ತೃತೀಯ ಜಗತ್ತು ಮತ್ತು ಸಿನಿಮಾ
ತೃತೀಯ ಜಗತ್ತು ಮತ್ತು ಸಿನಿಮಾ
ತೃತೀಯ ಜಗತ್ತು ಯಾವುದು? ಎನ್ನುವ ರಾಜಕೀಯ, ಸಾಂಸ್ಕøತಿಕ ಮತ್ತು ಸಮಾಜೋ-ಚಾರಿತ್ರಿಕ ಪ್ರಶ್ನೆಯನ್ನು ಎದುರಿಸುತ್ತಲೇ ಪ್ರಸ್ತುತ ವಿಷಯವನ್ನು ಚರ್ಚೆಗೆ ಹಚ್ಚುವುದು ಅತ್ಯಂತ ಖುಷಿ ಕೊಡುವ ವಿಚಾರ ಅತ್ಯಂತ ಸೀಮಿತವಾಗಿ ನಾನು ಸಿನಿಮಾ ಚರ್ಚೆಯನ್ನು ಮಾಡಬೇಕಾಗಿರುವ ಕಾರಣ ತೃತೀಯ ಜಗತ್ತಿನ ರಾಜಕೀಯ-ಬೌದ್ಧಿಕ ಚರ್ಚೆಯನ್ನು ಮಾಡುವುದಿಲ್ಲ. ತೃತೀಯ ಜಗತ್ತಿನ ಸಿನಿಮಾ ಎಂದರೇನು? ಅದರ ಲಕ್ಷಣಗಳು, ತೃತೀಯ ಜಗತ್ತಿನ ಭೂಗೋಳ, ಆ ಸಿನಿಮಾದ ಕಾಳಜಿಗಳು, ಕಾಳಜಿಗಳು ವ್ಯಕ್ತವಾಗಲು ಇರುವಂತಹ ಜರೂರುಗಳು, ತೃತೀಯ ಸಿನಿಮಾದ ಸಾಂಸ್ಕøತಿಕ ಆಯಾಮಗಳು ಇತ್ಯಾದಿಗಳ ಜಗತ್ತಿನಲ್ಲಿ, ಸಮಗ್ರವಾದ ಸಿನಿಮಾ ಜಗತ್ತಿನಲ್ಲಿ ತೃತೀಯ ಜಗತ್ತಿನ ಸಿನಿಮಾವನ್ನು ಸಂದರ್ಭೀಕರಿಸಬೇಕಾದದ್ದು ಹೇಗೆ? ಅವುಗಳ ಸ್ಥಾನ ಏನು? ಎನ್ನುವುದು ನನ್ನ ಈ ಬರಹದ ಉದ್ದೇಶ.
ಸಾಂಸ್ಕøತಿಕವಾಗಿ ಸಮೃದ್ಧವಾದ, ಶೋಧನಾತ್ಮಕ ರಚನೆಗಳನ್ನು ಹೊಂದಿ, ರಾಜಕೀಯವಾಗಿ ಉಗ್ರ-ಹರಿತವಾಗಿರುವ ತೃತೀಯ ಜಗತ್ತಿನ ಸಿನಿಮಾ, ಜಾಗತಿಕ ಸಿನಿಮಾದಲ್ಲಿ ಬಹಳ ಮುಖ್ಯವಾದ ಅಲೆ, ಸ್ಥಾನ, ಪ್ರಭಾವವನ್ನು ಹೊಂದಿದೆ. ಇಂತಹ ತೃತೀಯ ಜಗತ್ತಿನ ಸಿನಿಮಾಗಳನ್ನು ಭಾರತ ಸೇರಿದಂತೆ ಏಶ್ಯಾದ, ಈಜಿಪ್ಟ್ನ, ಬ್ರಝಿಲ್ ಮತ್ತು ಅರ್ಜೆಂಟೀನಾವನ್ನೊಳಗೊಂಡಂತ ಲ್ಯಾಟಿನ್ ಅಮೇರಿಕಾ, ಸೆನೆಗಲ್ನ ರೂಪಕದಿಂದಾರಂಭಗೊಂಡಂತಹ ಆಫ್ರಿಕಾ, ಅರಬ್ ಜಗತ್ತು ಮುಂತಾದ ಪ್ರದೇಶದ ಜತೆಗೆ ದ್ವಿತೀಯ ಜಗತ್ತು ಎಂದೆನಿಸಿಕೊಂಡಂತಹ ಯುರೋಪ್ನ ಕೆಲವು ಜನ ತೃತೀಯ ಜಗತ್ತಿನ ವಸ್ತು ವಿಷಯವನ್ನು ಆಯ್ದು ಸಿನಿಮಾ ಮಾಡಿದಂತಹ ಅಪವಾದ (ಇಟೆಲಿಯ ನಿರ್ದೇಶಕ ಗಿಲ್ಲೋ ಪೊಂಟೆಕಾರ್ವೊನ 1961ರ ಬ್ಯಾಟಲ್ ಆಫ್ ಅಲ್ಜೀರಸ್ ಮಾದರಿ)ಗಳೂ ಕೂಡಾ ಇವೆ. ಪ್ರಶಸ್ತಿಗಳಿಗೆ ಒಂದು ಮಾನದಂಡವಾದರೆ, ಪ್ರಶಸ್ತಿಗಳಿಸದಿರುವುದೂ ಕೂಡಾ ಇನ್ನೊಂದು ಮಾನದಂಡ, ಅದರ ಜತೆಜತೆಯಲ್ಲೇ ವಿಮರ್ಶಾತ್ಮಕ ಪ್ರಶಂಸೆ, ತೆಗಳಿಕೆ, ನಿಂದೆ ಕೂಡಾ ತೃತೀಯ ಸಿನಿಮಾಗಳ ಚರ್ಚೆಯ ಸಂದರ್ಭ ಬಂದೊದಗುತ್ತದೆ. ತೃತೀಯ ಜಗತ್ತಿನ ಸಿನಿಮಾಗಳ ನಡುವೆಯೇ ಚರ್ಚಿಸಬಹುದಾದ ಲ್ಯಾಟಿನ್ ಅಮೇರಿಕಾದ ಭೂಪ್ರದೇಶ ವಿಶಿಷ್ಠವಾದ ಥರ್ಡ್ ಸಿನಿಮಾ ಕೂಡಾ ಮಹತ್ವದ್ದು. ಲ್ಯಾಟಿನ್ ಅಮೇರಿಕಾದಲ್ಲಿ ಕಮ್ಯೂನಿಸ್ಟ್, ಚೆಗುವೆರಾ ವಿಚಾರಧಾರೆಯ ಮೇಲೆ ಬಡ-ಸಾಮಾನ್ಯ-ಕಾರ್ಮಿಕ ಹೋರಾಟ-ಕಥನ ಇದರ ವಸ್ತು. ಸಾಮಾನ್ಯ ಮತ್ತು ತೀರಾ ಅಕಾಡೆಮಿಕ್-ಇಂಟೆಲೆಕ್ಚುವಲ್ ನೆಲೆಯಲ್ಲಿಯೂ ಕೂಡಾ ಇದನ್ನು ನೋಡಬಹುದು. ಆದರೆ ಸಮಗ್ರವಾಗಿ ತೃತೀಯ ಜಗತ್ತಿನ ಸಿನಿಮಾ ಎಂಬ ಟೈಟಲ್ನ ಅಡಿಯಲ್ಲಿ ನಾವು 1950ರ ನಂತರ ಉಗಮವಾದ ಬ್ರೆಝಿಲ್ನ, ಸಿನಿಮಾ ನೋಮೋ ವಿದ್ಯಮಾನ ಹಾಗೂ ನಿಯೋಇಯಲಿಸಮ್ನ ಭಾರತದ ಪ್ರತಿನಿಧಿಯಾದ ಸತ್ಯಜಿತ್ರೇ ಮತ್ತು ಘಟಕ್ ಆದಿಗಳ ಮೂಲಕವೂ ಕೂಡಾ ಗ್ರಹಿಸಬಹುದಾಗಿದೆ. ಇದಲ್ಲದೇ ಅತ್ಯಂತ ಚಲನಶೀಲ ಸಿನಿಮಾ ಸಾಧ್ಯತೆಯನ್ನು ಅಭಿವ್ಯಕ್ತಿಸಿದ ಅಲ್ಜೀರಿಯಾ, ಸೆನೆಗಲ್, ಕ್ಯೂಬಾ ಮತ್ತು ಚಿಲಿಯನ್ನೂ ಕೂಡಾ ಪ್ರತಿನಿಧೀಕರಿಸಬೇಕಾಗುತ್ತದೆ.
