ಸಮಾಜವಾದ, ಪ್ರಜಾಸತ್ತೆ ಮತ್ತು ಅಂಬೇಡ್ಕರ್
ಸಮಾಜವಾದ, ಪ್ರಜಾಸತ್ತೆ ಮತ್ತು ಅಂಬೇಡ್ಕರ್
ಸುಮಾರು 1950 ಜನವರಿ 26 ದಾದಾಸಾಹೇಬ್ ಅಂಬೇಡ್ಕರ್ ಸಂವಿಧಾನ ಸಭೆಯಲ್ಲಿ ವಿದಾಯ ಕಾರ್ಯಕ್ರಮದಲ್ಲಿ ಅವರ
ಆಲೋಚನೆಯ ಪ್ರಜಾಸತ್ತ್ತೆಯ ಬಗೆಗೆ ಸುಮಾರು ಒಂದು ತಾಸು ಭಾಷಣ
ಮಾಡಿದ್ದರು. ಅಂಬೇಡ್ಕರ್ ಮಾಡಿದ ಈ ಭಾಷಣ ಮತ್ತು ವಿಚಾರ ಕೊನೆಗೆ ಮತಕ್ಕೆ ಹಾಕಲ್ಪಟ್ಟಿತು. ಬಾಬಾಸಾಹೇಬ್ ಕೇವಲ 5% ಮತಗಳನ್ನಷ್ಟೇ ಪಡೆದು ಹಿನ್ನಡೆ ಅನುಭವಿಸಿದ್ದರು. ಬಹುಶ: ಆಧುನಿಕ ಭಾರತದ ಚರಿತ್ರೆಯ ಅತ್ಯಂತ ದುರಂತ, ದಾರುಣ ಮತ್ತು ದು:ಖದ ದಿನವೆಂದೇ ಆ ದಿನವನ್ನು ಕರೆಯಬಹುದು. ಬಾಬಾಸಾಹೇಬ್ ತಮ್ಮ ಪ್ರಜಾಸತ್ತೆಯ ಸ್ವರೂಪವನ್ನು ಸಮಾಜವಾದೀ ನೆಲೆಗಳಲ್ಲಿ ಗುರುತಿಸಿದ್ದರು. ಅಂತೆಯೇ ಅದನ್ನು ಸೋಶಿಯಲಿಸ್ಟಿಕ್ ಡೆಮಾಕ್ರಸಿ ಎಂದೂ
ಕೂಡಾ ಕರೆದಿದ್ದರು. ಅಂಬೇಡ್ಕರ್ ಆಲೋಚನೆಯು, ಒಳ್ಳೆಯ ಸಮಾಜದ ಪರಿಕಲ್ಪನೆಗೆ ಪೂರಕವಾಗಿತ್ತು. ಬಹುಶ: ಸದ್ಯದ ಕಾಲಮಾನದಲ್ಲಂತೂ ಅಂಬೇಡ್ಕರ್ ಅವರ
ಈ ಆಲೋಚನೆಯನ್ನು ಪುನ: ಚರ್ಚಿಸಿ ಅದರ ಜಾರಿಗಾಗಿಯೂ ಆಗ್ರಹಿಸಬೇಕಾಗಿದೆ. ಭಾರತದಲ್ಲಿ ಡೆಮಾಕ್ರಸಿ ಅನ್ನುವುದು ಇದೆಯೇ? ಇದೆಯೆಂದರೆ ಯಾರಿಗಿದೆ ಎನ್ನುವ ಅರುಂಧತಿ ರಾಯ್ ಅವರ ಪ್ರಶ್ನೆ ಮತ್ತು ಅದರ ತಾತ್ವಿಕತೆಯ ಹಿನ್ನೆಲೆಯಲ್ಲಿಯೇ ನಾವು ಅಂಬೇಡ್ಕರ್ ಯೋಚನೆಯ ಸಮಾಜವಾದವನ್ನು ಚರ್ಚೆಗೆ ತರಬೇಕಾಗಿದೆ. ಅಂಬೇಡ್ಕರ್ ಅವರ ಸಮಾಜವಾದದ ಮೇಲಿನ ಡೆಮಾಕ್ರಸಿ ಎಲ್ಲರನ್ನು ಒಳಗೊಳ್ಳುವ (ಇನ್ಕ್ಲೂಸಿವ್), ಪ್ರತಿನಿಧೀಯ ಅಥವಾ ಪ್ರತಿನಿಧಿತಾತ್ಮಕ(ರೆಪ್ರಸೆಂಟೇಟಿವ್), ಕ್ರಾಂತಿಕಾರಕ, ರ್ಯಾಡಿಕಲ್ ಹಾಗೂ
ಬಂಧುತ್ವ, ಸಮಾನತೆ, ಸ್ವಾತಂತ್ರ್ಯ ಮತ್ತಿತರ ಸಮಾಜೋ-ರಾಜಕೀಯ ಮೌಲ್ಯಗಳ ಆಧಾರದ ಮೇಲೆ
ರೂಪುಗೊಂಡಿರುವಂತದ್ದು. ಬಹುಶ: ಅಂಬೇಡ್ಕರ್, ರಾಜಕೀಯ ಸಮಾನತೆ ಮತ್ತು ಸ್ವಾತಂತ್ರ್ಯಕ್ಕಿಂತಲೂ ಬಂಧುತ್ವ(ಫ್ರಟರ್ನಿಟಿ)ಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದರು. ಬಂಧುತ್ವವಿಲ್ಲದ ಸಮಾಜವು ಯಾವುದೇ ರೀತಿಯ ಸಾಮಾಜಿಕ ಮತ್ತು ರಾಜಕೀಯ ಮೌಲ್ಯ ಮತ್ತು ಆಶಯಗಳನ್ನು ಸಾಧಿಸದು ಹಾಗೂ
ಅಂತಹ ಸಮಾಜ ಮತ್ತು ಡೆಮಾಕ್ರಸಿಯು ಟೊಳ್ಳು-ಗಟ್ಟಿತನದ್ದು ಎನ್ನುವ ಪ್ರಬಲ ವಿಚಾರ ಮತ್ತು ನಂಬಿಕೆಯನ್ನು ಅಂಬೇಡ್ಕರ್ ಹೊಂದಿದ್ದರು. ಇದೇ ನೀತಿ ಮತ್ತು ತತ್ವಗಳ ಆಧಾರದ ಮೇಲೆ
ಅಂಬೇಡ್ಕರ್ ಪ್ರಣ ೀತ
ಸಮಾಜವಾದೀ ಪ್ರಜಾಪ್ರಭುತ್ವ ರೂಪುಗೊಂಡಿತ್ತು.
