ಉದಾರೀಕೃತ ಭಾರತ ಮತ್ತು ಶಿಕ್ಷಣ: ಗುಸ್ತೆವೋ ಎಸ್ತೆವಾ ವಾಗ್ವಾದಗಳು

ಉದಾರೀಕೃತ ಭಾರತ ಮತ್ತು ಶಿಕ್ಷಣ: ಗುಸ್ತೆವೋ ಎಸ್ತೆವಾ ವಾಗ್ವಾದಗಳು
ಸುಮಾರು 1990ರ ದಶಕದಲ್ಲಿ ಭಾರತಕ್ಕೆ ಕಾಲಿಟ್ಟ LPG- Libaralisation, Privatisation, Globalisation ಪ್ರಕ್ರಿಯೆಗಳು ಬರೀ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಆಯಾಮಗಳಲ್ಲಿ ಮಾತ್ರ ತನ್ನ ಪರಿಣಾಮಗಳನ್ನು ಉಂಟುಮಾಡಲಿಲ್ಲ, ಬದಲಿಗೆ ಶಿಕ್ಷಣವನ್ನೂ ಒಳಗೊಂಡಂತೆ ಸಾಂಸ್ಕøತಿಕವಾಗಿ ಅದು ಉಂಟುಮಾಡಿದ ಪರಿಣಾಮ ಅತ್ಯಂತ ಮಹತ್ವದ್ದು. ಅದು ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮವೆರಡನ್ನೂ ಉಂಟುಮಾಡಿತಾದರೂ ಕೂಡಾ, ಸಿಂಹಪಾಲು ಪರಿಣಾಮ ಅಧನಾತ್ಮಕವಾದುದು. ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಅದು ಸಾಕಷ್ಟು ರಚನೀಯ ಬದಲಾವಣೆಯನ್ನು ಉಂಟುಮಾಡಿತು. ಭಾರತದಲ್ಲಿನ ಕೇಂದ್ರ ಶಿಕ್ಷಣ ವ್ಯವಸ್ಥೆಯ ಭಾಗಗಳಾದ UGC, AICTE ಗಳು ಜಾಗತೀಕೃತ ವಿಶ್ವ ಆರ್ಥಿಕ ವ್ಯವಸ್ಥೆಗೆ ಅನುರೂಪವಾಗಿ ತಮ್ಮ ನೀತಿ ನಿಲುಮೆಯನ್ನು ಬದಲಾಯಿಸಿಕೊಂಡುವು. ಇಂತಹ ಪ್ರಯತ್ನ ಇಡೀ ಭಾರತದಲ್ಲಿ ಒಂದು ಶಿಕ್ಷಣ ಉದ್ಯಮವನ್ನು ಸೃಷ್ಟಿ ಮಾಡಿತು. ಬಂಡವಾಳ, ಮಾರುಕಟ್ಟೆ, ವಿನಿಮಯ ಉತ್ಪಾದನೆಗಳೇ ಅದರ ಮಂತ್ರವಾದುವು. ಇದು ಮುಖ್ಯವಾಗಿ 3 ಸಮಸ್ಯೆಗಳನ್ನು ಸೃಷ್ಟಿಸಿತು. ಒಂದು: ಶಿಕ್ಷಣವನ್ನು ಔಪಚಾರಿಕ ಉದ್ಯಮ-ಮಾರುಕಟ್ಟೆಯನ್ನಾಗಿಸಿ ಭಾರತದ ಶಿಕ್ಷಣ ವ್ಯವಸ್ಥೆಯ ಉದ್ಯಮವನ್ನು ಅಂತರಾಷ್ಟ್ರೀಯ ಶಿಕ್ಷಣ ವಾಣಿಜ್ಯದ ಜತೆಗೆ ಜೋಡಿಸಲು ಪ್ರಯತ್ನಿಸಿದ್ದು, ಎರಡು: ಮಾರುಕಟ್ಟೆಯ ಭರದಲ್ಲಿ ಶಿಕ್ಷಣವನ್ನು ಉದ್ಯಮವಾಗಿಸಿ ಕಲಿಕೆ ಅತ್ಯಂತ ಮಹತ್ವದ ಗುರಿಗಳನ್ನು ಮೂಲೆಗುಂಪಾಗಿಸಿದ್ದು, ಮೂರು: ಭಾರತೀಯ ಅಥವಾ ದೇಶೀಯ ಅನ್ನಬಹುದಾದ ಹಲವು ಶಿಕ್ಷಣ ಪರಂಪರೆ, ಯೋಚನೆ, ಚಿಂತನಾಕ್ರಮ, ಅತ್ಯಂತ ಮುಖ್ಯವಾಗಿ ಕಲಿಕೆಯ ಕ್ರಮವನ್ನು ನಿರಾಕರಿಸುತ್ತಾ ಇದು ಸಾಗಿತು ಮತ್ತು ಇದು ಪ್ರಜ್ಞೀಯ ಮತ್ತು ಅಪ್ರಜ್ಞೀಯ ನೆಲೆಯಲ್ಲಿ ತನ್ನದಲ್ಲದ ಕ್ರಮವನ್ನು ಮೂಲೆಗುಂಪಾಗಿಸುತ್ತದೆ. ಅಮೆರಿಕಾ-ಯುರೋಪ್ ಪ್ರಣೀತ ಶಿಕ್ಷಣವೆನ್ನುವ ಮಾದರಿ ಬಹು ವೈವಿಧ್ಯದ ಕಲಿಕೆಯ ಕ್ರಮವನ್ನು ಸಾಯಿಸಿತು. ಭಾರತದಲ್ಲಿ ಕಲಿಕೆಯ ಕ್ರಮದ ವಿಶ್ವಗಳಿದ್ದುವು, ಇದನ್ನು ನಿರಾಕರಿಸಿ ಜಾಗತೀಕರಣ ಶಿಕ್ಷಣವನ್ನು ಪ್ರಭಾವಿಸಿ ಒಂದು ಏಕಶಿಲೀಯ (ಮೊನೋಲಿಥಿಕ್) ನೆಲೆಯ ಕ್ರಮವನ್ನು ಹೇರಿತು. ಇದು ಭಾರತದ ಮಟ್ಟಿಗೆ ಒಂದು ರೀತಿಯಲ್ಲಿ ಹೇಳುವುದಾದರೆ ಹೊಸದಾಗಿ ಸಾಂಸ್ಕøತಿಕ ಮತ್ತು ಶೈಕ್ಷಣಿಕವಾಗಿ ಮಾಡಬಹುದಾದ ಆಕ್ರಮಣವನ್ನು ಅಥವಾ ಒಂದು ನೆಲೆಯ ನಿಯೋಕಲ್ಚರಲ್ ಇಂಪೀರಿಯಲಿಸಮ್‍ನ್ನು ಕ್ರಮವನ್ನು ಸೃಷ್ಟಿಸಿತು ಎನ್ನಬಹುದಾಗಿದೆ. ಥಾಮಸ್ ಫ್ರೀಡ್‍ಮನ್ ಬಳಸುವ ಕಲ್ಚರಲ್ ಇಂಪೀರಿಯಲಿಸಮ್ ಪರಿಭಾಷೆ ಕೂಡಾ ಇದನ್ನೇ ಧ್ವನಿಸುತ್ತದೆ.  ಈ ಒಂದು ಪ್ರಕ್ರಿಯೆ ಭಾರತದಂತಹ ರಾಷ್ಟ್ರಕ್ಕೆ ತುಂಬಾ ಅಪಾಯಕಾರಿ. ಇದು ಇಲ್ಲಿನ ವೈವಿಧ್ಯತೆ, ಸಹಜತೆ ಮತ್ತು ಸೃಜನಶೀಲತೆಯನ್ನೇ ಹೊಸಕಿ ಹಾಕಬಲ್ಲದು ಎಂಬುದು ಈ ಸಂದರ್ಭದ ಭಾರತೀಯ ಶಿಕ್ಷಣ ತಜ್ಞ ಮಧು ಎಸ್. ಪ್ರಕಾಶ್ ಸೇರಿದಂತೆ ಹಲವರ ಅಭಿಪ್ರಾಯ
ಶಿಕ್ಷಣ ಯುಗ ಅಥವಾ ಶಿಕ್ಷಣ ಎನ್ನುವ ಪ್ರಕ್ರಿಯೆ ಕೊನೆಗೊಂಡಿದೆ. ಅದರ ನಾಶ ಆರಂಭವಾಗಿದೆ.   ಶಿಕ್ಷಣ ಎನ್ನುವ ಕ್ರಮವನ್ನು ಯಾರಿಂದಲೂ ಕೂಡಾ ರಿಪೇರಿ ಮಾಡಲು ಸಾಧ್ಯವಿಲ್ಲ, ಯಾಕೆಂದರೆ ಶಿಕ್ಷಣ ಎನ್ನುವ ಸಂಗತಿಯೇ ಸಂಪೂರ್ಣ ನಿರುಪಯುಕ್ತ. ನಿರುಪಯುಕ್ತ ಸಂಗತಿಯನ್ನು ಬಿಸಾಡುವುದು ಒಳಿತೇ ಹೊರತು ಬಳಸಯೋಗ್ಯವಲ್ಲ. ಇಂತಹ ಶಿಕ್ಷಣ, ಶಿಕ್ಷಣಕ್ರಮ ಮಾನವನನ್ನು, ಆತನ ಬದುಕನ್ನು ತಯಾರು ಮಾಡುತ್ತಿಲ್ಲ, ಬದಲು ನಿರರ್ಥಕವಾಗಿದೆ ಎನ್ನುವ ಕಾರಣಕ್ಕೆ ಶಿಕ್ಷಣ ಸಾಯುತ್ತಿದೆ ಎನ್ನುವ ವಾದವಿರುವುದು. ಇದನ್ನು ತುರ್ತುಚಿಕಿತ್ಸೆ ಮತ್ತು ತೀವ್ರ ನಿಗಾ ಘಟಕದಲ್ಲಿಟ್ಟು ಕೂಡಾ ಸಂರಕ್ಷಿಸಲು ಸಾಧ್ಯವಿಲ್ಲ.     
