ಜವಹರ್‍ಲಾಲ್ ನೆಹರೂಗೊಂದು “ಚರಿತ್ರೆಯ ಚೌಕಟ್ಟು”
ಜವಹರ್ಲಾಲ್ ನೆಹರೂ ಅವರ 125ನೆಯ ಜನ್ಮಶತಿಯನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ನೆಹರೂ ಜನ್ಮದಿನದ ಆಚರಣೆ, ಕ್ರಿಯಾವಿಧಿಯ ಹಾಗೆ ರಾಜಕೀಯ ಪಕ್ಷವಾದ ಕಾಂಗ್ರೆಸ್ನಲ್ಲಿ ನಡೆದುದನ್ನು ಹೊರತುಪಡಿಸಿ ಉಳಿದಂತೆ ಇಡೀ ದೇಶವೇ, ದೇಶ ಕಂಡ ಮಹಾನ್ ನಾಯಕನನ್ನು, ನಾಯಕನ ವೈವಿಧ್ಯದ ಮುಖವನ್ನು ನೆನೆಯುತ್ತಿಲ್ಲ. ಭಾರತೀಯ ಜನತಾ ಪಕ್ಷ ಅತಾರ್ಕಿಕವಾಗಿ ಗಾಂಧಿ ಮತ್ತು ಪಟೇಲ್ರ ಬಳಕೆ ಮಾಡುತ್ತಿದೆ. ಗಾಂಧಿಯ ಯೋಚನೆ ಮತ್ತು ಕ್ರಿಯಾನ್ವಯ ಅತ್ಯಂತ ಪ್ರಮುಖವಾದುದೇ ಆದರೂ ಕೂಡಾ ಪಟೇಲ್ ಎನ್ನುವ ‘ಉಕ್ಕಿನ ಮಾನವ’ನ ಪ್ರತಿಮೆಯ ಬಳಕೆಯ ಹಿಂದೆ ಇರುವುದು ಕೇವಲ ಪಟೇಲ್ರವರು ಕೆಲವು ಸಂದರ್ಭದಲ್ಲಿ ಒಪ್ಪಿಕೊಂಡಿದ್ದ ಕೋಮುವಾದೀ ರಾಜಕಾರಣದ ಚಹರೆಗಳಿಂದ,ಚಹರೆಗಾಗಿಯಷ್ಟೇ. ಸ್ವತಂತ್ರೋತ್ತರ ಸಂದರ್ಭದಲ್ಲಿ ಕೆ.ಎಂ. ಮುನ್ಶಿ ಮತ್ತು ಪಟೇಲ್ ನಡೆದುಕೊಂಡ ಅನೇಕ ಸಂದರ್ಭಗಳು, ಸೋಮನಾಥ ದೇಗುಲದಂತಹ ದೇಗುಲದ ಮರು ನಿರ್ಮಾಣ ಹಾಗೂ ಅಂತಹ ದೇಗುಲದ ಪ್ರತಿಮೆಗಳನ್ನು ರಾಷ್ಟ್ರೀಯಸ್ಮಾರಕ, ಸಂಸ್ಕ್ರತಿಯ ಅನುರೂಪಗಳÉಂದು ಗುರುತಿಸಿದ ಪ್ರಯತ್ನಗಳು, ಪಟೇಲ್ ಒಬ್ಬರೇ ಅತ್ಯಂತ ವಿಶಿಷ್ಠವಾಗಿ ಹೊಂದಿದ್ದ ನಿರಂಕುಶತೆಯ ಮನೋಭಾವ ಮತ್ತು ಉಗ್ರ ರಾಷ್ಟ್ರೀಯವಾದ ಮುಂತಾದ ಅನೇಕ ಚಾರಿತ್ರಿಕ ಮತ್ತು ರಾಜಕೀಯ ಅಂಶಗಳಿಂದ ಪಟೇಲ್ರನ್ನು ಅಪ್ಯಾಯಮಾನರನ್ನಾಗಿ ಸ್ವೀಕರಿಸಿದ ವರ್ತಮಾನದ ರಾಜಕೀಯ ಆಯ್ಕೆಗಳು ಇದಾಗಿವೆ. ಪ್ರಾಯಶ: ದೇಶ ಕಂಡಿದ್ದ, ದೇಶ ಅಥವಾ ಭಾರತದ ಭೂಗೋಳ, ವೈವಿಧ್ಯತೆ, ಜಾತ್ಯಾತೀತತೆ, ಸಮಗ್ರತೆ, ಮುಂತಾದ ಸಂಗತಿಗಳ ಅನುಭವಜನ್ಯ ಜ್ಞಾನವನ್ನು ಹೊಂದಿದ್ದಂತಹ ನೆಹರೂ ಎನ್ನುವ ವಿದ್ಯಮಾನ ಮತ್ತು ಪ್ರಾಕ್ಕಲ್ಪನೆಯನ್ನು ಹೊಸಕುವ, ಮರೆಸುವ ಬೌದ್ಧಿಕ ರಾಜಕಾರಣ ಮತ್ತದನ್ನು ಜಾರಿಗೆ ತರುವ ಶಕ್ತ ರಾಜಕಾರಣದ ಭಾಗವಾಗಿಯೇ ನಾವಿದನ್ನು ಗುರುತಿಸಬಹುದಾಗಿದೆ. ಈ ರೀತಿಯ ಪ್ರತೀ ರಾಜಕೀಯ, ಚಾರಿತ್ರಿಕ ವ್ಯಕ್ತಿಗಳ ಆಯ್ಕೆಯೇ ಒಂದು ರಾಜಕಾರಣ. ಆದರೆ ಅಂತಹ ಆಯ್ಕೆಗೆ ಕನಿಷ್ಠ ಮಟ್ಟಿಗೆ ತರ್ಕಗಳು ಬೇಕು ಮತ್ತು ಅಂತಹ ತರ್ಕಗಳು ಪ್ರಜಾಪ್ರಭುತ್ವೀಯ ನೆಲೆಯ ಪ್ರತೀಕವಾಗಿ ಮತ್ತು ಭಾರತದಂತಹ ಒಂದು ದೊಡ್ಡ ಗಣತಂತ್ರ ಸಮುದಾಯದ, ವ್ಯವಸ್ಥೆಯ ಪ್ರತಿನಿಧಿತವಾಗಿರಬೇಕು. ಇಂತಹ ಆಯ್ಕೆ ದೇಶ, ಸಮಾಜ ಮತ್ತು ಸಮುದಾಯದ ಅಸ್ತಿತ್ವವನ್ನೇ ಘಾತಿಸುವ ಆಯ್ಕೆಯಾಗಿ ಕೂಡಾ ಕಾಣುವುದು ಈ ನೆಲೆಯಿಂದಲೇ. ನೆಹರೂ ಪ್ರತಿನಿಧಿಸಿದ ಅತ್ಯಂತ ಸಮಗ್ರ ನೆಲೆಯ ಪ್ರಜಾಪ್ರಭುತ್ವೀಯ-ಜಾತ್ಯತೀತ ನಿಲುಮೆಗಳೇನು? ಅವುಗಳ ಆಯಾಮಗಳೇನು? ಅವುಗಳ ಸಂಕೀರ್ಣತೆಯೇನು? ಅವುಗಳನ್ನು ಗಳಿಸಲು ನೆಹರೂ ಹಾದುಬಂದ ಚಾರಿತ್ರಿಕ ಕಾಲ ಮತ್ತು ಅನುಭವವೇನು? ಎನ್ನುವ ಅನೇಕ ಪ್ರಶ್ನೆಗಳನ್ನಿಟ್ಟು ಇಂತಹ ಸಂಗತಿಗಳು ಹೇಗೆ ಸ್ವತಂತ್ರೋತ್ತರ ಭಾರತದಲ್ಲಿ ‘ನೇಶನ್ ಇನ್ ದಿ ಮೇಕಿಂಗ್’ ಎಂಬ ಗತ ಮತ್ತು ವರ್ತಮಾನದ ಪ್ರಕ್ರಿಯೆಯನ್ನು ಪ್ರಭಾವಿಸುತ್ತಿದೆ ಎನ್ನುವುದನ್ನು ಗಮನಿಸಿದಾಗ ನೆಹರೂ ಅಂದರೆ ಏನು? ಎನ್ನುವ ಸಂಕೀರ್ಣತೆ ಮತ್ತು ಪ್ರಕ್ರಿಯೆ ಅನುಭವಕ್ಕೆ ಬರುತ್ತದೆ. ಒಂದು ಪಕ್ಷ ಮದನ ಮೋಹನ ಮಾಲವೀಯರಿಗೆ ಭಾರತ್ನರತ್ನ ಕೊಡುವ ಹಿಂದೆ, ಇನ್ನೊಂದು ಪಕ್ಷ ಇನ್ನೊಬ್ಬರಿಗೆ ಭಾರತರತ್ನ ಕೊಡುವ ಹಿಂದಿನ ತರ್ಕವೂ ಕೂಡಾ ಅದೇ ಆಗಿದೆ. ಚರಿತ್ರೆಯ ಪ್ರತೀಕಗಳನ್ನು ವರ್ತಮಾನದ ರಾಜಕಾರಣ ಮತ್ತದರ ನ್ಯಾಯಬದ್ಧತೆಗೆ ಬಳಸಿಕೊಳ್ಳುವ ಹಿಂದಿನ ಪ್ರಯತ್ನಗಳೂ ಕೂಡಾ ಇದೇ ಧಾಟಿಯವು.