ಅಂಬೇಡ್ಕರ್ ಆಲೋಚನೆಯ ಸಮಾಜವಾದೀ ಪ್ರಜಾಪ್ರಭುತ್ವ, ‘ಪ್ರಜೆಗಳ ಸರ್ಕಾರ, ಪ್ರಜೆಗಳಿಗಾಗಿ ಸರ್ಕಾರ ಹಾಗೂ
ಪ್ರಜೆಗಳಿಂದ ಸರ್ಕಾರ’ ಎಂಬ ತತ್ವಕ್ಕೆ ಅನುರೂಪಿಯಾದುದು. ಆದರೆ
ಪ್ರಜಾಸತ್ತೆಯು, ಸರ್ಕಾರವನ್ನು ಮೀರಿದ ಒಂದು
ರೀತಿಯ ಪ್ರಾಥಮಿಕ ನೆಲೆಯ ಸಹಬಾಳ್ವೆಯ, ಅನುಭವವಾಗಿದೆ. ಒಂದು ರೀತಿಯಲ್ಲಿ ಇದು ಸಹ ನಿವಾಸಿ, ವ್ಯಕ್ತಿಗಳ ಬಗೆಗೆ ಇನ್ನೊಬ್ಬ ತೋರಿಸುವ ಗೌರವ ಮತ್ತು ನಮ್ರತೆಯ ಮನೋಭಾವವೂ ಆಗಿದೆ. ಇಂತಹ ಪ್ರಜಾಸತ್ತೆಯೆಂಬ ಅನುಭವವು ಸಮಗ್ರವಾದ ಸಾಮಾಜಿಕ ಸ್ಥಿತ್ಯಂತರ ಮತ್ತು ಮಾನವನ ಪ್ರಗತಿಯನ್ನು ಸಾಧಿಸುವುದು ತುಂಬಾ ಪ್ರಮುಖವಾದುದು. ಡೆಮಾಕ್ರಸಿಯ ಸಾಂಪ್ರದಾಯಿಕ ನಂಬಿಕೆಯಾದ, ‘ಕೆಟ್ಟ ಜನರು
ಅಧಿಕಾರವನ್ನು ಹೊಂದದಿರುವುದೇ ಪ್ರಮುಖವಾದ ಪ್ರಜಾಸತ್ತೆ’ ಎಂಬ ನಿಲುವಿಗಿಂತ ಇದು ತುಂಬಾ ಭಿನ್ನವಾದುದಾಗಿತ್ತು. ಅಂಬೇಡ್ಕರ್ ಒಂದು
ಸಂದರ್ಭದಲ್ಲಿ ಪ್ರಜಾಸತ್ತೆಯನ್ನು ಈ ರೀತಿಯಲ್ಲಿ ವ್ಯಾಖ್ಯಾನಿಸುತ್ತಾರೆ ಕೂಡಾ, ‘ರಕ್ತಕ್ರಾಂತಿ ರಹಿತವಾಗಿ, ಜನರ
ಸಾಮಾಜಿಕ ಮತ್ತು ಆರ್ಥಿಕ ಜೀವನದಲ್ಲಿ ಮಹತ್ತರ ಬದಲಾವಣೆಯನ್ನು ತರುವ
ಸರ್ಕಾರದ ವಿಧವೇ ಡೆಮಾಕ್ರಸಿ’ ಎಂದು.
ಸಮಾಜವಾದೀ ಪ್ರಜಾಸತ್ತೆಯ ಮೂಲ ಆಶಯವೇ ಸಾಮಾಜಿಕ ಮತ್ತು ಆರ್ಥಿಕ ಪ್ರಜಾಸತ್ತೆಗೆ ಸಿಗಬೇಕಾದ ಆದ್ಯತೆ. ಅಂಬೇಡ್ಕರ್ ಪ್ರಕಾರ ಸಾಮಾಜಿಕ ಮತ್ತು ಆರ್ಥಿಕ ಪ್ರಜಾಸತ್ತೆಯು ಯಶಸ್ವಿಯಾಗುವುದೇ ನಿಜವಾದ ಡೆಮಾಕ್ರಸಿಯು ಯಶಸ್ವಿಯಾಗುವ ಪರಿ. ರಾಜಕೀಯ ಪ್ರಾತಿನಿಧ್ಯತೆ, ಮತದಾನ ಮಾಡುವ ಹಕ್ಕು ಇರುವ ರಾಜಕೀಯ ಪ್ರಜಾಸತ್ತೆಯ ನೆಲೆಯು ಈ
ರೀತಿಯ ಸಾಮಾಜಿಕ ಪ್ರಜಾಸತ್ತೆಯ ಅಥವಾ ಸಮಾಜವಾದೀ ನೆಲೆಯನ್ನು ಹೊಂದದಿದ್ದರೆ ಯುರೋಪ್ನಲ್ಲಿ ಡೆಮಾಕ್ರಸಿಯು ಸೋತ ಸ್ಥಿತಿಯನ್ನು ಭಾರತದಲ್ಲಿಯೂ ಕಾಣಬೇಕಾಗುತ್ತದೆ ಎನ್ನುವುದು ಅಂಬೇಡ್ಕರ್ ಆಲೋಚನೆಯಾಗಿತ್ತು. ಬಹುಶ: ಭಾರತದಲ್ಲಿ ಇಂದು ರಾಜಕೀಯ ಪ್ರಜಾಸತ್ತೆ ಸೋತ ಸ್ಥಿತಿ, ಅದು
ಸಮಾಜೋ-ಆರ್ಥಿಕ ಪ್ರಜಾಸತ್ತೆಯ ಜತೆ ಸಾಧಿಸದ ಸಮನ್ವಯದ ಕಾರಣ, ಹೊಂದಿದ ವಿಫಲತೆ ಅರುಂಧತಿ ರಾಯ್ ಕೇಳುವ, ‘ಭಾರತದಲ್ಲಿ ಪ್ರಜಾಸತ್ತೆ ಇದೆಯೇ? ಯಾರಿಗಿದೆ? ಎನ್ನುವ ಸ್ಥಿತಿಯನ್ನು ನಿರ್ಮಿಸಿ, ಪುನ:
ಬಾಬಾಸಾಹೇಬ್ ಆಲೋಚನೆಯ ಪರಿಸ್ಥಿತಿಯನ್ನು ಪ್ರತ್ಯಕ್ಷೀಕರಿಸುವ ಅವಕಾಶವನ್ನು ನಿರ್ಮಿಸಿರುವುದು.
