಾವ್ಯತ್ವವೂ ಇರುವ ಲಕ್ಷಣ ಎಂದಷ್ಟೇ ಗ್ರಹಿಸಬಹುದು. ಆದರೆ ಮಾನವ ನಿರ್ಮಿತ ದೇಗುಲಗಳ ಬಗ್ಗೆ ಇಂತಹ ಆಶ್ವಾಸನೆ ಸಾಕಾಗುವುದಿಲ್ಲ. ನಮ್ಮಲ್ಲಿರುವ ವಿವೇಚನೆ ಹಾಗೂ ಇತಿಹಾಸಪ್ರಜ್ಞೆಯು ಅದನ್ನು ಬೇರೆಬೇರೆ ನೆಲೆಗಳಲ್ಲಿ ಪರೀಕ್ಷೆಗೊಳಪಡಿಸಬೇಕಾಗುತ್ತದೆ. ಆಗ ಸ್ಥಳಪುರಾಣಗಳನ್ನು ಒಂದು ಆವಿಷ್ಕರಿಸಿದ ಸತ್ಯವಷ್ಟೇ ಎಂದು ಒಪ್ಪಿಕೊಳ್ಳಬೇಕಾಗುತ್ತದೆ. ಇತಿಹಾಸದೊಳಗೆ ಅಲೌಕಿಕ, ಅತಿಮಾನವ ವ್ಯವಹಾರಗಳಿಗೆ ಅವಕಾಶವಿಲ್ಲ. ಅದು ಕೇವಲ ಮಾನವನು ಸಮಾಜಜೀವಿಯಾಗಿ ಮಾಡಿದ ಯೋಚನೆ, ಸಾಧನೆಗಳನ್ನು ವಿವರಿಸಿ ವಿಶ್ಲೇಷಿಸಲು ಸಾಧ್ಯ. ಆದರೆ ದೇವರು, ಧರ್ಮ ಅವುಗಳನ್ನು ಹೇಗೆ ಚಾಲಕಶಕ್ತಿಯನ್ನಾಗಿ ಉಪಯೋಗಿಸಲಾಗಿದೆ ಎಂದು ತಿಳಿಯುವುದು ಅವಶ್ಯ. ಅಂದರೆ ದೇವರು, ಧರ್ಮಗಳನ್ನು ಮಾನವ ನಿರ್ಮಿತವೆಂದು, ಕಾಲ-ಪ್ರದೇಶಗಳಿಗೆ ಅಧೀನವೆಂದು ತಿಳಿದು ವಿವೇಚಿಸುವುದು ಅಗತ್ಯ. ದೇವರ, ಧರ್ಮದ ಬಗ್ಗೆ ಮಾನವನ ಕಲ್ಪನೆಗಳ ಬಗ್ಗೆ ನಾವು ಚರ್ಚಿಸಬಹುದೇ ವಿನಹ ವಸ್ತುತ: ದೇವರ ಕುರಿತಲ್ಲ. ಇತಿಹಾಸವು ಸಂಪೂರ್ಣವಾಗಿ ದೇವನಿರ್ದೇಶಿತವಾದದ್ದೆಂದುಕೊಂಡರೆ ಅದರ ಅರ್ಥವನ್ನು ದೇವಮುಖದಿಂದಲೇ ತಿಳಿಯಬೇಕಷ್ಟೆ. ನಮಗೆ ಅರಿಯಲು ಅಸಾಧ್ಯ. ಇತಿಹಾಸವು ಮಾನವನ ಕಥೆ; ಆತನು ಸ್ವಲ್ಪ ಮಟ್ಟಿಗೆ ತಿಳಿಯಬಲ್ಲ, ಇನ್ನೊಬ್ಬರಿಗೆ ತಿಳಿಸಬಲ್ಲ ಕಥೆ. ಇದು ಅದರ ಶಕ್ತಿಯೂ ಹೌದು, ಪರಿಮಿತಿಯೂ ಹೌದು.

ಪುರಾಣಗಳನ್ನು ನಂಬಲರ್ಹ ಇತಿಹಾಸವೆಂದು ಪರಿಗಣಿಸಲು ತೊಡಕಾಗುವ ಒಂದು ಮುಖ್ಯ ಅಂಶ ಅದರಲ್ಲಿ ನೆಲೆಗೊಂಡ ವಿರಾಟ್ ಕಾಲಚಕ್ರ. ಯುಗ, ಮಹಾಯುಗ, ಕಲ್ಪ, ಮನ್ವಂತರಗಳ ಕಲ್ಪನೆಯು ಕಾಲವನ್ನು ಮಾನವನ ಇತಿಹಾಸಕ್ಕಷ್ಟೇ ಅಲ್ಲ, ದೇವರ, ಮನುಗಳ, ಬ್ರಹ್ಮನ ಕಾಲಚಕ್ರಗಳಿಗೂ ರೂಢಿಸಿಕೊಂಡು ಒಂದು ಅನೂಹ್ಯ ಅಗಾಧತೆಯನ್ನು ಸೃಷ್ಟಿಸಿದೆ. ಕೃತ, ತ್ರೇತ, ದ್ವಾಪರ, ಹಾಗೂ ಇನ್ನೂ ಅಪೂರ್ಣವಾಗಿರುವ ಕಲಿಯುಗದ ಒಂದು ಆವರ್ತನವು 4.32 ಸಾವಿರ ಮಿಲಿಯನ್ ವರ್ಷಗಳನ್ನು ಆಲಂಗಿಸಿಕೊಂಡಿರುವ ಕಲ್ಪನೆಯಿದೆ. ಇದು ನಿರಂತರವಾಗಿ ಪುನರಾವರ್ತನೆಗೊಳ್ಳುವ ಆಶ್ವಾಸನೆಯಿದೆ. ಪುನರಾವರ್ತನೆಗೊಳ್ಳುವ ಕಾಲ ಇತಿಹಾಸಕ್ಕೆ ಸಂಪೂರ್ಣವಾಗಿ ಒಗ್ಗಿಕೊಳ್ಳುವುದಿಲ್ಲ, ಎಂಬ ಸೈದ್ಧಾಂತಿಕ ಆಕ್ಷೇಪಣೆಯಷ್ಟೇ ಅಲ್ಲ, ಕಾಲದ ವಿರಾಟ್ ಕಲ್ಪನೆಯನ್ನೂ ಇತಿಹಾಸದ ಚೌಕಟ್ಟಿಗೆ ಹೊಂದಿಸುವುದು ಅಸಾಧ್ಯ ಎಂಬ ಭಾವನೆ ಹುಟ್ಟಿಕೊಂಡರೆ ಸೋಜಿಗವೇನಿಲ್ಲ. ಪಾಶ್ಚಾತ್ಯ ವಿದ್ವಾಂಸರಿಗೆ ಇದು ಒಂದು ಬಗೆಯ ಹುಚ್ಚು ಕಲ್ಪನೆಯಾಗಿ ಕಂಡಿತು. ಆದರೆ ಪೌರಸ್ತ್ಯವಾದಿಗಳು ನಮ್ಮ ಪುರಾಣಗಳ ಬಗ್ಗೆ ತಲೆಕೆಡಿಸುವ ಕಾಲಕ್ಕೆ ಅವರ ಸೃಷ್ಟಿಯ ಕಲ್ಪನೆಯು ಬೈಬಲ್ಲಿನಲ್ಲಿ ಹೇಳಲಾದ ಸೃಷ್ಟಿಯ ಚಿತ್ರಣಕ್ಕೆ ಅಡವಾಗಿತ್ತು. ಸೃಷ್ಟಿಕರ್ತನು ಸ್ವಪ್ರೇರಣೆಯಿಂದ ತನ್ನ ವಿವಿಧ ಕಾರ್ಯಗಳನ್ನು ಆರು ದಿನಗಳಲ್ಲಿ ಪೂರೈಸಿ, ಏಳನೆಯ ದಿನ ವಿರಮಿಸಿದ್ದು ಬೈಬಲ್ಲಿನಲ್ಲಿ ಹೇಳಿದೆ. ಸೃಷ್ಟಿ ಹೇಗಾಯಿತೆಂದು ತಿಳಿದದ್ದು ಸರಿ; ಆದರೆ ಅದು ಎಂದಾಯಿತು ಎಂಬ ಪ್ರಶ್ನೆಗೆ ಹದಿನೇಳನೆ ಶತಮಾನದಲ್ಲಿ ಬಿಶಪ್ ಅಷರ್ ಒಂದು ಉತ್ತರವನ್ನು ಸೃಷ್ಟಿಸಿದ: ಅದು ನಡೆದದ್ದು ಕ್ರಿ. ಪೂ 4004 ರಲ್ಲಿ. ಇನ್ನೂ ಖಚಿತ ಮಾಹಿತಿ ಬೇಕೆ? ಅಕ್ಟೋಬರ್ 23ರಂದು! ಇದು ‘ಶಾರ್ಟ್ ಕ್ರೊನಾಲಜಿ’ ಅಥವಾ ‘ಕುಬ್ಜ ಕಾಲಗಣನೆ’ ಎಂದು ಪ್ರಖ್ಯಾತಿಹೊದಿತು. ನಿನ್ನೆ ಇಲ್ಲದ ಜಗತ್ತು ಇಂದು ದೇವರ ದಯದಿಂದ ಹುಟ್ಟಿಕೊಂಡಿತು, ಎಂಬ ನಂಬಿಕೆಗೆ ನಿರ್ದಿಷ್ಟ ಕಾಲಗಣನೆಯ ಆಶ್ವಾಸನೆಯು ದೊರೆಯಿತು. ನೆಥಾನಿಯಲ್ ಹಾಲ್‍ಹೆಡ್, ಅಲೆಕ್ಸಾಂಡರ್ ಡೋ ಮತ್ತು ಸರ್ ವಿಲಿಯಮ್ ಜೋನ್ಸ್‍ರಂತಹ ಬ್ರಿಟಿಷ್ ಪೌರಸ್ತ್ಯವಾದಿಗಳು ಪುರಾಣಗಳಲ್ಲಿ ಉಲ್ಲೇಖಿತವಾದ ಅನೇಕ ವಿವರಗಳನ್ನು ಹಾಗೂ ಕಾಲಚಕ್ರಗಳನ್ನು ಬೈಬಲ್ಲಿನ ‘ಹಳೇ ಒಡಂಬಡಿಕೆ’ಯಲ್ಲಿ ಬರುವ ವ್ಯಕ್ತಿ, ಘಟನೆಗಳಿಗೆ ಜೋಡಿಸುವ ಪ್ರಯತ್ನ ಮಾಡಿದರು. ಇದನ್ನು ಥಾಮಸ್ ಟ್ರಾಟ್‍ಮನ್ ‘ಮೊಸೈಕ್ ಎತ್ನಾಲಜಿ’ (ಮೊಸೆಸ್ ಕೇಂದ್ರಿತ ಜನಾಂಗ ಕಲ್ಪನೆ ಹಾಗೂ ಅಧ್ಯಯನ) ಎಂದು ಕರೆದಿದ್ದಾರೆ. ಇದು ವಿಶ್ವ ಇತಿಹಾಸವನ್ನು ಕ್ರಿಶ್ಚಿಯನ್ ಕಲ್ಪನೆಯೊಳಗೆ ಅಳವಡಿಸುವ ಧೀರ ಪ್ರಯತ್ನ. ಇದರ ಪ್ರಕಾರ ನೋಹಾ ಮತ್ತು ಆತನ ಮಕ್ಕಳಾದ ಶೆಮ್, ಹೆಮ್ ಮತ್ತು ಜಫೆತ್, ಹಾಗೂ ಅವರ ಪೀಳಿಗೆ ಬೇರೆಬೇರೆ ಜನಾಂಗಗಳ ಮೂಲಪುರುಷರಾದರು. ಉದಾಹರಣೆಯಾಗಿ, ಎಬೆರ್ ಹಿಬ್ರೂಗಳ, ಮಿಸ್ರೈಮ್ ಮಿಸ್ರ್ ಅಥವಾ ಈಜಿಪ್ಟಿನ ಜನರ, ಹಾಗೆಯೇ ಜವನ್ ಐಯೋನಿಯಾ ಅಥವಾ ಗ್ರೀಕ್ ಜನರ ಮೂಲಪುರುಷರಾದರು ಎಂದು ಪೌರಸ್ತ್ಯವಾದಿಗಳು ಪ್ರತಿಪಾದಿಸಿದರು. ಹೆಸರುಗಳ ಸಾಮ್ಯವು ಇವರನ್ನು ತಮ್ಮ ತೀರ್ಮಾನಗಳತ್ತ ದೂಡಿದ್ದು ಸ್ಪಷ್ಟವಾಗುತ್ತದೆ. ಹೀಗೆ ಮಾಡಿದಾಗ ಇತಿಹಾಸವನ್ನು ಯುಸೇಬಿಯಸ್ ರಚಿಸಿದ ಕಾಲ-ಘಟನೆಗಳ ಜಾಲರಿಯೊಳಗೆ ಹೊಂದಿಸಿ ಸಾರ್ಥಕ್ಯವನ್ನು ಇವರು ಕಂಡುಕೊಂಡರು ಎಂಬುದೂ ವಿದಿತವಾಗುತ್ತದೆ.