ಈ ರೀತಿ ಕಲಾತ್ಮಕ ಸೌಂದರ್ಯ ಮತ್ತು ಚಾರಿತ್ರಿಕ ಪ್ರಾಮುಖ್ಯತೆಯ ಹೊರತಾಗ್ಯೂ ಸಾೈರಿಡರ್ಡ್ ಎಂದು ಹೇಳಿಕೊಳ್ಳುವ ಹೆಚ್ಚಿನ ಸಿನಿಮಾ ಚರಿತ್ರೆಗಳು ತೃತೀಯ ಜಗತ್ತಿನ ಸಿನಿಮಾವನ್ನು ಸರಿಯಾಗಿ ಚಿತ್ರಿಸಿಲ್ಲ, ದಾಖಲಿಸಿಲ್ಲ. ದಾಖಲಾದ ಕೆಲವು ಕಡೆ, ಅದೊಂದು ಅಮೇರಿಕಾ ಮತ್ತು ಯುರೋಪ್ನ ನೆರಳೆನ್ನುವ ರೀತಿಯಲ್ಲಿಯೇ ಚಿತ್ರಿತವಾಗಿದೆ. ಇದು ತೃತೀಯ ಜಗತ್ತಿನ ಸಿನಿಮಾವನ್ನು ಅಧ್ಯಯನ ಸಂದರ್ಭ ಪೂರ್ವದಲ್ಲ ಈ ರೀತಿ ಉಪೇಕ್ಷೆಯ ಬಗ್ಗೆ ಕೂಡಾ ಮಾತನಾಡುವಂತೆ ಮಾಡುತ್ತದೆ. ತೃತೀಯ ಜಗತ್ತಿನ ಸಿನಿಮಾದ ಬಗ್ಗೆ ಇರುವ ಇನ್ನೊಂದು ತೊಡಕೆಂದರೆ ಅದರ ಸರಿಯಾದ ಅಸ್ಖಲಿತ ವ್ಯಾಖ್ಯಾನವನ್ನು ಹಂಬಲಿಸುವಂತದ್ದು. ತೃತೀಯ ಜಗತ್ತು ಎನ್ನುವ ಕಲ್ಪನೆಯ ಬಗ್ಗೆಯೇ ಎಕ್ಸಾಕ್ವ್ ಎನ್ನಬಹುದಾದ ವ್ಯಾಖ್ಯೆ ಇಲ್ಲದಿದ್ದ ಮೇಲೆ ಥರ್ಡ್ವರ್ಡ್ ಸಿನಿಮಾದ ಮೇಲೆ ಹೇಗೆ ಬರಬೇಕು?. ತೃತೀಯ ಜಗತ್ತೆನ್ನುವುದು ಒಂದು ವಸಾಹತುಶಾಹೀ ಪರಿಪೂರ್ಣ ವ್ಯವಸ್ಥೆಯನ್ನನುಭವಿಸಿದ, ನವ ವಸಾಹತೀಕರಣಕ್ಕೊಳಪಟ್ಟ, ನಿರ್ವಸಾಹತೀಕರಣಕ್ಕೆ ಒಳಗಾಗಿ, ಅವುಗಳ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕøತಿಕ ರಚನೆಗಳು ಸಾಮ್ರಾಜ್ಯಶಾಹೀ ಪ್ರಕ್ರಿಯೆಗಳ ಕಾರಣದಿಂದ ರೂಪುಗೊಂಡು, ಅತ್ಯಂತ ದರಿದ್ರ-ಕೈಗಾರೀಕೃತವಲ್ಲದ ಆರ್ಥಿಕತೆಯನ್ನು ಹೊಂದಿರುವ, ತನ್ನದೇ ವಿಶಿಷ್ಟ ಭೂಮಿ (ಏಶ್ಯಾ-ಆಫ್ರಿಕಾ-ಲ್ಯಾಟಿನ್ ಅಮೇರಿಕಾ) ಮತ್ತು ಆ ಭೂವಿಶಿಷ್ಟ ಜನಾಂಗ (ಕರಿಯ ಅಥವಾ ಬಿಳಿಯಲ್ಲದ)ವನ್ನು ಹೊಂದಿರುವ ಹಿಂದುಳಿದ ಎನ್ನುವ ರೀತಿಯ ವಿಶೇಷಣ-ಅನ್ವರ್ಥಗಳನ್ನು ಹೊಂದಿರುವ ಒಂದು ಘಟಕ, ಗುರುತು. ಆದರೆ ಈ ಮೇಲಿನ ವ್ಯಾಖ್ಯೆಯನ್ನು ನಾವು ಪರೀಕ್ಷಿಸುವ, ಸಂದರ್ಭೀಕರಿಸುವ ಅವಕಾಶ ಇದೆಯಾದರೂ ಕೂಡಾ ನಾನು ನೇರವಾಗಿ ತೃತೀಯ ಜಗತ್ತಿನ ಸಿನಿಮಾಕ್ಕೆ ಅಂಟಿಕೊಂಡೇ ಸಾಗುತ್ತೇನೆ.
ಸುಮಾರು 1950-60ರ ನಂತರದ ಸಂದರ್ಭದಲ್ಲಿ ತೃತೀಯ ಜಗತ್ತಿನ ಸಇನಿಮಾ ಚರ್ಚೆಗೆ ಬರಲು ಕಾರಣವಾಗಿದ್ದು, ಈ ಸಿನಿಮಾಗಳ ವೈಯಕ್ತಿಕ ಚೈತನ್ಯ ಹಾಗೂ ಪ್ರಥಮ ಜಗತ್ತಿನ ಮಾಧ್ಯಮ ಹಾಗೂ ಸಿನಿಮಾ ಗುಂಪುಗಳಿಂದ ಕೂಡಾ. ಇಂತಹ ಪ್ರಥಮ ಜಗತ್ತಿನ ಹೆಚ್ಚಿನ ಕಥನಗಳು ತೃತೀಯ ಜಗತ್ತು ಎನ್ನುವ ಕನ್ನಡಿಯನ್ನು ಛಿದ್ರವಾಗಿಸಿ, ಕೊಲಾಜ್ ಆಗಿಸಿ, ಒಂದು ವಿಚ್ಛಿನ್ನ ಆಕೃತಿಯಲ್ಲಿ ಪ್ರಸ್ತುತಪಡಿಸಿ ಹಾನಿಯನ್ನೂ ಕೂಡಾ ಮಾಡಿದೆ. ಇಂತಹ ಹಾನಿಯಿಂದ ತೃತೀಯ ಜಗತ್ತು ಹಲವು ಪೂರ್ವಾಗೃಹ ಆರೋಪಿತ, ಅಪಕಲ್ಪನೆಗಳಿಂದ ಆವೃತವೂ ಆಗಿವೆ. ಮುಖ್ಯವಾಗಿ ಮೆಕ್ಸಿಕನ್ರ ಸೋಮಾರಿತನ, ಸದಾ ಚಲಿಸುವ ಅರಬ್ಬರು, ಅನಾಗರಿಕ ಆಫ್ರಿಕನ್ನರು, ಅದ್ಭುತ ರಮ್ಯ ನೆಲೆಯ ಏಶ್ಯಾದವರು, ಲ್ಯಾಟಿನ್ ಅಮೇರಿಕಾದ ಯಾವುದೋ ಒಂದು ದೇಶದ ಲಂಚಗುಳಿತನ ಮತ್ತು ಗುಲಾಮಗಿರಿ ಇತ್ಯಾದಿಗಳು ಇದರ ಕೆಲವು ಆವೃತ್ತಿಗಳು. ಒಂದು ಚರಿತ್ರೆಯ ಸಿಂಹಾವಲೋಕನವನ್ನು ಮಾಡಿಸುವಂತೆ, ಪುನ: ಈ ಪ್ರದೇಶಗಳ ಚರಿತ್ರೆಯನ್ನು, ಅದರ ಅಧ್ಯಾಯಗಳನ್ನು ಮಗಚುವ ಮಾನಸಿಕತೆಯನ್ನು ಅದು ನಿರ್ಮಿಸಿದುವು. ಹೀಗೆ ಅಂತಹ ಕಥನಗಳು ತೃತೀಯ ಜಗತ್ತಿನ ಕಲ್ಯಾಣವನ್ನು ಬಯಸಿ ಇರಲಿಲ್ಲ, ಬದಲು ಅವುಗಳ ಬಗ್ಗೆ ಕೃತಕವಾಗಿ ಮರುಕಪಡುವ ಸಲುವಾಗಿತ್ತು. ಹೀಗೆ ತೃತೀಯ ಜಗತ್ತಿನ ಸಿನಿಮಾವನ್ನು ಎಲ್ಲಿಂದ ನೋಡಬೇಕು? ಎನ್ನುವ ಒಂದು ತಾತ್ವಿಕ, ಜ್ಞಾನಶಾಸ್ತ್ರೀಯ, ಗುರುತಿನ (ಐಡೆಂಟಿಟಿ) ಪ್ರಶ್ನೆಯನ್ನೂ ಕೂಡಾ ಕೆಲವು ತೃತೀಯ ಜಗತ್ತಿನ ವಿಮರ್ಶಕರು ಎತ್ತಿರುವುದು ಸ್ವಾಗತಾರ್ಹವೇ. ಭಾರತದಲ್ಲಿ ಎಂ.ಕೆ. ರಾಘವೇಂದ್ರರಂತಹ ಲೇಖಕರು ಕೂಡಾ ಈ ಚರ್ಚೆಗಳಲ್ಲಿ ಭಾಗವಹಿಸಿದ ಹಾಗೆ ಉಳಿದ ಪ್ರದೇಶಗಳಲ್ಲಿಯೂ ಕೂಡಾ ರೀತಿಯ ಒಂದು ಅಲೆ ಎದ್ದಿರುವುದನ್ನೂ ಕಾಣಬಹುದು. ಈ ರೀತಿಯ ಚರ್ಚೆಗಳು, ಖಂಡಿತವಾಗಿಯೂ ಕೂಡಾ ತೃತೀಯ ಜಗತ್ತುಗಳಿಂದು
ಪರಿಭಾವಿಸಿದ ಪ್ರದೇಶಗಳ ನಿಲುವು, ಸ್ಥಾನ, ದೃಷ್ಟಿ ಏನು? ಎನ್ನುವುದನ್ನೂ ಕೂಡಾ ನಿರ್ಧರಿಸಲು, ನಿರ್ಧರಿಸುವುದು ಯಾಕೆ? ಹೇಗೆ? ಮತ್ತದು ಏಕೆ ಅವಶ್ಯಕ? ಎನ್ನುವ ಕೆಲವು ಪ್ರಶ್ನೆಗಳನ್ನು ಉತ್ತರಿಸಲೂ ನೆರವಾಗುತ್ತದೆ.