ಅಂಬೇಡ್ಕರ್ ಪ್ರಕಾರ, ‘ಸಾಮಾಜಿಕ ಮತ್ತು ಆರ್ಥಿಕ ಪ್ರಜಾಸತ್ತೆಯು ರಾಜಕೀಯ ಪ್ರಜಾಸತ್ತೆಯ ಪ್ರಭಾವೀ ಟಿಸಿಲುಗಳು. ಆದರೆ
ಇದರ ಅರಿವನ್ನು ಹೊಂದದಿರುವುದೇ ರಾಜಕೀಯ ಪ್ರಜಾಸತ್ತೆಯ ದುರಂತ ವೈಫಲ್ಯತೆಗೆ ಕಾರಣ. ಪ್ರತೀ ಐದು
ವರ್ಷಕ್ಕೊಮ್ಮೆ ಚುನಾವಣೆ, ಆಶ್ವಾಸನೆ, ಕೈಗೆ ಶಾಯಿಹಾಕಿ ಮತದಾನಮಾಡುವ ಜನ, ಅಧಿಕಾರಕ್ಕೆ ಬಂದ ಮೇಲೆ
ಎಲ್ಲವನ್ನೂ ಮರೆಯುವ ರಾಜಕೀಯ ವ್ಯವಸ್ಥೆಯೇ ಇದರ ಪ್ರತೀಕಗಳು. ಇಂತಹ ರಾಜಕೀಯ ಪ್ರಜಾಸತ್ತೆಯು ಲಿಬರ್ಟಿಯ ಬಗೆಗೆ ಯೋಚನೆ ಮಾಡುತ್ತದೆಯೇ ಹೊರತು ಸಮಾನತೆಯ ಕುರಿತಲ್ಲ. ಭಾರತದ ರಾಜಕೀಯ ಪ್ರಜಾಸತ್ತೆಯು ಕನಿಷ್ಠ ಪಕ್ಷ ಸಮಾನತೆ ಮತ್ತು ಲಿಬರ್ಟಿಯ ಸಂತುಲನವನ್ನೂ ಕೂಡಾ ಸಾಧಿಸುತ್ತಿಲ್ಲ. ಬಹುಶ:
ಯುರೋಪಿನಲ್ಲಿ ರಾಜಕೀಯ ಪ್ರಜಾಸತ್ತೆಯು ಅನುಭವಿಸಿದ ಸೋಲನ್ನೇ ಭಾರತದ ಪ್ರಜಾಸತ್ತೆಯು ಇಂದಿಲ್ಲಿ ಅನುಭವಿಸುತ್ತಿದೆ. ಈ ಕಾರಣಕ್ಕಾಗಿಯೇ ಅಂಬೇಡ್ಕರ್ ಪ್ರಜಾಪ್ರಭುತ್ವ ವೈಚಾರಿಕವಾಗಿರಬೇಕೆಂದರು. ಒಂದು ವೇಳೆ
ಪ್ರಜಾಪ್ರಭುತ್ವದ ಬಹುಮುಖ್ಯ ಸಾರ್ವಜನಿಕ ಚರ್ಚೆ ಮತ್ತು ಅಭಿಪ್ರಾಯವು ವೈಚಾರಿಕವಾಗಿರದಿದ್ದರೆ ಪ್ರಜಾಸತ್ತೆಯು ಸೋಲುತ್ತದೆ ಎನ್ನುವುದು ಇವರ ನಿಲುವಾಗಿತ್ತು. ಸಾರ್ವಜನಿಕ ಚರ್ಚೆ ಮತ್ತು ಅಭಿಪ್ರಾಯವು ಒಂದು ನೆಲೆಯ ಕಾಮನ್ ಸೆನ್ಸ್, ತಾರ್ಕಿಕವಾದ ಮತ್ತು ವಿಮರ್ಶೆಯ ನೆಲೆಯ ವಿಚಾರಣೆಯ ಮನಸ್ಥಿತಿಯಿಲ್ಲದಿದ್ದರೆ ಸಾಧಿತವಾಗುವುದಿಲ್ಲ ಎನ್ನುವುದು ಅಂಬೇಡ್ಕರ್ ಇಂಗಿತವಾಗಿತ್ತು. ಉದಾಹರಣೆಗೆ ಭಾರತದಲ್ಲಿನ ಬದುಕು ಮತ್ತು ಸಾಮಾಜಿಕ ಅನುಭವದಲ್ಲಿ ಜಾತಿಯಂತಹ ಅವೈಚಾರಿಕ ವಿಚಾರವನ್ನು ಮುಖಾಮುಖಿಯಾಗಿ ವಿರೋಧಿಸುವುದೆಂದರೆ ವೈಚಾರಿಕರಾಗಿದ್ದಾಗ ಮಾತ್ರ ಎಂಬ
ಅನುಭವ ನಮ್ಮದೂ ಕೂಡಾ
ಆಗಿದೆ. ಬಂಧುತ್ವ, ಮನುಷ್ಯನ ಘನತೆಯ ಬಗೆಗಿನ ಮನ್ನಣೆ, ಸಮಾನತೆ ಮತ್ತಿತರ ಸಂಗತಿಗಳು ವೈಚಾರಿಕವಾದ ಆಯ್ಕೆ ಮತ್ತು ಅನುಭವಗಳೂ ಆಗಿವೆಯಾದ ಕಾರಣ
ನಮ್ಮ ವೈಯಕ್ತಿಕ ಮತ್ತು ಸಾಮಾಜಿಕ ಬದುಕನ್ನು ನಿಯಂತ್ರಿಸಬೇಕಾದರೆ ವೈಚಾರಿಕರಾಗಿರಲೇಬೇಕು. ಈ
