ಕುಂದಾಪುರ ಕನ್ನಡವನ್ನು ಅನುಲಕ್ಶಿಸಿ



ಕುಂದಾಪುರ ಕನ್ನಡ, ಶಬ್ದ ಒಂತರಾ ರಮ್ಯ, ಅದ್ಭುತ ರಮ್ಯ. ಅದು ಒಂದು ಸಂಕೀರ್ಣ ಸಮಸ್ಯೆ, ವಿದ್ಯಮಾನವೂ ಹೌದು. ಸಂಕೀರ್ಣ ಎಂದರೆ ಎರಡು ಸಂಗತಿಗಳು ಅದನ್ನು ರೂಪಿಸಿರುವುದರಿಂದ ಒಂದು; ಕುಂದಾಪ್ರ ಕನ್ನಡ ಎಂದಾಗ ಅದು ಹುಟ್ಟಿಸುವ, ಎದುರಿಸುವ ಪ್ರಶ್ನೆಗಳಿಂದ, ಎರಡು; ತಥಾಕಥಿತ ಬಳಕೆಯಾಗಿ ಅದು ಎದುರಿಸುವ ಸಂದೇಹಗಳಿಂದ. ಅದು ಭಾಷೆಯ ರಚನೀಯತೆಯನ್ನು ಭಾಷಿಕ ನೆಲೆಯಲ್ಲಿ ಅಭಿವ್ಯಕ್ತಿಗೊಳಿಸುತ್ತದೆ ಎನ್ನುವುದಕ್ಕಿಂತಲೂ ಒಂದು ರಾಜಕೀಯ, ರಾಜಕೀಯ ಗಡಿಯನ್ನು ಧ್ವನಿಸುವ ಅಭಿವ್ಯಕ್ತಿಯಾಗಿಯೂ ಕಾಣಿಸಿಕೊಳ್ಳುವ ಕಾರಣದಿಂದ ಕೂಡಾ ಜಿಜ್ಞಾಸೆ ಮತ್ತು ಒಂದು ರೀತಿಯ ಸಂವಾದಕ್ಕೆ ತೆರೆದುಕೊಳ್ಳುತ್ತದೆ ಎಂಬ ಕಾರಣದಿಂದ ಭಾಷೆಯ ಬಗೆಗಿನ ಚರ್ಚೆಯೂ ಕೂಡಾ ತುಂಬಾ ಮುಖ್ಯವಾಗುತ್ತದೆ. ಅತ್ಯಂತ ಪ್ರಾಚೀನ ಭಾಷೆಯಾಗಿರುವ ಕುಂದಾಪ್ರ ಕನ್ನಡ ಅಖಿಲ ಕರ್ನಾಟಕ (ಪಾನ್ ಕರ್ನಾಟಕನ್) ಮತ್ತು ಭಾಷಾಶಾಸ್ತ್ರದ ನೆಲೆಯಲ್ಲಿ ಉಪಭಾಷೆ ಎನ್ನುವ ಉಪಾಧಿಯಿಂದ ಹೇರಲ್ಪಟ್ಟಿರುವುದೂ ಕೂಡಾ ಸೇರಿದಂತೆ ಹೊಸದಾದ ವಿವೇಚನೆಯ ಹೊಸದಾರಿಗಳನ್ನೂ ಕೂಡಾ ಆಗ್ರಹಿಸುತ್ತದೆ. ಪ್ರಭುತ್ವವು ಕೂಡಾ ಉಪಭಾಷೆಯನ್ನು ಅದರ ಯೋಚನೆಯ ಹರಿವನ್ನು ವ್ಯಕ್ತಪಡಿಸಿರುವ ಸಂಗತಿಗಳವರೆಗೆ ನಾವು ಸಂದರ್ಭದಲ್ಲಿ ಕೂಡಾ ಚರ್ಚಿಸಬೇಕಿದೆ. ಭಾಷೆ, ಭಾಷೆಯ ಉತ್ತೇಜನ ಎನ್ನುವ ನೆಲೆಯ ಪಾಲಿಸಿ ವಿಚಾರಗಳಲ್ಲಿ ತಥಾಕಥಿತ ಹುಬ್ಬಳ್ಳಿ ಕನ್ನಡ, ಮೈಸೂರು ಕನ್ನಡದಷ್ಟೇ ಪ್ರಾಚೀನತೆ, ಘನತೆಯನ್ನು ಹೊಂದಿರುವ ಕುಂದಾಪ್ರ ಕನ್ನಡ ಆಧುನಿಕ ರಾಜಕೀಯದ ಪ್ರತಿನಿಧಿತ್ವವನ್ನು ಪಡೆಯದಿರುವ ಮತ್ತು ಅದರ ಹಿಂದಿನ ಶಕ್ತ ರಾಜಕಾರಣದವರೆಗೂ ಕೂಡಾ ಕುಂದಾಪ್ರ ಕನ್ನಡದ ಸಂವಾದವನ್ನು ವಿವರಿಸಬಹುದಾಗಿದೆ. 1990 ದಶಕದ ನಂತರ ಭಾರತೀಯ ಭಾಷೆಗಳ ಮೇಲೆ, ಕುಂದಾಪುರ ಕನ್ನಡವನ್ನೂ ಒಳಗೊಂಡಂತೆ, ಜಾಗತೀಕರಣ ಮತ್ತು ಅದು ಉಂಟುಮಾಡಿರುವ ಗುರುತಿನ ಪ್ರಶ್ನೆ (ಐಡೆಂಟಿಟಿ ಕ್ವಶ್ಚನ್) ವರೆಗೂ ಕೂಡಾ ವಿಸ್ತರಿಸಬಹುದಾಗಿದೆ. ಕುಂದಾಪ್ರ ಕನ್ನಡವೂ ಸೇರಿದಂತೆ ಯಾವುದೇ ರೀತಿಯ ಪೂರ್ವಗೃಹೀತ ಮತ್ತು ಆರೋಪಿತ ವಿಶೇಷಣಗಳನ್ನೂ ಅದು ಉಪಭಾಷೆ ಸೇರಿದಂತೆ ಇತರ ಅನೇಕ ಸಂಗತಿಗಳನ್ನೂ ಕೂಡಾ ಪರೀಕ್ಷಿಸಬೇಕಿದೆ. ಅಂತಹ ವಿಶೇಷಣಗಳ ಕಾಲಬದ್ಧತೆಯನ್ನು ಕೂಡಾ ಪರೀಕ್ಷೆ ಮಾಡಬೇಕಿದೆ. ಇಲ್ಲದಿದ್ದರೆ ಕುಂದಾಪ್ರ ಕನ್ನಡ ಸೇರಿದಂತೆ ಅನೇಕ ಪ್ರದೇಶ ವಿಶಿಷ್ಠ ಭಾಷೆಗಳಲ್ಲಿ ಹೊಸತನ, ಹೊಸ ಸಾಧ್ಯತೆಯನ್ನು ನಾವು ನಿರಾಕರಿಸದಂತಾಗುತ್ತದೆ.ಇಲ್ಲದಿದ್ದರೆ ಪುನ: ಪುನ: ಕ್ಲೀಷೆಯೆನಿಸುವ, ಮತ್ತೆ ಮತ್ತೆ ನಿಸ್ಸಾರವಾದುದ್ದನ್ನು ಜಗಿಯುವ ಕ್ರಮದಲ್ಲಿಯೇ ನಾವು ಸಾಗಬೇಕಾಗುತ್ತ್ತದೆ, ಉದಾಹರಣೆಗೆ, ಉಪಭಾಷೆಯೆನ್ನುವ ಕ್ರಮದ ಕಲ್ಪನೆ: ಹುಬ್ಬಳ್ಳಿ, ಮೈಸೂರು, ಗುಲ್ಬರ್ಗಾ, ಕುಂದಾಪ್ರ ಕನ್ನಡವೆನ್ನುವ, ರೀತಿ  ಕರೆಸಿಕೊಳ್ಳುವ ಭಾಷೆಗಳು ಉಪಭಾಷೆಯಾಗುವುದು ಹೇಗೆ? ಹಾಗಿದ್ದರೆ ಮುಖ್ಯಭಾಷೆ, ಮುಖ್ಯವಾದ ಕನ್ನಡ ಭಾಷೆ ಯಾವುದು? ಅದರ ಲಕ್ಷಣ, ಗುಣಗಳೇನು? ಉಪಭಾಷೆ ಎನ್ನುವುದು ರಾಷ್ಟ್ರೀಯತೆ, ಉಪರಾಷ್ಟ್ರೀಯತೆ, ಉಪೋಪರಾಷ್ಟ್ರೀಯತೆಯ ಅನುರೂಪದ ಅನ್ವಯವೇ? ಮುಖ್ಯಭಾಷೆ ಮತ್ತು ಉಪಭಾಷೆಯೆನ್ನುವ ಸಂಗತಿಯ ಲಕ್ಷಣ, ವ್ಯಾಕರಣ ಮತ್ತು ರಾಜಕಾರಣವೇನು? ಎನ್ನುವ ತಾರ್ಕಿಕ ಮತ್ತು ಸಂಯಮದ ಪ್ರಶ್ನೆಗಳಿಗಾಗಿಯೂ ಅದು ಆಗ್ರಹಿಸುತ್ತದೆ.

