ದಾಮೋದರ ಧರ್ಮಾನಂದ ಕೊಸಾಂಬಿ : ಭಾರತೀಯ ಚರಿತ್ರಶಾಸ್ತ್ರದ ಮಾದರಿ ಸ್ಥಿತ್ಯಂತರ


ವೈಜ್ಞಾನಿಕ ಜ್ಞಾನದಲ್ಲಿ ಕ್ರಾಂತಿಯಾಗುವುದು ಬರಿಯ ಮಾಹಿತಿ ಸಂಗ್ರಹದಿಂದಲ್ಲ, ಬದಲು ಒಂದು ಮಾದರಿ ಬದಲಾವಣೆ, ಸ್ಥಿತ್ಯಂತರವಾಗುವುದರ ಮೂಲಕ. ಇದರಿಂದ ನಮ್ಮ ಪ್ರಾಕ್ ಕಲ್ಪನೆ,ಊಹೆ ಅಥವಾ ಹೈಪೋತಿಸೀಸ್ಗಳನ್ನು ಪರೀಕ್ಷಿಸಿ ಪರಿಹರಿಸುವುದರ ಜತೆಗೆ ಹೊಸ ರೀತಿಯ ಪ್ರಶ್ನೆಗಳನ್ನು ಹಾಕುವುದೂ ಕೂಡಾ ಸಾಧ್ಯ. ಪ್ರಖ್ಯಾತ ಚಿಂತಕ ಥಾಮಸ್ ಕೊಹ್ನ್ ಮಾತು ವಿಜ್ಞಾನಕ್ಕೆ ಅನ್ವಯಿಸೋ ಹಾಗೆ ಇತಿಹಾಸಕ್ಕೆ ಕೂಡಾ. ಭಾರತೀಯ ಇತಿಹಾಸ ರಚನೆ ಅಥವಾ ಚರಿತ್ರಶಾಸ್ತ್ರದಲ್ಲೂ ಕೂಡಾ ರೀತಿಯ ಮೂರು ಮಾದರಿ ಸ್ಥಿತ್ಯಂತರಗಳಿವೆ. ಜೇಮ್ಸ್ ಮಿಲ್ ಮೊದಲನೆಯ ಮಾದರಿಯಾಗಿ, ಭಾರತೀಯ ಇತಿಹಾಸವನ್ನು ಹಿಂದೂ-ಹಿಂದುಳಿಕೆ, ಮುಸ್ಲಿಂ-ಸ್ಥಗನ ಮತ್ತು ಬ್ರಿಟೀಷ್ ಎಂದು ವಿಭಾಗೀಕರಿಸಿದ. ವಿನ್ಸೆಂಟ್ ಸ್ಮಿತ್ನದು ಎರಡನೆಯ ಮಾದರಿ ಪರಿವರ್ತನೆ, ‘ವಂಶಗಳ ಏಳುಬೀಳು ಮತ್ತು ಕ್ರೊನಾಲಜಿ ಅಥವಾ ಕಾಲಾನುಕ್ರಮಣಿಕೆ ಸ್ವರೂಪಗಳಿಗೆ ಒತ್ತು ನೀಡಿ, ಮೂರನೆಯ ಸ್ಥಿತ್ಯಂತರೀಯ ಮಾದರಿ ಪರಿಕ್ರಮ ದಾಮೋದರ ಧರ್ಮಾನಂದ ಕೊಸಾಂಬಿಯದು, ‘ಉತ್ಪಾದನಾಂಶಗಳು-ಉತ್ಪಾದನಾ ಸಂಬಂಧಗಳ ಕ್ರೊನಾಲಜಿಕಲ್ ವಿಶ್ಲೇಷಣೆ, ಸಂಕೀರ್ಣತೆಯ ವ್ಯಾಖ್ಯಾನವೇ ಭಾರತೀಯ ಇತಿಹಾಸ, ಸಂಸ್ಕøತಿ, ನಾಗರೀಕತೆಎನ್ನುವುದರ ಮೂಲಕ.
ಡಿ.ಡಿ. ಕೊಸಾಂಬಿ ಭಾರತೀಯ ಚರಿತ್ರಶಾಸ್ತ್ರದಲ್ಲಿ ಯುಗಪಲ್ಲಟ, ಸ್ಥಿತ್ಯಂತರ ತಂದ ಧೀಮಂತ ಇತಿಹಾಸಕಾರ. 1956 ಸುಮಾರಿಗೆ ಪ್ರಕಾಶಿತಗೊಂಡ ಅವರ ಕೃತಿಯಾನ್ ಇಂಟ್ರಡಕ್ಷನ್ ಟು ದಿ ಸ್ಟಡಿ ಆಫ್ ಇಂಡಿಯನ್ ಹಿಸ್ಟ್ರಿ ಅಂತಹ ಮಾದರಿಯ ಒಂದು ಸ್ಥಿತ್ಯಂತÀರವಾಯ್ತು. ಭಾರತೀಯ ಇತಿಹಾಸದ ರಚನೆಯ ಪ್ರಶ್ನೆ ಬಂದಾಗ ಆಧಾರಗಳ ಕೊರತೆಯಿದ್ದಾಗ್ಯೂ ಕೂಡಾ ತೌಲನಿಕ,ಅಂತರ್ಶಿಸ್ತೀಯ ಅಧ್ಯಯನವನ್ನು ಮೊತ್ತ ಮೊದಲಬಾರಿಗೆ ಪ್ರಚುರಪಡಿಸಿದ ಇತಿಹಾಸಕಾರ. ಹೀಗೆ ಚರಿತ್ರಶಾಸ್ತ್ರೀಯ ಗತಿಯನ್ನು ಬದಲಿಸಿದ ಕೊಸಾಂಬೀ ಒಬ್ಬ ಪಾಲಿಮತ್ ಅಥವಾ ಬಹುವಿಷಯಗಳ ಬಗ್ಗೆ ಬಹುತಿಳಿದ ಪಂಡಿತ. ಕೊಸಾಂಬಿ ಮೂಲತ: ಗಣಿತಜ್ಞ. ಅನ್ವಯಿಕ ಗಣಿತಶಾಸ್ತ್ರದಲ್ಲಿ ಹಲವಾರು ಚರ್ಚೆಗಳನ್ನೂ ಸೃಷ್ಟಿಸಿದ ಚಿಂತಕ. ವರ್ಷ ಕೊಸಾಂಬಿಯವರ ಜನ್ಮಶತಮಾನೋತ್ಸವವಾದ ಕಾರಣ(1907-8-2008) ಇಡೀ ದೇಶಾದ್ಯಂತ ಕೊಸಾಂಬೀ ಜನ್ಮಶತಾಬ್ದೀ ಕಾರ್ಯಕ್ರಮಗಳು ನಡೆಯುತ್ತಿವೆ ಕೂಡಾ. ನೆಲೆಯಲ್ಲಿ ಕೊಸಾಂಬಿಯವರ ಕೊಡುಗೆಗಳನ್ನು, ವಿಶೇಷವಾಗಿ ಭಾರತಶಾಸ್ತ್ರ ಅಥವಾ ಇಂಡಾಲಜಿ ಮತ್ತು ಇತಿಹಾಸಕ್ಕೆ ಸಂಬಂಧಿತವಾದವುಗಳನ್ನು ನೆನಪಿಸಿಕೊಳ್ಳಬೇಕಾದ ಸಮುಚಿತತೆ ಇದೆ. ಜಾಗತೀಕರಣ, ಏಕಸಂಸ್ಕøತಿ, ವಿವಿಧ ರೀತಿಯ ಸೀಮಿತ ವ್ಯಾಪ್ತಿಯ ಅಣಬೆ ರಾಷ್ಟ್ರೀಯತೆಗಳು ವಿಜೃಂಭಿಸುತ್ತಾ ಸಮಸ್ಯೆ ಸವಾಲುಗಳನ್ನು ಸೃಷ್ಟಿಸುತ್ತಿರುವಾಗ ನಾಗರೀಕತೆ, ರಾಷ್ಟ್ರ, ರಾಷ್ಟ್ರೀಯತೆ, ವೈವಿಧ್ಯತೆ ಇತ್ಯಾದಿಗಳನ್ನು ಕುರಿತ ಕೊಸಾಂಬಿ ಚಿಂತನೆಯನ್ನು ಮೆಲುಕು ಹಾಕಬೇಕಾಗಿದೆ.