ಸರ್ ವಿಲಿಯಮ್ ಜೊನ್ಸ್ ಹಿಂದೂ ಪುರಾಣಗಳನ್ನು ಓದಿ ಮೆಚ್ಚಿಕೊಂಡದ್ದು ಇದೇ ನೆಲೆಯಲ್ಲಿ. ಪುರಾಣಗಳಲ್ಲಿ ವಿವರಣೆಗೊಂಡ ಸೃಷ್ಟಿ, ಪ್ರಳಯ, ಕಾಲಚಕ್ರ, ದಶಾವತಾರಗಳನ್ನು ಬೈಬಲ್‍ನಲ್ಲಿ ಉಕ್ತವಾದ ಸೃಷ್ಟಿ ಹಾಗೂ ಮಾನವಕುಲದ ಹುಟ್ಟು, ಪ್ರಸರಣಗಳಿಗೆ ಪೋಣಿಸಿ ‘ಕುಬ್ಜ ಕಾಲಗಣನೆ’ಯನ್ನು ಸಮರ್ಥಿಸುವ ಪ್ರಯತ್ನವನ್ನು ಜೋನ್ಸ್ ಮಾಡಿದ್ದು ಪೌರಸ್ತ್ಯವಾದದ ಅಂತರ್ಯದ ಒಂದು ಜರೂರನ್ನು ಅನಾವರಣಗೊಳಿಸುತ್ತದೆ. ವಿಲಿಯಮ್ ಜೋನ್ಸ್ ಆದಮ್ ಮತ್ತು ನೋಹಾರನ್ನು ಕೃತಯುಗದ ಮೊದಲ ಎರಡು ಮನುಗಳಿಗೆ ಸಮೀಕರಿಸಿ, ಯುಗಾಂತಿಕ ನೆರೆಯ ಸಂದರ್ಭಕ್ಕೆ ವಿಷ್ಣುವಿನ ಮತ್ಸ್ಯ, ಕೂರ್ಮ, ವರಾಹಾವತಾರಗಳನ್ನು ಅಳವಡಿಸಿ, ತ್ರೇತಾಯುಗದ ನರಸಿಂಹಾವತಾರವನ್ನು ಬೈಬಲ್ಲಿನ ನಿಮ್ರಾಡ್‍ಗೂ ವಾಮನಾವತಾರದ ಬಲಿಯನ್ನು ಬೆಲ್‍ಗೂ ಜೋಡಿಸಿ ಸಮರ್ಥಿಸಿಕೊಂಡ; ರಾಮ ಮತ್ತು ಬುದ್ಧರನ್ನು ದ್ವಾಪರ ಮತ್ತು ಕಲಿಯುಗದೊಳಗೆ ಸೇರಿಸಿದ. ಅಷ್ಟೇ ಅಲ್ಲ, ಬುದ್ಧನನ್ನು ಕಲಿಕಾಲದ ಹರಿಕಾರನನ್ನಾಗಿ ಘೋಷಿಸಿ, ಮುಂದೆ ಚಂದ್ರಗುಪ್ತ ಮೌರ್ಯನು ಇತಿಹಾಸಯುಗದ ಮೊದಲ ಪ್ರತಿನಿಧಿ ಎಂದು ಪ್ರತಿಪಾದಿಸಿದ. ಗ್ರೀಕ್ ಬರವಣಿಗೆಯಲ್ಲಿ ಕಾಣಬರುವ ‘ಸಾಂದ್ರಕೊಟ್ಟೋಸ್’ನನ್ನು ಚಂದ್ರಗುಪ್ತ ಮೌರ್ಯನೆಂದು ಗುರುತಿಸಿ ಅಲ್ಲಿಯ ತನಕ ಅನಿಶ್ಚಿತವಾಗಿದ್ದ ಭಾರತ ಇತಿಹಾಸದ ಕಾಲಗಣನೆಗೆ ಒಂದು ಖಚಿತವಾದ ಲಂಗರನ್ನು ನೀಡಿದ ಶ್ರೇಯಸ್ಸು ಜೋನ್ಸ್‍ಗೆ ಸಲ್ಲಬೇಕು. ಆದರೆ ಆತನು ಪುರಾಣಗಳ ಕುರಿತು ಮಾಡಿದ ಚರ್ಚೆ ಅಥವಾ ನೀಡಿದ ತೀರ್ಮಾನಗಳು ಆತ ಹೊತ್ತುತಂದ ಹಲವು ಪೂರ್ವಾಗ್ರಹಗಳನ್ನು ಹೊರಗೆಡಹುವಷ್ಟು ಗೊಂದಲಗಳನ್ನು ನಿವಾರಿಸುವುದಿಲ್ಲ. ಭಾರತದ ಪುರಾಣಗಳು ಅರ್ಥಪೂರ್ಣವಾಗುವುದು ಬೈಬಲ್ ಹೇಳಿದ ಕಥಾವಿವರಗಳನ್ನು ಅನುಮೋದಿಸಿದಾಗ ಮಾತ್ರ ಎಂಬ ನಿಲುವು ಪೌರಸ್ತ್ಯವಾದಿಗಳ ಒಲವು ಯುರೋಪ್ ಕೇಂದ್ರಿತವಷ್ಟೇ ಅಲ್ಲ, ಬೈಬಲ್ ಕೇಂದ್ರಿತವೂ ಹೌದು ಎಂದು ಸ್ಪಷ್ಟಪಡಿಸುತ್ತದೆ. ಪುರಾಣಗಳ ಕುರಿತು ಪೌರಸ್ತ್ಯವಾದಿಗಳ ನಿಲುವು ನಿರ್ಧಾರಗಳು ಬೈಬಲ್ ನೀಡುವ ಸೃಷ್ಟಿಯ ಕಥಾನಕ ಮತ್ತು ಜಗತ್ತಿನ ಬೆಳವಣಿಗೆಯ ಚಿತ್ರಣಗಳು ಸಂಪೂರ್ಣ ಸತ್ಯ ಎಂಬ ಅವರ ನಿಶ್ಚಲ ನಂಬಿಕೆಯ ಮೇಲೆ ನಿಂತಿದೆ.

ಆದರೆ ಸುಮಾರು ಹತ್ತೊಂಭತ್ತನೇ ಶತಮಾನದ ಮಧ್ಯದಲ್ಲಿ ಜೋನ್ಸ್‍ನಂಥ ಪೌರಸ್ತ್ಯವಾದಿಗಳ ಹಾಗೂ ಅವರು ಅವಲಂಬಿಸಿದ ‘ಕುಬ್ಜ ಕಾಲಗಣನೆ’ಯ ಅನುವರ್ತಿಗಳ ಬೈಬಲ್ ನಿಷ್ಠೆಗೆ ದೊಡ್ಡ ಆಘಾತವಾಯಿತು. 1859ರಲ್ಲಿ ಚಾಲ್ರ್ಸ್ ಡಾರ್ವಿನ್ ತನ್ನ ‘ದ ಒರಿಜಿನ್ ಅಫ್ ದ ಸ್ಪೀಶಿಸ್’ ನನ್ನು ಪ್ರಕಟಿಸಿದ; 1871ರಲ್ಲಿ ‘ದ ಡಿಸೆಂಟ್ ಅಫ್ ಮ್ಯಾನ್’ ಪ್ರಕಟಗೊಂಡಿತು. ಅವುಗಳು ಮಾನವ ವಿಕಾಸವಾದವನ್ನು ಪ್ರತಿಪಾದಿಸಿದ್ದಲ್ಲದೆ ಅದಕ್ಕೆ ವೈಜ್ಞಾನಿಕ ಪುರಾವೆಗಳನ್ನು ನೀಡಿದುವು. ಆದರೆ ಡಾರ್ವಿನನ ಮೊದಲೇ ಭೂಮಿಯ ರಚನೆ, ಪರಿವರ್ತನೆ ಹಾಗೂ ಬೆಳವಣಿಗೆಗಳ ಬಗ್ಗೆ ಸಾಕಷ್ಟು ಸಿದ್ಧಾಂತಗಳು ಮತ್ತು ಅವುಗಳ ಮೇಲಿನ ಚರ್ಚೆಗಳು ಬೈಬಲ್ಲಿನ ಸೃಷ್ಟಿಚಿತ್ರದ ಕುರಿತಾದ ನಂಬಿಕೆಯನ್ನು ಅನೇಕರಲ್ಲಿ ಕೃಶಗೊಳಿಸಿತ್ತು. 1858ರಲ್ಲಿ ವಿಲಿಯಮ್ ಪೆಂಜೆಲ್ಲಿ ಮತ್ತು ಹ್ಯೂ ಫಾಲ್ಕನರ್ ಬ್ರಿಕ್ಸಾಮ್ ಗುಹೆಯಲ್ಲಿ ನಡೆಸಿದ ಉತ್ಖನನದ ಪುರಾವೆಗಳು ಹಾಗೂ ಭೂಗರ್ಭ ಶಾಸ್ತ್ರಜ್ಞ ಸರ್ ಚಾಲ್ರ್ಸ್ ಲಾಯಿಲ್ 1859ರಲ್ಲಿ ಅಬರ್ಡೀನ್‍ನಲ್ಲಿ ಮಾಡಿದ ಭಾಷಣಗಳು ‘ಕುಬ್ಜ ಕಾಲಗಣನೆ’ಯನ್ನು ಅಸಂಗತಗೊಳಿಸಿದ್ದವು. ಡಾರ್ವಿನ್ನನ ವಿಕಾಸವಾದವು ಪ್ರತಿಪಾದನೆಗೊಂಡ ನಂತರ ಅಷ್ಟರ ತನಕ ಮಣೆಹಾಕಿ ಪೂಜಿಸಲ್ಪಟ್ಟ ಬೈಬಲ್ಲಿನ ಸೃಷ್ಟಿಚಿತ್ರಣವು ಮೊದಲು ವಿದ್ವಾಂಸರ, ಮುಂದಕ್ಕೆ ಜನರ ನಂಬಿಕೆಯನ್ನು ಉಳಿಸಿಕೊಳ್ಳಲು ಸಾಕಷ್ಟು ಹೆಣಗಾಡಿ ಸೋತುಹೋಯಿತು. ಇದರಿಂದ ವಿಜ್ಞಾನ ಗೆದ್ದಿತು. ಅದು ಬೇರೆ ವಿಷಯ. ನಮ್ಮ ಪುರಾಣಗಳನ್ನು ಇತಿಹಾಸವನ್ನಾಗಿ ನೋಡಲು ಪ್ರಯತ್ನಿಸಿದ ವಿಲಿಯಮ್ ಜೋನ್ಸ್‍ರಂಥ ಪೌರಸ್ತ್ಯವಾದಿಗಳು ಸತ್ಯವೆಂದು ಗ್ರಹಿಸಿದ ಮಿಥ್ಯೆಯನ್ನು ಆಧರಿಸಿ ಮುಂದೊತ್ತಿದವರು. ಇದರಿಂದ ಅವರು ಪುರಾಣಗಳ ಗೌರವವನ್ನಾಗಲೀ ಇತಿಹಾಸದ ಮರ್ಯಾದೆಯನ್ನಾಗಲೀ ಉಳಿಸುವಲ್ಲಿ ಅಥವಾ ಹೆಚ್ಚಿಸುವಲ್ಲಿ ಸಫಲರಾಗದೇ ಇದ್ದದ್ದು ಬೋಧಪ್ರದ ವಿಚಾರ ಎಂದುಕೊಳ್ಳಬೇಕು. ಪುರಾಣದಲ್ಲಿ ಇತಿಹಾಸದ ಸ್ಥಾನವೇನು ಅಥವಾ ಇತಿಹಾಸಕ್ಕೆ ಪುರಾಣಗಳೊಡನೆ ಏನು ಸಂಬಂಧ ಎಂಬುದನ್ನು ಕೆಲವು ನಿರ್ದಿಷ್ಟ ಕಲ್ಪನೆಗಳಿಗೆ ಕಟ್ಟಿಹಾಕಿದರೆ ಅದಕ್ಕೆ ಗೆಲುವಿನ ಆಶ್ವಾಸನೆ ಇಲ್ಲ.

ಹಾಗೆಂದು ಪುರಾಣಗಳಲ್ಲಿ ಕಾಲ್ಪನಿಕ ಕಥಾನಕವನ್ನು ಮೀರಿದ, ಧರೆಗಿಳಿದು ಬಂದ, ಇತಿಹಾಸಕಾರರು ಸ್ವಲ್ಪ ಧೈರ್ಯದಿಂದ ವ್ಯವಹರಿಸಲು ಸಾಧ್ಯವಾಗುವ ಕೆಲವು ಮಾಹಿತಿಗಳಿವೆ. ಇವುಗಳಲ್ಲಿ ಮುಖ್ಯವಾಗಿ ವಂಶಾನುಚರಿತೆಯ ಭಾಗ ಕೆಲವು ರಾಜವಂಶದ ವಿವರವನ್ನು ತಿಳಿಸುತ್ತವೆ. ಅಂತರ್ಗತ ಇತಿಹಾಸಪ್ರಜ್ಞೆಯನ್ನು ಸ್ರವಿಸುವ ಕೆಲವು ಕಾಲ್ಪನಿಕ ಕಥಾನಕಗಳು, ವಂಶೋದ್ಭವಗಳನ್ನು ವಿವರಿಸಿದ ಮೇಲೆ ಆಳಿದ ಕೆಲವು ರಾಜವಂಶಗಳನ್ನು ನಮಗೆ ಪರಿಚಯಿಸುತ್ತವೆ. ಇದನ್ನು ಪ್ರಕಟಗೊಂಡ ಇತಿಹಾಸ ವಿವರವೆಂದು ತಿಳಿಯಬಹುದು. ಕೆಲವೊಮ್ಮೆ ಈ ಬದಲಾವಣೆಯನ್ನು ಸಾಮಾಜಿಕ-ರಾಜಕೀಯ ಸ್ಥಿತ್ಯಂತರಗಳಿಗೆ ಜೋಡಿಸಲಾಗಿದೆ. ವಂಶಕೇಂದ್ರಿತ ವ್ಯವಸ್ಥೆಯು ಪ್ರಭುತ್ವವಾಗಿ ಬೆಳೆದಾಗ ಮಾತ್ರ ಅಂತರ್ಗತವಾಗಿದ್ದ ಇತಿಹಾಸಪ್ರಜ್ಞೆಯು ಈ ರೀತಿಯಲ್ಲಿ ಮುಕ್ತವಾಗಿ ಪ್ರಕಟಗೊಳ್ಳುತ್ತದೆ ಎಂದು ರೊಮಿಲಾ ಥಾಪರ್ ಅಭಿಪ್ರಾಯಪಡುತ್ತಾರೆ. ಇದು ಹೊರಗೆಡಹುವ ವಂಶಾವಳಿಯು ಸೃಷ್ಟಿಯ, ಜಗತ್ತಿನ ಉಗಮದ, ವಂಶೋದ್ಭದ ದಿವ್ಯ ಕಥಾನಕ, ಹಾಗೂ ಅದನ್ನು ವಿವರಿಸುವ ವಿರಾಟ್ ಕಾಲಚೌಕಟ್ಟಿನಿಂದ ಹೊರಬಂದು ರಾಜರ ಆಳ್ವಿಕೆಯ ಕಾಲವನ್ನು ತಿಳಿಸುತ್ತದೆ. ಇದು ಪ್ರಭುತ್ವದ ಹಿರಿಮೆಯನ್ನು ಸ್ಥಾಪಿಸುವ ಒಂದು ತಂತ್ರ ಎಂದು ಗ್ರಹಿಸಲು ಕಷ್ಟವೇನಿಲ್ಲ. ಇದರಲ್ಲಿ ವಾಸ್ತವಾಂಶ ಇಲ್ಲದೇನಿಲ್ಲ. ಆದರೆ ಕೇಳುಗರನ್ನು ಆಕರ್ಷಿಸಲು ಹಾಗೂ ಅವರ ನಂಬುಗೆಯನ್ನು ಸೆರೆಹಿಡಿಯಲು ಒಂದು ವಿಶೇಷ ನಿರೂಪಣಾ ತಂತ್ರವನ್ನು ಇದರಲ್ಲಿ ಅಳವಡಿಸಿಕೊಳ್ಳಲಾಗಿದೆ. ಒಂದು ರಾಜವಂಶದ ಕೊನೆ, ಇನ್ನೊಂದರ ಸ್ಥಾಪನೆ, ಅದರ ವಂಶಾವಳಿಗಳನ್ನು ನೇರವಾಗಿ ವಿವರಿಸದೆ ಅವುಗಳನ್ನು ಭವಿಷ್ಯವಾಣಿಯಾಗಿ ಹೇಳಲಾಗಿದೆ. ಉದಾಹರಣೆಯಾಗಿ, ಮಗಧರಾಜ್ಯದಲ್ಲಿ ಕ್ಷತ್ರಿಯರಾಗಿದ್ದ ಶಿಶುನಾಗ ವಂಶದಿಂದ ಅಧಿಕಾರವನ್ನು ನಂದರೆಂಬ ಶೂದ್ರವಂಶವು ಕಸಿದುಕೊಂಡಿತು. ಇದು ಸಾಮಾಜಿಕ ವ್ಯವಸ್ಥೆಗೆ ಸವಾಲಾದುದರಿಂದ ಇದನ್ನು ನಿಗ್ರಹಿಸಲು ಚಾಣಕ್ಯನೆಂಬ ಬ್ರಾಹ್ಮಣ ಶ್ರೇಷ್ಠನು ಅವತರಿಸಿ, ನಂದವಂಶವನ್ನು ಅಳಿಸಿ ಚಂದ್ರಗುಪ್ತನೆಂಬ ಶ್ರೇಷ್ಠ ರಾಜನಿಗೆ ಪಟ್ಟಾಭಿಷೇಕ ಮಾಡಿದನು ಎಂಬುದನ್ನು ಭವಿಷ್ಯವಾಣಿಯಾಗಿ ನಿರೂಪಿಸಿದಾಗ ಆದ ಘಟನೆಗಳು ಅಥವಾ ಬದಲಾವಣೆಗಳು ವಿಧಿನಿರ್ಣಾಯಕವಾದದ್ದು ಎಂದು ಘೋಷಿಸಲು ಸುಲಭವಾಗುತ್ತದೆ. ಕ್ಷತ್ರಿಯರಿಗೆ ಮಾತ್ರ ಆಳುವ ಹಕ್ಕು; ಅದನ್ನು ಉಲ್ಲಂಘಿಸಿದ ಶೂದ್ರ ನಂದವಂಶವನ್ನು ಕಿತ್ತೊಗೆಯುವುದು ಧರ್ಮ; ಅದು ಬ್ರಾಹ್ನಣನ ನೇತೃತ್ವದಲ್ಲಿ ನಡೆದು ಮೌರ್ಯರ ಆಳ್ವಿಕೆಯು ಸ್ಥಾಪನೆಯಾದದ್ದು ಧರ್ಮಸಂಸ್ಥಾಪನೆಯ ಕಾರ್ಯ; ಇದನ್ನು ವಿಧಾಯಕನೇ ನಡೆಸಿಕೊಟ್ಟ, ಎಂಬೆಲ್ಲಾ ಧ್ವನಿ ಇದರೊಳಗೆ ಇದೆ. ಇದು ಮೌರ್ಯ ಪ್ರಭುತ್ವವು ಶ್ರೇಷ್ಠವೆಂದು ಮಾತ್ರ ಘೋಷಿಸುವುದಲ್ಲದೆ ವರ್ಣಾಶ್ರಮ ತತ್ವದ ಹಿರಿಮೆಯನ್ನೂ, ಅದು ಎದುರಿಸಿದ ಸವಾಲುಗಳನ್ನೂ, ಅದು ಸಾಧಿಸಿದ ವಿಜಯವನ್ನೂ ಸಾರುತ್ತದೆ. ಚಂದ್ರಗುಪ್ತ ಅಥವಾ ಅವನ ವಂಶದ ಯಾವ್ಯಾವ ರಾಜರು ಎಷ್ಟೆಷ್ಟು ವರ್ಷ ಆಳ್ವಿಕೆ ನಡೆಸಿದ್ದಾರೆ ಎನ್ನುವ ಬದಲು ನಡೆಸಲಿದ್ದಾರೆ ಎಂದು ವಿವರಿಸಿದಾಗ ಆ ನಿರೂಪಣೆಗೆ ಒಂದು ವಿಶೇಷ ನಿರ್ಣಾಯಕತ್ವವು ಪ್ರಾಪ್ತವಾಗುತ್ತದೆ. ಇದರ ವಾಸ್ತವತೆಯ ಅರಿವಾಗುವುದು ಈ ಭವಿಷ್ಯವಾಣಿಯು ಎಲ್ಲಿ ಬಂದುನಿಂತು ಸ್ತಬ್ಧವಾಗುತ್ತದೆ ಎಂದು ಗುರುತಿಸಿದಾಗ. ನಿಜವಾಗಿ ಅದೇ ಘಟ್ಟದಿಂದ ಹಿಂದೆ ನಡೆದ ಘಟನೆಗಳ ಬಗ್ಗೆ ತಿಳಿದು ವರದಿಮಾಡಿದ್ದು. ಆದರೆ ಅದನ್ನು ಭವಿಷ್ಯನುಡಿಯಾಗಿ ನಿರೂಪಿಸಿದ್ದು ಅದಕ್ಕೊಂದು ಅತಿಮಾನವ, ಅತೀಂದ್ರಿಯ ವಿಲಕ್ಷಣತೆಯನ್ನು ನೀಡುವ ಸಲುವಾಗಿ. ಈ ನಿರೂಪಣಾ ವರಸೆಯನ್ನು ಮುಂದೆ ‘ಕಾಲಜ್ಞಾನ’ ಸಾಹಿತ್ಯಗಳಲ್ಲಿ ಯಶಸ್ವಿಯಾಗಿ ಅಳವಡಿಸಿಕೊಳ್ಳಲಾಯಿತು.