ಮೊನ್ನೆ ಮೊನ್ನೆ ಪೇಶಾವರದಲ್ಲಿ ತಾಲಿಬಾನೀಗಳು ನಡೆಸಿದ 154 ಮಕ್ಕಳ ಹತ್ಯೆಯ ಪ್ರಕರಣದಲ್ಲಿನ ಆ ಸಂದರ್ಭದಲ್ಲಿ ವಿದ್ವಾಂಸ ತಾರಿಖ್ ಆಲೀ ಮಾಡಿದಂತಹ ವಿಶ್ಲೇಷಣೆ, ಪಾಕಿಸ್ತಾನದ ದುರ್ದೆಸೆಯನ್ನು ಸುಮಾರು ಸ್ವತಂತ್ರಗೊಂಡ ಪಾಕಿಸ್ತಾನದ ಸಂದರ್ಭದ ನಾಯಕತ್ವದಲ್ಲಿ ಗುರುತಿಸಿದ ಬಗೆಯಾಗಿತ್ತು. ಅವರು ಹೇಳುವ ಪ್ರಕಾರ ಪಾಕಿಸ್ತಾನದ ಮೂಲಭೂತವಾದ, ಇನ್ನೂ ಒದಗದ ಭೂಸುಧಾರಣೆ, ಅಂತಹ ಸ್ಥಿತಿ ರೂಪಿಸಿದ ಮಿಲಿಟರಿ ಆಡಳಿತದ ತಹತÀಹಿಕೆ, ಅಧಿಕಾರ ಕಬಳಿಕೆ, ದೊಣ್ಣೆ ನಾಯಕತನ ಮತ್ತು ಸೃಜಿಸದ ಪ್ರಜಾಪ್ರಭುತ್ವೀಯ ಮೌಲ್ಯಗಳು- ಹೀಗೆ ಇನ್ನೂ ಅನೇಕ ಸಮಸ್ಯೆಗಳು ಹುಟ್ಟಿದ್ದೇ ನಾಯಕತ್ವ, ದುರ್ಬಲ ನಾಯಕತ್ವದ ಸಮಸ್ಯೆಯಿಂದಾಗಿ. ಒಂದು ವೇಳೆ ನೆಹರೂ ಅಂತಹ ನಾಯಕ ಪಾಕಿಸ್ತಾನಕ್ಕೆ ಲಭಿಸಿದ್ದಿದ್ದರೆ ಪಾಕಿಸ್ತಾನದ ಸ್ಥಿತಿಯೇ ಬದಲಾಗುತ್ತಿತ್ತು. ತಾರಿಖ್ ಆಲಿ ವಿಶ್ಲೇಷಣೆಯ ಪ್ರಕಾರ. ಭಾರತದ ಸಂದರ್ಭದಲ್ಲಿ ಕೂಡಾ ನೆಹರೂ ಬದಲಿಗೆ ಸ್ವತಂತ್ರ ಭಾರತ ಪಟೇಲರನ್ನಾಗಲೀ ಅಥವಾ ಇನ್ನಾರನ್ನೇ ಆಗಲಿ ನಾಯಕತ್ವದ ರೂಪದಲ್ಲಿ ಅನುಭವಿಸಿದ್ದಿದ್ದರೆ ಭಾರತದ ಪ್ರಜಾಪ್ರಭುತ್ವೀಯ ಭವಿಷ್ಯ ಮತ್ತು ಗಮನ ಗಂತವ್ಯವೇ ಬೇರೆ ರೂಪದಲ್ಲಿರುತ್ತಿತ್ತು. ನೆಹರೂ ದೂರದೃಷ್ಟಿ, ಸಮಾಜವಾದೀಯ ತಾತ್ವಿಕತೆ, ಜಾತ್ಯಾತೀತತೆಯಂತಹ ರಾಜಕೀಯ-ಸಾಮಾಜಿಕ ಮೌಲ್ಯಗಳೇ ಇಂದಿನ ಭಾರತವನ್ನು, ಇಲ್ಲಿನ ಸಹಬಾಳ್ವೆಯ ವರ್ತಮಾನವನ್ನು ರೂಪಿಸಿದ ಸಂಗತಿಗಳು. ಇಂತಹ ತಾತ್ವಿಕತೆಗಳಿಗೆ ಪ್ರಾಯೋಗಿಕ ಬದ್ಧತೆ ಕೂಡಾ ನೆಹರೂಗಿತ್ತು. ಸ್ವತಂತ್ರೋತ್ತರ ಭಾರತದ ಅನೇಕ ಸಂದರ್ಭಗಳಲ್ಲಿ ಅದು ಸಾಬೀತಾಗಿತ್ತು. ಅಂತಹ ಒಂದು ಉದಾಹರಣೆಯೆಂದರೆ, ಕೆ.ಎಂ. ಮುನ್ಶಿ ಸೋಮನಾಥ ದೇಗುಲವನ್ನು ನಿರ್ಮಿಸುವಲ್ಲಿನ ವೆಚ್ಚವನ್ನು ಕೇಂದ್ರ ಸರ್ಕಾರ ನಿರ್ವಹಿಸಬೇಕು ಎಂದಾಗ, ನೆಹರೂ ಅದನ್ನು ಖಡಾಖಂಡಿತವಾಗಿ ನಿರಾಕರಿಸಿದ್ದರು. ಇಂತಹ ನೆಹರೂ ಬದ್ಧತೆ ಮತ್ತು ಸಮಾಜವಾದೀಯ ನಿಲುವುಗಳು ನಂತರದ ಕಾಂಗ್ರೆಸ್ ಮತ್ತು ಭಾ.ಜ.ಪಾದ ಸೈದ್ಧಾಂತಿಕತೆಗೆ ನಿಲುಕದೆ ಪರಸ್ಪರ ರಾಜಕಾರಣ ಮತ್ತು ತುಷ್ಠೀಕರಣದ ದಿಕ್ಕಿನಲ್ಲಿ ಸಾಗಿದ್ದು ಸ್ವತಂತ್ರ ಭಾರತದ ಒಂದು ವ್ಯಂಗ್ಯ.(ಉದಾ-ರಾಜೀವ್ ಗಾಂಧೀ ಸಂದರ್ಭದ ರಾಮ್ ಪೂಜನ್-ಶಾಬಾನೋ ಪ್ರಕರಣ ಇತ್ಯಾದಿ)
ನೆಹರೂ ಮೇಲಿನ ಎರಡು ಬಹುಮುಖ್ಯವಾದಂತಹ ಟೀಕೆಗಳು ಎರಡು ವೈರುಧ್ಯೀಯ ನೆಲೆಗಳಿಂದ ಸ್ವತಂತ್ರ ಭಾರತದಲ್ಲಿ ರೂಪುಗೊಂಡಿರುವುದನ್ನು ನಾವು ನೋಡಬಹುದು. ಅವುಗಳಲ್ಲಿ ಒಂದು: ಜನಪರವಲ್ಲದ, ಕೋಮುವಾದಿ, ಬಲಪಂಥೀಯ ಪರಂಪರೆ ಇನ್ನೊಂದು; ನೆಹರೂವನ್ನು ಅತ್ಯಂತ ತಾತ್ವಿಕವಾಗಿ ಪ್ರಶ್ನಿಸಿ, ಎದುರಿಸಿದ, ನೆಹರೂವಿಯನ್ ಫೇಬಿಯನ್ ಸಮಾಜವಾದವನ್ನು ಸೈದ್ಧಾಂತಿಕವಾಗಿ ಮುಖಾಮುಖಿಯಾದಂತಹ ಲೋಹಿಯಾ ಜಿ.ಪಿ ಮಾದರಿ. ಇವುಗಳಲ್ಲಿ ಮೊದಲನೆಯ ಬಲಪಂಥೀಯ ಮಾದರಿಯು ಕುತರ್ಕ, ತರ್ಕರಹಿತ ಮತ್ತು ವಿವೇಕ ಶೂನ್ಯ ಜಾರ್ಗನ್ಗಳಿಂದ ಕೂಡಿದ ಒಂದು ಸೈದ್ಧಾಂತಿಕ ಚೌಕಟ್ಟಾಗಿದೆ. ನೆಹರೂವನ್ನು ಅತ್ಯಂತ ಔಪಚಾರಿಕವಾಗಿ ಪ್ರಶ್ನಿಸಿದ ಜಯಪ್ರಕಾಶ್ ನಾರಾಯಣ್-ಲೋಹಿಯಾ ಮಾದರಿ ಮಾತ್ರ ಅತ್ಯಂತ ಪ್ರಬುದ್ಧವಾದ ಪ್ರಶ್ನೆ ಮತ್ತು ತರ್ಕಗಳಿಂದ ನೆಹರೂವನ್ನು ಎದುರುಗೊಂಡಿತು. ನೆಹರೂವಿಯನ್ ಅಭಿವೃದ್ಧಿ, ಆತನ ಪ್ಲಾನಿಂಗ್ ಸಮಸ್ಯೆಗಳು, ನೆಹರೂ ತನ್ನ ಯೋಜನೆ ಮತ್ತು ಆರ್ಥಿಕ ನೀತಿಗಳಲ್ಲಿ ಗಾಂಧಿವಾದ-ಸ್ವರಾಜ್ ಅನ್ನು ಅಳವಡಿಸದಿರುವಿಕೆ ಮುಂತಾದ ಇನ್ನೂ ಅನೇಕ ಸಮಸ್ಯೆಗಳನ್ನು, ಸಮಕಾಲೀನ ಸಂದರ್ಭಗಳ ಕುರಿತು ಜೆ.ಪಿ-ಲೋಹಿಯಾ ಬಳಗ ತಾತ್ವಿಕ ವೈಚಾರಿಕ ಜಟಾಪಟಿಯನ್ನು ನಡೆಸಿತು. ಬಹುಶ: ಭಾರತದ ಸ್ವತಂತ್ರೋತ್ತರ ಸಂದರ್ಭದಲ್ಲಿನ ಮೂರು ಬಹುಮುಖ್ಯ ಚಿಂತನಶಾಲೆಗಳೆಂದು ಕರೆಸಿಕೊಂಡ ಗಾಂಧೀವಾದ, ಅಂಬೇಡ್ಕರ್ವಾದ ಮತ್ತು ಲೋಹಿಯಾ ಸಮಾಜವಾದದಲ್ಲಿ ಲೋಹಿಯಾವಾದ ನೆಹರೂ ಮತ್ತು ಕಾಂಗ್ರೆಸ್ ಬಗ್ಗೆ ಹಲವು ಅನುಭವಜನ್ಯ-ತಾತ್ವಿಕ ಪಾಟೀಸವಾಲುಗಳನ್ನು, ನೆಹರೂವನ್ನು ಒಳಗೊಂಡಂತೆ ನೀಡಿತು.
ನೆಹರೂ ಮೇಲಿನ ಈ ಟೀಕೆಗಳನ್ನು ಹೊರತುಪಡಿಸಿಯೂ ಕೂಡಾ ಸ್ವತಂತ್ರೋತ್ತರ ಸಂದರ್ಭದ ಮತ್ತು ಭಾರತದ ನಾಯಕರ ಚರಿತ್ರೆಯ ಬಹುದೊಡ್ಡ ನಾಯಕನೆಂದೇ ಚರಿತ್ರಕಾರ ರಾಮ್ಚಂದ್ರ ಗುಹಾ, ನೆಹರೂವನ್ನು ‘ಆಧುನಿಕ ಭಾರತದ ಒಬ್ಬ ನಿರ್ಮಾತೃ’ ಎಂದು ಕರೆಯುವುದು. ನೆಹರೂ ವ್ಯಕ್ತಿತ್ವವೆಂದು ಕರೆಯಬಹುದಾದ ಅನ್ವಯಿಕ ನೆಲೆಯ ವಿಜ್ಞಾನ-ತಂತ್ರಜ್ಞಾನದ ಕಾರ್ಯಕ್ರಮಗಳು, ಯೋಜನೆ, ಅಭಿವೃದ್ಧಿಯ ನೆಲೆ-ನಿಲುವು-ಮಾಧ್ಯಮ ಮತ್ತು ಅಭಿವ್ಯಕ್ತಿಯ ಒಂದು ಆಯಾಮ ಹಾಗೂ ನೆಹರೂ ಹೊಂದಿದ್ದಂತಹ ಒಂದು ಪೊಲಿಟಿಕಲ್ ಫಿಲಾಸಫಿಯ ನೆಲೆಯ ಆಯಾಮದ ಕಾರಣದಿಂದ ಗುಹಾ ನೆಹರೂವನ್ನು ಒಬ್ಬ ದೂರದೃಷ್ಟಿಯ ನಾಯಕ ಎಂದು ಕರೆದಿರುವುದು. ಈಗಾಗಲೇ ಪ್ರಸ್ತಾಪಿಸಿದ ಹಾಗೆ ನೆಹರೂ ಹೊಂದಿದ್ದ ರಾಜಕೀಯ ತಾತ್ವಿಕತೆ ಮತ್ತದರ ಭಾಗಗಳಾದ ಜಾತ್ಯಾತೀತತೆ, ಫೇಬಿಯನ್ ಸಮಾಜವಾದ, ಒಳಗೊಳ್ಳುವಿಕೆ (ಇನ್ಕ್ಲೂಶನ್) ಮುಂತಾದ ಸಂಗತಿಗಳು ಭಾರತದ ಭವಿತವ್ಯವನ್ನು ನಿರ್ಮಿಸಿದುವು ಎನ್ನುವುದು ರಾಂ ಗುಹಾ ಅಭಿಮತ.
ನೆಹರೂ ಬಗೆಗೆ ಬಂದಿರುವ ಸಾಕಷ್ಟು ಬರವಣಿಗೆಗಳು ನೆಹ್ರೂವಿಯನ್ 1950ರ ನಂತರದ ಅವಧಿಯನ್ನು ಕುರಿತಿವೆ. ಅವುಗಳನ್ನು ಅಭಿವೃದ್ಧಿ, ಯೋಜನೆ, ರಾಜಕೀಯ ನಿಲುವುಗಳ ಹಿನ್ನೆಲೆಯಲ್ಲಿಯೇ ಅರ್ಥೈಸಿಕೊಳ್ಳಲಾಗುತ್ತಿದೆ. ಆದರೆ ಅಂತಹ ನೆಹರೂವಿನ 1944ರ ಪೂರ್ವದ ವ್ಯಕ್ತಿತ್ವದ ಕುರಿತು ಕಥನಗಳೇ ಕಡಿಮೆ. ಸ್ವತಂತ್ರೋತ್ತರ ನೆಹರೂ ಎಂಬ ನೆಹರೂ ವ್ಯಕ್ತಿತ್ವದ ದ್ವಿತೀಯಾರ್ಧ ರೂಪುಗೊಂಡಿದ್ದೇ ಚಾರಿತ್ರಿಕವಾದ ಆ ಪರಿಪ್ರೇಕ್ಶದಲ್ಲಿ. ನನ್ನ ಈ ಬರಹ ಸ್ವತಂತ್ರಪೂರ್ವ ನೆಹರೂ ಎಂಬ ವಿದ್ಯಮಾನದ ವಿಶ್ಲೇಷಣೆಯನ್ನು ನಡೆಸುತ್ತದೆ. ವಿಶೇಷವಾಗಿ ಆ ಸಂದರ್ಭದ ಒಂದು ವಿಶಿಷ್ಠ ಚಾರಿತ್ರಿಕ ಪ್ರಕ್ರಿಯೆ ಮತ್ತು ಅನುಭವವಾದ ಭಾರತದ ರಾಷ್ಟ್ರೀಯ ಹೋರಾಟವು ಅವರನ್ನು ಹೇಗೆ ರೂಪಿಸಿತು?, ಸ್ವತಂತ್ರ ಹೋರಾಟದ ಅಂಗರಚನೆ ಮತ್ತು ವಿನ್ಯಾಸವನ್ನು ತಿದ್ದಿ ತೀಡಿ ಅದನ್ನು ನೆಹರೂ ಹೇಗೆ ಪ್ರಭಾವಿಸಿದರು? ಎನ್ನುವ ಪರೀಕ್ಷೆ ಮತ್ತು ಪ್ರಶ್ನೆಯನ್ನು ನಾನಿಲ್ಲಿ ಎತ್ತಿಕೊಳ್ಳಲಿದ್ದೇನೆ. ಸ್ವತಂತ್ರ ಚಳುವಳಿಯು ಹೊಂದಿದ್ದ ತಾತ್ವಿಕ, ತಾತ್ವಿಕತೆ ಅಥವಾ ಪೊಲಿಟಿಕಲ್ ಫಿಲಾಸಫಿಯನ್ನು ನಿರೂಪಿಸಿ ರೂಪಿಸಲು ನೆಹರೂ ಹೇಗೆ ಶ್ರಮಿಸಿದ್ದರು ಎನ್ನುವಂತಹ ಚರ್ಚೆ ಕೂಡಾ ಇಲ್ಲಿ ಪ್ರಮುಖವಾಗುತ್ತದೆ. ಅಂತಹ ಈ ಅಧ್ಯಯನ ಸುಮಾರು 1941ರ ಹೊತ್ತಿಗೆ ನೆಹರೂ ಬೆಂಬಲಿಸಿದ ಸೋಶಿಯಲಿಸಂ ಅನ್ನು ಕಾಂಗ್ರೆಸ್ನ ಭವಿಷ್ಯ ಮತ್ತು ವರ್ತಮಾನದ ಅಜೆಂಡಾ ಆಗಿಸಲು ಅವರು ಗಾಂಧಿಯನ್ನು ಕೂಡಾ ವೈಚಾರಿಕವಾಗಿ ಮನವೊಲಿಸಿ, ಒಪ್ಪಿಸಿದಂತಹ ತಾತ್ವಿಕ ವಿಜಯದವರೆಗೆ ಅದು ಸಾಗುತ್ತದೆ. ಇಡೀ ಸ್ವಾತಂತ್ರ್ಯ ಹೋರಾಟದ ವಿಭಿನ್ನ ಮಾನವ, ವೈಚಾರಿಕ ಸ್ತರಗಳನ್ನು ನೆಹರೂ ವೈಚಾರಿಕೀಕರಿಸಿ ಪ್ರಭಾವಿಸಿದ ಸಂಗತಿಯವರೆಗೆ ಅದು ವಿಸ್ತರಿಸುತ್ತದೆ.
ಇಡೀ ಭಾರತದ ಸಮಕಾಲೀನ ರಾಷ್ಟ್ರೀಯ ಹೋರಾಟಕ್ಕೆ ಒಂದು ಪ್ರಖರವಾದ, ಮೊನಚಾದ ರ್ಯಾಡಿಕಲೈಝೇಶನ್ ಸ್ವರೂಪ ಕೊಟ್ಟಿದ್ದು ಜವಹರ್ಲಾಲ್ ನೆಹರೂ. ನೆಹರೂ ಪರಿಭಾವಿಸಿದ ಸ್ವಾತಂತ್ರ್ಯ ಸಾಮಾನ್ಯ ಸ್ವರೂಪದ್ದಾಗಿರಲಿಲ್ಲ. ಅಂತಹ ಸ್ವಾತಂತ್ರ್ಯವು ರಾಜಕೀಯ ಸ್ವಾತಂತ್ರ್ಯದ ಜತೆಗೆ ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯ ಮತ್ತು ನ್ಯಾಯವನ್ನೂ ಕೂಡಾ ಗುರಿಯನ್ನಾಗಿಸಿತ್ತು. ಅಂತಹ ಸ್ವಾತಂತ್ರ್ಯ ಹೋರಾಟವು ಶೋಷಿತರ, ದಮನಿತರ ಸಮಾಜೋ ಆರ್ಥಿಕ ಹೋರಾಟದ ಸ್ವರೂಪವನ್ನು ತನ್ನೊಳಗಿರಿಸಿತ್ತು. ಒಂದು ರೀತಿಯಲ್ಲಿ ತಾತ್ವಿಕವಾದ ಪರಿಭಾಷೆಯಲ್ಲಿ ಹೇಳುವುದಾದರೆ ಒಂದು ತತ್ವ ಮತ್ತು ಪ್ರಾಯೋಗಿಕ ನೆಲೆಯ ಸಾಮಾಜಿಕ ಸಿದ್ಧಾಂತದ ಸ್ವರೂಪವಾದ ಸೋಶಿಯಲಿಸಂ ಎನ್ನುವ ಚೌಕಟ್ಟಿನಲ್ಲಿ ಹೋರಾಟವನ್ನು ವಿನ್ಯಾಸ ಮಾಡಿದ ಕೀರ್ತಿ ನೆಹರೂವಿನದು. ಜೆ.ಪಿ-ಲೋಹಿಯಾ-ಮಿನೂ ಮಸಾನಿ ಮುಂತಾದವರೂ ಕೂಡಾ ಕಾಂಗ್ರೆಸ್ನ ಒಳಗಡೆಯೇ ಸಿ.ಎಸ್.ಪಿ ಅಥವಾ ಕಾಂಗ್ರೆಸ್ ಸೋಶಿಯಲಿಸ್ಟ್ ಪಾರ್ಟಿಯನ್ನೂ ಕೂಡಾ ಸ್ಥಾಪಿಸಿದ್ದು ನೆಹರೂ ಪ್ರೇರಣೆಯಿಂದಲೇ. ಸಿ.ಎಸ್.ಪಿ ಮತ್ತು ಕಾಂಗ್ರೆಸ್ ನಡುವಿನ ಸಮನ್ವಯ ಕೂಡಾ ಸಾಧಿತವಾಗಿದ್ದು ನೆಹರೂ ಕಾರಣದಿಂದ. ಸಿ.ಎಸ್.ಪಿ ತನ್ನ ಎರಡನೆಯ ಹಂತದಲ್ಲಿ ಒಂದು ರಿಯಲಿಸ್ಟಿಕ್ ಆದ ನಿಲುವುಗಳನ್ನು ಹೋರಾಟದಲ್ಲಿ ತಳೆಯಲು ಕಾರಣವಾಗಿದ್ದು ಈ ಹಿನ್ನೆಲೆಯಲ್ಲಿ.ಸುಮಾರು 1939 ಸಮಯದ ತ್ರಿಪುರೀ ಕಾಂಗ್ರೆಸ್ ಅಧಿವೇಶನದಲ್ಲಿ ನಾವು ನೆಹರೂ ಹಾದಿಯನ್ನು ತುಳಿಯುತ್ತೇವೆಂದೂ ತನ್ಮೂಲಕ ಕಾಂಗ್ರೆಸ್ನಲ್ಲಿಯೇ ಉಳಿಯುತ್ತೇವೆಂದೂ ಕೂಡಾ ಅವರು ಘೋಷಿಸಿದರು. ಪಿ.ಸಿ. ಜೋಷಿಯಂತಹ ಕಮ್ಯುನಿಸ್ಟ್ ಪಾರ್ಟಿಯ ನಾಯಕರಿಗೂ ಕೂಡಾ ನೆಹರೂ ಸ್ತ್ರೋತವಾಗಿದ್ದರು.