ಈಗಾಗಲೇ ಪ್ರಸ್ತಾಪಿಸಿದ ಜಾಗತೀಕರಣೋತ್ತರ ಭಾರತೀಯ ಸಂದರ್ಭದಲ್ಲಿ ಕುಂದಾಪ್ರ ಕನ್ನಡ ಭಾಷೆಯು ತನ್ನೊಳ ಹೊರಗೆ ಉಂಟುಮಾಡಿಕೊಂಡ ಬದಲಾವಣೆ, ಸ್ಥಿತ್ಯಂತರದ ಅವಲೋಕನ ಕೂಡಾ ತುಂಬಾ ಮುಖ್ಯ. ಒಂದು; ಜಾಗತಿಕ ಸಂಪರ್ಕ ಭಾಷೆಯ ಸ್ಥಾನದಲ್ಲಿರುವ ಇಂಗ್ಲೀಷ್ ಭಾಷೆಯ ಮೇಲೆ ಮಾಡಿರುವ, ಬೀರಿರುವ ಪ್ರಭಾವಗಳು, ಎರಡು; ಜಾಗತೀಕರಣ ಮತ್ತು ಜಾಗತೀಕರಣದ ವಾಹಕಗಳು, ಭಾಷೆಯ ಮೇಲೆ ಪ್ರಭಾವ, ಪರಿಣಾಮ ಬೀರಿದ ಸಂದರ್ಭದಲ್ಲಿಭಾಷೆಯನ್ನು ಮಾತನಾಡುವ ಮಂದಿಗೆ ತಮ್ಮ ಭಾಷೆ ಯಾವ ರೀತಿ ಗುರುತಿನ (ಐಡೆಂಟಿಟಿ) ಪ್ರಶ್ನೆಯಾಯಿತು? ಹಾಗೆ ಪ್ರಶ್ನೆಯನ್ನು ಧನಾತ್ಮಕವಾಗಿ-ಋಣಾತ್ಮಕವಾಗಿ ಹೇಗೆ ನಿಭಾಯಿಸಿದರು? ಎನ್ನುವುದೂ ಕೂಡಾ ಮುಖ್ಯ. ಉದಾಹರಣೆಗೆ ಸ್ಥಳೀಯ ಭಾಷಿಕರು ಕೆಲವರು ಸಂಘ-ಸಂಸ್ಥೆ ಮುಂತಾದ ವೇದಿಕೆಗಳಲ್ಲಿ ಸ್ಥಳೀಯ-ರಾಷ್ಟ್ರೀಯ-ಅಂತಾರಾಷ್ಟ್ರೀಯ ಸ್ತರಗಳಲ್ಲಿ ಕುಂದಾಪ್ರ ಕನ್ನಡದ ಸಿದ್ಧ ಏಕರೂಪೀ ಮಾದರಿಗಳನ್ನು ಪ್ರಸ್ತುತಿಗೊಳಿಸುವಲ್ಲಿಯವರೆಗಿನ ಸಮಸ್ಯೆಯಾಗಿ ಕೂಡಾ ನೋಡಬಹುದು. ಇದರ ಜತೆಜತೆಯಲ್ಲೇ ನಾವು ಕುಂದಾಪುರ ಕನ್ನಡದಲ್ಲಿ ಬಂದ ಸಾಹಿತ್ಯ ಅಥವಾ ಕುಂದಾಪ್ರ ಕನ್ನಡವನ್ನು ಬಳಸಿಕೊಂಡು ಮೂಡಿದ ಸಾಹಿತ್ಯ, ಸಾಹಿತಿಗಳು ಎಂಬಲ್ಲಿರುವ ಎರಡು ಮಿಥ್ಯಗಳನ್ನು,ಒಂದು; ತಥಾಕಥಿತ ಪ್ರತಿಷ್ಠಿತ, ಪ್ರಶಸ್ತಿ ಪಡೆದವರ, ಪಡೆದ ಸಾಹಿತಿಗಳ ಕುಂದಾಪ್ರ ಕನ್ನಡ ಭಾಷೆ ಎನ್ನುವುದನ್ನು ಒಡೆದು ಅದು ಬರೀ ಒಂದು ವರ್ಗದ ಭಾಷೆ, ಆದರೆ ಇಡೀ ಕುಂದಾಪುರ ಎನ್ನುವ ರಾಜಕೀಯ ಅಭಿವ್ಯಕ್ತಿಯೊಳಗಡೆ ಬರುವಂತಹ ಬಹುವಿಧದ ಆವೃತ್ತಿಗಳು (ಜಾತಿ- ಸಮುದಾಯ-ಪ್ರದೇಶ ವಿóಶಿಷ್ಠ) ಅಲ್ಲ ಎನ್ನುವ ಗ್ರಹಿಕೆಗೆ ಯೋಗ್ಯವಾಗುವ, ಎರಡು; ಅಂತಹ ಸಾಹಿತ್ಯವೇ ಕುಂದಾಪ್ರದ ಸಾಹಿತ್ಯವೆನ್ನುವುದನ್ನು, ಕುಂದಾಪ್ರದಭಿವ್ಯಕ್ತಿಯೆನ್ನುವುದನ್ನು ಒಡೆದು ಕುಂದಾಪುರದಲ್ಲಿ ವೈವಿಧ್ಯದ ಭಾಷೆ, ಶಿಸ್ತು, ವಸ್ತು, ವಿಚಾರವನ್ನು ಬರೆದವರೂ ಕೂಡಾ ಇದ್ದಾರೆ ಎನ್ನುವುದು. ಸಮಕಾಲಿಕ ಸಂದರ್ಭದಲ್ಲಿ ಕುಂದಾಪ್ರ ಕನ್ನಡದಂತಹ ಭಾಷೆಯನ್ನು ನೋಡುವ ಕ್ರಮದಲ್ಲಿಯೇ ನಾವು ಕೆಲವು ಸುಧಾರಣೆಯನ್ನು ಮಾಡಬೇಕೆನ್ನುವುದಕ್ಕಿಂತ ಮುರಿದು ಕಟ್ಟುವ ಕ್ರಮದಲ್ಲಿ ಸಾಗಬೇಕೆನ್ನುವುದು ನನ್ನಭಿಪ್ರಾಯ. ಒಂದು ಭಾಷೆ, ಸಮುದಾಯದ ಮೇಲೆ ಹೇರಿದ, ಆರೋಪಿಸಿದ, ಉದಾ: ಹೆಚ್.ಎಂ ಕೃಷ್ಣಯ್ಯರಂತಹ ವಿದ್ವಾಂಸ ಕೂಡಾ ಉಪಭಾಷೆ ಎನ್ನುವ ಶಬ್ದ ಬಳಸುತ್ತಾರೆ. ಅಂತಹ ಆರೋಪ, ಬಳಕೆಗಳನ್ನು ನಿರಾಕರಿಸಿ ತನ್ನತನವನ್ನು ಅರಸುವ ಕ್ರಮ ಕೂಡಾ ಮುಖ್ಯ.