ಪ್ರಾಚೀನ ಭಾರತದ ಆಧಾರಗಳನ್ನು ಮೊದಲು ಕೊಸಾಂಬಿ ಮುಟ್ಟಿದ್ದು ಭರ್ತೃಹರಿಯ ಕೃತಿಗಳ ಅಥವಾ ಶತಕಗಳ ವಿಮರ್ಶಾತ್ಮಕ ವಿಶ್ಲೇಷಣೆಯೊಂದಿಗೆ. ಇದೂ ಕೂಡಾ ಒಂದು ರೀತಿಯ ಮಾದರಿಯೇ ಆಯ್ತು. ಕ್ರಮೇಣ ವಿ.ವಿ. ಗೋಖಲೆಯವರೊಂದಿಗೆಸುಭಾಷಿತ ರತ್ನ ಕೋಶವನ್ನೂ ಕೂಡಾ ಹಾರ್ವರ್ಡ್ ಒರಿಯಂಟಲ್ ಸಿರೀಸ್ಗೆ ಸಂಪಾದಿಸಿದರು. ಸಾಂಪ್ರದಾಯಿಕ ಉನ್ನತ ಮಟ್ಟದ ಟೀಕೆಯ ನಿಯಮಗಳನ್ನು ಅನ್ವಯಿಸದೇ, ಕೃತಿಗಳು ರೂಪುಗೊಂಡ ಐತಿಹಾಸಿಕ ಸಾಂದರ್ಭಿಕತೆಯನ್ನು ಕುರಿತು ಚಿಂತಿಸಿದರು. ಸಂಸ್ಕø ಭಾಷೆ, ಮೊದಲ ಶತಾಬ್ಧಿ ಹೊತ್ತಿಗೆ ಬರೀ ಮೇಲ್ವರ್ಗದ ಅಭಿವ್ಯಕ್ತಿಯಾಗಿ ರಾಜಾಸ್ಥಾನಗಳಲ್ಲಿತ್ತು ಎನ್ನುವ ಅಭಿಪ್ರಾಯವನ್ನು ಇಲ್ಲಿ ತಳೆದರು ಕೊಸಾಂಬಿ. ಮೊತ್ತಮೊದಲನೆಯ ಬಾರಿಗೆ ಸಂಸ್ಕø ಕೃತಿಗಳ ಫ್ಯೂಡಲ್ ಹಿನ್ನೆಲೆಯನ್ನು ಹೊರಗೆಳೆದರು. ಇದನ್ನು ಸಮರ್ಥಿಸುತ್ತಾ ಹಾರ್ವರ್ಡ್ ಸಂಸ್ಕø ವಿದ್ವಾಂಸ ಡೇನಿಯಲ್ ಇಂಗಲ್ಸ್ ಜತೆ ಬೌದ್ಧಿಕ ವಾಗ್ವಾದ, ಪ್ರಖರ ಚರ್ಚೆಯನ್ನೂ ಹೂಡಬೇಕಾಯ್ತು. ಸಂಸ್ಕø ಭಾಷೆ ಪಾಣಿನಿ ಮತ್ತು ಪತಂಜಲಯ ಕಾಲಕ್ಕೆ ತುಂಬಾ ಮುಕ್ತವಾಗಿದ್ದು ನಂತರ ಮುಚ್ಚಿದ ಸೀಮಿತ ಭಾಷೆಯಾಗಿ ರೂಪುಗೊಂಡಿದ್ದು ಕೊಸಾಂಬಿಯವರ ಪ್ರಕಾರ, ‘ಡಿಸ್ಡೈನ್ಫುಲ್ ಫ್ರೀಸ್ಟ್ ಅಥವಾಪುರೋಹಿತಶಾಹೀ ಉಪೇಕ್ಷೆಯಿಂದಾಗಿ. ಸಂಸ್ಕøತದ ಭಗವದ್ಗೀತೆ, ಅಲ್ಲಿನ ಮೌಲ್ಯ ವ್ಯವಸ್ಥೆ ಮತ್ತು ಭಕ್ತಿಯೆಲ್ಲವನ್ನೂ ಕೂಡಾ ಕೊಸಾಂಬಿ, “ಫ್ಯೂಡಲಿಸಮ್ ಜತೆ ಸಾಗಿದ ಸಿದ್ಧಾಂತವೆಂದು ಪ್ರತಿಪಾದಿಸಿದರು.
ಸಂಸ್ಕøತದಲ್ಲಿ ಅಪಾರ ಜ್ಞಾನ ಹೊಂದಿರುವಂತೆ, ಪ್ರಾಕೃತದಲ್ಲೂ ಪ್ರೌಢಿಮೆ ಇದ್ದ ಕಾರಣದಿಂದಲೇನೇ ಕೊಸಾಂಬಿ, ಮೊದಲ ಬೌದ್ಧ ಚಿಂತಕರಾದ ರೈಸ್ ಡೇವಿಸ್ ಮತ್ತು ಫಿಕ್ಗಿಂತ ಭಿನ್ನವಾಗಿ ಅವುಗಳನ್ನು ವಿಶ್ಲೇಷಿಸಿದರು. ಮೊದಲ ಶತಾಬ್ಧಿಯ ಇತಿಹಾಸವನ್ನು ರಚಿಸುವಲ್ಲಿ ಸಂಸ್ಕø ಮತ್ತು ಪ್ರಾಕೃತ ದಾಖಲೆಗಳನ್ನು ಪೂರಕವಾಗಿ ನೋಡುತ್ತಾ ಶಾಸನ ಮತ್ತು ಪ್ರಾಕ್ತನಶಾಸ್ತ್ರೀಯ ದಾಖಲೆಗಳನ್ನ ಬಳಸಿ ಬೌದ್ಧೀಯ ದಾಖಲೆಗಳನ್ನು ಸಮೀಕರಣ ವಿಮರ್ಶೆ ಮಾಡುವಾಗ ಅವುಗಳ ನಡುವೆ ವೈರುಧ್ಯಗಳನ್ನೂ ಗುರುತಿಸಿದರು. ಇಂತಹ ಗುಣ ಕೊಸಾಂಬಿ ಹೊಂದಿದ್ದು ಅವರ ತಂದೆ, ಪ್ರಖ್ಯಾತ ಪ್ರಾಕೃತ-ಸಂಸ್ಕø ಪಂಡಿತ ಧರ್ಮಾನಂದ ಕೊಸಾಂಬಿಯವರಿಂದ.