ಸಾಮ್ರಾಜ್ಯಶಾಹೀ ಸಂವಾದ-ವಾಗ್ವಾದವನ್ನೂ ನಾವು ಸಿನಿಮಾವನ್ನು ಒಳಗೊಂಡ ಸಮೂಹ ಮಾಧ್ಯಮಗಳಿಗನ್ವಯ ಮಾಡಿದ ಸಂದರ್ಭದಲ್ಲಿ, ಆ್ಯಂಡ್ರ್ಯೂ ಸಾರೀಯಂತಹ ಪ್ರಸಿದ್ಧ ಸಿನಿಮಾ ವಿಮರ್ಶಕರು ಕೂಡಾ ಉತ್ತರ ಅಮೇರಿಕಾ-ಯುರೋಪ್ ಕೇಂದ್ರವನ್ನಷ್ಟೇ ಕಥಿಸುವ ಮೂಲಕ, ಪಾಲಿನ್ ಈಯಲ್ ತನ್ನ, ದಿ ಫ್ಯೂಚರ್ ಆಫ್ ದೀ ಮೂವೀಸ್’ನಲ್ಲಿ ತೃತೀಯ ಜಗತ್ತಿನ ಸಿನಿಮಾವೆಂದರೆ ತೃತೀಯ ದರ್ಜೆಯ ಮನರಂಜನೆಯವು ಎನ್ನುವಲ್ಲಿನ ಹಿಂದಿರುವ ರಾಜಕಾರಣದವರೆಗೆ ಕೂಡಾ ಈ ತೃತೀಯ ಜಗತ್ತಿನ ಸಿನಿಮಾ ಚರ್ಚೆ ಸಾಗುತ್ತದೆ. ಒಂದು ಹಂತದಲ್ಲಿ ಪ್ರಥಮ ಜಗತ್ತು, ದ್ವಿತೀಯ ಜಗತ್ತು ಮತ್ತು ತೃತೀಯ ಜಗತ್ತು ಎನ್ನುವ ನೆಲೆಗಳನ್ನು ಒಪ್ಪಿಕೊಂಡರೂ ಕೂಡಾ ಕನಿಷ್ಠ ಮಟ್ಟಿನ ಸಂಬಂಧವನ್ನೂ ನಾವು ನಿರಾಕರಿಸಲು ಸಾಧ್ಯವಿಲ್ಲ. ಈ ಪ್ರತೀ ಜಗತ್ತುಗಳ ನಡುವೆ ಇರುವ ಪರಸ್ಪರ ಆದಾನ-ಪ್ರದಾನ ಸಂಬಂಧ, ಅದರ ಸಾಂಸ್ಕøತಿಕ ನೆಲೆಯನ್ನೂ ಕೂಡಾ ಸುಲಭವಾಗಿ ತಳ್ಳಿ ಹಾಕುವುದು ಸಾಧ್ಯವಿಲ್ಲ. ಹೀಗೆ ಸಾಮಾನ್ಯವಾದ ಒಂದು ನೆಲೆಯ ಸಂಬಂಧದ ತೃತೀಯ ಜಗತ್ತಿನ ಸಿನಿಮಾದ ಚಾರಿತ್ರಿಕ ಗತಿಯನ್ನು ಅವಲೋಕಿಸುವಂತೆ ಮಾಡುತ್ತದೆ. ತೃತೀಯ ಜಗತ್ತಿನ ಸಿನಿಮಾಗಳನ್ನು ಟೆಕ್ಸ್ಚುವಲ್, ಇಂಟರ್ ಟೆಕ್ಸುಚುವಲ್ ಮತ್ತು ಕಾಂಟೆಕ್ಸ್ಚುವಲ್ (ಚಾರಿತ್ರಿಕ ಸಂದರ್ಭಗಳು) ಗಳ ಮೂಲಕವೇ ಗೃಹಿಸಬೇಕಾಗುತ್ತದೆ, ಉದಾ: 1964ರ ಬ್ರೆಝಿಲ್ ದಂಗೆ ಮತ್ತದು ಆ ಸಂದರ್ಭದ ಸಿನಿಮಾ ನಿರ್ಮಾಣದ ಮೇಲೆ ಉಂಟುಮಾಡಿದ ಪರಿಣಾಮ. ಇದಲ್ಲದೇ ತೃತೀಯ ಜಗತ್ತಿನ ರಾಷ್ಟ್ರಗಳು ಅಲ್ಲಿನ ಅವುಗಳ ಸಿನಿಮಾದ ಮೇಲೆ ಹೇರಿದ ಸೆನ್ಸಾರ್ ಶಿಪ್, ಹಾಲಿವುಡ್ ಮತ್ತು ಅಮೇರಿಕನ್ ಚಿತ್ರೋದ್ಯಮದ ಹಿಡಿತ-ನಿಯಂತ್ರಣ ಇತ್ಯಾದಿಗಳು ಇತರೆ ಕೆಲವು ಉದಾಹರಣೆಗಳು. ಇಂತಹ ಪ್ರಯತ್ನ ವಿಧಾನಗಳ ಜತೆ ಬಹುಶಿಸ್ತಿನ, ಅಂದರೆ ಆರ್ಥಿಕ-ಚಾರಿತ್ರಿಕ, ಮನೋವಿಶ್ಲೇಷಣೀಯ ಮತ್ತು ಭಾಷಾಶಾಸ್ತ್ರ-ವಿಮರ್ಶೀಯ ವಿಧಾನ ಮಾಧ್ಯಮಗಳೂ ಕೂಡಾ ಬಹಳ ಮಹತ್ವದ್ದು. ಆಗಷ್ಟೇ ತೃತೀಯ ಜಗತ್ತಿನ ಸಿನಿಮಾವನ್ನು ಸರಿಸುಮಾರಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ. ಇದಲ್ಲದೇ ‘ನೋಡುಗನ ದೃಷ್ಟಿ ಕ್ರಮ’ ಕೂಡಾ ಬಹಳ ಮುಖ್ಯ. ಅಂದರೆ, ‘ಬ್ಯಾಟಲ್ ಆಫ್ ಅಲ್ಜೀರಸ್’ ಚಿತ್ರವನ್ನು ನೋಡುವ ನೋಡುಗ ಪ್ರಥಮ ಜಗತ್ತಿನವನೋ? ಅಥವಾ ತೃತೀಯ ಜಗತ್ತಿನವನೋ? ಒಂದು ವೇಳೆ ಇಬ್ಬರೂ ನೋಡುತ್ತಿದ್ದರೆ ಉಂಟಾಗುವ ಅನುಭವವೇನು? ಎನ್ನುವ ಕ್ರಮ ಚಿಂತನೆ ಕೂಡಾ ತುಂಬಾ ಮುಖ್ಯ.
ತೃತೀಯ ಜಗತ್ತಿನ ಸಿನಿಮಾದ ವಿದ್ಯುಕ್ತ ಆರಂಭವನ್ನು, ‘ಬ್ಯಾಟಲ್ ಆಫ್ ಅಲ್ಜೀರಿಸ್’ ಮಾಡಬಹುದು. ತೃತೀಯ ಜಗತ್ತಿನ ಸಿನಿಮಾ ಪ್ರಪಂಚವನ್ನು ಅತ್ಯಂತ ವ್ಯವಸ್ಥಿತವಾಗಿ ಉಪಚರಿಸಿದ ಈ ಸಿನಿಮಾವನ್ನು ಗಿಲ್ಲೋ ಪೋರಿಟೇಕೋರ್ವೋ ನಿರ್ದೇಶಿಸಿದ. ಈ ಸಾಮ್ರಾಜ್ಯಶಾಹೀಯ ವಿರೋಧವನ್ನು, ಸ್ವಾತಂತ್ರ್ಯದ ಪರ್ಯಾಯವನ್ನೂ, ಸಾಮ್ರಾಜ್ಯಶಾಹೀಯ ದೃಷ್ಟಿಯ ಮೂಲಕ ಚರ್ಚೆಗೆ ಹಚ್ಚಿಸಿತು. ಆದರೆ ಅಲ್ಜೀರಿಯನ್ ನಿರ್ಮಾಪಕರನ್ನೂ ಒಳಗೊಂಡ ಕಾರನ, ಪ್ರಥಮ ಜಗತ್ತಿನ (ಫಸ್ಟ್ ವಲ್ರ್ಡ್)ನ ‘ಅರಬ್’ ಎನ್ನುವ ಚಿತ್ರ-ವಿಚಿತ್ರ ಇಮೇಜ್ ಅನ್ನು ನ್ಯಾಯಯುತವಾಗಿ ಪರಿಹರಿಸುವ ಪ್ರಯತ್ನವಾಗಿಯೂ ಕೂಡಾ ಇದು ಕಾರ್ಯ ನಿರ್ವಹಿಸಿತು. ಆದರೂ ಸಿನಿಮಾ ಹಲವು ಸಾಧ್ಯತೆ ಮತ್ತು ಪ್ರಶ್ನೆಗಳನ್ನೂ ಕೂಡಾ ಸೃಷ್ಟಿಸಿದೆ.