ಹಾಗೆಂದು ಮೌರ್ಯರ ವಂಶಾವಳಿಯನ್ನು ಎಲ್ಲಾ ಪುರಾಣಗಳು ಏಕರೀತಿಯಲ್ಲಿ ನೀಡುವುದಿಲ್ಲ. ವಿಷ್ಣು, ಮತ್ಸ್ಯ, ವಾಯು ಹಾಗೂ ಬ್ರಹ್ಮಾಂಡಪುರಾಣಗಳಲ್ಲಿ ಕೆಲವು ಸಾಮ್ಯಗಳಿದ್ದರೆ ಇನ್ನು ಕೆಲವು ವ್ಯತ್ಯಾಸಗಳಿವೆ. ಈ ಎಲ್ಲಾ ಪುರಾಣಗಳು ಚಂದ್ರಗುಪ್ತ, ಬಿಂದುಸಾರ, ಅಶೋಕ, ಇವರನ್ನು ಮೊದಲ ಮೂರು ರಾಜರೆಂದೂ ಬ್ರಹದ್ರಥನು ಹತ್ತನೇ ಹಾಗೂ ಕೊನೆಯ ಅರಸನೆಂದೂ, ಅವನು ತನ್ನ ಬ್ರಾಹ್ಮಣ ಸೇನಾಧಿಪತಿ ಪುಶ್ಯಮಿತ್ರ ಶುಂಗನ ಕೈಯಲ್ಲಿ ಕೊಲ್ಲಲ್ಪಟ್ಟನೆಂದೂ, ಪುಷ್ಪಮಿತ್ರನು ಶುಂಗವಂಶದ ಪ್ರತಿಷ್ಠಾಪಕನೆಂದೂ ತಿಳಿಸುತ್ತವೆ. ಆದರೆ ಇವರ ಮಧ್ಯೆ ಆಳಿಹೋದವರ ಹೆಸರುಗಳು ಬೇರೆಬೇರೆ ವಿಧವಾಗಿ ಉಲ್ಲೇಖಗೊಂಡಿವೆ. ಬೌದ್ಧ ಪುರಾಣ ‘ಅಶೋಕಾವದಾನ’ದಲ್ಲಿ ಚಿತ್ರಿತವಾದ ಅಶೋಕ ಚಕ್ರವರ್ತಿಯ ವಿಶೇಷ ಕಥನ, ವ್ಯಕ್ತಿತ್ವ, ಅವನ ದುರಂತ ಕೊನೆಯದಿನಗಳು, ಆತನ ಪ್ರಧಾನ ಅರಸಿ ತಿಶ್ಯರಕ್ಷಿತಳ ನೀಚ ಹುನ್ನಾರ, ಮಗ ಕುನಾಲನ ದಾರುಣ ಕಥೆಗಳ ಬಗ್ಗೆ ಪುರಾಣಗಳು ಸಂಪೂರ್ಣ ಮೌನವನ್ನು ತಾಳಿವೆ. ವಿಷ್ಣು ಹಾಗೂ ಮತ್ಸ್ಯಪುರಾಣಗಳು ನೀಡುವ ಮೌರ್ಯ ವಂಶಾವಳಿಯಲ್ಲಿ ಕುನಾಲನು ಸ್ಥಾನವನ್ನೇ ಕಂಡುಕೊಂಡಿಲ್ಲ; ಆದರೆ ವಾಯು ಮತ್ತು ಬ್ರಹ್ಮಾಂಡಪುರಾಣಗಳು ಕುನಾಲನನ್ನು ಅಶೋಕನ ಉತ್ತರಾಧಿಕಾರಿಯನ್ನಾಗಿ ಉಲ್ಲೇಖಿಸಿವೆ. ಇದು ಇತಿಹಾಸಕಾರರಿಗೆ ಹಲವು ಸವಾಲುಗಳನ್ನು ಎಸೆದಿದೆ. ಆದರೆ ಒಟ್ಟಿನಲ್ಲಿ ಬೌದ್ಧಸಾಹಿತ್ಯದಲ್ಲಿ ಅಶೋಕನು ಕೇಂದ್ರಸ್ಥಾನದಲ್ಲಿದ್ದು, ಬೌದ್ಧಧರ್ಮದ ಆದರ್ಶಗಳನ್ನು ಎತ್ತಿಹಿಡಿಯುವ ಮಹನೀಯನಾಗಿ ಮೂಡಿಬಂದರೆ ಪುರಾಣಗಳಲ್ಲಿ ಆತ ಕೇವಲ ಬಿಂದುಸಾರನ ಮಗನಾಗಿ, ಒಬ್ಬರಾಜನಾಗಿ ಕಂಡುಬರುತ್ತಾನೆ. ಪುರಾಣಗಳು ಅಶೋಕನ ಬಗ್ಗೆ ಹೆಚ್ಚೇನೂ ಉತ್ಸಾಹವನ್ನು ತೋರದಿರುವುದು ಒಂದೆಡೆಯಾದರೆ ಬೌದ್ಧಸಾಹಿತ್ಯವು ತನ್ನ ಹಿರಿಮೆಯನ್ನು, ಧರ್ಮವಿಜಯವನ್ನು ಪ್ರತಿಪಾದಿಸುವ ಆವೇಶದಲ್ಲಿ ತನ್ನ ಪ್ರವರ್ತಕರ ಶಕ್ತಿ, ಘನತೆಗಳನ್ನು ಉತ್ಪ್ರೇಕ್ಷಿಸುವಲ್ಲಿ ಹಿಂಜರಿಯದಿರುವುದನ್ನು ಇತಿಹಾಸಕಾರರು ಖಂಡಿತ ಗಮನಿಸಿದ್ದಾರೆ. ಆದರೆ ಅಶೋಕನ ಘನತೆ, ಸಾಧನೆ, ಉದಾತ್ತತೆಗಳಿಗೆ ಬೇರೆ ಅನೇಕ ಪುರಾವೆಗಳಿವೆ. ದೇಶದಾದ್ಯಂತ ಪಸರಿಸಿದ ಆತನ ಶಾಸನಗಳು, ಅವುಗಳ ಧಾರ್ಮಿಕ, ನೈತಿಕ, ರಾಜಕೀಯ ತತ್ವ, ಸಂದೇಶಗಳು, ಹೊರದೇಶದಿಂದ ಬಂದ ಪ್ರವಾಸಿಗಳ ಬರವಣಿಗೆಗಳು, ಆತನ ಕಾಲದಲ್ಲಿ ರಚಿತವಾದ ಸ್ತಂಭ, ಸ್ತೂಪಗಳು, ಅವುಗಳಲ್ಲಿ ಶೋಭಿಸುವ ಶಿಲ್ಪಚಿತ್ರಗಳು ಅಶೋಕನ ಪ್ರಭಾವ, ಸಾಧನೆ, ಘನತೆಗಳನ್ನು ಸಾರಿಹೇಳುತ್ತವೆ. ಈ ಹಿನ್ನೆಲೆಯಲ್ಲಿ ಅಶೋಕನ ಬಗ್ಗೆ ಪುರಾಣಗಳು ತೋರುವ ಅಸಡ್ಡೆ ಅವುಗಳ ಸತ್ಯನಿಷ್ಠೆಯನ್ನು ಹೆಚ್ಚಾಗಿ ಪ್ರಕಟಿಸುವುದಿಲ್ಲ. ಪುರಾಣಗಳಾಗಲೀ, ಜೈನ, ಬೌದ್ಧಸಾಹಿತ್ಯಗಳಾಗಲೀ ಅವುಗಳ ಅಸ್ಥಿತ್ವವನ್ನು ಘೋಷಿಸುವುದು ಪಂಥೀಯ ನೆಲೆಯಲ್ಲೇ. ಅವುಗಳಿಗೆ ಆಯಾ ನೆಲೆಯಲ್ಲಿ ಗೌರವ, ಆದರ, ಆರಾಧನೆಗಳು ಲಭಿಸುತ್ತವೆ. ಇದರಲ್ಲಿ ವಿಶೇಷವೇನೂ ಇಲ್ಲ. ಆದರೆ ಇತಿಹಾಸಕಾರನು ಇವುಗಳ ಬಗ್ಗೆ ಆಯಾ ಧರ್ಮಾನುಯಾಯಿಗಳಿಗಿರುವ ಭಕ್ತ್ಯಾದರಗಳನ್ನು ಆದರಪೂರ್ವಕ ಬದಿಗಿರಿಸಿ ಬೇರೆ ಅನೇಕ ಪರೀಕ್ಷೆಗಳಿಗೆ ಗುರಿಮಾಡುತ್ತಾನೆ. ಇದು ಆತನ ವೃತ್ತಿಧರ್ಮ. ಇತಿಹಾಸದ ಆಕರಗಳಾಗಿ, ಇತಿಹಾಸದ ರಚನೆಗೆ ಅವು ಹೇಗೆ, ಎಷ್ಟರಮಟ್ಟಿಗೆ ಸಹಕಾರಿ ಎಂಬ ನಿಷ್ಕರ್ಷೆ ಪಂಥೀಯ ನಿಷ್ಠೆ ಮತ್ತು ಭಾವುಕತೆಯನ್ನು ಬದಿಗಿಟ್ಟು ನಡೆಯುವ ಕೆಲಸ.