ಕೊಸಾಂಬಿ ಸಂಸ್ಕø ಜ್ಞಾನ ಹಲವಾರು ಪ್ರಯೋಗಶೀಲತೆಯನ್ನು ಸೃಷ್ಟಿಸುವಂತೆ ಮಾಡಿತು, ಯಶಸ್ವಿಯಾಗಿ ಹಲವಾರು ಸರಣಿಯ ಶಬ್ದವ್ಯುತ್ಪತ್ತೀಯ ವಿಮರ್ಶೆಯೊಂದಿಗೆ. ಇದರೊಂದಿಗೆ ವೈದಿಕ ಅವಧಿಯ ಸಾಮಾಜಿಕ ಹಿನ್ನೆಲೆಯನ್ನು ಕೊಸಾಂಬಿ ತಿಳಿದುಕೊಂಡರು. ವೇದದಲ್ಲಿ ಉಲೇಖವಾಗಿರುವ ಹೆಚ್ಚಿನ ಬ್ರಾಹ್ಮಣರ ಹೆಸರುಗಳು ಆರ್ಯೇತರ ಎಂದು ಸಾಧಿಸಿದ್ದು ಅದರಲ್ಲಿ ಬಹಳ ಮುಖ್ಯವಾದುದು. ಅಂತೆಯೇ ಏಳು ಗೋತ್ರಗಳು ಆರ್ಯ ಮತ್ತು ಅನಾರ್ಯವೆರಡರ ಮಿಶ್ರಣವೆಂದೂ ಸಾಧಿಸಿದರು. ರೀತಿ ಗೋತ್ರಗಳ ಬಗೆಗೆ ಅವರು ಕೈಗೊಂಡ ಚರ್ಚೆಯಿಂದಲೇ, ‘ಜಾನ್ ಬ್ರಾಗ್ ಎನ್ನುವ ಇಂಗ್ಲೀಷ್ ವಿದ್ವಾಂಸ ಗೋತ್ರ ಮತ್ತು ಪ್ರವರಗಳನ್ನು ಸಾಂಸ್ಥಿಕ ಸ್ವರೂಪದವು ಎನ್ನುವ ನೆಲೆಯಲ್ಲಿ ಮುಂದೆ ತನ್ನದಿ ಅರ್ಲಿ ಬ್ರಾಹ್ಮಣಿಕಲ್ ಸಿಸ್ಟಮ್ ಆಫ್ ಗೋತ್ರ ಅಂಡ್ ಪ್ರವರ ಎನ್ನುವ ಕೃತಿಯಲ್ಲಿ ಅಧ್ಯಯನಿಸಿದ. ಆಧುನಿಕ ಭಾಷಾ ವಿಜ್ಞಾನವೂ ಸಂಮಿಶ್ರಣ ಗೋತ್ರ ಸಿದ್ಧಾಂತವನ್ನು ಒಪ್ಪಿಕೊಂಡಿದೆ ಕೂಡಾ.
ಗಣಿತಜ್ಞನಾಗಿ ಕೊಸಾಂಬಿ, ಇತಿಹಾಸಕ್ಕೂ ಅಲ್ಲಿನ ಜ್ಞಾನವನ್ನು ಅನ್ವಯಿಸಿದ್ದು ನಾಣ್ಯಗಳ ಬಗೆಗೆ. ಸುಮಾರು ಕ್ರಿಸ್ತ ಪೂರ್ವ 500-100ರಲ್ಲಿ ಚಲಾವಣೆಯಲ್ಲಿದ್ದ ಕೆಲವು, ತಕ್ಷಶಿಲಾದಲ್ಲಿ ಲಭ್ಯವಾದ ಬೆಳ್ಳಿಯ ನಾಣ್ಯಗಳನ್ನು ಅಧ್ಯಯನಕ್ಕೊಳಪಡಿಸಿದರು. ಇಲ್ಲಿನ ನಾಣ್ಯಗಳಲ್ಲಿ ಕೆಲವು ಸಂಕೇತಗಳಿದ್ದರೂ ವ್ಯಕ್ತಿಯ ಉಬ್ಬು ಚಿತ್ರಗಳಿರದೇ ಕ್ರೊನಾಲಜಿಯ ಅನಿರ್ದಿಷ್ಠತೆಯ ಸಮಸ್ಯೆಗಳು ಎದುರಾದಾಗ. ಇದನ್ನು ಪರಿಹರಿಸುವುದೇ ಕಷ್ಟವಾದಾಗ ಕೊಸಾಂಬೀ ಸ್ಟಾಟಿಸ್ಟಿಕಲ್ ಎನಾಲಿಸೀಸ್ ಅನ್ನು ನಾಣ್ಯಗಳ ಮೇಲೆ ಮಾಡಿದರು. ಪ್ರತೀ ನಾಣ್ಯವನ್ನು ತೂಕ ಮಾಡಿದಾಗ ಮತ್ತೆ ಕೆಲವು ನಾಣ್ಯಗಳಿಗಿಂತ ತುಸುಭಾರ ಕಳೆದುಕೊಂಡಿರುವುದನ್ನು ಗಮನಿಸಿದರು ಮತ್ತು ಕಳೆದುಕೊಂಡಿರೋ ತೂಕಗಳ ಆಧಾರದಂತೆ ಅವುಗಳನ್ನು ಕಾಲಾನುಕ್ರಮವಾಗಿ ಜೋಡಿಸುತ್ತಾ ಬಂದರು. ಇದರಿಂದ ಕಾಲಾನುಕ್ರಮಣಿಕೆಯನ್ನು Àಡೆದುದರ ಜತೆಗೆ, ಹೆಚ್ಚಿಗೆ ಸವೆದಂತಹ ನಾಣ್ಯಗಳು ಹೆಚ್ಚು ಚಲಾವಣೆಯಲ್ಲಿದ್ದವು ಎಂಬ ಖಚಿತ ತೀರ್ಮಾನವನ್ನು ಹೊಂದಿದರು. ನಾಣ್ಯಗಳನ್ನು ಟಂಕಿಸಿದವರು ಮೂಲತ: ವ್ಯಾಪಾರಿಗಳು, ರಾಜರ ಅನುಮತಿಯನ್ನು ಪಡೆದು ಎಂಬ ನಿಲುಮೆ ಕೊಸಾಂಬಿಯವರದ್ದಾಗಿತ್ತು.
ಕೊಸಾಂಬಿ, ಮಾಕ್ರ್ಸ್ ಮತ್ತು ಏಂಗಲ್ಸ್ರಿಂದ ಪ್ರಭಾವಿತರಾಗಿದ್ದರು. ಅವರೇ ಹೇಳುವ ಹಾಗೆ, ‘ಅವರಿಬ್ಬರ ಗ್ರಂಥಗಳಲ್ಲಿಲ್ಲದ ವಿಷಯಗಳಿಗಾಗಿ ಸ್ವತ: ಕೊಸಾಂಬಿ ನಡೆದರು, ನೋಡಿದರು. ಕೊಸಾಂಬಿ, ಪ್ರಾಕೃತಶಾಸ್ತ್ರವನ್ನು ಬಳಸಿ ಪ್ರಾಗಿತಿಹಾಸ(ಪ್ರಿ-ಹಿಸ್ಟರಿ)ವನ್ನು ಪುನರ್ರಚಿಸಿದ್ದು ಭಾರತದ ಹಲವು ಭಾಗಗಳಲ್ಲಿ ಸಂಚಾರ ಮಾಡಿದ ಕಾರಣದಿಂದಪುಣೆ, ಇನಾಮ್ಗಾವ್, ಬಿಹಾರದ ಹಲವು ಸೂಕ್ಷ್ಮ ಶಿಲಾಯುಗೀಯ (ಮೈಕ್ರೋಲಿಥಿಕ್) ನಿವೇಶನಗಳನ್ನು ಸಂದರ್ಶಿಸಿದರಿಂದ ಹರ್ಡರ್ಸ್, ಪಶುಪಾಲಕರು, ಕಿರು ಅಥವಾ ಮಿತಿಯ ವ್ಯಾಪಾರಿಗಳ ಬೇರನ್ನು ತಿಳಿಯಲು ಇದರಿಂದ ಸಾಧ್ಯವಾಯಿತು. ಉತ್ಖನನಗಳಿಂದ ದೊರೆತ ಅರೆಯುವ ಕಲ್ಲು(ಸ್ಯಾಡಲ್ಕ್ವೆನ್ಸ್)ಗಳು ಇಂದಿಗೂ ಬಳಕೆಯಲ್ಲಿರುವುದು ಸಂಸ್ಕøತಿಯ ಹರಿವು ಎನ್ನುತ್ತಾ, ಇದು ನಾಶವಲ್ಲ ಎಂಬುದನ್ನು ವಿವರಿಸಿದರು. ಇದೇ ರೀತಿ ಬೃಹತ್ ಶಿಲಾಯುಗೀಯ ವಸ್ತು (ಮೆಗಾಲಿತಿಕ್) ಬಗ್ಗೆಯೂ ಮೊತ್ತಮೊದಲು ಗಮನ ಸೆಳೆದ ಇತಿಹಾಸಕಾರರೆಂದರೆ ಕೊಸಾಂಬಿ. ರೀತಿಯ ಕ್ಷೇತ್ರಕಾರ್ಯದ ಜತೆಗೆ ಭೂರಚನಾಕೃತಿ ಶಾಸ್ತ್ರ (ಜಿಯೋ ಮಾರ್ಫಾಲಜಿ) ಮತ್ತು ಭೂಮೇಲ್ಮೈಶಾಸ್ತ್ರ (ಟೋಪೋಗ್ರಫಿ)ವನ್ನೂ ಅರಿತಿದ್ದ ಕಾರಣ ಪಶ್ಚಿಮತೀರ, ದಖ್ಖನ್ ಪ್ರಸ್ಥಭೂಮಿ, ಪಶ್ಚಿಮ ದಖ್ಖನ್ನಲ್ಲಿ ಪಸರಿಸಿದ್ದ ವ್ಯಾಪಾರೀಮಾಗರ್À ಮತ್ತು ಬೌದ್ಧೀಯ ನೆಲೆಗಳನ್ನು ಅದ್ಭುತವಾಗಿ ಪೂರಕವೆಂಬಂತೆ ಸಮೀಕರಿಸಿದರು. ಪ್ರಾಕ್ಷನ ಶಾಸ್ತ್ರದ ಸಮರ್ಪಕ ಬಳಕೆಯಿಂದಲೇನೇ ಕೊಸಾಂಬೀ ರೂಪಿಸಿದ್ದುಜೀವಂತ ಪೂರೈತಿಹಾಸ (ಲಿವಿಂಗ್ ಪ್ರಿಹಿಸ್ಟ್ರಿ) ಎಂಬ ಪರಿಕಲ್ಪನೆಯನ್ನು.