ಭಾರತದಂತಹ ರಾಷ್ಟ್ರಗಳಲ್ಲಿ ಸುಮಾರು 1950ರ ಸುಮಾರಿಗೇನೇ ಈ ರೀತಿಯ ಸಿನಿಮಾ ಮೂಡಿತು. ಇದು ವಸಾಹತುಶಾಹೀ ವಿರೋಧದಂತಹ ಕಥನಗಳಿಗಿಂತ ವಸಾಹತುಶಾಹೀ ಉಂಟುಮಾಡಿದ ಸಾಂಸ್ಕøತಿಕ ಪಲ್ಲಟಗಳು. ಸಂಪ್ರದಾಯ ಮತ್ತವುಗಳ ಹೊಸ ಬಗೆಯ ವ್ಯಾಖ್ಯಾನದಂತಹ ಪ್ರಶ್ನೆಗಳನ್ನು ಎತ್ತಿಕೊಂಡಿತು. ಭಾರತ ಮತ್ತು ಬ್ರೆಝಿಲ್ನಲ್ಲಿ ಸುಮಾರು 1890ರ ಸುಮಾರಿಗೇನೇ ಸಿನಿಮಾ ಜನಿತವಾಗಿತ್ತು, 1900-10ರ ದಶಕವನ್ನು ಬ್ರೆಝಿಲ್ ಸಿನಿಮಾದ ಸುವರ್ಣ ಯುಗವೆಂದೇ ಕರೆಯಲಾಗಿತ್ತು. ಆದರೆ ತೃತೀಯ ಜಗತ್ತು ಎನ್ನುವ ರೂಪಕದ ಹಿಂದಿನ ಸಾಂಸ್ಕøತಿಕ ಬಿಕ್ಕಟ್ಟುಗಳನ್ನು, ವಕ್ತತೆಯನ್ನೂ ಅದು ವ್ಯಕ್ತಗೊಳಿಸಿದ್ದು ಸುಮಾರು 1950ರ ನಂತರ. ಇಂದು ಭಾರತದ ಸಿನಿಮಾ ಜಗತ್ತು, ಒಟ್ಟು ಸಿನಿಮಾ ಜಗತ್ತನ್ನು ಆಕರ್ಷಿಸುವ ವರ್ಷಕ್ಕೆ ಸಾವಿರಾರು ನಿರ್ಮಾಣ ಮಾಡುವ, ಹಂತದವರೆಗೆ ಬೆಳೆದು ಬಿಟ್ಟಿದೆ. ಸುಮಾರು 1950ರ ದಶಕದಲ್ಲಿ ರಿತ್ವಿಕ್ ಘಟಕ್, ಸತ್ಯಜಿತ್ ರೇ, ಮೃಣಾಲ್ ಸೇನ್ ಮುಂತಾದ ವ್ಯಕ್ತಿಗಳು ಇಟೆಲಿಯ ನಿಯೋ-ರಿಯಲಿಸಂ ನಿಂದ ಪ್ರೇರಣೆ ಪಡೆದು ಚಿತ್ರಗಳನ್ನು ಮಾಡುತ್ತಿದ್ದ ಹೊತ್ತಿಗೆ, ವರ್ತಮಾನವನ್ನು ಮಿಥಕೀಕರಣಕ್ಕೊಳಪಡಿಸಿ ರಾಜ್ಕಪೂರ್ ಮುಖ್ಯವಾದ ಸ್ತ್ರೀ 420, ಆವಾರ, ಮೇರಾ ನಾಮ್ ಜೋಕರ್ ಮೊದಲಾದ ಸಿನಿಮಾವನ್ನೂ ಕೂಡಾ ನಿರ್ಮಿಸಿದರು. ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ ಕೂಡಾ ವ್ಯಾಪಕವಾದ ಸಿನಿಮಾ ನಿರ್ಮಾಣ ಆರಂಭವಾಯಿತು. ಒಂದು ನ್ಯಾಶನಲ್ ಸಿನಿಮಾ (ರಾಷ್ಟ್ರೀಯ ಸಿನಿಮಾ) ವನ್ನು ಅಸ್ಥಿಪಂಜರಕ್ಕೆ ಮೂಳೆ ಮಾಂಸಗಳನ್ನು ತುಂಬಿಸುವ ಪ್ರಕ್ರಿಯೆಯಲ್ಲಿ ಕೂಡಾ ಮುಂದುವರಿದುವು. ಆದರೆ ಭಾರತದಲ್ಲಿ ವಸ್ತು ವಿಷಯ ಆಯ್ಕೆ ಬರೀ ಏಕತಾನತೆ ಕಾಣಿಸಿಕೊಳ್ಳದೆ, ವೈವಿಧ್ಯತೆಯನ್ನು ಪುರಸ್ಕರಿಸಲಾಯ್ತು. ಸುಮಾರು 1960-70ರ ಹೊತ್ತಿಗೆ ಭಾರತದಲ್ಲಿ ಹಿಂದಿ ಮತ್ತು ಬೆಂಗಾಳೀ ಸಿನಿಮಾದ ಯಾಜಮಾನ್ಯತೆ ನಿಧಾನವಾಗಿ ಕರಗುತ್ತಾ ಕನ್ನಡ, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ಕಮರ್ಶಿಯಲ್ ಮತ್ತು ಹೊಸ ಅಲೆಯ ಸಿನಿಮಾಗಳೂ ಕೂಡಾ ನಿರ್ಮಾಣವಾದುವು. ಸುಮಾರು 1500ಕ್ಕಿಂತಲೂ ಹೆಚ್ಚಿನ ಭಾಷೆಯಿರುವ, ಸರಿಸಮಾನವಾಗಿ ಇನ್ನೂ ಹೆಚ್ಚಿರುವ ಪ್ರದೇಶಗಳಿರುವ ಭಾರತದಲ್ಲಿ ಉದ್ಯಮವನ್ನು ಸೃಷ್ಟಿಸುವಲ್ಲಿ ಕೂಡಾ ಭೋಜಪುರಿ ಸಿನಿಮಾದಂತಹ ಮಾದರಿಗಳು ಕಾರಣವಾಗಿವೆ.