ಇತಿಹಾಸಕಾರನಿಗೆ ಪುರಾಣಗಳು ಎಷ್ಟು ಉಪಯುಕ್ತ ಎಂಬ ಬಗ್ಗೆ ಪೌರಸ್ತ್ಯ ಪಂಡಿತರೊಳಗೆ ಚರ್ಚೆ ಸಾಕಷ್ಟು ನಡೆದಿದೆ. ಹೇಮನ್ ವಿಲ್ಸನ್ ಅವುಗಳನ್ನು ಸಾಕಷ್ಟು ಗೌರವಿಸಿ ಬೌದ್ಧ ಸಾಹಿತ್ಯ ಮತ್ತು ಅಧ್ಯಯನವನ್ನು ಕಡೆಗಣಿಸಿದರೆ, ಎ. ಬಿ. ಕೀತ್ ಪುರಾಣಗಳು ಇತಿಹಾಸದ ಆಕರಗಳಾಗಿ ಅಷ್ಟೇನೂ ನಂಬಲರ್ಹವಲ್ಲ ಎಂಬ ಅಭಿಪ್ರಾಯವನ್ನು ಪ್ರಕಟಿಸಿದ. ವಿಂಟರ್ನಿಟ್ಸ್ ಪುರಾಣಗಳಿರುವ ವಂಶಾವಳಿಗಳ ಉಪಯುಕ್ತತೆಯನ್ನು ಒಪ್ಪಿಕೊಂಡರೂ ಅವುಗಳನ್ನು ಪರಾಂಬರಿಸದೆ ಉಪಯೋಗಿಸುವುದು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟ. ವಿನ್ಸೆಂಟ್ ಸ್ಮಿತ್ ಪುರಾಣಗಳ ಉಪಯುಕ್ತತೆಯನ್ನು ಅಲ್ಲಗಳೆಯದೆ, ವಿಷ್ಣುಪುರಾಣವು ಮೌರ್ಯರ ಇತಿಹಾಸ, ಮತ್ಸ್ಯಪುರಾಣವು ಶಿಶುನಾಗ ಹಾಗೂ ಆಂಧ್ರರ ಇತಿಹಾಸ ಮತ್ತು ವಾಯುಪುರಾಣವು ಸ್ವಲ್ಪಮಟ್ಟಿಗೆ ಗುಪ್ತರ ಇತಿಹಾಸವನ್ನು ರಚಿಸಲು ಸಹಾಯವಾಗುತ್ತದೆ ಎಂಬ ವಿಚಾರವನ್ನು ಮಂಡಿಸಿದ. ಕೆಲವು ಪ್ರಮುಖ ರಾಜವಂಶಗಳ ವಿವರವನ್ನು ಮಾತ್ರವಲ್ಲದೆ ಪುರಾಣಗಳು ತಾನು ನಿಕೃಷ್ಟ ಅಥವಾ ಮ್ಲೇಚ್ಛವಂಶಗಳು ಎಂದು ಪರಿಗಣಿಸಿದ ಅಭೀರ, ಶಕ, ಯವನ, ಹೂಣ ಮೊದಲಾದವರ ಕುರಿತಾಗಿಯೂ ಉಲ್ಲೇಖ ಮಾಡುತ್ತವೆ. ಪುರಾಣಗಳ ಕುರಿತು ವಿಶೇಷವಾಗಿ ಅಧ್ಯಯನ ನಡೆಸಿ ಅವುಗಳ ಪ್ರಾಮುಖ್ಯತೆಯನ್ನು ವಿಸ್ತಾರವಾಗಿ ತಿಳಿಸಿದ್ದು ಪಾರ್ಗಿಟರ್. ಆತನ ‘ಏನ್ಶ್ಯಿಯಂಟ್ ಇಂಡಿಯನ್ ಹಿಸ್ಟೋರಿಕಲ್ ಟ್ರೆಡಿಶನ್’ ಮತ್ತು ‘ಡೈನಾಸ್ಟೀಸ್ ಅಫ್ ದ ಕಲಿ ಏಜ್’ ಎಂಬ ಗ್ರಂಥಗಳು ಪುರಾಣಗಳನ್ನು ಇತಿಹಾಸ ರಚನಾಶಾಸ್ತ್ರದ ಒರೆಗೆ ಹಚ್ಚಿ, ಅವುಗಳಲ್ಲಿ ಉಲ್ಲೇಖವಾದ ವಂಶಾವಳಿ ಹಾಗೂ ಕಾಲಗಣನೆಯನ್ನು ಕೂಲಂಕುಶವಾಗಿ ಚರ್ಚಿಸಿವೆ. ಆದರೆ ಈ ಚರ್ಚೆಗಳೆಲ್ಲವೂ ಇತಿಹಾಸವನ್ನು ರಾಜಕೀಯ ಚೌಕಟ್ಟಿನಲ್ಲಿ ಗುರುತಿಸಿಕೊಂಡು, ರಾಜಕೀಯವನ್ನು ರಾಜವಂಶಾವಳಿಗೆ ಸಮೀಕರಿಸಿಕೊಂಡು ನಡೆದದ್ದು. ಇದು ಇತಿಹಾಸವನ್ನು ಗ್ರಹಿಸುವ ಬಹಳ ಸಮಯದಿಂದ ಬಂದ ವಾಡಿಕೆಯ ಕ್ರಮ. ಇದು ನಿಜವಾದ ಚಿತ್ರಣವೇ ಎಂಬ ಪ್ರಶ್ನೆಯನ್ನು ಎತ್ತಿದಾಗ ಅದನ್ನು ನಿರಾಕರಿಸುವುದು ವಿವೇಚನಾಮತಿಗೆ ಕಷ್ಟಸಾಧ್ಯವೇನಲ್ಲ. ಇಂತಹ ಸೀಮಿತ ಚೌಕಟ್ಟು ಇತಿಹಾಸದಲ್ಲಿ ಇಷ್ಟು ದೀರ್ಘಕಾಲ ವಿಜೃಂಭಿಸಿದುದಕ್ಕೆ ಇತಿಹಾಸವೇ ಕಾರಣ. ರಾಜಪ್ರಭುತ್ವ ಇತಿಹಾಸದಲ್ಲಿ ದೀರ್ಘಕಾಲ ಅಧಿಕಾರವನ್ನು ಚಲಾಯಿಸಿದ್ದು ಸರ್ವವಿದಿತ. ತನ್ನ ಉತ್ಕರ್ಷದ ಅನುಭವ ಮತ್ತು ಜಾಹೀರಾತನ್ನು ಅದು ಇತಿಹಾಸವನ್ನು ತನ್ನದಾಗಿಸುವ ಬೇರೆಬೇರೆ ವಿಧಾನಗಳಲ್ಲಿ ಪ್ರಕಟಿಸಿತು. ದಾನಶಾಸನಗಳನ್ನು, ಪ್ರಶಸ್ತಿಗಳನ್ನು, ಸೌಧಗಳನ್ನು, ಸ್ಮಾರಕಗಳನ್ನು ಅಥವಾ ಸ್ವಂತ ಗೋರಿಗಳನ್ನು ಆಚಂದ್ರಾರ್ಕವಾಗಿ ಉಳಿಯುವಂತೆ ಸೃಷ್ಟಿಸಿ, ಅಥವಾ ಹೊಗಳುಭಟ್ಟರಿಂದ ತನ್ನ ಹಾಗೂ ತನ್ನವರ ಇತಿಹಾಸವನ್ನು ಬರೆಸಿ ತಾನೇತಾನಾಗಿ ಮೆರೆಯಿತು. ಇತಿಹಾಸವು ವಿಜಯಿಗಳ ವಿಜಯಗಾಥೆಯಾಗುವುದು ಸುಲಭ. ಇವುಗಳೇ ಸಾಮಾನ್ಯವಾಗಿ ಇತಿಹಾಸದ ಆಕರಗಳಾಗಿ ಲಭ್ಯವಾಗುವುದರಿಂದ ಇವುಗಳು ಇತಿಹಾಸಕಾರರನ್ನು ಆಕರ್ಷಿಸುವುದರಲ್ಲಿ ಅಥವಾ ರಾಜರ ಕಥೆಗಳು ಇತಿಹಾಸ ಪುಟಗಳಲ್ಲಿ ದಟ್ಟವಾಗಿ ಕಾಣಬರುವುದರಲ್ಲಿ ಆಶ್ಚರ್ಯವೇನಿಲ್ಲ. ಇತಿಹಾಸವೆಂದರೆ ಇಷ್ಟೇ ಎಂಬ ಭಾವನೆ ಕೆಲವರಿಗೆ ಸಂತೃಪ್ತಿಯ ನೆಲೆಯಾಗಿ, ಇನ್ನು ಕೆಲವರಿಗೆ ಮೂದಲಿಕೆಯ ಚಾವಟಿಯಾಗಿ ಒದಗಿಬಂತು. ಆದರೆ ಇತಿಹಾಸವು ನಮ್ಮೆಲ್ಲರ ಕಥೆ; ಚಲನಶೀಲಸಮಾಜದ ಕಥೆ; ಇದರ ವ್ಯಾಪ್ತಿಯು ಅಗಾಧ ಎಂದು ಗ್ರಹಿಸಿದ್ದು, ಅದನ್ನು ಸಾಧಿಸಿದ್ದು ಬದಲಾದ ಸಮಾಜ. ಚಲನಶೀಲ ಸಮಾಜದ ಇತಿಹಾಸಪ್ರಜ್ಞೆಯೂ ಬದಲಾಗುತ್ತದೆ. ಆದರೆ ಎಷ್ಟೋಬಾರಿ ಹಳೆಯ ಚಿಂತನೆಗಳು ಜಿಗುಟಾಗಿ ನಮ್ಮನ್ನು ಅಂಟಿಕೊಳ್ಳುತ್ತವೆ. ಅವುಗಳು ಸುಲಭವಾಗಿ ಸೋಲೊಪ್ಪಿಕೊಳ್ಳುವುದಿಲ್ಲ.  ಇದು ಸಂಪೂರ್ಣವಾಗಿ ಲುಪ್ತವಾಗಿಲ್ಲವಾದರೂ, ಇದರ ಪ್ರಭಾವ ಜನಸಾಮಾನ್ಯರ ಸುಲಭ ಇತಿಹಾಸಗ್ರಹಿಕೆಯ ಮೇಲೆ ಸಾಕಷ್ಟಿದ್ದರೂ, ಇತಿಹಾಸದ ಅರ್ಥವ್ಯಾಪ್ತಿ ರಾಜಕೀಯ, ರಾಜವಂಶಾವಳಿಗೆ ಸೀಮಿತವಾಗದೆ, ಸಾಕಷ್ಟು ಅಗಾಧವೂ, ಸಂಕೀರ್ಣವೂ ಆಗಿದೆ ಎಂಬ ನಂಬಿಕೆ ಗಂಭೀರ ಇತಿಹಾಸಕಾರರಲ್ಲಿ, ಸಂಶೋಧಕರಲ್ಲಿ ಇದೆ.