ಸಾಂಸ್ಕøತಿಕ ಉಳಿಕೆ, ಇತಿಹಾಸದುದ್ದಕ್ಕೂ ಸಾಗಿ ಬಂದದ್ದನ್ನು ಕೊಸಾಂಬಿ ಪರೀಕ್ಷಿಸಿ ಅಧ್ಯಯನ ಮಾಡುವ ಸಲುವಾಗಿ ಮೊರೆ ಹೋದದ್ದು ತಳಿಶಾಸ್ತ್ರ (ಎತ್ನಾಲಜಿ) ಮತ್ತು ಮಾನವಶಾಸ್ತ್ರ (ಆಂತ್ರಪಾಲಜಿ)ವನ್ನು. ಸಂಗತಿ, ಅವರ, ‘ಇಂಟ್ರಡಕ್ಷನ್ ಟು ದಿ ಸ್ಟಡಿ ಆಫ್ ಇಂಡಿಯನ್ ಹಿಸ್ಟ್ರಿ ಕೃತಿಯಲ್ಲಿ ಪ್ರಾತ್ಯಕ್ಷೀಕೃತವಾಗಿದೆ. ತನ್ನ ಆಸುಪಾಸಿನ ಸಮುದಾಯಗಳೇ ಕೆಲವು, ಜಾತಿಯನ್ನು ಸಾಂಸ್ಥೀಕೃತಗೊಳಿಸಿಕೊಂಡಿದ್ದು, ಕೆಲವು ಇನ್ನೂ ಅಲೆಮಾರಿ ಸಂಚಾರಿ (ನೊಮಾಡಿಕ್) ಗಳಾಗಿದ್ದು ಮತ್ತು ಇನ್ನೂ ಕೆಲವು ಅರೆವೃತ್ತಿ ಸಂಘ ಅಥವಾ ಅರೆ ಗಿಲ್ಡ್ ಸ್ವರೂಪದಲ್ಲಿರೋದನ್ನು ಹಾಗೂ ಪ್ರಾಗಿತಿಹಾಸ ಸಂಬಂಧಿತ ಗುಹೆ, ಕ್ರಿಯಾವಿಧೀಯ ಕಲ್ಲುಗಳು, ಇತ್ಯಾದಿಗಳಲ್ಲಿ ಪ್ರಾಗಿತಿಹಾಸ ಮಾನವ, ಕ್ರಮೇಣ ಬೌದ್ಧ ಭಿಕ್ಷುಗಳು, ನಂತರ ತಥಾಕಥಿತ ಹಿಂದೂ ಪಂಥೀಯತೆ ಸಂಚರಿಸಿರುವ ಐತಿಹಾಸಿಕ ನಿರಂತರತೆಯನ್ನು ಕೊಸಾಂಬಿ ನಮಗೆ ಮನಗಾಣಿಸುತ್ತಾರೆ. ಕೊಸಾಂಬಿಗೆ ಇದೇ ಪ್ರಾಕ್ತನಶಾಸ್ತ್ರ ಮತ್ತು ಐತಿಹಾಸಿಕ ತನಿಖೆಯ ಪ್ರಾಥಮಿಕ ಕ್ಷೇತ್ರಗಳಾಗಿದ್ದುವು. ಒಟ್ಟಾರೆ ಸಾಂಸ್ಕøತಿಕ ಉಳಿಕೆಯ ಕೆಲವಂಶಗಳಲ್ಲೇ ಐತಿಹಾಸಿಕ ತನಿಖೆಯ ಮುಖಾಮುಖಿ ನಡೆಸಬೇಕೆನ್ನುವುದು ಅವರ ಇಂಗಿತವಾಗಿತ್ತು. ಆದರೂ ಫಿಸಿಕಲ್ ಮಾನವಶಾಸ್ತ್ರವನ್ನು ಅವರು ನೆಚ್ಚಿರಲಿಲ್ಲ ಹೆಚ್ಚಾಗಿ.
ಭಾರತೀಯ ಇತಿಹಾಸ, ಸಮಾಜಶಾಸ್ತ್ರ ಸಂಬಂಧಿತ, ಬಹು ವಿರೋಧಾಭಾಸಗಳಿಂದ ಕೂಡಿರುವಸಂಸ್ಕøತಾನುಕರಣ ಅಥವಾ ಸಂಸ್ಕ್ರತೈಝೇಶನ್ ಪರಿಕಲ್ಪನೆಯನ್ನು ಎಮ್.ಎನ್.ಶ್ರೀನಿವಾಸ್ಗಿಂತ ಮೊದಲೇ ಕೊಸಾಂಬಿ ಇನ್ನೂ ಪಕ್ವವಾದ, ಬಹು ಆಯಾಮಗಳಲ್ಲಿ ಗುಣಾವಗುಣಗಳಿಂದ ಕಂಡುಕೊಂಡಿದ್ದರೆನ್ನುವುದು ಬಹಳ ಮಹತ್ವದ ವಿಷಯ. ಬಹು ವಿಶಾಲವಾದ ಮಾನವಶಾಸ್ತ್ರೀಯ ನೆಲೆಯಲ್ಲಿ ಭಾರತದ ಇತಿಹಾಸ ಮತ್ತು ಇಲ್ಲಿನ ಸ್ಥಿತ್ಯಂತರವನ್ನುಬುಡಕಟ್ಟು : ಜಾತಿ ಅಥವಾ ಟ್ರೈಬ್ ಟು ಕಾಸ್ಟ್ ಮತ್ತು ಸ್ಥಳೀಯ ಗುಂಪುಗಳಿಂದ ಅಥವಾ ಲೋಕಲೈಸ್ಡ್ ಗುಂಪುಗಳಿಂದ ಉಂಟಾದ ಸಾಮಾನ್ಯೀಕೃತ ಸಮಾಜ ಅಥವಾ ಜನರಲೈಸ್ಡ್ ಸೊಸೈಟಿ ಎಂದೇ ಗ್ರಹಿಸಿದ್ದರು. ರೀತಿಯ ಸ್ಥಿತ್ಯಂತರ ಕಬ್ಬಿಣದ ಕುಳ ಕೃಷಿಯಿಂದ ಉಂಟಾದುದು ಮತ್ತು ಇದು ಉತ್ಪಾದನೆಯನ್ನು ಹೆಚ್ಚಿಸಿ, ತಳಿ-ಬುಡಕಟ್ಟುಗಳು ಜಾತಿಯಾಗಿ ಬದಲೀ ಸಾಮಾಜಿಕ ಸಂಘಟನೆಯನ್ನು ಉಂಟುಮಾಡಿದ್ದರ ಸ್ವರೂಪದಲ್ಲಿ ಎಂಬುದು, ಕೊಸಾಂಬಿ ಚಿಂತನೆ. ಇದು ತುಂಬಾ ನಿರ್ಬಂಧಿತ ಸಾಮಾಜಿಕ ನಿಯಂತ್ರಣವನ್ನೂ ಮತ್ತು ಬ್ರಾಹ್ಮಣ ನಿವೇಶನ, ನೆಲೆಯನ್ನು ಸೃಷ್ಟಿಸಿ ಸ್ಥಳೀಯ ಆಚರಣೆಗಳೂ ಕೂಡಾ ಅದರಲ್ಲಿ ಕರಗಿ ವಿಲೀನವಾಗುವಂತೆ ಮಾಡಿತು ಎನ್ನುವುದು ಕೊಸಾಂಬಿ ವಾದ. ಕೊಸಾಂಬಿ ಪ್ರಕಾರ ಪುರಾಣ ಮತ್ತು ಮಹಾತ್ಮಗಳು ಇದರ ನಿದರ್ಶನಗಳು. ಎಮ್.ಎನ್.ಶ್ರೀನಿವಾಸ್ ಸಂಸ್ಕøತಾನುಕರಣ ಪರಿಕಲ್ಪನೆಯನ್ನು ಬರೀ ಕಿರುಸಂಸ್ಕøತಿ, ಹಿರಿಸಂಸ್ಕøತಿಯನ್ನು ಅನುಕರಿಸಿದ್ದು ಎಂದು ವ್ಯಾಖ್ಯಾನಿಸಿದರೆ ಕೊಸಾಂಬಿ ಕಿರಿ ಮತ್ತು ಹಿರಿ ಎರಡೂ ಪರಸ್ಪರ ಅನುಕರಿಸಿದ್ದನ್ನು ಐತಿಹಾಸಿಕ ದಾಖಲೆಗಳೊಂದಿಗೆ ನಮ್ಮ ಮುಂದಿಡುತ್ತಾರೆ.