ಭಾರತದಂತೆ ಈಜಿಪ್ಟ್ ಕೂಡಾ ಒಂದು ಬಲಿಷ್ಠವಾದಂತಹ ಸಿನಿಮಾ ಸಂಪ್ರದಾಯವನ್ನು ಹೊಂದಿದೆ. ಸುಮಾರು 1920-30ರ ಸುಮಾರಿಗೆ ಕೂಡಾ ಈ ಸಿನಿಮಾ ಪರಂಪರೆ ಅಲ್ಲಿ ಆರಂಭಗೊಂಡಿತ್ತು. ಇಲ್ಲಿ ಕೂಡಾ ಭಾರತದ ಹಾಗೆಯೇ ಇರುವ ವೈವಿಧ್ಯದ ಪ್ರದೇಶಗಳು. ಭಾಷೆಗಳು ಈ ಸಿನಿಮಾ ಸಾಧ್ಯತೆಯನ್ನು ಸೃಷ್ಟಿಸಿದುವು. ಅರಬ್ ಜಗತ್ತಿನ ಮೇಲೆ, ಯುರೋಪ್ ವ್ಯಕ್ತಪಡಿಸ ಹೊರಟಿದ್ದ ಯಾಜಮಾನ್ಯ, ವಸಾಹತುಶಾಹೀ, ಆರ್ಥಿಕ ಹಿತಾಸಕ್ತಿಗಳೂ ಕೂಡಾ ಈಜಿಪ್ಟ್ನ ಸಿನಿಮಾದ ಮೇಲೆ ಪ್ರಬಲವಾದ ಪರಿಣಾಮವನ್ನು ಬೀರಿದುವು. ಹೆಚ್ಚಿನ ಆರಂಭದ ಈಜಿಪ್ಟ್ನ ಸಿನಿಮಾಗಳು, ಅಂದರೆ 1952ಕ್ಕಿಂತ ಮುಂಚಿನ ನಾಸಿರ್ನ ಕ್ರಾಂತಿಗಿಂತ ಮೊದಲಿನ ಸಿನಿಮಾಗಳು ಮೆಲೋಡ್ರಾಮಗಳು. ಅದರಲ್ಲೂ ಸಂಗೀತಯುಕ್ತ ಮೆಲೋಡ್ರಾಮಗಳು. 1958ರಲ್ಲಿನ ಈಜಿಪ್ಟ್ನ ಪ್ರಸಿದ್ಧ ನಿರ್ದೇಶಕ ಯೂಸುಫ್ ಕ್ಯಾಹಿನ್ನ ಕೈರೋಸ್ಟೇಶನ್, ಇಟೆಲಿಯ ನಿಯೋ-ರಿಯಲಿಸಂನಿಂದ ಪ್ರಭಾವಿತವಾಗಿ, ಆತನ ನಂತರದ ಸಿನಿಮಾ ಅಲೆಕ್ಸಾಂಡ್ರಿಯಾ ವೈ?(1978), ಒಂದು ಆತ್ಮಕಥನೀಯ ಕ್ರಮ ಮತ್ತು ಕನಸುಗಳನ್ನು ಚರ್ಚೆಗೆ ಹಚ್ಚುತ್ತದೆ. ದ್ವಿತೀಯ ವಿಶ್ವಯುದ್ಧ ಸಂದರ್ಭದಲ್ಲಿ ಯುರೋಪಿನ ಸಮುದಾಯಗಳನ್ನು ಈಜಿಪ್ಟ್ನ ಕಣ್ಣುಗಳ ಮೂಲಕ ನೋಡುವ ಪ್ರಯತ್ನವನ್ನು ಮಾಡುತ್ತದೆ. ಒಂದು ಹಂತದಲ್ಲಿ ಹಾಲಿವುಡ್ನ ಸಾಂಸ್ಕøತಿಕ ಸಾಮ್ರಾಜ್ಯಶಾಹೀ ಸಂಗತಿಯನ್ನು ನಿಷ್ಠುರವಾಗಿ ಪ್ರಶ್ನಿಸುತ್ತದೆ. ಈ ಸಿನಿಮಾದ ಪ್ರೊಟಗಾನಿಸ್ಟ್ (ಮುಂದಾಳು) ಸಿನಿಮಾ ಮುಗಿಯುವ ಹೊತ್ತಿಗೆ ನ್ಯೂಯಾರ್ಕ್ ಹಾರ್ಬರ್ಗೆ ಬಂದಿಳಿದಾಗ ಅಲ್ಲಿರುವ ಸ್ಟಾಚ್ಯೂ ಆಫ್ ಲಿಬರ್ಟಿ (ಸ್ವಾತಂತ್ರ್ಯ ದೇವಿಯ ಪ್ರತಿಮೆ)ಯು ವೇಶ್ಯೆಯ ಹಾಗೆ ಗೋಚರಿಸುತ್ತದೆ. ಅದನ್ನು ನೋಡಿ ಆತ ಲೈಂಗಿಕ ಅಭೀಪ್ಸೆಯ ಹಾಗೆ ಕಣ್ಣು ಮಿಟುಕಿಸುತ್ತಾನೆ. ಈಜಿಪ್ಟ್ನ ಇನ್ನೊಬ್ಬ ಪ್ರತಿನಿಧಿ ಶಾದೀ ಅಬ್ದೆಲ್ ಸಲಾಮ್. ಆತನ ದ ಮಮ್ಮಿ ಅಥವಾ ‘ನೈಟ್ ಆಫ್ ಕೌಂಟಿಂಗ್ ದ ಈಯರ್ಸ್(1969)’, 1881ರಲ್ಲಿ ಈಜಿಪ್ಟ್ನ ಮಮ್ಮಿಯನ್ನು ಪುರಾತತ್ವ ಶಾಸ್ತ್ರಜ್ಞರು ಶೋಧಿಸಿ, ಸಂರಕ್ಷಿತ ಪ್ರದೇಶವೆಂದು ಘೋಷಿಸಿದಾಗ, ಆ ಪ್ರದೇಶದಲ್ಲಿ ಸಾಂಪ್ರದಾಯಿಕವಾಗಿ ವಾಸಿಸುತ್ತಿದ್ದ. ಆ ಪ್ರದೇಶದ ಪಳಿಯುಳಿಕೆಗಳನ್ನು ಚಿಕ್ಕ ಪ್ರಮಾಣದಲ್ಲಿ ಕದ್ದು ಮಾರುತ್ತಿದ್ದವರು ಎದುರಿಸುವ ದ್ವಂದ್ವವನ್ನು ಅನಾವರಣ ಮಾಡುತ್ತಾ ಸಾಗುತ್ತದೆ. ಈ ಸಿನಿಮಾ ಈಜಿಪ್ಟ್ನ ರಾಷ್ಟ್ರೀಯತೆಯನ್ನು, ನಗರ ಮತ್ತು ಗ್ರಾಮವನ್ನು, ಗತವೈಭವದ ಪ್ರಾಚೀನ ಈಜಿಪ್ಟ್ ಹಾಗೂ ಸಮಕಾಲೀನ ಅರಬೀಕೃತ ಇಸ್ಲಾಮಿಕ್ ಈಜಿಪ್ಟ್ನ ನಡುವಿರುವ, ದ್ವಂದ್ವದ ಅನೇಕ ಆಯಾಮಗಳನ್ನು ತೆರೆದಿಡುತ್ತಾ ಸಾಗುತ್ತದೆ. ಹೀಗೆ ಈಜಿಪ್ಟ್ನ ಸಿನಿಮಾಕೂಡಾ, ಸುಮಾರು 2011ರಲ್ಲಿ ಬಂದ 876ನಂತಹ ಸ್ತ್ರೀವಾದಿ ಕೇಂದ್ರಿತ ಸಿನಿಮಾದವರೆಗೆ, ಸಮಕಾಲೀನ ಸಂದರ್ಭದವರೆಗೆ ಅತ್ಯಂತ ವೈವಿಧ್ಯದ, ಆಕರ್ಷಕ ನೆಲೆ-ನಿಲುವುಗಳಲ್ಲಿ ಅಭಿವ್ಯಕ್ತವಾಗುತ್ತಾ ಸಾಗಿದೆ.
ಮೆಕ್ಸಿಕೋ, ಬೇರೆ ದೇಶಗಳಿಗೆ ತನ್ನ ಸಿನಿಮಾವನ್ನು ವ್ಯಾಪಕವಾಗಿ ರಫ್ತು ಮಾಡುವವರೆಗೆ ಬೆಳೆದಿತ್ತು. ಮೆಕ್ಸಿಕೋ ಚಿತ್ರೋದ್ಯಮ ಸಂಪೂರ್ಣ ಹಾಲಿವುಡ್ಡೀಕೃತಗೊಂಡಿತ್ತು ಅನ್ನುವುದಕ್ಕಿಂತಲೂ, ಹಾಲಿವುಡ್ ವ್ಯವಸ್ಥಿತವಾಗಿ ಮೆಕ್ಸಿಕೋದಲ್ಲಿ ತನ್ನನ್ನು ತೊಡಗಿಸಿಕೊಂಡಿತ್ತು. ಅರ್ಜೆಂಟೀನಾವನ್ನು ವಿರೋಧಿಸುವ ಸಲುವಾಗಿ. ಈ ರೀತಿಯಲ್ಲಿ ಬೆಳೆದ ಒಂದು ಉದಾಹರಣೆಯೆಂದರೆ, ಬುನಲ್ ಲೂಯಿಯ ‘ಲಾಸ್ ಅಲ್ವಿಡಡೋಸ್ (1950), ಇದು ಹಾಲಿವುಡ್ನ ಸ್ಟುಡಿಯೋ ವ್ಯವಸ್ಥೆಯಲ್ಲಿ ನಿರ್ಮಾಣವಾದ ಸಿನಿಮಾ. ಆದರೆ ಬುನಲ್ ತಾನು ಬೆಳೆದ ಮೆಕ್ಸಿಕನ್ ಬೇರುಗಳಾದ, ತಾಯಿಯ ಆದರ್ಶ-ಭಾವಜೀವಿ ಬಡವ-ಸಾಮಾಜಿಕ ಕಳಕಳಿತನಗಳಂತಹ ಮೆಲೋಡ್ರಾಮಾತನಗಳಿಂದ ವಿಮುಖವಾಗಲಿಲ್ಲ. ಮೆಕ್ಸಿಕನ್ ಮಾದರಿಯಲ್ಲಿ ನಮಗೊದಗುವ ಇನ್ನೊಂದು ಸಿನಿಮಾ ‘ಪಾಲ್ ರಿಡ್ಕ್’ ರೀಡ್; ಇನ್ಸರ್ಜಂಟ್ ಮೆಕ್ಸಿಕೋ (1971), ಒಂದು ಪರ್ಯಾಯ, ಮೆಕ್ಸಿಕನ್ ರಾಜಕೀಯದಿಂದ ಆವೃತ್ತಗೊಂಡು ತೃತೀಯ ಜಗತ್ತನ್ನು ಪ್ರತಿನಿಧಿಸಿದ ಚಿತ್ರ. ಮೆಕ್ಸಿಕನ್ ಸಿನಿಮಾಕ್ಕೆ ಈ ರೀತಿ ಅಮೇರಿಕಾದ ಸಂಪರ್ಕವಿದ್ದರೂ ಕೂಡಾ ಅದು ಹೆಚ್ಚು ಹೆಚ್ಚು ಚರ್ಚೆ ಮಾಡಿದ್ದು ಮೆಕ್ಸಿಕನ್ ಕ್ರಾಂತಿ, ಬಡತನದಂತಹ, ‘ಸೊಲಾನಸ್ ಗೆಟಿನೋ’ ಕರೆದಂತಹ ‘ಥರ್ಡ್ ಸಿನಿಮಾ’ ಎನ್ನುವ ವಿಧ (ಜನರ್) ಒಳಗೊಳ್ಳುವ ವಸ್ತು ವಿಷಯ ಹಾಗೂ ಮೆಲೋಡ್ರಾಮಾಗಳನ್ನು.