ಶಿಕ್ಷಣಅನ್ನುವ ಸ್ವರ್ಗ ಸದೃಶ ಸಂಗತಿ ಇಡೀ ಮಾನವ ಜನಾಂಗವನ್ನು ಉನ್ನತೀಕರಿಸುತ್ತದೆ ಎನ್ನುವ ಭ್ರಮೆಯಿಂದಲೇ ಸುಮಾರು 16ನೇ ಶತಕದ ಫ್ರೆಂಚ್ ಸಮಾಜದಲ್ಲಿ ಈ ಶಿಕ್ಷಣ ಊಹೆ ಮತ್ತು ಅಂದಾಜಿನ ಮೇಲೆ ಆರಂಭವಾಯ್ತು. ಇಂತಹ ಶಿಕ್ಷಣ ನಿಖರತೆ, ಸ್ಪಷ್ಟತೆ, ಅನುಭವಜನ್ಯತೆಯಂತಹ ಗುಣಗಳನ್ನು ತನ್ನ ಮೇಲೆ ಆರೋಪಿಸಿಕೊಂಡ ಕ್ರಮವಂತೂ ಒಂದು ವಿಡಂಬನೆ. ಅಕ್ಷರಶ:. ಇಂತಹ ಎರವಲು ಪಡೆದ ಶಿಕ್ಷಣ ಎನ್ನುವ ಕ್ರಮ ಭಾರತೀಯ ಸಮಕಾಲೀನ ಸಂದರ್ಭದಲ್ಲಿ ಹುಟ್ಟುಹಾಕಿದ ಸಮಸ್ಯೆ, ಸಂಕೀರ್ಣತೆಗಳು ನಿಜವಾಗಿಯೂ ಘೋರರೂಪಿಯಾದದ್ದು. ಇಂತಹ ಸಮಸ್ಯೆಗಳನ್ನು ನಿವಾರಿಸಲು ಒಂದು ಕಮ್ಯೂನಿಸ್ಟ್ ಸಮಾನತೆ ಸ್ಥಾಪನೆ ಆಶಯದ ಹೋರಾಟವೋ ಅಥವಾ ಇಡೀ ಜಗತ್ತಿನ ಒಂದು ಆದರ್ಶವೆಂಬಂತೇನೇ  ಬಿಂಬಿತವಾದ ಗಾಂಧಿ’-ಅಹಿಂಸಾತ್ಮಕ ತಾತ್ವಿಕ ಹೋರಾಟವೋ ಮೂಡಬೇಕು ಎನ್ನುವ ಕೆಲವು ಚಿಂತಕರ ಅಭಿಪ್ರಾಯಗಳು ಅತ್ಯಂತ ಪ್ರಮುಖವೆಂದೇ ನನ್ನ ಗ್ರಹಿಕೆ. ಅತ್ಯಂತ ಮುಖ್ಯವಾಗಿ ಬಂಡವಾಳೀಕೃತ ಶಿಕ್ಷಣ ವ್ಯವಸ್ಥೆಯು ಸೃಷ್ಟಿಸಿರುವ 2 ವರ್ಗಗಳು. ಅಂದರೆ ಸಮಕಾಲೀನ ಜಗತ್ತಿನ ಪ್ರಮುಖ ಶಿಕ್ಷಣ ಚಿಂತಕರುಗಳಾದ ಇವಾನ್ ಇಲ್ಲಿಚ್ ಮತ್ತು ಎಸ್ತೆವಾ ಗುಸ್ತೆವಾ ಹೇಳುವ ಹಾಗೆ, ಜ್ಞಾನ ಬಂಡವಾಳಿಗರು ಮತ್ತು ಜ್ಞಾನ ದರಿದ್ರರು ಎನ್ನುವ ಸಮಾಜೋ-ಸಾಂಸ್ಕøತಿಕ ಅಸಮಾನತೆಯ ಮಾದರಿಯ ವರ್ಗಗಳನ್ನು ನಿರ್ಮಾಣ ಮಾಡಿದೆ. ಇದು ಬರಿಯ ವರ್ಗ ಸೃಷ್ಟಿಯಾಗಿರದೇ ಜ್ಞಾನ ದರಿದÀ್ರರಅಸ್ತಿತ್ವ ಮತ್ತು ಆತ್ಮಸಾಕ್ಷಿಯನ್ನೇ ನಾಶಮಾಡುತ್ತದೆ ಎನ್ನುವುದು ನನ್ನ ಅಭಿಪ್ರಾಯ. ಭಾರತೀಯ ಮತ್ತು ಕನ್ನಡದ ಸಂದರ್ಭದಲ್ಲಂತೂ, ಒಂದು ಕಡೆ ಶ್ರೀಮಂತ, ಮಾಹಿತಿ ಇರುವ ಮತ್ತು ಜ್ಞಾನ ಉದ್ಯಮ-ಬಂಡವಾಳದ ಕ್ರಿಯೆಯಲ್ಲಿ ಭಾಗಿಯಾಗಿರುವ ಜನ ವ್ಯಾಪಕವಾಗಿ IIT, IIM, IISC, BITS PILANI ಮುಂತಾದ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದರೆ, ಈ ಪ್ರಕ್ರಿಯೆಯ ಕೇಂದ್ರ ಮತ್ತು ಪರಿಧಿ-ಎರಡೂ ಕಡೆ ಇಲ್ಲದೇ ತ್ರಿಶಂಕುಗಳಾಗಿರುವ ಬಡವರು, ಆದಿವಾಸಿಗಳು, ಬುಡಕಟ್ಟು ಜನರು ಮತ್ತು ಭಾರತದ ಬಹುಪಾಲು ಹಳ್ಳಿಗಳಲ್ಲಿ ವಾಸವಾಗಿರುವ ಕುಗ್ರಾಮವಾಸಿಗಳು ಈ ವ್ಯವಸ್ಥೆ ಒಳಗೆ ಬರುವುದಿರಲಿ, ಬದಲು ಈ ವ್ಯವಸ್ಥೆಯ ಬಣ್ಣ, ಭಾಷೆ, ಸ್ವರೂಪ, ಆಕೃತಿ, ಔಪಚಾರಿಕತೆಯನ್ನು ಕಂಡು ಭಯಭೀತರಾಗಿದ್ದಾರೆ ಮತ್ತು ಹೆಚ್ಚು ಹೆಚ್ಚು ಕನ್‍ಫ್ಯೂಶನ್‍ಗೆ ಒಳಗಾಗಿದ್ದಾರೆ. ಹೀಗೆ ಅತ್ಯಂತ ಸ್ಪಷ್ಟವಾಗಿ ಈ ಶಿಕ್ಷಣವೆಂಬ ತಥಾಕಥಿತ ವಿದ್ಯಮಾನ ಸೃಷ್ಟಿಸಿರುವ ಮನೋಭಾವ-ದೃಷ್ಟಿಯಂತೂ ಅಪಾಯಕಾರಿಯಾಗಿದೆ. ಅದು ಮಾನವ ಸಮಾನತೆ, ಮಾನವ ಘನತೆಯನ್ನು ಅತ್ಯಂತ ವ್ಯವಸ್ಥಿತವಾಗಿ ಸಾಮಾಜೀಕರಣಗೊಳಿಸುವುದೇ ಇಲ್ಲ, ಬದಲಿಗೆ ಬಂಡವಾಳ ವ್ಯವಸ್ಥೆಯ ಭಾಗವಾಗಿರುವ ಅಸಮಾನತೆ, ವರ್ಗ ತಾರತಮ್ಯವನ್ನು ಪ್ರಚೋದಿಸುತ್ತದೆ. ಒಟ್ಟಾರೆ ಪ್ರಜಾಪ್ರಭುತ್ವದ ಸೂಕ್ಷ್ಮಬೇರುಗಳನ್ನೂ ಕೂಡಾ ನಾಶಮಾಡಹೊರಟಿದೆ ಎಂಬುದೇ ನನ್ನ ಅಭಿಮತ. ವೃತ್ತಿಪರ ನೆಲೆಯಿಂದ ಕೂಡಾ ಶಿಕ್ಷಣಎನ್ನುವ ಪರಿಸ್ಥಿತಿ ವಿಫಲವಾಗಿದೆಯೆಂದೇ ನನ್ನ ಅಭಿಮತ. ಅದು ತನ್ನ ಉದ್ಯಮ-ಬಂಡವಾಳ-ಮಾರುಕಟ್ಟೆಯ ಪ್ರಕ್ರಿಯೆಯಲ್ಲಿ ಮೊದಲು ಒಂದು ವರ್ಗಕ್ಕೆ ಭಾಗವಹಿಸಲು ಅವಕಾಶ ಕೊಡುವುದಿಲ್ಲ. ಅದೇ ರೀತಿ ಅವರನ್ನು ಮಾನವ ಸಂಪನ್ಮೂಲಗಳೆಂದು ಪರಿಗಣಿಸದೇನೇ ಅವರನ್ನು ವೃತ್ತಿಪರೀಯ ಅವಕಾಶಗಳಿಂದ ವಂಚಿಸುತ್ತದೆ. ಅಂತಹ ಜ್ಞಾನದರಿದ್ರರು ಅಕ್ಷರಶ: ಅಕ್ಷರ ಅಸ್ಪøಶ್ಯರಾಗಿ ಉಳಿದುಬಿಡುತ್ತಾರೆ. ಶಿಕ್ಷಣದ ಉದ್ಯಮದಲ್ಲಿ, ಹೊಸ ವರ್ಗ ಸಂಘರ್ಷದಲ್ಲಿ ಹೆಚ್ಚು ಜ್ಞಾನವನ್ನು ಬಳಸುವ ಜನವರ್ಗಕ್ಕೆ ಹೆಚ್ಚು ಮೌಲ್ಯ.  ಸಮಾಜ ಅವರ ಮೇಲೆ ಸಾಕಷ್ಟು ಹಣ ಹೂಡಿ ಅವರನ್ನು ಮಾನವ ಸಂಪನ್ಮೂಲವಾಗಿ ರೂಪಿಸಿರುತ್ತದೆಯಾದ್ದರಿಂದ ಉತ್ಪಾದನಾ ಸಾಧನಗಳು ಬಹುವಾಗಿ ಅವರಿಗಾಗಿಯೇ ಮೀಸಲು. ಅಂಥ ಶಿಕ್ಷಿತರು ಮಾತ್ರವೇ ಈ ಸಮಾಜದಲ್ಲಿ ಎಲ್ಲ ಅನುಕೂಲಗಳಿಗೆ ಹಕ್ಕುದಾರರಾಗುತ್ತಾರೆ. ಉಳಿದ ಬಹುಸಂಖ್ಯಾತರ ಸಾಲಿಗೆ ಉಳಿಯುವುದು ದಾರಿದ್ರ್ಯ ಮತ್ತು ಅನರ್ಹತೆಗಳು ಮಾತ್ರ. ಮುಖ್ಯವಾಗಿ ನಾನು ಶಿಕ್ಷಣವೆಂಬ, ಕಲಿಕೆಯ ವಿರುದ್ಧದ ಪ್ರಕ್ರಿಯೆ ನಿವಾರಣೆಯಾಗಬೇಕೆಂದೇ ಅಭಿಪ್ರಾಯಪಡುತ್ತೇನೆ. ಈ ಶಿಕ್ಷಣವೆಂಬುದರ ಬದಲಿಗೆ ಜಗತ್ತಿನ ಅದೆಷ್ಟೋ ನಾಗರೀಕತೆ ಮತ್ತು ಸಮುದಾಯಗಳಲ್ಲಿ ಕಾಲ-ದೇಶ-ಭೂೀಗೋಳ ಸಾಪೇಕ್ಷವಾದ ಅತ್ಯಂತ ಅನನ್ಯವಾದ, ವೈವಿಧ್ಯಮಯವಾದಂತಹ ಕಲಿಕೆ’ (Learning) ಯ ಕ್ರಮಗಳು ಇಂತಹ ಶಿಕ್ಷಣವೆನ್ನುವ ಸಂಗತಿಯನ್ನು ಪುನ: ಸ್ಥಾಪಿಸಿದರೆ ಮಾತ್ರ ಇದು ಕೈಗೂಡುತ್ತದೆ. ಅದೂ ಅಲ್ಲದೆ ಈ ಶಿಕ್ಷಣವೆನ್ನುವ ಮಹಾಮಂತ್ರ ಅಥವಾ ಅಜೆಂಡಾ ಅಥವಾ ಕಾರ್ಯಸೂಚಿ ಅಥವಾ ಉದ್ಯಮಸೂಚಿಯು ಜನರನ್ನು ಬದುಕುವುದಕ್ಕಾಗಲೀ ಅಥವಾ ಕೆಲಸ ಮಾಡುವುದಕ್ಕಾಗಲೀ ತಯಾರು ಮಾಡುತ್ತಿಲ್ಲ. ಅದು ಅಕ್ಷರಶ: ಯಾಂತ್ರಿಕವಾಗಿ ಕಾರ್ಖಾನೆಯಲ್ಲಿ ಹೆಂಚನ್ನು, ಪದಾರ್ಥವನ್ನು ಉತ್ಪಾದಿಸುವ ಹಾಗೆ, ಅದರ ಪ್ರಯೋಜನ, ನಿಷ್ಪ್ರಯೋಜನದ ವಿವಕ್ಷೆಯ ಹೊರತಾಗಿಯೂ ಕೂಡಾ ಉತ್ಪಾದಿಸುತ್ತದೆ. ಅರ್ಥಶಾಸ್ತ್ರ ಮತ್ತು ಸಾಮಾನ್ಯ ಗ್ರಹಿಕೆಯೂ ಹೇಳುವ ಹಾಗೆ ಬೇಡಿಕೆಗಿಂತ ಜಾಸ್ತಿ ಒಂದು ವಸ್ತು ಉತ್ಪಾದಿತವಾದರೆ ಅದು ಸಹಜವಾಗಿ ತನ್ನ ಬೇಡಿಕೆಯನ್ನು ಕಳೆದುಕೊಳ್ಳುತ್ತದೆ. ಒಂದು ಹಂತದಲ್ಲಿ ಕೊನೆಗೆ ಅದು ಅಕ್ಷರಶ: ತ್ಯಾಜ್ಯವಾಗುತ್ತದೆ, ಜಂಕ್ ಆಗುತ್ತದೆ. ಒಬ್ಬ ವ್ಯಕ್ತಿ 3 ವರ್ಷ ಪದವಿ ಪಡೆದರೂ ಕೂಡಾ ಅದು ಆತ ಎಷ್ಟು ದಿನ ತರಗತಿಯ ಬೆಂಚ್‍ನಲ್ಲಿ ಕುಳಿತಿದ್ದ ಎನ್ನುವುದನ್ನು ಸೂಚಿಸುತ್ತದೆಯೇ ಹೊರತು, ಆತ ಕಸುಬು ಕಲಿತದ್ದಕ್ಕಾಗಲೀ ಅಥವಾ ತಜ್ಞತೆಯನ್ನು ಗಳಿಸಿದ್ದಕ್ಕಾಗಲೀ ಪ್ರಮಾಣಪತ್ರವಾಗಲಾರದು. ಉದ್ಯೋಗ ಭರವಸೆಗಿಂತ ಅದು ಖಾಯಂ ನೈರಾಶ್ಯವನ್ನು ಉಂಟುಮಾಡುತ್ತದೆ. ಟ್ಯಾಕ್ಷಿ ಚಾಲಕರಾಗಿ ಅಥವಾ ಹೋಟೆಲು ಕೆಲಸಗಾರರಾಗಿ ದುಡಿಯಬೇಕಾಗಿ ಬರುವ ಇಂಜಿನಿಯರ್‍ಗಳು ಮತ್ತು ಲಾಯರುಗಳು ಅನುಭವಿಸುವ ಅವಮಾನವೇ ಇದಕ್ಕೆ ಸಾಕ್ಷಿ. ಆದರೆ ಇನ್ನೊಂದು ದಿಕ್ಕಿನಿಂದ, ಶಿಕ್ಷಿತರ ಇಂಥ ಅವಮಾನವೇ ಅಂಥ ಪದವಿಗಳಿಲ್ಲದವರಿಗೆ ಒಂದು ಬಿಡುಗಡೆಯ ಅನುಕೂಲವಾಗಿ ಕಾಣಿಸುವುದೂ ಇದೆ. ಯಾಕೆಂದರೆ ಅಂಥ ಸ್ಥಿತಿಯಲ್ಲಿಯೇ ಅವರು ತಮ್ಮಲ್ಲಿರುವ ಬುದ್ಧಿ, ಕೌಶಲ ಮತ್ತು ಕಸುಬುಗಾರಿಕೆಯನ್ನು ಅರಿತು ತಮ್ಮನ್ನೇ ಪುನರ್ ಮೌಲ್ಯೀಕರಿಸಿಕೊಳ್ಳುತ್ತಾರೆ, ಬದುಕುತ್ತಾರೆ.
ಜಾಗತೀಕೃತ ಮತ್ತು ಜಾಗತೀಕೃತೋತ್ತರ ವಿಶ್ವದಲ್ಲಿ ಶಿಕ್ಷಣ ಎಂಬ ವ್ಯವಸ್ಥೆ ಬೇಡ ಎಂಬ ವಾದವನ್ನು ಮತ್ತು ಈ ಕ್ಷೇತ್ರಗಳಲ್ಲಿ ಸುಧಾರಣೆಯನ್ನು ತರಬೇಕೆನ್ನುವ ಮೂರು ವರ್ಗಗಳಿವೆ: ಒಂದು; ಶಿಕ್ಷಣ ಕೇಂದ್ರದ ಭೌತಿಕ ಪರಿಸರ ಸುಧಾರಿಸಬೇಕು, ಎರಡು; ಪ್ರತೀ ಸಮುದಾಯ ಮತ್ತು ಮಕ್ಕಳ ಪಾಲಕರಿಂದಲೇ ಅವರ ಇಚ್ಛೆಯ ಶಿಕ್ಷಣ ವ್ಯವಸ್ಥೆಯ ಐಚ್ಛಿಕ ಆಯ್ಕೆ, ಮೂರು; ಸಮಾಜವೇ ಕಲಿಕೆಯ ಕೇಂದ್ರವಾಗಬೇಕು, ಅಂದರೆ ಶಿಕ್ಷಣ ಮುಕ್ತವಾಗಿ ಸಿಗಬೇಕು ಎನ್ನುವುದು ಮತ್ತು ಈ ಮುಕ್ತತೆ-ಮಾರುಕಟ್ಟೆ ಪರಸ್ಪರ ಸಂಪರ್ಕವನ್ನು ಪಡೆಯಬೇಕು ಎನ್ನುವುದು ತಾತ್ವಿಕವಾಗಿ ಶಿಕ್ಷಣ ಸುಧಾರಣೆ, ಮುಕ್ತ ಶಿಕ್ಷಣ ಮತ್ತು ಜಾಗತೀಕೃತ ವಿಶಾಲವಾದ ನೆಲೆಯನ್ನು ಹೊಂದಿದ ಸಂಗತಿಗಳನ್ನು ಸೃಷ್ಟಿಸುವುದಾಗಿದೆ. ಆದರೆ ಇವುಗಳು ವ್ಯಕ್ತಿಗಳನ್ನೂ, ವ್ಯಕ್ತಿಶ: ಮತ್ತು ಸಾಂಸ್ಥಿಕವಾಗಿ ನಿಯಂತ್ರಿಸುವ ಸಾಧನಗಳಾಗಿ ಬಿಡುವ ಅಪಾಯವೇ ಜಾಸ್ತಿ. ಇವುಗಳು ಕ್ರಮೇಣ close circuit camera ಗಳಾಗಿ ಬಿಡುವ ಸಾಧ್ಯತೆಗಳೇ ಹೆಚ್ಚು, ಮತ್ತವು ಸೃಜನಶೀಲ ಸಾಧ್ಯತೆಗಳನ್ನು ನಿರಾಕರಿಸುತ್ತಾ ಸಾಗುತ್ತದೆ.