ಕುಂದಾಪುರ ತಾಲೂಕಿನ ಕನ್ನಡ ಅನ್ನುವುದೇ ಸರಿ ಕುಂದಾಪ್ರ ಕನ್ನಡ ಎನ್ನುವುದಕ್ಕಿಂತ, ತಕ್ಕ ಮಟ್ಟಿಗೆ ಇದು ರಾಜಕೀಯ ಭೂಗೋಳದ ಸಾಪೇಕ್ಷವಾದ ಭಾಷಿಕ ಅಭಿವ್ಯಕ್ತಿಯಾಗಿಯೂ ಕಾಣಿಸುವ ನೆಲೆಯಲ್ಲಿ. ಆದರೆ ಸಾಂಸ್ಕøತಿಕ ಮತ್ತು ಭಾಷಿಕ ಗಡಿಯು ರಾಜಕೀಯ ಗಡಿಯನ್ನು ಮೀರಿ ನಿಂತು ವ್ಯಕ್ತವಾಗಿ ರಾಜಕೀಯ ಗಡಿಯ ಕ್ಷುಲ್ಲಕತೆಯನ್ನೂ ದರ್ಶಿಸುತ್ತದೆ. ಇಂತಹ ಶಬ್ದಗಳ ಬಳಕೆ, ಅಂದರೆ ಕುಂದಾಪ್ರ ಕನ್ನಡದಂತಹ ಬಳಕೆ ಪ್ರಜ್ಞೀಯವಾಗಿ ಅಧಿಕಾರ ಸಂಬಂಧ ದ್ಯೋತಕವಾಗಿಯೂ ಕೂಡಾ ಸಾಗುವ ಕಾರಣ, ನಮಗೆ ಒಂದು ವಿಶಾಲ ಅರ್ಥದ, ವಿವಿಧವರ್ಗಸಮುದಾಯಗಳ ಅಭಿವ್ಯಕ್ತಿಯ ಅನುಭವದ ರೂಪದಲ್ಲಿರುವ ಭಾಷೆಯೇ,ಬಳಕೆಯೇ ಮುಖ್ಯವಾಗಿದೆ. ನಾವು ಯಾವ ವರ್ಗ, ಜಾತಿ, ಸಮುದಾಯವನ್ನು ಅವರಾಡುವ ಕುಂದಾಪುರ ತಾಲೂಕಿನ ಕನ್ನಡ ಭಾಷೆಯನ್ನು ನಿರಾಕರಿಸದೇ ಚಾರಿತ್ರಿಕ ಸತ್ಯ ಮತ್ತು ಪ್ರಜಾತಾಂತ್ರಿಕ ಸತ್ಯ ಮತ್ತು ಅಗತ್ಯದ ನೆಲೆಯಲ್ಲಿ ಎಲ್ಲರನ್ನೂ ಕೂಡಾ ಸಂದರ್ಭೀಕರಿಸಬೇಕಾದ ಅಗತ್ಯವಿರುವುದರಿಂದ ಕೂಡಾ, ಬಹು ನೆಲೆ ಮತ್ತು ಸ್ತರವನ್ನು ಮುಟ್ಟುವ ವೈವಿಧ್ಯದ ಭಾಷೆಯೇ ನಿಜವಾದ ಅಭಿವ್ಯಕ್ತಿ ಎಂಬುದು ನನ್ನ ಅಭಿಪ್ರಾಯ. ಇಂತಹ ಒಂದು ಕ್ರಮ ಎರಡು ಸಾಧ್ಯತೆಗಳನ್ನು ಸೃಷ್ಟಿಸುತ್ತದೆ. ಒಂದು; ಬಹಳ ಹಿಂದಿನಿಂದಲೂ ಜಾರಿಗೆ ಬಂದು ಆಧುನಿಕತೆಯ ಪ್ರವೇಶದವರೆಗೂ ಅಸಮಾನತೆಯ ವ್ಯವಸ್ಥೆಗೆ ಆಶ್ರಯವಾಗಿದ್ದಂತಹ ಊಳಿಗಮಾನ್ಯೀಯ, ಯಾಜಮಾನ್ಯೀಯ ಸಮಾಜೋ-ಸಾಂಸ್ಕøತಿಕ-ಭಾಷಿಕ-ಅಕ್ಷರೀಯ ವ್ಯವಸ್ಥೆಯ ಅಳಿದುಳಿದ ಬೀಜಗಳನ್ನು ನಿರಾಕರಿಸುವ ಸಾಧ್ಯತೆ, ಎರಡು; ಎಲ್ಲವನ್ನೂ ಕೂಡಾ ಅಂದರೆ ವೈವಿಧ್ಯತೆ ಮತ್ತು ಆವೃತ್ತಿಗಳನ್ನು, ಬಹುರೂಪಗಳನ್ನು ನಿರಾಕರಿಸಿ ಎಲ್ಲವನ್ನೂ ಕೂಡಾ, ಅಂದರೆ ಒಂದು ಪ್ರದೇಶ ವಿಶಿಷ್ಠ ಅಥವಾ ಇನ್ಯಾವುದೇ ಭಾಷೆಯ ವಿವಿಧ ವೈವಿಧ್ಯದ ಧ್ವನಿ, ಉಚ್ಛಾರಣೆಯ ಅನಂತ ಸಾಧ್ಯತೆಗಳನ್ನು ಕೊಲ್ಲುವ ಜಾಗತೀಕರಣದ ಅವತಾರದ ರಾಕ್ಷಸನನ್ನು ವಿರೋಧಿಸುವ ಒಂದು ಕ್ರಮ ಸಾಧ್ಯತೆಯಿಂದ. ಅದು ಒಂದು ರೀತಿಯ ಸಮಾಜವಾದ, ಪ್ರಜಾತಂತ್ರ ಅಥವಾ ಭಾಷಾ ಸಾಮಾಜಿಕ ನ್ಯಾಯವೂ ಆಗಬಲ್ಲದು. ಇಂತಹ ಸಂಗತಿ ತುಂಬಾ ಅಗತ್ಯ ಯಾಕೆಂದರೆ ಎಲ್ಲರ ದನಿಯೂ ಅಗತ್ಯವೆಂಬ ಕಾರಣದಿಂದ ಕೂಡಾ. ನೆಲೆಯಲ್ಲಿ ಭಾಷೆ ರಾಜಕೀಯ ಭೂಮಿಯನ್ನೂ ಕೂಡಾ ಮೀರಿ ನಿಲ್ಲಲೇಬೇಕಾಗುತ್ತದೆ. ಯಾಕೆಂದರೆ ಕುಂದಾಪುರ ತಾಲೂಕು ಒಡೆದು ಬೈಂದೂರು ತಾಲೂಕಾದರೆ ಬೈಂದೂರು ಕನ್ನಡದ ಉಗಮವಾಗುವುದಿಲ್ಲ, ಬದಲು ಬೈಂದೂರು ಎನ್ನುವ ರಾಜಕೀಯ ಆಕೃತಿ-ಅಭಿವ್ಯಕ್ತಿ ನಿರ್ಮಿತಗೊಳ್ಳುತ್ತದೆ. ರಾಜಿಕ ಗುರುತು ಮತ್ತು ಅಭಿವ್ಯಕ್ತಿಗಳು ಆಧುನಿಕವಾದುವು, ಆದರೆ ಭಾಷೆ, ಸಂಸ್ಕøತಿ ಎಲ್ಲವೂ ಕೂಡಾ ಆಧುನಿಕ ಪೂರ್ವವಾದುವು ಅಂದರೆ ಸೂರ್ಯ-ಚಂದ್ರ ಹುಟ್ಟಿದಾಗ ಹುಟ್ಟಿದವುಗಳಲ್ಲ, ಬದಲು ಒಂದು ಸಾಮಾಜಿಕ ಮತ್ತು ಚಾರಿತ್ರಿಕ ವಿಕಾಸವನ್ನು ಕಂಡುಕೊಂಡಂತವುಗಳು. ಭಾಷೆ, ನೋಮ್ಚೋಂಸ್ಕಿ ಹೇಳುವ ಹಾಗೆ ಸಾಮಾಜಿಕ ಸಾಧನ(ಸೋಶಿಯಲ್ ಟೂಲ್)ಗಳಿಂದ ಉತ್ಪನ್ನಗೊಂಡವು. ಅಂತಹ ಒಂದು ಉತ್ಪನ್ನ ಮತ್ತು ಮುಂದುವರಿದ ಪ್ರಕ್ರಿಯೆ ಚಾರಿತ್ರಿಕ ಮತ್ತು ಸಾಮಾಜಿಕ ಎನ್ನುವ ಕಾರಣದಿಂದ. ಹೀಗೆ, ಕುಂದಾಪ್ರ ಕನ್ನಡ ಭಾಷೆಯನ್ನು ರಾಜಕೀಯ ಭೂಗೋಳಕ್ಕಿಂತ ಭಿನ್ನವಾದಂತಹ ಅಮೂರ್ತವಾದ ಸಮಾಜೋ-ಸಾಂಸ್ಕøತಿಕ ಸನ್ನಿವೇಶದಲ್ಲಿ ಒಂದು ಪ್ರಕ್ರಿಯೆಯಾಗಿಯೆ ನೋಡಬೇಕಾಗುತ್ತದೆ. ಸಂಸ್ಕøತಿ ಅಥವಾ ಕುಂದಾಪ್ರ ಕನ್ನಡದ ಭಾಷೆ ಕೆಲವೊಮ್ಮೆ ಹಿನ್ನೀರಿನ (ಬ್ಯಾಕ್ವಾಟರ್) ರೀತಿಯಲ್ಲಿ ಕೂಡಾ ಕಂಡುಬರುವ ಕಾರಣದಿಂದ. ಬ್ರಹ್ಮಾವರ, ಶಾಂಭವೀ ನದೀತೀರದ ಆಚೆಗಿರುವ ತುಳುಭಾಷೆ, ಬ್ರಹ್ಮಾವರದ ಕುಂದಾಪುರದ ಕನ್ನಡದ ಮೇಲೂ, ಹೆಬ್ರಿ-ಪೆರ್ಡೂರಿನ ತುಳುಭಾಷೆ ಅಲ್ಲಿನ ಕುಂದಾಪುರ ಕನ್ನಡದ ಮೇಲೂ, ಶಿರೂರು-ಅಳ್ವೆಗದ್ದೆ-ಭಟ್ಕಳದ ಗಡಿಭಾಗದ ಕುಂದಾಪುರ ಕನ್ನಡದ ಮೇಲೆ ಭಟ್ಕಳ-ನಾಯ್ಕ ಮತ್ತಿತರ ಸಮುದಾಯದ ಕನ್ನಡವೂ ಕೂಡಾ ಅಪಾರವಾದ ಪ್ರಭಾವ ಪರಿಣಾಮವನ್ನು ಉಚ್ಛಾರಣೆ, ರಾಗ, ಲಾಲಿತ್ಯ, ಅರ್ಥದಲ್ಲಿ ಉಂಟುಮಾಡಿದೆ. ಗಡಿಗಳಲ್ಲದೆ ಕುಂದಾಪ್ರ ಕನ್ನಡ ಎಂದು ಕರೆಯಬಹುದಾದ ಕಲ್ಪಿತ ಅಮೂರ್ತ ಭಾಷಾ ಸಮುದಾಯ ನೆಲೆಸಿದ ಭೂಮಿಯ ಒಳಗಡೆಯೇ ನೆಲೆಸಿರುವ ಕೊಂಕಣಿ, ಬ್ಯಾರಿ, ಮಲಯಾಳಮ್, ಮರಾಠೀ ಮುಂತಾದ ಅನೇಕ ಭಾಷೆಗಳು ನಡೆಸಿರುವ ಸಂವಾದ, ಮಥನ-ಮೈಥುನ ಕೊಡುಕೊಳ್ಗೆಗಳ ಮೂಲಕ ಉಂಟಾಗಿರುವಂತಹ ಪ್ರಭಾವ ಪರಿಣಾಮಗಳೂ ಕೂಡಾ ಸಾಧ್ಯತೆಯನ್ನು, ಕುಂದಾಪ್ರ ಕನ್ನಡ ಎನ್ನುವ ಗಡಿ ಕೇಂದ್ರಿತ, ಚೌಕಟ್ಟನ್ನು, ಗುರುತನ್ನು ನಿರಾಕರಿಸುತ್ತವೆ ಹಾಗೂ ಅಸಹಜ ಎಂದೂ ಕೂಡಾ ನಿರ್ಧರಿಸುತ್ತವೆ.  ನೆಲೆಯಲ್ಲಿಯೇ ಕುಂದಾಪ್ರ ಕನ್ನಡ ಅನ್ನುವುದಕ್ಕಿಂತಲೂ ಒಂದು ಸೂಕ್ತವಾದ ಶಬ್ದದ ಬಳಕೆಯು ಒಂದು ರೀತಿ ಸ್ಥಳೀಯ ಪ್ರದೇಶದ ಕಾಲ-ದೇಶದ ಒಳಗಡೆಯೇ ಇರುವಂತಹ ಭಾಷೆಯ ವಿಶ್ವಾತ್ಮಕತೆಯನ್ನು ಭಂಗಪಡಿಸದೆ ಪ್ರತಿನಿಧಿಸುತ್ತದೆಂಬುದು ನನ್ನ ಗ್ರಹಿಕೆ. ರೀತಿಯ ಪ್ರತಿನಿಧೀಕರಣವೂ ಕೂಡಾ ಕೃತಕವಾದಂತಹ ಎಜೆಂಡಾ ಆಗದೇ, ಸಹಜ-ಸಾವಯವದ ನೆಲೆಯಲ್ಲಿಯೇ ಪ್ರತಿನಿಧಿಸಲ್ಪಡಬೇಕೆಂಬುದೂ ಕೂಡಾ ನನ್ನ ಇಂಗಿತ.  ರೀತಿಯ ಒಳಗೊಳ್ಳುವಿಕೆ, ಭಾಷಿಕ ಇನ್ಕ್ಲೂಸಿವ್ನೆಸ್ ಮಾನವ ಜನಾಂಗ ಪ್ರತಿನಿಧಿಸುವ ಮೌಲ್ಯ ಕೂಡಾ ಆಗಿರುವುದರಿಂದ ಮತ್ತು ಅದು ಇದುವರೆಗೂ ನಡೆದಂತಹ, ಭಾಷಿಕ ಯಾಜಮಾನ್ಯ ಹೊಂದಿರುವಂತಹ ವರ್ಗ ಇಲ್ಲದಿರುವ ತಳಮಟ್ಟದ ಯಾಜಮಾನ್ಯವಿರಹೀ ಸಮುದಾಯದ ಮೇಲೆ ಮಾಡಿರುವ ಅಕ್ರಮಗಳಿಗೆ ಕೂಡಾ ಪ್ರಾಯಶ್ಚಿತ್ತವಾಗಬಹುದೆಂಬುದೂ ಕೂಡಾ ನನ್ನ ಅಂಬೋಣ. ಕುಂದಾಪುರ ಕನ್ನಡವೆಂದು ಪರಿಭಾವಿಸಿದ ಜನಪದದಲ್ಲೂ ಕೂಡಾ ಪ್ರತೀ ಜಾತಿ-ಸಮುದಾಯ, ಪ್ರದೇಶಗಳು ಬಿಂಬಿಸುವ ಅನನ್ಯ ಭಾಷೆಯ ವಿವಿಧ ಶಾಖೆಗಳ ಮಿಳಿತ, ಭಾಷೆ ಸೇರಿದಂತೆ ಪ್ರತೀ ಭಾಷೆಗಳ ಶ್ರೀಮಂತಿಕೆ, ಚೈತನ್ಯವೂ ಆಗಿದೆ.

ಕುಂದಾಪುರ ಕನ್ನಡ ಶ್ರೇಷ್ಠತೆ ಮತ್ತು ಪವಿತ್ರತೆಯೂ ಕೂಡಾ ಅತ್ಯಂತ ಚರ್ಚೆಯ ಸಂಗತಿ. ಯಾವುದೇ ಭಾಷೆಯೂ ಕೂಡಾ ಪರಮಪವಿತ್ರ, ಪರಮಶ್ರೇಷ್ಠವಾದುದೆಂದು ಭಾಷಾಶಾಸ್ತ್ರ, ಭಾಷಾವಿಜ್ಞಾನ, ಚರಿತ್ರೆ, ಸಮಾಜಶಾಸ್ತ್ರ ಮತ್ತು ಮಾನವಶಾಸ್ತ್ರವೂ ಕೂಡಾ ಪರಿಗಣಿಸುವುದಿಲ್ಲ. ಪುರಾಣಶಾಸ್ತ್ರ ಮಾತ್ರ, ಮಿಥಕಗಳು ಮಾತ್ರ ಒಂದೂ ಊಹಾತ್ಮಕ ನಂಬಿಕೆಯಾಗಿ, ಅತಾರ್ಕಿಕ ನಿಯಮಗಳೊಂದಿಗೆ ರೀತಿಯಾಗಿ ಪರಿಗಣಿಸುತ್ತವೆ. ಸಮಕಾಲೀನ ಮಾನವಶಾಸ್ತ್ರ, ಮಾನವನ ವಿಕಾಸಶಾಸ್ತ್ರವಂತೂ ಮಾನವನ, ಮಾನವನ ಸಮುದಾಯದ ಶ್ರೇಷ್ಠತೆ, ಪರಿಶುದ್ಧತೆ ಮತ್ತು ಮೂಲದಂತಹ ವ್ಯಸನವನ್ನು ನಿರಾಕರಿಸುತ್ತದೆ.ಅದು ಭಾಷೆಗೂ,ಕುಂದಾಪ್ರ ಕನ್ನಡದ ಭಾಷೆಗೂ ಅನ್ವಯಿಸುತ್ತದೆ. ಕುಂದಾಪ್ರ ಕನ್ನಡದ ಭಾಷೆ ಕೂಡಾ ಒಂದು ರೀತಿಯ ಸಂಕರಗೊಂಡ, ಕೊಡುಕೊಳುಗೆಯ, ಸಮನ್ವಯದ ಭಾಷೆಯೇ ಆಗಿದೆ. ಯಾವುದೇ ಭಾಷೆಯು ಕೂಡಾ ಸ್ವಯಂ ಸ್ವಾವಲಂಬಿಯಲ್ಲ, ಸ್ವಯಂಪರಿಪೂರ್ಣವಲ್ಲ.  ಕುಂದಾಪ್ರ ಭಾಷೆ ಕೂಡಾ ಅನೇಕ ನೆರೆಹೊರೆಯ, ಇನ್ನೊಂದು ನದೀ ತೀರದ, ವಲಸೆ ಬಂದ ಸಮುದಾಯಗಳ, ಸಾಮ್ರಾಜ್ಯಶಾಹೀ ಬಳುವಳಿಯಾಗಿ ಬಂದಂತಹ ಯುರೋಪಿನ ಭಾಷೆಗಳಿಂದ ಕೂಡಾ ಸ್ವೀಕರಿಸಿದೆ, ಜತೆಗೆ ಬಳುವಳಿಯಾಗಿಯೂ ನೀಡಿದೆ. ರೀತಿಯ ಮಥನ ಮೈಥುನದ ಕ್ರಿಯೆಯೇ ಸಹಜ ಎನ್ನುವ ಹಾಗೆ ವಿನಿಮಯಿಸಿದೆ. ಇಂಗ್ಲೀಷ್, ಪಾರ್ಸಿ, ಪೋರ್ಚುಗೀಸ್, ಅರಬ್ಬೀ, ಕೊಂಕಣೀ, ತುಳು, ತಮಿಳು, ಹಿಂದಿ, ಉರ್ದು ಮುಂತಾದ ಅನೇಕ ಭಾಷೆಗಳ ಜತೆ ಇದನ್ನು ಕುಂದಾಪ್ರ ಕನ್ನಡ ಸಾಧಿಸಿದೆ. ಅನೇಕ ಚಾರಿತ್ರಿಕ ಕಾಲಘಟ್ಟಗಳಲ್ಲಿ ರೀತಿಯ ಆದಾನ-ಪ್ರದಾನ ಜರುಗಿರುವುದು