ಅರ್ಜೆಂಟೀನಾ ಕೂಡಾ, ಒಂದು ಒಳ್ಳೆಯ ರೀತಿಯ ಮೂಲಭೂತ ಅವಶ್ಯಕತೆಗಳು ಮತ್ತು ಕಥನ ತಂತ್ರಗಳ ಆಧಾರದ ಮೇಲೆ ಬ್ರೆಝಿಲ್ ರೀತಿಯದೇ ಆದ ಸಿನಿಮಾ ಬೆಳವಣಿಗೆಯನ್ನು ಕಂಡಿತ್ತು. ಸ್ಪಾನಿಷ್ ಬಹುಭಾಷಿಕರನ್ನು ಹೊಂದಿರುವ ಅರ್ಜೆಂಟೀನಾ, ಲ್ಯಾಟಿನ್ ಅಮೇರಿಕಾ ಉಪಖಂಡದ ಸ್ಪಾನಿಷ್ ದೇಶಗಳಿಗೆ ಸಿನಿಮಾವನ್ನು ವಿತರಿಸುವ ಬಹುದೊಡ್ಡ ಉದ್ಯಮವಾಗಿತ್ತು. ಅರ್ಜೆಂಟೀನಾದ ಒಂದು ಹೊಸ ಪ್ರಕಾರ (ಜನರ್) ಟ್ಯಾಂಗೋ ಸಿನಿಮಾ, ಮುಖ್ಯವಾಗಿ ಲೂಯಿ ಮೊಗ್ಲಿಯಾ ಬಾರ್ತ್ನ ಟ್ಯಾಂಗೋ (1933), ಮಾರಿಯೋ ಸೋಫಿಸಿಯ, ವಿಯಂಟೋ ಡೆಲ್ ನೋರ್ತೆ (1937) ಮತ್ತು ಸಾಮಾಜಿಕ ಪ್ರಜ್ಞೆಯ ಸಿನಿಮಾಗಳಾದ ಹ್ಯೂಗೋ ಡೆಲ್ ಕಾರಿಲ್ನ, ಲಾಸ್ ಆಗ್ವಾಸ್ ಬಾಜನ್ ಟರ್ಬಿಯಾಸ್ (1959). ಸುಮಾರು 1950ರ ದಶಕದಲ್ಲಿ ಲಿಯೋ ಪೋಲ್ಡೋ ಟೋರೆ ನಿಲ್ಸನ್ನು, ಈ ದೇಶದ ಮೇಲ್ವರ್ಗಗಳನ್ನು ಚಿತ್ರಿಸಿದ ಚಿತ್ರಣಗಳು, 1960ರಲ್ಲಿನ ಅಟ್ಯೂರ್
ಮತ್ತು ‘ಹೊಸ ಅಲೆ’ಯ ಸಿನಿಮಾಗಳು, ಮುಖ್ಯವಾಗಿ ರುಥಾಲ್ಪೋ ಕೊಹ್ನ್ನ ದ ಸ್ಯಾಡ್ ಯಂಗ್ ಮೆನ್, ರಾಯ್ ಮುಂಡೋ ಗ್ಲೇಯ್ಝರ್, ಗೆರಾರ್ಡೋ ವಲ್ಲೇಝೋ ಮುಂತಾದವರ ಹಾಗೂ ಗ್ರೂಪೋ-ಸಿನಿ-ಡಿ-ಲಾ ಬೇಸ್ ಮತ್ತು ಗ್ರೂಪೋ ಸಿನಿಮ ಲಿಬರಾ ಸಇಯೋ ಮುಂತಾದ ಗುಂಪುಗಳು ಮಾಡಿದ ಡಾಕ್ಯುಮೆಂಟರಿ ಸಿನಿಮಾಗಳು ಬಹಳ ಮುಖ್ಯವಾದವುಗಳು. 1960ರ ದಶಕದ ಕೊನೆಯ ಹೊತ್ತಿಗೆ ಎಡ್ಗಾರ್ಡೋ ಕೊಝಾರಿನ್ಸ್ಕಿ ಮತ್ತು ಮಿಗುಲ್ ಬೇಜೋರನ್ನೊಳಗೊಂಡ ಭೂಗತ ಪ್ಯಾರಲಲ್ ಸಿನಿಮಾವೂ ಕೂಡಾ ಅತ್ಯಂತ ಮಹತ್ವದ್ದು. ಅರ್ಜೆಂಟೀನಾ ಸಂದರ್ಭದಲ್ಲಿ ಟೋರೆ ನಿಲ್ಸನ್ ಮತ್ತು ಬಿಯಟ್ರಿಝ್ ಗಿಯ್ಡೋ ನಿರ್ಮಿಸಿದ ಫಿನ್-ಡಿ-ಫಿಯಸ್ತಾ(1960) ಮತ್ತು ಸೊಲಾನಾಸ್ ಗೆಟಿನೋರ ‘ಲಾ ಹೋರಾ ಡಿ ಲೋಸ್ ಹೊರ್ನೋಸ್’ (1968) ಕೂಡಾ ಥರ್ಡ್ವರ್ಡ್ ಎನ್ನಬಹುದಾದ ಸಿನಿಮಾ ಮಾದರಿಗಳು. ನಿಲ್ಸ್ನ್ ನ ಸಿನಿಮಾ, ಅರ್ಜಿಂಟೀನಾದ ತೀವ್ರಗಾಮೀತನವನ್ನೂ, ಗೆಟಿನೋನ ಸಿನಿಮಾ ಸಾಂಸ್ಕøತಿಕ ಸಾಮ್ರಾಜ್ಯಶಾಹೀ ಪ್ರಶ್ನೆಗಳನ್ನು ಚರ್ಚಿಸುತ್ತದೆ. ಈ ಪ್ರದೇಶದ ಹೀರೋಗಳಾದ ಚೆಗುವೆರಾ, ಪ್ರಾಂಝ್ ಫ್ಯಾನನ್, ಹೊಚಿ-ಮಿನ್ ಮತ್ತು ಪೇರನ್ ಮುಂತಾದವರನ್ನು ಮುನ್ನೆಲೆಗೂ ತಂದಿತು. ಈ ಎರಡು ಸಿನಿಮಾಗಳು ರಾಜಕೀಯ ಮತ್ತು ಸೌಂದರ್ಯಾತ್ಮಕವಾದ ವಿಷಯಗಳನ್ನು ಗಂಭೀರವಾಗಿ ಕೂಡಾ ಚರ್ಚಿಸಿದೆ. ಉತ್ಪಾದನೆ, ಉತ್ಪಾದನಾ ಸಂಬಂಧಗಳು, ಸಿನಿಮಾದ ಮೂಲಕ ಚಳುವಳಿ ಮುಂತಾದ ಸಂಗತಿಗಳೂ ಕೂಡಾ ವ್ಯಾಪಕವಾಗಿ ಚರ್ಚಿತವಾದುವು.
ಚಿಲಿಯ ಸಿನಿಮಾ ಸಂಪ್ರದಾಯ ಕೂಡಾ ಅತ್ಯಂತ ವಿಶಿಷ್ಠವಾದುದು. ಸುಮಾರು 1970ರ ಅಲೆಂಡೇ ಅವಧಿಯಲ್ಲಿ ಪ್ರಮುಖವಾಗಿ ಗೋಚರಿಸಿತು. ಅತ್ಯಂತ ಮುಖ್ಯವಾಗಿ ಸೆಟ್ರಿಶಿಯೋ ಗಾಝ್ಮೆನ್ನ ಪ್ರಸಿದ್ಧ ಡಾಕ್ಯುಮೆಂಟರಿ, ‘ದ ಬ್ಯಾಟಲ್ ಆಫ್ ಚಿಲಿ’ (1975) ಗಮನಾರ್ಹವಾದುದು. ಇದರ ನಂತರದ ಫೀಚರ್ ಮತ್ತು ನಾನ್ ಫೀಚರ್ ಸಿನಿಮಾಗಳು ಕೂಡಾ ಅನೇಕ ಪ್ರಶ್ನೆಗಳನ್ನು ಚರ್ಚಿಸಿದುವು.
ಬ್ರಝಿಲಿಯನ್ ಸಿನಿಮಾ ಕೂಡಾ ತೃತೀಯ ಜಗತ್ತಿನ ಸಿನಿಮಾದ ಅತ್ಯಂತ ಮಹತ್ವದ ಮಾದರಿ. ಅದು ಕಮರ್ಶಿಯಲ್ ಹಾಸ್ಯಭರಿತ ಚಂಚಡಾ ಸಿನಿಮಾಗಳಿಂದ ಹಿಡಿದು ರಾಜಕೀಕೃತ ಅಟ್ಯೂರ್ ಸಿನಿಮಾಗಳವರೆಗಿನ ವ್ಯಾಪ್ತಿಯನ್ನು ಹೊಂದಿದೆ. ಇದಲ್ಲದೇ ಅವಂತೆಗಾರ್ಡ್ ಹಾಗೂ ಸೌಂದರ್ಯಾತ್ಮಕ ಸಿನಿಮಾಗಳಿಂದ ಹಿಡಿದು ಮೃದುವಾದ ನಗ್ನ ಚಿತ್ರ (ಪೋರ್ನ್) ಗಳವರೆಗೆ ಮತ್ತು ತೀವ್ರಗಾಮೀ ವಸ್ತು ವಿಷಯದ ಡಾಕ್ಯುಮೆಂಟರಿ ಸಿನಿಮಾಗಳವರೆಗೂ ಅದು ವ್ಯಾಪಿಸಿದೆ. ಮುಖ್ಯವಾಗಿ 1962ರ ಅನ್ಸೆಲ್ಮೋ ಡ್ವಾರ್ಟೆಯ, ‘ದಿ ಗಿವನ್ ವರ್ಡ್’ ಮತ್ತು ಯುರೋಪ್ ನಿಂದ ತುಸುಮಟ್ಟಿಗೆ ಪ್ರೇರಣೆ ಪಡೆದು ಸಿನಿಮಾಗಳನ್ನು ನಿರ್ಮಿಸಿದ ವೇರಾ ಕ್ರೂಝ್ ಸ್ಟುಡಿಯೋಗಳು ಬ್ರೆಝಿಲಿಯನ್ ಸಿನಿಮಾದ ಮೊದಲ ಹಂತವನ್ನು ಪ್ರತಿನಿಧಿಸುತ್ತದೆ. ಇವು ಬ್ರೆಝಿಲಿಯನ್ತನ ಮತ್ತು ಅಮೇರಿಕಾದ ಹಾಲಿವುಡ್ಡಿನ ಬೆರೆತವನ್ನು ಕಂಡ ಕಾರಣದಿಂದ ಸಿನಿಮಾ ಚಿಂತಕರು ಇದನ್ನೂ ‘ ಕೋಕಕೋಲಾ ಬಾಟಿಲಿಯಲ್ಲಿನ ತೆಂಗಿನ ನೀರು’ ಎಂದೇ ಕರೆಯುತ್ತಾರೆ. ಬ್ರೆಝಿಲ್ನದೇ ಆದ ಕೆಲವು ಲಕ್ಷಣಗಳಾದ ಕ್ಯಫೋಯೀರಾ, ಸಾಂಬಾ ನೃತ್ಯ, ಕಂಡೋಮ್ಬಲ್, ಟೀಕಾತ್ಮಕ ಸಂಗೀತ ಮೊದಲಾದವುಗಳೂ ಕೂಡಾ ಇಲ್ಲಿ ಕಾಣಿಸಿಕೊಂಡವು. ಈ ಸಂದರ್ಭದ, ‘ದಿ ಗಿವನ್ ವರ್ಡ್’ ಸಿನಿಮಾ ಚರ್ಚನ್ನು, ಚರ್ಚಿನ ಸಾಂಸ್ಥಿಕತೆಯನ್ನು ಟೀಕಿಸುತ್ತಾ ಅಮೂರ್ತವಾಗಿ ವೈಚಾರಿಕತೆ-ಕ್ರಾಂತಿಯನ್ನು ಪರ್ಯಾಯವೆಂಬಂತೆ ಕಥಿಸುತ್ತದೆ.
ಸುಮಾರು 1960ರ ನಂತರದ ಸಂದರ್ಭದಲ್ಲಿ ಬ್ರೆಝಿಲ್ನ ಸಿನಿಮಾಗಳು ಹಸಿವು ಮತ್ತು ಅದರ ಜತೆಗಿನ ಸೌಂದರ್ಯವನ್ನು ತಮ್ಮ ಕಾಳಜಿಗಳನ್ನಾಗಿಸಿ ರಾಜಕೀಯ ವಿಚಾರಗಳ ನೆಲೆಯನ್ನು ಕಂಡುಕೊಂಡವು. 1963ರ ನೆಲ್ಸನ್ ಪೆರೇರಾ ಡೋಸ್ ಸಂಟೋಸ್ನ, ‘ವಿಡಾಸ್ ಸೆಕಾಸ್’ ಸಿನಿಮಾ ಈ ನೆಲೆಯಲ್ಲಿ ಮುಖ್ಯವಾದುದು. ರೈತರ ದಮನ, ಅವರ ಹಸಿವಿನ ಸಮಸ್ಯೆಗಳು, ಮುಂತಾದವುಗಳ ಮೂಲಕ ‘ಹಸಿವು’ ಸಿನಿಮಾಗಳಲ್ಲಿ ರೂಪಕವಾಯಿತು.
ಸುಮಾರು 1970ರ ಸಂದರ್ಭ, ಬ್ರೆಝಿಲಿಯನ್ ಸಿನಿಮಾದ ತೃತೀಯ ಯುಗ. ಇಲ್ಲಿ, ಜೋಕಿಮ ಪೆಡ್ರೋ ಡಿ ಅಂದ್ರಾದೆಯ, ‘ಮಕುನಾೈಮ್’ ಸಿನಿಮಾ ನೈಜವಾದ ತೃತೀಯ ಜಗತ್ತಿನ ಆಶಯಗಳನ್ನು ವ್ಯಕ್ತಪಡಿಸಿತು. ಎಡಪಂಥ, ಎಡಪಂಥೀಯ ರಾಜಕಾರಣ, ಚಳುವಳಿಗಳು, ಸಮಾಜೋ-ರಾಜಕೀಯ-ಲೈಂಗಿಕ ಸಂಬಂಧಗಳು. ಅವುಗಳ ಸಹಜತೆ ಮುಂತಾದವುಗಳು ಇಲ್ಲಿನ ಕಳಕಳಿಯಾಗಿದ್ದುವು. ಬ್ರೆಝಿಲ್ನಲ್ಲಿ ರಾಜಕೀಯ ಅಸ್ಥಿರತೆ ಮತ್ತು ಅಸ್ತಿತ್ವದಲ್ಲಿದ್ದ ತೀವ್ರವಾದ ಸೆನ್ಸಾರ್ಶಿಪ್ನ್ನು ವಿರೋಧಿಸಿದ ಪ್ರತಿಮೆಗಳೂ ಕೂಡಾ ಆದುವು. ಋಣಾತ್ಮಕ-ಧನಾತ್ಮಕ ಪ್ರತಿಮೆಗಳು, ಅಸಂಗತೆಗಳೂ ಕೂಡಾ ಇಲ್ಲಿನ ಪ್ರಮುಖ ನೆಲೆಗಳಾದುವು.
ಆಫ್ರಿಕಾದಲ್ಲಿ ಒಂದು ನಿಜವಾದ ಸಿನಿಮಾ ಅಲೆ ಆರಂಭವಾಗಿದ್ದು, ಸೆನೆಗಲ್ ಮತ್ತು ಅಲ್ಲಿನ ನಿರ್ದೇಶಕ ಉಸ್ಮಾನೇ ಸೆಂಬೇನೇಯ ಮೂಲಕ. ತೃತೀಯ ಜಗತ್ತಿನ ಸಿನಿಮಾದ ಅತ್ಯಂತ ದಕ್ಷ ಪ್ರತಿನಿಧಿಯೆಂದರೆ ಸೆಂಬಾನೇ. ಆತನ, ‘ಬರಮ್ ಸಾರಟ್’, ಬ್ಲಾಕ್ ಗರ್ಲ್ ಮತ್ತು ಕ್ಸಾರಾ ಪ್ರಮುಖವಾದ ರೂಪಕಗಳು. ಬರಮ್ ಸಾರಟ್ ಸಿನಿಮಾವು ಸ್ವತಂತ್ರಗೊಂಡ ಸೆನೆಗಲ್ನ ಸಾಮ್ರಾಜ್ಯಶಾಹೀ ಉತ್ತರ ಅವಧಿಯಲ್ಲಿ ಸೆನೆಗಲ್ ಅನುಭವಿಸಿದ ಸಾಂಸ್ಕøತಿಕ ಪಲ್ಲಟ, ಬಡತನ ಮುಂತಾದವುಗಳನ್ನು ವ್ಯಕ್ತಿಸಿದರೆ, ಕ್ಸಾಲಾ ಸಿನಿಮಾವು ವಸಾಹತುಶಾಹೀ ವ್ಯವಸ್ಥೆಗೊಳಪಟ್ಟ ಸಮಾಜ, ಅಲ್ಲಿನ ಮಹಿಳೆಯನ್ನು ಔಪಚಾರಿಕವಾಗಿ ಮತ್ತು ಅಸೌಪಚಾರಿಕವಾಗಿ ಶೋಷಣೆಗೆ ಒಳಪಡಿಸಿದ ಪರಿಯನ್ನು ಚರ್ಚಿಸುತ್ತದೆ. ಈ ಶೋಷಣೆ ಉಂಟಾಗುವುದು ಸಾಮ್ರಾಜ್ಯಶಾಹೀ ವ್ಯವಸ್ಥೆಯು ಸೃಷ್ಟಿಸಿದ ಸೆನೆಗಲ್ನ ನಿಯೋ-ಕಲೋನಿಯಲ್ ಉದ್ಯಮಿಯಿಂದ ಎನ್ನುವುದು ವಸಾಹತುಶಾಹೀಯ ದಾರುಣತೆಯನ್ನು ಅವಶೇಷದ, ಪರಿಣಾಮದ ರೂಪದಲ್ಲಿ ಚರ್ಚಿಸುತ್ತದೆ. ಫ್ಯಾನನ್ನ, ‘ಫಿಟ್ಫಾಲ್ಸ್ ಆಫ್ ನ್ಯಾಶನಲ್ ಕಾನಶಿಯಸ್’ನ ರೂಪಕವಾಗಿ ಸಿನಿಮಾ ಕಾಣಿಸುತ್ತದೆ. ತೆಳುಹಾಸ್ಯ ಮತ್ತು ಅಣಕು ರಾಜಕೀಯ ಚಿತ್ರಿಕೆಗಳ ರೀತಿಯಲ್ಲಿ ಸೆಂಬೇನೇ, ಸ್ವತಂತ್ರೋತ್ತರ ಸೆನೆಗಲ್ನ್ನು ದ್ವಂದ್ವಾತ್ಮಕವಾಗಿ ಟೀಕಿಸುತ್ತಾ ಹೋಗುತ್ತಾನೆ.