1920ರಿಂದ 1930ರ ಅವಧಿಯಲ್ಲಿ ಭಾರತದಲ್ಲಿ ಅನೇಕ ವಿದ್ಯಾರ್ಥಿ ಸಂಘಟನೆಗಳು ಮತ್ತು ಯುವಕ ಸಂಘಟನೆಗಳು, ಸ್ಟುಡೆಂಟ್ ಮತ್ತು ಯೂತ್ ಯೂನಿಯನ್ ಚಳುವಳಿಗಳಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ವದ ಭಾಗೀದಾರಿಕೆಯನ್ನು ವಹಿಸಿದುವು. ಇಂತಹ ಭಾಗೀದಾರಿಕೆ ಮತ್ತು ವಿದ್ಯಾರ್ಥಿ ಚಳುವಳಿಯ ಸಮಕಾಲೀನ ಐಕನ್ ನೆಹರೂ ಆಗಿದ್ದರು. ಆ ಹೊತ್ತಿಗೆ ಇಡೀ ಭಾರತದಲ್ಲಿ ವ್ಯಾಪಕವಾಗಿ ನೆಹರೂ ಪ್ರವಾಸ ಮಾಡಿ ಅತ್ಯಂತ ವೈಚಾರಿಕವಾಗಿ ಸಾಮ್ರಾಜ್ಯಶಾಹೀ ವಿರೋಧ, ಬಂಡವಾಳಶಾಹೀ ವಿರೋಧ, ಊಳಿಗಮಾನ್ಯ ಪ್ರಭುತ್ವೀಯ ವಿರೋಧ ಮತ್ತು ಪರಿಹಾರರೂಪವಾಗಿ ಬರಬೇಕಾದ ಸಮಾಜವಾದೀ ಸಮಾಜದ ಅಗತ್ಯ ಮತ್ತು ವಿಚಾರಗಳಿಂದ ಪ್ರೇರಿತವಾಗಿ ಇಂತಹ ಅನೇಕ ಸಂಘಟನೆಗಳು ಭಾರತದ ವೈವಿಧ್ಯದ ಭೂಭಾಗದಲ್ಲಿ ಅವುಗಳನ್ನೇ ಆಶಯವನ್ನಾಗಿ ಹೊತ್ತು ಸಾಗಿದುವು. 1930ರ ವೈಷ್ವಿಕ ಆರ್ಥಿಕ ಮಹಾಕುಸಿತದ ಸಂದರ್ಭ ಪುನ: ಪುನ: ಪ್ರವಾಸ ಮಾಡಿದ ನೆಹರೂ ಈ ರೀತಿಯಲ್ಲಿ ಸಾಂದ್ರವಾಗಿ ಸಮಾಜವಾದೀ ನೆಲೆ-ನಿಲುವಿನ ಸಂಘಟನೆಗಳು ಸೃಜನಶೀಲವಾಗಿ ಹುಟ್ಟಲು ಕಾರಣರಾದರು. ನೆಹರೂ ಪ್ರಭಾವ ಮತ್ತು ಜನಪ್ರಿಯತೆ ಅಂದಿನ ಯುವ ಸಮೂಹದಲ್ಲಿ ಎಷ್ಟಿತ್ತೆಂದರೆ 1936-1937ರಲ್ಲಿ ಕಾಂಗ್ರೆಸ್ನ ಅಧ್ಯಕ್ಷರಿಗೆ ಮೊತ್ತ ಮೊದಲ ಬಾರಿಗೆ ನಡೆದ ಚುನಾವಣೆಯಲ್ಲಿ ಅನುಕ್ರಮವಾಗಿ ಎರಡು ಬಾರಿ ಆಯ್ಕೆಯಾಗಿದ್ದು ನೆಹರೂ ಮಾತ್ರ. ಬಹುಶ: ಕಾಂಗ್ರೆಸ್ನ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಒಂದು ಪ್ರಮುಖ ಲಕ್ಷಣವಾಗಿರುವ ಚುನಾವಣೆಯನ್ನೂ ಕೂಡಾ ಜಾರಿಗೆ ತಂದಿದ್ದೆಂದರೆ ನೆಹರೂ. ನೆಹರೂ ಪ್ರಭಾವ ಇಲ್ಲಿಗೆ ಮುಗಿಯಲಿಲ್ಲ, 1938-39ರಲ್ಲಿ ಕೂಡಾ ಪುನ: ಎರಡು ಬಾರಿ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ನೆಹರೂವಿನ ಆಪ್ತರಾದ ಸುಭಾಷ್ ಬೋಸ್. ಅವರಿಗೂ ಕೂಡಾ ನೆರವಾಗಿದ್ದು ನೆಹರೂವಿನ ಈ ಪರಂಪರೆಯೇ ಆಗಿತ್ತು. ಸುಭಾಷ್ ಬೋಸ್ ಸ್ವತ: ನನಗೆ ನೆಹರೂ ಪ್ರೇರಣೆ’ಯೆಂದ ಸಂಗತಿ ಕೂಡಾ ಈ ನಿಟ್ಟಿನಲ್ಲಿ ಬಹಳ ಪ್ರಮುಖವಾದುದಾಗಿದೆ.
ಬಹುಶ: ಸ್ವತಂತ್ರ ಹೋರಾಟದ ಒಂದು ಅನುಪಮ ಉದಾಹರಣೆಯೆಂದರೆ, ಭಾರತದಲ್ಲಿ ನಡೆದಂತಹ ಕ್ರಾಂತಿಕಾರಿ ಭಯೋತ್ವಾದನಾ ಚಳುವಳಿ. ಇದರಲ್ಲಿ ಪ್ರಮುಖವಾಗಿ ಕೇಳಿಬರುವ ಹೆಸರೆಂದರೆ ಭಗತ್ಸಿಂಗ್ ಮತ್ತು ಚಂದ್ರಶೇಖರ್ ಆಝಾದ್ ಅವರು. 1927ರಲ್ಲಿ ಇವರಿಬ್ಬರೂ ಸ್ಥಾಪಿಸಿದ ಹೆಚ್.ಯಸ್.ಆರ್.ಎ ಅಥವಾ ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ ಎಂಬ ಹೆಸರಿನ ಕ್ರಾಂತಿಕಾರಿ ಗುಂಪೇ ಬಹಳ ವಿನೂತನ. ಇದರ ಹೆಸರು ಮೊದಲು ಹಿಂದೂಸ್ತಾನ್ ರಿಪಬ್ಲಿಕನ್ ಆರ್ಮಿ ಎಂದಿತ್ತು. 1926ರ ಸುಮಾರಿಗೆ ನೆಹರೂ ಜತೆ ಅನೇಕ ಬಾರಿ ಸಂವಾದ ನಡೆಸಿದ ಕಾರಣದಿಂಧ ಅದರ ವಿಚಾರ, ಯೋಚನೆ ಮತ್ತು ಐಡಿಯಾಲಜಿ ಬದಲಾಗಿ ಹೆಚ್.ಎಸ್.ಆರ್.ಎ ಆಯ್ತು. ಭಗತ್ ಸಿಂಗ್ ತನ್ನ ಪ್ರೇರಣೆಯ ಪಟ್ಟಿಯಲ್ಲಿ ಲೆನಿನ್, ಮಾಕ್ರ್ಸ್, ರಶ್ಯನ್ ಕ್ರಾಂತಿಯ ಜತೆಗೆ ನೆಹರೂಗೆ ಕೂಡಾ ಜಾಗ ಕೊಟ್ಟಿದ್ದ. ಭಗತ್ ಮತ್ತು ಆಜಾದ್ರ ಇಡೀ ಕಾರ್ಯಕ್ರಮಗಳ ಜತೆಗೆ ಹರಿತವಾದ ಸೋಶಿಯಲಿಸಂ ಪ್ರಭಾವವಿತ್ತು. ಇವರೂ ಸೇರಿದಂತೆ ಬಹುಶ: ಸಮಕಾಲೀನ ಸಂದರ್ಭದ ಅನೇಕ ಜನ ತರುಣ ಕ್ರಾಂತಿಕಾರಿಗಳಿಗೆ ಪ್ರೇರಣೆ ನೀಡಿದ್ದು ನೆಹರೂ.