ವೈಚಾರಿಕತೆ ಮತ್ತು ಸಮಾನತೆ ಪರಸ್ಪರ ಸಂಬಂಧಿತವಾದವುಗಳು. ಇವುಗಳು ವಿಚಾರಶೀಲವಾಗಿ ಜಾತಿಯಂತಹ ಅವೈಚಾರಿಕ ಅನುಭವ ಮತ್ತು ಅಪ್ರಜಾಸತ್ತೆ ಸೋಲುವುದಿದ್ದರೆ ಪ್ರಜಾಸತ್ತೆ ಮತ್ತು ವೈಚಾರಿಕತೆಗೆ ಅವು ನಿಜವಾಗಿಯೂ ಶಕ್ತಿ ಒದಗಿಸಿದ ಹಾಗೆ. ಅಂಬೇಡ್ಕರ್ ನಿರೂಪಿಸುವ ವೈಚಾರಿಕತೆ ಯುರೋಪಿನ ಎರವಲಲ್ಲ. ಅದು ಯುರೋಪ್ ಹಾಗೂ ಡೆಕಾರ್ಟ್ ಪ್ರಣ
ೀತ ವೈಚಾರಿಕತೆಗಿಂತಲೂ ಮೊದಲಿನ, ಬುದ್ಧ ತನ್ನ ಶಿಷ್ಯರಿಗೆ ಅನುಸರಿಸಲು ಹೇಳಿದ್ದ, ಯಾವುದನ್ನು ಆಧಾರವಿರದೆ ನಂಬದಿರಿ’ ಎಂಬ
ಕ್ರಮದ ಪ್ರತೀಕ. ಬುದ್ಧನೇ ಹೇಳಿದ ಹಾಗೆ ಮಾನವ
ಬದುಕಲು ಬೇಕಾದ ಪ್ರಮುಖ ಆಹಾರವೇ ಅರಿವು, ಪ್ರಶ್ನೆ ಹಾಗೂ ತಿಳುವಳಿಕೆ. ಬಹುಶ:
ಭಾರತದ ಇಂದಿನ ಪ್ರಜಾಸತ್ತೆಯ ಮೇಲೆ ಒದಗಿರುವ ದೊಡ್ಡ ಅಪಾಯವೇ, ಈ ವೈಚಾರಿಕತೆಯ ನಿರಾಕರಣೆಯ ಪ್ರಯತ್ನ ಮತ್ತು ಅನುಭವಗಳು. ವಿಶೇಷವಾಗಿ ಉಗ್ರ
ಬಲಪಂಥದ ರಾಜಕಾರಣ ಹಾಗೂ
ಅವುಗಳ ಗರ್ಭವಾದ ಜೀವ
ವಿರೋಧವು ಇಂತಹ ಸಾಧ್ಯತೆಯನ್ನು ಸೃಷ್ಟಿಸುತ್ತಿದೆ. ಇವುಗಳು ಒಂದು ರೀತಿ ಉನ್ನತ ಜಾತಿಗಳೆಂದು ಕರೆಯಲ್ಪಡುವ ಸಮೂಹಗಳು ಸಾಧಿಸುತ್ತಿರುವ ಹಣಾಹಣ ಮತ್ತು ಮೇಲಾಟವೂ ಆಗಿದೆ. ಒಂದು ಸಾಂಪ್ರದಾಯಿಕ, ಊಳಿಗಮಾನ್ಯೀಯ ಸಮಾಜ ಹಾಗೂ
ಅದರ ಅಸಮಾನೀಯ ಯಾಜಮಾನ್ಯೀಯ ಹಾಗೂ ಜೀವವಿರೋಧೀ ಕ್ರಮವನ್ನು ಕಾಪಿಡುವ ಕ್ರಮವಾಗಿಯೂ ಕೂಡಾ ಇದನ್ನು ಗಮನಿಸಬಹುದು. ಈ ರೀತಿಯಲ್ಲಿ ಬ್ರಾಹ್ಮಣ ೀಯ ಕ್ರಮಗಳು, ಧರ್ಮವನ್ನು ರಾಜಕಾರಣಕ್ಕಾಗಿ ಬಳಸುವ ಮಾದರಿಗಳೂ ಕೂಡಾ ಈ ರೀತಿಯ ಸಮಸ್ಯೆಯನ್ನು ಸೃಷ್ಟಿಸುತ್ತವೆ. ಇಂತಹ ಪ್ರಯತ್ನಗಳು ಒಂದು ವಿಮರ್ಶೆಯ ಕೊರತೆಯ ಹಾಗೂ ವೈಚಾರಿಕ ಯೋಚನಾಕ್ರಮದ ದಿವಾಳಿತನವನ್ನೂ ತೋರಿಸುತ್ತವೆ. ಆಧುನಿಕ ಗೋಗ್ರಹಣಗಳೆಂದು ಕರೆಯಬಹುದಾದ ಗೋದಾಳಿ, ಲವ್ಜಿಹಾದ್, ರಾಮನ
ಹುಟ್ಟಿದಸ್ಥಳ, ಜೋತಿಷ್ಯ, ಸಂಸ್ಕøತ, ಕೇಸರೀಕರಣ, ಧರ್ಮದ ಹೆಸರಿನಲ್ಲಿ ಮಾರಣಹೋಮ ಮುಂತಾದುವು ಇಂತಹ ಪ್ರಯೋಗಗಳಾಗಿಯೂ ಕಾಣ ಸುತ್ತದೆ.
ಅಂಬೇಡ್ಕರ್ ಪ್ರತಿಪಾದಿಸಿದ ಸಮಾಜವಾದೀ ಪ್ರಜಾಸತ್ತೆಯ ಬಹುಮುಖ್ಯವಾದ ಇನ್ನೊಂದು ಅಂಶವೆಂದರೆ ನೈತಿಕತೆ ಹಾಗೂ ಅದರ
ಮೇಲಿನ ಸಾಮಾಜಿಕ ಪ್ರಕ್ರಮ. ಇದನ್ನು ಅವರು ಶುದ್ಧ ಸಂಪ್ರದಾಯವಾದೀ ನೆಲೆಯಲ್ಲಿ ನಿರ್ವಚಿಸದೆ ಸಂವಿಧಾನದ ಚೌಕಟ್ಟು ಹಾಗೂ
ತತ್ವಗಳೆಡೆಯಲ್ಲಿ ವ್ಯಾಖ್ಯಾನಿಸುತ್ತಾರೆ. ಅಂತೆಯೇ ಇದನ್ನು ‘ಸಾಂವಿಧಾನಿಕ ನೈತಿಕತೆ (ಕಾನ್ಸ್ಟಿಟ್ಯೂಶನಲ್ ಮೊರಾಲಿಟಿ) ಎಂದೂ
ಕರೆಯುತ್ತಾರೆ. ಇಲ್ಲಿ ಮುಖ್ಯವಾಗಿ ನೈತಿಕತೆ ಎಂದರೆ ಸೋಶಿಯಲ್ ಎತಿಕ್ಸ್ ಎಂದೂ, ಅದು
ಸಮಾನತೆ ಮತ್ತು ಸ್ವಾತಂತ್ರ್ಯವನ್ನು ಚಾಲಿಸುವ ಶಕ್ತಿ ಎಂದೂ ಅಭಿಪ್ರಾಯಿಸುತ್ತಾರೆ. ಇಂತಹ
ನೀತಿ ಅಥವಾ ನೈತಿಕತೆಯೇ ಸಾಮಾಜಿಕ ವೈಚಾರಿಕತೆಯಾಗಿದೆ. ಈ ನೈತಿಕತೆಯು ಸಾಮಾಜಿಕ ವಿಶ್ವಾಸದ ಭಾಗವೂ ಆಗಿ ಅವೈಚಾರಿಕತೆ, ವ್ಯಕ್ತಿಗತ ವೈಚಾರಿಕತೆ ಹಾಗೂ ಕೊನೆಯದಾಗಿ ಸಾಮಾಜಿಕ ವೈಚಾರಿಕತೆಯ ಸ್ಥಿತಿಯನ್ನು ಸಾಧಿಸುವುದಾಗಿದೆ. ಈ ಮೂರನೆಯ ವಿಧವು ಒಂದು ರೀತಿಯ, ‘ ಹ್ಯಾಬಿಟ್ ಆಫ್ ತಾಟ್’ ಕೂಡಾ ಆಗಿದೆಯೆಂಬುದು ಇಲ್ಲಿ ಮುಖ್ಯವಾಗಿದೆ. ಅಂದರೆ ಸಮಾಜ
ಅದನ್ನು ಒಂದು ಅಭ್ಯಾಸದ ಹಾಗೆ ರೂಢಿಸಿಕೊಳ್ಳಬೇಕೆಂಬುದು ಅವರ ಆಳೋಚನೆಯಾಗಿತ್ತು. ಈ
ನೆಲೆಯಲ್ಲಿ ಅಂಬೇಡ್ಕರ್ ಅವರು
ಮಾಡಿದ ಜಾತಿಯ ಬಗೆಗಿನ ಹೆಚ್ಚಿನ ಟೀಕೆಗಳು ಸಾಮಾಜಿಕ ವೈಚಾರಿಕತೆ ಹಾಗೂ ನೈತಿಕತೆಯ ಮೇಲೆಯೇ ರೂಪುತಳೆದಂತವುಗಳು. ಈ ನೆಲೆಯಲ್ಲಿ ಅಂಬೇಡ್ಕರ್ ಸಮಾಜವಾದ ನಿಂತಿರುವುದು ನೀತಿಯ ಮೇಲೆಯೇ ಎಂಬುದನ್ನು ನಾವು ಗ್ರಹಿಸಬಹುದಾಗಿದೆ. ಈ ಕಾರಣಕ್ಕಾಗಿಯೇ ಜಾತಿಯಂತಹ ಅನಿಷ್ಠ ಒಂದು ಒಳ್ಳೆಯ ಸಾರ್ವಜನಿಕ ಅಭಿಪ್ರಾಯವನ್ನೇ ಭಾರತದಲ್ಲಿ ಸೃಷ್ಟಿಸಲಿಲ್ಲವೆಂದೂ ಅಂಬೇಡ್ಕರ್ ಅಭಿಪ್ರಾಯಿಸುತ್ತಾರೆ.
ಅಂಬೇಡ್ಕರ್ ತಮ್ಮ ಸಮಾಜವಾದೀ ಪ್ರಜಾಸತ್ತೆಯನ್ನು, ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಆಯಾಮಗಳು ಸರಿಸಮವಾಗಿ ಸಮನ್ವಯ ಮತ್ತು ಪ್ರತಿನಿಧಿತಗೊಂಡ ಬಗೆಯೊಂದೇ ತಿಳಿಯುತ್ತಾರೆ. ಇದರ
ಮೂರೂ ನೆಲೆಗಳೂ ಅತಿ
ಪ್ರಮುಖವೆಂದೂ, ರಾಜಕೀಯ ಪ್ರಜಾಸತ್ತೆಯ ವಿಕ್ರಮ, ಉಳಿದ ನೆಲೆಗಳನ್ನು ವೈಚಾರಿಕವಾಗಿ ಹಾಗೂ ಅನುಭವದ ನೆಲೆಯಿಂದ ಸೋಲಿಸುತ್ತದೆಯೆಂದೂ ಘಂಟಾಘೋಷವಾಗಿ ಹೇಳಿದ್ದರು. ಬಹುಶ
ಅಂತಹ ಊಹೆ ಇಂದು
ಸತ್ಯವಾಗಿದೆ. ಭಾರತದ ಪ್ರಜಾಸತ್ತೆ ಬರೀ ಒಂದು ಮತದಾನದ ದಿನದಂದು ಕೈ ಬೆರಳಿಗೆ ಶಾಯಿ ಹಾಕಿಸಿಕೊಂಡು ಸಂಭ್ರಮಿಸಿ, ನಂತರದ 5 ವರ್ಷಗಳಲ್ಲಿ ತಾವು ಆರಿಸಿದ ಪ್ರತಿನಿಧಿ ಮತ್ತು ಪ್ರಜಾಸತ್ತೆಯನ್ನೂ ನೋಡದ