ಕೊಸಾಂಬೀಯವರ ಇನ್ನೊಂದು ಮುಖ್ಯ ಚಿಂತನೆಮಿಥ್ ಅಥವಾ ಮಿಥ್ಯಗಳ ವಿಶ್ಲೇಷಣೆ. ಭಾರತೀಯ ಮೈಥಾಲಜಿಯನ್ನು ಮೊದಲು ಮ್ಯಾಕ್ಸ್ ಮುಲ್ಲರ್ ಮತ್ತು ಆತನ ಸಮಕಾಲೀನರು ಸಾಮಾನ್ಯ ಸ್ವರೂಪದಲ್ಲಿ ವ್ಯಾಖ್ಯಾನಿಸಿಲ್ಲವೆಂದಲ್ಲ, ‘ಊರ್ವಶಿಯ ಅದೃಶ್ಯ ಮಿತ್ ಅನ್ನು ಇವರೆಲ್ಲಾ, ‘ಉಷೆ ಕಳೆದು ಸೂರ್ಯನಾಗಮನ ಎಂಬರ್ಥದಲ್ಲಿ ವಿಶ್ಲೇಷಿಸಿದ್ದರು. ಆದರೆ ಮಿತ್ ಅನ್ನು ಕೊಸಾಂಬಿ ತಮ್ಮಮಿತ್ ಅಂಡ್ ರಿಯಾಲಿಟಿ ಕೃತಿಯಲ್ಲಿ, ‘ಪ್ರಾಗಿತಿಹಾಸದ ಸಮಾಜದಲ್ಲಿನ ಮದುವೆಯ ಸಾಂಸ್ಥಿಕರೂಪ ಮತ್ತು ಮಾತೃದೇವತೆಗೆ ಮಾಡುವ ಕ್ರಿಯಾವಿಧಿ ಎಂದುಸಂರಚನೀಯ ಮಾನವಶಾಸ್ತ್ರೀಯ ನೆಲೆಯಲ್ಲಿಊರ್ವಶಿ ಅದೃಶ್ಯವನ್ನು ವ್ಯಾಖ್ಯಾನಿಸುತ್ತಾರೆ. ಕೌರವರು ಮತ್ತು ಕೆಲವು ಮುನಿಗಳು (ಕುಂಭ) ಮಡಿಕೆಯಲ್ಲಿ ಹುಟ್ಟುವುದು ಭ್ರೂಣ ಸೂಚಕ ಮತ್ತು ಮಾತೃದೇವತಾ ಸೂಚಕವೆಂದೂ ಕೊಸಾಂಬಿ  ವ್ಯಾಖ್ಯಾನಿಸಿದರು. ಹೀಗೆ ಮ್ಯಾಕ್ಸ್ ಮುಲ್ಲರ್ 
ಆದಿಗಳ ಪೂರ್ವಗೃಹೀತತೆಯನ್ನು ಸಂಪೂರ್ಣವಾಗಿ ಕೊಸಾಂಬಿ ನಿರಾಕರಿಸಿದರು.
ಅವೈದಿಕ ಧರ್ಮಗಳ ಉಗಮದ ಕುರಿತು ಸಂಪ್ರದಾಯೀ ಬರವಣಿಗೆಗಳಿಗಿಂತ ವಿಭಿನ್ನವಾಗಿ ಆಲೋಚಿಸಿದ ಮೊದಲ ಇತಿಹಾಸಕಾರ ಈತ. ಇವರ ಪ್ರಕಾರ, ತಂತ್ರಜ್ನಾನ ಅಥವಾ ತಾಂತ್ರಿಕತೆಯಲ್ಲಿನ ಬದಲಾವಣೆ ಮತ್ತು ನಗರೀಕರಣಗಳಿಂದ ಇವುಗಳು ಹುಟ್ಟಿದ್ದು. ಇವೆಲ್ಲಕ್ಕಿಂತ ಹೆಚ್ಚಾಗಿ ಒಂದು ರೀತಿಯ ಆದಿವಾಸೀಕರಣ ಅಥವಾ ಡಿಟ್ರೈಬಲೈಝೇಶನ್ ಅನುಭವವು ಎಲ್ಲಾ ಜಾತಿ ಇತ್ಯಾದಿಗಳ ಗೆರೆಯನ್ನು ದಾಟಿಕೊಂಡು, ‘ಒಂದೇ ಸಾರ್ವತ್ರಿಕ ನೀತಿಯಿಂದ ಚಲಿಸಿದ್ದೇ, ಸ್ವರೂಪದಿಂದ ಎನ್ನುವುದು ಕೊಸಾಂಬಿ ಪ್ರತಿಪಾದನೆ. ನೆಲೆಯಿಂದಲೇ ವ್ಯಾಪಾರೀಯ ಪ್ರೋತ್ಸಾಹ ಅಥವಾ ಮಕ್ರ್ಯಾಂಟಲ್ ಪೇಟ್ರನೇಜ್ ಪಂಥಗಳಿಗೆ ಸಿಕ್ಕಿದ್ದು. ಕಾಲದ ಉಟ್ಟಂಕಿತ ನಾಣ್ಯ ಅಥವಾ ಪಂಚ್ಡ್ ಮಾರ್ಕ್ ಕಾಯ್ನ್ ಕೂಡಾ ವರ್ಧಿತ ವಸ್ತುಗಳುತ್ಪಾದನೆ, ಹೊಸ ತಂತ್ರಜ್ಞತೆ ಮತ್ತು ನಗರಗಳ ಬೆಳವಣಿಗೆಯಿಂದ ಎನ್ನೋದು ಇವರ ವಾದ. ಇವು ಅಂತಿಮವಾಗಿ ಧರ್ಮಗಳುಗಮಕ್ಕೆ ಕಾರಣ ಎನ್ನೋದು ಇವರ ನಿಲುವು.              