ಭಾರತದ ಸ್ವತಂತ್ರ ಚಳುವಳಿಗೆ ಸಮಾನಾಂತರವಾಗಿ ಬ್ರಿಟಿಷ್ ರಾಜನೀತಿಯನ್ನು ವಿರೋಧಿಸುತ್ತಾ 1920-21ರ ಆಸುಪಾಸಿನಲ್ಲಿ ಆರಂಭಗೊಂಡ ರೈತ ಚಳುವಳಿಗಳೂ ಕೂಡಾ ನೆಹರೂವಿಯನ್ ಚಿಂತನೆಗಳಿಂದ ಪ್ರಭಾವವನ್ನು ಹೊಂದಿದ್ದವು. 1927ರಲ್ಲಿ ನೆಹರೂ ‘ಇಂಟರ್ನ್ಯಾಶನಲ್ ಕಾಂಗ್ರೆಸ್ ಅಗೈನ್ಸ್ಟ್ ಕಲನಿಯಲ್ ಅಪ್ರೆಶ್ಶನ್ ಆ್ಯಂಡ್ ಇಂಪೀರಿಯಲಿಸಂ’ ಎನ್ನುವ ಬ್ರುಸೆಲ್ಸ್ನಲ್ಲಿ ನಡೆದ ಸಮಾವೇಶ ಮತ್ತು ಅದರ ನಂತರ ನಡೆಸಿದ ಸೋವಿಯತ್ ಪ್ರವಾಸ ನೆಹರೂವನ್ನು ಒಂದು ದಕ್ಷ ಸೋಶಿಯಲಿಸಂ ಪ್ರವಾದಿಯನ್ನಾಗಿಸಿತು. ಅದರ ನಂತರ ನೆಹರೂ ಜಾಗತಿಕ ನೆಲೆಯಲ್ಲಿ ಸಮಾಜವಾದದ ವಿಚಾರ, ವ್ಯಕ್ತಿಗಳಿಂದ ಆಕರ್ಷಿತರಾಗಿ ಅದರ ಸಾಂಗತ್ಯವನ್ನು ಪಡೆದರು. ಪಡೆದಂತಹ ಸಾಂಗತ್ಯವೂ ಉಂಟುಮಾಡಿದ ಬೌದ್ಧಿಕ ಪರಿಸರ, ಬೌದ್ಧಿಕ ಪ್ರಮೇಯಗಳಿಂದ ಪ್ರೇರಿತರಾಗಿ ಸಮಕಾಲೀನ ಭಾರತೀಯ ಸಂದರ್ಭದ ಎಲ್ಲಾ ರೀತಿಯ, ವೈವಿಧ್ಯದ ಹೋರಾಟಗಳೂ ಕೂಡಾ ಸಮಾಜವಾದೀಯ ನೆಲೆ-ನಿಲುವನ್ನೂ ಹೊಂದಿರಬೇಕಾದಂತಹ ಅಗತ್ಯತೆಯನ್ನು ಅರಿತು ಅವುಗಳನ್ನು ರೂಪಿಸಿದರು,ಪ್ರಭಾವಿಸಿದರು. ಈ ನೆಲೆಯಲ್ಲಿಯೇ ನೆಹರೂವನ್ನು ಅವರ ಪ್ರಮುಖ ಚರಿತ್ರಕಾರ. ಎಸ್. ಗೋಪಾಲ್, ”ಎ ಸೆಲ್ಪ್ ಕಾನ್ಶಿಯಸ್ ರೆವಲೂಶನರಿ ರ್ಯಾಡಿಕಲ್” ಎಂದಿರುವುದು.
ನೆಹರೂ, ಸುಮಾರು 1928ರಲ್ಲಿ ಸುಭಾಷ್ ಬೋಸ್ ಜತೆ “ಇಂಡಿಪೆಂಡೆನ್ಸ್ ಫಾರ್ ಇಂಡಿಯಾ ಲೀಗ್” ಎನ್ನುವ ಸಂಘಟನೆಯನ್ನು ನಿರ್ಮಿಸಿದರು. ಇಂತಹ ಸಂಘಟನಾತ್ಮಕ ಅಭಿವ್ಯಕ್ತಿಯು ನೆಹರೂವನ್ನು ಅನ್ವಯಿಕ ನೆಲೆಯಲ್ಲಿ ಸಮಾಜವಾದೀ ನಿಲುವುಗಳಿಗಾಗಿ ತೀವ್ರವಾಗಿ ಆಗ್ರಹಿಸಿತು. ಉದಾಹರಣೆಗೆ ಈ ಲೀಗ್ ಪ್ರಮುಖ ಗುರಿಗಳಾಗಿ ಹೊಂದಿದ್ದ, ಸ್ವಾತಂತ್ರ್ಯ ಮತ್ತು ಸೋಶಿಯಲಿಸ್ಟ್ ರಿವಿಶನ್ ಆಫ್ ದಿ ಇಕನಾಮಿಕ್ ಸ್ಟ್ರಕ್ಚರ್ ಆಫ್ ಸೊಸೈಟಿ ಬಹುಮುಖ್ಯವಾಗಿತ್ತು. ಕಾಂಗ್ರೆಸ್ ಅನ್ನು ಕೂಡಾ ಪ್ರಜಾಸತ್ತಾತ್ಮಕ ಮತ್ತು ಸೋಶಿಯಲಿಸ್ಟ್ ನೆಲೆಯಲ್ಲಿ ರೂಪಿಸುವ ಇರಾದೆಯನ್ನು ನೆಹರೂ ಹೊಂದಿದ್ದರು. 1929ರ ಲಾಹೋರ್ ಕಾಂಗ್ರೆಸ್ನ ಅಧ್ಯಕ್ಷರಾಗಿ, ‘ ನಾನೊಬ್ಬ ಸೋಶಿಯಲಿಸ್ಟ್, ರಿಪಬ್ಲಿಕನ್’. ಒಂದು ಸೋಶಿಯಲಿಸ್ಟ್ ಪ್ರೋಗ್ರಾಂ’ನ ಅನ್ವಯಕಾರ, ನನಗೆ ರಾಜ, ರಾಜತ್ವದಲ್ಲಿ ನಂಬಿಕೆ ಇಲ್ಲ ಎನ್ನುತ್ತಾ, ವರ್ತಮಾನ ಮತ್ತು ಭವಿಷ್ಯದ ಕಾಂಗ್ರೆಸ್ಸಿನ ಅಜೆಂಡಾವನ್ನೇ ಅಭಿವ್ಯಕ್ತಿಸಿದ್ದರು ನೆಹರು. ಈ ಹಿನ್ನೆಲೆಯಲ್ಲಿಯೇ ಸುಮಾರು 1933-36ರಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, “ಅತ್ಯಂತ ನಿಚ್ಚಳವಾಗಿ ಮಾನವನ ಗುರಿ, ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯನ್ನು ಸಾಧಿಸುವುದು ಮತ್ತು ವರ್ಗವು ವರ್ಗವನ್ನು, ರಾಷ್ಟ್ರವು ರಾಷ್ಟ್ರವನ್ನು ಮಾಡುತ್ತಿರುವಂತಹ ಶೋಷಣೆಯನ್ನು ನಿಲ್ಲಿಸುವುದಾಗಿದೆ, ಕಾಂಗ್ರೆಸ್ನ ಧ್ಯೇಯ-ಉದ್ದೇಶ ಮತ್ತು ಸ್ವಾತಂತ್ರ್ಯ ಹೋರಾಟದ ಉದ್ದೇಶವು ಬರೀ ಟೊಳ್ಳು ಗಟ್ಟಿ ಸ್ವಾತಂತ್ರ್ಯವಲ್ಲ, ಬದಲು ಅತ್ಯಂತ ವಿಶಾಲ ಅನುಭವಜನ್ಯ ನೆಲೆಯದಾಗಿದೆ” ಎನ್ನುತ್ತಾರೆ.