ಮತ್ತು ಅನುಭವ ಸಾಧಿಸದ ಸ್ಥಿತಿಯಾಗಿದೆ. ಸ್ವತಂತ್ರ ಭಾರತದಿಂದ ಹಿಡಿದು ಇಲ್ಲಿಯವರೆಗೂ ಸರ್ಕಾರ ಮತ್ತು ರಾಜಕೀಯ ವ್ಯವಸ್ಥೆಗಳು ಪ್ರತಿನಿಧಿಸಿದ್ದು ಬಹುತೇಕ ಉಳ್ಳವರ, ಬಂಡವಾಳಶಾಹೀ ಮತ್ತು ನವ-ಊಳಿಗಮಾನ್ಯೀಯ ಪ್ರಭುಗಳನ್ನು. ಸ್ವತಂತ್ರಭಾರತವು ಮತದಾನ ಮತ್ತು ಶಾಯಿ ಹಾಕುವ ರಾಜಕೀಯ ಸಮಾನತೆ ಹಾಗೂ ಪ್ರಜಾಸತ್ತೆಯನ್ನಷ್ಟೇ ಇಲ್ಲಿಯ ಜನರಿಗೆ ನೀಡಿದೆ. ದಲಿತರು, ಬುಡಕಟ್ಟು ಜನ, ರೋಗಿಗಳು, ಭಿಕ್ಷುಕರು, ನಿರ್ಗತಿಕರು, ದರಿದ್ರರು, ನಿರ್ವಸಿತರು, ಚಿಂದಿ ಆಯುವ ಮಕ್ಕಳು ಮತ್ತಿತರರೆಂದು ಹೆಸರಿಸಬಹುದಾದ ಬಹುಸಂಖ್ಯೆಯ ಹತಭಾಗ್ಯರನ್ನು ಒಳಗೊಂಡಿಲ್ಲ. ಅಂಬೇಡ್ಕರ್ ಈ
ಕಾರಣದಿಂದಲೇ, ಈ ವರ್ಗ
ಮತ್ತು ಸಮುದಾಯಗಳನ್ನು ಪ್ರತಿನಿಧಿಸುವ ಸೋಶಿಯಲಿಸ್ಟ್ ತತ್ವ ಚಿಂತನೆಗಳನ್ನು ರಾಜ್ಯ ನಿರ್ದೇಶಕ ತತ್ವಗಳಲ್ಲಿ ಅಳವಡಿಸಿದ್ದರು. ಬಹುಶ: ಅಂಬೇಡ್ಕರ್ ಅವರಿಗೆ ಅತಿ ಮೆಚ್ಚಿನ ಸಂವಿಧಾನದ ಒಂದು ಆಯಾಮದಲ್ಲಿ ಅದು ಒಂದಾಗಿತ್ತು. ಅವರೇ ಹೇಳಿದಂತೆ, ‘ರಾಜ್ಯ ನಿರ್ದೇಶಕ ತತ್ವ
ರಾಜಕೀಯ ಪ್ರಜಾಸತ್ತೆಯನ್ನು ನಿಯಂತ್ರಿಸುವ ಮತ್ತು ಪ್ರತೀ ಸರ್ಕಾರವೂ ಕೂಡಾ ಆರ್ಥಿಕ-ಸಾಮಾಜಿಕ ಪ್ರಜಾಸತ್ತೆಯನ್ನು ಸಾಧಿಸುವಲ್ಲಿನ ಕೀಲಿ ಕೈಯಾಗಿದೆ’. ಆದರೆ ದುರಂತವೆಂದರೆ ಅಂಬೇಡ್ಕರ್ ಕನಸಾದ ಈ ಆಲೋಚನೆಯನ್ನು ಸ್ವತಂತ್ರ ಭಾರತದಲ್ಲಿ ಸಂಪೂರ್ಣ ಸೋಲಿಸಲಾಯ್ತು. ಘನ ಸೋಶಿಯಲಿಸ್ಟ್ ಹಿನ್ನೆಲೆಯಿಂದ ಬಂದಿದ್ದ ನೆಹರೂ ಕೂಡಾ ಇದಕ್ಕೆ ಅಪವಾದವಾಗಲಿಲ್ಲ. ನೆಹರೂ ಸಮಾಜವಾದ, ಭಾರತದಲ್ಲಿ ನಿಜವಾದ ಸಮಾಜವಾದೀ ಪ್ರಜಾಸತ್ತೆಯನ್ನು ಸೋಲಿಸಲು ಇದ್ದ
ಪ್ರಮುಖ ಕಾರಣವೂ ಆಯಿತು. ಈ ಕಾರಣದಿಂದಲೇ ಭಾರತ, ಅತಿ
ದೊಡ್ಡ ಡೆಮಾಕ್ರಸಿ ಎಂಬ
ಆತ್ಮರತಿಯೊಂದಿಗೆ ಅರೆಬೆಂದಾವಸ್ಥೆಯನ್ನು ಹೊಂದಿತು. ಅಂಬೇಡ್ಕರ್ ತಮ್ಮ ಸಮಾಜವಾದೀ ಪ್ರಜಾಸತ್ತೆಯ ತಾತ್ವಿಕ ಆಶಯಗಳನ್ನು ಸಂವಿಧಾನ ಸಭೆಯಲ್ಲಿ ತಾವು ಮಂಡಿಸಿದ ಪ್ರಸಿದ್ಧ ‘ಸ್ಟೇಟ್ಸ್ ಅಂಡ್
ಮೈನಾರಿಟೀಸ್’ ಎಂಬ
ಆಶಯ ಭಾಷಣದಲ್ಲಿ ಅದರ
ಮುಖ್ಯ ಆಶಯವೇ ರಾಜ್ಯ ನಿರ್ದೇಶಕ ತತ್ವಗಳು ಎನ್ನುವ ರೀತಿಯಲ್ಲಿ ಮಂಡಿಸುತ್ತಾರೆ. ಆದರೆ ದುರಂತವೆಂದರೆ ಸ್ವತಂತ್ರ ಭಾರತದ ಯಾವ
ರಾಜ್ಯವೂ ರಾಜಕೀಯ ವ್ಯವಸ್ಥೆಯೂ ಕೂಡಾ ಅಂಬೇಡ್ಕರ್ ಸಮಾಜವಾದೀ ಆಶಯದ ದ್ಯೋತಕವಾದ ನಿರ್ದೇಶಕ ತತ್ವಗಳನ್ನು ಮಾನ್ಯ ಮಾಡಲಿಲ್ಲ. ಸಾಮಾಜಿಕ ನ್ಯಾಯ ಮತ್ತು ಒಳಗೊಳ್ಳುವ ಪ್ರಜಾಸತ್ತೆಯನ್ನು ಈ ಮೂಲಕ
ಸಾಧಿಸಬಹುದಾಗಿತ್ತಾದರೂ ಕೂಡಾ ಇವುಗಳನ್ನು ಯಾರೂ ನ್ಯಾಯಾಲಯಗಳ ಮೇಲೇರಿ ಪ್ರಶ್ನಿಸುವಂತಿಲ.್ಲ
ಸಂವಿಧಾನ, ರಾಜಕೀಯ ಬದುಕು ಮತ್ತು ದೈನಂದಿನ ಪ್ರಜಾಸತ್ತೆಯ ಅನುಭವವಾಗಬೇಕಿದ್ದ ದೂರದರ್ಶಿತ್ವದ, ಮತ್ತು ಒಳಗೊಳ್ಳುವ ನೆಲೆಯ, ಒಂದು ನಿಜವಾದ ಪ್ರತಿನಧೀಯ ದೃಷ್ಟಿ ಮತ್ತು ಅನುಭವವನ್ನು ಈ ಮೂಲಕ
ಭಾರತದಲ್ಲಿ ನಿರಾಕರಿಸಲಾಗಿದೆ. ಈ ಕಾರಣದಿಂದಲೇನೇ ಸ್ವತಂತ್ರ ಭಾರತದಲ್ಲಿ ಪ್ರಜಾಸತ್ತೆ ಬೆಳೆಯಲೂ ಇಲ್ಲ
ಮತ್ತು ಹಾಳಾಗಲೂ ಇಲ್ಲ.