ನಮ್ಮನುಭವಕ್ಕೆ ಬರುತ್ತದೆ. ನಾವು ಆಕ್ಸ್ಫರ್ಡ್ ಆ್ಯಡ್ವಾನ್ಸ್ಡ್ ಲರ್ನರ್ಸ್ ಡಿಕ್ಶನರಿಯನ್ನು ತೆಗೆದರೆಅಚ್ಕಟ್ ಎನ್ನುವ ಕುಂದಾಪ್ರ ಕನ್ನಡದ ಶಬ್ದವೂ ಸಿಗುತ್ತದೆ. ಅದರರ್ಥಅಚ್ಚುಕಟ್ಟು ಎಂದು. ಶಿರೂರಿನಿಂದ-ಬ್ರಹ್ಮಾವರದವರೆಗೆ, ಹೆಬ್ರಿಯಿಂದÀ ಕುಂದಾಪುರದವರೆಗಿನ ನಮ್ಮ ಯಾವುದೇ ಹಳ್ಳಿಯ ಸಂಚಾರ, ಸಂದರ್ಶನದಲ್ಲಿ ಯಾವುದೇ ವೃದ್ಧರನ್ನು, ಹಿರಿಯನಾಗರಿಕನನ್ನು ಒಳ್ಳೆಯದರ ವಿರೋಧ ಪದ ಯಾವುದೆಂದು ಕೇಳಿದಾಗ, ಅವರು ಹೇಳುವ ಬುರ್ನಾಸು ಎಂಬ ಪದ, ಮೂಲತ: ಇಂಗ್ಲೀಷ್ ಭಾಷೆಯದ್ದಾಗಿದೆ. ಬುರ್ನಾಸು, ಬಾರ್ನ್ ಆ್ಯಸ್ (oಡಿಟಿ ss) ಎನ್ನುವ ಇಂಗ್ಲೀಷ್ ಭಾಷೆಯ ಪದವೊಂದರ ಸಂವಾದಿ. ಇಂತಹ ಅನೇಕ ಶಬ್ದಗಳ ಕೊಡುಕೊಳುಗೆ ನಮ್ಮ ಕಣ್ಮುಂದೆ ನಿಲ್ಲುತ್ತದೆ. ಪರ್ಶಿಯನ್ ಮತ್ತು ಉರ್ದು ಭಾಷೆಗಳ ನಡುವೆಯಂತೂ ಕುಂದಾಪ್ರ ಕನ್ನಡ ಸಾಕಷ್ಟು ಪದ-ಪರಿಕಲ್ಪನೆಗಳನ್ನು ಪಡೆದಿದೆ, ನೀಡಿದೆ. ಅಸಂಖ್ಯಾತ ಉದಾಹರಣೆಗಳನ್ನು ನೀಡಬಹುದಾದರೂ ಕೂಡಾ ನಮ್ಮಲ್ಲಿ ಭಾರೀ ಜನಪ್ರಿಯವಿರುವಬೇಕಾರ್ ಬಿಟ್ಟಿ ಎನ್ನುವ ಶಬ್ದ ಪರ್ಶಿಯನ್ ಭಾಷೆಯಬೇಗಾರ್ ಎಂದರೆ ಹಣ ನೀಡದ ಉಚಿತ ಕೂಲಿ ಎಂಬ ನೈಜಾರ್ಥವನ್ನು ಪಡೆದಿದ್ದು, ಆದರೆ ನಮ್ಮಲ್ಲಿ ಒಟ್ರಾಸಿ, ಗಮನ ನೀಡದೆ ಮಾಡುವ, ದಕ್ಷತೆಯಿಲ್ಲದೆ ನಿರ್ವಹಿಸುವ ಕೆಲಸವೆಂದೂ ಕೂಡಾ ಬಳಕೆಯಾಗುತ್ತಿದೆ. ಹಕೀಕತ್, ಬಿಲ್ಖುಲ್, ಕಡಕ್, ಏಕ್ದಂ, ದಮ್ಮಡಿ, ಪಾವಾಣಿ, ಕಜ್ರಿ ಹಣ್, ವಕೀಲ್ಕಿ, ದೌಲತ್, ಚೌಕಾಶಿ, ಕಿಮ್ಮತ್ತ್, ಕಂಜೂಸ್ ಮುಂತಾದ ಶಬ್ದಗಳು, ಹೆಚ್ಚಿನ ಕಂದಾಯ ಸಂಬಂಧೀ ಶಬ್ದಗಳು ಪರ್ಶಿಯನ್ ಮೂಲದವು. ಫರಂಗಿ, ಪಪ್ಪಾಯ-ಪಪ್ಪಳಿ, ಪ್ಯಾರ್ಲಿ, ಮೇಜ್, ಕಾಗ್ದ ಶಬ್ದಗಳು ಕುಂದಾಪ್ರ ಕನ್ನಡಕ್ಕೆ ಪೋರ್ಚುಗೀಸ್ ಅಥವಾ ಲ್ಯಾಟಿನ್ ಅಮೇರಿಕನ್ ಭಾಷೆಯ ಬಳುವಳಿಗಳು. ಪ್ರತೀ ಭಾಷೆಯ ಜತೆ ಸೌಹಾರ್ದಯುತ ಆದಾನ ಪ್ರದಾನ, ತನಗೆ ಬೇಕಾದ ರೀತಿಯಲ್ಲಿ ಪದ ಪರಿಕಲ್ಪನೆಗಳನ್ನು ಎರಕಹೊಯ್ಯುವ, ನಿರ್ಮಿಸುವ ಗುಣವೂ ಕೂಡಾ ಭಾಷೆಯ ವಿಶಿಷ್ಠ ಲಕ್ಷಣ. ಉದಾಹರಣೆಗೆ, ‘ಸಂತಿ ಮಾರ್ಕೆಟ್ ಎನ್ನುವ ಪದದ ಸಂಧಿ, ಸಮಾಸ ವಿಲೀನಕ್ಕೆ ಯಾವುದೇ ರೀತಿಯ ತಕರಾರಿಲ್ಲ. ‘ಕ್ಯಾಚ್ ಹಿಡಿಯಾ ಎನ್ನುವ ಶಬ್ದದ ಆಕೃತಿಯೂ ಕೂಡಾ ವಿವಾದಿತವಾಗಿಲ್ಲ. ಅತ್ಯಂತ ಸಹಜ ಮತ್ತು ಅತಿ ನಿಯಮಬಾಧಿತವಲ್ಲದ ಭಾಷೆಯ ಒಂದು ವಿಶಿಷ್ಠ ಲಕ್ಷಣವೂ ಕೂಡಾ ಹೌದು. ನನಗನಿಸಿದ ಹಾಗೆ ಸಂಸ್ಕø ಭಾಷೆಗೂ ಕೂಡಾ ಸೌಲಭ್ಯವಿಲ್ಲ, ಅದು ಹೆಚ್ಚು ಕಡಿಮೆ ನಾರ್ಮೇಟಿವ್ (oಡಿmಚಿಣive) ಭಾಷೆ. ಅದು ಕೊಡುಕೊಳುಗೆಯನ್ನು ಹೊಂದಿದೆಯಾದರೂ ಕೂಡಾ ಕೆಲವು ಕರಾರುಗಳನ್ನು ವಿಧಿಸಿಯೇ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತದೆ. ಕುಂದಾಪ್ರ ಕನ್ನಡ ನೆಲೆಯಲ್ಲಿ ಅನನ್ಯವೇ ಸರಿ, ಉದಾಹರಣೆಗೆ ಪೋರ್ಚುಗೀಸ್ ಶಬ್ದ ಪಪ್ಪಾಯವು ಪಪ್ಳೀ ಆಗುತ್ತದೆ, ಅದೇ ಭಾಷೆಯ ಇನ್ನೊಂದು ಶಬ್ದ ಮೇಜು, ಮೇಜ್ ಆಗುತ್ತದೆ, ‘ಕಗತವು ಕಾಗ್ದವಾಗುತ್ತದೆ. ಕನ್ನಡದ ಸಂಸ್ಕøತಿ ಚಿಂತಕರೊಬ್ಬರು ವಿಭಾಗಿಸುವ ಆಸ್ಥಾನ ಭಾಷೆ, ಮಾರ್ಗ ಭಾಷೆ ಮತ್ತು ಮನೆ ಭಾಷೆಗಳಲ್ಲಿ ಕುಂದಾಪ್ರ ಕನ್ನಡ ಭಾಷೆ ಮನೆ ಭಾಷೆಯ ವರ್ಗದಲ್ಲಿ ಬೀಳುವ ಕಾರಣ ಅದು ರೀತಿಯ ಚಲನಶೀಲತೆ, ಸೃಷ್ಠಿಶೀಲ ಸಮನ್ವಯ, ಹೊಸದಾಗಿ ಕಟ್ಟುವ ಕ್ರಮ ಮತ್ತು ಅದನ್ನು ಬಳಕೆಗೆ ತರುವ ಚಾತಿಯನ್ನೂ ಕೂಡಾ ಹೊಂದಿದೆ. ಕುಂದಾಪ್ರ ಕನ್ನಡ ನಮ್ಮ ನೆರೆ-ಹೊರೆಯ ಭಾಷೆಗಳ ಜತೆ ನಡೆಸಿದ ಸಂವಾದ, ಸಿಂಥೆಸಿಸ್ಗಿಂತ, ಪ್ರದೇಶ-ಪರಿಸರದಲ್ಲಿ ಚರಿತ್ರೆಯ ಅನೇಕ ಕಾಲಘಟ್ಟಗಳಲ್ಲಿ ಅನೇಕ ವಂಶ-ಮಾದರಿಯ ಪ್ರಭುತ್ವಗಳು ನಡೆಸಿದ ಆಡಳಿತ ಅಧಿಕಾರದಿಂದ ಬಂದಿರಬಹುದಾದ ಪರ್ಶಿಯನ್, ಯುರೋಪಿಯನ್ ಮತ್ತು ಲ್ಯಾಟಿನ್ ಅಮೇರಿಕದ ಭಾಷೆಗಳ ಜತೆ ಆರೋಗ್ಯಕರವಾಗಿ ಸಂವಹನಿಸಿದೆ. ನನಗನಿಸಿದ ಹಾಗೆ ನಮ್ಮ ಹತ್ತಿರದ ನೆರೆಹೊರೆಯ ಭಾಷೆಗಳಾದ ಕೊಂಕಣಿ, ಮಲಯಾಳಂ, ತುಳುಗಳ ಜತೆಯಲ್ಲಿಯೂ ಕೂಡಾ ರೀತಿಯ ಸಾಧ್ಯತೆ ಅಸಾಧ್ಯವಾಗಿದೆ. ಆಗಿನ ಭೂಗೋಳ, ಕಾಸರಗೋಡು-ಶಿರೂರು ಭೂಪ್ರದೇಶದ ನಡುವಿನ ವಿರಳ ಚಲನೆ, ಅನಸ್ತಿತ್ವದಲ್ಲಿದ್ದ ಸಂವಹನ ಮಾಧ್ಯಮಗಳೂ ಕೂಡಾ ಇದಕ್ಕೆ ಕಾರಣವಿರಲೂಬಹುದು. ಪರ್ಶಿಯನ್ ಮತ್ತು ಯುರೋಪ್ ಭಾಷೆಗಳ ನಡುವಿನ ಪ್ರಕ್ರಿಯೆ ಈಗಾಗಲೇ ಹೇಳಿದ ಹಾಗೆ ಏಕರೂಪೀ ಪ್ರಭುತ್ವ ಮತ್ತು ಅದರ ಏಕರೂಪದ ಆಡಳಿತ-ಕಂದಾಯ-ನ್ಯಾಯ-ಅಧಿಕಾರ ವ್ಯವಸ್ಥೆ ಹಾಗೂ ಸಂವಹನ ವ್ಯವಸ್ಥೆಯ ಕಾರಣದಿಂದಲೂ ಕೂಡಾ ಅಗಿದ್ದು.

ಭಾಷೆ ಸಮಾಜದ ಬಿಂಬ, ಪ್ರತಿಬಿಂಬ, ಕನ್ನಡಿ ಕೂಡಾ. ಭಾಷೆಯ ಚರಿತ್ರೆ ಕೂಡಾ ಕುಂದಾಪ್ರ ಕನ್ನಡ ಭಾಷೆ ಸರಿಸುಮಾರು ನಾವು ಊಹಿಸಬಹುದಾದ ಬ್ರಹ್ಮಾವರ-ಶಿರೂರು ದಕ್ಷಿಣೋತ್ತರ, ಹೆಬ್ರಿ-ಕುಂದಾಪುರ ಪೂರ್ವಪಶ್ಚಿಮ ಎನ್ನುವ ಕಲ್ಪಿತ ಭೂಗೋಳದ ಚರಿತ್ರೆ, ಸಂಸ್ಕøತಿಯನ್ನೂ ಕೂಡಾ ಕಥಿಸುತ್ತದೆ. ಸೃಷ್ಟಿಶೀಲವಾಗಿ ಮಾನವನು ಸಮುದಾಯದ ಒಳಗೆ ಮತ್ತು ಹೊರಗೆ ನಡೆಸಿರುವ ಸಂವಾದದ ಎಲ್ಲಾ ವಿಧ, ಆಯಾಮಗಳ ಚರಿತ್ರೆಯನ್ನು ನಮಗೆ ಒದಗಿಸಿ ಕೊಡುತ್ತದೆ. ಆಧುನಿಕ ಪೂರ್ವ ಅಥವಾ ಪ್ರಿ- ಮಾಡರ್ನ್ ಎನ್ನುವ ಕಾಲಘಟ್ಟದಲ್ಲಿ ನಾವು ಇಲ್ಲಿಯ ಚರಿತ್ರೆ ಮತ್ತು ಸಾಂಸ್ಕøತಿಕ ಪರಿವೇಶದ ಪುನರ್ ನಿರ್ಮಾಣವನ್ನು ಮಾಡುವುದೆಂದರೆ, ಅದು ಅತ್ಯಂತ ಗಮನಾರ್ಹವಾಗಿ ಮೌಖಿಕ ಪರಂಪರೆಯ ಮೂಲಸ್ತ್ರೋತವಾದ ಪ್ರದೇಶ ವಿಶಿಷ್ಠವಾದ ಕುಂದಾಪ್ರ ಕನ್ನಡದಿಂದಲೇನೇ. ಭಾಷೆಯ ಅನೇಕ ಶಬ್ದಗಳು ನಮಗೆ ವಸ್ತು ವಿಷಯ (ಜಿಚಿಛಿಣ), ವಿವರಣೆ, ವಿಶ್ಲೇಷಣೆಯನ್ನು ಒದಗಿಸಿಕೊಡುತ್ತದೆ. ಅವುಗಳನ್ನು ಶಬ್ದಶ: ಚಾರಿತ್ರಿಕ, ಸಾಂಸ್ಕøತಿಕ, ಸಮಾಜಶಾಸ್ತ್ರೀಯ ಮತ್ತು ಅಂತ್ರೋಪೋಮೋರ್ಪಿಕ್ ಎಂದು ಗ್ರಹಿಸಲಾಗದಿದ್ದರೂ ಕೂಡಾ, ಪ್ರಶ್ನೆ-ಪ್ರಮಾಣ-ಸಾಕ್ಷ್ಯ-ಪರೀಕ್ಷೆ-ತುಲನೆ-ಕಾಲದೇಶದಲ್ಲಿ ಸಂದರ್ಭೀಕರಿಸುವ ಮೂಲಕ ನಾವು ಅಂತಹ ಸಾಧ್ಯತೆಯನ್ನು ನಿಚ್ಚಳವಾಗಿ ಗ್ರಹಿಸಬಹುದಾಗಿದೆ. ಉದಾ:- ಬೇಕಾರ್ ಬಿಟ್ಟಿ ಎನ್ನುವ ಶಬ್ದ ಅಕ್ಷರಶ: ಮಧ್ಯಯುಗದ ಊಳಿಗಮಾನ್ಯ ವ್ಯವಸ್ಥೆಯ ಮೂಸೆಯಿಂದ ಅವತರಿತವಾದ ಶಬ್ದ. ಮೂಲತ: ಇದನ್ನು ಪರ್ಶಿಯನ್, ಉರ್ದು ಮತ್ತು ಹಿಂದಿಗಳಲ್ಲಿ ಗಮನಿಸಬಹುದಾದರೂ ಕೂಡಾ ನಂತರದ ಕಾಲಘಟ್ಟದಲ್ಲಿ ಪ್ರದೇಶಕ್ಕೆ ವ್ಯಾಪಿಸಿದ್ದಂತ ಸಮಾಜೋ-ರಾಜಕೀಯ ವ್ಯವಸ್ಥೆಯ ರೂಪದಲ್ಲಿ ನಾವು ಗಮನಿಸಬಹುದಾಗಿದೆ. ಶಬ್ದ ಸಾಕ್ಷಾತ್ ಊಳಿಗಮಾನ್ಯ ವ್ಯವಸ್ಥೆಯ ಪರಿವೇಶ ಮತ್ತು ಭೌತಿಕ ಪರಿಸರವನ್ನು ನಮ್ಮ ಕಣ್ಣಮುಂದಿಡುತ್ತದೆ. ನಮ್ಮ ಭೂಮಿ, ಭೂಗೋಳ ಉತ್ತರಭಾರತದ ಮತ್ತು ಕಾವೇರೀ ನದೀ ಬಯಲಿನ ರೀತಿಯಲ್ಲಿ ಉಗಮಿಸಿದ ಊಳಿಗಮಾನ್ಯ ಪದ್ಧತಿಯನ್ನು ಹೊಂದಿಲ್ಲದಿದ್ದವಾದರೂ ಕೂಡಾ, ಇಲ್ಲಿಗೆ ಹೊಂದಿಕೆಯಾಗುವ ರೀತಿಯಲ್ಲಿ, ನದೀ ಬಯಲುಗಳಿಂದ ಹೊರತಾದಂತಹ ಒಂದು ರೀತಿಯ ಪ್ರದೇಶ ವಿಶಿಷ್ಠ ಊಳಿಗಮಾನ್ಯ ಪದ್ಧತಿಯನ್ನು ನಮ್ಮ ಕಣ್ಣ ಮುಂದಿಡುತ್ತದೆ. ಇದು ಅತ್ಯಂತ ಸಮಗ್ರವಾಗಿ ಇಡೀ ಭಾರತದ ಚರಿತ್ರೆ ಮತ್ತು ಊಳಿಗಮಾನ್ಯ ಪ್ರಭುತ್ವದ ಚರ್ಚೆಯನ್ನು ನಿರ್ವಹಿಸುವಾಗ, ಒಂದು ವಿಧವಾಗಿಯೂ ಕೂಡಾ ಪ್ರಕಟಗೊಳ್ಳುತ್ತದೆ. ಅಂತಹ ಸಾಮಾನ್ಯವಾದ ಊಳಿಗಮಾನ್ಯ ಪದ್ಧತಿಯಲ್ಲಿನ ಬಳಕೆಗಿಂತಲೂ ಕೂಡಾ ಇಂದು ನಮಗೆ ಬೇಕಾರ್ ಬಿಟ್ಟಿ ಎಂಬ ಶಬ್ದ, ಗಮನ ಹರಿಸದೇ ಮಾಡುವ ಕಾರ್ಯ, ಅವಧಾನ ನೀಡದೆ ಮಾಡುವ ಕಾರ್ಯ, ಒಟ್ಟಾರೆ ಮಾಡುವ ಕೆಲಸ, ಹರಕೆಪೂರ್ತಿ ಎಂಬಂತಹ ಅರ್ಥ ನೀಡುವ ಶಬ್ದವಾಗಿ ಭಾಷೆಯ ಶಬ್ದಗಳು ಕಾಲಕಾಲಕ್ಕೆ ಬದಲಾಗುವಂತಹ ಲಕ್ಷಣವನ್ನೂ ತಿಳಿಸುತ್ತಾ,’ಶಬ್ದಗಳು ಸಾಪೇಕ್ಷ ಎಂಬ ಅಭಿಪ್ರಾಯಕ್ಕೆ ಕಾರಣವಾಗುತ್ತವೆ.

ಇನ್ನೊಂದು ಉದಾಹರಣೆಗಾಗಿ ಕುಂದಾಪ್ರ ಕನ್ನಡದ ಶಬ್ದಸ್ವಾಮಿ ಮನಿ ಚಪ್ಪ್ದ್ವಾಸಿ,ಯನ್ನು ಕೂಡಾ ವಿವರಿಸಬಹುದು. ‘ಸ್ವಾಮಿ, ಕುಂದಾಪ್ರ ಪ್ರದೇಶದಲ್ಲಿ ಅರ್ಚಿಸಲ್ಪಡುವ ಒಂದು ಅತಿ ಪ್ರಾಕೃತಿಕ ಎನ್ನಬಹುದಾದ ಒಂದು ಸಂಗತಿ. ಇದು ಬ್ರಾಹ್ಮಣೀಯ, ಆಗಮಿಕದೇವ, ದೇವರುಗಳ ವರ್ಗದಿಂದ ಹೊರತಾದುದು, ಆದಿವಾಸಿ ಸಮಾಜಗಳಲ್ಲಿ ಹೆಚ್ಚಿನವುಗಳಲ್ಲಿ ತೋರಿಬರುವ ದೈವ ಅಥವಾ ಸ್ಪಿರಿಟ್ ಅಥವಾ ಸತ್ತನಂತರದ ಅಸ್ತಿತ್ವದಲ್ಲಿ ನಂಬಿಕೆಯಿಡುವ ಸ್ಥಿತಿಗಿಂತಲೂ ಭಿನ್ನವಾದ ಅಂತ್ರೋಪೋಮೋರ್ಪಿಕ್ ನೆಲೆಯ ಪ್ರಕೃತಿಯಂಶದ ಆರಾಧನೆಯನ್ನು ಸೂಚಿಸುವ ಎಂದೇ ನಾನು ನಂಬುವ ಅರ್ಚಿಸುವ ಆರಾಧನೆಯನ್ನು ಸೂಚಿಸುತ್ತದೆ. ಇದನ್ನು ಕ್ರಿಯಾವಿಧಿಯನ್ನಲಾಗದಿದ್ದರೂ ಕೂಡಾ ಅತಿಮಾನುಷ-ಅತಿಪ್ರಾಕೃತಿಕ ಸಂಗತಿಯಲ್ಲಿ ನಂಬಿಕೆಯಿಡುವ ಒಂದು ನಂಬುಗೆಯ ವ್ಯವಸ್ಥೆಯನ್ನೂ ಸೂಚಿಸುತ್ತದೆ. ಅದನ್ನು ಧರ್ಮವೆನ್ನಲಾಗದಿದ್ದರೂ ಔಪಚಾರಿಕವಾಗಿ ನಂಬುಗೆಯ ವ್ಯವಸ್ಥೆಯಾಗಿ ಹೇಗೆ ಪ್ರದೇಶ ಸೃಜಿಸಿಕೊಂಡಿತು ಎನ್ನುವುದನ್ನೂ ಕೂಡಾ ಗಮನಿಸಬಹುದು. ಆದರೆ ಸ್ವಾಮಿ ಮನಿ ಚಪ್ಪ್ದ್ವಾಸಿಯಲ್ಲಿ ದೋಸೆ ಚಪ್ಪಗಿರುವುದು ನಿರರ್ಥಕ, ಅರುಚಿಕರ ಎಂಬರ್ಥದ ಒಂದು ನುಡಿಗಟ್ಟಾಗಿಯೇ ಕ್ರಮೇಣ ಚಲನೆಗೆ ಬಂದಿದ್ದನ್ನು ಕೂಡಾ ಗಮನಿಸಬಹುದಾಗಿದೆ. ಇದರಿಂದ  ನಿರ್ದಿಷ್ಠ ಪದದ ಹಿಂದಿರುವ ಭೌತಿಕ ಸಂಸ್ಕøತಿಯ ದರ್ಶನವನ್ನೂ ಕೂಡಾ ಇದು ಮಾಡಿಸುತ್ತಾ ಕಾಲಾನುಕ್ರಮದಲ್ಲಿ ನಂಬಿಗೆಯ ಕ್ರಿಯಾವಿಧಿಯಲ್ಲಿಯೂ ಕೂಡಾ ನಡೆದಿರಬಹುದಾದ ಸ್ಥಿತ್ಯಂತರವನ್ನೂ, ಅದು ಸಂವಾದಿಸಿದ ಮೇಲಿನ ಶಬ್ದವನ್ನೂ ಕೂಡಾ ವಿಶ್ಲೇಷಿಸಿದಾಗ ತಿಳಿಯುತ್ತದೆ. ಭಾಷೆ ಮತ್ತು ಭಾಷೆಯ ಪದಗಳು ಸ್ಥಿರ ಕನ್ನಡಿಗಳಾಗಿರದೇ, ಚಲಿಸುವ ಕನ್ನಡಿಯ ಹಾಗೆ, ಕಾಲಕಾಲದ ಅರ್ಥವನ್ನು ಧ್ವನಿಸುತ್ತದೆ. ಇದೇ ರೀತಿ ಕುಂದಾಪ್ರ ಕನ್ನಡದ ಇನ್ನೊಂದು ಶಬ್ದಪಡಿ. ನನಗನಿಸಿದ ಹಾಗೆ ಹೊಸ ತಲೆಮಾರಿನ ಯಾರಿಗೂ ಕೂಡಾ ಇದರ ಅರ್ಥ, ಪರಿಚಯವೇ ಇಲ್ಲವೆಂದು ತಿಳಿಯುತ್ತೇನೆ. ಯಾಕೆಂದರೆ ಪಡಿ ಎನ್ನುವುದು ಭಾಗದಲ್ಲಿ ಮಾತ್ರ ಕಂಡು ಬರುವಂತಹ ಆಚರಣೆ. ಪ್ರತೀ ಸರಳ, ಬುಡಕಟ್ಟು ಸಮಾಜದ ಪಳಿಯುಳಿಕೆಯಾಗಿಯೂ ಇದನ್ನು ಗಮನಿಸಬಹುದಾಗಿದೆ. ಬ್ರಾಹ್ಮಣ ಪರಂಪರೆಯಲ್ಲಿ ಶ್ರಾದ್ಧ ಎನ್ನುವ ಕ್ರಿಯಾವಿಧಿ ಹೇಗಿದಿಯೋ? ಅದೇ ರೀತಿ ಸರಿಸುಮಾರು ಅದನ್ನೇ ಹೋಲುವ ಒಂದು -ಬ್ರಾಹ್ಮಣ ಕ್ರಿಯಾವಿಧಿಯಾಗಿ ಇಂದಿಗೂ ಪ್ರದೇಶದಲ್ಲಿ ಆಚರಿಸಲ್ಪಡುತ್ತಿದೆಯಾದರೂ ಇದರ ಪ್ರಮಾಣವಿಂದು ಗಣನೀಯವಾಗಿ ತಗ್ಗಿದೆ. ಮುಂದಿನ ತಲೆಮಾರು ಸಂಸ್ಕøತಿ ಸೂಚಕ ಪದವನ್ನು ನಿಘಂಟುವಿನಲ್ಲಿಯೇ ನೋಡಬೇಕಾಗುತ್ತದೆ. ವಾರ್ಷಿಕ ಕ್ರಿಯಾವಿಧಿಯಾಗಿ ಆಚರಿಸಲ್ಪಡುತ್ತಿದ್ದಪಡಿ ದಿನದಂದು ಕುಟುಂಬದ ಎಲ್ಲರೂ ಕೂಡಾ ಸಮಾಹಿತರಾಗಿ, ಒಟ್ಟಿಗೆ ಕೂತು ಅಳಿದ ಪಿತೃಗಳನ್ನು ಸ್ಮರಿಸಿ, ಅವರಿಗೆ ಊಟವಿಕ್ಕಿ, ಕೊನೆಯಲ್ಲಿ ತಾವು ಉಣ್ಣಬೇಕಿತ್ತು. ಹೀಗೆಬರೀ ಎರಡಕ್ಷರದಪಡಿ ಎನ್ನುವ ಶಬ್ದ ಒಂದು ಕ್ರಿಯಾವಿಧಿಯ ಭೌತಿಕ ಪರಿಸರವನ್ನೇ, ಸಾಂಸ್ಕøತಿಕ ಪರಿವೇಶವನ್ನೇ ನಮಗೆ ಒದಗಿಸಿಕೊಡುತ್ತದೆ.