ಪ್ರಾಚೀನ ಭಾರತಕ್ಕೆ ಮೊತ್ತ ಮೊದಲು ಫ್ಯೂಡಲಿಸಮ್ಮನ್ನು ಪ್ರಸ್ತುತಿ ಮಾಡಿದ್ದು ಕೊಸಾಂಬಿ. ‘ಫ್ಯೂಡಲಿಸಂ ಫ್ರಂ ಬಿಲೋ ಮತ್ತುಫ್ಯೂಡಲಿಸಂ ಫ್ರಂ ಎಬೌ ಎನ್ನುವೆರಡು ರೀತಿಯ ವರ್ಗೀಕರಣ ಮಾಡಿ, ಫ್ಯೂಡಲಿಸಂ ಫ್ರಂ ಎಬೌ ಅನ್ನುವುದು ಕ್ರಿಸ್ತ ಪೂರ್ವ ಮೊದಲ ಶತಕದ ಹೊತ್ತಿಗೆ ಗುಪ್ತರವಧಿಯಲ್ಲಿ ಇದ್ದಂತದ್ದು ಎನ್ನುತ್ತಾ ರಾಷ್ಟ್ರೀಯ ವಾದಿಗಳ ಗುಪ್ತ ಸುವರ್ಣ ಯುಗವನ್ನು, ‘ಗುಪ್ತರು ರಾಷ್ಟ್ರೀಯತೆಯನ್ನು ಪ್ರಚೋದಿಸಿದ್ದಲ್ಲ, ಬದಲು ರಾಷ್ಟ್ರೀಯವಾದಿಗಳು ಗುಪ್ತರನ್ನು ಎಂದು ಖಂಡತುಂಡವಾಗಿ ತಿರಸ್ಕರಿಸಿದರು. ಗುಪ್ತರವಧಿಯಲ್ಲಿ ಹೆಚ್ಚಿದ ಗ್ರಾಮ ದಾನ, ಭೂದಾನಗಳಿಂದ ಕೇಂದ್ರಿಕೃತ ವ್ಯವಸ್ಥೆ ಬಿದ್ದು, ನಗರಗಳು ನಾಶವಾಗಿ, ನಾಣ್ಯ ವ್ಯವಸ್ಥೆಯು ಮಾಯವಾಗಿ, ಸೈನ್ಯ ವಿಕೇಂದ್ರಿತಗೊಂಡಿದ್ದು ಮತ್ತು ಹಳ್ಳಿಗಳು ಸ್ವಯಂ ಪರಿಪೂರ್ಣತೆಯನ್ನು ಪಡೆದುಕೊಂಡಿದ್ದು ಫ್ಯೂಡಲಿಸಂನ ಕೆಲವು ಲಕ್ಷಣಗಳೆಂದು ಕೊಸಾಂಬೀ ವಿವರಿಸಿದರು. ರೀತಿ ಕೊಸಾಂಬಿ ಮೊತ್ತ ಮೊದಲ ಬಾರಿಗೆ ಹುಟ್ಟುಹಾಕಿದ ಚರ್ಚೆಯನ್ನು ಮುಂದೆ ಆರ್.ಯಸ್.ಶರ್ಮಾ, ಡಿ.ಯನ್.ಝಾ, ವಿಜಯ್ ಕುಮಾರ್ ಠಾಕೂರ್ ಮುಂತಾದವರು ಮುಂದುವರಿಸಿದ್ದು ಕೊಸಾಂಬಿಯವರ ಮೂಲಭೂತ ಚಿಂತನೆಯ ಮೇಲೆಯೇ. ಭಾರತೀಯ ಫ್ಯೂಡಲಿಸಂ ಬಗೆಗೆ ಮ್ಯಾಕ್ಸ್ ವೆಬರ್ ಪ್ರತಿಪಾದಿಸಿದಮೊನಾಸ್ಟಿಕ್ ಲ್ಯಾಂಡ್ ಲಾರ್ಡಿಸಮ್ ಪರಿಕಲ್ಪನೆಯನ್ನು ಕೊಸಾಂಬಿ ತಾತ್ವಿಕವಾಗಿ ಅಧ್ಯಯನಗಳಿಂದ ತಿರಸ್ಕರಿಸಿದರೂ ಕೂಡಾ, ಕೊಸಾಂಬಿ ಗ್ರಹಿಸಿದ ಫ್ಯೂಡಲಿಸಂ ಮಾದರಿ ಇಂಗ್ಲೆಂಡಿನದಾಗಿತ್ತು. ಅವರ ಸಮಕಾಲೀನ ಚಿಂತಕ ಮಾರ್ಕ್ ಬ್ಲಾಕ್ ಪ್ರಸಿದ್ಧ ಕೃತಿಫ್ಯೂಡಲ್ ಸೊಸೈಟಿ ಅನ್ನು ಅಲಭ್ಯತೆಯಿಂದ (ಫ್ರೆಂಚ್ನಲ್ಲಿದ್ದ ಕಾರಣ) ಓದಲು ಸಾಧ್ಯವಾಗದಿದ್ದರೂ ಆತನದೇ ರೀತಿಯ ಚಿಂತನೆಯನ್ನು ತಾವೂ ಯೋಚಿಸಿದ್ದು ಸೋಜಿಗವೇ ಸರಿ.
ಕೊಸಾಂಬಿಯವರ ಒಂದು ಅತ್ಯುತ್ಕøಷ್ಟ ಚಿಂತನೆ, ಭಾರತವನ್ನು ಒಂದು ನಾಗರಿಕತೆಯನ್ನಾಗಿ ವಿವಿಧ ಆಯಾಮಗಳಲ್ಲಿ ನೋಡಿದ್ದಾಗಿದೆ. 1965, ‘ದಿ ಕಲ್ಚರ್ ಅಂಡ್ ಸಿವಿಲೈಝೇಶನ್ ಆಫ್ ಏನ್ಶಿಯಂಟ್ ಇಂಡಿಯಾ ಕೃತಿ ಸಂಪೂರ್ಣ ಭಾರತವನ್ನು ಒಂದು ನಾಗರೀಕತೆಯನ್ನಾಗಿ ಗ್ರಹಿಸುವ ಕೊಸಾಂಬಿ ಪ್ರಯತ್ನ. ಅಸ್ಪಷ್ಠ, ಅಮೂರ್ತ ನೆಲೆಯಲ್ಲಿ ಇದನ್ನು ಮೊದಲು ಗಾಂಧೀಜೀ ತಮ್ಮ ಹಿಂದ್ ಸ್ವರಾಜ್ನಲ್ಲಿ, ರವೀಂದ್ರ ನಾಥ ಠಾಗೋರ್ ತಮ್ಮಹಿಸ್ಟ್ರಿ ಆಫ್ ಭರತವರ್ಷದಲ್ಲಿ, ನೆಹರೂ ತಮ್ಮಡಿಸ್ಕವರಿ ಆಫ್ ಇಂಡಿಯಾದಲ್ಲಿ ಯೋಚಿಸಿದ್ದರು. ಮೂರು ಜನರಲ್ಲಿ ಗಾಂಧಿಗೆ ಮಾತ್ರ ಒಂದು ತಾತ್ವಿಕ ನೆಲೆಯಿದ್ದರೂ ಕೂಡಾ ಠಾಗೋರ್ ಮತ್ತು ನೆಹರೂವನ್ನು ಕೊಸಾಂಬೀ, ಪೂರ್ ಹಿಸ್ಟೋರಿಯನ್ಸ್ ಎಂದೇ ಸಂಬೋಧಿಸಿದ್ದರು. ಭಾರತ ಒಂದು ನಾಗರೀಕತೆಯೇ? ಎಂಬ ಪ್ರಶ್ನೆಗೆ ನಿಖರವಾಗಿ, ಐತಿಹಾಸಿಕವಾಗಿದ್ವಂದ್ವಾತ್ಮಕವಾದ ಅಂದರೆ ಡಯಲೆಕ್ಟಿಕ್ ನೆಲೆಯಲ್ಲಿ ಉತ್ತರ ದೊರಕಿಸಿಕೊಂಡಿದ್ದು ಕೊಸಾಂಬಿ ಒಬ್ಬರೇ. ಇಲ್ಲಿ ಕೊಸಾಂಬಿ ಚರ್ಚೆಯನ್ನು ಆರಂಭಿಸುವುದೇ  ಪ್ರಶ್ನೆಯಿಂದ; ಇಷ್ಟೊಂದು ಸಾಂಸ್ಕøತಿಕ ವೈವಿಧ್ಯತೆಯಿದ್ದಾಗ್ಯೂ ಕೂಡಾ ಭಾರತೀಯ ನಾಗರೀಕತೆಯನ್ನು ಬಂಧಿಸಿಟ್ಟಿದ್ದು ಯಾವುದು? ಪ್ರಶ್ನೆ ಹಾಕಿದಷ್ಟೇ ಸುಲಭವಾಗಿ ಠಾಗೋರ್, ನೆಹರೂ ರೀತಿಯಲ್ಲಿ ತುಸು ಅನುಭಾವ ಮಿಶ್ರಿತ ಕಥನ ವಾಕ್ಯವಾಗಿ ಉತ್ತರವನ್ನು ಪಡೆಯದೇ ವೈಚಾರಿಕವಾದ, ಐತಿಹಾಸಿಕವಾದ ಮತ್ತು ಚರಿತ್ರೆ ಹೊಂದಿರುವಂತಹ ಮೆತಡಲಾಜಿಕಲ್ ನೆಲೆಯಲ್ಲಿ, “ಭಾರತೀಯ ಸಂಸ್ಕøತಿಯ ತಳಹದಿ, ವಿಶೇಷವಾಗಿ ಭೌತಿಕ ತಳಹದಿ ಎಂಬ ಉತ್ತರವನ್ನು ಒಂದು ಸಮರ್ಪಕ ವಾದದ ರೀತಿಯಲ್ಲಿ ಕೊಸಾಂಬಿ ಪಡೆದರು. ಕೊಸಾಂಬಿ ಸಮಯದಲ್ಲೇ  ಅಸ್ತಿತ್ವವಿದ್ದು, ಕೃತಕ ಚರ್ಚೆಯನ್ನು ಸೃಷ್ಟಿಸಿದ್ದ ಮತ್ತು ಈಗಲೂ ನಮ್ಮನ್ನು ನಂಬಿಸುವಂತೆ ಗುಲ್ಲೆಬ್ಬಿಸುತ್ತ್ತಿರುವÀ ಚರ್ಚೆಯಾದ, ಹಿಂದೂ ನಾಗರೀಕತೆಯೇ? ಅಥವಾ ಭಾರತೀಯ ನಾಗರೀಕತೆಯೇ? ಎಂಬ ಪ್ರಶ್ನೆ ಬಂದಾಗಲೂ ಕೊಸಾಂಬೀ ಮಾತ್ರ ಪ್ರಾಗಿತಿಹಾಸದಿಂದ ವಸಾಹತುಷಾಹೀ ಅವಧಿವರೆಗಿನ ಸಾಂಸ್ಕøತಿಕ ವೈವಿಧ್ಯತೆಯ ನಿರಂತರತೆಯು ನಿಸ್ಸಂಶಯವಾಗಿ ಇಂಡಿಯನ್ ಸಿವಿಲೈಝೇಶನ್  ಎಂದೇ ಗ್ರಹಿಸಿದರು.
ಕೊಸಾಂಬಿ, ಮಾಕ್ರ್ಸ್ವಾದವನ್ನು ಗ್ರಹಿಸಿದ ಪರಿ ವಿಶಿಷ್ಠ ಮತ್ತು ಮಾದರಿಯದೂ ಕೂಡಾ. ರಾಜಕೀಯ ಚಿಂತನೆಯ ಅನ್ವಯವಾಗಿ, ಒಂದು ಕಾಲ ಅಭಾದಿತ ತತ್ವ, ಚಿಂತನಾ ಪ್ರಣಾಳಿಯಾಗಿ ಕೊಸಾಂಬಿ ಅದನ್ನು ಗ್ರಹಿಸಲೇ ಇಲ್ಲ. ಇದು ಕೊಸಾಂಬೀ ಮಾತ್ರವಲ್ಲ, ಅವರ ಹೆಗಲ ಮೇಲೆ ನಿಂತು ಬೆಳೆದಂತಹ ರೊಮಿಲಾ ಥಾಪರ್, ಆರ್.ಎಸ್. ಶರ್ಮಾ, ಡಿ.ಎನ್. ಝಾ, ಕೇಶವನ್ ವೆಲುತ್ತಾಟ್ ಮೊದಲಾದ ಅದೇ ಪರಂಪರೆಯ ಹೆಚ್ಚಿನ ಇತಿಹಾಸಕಾರರೂ ಅವರನ್ನೇ ಅನುಸರಿಸಿದರು. ಮಾಕ್ರ್ಸ್ವಾದ, ಕೊಸಾಂಬಿಗೆ ಬರಿಯ ವಿಧಾನ, ಅದೊಂದು ಟೂಲ್ ಬದಲು ತಿದ್ದುಪಡಿ ಮಾಡಲಾಗದ ಸಂವಿಧಾನವಲ್ಲ. ಅದು ಕಾಲಕಾಲಕ್ಕೆ ಬದಲಾಗುವ, ಸಾಮಾನ್ಯೀಕರಣಗಳನ್ನು ಶಾಶ್ವತವಾಗಿ ಮಾಡಲಾಗದಂತಹ ಒಂದು ಮಾಧ್ಯಮ ಟೂಲ್ ಅಷ್ಟೇ. ಜೀನ್-ಪಾಲ್-ಸಾತ್ರ್ರೆ ಹೇಳುವ ಹಾಗೆ, ‘ಅದೊಂದು ಸಮಯದ ಅಗತ್ಯದ ತಾತ್ವಿಕತೆಯಷ್ಟೇ ಕೊಸಾಂಬಿಗೆ. ಇದೇ ಕಾರಣದಿಂದ ಕೊಸಾಂಬೀ ಸಾಂಪ್ರದಾಯಿಕ ಮಾಕ್ರ್ಸ್ವಾದಿಗಳ ಅಥವಾ ಅಫೀಶಿಯಲ್ ಮಾಕ್ರ್ಸಿಸ್ಟ್ ಅಥವಾ ಓಮ್ ಮಾರ್ಕಿಸ್ಟ್ರಿಂದ ಸಾಕಷ್ಟು ಅಸಮ್ಮತಿಯನ್ನೂ ಎದುರಿಸಬೇಕಾಯ್ತು. ಕೊನೆಗೂ ಅವರು ಖಡಾಖಂಡಿತವಾಗಿ ಪಾರ್ಟಿಲೈನ್ನ್ನು ವಿರೋಧಿಸಿ ಓಮ್ ಗಳಿಗೆ ಹೇಳಿದ್ದು ಹೀಗೆ, ‘ಮಾಕ್ರ್ಸಿಸಮ್ ವಾಸ್ ನಾಟ್ ಪ್ರೂವ್ಡ್ ಆರ್ ಜಸ್ಟಿಫೈಡ್,ಬಟ್ ಸಿಂಪ್ಲಿ ಬಿಯಿಂಗ್ ಯೂಸಡ್ ಯಾಸ್ ಟೂಲ್ ಆಫ್ ಪ್ರೊಫೆಶನಲ್ ಇನ್ವೆಸ್ಟಿಗೇಶನ್. ಇದೇ ನೆಲೆಯಿಂದ ಮಾಕ್ರ್ಸ್ನನ್ನು ಕಣ್ಣು ಮುಚ್ಚಿ ಒಪ್ಪದೇ, ಆತ ಭಾರತೀಯ ಸಮಾಜದ ಬಗೆಗೆ ಮಾಡಿದ ವಿಭಾಗೀಕರಣಗಳಲ್ಲಿ ಮುಖ್ಯವಾದಂತಹಏಶಿಯಾಟಿಕ್ ಮೋಡ್ ಆಫ್ ಪ್ರೊಡಕ್ಶನ್ ಮತ್ತುಒರಿಯಂಟಲ್ ಡೆಸ್ಪಾಟಿಸಮ್ ಪರಿಕಲ್ಪನೆಯನ್ನು ತಿರಸ್ಕರಿಸಿದರು ಅಪ್ರಸ್ತುತವೆಂದು ತೀರ್ಮಾನಿಸಿ.