ಆದರೆ ಅದು ಟೋಪಿ-ಶಾಯಿ-ಆಶ್ವಾಸನೆಯ ದುರಂತ ಮತ್ತು ವ್ಯಂಗ್ಯದ ಪ್ರಕರಣ ಆಗಿ ಇಂದಿಗೂ ಮುಂದುವರಿಯುತ್ತಿದೆ. ಮತ್ತದೇ ಅಂಬೇಡ್ಕರ್ ಹೇಳಿರುವ ಪ್ರಜಾಸತ್ತೆಯ ವೈರುಧ್ಯ ಮತ್ತು ಬಿಕ್ಕಟ್ಟು ಮುಂದುವರಿಯುತ್ತಿದೆ.
ಇಷ್ಟಾಗ್ಯೂ ಕೂಡಾ ಭಾರತದಲ್ಲಿನ ಪ್ರಜಾಸತ್ತೆಯ ಭವಿಷ್ಯ ಸಂಪೂರ್ಣ ನಿರಾಶಾದಾಯಕ ಎನ್ನುವಂತಿಲ್ಲ. ಆದರೆ ಅದು
ಸಮಾಜವಾದದ ಸಾಮಾಜಿಕ ಬದುಕನ್ನು ಸಾಧಿಸಿ ಪ್ರಜಾಸತ್ತೆಯನ್ನು ಸಾಧಿಸುತ್ತದೆ ಎನ್ನುವ ಹಾಗಿಲ್ಲವಾದರೂ ಕೂಡಾ
ಕೆಲವು ಭರವಸೆಯ ಅನುಭವಗಳು ಮಿಂಚಾಗಿ ಮುಖ್ಯವಾಗುತ್ತವೆ. ಭಾರತದ ಪ್ರಜಾಸತ್ತೆಯು ಇಂದು
ಹೊಸ ಸಮಸ್ಯೆಗಳನ್ನು ಕೂಡಾ ಎದುರಿಸುತ್ತದೆ. ಉಗ್ರ
ಬಲಪಂಥತೆ, ಧರ್ಮರಾಜಕಾರಣ, ನವ ಬಂಡವಾಳಶಾಹೀ, ಹೆಚ್ಚುತ್ತಿರುವ ಆರ್ಥಿಕ ಅಸಮಾನತೆ, ಮಿಲಿಟರಿಸಂನ ಏಳ್ಗೆ ಹಾಗೂ
ರಾಜಕೀಯ ಪಕ್ಷಗಳ ಅಧಿಕಾರದಾಹ ಮತ್ತು ಭ್ರಷ್ಠಾಚಾರಗಳು ಅವುಗಳಲ್ಲಿ ಪ್ರಮುಖವಾದವುಗಳು. ಇದೇ
ಹೊತ್ತಿಗೆ ಭಾರತದಲ್ಲಿ ಪ್ರಜಾಸತ್ತಾತ್ಮಕ ಕಾಲ-ದೇಶ ಮತ್ತು ಸಂದರ್ಭಗಳೂ ಹೆಚ್ಚುತ್ತಿವೆ. ಇದರ ಜತೆಯಲ್ಲಿಯೇ ವಿದ್ಯಾರ್ಥಿ, ರೈತ, ಕಾರ್ಮಿಕ ಮತ್ತು ಬುಡಕಟ್ಟು ಚಳುವಳಿಗಳಂತಹ ವೈವಿಧ್ಯದ ಸಾಮಾಜಿಕ ಚಳುವಳಿಗಳು, ಪಂಚಾಯತ್ರಾಜ್ ವ್ಯವಸ್ಥೆಯ ಸಕ್ರಿಯತೆ ಮತ್ತು ತಿದ್ದುಪಡಿಗಳು, ಆಧುನಿಕ ಸಂವಹನ ಸಾಧನಗಳು, ಸೋಶಿಯಲ್ ಮೀಡಿಯಾಗಳು ಮುಂತಾದವು ಇಂತಹ ಸಾಧ್ಯತೆಗಳಾಗಿ ನಮ್ಮ
ಮುಂದೆ ಕಾಣ ಸುತ್ತದೆ. ಇದರ ಜತೆಗೆ ಮಾಹಿತಿ ಹಕ್ಕು ಕಾಯ್ದೆಯ ಸಕ್ರಿಯತೆ, ರಾಜಕಾರಣ ಮತ್ತು ಸಾರ್ವಜನಿಕ ಬದುಕಿನ ವಿಭಿನ್ನ ಆಯಾಮಗಳಲ್ಲಿ ಮಹಿಳೆಯ ಪ್ರತಿನಿಧಿತ್ವ, ಸ್ಥಳೀಯ ಸರ್ಕಾರಗಳಲ್ಲಿ ಸಮುದಾಯಗಳ ಭಾಗೀದಾರಿಕೆ, ಅಂಚಿಗೆ ಸರಿದ
ಸಮುದಾಯಗಳಲ್ಲೂ ಇಳಿಯುತ್ತಿರುವ ಮೂಲಭೂತ ಅವಶ್ಯಕತೆಗಳು, ಶಿಕ್ಷಣ ಮತ್ತು ಇದೆಲ್ಲಕ್ಕಿಂತ ಹೆಚ್ಚಾಗಿ ಪ್ರಜಾತಂತ್ರೀಯ ಪ್ರಕ್ರಿಯೆಗಳಲ್ಲಿ ಸಾಮಾನ್ಯ ಜನರು
ಹೆಚ್ಚು ಹೆಚ್ಚು ಭಾಗವಹಿಸುತ್ತಿರುವುದೇ ಮುಂತಾದ ಅನುಭವಗಳು ಭಾರತ ಒಂದು
ಅಸಹಜ ರಾಷ್ಟ್ರ ಮತ್ತು ಆಶಾವಾದೀ ರಾಷ್ಟ್ರ ಎಂಬ
ಅನುಭವವನ್ನೂ ಮನಗಾಣ ಸುತ್ತಿವೆ. ಬಹುಶ: ಇವುಗಳೇ ಒಂದು
ರೀತಿ ಭವಿಷ್ಯದ ಅಲೆಗಳಾಗಿ ಗೋಚರಿಸುತ್ತಿವೆ. ಬಹುಶ: ಅಂಬೇಡ್ಕರ್ ಅವರು ಯೋಚಿಸಿದ ಕ್ರಾಂತಿಕಾರಕ ಪ್ರಜಾಸತ್ತೆಯನ್ನು ಮಗದೊಮ್ಮೆ ಹೊಸ