ಈ ವಿಸ್ತøತ ಅರ್ಥದಲ್ಲಿ ಇತಿಹಾಸವನ್ನು ಗ್ರಹಿಸಲು ಪುರಾಣಗಳು ಸಹಕಾರಿಯೇ ಎಂಬ ಪ್ರಶ್ನೆಗೆ ಹೌದೆಂದು ರೊಮಿಲಾ ಥಾಪರ್ ತಮ್ಮ ಅನೇಕ ಪ್ರಬಂಧಗಳಲ್ಲಿ ಉತ್ತರಿಸಿದ್ದಾರೆ. ಪ್ರಾಚೀನ ಭಾರತೀಯರಲ್ಲಿ ಇತಿಹಾಸಪ್ರಜ್ಞೆಯ ಕೊರತೆಯಿತ್ತು ಎಂಬ ಹಲವು ಪಾಶ್ಚಾತ್ಯ ಪಂಡಿತರ ಆಪಾದನೆಯನ್ನು ಅಲ್ಲಗಳೆದು, ಆಯಾ ಸಮಾಜಕ್ಕೆ ಆಯಾ ಕಾಲಕ್ಕನುಗುಣವಾಗಿ, ತನ್ನ ಅವಶ್ಯಕತೆಗೆ ಸರಿಯಾಗಿ ಇತಿಹಾಸಪ್ರಜ್ಞೆಯು ರೂಪುಗೊಂಡು ಪ್ರಕಟಗೊಳ್ಳುತ್ತದೆ ಎಂದು ಪ್ರತಿಪಾದಿಸಿದರು. ವಂಶಕೇಂದ್ರಿತ ವೇದಕಾಲದ ಸಮಾಜದ ಇತಿಹಾಸಪ್ರಜ್ಞೆ ಹೇಗೆ ಆಗಿನ ಸಾಹಿತ್ಯದಲ್ಲಿ ಅಂತರ್ಗತವಾಗಿತ್ತು, ಅವುಗಳ ಸ್ವರೂಪವೇನು, ಮುಂದೆ ಪ್ರಭುತ್ವವು ಬೆಳೆದಂತೆ ಇತಿಹಾಸಪ್ರಜ್ಞೆಯೂ ಹೇಗೆ ವಂಶಾನುಚರಿತೆಗಳಲ್ಲಿ ಪ್ರಕಟಗೊಂಡುವು ಎಂದು ತಿಳಿಸಿದರು. ಅಂದರೆ ಪುರಾಣಗಳಲ್ಲಿರುವ ವಂಶಾವಳಿಗಳು ಆಗ ನೆಲೆಗೊಂಡ ರಾಜಪ್ರಭುತ್ವವು ಇತಿಹಾಸದಲ್ಲೂ ನೆಲೆಯಾಗಲು ಮಾಡಿದ ಪ್ರಯತ್ನದ ಪ್ರತೀಕ. ಹಾಗೆಯೇ ಸಮಾಜದಲ್ಲಿ ವರ್ಣಾಶ್ರಮಧರ್ಮದ ಸಿದ್ಧಾಂತ ಮತ್ತು ಆಚರಣೆಗಳು ಗಡುಸಾದಾಗ ಪುರಾಣಗಳಲ್ಲಿ ಅದು ಪ್ರತಿಧ್ವನಿಗೊಳ್ಳುತ್ತವೆ. ಯಾವುದೇ ಸಮಾಜವು ತಾನು ನಡೆದುಬಂದ ದಾರಿಯನ್ನು ಹಿಂತಿರುಗಿ ನೋಡಿದಾಗ ಅದು ತನ್ನ ಮೌಲ್ಯ, ಆತಂಕಗಳನ್ನು ಹೊರಗೆಡಹುತ್ತದೆ. ಪುರಾಣಗಳಲ್ಲಿ ಆಗಾಗ ಉಲ್ಲೇಖಿತವಾದ ಕಲಿಯುಗದ ವರ್ಣನೆ ಇದಕ್ಕೊಂದು ದೃಷ್ಟಾಂತ. ಕಲಿಯುಗದಲ್ಲಿ ಧರ್ಮವು ಕ್ಷೀಣಗೊಳ್ಳುವುದು, ಯಜ್ಞಯಾಗಾದಿಗಳು ಅಸಡ್ಡೆಗೊಳಗಾಗುವುದು, ಸಮಾಜದಲ್ಲಿ ಬ್ರಾಹ್ಮಣರಿಗೆ ಗೌರವವು ಲುಪ್ತವಾಗುವುದು, ವರ್ಣಸಂಕರವಾಗುವುದು, ಇತ್ಯಾದಿ ವಿವರಗಳು ಪುರಾಣರಚನೆಯು ಪೂರ್ಣಗೊಳ್ಳುವ ಕಾಲದ, ಅಂದರೆ ಸುಮಾರು ಕ್ರಿಸ್ತಶಕ ನಾಲ್ಕು-ಐದನೇ ಶತಮಾನದ ನಮ್ಮ ಸಮಾಜದಲ್ಲಿ ನಡೆದ ಬದಲಾವಣೆಗಳು, ಅವು ಅಷ್ಟರ ತನಕ ಯಾಜಮಾನ್ಯವನ್ನು ನಡೆಸಿದ ವರ್ಗಗಳ ಪ್ರತಿಕ್ರಿಯೆ, ಆದ ಬದಲಾವಣೆಗಳನ್ನು ನಿಗ್ರಹಿಸಲು ಅದು ಕೈಕೊಂಡ ಕ್ರಮ, ಇತ್ಯಾದಿಗಳನ್ನು ಸೂಚ್ಯವಾಗಿ ತಿಳಿಸುತ್ತದೆ. ನಾವು ಇದನ್ನು ಒಂದು ಸಮಾಜದ ಅಥವಾ ಅದರ ಕೆಲವು ನಿರ್ದಿಷ್ಟ ವರ್ಗಗಳ ಮನಸ್ಥಿತಿ ಅಥವಾ ಪ್ರತಿಕ್ರಿಯೆ ಎಂದು ತಿಳಿಯುವ ಬದಲಾಗಿ ಕಲಿಯುಗದ ನೈಜವರ್ಣನೆ ಎಂದು ನಂಬುತ್ತೇವೆ. ಅದನ್ನು ಪುರಾಣಗಳು ಹೇಳಿದ್ದು, ಯಾವುದೋ ದೇವಮುಖದಿಂದ ಅಥವಾ ಋಷಿಮುಖದಿಂದ ಹೇಳಲ್ಪಟ್ಟದ್ದು ಎಂದಾಗ ಆಸ್ತಿಕ ಮನಸ್ಸುಗಳು ಅದನ್ನು ಸಂಪೂರ್ಣವಾಗಿ ನಂಬುತ್ತವೆ. ಅದರಲ್ಲೂ ಇದನ್ನೆಲ್ಲಾ ಭವಿಷ್ಯವಾಣಿಯಾಗಿ ನುಡಿದದ್ದು ಎಂದಾಗ ಅದನ್ನು ತಿರಸ್ಕರಿಸುವುದು ಅಸಾಧ್ಯ ಎಂಬ ಸ್ಥಿತಿ ಬಂದೊದಗುತ್ತದೆ. ಹಾಗೂ ಈ ಜಂಜಾಟದ ಜೀವನದಲ್ಲಿ ಸಂದುಹೋದ ದಿನಗಳೇ ಒಳ್ಳೆಯ ದಿನಗಳು ಎಂಬ ಭಾವನೆ ಸರ್ವೇಸಾಮಾನ್ಯ. ನಮ್ಮ ಕಷ್ಟಕಾರ್ಪಣ್ಯಗಳು, ದು:ಖ ದುಮ್ಮಾನಗಳು, ವಿಧಿವಿಪರೀತಗಳು ಕಲಿಯುಗದ ಬಳುವಳಿ ಎಂದೆನ್ನುಕೊಳ್ಳುವುದು, ನಮ್ಮ ಸಂಕಟವನ್ನು ಯುಗಸಂಕಷ್ಟದೊಳಗೆ ಸೇರಿಸುವುದು ಒಂದು ಬಗೆಯ ವಿಲಕ್ಷಣ ಸಾಂತ್ವನವೇ ಹೌದು. ಆದರೆ ಪುರಾಣದಲ್ಲಿ ಕಲಿಯುಗದ ಕಲ್ಪನೆಯನ್ನು ಕೇವಲ ಆಸ್ತಿಕ ನೆಲೆಯಲ್ಲಿ ಅಥವಾ ಭಾವುಕತೆಯ ಬುನಾದಿಯಲ್ಲಿ ನೋಡದೆ, ಆ ಕಾಲದ ಇತಿಹಾಸಪ್ರಜ್ಞೆಯ ಕುರುಹಾಗಿ ಕಾಣುವುದು ಸೂಕ್ತ. ಹಾಗೆ ಮಾಡುವುದು ನಮ್ಮ ಇತಿಹಾಸಪ್ರಜ್ಞೆಯ ಕುರುಹೂ ಹೌದು.

ಈ ರೀತಿಯ ನಿಲುವನ್ನು ತಾಳಿದಾಗ ನಾವೇನೋ ಒಂದು ಸಂದಿಗ್ಧವನ್ನು ಎದುರಿಸುವಂತೆ ಭಾಸವಾಗುತ್ತದೆ. ನಾವು ಇತಿಹಾಸವನ್ನು ಆದರಿಸಬೇಕಾದರೆ ಪುರಾಣಗಳನ್ನು ತಿರಸ್ಕರಿಸಬೇಕೇ? ಪುರಾಣಗಳು ಆದರಣೀಯವಾಗಬೇಕಾದರೆ ಅವುಗಳು ಇತಿಹಾಸಕಾರನ ಪರೀಕ್ಷೆಯಲ್ಲಿ ಸಂಪೂರ್ಣ ತೇರ್ಗಡೆ ಹೊಂದಬೇಕೆ? ಹೋಮರನ ಕೃತಿಗಳು ಐತಿಹಾಸಿಕ ಘಟನೆಗಳ ಭದ್ರ ಬುನಾದಿಯಲ್ಲಿ ನಿಂತಿವೆ ಎಂಬ ನಂಬಿಕೆಯಿಂದ ಶ್ಲೀಮನ್ ಹೋಮರನು ವಿವರಿಸಿದ ನಗರಗಳನ್ನು ಉತ್ಖನನದ ಪರೀಕ್ಷೆಗೆ ಒಡ್ಡಿದ. ಅದು ಜಗತ್ತಿನ ಕುತೂಹಲವನ್ನು ಸಾಕಷ್ಟು ಕೆರಳಿಸಿತಾದರೂ ಶ್ಲೀಮನ್‍ನ ತೀರ್ಮಾನಗಳು ಹೋಮರನ ಕಾವ್ಯ ರಮ್ಯತೆಗೇನೂ ಕಡಿಮೆಯಾಗಿರಲಿಲ್ಲ. ನಮ್ಮ ರಾಮಾಯಣದಲ್ಲಿ ಚಿತ್ರಿತವಾದ ಘಟನೆಗಳು ಐತಿಹಾಸಿಕ ಘಟನೆಗಳೇ ಅಥವಾ ರಮ್ಯ ಕಥಾನಕವೇ. ಇದರಲ್ಲಿ ಸತ್ಯ ಎಷ್ಟು? ಮಿಥ್ಯೆ ಎಷ್ಟು? ಹೆಚ್.ಡಿ. ಸಂಕಾಲಿಯಾ ಇದನ್ನು ವಿಶ್ಲೇಷಿಸಿ ರಾಮಾಯಣದಲ್ಲಿರುವ ಭೂ ವಿವರ, ನಗರಗಳ ಚಿತ್ರಣಗಳು ಆ ಕಾವ್ಯವನ್ನು ರಚಿಸಿದ ಕಾಲಕ್ಕೆ ಸಂಬಂಧಿಸಿವೆ ಎಂದು ಗ್ರಹಿಸಬಹುದಾದರೂ, ಅದರೊಳಗಿನ ಘಟನೆಗಳು ಎಂದು, ಹೇಗೆ ನಡೆಯಿತು ಎಂಬುದನ್ನು ನಿರ್ಧರಿಸಲು ಕಷ್ಟ ಎಂಬ ತೀರ್ಮಾನಕ್ಕೆ ಬಂದರು. ಯಾವುದೋ ಘಟನೆಗಳ ಆಧಾರದ ಮೇಲೆ ರಾಮಕಥೆ ಹುಟ್ಟಿಕೊಂಡಿತು, ರಾಮಾಯಣ ಕಾವ್ಯ ರಚಿತವಾಯಿತು ಎಂಬುದನ್ನು ಒಪ್ಪಿಕೊಂಡರೂ ಅವುಗಳನ್ನು ಕಾವ್ಯದ ರಮ್ಯತೆ ಅಥವಾ ಆಸ್ತಿಕ ಮನಸ್ಸುಗಳ ಸುಲಭ ಸಮ್ಮತಿಯಿಂದ ಹೊರಗಿಟ್ಟು ನಿಷ್ಕರ್ಷಿಸುವುದು ಕಷ್ಟಸಾಧ್ಯ. ಇದರಲ್ಲಿ ಕೊನೆಗೂ ಸಾಧಿಸುವುದು ಭಕ್ತವಿಜಯವನ್ನೇ. ಹಾಗೆಯೇ ಮಹಾಭಾರತದವು ಅನೇಕ ಶತಮಾಗಳಲ್ಲಿ ಪದರುಪದರಾಗಿ ಬೆಳೆದ ಮಹಾಗಾಥೆ ಎಂದು ತಿಳಿದಾಗ ಅದರ ಮೂಲ ಕಥಾಭಾಗ ಎಂದು, ಹೇಗೆ ನಡೆಯಿತು ಎಂದು ನಿರ್ಧರಿಸುವುದು ಸುಲಭವಲ್ಲ. ಅದರೊಳಗೆ ಚಿತ್ರಿತಗೊಂಡ ಭೂವಿವರಗಳನ್ನು ಅಥವಾ ನಗರಗಳ, ರಾಜ್ಯಗಳ ಚಿತ್ರಣಗಳನ್ನು ಇತಿಹಾಸದ ಅಂಗೀಕಾರಕ್ಕೆ ನೀಡಬಹುದು. ಆದರೆ ಹಸ್ತಿನಾಪುರದಲ್ಲಿ ನಡೆದ ಉತ್ಖನನಗಳು ಮಹಾಭಾರತದ ಮಾನಕ್ಕೆ ಯೋಗ್ಯವಾದ ಪಳಿಯುಳಿಕೆಯನ್ನು ಹೊರಹಾಕಲಿಲ್ಲ. ಕುರುಕ್ಷೇತ್ರದಲ್ಲಿ ಮಹಾಭಾರತದ ಮಹಾಯುದ್ಧಕ್ಕೆ ಸಂಬಂಧಿಸಿದ ಅನೇಕ ಸ್ಥಳಗಳನ್ನು ಯಾತ್ರಿಕರಿಗೆ ತೋರಿಸಲಾಗುತ್ತಿದೆ. ಅವೆಲ್ಲವೂ ಇತಿಹಾಸಕಾರನ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡುವುದಿಲ್ಲ. ಒಂದು ಅಕ್ಷೋಹಿಣಿ ಸೈನ್ಯ ಅಂದರೆ 21,870 ಆನೆ, 21,870 ರಥ, 65,610 ಕುದುರೆ ಹಾಗೂ 1,09,350 ಕಾಲಾಳುಗಳು ಇರುವ ಸೈನ್ಯದ ಘಟಕ. ಇಂತಹ 18 ಅಕ್ಷೋಹಿಣಿ ಸೈನ್ಯ ಕುರುಕ್ಷೇತ್ರದಲ್ಲಿ ಹದಿನೆಂಟು ದಿನ ಯುದ್ಧಮಾಡಿತೇ? ಸೈನಿಕರೇ ಅಷ್ಟು ಮಂದಿ ಇದ್ದರೆಂದಾದರೆ, ಇತರರೆಷ್ಟಿರಬೇಕು? ಅಷ್ಟು ಮಂದಿ, ಅಷ್ಟು ಆನೆ, ಕುದುರೆ, ರಥಗಳು ಕುರುಕ್ಷೇತ್ರದಲ್ಲಿ ಹೇಗೆ ಜಮಾಯಿಸಿರಬೇಕು? ಕೈಬೆರಳೆಣಿಕೆಯಷ್ಟೇ ಯುದ್ಧದಲ್ಲಿ ಬದುಕಿ ಉಳಿದವರೆಂದಾದರೆ, ಸತ್ತವರ ಸಂಸ್ಕಾರವನ್ನು ಮಾಡಿದ್ದಾದರೂ ಯಾರು ಅಥವಾ ಹೇಗೆ? ಇಷ್ಟು ದೊಡ್ಡ ಸೈನ್ಯ ಯುದ್ಧದಲ್ಲಿ ಭಾಗವಹಿಸಬೇಕಾದರೆ ದೇಶದ ಹಾಗೂ ಆ ಪ್ರದೇಶದ ಜನಸಂಖ್ಯೆ ಎಷ್ಟಿರಬೇಕು? ಇದರಲ್ಲಿ ಸತ್ಯ ಎಷ್ಟು? ಉತ್ಪ್ರೇಕ್ಷೆ ಎಷ್ಟು? ಇಂತಹ ಅನೇಕ ಪ್ರಶ್ನೆಗಳು ಇತಿಹಾಸ ಸಂಶೋಧಕನನ್ನು ಪ್ರಾಮಾಣಿಕವಾಗಿ ಕಾಡಲು ಸಾಧ್ಯ. ಆಗ ಆತನಿಗೆ ನಾಸ್ತಿಕನೆಂದೋ, ಪುರಾಣದ್ರೋಹಿ ಎಂದೋ ಹಣೆಪಟ್ಟಿ ಕಟ್ಟುವುದು ಸುಲಭ. ಆಗ ಮೇಲೆ ಹೇಳಿದ ಸಂದಿಗ್ಧವು ನಮ್ಮನ್ನು ಎದುರಾಗುತ್ತದೆ. ಇದನ್ನು ಮೀರುವ ಸಾಧ್ಯತೆ ಇಲ್ಲವೇ?

ಅದು ಸಾಧ್ಯ. ಪುರಾಣಗಳನ್ನು ಅವುಗಳ ನೆಲೆಯಲ್ಲೇ ಆದರಿಸಬೇಕು. ಅವುಗಳನ್ನು ಸಂಪೂರ್ಣ ಇತಿಹಾಸವೆಂದು ಸಾಧಿಸುವ ಪ್ರಯತ್ನವನ್ನು ಕೈಬಿಡಬೇಕು. ಹಾಗೆಂದು ಅವುಗಳಲ್ಲಿ ಇತಿಹಾಸಪ್ರಜ್ಞೆಯಿದೆ; ಅವುಗಳು ಇತಿಹಾಸ ರಚನೆಗೆ ಸಹಕಾರಿ; ಆದರೆ ಅವುಗಳು ಇತಿಹಾಸವಲ್ಲ. ಪುರಾಣಗಳು ಇತಿಹಾಸವಲ್ಲ ಎಂದಾದರೆ ಅವುಗಳ ಸೌಂದರ್ಯ, ಉಪಯುಕ್ತತೆಗಳು ಕಡಿಮೆಯಾಗುವುದಿಲ್ಲ. ಭಾವುಕತೆಯ ಅಥವಾ ಆಸ್ತಿಕತೆಯ ನೆಲೆಯಲ್ಲಿ ಅವುಗಳು ನಮ್ಮಿಂದ ದೂರವಾಗುವುದಿಲ್ಲ. ರಾಮ, ಕೃಷ್ಣ, ಹನುಮಂತರು ಐತಿಹಾಸಿಕ ವ್ಯಕ್ತಿಯಾದರೆ ಮಾತ್ರ ಆರಾಧನೀಯರಾಗುವುದಲ್ಲ. ಭೀಮ, ಅರ್ಜುನ, ಭೀಷ್ಮ, ದ್ರೋಣರು ಆದರಣೀಯರಾಗಿರುವುದು ಅವರು ಐತಿಹಾಸಿಕ ವ್ಯಕ್ತಿಗಳಾಗಿ ಅಲ್ಲ. ಅವರು ಜನಮಾನಸದಲ್ಲಿ ನೆಲೆಸಿದ್ದು ಪುರಾಣಪುರುಷರಾಗಿ. ಪುರಾಣಕಥೆಗಳನ್ನು ನಿಜವಾಗಿಯೂ ಆಸ್ವಾದಿಸಬೇಕಾದರೆ ನಮ್ಮಲ್ಲಿ ಆಸ್ತಿಕನೆಲೆಯ ನಂಬಿಕೆ, ಭಾವುಕತೆ ಬೇಕು. ಆಶ್ಚರ್ಯಗಳನ್ನು ಭಾವನಾತ್ಮಕವಾಗಿ ಒಪ್ಪಿಕೊಳ್ಳುವ ಮುಗ್ಧತೆ ಬೇಕು. ನಮ್ಮ ವಿವೇಚನಾಶಕ್ತಿಯನ್ನು ಸದ್ಯಕ್ಕೆ ಬದಿಗಿರಿಸಿ ಸ್ವಂತ ಇಚ್ಛೆಯಿಂದ ನಮ್ಮ ಅಪನಂಬಿಕೆಗಳನ್ನು ಅಮಾನತಿನಲ್ಲಿಡುವ ಚೈತನ್ಯ ಬೇಕು. ಆಗಲೇ ಪುರಾಣಗಳು ನಮಗೆ ಆಪ್ಯಾಯಮಾನವಾಗುವುದು. ನಮ್ಮ ಹೃದಯವನ್ನು ಮುಟ್ಟುವುದು. ಅದು ಒಂದು ರೀತಿಯ ಸತ್ಯದರ್ಶನವೇ.  