ಭಾರತೀಯ ಚರಿತ್ರಶಾಸ್ತ್ರ ಅಥವಾ ಹಿಸ್ಟೋರಿಯೋಗ್ರಫಿಯಲ್ಲಿ ಕೊಸಾಂಬೀ ನಿಜವಾಗಿಯೂ ಒಬ್ಬ ಯುಗ ಪ್ರವರ್ತಕ, ಮಾದರಿ ನಿರ್ಮಾತೃ.ಆದರೂ ಕೊಸಾಂಬಿ ಯೋಚನೆಯಲ್ಲಿ ಮಿತಿಗಳಿಲ್ಲ ಎಂದಿಲ್ಲವಲ್ಲ. ವಿಶೇಷವಾಗಿ ಮೌರ್ಯರು ಪಂಚ್ಡ್ ಮಾರ್ಕ್ ನಾಣ್ಯಗಳನ್ನು ಟಂಕಿಸಿಲ್ಲ ಬದಲು ವ್ಯಾಪಾರಿಗಳು ಅಥವಾ ಆಗಿನ ವೃತ್ತಿ ಸಂಘಗಳು ಎನ್ನುವ ಪ್ರಮೇಯ ಇತ್ತೀಚಿನ ದಿನಗಳಲ್ಲಿ ತಿರಸ್ಕøತವಾಗಿದೆ. ಆರ್ಯನ್ ಒಂದು ಜನಾಂಗವಾಗಿ ವಾಯುವ್ಯಭಾಗದಿಂದ ಬಂದು ಹರಪ್ಪಾದ ನೀರಾವರೀ, ನಗರ ವ್ಯವಸ್ಥೆಂiÀiನ್ನು ಹಾಳು ಮಾಡಿದರು ಎನ್ನುವುದಾಗಿ, ಕೊಸಾಂಬಿಯವರು ಮಾರ್ಟಿಮರ್ ವ್ಹೀಲರ್, ‘ಇಂದ್ರ ಸ್ಟ್ಯಾಂಡ್ಸ್ ಅಕ್ಯೂಸ್ಡ್ ಉಕ್ತಿಯನ್ನೇ ಪುನರ್ಪ್ರತಿಪಾತಿಸಿದ್ದೂ ಕೂಡಾ ಇಂದು ಅಪ್ರಸ್ತುತ. ರೊಮಿಲಾ ಥಾಪರ್, ಥಾಮಸ್ ಟ್ರಾಟ್ಮನ್ರಂತಹ ಚಿಂತಕರು ಪ್ರಾಕ್ತನಶಾಸ್ತ್ರೀಯ, ಭಾಷಾಶಾಸ್ತ್ರೀಯ ಮತ್ತು ಮಾನವಶಾಸ್ತ್ರೀಯ ನೆಲೆಯಲ್ಲಿಆರ್ಯ ಆಕ್ರಮಣವಾದವನ್ನು ತಳ್ಳಿಹಾಕಿದ್ದಾರೆ. ಇದೇ ರೀತಿ ಕೊಸಾಂಬಿ, ಅರ್ಲಿ ಸೊಸೈಟಿ ಅಥವಾ ಆರಂಭ ಸಮಾಜಗಳ ಬಗ್ಗೆ ಯೋಚಿಸುವಾಗಲೂ ಹೆಚ್ಚು ಪ್ರಸ್ತಾಪಿಸಿದ್ದು ಮಾಕ್ರ್ಸ್ ಮತ್ತು ಫ್ರೆಡ್ರಿಕ್ ಏಂಗೆಲ್ಸ್ ಮಾದರಿಯನ್ನು. ಆದರೆ ಇವರಿಬ್ಬರನ್ನ ಅದ್ಭುತವಾಗಿ ವಿಮರ್ಶಿಸಿ, ಹೊಸದಾದ ಮಾನವಶಾಸ್ತ್ರೀಯ ಸಂರಚನೀಯ ಮಾದರಿಗಳನ್ನು ಅರ್ಲಿ ಸೊಸೈಟಿ ಬಗ್ಗೆ ನೀಡಿದ ಕಾರ್ಲ್ ಪೊಲ್ಯಾನಿ ಮತ್ತು ಮಾರಿಸ್ ಗುಡಿಲಿಯರ್ರನ್ನು ಸ್ವಲ್ಪವಾದರೂ ಅನುಸರಿಸಬೇಕಿತ್ತು ವೈಧಾನಿಕವಾಗಿ, ಎನ್ನುವುದು ಕೆಲವು ಇತಿಹಾಸಕಾರರ ಅಂಬೋಣ.
ಕೊಸಾಂಬಿಯ ಕೆಲವು ಸೀಮಿತತೆಗಳು ಅವರ ಅದ್ಭುತ ಗಂಭೀರ ಶ್ರೇಷ್ಠತೆಯ ಗುಣಮಟ್ಟದ ನಡುವೆ ಕಡಿಮೆಯೇ. ಕೊಸಾಂಬೀ ನೇರವಾಗಿ ಯಾವುದೇ ರೀತಿಯ ಕೊಸರಿಕೆ ಇಲ್ಲದೇ ಮಾಕ್ರ್ಸ್ವಾದವನ್ನು ಮಾನ್ಯತೆ ಮಾಡಿದ್ದೂ ಕೂಡಾ ಅವರ ಬೌದ್ಧಿಕ ಪ್ರಾಮಾಣಿಕತೆಗೆ ಸಾಕ್ಷಿ. ಕೊಸಾಂಬಿ, ಸಮಕಾಲೀನ ಸಾಂಸ್ಕøತಿಕ ಪುನರುಜ್ಜೀವನ, ಏಕಶಿಲೀಯ ಇದಮಿಥ್ಥಮ್ ರಾಷ್ಟ್ರವಾದ ಮತ್ತು ಚೌವಿನಿಸಮ್ಗಳ ಹೊರಗೆ ನಿಂತು ಸೃಜನಶೀಲವಾಗಿ ಆಲೋಚಿಸಿದ್ದೂ ಕೂಡಾ, ಅವರು ಭಾರತೀಯ ಇತಿಹಾಸ ಸಂಬಂಧಿತ ಹಲವು ಪ್ರಶ್ನೆಗಳಿಗೆ ಉತ್ತರ ದೊರಕಿಸುವ ಹಾಗೆ ಪರಿಸ್ಥಿತಿ ನಿರ್ಮಿಸಿತು. ರೊಮಿಲಾಥಾಪರ್ ಹೇಳುವ ಹಾಗೆ, ‘ಹೊಸ ಸಾಕ್ಷ್ಯಗಳು, ಪ್ರಶ್ನೆಗಳ ಉತ್ತರಗಳನ್ನು ಪುನರ್ಪರೀಕ್ಷೆಗೆ ಒಳಪಡಿಸುವ ಹಾಗೆ ಮುನ್ನಡೆದರೂ ಕೂಡಾ, ಕೊಸಾಂಬಿ ಭಾರತೀಯ ಚರಿತ್ರಶಾಸ್ತ್ರದಲ್ಲಿ ಕೇಳಿದ ಪ್ರಶ್ನೆಗಳು ಮತ್ತು ಅವರು ಹೊಂದಿದ್ದ ಕಳಕಳಿ ಈಗಲೂ ಸಿಂಧುವಾಗಿದೆ.

                             ಪ್ರದೀಪ ಕುಮಾರ್ ಶೆಟ್ಟಿ ಕ್ಯಂಚ್ನೂರ್                     

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ಸಿನಿಮಾ ಚರಿತ್ರೆ : ಸಮಾಜ, ಸಂಸ್ಕøತಿ ಮತ್ತು ರಾಜಕಾರಣ

ಕರ್ನಾಟಕದಲ್ಲಿ ಸೂಫಿಗಳು

ಚಾರಿತ್ರಿಕ ಕೃತಿಯ ಹಲವು ಓದಿನ ಸಾಧ್ಯತೆಗಳು: ಹಿಂದ್ ಸ್ವರಾಜ್ ಮಾದರಿ