ಸ್ವರೂಪದಲ್ಲಿ ಅವಿಷ್ಕರಿಸಬೇಕಿದೆ. ವರ್ತಮಾನದ ವಿದ್ಯಮಾನಗಳೆಡೆಯಲ್ಲಿ ನಾವದನ್ನು ಪುನರ್ಶೋಧಿಸಬೇಕಿದೆ. ಅಂಬೇಡ್ಕರ್ ಅಂತೂ
ನಾವಿರುವ ಸಮಯಕ್ಕಿಂತ ತೀರಾ
ಮುಂದಿದ್ದರು. ನಮ್ಮ ಇಂದಿನ ಮತ್ತು ಮುಂದಿನ ಪ್ರಜಾಸತ್ತೆ ಬರೀ ಸಾಂವಿಧಾನಿಕ ಮತ್ತು ರಾಜಕೀಯ ಪ್ರಜಾಸತ್ತೆಯಷ್ಟೇ ಆಗಿರಬಾರದು. ಇದಕ್ಕಾಗಿ ನಾವು ಹೊಸ ರೀತಿಯ ಪ್ರಜಾತಾಂತ್ರಿಕ ಆಚರಣೆಗಳನ್ನು ಶೋಧಿಸಬೇಕಾಗಿದೆ, ಮತ್ತಂತಹ ಆಚರಣೆಗಳಲ್ಲಿ ಸಾಮಾನ್ಯ ಜನರು ಹೆಚ್ಚು ಭಾಗವಹಿಸಿ ಅದರ ಜತೆಗೆ ಆರ್ಥಿಕ ಪ್ರಜಾಸತ್ತೆಯ ಭಾಗಾಳುಗಳೂ ಕೂಡಾ
ಆಗಬೇಕು. ಪುನ: ಇಂತಹ
ಭಾಗವಹಿಸುವಿಕೆ ವ್ಯಕ್ತಿಗತ ನೆಲೆಯಿಂದ ಸಾಮುದಾಯಿಕ ಹಾಗೂ ಸಂಘಟಿತ ನೆಲೆಗೂ ವಿಸ್ತರಣೆ ಕಂಡುಕೊಳ್ಳಬೇಕು. ಅದು
ಒಂದು ರೀತಿ ಸಾಂಸ್ಥಿಕ-ಸಂಘಟಿತ ಆ್ಯಕ್ಟಿವಿಸಂನ ನೆಲೆಯನ್ನೂ ಕೂಡಾ
ಕಂಡುಕೊಳ್ಳಬೇಕಾಗಿದೆ. ಅದರ ವಾದಗಳು ಗಟ್ಟಿಯಾಗಬೇಕು, ಸಾರ್ವಜನಿಕ ಅಭಿಪ್ರಾಯದ ಶಕ್ತಿ ಸಂಚಯ ಹೆಚ್ಚಬೇಕು, ಸಂವಹನ ಸಾಧ್ಯತೆಗಳು ಮತ್ತದರ ಪರಿಣಾಮಕಾರಿತನಗಳೂ ಹೆಚ್ಚಬೇಕು. ಇದೆಲ್ಲದರ ಜತೆಗೆ ಅಂಬೇಡ್ಕರ್ ಅವರೇ ಹೇಳಿದ ನೀತಿ
ಮತ್ತು ಸಾಮಾಜಿಕ ನೀತಿ
ಕೂಡಾ ಹೆಚ್ಚಿ ಒದಗಬೇಕು. ಜನರ ಬದುಕಿನಲ್ಲೂ ಕೂಡಾ ಕ್ರಾಂತಿಕಾರಕ ಮನೋಭಾವ ಮೂಡಿ ಬಂದು
ವಿಷಮತೆ ಮತ್ತು ತರತಮಗಳು ಸಾಯಬೇಕು. ಲಿಂಗಸಂವೇದನೆ ಮತ್ತು ಸಮಾನತೆ, ಕಾಶ್ಮೀರದ ಗಾಯಕ್ಕೆ ಮದ್ದು ಶಾಂತಿ, ಸಾರ್ವತ್ರಿಕ ಶಿಕ್ಷಣ, ಭೃಷ್ಟಾಚಾರ ನಿರ್ಮೂಲನೆ, ನಿಶ್ಶಸ್ತ್ರೀಕರಣ, ಹಸಿವಿನ ವಿರುದ್ಧ ಸಮರ ಮುಂತಾದವೇ ಇಂತಹ
ನಡೆಗಳಾಗಬೇಕು. ಒಂದು ದೇಶದ
ಪ್ರಜಾಸತ್ತೆ ತೀರಾ ಡಬ್ಲ್ಯು.ಟಿ.ಒ, ಬ್ರೆಟ್ಟನ್ ವುಡ್ಸ್ ಮುಂತಾದ ಅಂತಾರಾಷ್ಟ್ರೀಯ ರಾಜಕಾರಣ ಮತ್ತು ಆರ್ಥಿಕತೆಯನ್ನು ನಿರಾಕರಿಸುತ್ತಾ, ಭಾರತದ್ದೇ ಆದ
ಜನರ ಮತ್ತು ಸಮುದಾಯದ ಕಲ್ಯಾಣ ಮಾರ್ಗವಾದ ರಾಜ್ಯ ನಿರ್ದೇಶಕ ತತ್ವಗಳನ್ನೂ ರಾಷ್ಟ್ರದ, ಅತ್ಯಂತ ಮೂಲ ತತ್ವಗಳೆಂದು ಘೋಷಿಸುವ ನೆಲೆ
ಮತ್ತು ಅನಿವಾರ್ಯತೆಯನ್ನು ಕಂಡುಕೊಂಡಾಗಲಷ್ಟೇ ಭಾರತ ಮತ್ತು ಪ್ರಜಾಸತ್ತೆ ಭವಿಷ್ಯವನ್ನು ಕಂಡುಕೊಂಡೀತು.
ಪ್ರದೀಪ
ಕುಮಾರ
ಶೆಟ್ಟಿ
ಕೆ,
I read the article. A profound article with deep insights- very thought-provoking and awakening.
ಪ್ರತ್ಯುತ್ತರಅಳಿಸಿ