ಕುಂದಾಪ್ರ ಕನ್ನಡದ ಪದಕೋಶ ಅಥವಾ ನಿಘಂಟು ನಾನು ಮೇಲೆ ಉಲ್ಲೇಖಿಸಿದ ಹಾಗೂ ಇತರೆ ಕಾರಣಗಳಿಂದ ಬಹುವಿಶಿಷ್ಠ ಮತ್ತು ಸಂಕೀರ್ಣ ಎನ್ನಿಸಿರುವುದು. ಈಗಾಗಲೇ ಅನೇಕ ಪದಕೋಶ, ನಿಘಂಟುಗಳೂ ಕೂಡಾ ಬಂದಿವೆ. ಆದರೆ ಹೆಚ್ಚಿನ ನಿಘಂಟುಗಳು ಕೇವಲ ಏಕಮುಖೀ ಅನುಭವದ ದಾಖಲುಗಳಾಗಿವೆಯೇ ಹೊರತು ಕುಂದಾಪ್ರ ಕನ್ನಡ ಮಾತನಾಡುವಂತಹ ವಿಶಾಲ, ವೈವಿಧ್ಯದ ಪ್ರದೇಶ ಮತ್ತು ಸಮುದಾಯಗಳನ್ನು ಅವು ಮುಟ್ಟಿಲ್ಲವೆಂದೇ ನನ್ನಭಿಪ್ರಾಯ. ಪ್ರತೀ ನಿಘಂಟುಗಳ ಸಂಪಾದನೆ, ವ್ಯಾಪ್ತಿ, ಅನಾಲಜಿ, ವ್ಯಾಕರಣದ ಹಿಂದೆ ಕೂಡಾ ಪ್ರಜ್ಞೀಯ ಮತ್ತು ಅಪ್ರಜ್ಞೀಯ ನೆಲೆಯಲ್ಲಿ ಅಧಿಕಾರ ಪ್ರಶ್ನೆ ಮತ್ತು ಅದು ವ್ಯಕ್ತವಾಗುವ ಬಗೆ, ಜ್ಞಾನ-ಯಾಜಮಾನ್ಯ ಮುಂತಾದ ಸಂಗತಿಗಳೂ ಕೂಡಾ ಕಾರಣವೆಂದೇ ನನ್ನ ಅಭಿಪ್ರಾಯ. ಅವುಗಳನ್ನು ಸಾರಾಸಗಟಾಗಿ ತಿರಸ್ಕರಿಸಬೇಕೆಂದಿಲ್ಲ, ಬದಲು ವೈವಿಧ್ಯಪೂರ್ಣವಾಗಿ, ವಿವಿಧ ಸ್ತರ ಸಮುದಾಯಗಳಿಂದ ರಚಿತವಾದಂತಹ ಕುಂದಾಪ್ರ ಕನ್ನಡ ಅಭಿವ್ಯಕ್ತವಾಗಬೇಕೆಂಬ ಆಗ್ರಹವಷ್ಟೇ. ಅಂತಹ ಆಗ್ರಹ ಈಗಾಗಲೇ ನಾವು ಪ್ರಸ್ತಾಪಿಸಿದ ಹಾಗೆ ಪ್ರಜಾಪ್ರಭುತ್ವೀಯ ಕ್ರಮವೂ, ನ್ಯಾಯ ಸಮ್ಮತವೂ ಮತ್ತು ಸರಿಸುಮಾರಿಗೆ ಸತ್ಯವೆಂದು ಗೋಚರಿಸುವ ಕ್ರಮವೂ ಹೌದು. ಅಂತಹ ಕ್ರಮದ ಸಾಧನೆಯಲ್ಲಿ ಕೆಲವು ಎಚ್ಚರಗಳನ್ನು ಕೂಡಾ ತಾಳಬೇಕಾಗುತ್ತದೆ. ಎಲ್ಲರನ್ನೂ ಒಳಗೊಳ್ಳುವ ಕ್ರಮವೂ ಹೌದದು, ಅದರರ್ಥ ಜಡವಾಗಿ, ಕೃತಕವಾಗಿ ಅಜೆಂಡಾ ರೀತಿಯ ಒಳಗೊಳ್ಳುವಿಕೆಯಾಗದೆ ಅತ್ಯಂತ ಸಹಜ, ಸೃಷ್ಟಿಶೀಲ ಕ್ರಮವಾಗುವುದರ ಮೂಲಕ.

ಕುಂದಾಪ್ರ ಕನ್ನಡದ ಶಬ್ದಗಳನ್ನೂ ಶಾಬ್ದಿಕವಾಗಿ ವ್ಯಕ್ತಪಡಿಸಲು ಸಾಕಷ್ಟು ತೊಡಕೂ ಕೂಡಾ ಉಂಟು. ನನಗನಿಸಿದ ಹಾಗೆ ಅದನ್ನು ಸ್ವಲ್ಪಮಟ್ಟಿಗೆ ಡಿ.ಎನ್. ಶಂಕರಭಟ್ಟರ ಕ್ರಮದಿಂದಲೂ ಕೂಡಾ ನಿವಾರಿಸಬಹುದಾಗಿದೆ. ನಿಘಂಟು ಅಥವಾ ಪದಕೋಶ ಅತ್ಯಂತ ಗಡಿಬಿಡಿಯಲ್ಲಿ, ಕೆಲವು ಪುನರಾವರ್ತನೆಗಳಿಂದ ಮತ್ತು ಕೆಲವು ತಪ್ಪು ಶಬ್ದ ಪ್ರಯೋಗಗಳನ್ನೂ ಕೂಡಾ ಹೊಂದಿದೆ. ಮುಂದಿನ, ಭವಿಷ್ಯದ ಪದಕೋಶದ ಪ್ರಯತ್ನಗಳು ಅವುಗಳನ್ನು ಮೀರಿ ಮುಂದುವರಿಯುತ್ತಾ ಸಂವಾದ, ಚರ್ಚೆಯನ್ನು ಸೃಷ್ಟಿಸುವ ಕೋಶ, ಸಂಪಾದನೆಗಳಾಗಬೇಕೆಂಬುದೇ ನನ್ನ ಬಯಕೆ. ಇಲ್ಲಿನ, ಎಲ್ಲಾ ಮಿತಿಗಳಿಗೆ ಕ್ಷಮೆಯಿರಲಿ.

                                                                   -ಪ್ರದೀಪ್ ಕುಮಾರ್ ಶೆಟ್ಟಿ ಕ್ಯಂಚ್ನೂರ್ .    

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ಸಿನಿಮಾ ಚರಿತ್ರೆ : ಸಮಾಜ, ಸಂಸ್ಕøತಿ ಮತ್ತು ರಾಜಕಾರಣ

ಕರ್ನಾಟಕದಲ್ಲಿ ಸೂಫಿಗಳು

ಚಾರಿತ್ರಿಕ ಕೃತಿಯ ಹಲವು ಓದಿನ ಸಾಧ್ಯತೆಗಳು: ಹಿಂದ್ ಸ್ವರಾಜ್ ಮಾದರಿ