ತೃತೀಯ ಜಗತ್ತು ಪ್ರತಿನಿಧಿಸುವ ಇನ್ನೊಂದು ಭೂಮಿಯೆಂದರೆ ಕ್ಯೂಬಾ. ಇಲ್ಲಿ ಸಿನಿಮಾವೇ ಗೌರವಯುಕ್ತವಾಗಿಲ್ಲದಿದ್ದರೂ ಕೂಡಾ ಇಡೀ ಲ್ಯಾಟಿನ್ ಅಮೇರಿಕಾದಲ್ಲಿ ಅತ್ಯಂತ ಚಲನಶೀಲ ಸೃಷ್ಟಿಯನ್ನು ಕ್ಯೂಬಾ ಸೃಷ್ಟಿಸಿದೆ. ‘ಥಾಮಸ್ ಗುಟೇರೆಝ್ ಅಲಿಯಾನ, ‘ಮೆಮರೀಸ್ ಆಫ್ ಅಂಡರ್ಡೆವಲಪ್ಮೆಂಟ್’ ಸಿನಿಮಾ, ಕ್ಯೂಬಾವನ್ನು ಬೂಝ್ರ್ವಾ ಬುದ್ಧಿಜೀವಿಗಳು ನಿಭಾಯಿಸಲಾಗದಿದ್ದ ಪರಿಸ್ಥಿತಿಯನ್ನು ಪ್ರಕಟಿಸುತ್ತದೆ. ಕ್ರಾಂತಿಕಾರಿಗಳು ಮತ್ತು ಸಾಮಾಜಿಕ ವಾಸ್ತವತೆಯ ನಡುವಿನ ದಾರುಣ ಟೀಕೆಯಾಗಿಯೂ ಇದಿದೆ. ದ್ವಿತೀಯ ಹಂತವೆಂದು ಕರೆಯಬಹುದಾದ, ಕ್ರಾಂತಿ ಮತ್ತು ಮಾರ್ಜಿನಲಿಸಂ (ಸಣ್ಣ ಮತ್ತು ಅಪ್ರಮುಖ)ನ ಗುಂಪುಗಳ ನಡುವಿನ ತಿಕ್ಕಾಟದ ಚರ್ಚೆಯ ಗರ್ಭದಿಂದ ಸುಮಾರು 1970 ಮತ್ತು 1980ರ ಹೊತ್ತಿಗೆ ಅನೇಕ ಸಿನಿಮಾಗಳು ನಿರ್ಮಾಣವಾದುವು. ಮುಖ್ಯವಾಗಿ, ಸೊಲಾಸ್ ಲೂಸಿಯಾನ ‘ವೆಗಾಸ್ ಪೋರ್ಟ್ರೈಟ್ ಆಫ್ ತೆರೇಸಾ’ ಮತ್ತು ಗುಟಿರೆಝ್ ಅಲಿಯಾನ, ‘ಅಪ್ ಟು ಎ ಸರ್ಟೈನ್ ಪಾೈಂಟ್’ ಮತ್ತು ಸಾರಾ ಗೊಮೆಝ್ನ, ‘ವನ್ ವೇ ಆರ್ ಅನದರ್’ ಸಿನಿಮಾ ಅತ್ಯಂತ ಮುಖ್ಯವಾದವುಗಳು. ಈ ಕಾಲದ ಹೆಚ್ಚಿನ ಸಿನಿಮಾಗಳು ಸಾಮಾಜಿಕ ವಾಸ್ತವ, ಕೊಳೆಗೇರಿಗಳು, ವಿವಿಧ ಲಿಂಗವರ್ಗ-ತಲೆಮಾರುಗಳ, ಸಾಮಾನ್ಯರ, ಕಾರ್ಮಿಕರ ಸಂಬಂಧಗಳನ್ನೂ ಸಂಕೀರ್ಣವಾಗಿ ಗಮನಿಸುತ್ತದೆ. ಸಿನಿಮಾ ವಿಮರ್ಶಕ ಜೂಲಿಯಾ ಲೆ ಸೇಜ್ ಹೇಳಿದ ಹಾಗೆ ಈ ಸಿನಿಮಾಗಳು ಒಂದು ರೀತಿ, ದ್ವಂದ್ವಾತ್ಮಕ, ಕ್ರಾಂತಿಕಾರೀ ಮತ್ತು ಸ್ತ್ರೀವಾದೀ ನೆಲೆ ನಿಲುವಿನ ನಿಲುಮೆಗಳು.
ಹೀಗೆ ತೃತೀಯ ಜಗತ್ತು ಎನ್ನುವ ರಾಮಬಾಣದ ರೀತಿಯ (ಪ್ರಾಂಜ್ ಫ್ಯಾನನ್ ಹೇಳುವ ಥೆರಪಿಟಿಕಲ್) ಗುರುತು. ತೃತೀಯ ಜಗತ್ತಿನ ಬಹು ಪ್ರದೇಶಗಳನ್ನು ನ್ಯಾಯಯುತವಾಗಿ ಪ್ರತಿನಿಧಿಸಬೇಕು. ಭಾರತ, ಈಜಿಪ್ಟ್, ಲ್ಯಾಟಿನ್ ಅಮೇರಿಕಾ, ಕ್ಯೂಬಾ, ಚೀನಾ, ಫಿಲಿಫೈನ್ಸ್ ಹೀಗೆ ಸಾಮ್ರಾಜ್ಯಶಾಹೀ ಎಲ್ಲೆಲ್ಲಿ ತನ್ನ ಬಾಹುವನ್ನು ಚಾಚಿದೆಯೋ ಅವೆಲ್ಲವನ್ನು ಅದರ ಪರಿಣಾಮರೂಪೀ ಸಂಕೀರ್ಣತೆಯನ್ನು ಪ್ರಜ್ಞಾಪೂರ್ವಕವಾಗಿ ಗಮನಿಸಬೇಕು. ತೃತೀಯ ಜಗತ್ತಿಗೆ ಸಮಾನಾಂತರ ಪ್ರತಿನಿಧಿತಗಳಂತಿರುವ ಗಿಲ್ಲೋ ಪೊಂಟೆಕಾರ್ವೋರಂತವರ ಮಾದರಿಗಳನ್ನು ಕೂಡಾ ಗಮನಿಸಬೇಕು. ಫೀಚರ್ ಮತ್ತು ನಾನ್ ಫೀಚರ್ಗಳೆರಡೂ ಕೂಡಾ ತೃತೀಯ ಜಗತ್ತಿನ ಚರ್ಚೆಗೆ ತುಂಬಾ ಪ್ರಮುಖ. ಅವಂಟ್ ಗಾರ್ಡ್ ಸಿನಿಮಾಗಳನ್ನು ಕೂಡಾ ನಿರ್ಲಕ್ಷಿಸಬಾರದು. ತೃತೀಯ ಜಗತ್ತಿನ ಸಿನಿಮಾ ವಿತರಕ ಸಂಸ್ಥೆಗಳು ಮತ್ತವುಗಳು ಕಾಳಜಿಗಳೂ, ಅವುಗಳ ಪರೀಕ್ಷೆಯೂ ಕೂಡಾ ತುಂಬಾ ಮುಖ್ಯ. ಸಂಕೀರ್ಣತೆ, ದ್ವಂದ್ವಗಳು, ಮಾನವೀಯವೆನ್ನಬಹುದಾದ ಘನತೆಗಳ ಮರುಸ್ಥಾಪನೆ ಮುಂತಾದ ಕೇಂದ್ರ ವಿಷಯಗಳನ್ನಿಟ್ಟು ಚರ್ಚಿಸಿದರಷ್ಟೇ ತೃತೀಯ ಜಗತ್ತು ಮತ್ತದರ ಸಿನಿಮಾ ಜಗತ್ತು ನ್ಯಾಯದ ಜಗತ್ತು ಆಗಬಲ್ಲದು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