ಶಿಕ್ಷಣ ಎನ್ನುವ ಮಾಯಾಮೃಗದ ಇನ್ನೊಂದು ಬಣ್ಣವೆಂದರೆ ಅದು ಚರಿತ್ರೆಯಿಂದ ಆಕರ್ಷಿಸಿ ಗಳಿಸಿಕೊಳ್ಳುವ ಮಾನ್ಯತೆ. ಆಧುನಿಕ ವಿದ್ಯಮಾನವಾದ ರಾಷ್ಟ್ರವೆಂಬ ಆಲೋಚನೆ ಚರಿತ್ರೆಯನ್ನು ಚಿತ್ತಾಕರ್ಷಕವಾಗಿ ಬಳಸಿಕೊಳ್ಳುವ ಹಾಗೆಯೇ ಇದೂ ಕೂಡಾ ಚರಿತ್ರೆಯಿಂದ ಮಾನ್ಯತೀಕರಣಕ್ಕೊಳಪಡುತ್ತದೆ. ಅದೇನೆಂದರೆ, ಈ ಶಿಕ್ಷಣವೆನ್ನುವುದು ಸೂರ್ಯಚಂದ್ರರಷ್ಟೇ ಪ್ರಾಚೀನವಾದುದು, ಜಡಶಿಲೆಗಳಷ್ಟೇ ಚಾರಿತ್ರಿಕವಾದುದು ಎಂಬ ಮಿಥಕ ರೂಪೀ ಸಂಗತಿಯನ್ನು ಶಿಕ್ಷಣದ ಜತೆ ಹಾರಿಸಿ ಬಿಟ್ಟಿರುವುದು. ಶಿಕ್ಷಣವೆಂಬ ವಿದ್ಯಮಾನ ಆಧುನಿಕತೆಯ ಹಸುಗೂಸು ಮತ್ತು ಪಶ್ಚಿಮದ ಮತ್ತು ಯುರೋಪಿನ ಬಂಡವಾಳಶಾಹೀ ಭೌತಿಕತೆಯಲ್ಲಿಯೇ ಅದು ಹುಟ್ಟಿತು. ಅದು ಕ್ಯಾಪಿಟಲಿಸಂನ ಆಶೋತ್ತರ, ಉದ್ದೇಶಗಳನ್ನು ಅರ್ಥಪೂರ್ಣವಾಗಿ ಧ್ವನಿಸುತ್ತದೆಯೇ ಹೊರತು, ಬೇರೆ ಕಾಲಘಟ್ಟದ, ಯುಗದ ಧರ್ಮವನ್ನಲ್ಲ. ಇಡೀ ಜಗತ್ತು ಮತ್ತು ವಿಶೇಷವಾಗಿ ತೃತೀಯ ಜಗತ್ತು (decolonization) ನಿರ್ವಸಾತೀಕರಣವನ್ನು ಬೌದ್ಧಿಕ, ಸಾಂಸ್ಕøತಿಕವಾಗಿ ಆಗ್ರಹಿಸುವಂತಹ ಈ ಸಂದರ್ಭದಲ್ಲಿ, ಮರುವಸಾಹತೀಕರಣಕ್ಕೆ ಒಳಪಡುವ ಪ್ರಕ್ರಿಯೆಯ ಭಾಗವಾಗಿ ಕೂಡಾ ಅದನ್ನು ನಾವು ಗಮನಿಸಬಹುದು. ಶಿಕ್ಷಣ ಉತ್ಪನ್ನಗೊಂಡ ಕಾಲ-ಅವಕಾಶದ ಗತವನ್ನು ಕೂಡಾ ಪುನ: ವಸಾಹತೀಕರಣಕ್ಕೆ  ಒಗ್ಗಿಸುವ ವಿಚಿತ್ರ ಪ್ರಕ್ರಿಯೆಯೆಂದೇ ನಾವಿದನ್ನು ಬಗೆಯಬಹುದು. ಅಂತೆಯೇ ನಾನು ಈಗಾಗಲೇ ಉಲ್ಲೇಖಿಸಿದ ಹಾಗೆ ಶಿಕ್ಷಣವೆಂಬ ಈ ಆಧುನಿಕ ಪರಿಕಲ್ಪನೆಯ ಪದ ಬಳಕೆಯಾಗಿದ್ದೇ ಹದಿನೆಂಟನೆಯ ಶತಮಾನದ ಫ್ರಾನ್ಸ್ ದೇಶದಲ್ಲಿ ಅದು ಮೂಲತ: ಕ್ರಿಶ್ಚಿಯನ್ ಥಿಯಾಲಜಿಯ ಭಾಗ ಮತ್ತು ವಾದದ ರೂಪದಲ್ಲಿ ಉದ್ಭವವಾಯಿತೇ ವಿನ: ಮಾನವನ ಚರಿತ್ರೆಯ ಆರಂಭದಲ್ಲೇ ಇದ್ದ ಒಂದು ಭೂಗೋಳಶಾಸ್ತ್ರೀಯ, ಪುರಾಣಶಾಸ್ತ್ರೀಯ ಮತ್ತು ಚಾರಿತ್ರಿಕ ಸತ್ಯವಲ್ಲ. ಇಂತಹ ಹೇಳಿಕೆ ಅಂದರೆ ಚರಿತ್ರೆಯ ರೇಖೀಯ ಚಲನೆಯ ಆರಂಭದಲ್ಲೇ ಅದು ಇತ್ತು ಎನ್ನುವುದು ಶಿಕ್ಷಣದ capitalistic ಆಯಾಮದ propaganda ವಷ್ಟೇ ಆಗಿದೆ. ಅಷ್ಟಕ್ಕೂ ಶಿಕ್ಷಣವೆಂಬ ಪರಿಕಲ್ಪನೆ ಸಂಸ್ಕಾರಕ್ಕೆ ಹೆಚ್ಚು ಹತ್ತಿರವಾಗಿತ್ತೇ ಹೊರತು ಔಪಚಾರಿಕ Education ಎಂಬುದರ ನೆಲೆಗಲ್ಲ.
ಶಿಕ್ಷಣದ ಇನ್ನೊಂದು ಗಿಲೀಟುವಾದವೆಂದರೆ ಆಧುನಿಕ ಪ್ರಜಾಪ್ರಭುತ್ವೀಯ ನೆಲೆಯ ಎರಡು ಮಹತ್ವದ ಸಮಾಜೋ-ರಾಜಕೀಯ ಮೌಲ್ಯಗಳಾದ ಸಮಾನತೆ ಮತ್ತು ನ್ಯಾಯಗಳ ಜತೆಯಲ್ಲಿ ಅದನ್ನು ಸೂತ್ರೀಕರಿಸುವುದು. ಶಿಕ್ಷಣದ ಗುರಿ ಮತ್ತು ಮೂಲಸ್ರೋತವೇ ಜಸ್ಟೀಸ್ ಮತ್ತು Equalityಯೆಂದು ಬಿಂಬಿಸುವ ಪ್ರಯತ್ನವಿದಷ್ಟೇ. ಆದರೆ ಶಿಕ್ಷಣವೆನ್ನುವ ಮೂಲಭೂತ ಪರಿಕಲ್ಪನೆಯೇ ಸಮಾನತೆಯನ್ನು ಧ್ವನಿಸುವುದಿಲ್ಲ ಮತ್ತು ಶುದ್ಧ ಅಸಮಾನತೆಯ ಪರವಾಗಿರುವ ಬಂಡವಾಳಶಾಹೀ ಪರವೆನ್ನುವುದು ಗುಸ್ತ್ತೆವೋ ಎಸ್ತೆವಾ ವಾದ. ಈ ನೆಲೆಯಲ್ಲಿಯೇ ಗುಸ್ತೆವೋ ಎಸ್ತೆವಾ Education ಅನ್ನು ಪ್ರಾಚೀನ ಗ್ರೀಕ್ ದೇಶದ Troy ಮರದ ಕುದುರೆಗೆ ಹೋಲಿಸುವುದು. ಸಮಾಜ, ಪ್ರಭುತ್ವ ತನ್ನ ವೈವಿಧ್ಯದ ಸಂಪನ್ಮೂಲಗಳನ್ನು ವ್ಯಯಿಸಿ ಶಿಕ್ಷಣವನ್ನು ನೀಡಿದರೂ ಕೂಡಾ ಸಮಾನವಾಗಿ ಅದು ಸಮಾಜದ ಸಾಮಾಜಿಕರನ್ನು ತಲುಪುದಿಲ್ಲ. ಬರೀ ಅಲ್ಪಸಂಖ್ಯಾತ ಜನ ಮಾತ್ರ ಪಡೆದು ಬಹು ಸಂಖ್ಯೆಯ ಜನ ಇದರಿಂದ ವಂಚಿತರಾಗುತ್ತಾರೆ. ಒಂದು ಹಂತದಲ್ಲಿ ವಂಚಿತ ಬಹುಸಂಖ್ಯೆಯ ಜನರನ್ನು ಶಿಕ್ಷಿತ ಸಮಾಜದಲ್ಲಿ ಬದುಕಲೂ ಕೂಡಾ ಅನರ್ಹರೆಂದು ಘಂಟಾಘೋಷವಾಗಿ ಸಾರಲಾಗಿ ಇದು ಅತ್ಯಂತ ದಮನಕಾರಿಯಾದ ಎರಡು ವರ್ಗಗಳನ್ನು ಸೃಷ್ಟಿಸುತ್ತದೆ; ಕ್ರಮೇಣ ವರ್ಗ ಸಂಘರ್ಷಗಳನ್ನೂ ಕೂಡಾ ಸೃಷ್ಟಿಸುವುದರ ಮೂಲಕ ಅತ್ಯಂತ ಮೂಲಭೂತವಾದ ಸಾಮಾಜಿಕ ಪರಿಕಲ್ಪನೆಗಳಾದ ಸಮಾನತೆ ಮತ್ತು ನ್ಯಾಯವನ್ನು ತಾತ್ವಿಕವಾಗಿ, ಪ್ರಾಯೋಗಿಕವಾಗಿ ಇದು ನಿರಾಕರಿಸುತ್ತದೆ. ಎಸ್ತ್ತೆವಾ ಪ್ರಕಾರ ಈ ಶಿಕ್ಷಣವೆಂಬುದು Elimination Agent ಇರುವ ಹಾಗೆ. ಇದು ತಥಾಕಥಿತ ಅರ್ಹರನ್ನು ಅನರ್ಹರನ್ನು ಒಟ್ಟಿಗಿರಿಸಿದ ನಂತರ, ಅನರ್ಹರನ್ನು ಜರಡಿ ಹಿಡಿದಾಗ ಸಿಗುವ ನಿರುಪಯುಕ್ತ ವಸ್ತುಗಳೆಂದು ಪೃಥಕ್ಕರಿಸಿ, ಭಿನ್ನವಾಗಿ ಬಗೆಯುವ ಕ್ರಮ. ಸಮಕಾಲೀನ UNESCO ಮತ್ತು UNDP ವರದಿಗಳೂ ಕೂಡಾ ಈ ರೀತಿ ಶಿಕ್ಷಣ ಜರಡಿ ಹಿಡಿಯುವ ಪ್ರಕ್ರಿಯೆಯಲ್ಲಿ ಬಹಳ ಮುಂಚೂಣಿಯಲ್ಲಿರುವುದನ್ನೂ ಮತ್ತು ಬಹುಸಂಖ್ಯಾತ ಜನರನ್ನು ತಲುಪದಿರುವುದನ್ನೂ ಕೂಡಾ ತಿಳಿಸುತ್ತದೆ. ಒಂದು UNESCO  ವರದಿ ಪ್ರಕಾರ, ಒಂದನೆಯ ತರಗತಿಗೆ ಪ್ರವೇಶ ಪಡೆಯುವ ಶೇ 60ರಷ್ಟು ವಿದ್ಯಾರ್ಥಿಗಳು ಶಿಕ್ಷಣದ ವ್ಯವಸ್ಥೆಯಲ್ಲಿ ಮುಂದೆ ಸಾಗುವುದಿಲ್ಲ ಮತ್ತು ಶಿಕ್ಷಣ ಎನ್ನುವ ಸಮ್ಮೋಹಿನಿಯಿಂದ ಹೊರಗೆ ಉಳಿಯುತ್ತಾರೆ. ಕೆಲವು ರಾಷ್ಟ್ರಗಳಲ್ಲಿ, ‘ಅಕ್ಷರಸ್ಥಎನ್ನುವ ಹಂತವನ್ನೂ ಕೂಡಾ ಮುಟ್ಟುವುದಿಲ್ಲ. ಹೀಗೆ ಕಲಿಕೆ ಮತ್ತು ಸಾಂಸ್ಕತಿಕವಾಗಿ ಅವರು ಹಿಂದುಳಿಕೆಯನ್ನು ಹೊಂದುತ್ತಾರೆ. ಹೀಗೆ ಅತ್ಯಂತ ಪ್ರಾಥಮಿಕ ರಾಜಕೀಯ ಮೌಲ್ಯಗಳಾದ ನ್ಯಾಯ ಮತ್ತು ಸಮಾನತೆಯನ್ನು ಶಿಕ್ಷಣಅನ್ನುವ ವಿದ್ಯಮಾನ ಉಂಟುಮಾಡುತ್ತದೆ ಎಂಬುದು ಅಕ್ಷರಶ: ಭ್ರಮೆಯಷ್ಟೇ. ಇಂತಹ ಶಿಕ್ಷಣಎಂಬ ವ್ಯವಸ್ಥೆ ವಿಫಲತೆಯನ್ನು ಸಾಧಿಸಿದ್ದರಲ್ಲಿ ಯಾವ ಸಂಶಯವೂ ಕೂಡಾ ಬರದು. ಶಿಕ್ಷಣ, ನಿರಾಶಾವಾದವನ್ನೂ ಕೂಡಾ ಸೃಷ್ಟಿಸುತ್ತಾ, ಶಿಕ್ಷಿತರೂ ಕೂಡಾ ಉದ್ಯೋಗ ವಿರಹಿಗಳಾಗಿ ಶಿಕ್ಷಣದ ಬುಡವನ್ನೇ ಪ್ರಶ್ನಿಸತೊಡಗಿರುವುದೂ ಈ ನೆಲೆಯಿಂದ. ಅಂದರೆ ಶಿಕ್ಷಣ ಜಗತ್ತಿನ ಬಗ್ಗೆ ಕಲಿಯುವುದನ್ನು ತಿಳಿಸುತ್ತದೆಯೇ ಹೊರತು ಜಗತ್ತಿನಿಂದ ಕಲಿಯುವ ಬಗ್ಗೆ ಅಲ್ಲ. ಶಿಕ್ಷಣದ ವಿಫಲತೆಯಿರುವುದೇ ಈ ಬೀಜದಲ್ಲಿ. ಸಮಕಾಲೀನ ಸಂದರ್ಭ ಕಲಿಕೆಯ-ಜೀವನ ಕೌಶಲದ ಚರ್ಚೆಯ ಹೊತ್ತಿಗೆ ಗಾಂಧಿಯನ್ನು ಆಹ್ವಾನಿಸಿ ಪರ್ಯಾಯವನ್ನು ಯೋಚಿಸುವ ರೀತಿಯಲ್ಲೇ ಗುಸ್ತೆವೋ ಎಸ್ತೆವಾ ಚರ್ಚಿಸಿರುವುದು ನಿಜಕ್ಕೂ ಚೋದ್ಯವೇ ಸರಿ. ಗಾಂಧಿ, ಶಿಕ್ಷಣದ ಈ ಸಾಧ್ಯತೆ ಮತ್ತು ಭವಿಷ್ಯವನ್ನು 1930ರ ದಶಕದಲ್ಲಿಯೇ ಚಿಂತಿಸಿದ್ದರು. ಗಾಂಧೀಜಿಯ ಯೋಚನೆ ಹೆಚ್ಚು ಸಹಜವೂ, ಸಾವಯವವೂ ಆದದ್ದಾಗಿತ್ತು. ಅಂತಹ ದೂರದೃಷ್ಟಿಯ ಯೋಚನೆಯ ಕೆಲವು ತುಣುಕುಗಳನ್ನೇ ಗುಸ್ತೆವೋ ಎಸ್ತೆವಾ ಈಗ ಜಾರಿಯ ಜರೂರಿಗೆ ಇಡುತ್ತಿದ್ದಾರೆ.