ಸತ್ಯವನ್ನು ನಾವು ಬೇರೆಬೇರೆ ನೆಲೆಯಲ್ಲಿ ಗುರುತಿಸುತ್ತೇವೆ. ಇತಿಹಾಸವು ಅದರ ಒಂದು ಬಗೆ. ಅದಕ್ಕೆ ಅದರದ್ದೇ ಆದ ಮಾನದಂಡಗಳಿವೆ. ಅದಕ್ಕೆ ಅದರದ್ದೇ ಆದ ರಚನಾಶಾಸ್ತ್ರವಿದೆ. ಅದು ಸಾಕ್ಷಿ, ಪುರಾವೆಗಳನ್ನು ಕೇಳುತ್ತದೆ. ಅವು ಇಲ್ಲದಾಗ ಇತಿಹಾಸವು ತನ್ನ ಸತ್ಯವನ್ನು ಅನಾವರಣಗೊಳಿಸಲು ಅಸಾಧ್ಯ ಎಂದು ಒಪ್ಪಿಕೊಳ್ಳಬೇಕಾಗುತ್ತದೆ. ಆದರೆ ಜೀವನದಲ್ಲಿ ಇತರ ಅನೇಕ ವಿಚಾರಗಳನ್ನು ಸತ್ಯವೆಂದು ಒಪ್ಪಿಕೊಳ್ಳುತ್ತೇವೆ. ನಾವು ಸ್ವತ: ಕಾಣದ್ದನ್ನು, ಕೇಳದ್ದನ್ನು, ಅನುಭವಿಸದ್ದನ್ನು ಸತ್ಯವೆಂದು ಒಪ್ಪಿಕೊಳ್ಳುತ್ತೇವೆ. ನಂಬಿಕೆ, ವಿಶ್ವಾಸಗಳು ಕೆಲವನ್ನು ಅಂಗೀಕರಿಸಲು ಪ್ರೇರೇಪಿಸಿದರೆ ಇನ್ನು ಕೆಲವನ್ನು ವಾಡಿಕೆಯಾಗಿ ಒಪ್ಪಿಕೊಳ್ಳುತ್ತೇವೆ. ಇನ್ನು ಎಷ್ಟೋ ಸತ್ಯಗಳು ಅಧಿಕಾರಜನ್ಯ. ಅಂದರೆ ಸತ್ಯದ ಅರ್ಥ, ಸ್ವರೂಪ ಸಂಕೀರ್ಣವಾದದ್ದು. ಅದು ನಮಗೆ ಎಟಕುವಂಥಾದ್ದು ನಮ್ಮ ಕಲ್ಪನೆಗೆ, ಅವಶ್ಯಕತೆಗೆ ಅನುಸಾರವಾಗಿ. ಸತ್ಯ ಒಂದೇ ಎಂಬ ಘೋಷಣೆಗೆ ಪಾರಮಾರ್ಥಿಕ ನೆಲೆಯಲ್ಲಿ ಅರ್ಥವಿರಬಹುದೇನೋ. ಅದೂ ನಮ್ಮನಮ್ಮ ನಂಬಿಕೆಗೆ ಸೇರಿದ್ದು. ಆದರೆ ವ್ಯಾವಹಾರಿಕವಾಗಿ ಸತ್ಯ ಒಂದೇ ಎಂಬ ಜಿಗುಟು ನಿಲುವು ಮೂಲಭೂತವಾದದ ಬುನಾದಿ. ಇದರಿಂದ ನಮ್ಮಲ್ಲಿ, ಜಗತ್ತಿನ ಇತಿಹಾಸದಲ್ಲಿ ಸಂಭವಿಸಿದ ಅಪಾಯಗಳ ಬಗ್ಗೆ ಹೆಚ್ಚಿನ ವಿವರಣೆ ಅನಾವಶ್ಯ.

ನಮಗೆ ಸೆಮೆಟಿಕ್ ಧರ್ಮಗಳೊಡನೆ ಸಂಪರ್ಕ ಏರ್ಪಟ್ಟಾಗ ನಮ್ಮ ಧಾರ್ಮಿಕ ನಂಬಿಕೆಗಳನ್ನು ಇತಿಹಾಸದ ಪರಿಭಾಷೆಯಲ್ಲಿ ಪ್ರತಿಪಾದಿಸುವ ಒತ್ತಡ ಬಂದೆರಗಿತು. ಏಸು ಹಾಗೂ ಪ್ರವಾದಿ ಮಹಮ್ಮದರನ್ನು ಇತಿಹಾಸದ ಚೌಕಟ್ಟಿನಲ್ಲಿಟ್ಟು ಆರಾಧಿಸಬಹುದು. ಅವರು ಯಾವ್ಯಾವ ಕಾಲಘಟ್ಟಗಳಲ್ಲಿ ತಮ್ಮ ಧರ್ಮವನ್ನು ಸ್ಥಾಪಿಸಿದರು ಎಂಬುದನ್ನು ತಿಳಿಯಬಹುದು. ಇದೇ ಸವಾಲನ್ನು ನಮ್ಮ ಧರ್ಮವು ಎದುರಿಸಿದಾಗ ಮೊದಲು ನಮ್ಮ ಧರ್ಮಪ್ರವರ್ತಕನು ಯಾರು ಎಂದು ನಿರ್ಧರಿಸಲು ಹೊರಟೆವು. ಆ ಮೇಲೆ ಆತ ಎಂದು ಬದುಕಿದ್ದ ಎಂಬ ಪ್ರಶ್ನೆಯೂ ಹುಟ್ಟಿಕೊಂಡು ಅದಕ್ಕೆ ಉತ್ತರವನ್ನು ಹುಡುಕುವ ಪ್ರಯತ್ನ ನಡೆಯಿತು. ಪ್ರವಾದಿ ಎಂಬ ಶಬ್ದವನ್ನು ಅವತಾರ ಎಂಬ ಅರ್ಥಕ್ಕೆ ಸಮೀಕರಿಸಿಕೊಂಡಾಗ ರಾಮ, ಕೃಷ್ಣರು ಯಾವಾಗ, ಎಲ್ಲಿ ಹುಟ್ಟಿದರು ಎಂದು ಐತಿಹಾಸಿಕವಾಗಿ ಸ್ಥಾಪಿಸುವುದು ಮುಖ್ಯವಾಯಿತು. ಆದರೆ ವಿಷ್ಣುವಿನ ಇತರ ಅವತಾರಗಳ ಬಗ್ಗೆ ಇಂತಹ ಪ್ರಶ್ನೆಗಳನ್ನು ಯಾರೂ ಕೇಳಲಿಲ್ಲ. ನಾವು ಆರಾಧಿಸುವ ಇತರ ದೇವರುಗಳ ಬಗ್ಗೆ ಇಂತಹ ಪ್ರಶ್ನೆಗಳನ್ನೆತ್ತಿದರೆ ಅವುಗಳು ಅರ್ಥಹೀನವಷ್ಟೇ ಅಲ್ಲ ಕುಹಕದಿಂದ ಕೂಡಿದ್ದು ಎಂದುಕೊಳ್ಳಬಹುದು. ಅವುಗಳಿಗೆ ಉತ್ತರ ಸಿಕ್ಕದಾಗ ನಮ್ಮ ನಂಬಿಕೆ ಕೃಶವಾಗಲಿಲ್ಲ. ಆಸ್ತಿಕತೆಯ ಬುನಾದಿ ಬೇರೆ, ಇತಿಹಾಸಪ್ರಜ್ಞೆ ಬೇರೆ. ಒಂದು ಇನ್ನೊಂದರ ಪರೀಕ್ಷಕರಾಗಲು ಹೊರಟರೆ ಎರಡಕ್ಕೂ ಆಪತ್ತು, ಅಷ್ಟೆ. ‘ಇತಿಹಾಸ-ಪುರಾಣ’ ಎಂಬ ಸೇತುವೆಯುಳ್ಳ ಪ್ರತ್ಯೇಕತೆ ಸಾಧು; ‘ಇತಿಹಾಸ=ಪುರಾಣ’ ಎಂಬ ಸಮೀಕರಣ ಸಲ್ಲ. ನಾವು ಈ ನಿಲುವನ್ನಿಟ್ಟುಕೊಂಡರೆ ಪುರಾಣಗಳಿಗೂ ಇತಿಹಾಸಕ್ಕೂ ಗೌರವವನ್ನು ಸಲ್ಲಿಸಲು ಸಾಧ್ಯ. ನಮಗೆ ಪುರಾಣಗಳೂ ಬೇಕು, ಇತಿಹಾಸವೂ ಬೇಕು. ಇದೇನು? ಮಕ್ಕಳು ಪೆಪ್ಪರಮಿಂಟಿಗೆ ಎರಡೂ ಹಸ್ತಗಳನ್ನು ಚಾಚಿದಂತಾಯಿತಲ್ಲವೇ, ಎಂದು ಕಟ್ಟಾ ವಿಚಾರವಾದಿಗಳು ಗೊಣಗಬಹುದು. ಹೀಗಾದರೆ ಅದರೊಳಗಿನ ದ್ವಂದ್ವವನ್ನು ಒಪ್ಪಿಕೊಂಡಂಥಾಗುವುದಿಲ್ಲವೇ, ಎಂಬ ಸವಾಲು ನಮ್ಮನ್ನು ಅಣಕಿಸಬಹುದು. ಆದರೆ ಈ ಪ್ರಶ್ನೆಯಿಂದ ಆತಂಕಪಡದೆ ಅದನ್ನು ವಿನೀತರಾಗಿ ಬೆನ್ನುತಟ್ಟಿ ಬೀಳ್ಕೊಡಬಹುದು. ನಮ್ಮ ಅಸ್ಥಿತ್ವ, ನಂಬಿಕೆ, ಆಲೋಚನೆಗಳಲ್ಲಿ ಅನೇಕ ಪದರುಗಳಿವೆ. ಅವುಗಳನ್ನು ಒಪ್ಪಿಕೊಂಡೇ ನಮ್ಮ ಎಲ್ಲಾ ವ್ಯವಹಾರಗಳು ನಡೆಯುವಂಥಾದ್ದು. ಏಕಾಯಾಮದ ವ್ಯಕ್ತಿ ಸೃಷ್ಟಿಸಹಜವಲ್ಲ, ಆತ ಸಮಾಜಕ್ಕೆ ಒಗ್ಗುವುದೂ ಕಷ್ಟ. ಅಂಥವನಿಂದ ಸಮಾಜಕ್ಕೆ ಹಿತವಾಗಬಹುದು ಎಂಬ ಭರವಸೆಯೂ ಇಲ್ಲ.

 

 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ಸಿನಿಮಾ ಚರಿತ್ರೆ : ಸಮಾಜ, ಸಂಸ್ಕøತಿ ಮತ್ತು ರಾಜಕಾರಣ

ಕರ್ನಾಟಕದಲ್ಲಿ ಸೂಫಿಗಳು

ಚಾರಿತ್ರಿಕ ಕೃತಿಯ ಹಲವು ಓದಿನ ಸಾಧ್ಯತೆಗಳು: ಹಿಂದ್ ಸ್ವರಾಜ್ ಮಾದರಿ