ಸ್ವತಂತ್ರ ಹೋರಾಟದಲ್ಲಿನ ನೆಹರೂ ಆಲೋಚನೆ ಮತ್ತು ವಿಚಾರ ಕ್ರಮಗಳು ಅತ್ಯಂತ ವಾಸ್ತವವಾದೀ ಮತ್ತು ಭೌತವಾದೀಯ ನೆಲೆ ಮತ್ತು ನಿಲುವನ್ನು ಹೊಂದಿತ್ತು. ಅವುಗಳು ಅತ್ಯಂತ ಸ್ಪಷ್ಟವಾಗಿ ಸಾಮಾನ್ಯವಾದ ಪರಿಭಾಷೆಯಲ್ಲಿ ವ್ಯಾಖ್ಯಾನಿತಗೊಂಡಿದ್ದವು. ನೆಹರೂ ಬಳಸಿದ ರಾಜಕೀಯ ಮೌಲ್ಯಗಳಾದ ಸಮಾನತೆ, ಆಸ್ತಿಯ ವಿಕೇಂದ್ರಿಕರಣ ಮತ್ತು ಸೋಶಿಯಲಿಸಂ ಮುಂತಾದುವು ಯುರೋಪ್ ಪ್ರಣೀತ ಪರಿಕಲ್ಪನೆಗಳಾದರೂ ಸಹ ನೆಹರೂ ಅವುಗಳನ್ನು ಅನುಭವಜನ್ಯ ನೆಲೆಯ ಪ್ರಮಾಣದಲ್ಲಿ ಬಳಸಿದ್ದರು. ಅವುಗಳು ಭಾರತದಂತಹ ಸಮಕಾಲೀನ ಮತ್ತು ಇಂದಿಗೂ ಕೂಡಾ ಇರುವ ಚಾರಿತ್ರಿಕವಾದಂತಹ ಐಡಿಯಾಲಜಿ ಮತ್ತು ಅನುಭವದ ಸಾಕ್ಷಿಯ ಹಾಗಿತ್ತು. ಅದು ಗಾಂಧಿಯ ಹೋರಾಟ, ತಾತ್ವಿಕತೆ ಮತ್ತು ತಥಾಕಥಿತ ಪೊಲಿಟಿಕಲ್ ಫಿಲಾಸಫಿಗಿಂತ ಭಿನ್ನವಾಗಿತ್ತು. ಗಾಂಧಿ ಮತ್ತು ನೆಹರೂವನ್ನು ತಾತ್ವಿಕವಾಗಿ ಮುಖಾಮುಖಿಗೊಳಿಸುವುದಾದರೆ, ಗಾಂಧಿಯ ಸ್ವರಾಜ್ ಮತ್ತು ಅದರ ಪರಿಧೀಯತೆಯಲ್ಲಿ ಗೋಚರಿಸುವ ವಿಚಾರಗಳು ಒಂದು ರೀತಿಯ ಅನುಭಾವೀ ನೆಲೆಯ, ಮಿಸ್ಟಿಕಲ್, ಪ್ರೊಫೆಟಿಕ್ ನೆಲೆಯ, ಅಮೂರ್ತವಾದ ವಿಚಾರಗಳಾಗಿ ಕಾಣಿಸುತ್ತದೆ. ಸ್ವರಾಜ್ ಅಥವಾ ಗಾಂಧಿಯನ್ನು ನಾವು ಹಿಂದ್ ಸ್ವರಾಜ್ ಪ್ರತೀಕದ ನೆಲೆಯಲ್ಲಿ ಗ್ರಹಿಸುವುದಾದರೆ ಅದು ನಿರ್ದಿಷ್ಠವಾದ ವ್ಯಾಖ್ಯೆಯನ್ನು ಹೊಂದಿಲ್ಲ. ಗಾಂಧಿಯ ಆಚರಣೆಗೂ ಮತ್ತು ಸ್ವರಾಜ್, ಹಿಂದ್ ಸ್ವರಾಜ್ಗೂ ಸಮರ್ಪಕವಾದ ಜತಕು ಕಂಡು ಬರುವುದಿಲ್ಲ. ಸ್ವರಾಜ್ ಒಂದು ಪ್ರೌಢವಾದಂತಹ, ಪರಿಭಾಷೀಯ, ಕ್ರಮವಾಗಿದೆ. ಅದು ಮಾಸ್ (ಜನಸಮುದಾಯ) ಅನುಸರಿಸಲಾಗದಿರುವಂತಹ, ಒಂದು ಇಲೀಟ್ ಆದಂತಹ ಒಂದು ಚಿಂತನಾಕ್ರಮ. ಅದರ ನೆಲೆಯೇ ಒಂದು ಅವಾಸ್ತವವಾದೀ, ಉಟೋಪಿಯನ್ ಆಗಿದೆ. ಗಾಂಧಿಯ ಹೋರಾಟ ಮಾತ್ರ ಸ್ವರಾಜ್ ರೀತಿಯ ಅಂಗರಚನೆಯನ್ನು ಹೊಂದಿರಲಿಲ್ಲ, ಅದು ಅತ್ಯಂತ ಮಾಸ್ ನೆಲೆಯಲ್ಲಿ, ಸಮುದಾಯೀ ಸ್ಪರ್ಶವನ್ನು ಒಳಗೊಂಡ ಅನುಭವವಾಯಿತು. ನೆಹರೂ ಸ್ವರಾಜ್ ಅತ್ಯಂತ ಲೌಕಿಕ ನೆಲೆಯ, ಪಾಪ್ಯುಲರ್ ಎನ್ನುವ ನೆಲೆಯಲ್ಲಿ ವಿಕಾಸವಾದಂತಹ ಬಗೆಯನ್ನಾಗಿಯೇ ನಾವು ನೋಡಬಹುದಾಗಿದೆ. ಅದು ವರ್ತಮಾನದ ಲೌಕಿಕತೆಯ ರೂಪಕವಾಗಿತ್ತು.
ಗಾಂಧಿ ಮತ್ತು ನೆಹರೂ ಸಂಬಂಧಗಳೂ ಕೂಡಾ ಅತ್ಯಂತ ಸಂಕೀರ್ಣವಾದುದು. ಗಾಂಧಿಯ ಅದೆಷ್ಟೋ ನೀತಿಗಳ ವಿರುದ್ಧ ನೆಹರೂಗೆ ಅತೃಪ್ತಿ ಇತ್ತು. ಒಳ್ಳೆಯವೆಂದು ಪರಿಗಣಿಸಿದ ವಿಚಾರಗಳ ಬಗ್ಗೆ ಪ್ರೀತಿ ಮತ್ತು ಅಚ್ಚರಿಯೂ ಇತ್ತು. ಬಹುಶ: ಇಡೀ ಜಗತ್ತಿನ ಮಾನವನ ಚರಿತ್ರೆಯ ಒಂದು ವಿನೂತನ ಅಧ್ಯಾಯವಾಗಿದ್ದ ಗಾಂಧಿಯ ಬಗೆಗೆ ಸಕಾರಾತ್ಮಕ ಟೀಕೆಯನ್ನೂ ಕೂಡಾ ನೆಹರು ಹೊಂದಿದ್ದರು. ಗಾಂಧಿಯು ವರ್ಗಗಳ ನಡುವಿನ ಸಂಘರ್ಷವನ್ನು ಗುರುತಿಸಲು ಸೋತಿದ್ದನ್ನು ನೆಹರೂ ಗಂಭೀರವಾಗಿ ಗಣಿಸಿದ್ದರು. ಗಾಂಧಿಯ ಟ್ರಸ್ಟಿಶಿಪ್ ವಿಚಾರಗಳ ಬಗ್ಗೆ ನೆಹರೂಗೆ ಎಪಿಸ್ಟಮಲಾಜಿಕಲ್ ಮತ್ತು ಒಂಟೋಲಾಜಿಕಲ್ ಸಮಸ್ಯೆಗಳಿತ್ತು. ಗಾಂಧಿಯು ಮಾಸ್ ಪ್ರಜ್ಞೆಯನ್ನು ಜೋಡಿಸಿದ ಬಗೆ ಮತ್ತು ಗಾಂಧಿಯು ತತ್ವ-ಕ್ರಿಯೆಗಳ ನಡುವೆ ಹೊಂದಿದ್ದ ಸಂತುಲನೆಯನ್ನು ನೆಹರೂ ಬಹುವಾಗಿ ಮೆಚ್ಚಿದ್ದರು.
ನೆಹರೂವನ್ನು ನಾವು ಸೋಶಿಯಲಿಸ್ಟ್ ಎಂಬುದರ ಜತೆಗೆ ಒಬ್ಬ ಪ್ರಖರ ನ್ಯಾಶನಲಿಸ್ಟ್ ಮತ್ತು ಆ್ಯಂಟಿ ಇಂಪೀರಿಯಲಿಸ್ಟ್ ಆಯಾಮಗಳ ಜತೆಯಲ್ಲಿಯೂ ಕೂಡಾ ನೋಡಬೇಕಾಗುತ್ತದೆ. ಭಾರತ ಕಂಡ ಒಬ್ಬ ಬಹುದೊಡ್ಡ ರಾಷ್ಟ್ರವಾದಿ ಆತ. ಉಗ್ರ ರಾಷ್ಟ್ರೀಯವಾದದ ಬೆಂಬಲಿಗರಿಗೆ ನೆಹರೂ ರಾಷ್ಟ್ರವಾದ ಒಂದು ಸ್ಯೂಡೋ ನೆಲೆಯದಾಗಿ ಗೋಚರಿಸುತ್ತದೆ. ಆದರೆ ನೆಹರೂ ರಾಷ್ಟ್ರವಾದ ನಿಜನೆಲೆಯದು ಮತ್ತು ಅತ್ಯಂತ ಜಾತ್ಯತೀತ, ವ್ಯಾಪ್ತ, ಸಮಗ್ರ ಮತ್ತು ಒಳಗೊಳ್ಳುವ ಕ್ರಮದ ಮಾದರಿಯದಾಗಿ ಅದು ನಮಗೆ ಕಾಣಿಸುತ್ತದೆÉ. ನೆಹರೂ ಪ್ರಣೀತ ರಾಷ್ಟ್ರವಾದ ಸೋಶಿಯಲಿಸಂ, ಆ್ಯಂಟಿ ಇಂಪೀರಿಯಲಿಸಂ ಮತ್ತು ಪೊಲಿಟಿಕಲ್ ಫ್ರೀಡಂನಿಂದ ಸಮನ್ವಿತಗೊಂಡ ಬಗೆಯದು. ನೆಹರೂ ಪ್ರಕಾರ, ಕಾಂಗ್ರೆಸ್ನಿಂದ ನ್ಯಾಶನಲಿಸಂ ಮತ್ತು ಸೋಶಿಯಲಿಸಂನಿಂದ ಸೋಶಿಯಲ್ ಮತ್ತು ಪೊಲಿಟಿಕಲ್ ಫ್ರೀಡಂ ಸಾಧಿತವಾಗಬೇಕಿತ್ತು. ಬಹುಶ: ಸಮಕಾಲೀನ ಮತ್ತು ನಂತರದ ರಾಜಕೀಯ ಚಿಂತನೆಯ ಜಗತ್ತಿನಲ್ಲಿ ಇಂತಹ ವಿರಳವಾದ ಸಮಪಾಕವನ್ನು ಸಾಧಿಸಿದವರೇ ದುರ್ಲಭ. ರವೀಂದ್ರನಾಥ್ ಠಾಗೋರ್ ರಾಷ್ಟ್ರವಾದದ ಕಲ್ಪನೆ, ಲೋಹಿಯಾ ರಾಷ್ಟ್ರವಾದದ ಕಲ್ಪನೆಗಳಿಗಿಂತ ತೀರಾ ಭಿನ್ನವಾಗಿ ನಿಲ್ಲುವ ಈ ನೆಲೆಯ ಪ್ರತಿಪಾದನೆ ಮತ್ತು ಕ್ರಿಯಾನ್ವಯವನ್ನು ನೆಹರೂ ಯೋಚಿಸಿದ್ದರು. ನೆಹರೂ ಯೋಚನೆಯ ರಾಷ್ಟ್ರೀಯವಾದ ಒಂದು ಸರಿಸುಮಾರು ಸಶರೀರವಾದ, ಸರ್ವಾಂಗ ಸುಂದರವಾದ ಪರಿಪ್ರೇಕ್ಷದ ನೆಲೆಯನ್ನು ಹೊಂದಿದೆ. ಈ ಮೇಲಿನ ಸಮನ್ವಯ ಮತ್ತು ಕಸಿಯನ್ನು ಹಾರ್ಡ್ಕೋರ್ ಸೋಶಿಯಲಿಸ್ಟ್ಗಳು ಒಪ್ಪಲಿಲ್ಲ,ಸಾಧಿಸಲಿಲ್ಲ ಮತ್ತು ವಿರೋಧಿಸಿದರೂ ಕೂಡಾ. ಇಂತಹ ಸಂಗತಿಯ ಸಾಧನೆಗೆ ನೆಹರೂ ಕಾಂಗ್ರೆಸ್ ಅನ್ನು ಹೊರತುಪಡಿಸಿ ಬೇರೆ ಸಂಘಟನೆಯನ್ನು ಬಯಸಲಿಲ್ಲ, ಬದಲು ಕಾಂಗ್ರೆಸನ್ನೇ ಅವರು ಸಮಾಜವಾದೀ ಚೌಕಟ್ಟುಗಳಲ್ಲಿ ಬೀಳಿಸಿದರು.