ಶಿಕ್ಷಣದ ಇತಿಹಾಸ ಮತ್ತು ಕಥನದ ಗತಿಯನ್ನು ಗಮನಿಸಿದಾಗ ಅದು ಬಂಡವಾಳಷಾಹೀ ಬೆಳವಣಿಗೆಯ ಜತೆಜತೆಗೆ ಸಮಾನಂತರವಾಗಿ ಸಾಗಿರುವುದನ್ನು ಕಾಣಬಹುದು. ಇವು ಪರಸ್ಪರ ಪೂರಕ ಮತ್ತು ಅನುರೂಪವಾದವುಗಳೂ ಕೂಡಾ. ಇವೆರಡರ ಉಗಮದಲ್ಲಿ ಪ್ರಭುತ್ವ ಮತ್ತು ರಾಷ್ಟ್ರರಾಜ್ಯಗಳು ಪ್ರಭಾವ ಬೀರಿದ್ದನ್ನು ಕೂಡಾ ಗಮನಿಸಬಹುದು. ಸೈನ್ಯ, ಬಂಡವಾಳ ಮತ್ತು ತನ್ನನ್ನು ಮಾನ್ಯತೀಕರಿಸುವ ಅನೇಕ ಮಾಧ್ಯಮಗಳ ಹಾಗೆ ಶಿಕ್ಷಣವನ್ನೂ ಕೂಡಾ ಪ್ರಭುತ್ವ ಬಳಸಿದ್ದನ್ನು ಮತ್ತು ಅದರ ಮೇಲೆ ನಿಯಂತ್ರಣ, ಹತೋಟಿ ಸಾಧಿಸಿದ್ದನ್ನೂ ಕೂಡಾ ಕಾಣಬಹುದು. ಇಂತಹ ಶಿಕ್ಷಣಬಂಡವಾಳಶಾಹೀ ವ್ಯವಸ್ಥೇಯ ಉಪಉತ್ಪನ್ನವೇ ಹೊರತು, ನಿರ್ವಾತದಿಂದ ಹುಟ್ಟಿದ ಪ್ರಕ್ರಿಯೆಯಲ್ಲ ಎಂಬ ಅಂಶವನ್ನೂ ಕೂಡಾ ಇದು ಮನಗಾಣಿಸುತ್ತದೆ. ಪ್ರಭುತ್ವ ತಾನು ಸೇನೆ, ಪೋಲಿಸ್‍ನ ಮೂಲಕ ಸಮಾಜದ ನಿಯಂತ್ರಣ ಮಾಡಿದ ಹಾಗೆಯೇ ಶಿಕ್ಷಣವನ್ನೂ ಕೂಡಾ ಬಳಸಿತು. ಶಿಕ್ಷಣ, ಬಂಡವಾಳಕ್ಕಿಂತ ಭಿನ್ನವಾದರೂ ಕೂಡಾ ಅದು ಸೃಷ್ಟಿಸಿದ ಕೆಲವು ಭ್ರಮೆಗಳು, ಮುಖ್ಯವಾಗಿ ಶಿಕ್ಷಣ ಸಾಮುದಾಯಿಕ ಅಗತ್ಯವೆಂದು ಬಿಂಬಿಸಿದ ಕ್ರಮ ಇತ್ಯಾದಿಗಳು ಪ್ರಭುತ್ವ ಮತ್ತು ಅಧಿಕಾರಶಾಹೀಯು ಹೇರಿದ ಹೇರಿಕೆಯ ಭಾಗವಾಗಿಯೇ ಇದೆ. ಇಂತಹ ಶಿಕ್ಷಣ, ಶಿಕ್ಷಿತರನ್ನು ಜ್ಞಾನದ ಗ್ರಾಹಕರನ್ನಾಗಿ ಮಾಡುತ್ತಾ ಜ್ಞಾನ ಬಂಡವಾಳ ಮತ್ತು ಶಿಕ್ಷಣದ ಉದ್ಯಮ ಮತ್ತು ಬಂಡವಾಳಶಾಹೀಯನ್ನು ಪೋಷಿಸುತ್ತಾ ಜಾಗತಿಕ ಕ್ಯಾಪಿಟಲ್ ಪ್ರಭುಗಳ ಎದುರು ಕೈ ಕಟ್ಟಿ ನಿಲ್ಲುವ ಕೆಲಸದಾಳುಗಳನ್ನಾಗಿ ಮಾಡಿರುವುದೂ ಕೂಡಾ ಶಿಕ್ಷಣ-ಬಂಡವಾಳಶಾಹೀ ಒಂದೇ ಚಾರಿತ್ರಿಕ ಸಂದರ್ಭದ ಶಿಶುಗಳು ಎಂಬುದನ್ನು ಶ್ರುತಪಡಿಸಿದೆ. ಇಂತಹ ಶಿಕ್ಷಣ ಎಂಬ ವ್ಯವಸ್ಥೆ ಲಿಯೋ ಟಾಲ್‍ಸ್ಟಾಯ್ ಹೇಳುವ ಹಾಗೆ ಶಿಕ್ಷಣ ಒಬ್ಬರನ್ನು ಏನಾದರೂ ಒಂದಾಗಿ ಪ್ರಜ್ಞಾಪೂರ್ವಕವಾಗಿ ರೂಪಿಸುವ ಕೆಲಸಎಂಬುದನ್ನು ಮೀರಿ ಒಂದು ನಿರ್ದಿಷ್ಟ ಬಂಡವಾಳಶಾಹೀ-ಅಧಿಕಾರಶಾಹೀ ವ್ಯವಸ್ಥೆಗೆ ಅಧೀನವಾಗಿ ರೂಪಿಸುವ ಕಸುಬಾಗಿದೆ. ಒಂದು ಶೋಷಕ ವ್ಯವಸ್ಥೆಗೆ ವರ್ಗಗಳನ್ನು ವಿಭಜಿಸಿ ಮತ್ತೊಂದು ಸಂಘರ್ಷವನ್ನು ಎದುರು ನೋಡುತ್ತಿದೆ. ಬಂಡವಾಳಶಾಹೀ ವ್ಯವಸ್ಥೆಯು ಉದ್ಯುಕ್ತವಾಗಿದ್ದ,”ಉತ್ಪಾದಕ ವಸ್ತುಗಳನ್ನು ಉತ್ಪಾದಿಸುವ ವ್ಯಸನದ ಓಟದಲ್ಲಿ ಭಾಗವಹಿಸಿ ಅಂತಿಮವಾಗಿ ನಿರುಪಯುಕ್ತ ªಸ್ತ್ತು, ಮಾನವರನ್ನು ಸೃಷ್ಟಿಸಿದೆ. ಇಂತಹ ಬಂಡವಾಳಶಾಹೀ ಹಸುಗೂಸು ಶಿಕ್ಷಣಕ್ಕೆ, ತನ್ನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಶಿಕ್ಷಿತರಾದ ಎಲ್ಲರಿಗೂ ಕೂಡಾ ಸ್ಥಾನ-ಮಾನ-ಉದ್ಯೋಗ-ಅಂತಸ್ತನ್ನು ಕರುಣಿಸಲಾಗದೇ ಜೀರ್ಣಿಸಿಕೊಳ್ಳುವ, ಸಮರಸ ಮಾಡಲಾಗದ ಪರಿಸ್ಥಿತಿಯೂ ಅದನ್ನು ಪ್ರಶ್ನಿಸಲು ಕಾರಣ. ಆದ್ದರಿಂದ ಈಗ ಜಗತ್ತಿನ ಅನೇಕ ಭಾಗಗಳಲ್ಲಿ, ತೃತೀಯ ಜಗತ್ತಿನ ಅನನ್ಯ ಜಗತ್ತಿನಲ್ಲಿ ಅನೇಕ ಸಮುದಾಯ, ಮನಸ್ಸು, ಜನ ಮತ್ತು ಪ್ರಜ್ಞೆ ಶಿಕ್ಷಣ ಸಾಕು ಎನ್ನುತ್ತಿದ್ದಾರೆ ಮತ್ತು ಕಲಿಕೆ ಬೇಕು ಎನ್ನುತ್ತಿದ್ದಾರೆ.