ಸಮಕಾಲೀನ ಸಂದರ್ಭದ, ರಾಷ್ಟ್ರೀಯ ಹೋರಾಟದ, ಗಾಂಧಿ ಬತ್ತಳಿಕೆಯ ಬಹಳ ಪ್ರಮುಖವಾದಂತಹ ಅಸ್ತ್ರವಾದ ಅಹಿಂಸೆ ಬಗ್ಗೆ ನೆಹರೂಗೆ ತುಸು ಭಿನ್ನ ನಿಲುವುಗಳಿತ್ತು. ನೆಹರೂ, ಅಹಿಂಸೆಯನ್ನು ಗಾಂಧಿಪ್ರೇರಿತ ಫಿಲಾಸಫಿಯೆಂದು ಗ್ರಹಿಸಿದ್ದರು. ಸ್ವತ: ನೆಹರೂವೇ, ಗಾಂಧಿಗೆ ಅಹಿಂಸೆಯು ಪ್ರಿನ್ಸಿಪಲ್ ಎಂದೂ, ವೈಯಕ್ತಿಕವಾಗಿ ನೆಹರೂಗೆ ಅದು ಪಾಲಿಸಿ ಎಂದೂ ಅಂದಿದ್ದರು. ಗಾಂಧಿಯು ಅಹಿಂಸೆಯನ್ನು ರಾಷ್ಟ್ರೀಯ ಹೋರಾಟದ ಬಹುಮುಖ್ಯವಾದಂತಹ ರಣನೀತಿಯೆಂದು ಪರಿಗಣಿಸಿ, ಕಾಂಗ್ರೆಸ್ಗೆ ಅದನ್ನು ಅನ್ವಯಿಸಲು ಗಾಂಧಿಯಷ್ಟೇ ನೆಹರೂ ಕೂಡಾ ಕಾರಣವಾಗಿದ್ದರು. ಗಾಂಧಿಯನ್ ಹೋರಾಟದ ನೆಲೆ-ನಿಲುವುಗಳು ಮತ್ತು ಅಹಿಂಸೆಯ ಧೋರಣೆ ನೆಹರೂವನ್ನು ಬಹುವಾಗಿ ಕಾಡಿತ್ತು. ನೆಹರೂ ಕೂಡಾ ಅಹಿಂಸೆಯಾಧಾರಿತ ಯಾಜಮಾನ್ಯೀಯ (ಹೆಜಿಮೋನಿಕ್) ಮತ್ತು ಮಾಸ್ ಚಳುವಳಿಗಳಲ್ಲಿ ನಂಬಿಕೆ ಹೊಂದಿದ್ದರು. ಯಾಜಮಾನ್ಯೀಯ ಚಳುವಳಿಗಳು ಅಹಿಂಸೆಯ ಜತೆ ಸಾಗುವ, ಪೂರಕವಾಗಿ ಚಲಿಸುವ ನೀತಿಯೆನ್ನುವ ನಿಲುಮೆ ನೆಹರೂವಿನದಾಗಿತ್ತು. ಮಾಸ್ ಅಥವಾ ಸಮುದಾಯೀ ಚಳುವಳಿಯು ಸ್ತರೀಯ ಮೂಲವನ್ನು(ಕೆಡರ್ ಬೇಸ್) ಹೊಂದಿರುವ ಕಾರಣ ಅಹಿಂಸೆಯೊಂದೇ ಇಂತಹ ಚಳುವಳಿಯನ್ನು ಮುನ್ನಡೆಸಬಲ್ಲದೆಂಬ ದೃಢವಿಶ್ವಾಸವೂ ನೆಹರೂಗಿತ್ತು. ನೆಹರೂ ಪ್ರಕಾರ ಅಹಿಂಸಾ ಚಳುವಳಿಯೇ ಒಂದು ರೀತಿ ಕ್ರಾಂತಿಕಾರಿಯಾಗಿರುವಂತದ್ದು. ಅದು ಗ್ರಾಂಶಿ ಹೇಳಿದ ರೀತಿಯಲ್ಲಿ, ‘ಎ ವಾರ್ ಆನ್ ಪೊಸಿಶನ್’ ರೀತಿಯಲ್ಲಿ ಪ್ರಭಾವಿಯೆಂದೂ, ಅಂತಹ ಹೋರಾಟದ ರಣನೀತಿ ಮಾತ್ರ ಸಮಾಜ ಮತ್ತು ರಾಜ್ಯದ ರಚನೆಯನ್ನೂ, ಸ್ವರೂಪವನ್ನು ಬದಲಿಸಬಲ್ಲದೆಂಬ ಗಾಂಧಿಯ ಅಭಿಪ್ರಾಯದ ರೂಪಕವನ್ನು ನೆಹರೂ ಕೂಡಾ ಬಲವಾಗಿ ನಂಬಿದ್ದರು.
ನೆಹರೂವಿನ ಚಾರಿತ್ರಿಕ ಚೌಕಟ್ಟಿನ ಒಂದು ಪ್ರಬಲವಾದ ಪಟ್ಟಿಕೆಯೇ ನೆಹರೂ ಪ್ರತಿಪಾದಿಸಿದ, ಅದು ಧ್ವನಿತಗೊಂಡಂತಹ ಪ್ರಜಾಸತ್ತೀಯ ಮೌಲ್ಯಗಳಾದ ನಾಗರಿಕ ಹಕ್ಕುಗಳು, ಜಾತ್ಯಾತೀತತೆ, ಮೂಲಭೂತ ಹಕ್ಕುಗಳು, ಆರ್ಥಿಕ ಸಮಾನತೆ, ಅಭಿವ್ಯಕ್ತಿ-ಮಾಧ್ಯಮ-ಸಂಘಟನೆಯ ಸ್ವಾತಂತ್ರ್ಯ ಮುಂತಾದವುಗಳಾಗಿವೆ. ಬಹುಶ: ಸ್ವತಂತ್ರ ಪೂರ್ವ ಭಾರತದಲ್ಲಿ ಮೊತ್ತಮೊದಲು ಮೂಲಭೂತ ಹಕ್ಕುಗಳ ಕುರಿತು ಚರ್ಚಿಸಿದ್ದು ನೆಹರೂ, ಅದು 1931ರ ಕರಾಚೀ ಕಾಂಗ್ರೆಸ್ ಅಧಿವೇಶನದಲ್ಲಿ. ಅದರ ಕರಡನ್ನೂ ಕೂಡಾ ನೆಹರೂವೇ ಸಿದ್ಧಪಡಿಸುತ್ತಾರೆ. ಇದರ ಜತೆಗೇನೇ ಸ್ವತಂತ್ರಪೂರ್ವ ಭಾರತದಲ್ಲಿ ನಾಗರಿಕ ಹಕ್ಕುಗಳ ಬಹುದೊಡ್ಡ ಪ್ರಶ್ನೆಯ ಅಗತ್ಯತೆಯನ್ನು ಎತ್ತಿಕೊಂಡಿದ್ದು ಕೂಡಾ ನೆಹರೂವೇ. 1936ರಲ್ಲಿ ನೆಹರೂ, ‘ಇಂಡಿಯನ್ ಸಿವಿಲ್ ಲಿಬರ್ಟೀಸ್ ಯೂನಿಯನ್’ ಎನ್ನುವ ಸಂಸ್ಥೆಯನ್ನೇ ಸ್ಥಾಪಿಸಿದ್ದರು ನಾನ್ ಪಾರ್ಟಿ ನೆಲೆಯಲ್ಲಿ. ಬಹುಶ: ಇಡೀ ಭಾರತದಲ್ಲಿ ಈ ಸಂಸ್ಥೆಯ ಮೂಲಕ ಸಾರ್ವಜನಿಕ ಅಭಿಪ್ರಾಯವನ್ನು ಸಂಗ್ರಹಿಸಿದ್ದರು ನೆಹರೂ. ಈ ನಾಗರಿಕ ಸ್ವಾತಂತ್ರ್ಯದ ಕುರಿತು ನೆಹರೂ 1940ರಲ್ಲಿ, ‘ನಾಗರಿಕ ಸ್ವಾತಂತ್ರ್ಯವನ್ನು ಕಳೆದುಕೊಂಡರೆ ದೇಶ ಎಲ್ಲವನ್ನೂ ಕಳೆದುಕೊಂಡಂತೆ ಎಂಬಭಿಪ್ರಾಯವನ್ನೂ ವ್ಯಕ್ತಿಸಿದ್ದರು. ಸಿವಿಲ್ ಲಿಬರ್ಟಿಯ ಜತೆ ಪ್ರಜಾಪ್ರಭುತ್ವದ ಅತ್ಯಂತ ಪ್ರಮುಖ ಮೌಲ್ಯವಾದಂತಹ ವಿರೋಧದ-ಭಿನ್ನಮತದ ಪುರಸ್ಕಾರವನ್ನು ಅತ್ಯಂತ ಹೆಚ್ಚು ಪುರಸ್ಕರಿಸಿದ ವ್ಯಕ್ತಿಯೆಂದರೆ ಬಹುಶ: ನೆಹರೂ ಒಬ್ಬರೇ. ನೆಹರೂ ಎಂದೂ ನಿರಂಕುಶ ಪ್ರಭುವಾಗಿರಲಿಲ್ಲ. ನೆಹರೂ, ಭಿನ್ನಮತದ ಪುರಸ್ಕಾರದ ಜತೆಜತೆಗೆ ಬಹುಮತದ ತತ್ವದ ಪುರಸ್ಕಾರ, ಅಲ್ಪಸಂಖ್ಯಾತರ ಅಭಿಮತ-ತತ್ವ-ಹಕ್ಕುಗಳಿಗೆ ಅವಕಾಶದಂತಹ ಸಂಗತಿಗಳನ್ನೂ ಕೂಡಾ ಪ್ರಬಲವಾಗಿ ಮನ್ನಿಸಿದ್ದರು. ಸ್ವತಂತ್ರಪೂರ್ವ ಮತ್ತು ಸ್ವತಂತ್ರೋತ್ತರ ಸಂದರ್ಭದ, ‘ನೇಶನ್ ಇನ್ ದಿ ಮೇಕಿಂಗ್’ನ ಒಂದು ಬಹುಮುಖ್ಯವಾದ ಸಾಧನವೇ ಭಾರತದ ಬಹುವ್ಯತ್ಯಾಸಗಳ ಸಮನ್ವೀಕರಣ ಎನ್ನುವ ವಾಸ್ತವವನ್ನು ಅನುಭವಿಸಿ ಅದನ್ನು ಸಾಧಿಸಲು ಪಣತೊಟ್ಟರು. ಇದಕ್ಕೆ ಪೂರಕವಾಗಿ ರಾಜಕೀಯ, ಆರ್ಥಿಕ ಸಮಾನತೆ ಸಾಧಿಸುವ ಕೀಲಿಕೈಯಾದ ಜಾತ್ಯಾತೀತತೆಯ ಪ್ರಮುಖ ವಕ್ತಾರರಾಗಿದ್ದರು.