ಈ ಮೇಲಿನ ಶಿಕ್ಷಣ ಸೃಷ್ಟಿಸಿದ ಕೆಲವು ಚರ್ಚೆ, ಸಮಸ್ಯೆಗಳಿಗೆ ಪರಿಹಾರವೇನು? ಜಗತ್ತಿನ ಆಫ್ರಿಕಾ, Latin ಅಮೆರಿಕಾದ ಮೆಕ್ಸಿಕೋ-ಚಿಲಿ-ಪೆರು, ಭಾರತದಂತಹ ರಾಷ್ಟ್ರಗಳಲ್ಲಿ ಒಂದು ಹೊಸ ಅಲೆ ಎದ್ದಿದೆ. ಅದೆಂದರೆ ಶಿಕ್ಷಣಸಾಕು, ಬದಲು ಹಳೆಯ ಸೃಜನಶೀಲ ಕಲಿಕೆಯ ಮಾರ್ಗಗಳು ಬೇಕು ಎಂಬ ಹೊಸ ಜಂಜಾವಾತ. ಅಂತಹ ಕಲಿಕೆಯನ್ನು ಅಗತ್ಯಕ್ಕೆ ತಕ್ಕಂತೆ ಆರ್ಥಿಕ ರೂಪಾಂತರ ಮಾಡಬೇಕು ಎಂಬುದು ಈ ರೀತಿಯ ಹೊಸ ಕಾಣ್ಕೆಯನ್ನರಸುತ್ತಿರುವ ತೃತೀಯ ಜಗತ್ತು ಮತ್ತು ಅಲ್ಲಿನ ಚಿಂತಕರ, ಶಿಕ್ಷಣ ತಜ್ಞರ ಅಂಬೋಣ. ಭಾರತದಲ್ಲಿ ಸೇರಿದಂತೆ ಎಜುಕೇಶನ್’ (ಶಿಕ್ಷಣ) ಎಂಬ ಪದವನ್ನು, ಹೊಸ ಪರ್ಯಾಯ ಪದವಾದ ಟು ಲರ್ನ್’(ಕಲಿಯುವುದು) ಎಂಬ ಕ್ರಿಯಾಪದ ಸ್ಥಳಾಂತರಗೊಳಿಸುತ್ತಿದೆ. ಇದರೊಳಗೆ ಇರುವ ಪ್ರತಿಯೊಬ್ಬನೂ ಸರ್ಕಾರಿ ಅಥವಾ ಖಾಸಗಿ ಶಿಕ್ಷಣಸಂಸ್ಥೆಯನ್ನು ಅವಲಂಬಿಸುವುದು ಅನಿವಾರ್ಯ, ಆದರೆ ಕಲಿಯುವುದು ಎಂಬ ಕ್ರಿಯಾರೂಪವು ವ್ಯಕ್ತಿಯ ಒಳಗೆ ಇರುವ ಶಕ್ತಿ-ಸಾಮಥ್ರ್ಯವೊಂದರ ಆವಿಷ್ಕಾರ. ಅದು ಇತರರೊಂದಿಗೂ, ಪ್ರಕೃತಿಯೊಂದಿಗೂ ಇದ್ದುಕೊಂಡು ಮುನ್ನಡೆಯುವ ಒಂದು ಕ್ರಿಯಾಶೀಲ ಸಂಬಂಧ. ಅಂದರೆ ಕಲಿಯುವ ಪ್ರಕ್ರಿಯೆ ವೈಯಕ್ತಿಕವಾದ ಒಂದು ಕೆಲಸ. ಹಾಗೆ ಕಲಿಯುವುದಕ್ಕೂ ಮತ್ತು ಆ ಮೂಲಕ ಬದುಕುವ ಕ್ಷಮತೆಯನ್ನು ವರ್ಧಿಸಿಕೊಳ್ಳಲಿಕ್ಕೂ ಇರುವ ಮಾರ್ಗ ಒಂದೇ, ಅದು ನಿಸರ್ಗ ಮತ್ತು ಜಗತ್ತಿನಿಂದ ಕಲಿಯುವುದು. ಅದು ಜಗತ್ತಿನ ಬಗ್ಗೆ ಕಲಿಯುವುದಲ್ಲ. ಇಂತಹ ಹೊಸ ದೃಷ್ಟಿ, ಬೆಳಕು ಜಗತ್ತಿನ ಪ್ರತಿ ಪ್ರದೇಶವನ್ನು ವ್ಯಾಪಿಸಬೇಕಾಗಿದೆಯೇನೋ ಅತ್ಯಂತ ಶೀಘ್ರವಾಗಿ.
ಶಿಕ್ಷಣ ಮತ್ತು ಕಲಿಕೆಯ ಸಂದರ್ಭದಲ್ಲಿ ಪ್ರಸ್ತುತ ಸಂದರ್ಭ ನೈತಿಕತೆಯ ಮೇಲೂ ಕೂಡಾ ಹೊಸ ಚರ್ಚೆಯನ್ನು ಹುಟ್ಟು ಹಾಕುವ ಅನಿವಾರ್ಯತೆಯನ್ನು ಸೃಷ್ಟಿಸಿದೆ. ವಿವೇಕಾನಂದರು ಹೇಳುವ ಹಾಗೆ, ‘ಮಾನವನ ಪರಿಪೂರ್ಣ ವಿಕಾಸವೇ ಶಿಕ್ಷಣಮತ್ತು ಶಿಕ್ಷಣ ಕೊನೆಗೊಳ್ಳುವುದು ಗುಣಗಳ ವಿಕಾಸದ ಮೂಲಕಎನ್ನುವ ಎರಡು ವಾಕ್ಯಗಳನ್ನು ನೆನೆದರೆ ಶಿಕ್ಷಣ ಒಂದು ಹಂತದಲ್ಲಿ ತಾನು ಸಾಧಿಸಬೇಕಾದುದನ್ನು ಸಾಧಿಸದೆ ವಿಫಲವಾಗಿದೆ, ಕೃತಕವಾಗಿ ಸೊರಗಿದೆ ಎಂದೇ ನನ್ನ ಅಭಿಪ್ರಾಯ.  ಶಿಕ್ಷಣದಿಂದ ಮಾನವ ಸಂಪನ್ಮೂಲವಾಗಿ ರೂಪುಗೊಳ್ಳುತ್ತಿದ್ದಾನೆಯೇ ಹೊರತು ಮಾನವ ಸಂಬಂಧ, ನಿಸರ್ಗ ಪ್ರೀತಿ, ತಾದಾತ್ಮ್ಯ, ಸಹಬಾಳ್ವೆ, ಸಂತುಲಿತ ಅಭಿವೃದ್ಧಿ ಮುಂತಾದ ಗುಣ ಪ್ರವೃತ್ತಿಗಳನ್ನು ಸಾಧಿಸಿಲ್ಲವೇನೋ ಎಂಬ ಭಾವನೆ ಮತ್ತು ಆತಂಕವನ್ನು ಮೂಡಿಸುತ್ತಿದೆ. ಒಟ್ಟಿನಲ್ಲಿ ಹೊಸ ಆತಂಕದ ಸ್ಥಿತಿ ಮತ್ತು ಒತ್ತಡದ ಮೌನಕ್ಕೂ ಇದು ಕಾರಣವಾಗಿಸಿದೆ.

SELECTED READINGS:
Berry Vendel, Life is a Miracle, Counter Point Press, 2000.
M.K. Gandhi, Towards New Education, Navajeevan Press, Ahmedabad, 1995.
M.K. Gandhi, Hind Swaraj, Navajeevan Press, Ahmedabad, 2013.
Evan Illich, D-Scholling Society, Harper Publications, Newyork, 1971.
Evan Illich and Barry Sanders, The Alphabatisation of the Popular Mind, North Point Press, Sanfrancisco, 1998.
Prakash Madhu S. and Gusteva Esteva,Escaping Education, , Lang Publication, Newyork, 1998.
Thomas Friedman,Lexus and Olive Tree,Anchor, 2000.
Manfred Stiger,Globalisation, OUP, New Delhi, 2008.
Vivekananda,Education, Ramakrishna Matt, Calcutta, 2013.
ಐಜಾಝ್ ಅಹಮದ್, ಪೋಸ್ಟ್ ಮಾರ್ಡನಿಸಂ, ಚಿಂತನ ಪ್ರಕಾಶನ, ಬೆಂಗಳೂರು, 2013.

 
           



    

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ಸಿನಿಮಾ ಚರಿತ್ರೆ : ಸಮಾಜ, ಸಂಸ್ಕøತಿ ಮತ್ತು ರಾಜಕಾರಣ

ಕರ್ನಾಟಕದಲ್ಲಿ ಸೂಫಿಗಳು

ಚಾರಿತ್ರಿಕ ಕೃತಿಯ ಹಲವು ಓದಿನ ಸಾಧ್ಯತೆಗಳು: ಹಿಂದ್ ಸ್ವರಾಜ್ ಮಾದರಿ