ಇಂತಹ ನೆಹರೂ ಇಂದು ಅಭಿವ್ಯಕ್ತವಾಗುತ್ತಿರುವ ಬಗೆಯನ್ನು ನೆನೆದರೆ ಬಹಳ ದು:ಖ ವ್ಯಕ್ತವಾಗುತ್ತದೆ. ಒಂದು ಹೊಸ ಸನ್ನಿವೇಶವನ್ನು, ಪ್ರಥಮ ವಿಶ್ವಯುದ್ಧೋತ್ತರ ಸಂದರ್ಭದಲ್ಲಿ ಇಟೆಲಿ, ಜರ್ಮನಿ, ಸ್ಪೇನ್, ಜಪಾನ್ನಲ್ಲಿ ನಿರಂಕುಶ ಪ್ರಭುತ್ವಗಳು ಬೆಳೆದು, ಅಭಿಪ್ರಾಯ ಭೇದ, ಸಂವಾದ, ಒಂದು ಪ್ರಜಾಸತ್ತೀಯ ಸಂವಾದದ ನಿರ್ವಹಣೆಯು ಮಾಯವಾಗಿರುವ, ಅವುಗಳನ್ನು ದಮನಿಸಿದ ಒಂದು ನಿರಂಕುಶ ಪ್ರಭುತ್ವದ ಸ್ಮøತಿ ನಮ್ಮನ್ನು ಕಾಡುತ್ತಿದೆ. ಅಂತಹ ಪ್ರಭುತ್ವ ತನ್ನ ಐಡಿಯಾಲಜಿ ಮತ್ತು ಪ್ರೊಪಗಾಂಡಾಕ್ಕೋಸ್ಕರ ಚರಿತ್ರೆಯನ್ನೇ, ಒಂದು ದೇಶದ ಪ್ರಜಾಸತ್ತಾತ್ಮಕ ಚರಿತ್ರೆ ಮತ್ತು ಪರಿಸರವನ್ನು ನಿರ್ಮಿಸಿದಂತಹ ವ್ಯಕ್ತಿಗಳ ವಿರುದ್ಧ, ವ್ಯವಸ್ಥಿತವಾಗಿ ಅಪಪ್ರಚಾರ ಮಾಡುವ ಮತ್ತು ತಮ್ಮ ಸೈದ್ಧಾಂತಿಕ ಸಂಕೇತಗಳಾಗಿ ಕೋಮುವಾದೀ ನೆಲೆಯ ಪ್ರತಿಮೆಗಳನ್ನು ಮುನ್ನೆಲೆಗೆ ತರುವ ಪ್ರಯತ್ನಗಳನ್ನೂ ಕೂಡಾ ನಾವು ನಿಚ್ಚಳವಾಗಿ ಗಮನಿಸಬಹುದಾಗಿದೆ. ಬಹುಶ: ಇದು ಇಡೀ ಭಾರತಕ್ಕಲ್ಲ, ವೈಶ್ಚಿಕ ಸಮುದಾಯಗಳ ಸಂದರ್ಭ, ಸಹಬಾಳ್ವೆಯ ಸಂದರ್ಭದಲ್ಲೂ ಕೂಡಾ ಅತ್ಯಂತ ಅಪಾಯವೆಂದೇ ನನ್ನ ಗ್ರಹಿಕೆ. ಅದು ಭಾರತದಂತಹ ವೈವಿಧ್ಯದ, ಅಸಹಜ ರಾಷ್ಟ್ರದ ಅಂತಸ್ಸತ್ವಕ್ಕೇನೇ ಕಾದಿರುವ, ಅದನ್ನು ಮುಖಾಮುಖಿಗೊಳ್ಳಲಿರುವ ಪ್ರಶ್ನೆಯೆಂದೇ ನನ್ನ ಅಭಿಪ್ರಾಯ. ನೆಹರೂ ವ್ಯಕ್ತವಾಗಿರುವ ಆಶಯಗಳೇನು? ಪ್ರಸಕ್ತÀ ಸಂದರ್ಭದಲ್ಲಿ ನೆಹರೂ ಬಿಂಬಿತವಾಗುತ್ತಿರುವ ನೆಲೆಯ ಆಶಯಗಳೇನು? ಭಿನ್ನಮತದ ಪುರಸ್ಕಾರ’ವೆಂಬ ಬಹುಮುಖ್ಯವಾದ ಆಶಯವನ್ನು ಧ್ವನಿಸಿದ ನೆಹರೂವನ್ನು ಒಂದು ಕಡೆ, ಪ್ರಜಾಸತ್ತೀಯ ನೆಲೆಗಳಿಂದ ದೂರ ಸರಿದ ನಿರಂಕುಶವಾದೀ, ಕೋಮುವಾದೀ ನೆಲೆ ನಿಲುವುಗಳ ಆಯಾಮಗಳನ್ನು ಇನ್ನೊಂದು ಕಡೆ ಇಡುವುದರಿಂದಷ್ಟೇ ನಿಜವಾದ ನೆಹರೂ ಅರ್ಥವಾಗುತ್ತಾರೆ. ನೆಹರೂ ಯಾವಾಗಲೂ ಬದುಕುತ್ತಾರೆ ಯಾಕೆಂದರೆ ಅವರ ನಿಲುವು ಜೀವಪರವಾಗಿತ್ತು. ಹಿಟ್ಲರ್, ಸ್ಟಾಲಿನ್ ಯಾರದ್ದೇ ಯುಗವಿರಲಿ ಅದು ಅಳಿಯುತ್ತದೆ ಏಕೆಂದರೆ ಅದು ಜೀವವಿರೋಧೀ.
ಆಕರಗಳು
ಎಸ್.ಗೋಪಾಲ್, ಜವಹರ್ಲಾಲ್ ನೆಹರೂ ಎ ಭಯಾಗ್ರಪಿ, ಓ.ಯು.ಪಿ, ನ್ಯೂಡೆಲ್ಲಿ, 2004.
ಎಸ್.ಗೋಪಾಲ್, ಸೆಲೆಕ್ಟಡ್ ವಕ್ರ್ಸ್ ಆಫ್ ಜವಹರ್ಲಾಲ್ ನೆಹರೂ, ಒರಿಯಂಟ್ ಲಾಂಗ್ಮನ್, ನ್ಯೂಡೆಲ್ಲಿ, 1972.
ಬಿಪನ್ ಚಂದ್ರ, ನೆಹರೂ ಇನ್ ಹಿಸ್ಟೋರಿಕಲ್ ಟೈಮ್ಲೈನ್, ಟಿಸ್, ಮುಂಬೈ.
ಬಿಪನ್ ಚಂದ್ರ, ಇಂಡಿಯಾಸ್ ಸ್ಟ್ರಗಲ್ ಫಾರ್ ಇಂಡಿಪೆಂಡೆನ್ಸ್, ಪೆಂಗ್ವಿನ್, ನ್ಯೂಡೆಲ್ಲಿ, 1989.
ಬಿಪನ್ ಚಂದ್ರ, ಇಂಡಿಯಾ ಆಫ್ಟರ್ ಇಂಡಿಪೆಂಡೆನ್ಸ್, ಪೆಂಗ್ವಿನ್, ನ್ಯೂಡೆಲ್ಲಿ, 1999.
ರಾಮಚಂದ್ರ ಗುಹಾ, ಇಂಡಿಯಾ ಆಫ್ಟರ್ ಗಾಂಧಿ, ಪಾನ್ ಮೆಕ್ಮಿಲನ್, ನ್ಯೂಡೆಲ್ಲಿ, 2011.
ಆಂತನಿ ಜಿ ಪೆರೆಲ್, ಗಾಂಧಿ: ‘ಹಿಂದ್ ಸ್ವರಾಜ್’ ಎಂಡ್ ಅದರ್ ರೈಟಿಂಗ್ಸ್, ಕೇಂಬ್ರಿಡ್ಜ್ ಯುನಿವರ್ಸಿಟಿ ಪ್ರೆಸ್, ಕೇಂಬ್ರಿಡ್ಜ್, 2009.
ರಾಮ್ ಮನೋಹರ್ ಲೋಹಿಯಾ, ಗಿಲ್ಟಿ ಮೆನ್ ಆಫ್ ಇಂಡಿಯಾಸ್ ಪಾರ್ಟಿಶನ್, ಲೋಹಿಯಾ ಸಮತಾ ವಿದ್ಯಾಲಯ್ ನ್ಯಾಸ್, ಲಕ್ನೋ, 1970.
ರಾಜಾರಾಮ್ ತೋಳ್ಪಾಡಿ, ಮತ್ತೆ ಮತ್ತೆ ಲೋಹಿಯಾ, ಅಹರ್ನಿಶಿ, ಶಿವಮೊಗ್ಗಾ, 2011.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